ಅಡಿಕೆ ತರುವ ಕುಣಿಕೆ
ವ್ಯಕ್ತಿಯೊಬ್ಬ ಬೀದಿಯಲ್ಲಿ ನಡೆಯುತ್ತಾ ಬರುತ್ತಿದ್ದಾನೆ. ಸ್ನೇಹದಿಂದ ಹಲ್ಲು ಕಿರಿಯುತ್ತಾನೆ. ಹಲ್ಲುಗಳು ಕಪ್ಪುಕಪ್ಪು. ಬಾಯೆಲ್ಲ ಕೆಂಪುಕೆಂಪು. ಬಾಯಲ್ಲಿ ತುಂಬಿದ ರಕ್ತಗೆಂಪು ಎಂಜಲನ್ನು ಪಿಚ್ಚಕ್ಕೆಂದು ಕಾಲುದಾರಿಯಲ್ಲೇ ಉಗುಳಿ, ಅಸಹ್ಯ ಚಿತ್ತಾರ ಬಿಡಿಸಿ ಮುಂದೆ ಸಾಗುತ್ತಾನೆ. ದಕ್ಷಿಣ ಏಷ್ಯದ ಬೀದಿಗಳಲ್ಲಿ ಈ ದೃಶ್ಯ ಮಾಮೂಲಿ.
ಅಡಿಕೆ ಜಗಿಯುವವರು ಪೂರ್ವ ಆಫ್ರಿಕ, ಪಾಕಿಸ್ತಾನ, ಭಾರತ, ಆಗ್ನೇಯ ಏಷ್ಯಾ, ಪಾಪುವ ನ್ಯೂ ಗಿನಿ, ಮೈಕ್ರೊನೇಷಿಯಗಳಲ್ಲೇ ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ಇದು ಇಡೀ ಜಗತ್ತಿನ ಜನಸಂಖ್ಯೆಯ ಶೇ. 10ರಷ್ಟಾಗಿದೆ. ಅಡಿಕೆ ಮಾರುವವರು ಸಾರ್ವಜನಿಕ ಮಾರುಕಟ್ಟೆಗಳಲ್ಲೊ ಬೀದಿಬದಿಗಳಲ್ಲೊ ಮೇಜುಗಳನ್ನಿಟ್ಟು ವ್ಯಾಪಾರ ನಡೆಸುತ್ತಾರೆ. ಕೆಲವೊಮ್ಮೆ ಅವರೊಟ್ಟಿಗೆ ಅವರ ಮಕ್ಕಳೂ ಇರುವುದನ್ನು ಕಾಣಬಹುದು. ಇನ್ನೂ ಕೆಲವರು ಗಿರಾಕಿಗಳನ್ನು ಆಕರ್ಷಿಸಲು ಜಿಗಿಮಿಗಿ ಬೆಳಕುಗಳನ್ನು, “ಅಡಿಕೆ ಸುಂದರಿಯರು” ಎಂದು ಕರೆಯಲಾಗುವ ತುಂಡುಬಟ್ಟೆ ಧರಿಸಿರುವ ಹುಡುಗಿಯರನ್ನು ಬಳಸುತ್ತಾರೆ.
ಅಡಿಕೆ ವ್ಯಾಪಾರದಿಂದ ಜಗತ್ತಿನಾದ್ಯಂತ ವಾರ್ಷಿಕವಾಗಿ ಕೋಟ್ಯಾನುಕೋಟಿ ಡಾಲರುಗಳ ಲಾಭ ಆಗುತ್ತದೆ. ಅಡಿಕೆ ಅಂದರೇನು? ಇಷ್ಟೊಂದು ಜನರು ಯಾಕೆ ಅದನ್ನು ಜಗಿಯುತ್ತಾರೆ? ಇದು ಅವರ ಆರೋಗ್ಯವನ್ನು ಹೇಗೆ ಬಾಧಿಸುತ್ತದೆ? ಈ ಚಟದ ಬಗ್ಗೆ ಬೈಬಲಿನ ನೋಟವೇನು? ಈ ಚಟವನ್ನು ಹೇಗೆ ಬಿಡಬಹುದು?
ಅಡಿಕೆ ಅಂದರೇನು?
ಅಡಿಕೆ ಎನ್ನುವುದು ಉಷ್ಣವಲಯದ ಒಂದು ಜಾತಿಯ ತಾಳೆ ಮರದ ಹಣ್ಣು. ಅದನ್ನೇ ನಾವು ಅಡಿಕೆಮರ ಎಂದು ಕರೆಯುತ್ತೇವೆ. ಈ ಮರ ಪೆಸಿಫಿಕ್ ಹಾಗೂ ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಅಡಿಕೆ ಜಗಿಯುವವರು ಅಡಿಕೆಯನ್ನು ವೀಳ್ಯದೆಲೆಯಲ್ಲಿ ಸುತ್ತಿ, ಸ್ವಲ್ಪ ಸುಣ್ಣ ಹಚ್ಚಿ ತಿನ್ನುತ್ತಾರೆ. ಈ ಸುಣ್ಣ ಮನಸ್ಸನ್ನು ಚುರುಕಾಗಿಸುವ ಉದ್ದೀಪನ ಪದಾರ್ಥಗಳನ್ನು ಬಿಡುಗಡೆ ಮಾಡುತ್ತದೆ. ಇನ್ನೂ ಕೆಲವರು ರುಚಿ ಹೆಚ್ಚಿಸಲು ಏಲಕ್ಕಿ, ಲವಂಗ ಮುಂತಾದ ಸಂಬಾರ ಪದಾರ್ಥಗಳು, ತಂಬಾಕು ಇಲ್ಲವೆ ಸಿಹಿ ಪದಾರ್ಥಗಳನ್ನು ಸೇರಿಸುತ್ತಾರೆ.
ಈ ರೀತಿಯ ಮಿಶ್ರಣವೇ ಕಡುಕೆಂಪು ಬಣ್ಣಕ್ಕೆ ಮತ್ತು ಹೆಚ್ಚಿನ ಜೊಲ್ಲು ಉತ್ಪತ್ತಿಯಾಗುವುದಕ್ಕೆ ಕಾರಣ. ಹಾಗಾಗಿಯೇ ಅಡಿಕೆ ತಿನ್ನುವವರು ಪದೇಪದೇ ಎಲ್ಲೆಂದರಲ್ಲಿ, ಚಲಿಸುತ್ತಿರುವ ವಾಹನದಿಂದಲೂ ಉಗುಳುತ್ತಿರುತ್ತಾರೆ. ಪಕ್ಕದಲ್ಲಿ ದಾಟಿಹೋಗುತ್ತಿರುವವರ ಅವಸ್ಥೆ ಹೇಳುವುದೇ ಬೇಡ!!
ಅಡಿಕೆ ಆಪತ್ತಿಗೆ ಆಹ್ವಾನ!
ಓರಲ್ ಹೆಲ್ತ್ ಪತ್ರಿಕೆಯಲ್ಲಿನ ಒಂದು ವರದಿ ಹೀಗನ್ನುತ್ತದೆ: “ಅಡಿಕೆ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ. ಅದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಖ್ಯ ಸ್ಥಾನವಿದೆ. ಅದನ್ನು ಜಗಿಯುವವರು ಅದು ನಮಗೆ ಹಿತ ನೀಡುತ್ತದೆ, ಸುಖವಾಗಿದ್ದೇವೆಂಬ ಭಾವನೆ ಮೂಡಿಸುತ್ತದೆ, ಬೆಚ್ಚಗನಿಸುತ್ತದೆ ಎನ್ನುತ್ತಾರೆ. ಅದರಿಂದ ಏನೂ ಹಾನಿಯಿಲ್ಲವೆಂದೂ ಹೆಚ್ಚಾಗಿ ನೆನಸುತ್ತಾರೆ . . . ಆದರೆ ನಿಜವಾಗಿಯೂ ಅದು ಹಾನಿಕರ ಎಂದು ಪುರಾವೆಗಳು ತೋರಿಸುತ್ತವೆ.” ಯಾವ ಹಾನಿ?
ಅಡಿಕೆಯಲ್ಲಿ ಚಟ-ಹಿಡಿಸುವಂಥ ಒಂದು ಪದಾರ್ಥವಿದೆ ಎನ್ನುತ್ತಾರೆ ಮಾದಕವಸ್ತು ಬಳಕೆ ತಡೆಗಟ್ಟುವ ಅಧಿಕಾರಿಗಳು. ದಿನವೊಂದಕ್ಕೆ 50 ಅಡಿಕೆ ಅಗಿಯುವವರೂ ಇದ್ದಾರೆ! ಅಡಿಕೆ ತಿನ್ನುವವರ ಹಲ್ಲುಗಳ ಮೇಲೆ ಸ್ವಲ್ಪ ಸಮಯದೊಳಗೆ ಕಲೆಗಳು ಬರುತ್ತವೆ. ವಸಡು ರೋಗವೂ ಬರಬಹುದು. ಓರಲ್ ಹೆಲ್ತ್ ಪತ್ರಿಕೆ ಹೇಳುವ ಪ್ರಕಾರ, ಅಡಿಕೆ ಅಗಿಯುವವರಲ್ಲಿ “ಚ್ಯೂವರ್ಸ್ ಮ್ಯೂಕೋಸಾ” ಎಂಬ ಸಮಸ್ಯೆ ಆರಂಭವಾಗಬಹುದು. ಅಂದರೆ ಬಾಯಿಗೂಡಿನ ಛಾವಣಿಯಲ್ಲಿರುವ ಲೋಳೆ ಪೊರೆಯಲ್ಲಿ ಕಂದುಮಿಶ್ರಿತ ಕೆಂಪು ಕಲೆಗಳಾಗುವುದು ಮತ್ತು ಪೊರೆ ಸುಕ್ಕುಗಟ್ಟುವುದು. ಅಡಿಕೆ ಅಗಿಯುವುದನ್ನು ಮುಂದುವರಿಸಿದರೆ ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್ ಎಂಬ ಸಮಸ್ಯೆಯೂ ತಲೆದೋರಬಹುದು. ಅಂದರೆ “ಲೋಳೆ ಪೊರೆಯಲ್ಲಿನ ಸುಕ್ಕುಗಳು ಹೆಚ್ಚುತ್ತಾ ಗಟ್ಟಿಯಾಗಿ ಹಾಗೇ ಉಳಿಯುತ್ತವೆ.”
ಅಡಿಕೆ ತಿನ್ನುವುದರಿಂದ ಓರಲ್ ಸ್ಕ್ವೇಮಸ್ ಸೆಲ್ ಕಾರ್ಸಿನೋಮ ಎಂಬ ಒಂದು ವಿಧದ ಬಾಯಿ ಕ್ಯಾನ್ಸರ್ ಸಹ ಆರಂಭವಾದೀತು. ಇದು ಗಂಟಲಿನ ಹಿಂಭಾಗದಲ್ಲೂ ಆಗಬಲ್ಲದು. ಈ ಮಾತಿಗೆ ಪುಷ್ಟಿ ಎಂಬಂತೆ ಆಗ್ನೇಯ ಏಷ್ಯದಲ್ಲಿರುವ ವಯಸ್ಕರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚುತ್ತಿದೆ. ತೈವಾನ್ನಲ್ಲಿರುವ ಬಾಯಿ ಕ್ಯಾನ್ಸರ್ ರೋಗಿಗಳಲ್ಲಿ ಶೇ. 85ರಷ್ಟು ಮಂದಿ ಅಡಿಕೆ ತಿನ್ನುವವರೇ. ಅಲ್ಲದೆ, “ತೈವಾನ್ನಲ್ಲಿ ಕಳೆದ 40 ವರ್ಷಗಳಲ್ಲಿ ಬಾಯಿ ಕ್ಯಾನ್ಸರ್ಗೆ ತುತ್ತಾದವರ ಸಂಖ್ಯೆ ನಾಲ್ಕು ಪಟ್ಟು ಏರಿದೆ. ಅಲ್ಲಿನ ಜನರ ಸಾವಿನ 10 ಪ್ರಮುಖ ಕಾರಣಗಳಲ್ಲಿ ಈ ಕ್ಯಾನ್ಸರ್ ಒಂದು” ಎನ್ನುತ್ತದೆ ದ ಚೈನಾ ಪೋಸ್ಟ್ ವಾರ್ತಾಪತ್ರಿಕೆ.
ಬೇರೆ ದೇಶಗಳಲ್ಲೂ ಇದೇ ಪರಿಸ್ಥಿತಿಯಿದೆ. ಪಾಪುವ ನ್ಯೂ ಗಿನಿ ಪೋಸ್ಟ್-ಕುರಿಯರ್ ವಾರ್ತಾಪತ್ರಿಕೆ ಹೇಳುವುದು: “ಪಿಎನ್ಜಿ ವೈದ್ಯಕೀಯ ಸಂಸ್ಥೆಗನುಸಾರ ಪಾಪುವ ನ್ಯೂ ಗಿನಿಯಲ್ಲಿ ಜನರು ಮೆಲ್ಲಲು ತುಂಬ ಇಷ್ಟಪಡುವ ಅಡಿಕೆ ಪ್ರತಿವರ್ಷ ಕಡಿಮೆಪಕ್ಷ 2,000 ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಿದೆ.” ವೈದ್ಯಕೀಯ ಸಾಹಿತಿಯೂ ಆಗಿರುವ ವೈದ್ಯರೊಬ್ಬರು ಹೇಳಿದ್ದೇನೆಂದರೆ “ಧೂಮಪಾನದಿಂದ ಆಗುವಷ್ಟೇ ದುಷ್ಪರಿಣಾಮಗಳು ಅಡಿಕೆ ವ್ಯಸನಕ್ಕೆ ಇದೆ.” ಇದರಲ್ಲೊಂದು ಹೃದಯರಕ್ತನಾಳಗಳ ರೋಗ.
ಬೈಬಲಿನ ನೋಟ?
ಬೈಬಲ್ ವೈದ್ಯಕೀಯ ಪಠ್ಯಪುಸ್ತಕ ಅಲ್ಲ, ಅಡಿಕೆ ತಿನ್ನುವುದರ ಬಗ್ಗೆ ಅದರಲ್ಲಿ ಎಲ್ಲೂ ಉಲ್ಲೇಖವೂ ಇಲ್ಲ. ಹಾಗಿದ್ದರೂ ನಾನಾ ಸನ್ನಿವೇಶಗಳಿಗೆ ಅನ್ವಯವಾಗುವ ಸೂತ್ರಗಳು ಅದರಲ್ಲಿವೆ. ಇವು ನಮಗೆ ಶುದ್ಧ, ಆರೋಗ್ಯಕರ, ಉತ್ತಮ ಜೀವನ ನಡೆಸಲು ನೆರವಾಗುವವು. ಮುಂದೆ ಕೊಡಲಾಗಿರುವ ಬೈಬಲ್ ವಚನಗಳ ಹಾಗೂ ಪ್ರಶ್ನೆಗಳ ಕುರಿತು ಯೋಚಿಸಿ.
“ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.” (2 ಕೊರಿಂಥ 7:1) “ನಿಮ್ಮ ದೇಹಗಳನ್ನು . . . ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ . . . ಅರ್ಪಿಸಿರಿ.” (ರೋಮನ್ನರಿಗೆ 12:1) ಒಬ್ಬ ವ್ಯಕ್ತಿ ಅಡಿಕೆ ತಿಂದು ತನ್ನ ದೇಹವನ್ನು ಮಲಿನಗೊಳಿಸಿದರೆ ದೇವರ ದೃಷ್ಟಿಯಲ್ಲಿ ಪವಿತ್ರ ಇಲ್ಲವೇ ಶುದ್ಧನಾಗಿರುವನೇ?
ದೇವರಿಂದಲೇ “ನಾವು ಜೀವಿಸುತ್ತೇವೆ.” (ಅಪೊಸ್ತಲರ ಕಾರ್ಯಗಳು 17:28) “ಪ್ರತಿಯೊಂದು ಒಳ್ಳೆಯ ದಾನವೂ ಪ್ರತಿಯೊಂದು ಪರಿಪೂರ್ಣ ವರವೂ ಮೇಲಣಿಂದ ಬರುತ್ತದೆ.” (ಯಾಕೋಬ 1:17) ಜೀವ ದೇವರು ಕೊಟ್ಟಿರುವ ಅಮೂಲ್ಯ ಉಡುಗೊರೆ. ಅಡಿಕೆ ವ್ಯಸನದಿಂದ ರೋಗ ಬರಮಾಡಿಕೊಳ್ಳುವ ವ್ಯಕ್ತಿ ಆ ಉಡುಗೊರೆಗೆ ಗೌರವ ತೋರಿಸುತ್ತಾನೊ?
“ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು.” (ಮತ್ತಾಯ 6:24) “ಯಾವುದೇ ಸಂಗತಿಯು ನನ್ನ ಮೇಲೆ ಅಧಿಕಾರ ನಡೆಸುವಂತೆ ನಾನು ಬಿಡುವುದಿಲ್ಲ.” (1 ಕೊರಿಂಥ 6:12) ದೇವರನ್ನು ಮೆಚ್ಚಿಸಲು ಇಚ್ಛಿಸುವ ವ್ಯಕ್ತಿ ಒಂದು ಅಶುದ್ಧ ಚಟಕ್ಕೆ ದಾಸನಾಗಿ, ಅದು ತನ್ನನ್ನು ನಿಯಂತ್ರಿಸುವಂತೆ ಬಿಡುವನೇ?
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮಾರ್ಕ 12:31) “ಪ್ರೀತಿಯು ಒಬ್ಬನ ನೆರೆಯವನಿಗೆ ಕೆಡುಕನ್ನು ಮಾಡುವುದಿಲ್ಲ.” (ರೋಮನ್ನರಿಗೆ 13:10) ಅಸಹ್ಯ ಹಾಗೂ ಅನಾರೋಗ್ಯಕರವಾದ ಕೆಂಪು ಎಂಜಲನ್ನು ರಸ್ತೆಗಳಲ್ಲಿ, ದಾರಿಪಕ್ಕದಲ್ಲಿ, ಇತರ ಸ್ಥಳಗಳಲ್ಲಿ ಉಗುಳುವವನಿಗೆ ಇತರರ ಮೇಲೆ ನಿಜ ಪ್ರೀತಿ ಇದೆಯೆಂದು ಹೇಳಬಹುದಾ?
ನಾವು ‘ಏನು ಬಿತ್ತುತ್ತೇವೊ ಅದನ್ನೇ ಕೊಯ್ಯುವುದು’ ಅನಿವಾರ್ಯ. (ಗಲಾತ್ಯ 6:7, 8) ಇದೊಂದು ಪ್ರಕೃತಿ ನಿಯಮ. ಹಾಗಾಗಿ ನಾವು ದುಶ್ಚಟಗಳನ್ನು ಬಿತ್ತಿದರೆ ದುಷ್ಪರಿಣಾಮಗಳನ್ನೇ ಕೊಯ್ಯುವೆವು. ಒಳ್ಳೇ ಅಭ್ಯಾಸಗಳನ್ನು ರೂಢಿಸಿಕೊಂಡು ದೇವರು ಉದ್ದೇಶಿಸಿದ ರೀತಿಯಲ್ಲಿ ಬದುಕಿದರೆ ನಮ್ಮ ಆರೋಗ್ಯಕ್ಕೆ ಒಳ್ಳೇದಾಗುವುದು ಮಾತ್ರವಲ್ಲ ಶಾಶ್ವತ ಸಂತೋಷವನ್ನು ಕೊಯ್ಯುವೆವು. ಆದರೆ ಈಗಾಗಲೇ ನಿಮಗೆ ಅಡಿಕೆ ತಿನ್ನುವ ಚಟವಿದ್ದರೆ ಆಗೇನು? ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುವ ಮೂಲಕ ಉತ್ತಮ ಹಾಗೂ ಪ್ರತಿಫಲದಾಯಕ ಬದುಕನ್ನು ನಡೆಸಲು ಇಷ್ಟಪಡುವಲ್ಲಿ ಆ ಚಟವನ್ನು ಹೇಗೆ ಮೆಟ್ಟಿನಿಲ್ಲಬಲ್ಲಿರಿ? ದೇವರ ಸಹಾಯ ಬೇಡುತ್ತಾ, ಈ ಮುಂದಿನ ಮೂರು ಹೆಜ್ಜೆಗಳನ್ನು ನೀವು ತೆಗೆದುಕೊಳ್ಳಿ. ಈ ಹೆಜ್ಜೆಗಳನ್ನು ತೆಗೆದುಕೊಂಡ ಅನೇಕರು ಯಶಸ್ಸು ಕಂಡಿದ್ದಾರೆ.
ದುಶ್ಚಟ ದೂರಮಾಡಲು ಮೂರು ಹೆಜ್ಜೆ
1. ಬಲವಾದ ಪ್ರೇರಣೆ ಇರಲಿ. ಒಂದು ದುಶ್ಚಟವನ್ನು ಮೆಟ್ಟಿನಿಲ್ಲಬೇಕಾದರೆ ಆ ಚಟದಿಂದ ಆರೋಗ್ಯಕ್ಕೆ ಹಾನಿಯಿದೆ ಎಂದು ತಿಳಿದಿರುವುದು ತಾನೇ ಸಾಕಷ್ಟು ಪ್ರೇರಣೆ ನೀಡದು. ಅಡಿಕೆ ಜಗಿಯುವುದು, ತಂಬಾಕು ಸೇವನೆ, ಮಾದಕ ವಸ್ತುಗಳ ಸೇವನೆ ತಮ್ಮ ಆರೋಗ್ಯಕ್ಕೂ ಜೀವಕ್ಕೂ ಕುತ್ತು ಎಂದು ತಿಳಿದೂ ತಿಳಿದೂ ಆ ಚಟಗಳನ್ನು ಮುಂದುವರಿಸುವ ಎಷ್ಟೋ ಮಂದಿ ಇದ್ದಾರಲ್ಲವೇ? ಹಾಗಾಗಿ ನಿಮ್ಮ ನಿರ್ಧಾರ ಗಟ್ಟಿಗೊಳಿಸಲು ಇನ್ನಷ್ಟು ಬಲವಾದ ಪ್ರೇರಣೆ ಅಗತ್ಯ. ಅದನ್ನು ಪಡೆಯಲಿಕ್ಕಾಗಿ ನಿಮ್ಮ ಸೃಷ್ಟಿಕರ್ತನ ಮತ್ತು ಆತನಿಗೆ ನಿಮ್ಮ ಮೇಲಿರುವ ಗಾಢ ಪ್ರೀತಿಯ ಬಗ್ಗೆ ಬೈಬಲಿನಿಂದ ಕಲಿಯಬಾರದೇಕೆ? ಬೈಬಲ್ “ಸಜೀವವಾದದ್ದೂ ಪ್ರಬಲವಾದದ್ದೂ” ಎನ್ನುತ್ತದೆ ಇಬ್ರಿಯ 4:12.
2. ದೇವರ ಸಹಾಯ ಕೋರಿ. “ಕೇಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು. ಏಕೆಂದರೆ ಕೇಳುತ್ತಿರುವ ಪ್ರತಿಯೊಬ್ಬನು ಹೊಂದುವನು, ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು ಮತ್ತು ತಟ್ಟುತ್ತಿರುವ ಪ್ರತಿಯೊಬ್ಬನಿಗೆ ತೆರೆಯಲ್ಪಡುವುದು” ಎಂದನು ಯೇಸು ಕ್ರಿಸ್ತ. (ಲೂಕ 11:9, 10) ಸತ್ಯ ದೇವರಾದ ಯೆಹೋವನು, ನೀವು ಪ್ರಾರ್ಥನೆ ಮಾಡುತ್ತಾ ಯಥಾರ್ಥ ಮನಸ್ಸಿನಿಂದ ಆತನ ಬೆಂಬಲ ಹಾಗೂ ಶಕ್ತಿ ಕೋರುತ್ತಿರುವುದನ್ನು ನೋಡುವಾಗ ನಿಮ್ಮನ್ನೆಂದೂ ಅಲಕ್ಷಿಸನು. “ದೇವರು ಪ್ರೀತಿಯಾಗಿದ್ದಾನೆ” ಎನ್ನುತ್ತದೆ 1 ಯೋಹಾನ 4:8. ಇಂಥ ಪ್ರೀತಿಯನ್ನು ಅನುಭವಿಸಿದವರಲ್ಲಿ ಒಬ್ಬನು ಕ್ರೈಸ್ತನಾದ ಅಪೊಸ್ತಲ ಪೌಲ. ಆತನಂದದ್ದು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.
3. ಸಹವಾಸದಿಂದ ಬಲ ಪಡೆಯಿರಿ. ನೀವು ಯಾರೊಟ್ಟಿಗೆ ಸಹವಾಸ ಮಾಡುತ್ತೀರೊ ಅವರು ನಿಮ್ಮ ಮೇಲೆ ಒಳ್ಳೇ ಅಥವಾ ಕೆಟ್ಟ ಪ್ರಭಾವ ಬೀರಬಲ್ಲರು. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು” ಎನ್ನುತ್ತದೆ ಜ್ಞಾನೋಕ್ತಿ 13:20. ಹಾಗಾಗಿ ನಿಮ್ಮ ಒಡನಾಡಿಗಳನ್ನು ಜಾಗ್ರತೆಯಿಂದ ಆಯ್ಕೆಮಾಡಿ! ಹಿಂದೊಮ್ಮೆ ಅಡಿಕೆ ಅಗಿಯುತ್ತಿದ್ದ ಅನೇಕರು ಯೆಹೋವನ ಸಾಕ್ಷಿಗಳ ಒಡನಾಟ ಹಾಗೂ ಬೈಬಲ್ ಅಧ್ಯಯನದ ಮೂಲಕ ಹೆಚ್ಚಿನ ಸಹಾಯ ಪಡೆದು ಆ ಅಶುದ್ಧ ಚಟವನ್ನು ಮೆಟ್ಟಿನಿಂತರು. (g12-E 02)
[ಪುಟ 18, 19ರಲ್ಲಿರುವ ಚೌಕ/ಚಿತ್ರಗಳು]
ದುಶ್ಚಟ ದೂರಮಾಡಿದವರು
ಅಡಿಕೆ ಜಗಿಯುವ ಚಟವನ್ನು ಬಿಟ್ಟುಬಿಟ್ಟ ಐದು ಮಂದಿಯೊಂದಿಗೆ ಎಚ್ಚರ! ನಡೆಸಿದ ಸಂದರ್ಶನವಿದು. ಅವರೇನು ಹೇಳಿದರೆಂದು ಗಮನಿಸಿ.
ಅಡಿಕೆ ತಿನ್ನಲು ಹೇಗೆ ಶುರುಮಾಡಿದ್ರಿ?
ಪೌಲಿನ್: ಚಿಕ್ಕ ಮಗುವಾಗಿದ್ದಾಗಲೇ ತಂದೆತಾಯಿ ನನಗೆ ಅಡಿಕೆ ತಿನ್ನುವ ಅಭ್ಯಾಸ ಮಾಡಿಸಿದ್ರು. ಪಾಪುವ ನ್ಯೂ ಗಿನಿಯಲ್ಲಿರುವ ನನ್ನ ಹಳ್ಳಿಯಲ್ಲಿ ಇದೊಂದು ವಾಡಿಕೆ.
ಬೆಟ್ಟಿ: ನಾನು ಬರೀ 2 ವರ್ಷದವಳಾಗಿದ್ದಾಗ ಅಪ್ಪ ನನಗೆ ಅಡಿಕೆ ತಿನ್ನಲಿಕ್ಕೆ ಕೊಡುತ್ತಿದ್ರು. ಹದಿವಯಸ್ಸಿನಲ್ಲಿ ಯಾವಾಗಲೂ ನನ್ನತ್ರ ತುಂಬ ಅಡಿಕೆ ಇಟ್ಟುಕೊಂಡಿರುತ್ತಿದ್ದೆ—ಅಡಿಕೆ ಮರ ಥರ! ನನಗೆ ಎಷ್ಟು ಚಟ ಹತ್ತಿತ್ತೆಂದರೆ ಪ್ರತಿ ದಿನ ಬೆಳಗ್ಗೆ ಎದ್ದಕೂಡಲೇ ಮೊದಲು ಅಡಿಕೆ ಅಗಿಯುತ್ತಿದ್ದೆ.
ವೆನ್-ಜುಂಗ್: ನಾನು 16ರ ವಯಸ್ಸಿನಲ್ಲಿ ಅಡಿಕೆ ಜಗಿಯಲು ಆರಂಭಿಸಿದೆ. ನನ್ನ ವಯಸ್ಸಿನವರೆಲ್ಲರೂ ಅದನ್ನು ತಿನ್ನುತ್ತಿದ್ದರು, ದೊಡ್ಡವರೆಂದು ತೋರಿಸಿಕೊಳ್ಳಲಿಕ್ಕಾಗಿ ತಿನ್ನುತ್ತಿದ್ದರು. ನನ್ನನ್ಯಾರೂ ವಿಚಿತ್ರವಾಗಿ ನೋಡಬಾರದು ಅನ್ನೋ ಕಾರಣಕ್ಕೆ ನಾನೂ ಆರಂಭಿಸಿದೆ.
ಜಿಯೆಲ್-ಲ್ಯಾನ್: ಸಂಪಾದನೆಗಾಗಿ ನಾನು ಅಡಿಕೆ ಮಾರಲಾರಂಭಿಸಿದೆ. ಒಳ್ಳೇ ವ್ಯಾಪಾರ ಆಗಬೇಕಾದರೆ ಅಡಿಕೆಯ ಗುಣಮಟ್ಟ ಒಳ್ಳೇದಿರಬೇಕು. ಅದನ್ನು ಪರೀಕ್ಷಿಸಲು ನಾನು ಅಡಿಕೆಯ ತುಂಡುಗಳನ್ನು ತಿಂದುನೋಡುತ್ತಿದ್ದೆ. ತಿನ್ನುತ್ತಾ ತಿನ್ನುತ್ತಾ ಇದೇ ಚಟವಾಯಿತು.
ಈ ಚಟ ನಿಮ್ಮ ಆರೋಗ್ಯವನ್ನು ಹೇಗೆ ಬಾಧಿಸಿತು?
ಜಿಯೆಲ್-ಲ್ಯಾನ್: ನನ್ನ ಬಾಯಿ, ಹಲ್ಲು, ತುಟಿಗಳು ಯಾವಾಗಲೂ ಕೆಂಪುಕೆಂಪು ಆಗಿರುತ್ತಿತ್ತು. ಆ ಕಾಲದಲ್ಲಿ ತೆಗೆಸಿದ್ದ ನನ್ನ ಫೋಟೋಗಳನ್ನು ಈಗ ನೋಡುವಾಗ ನನಗೆ ನಾಚಿಕೆಯಾಗುತ್ತದೆ. ಈಗಲೂ ನನಗೆ ತುಟಿಗಳಲ್ಲಿ ಹುಣ್ಣುಗಳು ಬರುತ್ತವೆ.
ಪೌಲಿನ್: ನನಗೆ ಬಾಯಿ ಹುಣ್ಣುಗಳಾಗುತ್ತಿತ್ತು, ವಾಂತಿ ಬಂದಂತಾಗುತ್ತಿತ್ತು, ಭೇದಿ ಆಗುತ್ತಿತ್ತು.
ಬೆಟ್ಟಿ: ನನ್ನ ತೂಕ ಬರೀ 77 ಪೌಂಡ್ (35 ಕೆ.ಜಿ.) ಆಗಿತ್ತು. ನನ್ನ ವಯಸ್ಸಿಗೂ ಎತ್ತರಕ್ಕೂ ಈ ತೂಕ ತೀರ ಕಡಿಮೆ. ನನ್ನ ಹಲ್ಲುಗಳು ತುಂಬ ಗಲೀಜು ಕಾಣುತ್ತಿತ್ತು. ಆಗಾಗ್ಗೆ ಅದನ್ನು ಸ್ಟೀಲ್ ವುಲ್ನಿಂದ (ಪಾತ್ರೆ ತಿಕ್ಕುವ ಉಕ್ಕಿನ ನಾರು) ಶುಚಿಗೊಳಿಸಿ, ಪಾಲಿಷ್ ಮಾಡುತ್ತಿದ್ದೆ.
ಸ್ಯಾಮ್: ನನಗೆ ಭೇದಿ ಆಗುತ್ತಿತ್ತು. ವಸಡಿನ ರೋಗ ಇರುತ್ತಿತ್ತು. ಈಗ ಉಳಿದಿರುವುದು ಒಂದೇ ಒಂದು ಹಲ್ಲು! ಹಲ್ಲುಗಳನ್ನು ಸ್ಟೀಲ್ ವುಲ್ನಿಂದ ಉಜ್ಜಿದ್ದೇ ಬಂತು!!
ನೀವು ಆ ಚಟ ಬಿಡಲು ಕಾರಣ?
ಪೌಲಿನ್: ‘ನಾವು ಶರೀರದ ಪ್ರತಿಯೊಂದು ಕಲ್ಮಶ ತೆಗೆದು ನಮ್ಮನ್ನು ಶುಚಿಮಾಡಿಕೊಳ್ಳಬೇಕು’ ಎಂಬ ಮಾತನ್ನು ಬೈಬಲಿನಲ್ಲಿ 2 ಕೊರಿಂಥ 7:1ರಲ್ಲಿ ಓದಿದೆ. ಎಷ್ಟೇ ಕಷ್ಟವಾದರೂ ನನ್ನ ಸೃಷ್ಟಿಕರ್ತನನ್ನು ಸಂತೋಷಪಡಿಸಲು ಈ ಮಾತನ್ನು ಪಾಲಿಸಲೇಬೇಕೆಂದು ನಿರ್ಣಯಿಸಿದೆ.
ಸ್ಯಾಮ್: ನನ್ನ ಜೀವನದಲ್ಲಿ ಯೆಹೋವ ದೇವರ ಕಾರ್ಯಕಾರಿ ಶಕ್ತಿ ಕೆಲಸಮಾಡಬೇಕೆಂದು ಬಯಸಿದೆ. ಹಾಗಾಗಿ ಅಡಿಕೆ ಜಗಿಯಲು ನನಗೆ ಆಸೆಯಾದಾಗಲೆಲ್ಲ ಅದನ್ನು ಹತ್ತಿಕ್ಕಲು ಸಹಾಯಮಾಡುವಂತೆ ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ಆತನು ನನ್ನ ಪ್ರಾರ್ಥನೆಗಳಿಗೆ ಉತ್ತರಕೊಟ್ಟ. ಅಡಿಕೆ ಮುಟ್ಟದೆ ಈಗ ಸುಮಾರು 30 ವರ್ಷಗಳಾಯಿತು!
ಜಿಯೆಲ್-ಲ್ಯಾನ್: “ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ” ಎಂಬ ಮಾತುಗಳನ್ನು ಬೈಬಲಲ್ಲಿ ಓದಿದೆ. (ಯಾಕೋಬ 4:8) ಇದು ನನಗೇ ಹೇಳಿದಂತಿತ್ತು. ಅಡಿಕೆಯಿಂದಾಗುವ ಹಾನಿಯೇನೆಂದು ಗೊತ್ತಿದ್ದೂ ನಾನದನ್ನು ತಿಂದರೆ, ಮಾರಿದರೆ ಅದು ತಪ್ಪಲ್ವಾ ಎಂದು ಅನಿಸತೊಡಗಿತು. ಆ ಕ್ಷಣವೇ ನಾನು ಈ ನಿರ್ಣಯ ಮಾಡಿಬಿಟ್ಟೆ: ಶಾರೀರಿಕವಾಗಿ, ಆಧ್ಯಾತ್ಮಿಕವಾಗಿ ಅಶುದ್ಧವಾಗಿರುವ ಈ ಚಟವನ್ನು ನಿಲ್ಲಿಸುವ ಮೂಲಕ ‘ನನ್ನ ಕೈಗಳನ್ನು ಶುಚಿಮಾಡುವೆ.’
ಈ ಚಟ ಬಿಟ್ಟದ್ದರಿಂದ ನಿಮಗೆ ಯಾವ ಪ್ರಯೋಜನವಾಗಿದೆ?
ವೆನ್-ಜುಂಗ್: ನನ್ನ ವಯಸ್ಸಿನವರು ನನ್ನನ್ನು ತಮ್ಮ ಜೊತೆ ಸೇರಿಸಿಕೊಳ್ಳಬೇಕು, ಸ್ನೇಹಿತನನ್ನಾಗಿ ಮಾಡಬೇಕು ಎಂಬ ಕಾರಣಕ್ಕಾಗಿ ಅಡಿಕೆ ಅಗಿಯಲು ಆರಂಭಿಸಿದ್ದೆ. ಆದರೆ ಈಗ ನನಗೆ ಅವರಿಗಿಂತ ಉತ್ತಮ ಸ್ನೇಹಿತರಾದ ಯೆಹೋವ ದೇವರು ಮತ್ತು ಆಧ್ಯಾತ್ಮಿಕ ಸಹೋದರ ಸಹೋದರಿಯರು ಸಿಕ್ಕಿದ್ದಾರೆ.
ಸ್ಯಾಮ್: ನಾನೀಗ ಹೆಚ್ಚು ಆರೋಗ್ಯವಂತನಾಗಿದ್ದೇನೆ. ದೇವರೊಂದಿಗೂ ಉತ್ತಮ ಸಂಬಂಧವಿದೆ. ದುಶ್ಚಟಗಳಲ್ಲಿ ನಾನೀಗ ಹಣ ಪೋಲು ಮಾಡದ ಕಾರಣ ಕುಟುಂಬವನ್ನು ಹೆಚ್ಚು ಉತ್ತಮವಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿದೆ.
ಪೌಲಿನ್: ನನಗೀಗ ಚಟದ ದಾಸತ್ವದಿಂದ ಬಿಡುಗಡೆ ಸಿಕ್ಕಿದೆ. ಶುದ್ಧಳಾದ ಅನಿಸಿಕೆ ಆಗುತ್ತಿದೆ. ನನ್ನ ಹಲ್ಲುಗಳು ಬಿಳಿಯಾಗಿವೆ, ಗಟ್ಟಿಯಾಗಿವೆ. ನನ್ನ ಮನೆ ಹಾಗೂ ತೋಟದಲ್ಲೆಲ್ಲೂ ಅಡಿಕೆಯ ಸಿಪ್ಪೆಗಳಾಗಲಿ, ಅಸಹ್ಯವಾದ ಕೆಂಪು ಕಲೆಗಳಾಗಲಿ ಇಲ್ಲ.
ಬೆಟ್ಟಿ: ನನಗೆ ಶುದ್ಧ ಮನಸ್ಸಾಕ್ಷಿಯಿದೆ. ಆರೋಗ್ಯವೂ ಉತ್ತಮಗೊಂಡಿದೆ. ಶಾಲಾ ಶಿಕ್ಷಕಿ ಆಗಿ ಕೆಲಸಮಾಡುತ್ತಿದ್ದೇನೆ. ಅಲ್ಲದೆ, ಇತರರಿಗೆ ಬೈಬಲಿನ ಸುವಾರ್ತೆ ತಿಳಿಸುವುದರಲ್ಲೂ (ರೆಗ್ಯುಲರ್ ಪಯನೀಯರ್) ತುಂಬ ಸಮಯ ಕಳೆಯುತ್ತೇನೆ.
[ಚಿತ್ರಗಳು]
ಬೆಟ್ಟಿ
ಪೌಲಿನ್
ವೆನ್-ಜುಂಗ್
ಜಿಯೆಲ್-ಲ್ಯಾನ್
ಸ್ಯಾಮ್
[ಪುಟ 17ರಲ್ಲಿರುವ ರೇಖಾಕೃತಿ/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಅಡಿಕೆ ಜಗಿಯುವ ವ್ಯಸನ ಗಂಭೀರ ಕಾಯಿಲೆಗಳಿಗೆ ನಡೆಸೀತು
ಕಲೆಗಳಿರುವ ಹಲ್ಲುಗಳು ಮತ್ತು ವಸಡು ರೋಗ
ಓರಲ್ ಸಬ್ಮ್ಯೂಕಸ್ ಫೈಬ್ರೋಸಿಸ್
ಓರಲ್ ಸ್ಕ್ವೇಮಸ್ ಸೆಲ್ ಕಾರ್ಸಿನೋಮ
[ಪುಟ 16ರಲ್ಲಿರುವ ಚಿತ್ರ]
ವೀಳ್ಯದೆಲೆಯಲ್ಲಿ ಸುತ್ತಿರುವ ಅಡಿಕೆ