ನೀವು ಅಧರ್ಮವನ್ನು ದ್ವೇಷಿಸುತ್ತೀರೊ?
“ನೀನು [ಯೇಸು] . . . ಅಧರ್ಮವನ್ನು ದ್ವೇಷಿಸಿದಿ.”—ಇಬ್ರಿ. 1:9.
1. ಯೇಸು ಪ್ರೀತಿಯ ಕುರಿತು ಏನು ಬೋಧಿಸಿದನು?
ಪ್ರೀತಿಯ ಮಹತ್ವವನ್ನು ಒತ್ತಿಹೇಳುತ್ತಾ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾ. 13:34, 35) ಯೇಸು ತನ್ನ ಹಿಂಬಾಲಕರಿಗೆ ಪರಸ್ಪರ ಸ್ವತ್ಯಾಗದ ಪ್ರೀತಿಯನ್ನು ತೋರಿಸುವಂತೆ ಆಜ್ಞಾಪಿಸಿದನು. ಆ ಪ್ರೀತಿಯೇ ಅವರ ಗುರುತುಚಿಹ್ನೆಯಾಗಿರಲಿತ್ತು. ಯೇಸು ಅವರನ್ನು ಹೀಗೂ ಪ್ರೋತ್ಸಾಹಿಸಿದನು: “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ.”—ಮತ್ತಾ. 5:44.
2. ಕ್ರಿಸ್ತನ ಹಿಂಬಾಲಕರು ಯಾವುದರ ಕಡೆಗೆ ದ್ವೇಷವನ್ನು ಬೆಳೆಸಿಕೊಳ್ಳಬೇಕು?
2 ಯೇಸು ತನ್ನ ಶಿಷ್ಯರಿಗೆ ಪ್ರೀತಿಯ ಕುರಿತು ಬೋಧಿಸಿದ್ದು ಮಾತ್ರವಲ್ಲ, ಏನನ್ನು ದ್ವೇಷಿಸಬೇಕೆಂದೂ ಕಲಿಸಿದನು. ಯೇಸುವಿನ ಸಂಬಂಧದಲ್ಲಿ ಹೀಗೆ ಹೇಳಲಾಗಿದೆ: “ನೀನು ನೀತಿಯನ್ನು ಪ್ರೀತಿಸಿದಿ ಮತ್ತು ಅಧರ್ಮವನ್ನು ದ್ವೇಷಿಸಿದಿ.” (ಇಬ್ರಿ. 1:9; ಕೀರ್ತ. 45:7) ಇದು, ನಾವು ನೀತಿಗಾಗಿ ಪ್ರೀತಿಯನ್ನು ಮಾತ್ರವಲ್ಲ ಪಾಪ ಅಥವಾ ಅಧರ್ಮಕ್ಕಾಗಿ ದ್ವೇಷವನ್ನೂ ಬೆಳೆಸಿಕೊಳ್ಳಬೇಕೆಂದು ತೋರಿಸುತ್ತದೆ. “ಪಾಪವನ್ನು ಮಾಡುತ್ತಾ ಇರುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುತ್ತಾ ಇರುವವನಾಗಿದ್ದಾನೆ; ಹಾಗಾದರೆ ಪಾಪವು ಅಧರ್ಮವಾಗಿದೆ” ಎಂದು ಅಪೊಸ್ತಲ ಯೋಹಾನನು ನಿರ್ದಿಷ್ಟವಾಗಿ ಹೇಳಿರುವುದು ಗಮನಾರ್ಹ.—1 ಯೋಹಾ. 3:4.
3. ಅಧರ್ಮವನ್ನು ದ್ವೇಷಿಸುವ ವಿಷಯದಲ್ಲಿ ಜೀವನದ ಯಾವ ಕ್ಷೇತ್ರಗಳನ್ನು ಈ ಲೇಖನ ಪರಿಗಣಿಸುವುದು?
3 ಆದ್ದರಿಂದ, ‘ನಾನು ಅಧರ್ಮವನ್ನು ದ್ವೇಷಿಸುತ್ತೇನೋ?’ ಎಂದು ಕ್ರೈಸ್ತರಾದ ನಾವು ಸ್ವತಃ ಕೇಳಿಕೊಳ್ಳುವುದು ಉತ್ತಮ. ಕೆಟ್ಟದ್ದರ ಕಡೆಗೆ ನಮಗಿರುವ ದ್ವೇಷವನ್ನು ಜೀವನದ ನಾಲ್ಕು ಕ್ಷೇತ್ರಗಳಲ್ಲಿ ಹೇಗೆ ತೋರಿಸಬಲ್ಲೆವು ಎಂಬುದನ್ನು ನಾವೀಗ ಪರಿಗಣಿಸೋಣ. ಅವು ಯಾವುವೆಂದರೆ, (1) ಮದ್ಯಪಾನದ ದುರುಪಯೋಗದ ವಿಷಯದಲ್ಲಿ ನಮ್ಮ ಮನೋಭಾವ, (2) ಮಾಟಮಂತ್ರಗಳ ವಿಷಯದಲ್ಲಿ ನಮ್ಮ ನೋಟ, (3) ಅನೈತಿಕತೆಗೆ ನಮ್ಮ ಪ್ರತಿಕ್ರಿಯೆ ಮತ್ತು (4) ಅಧರ್ಮವನ್ನು ಪ್ರೀತಿಸುವವರ ಬಗ್ಗೆ ನಮಗಿರುವ ನೋಟ.
ಮದ್ಯಸಾರಕ್ಕೆ ತಕ್ಕ ಸ್ಥಾನವಿರಲಿ
4. ವಿಪರೀತ ಕುಡಿಯುವ ವಿಷಯದಲ್ಲಿ ಎಚ್ಚರಿಸುವಾಗ ಯೇಸುವಿಗೆ ವಾಕ್ಸರಳತೆಯಿತ್ತು ಏಕೆ?
4 ದ್ರಾಕ್ಷಾರಸವು ದೇವರ ದಾನವೆಂದು ಯೇಸು ಮನಗಂಡನು ಮತ್ತು ಕೆಲವೊಮ್ಮೆ ಅದನ್ನು ಸೇವಿಸಿದನು ಸಹ. (ಕೀರ್ತ. 104:14, 15) ಆದರೆ ವಿಪರೀತ ಕುಡಿತದಲ್ಲಿ ಒಳಗೂಡುವ ಮೂಲಕ ಅವನೆಂದೂ ಈ ದಾನವನ್ನು ದುರುಪಯೋಗಿಸಲಿಲ್ಲ. (ಜ್ಞಾನೋ. 23:29-33) ಆದ್ದರಿಂದ ಕುಡಿಕತನದ ವಿಷಯದಲ್ಲಿ ಎಚ್ಚರಿಕೆ ನೀಡುವ ವಾಕ್ಸರಳತೆ ಯೇಸುವಿಗಿತ್ತು. (ಲೂಕ 21:34, 35 ಓದಿ.) ಮದ್ಯಸಾರದ ದುರುಪಯೋಗವು ಇತರ ಗಂಭೀರ ಪಾಪಗಳಿಗೂ ನಡೆಸಸಾಧ್ಯವಿದೆ. ಆದ್ದರಿಂದ ಅಪೊಸ್ತಲ ಪೌಲನು ಬರೆದದ್ದು: ‘ದ್ರಾಕ್ಷಾಮದ್ಯವನ್ನು ಕುಡಿದು ಮತ್ತರಾಗಬೇಡಿ; ಅದರಿಂದ ಪಟಿಂಗತನವು ಉಂಟಾಗುತ್ತದೆ. ಆದರೆ ಪವಿತ್ರಾತ್ಮಭರಿತರಾಗಿರಿ.’ (ಎಫೆ. 5:18) ಅಲ್ಲದೆ, ಸಭೆಯಲ್ಲಿನ ವಯೋವೃದ್ಧ ಸ್ತ್ರೀಯರಿಗೆ ಸಹ ಅವನು ಬುದ್ಧಿಹೇಳುತ್ತಾ, ‘ಅತಿಯಾದ ದ್ರಾಕ್ಷಾಮದ್ಯಕ್ಕೆ ದಾಸಿಯರಾಗಬೇಡಿ’ ಎಂದನು.—ತೀತ 2:3.
5. ಮದ್ಯಪಾನವನ್ನು ಮಾಡಲು ಆಯ್ಕೆಮಾಡುವವರು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
5 ಮದ್ಯಪಾನ ಮಾಡಲು ನೀವು ಆಯ್ಕೆಮಾಡುವಲ್ಲಿ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಯೇಸು ವಿಪರೀತ ಕುಡಿತದಲ್ಲಿ ಒಳಗೂಡಿರಲಿಲ್ಲ, ಹಾಗಾದರೆ ನನ್ನ ವಿಷಯದಲ್ಲೇನು? ಮದ್ಯಪಾನದ ವಿಷಯದಲ್ಲಿ ನಾನು ಇತರರಿಗೆ ಸಲಹೆ, ಎಚ್ಚರಿಕೆ ಕೊಡಬೇಕಾದಾಗ ವಾಕ್ಸರಳತೆಯಿಂದ ಕೊಡಶಕ್ತನೋ? ಚಿಂತೆಯನ್ನು ಮರೆಯಲೆಂದು ಅಥವಾ ಒತ್ತಡವನ್ನು ಕಡಿಮೆಗೊಳಿಸಲೆಂದು ನಾನು ಕುಡಿಯುತ್ತೇನೋ? ಪ್ರತಿವಾರ ನಾನೆಷ್ಟು ಮದ್ಯ ಸೇವಿಸುತ್ತೇನೆ? ನಾನು ವಿಪರೀತ ಕುಡಿಯುತ್ತಿದ್ದೇನೆಂದು ಯಾರಾದರೂ ಹೇಳುವಲ್ಲಿ ನನ್ನ ಪ್ರತಿಕ್ರಿಯೆಯೇನು? ನಾನದನ್ನು ಅಲ್ಲಗಳೆಯುತ್ತೇನೋ ಅಥವಾ ಸಿಟ್ಟಿಗೇಳುತ್ತೇನೋ?’ ಅತಿಯಾದ ದ್ರಾಕ್ಷಾಮದ್ಯಕ್ಕೆ ದಾಸರಾಗುವುದರಿಂದ ನಮ್ಮ ಆಲೋಚನಾ ಸಾಮರ್ಥ್ಯ ಹಾಗೂ ವಿವೇಕದ ನಿರ್ಣಯಗಳನ್ನು ಮಾಡುವ ಸಾಮರ್ಥ್ಯ ಕುಂದಿಹೋಗಬಹುದು. ಕ್ರಿಸ್ತನ ಹಿಂಬಾಲಕರಾದರೋ ತಮ್ಮ ಆಲೋಚನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಶ್ರಮಪಡುತ್ತಾರೆ.—ಜ್ಞಾನೋ. 3:21, 22.
ಮಾಟಮಂತ್ರಗಳನ್ನು ತೊರೆಯಿರಿ
6, 7. (ಎ) ಸೈತಾನ ಮತ್ತು ದೆವ್ವಗಳನ್ನು ಯೇಸು ಹೇಗೆ ಪ್ರತಿರೋಧಿಸಿದನು? (ಬಿ) ಇಂದು ಮಾಟಮಂತ್ರಗಳು ಹೆಚ್ಚು ವ್ಯಾಪಕವಾಗಿವೆ ಏಕೆ?
6 ಯೇಸು ಭೂಮಿಯಲ್ಲಿದ್ದಾಗ ಸೈತಾನನನ್ನೂ ದೆವ್ವಗಳನ್ನೂ ದೃಢತೆಯಿಂದ ವಿರೋಧಿಸಿದನು. ತನ್ನ ನಿಷ್ಠೆಯನ್ನು ಮುರಿಯಲು ಸೈತಾನನು ಮಾಡಿದ ನೇರ ಆಕ್ರಮಣಗಳನ್ನು ಅವನು ತಿರಸ್ಕರಿಸಿದನು. (ಲೂಕ 4:1-13) ತನ್ನ ಯೋಚನೆ ಮತ್ತು ಕ್ರಿಯೆಗಳನ್ನು ಪ್ರಭಾವಿಸಲಿದ್ದ ಕುಟಿಲ ಪ್ರಯತ್ನಗಳನ್ನೂ ಅವನು ಗುರುತಿಸಿ ಪ್ರತಿರೋಧಿಸಿದನು. (ಮತ್ತಾ. 16:21-23) ದೆವ್ವಗಳ ಕ್ರೂರ ಹಿಡಿತದಿಂದ ಪೀಡಿತರಾದ ಯೋಗ್ಯ ಜನರನ್ನು ಅವನು ಬಿಡಿಸಿದನು.—ಮಾರ್ಕ 5:2, 8, 12-15; 9:20, 25-27.
7 ಯೇಸು 1914ರಲ್ಲಿ ಸಿಂಹಾಸನಾರೂಢನಾಗಿ ರಾಜನಾದ ಬಳಿಕ ಸೈತಾನ ಮತ್ತು ದೆವ್ವಗಳ ಪ್ರಭಾವದಿಂದ ಕಲುಷಿತಗೊಂಡ ಸ್ವರ್ಗವನ್ನು ಶುದ್ಧೀಕರಿಸಿದನು. ಫಲಿತಾಂಶವಾಗಿ ಸೈತಾನನು, ‘ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸಲು’ ಈಗ ಹಿಂದೆಂದಿಗಿಂತಲೂ ಹೆಚ್ಚು ಪಣತೊಟ್ಟಿದ್ದಾನೆ. (ಪ್ರಕ. 12:9, 10) ಆದ್ದರಿಂದ ಲೋಕದಲ್ಲೆಲ್ಲೂ ಮಾಟಮಂತ್ರಗಳ ಆಕರ್ಷಣೆ ವ್ಯಾಪಕವಾಗಿ ಹೆಚ್ಚುತ್ತಿರುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಹೀಗಿರಲಾಗಿ ನಮ್ಮನ್ನು ಕಾಪಾಡಲು ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?
8. ಮನೋರಂಜನೆಯನ್ನು ಆರಿಸಿಕೊಳ್ಳುವಾಗ ನಮ್ಮಲ್ಲಿ ಪ್ರತಿಯೊಬ್ಬರು ಯಾವ ಸ್ವಪರೀಕ್ಷೆ ಮಾಡಬೇಕು?
8 ಪ್ರೇತವ್ಯವಹಾರದಿಂದಾಗುವ ಅಪಾಯಗಳ ಕುರಿತು ಬೈಬಲ್ ಸ್ಪಷ್ಟ ಎಚ್ಚರಿಕೆ ನೀಡುತ್ತದೆ. (ಧರ್ಮೋಪದೇಶಕಾಂಡ 18:10-12 ಓದಿ.) ಇಂದು ಮಾಟಮಂತ್ರವನ್ನು ಪ್ರವರ್ಧಿಸುವ ಚಲನಚಿತ್ರ, ಪುಸ್ತಕ ಮತ್ತು ಇಲೆಕ್ಟ್ರಾನಿಕ್ ಗೇಮ್ಸ್ ಮೂಲಕ ಸೈತಾನನೂ ದೆವ್ವಗಳೂ ಜನರ ಯೋಚನೆಗಳ ಮೇಲೆ ಬಹಳವಾಗಿ ಕೆಟ್ಟ ಪ್ರಭಾವಬೀರುತ್ತವೆ. ಆದ್ದರಿಂದ ಮನೋರಂಜನೆಯನ್ನು ಆರಿಸಿಕೊಳ್ಳುವಾಗ ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಬೇಕು: ‘ಈ ಮುಂಚೆ ನಾನು ಮನೋರಂಜನೆಗಾಗಿ ಪ್ರೇತಾತ್ಮಕ್ಕೆ ಸಂಬಂಧಿಸಿದ ಪುಸ್ತಕ, ಹಾಸ್ಯಗಳು, ಚಲನಚಿತ್ರ, ಟಿವಿ ಕಾರ್ಯಕ್ರಮ ಅಥವಾ ಇಲೆಕ್ಟ್ರಾನಿಕ್ ಗೇಮ್ಗಳನ್ನು ಆರಿಸಿಕೊಂಡಿದ್ದೇನೋ? ಮಾಟಮಂತ್ರಗಳ ದುಷ್ಪ್ರಭಾವವನ್ನು ತಿರಸ್ಕರಿಸುವುದರ ಮಹತ್ವ ನನಗೆ ತಿಳಿದಿದೆಯೋ ಅಥವಾ ಆ ಅಪಾಯಗಳನ್ನು ನಾನು ನಿರ್ಲಕ್ಷಿಸುತ್ತೇನೋ? ನಾನು ಆಯ್ಕೆಮಾಡುವ ಮನೋರಂಜನೆಯ ಕುರಿತು ಯೆಹೋವನಿಗೆ ಹೇಗನಿಸುತ್ತದೆ ಎಂಬುದನ್ನು ಸಹ ಯೋಚಿಸಿದ್ದೇನೋ? ಸೈತಾನನ ಅಂಥ ಪ್ರಭಾವಗಳಿಗೆ ನಾನು ನನ್ನ ಜೀವನದಲ್ಲಿ ಅವಕಾಶ ಕೊಟ್ಟಿದ್ದೇನೋ? ಹಾಗಿರುವಲ್ಲಿ, ಯೆಹೋವನ ಮೇಲೆ ಮತ್ತು ಆತನ ನೀತಿಯುತ ಮೂಲತತ್ತ್ವಗಳ ಮೇಲೆ ನನಗಿರುವ ಪ್ರೀತಿಯು ದೃಢಸಂಕಲ್ಪದಿಂದ ಅವನ್ನು ಕೂಡಲೆ ತಿರಸ್ಕರಿಸುವಂತೆ ನನ್ನನ್ನು ಪ್ರೇರಿಸುತ್ತದೋ?—ಅ. ಕಾ. 19:19, 20.
ಅನೈತಿಕತೆಯ ಕುರಿತ ಯೇಸುವಿನ ಎಚ್ಚರಿಕೆಗೆ ಕಿವಿಗೊಡಿ
9. ಹೇಗೆ ಒಬ್ಬ ವ್ಯಕ್ತಿಯು ಅಧರ್ಮವನ್ನು ಪ್ರೀತಿಸತೊಡಗಬಹುದು?
9 ಲೈಂಗಿಕ ನೈತಿಕತೆಯ ವಿಷಯದಲ್ಲಿ ಯೆಹೋವನ ಮಟ್ಟವನ್ನು ಯೇಸು ಎತ್ತಿಹಿಡಿದನು. ಅವನಂದದ್ದು: “ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು ಎಂಬುದನ್ನು ನೀವು ಓದಲಿಲ್ಲವೊ? ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:4-6) ನಾವು ಕಣ್ಣಿನಿಂದ ನೋಡುವ ವಿಷಯಗಳು ನಮ್ಮ ಹೃದಯವನ್ನು ಪ್ರಭಾವಿಸಬಲ್ಲವು ಎಂಬುದು ಯೇಸುವಿಗೆ ಗೊತ್ತಿತ್ತು. ಆದ್ದರಿಂದಲೇ ತನ್ನ ಪರ್ವತ ಪ್ರಸಂಗದಲ್ಲಿ ಅವನಂದದ್ದು: “‘ವ್ಯಭಿಚಾರ ಮಾಡಬಾರದು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾ. 5:27, 28) ಯೇಸುವಿನ ಈ ಎಚ್ಚರಿಕೆಯನ್ನು ನಿರ್ಲಕ್ಷಿಸುವವರು ವಾಸ್ತವದಲ್ಲಿ ಅಧರ್ಮದ ಕಡೆಗೆ ಪ್ರೀತಿಯನ್ನು ಬೆಳೆಸುತ್ತಿದ್ದಾರೆ.
10. ಒಬ್ಬ ವ್ಯಕ್ತಿ ಕಾಮಪ್ರಚೋದಕ ಚಿತ್ರಗಳನ್ನು ನೋಡುವ ದುಷ್ಚಟವನ್ನು ತೊರೆಯಬಲ್ಲನು ಎಂಬುದಕ್ಕೆ ಅನುಭವವೊಂದನ್ನು ತಿಳಿಸಿ.
10 ಕಾಮಪ್ರಚೋದಕ ಚಿತ್ರಗಳ ಮೂಲಕ ಸೈತಾನನು ಲೈಂಗಿಕ ಅನೈತಿಕತೆಯನ್ನು ವರ್ಧಿಸುತ್ತಾನೆ. ಈಗಿನ ಲೋಕವು ಅದರಿಂದಲೇ ತುಂಬಿತುಳುಕುತ್ತಿದೆ. ಕಾಮಪ್ರಚೋದಕ ಚಿತ್ರಣಗಳನ್ನು ಒಂದೇ ಒಂದು ಸಲ ನೋಡುವಲ್ಲಿ ಕೂಡ ಆ ಅಶ್ಲೀಲ ದೃಶ್ಯವನ್ನು ಮನಸ್ಸಿನಿಂದ ತೆಗೆದುಹಾಕುವುದು ಬಲು ಕಷ್ಟ; ಅದನ್ನು ಸದಾ ನೋಡುವ ದುಷ್ಚಟ ಸಹ ಹಿಡಿಯಬಹುದು. ಒಬ್ಬ ಕ್ರೈಸ್ತ ಸಹೋದರನಿಗೆ ಏನಾಯಿತೆಂಬುದನ್ನು ಪರಿಗಣಿಸಿ. ಅವನು ಹೇಳುವುದು: “ನಾನು ಗುಟ್ಟಾಗಿ ಕದ್ದುಮುಚ್ಚಿ ಕಾಮಪ್ರಚೋದಕ ಚಿತ್ರಗಳನ್ನು ನೋಡುತ್ತಿದ್ದೆ. ಅದು ನನ್ನನ್ನು ಯೆಹೋವನ ಸೇವೆ ಮಾಡುತ್ತಿದ್ದ ಲೋಕದಿಂದ ಪೂರಾ ಪ್ರತ್ಯೇಕಿಸಿ, ಬೇರ್ಪಡಿಸಿ, ನನ್ನದೇ ಆದ ಸ್ವಪ್ನಸಾಮ್ರಾಜ್ಯವನ್ನು ಕಟ್ಟಿಕೊಳ್ಳುವಂತೆ ಮಾಡಿತು. ಈ ಪ್ರವೃತ್ತಿ ಬಲು ಕೆಟ್ಟದ್ದೆಂದು ನನಗೆ ಗೊತ್ತಿತ್ತು. ಆದರೂ ದೇವರಿಗೆ ನಾನು ಸಲ್ಲಿಸುವ ಸೇವೆ ಇನ್ನೂ ಸ್ವೀಕಾರಾರ್ಹವಾಗಿದೆ ಎಂದು ನನ್ನಲ್ಲೇ ಅಂದುಕೊಂಡೆ.” ಈ ಸಹೋದರನ ಆಲೋಚನೆಯನ್ನು ಯಾವುದು ಬದಲಾಯಿಸಿತು? ಅವನು ಅನ್ನುವುದು: “ನನ್ನ ಸಮಸ್ಯೆಯ ಬಗ್ಗೆ ಹಿರಿಯರಿಗೆ ತಿಳಿಸಲು ನಾನು ನಿರ್ಧರಿಸಿದೆ. ಅದು ಅತೀ ಕಷ್ಟವೆನಿಸಿದರೂ ಅದನ್ನು ಮಾಡಿದೆ.” ಕಾಲಕ್ರಮೇಣ ಈ ಸಹೋದರನು ಈ ಕೀಳ್ಮಟ್ಟದ ಚಾಳಿಯನ್ನು ತೊರೆದುಬಿಟ್ಟನು. “ಈ ಪಾಪವನ್ನು ತ್ಯಜಿಸಿ ನನ್ನನ್ನು ಶುದ್ಧಪಡಿಸಿಕೊಂಡ ಮೇಲೆ ನಿಜವಾಗಿಯೂ ಶುದ್ಧ ಮನಸ್ಸಾಕ್ಷಿಯನ್ನು ಹೊಂದಿದ್ದೇನೆ” ಎಂದನವನು. ಹೌದು, ಅಧರ್ಮವನ್ನು ದ್ವೇಷಿಸುವವರು ಅಶ್ಲೀಲತೆಯನ್ನು ದ್ವೇಷಿಸಲು ಕಲಿಯಲೇಬೇಕು.
11, 12. ಸಂಗೀತವನ್ನು ಆರಿಸಿಕೊಳ್ಳುವಾಗ ನಾವು ಅಧರ್ಮವನ್ನು ದ್ವೇಷಿಸುತ್ತೇವೆಂದು ಹೇಗೆ ತೋರಿಸಬಲ್ಲೆವು?
11 ಸಂಗೀತ ಮತ್ತು ಅದರಲ್ಲಿನ ಪದಗಳು ನಮ್ಮ ಭಾವನೆಗಳ ಮೇಲೆ ಗಾಢ ಪ್ರಭಾವಬೀರಬಲ್ಲವು. ಹೀಗೆ ಸಾಂಕೇತಿಕ ಹೃದಯದ ಮೇಲೂ ಪರಿಣಾಮವಾಗ ಸಾಧ್ಯವಿದೆ. ಸಂಗೀತವು ದೇವರು ಕೊಟ್ಟಿರುವ ದಾನ ಮತ್ತು ಅದು ಸತ್ಯಾರಾಧನೆಯಲ್ಲಿ ಬಹಳ ಹಿಂದಿನಿಂದಲೂ ಪ್ರಮುಖ ಸ್ಥಾನವನ್ನು ವಹಿಸಿತ್ತು. (ವಿಮೋ. 15:20, 21; ಎಫೆ. 5:19) ಆದರೆ ಸೈತಾನನ ದುಷ್ಟ ಲೋಕವು ಅನೈತಿಕತೆಯನ್ನು ಮಹಿಮೆಗೇರಿಸುವ ಸಂಗೀತವನ್ನು ಪ್ರವರ್ತಿಸುತ್ತದೆ. (1 ಯೋಹಾ. 5:19) ನೀವು ಕೇಳುತ್ತಿರುವ ಸಂಗೀತವು ನಿಮ್ಮನ್ನು ಕೆಡಿಸುತ್ತಿದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿಯಬಲ್ಲಿರಿ?
12 ಹೀಗೆ ಕೇಳಿಕೊಳ್ಳಿ: ‘ನಾನು ಕೇಳುತ್ತಿರುವ ಗೀತೆಗಳು ಕೊಲೆ, ವ್ಯಭಿಚಾರ, ಹಾದರ ಮತ್ತು ದೇವದೂಷಣೆಯನ್ನು ಹಾಡಿಹೊಗಳುತ್ತವೋ? ನಿರ್ದಿಷ್ಟ ಗೀತೆಗಳ ಪದಗಳನ್ನು ಇನ್ನೊಬ್ಬರಿಗೆ ಓದಿಹೇಳಬೇಕಾಗಿರುವಲ್ಲಿ, ನಾನು ಅಧರ್ಮವನ್ನು ದ್ವೇಷಿಸುತ್ತೇನೆಂಬ ಅಭಿಪ್ರಾಯವನ್ನು ಅದು ಅವರಿಗೆ ಕೊಡುತ್ತದೋ ಇಲ್ಲವೆ ನನ್ನ ಹೃದಯ ಭ್ರಷ್ಟಗೊಂಡಿದೆಯೆಂದು ತೋರಿಸುತ್ತದೋ?’ ಅಧರ್ಮವನ್ನು ಹೊಗಳುವ ಗೀತೆಗಳನ್ನು ನಾವು ಕೇಳಿಸಿಕೊಂಡು ಅದೇ ಸಮಯದಲ್ಲಿ ಅಧರ್ಮವನ್ನು ದ್ವೇಷಿಸುತ್ತೇವೆಂದೂ ಹೇಳಲಾರೆವು. ಯೇಸು ಅಂದದ್ದು: “ಬಾಯೊಳಗಿಂದ ಹೊರಡುವಂಥದ್ದು ಹೃದಯದಿಂದ ಬರುತ್ತದೆ ಮತ್ತು ಇಂಥ ವಿಷಯಗಳು ಒಬ್ಬನನ್ನು ಹೊಲೆಮಾಡುತ್ತವೆ. ಉದಾಹರಣೆಗೆ, ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೇವದೂಷಣೆಗಳು ಹೊರಬರುತ್ತವೆ.”—ಮತ್ತಾ. 15:18, 19; ಯಾಕೋ. 3:10, 11 ಹೋಲಿಸಿ.
ಅಧರ್ಮಿಗಳನ್ನು ಯೇಸು ವೀಕ್ಷಿಸಿದಂತೆಯೇ ವೀಕ್ಷಿಸಿ
13. ಹೃದಯ ಕಾಠಿಣ್ಯದಿಂದ ಪಾಪಮಾಡುತ್ತಾ ಇದ್ದವರನ್ನು ಯೇಸು ಹೇಗೆ ವೀಕ್ಷಿಸಿದನು?
13 ಪಾಪಿಗಳನ್ನು ಅಥವಾ ಅಧರ್ಮಿಗಳನ್ನು ಪಶ್ಚಾತ್ತಾಪಪಡುವಂತೆ ಕರೆಯಲಿಕ್ಕಾಗಿಯೇ ತಾನು ಬಂದಿದ್ದೇನೆ ಎಂದು ಯೇಸು ಹೇಳಿದನು. (ಲೂಕ 5:30-32.) ಆದರೆ ಹೃದಯ ಕಾಠಿಣ್ಯದಿಂದ ಪಾಪಮಾಡುತ್ತಾ ಇದ್ದ ಪಾಪಿಗಳನ್ನು ಅವನು ಹೇಗೆ ವೀಕ್ಷಿಸಿದನು? ಅಂಥವರಿಂದ ಮೋಸಹೋಗದಂತೆ ಯೇಸು ಬಲವಾದ ಎಚ್ಚರಿಕೆ ಕೊಟ್ಟನು. (ಮತ್ತಾ. 23:15, 23-26) “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು. ಆ ದಿನದಲ್ಲಿ [ದೇವರು ನ್ಯಾಯತೀರ್ಪನ್ನು ತರುವಾಗ] ಅನೇಕರು ನನಗೆ, ‘ಕರ್ತನೇ, ಕರ್ತನೇ, ನಾವು ನಿನ್ನ ಹೆಸರಿನಲ್ಲಿ ಪ್ರವಾದಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಹೇಳುವರು” ಎಂದನು ಯೇಸು ಸ್ಪಷ್ಟವಾಗಿ. ಆದರೂ ಪಶ್ಚಾತ್ತಾಪಪಡದೆ ಅಧರ್ಮವನ್ನು ನಡೆಸುತ್ತಿರುವವರನ್ನು, “ನನ್ನಿಂದ ತೊಲಗಿಹೋಗಿರಿ” ಎಂದು ಹೇಳುವ ಮೂಲಕ ಯೇಸು ತಿರಸ್ಕರಿಸುವನು. (ಮತ್ತಾ. 7:21-23) ಯಾಕೆ ಅಂಥ ಕಠಿಣ ತೀರ್ಪು? ಏಕೆಂದರೆ ಅಂಥವರು ತಮ್ಮ ಅಧರ್ಮದ ಕೃತ್ಯಗಳ ಮೂಲಕ ದೇವರನ್ನು ಅಗೌರವಿಸುತ್ತಾರೆ ಮತ್ತು ಇತರರಿಗೆ ಹಾನಿಯನ್ನುಂಟುಮಾಡುತ್ತಾರೆ.
14. ಪಶ್ಚಾತ್ತಾಪಪಡದ ಪಾಪಿಗಳನ್ನು ಸಭೆಯಿಂದ ಏಕೆ ತೆಗೆದುಹಾಕಬೇಕು?
14 ಪಶ್ಚಾತ್ತಾಪಪಡದ ಪಾಪಿಗಳನ್ನು ಸಭೆಯಿಂದ ತೆಗೆದುಹಾಕಬೇಕೆಂದು ದೇವರ ವಾಕ್ಯ ಆಜ್ಞಾಪಿಸುತ್ತದೆ. (1 ಕೊರಿಂಥ 5:9-13 ಓದಿ.) ಇದು ಕಡಿಮೆಪಕ್ಷ ಮೂರು ಕಾರಣಗಳಿಂದಾಗಿ ಆವಶ್ಯಕ. ಅವು ಯಾವುವೆಂದರೆ, (1) ಯೆಹೋವನ ಹೆಸರಿಗೆ ಕಳಂಕ ಬರದಿರಲು, (2) ಸಭೆ ಕಲುಷಿತವಾಗದಂತೆ ಕಾಪಾಡಲು ಮತ್ತು (3) ಸಾಧ್ಯವಿರುವಲ್ಲಿ ಪಾಪಿಯು ಪಶ್ಚಾತ್ತಾಪಪಡುವಂತೆ ಸಹಾಯಮಾಡಲು.
15. ನಾವು ಯೆಹೋವನಿಗೆ ನಿಷ್ಠರಾಗಿ ಉಳಿಯಲು ಬಯಸುವಲ್ಲಿ ಯಾವ ಗಂಭೀರ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
15 ಪಶ್ಚಾತ್ತಾಪಪಡದೆ ಅಧರ್ಮದ ಮಾರ್ಗದಲ್ಲೇ ನಡೆಯುತ್ತಾ ಇರುವವರ ಬಗ್ಗೆ ಯೇಸುವಿಗಿರುವ ನೋಟ ನಮಗಿದೆಯೋ? ನಾವು ಈ ಪ್ರಶ್ನೆಗಳ ಕುರಿತು ಯೋಚಿಸಬೇಕಾಗಿದೆ: ‘ಕ್ರೈಸ್ತ ಸಭೆಯಿಂದ ಬಹಿಷ್ಕೃತನಾದ ಅಥವಾ ಸ್ವತಃ ತನ್ನನ್ನು ಸಭೆಯಿಂದ ಬೇರ್ಪಡಿಸಿಕೊಂಡ ವ್ಯಕ್ತಿಯೊಂದಿಗೆ ನಾನು ಕ್ರಮವಾಗಿ ಸಹವಾಸ ಮಾಡುತ್ತೇನೋ? ಆ ವ್ಯಕ್ತಿ ನನ್ನ ಆಪ್ತ ಸಂಬಂಧಿಕನು, ಆದರೆ ಈಗ ನನ್ನೊಂದಿಗೆ ವಾಸಿಸುತ್ತಿಲ್ಲ ಆಗೇನು?’ ಅಂಥ ಸನ್ನಿವೇಶ ನೀತಿಯ ಕಡೆಗೆ ನಮಗಿರುವ ಪ್ರೀತಿಗೆ ಮತ್ತು ದೇವರ ಕಡೆಗಿನ ನಿಷ್ಠೆಗೆ ನಿಜವಾಗಿಯೂ ಒಂದು ಪರೀಕ್ಷೆ!a
16, 17. ಕ್ರೈಸ್ತ ತಾಯಿಯೊಬ್ಬಳು ಯಾವ ಕಷ್ಟಕರ ಸನ್ನಿವೇಶವನ್ನು ಎದುರಿಸಿದಳು? ಪಶ್ಚಾತ್ತಾಪಪಡದವರನ್ನು ಬಹಿಷ್ಕರಿಸುವ ಏರ್ಪಾಡನ್ನು ಬೆಂಬಲಿಸುವಂತೆ ಆಕೆಗೆ ಯಾವುದು ನೆರವಾಯಿತು?
16 ಒಬ್ಬಾಕೆ ಸಹೋದರಿಯ ಅನುಭವವನ್ನು ಪರಿಗಣಿಸಿ. ಆಕೆಯ ಪ್ರಾಪ್ತವಯಸ್ಸಿನ ಮಗನಿಗೆ ಒಂದೊಮ್ಮೆ ಯೆಹೋವನ ಮೇಲೆ ಪ್ರೀತಿಯಿತ್ತು. ಆದರೆ ಕ್ರಮೇಣ ಅವನು ಅಧರ್ಮವನ್ನು ನಡೆಸುತ್ತಾ ಪಶ್ಚಾತ್ತಾಪಪಡದೆ ಇದ್ದದ್ದರಿಂದ ಸಭೆಯಿಂದ ಬಹಿಷ್ಕೃತನಾದನು. ನಮ್ಮ ಸಹೋದರಿ ಯೆಹೋವನನ್ನು ಪ್ರೀತಿಸುತ್ತಿದ್ದಳು ಆದರೆ ಮಗನನ್ನು ಸಹ ಪ್ರೀತಿಸುತ್ತಿದ್ದಳು. ಆದ್ದರಿಂದ ಅವನೊಂದಿಗೆ ಸಹವಾಸ ಮಾಡಬಾರದೆಂಬ ಬೈಬಲ್ ಆಜ್ಞೆಯನ್ನು ಅನ್ವಯಿಸಿಕೊಳ್ಳಲು ಆಕೆಗೆ ಬಹಳ ಕಷ್ಟವಾಯಿತು.
17 ಈ ಸನ್ನಿವೇಶದಲ್ಲಿ ನೀವು ಆ ಸಹೋದರಿಗೆ ಯಾವ ಸಲಹೆ ಕೊಡುತ್ತಿದ್ದೀರಿ? ಒಬ್ಬ ಹಿರಿಯನು ಆಕೆಗೆ ಸಹಾಯಮಾಡುತ್ತಾ ಯೆಹೋವನಿಗೆ ಆಕೆಯ ನೋವು ಗೊತ್ತಿದೆ ಎಂಬುದನ್ನು ಮನಗಾಣಿಸಿದನು. ತನ್ನ ದೂತಪುತ್ರರಲ್ಲಿ ಕೆಲವರು ದಂಗೆಯೆದ್ದಾಗ ಸ್ವತಃ ಯೆಹೋವನಿಗೆ ಎಷ್ಟು ನೋವಾಗಿದ್ದಿರಬೇಕು ಎಂದು ಅವಳು ಆಲೋಚಿಸುವಂತೆ ಸಹೋದರನು ಹೇಳಿದನು. ಅಂಥ ಸನ್ನಿವೇಶ ಎಷ್ಟು ದುಃಖಕರವಾಗಿರಬಲ್ಲದು ಎಂಬುದು ಯೆಹೋವನಿಗೆ ಗೊತ್ತಿದ್ದರೂ ಪಶ್ಚಾತ್ತಾಪಪಡದ ಪಾಪಿಗಳನ್ನು ಬಹಿಷ್ಕರಿಸುವಂತೆ ಆತನು ಅವಶ್ಯಪಡಿಸುತ್ತಾನೆಂದು ಹಿರಿಯನು ಆಕೆಗೆ ವಿವರಿಸಿದನು. ಆಕೆ ಆ ಮರುಜ್ಞಾಪನಗಳಿಗೆ ಕಿವಿಗೊಟ್ಟು ಬಹಿಷ್ಕಾರದ ಏರ್ಪಾಡನ್ನು ನಿಷ್ಠೆಯಿಂದ ಬೆಂಬಲಿಸಿದಳು.b ಅಂಥ ನಿಷ್ಠೆಯು ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತದೆ.—ಜ್ಞಾನೋ. 27:11.
18, 19. (ಎ) ಅಧರ್ಮವನ್ನು ನಡೆಸುತ್ತಿರುವ ವ್ಯಕ್ತಿಯೊಂದಿಗೆ ಸಂಪರ್ಕ ಕಡಿದುಹಾಕುವುದು ನಾವು ಏನನ್ನು ದ್ವೇಷಿಸುತ್ತೇವೆಂಬುದಕ್ಕೆ ಸಾಕ್ಷ್ಯ? (ಬಿ) ದೇವರಿಗೂ ಆತನ ಏರ್ಪಾಡಿಗೂ ನಮ್ಮ ನಿಷ್ಠೆಯು ಯಾವ ಫಲಿತಾಂಶ ತರಬಹುದು?
18 ತದ್ರೀತಿಯ ಸನ್ನಿವೇಶ ನಿಮಗೆ ಎದುರಾಗುವಲ್ಲಿ ಯೆಹೋವನು ಸಹ ನಿಮ್ಮ ದುಃಖದಲ್ಲಿ ಸಹಭಾಗಿ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ಬಹಿಷ್ಕೃತ ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಯೊಂದಿಗೆ ನೀವು ಸಂಪರ್ಕವನ್ನು ಕಡಿದುಹಾಕುವ ಮೂಲಕ ಅವನ ಮನೋಭಾವ, ಕ್ರಿಯೆಗಳನ್ನು ದ್ವೇಷಿಸುತ್ತೀರಿ ಎಂದು ತೋರಿಸುವಿರಿ. ಅದಲ್ಲದೆ, ತಪ್ಪಿತಸ್ಥನನ್ನು ಪ್ರೀತಿಸುವುದರಿಂದಲೇ ಅವನಿಗೆ ಒಳಿತನ್ನು ಮಾಡಬಯಸುತ್ತೀರಿ ಎಂಬುದನ್ನೂ ನೀವು ತೋರಿಸುತ್ತೀರಿ. ಈ ವಿಷಯದಲ್ಲಿ ಯೆಹೋವನಿಗೆ ನೀವು ತೋರಿಸುವ ನಿಷ್ಠೆಯು, ಶಿಸ್ತಿಗೆ ಒಳಗಾದ ಆ ವ್ಯಕ್ತಿ ಪಶ್ಚಾತ್ತಾಪಪಟ್ಟು ಯೆಹೋವನ ಕಡೆಗೆ ಹಿಂದಿರುಗುವ ಸಾಧ್ಯತೆಯನ್ನು ಹೆಚ್ಚಿಸುವುದು.
19 ಬಹಿಷ್ಕೃತಳಾಗಿ ಕ್ರಮೇಣ ಪುನಃಸ್ಥಾಪಿಸಲ್ಪಟ್ಟ ಸ್ತ್ರೀಯೊಬ್ಬಳು ಬರೆದದ್ದು: “ಯೆಹೋವನು ತನ್ನ ಸಂಘಟನೆಯನ್ನು ಶುದ್ಧವಾಗಿರಿಸುವುದು ತನ್ನ ಜನರನ್ನು ಪ್ರೀತಿಸುವುದರಿಂದಲೇ ಎಂಬುದು ಸಂತೋಷದ ಸಂಗತಿ. ಬಹಿಷ್ಕಾರದ ಏರ್ಪಾಡು ಹೊರಗಿನವರಿಗೆ ಕಠಿಣವೆನಿಸಿದರೂ ಅದು ಅತ್ಯಗತ್ಯ. ಅಷ್ಟೇ ಅಲ್ಲ ಪ್ರೀತಿಯ ಏರ್ಪಾಡೂ ಆಗಿದೆ.” ಅವಳು ಬಹಿಷ್ಕೃತಳಾಗಿದ್ದಾಗ ಒಂದುವೇಳೆ ಸಭೆಯ ಸದಸ್ಯರಾಗಲಿ ಮನೆಮಂದಿಯಾಗಲಿ ಅವಳೊಂದಿಗೆ ಕ್ರಮದ ಸಂಪರ್ಕ ಇಟ್ಟುಕೊಂಡಿದ್ದಲ್ಲಿ ಅವಳು ಹಾಗೆ ಹೇಳಲು ಸಾಧ್ಯವಾಗುತ್ತಿತ್ತೋ? ಬಹಿಷ್ಕಾರದ ಕುರಿತ ಬೈಬಲ್ ಆಧಾರಿತ ಏರ್ಪಾಡನ್ನು ಬೆಂಬಲಿಸುವುದು ನಾವು ನೀತಿಪ್ರಿಯರು ಎಂಬುದಕ್ಕೆ ಹಾಗೂ ನಡತೆಯ ವಿಷಯದಲ್ಲಿ ಮಟ್ಟಗಳನ್ನಿಡುವ ಯೆಹೋವನ ಹಕ್ಕನ್ನು ಒಪ್ಪಿಕೊಳ್ಳುತ್ತೇವೆ ಎಂಬುದಕ್ಕೆ ಸಾಕ್ಷ್ಯ.
“ಕೆಟ್ಟತನವನ್ನು ಹಗೆಮಾಡಿರಿ”
20, 21. ಅಧರ್ಮವನ್ನು ದ್ವೇಷಿಸಲು ಕಲಿಯುವುದು ಪ್ರಾಮುಖ್ಯವೇಕೆ?
20 “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ” ಎಂದು ಅಪೊಸ್ತಲ ಪೇತ್ರನು ಎಚ್ಚರಿಸುತ್ತಾನೆ. ಏಕೆ? ಏಕೆಂದರೆ, “ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಸೈತಾನನು ನುಂಗಲಿಕ್ಕಾಗಿ ಹುಡುಕುವ ಆ ವ್ಯಕ್ತಿ ನೀವಾಗಿರುವಿರೋ? ನೀವು ಎಷ್ಟು ಹೆಚ್ಚಾಗಿ ಅಧರ್ಮವನ್ನು ದ್ವೇಷಿಸಲು ಕಲಿಯುತ್ತೀರಿ ಎಂಬುದರ ಮೇಲೆ ಅದು ಬಹಳವಾಗಿ ಹೊಂದಿಕೊಂಡಿದೆ.
21 ಕೆಟ್ಟದ್ದರ ಕಡೆಗೆ ದ್ವೇಷವನ್ನು ಬೆಳೆಸಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಏಕೆಂದರೆ ನಾವು ಪಾಪಿಗಳು ಮತ್ತು ಶರೀರದಾಶೆಯನ್ನು ಪ್ರೇರೇಪಿಸುವ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. (1 ಯೋಹಾ. 2:15-17) ಹಾಗಿದ್ದರೂ, ಯೇಸು ಕ್ರಿಸ್ತನನ್ನು ಅನುಕರಿಸುವ ಮೂಲಕ ಮತ್ತು ಯೆಹೋವ ದೇವರ ಮೇಲಣ ಪ್ರೀತಿಯನ್ನು ಗಾಢಗೊಳಿಸುವ ಮೂಲಕ ಅಧರ್ಮದ ಕಡೆಗೆ ದ್ವೇಷವನ್ನು ಬೆಳೆಸಿಕೊಳ್ಳುವುದರಲ್ಲಿ ಸಫಲರಾಗಬಲ್ಲೆವು. ಆದ್ದರಿಂದ ಯೆಹೋವನು “ತನ್ನ ಭಕ್ತರ [“ನಿಷ್ಠಾವಂತರ,” NW] ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು” ಎಂಬ ಪೂರ್ಣ ಭರವಸೆಯಿಂದ ‘ಕೆಟ್ಟತನವನ್ನು ಹಗೆಮಾಡಲು’ ದೃಢಸಂಕಲ್ಪ ಮಾಡೋಣ.—ಕೀರ್ತ. 97:10.
[ಪಾದಟಿಪ್ಪಣಿಗಳು]
a ಈ ವಿಷಯದ ಕುರಿತ ಸವಿವರ ಚರ್ಚೆಗಾಗಿ, “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ 207-209 ನೋಡಿ.
b 2001, ಫೆಬ್ರವರಿ 1ರ ಕಾವಲಿನಬುರುಜುವಿನ ಪುಟ 28-29 ಸಹ ನೋಡಿ.
ನಿಮ್ಮ ಉತ್ತರವೇನು?
• ಮದ್ಯಪಾನದ ಕಡೆಗೆ ನಮ್ಮ ಮನೋಭಾವವನ್ನು ಪರೀಕ್ಷಿಸಲು ಯಾವುದು ಸಹಾಯಕರ?
• ಮಾಟಮಂತ್ರಗಳ ವಿರುದ್ಧ ನಮ್ಮನ್ನು ಕಾಪಾಡಲು ಯಾವ ಹೆಜ್ಜೆಗಳನ್ನು ತಕ್ಕೊಳ್ಳಬೇಕು?
• ಕಾಮಪ್ರಚೋದಕ ಚಿತ್ರಗಳನ್ನು ನೋಡುವುದು ಏಕೆ ಅಪಾಯಕಾರಿ?
• ನಮ್ಮ ಪ್ರಿಯರೊಬ್ಬರು ಬಹಿಷ್ಕೃತರಾದಲ್ಲಿ ನಾವು ಅಧರ್ಮವನ್ನು ದ್ವೇಷಿಸುತ್ತೇವೆಂದು ಹೇಗೆ ತೋರಿಸುವೆವು?
[ಪುಟ 29ರಲ್ಲಿರುವ ಚಿತ್ರ]
ನೀವು ಮದ್ಯಪಾನವನ್ನು ಮಾಡುತ್ತೀರಾದರೆ ಏನನ್ನು ಪರಿಗಣಿಸಬೇಕು?
[ಪುಟ 30ರಲ್ಲಿರುವ ಚಿತ್ರ]
ಮನೋರಂಜನೆಯಲ್ಲಿ ಸೈತಾನನ ದುಷ್ಪ್ರಭಾವದ ಬಗ್ಗೆ ಎಚ್ಚರಿಕೆಯಿಂದಿರಿ
[ಪುಟ 31ರಲ್ಲಿರುವ ಚಿತ್ರ]
ಕಾಮಪ್ರಚೋದಕ ಚಿತ್ರಗಳನ್ನು ನೋಡುವವನು ಯಾವುದರ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾನೆ?