ಗೃಹ ಜೀವನದ ಹಿಂಸಾಚಾರಕ್ಕೆ ಅಂತ್ಯ
“ಮನೆಯಲ್ಲಿ ಹಿಂಸಾಚಾರದ ನಿವಾರಣೆ ಮತ್ತು ಕುಟುಂಬ ಹಿಂಸಾಚಾರದ ಇಳಿತದಲ್ಲಿ ಸಮಾಜ ಮತ್ತು ಕುಟುಂಬದ ದೊಡ್ಡ ರಚನಾ ಬದಲಾವಣೆಗಳು ಒಳಗೊಂಡಿವೆ.”—ಬಿಹೈಂಡ್ ಕ್ಲೋಸ್ಡ್ ಡೋರ್ಸ್.
ಮಾನವ ಇತಿಹಾಸದ ಪ್ರಪ್ರಥಮ ಕೊಲೆ ಸೋದರರನ್ನೊಳಗೊಂಡಿತ್ತು. (ಆದಿಕಾಂಡ 4:8) ಅಂದಿನಿಂದ ಹಿಡಿದು ಸಹಸ್ರಾರು ವರ್ಷಗಳಲ್ಲಿ, ಮನುಷ್ಯನು ಸಕಲ ವಿಧಗಳ ಗೃಹ ಜೀವನದ ಹಿಂಸಾಚಾರಗಳಿಂದ ಪೀಡಿಸಲ್ಪಟ್ಟಿದ್ದಾನೆ. ಅನೇಕಾನೇಕ ಪರಿಹಾರ ಮಾರ್ಗಗಳು ಪ್ರಸ್ತಾಪಿಸಲ್ಪಟ್ಟಿವೆಯಾದರೂ ಅವುಗಳಲ್ಲಿ ಅನೇಕ ಪ್ರಸ್ತಾಪಗಳು ಕೊರತೆಯುಳ್ಳವುಗಳಾಗಿವೆ.
ಉದಾಹರಣೆಗೆ, ಮರುನಿಯೋಜನೆ ತಮ್ಮ ಸಮಸ್ಯೆಗಳನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ದೊರೆಯುತ್ತದೆ. ವಾಸಿಯಾಗುತ್ತಿರುವ ಒಬ್ಬ ಪತ್ನಿ ಅಪಪ್ರಯೋಗಿಯು ಪ್ರಲಾಪಿಸಿದ್ದು: “[ವಾಸಿಯಾಗುತ್ತಿರುವ] ನಮ್ಮಲ್ಲಿ ಪ್ರತಿಯೊಬ್ಬರಿಗೆ ಮೂರರಂತೆ, ‘ಹೆಂಡತಿಯನ್ನು ನೀನು ಹತೋಟಿಯಲ್ಲಿಟ್ಟುಕೊಳ್ಳಲೇ ಬೇಕು’ ಎಂದು ಹೇಳುವ ಪುರುಷರು ಹೊರಗಿದ್ದಾರೆ.” ಹೀಗೆ ಅಪಪ್ರಯೋಗಿಯು ತನ್ನ ಸ್ವಂತ ಪರಿಸ್ಥಿತಿಯನ್ನು ನಿಭಾಯಿಸಲು ಕಲಿಯಬೇಕು. ಅವನು ಅಪಪ್ರಯೋಗಿಯಾಗಿ ಬೆಳೆದದೇಕ್ದೆ? ತನ್ನ ಸ್ವಂತ ತಪ್ಪುಗಳನ್ನು ಸರಿಪಡಿಸಲು ಸಹಾಯವನ್ನು ಪಡೆಯುವ ಮೂಲಕ, ಅವನು ಗುಣ ಹೊಂದುವ ಮಾರ್ಗದಲ್ಲಿ ನಡೆಸಲ್ಪಡಬಹುದು.
ಆದರೆ ಸಾಮಾಜಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಸಿಬ್ಬಂದಿಗಳಿಲ್ಲ. ಹೀಗೆ, ಅಮೆರಿಕದ ಶಿಶುಹತ್ಯೆಯ 90 ಪ್ರತಿಶತ ಮೊಕದ್ದಮೆಗಳಲ್ಲಿ ಅಪಾಯಕರ ಕುಟುಂಬ ಪರಿಸ್ಥಿತಿಗಳು ಹತ್ಯೆಗೆ ಮೊದಲೇ ವರದಿಯಾಗಿದ್ದವು ಎಂದು ಅಂದಾಜು ಮಾಡಲಾಗುತ್ತದೆ. ಹೀಗೆ, ಸಮಾಜ ಯೋಜನೆಗಳು ಮತ್ತು ಪೊಲೀಸ್ ಸಂಘಗಳು ಏನು ಮಾಡಬಲ್ಲವೋ ಅವುಗಳಿಗೆ ಮಿತಿಯಿದೆ. ಪ್ರಧಾನವಾದ ಇನ್ನಾವುದೋ ಬೇಕಾಗಿದೆ.
“ನೂತನ ವ್ಯಕ್ತಿತ್ವ”
“ಬೇಕಾಗಿರುವುದು ಕುಟುಂಬ ಸದಸ್ಯರುಗಳ ಮಧ್ಯೆ ಇರುವ ಸಂಬಂಧಗಳ ಪುನರ್ರಚನೆಯೇ,” ಎನ್ನುತ್ತದೆ ಒಂದು ಸಂಶೋಧಕ ತಂಡ. ಗೃಹ ಜೀವನದ ಹಿಂಸಾಚಾರ ಮುಷ್ಟಿಗಳ ಸಮಸ್ಯೆ ಮಾತ್ರವಲ್ಲ; ಅದು ಪ್ರಧಾನವಾಗಿ ಮನಸ್ಸಿನ ಸಮಸ್ಯೆ. ಅದರ ಬೀಜಗಳು, ಕುಟುಂಬದ ಸದಸ್ಯರು—ವಿವಾಹದ ಜೊತೆ, ಮಗು, ಹೆತ್ತವರು, ಸೋದರ, ಸೋದರಿ—ಒಬ್ಬರನ್ನೊಬ್ಬರು ಹೇಗೆ ವೀಕ್ಷಿಸುತ್ತಾರೆಂಬುದರಲ್ಲಿ ಬಿತ್ತಲ್ಪಡುತ್ತವೆ. ಈ ಸಂಬಂಧಗಳನ್ನು ಪುನರ್ರಚಿಸುವುದೆಂದರೆ, ಬೈಬಲು ಯಾವುದನ್ನು “ನೂತನ ವ್ಯಕ್ತಿತ್ವ”ವೆಂದು ಕರೆಯುತ್ತದೋ ಅದನ್ನು ಧರಿಸುವುದೆಂದರ್ಥ.—ಎಫೆಸ 4:22-24: ಕೊಲೊಸ್ಸೆ 3:8-10, NW.
ನಾವು, ಯಾವುದು ಕುಟುಂಬ ಸದಸ್ಯರ ಮಧ್ಯೆ ಹೆಚ್ಚು ಉತ್ತಮವಾದ ಸಂಬಂಧವನ್ನು ಬೆಳೆಸಬಲ್ಲದೋ ಅಂತಹ ಹೊಸ ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಧರಿಸಲು ಸಹಾಯ ಮಾಡುವ ಕೆಲವು ಕುಟುಂಬ ಸಂಬಂಧಿತ ಬೈಬಲ್ ಮೂಲಸೂತ್ರಗಳನ್ನು ಪರೀಕ್ಷಿಸೋಣ.—ಮತ್ತಾಯ 11:28-30 ನೋಡಿ.
ಮಕ್ಕಳ ವೀಕ್ಷಣ: ಹೆತ್ತವರಾಗುವುದರಲ್ಲಿ ಒಂದು ಮಗುವನ್ನು ಉತ್ಪಾದಿಸುವುದಕ್ಕಿಂತ ಹೆಚ್ಚಿನದು ಸೇರಿದೆ. ದುಃಖಕರ ವಿಷಯವೇನಂದರೆ, ಇಂದು ಅನೇಕರು ತಮ್ಮ ಮಕ್ಕಳನ್ನು ಒಂದು ಹೊರೆಯಾಗಿ ವೀಕ್ಷಿಸುವುದರಿಂದ ತಮ್ಮ ಹೆತ್ತವರ ಪಾತ್ರಕ್ಕೆ ಬದ್ಧತೆಯ ಕೊರತೆಯುಳ್ಳವರಾಗಿದ್ದಾರೆ. ಇವರು ಅಪಪ್ರಯೋಗದ ಸಾಮರ್ಥ್ಯವುಳ್ಳವರು.
ಬೈಬಲು ಮಕ್ಕಳನ್ನು “ಯೆಹೋವನಿಂದ ಬಂದ ಸ್ವಾಸ್ತ್ಯವು” ಎಂದು ಕರೆಯುತ್ತದೆ. (ಕೀರ್ತನೆ 127:3) ಈ ಸ್ವಾಸ್ತ್ಯವನ್ನು ಪರಾಮರಿಸಲು ಹೆತ್ತವರು ಸೃಷ್ಟಿಕರ್ತನಿಗೆ ಉತ್ತರವಾದಿಗಳು. ಮಕ್ಕಳನ್ನು ಹೊರೆಯೆಂದು ವೀಕ್ಷಿಸುವವರು, ಈ ವಿಷಯದಲ್ಲಿ ನೂತನ ವ್ಯಕ್ತಿತ್ವವನ್ನು ಬೆಳೆಸುವುದು ಅಗತ್ಯ.a
ಮಕ್ಕಳ ಕಾರ್ಯಸಾಧ್ಯ ನಿರೀಕ್ಷಣೆಗಳು: ಅನೇಕ ಅಪಪ್ರಯೋಗಿಗಳಾದ ತಾಯಂದಿರು, ಒಂದು ವರ್ಷ ಪ್ರಾಯದಿಂದ ಮಗು ತಪ್ಪು ಯಾವುದು ಸರಿ ಯಾವುದೆಂದು ತಿಳಿದಿರಬೇಕೆಂದು ಅಪೇಕ್ಷಿಸುತ್ತಾರೆಂದು ಒಂದು ಅಧ್ಯಯನ ತೋರಿಸಿತು. ಇವರಲ್ಲಿ ಮೂರರಲ್ಲಿ ಒಂದಂಶ ಆರು ತಿಂಗಳನ್ನು ನಮೂದಿಸಿದರು.
ಸಕಲರೂ ಅಪೂರ್ಣರಾಗಿ ಜನಿಸಿದ್ದಾರೆಂದು ಬೈಬಲು ತೋರಿಸುತ್ತದೆ. (ಕೀರ್ತನೆ 51:5; ರೋಮಾಪುರ 5:12) ವಿವೇಚನೆ ಜನನದಲ್ಲಿ ಬರುತ್ತದೆಂದು ಅದು ವಾದಿಸುವುದಿಲ್ಲ. ಬದಲಿಗೆ, “ಉಪಯೋಗದ ಮೂಲಕ” ಒಬ್ಬನ ಗ್ರಹಿಸುವ ಶಕ್ತಿಗಳು “ತಪ್ಪಿನಿಂದ ಒಪ್ಪನ್ನು ವಿಂಗಡಿಸಲು ತರಬೇತುಗೊಳಿಸಲ್ಪಡುತ್ತದೆ” ಎಂದು ಅದು ಹೇಳುತ್ತದೆ. (ಇಬ್ರಿಯ 5:14, NW) ಇದಲ್ಲದೆ, ಬೈಬಲು “ಬಾಲಕನ ಮಾತುಗಳು,” ಶೈಶವದ “ಮೂರ್ಖತನ,” ಮತ್ತು ತರುಣಾವಸ್ಥೆಯ “ವ್ಯರ್ಥತೆ,” ಇವುಗಳ ವಿಷಯ ಮಾತಾಡುತ್ತದೆ. (1 ಕೊರಿಂಥ 13:11; ಜ್ಞಾನೋಕ್ತಿ 22:15; ಪ್ರಸಂಗಿ 11:10) ಹೆತ್ತವರು ಈ ಮಿತಿಗಳನ್ನು ತಿಳಿದುಕೊಂಡು, ಮಗುವಿನ ಪ್ರಾಯ ಮತ್ತು ಸಾಮರ್ಥ್ಯಕ್ಕೆ ಯೋಗ್ಯವಾಗಿರುವುದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬಾರದು.
ಮಕ್ಕಳಿಗೆ ಶಿಸ್ತನ್ನು ಕೊಡುವುದು: ಬೈಬಲಿನಲ್ಲಿ “ಶಿಸ್ತು” ಎಂದು ಭಾಷಾಂತರಿಸಿರುವ ಗ್ರೀಕ್ ಪದದ ಅರ್ಥ “ಶಿಕ್ಷಣ ಕೊಡು” ಎಂದಾಗಿದೆ. ಆದುದರಿಂದ ಶಿಸ್ತಿನ ಉದ್ದೇಶವು ಮುಖ್ಯವಾಗಿ, ನೋವಾಗಿಸುವುದಲ್ಲ, ತರಬೇತು ಕೊಡುವುದೇ ಆಗಿದೆ. ಇದರಲ್ಲಿ ಹೆಚ್ಚಿನದ್ದನ್ನು ಹೊಡೆಯದೇ—ಕೆಲವು ಸಲ ಇದೂ ಬೇಕಾದೀತು—ಸಾಧಿಸಸಾಧ್ಯವಿದೆ. (ಜ್ಞಾನೋಕ್ತಿ 13:24) “ಶಿಸ್ತನ್ನು ಆಲಿಸು ಮತ್ತು ವಿವೇಕಿಯಾಗು,” ಎಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 8:33, NW) ಅಲ್ಲದೆ, ಒಬ್ಬನು “ಕೇಡನ್ನು ಸಹಿಸಿಕೊಳ್ಳುವವನು,” ಮತ್ತು “ದೀರ್ಘಶಾಂತಿಯಿಂದ” ಖಂಡಿಸುವವನು ಆಗಿರಬೇಕೆಂದೂ ಪೌಲನು ಬರೆದನು. (2 ತಿಮೊಥೆಯ 2:24; 4:2) ಇದು, ಹೊಡೆತ ಅವಶ್ಯವಿರುವಾಗಲೂ ಕೋಪದ ಕೆರಳಿಕೆ ಮತ್ತು ವಿಪರೀತ ಬಲಪ್ರಯೋಗವನ್ನು ಕ್ರಮಬಾಹಿರವಾಗಿ ಮಾಡುತ್ತದೆ.
ಈ ಬೈಬಲ್ ಮೂಲಸೂತ್ರಗಳ ದೃಷ್ಟಿಯಲ್ಲಿ, ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ: ‘ನಾನು ಕೊಡುವ ಶಿಸ್ತು ಕಲಿಸುತ್ತದೊ, ಯಾ ನೋವಿನ ಕಾರಣದಿಂದ ಕೇವಲ ನಿಯಂತ್ರಿಸುತ್ತದೊ? ನನ್ನ ಶಿಸ್ತು ಯೋಗ್ಯವಾದ ಸೂತ್ರಗಳನ್ನು ಮನಸ್ಸಿನಲ್ಲಿ ತುಂಬಿಸುತ್ತದೊ ಯಾ ಕೇವಲ ಭಯವನ್ನೊ?’
ಪ್ರಾಪ್ತ ವಯಸ್ಕರ ವರ್ತನೆಗೆ ಸಂಬಂಧಿಸಿದ ಇತಿಮಿತಿಗಳು: ತಾನು ಕೇವಲ “ನಿಯಂತ್ರಣ ಕಳೆದುಕೊಂಡು” ತನ್ನ ಹೆಂಡತಿಯನ್ನು ಹೊಡೆದನೆಂದು ಒಬ್ಬ ಅಪಪ್ರಯೋಗಿ ವಾದಿಸಿದನು. ಆಗ ಒಬ್ಬ ಸಲಹೆಗಾರನು, ಅವನು ಅವನ ಹೆಂಡತಿಯನ್ನು ಎಂದಾದರೂ ಇರಿದದ್ದುಂಟೊ ಎಂದು ಕೇಳಲಾಗಿ, “ನಾನು ಹಾಗೆ ಎಂದಿಗೂ ಮಾಡೆನು” ಎಂದು ಆ ಮನುಷ್ಯನು ಉತ್ತರಿಸಿದನು. ಆಗ ಅವನು ಒಂದು ಮೇರೆಗಳ ಒಳಗೆ ಕಾರ್ಯ ನಡೆಸುತ್ತಿದ್ದನು ಎಂದು ತಿಳಿಯುವಂತೆಯೂ, ಆದರೆ ಅವು ತಕ್ಕ ಮೇರೆಗಳಲ್ಲವೆಂಬುದೇ ಸಮಸ್ಯೆಯೆಂದೂ ಆ ಮನುಷ್ಯನು ನೋಡುವಂತೆ ಅವನಿಗೆ ಸಹಾಯ ದೊರೆಯಿತು.
ನಿಮ್ಮ ಇತಿಮಿತಿಗಳು ಎಲ್ಲಿ ಇಡಲಾಗಿವೆ? ಒಂದು ಭಿನ್ನಾಭಿಪ್ರಾಯ ದೂಷಣೆಯಾಗಿ ಬೆಳೆಯುವ ಮೊದಲು ನೀವು ನಿಲ್ಲಿಸುತ್ತೀರೊ? ಅಥವಾ ನೀವು ಕೋಪದಿಂದ ಉದ್ರೇಕಗೊಂಡು, ಕಿರಿಚಾಟ ಮಾಡಿ, ಜರೆದು, ದೂಡಿ, ವಸ್ತುಗಳನ್ನು ಬಿಸಾಡಿ, ಯಾ ಹೊಡೆತದಲ್ಲಿ ಅಂತ್ಯಗೊಳ್ಳುತ್ತೀರೊ?
ಹೊಸ ವ್ಯಕ್ತಿತ್ವಕ್ಕೆ ಒಂದು ಕಟ್ಟುನಿಟ್ಟಾದ ಮಿತಿಯಿದೆ. ಅದನ್ನು ಮಾನಸಿಕ ದೂಷಣೆ ಯಾ ಶಾರೀರಿಕ ಹಿಂಸಾಚಾರದ ಎಷ್ಟೋ ಈಚೆ ಇಡಲಾಗಿದೆ. “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು,” ಎನ್ನುತ್ತದೆ ಎಫೆಸ 4:29. ವಚನ 31 ಕೂಡಿಸುವುದು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.” “ಕ್ರೋಧ” ಎಂಬುದರ ಗ್ರೀಕ್ ಪದವು “ಆವೇಗಪರ ಪ್ರವೃತ್ತಿ”ಯನ್ನು ಸೂಚಿಸುತ್ತದೆ. ರಸಕರವಾಗಿ, ಟಾಕ್ಸಿಕ್ ಪೇರೆಂಟ್ಸ್ ಎಂಬ ಪುಸ್ತಕವು, ಮಕ್ಕಳ ಅಪಪ್ರಯೋಗಿಗಳಲ್ಲಿ, “ಆವೇಗವನ್ನು ನಿಯಂತ್ರಿಸುವುದರಲ್ಲಿ ಗಾಬರಿಗೊಳಿಸುವ ಕೊರತೆಯು” ಸಾಮಾನ್ಯವಾದ ಲಕ್ಷಣವೆಂದು ಗಮನಿಸುತ್ತದೆ. ನೂತನ ವ್ಯಕ್ತಿತ್ವವು ಈ ಆವೇಗಗಳಿಗೆ ಶಾರೀರಿಕ ಮತ್ತು ಶಾಬ್ದಿಕವಾಗಿ ಸ್ಥಿರವಾದ ಮಿತಿಗಳನ್ನು ಇಡುತ್ತದೆ.
ಈ ನೂತನ ವ್ಯಕ್ತಿತ್ವವು ಗಂಡನಿಗೆ ಅನ್ವಯಿಸುವಂತೆಯೇ ಹೆಂಡತಿಗೂ ಅನ್ವಯಿಸುತ್ತದೆಂಬುದು ನಿಶ್ಚಯ. ಆಕೆ ತನ್ನ ಗಂಡನನ್ನು ಕೆರಳಿಸದಂತೆ, ಕುಟುಂಬವನ್ನು ಪರಾಮರಿಸುವ ಅವನ ಪ್ರಯತ್ನಗಳನ್ನು ಗಣ್ಯಮಾಡುವಂತೆ, ಮತ್ತು ಅವನಿಗೆ ಸಹಕಾರ ಕೊಡುವಂತೆ ಕೆಲಸ ನಡೆಸಬೇಕು. ಮತ್ತು ಇಬ್ಬರೂ ತಮಗೆ ಉತ್ಪಾದಿಸಲು ಸಾಧ್ಯವಿಲ್ಲದ ಪರಿಪೂರ್ಣತೆಯನ್ನು ಹಕ್ಕೊತ್ತಾಯದಿಂದ ಕೇಳಬಾರದು. ಬದಲಿಗೆ, ಇಬ್ಬರೂ 1 ಪೇತ್ರ 4:8ನ್ನು ಅನ್ವಯಿಸಿಕೊಳ್ಳಬೇಕು: “ಮೊಟಮ್ಟೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹುಪಾಪಗಳನ್ನು ಮುಚ್ಚುತ್ತದೆ.”
ವೃದ್ಧರಿಗೆ ಸನ್ಮಾನ: “ವೃದ್ಧ ಜನರಿಗೆ ಸನ್ಮಾನ ತೋರಿಸಿರಿ ಮತ್ತು ಅವರನ್ನು ಗೌರವಿಸಿರಿ,” ಎನ್ನುತ್ತದೆ ಯಾಜಕಕಾಂಡ 19:32. (ಟುಡೇಸ್ ಇಂಗ್ಲಿಷ್ ವರ್ಷನ್) ವೃದ್ಧ ಹೆತ್ತವರು ಕಾಯಿಲೆ ಬಿದ್ದಿರುವಾಗ ಮತ್ತು ವಿಪರೀತ ಕೇಳಿಕೆಗಳನ್ನು ಮಾಡುವಾಗ ಇದೊಂದು ಪಂಥಾಹ್ವಾನವಾಗಬಹುದು. ಒಂದನೆಯ ತಿಮೊಥೆಯ 5:3, 4, ಹೆತ್ತವರಿಗೆ ‘ಗೌರವ’ ತೋರಿಸುವಂತೆ ಮತ್ತು “ಪ್ರತ್ಯುಪಕಾರ” ಮಾಡುವಂತೆ ಹೇಳುತ್ತದೆ. ಇದರಲ್ಲಿ ಆರ್ಥಿಕ ಏರ್ಪಾಡು ಹಾಗೂ ಸನ್ಮಾನ ಸೇರಿರಸಾಧ್ಯವಿದೆ. ನಾವು ಸಹಾಯಹೀನ ಶಿಶುಗಳಾಗಿದ್ದಾಗ ನಮ್ಮ ಹೆತ್ತವರು ನಮಗೆ ಮಾಡಿದ ಸರ್ವ ವಿಷಯಗಳ ಕಾರಣ, ಅವಶ್ಯವಿರುವಾಗ ನಾವು ಅವರಿಗೂ ಅಂತಹ ಪರಿಗಣನೆಯನ್ನು ತೋರಿಸಬೇಕು.
ಸೋದರ ಸೋದರಿಯರ ಮಧ್ಯೆ ಸ್ಪರ್ಧೆಯನ್ನು ನಿಗ್ರಹಿಸಿರಿ: ಕಾಯೀನನ ದ್ವೇಷ, ಅವನು ತನ್ನ ತಮ್ಮನನ್ನು ಕೊಲ್ಲಲು ನಡೆಸುವ ಮೊದಲು, “ಪಾಪವು ನಿನ್ನ ಬಾಗಲಲ್ಲಿ ಹೊಂಚಿಕೊಂಡಿರುತ್ತದೆ. ಅದು ನಿನ್ನನ್ನು ಆಳಲು ಬಯಸುತ್ತದೆ, ಆದರೆ ನೀನು ಅದನ್ನು ಜಯಿಸಬೇಕು,” ಎಂದು ಅವನಿಗೆ ಬುದ್ಧಿ ಹೇಳಲ್ಪಟ್ಟಿತು. (ಆದಿಕಾಂಡ 4:7, ಟಿಇವಿ) ಅನಿಸಿಕೆಗಳನ್ನು ನಿಯಂತ್ರಿಸುವುದು ಸಾಧ್ಯ. ಒಬ್ಬರೊಡನೊಬ್ಬರು ತಾಳ್ಮೆಯಿಂದ ವರ್ತಿಸಲು, “ನೀವು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ ಒಬ್ಬರನ್ನೊಬ್ಬರು ಉದಾರತೆಯಿಂದ ಸಹಿಸಿ”ಕೊಳ್ಳಲು ಕಲಿಯಿರಿ.—ಎಫೆಸ 4:2, ಫಿಲಿಪ್ಸ್.
ನಂಬಿ ಹೇಳಲು ಕಲಿಯುವುದು
ಗೃಹ ಹಿಂಸಾಚಾರದ ಅನೇಕ ಬಲಿಗಳು ಮೌನ ಕಷ್ಟಾನುಭವಿಗಳು. ಆದರೆ ಡಾ. ಜಾನ್ ರೈಟ್ ಪ್ರೋತ್ಸಾಹಿಸುವುದು: “ಹೊಡೆಯಲ್ಪಡುವ ಸ್ತ್ರೀಯರು ಯೋಗ್ಯತೆಯಿರುವ ಮೂರನೆಯ ಪಕ್ಷದವರಿಂದ ಶಾರೀರಿಕ ಹಾಗೂ ಭಾವಾತ್ಮಕ ರಕ್ಷಣೆಯನ್ನು ಹುಡುಕಬೇಕು.” ಅಪಪ್ರಯೋಗಿಸಲ್ಪಡುವ ಇನ್ನು ಯಾವನೇ ಕುಟುಂಬದ ಸದಸ್ಯನ ಸಂಬಂಧದಲ್ಲೂ ಇದು ಸತ್ಯ.
ಹಲವು ಬಾರಿ ಇದಕ್ಕೆ ಬಲಿಯಾದವನಿಗೆ ಇನ್ನೊಬ್ಬನೊಡನೆ ಅದನ್ನು ನಂಬಿ ಹೇಳುವುದು ಕಷ್ಟವಾಗುತ್ತದೆ. ಏಕೆಂದರೆ ಸಮಾಜದ ಅತಿ ಆಪ್ತ ಏಕಾಂಶ—ಕುಟುಂಬ—ದಲ್ಲಿ ಭರವಸೆಯು ಈ ವೇದನೆಗೆ ನಡೆಸಿದೆ. “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು,” ಎನ್ನುತ್ತದೆ ಜ್ಞಾನೋಕ್ತಿ 18:24. ಅಂಥ ಮಿತ್ರನನ್ನು ಕಂಡುಹಿಡಿದು, ಅವನೊಂದಿಗೆ ವಿವೇಚನೆಯಿಂದ ನಂಬಿ ಹೇಳಲು ಕಲಿಯುವುದು, ಅವಶ್ಯವಿರುವ ಸಹಾಯವನ್ನು ಪಡೆಯಲು ಕಲಿಯುವ ಒಂದು ಅಮೂಲ್ಯ ಹೆಜ್ಜೆಯಾಗಿದೆ. ಅಪಪ್ರಯೋಗಿಗೂ ಸಹಾಯ ಅವಶ್ಯವೆಂಬುದು ನಿಶ್ಚಯ.
ಪ್ರತಿ ವರ್ಷ ಲಕ್ಷಗಟ್ಟಲೆ ಜನರು ಯೆಹೋವನ ಸಾಕ್ಷಿಗಳಾಗುತ್ತಾರೆ. ಇವರು ನೂತನ ವ್ಯಕ್ತಿತ್ವವನ್ನು ಧರಿಸುವ ಪಂಥಾಹ್ವಾನವನ್ನು ಸ್ವೀಕರಿಸುತ್ತಾರೆ. ಇವರಲ್ಲಿ ಈ ಹಿಂದೆ ಗೃಹ ಜೀವನದ ಹಿಂಸಾಚಾರವನ್ನು ನಡೆಸಿದವರಿದ್ದಾರೆ. ಮರುಕೊಳಿಸುವ ಪ್ರವೃತ್ತಿಯನ್ನು ತಡೆಯಲು, ಇವರು ಬೈಬಲು, “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ . . . ಉಪಯುಕ್ತ”ವಾಗುವಂತೆ ಬಿಡತಕ್ಕದ್ದು.—2 ತಿಮೊಥೆಯ 3:16.
ಈ ಹೊಸ ಸಾಕ್ಷಿಗಳಿಗೆ, ನೂತನ ವ್ಯಕ್ತಿತ್ವವನ್ನು ಧರಿಸುವ ಈ ಕಾರ್ಯ, ಮುಂದುವರಿಯುವ ಕಾರ್ಯ ವಿಧಾನವಾಗಿದೆ, ಏಕೆಂದರೆ ಅದು “ನೂತನವಾಗುತ್ತಾ” ಇದೆಯೆಂದು ಕೊಲೊಸ್ಸೆ 3:10 ಹೇಳುತ್ತದೆ. ಆದುದರಿಂದ ಮುಂದುವರಿಯುವ ಪ್ರಯತ್ನ ಅಗತ್ಯ. ಕೃತಜ್ಞತಾಸೂಚಕವಾಗಿ, ಯೆಹೋವನ ಸಾಕ್ಷಿಗಳಿಗೆ ಆತ್ಮಿಕ “ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು” ಇರುವ ಒಂದು ದೊಡ್ಡ ಸಮೂಹದ ಬೆಂಬಲವೇ ಇದೆ.—ಮಾರ್ಕ 10:29, 30; ಇಬ್ರಿಯ 10:24, 25 ಸಹ ನೋಡಿ.
ಇದಲ್ಲದೆ, ಲೋಕಾದ್ಯಂತವಾಗಿರುವ ಯೆಹೋವನ ಸಾಕ್ಷಿಗಳ ಸುಮಾರು 70,000 ಸಭೆಗಳಲ್ಲಿ, “ಗಾಳಿಯಲ್ಲಿ ಮರೆಯಂತೆಯೂ ಬಿರುಗಾಳಿಮಳೆಯಲ್ಲಿ ಅಡಗಿಕೊಳ್ಳುವ ಸ್ಥಳವಾಗಿಯೂ” ಇರುವ ಪ್ರೀತಿಯ ಮೇಲ್ವಿಚಾರಕರಿದ್ದಾರೆ. ಅವರ “ಕಣ್ಣು ಮತ್ತು ಕಿವಿಗಳು ಜನರ ಆವಶ್ಯಕತೆಗಳಿಗೆ ತೆರೆದಿರುವುದು.” (ಯೆಶಾಯ 32:2, 3, ಟಿಇವಿ) ಹೀಗೆ, ಅತಿ ಹೊಸತಾಗಿರುವ ಸಾಕ್ಷಿಗಳಿಗೂ, ಹೆಚ್ಚು ಅನುಭವಶಾಲಿಗಳಿಗೂ—ಅವರು ನೂತನ ವ್ಯಕ್ತಿತ್ವವನ್ನು ಧರಿಸುವ ಕೆಲಸ ಮಾಡುತ್ತಿರುವಾಗ—ಕ್ರೈಸ್ತ ಸಭೆಯಲ್ಲಿ ಸಹಾಯದ ಆಶ್ಚರ್ಯಕರವಾದ ಭಂಡಾರವೇ ದೊರೆಯುತ್ತದೆ.
ಸಹಾನುಭೂತಿಯ ಮೇಲ್ವಿಚಾರಕರು
ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಜನರು ಕ್ರೈಸ್ತ ಮೇಲ್ವಿಚಾರಕರ ಬಳಿಗೆ ಬರುವಾಗ, ಈ ಮೇಲ್ವಿಚಾರಕರು ಪಕ್ಷಪಾತವಿಲ್ಲದೆ ಎಲ್ಲರಿಗೆ ಕಿವಿಗೊಡಲು ತರಬೇತು ಹೊಂದಿದವರಾಗಿದ್ದಾರೆ. ಅವರು ಎಲ್ಲರಿಗೆ, ವಿಶೇಷವಾಗಿ ಕಠಿನ ಅಪಪ್ರಯೋಗಕ್ಕೊಳಗಾಗಿರುವವರಿಗೆ ಮಹಾ ಸಹಾನುಭೂತಿ ಮತ್ತು ಗ್ರಹಿಕೆಯನ್ನು ತೋರಿಸುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ.—ಕೊಲೊಸ್ಸೆ 3:12; 1 ಥೆಸಲೊನೀಕ 5:14.
ದೃಷ್ಟಾಂತಕ್ಕೆ, ಹೊಡೆತಕ್ಕೊಳಗಾದ ಒಬ್ಬ ಪತ್ನಿಗೆ ಭಯಂಕರ ಪೆಟ್ಟಾಗಿದ್ದಿರಬಹುದು. ಇಂದು ಅನೇಕ ದೇಶಗಳಲ್ಲಿ, ಕುಟುಂಬದ ಹೊರಗೆ ಇದೇ ರೀತಿಯ ಹೊಡೆತವನ್ನು ಇನ್ನಾರಿಗಾದರೂ ಹೊಡೆಯುತ್ತಿದ್ದಲ್ಲಿ, ಆ ಹೊಡೆಗನು ಸೆರೆಮನೆಗೆ ಹೋಗುವ ಸಾಧ್ಯತೆ ಇತ್ತು. ಆದುದರಿಂದ ಹೊಡೆತಕ್ಕೊಳಗಾದವಳನ್ನು, ಮತ್ತು ಹಾಗೆಯೇ ಲೈಂಗಿಕ ಅಪಪ್ರಯೋಗದಂತಹ ಇತರ ರೀತಿಯ ಅಪಪ್ರಯೋಗಕ್ಕೆ ಬಲಿಬಿದ್ದವರನ್ನು ವಿಶೇಷ ದಯೆಯಿಂದ ಕಾಣುವುದು ಅವಶ್ಯ.
ಅಲ್ಲದೆ, ದೇವರ ನಿಯಮಗಳ ವಿರುದ್ಧ ಪಾತಕ ಮಾಡಿರುವವರು ಲೆಕ್ಕ ಒಪ್ಪಿಸುವಂತೆ ಕರೆಯಲ್ಪಡುವುದು ಅಗತ್ಯ. ಈ ರೀತಿಯಲ್ಲಿ ಸಭೆಯು ಶುದ್ಧವಾಗಿರಿಸಲ್ಪಟ್ಟು, ಇತರ ನಿರಪರಾಧಿಗಳು ಸಂರಕ್ಷಿಸಲ್ಪಡುತ್ತಾರೆ. ಮತ್ತು ಅತಿ ಪ್ರಾಮುಖ್ಯವಾಗಿ, ದೇವರಾತ್ಮದ ಹರಿವು ನಿರೋಧಿಸಲ್ಪಡುವುದಿಲ್ಲ.—1 ಕೊರಿಂಥ 5:1-7; ಗಲಾತ್ಯ 5:9.
ವಿವಾಹದ ಸಂಬಂಧದಲ್ಲಿ ದೇವರ ವೀಕ್ಷಣ
ಜನರು ಯೆಹೋವನ ಸಾಕ್ಷಿಗಳಾಗುವಾಗ, ಅವರು ದೇವರ ವಾಕ್ಯದಲ್ಲಿ ಕಂಡುಬರುವ ಕ್ರೈಸ್ತ ಜೀವನ ಮೂಲ ಸೂತ್ರಗಳಿಗೆ ಬದ್ಧರಾಗಲು ಸಮ್ಮತಿಸುತ್ತಾರೆ. ಪುರುಷನನ್ನು, ಅವನು ಕುಟುಂಬವನ್ನು ಸತ್ಯಾರಾಧನೆಯಲ್ಲಿ ನಡೆಸುವಂತೆ, ಕುಟುಂಬದ ಶಿರಸ್ಸಾಗಿ ನೇಮಿಸಲಾಗಿದೆ ಎಂದು ಅವರು ಕಲಿಯುತ್ತಾರೆ. (ಎಫೆಸ 5:22) ಆದರೆ ಈ ಶಿರಸ್ಸುತನ ಅವನು ತನ್ನ ಹೆಂಡತಿಯೊಂದಿಗೆ ಕ್ರೂರವಾಗಿ ವರ್ತಿಸಲು, ಅವಳ ವ್ಯಕ್ತಿತ್ವವನ್ನು ಜಜ್ಜಿ ಬಿಡಲು, ಯಾ ಅವಳ ಬಯಕೆಗಳನ್ನು ಅಲಕ್ಷ್ಯ ಮಾಡಲು ಅಧಿಕಾರವನ್ನು ಕೊಡುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ಗಂಡಂದಿರು ಹೀಗೆ ಮಾಡಬೇಕೆಂದು ಬೈಬಲು ಸ್ಪಷ್ಟಪಡಿಸುತ್ತದೆ: “ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. . . . ಹಾಗೆಯೇ ಪುರುಷರು ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೆ, ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದಿಗೂ ಸ್ವಶರೀರವನ್ನು ಹಗೆ ಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.” (ಎಫೆಸ 5:25, 28, 29) ಹೌದು, ಹೆಂಡತಿಯರಿಗೆ “ಗೌರವ” ಕೊಡಬೇಕೆಂದು ದೇವರ ವಾಕ್ಯ ಸರಳವಾಗಿ ಹೇಳುತ್ತದೆ.—1 ಪೇತ್ರ 3:7, NW; ರೋಮಾಪುರ 12:3, 10 ಸಹ ನೋಡಿ; ಫಿಲಿಪ್ಪಿ 2:3, 4.
ತನ್ನ ಹೆಂಡತಿಯನ್ನು ಶಾಬ್ದಿಕವಾಗಿಯೂ ಶಾರೀರಿಕವಾಗಿಯೂ ಅಪಪ್ರಯೋಗಿಸುವ ಯಾವ ಕ್ರೈಸ್ತ ಗಂಡನೂ, ತಾನು ತನ್ನ ಹೆಂಡತಿಯನ್ನು ನಿಜವಾಗಿಯೂ ಪ್ರೀತಿಸುತ್ತೇನೆಂದು ಸತ್ಯವಾಗಿ ವಾದಿಸಲಾರನು. ಅದು ಕಪಟಾಚಾರವಾದೀತು, ಏಕೆಂದರೆ, “ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ,” ಎಂದು ದೇವರ ವಾಕ್ಯ ಹೇಳುತ್ತದೆ. (ಕೊಲೊಸ್ಸೆ 3:19) ಸ್ವಲ್ಪದರಲ್ಲಿ, ಅರ್ಮಗೆದೋನಿನಲ್ಲಿ ದೇವರ ತೀರ್ಪು ಈ ದುಷ್ಟ ವ್ಯವಸ್ಥೆಯ ವಿರುದ್ಧ ಬರುವಾಗ ಕಪಟಿಗಳು, ದೇವರ ಆಳಿಕೆಯ ವಿರೋಧಿಗಳಿಗೆ ಬರುವ ಗತಿಯನ್ನೇ ಪಡೆಯುವರು.—ಮತ್ತಾಯ 24:51.
ದೇವಭಯವುಳ್ಳ ಪತಿ, ತನ್ನ ಪತ್ನಿಯನ್ನು ಸ್ವಶರೀರದಂತೆ ಪ್ರೀತಿಸಬೇಕು. ಅವನು ತನ್ನ ಸ್ವಶರೀರವನ್ನು ಹೊಡೆದಾನೆ, ಮುಖಕ್ಕೆ ಗುದ್ದಿಯಾನೆ, ಯಾ ತನ್ನ ಕೇಶವನ್ನೇ ಬಿರುಸಾಗಿ ಎಳೆದಾನೆ? ಅವನು ಇತರರ ಎದುರಿನಲ್ಲಿ ತನ್ನನ್ನು ತಿರಸ್ಕಾರದಿಂದ ಜರೆದು ಕೆಣಕುತ್ತ ಮಾತಾಡಿಯಾನೆ? ಇಂತಹ ವಿಷಯಗಳನ್ನು ಮಾಡುವವನನ್ನು ಕಡಮೆ ಪಕ್ಷ ಮಾನಸಿಕ ಅಸಮತೆಯವನೆಂದಾದರೂ ಪರಿಗಣಿಸಲಾಗುವುದು.
ಒಬ್ಬ ಕ್ರೈಸ್ತ ಪುರುಷನು ತನ್ನ ಪತ್ನಿಯನ್ನು ಹೊಡೆದರೆ, ಅವನು ಮಾಡುವ ಇತರ ಎಲ್ಲ ಕ್ರಿಸ್ತೀಯ ಕಾರ್ಯಗಳು ದೇವರ ದೃಷ್ಟಿಯಲ್ಲಿ ಬೆಲೆಯಿಲ್ಲದವುಗಳಾಗುತ್ತವೆ. “ಹೊಡೆದಾಡುವವನು” ಕ್ರೈಸ್ತ ಸಭೆಯಲ್ಲಿ ಸುಯೋಗಗಳಿಗೆ ಅರ್ಹನಾಗುವುದಿಲ್ಲವೆಂಬುದು ನೆನಪಿರಲಿ. (1 ತಿಮೊಥೆಯ 3:3; 1 ಕೊರಿಂಥ 13:1-3) ತನ್ನ ಗಂಡನೊಡನೆ ತದ್ರೀತಿ ವ್ಯವಹರಿಸುವ ಯಾವ ಹೆಂಡತಿಯೂ ದೇವರ ಆಜ್ಞೆಯನ್ನು ಉಲ್ಲಂಘಿಸುತ್ತಾಳೆಂಬುದು ನಿಶ್ಚಯ.
ಗಲಾತ್ಯ 5:19-21, ದೇವರು ಖಂಡಿಸುವ ಕೆಲಸಗಳಲ್ಲಿ “ಹಗೆತನ ಜಗಳ . . . ಸಿಟ್ಟು” ಇವುಗಳಿವೆಯೆಂದು ಹೇಳಿ, “ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ,” ಎಂದು ಹೇಳುತ್ತದೆ. ಹೀಗೆ, ಒಬ್ಬನು ತನ್ನ ಹೆಂಡತಿಯನ್ನು ಯಾ ಮಕ್ಕಳನ್ನು ಬಡಿದು ಹೊಡೆಯುವುದು ಎಂದಿಗೂ ನ್ಯಾಯವಾಗಿರುವುದಿಲ್ಲ. ಇದು ಸಾಮಾನ್ಯವಾಗಿ ದೇಶದ ನಿಯಮದ ವಿರುದ್ಧವಾಗಿದೆ, ಮತ್ತು ನಿಶ್ಚಯವಾಗಿ ದೇವರ ನಿಯಮದ ವಿರುದ್ಧವಾಗಿದೆ.
ಯೆಹೋವನ ಸಾಕ್ಷಿಗಳು ಪ್ರಕಟಿಸುವ ದ ವಾಚ್ಟವರ್ ಪತ್ರಿಕೆಯು ಈ ವಿಷಯದಲ್ಲಿ ಶಾಸ್ತ್ರೀಯ ದೃಷ್ಟಿಕೋನವನ್ನು ಕೊಡುತ್ತಾ, ಕ್ರೈಸ್ತರೆಂದು ಹೇಳಿಕೊಂಡರೂ ಹೊಡೆಗರಾಗಿರುವವರ ಕುರಿತಾಗಿ, “ಕ್ರೈಸ್ತನೆಂದು ಹೇಳಿಕೊಳ್ಳುವ ಯಾವನೇ ಆಗಲಿ, ಪುನರಾವೃತ್ತಿಯಾಗಿ ಮತ್ತು ಪಶ್ಚಾತ್ತಾಪವಿಲ್ಲದೆ ಹಿಂಸಾತ್ಮಕವಾದ ಕೋಪದ ಕೆರಳಿಗೆ ವಶವಾಗುವಲ್ಲಿ, ಅವನನ್ನು ಬಹಿಷ್ಕರಿಸಸಾಧ್ಯವಿದೆ,” ಹೊರಗೆ ಹಾಕಸಾಧ್ಯವಿದೆ ಎಂದು ಹೇಳುತ್ತದೆ.—ಮೇ 1, 1975, ಪುಟ 287; ಹೋಲಿಸಿ 2 ಯೋಹಾನ 9, 10.
ದೇವರ ನಿಯಮ ಅನುಮತಿಸುವ ವಿಷಯಗಳು
ದೇವರು ತನ್ನ ನಿಯಮವನ್ನು ಉಲ್ಲಂಘಿಸುವವರಿಗೆ ಅಂತಿಮವಾಗಿ ತೀರ್ಪು ಮಾಡುವನು. ಆದರೆ ಈ ಮಧ್ಯೆ, ಹೊಡೆಗನು ಮಾರ್ಪಡದೆ ತನ್ನ ಹೊಡೆತವನ್ನು ಮುಂದುವರಿಸುವಾಗ, ದೇವರ ವಾಕ್ಯವು ಇಂಥ ಹೊಡೆತಕ್ಕೊಳಗಾಗಿರುವ ಕ್ರೈಸ್ತ ಜೊತೆಗಳಿಗೆ ಯಾವ ಏರ್ಪಾಡನ್ನು ಮಾಡುತ್ತದೆ? ಇಂತಹ ನಿರಪರಾಧಿ ಬಲಿಗಳು ತಮ್ಮ ಶಾರೀರಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು, ಪ್ರಾಯಶಃ ತಮ್ಮ ಜೀವಗಳನ್ನು ಸಹ ಅಪಾಯಕ್ಕೆ ಸಿಕ್ಕಿಸುತ್ತಾ ಮುಂದುವರಿಯುವ ಹಂಗಿನಲ್ಲಿದ್ದಾರೊ?
ಮನೆಯ ಹಿಂಸಾಚಾರದ ವಿಷಯ ಮಾತಾಡುತ್ತಾ, ದ ವಾಚ್ಟವರ್ ಪತ್ರಿಕೆ ದೇವರ ವಾಕ್ಯವು ಅನುಮತಿಸುವ ವಿಷಯಗಳನ್ನು ಗಮನಿಸಿ ಹೇಳುವುದು: “ಅಪೊಸ್ತಲ ಪೌಲನು ಬುದ್ಧಿ ಹೇಳುವುದು: ‘ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು; ಒಂದು ವೇಳೆ ಅಗಲಿದರೂ ಪುರುಷ ಸಹವಾಸವಿಲ್ಲದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಮಾಧಾನವಾಗಬೇಕು; ಮತ್ತು ಗಂಡನು ಹೆಂಡತಿಯನ್ನು ಬಿಡಬಾರದು.’” ಆ ಲೇಖನ ಇನ್ನೂ ಹೇಳುವುದು: “ಅಪಪ್ರಯೋಗ ಅಸಹನೀಯವಾಗುವಲ್ಲಿ, ಯಾ ಜೀವವೇ ಅಪಾಯಕ್ಕೊಳಗಾಗಿರುವಲ್ಲಿ, ವಿಶ್ವಾಸಿಯಾದ ಜೊತೆಯು ‘ಅಗಲಲು’ ಆಯ್ದುಕೊಳ್ಳಬಹುದು. ಆದರೆ ತಕ್ಕ ಸಮಯದಲ್ಲಿ ‘ಸಮಾಧಾನವಾಗುವ’ ಪ್ರಯತ್ನವಿರಬೇಕು. (1 ಕೊರಿಂಥ 7:10-16) ಆದರೆ ಈ ‘ಅಗಲಿಕೆ’ ತಾನೇ ವಿವಾಹ ವಿಚ್ಛೇದಕ್ಕೆ ಮತ್ತು ಪುನರ್ವಿವಾಹಕ್ಕೆ ಆಧಾರವನ್ನು ಕೊಡುವುದಿಲ್ಲ; ಆದರೂ, ಶಾಸನಬದ್ಧ ವಿಚ್ಛೇದ ಯಾ ಶಾಸನಬದ್ಧ ಪ್ರತ್ಯೇಕವಾಸವು ಭಾವೀ ಅಪಪ್ರಯೋಗದಿಂದ ತಕ್ಕ ಮಟ್ಟಿಗೆ ಸಂರಕ್ಷಣೆಯನ್ನು ಕೊಟ್ಟೀತು.”—ಮಾರ್ಚ್ 15, 1983, ಪುಟ 28-9; ನವಂಬರ್ 1, 1988ರ ಸಂಚಿಕೆಯ ಪುಟ 22-3ನ್ನೂ ನೋಡಿ.
ಈ ಪರಿಸ್ಥಿತಿಗಳಲ್ಲಿ ಬಲಿಯಾಗಿರುವ ವ್ಯಕ್ತಿ ಏನು ಮಾಡಬೇಕೆಂಬುದು ಅವನ ವೈಯಕ್ತಿಕ ನಿರ್ಣಯವಾಗಿರಬೇಕು. “ಪ್ರತಿಯೊಬ್ಬನು [ಯಾ ಪ್ರತಿಯೊಬ್ಬಳು] ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಇನ್ನಾರೂ ಅವಳ ಪರವಾಗಿ ನಿರ್ಣಯಿಸಸಾಧ್ಯವಿಲ್ಲ. ಮತ್ತು ಆಕೆಯ ಆರೋಗ್ಯ, ಜೀವ, ಮತ್ತು ಆತ್ಮಿಕತೆ ಅಪಾಯಕ್ಕೊಳಗಾಗಿರುವಾಗ ಅವಳು ಅಪಪ್ರಯೋಗಿಯಾದ ಗಂಡನ ಬಳಿಗೆ ಹಿಂದಿರುಗುವಂತೆ ಯಾರೂ ಆಕೆಯನ್ನು ಒತ್ತಾಯಿಸಬಾರದು. ಅದು ಆಕೆಯ ಸ್ವಂತ ಆಯ್ಕೆಯಾಗಿರಬೇಕು, ಸ್ವಪ್ರೇರಣೆಯಿಂದ ಮಾಡಿದ್ದಾಗಿರಬೇಕು, ಇತರರು ತಮ್ಮ ಇಷ್ಟವನ್ನು ಆಕೆಯ ಮೇಲೆ ಹೇರಿಸಲು ಪ್ರಯತ್ನಿಸಿದುದರಿಂದ ಆದದ್ದಾಗಿರಬಾರದು.—ಫಿಲೆಮೋನ 14 ನೋಡಿ.
ಗೃಹ ಜೀವನದ ಹಿಂಸಾಚಾರಕ್ಕೆ ಅಂತ್ಯ
ಗೃಹ ಜೀವನದ ಹಿಂಸಾಚಾರವು, ಬೈಬಲು ಈ ಅಂತ್ಯ ದಿವಸಗಳಿಗೆ ಏನು ಮುಂತಿಳಿಸಿದೆಯೋ ಅದಕ್ಕೆ ಪ್ರತಿನಿಧಿರೂಪದ್ದಾಗಿದೆ ಎಂದು ಯೆಹೋವನ ಸಾಕ್ಷಿಗಳು ಕಲಿತಿದ್ದಾರೆ. ಅನೇಕರು ಆಗ “ದೂಷಿಸುವವರೂ,” “ಸ್ವಾಭಾವಿಕ ಮಮತೆಯಿಲ್ಲದವರೂ,” “ಉಗ್ರತೆಯುಳ್ಳವರೂ” ಆಗಿರುವರು. (2 ತಿಮೊಥೆಯ 3:2, 3, ದ ನ್ಯೂ ಇಂಗ್ಲಿಷ್ ಬೈಬಲ್) ಈ ಕೊನೆಯ ದಿನಗಳ ಬೆನ್ನಿನಲ್ಲಿ, ತಾನು ಒಂದು ಶಾಂತಿಭರಿತ ನೂತನ ಲೋಕವನ್ನು ಮುಂತರುತ್ತೇನೆಂದೂ ಅಲ್ಲಿ ಜನರು “ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು” ಎಂದೂ ದೇವರು ವಾಗ್ದಾನಿಸುತ್ತಾನೆ.—ಯೆಹೆಜ್ಕೇಲ 34:28.
ಆ ಅದ್ಭುತಕರವಾದ ನೂತನ ಜಗತ್ತಿನಲ್ಲಿ, ಗೃಹ ಜೀವನದ ಹಿಂಸಾಚಾರ ಸದಾಕಾಲಕ್ಕೂ ಗತ ಸಂಗತಿಯಾಗಿರುವುದು. “ದೀನರು ದೇಶವನ್ನು ಅನುಭವಿಸುವರು; ಅವರು ಮಹಾ ಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ನೀವು ಭವಿಷ್ಯವನ್ನು ಕುರಿತ ಬೈಬಲಿನ ವಾಗ್ದಾನಗಳ ಬಗೆಗೆ ಇನ್ನೂ ಹೆಚ್ಚು ಕಲಿಯಿರೆಂದು ನಾವು ಪ್ರೋತ್ಸಾಹಿಸುತ್ತೇವೆ. ಹೌದು, ಬೈಬಲಿನ ಮೂಲಸೂತ್ರಗಳನ್ನು ನೀವು ಈಗಲೂ ನಿಮ್ಮ ಕುಟುಂಬ ಪರಿಸರದಲ್ಲಿ ಅನ್ವಯಿಸಿಕೊಂಡು ಪ್ರಯೋಜನಗಳನ್ನು ಕೊಯ್ಯಬಲ್ಲಿರಿ. (g93 2/8)
[ಅಧ್ಯಯನ ಪ್ರಶ್ನೆಗಳು]
a ಕಾರ್ಯಸಾಧಕ ಪಾಲನೆಯ ಕುರಿತ ಹೆಚ್ಚು ಸುಬುದ್ಧಿವಾದವು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಇವರು ಪ್ರಕಾಶಿಸಿರುವ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕದ 7ರಿಂದ 9ನೆಯ ಅಧ್ಯಾಯಗಳಾದ, “ಮಕ್ಕಳನ್ನು ಪಡೆಯುವುದು—ಒಂದು ಜವಾಬ್ದಾರಿಕೆ ಮತ್ತು ಬಹುಮಾನವು,” “ಹೆತ್ತವರಾದ ನಿಮ್ಮ ಪಾತ್ರವು,” ಮತ್ತು “ಮಕ್ಕಳನ್ನು ಬಾಲ್ಯದಿಂದ ತರಬೇತಿಗೊಳಿಸುವುದು,” ಇವುಗಳಲ್ಲಿ ಸೇರಿದೆ.
[ಪುಟ 10 ರಲ್ಲಿರುವ ಚಿತ್ರಗಳು]
ಬೈಬಲ್ ಮೂಲಸೂತ್ರಗಳು ಕುಟುಂಬ ತಿಕ್ಕಾಟಗಳನ್ನು ಬಗೆಹರಿಸಲು ಸಹಾಯ ಮಾಡುತ್ತವೆ
[ಪುಟ 13 ರಲ್ಲಿರುವ ಚಿತ್ರ]
ಬಲಿಗಳು ಒಬ್ಬ ದಕ್ಷ ಮಿತ್ರನಲ್ಲಿ ನಂಬಿ ಮಾತಾಡುವುದು ಅವಶ್ಯ