ಯೆಹೋವನ ಸೇವೆಯನ್ನು ಆನಂದದಿಂದ ಮಾಡುತ್ತಾ ಇರಿ!
ನಿಮ್ಮ ಜೀವನದ ತುಂಬ ಸಂತೋಷದ ದಿನ ಯಾವುದು? ಮದುವೆಯಾದ ದಿನವಾ? ನಿಮ್ಮ ಮೊದಲನೇ ಮಗು ಹುಟ್ಟಿದ ದಿನವಾ? ಅಥವಾ ನಿಮ್ಮ ದೀಕ್ಷಾಸ್ನಾನದ ದಿನವಾ? ದೀಕ್ಷಾಸ್ನಾನದ ದಿನವೇ ಇರಬೇಕಲ್ಲಾ? ಇದು ನಿಮ್ಮ ಬದುಕಿನ ತುಂಬ ಮಹತ್ವದ, ಆನಂದದ ದಿನ. ಇತರ ಸಹೋದರ ಸಹೋದರಿಯರೂ ತುಂಬ ಸಂತೋಷಪಟ್ಟರು. ಏಕೆ? ದೇವರನ್ನು ಪೂರ್ಣ ಹೃದಯ, ಪ್ರಾಣ, ಮನಸ್ಸು, ಶಕ್ತಿಯಿಂದ ಪ್ರೀತಿಸುತ್ತೀರೆಂದು ಆ ದಿನ ಎಲ್ಲರಿಗೆ ತೋರಿಸಿಕೊಟ್ಟಿರಿ.—ಮಾರ್ಕ 12:30.
ಅಂದಿನಿಂದ ನೀವು ಯೆಹೋವನ ಸೇವೆ ಮಾಡುವುದರಲ್ಲಿ ತುಂಬ ಸಂತೋಷ ಪಡೆದಿರಬೇಕು ಖಂಡಿತ. ಆದರೆ ಹಲವಾರು ಪ್ರಚಾರಕರಿಗೆ ಆರಂಭದಲ್ಲಿದ್ದ ಸಂತೋಷ ಈಗಿಲ್ಲ. ಯಾಕೆ ಹೀಗಾಯಿತು? ಯೆಹೋವನ ಸೇವೆಯನ್ನು ಆನಂದದಿಂದ ಮಾಡುತ್ತಾ ಇರಲು ಯಾವ್ಯಾವ ಕಾರಣಗಳಿವೆ?
ಕೆಲವರು ಆನಂದವನ್ನು ಕಳೆದುಕೊಳ್ಳಲು ಕಾರಣಗಳು
ದೇವರ ರಾಜ್ಯದ ಸಂದೇಶ ನಮಗೆ ತುಂಬ ಆನಂದ ತರುತ್ತದೆ. ಏಕೆಂದರೆ ಆ ಸಂದೇಶದಲ್ಲಿ ಯೆಹೋವನು ಬೇಗನೆ ಈ ದುಷ್ಟ ಲೋಕವನ್ನು ಅಂತ್ಯಮಾಡಿ ಹೊಸ ಲೋಕ ತರಲಿದ್ದಾನೆಂಬ ಮಾತಿದೆ. “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ” ಎನ್ನುತ್ತದೆ ಚೆಫನ್ಯ 1:14. ಆದರೆ ಆ ದಿನ, ‘ಇನ್ನೂ ಬಂದಿಲ್ಲ, ಎಷ್ಟೋ ಸಮಯದಿಂದ ಕಾಯುತ್ತಾ ಇದ್ದೇನಲ್ಲಾ’ ಎಂಬ ಯೋಚನೆ ನಮಗೆ ಬಂದರೆ ನಮ್ಮ ಆನಂದವನ್ನು ಕಳಕೊಳ್ಳಬಹುದು. ಆಗ ನಾವು ದೇವರ ಸೇವೆಯನ್ನು ಕಡಿಮೆಮಾಡಬಹುದು.—ಜ್ಞಾನೋ. 13:12.
ಜೊತೆ ಕ್ರೈಸ್ತರೊಂದಿಗಿನ ಸಹವಾಸವು ಆನಂದದಿಂದ ದೇವರ ಸೇವೆಮಾಡಲು ನಮಗೆ ಪ್ರೋತ್ಸಾಹ ಕೊಡುತ್ತದೆ. ಮೊದಮೊದಲು ನಮ್ಮನ್ನು ಸತ್ಯದ ಕಡೆಗೆ ಆಕರ್ಷಿಸಿ ದೇವರ ಸೇವೆಯನ್ನು ಆನಂದದಿಂದ ಆರಂಭಿಸುವಂತೆ ಮಾಡಿದ್ದು ಯೆಹೋವನ ಜನರ ಒಳ್ಳೇ ನಡತೆ ಆಗಿರಬಹುದು. (1 ಪೇತ್ರ 2:12) ಆದರೆ ಅವರಲ್ಲಿ ಯಾರಾದರೂ ದೇವರ ಆಜ್ಞೆಗಳನ್ನು ಪಾಲಿಸದೇ ಇದ್ದದ್ದಕ್ಕೆ ಸಭೆ ಶಿಸ್ತು ಪಡೆದುಕೊಂಡಾಗ ‘ಇವರೇ ಹೀಗೆಲ್ಲಾ ಮಾಡ್ತಾರಾ??’ ಎಂದು ಕೆಲವರು ನಿರುತ್ಸಾಹಗೊಂಡು ಆನಂದ ಕಳೆದುಕೊಳ್ಳಬಹುದು.
ಲೋಕದ ವಸ್ತು ಮತ್ತು ಹಣದ ಮೇಲಿನ ಅತಿಯಾದ ಆಶೆಯಿಂದಲೂ ನಾವು ಆನಂದ ಕಳಕೊಳ್ಳಬಹುದು. ಹೇಗೆ? ನಮಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿ ಮಾಡಬೇಕೆಂಬ ವಿಚಾರವನ್ನು ನಮ್ಮ ತಲೆಯಲ್ಲಿ ತುಂಬಿಸಲು ಸೈತಾನನ ಲೋಕ ಶತಪ್ರಯತ್ನ ಮಾಡುತ್ತದೆ. ಹಾಗಾಗಿ ಯೇಸು ನುಡಿದ ಈ ಮಾತುಗಳನ್ನು ನೆನಪಿನಲ್ಲಿಡಿ: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.” (ಮತ್ತಾ. 6:24) ಎರಡು ದೋಣಿಗಳಲ್ಲಿ ಕಾಲಿಡಲು ಹೇಗೆ ಸಾಧ್ಯವಿಲ್ಲವೊ ಹಾಗೆ ಯೆಹೋವನ ಸೇವೆಯನ್ನು ಆನಂದದಿಂದ ಮಾಡುತ್ತಾ, ಅದೇ ಸಮಯದಲ್ಲಿ ಲೋಕದಲ್ಲಿ ಸಿಗುವುದೆಲ್ಲವನ್ನೂ ಬಾಚಿಕೊಳ್ಳಲು ಸಾಧ್ಯವಿಲ್ಲ.
ಯೆಹೋವನ ಸೇವೆಯಲ್ಲಿ ಆನಂದಿಸಿ
ಯೆಹೋವನನ್ನು ಪ್ರೀತಿಸುವವರಿಗೆ ಆತನ ಸೇವೆಮಾಡುವುದು ದೊಡ್ಡ ಭಾರವಲ್ಲ. (1 ಯೋಹಾ. 5:3) ಯೇಸು ಇದನ್ನೇ ಹೇಳಿದನು: “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.” (ಮತ್ತಾ. 11:28-30) ಯೇಸುವಿನ ಶಿಷ್ಯರಾಗಿರುವುದು ನಮಗೆ ತುಂಬ ಚೈತನ್ಯ ಹಾಗೂ ಆನಂದ ತರುತ್ತದೆ. ಯೆಹೋವನ ಸೇವೆಯನ್ನು ಆನಂದದಿಂದ ಮಾಡಲು ಇರುವ ಕಾರಣಗಳಲ್ಲಿ ಮೂರನ್ನು ಈಗ ನೋಡೋಣ.—ಹಬ. 3:18.
ನಮ್ಮ ಜೀವದಾತನಾದ, ಸಂತೋಷವುಳ್ಳ ದೇವರ ಸೇವೆಮಾಡುತ್ತಿದ್ದೇವೆ. (ಅ. ಕಾ. 17:28; 1 ತಿಮೊ. 1:11) ಯೆಹೋವನು ನಮಗೆ ಜೀವಕೊಟ್ಟಿರುವುದರಿಂದ ನಾವು ಆತನಿಗೆ ಋಣಿಗಳು. ಹಾಗಾಗಿ ದೀಕ್ಷಾಸ್ನಾನವಾಗಿ ಎಷ್ಟೇ ವರ್ಷಗಳಾಗಿದ್ದರೂ ಆತನ ಸೇವೆಯನ್ನು ಆನಂದದಿಂದ ಮಾಡುತ್ತಿರೋಣ.
ಹೆಕ್ಟರ್ ಎಂಬವರ ಉದಾಹರಣೆ ತಕ್ಕೊಳ್ಳಿ. 40 ವರ್ಷ ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಿದ್ದರು. ಈಗ “ಮುಪ್ಪಿನಲ್ಲಿಯೂ” ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡುತ್ತಿದ್ದಾರೆ. (ಕೀರ್ತ. 92:12-14) ಹೆಂಡತಿಯ ಕಾಯಿಲೆಯಿಂದಾಗಿ ಹೆಕ್ಟರ್ಗೆ ದೇವರ ಸೇವೆಯಲ್ಲಿ ಹೆಚ್ಚನ್ನು ಮಾಡಲು ಆಗದಿದ್ದರೂ ಅವರು ಆನಂದ ಕಳೆದುಕೊಂಡಿಲ್ಲ. ಅವರನ್ನುವುದು: “ನನ್ನ ಹೆಂಡತಿಯ ಆರೋಗ್ಯ ನಿಧಾನವಾಗಿ ಹದಗೆಡುತ್ತಿರುವುದನ್ನು ನೋಡುವಾಗ ತುಂಬ ದುಃಖವಾಗ್ತದೆ. ಅವಳ ಆರೈಕೆ ಮಾಡುವುದು ಸಹ ಸುಲಭವಲ್ಲ. ಆದರೂ ಇದು ದೇವರ ಸೇವೆಯಲ್ಲಿ ನನ್ನ ಆನಂದವನ್ನು ಕಡಿಮೆಮಾಡಿಲ್ಲ. ಮನುಷ್ಯರನ್ನು ಒಂದು ಉದ್ದೇಶಕ್ಕಾಗಿ ಸೃಷ್ಟಿಸಿದ ಯೆಹೋವನಿಂದಲೇ ನಾನು ಜೀವಿಸುತ್ತಿರುವುದರಿಂದ ನಾನು ಆತನಿಗೆ ಋಣಿ. ಆತನನ್ನು ಗಾಢವಾಗಿ ಪ್ರೀತಿಸಲು, ಮನಃಪೂರ್ವಕವಾಗಿ ಆತನ ಸೇವೆಮಾಡಲು ನನಗೆ ಇನ್ನೇನು ಕಾರಣ ಬೇಕು? ಸಾರುವ ಕೆಲಸವನ್ನು ಮಾಡ್ತಾ ಇರಲು ಪ್ರಯತ್ನಿಸ್ತೇನೆ. ರಾಜ್ಯದ ನಿರೀಕ್ಷೆಯನ್ನು ಯಾವಾಗಲೂ ಮನಸ್ಸಲ್ಲಿ ಇಟ್ಟುಕೊಳ್ತೇನೆ. ಇದು ಆನಂದ ಕಳಕೊಳ್ಳದಂತೆ ಸಹಾಯಮಾಡ್ತದೆ.”
ಯೆಹೋವನು ನಮಗೆ ವಿಮೋಚನಾ ಮೌಲ್ಯ ಕೊಟ್ಟಿರುವುದರಿಂದ ನಾವು ಆನಂದದಿಂದ ಜೀವಿಸಲು ಸಾಧ್ಯ. “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾ. 3:16) ದೇವರು ಪ್ರೀತಿಯಿಂದ ವಿಮೋಚನಾ ಮೌಲ್ಯ ಒದಗಿಸಿದ್ದಾನೆ. ಇದರ ಮೇಲೆ ನಂಬಿಕೆಯಿಟ್ಟರೆ ನಮಗೆ ನಿತ್ಯಜೀವ ಮತ್ತು ಪಾಪಗಳಿಗೆ ಕ್ಷಮೆ ಎರಡೂ ಸಿಗುತ್ತದೆ. ನಾವು ಕೃತಜ್ಞತೆ ತೋರಿಸಲು ಇದು ಅತ್ಯುತ್ತಮ ಕಾರಣ! ವಿಮೋಚನಾ ಮೌಲ್ಯಕ್ಕಾಗಿ ನಮಗಿರುವ ಕೃತಜ್ಞತೆ ಯೆಹೋವನ ಸೇವೆಯನ್ನು ಆನಂದದಿಂದ ಮಾಡಲು ಕಾರಣ ಕೊಡುತ್ತದೆ.
ಮೆಕ್ಸಿಕೊ ದೇಶದಲ್ಲಿದ್ದ ಸಹೋದರ ಕೀಸಸ್ ಹೇಳಿದ್ದು: “ನಾನು ಕೆಲಸಕ್ಕೆ ದಾಸನಾಗಿ ಬಿಟ್ಟಿದ್ದೆ. ಒಂದರ ನಂತರ ಒಂದರಂತೆ ಐದು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದೆ. ಹೀಗೆ ಮಾಡಬೇಕೆಂದು ಕಂಪೆನಿಯ ನಿಯಮ ಇರದಿದ್ದರೂ ಜಾಸ್ತಿ ಹಣ ಸಂಪಾದಿಸಲು ಹಾಗೆ ಮಾಡ್ದೆ. ನಂತರ ನನಗೆ ಯೆಹೋವನ ಬಗ್ಗೆ, ಆತನು ತನ್ನ ಪ್ರಿಯ ಮಗನನ್ನು ಎಲ್ಲ ಮಾನವರಿಗಾಗಿ ಕೊಟ್ಟದ್ದರ ಬಗ್ಗೆ ಕಲಿಯುವ ಅವಕಾಶ ಸಿಕ್ಕಿತು. ಆತನ ಸೇವೆ ಮಾಡಲೇಬೇಕೆಂಬ ಆಸೆ ನನ್ನಲ್ಲಿ ಹುಟ್ಟಿತು. ಹಾಗಾಗಿ ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಿಕೊಂಡೆ. ಆ ಕಂಪೆನಿಯಲ್ಲಿ 28 ವರ್ಷ ಕೆಲಸ ಮಾಡಿದ್ದೆನಾದರೂ ಅದನ್ನು ಬಿಟ್ಟು ಪೂರ್ಣ ಸಮಯದ ಸೇವೆ ಆರಂಭಿಸಿದೆ.” ಕೀಸಸ್ ಯೆಹೋವನ ಸೇವೆಯನ್ನು ಆನಂದದಿಂದ ಮಾಡಲು ಆರಂಭಿಸಿದ್ದು ಹೀಗೆ.
ನೈತಿಕವಾಗಿ ಶುದ್ಧವಾದ ಜೀವನ ಆನಂದ ಕೊಡುತ್ತದೆ. ಸತ್ಯಕ್ಕೆ ಬರುವ ಮುಂಚೆ ನಿಮ್ಮ ಜೀವನ ಹೇಗಿತ್ತೆಂದು ನೆನಪಿದೆಯಾ? ಅಪೊಸ್ತಲ ಪೌಲ ತಿಳಿಸಿದಂತೆ ರೋಮ್ನಲ್ಲಿದ್ದ ಕ್ರೈಸ್ತರು ಸತ್ಯ ಕಲಿಯುವ ಮುಂಚೆ ‘ಪಾಪಕ್ಕೆ ದಾಸರಾಗಿದ್ದರು,’ ನಂತರ ‘ನೀತಿಗೆ ದಾಸರಾದರು.’ ತಮ್ಮ ಜೀವನರೀತಿಯನ್ನು ಶುದ್ಧಮಾಡಿಕೊಂಡರು. ಹಾಗಾಗಿ ನಿತ್ಯಜೀವಕ್ಕಾಗಿ ಅವರು ಎದುರುನೋಡಬಹುದಿತ್ತು. (ರೋಮ. 6:17-22) ನಾವು ಸಹ ಯೆಹೋವನ ಮಟ್ಟಗಳನ್ನು ಪಾಲಿಸುತ್ತೇವೆ. ಹಾಗಾಗಿ ಅನೈತಿಕ ಇಲ್ಲವೇ ಹಿಂಸಾತ್ಮಕ ಜೀವನರೀತಿಯಿಂದ ಬರುವ ದುಃಖ ನಮಗಿಲ್ಲ. ಇದು ನಿಜಕ್ಕೂ ನಮಗೆ ಆನಂದಪಡಲು ಕಾರಣವಲ್ಲವೇ?
ಕೇಯಿಮಿ ಎಂಬ ಸಹೋದರನ ಉದಾಹರಣೆ ತಕ್ಕೊಳ್ಳಿ. ಅವರು ಹಿಂದೆ ನಾಸ್ತಿಕರಾಗಿದ್ದರು. ಜೀವವಿಕಾಸವನ್ನು ನಂಬುತ್ತಿದ್ದರು. ಬಾಕ್ಸರ್ ಆಗಿದ್ದರು. ಇವರು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದಾಗ ಅಲ್ಲಿದ್ದವರ ಪ್ರೀತಿ ನೋಡಿ ಬೆರಗಾದರು. ಆದರೆ ತಮ್ಮ ಹಿಂದಿನ ಜೀವನಶೈಲಿಯನ್ನು ಬಿಟ್ಟುಬಿಡಲಿಕ್ಕಾಗಿ ಯೆಹೋವನು ಇದ್ದಾನೆಂದು ನಂಬುವುದು ಅವರಿಗೆ ತುಂಬ ಅಗತ್ಯವಾಗಿತ್ತು. ಹೀಗೆ ನಂಬಲು ಸಹಾಯಕ್ಕಾಗಿ ಯೆಹೋವನಲ್ಲಿ ಬೇಡಿಕೊಂಡರು. “ಪ್ರೀತಿಯುಳ್ಳ ತಂದೆಯಾಗಿದ್ದು, ಕರುಣೆ ತೋರಿಸುವ ದೇವರೊಬ್ಬನು ಇದ್ದಾನೆಂದು ನಾನು ಸ್ವಲ್ಪಸ್ವಲ್ಪವಾಗಿ ಅರಿತುಕೊಂಡೆ. ಯೆಹೋವನ ನೀತಿಯ ಮಟ್ಟಗಳನ್ನು ಪಾಲಿಸುವುದು ನನಗೊಂದು ಸಂರಕ್ಷಣೆಯಾಗಿದೆ. ನಾನು ಬದಲಾಗದೆ ಇದ್ದಿದ್ದರೆ ನನ್ನ ಹಿಂದಿನ ಬಾಕ್ಸಿಂಗ್ ಗೆಳೆಯರಂತೆ ಇಷ್ಟರಲ್ಲಿ ಸತ್ತುಹೋಗಿರುತ್ತಿದ್ದೆ. ನನ್ನ ಜೀವನದಲ್ಲಿ ತುಂಬ ಸಂತೋಷ ತಂದಿರುವ ವರ್ಷಗಳು ನಾನು ಯೆಹೋವನ ಸೇವೆಯಲ್ಲಿ ಕಳೆದಿರುವ ವರ್ಷಗಳೇ ಆಗಿವೆ” ಎನ್ನುತ್ತಾರೆ ಕೇಯಿಮಿ.
ನಿಮ್ಮ ಸೇವೆಯನ್ನು ನಿಲ್ಲಿಸಬೇಡಿ!
ಈ ದುಷ್ಟ ಲೋಕದ ಅಂತ್ಯಕ್ಕಾಗಿ ಕಾಯುತ್ತಿರುವಾಗ ನಮ್ಮಲ್ಲಿ ಯಾವ ಮನೋಭಾವ ಇರಬೇಕು? ನಾವು ದೇವರ ಚಿತ್ತ ಮಾಡುತ್ತಿದ್ದೇವೆ, ನಿತ್ಯಜೀವಕ್ಕಾಗಿ ಎದುರುನೋಡುತ್ತಿದ್ದೇವೆ ಎನ್ನುವುದನ್ನು ಮನಸ್ಸಿನಲ್ಲಿಡಿ. “ಆದುದರಿಂದ ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ; ನಾವು ದಣಿಯದಿದ್ದರೆ ತಕ್ಕ ಸಮಯದಲ್ಲಿ ಫಲವನ್ನು ಕೊಯ್ಯುವೆವು.” (ಗಲಾ. 6:8, 9) ಯೆಹೋವನು ಕೊಡುವ ಸಹಾಯದಿಂದ ತಾಳಿಕೊಳ್ಳೋಣ. “ಮಹಾಸಂಕಟ”ವನ್ನು ಪಾರಾಗಲಿಕ್ಕೆ ಅಗತ್ಯವಿರುವ ಗುಣಗಳನ್ನು ಬೆಳೆಸಿಕೊಳ್ಳಲು ಶ್ರಮಿಸೋಣ. ಯೆಹೋವನ ಸೇವೆಯನ್ನು ಆನಂದದಿಂದ ಮುಂದುವರಿಸೋಣ.—ಪ್ರಕ. 7:9, 13, 14; ಯಾಕೋ. 1:2-4.
ನಾವು ತಾಳಿಕೊಂಡರೆ ಯೆಹೋವನು ಖಂಡಿತ ಪ್ರತಿಫಲ ಕೊಡುವನು. ಏಕೆಂದರೆ ಆತನಿಗಾಗಿ ನಾವು ಮಾಡುವ ಸೇವೆ, ಆತನಿಗಾಗಿ ಆತನ ಹೆಸರಿಗಾಗಿ ತೋರಿಸುವ ಪ್ರೀತಿ ಯೆಹೋವನಿಗೆ ಗೊತ್ತು. ನಾವು ಆನಂದದಿಂದ ಸೇವೆಮಾಡುತ್ತಾ ಇದ್ದರೆ ಕೀರ್ತನೆಗಾರ ದಾವೀದನಂತೆ ಇರುತ್ತೇವೆ. ಆತನಂದದ್ದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ. ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವದು.”—ಕೀರ್ತ. 16:8, 9.