ಕ್ಷೇತ್ರ ಸೇವೆಗಾಗಿರುವ ಕೂಟಗಳಿಂದ ಪೂರ್ಣ ಪ್ರಯೋಜನ ಪಡೆಯಿರಿ
1. ಕ್ಷೇತ್ರ ಸೇವೆಗಾಗಿರುವ ಕೂಟಗಳು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?
1 ಕ್ಷೇತ್ರ ಸೇವೆಗಾಗಿರುವ ಪರಿಣಾಮಕಾರಿಯಾದ ಕೂಟಗಳು, ನಾವು ಶುಶ್ರೂಷೆಗೆ ಹೋಗುವ ಮೊದಲು ಬೇಕಾದ ಪ್ರೋತ್ಸಾಹವನ್ನು ಮತ್ತು ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸುತ್ತವೆ. ಈ ಕೂಟಗಳು ಗುಂಪುಸಾಕ್ಷಿ ಕಾರ್ಯದಲ್ಲಿ ಭಾಗವಹಿಸುವಂತೆ ನಮ್ಮನ್ನು ಉತ್ತೇಜಿಸುತ್ತವೆ ಮತ್ತು ಹೀಗೆ ನಾವು ಇತರರೊಂದಿಗೆ ಸೇವೆ ಮಾಡುವ ಮೂಲಕ ಪರಸ್ಪರ ಬೆಂಬಲ ಹಾಗೂ ತರಬೇತಿಯನ್ನು ಪಡೆಯಸಾಧ್ಯವಿದೆ. (ಜ್ಞಾನೋ. 27:17; ಪ್ರಸಂ. 4:9, 10) ಈ ಕೂಟಗಳಿಂದ ಪೂರ್ಣ ಪ್ರಯೋಜನ ಪಡೆಯಲು ನಾವೇನು ಮಾಡಸಾಧ್ಯವಿದೆ?
2. ನಿರ್ವಾಹಕನು ಪರಿಗಣಿಸಬಹುದಾದ ಕೆಲವೊಂದು ವಿಷಯಗಳು ಯಾವುವು?
2 ನಿರ್ವಾಹಕ: ಸಾಮಾನ್ಯವಾಗಿ, ಈ ಕೂಟದಲ್ಲಿ ಪರಿಗಣಿಸಲು ನಿರ್ದಿಷ್ಟ ಮಾಹಿತಿಯ ಒಂದು ಹೊರಮೇರೆಯಿರುವುದಿಲ್ಲ. ಆದುದರಿಂದ ನೀವು ನಿರ್ವಾಹಕರಾಗಿರುವಲ್ಲಿ ಒಳ್ಳೆಯ ತಯಾರಿ ಅವಶ್ಯ. ಶುಶ್ರೂಷೆಗೆ ನೇರವಾಗಿ ಸಂಬಂಧಿಸುವಂಥ ದಿನವಚನವನ್ನು ಚರ್ಚೆಯಲ್ಲಿ ಒಳಗೂಡಿಸಲು ನೀವು ಆಯ್ಕೆಮಾಡಬಹುದು. ಆದರೆ, ಅದನ್ನು ವಾಡಿಕೆಯಾಗಿ ಪರಿಗಣಿಸಲು ಯೋಜಿಸಬೇಡಿರಿ. ಆ ದಿನ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವವರಿಗೆ ಪ್ರಾಯೋಗಿಕ ಸಹಾಯವನ್ನು ನೀಡುವುದರ ಕುರಿತು ಆಲೋಚಿಸಿರಿ. ಉದಾಹರಣೆಗೆ, ನೀವು ಒಂದು ನಿರೂಪಣೆಯನ್ನು ಚರ್ಚಿಸಬಹುದು ಅಥವಾ ಪ್ರತ್ಯಕ್ಷಾಭಿನಯವನ್ನು ಏರ್ಪಡಿಸಬಹುದು. ತರ್ಕಿಸು (ಇಂಗ್ಲಿಷ್) ಪುಸ್ತಕ ಇಲ್ಲವೆ ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆ, ಶುಶ್ರೂಷಾ ಶಾಲೆ ಪುಸ್ತಕ ಅಥವಾ ಇತ್ತೀಚಿನ ಸೇವಾ ಕೂಟದ ಭಾಗದಿಂದ ನೀವು ಕೆಲವು ವಿಷಯಗಳನ್ನು ಪುನರ್ವಿಮರ್ಶಿಸಬಹುದು. ಇನ್ನೂ ಕೆಲವು ಸಮಯಗಳಲ್ಲಿ, ಟೆರಿಟೊರಿಯಲ್ಲಿ ಎದುರಾಗುವ ಪಂಥಾಹ್ವಾನಗಳನ್ನು ನಿಭಾಯಿಸುವುದು ಹೇಗೆಂಬುದನ್ನು ಚರ್ಚಿಸಬಹುದು. ಇಲ್ಲವೆ ಆಸಕ್ತಿಯನ್ನು ಬೆಳೆಸುವುದು ಹೇಗೆ ಮತ್ತು ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಹೇಗೆ ಎಂಬುದರ ಕುರಿತು ಕೂಡ ಚರ್ಚಿಸಸಾಧ್ಯವಿದೆ. ಇದು ವಿಶೇಷವಾಗಿ ಅನೇಕ ಪ್ರಚಾರಕರು ಪುನರ್ಭೇಟಿಗಳನ್ನು ಮಾಡುತ್ತಿರುವುದಾದರೆ ಸೂಕ್ತವಾಗಿರುವುದು. ನೀವು ಯಾವುದೇ ವಿಷಯವನ್ನು ಪರಿಗಣಿಸುವುದಾದರೂ ಉತ್ಸುಕರು ಮತ್ತು ಸಕಾರಾತ್ಮಕ ಮನೋಭಾವದವರು ಆಗಿರ್ರಿ.
3. ಕೂಟವು ಎಷ್ಟು ಉದ್ದವಾಗಿರಬೇಕು, ಮತ್ತು ಆ ಅವಧಿಯಲ್ಲಿ ಏನನ್ನು ಸ್ಪಷ್ಟಪಡಿಸಿರಬೇಕು?
3 ಕೆಲವರು ತಡವಾಗಿ ಬರುವುದಾದರೂ ಕೂಟವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿರಿ. ಗುಂಪನ್ನು ಸಂಘಟಿಸುವಾಗ ವಿವೇಚನೆಯುಳ್ಳವರಾಗಿರಿ ಮತ್ತು ಅಗತ್ಯವಿರುವವರಿಗೆ ಟೆರಿಟೊರಿಯನ್ನು ಒದಗಿಸಿರಿ. ಕ್ಷೇತ್ರ ಸೇವೆಗಾಗಿರುವ ಕೂಟವು 10 ರಿಂದ 15 ನಿಮಿಷಗಳನ್ನು ಮೀರಬಾರದು ಮತ್ತು ಅದರ ನಂತರ ಸಭಾ ಕೂಟ ಆರಂಭವಾಗುವುದಾದರೆ ಸಮಯವನ್ನು ಇನ್ನೂ ಕಡಿಮೆಗೊಳಿಸಿರಿ. ನೀವು ಕೂಟವನ್ನು ಕೊನೆಗೊಳಿಸುವುದಕ್ಕೆ ಮುಂಚೆಯೇ, ತಾವು ಯಾರೊಂದಿಗೆ ಮತ್ತು ಎಲ್ಲಿ ಕೆಲಸಮಾಡುತ್ತೇವೆಂಬುದು ಎಲ್ಲರಿಗೆ ತಿಳಿದಿರಬೇಕು. ಕೂಟವು ಪ್ರಾರ್ಥನೆಯೊಂದಿಗೆ ಮುಕ್ತಾಯವಾಗಬೇಕು.
4. ಕ್ಷೇತ್ರ ಸೇವೆಗಾಗಿರುವ ಕೂಟಗಳಿಂದ ಪೂರ್ಣ ಪ್ರಯೋಜನ ಪಡೆಯಲು ನಮ್ಮೆಲ್ಲರಿಗೂ ಯಾವುದು ಸಹಾಯಮಾಡುವುದು?
4 ನಿಮ್ಮ ನೆರವು: ಸಭಾ ಕೂಟಗಳಿಗೆ ಬರುವಂತೆ ಈ ಕೂಟಕ್ಕೂ ಸಮಯಕ್ಕೆ ಸರಿಯಾಗಿ ಬರುವ ಮೂಲಕ ನಾವೆಲ್ಲರೂ ಯೆಹೋವನಿಗೆ ಗೌರವವನ್ನು ಮತ್ತು ಇತರರಿಗೆ ಪರಿಗಣನೆಯನ್ನು ತೋರಿಸುತ್ತೇವೆ. ಕೂಟದಲ್ಲಿ ನಡೆಸಲ್ಪಡುವ ಚರ್ಚೆಯಲ್ಲಿ ಭಾಗವಹಿಸಿರಿ. ಇತರರೊಂದಿಗೆ ಕೆಲಸಮಾಡುವಂತೆ ನಿಮ್ಮನ್ನು ನಿರ್ವಾಹಕನು ನೇಮಿಸಬಹುದು ಇಲ್ಲವೆ ಕೂಟಕ್ಕೆ ಮುಂಚಿತವಾಗಿಯೇ ನೀವು ಸ್ವಂತ ಏರ್ಪಾಡುಗಳನ್ನು ಮಾಡಿಕೊಳ್ಳಬಹುದು. ಹಾಗೆ ಸ್ವತಃ ನೀವೇ ಏರ್ಪಾಡುಗಳನ್ನು ಮಾಡಿಕೊಳ್ಳಲು ಬಯಸುವುದಾದರೆ, ಪ್ರತಿಸಲ ನಿಮ್ಮ ಆಪ್ತಮಿತ್ರರೊಂದಿಗೆ ಕೆಲಸಮಾಡುವ ಬದಲು ಬೇರೆ ಬೇರೆ ಪ್ರಚಾರಕರೊಂದಿಗೂ ಕೆಲಸಮಾಡುವ ಮೂಲಕ ನಿಮ್ಮ ‘ಹೃದಯವನ್ನು ವಿಶಾಲಮಾಡಿಕೊಳ್ಳಿರಿ.’ (2 ಕೊರಿಂ. 6:11-13) ಒಮ್ಮೆ ಕೂಟವು ಮುಕ್ತಾಯಗೊಂಡ ಮೇಲೆ ಏರ್ಪಾಡನ್ನು ಬದಲಾಯಿಸಬೇಡಿರಿ ಮತ್ತು ತಕ್ಷಣವೇ ಟೆರಿಟೊರಿಗೆ ಹೋಗಿರಿ.
5. ಕ್ಷೇತ್ರ ಸೇವೆಗಾಗಿರುವ ಕೂಟಗಳ ಉದ್ದೇಶ ಏನಾಗಿದೆ?
5 ಕ್ಷೇತ್ರ ಸೇವೆಗಾಗಿರುವ ಕೂಟಗಳ ಉದ್ದೇಶವೂ ಇತರ ಸಭಾ ಕೂಟಗಳ ಉದ್ದೇಶವೂ ಒಂದೇ ಆಗಿದೆ. ‘ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸಬೇಕೆಂದೇ’ ಇವನ್ನು ಏರ್ಪಡಿಸಲಾಗಿದೆ. (ಇಬ್ರಿ. 10:24, 25) ಈ ಕೂಟಗಳಿಂದ ಪ್ರಯೋಜನ ಪಡೆಯಲು ನಾವು ಶ್ರಮಿಸುವಲ್ಲಿ ಇವು ‘ಸತ್ಕಾರ್ಯವಾಗಿರುವ’ ನಮ್ಮ ಶುಶ್ರೂಷೆಯನ್ನು ನಿರ್ವಹಿಸಲು ಸಹಾಯಕಾರಿಯಾಗಿರುವುದು.