ವಾಚಕರಿಂದ ಪ್ರಶ್ನೆಗಳು
ಬೈಬಲ್ನಲ್ಲಿ “ಯಾಷಾರ್ ಗ್ರಂಥ” ಮತ್ತು ‘ಯೆಹೋವವಿಜಯ ಗ್ರಂಥದ’ ಕುರಿತು ಉಲ್ಲೇಖಿಸಲಾಗಿದೆ. (ಯೆಹೋ. 10:13; ಅರ. 21:14) ಈ ಎರಡು ಗ್ರಂಥಗಳು ಬೈಬಲಿನ ಅಂಗೀಕೃತ ಪುಸ್ತಕಗಳ ಪಟ್ಟಿಯಲ್ಲಿಲ್ಲ. ಇವು ಕಳೆದುಹೋಗಿರುವ ದೇವಪ್ರೇರಿತ ಬರಹಗಳೋ?
ಈ ಎರಡು ಗ್ರಂಥಗಳನ್ನು ದೇವಪ್ರೇರಣೆಯಿಂದ ಬರೆಯಲಾಯಿತು ಮತ್ತು ಬಳಿಕ ಕಳೆದುಹೋದವು ಎಂದು ಹೇಳಲು ಯಾವುದೇ ಆಧಾರವಿಲ್ಲ. ದೇವಪ್ರೇರಿತರಾದ ಬೈಬಲ್ ಬರಹಗಾರರು ಇನ್ನಿತರ ಅನೇಕ ಬರಹಗಳನ್ನೂ ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಕೆಲವೊಂದು ಬೈಬಲಿನ ಭಾಗವಾಗಿರಬಹುದಾದರೂ ಆ ಬರಹಗಳಿಗೆ ಕೊಡಲಾಗಿರುವ ಹೆಸರುಗಳು ಆಧುನಿಕ ಓದುಗರಿಗೆ ಪರಿಚಿತವಿರಲಿಕ್ಕಿಲ್ಲ. ಉದಾಹರಣೆಗೆ, “ದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ, ದರ್ಶಿಯಾದ ಗಾದ ಇವರ ಚರಿತ್ರೆಗಳ” ಕುರಿತು 1 ಪೂರ್ವಕಾಲವೃತ್ತಾಂತ 29:30 ಉಲ್ಲೇಖಿಸುತ್ತದೆ. ಈ ಮೂರೂ ಚರಿತ್ರೆಗಳು ಇಂದು ನಮ್ಮೆಲ್ಲರಿಗೆ ತಿಳಿದಿರುವ 1 ಮತ್ತು 2 ಸಮುವೇಲ ಅಥವಾ ನ್ಯಾಯಸ್ಥಾಪಕರುಗಳ ಪುಸ್ತಕಗಳಿಗೆ ಸೂಚಿಸುತ್ತಿರಬಹುದು.
ಇನ್ನೊಂದು ಪಕ್ಕದಲ್ಲಿ, ಕೆಲವೊಂದು ಉಲ್ಲೇಖಗಳ ಹೆಸರುಗಳು ಬೈಬಲ್ ಪುಸ್ತಕಗಳ ಹೆಸರುಗಳಿಗೆ ಹೋಲುವುದಾದರೂ ವಾಸ್ತವದಲ್ಲಿ ಅವು ಬೈಬಲ್ನ ಭಾಗವಾಗಿಲ್ಲ. ನಾವಿದನ್ನು ನಾಲ್ಕು ಪುರಾತನ ಗ್ರಂಥಗಳ ಮೂಲಕ ದೃಷ್ಟಾಂತಿಸಬಹುದು: “ಯೆಹೂದರಾಜಕಾಲವೃತ್ತಾಂತ ಎಂಬ ಗ್ರಂಥ,” “ಯೆಹೂದ ಮತ್ತು ಇಸ್ರಾಯೇಲ್ರಾಜರ ಗ್ರಂಥ,” “ಇಸ್ರಾಯೇಲ್ರಾಜರ ಗ್ರಂಥ,” “ಇಸ್ರಾಯೇಲ್ಯರ ಮತ್ತು ಯೆಹೂದ್ಯರ ರಾಜ್ಯಗ್ರಂಥ.” ಈ ಹೆಸರುಗಳು ನಮಗೆ ತಿಳಿದಿರುವ ಬೈಬಲ್ ಪುಸ್ತಕಗಳಾದ 1 ಮತ್ತು 2 ಅರಸುಗಳ ಪುಸ್ತಕಗಳಿಗೆ ಹೋಲುವಂತೆ ತೋರುವುದಾದರೂ ಈ ನಾಲ್ಕು ಗ್ರಂಥಗಳು ದೇವಪ್ರೇರಿತವೂ ಅಲ್ಲ, ಬೈಬಲ್ ಪುಸ್ತಕಗಳ ಅಂಗೀಕೃತ ಪಟ್ಟಿಯಲ್ಲೂ ಇಲ್ಲ. (1 ಅರ. 14:29; 2 ಪೂರ್ವ. 16:11; 20:34; 27:7) ಅವು, ಇಂದು ಬೈಬಲ್ನಲ್ಲಿರುವ ಪ್ರವಾದಿ ಯೆರೆಮೀಯ ಹಾಗೂ ಎಜ್ರರ ವೃತ್ತಾಂತಗಳು ಬರೆಯಲ್ಪಟ್ಟ ಸಮಯದಲ್ಲಿ ಲಭ್ಯವಿದ್ದ ಐತಿಹಾಸಿಕ ಬರಹಗಳಾಗಿದ್ದಿರಬಹುದು.
ಹೌದು, ಕೆಲವು ಬೈಬಲ್ ಬರಹಗಾರರು ಲಭ್ಯವಿದ್ದ ಆದರೆ ದೇವಪ್ರೇರಿತವಲ್ಲದ ಚರಿತ್ರೆಯ ಪುಸ್ತಕಗಳನ್ನು ಅಥವಾ ದಾಖಲೆಗಳನ್ನು ಉಲ್ಲೇಖಿಸಿದರು ಅಥವಾ ವಿಚಾರಿಸಿ ನೋಡಿದರು. ಎಸ್ತೇರಳು 10:2 “ಮೇದ್ಯ ಮತ್ತು ಪಾರಸಿಯ ರಾಜಕಾಲವೃತ್ತಾಂತಗ್ರಂಥದ” ಕುರಿತು ತಿಳಿಸುತ್ತದೆ. ಲೂಕನು ತನ್ನ ಸುವಾರ್ತಾ ಪುಸ್ತಕವನ್ನು ಬರೆಯಲು ‘ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿದನು.’ ಅವನ ಸುವಾರ್ತಾ ಪುಸ್ತಕದಲ್ಲಿ ನಾವಿಂದು ಓದಬಹುದಾದ ಯೇಸುವಿನ ವಂಶಾವಳಿಯ ಪಟ್ಟಿಯನ್ನು ತಯಾರಿಸಲು ಆಗ ಲಭ್ಯವಿದ್ದ ಲಿಖಿತ ದಾಖಲೆಗಳನ್ನು ಅವನು ವಿಚಾರಿಸಿ ನೋಡಿರಬಹುದು. (ಲೂಕ 1:3; 3:23-38) ಲೂಕನು ವಿಚಾರಿಸಿ ನೋಡಿದ ಆ ದಾಖಲೆಗಳು ದೇವಪ್ರೇರಿತವಲ್ಲದಿದ್ದರೂ ಅವನು ಬರೆದ ಸುವಾರ್ತಾ ಪುಸ್ತಕವಂತೂ ಖಂಡಿತ ದೇವಪ್ರೇರಿತ. ಅದು ನಮಗೆ ಅಮೂಲ್ಯವಾಗಿದೆ.
ಪ್ರಶ್ನೆಯಲ್ಲಿ ತಿಳಿಸಲಾಗಿರುವ “ಯಾಷಾರ್ ಗ್ರಂಥ” ಮತ್ತು ‘ಯೆಹೋವವಿಜಯ ಗ್ರಂಥ’ ಎಂಬ ಎರಡು ಗ್ರಂಥಗಳು ಆಗ ಲಭ್ಯವಿದ್ದ ಆದರೆ ದೇವಪ್ರೇರಿತವಲ್ಲದ ದಾಖಲೆಗಳಾಗಿದ್ದಿರಬಹುದು. ಆದ್ದರಿಂದಲೇ ಯೆಹೋವನು ಆ ಗ್ರಂಥಗಳನ್ನು ಸಂರಕ್ಷಿಸಿಡಲಿಲ್ಲ. ಬೈಬಲ್ನಲ್ಲಿ ಅವುಗಳನ್ನು ಉಲ್ಲೇಖಿಸಲಾಗಿರುವುದರಿಂದ, ಅವು ಇಸ್ರಾಯೇಲ್ಯರು ಮತ್ತು ಅವರ ಶತ್ರುಗಳ ನಡುವಣ ಸಂಘರ್ಷಗಳ ಕುರಿತ ಕವಿತೆ ಇಲ್ಲವೇ ಹಾಡುಗಳ ಸಂಗ್ರಹವಾಗಿದ್ದಿರಬಹುದು ಎಂದು ಬೈಬಲ್ ವಿಮರ್ಶಕರು ತೀರ್ಮಾನಿಸಿದ್ದಾರೆ. (2 ಸಮು. 1:17-27) ಒಂದು ಬೈಬಲ್ ವಿಶ್ವಕೋಶ ತಿಳಿಸುವಂತೆ, “ಪುರಾತನ ಇಸ್ರಾಯೇಲಿನಲ್ಲಿದ್ದ ವೃತ್ತಿಪರ ಹಾಡುಗಾರರು ಉಳಿಸಿಕೊಂಡು ಬಂದಿದ್ದ ಜನಪ್ರಿಯ ಕವನ ಮತ್ತು ಹಾಡುಗಳ ಸಂಗ್ರಹ” ಆ ಗ್ರಂಥಗಳಲ್ಲಿ ಇದ್ದಿರಬಹುದು. ದೇವರು ಕೆಲವೊಮ್ಮೆ ಪ್ರವಾದಿಗಳಾಗಿ ಅಥವಾ ದರ್ಶಿಗಳಾಗಿ ಉಪಯೋಗಿಸಿದ ಕೆಲವರು ಸಹ, ಯೆಹೋವನು ಪ್ರೇರಿಸಿರದ ಅಥವಾ ನಮ್ಮ ದಿನಗಳಲ್ಲಿ ‘ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿರುವ’ ಬೈಬಲ್ನಲ್ಲಿ ಸೇರಿಸಿರದಂಥ ದಾಖಲೆಗಳನ್ನು ಬರೆದಿಟ್ಟರು.—2 ತಿಮೊ. 3:16; 2 ಪೂರ್ವ. 9:29; 12:15; 13:22.
ಕೆಲವೊಂದು ಗ್ರಂಥಗಳನ್ನು ಬೈಬಲ್ನಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅವುಗಳನ್ನು ಬೈಬಲ್ ಬರಹಗಾರರು ಬಳಸಿದ್ದಾರೆ ಎಂದಮಾತ್ರಕ್ಕೆ ನಾವು ಅವುಗಳನ್ನು ದೇವಪ್ರೇರಿತವೆಂದು ಎಣಿಸಬಾರದು. ಯೆಹೋವ ದೇವರು ‘ತನ್ನ ಮಾತುಗಳಿರುವ’ ಎಲ್ಲ ಬರಹಗಳನ್ನು ಸಂರಕ್ಷಿಸಿಟ್ಟಿದ್ದಾನೆ ಮತ್ತು ಅವು ‘ಸದಾಕಾಲವೂ ಇರುವವು.’ (ಯೆಶಾ. 40:8) ಹೌದು, ನಮ್ಮ ಬಳಿಯಿರುವ ಬೈಬಲಿನ 66 ಪುಸ್ತಕಗಳಲ್ಲಿ ಯಾವ ಪುಸ್ತಕಗಳು ಸೇರಿರಬೇಕೆಂದು ದೇವರು ಆರಿಸಿದ್ದಾನೋ ಅವುಗಳಲ್ಲಿ ನಾವು ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗುವಂತೆ’ ಬೇಕಾಗಿರುವುದೆಲ್ಲವೂ ಇದೆ.—2 ತಿಮೊ. 3:16, 17.