ಅಧ್ಯಾಯ 36
ಯಾರಿಗೆ ಪುನರುತ್ಥಾನ ಆಗುವುದು? ಅವರು ಎಲ್ಲಿ ಜೀವಿಸುವರು?
ಪುನರುತ್ಥಾನಗೊಂಡ ಕೆಲವರ ಬಗ್ಗೆ ನಾವು ಹಿಂದಿನ ಎರಡು ಅಧ್ಯಾಯಗಳಲ್ಲಿ ಓದಿದ್ದೇವಲ್ವಾ. ಎಷ್ಟು ಮಂದಿ ಪುನರುತ್ಥಾನಗೊಂಡರು ಹೇಳು ನೋಡೋಣ?— ಐದು ಮಂದಿ ತಾನೆ. ಅವರಲ್ಲಿ ಎಷ್ಟು ಜನ ಮಕ್ಕಳು?— ಮೂವರು. ನಾಲ್ಕನೆಯವನು ಯುವಕ. ಇದರಿಂದ ನಮಗೆ ಏನು ಗೊತ್ತಾಗುತ್ತೆ?—
ದೇವರು ಮಕ್ಕಳನ್ನು ಮತ್ತು ಯುವಕರನ್ನು ತುಂಬಾ ಪ್ರೀತಿಸುತ್ತಾನೆಂದು ಗೊತ್ತಾಗುತ್ತೆ. ಆದರೆ ದೇವರು ಮಕ್ಕಳನ್ನು ಮಾತ್ರವಲ್ಲ ಎಲ್ಲಾ ವಯಸ್ಸಿನ ಜನರನ್ನು ಪುನರುತ್ಥಾನಗೊಳಿಸುತ್ತಾನೆ. ನಿನಗೇನು ಅನಿಸುತ್ತೆ, ದೇವರು ಒಳ್ಳೇ ಜನರನ್ನು ಮಾತ್ರ ಪುನರುತ್ಥಾನಗೊಳಿಸುತ್ತಾನಾ?— ನಮಗೆ ಹಾಗನಿಸಬಹುದು. ಆದರೆ ಎಷ್ಟೋ ಜನರು ಯೆಹೋವ ದೇವರ ಮತ್ತು ಆತನ ಮಗನ ಕುರಿತ ಸತ್ಯವನ್ನು ಕಲಿತೇ ಇಲ್ಲ. ಹಾಗಾಗಿ ತಾವು ಕಲಿತ ತಪ್ಪು ವಿಷಯಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಇಂಥ ಜನರನ್ನು ಯೆಹೋವನು ಪುನರುತ್ಥಾನಗೊಳಿಸುತ್ತಾನಾ?—
“ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ಬೈಬಲ್ ತಿಳಿಸುತ್ತದೆ. (ಅಪೊಸ್ತಲರ ಕಾರ್ಯಗಳು 24:15) ತಪ್ಪು ಕೆಲಸಗಳನ್ನು ಮಾಡುವಂಥ ಅನೀತಿವಂತರಿಗೆ ಏಕೆ ಪುನರುತ್ಥಾನ?— ಏಕೆಂದರೆ ಅವರಿಗೆ ಯೆಹೋವನ ಬಗ್ಗೆ ಕಲಿಯಲು ಅವಕಾಶವೇ ಸಿಕ್ಕಿರಲಿಲ್ಲ. ದೇವರು ಜನರಿಂದ ಏನು ಅಪೇಕ್ಷಿಸುತ್ತಾನೆಂದು ಅವರಿಗೆ ಗೊತ್ತೇ ಇಲ್ಲ.
ಸರಿ, ಮೃತರ ಪುನರುತ್ಥಾನ ಯಾವಾಗ ಆಗುತ್ತದೆ?— ಲಾಜರನು ಸತ್ತಾಗ ಯೇಸು ಮಾರ್ಥಳಿಗೆ ‘ನಿನ್ನ ತಮ್ಮ ಎದ್ದುಬರುವನು’ ಅಂತ ಮಾತು ಕೊಟ್ಟಿದ್ದು ನೆನಪಿದೆಯಾ. ಅದಕ್ಕೆ ಮಾರ್ಥಳು, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಅಂತ ಹೇಳಿದಳು. (ಯೋಹಾನ 11:23, 24) ಲಾಜರನು ‘ಕಡೇ ದಿನದಲ್ಲಿ’ ಎದ್ದುಬರುವನೆಂದು ಮಾರ್ಥಳು ಹೇಳಿದಾಗ ಅದರ ಅರ್ಥವೇನಾಗಿತ್ತು?—
ಯೇಸು ಈಗಾಗಲೇ, ‘ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಹೊರಗೆ ಬರುವರು’ ಎಂದು ಮಾಡಿದ ವಾಗ್ದಾನ ಅವಳಿಗೆ ಗೊತ್ತಿತ್ತು. (ಯೋಹಾನ 5:28, 29) ಹಾಗಾಗಿ ‘ಕಡೇ ದಿನ’ ಅಂತ ಅವಳು ಹೇಳಿದಾಗ ಅದು, ದೇವರ ಸ್ಮರಣೆಯಲ್ಲಿರುವ ಅಂದರೆ ನೆನಪಿನಲ್ಲಿರುವ ಎಲ್ಲರೂ ಪುನಃ ಜೀವವನ್ನು ಪಡೆಯುವ ಸಮಯವನ್ನು ಸೂಚಿಸುತ್ತದೆ. ಇದು 24 ಗಂಟೆಗಳ ದಿನ ಅಲ್ಲ. ಸಾವಿರ ವರ್ಷದಷ್ಟು ದೀರ್ಘ ಸಮಯ. ಆ ಸಮಯದಲ್ಲಿ ‘ದೇವರು ಭೂಮಿಯ ಜನರಿಗೆ ನ್ಯಾಯತೀರಿಸುವನು’ ಎಂದು ಬೈಬಲ್ ಹೇಳುತ್ತದೆ. ಅವರಲ್ಲಿ ಪುನರುತ್ಥಾನಗೊಂಡ ಜನರೂ ಇರುವರು.—ಅಪೊಸ್ತಲರ ಕಾರ್ಯಗಳು 17:31; 2 ಪೇತ್ರ 3:8.
ಸಾವಿರ ವರ್ಷಗಳಷ್ಟು ದೀರ್ಘವಾದ ಆ ದಿನ ಎಂಥ ಹರ್ಷೊಲ್ಲಾಸದ ಸಮಯವಾಗಿರುವುದೆಂದು ಯೋಚಿಸು! ಕೋಟ್ಯಂತರ ಜನರು ಮರಣದಿಂದ ಎಬ್ಬಿಸಲ್ಪಟ್ಟು ಪುನಃ ಜೀವವನ್ನು ಹೊಂದುವರು. ಅವರು ‘ಪರದೈಸ್’ನಲ್ಲಿ ಜೀವಿಸುವರು ಎಂದು ಯೇಸು ಹೇಳಿದನು. ಪರದೈಸ್ ಎಲ್ಲಿರುವುದು ಮತ್ತು ಅಲ್ಲಿನ ಜೀವನ ಹೇಗಿರುವುದೆಂದು ನಾವೀಗ ನೋಡೋಣ.
ಯೇಸುವನ್ನು ಒಂದು ಮರದ ಕಂಬದ ಮೇಲೆ ಜಡಿದು ಕೊಂದರಲ್ವಾ. ಅವನು ಸಾಯುವ ಮೂರು ಗಂಟೆಗಳಿಗೆ ಮುಂಚೆ, ತನ್ನ ಪಕ್ಕದ ಕಂಬದಲ್ಲಿ ಜಡಿಯಲ್ಪಟ್ಟಿದ್ದ ಒಬ್ಬ ವ್ಯಕ್ತಿಯೊಂದಿಗೆ ಪರದೈಸ್ನ ಕುರಿತು ಮಾತಾಡಿದನು. ಆ ವ್ಯಕ್ತಿ ಮಾಡಿದ ಅಪರಾಧಗಳಿಗಾಗಿ ಮರಣದಂಡನೆ ವಿಧಿಸಲಾಗಿತ್ತು. ಅವನು ಯೇಸುವನ್ನು ಗಮನಿಸುತ್ತಾ ಇದ್ದನು. ಜನರು ಯೇಸುವಿನ ಬಗ್ಗೆ ಆಡಿಕೊಳ್ಳುತ್ತಿದ್ದ ಮಾತುಗಳನ್ನೂ ಕೇಳಿಸಿಕೊಂಡನು. ಹೀಗೆ ಅವನಿಗೆ ಯೇಸುವಿನ ಮೇಲೆ ನಂಬಿಕೆ ಹುಟ್ಟಿತು. ಅವನು, ‘ನಿನ್ನ ರಾಜ್ಯದಲ್ಲಿ ನನ್ನನ್ನು ಜ್ಞಾಪಿಸಿಕೋ’ ಎಂದು ಯೇಸುವನ್ನು ಕೇಳಿಕೊಂಡನು. ಅದಕ್ಕೆ ಯೇಸು, “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಉತ್ತರಿಸಿದನು.—ಲೂಕ 23:42, 43.
ಯೇಸುವಿನ ಆ ಮಾತಿನ ಅರ್ಥವೇನಾಗಿತ್ತು? ಪರದೈಸ್ ಎಲ್ಲಿದೆ?— ಸರಿ, ಆರಂಭದಲ್ಲಿ ಪರದೈಸ್ ಎಲ್ಲಿತ್ತು ಹೇಳು?— ಮೊದಲ ಮನುಷ್ಯನಾದ ಆದಾಮನಿಗೆ ಮತ್ತವನ ಹೆಂಡತಿಗೆ ದೇವರು ಇದೇ ಭೂಮಿಯಲ್ಲಿ ಒಂದು ವಾಸಸ್ಥಳವನ್ನು ಕೊಟ್ಟನು. ಅದು ಸುಂದರವಾದ ಪರದೈಸಾಗಿತ್ತು. ಆ ಪರದೈಸಿಗೆ ಏದೆನ್ ತೋಟ ಎಂಬ ಹೆಸರಿತ್ತು. ಅದರಲ್ಲಿ ಎಲ್ಲಾ ರೀತಿಯ ಪ್ರಾಣಿಗಳಿದ್ದವು, ಆದರೆ ಅವ್ಯಾವುದೂ ಅಪಾಯಕಾರಿಯಾಗಿರಲಿಲ್ಲ. ಬಗೆಬಗೆಯ ರುಚಿರುಚಿಯಾದ ಹಣ್ಣುಗಳನ್ನು ಕೊಡುವ ಗಿಡಮರಗಳಿದ್ದವು. ದೊಡ್ಡದೊಂದು ನದಿಯೂ ಇತ್ತು. ಆನಂದವಾಗಿ ಜೀವಿಸಲು ಅಲ್ಲಿ ಯಾವ ಕೊರತೆಯೂ ಇರಲಿಲ್ಲ.—ಆದಿಕಾಂಡ 2:8-10.
ಆದುದರಿಂದ ಆ ಅಪರಾಧಿ ಪರದೈಸ್ನಲ್ಲಿ ಇರುವನು ಎಂದು ನಾವು ಓದುವಾಗ, ಸುಂದರ ಉದ್ಯಾನವನವಾಗಿ ಮಾಡಲ್ಪಡುವ ಇದೇ ಭೂಮಿಯಲ್ಲಿ ಅವನು ಜೀವಿಸಲಿದ್ದಾನೆಂದು ನಾವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬೇಕು. ಹಾಗಾದರೆ ಈ ಸುಂದರ ಪರದೈಸ್ ಭೂಮಿಯಲ್ಲಿ ಅವನೊಟ್ಟಿಗೆ ಯೇಸು ಕೂಡ ಇರುತ್ತಾನಾ?— ಇಲ್ಲ. ಯಾಕೆ ಗೊತ್ತಾ?—
ಏಕೆಂದರೆ ಯೇಸು ಸ್ವರ್ಗದಲ್ಲಿರುವನು. ಅಲ್ಲಿ ರಾಜನಾಗಿರುವ ಅವನು ಪರದೈಸಾಗಿ ಮಾರ್ಪಡುವ ಭೂಮಿಯನ್ನು ಆಳುವನು. ಹಾಗಾಗಿ ನನ್ನೊಂದಿಗಿರುವಿ ಎಂದು ಯೇಸು ಆ ವ್ಯಕ್ತಿಗೆ ಹೇಳಿದರ ಅರ್ಥ ಏನೆಂದರೆ ಆ ವ್ಯಕ್ತಿಯನ್ನು ಯೇಸು ಪುನರುತ್ಥಾನಗೊಳಿಸಿ ಅವನಿಗೆ ಬೇಕಾದ ವಿಷಯಗಳನ್ನು ಒದಗಿಸುವನು. ಆದರೆ ಆ ವ್ಯಕ್ತಿ ಒಬ್ಬ ಅಪರಾಧಿಯಾಗಿದ್ದ ಅಲ್ವಾ? ಅಂಥ ವ್ಯಕ್ತಿಯನ್ನು ಯೇಸು ಏಕೆ ಪರದೈಸಿನಲ್ಲಿ ಜೀವಿಸಲು ಅನುಮತಿಸುತ್ತಾನೆ?— ಏಕೆ ಅನುಮತಿಸುತ್ತಾನೆಂದು ನೋಡೋಣ.
ಯೇಸುವಿನೊಂದಿಗೆ ಮಾತಾಡುವ ಮುಂಚೆ ಆ ಅಪರಾಧಿಗೆ ಯೆಹೋವ ದೇವರ ಬಗ್ಗೆಯಾಗಲೀ ಆತನ ಉದ್ದೇಶಗಳ ಬಗ್ಗೆಯಾಗಲೀ ಗೊತ್ತಿತ್ತಾ?— ಇಲ್ಲ. ದೇವರ ಕುರಿತಾದ ಸತ್ಯ ತಿಳಿಯದೇ ಇದ್ದ ಕಾರಣ ಅವನು ಕೆಟ್ಟ ಕೆಲಸಗಳನ್ನು ಮಾಡಿದ್ದನು. ಪರದೈಸಿನಲ್ಲಿ ಅವನಿಗೆ ದೇವರ ಉದ್ದೇಶಗಳ ಕುರಿತು ಎಲ್ಲವನ್ನು ಕಲಿಸಲಾಗುವುದು. ಕಲಿತಂಥ ಒಳ್ಳೇ ವಿಷಯಗಳಿಗನುಸಾರ ಜೀವಿಸುವ ಮೂಲಕ ದೇವರ ಮೇಲೆ ತನಗೆ ಪ್ರೀತಿಯಿದೆ ಎಂದು ತೋರಿಸುವ ಅವಕಾಶ ಅವನಿಗೆ ಅಲ್ಲಿ ಸಿಗುವುದು.
ಅದ್ಸರಿ ಪುಟ್ಟೂ, ಪುನರುತ್ಥಾನವಾಗಿ ಬರುವ ಪ್ರತಿಯೊಬ್ಬರೂ ಈ ಭೂಮಿಯಲ್ಲಿಯೇ ಜೀವಿಸುತ್ತಾರಾ?— ಎಲ್ಲರೂ ಅಲ್ಲಾ. ಅದೇಕೆ?— ಏಕೆಂದರೆ ಪುನರುತ್ಥಾನವಾಗುವ ಕೆಲವರು ಯೇಸುವಿನೊಂದಿಗೆ ಸ್ವರ್ಗದಲ್ಲಿ ಜೀವಿಸುತ್ತಾರೆ. ಅಲ್ಲಿ ಅವರು ಯೇಸುವಿನೊಂದಿಗೆ ರಾಜರಾಗಿ ಪರದೈಸ್ ಭೂಮಿಯನ್ನು ಆಳುವರು. ಹಾಗಂಥ ನಮಗೆ ಹೇಗೆ ಗೊತ್ತಾಗುತ್ತದೆ? ನೋಡೋಣ.
ತನ್ನ ಮರಣದ ಮುಂಚಿನ ರಾತ್ರಿಯಂದು ಯೇಸು ಅಪೊಸ್ತಲರೊಂದಿಗೆ ಮಾತಾಡುತ್ತಾ, ‘ಸ್ವರ್ಗದಲ್ಲಿರುವ ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಳಗಳಿವೆ ಮತ್ತು ನಾನು ನಿಮಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ’ ಎಂದು ತಿಳಿಸಿದನು. ಆಮೇಲೆ ಅವನು, ‘ನಾನು ಪುನಃ ಬಂದು ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು. ಆಗ ನಾನು ಇರುವಲ್ಲಿಯೇ ನೀವೂ ಇರುವಿರಿ’ ಎಂದು ಮಾತುಕೊಟ್ಟನು.—ಯೋಹಾನ 14:2, 3.
ಪುನರುತ್ಥಾನವಾದ ಮೇಲೆ ಯೇಸು ಎಲ್ಲಿಗೆ ಹೋದನು?— ತಂದೆಯ ಬಳಿಗೆ ಅಂದರೆ ಸ್ವರ್ಗಕ್ಕೆ ತಾನೆ. (ಯೋಹಾನ 17:4, 5) ಹಾಗಾಗಿ ಅಪೊಸ್ತಲರನ್ನು ಹಾಗೂ ಇತರ ಶಿಷ್ಯರನ್ನು ತಾನು ಪುನರುತ್ಥಾನ ಮಾಡುವನೆಂದೂ ಅವರು ತನ್ನೊಂದಿಗೆ ಸ್ವರ್ಗದಲ್ಲಿ ಇರುವರೆಂದೂ ಯೇಸು ಮಾತುಕೊಟ್ಟನು. ಸ್ವರ್ಗದಲ್ಲಿ ಅವರಿಗೆ ಏನು ಕೆಲಸ ಇರುವುದು?— ‘ಮೊದಲ ಪುನರುತ್ಥಾನ’ ಹೊಂದುವ ಶಿಷ್ಯರು ಯೇಸುವಿನೊಂದಿಗೆ ‘ಸಾವಿರ ವರ್ಷ ರಾಜರಾಗಿ’ ಸ್ವರ್ಗದಿಂದ ಭೂಮಿಯನ್ನು ಆಳುವರು.—ಪ್ರಕಟನೆ 5:10; 20:6; 2 ತಿಮೊಥೆಯ 2:12.
ಎಷ್ಟು ಜನ ‘ಮೊದಲ ಪುನರುತ್ಥಾನ’ ಹೊಂದಿ ಯೇಸುವಿನೊಂದಿಗೆ ರಾಜರಾಗಿ ಆಳುವರು?— ಯೇಸು ಅವರನ್ನು “ಚಿಕ್ಕ ಹಿಂಡೇ” ಎಂದು ಕರೆಯುತ್ತಾ “ಭಯಪಡಬೇಡ, ಏಕೆಂದರೆ ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ” ಎಂದು ಭರವಸೆಕೊಟ್ಟನು. (ಲೂಕ 12:32) ಈ ‘ಚಿಕ್ಕ ಹಿಂಡು’ ಅಂದರೆ ಯೇಸುವಿನೊಂದಿಗೆ ಸ್ವರ್ಗದಲ್ಲಿ ರಾಜರಾಗಿ ಆಳಲಿಕ್ಕಾಗಿ ಪುನರುತ್ಥಾನಗೊಳ್ಳುವವರ ನಿಗದಿತ ಸಂಖ್ಯೆಯನ್ನು ಬೈಬಲ್ ತಿಳಿಸುತ್ತದೆ. ಭೂಮಿಯಿಂದ ಸ್ವರ್ಗಕ್ಕೆ ಹೋಗುವವರು “ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿ” ಎಂದು ಅದು ತಿಳಿಸುತ್ತದೆ.—ಪ್ರಕಟನೆ 14:1, 3.
ಹಾಗಾದರೆ ಪರದೈಸ್ ಭೂಮಿಯಲ್ಲಿ ಎಷ್ಟು ಮಂದಿ ಜೀವಿಸುವರು?— ನಿಗದಿತ ಸಂಖ್ಯೆಯನ್ನು ಬೈಬಲ್ ತಿಳಿಸುವುದಿಲ್ಲ. ದೇವರು ಆದಾಮಹವ್ವರನ್ನು ಆಶೀರ್ವದಿಸುತ್ತಾ ತುಂಬಾ ತುಂಬಾ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ತುಂಬಿಕೊಳ್ಳುವಂತೆ ತಿಳಿಸಿದ್ದನು. ದೇವರ ಈ ಉದ್ದೇಶ ನೆರವೇರುವ ಮುಂಚೆನೇ ಅವರು ತೀರಿಹೋದರಲ್ವಾ. ಆದರೆ ಭೂಮಿಯನ್ನು ಒಳ್ಳೇ ಜನರಿಂದ ತುಂಬಿಸುವ ತನ್ನ ಉದ್ದೇಶವನ್ನು ದೇವರು ಖಂಡಿತ ನೆರವೇರಿಸುವನು.—ಆದಿಕಾಂಡ 1:28; ಯೆಶಾಯ 45:18; 55:11.
ಆಗ ಪರದೈಸ್ ಭೂಮಿಯಲ್ಲಿ ಜೀವನ ಹೇಗಿರುತ್ತದೆ ಎಂದು ಊಹಿಸಿಕೋ. ಅಲ್ಲಿನ ಜೀವನ ಸುಖಸಂತೋಷದಿಂದ ಕೂಡಿರುವುದು. ಇಡೀ ಭೂಮಿ ಸುಂದರವಾದ ಉದ್ಯಾನವನವಾಗಿ ನಳನಳಿಸುವುದು. ಎಲ್ಲೆಲ್ಲೂ ಪಕ್ಷಿಗಳ ಕಲರವ ಕೇಳಿಬರುವುದು. ಪ್ರಾಣಿಗಳ ಓಡಾಟ ನಲಿವು ಮನಸೂರೆಗೊಳ್ಳುವುದು. ಕಣ್ಣಾಯಿಸಿದಷ್ಟು ಮರ ಗಿಡ ಹೂವು ಬಳ್ಳಿ ತುಯ್ದಾಡುತ್ತಿರುವುದು. ಯಾರೂ ಕಾಯಿಲೆ ಬೀಳರು. ನೋವನ್ನು ಅನುಭವಿಸರು. ಮರಣದ ಮಾತೇ ಇರುವುದಿಲ್ಲ. ಎಲ್ಲರಲ್ಲೂ ಪ್ರೀತಿ ಸ್ನೇಹಭಾವ ಇರುವುದು. ಇಂಥ ಉಲ್ಲಾಸಮಯ ಪರದೈಸಿನಲ್ಲಿ ಜೀವಿಸಲು ಇಷ್ಟಪಡುವುದಾದರೆ ನಾವು ಈಗಲೇ ಸಿದ್ಧರಾಗಬೇಕು.
ಭೂಮಿಗಾಗಿರುವ ದೇವರ ಉದ್ದೇಶದ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು, ಜ್ಞಾನೋಕ್ತಿ 2:21, 22; ಪ್ರಸಂಗಿ 1:4; ಯೆಶಾಯ 2:4; 11:6-9; 35:5, 6 ಮತ್ತು 65:21-24 ಓದೋಣ.