ಸೃಷ್ಟಿಯು “ಅವರು ಅಕ್ಷಮ್ಯರು” ಎನ್ನುತ್ತದೆ
“ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ [“ಅಕ್ಷಮ್ಯರು, NW].”—ರೋಮಾಪುರ 1:20.
1, 2. (ಎ) ಯೋಬನು ಯೆಹೋವನಿಗೆ ಯಾವ ಕಟು ದೂರು ಮಾಡಿದನು? (ಬಿ) ಆ ಬಳಿಕ ಯೋಬನು ಯಾವ ಹಿಂಕಾರವನ್ನು ಮಾಡಿದನು?
ಯೆಹೋವ ದೇವರ ಕಡೆಗೆ ಮುರಿಯಲಾಗದ ಸಮಗ್ರತೆಯಿದ್ದ ಪುರಾತನ ಕಾಲಗಳ ಪುರುಷನಾಗಿದ್ದ ಯೋಬನನ್ನು ಸೈತಾನನು ಒಂದು ಭಯಂಕರ ಪರೀಕೆಗ್ಷೊಳಪಡಿಸಿದ್ದನು. ಯೋಬನು ತನ್ನ ಸಕಲ ಲೌಕಿಕ ಸೊತ್ತುಗಳನ್ನು ಕಳೆದುಕೊಳ್ಳುವಂತೆ ಪಿಶಾಚನು ಮಾಡಿದ್ದಲ್ಲದೆ ಅವನ ಪುತ್ರ ಪುತ್ರಿಯರಿಗೆ ಮರಣವನ್ನು ಬರಮಾಡಿ, ಒಂದು ಅಸಹ್ಯವಾದ ರೋಗದಿಂದಲೂ ಅವನನ್ನು ಪೀಡಿಸಿದ್ದನು. ದೇವರು ತನ್ನ ಮೇಲೆ ಈ ವಿಪತ್ತುಗಳನ್ನು ತಂದಿದ್ದಾನೆಂದು ಯೋಬನು ಯೋಚಿಸಿ ಯೆಹೋವನಿಗೆ ಕಟುವಾಗಿ ದೂರಿದ್ದು: “ . . . ಬಾಧಿಸುವುದು ನಿನಗೆ ಸಂತೋಷವೋ? . . . ನೀನು ನನ್ನ ದೋಷವನ್ನು ಹುಡುಕಿ ನನ್ನ ಪಾಪವನ್ನು ವಿಚಾರಿಸುವದೇಕೆ? ನಾನು ಅಪರಾಧಿಯಲ್ಲವೆಂದು ನಿನಗೆ ಗೊತ್ತಾಯಿತಲ್ಲಾ.”—ಯೋಬ 1:12-19; 2:5-8; 10:3, 6, 7.
2 ಇದಾಗಿ ಸ್ವಲ್ಪ ಸಮಯಾನಂತರ, ದೇವರಿಗೆ ಯೋಬನು ಹೇಳಿದ ಮಾತುಗಳು ಪೂರ್ತಿಯಾದ ವಿಪರ್ಯಸ್ತ ಮನೋಭಾವವನ್ನು ಪ್ರತಿಬಿಂಬಿಸಿದವು: “ನಾನು ತಿಳಿಯದ ಸಂಗತಿಗಳನ್ನೂ ನನಗೆ ಗೊತ್ತಿಲ್ಲದೆ ಬುದ್ಧಿಗೆ ಮೀರುವ ಅದ್ಭುತಗಳನ್ನೂ ಕುರಿತು ಮಾತಾಡಿದ್ದೇನೆ. ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು. ಆದಕಾರಣ [ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.” (ಯೋಬ 42:3, 5, 6) ಯೋಬನ ಮನೋಭಾವವನ್ನು ಬದಲಾಯಿಸಲು ಅಲ್ಲಿ ಏನು ನಡೆದಿತ್ತು?
3. ಸೃಷ್ಟಿಯ ಕುರಿತು ಯೋಬನು ಯಾವ ಹೊಸ ದೃಷ್ಟಿಕೋನವನ್ನು ಪಡೆದನು?
3 ಈ ಮಧ್ಯೆ, ಯೆಹೋವನು ಬಿರುಗಾಳಿಯೊಳಗಿಂದ ಯೋಬನನ್ನು ಮುಕಾಬಿಲೆ ಮಾಡಿದ್ದನು. (ಯೋಬ 38:1) ಆತನು ಯೋಬನನ್ನು ಪ್ರಶ್ನಿಸುತ್ತಾ ಹೋದನು: ‘ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ಸಮುದ್ರವನ್ನು ದ್ವಾರಗಳಿಂದ ತಡೆಗಟ್ಟಿ ಅದರ ಅಲೆಗಳು ಬರಬೇಕಾದ ಮಿತಿಯನ್ನು ಯಾರು ಕಲ್ಪಿಸಿದರು? ಮೋಡಗಳು ಭೂಮಿಗೆ ಮಳೆಸುರಿಸುವಂತೆ ಮಾಡುವುದು ನಿನಗೆ ಸಾಧ್ಯವೊ? ಹುಲ್ಲು ಬೆಳೆಯುವಂತೆ ನೀನು ಮಾಡಬಲ್ಲೆಯೊ? ನಕ್ಷತ್ರರಾಶಿಗಳನ್ನು ಒಟ್ಟಿಗೆ ಕಟ್ಟಿ ಅವುಗಳ ಪಥವನ್ನು ನೀನು ಮಾರ್ಗದರ್ಶಿಸಬಲ್ಲೆಯೊ?’ ಯೋಬ ಪುಸ್ತಕದ 38 ರಿಂದ 41 ನೆಯ ಅಧ್ಯಾಯಗಳಲ್ಲೆಲ್ಲ, ಯೆಹೋವನು ಯೋಬನಿಗೆ ಇಂಥ ಮತ್ತು ಆತನ ಸೃಷ್ಟಿಯನ್ನು ಕುರಿತ ಇನ್ನೂ ಅನೇಕ ಪ್ರಶ್ನೆಗಳ ಸುರಿಮಳೆಯನ್ನೇ ಹಾಕಿದನು. ದೇವರ ಮತ್ತು ಮನುಷ್ಯನ ಮಧ್ಯೆ ಇದ್ದ ಭಾರಿ ಕಂದರವನ್ನು ಯೋಬನು ನೋಡುವಂತೆ ಮಾಡಿ, ಯೋಬನ ಶಕ್ತಿ ಅಥವಾ ಅವನ ಗ್ರಹಿಕೆಗೂ ಎಷ್ಟೋ ಮೀರಿ ಹೋಗುವ, ದೇವರ ಸೃಷ್ಟಿಯಲ್ಲಿ ಪ್ರತಿಬಿಂಬಿತವಾಗಿರುವ ವಿವೇಕ ಮತ್ತು ಶಕ್ತಿಯನ್ನು ಯೋಬನಿಗೆ ಬಲವಾಗಿ ಜ್ಞಾಪಕ ಹುಟ್ಟಿಸಿದನು. ದೇವರ ಸೃಷ್ಟಿಗಳ ಮೂಲಕ ತೋರಿಸಲ್ಪಟ್ಟಿರುವ ಸರ್ವಶಕ್ತನಾದ ದೇವರ ಭಯಭಕ್ತಿ ಹುಟ್ಟಿಸುವ ಶಕ್ತಿ ಮತ್ತು ಆಶ್ಚರ್ಯಕರವಾದ ವಿವೇಕದಿಂದ ಪರವಶನಾದ ಯೋಬನು, ತನಗೆ ಯೆಹೋವನೊಂದಿಗೆ ವಾದಿಸಲು ಕೂಡ ಇದ್ದ ಕೆಚ್ಚೆದೆಯನ್ನು ಯೋಚಿಸಿಯೇ ಎದೆಗುಂದಿದನು. ಆದುದರಿಂದ ಅವನಂದದ್ದು: “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.”—ಯೋಬ 42:5.
4. ಯೆಹೋವನ ಸೃಷ್ಟಿಗಳಿಂದ ನಾವು ಏನು ಗ್ರಹಿಸಬೇಕು, ಮತ್ತು ಇದನ್ನು ನೋಡಲು ತಪ್ಪುವವರ ಸ್ಥಿತಿಯೇನು?
4 ಅನೇಕ ಶತಮಾನಗಳ ಬಳಿಕ, ಯೆಹೋವನ ಗುಣಗಳನ್ನು ಆತನ ಸೃಷ್ಟಿಕಾರ್ಯಗಳ ಮೂಲಕ ನೋಡಸಾಧ್ಯವಿದೆಯೆಂಬುದನ್ನು ಒಬ್ಬ ಪ್ರೇರಿತ ಬೈಬಲ್ ಲೇಖಕನು ದೃಢಪಡಿಸಿದನು. ಅಪೊಸ್ತಲ ಪೌಲನು ರೋಮಾಪುರ 1:19, 20 ರಲ್ಲಿ ಬರೆದುದು: “ದೇವರ ವಿಷಯದಲ್ಲಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿಗಿ ತಿಳಿದದೆ; ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿಗಿ ತಿಳಿಸಿದನು. ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ.”
5. (ಎ) ಯಾವ ಪ್ರಕೃತಿಜನ್ಯ ಆವಶ್ಯಕತೆ ಮನುಷ್ಯರಿಗಿದೆ, ಮತ್ತು ಇದು ಕೆಲವರಿಂದ ಅಯೋಗ್ಯ ರೀತಿಯಲ್ಲಿ ತುಂಬಿಸಲ್ಪಡುತ್ತಿರುವುದು ಹೇಗೆ? (ಬಿ) ಆ್ಯಥೆನ್ಸಿನ ಗ್ರೀಕರಿಗೆ ಪೌಲನು ಮಾಡಿದ ಶಿಫಾರಸು ಯಾವುದು?
5 ಮನುಷ್ಯನು ಒಬ್ಬ ಹೆಚ್ಚು ಉನ್ನತವಾದ ಶಕ್ತಿಯನ್ನು ಆರಾಧಿಸುವ ಪ್ರಕೃತಿಜನ್ಯ ಆವಶ್ಯಕತೆಯುಳ್ಳವನಾಗಿ ಸೃಷ್ಟಿಸಲ್ಪಟ್ಟನು. ಡಾ. ಸಿ.ಜಿ. ಜಂಗ್, ತನ್ನ ದಿ ಅನ್ಡಿಸ್ಕವರ್ಡ್ ಸೆಲ್ಫ್ ಎಂಬ ಪುಸ್ತಕದಲ್ಲಿ, ಈ ಆವಶ್ಯಕತೆಗೆ, “ಮನುಷ್ಯನಿಗೆ ಮಾತ್ರ ವಿಶಿಷ್ಟವಾಗಿರುವ ಒಂದು ಹುಟ್ಟರಿವಿನ ಮನೋಭಾವ, ಮತ್ತು ಅದರ ಅಭಿವ್ಯಕ್ತಿಗಳನ್ನು ಮಾನವ ಇತಿಹಾಸದಲ್ಲೆಲ್ಲಾ ಅನುಸರಿಸುವುದು ಸಾಧ್ಯ” ಎಂದು ಹೇಳಿ ಸೂಚಿಸುತ್ತಾರೆ. ಅಪೊಸ್ತಲ ಪೌಲನು ಮನುಷ್ಯನ ಪ್ರಕೃತಿಜನ್ಯ ಆರಾಧನಾ ಆವಶ್ಯಕತೆಯ ವಿಷಯ ಮಾತಾಡಿದನು. ಆ್ಯಥೆನ್ಸ್ನ ಗ್ರೀಕರು ಮೂರ್ತಿಗಳನ್ನು ಮತ್ತು ಅನೇಕ ಜ್ಞಾತ ಮತ್ತು ಅಜ್ಞಾತ ದೇವತೆಗಳಿಗೆ ಬಲಿಪೀಠಗಳನ್ನು ಮಾಡಿದ್ದೇಕೆಂದು ಇದು ವಿವರಿಸಿತು. ಪೌಲನು ಅವರಿಗೆ ಸತ್ಯ ದೇವರನ್ನೂ ಗುರುತಿಸಿ, “ಅವರು ತಡವಾಡಿ ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂದು ಹೇಳಿ, ಅವರು ಸರಿಯಾಗಿ ಈ ಸಹಜ ಪ್ರೇರಣೆಯನ್ನು ಸತ್ಯದೇವರಾದ ಯೆಹೋವನನ್ನು ಹುಡುಕಿ ತೃಪ್ತಿಪಡಿಸಬೇಕೆಂದು ತೋರಿಸಿದನು. (ಅ. ಕೃತ್ಯಗಳು 17:22-30) ನಾವು ಆತನ ಸೃಷ್ಟಿಕ್ರಿಯೆಗಳಿಗೆ ಎಷ್ಟು ಹತ್ತಿರವಾಗಿದ್ದೇವೋ, ಆತನ ಗುಣ ಮತ್ತು ಲಕ್ಷಣಗಳನ್ನು ಗ್ರಹಿಸಲಿಕ್ಕೂ ಅಷ್ಟೇ ಹತ್ತಿರವಾಗಿದ್ದೇವೆ.
ಬೆರಗುಗೊಳಿಸುವ ಜಲಚಕ್ರ
6. ಜಲ ಚಕ್ರದಲ್ಲಿ ಯೆಹೋವನ ಯಾವ ಗುಣಗಳನ್ನು ನಾವು ನೋಡುತ್ತೇವೆ?
6 ದೃಷ್ಟಾಂತಕ್ಕೆ, ತುಪ್ಪುಳು ಸಮಾನವಾದ ಮೋಡಗಳಿಗೆ ಟನ್ನುಗಟ್ಟಲೆ ನೀರನ್ನು ಹಿಡಿದುಕೊಳ್ಳುವ ಸಾಮರ್ಥ್ಯದಿಂದ ಯೆಹೋವನ ಯಾವ ಗುಣವನ್ನು ನಾವು ಗ್ರಹಿಸುತ್ತೇವೆ? ನಾವು ಆತನ ಪ್ರೀತಿ ಮತ್ತು ವಿವೇಕವನ್ನು ನೋಡುತ್ತೇವೆ, ಹೇಗಂದರೆ ಆತನು ಹೀಗೆ ಭೂಮಿಯ ಆಶೀರ್ವಾದಕ್ಕಾಗಿ ಮಳೆ ನೀರನ್ನು ಒದಗಿಸುತ್ತಾನೆ. ಆತನು ಇದನ್ನು, ಪ್ರಸಂಗಿ 1:7 ರಲ್ಲಿ ಹೇಳಲಾಗಿರುವ ಜಲ ಚಕ್ರದಲ್ಲಿ ಸೇರಿರುವ ಒಂದು ಬೆರಗುಗೊಳಿಸುವ ವಿನ್ಯಾಸದ ಮೂಲಕ ಮಾಡುತ್ತಾನೆ: “ನದಿಗಳೆಲ್ಲಾ ಸಮುದ್ರಕ್ಕೆ ಹರಿದುಹೋಗುವವು; ಆದರೂ ಸಮುದ್ರವು ತುಂಬುವದಿಲ್ಲ; ಅವು ಎಲ್ಲಿಗೆ ಹರಿದುಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು.” ಬೈಬಲಿನ ಯೋಬ ಪುಸ್ತಕವು ಇದು ಹೇಗೆ ನಿರ್ದಿಷ್ಟವಾಗಿ ಸಂಭವಿಸುತ್ತದೆಂದು ಹೇಳುತ್ತದೆ.
7. ನೀರು ಸಾಗರದಿಂದ ಮೋಡಗಳಿಗೆ ಹೇಗೆ ಹೋಗುತ್ತದೆ, ಮತ್ತು ತುಪ್ಪುಳಿನಂತಿರುವ ಮೋಡಗಳು ಟನ್ನುಗಳಷ್ಟು ನೀರನ್ನು ಹಿಡಿದಿಡುವುದು ಹೇಗೆ?
7 ಶೀತಕಾಲದ ನುಗ್ಗು ಹೊನಲುಗಳು ಸಮುದ್ರಕ್ಕೆ ಹರಿದಾಗ ಅವು ಅಲ್ಲೇ ನಿಲ್ಲುವುದಿಲ್ಲ. ಯೆಹೋವನು “ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು.” ನೀರು ಹಬೆಯ ರೂಪದಲ್ಲಿ ಮತ್ತು ಅಂತಿಮವಾಗಿ ಸೂಕ್ಷ್ಮ ಮಂಜಾಗಿ ಇರುವ ಕಾರಣ, “ಮೋಡಗಳು ಆಕಾಶದಲ್ಲಿ ಆತನ ಪಕ್ಕಾ ಕೌಶಲದ ಅದ್ಭುತಕರವಾದ ಕಾರ್ಯವಾಗಿ ತೇಲಾಡುತ್ತಾ ತೂಗಾಡುತ್ತವೆ.” (ಯೋಬ 36:27; 37:16; ದ ನ್ಯೂ ಇಂಗ್ಲಿಷ್ ಬೈಬಲ್) ಮೋಡಗಳು ಮಂಜಾಗಿರುವ ತನಕ ತೇಲಾಡುತ್ತವೆ: “ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.” ಅಥವಾ, ಇನ್ನೊಂದು ಭಾಷಾಂತರ ಹೇಳುವಂತೆ: “ಆತನು ನೀರುಗಳನ್ನು ಮೇಘಸಮೂಹಗಳಲ್ಲಿ ಕಟ್ಟಿ ಇಡುತ್ತಾನೆ, ಮತ್ತು ಮೇಘಗಳು ಅವುಗಳ ಭಾರದಿಂದ ಬಿರಿಯುವುದಿಲ್ಲ.”—ಯೋಬ 26:8, ದ ಜೆರೂಸಲೇಮ್ ಬೈಬಲ್; NE.
8. ಯಾವ ವಿಭಿನ್ನ ಹೆಜ್ಜೆಗಳ ಮೂಲಕ “ಆಕಾಶದಲ್ಲಿನ (ನೀರಿನ, NW) ಬುದ್ದಲಿಗಳು” ಮಗುಚಿ ಹಾಕಲಾಗುತ್ತವೆ ಮತ್ತು ಜಲ ಚಕ್ರ ಮುಕ್ತಾಯಗೊಳ್ಳುತ್ತದೆ?
8 ಈ “ಆಕಾಶದಲ್ಲಿನ (ನೀರಿನ, NW) ಬುದ್ದಲಿಗಳನ್ನು ಮೊಗಚಿ” ಹಾಕಿ ಮಳೆಯು ಭೂಮಿಗೆ ಬೀಳುವಂತೆ ಮಾಡಬಲ್ಲವನು ಯಾರು? (ಯೋಬ 38:37) ಯಾರ “ಪಕ್ಕಾ ಕೌಶಲವು” ಅದನ್ನು ಮೊದಲಾಗಿ ಅಲ್ಲಿ ಹಾಕಿತ್ತೋ, ಯಾರು ‘ಆತನು ಮಾಡಿದ ಮಂಜಿನಿಂದ ಮಳೆಯನ್ನು ಹನಿಸುತ್ತಾನೋ’ ಆತನೇ. ಮತ್ತು ಮಂಜುಗಳಿಂದ ಮಳೆಯನ್ನು ಹನಿಸಲು ಬೇಕಾಗಿರುವುದೇನು? ತುಂತುರುಹನಿಯು ರೂಪುಗೊಳ್ಳಲಿಕ್ಕಾಗಿ ನಾಭಿಯಂತೆ ವರ್ತಿಸಲು ದೂಳು ಯಾ ಉಪ್ಪಿನ ಕಣಗಳಂತಹ—ಪ್ರತಿ ಕ್ಯೂಬಿಕ್ ಸೆಂಟಿಮೀಟರ್ ಗಾಳಿಯಲ್ಲಿ ಸಾವಿರಗಳಿಂದ ಲಕ್ಷಗಟ್ಟಲೆಗಳಷ್ಟು—ಸೂಕ್ಷ್ಮದರ್ಶಕೀಯ ಗಟ್ಟಿ ವಸ್ತುಗಳು ಇರತಕ್ಕದ್ದು. ಒಂದು ಸಾಮಾನ್ಯವಾದ ಮಳೆಹನಿಯನ್ನು ರೂಪಿಸಲು ಮೋಡದ ಹತ್ತು ಲಕ್ಷ ಸೂಕ್ಷ್ಮ ತುಂತುರು ಹನಿಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗುತ್ತದೆ. ಈ ಎಲ್ಲ ಬೆಳವಣಿಗೆಯ ಬಳಿಕವೇ ಮೋಡಗಳು ತಮ್ಮ ತೊರೆಗಳನ್ನು, ಅವು ಸಮುದ್ರಕ್ಕೆ ನೀರನ್ನು ಒಯ್ಯುವ ನದಿಗಳಾಗಿ ರೂಪಿಸಲಿಕ್ಕಾಗುವಂತೆ ತೊಟ್ಟಿಕ್ಕಿಸಬಲ್ಲವು. ಹೀಗೆ ಜಲ ಚಕ್ರ ತನ್ನ ಆವರ್ತವನ್ನು ಮುಗಿಸುತ್ತದೆ. ಮತ್ತು ಇದೆಲ್ಲ ಅಕಸ್ಮಾತ್ ಘಟನೆಯೊ? ಅಂಥ ದೃಷ್ಟಿಕೋನವು “ಅಕ್ಷಮ್ಯವೇ” ಸರಿ!
ಸೊಲೊಮೋನನ ವಿವೇಕದ ಒಂದೇ ಒಂದು ಮೂಲ
9. ಒಂದು ಇರುವೆ ಜಾತಿಯಲ್ಲಿ ಸೊಲೊಮೋನನು ಯಾವ ಗಮನಾರ್ಹ ಸಂಗತಿಯನ್ನು ಕಂಡನು?
9 ಪುರಾತನ ಲೋಕದಲ್ಲಿ ಸೊಲೊಮೋನನ ವಿವೇಕ ಸಾಟಿಯಿಲ್ಲದ್ದಾಗಿತ್ತು. ಆ ವಿವೇಕದಲ್ಲಿ ಅಧಿಕಾಂಶ ಯೆಹೋವನ ಸೃಷ್ಟಿಗೆ ಸಂಬಂಧಿಸಿದ್ದಾಗಿತ್ತು: “ಅವನು [ಸೊಲೊಮೋನನು] ಲೆಬನೋನಿನ ದೇವದಾರುವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದ ವರೆಗಿರುವ ಎಲ್ಲಾ ವನಸ್ಪತಿಗಳನ್ನೂ ಎಲ್ಲಾ ಪಶು ಪಕ್ಷಿ ಜಲಜಂತು ಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸಿದನು.” (1 ಅರಸು 4:33) ಇದೇ ರಾಜ ಸೊಲೊಮೋನನು ಬರೆದದ್ದು: “ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ. ಅದಕ್ಕೆ ನಾಯಕ ಅಧಿಕಾರಿ ಪ್ರಭುಗಳಿಲ್ಲದ್ದಿದರೂ ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿಡುವದು, ಕೊಯ್ಲಿನ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವದು.”—ಜ್ಞಾನೋಕ್ತಿ 6:6-8.
10. ಕೊಯ್ಲುಗಾರ ಇರುವೆಗಳ ಸಂಬಂಧದಲ್ಲಿ ಸೊಲೊಮೋನನ ವರ್ಣನೆ ಹೇಗೆ ನಿರ್ದೋಷೀಕರಿಸಲ್ಪಟ್ಟಿತು?
10 ಚಳಿಗಾಲದಲ್ಲಿ ಬೇಕಾಗುವ ಆಹಾರಕ್ಕಾಗಿ ಬೇಸಗೆಯಲ್ಲಿ ಆಹಾರವನ್ನು ಶೇಖರಿಸಿಡುವಂತೆ ಆ ಇರುವೆಗಳಿಗೆ ಯಾರು ಕಲಿಸಿದರು? ಬೀಜವನ್ನು ಕೊಯ್ಲಿನ ಕಾಲದಲ್ಲಿ ತಂದು ಚಳಿಗಾಲದಲ್ಲಿ ತಮ್ಮ ಉಪಯೋಗಕ್ಕಾಗಿ ಶೇಖರಿಸಿಡುವ ಇರುವೆಗಳ ಸಂಬಂಧದಲ್ಲಿ ಸೊಲೊಮೋನನ ಈ ಕಥನದ ನಿಷ್ಕೃಷ್ಟತೆಯನ್ನು ಅನೇಕ ಶತಮಾನಗಳ ತನಕ ಸಂದೇಹಿಸಲಾಗಿತ್ತು. ಇವುಗಳ ಇರುವಿಕೆಗೆ ಯಾರೂ ಯಾವ ರುಜುವಾತನ್ನೂ ಕಂಡುಹಿಡಿದಿರಲಿಲ್ಲ. ಆದರೆ 1871 ರಲ್ಲಿ, ಒಬ್ಬ ಬ್ರಿಟಿಷ್ ಪ್ರಕೃತಿ ಶಾಸ್ತ್ರಜ್ಞನು ಅವುಗಳ ಭೂಗತ ಕಣಜವನ್ನು ಕಂಡುಹಿಡಿಯಲಾಗಿ, ಅವುಗಳ ವಿಷಯ ವರದಿಮಾಡಿದ ಬೈಬಲಿನ ನಿಷ್ಕೃಷ್ಟತೆಯು ನಿರ್ದೋಷೀಕರಿಸಲ್ಪಟ್ಟಿತು. ಆದರೆ ಚಳಿಗಾಲದ ಚಳಿ ಬರಲಿದೆಯೆಂದು ಬೇಸಗೆಯಲ್ಲಿ ಮುನ್ನರಿವನ್ನು ಮತ್ತು ಅದರ ಸಂಬಂಧದಲ್ಲಿ ಏನು ಮಾಡಬೇಕೆಂಬ ವಿವೇಕವನ್ನು ಈ ಇರುವೆಗಳು ಹೇಗೆ ಪಡೆದವು? ಯೆಹೋವನ ಅನೇಕ ಸೃಷ್ಟಿಜೀವಿಗಳಿಗೆ ಅವುಗಳ ಬದುಕಿ ಉಳಿಯುವಿಕೆಗಾಗಿ ಅವುಗಳೊಳಗೆ ಒಂದು ವಿವೇಕದ ಯೋಜನೆಯನ್ನು ರಚಿಸಲಾಗಿದೆಯೆಂದು ಬೈಬಲು ತಾನೇ ವಿವರಿಸುತ್ತದೆ. ಈ ಕೊಯ್ಲುಗಾರ ಇರುವೆಗಳು ಸೃಷ್ಟಿಕರ್ತನಿಂದ ಈ ಆಶೀರ್ವಾದವನ್ನು ಪಡೆದಿರುತ್ತವೆ. ಜ್ಞಾನೋಕ್ತಿ 30:24, (NW) “ಅವು ಹುಟ್ಟರಿವಿನ ವಿವೇಕವುಳ್ಳವುಗಳು” ಎಂದು ಹೇಳುತ್ತದೆ. ಅಂಥ ವಿವೇಕ ಅಕಸ್ಮಾತ್ತಾಗಿ ಸಂಭವಿಸಸಾಧ್ಯವಿದೆಯೆಂದು ಹೇಳುವುದು ಅವಿವೇಕವಾಗಿದೆ; ವಿವೇಕವುಳ್ಳ ಸೃಷ್ಟಿಕರ್ತನು ಇದರ ಹಿಂದಿದ್ದಾನೆಂದು ಗ್ರಹಿಸಲು ತಪ್ಪುವುದು ಅಕ್ಷಮ್ಯ.
11. (ಎ) ಬೃಹದೇಹ್ದದ ಸಿಕಾಯ ಮರ ಅಷ್ಟು ಭಯಭಕ್ತಿಯನ್ನು ಹುಟ್ಟಿಸುವುದೇಕೆ? (ಬಿ) ದ್ಯುತಿ ಸಂಶೇಷ್ಲಣಾ ಕ್ರಿಯೆಯ ಪ್ರಥಮ ಪ್ರತಿಕ್ರಿಯೆಯಲ್ಲಿ ಅಷ್ಟು ಬೆರಗನ್ನುಂಟುಮಾಡುವ ವಿಷಯ ಯಾವುದು?
11 ಒಂದು ಬೃಹದ್ ಸಿಕಾಯ ವೃಕ್ಷದ ಬುಡದಲ್ಲಿ ನಿಲ್ಲುವ ಒಬ್ಬ ಮನುಷ್ಯನು ಅದರ ಮಹಾ ಘನತೆಯನ್ನು ನೋಡಿ ಸೋಜಿಗಗೊಂಡವನಾಗಿ ಒಂದು ಚಿಕ್ಕ ಇರುವೆಯ ಅನಿಸಿಕೆಯುಳ್ಳವನಾಗುವುದು ಗ್ರಾಹ್ಯ. ಆ ಮರದ ಗಾತ್ರ ಭಯಭಕ್ತಿ ಉತ್ಪಾದಕ: 90 ಮೀಟರ್ ಎತ್ತರ, 11 ಮೀಟರ್ ವ್ಯಾಸ, ತೊಗಟೆಯ ದಪ್ಪ 0.6 ಮೀಟರ್, ಅದರ ಬೇರು ಮೂರು ಯಾ ನಾಲ್ಕು ಎಕ್ರೆ ಹರಡಿರುತ್ತದೆ. ಆದರೂ ಅದರ ಬೆಳವಣಿಗೆಯ ರಸಾಯನ ಮತ್ತು ಭೌತ ವಿಜ್ಞಾನ ಇನ್ನೂ ಹೆಚ್ಚು ಭಯಭಕ್ತಿ ಉತ್ಪಾದಕವಾಗಿದೆ. ಸಕ್ಕರೆಗಳನ್ನು ತಯಾರಿಸಲಿಕ್ಕಾಗಿ ಮತ್ತು ಆಮ್ಲಜನಕವನ್ನು ಬಿಟ್ಟುಬಿಡಲಿಕ್ಕಾಗಿ—ಸುಮಾರು 70 ರಾಸಾಯನಿಕ ಪ್ರತಿಕ್ರಿಯೆಗಳಿದ್ದರೂ ಎಲ್ಲವೂ ಅರ್ಥವಾಗದೆ ಇರುವ, ದ್ಯುತಿ ಸಂಶೇಷ್ಲಣಾ ಕ್ರಿಯೆ (ಫೋಟೋಸಿಂತೆಸಿಸ್) ಎಂದು ಕರೆಯಲ್ಪಡುವ ಕಾರ್ಯವಿಧಾನ—ಅದರ ಎಲೆಗಳು ಬೇರಿನ ಮೂಲಕ ನೀರನ್ನೂ ಗಾಳಿಯಿಂದ ಕಾರ್ಬನ್ ಡೈಆಕ್ಸೈಡನ್ನೂ ಸೂರ್ಯನಿಂದ ಶಕ್ತಿಯನ್ನೂ ಪಡೆಯುತ್ತವೆ. ಆಶ್ಚರ್ಯಕರವಾಗಿ, ಪ್ರಥಮ ಪ್ರತಿಕ್ರಿಯೆ ತಕ್ಕ ಬಣ್ಣ, ತಕ್ಕ ತರಂಗಮಾನವಿರುವ ಸೂರ್ಯಪ್ರಕಾಶದ ಮೇಲೆ ಹೊಂದಿಕೊಂಡಿದೆ; ಇಲ್ಲದಿರುವಲ್ಲಿ ಫೋಟೋಸಿಂತೆಸಿಸ್ ಕಾರ್ಯಗತಿಯನ್ನು ಆರಂಭಿಸಲು ಅದನ್ನು ಕ್ಲೋರೋಫಿಲ್ ಕಣಗಳು ಹೀರಿಕೊಳ್ಳುವುದಿಲ್ಲ.
12. (ಎ) ಸಿಕಾಯ ಮರವು ನೀರನ್ನು ಉಪಯೋಗಿಸುವ ರೀತಿಯಲ್ಲಿ ಗಮನಾರ್ಹವಾದದೇನ್ದು? (ಬಿ) ಸಸ್ಯ ಬೆಳವಣಿಗೆಯಲ್ಲಿ ಸಾರಜನಕವು ಏಕೆ ಅಗತ್ಯ, ಮತ್ತು ಅದರ ಚಕ್ರ ಹೇಗೆ ಪೂರ್ತಿಗೊಳ್ಳುತ್ತದೆ?
12 ಇದಲ್ಲದೆ ಈ ಮರವು ಬೇರಿನಿಂದ ನೀರಿನ ಸ್ತಂಭಗಳನ್ನು ತನ್ನ 90 ಮೀಟರ್ ಬೃಹದೇಹ್ದದ ತುದಿಗೆ ಎಳೆಯಬಲ್ಲದೆಂಬುದೂ ಆಶ್ಚರ್ಯ ಹುಟ್ಟಿಸುವ ನಿಜತ್ವವಾಗಿದೆ. ಫೋಟೋಸಿಂತೆಸಿಸ್ಗೆ ಬೇಕಾಗುವುದಕ್ಕಿಂತಲೂ ಹೆಚ್ಚು ನೀರು ಮೇಲೆ ಎಳೆಯಲ್ಪಡುತ್ತದೆ. ಮಿಕ್ಕದ್ದು ಎಲೆಗಳ ಮೂಲಕ ಗಾಳಿಗೆ ವಿಸರ್ಜಿಸಲ್ಪಡುತ್ತದೆ. ನಾವು ಬೆವರಿನಿಂದ ತಣ್ಣಗಾಗುವಂತೆಯೇ ಇದು ಮರವನ್ನು ನೀರಿನಿಂದ ತಣ್ಣಗಾಗಿಸುತ್ತದೆ. ಬೆಳವಣಿಗೆಗಾಗಿ ಸಸಾರಜನಕವನ್ನು ರೂಪಿಸಲು, ಸಾರಜನಕವನ್ನು ಸಕ್ಕರೆಗಳಿಗೆ, ಯಾ ಶರ್ಕರ ಪಿಷ್ಟಿಗಳಿಗೆ ಸೇರಿಸುವುದು ಅಗತ್ಯ. ಎಲೆಗೆ ಗಾಳಿಯಿಂದ ದೊರೆಯುವ ಅನಿಲರೂಪದ ಸಾರಜನಕವನ್ನು ಉಪಯೋಗಿಸಲಾಗುವುದಿಲ್ಲ. ಆದರೆ ಮಣ್ಣಿನ ಪರಸ್ಪರಾವಲಂಬಿ ಜೀವಿಗಳು ಭೂಮಿಯಲ್ಲಿರುವ ಅನಿಲರೂಪದ ಸಾರಜನಕವನ್ನು ನೀರಿನಲ್ಲಿ ಕರಗುವ ನೈಟ್ರೇಟ್ ಮತ್ತು ನೈಟ್ರೇಟ್ಗಳನ್ನಾಗಿ ಪರಿವರ್ತಿಸಿ, ಅದು ಆ ಬಳಿಕ ಬೇರಿನ ಮೂಲಕ ಎಲೆಗಳಿಗೆ ಪ್ರಯಾಣ ಬೆಳಸುತ್ತದೆ. ಈ ಸಾರಜನಕವನ್ನು ತಮ್ಮ ಸಸಾರಜನಕದಲ್ಲಿ ಬಳಸಿರುವ ಸಸ್ಯಗಳೂ ಪ್ರಾಣಿಗಳೂ ಸತ್ತು ಕೊಳೆಯುವಾಗ, ಸಾರಜನಕ ಹೊರಬಿಡಲ್ಪಡುತ್ತದೆ, ಮತ್ತು ಹೀಗೆ ಸಾರಜನಕ ಚಕ್ರ ಪೂರ್ತಿಗೊಳ್ಳುತ್ತದೆ. ಇದೆಲ್ಲದರಲ್ಲಿ, ಸೇರಿರುವ ಜಟಿಲತೆ ತತ್ತರಗುಟ್ಟಿಸುವಂತಹದ್ದು, ಆಕಸ್ಮಿಕ ಸಂಭವವು ನಡೆಸತಕ್ಕ ಒಂದು ಕೆಲಸವೇ ಅಲ್ಲ.
ವಾಕ್ಶಕ್ತಿ ಯಾ ನುಡಿಗಳು ಯಾ ಧ್ವನಿ ಇಲ್ಲದೆ ಅವು ಮಾತಾಡುತ್ತವೆ!
13. ನಕ್ಷತ್ರರಂಜಿತ ಆಕಾಶಗಳು ದಾವೀದನಿಗೆ ಏನು ಪ್ರಕಟಿಸಿದವು, ಮತ್ತು ಅವು ನಮಗೇನು ಹೇಳುವುದನ್ನು ಮುಂದುವರಿಸಿವೆ?
13 ಪ್ರೇಕ್ಷಕರನ್ನು ಪೂಜ್ಯ ಭಾವನೆಯಿಂದ ತುಂಬಿಸುವ ನಕ್ಷತ್ರರಂಜಿತ ರಾತ್ರಿಯ ಆಕಾಶದಿಂದ ಬರುವ ಭಾವನೆಯು ಸೃಷ್ಟಿಕರ್ತನ ಮೇಲೆ ಎಂತಹ ಭಯಭಕ್ತಿ ಉತ್ಪಾದಕ ಆಲೋಚನೆಯಾಗಿದೆ! ಕೀರ್ತನೆ 8:3, 4 ರಲ್ಲಿ, ದಾವೀದನು ತನಗಾದ ಭಕ್ತಿಭಾವವನ್ನು ವ್ಯಕ್ತಪಡಿಸುತ್ತಾನೆ: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ನೀನು ಯಾಕೆ ಲಕ್ಷ್ಯವಿಡಬೇಕು?” ಯಾರಿಗೆ ನೋಡಲು ಕಣ್ಣುಗಳಿವೆಯೋ, ಕೇಳಲು ಕಿವಿಗಳಿವೆಯೋ, ಮತ್ತು ಅನಿಸಲು ಹೃದಯವಿದೆಯೋ, ಅಂಥವರಿಗೆ ಈ ನಕ್ಷತ್ರರಂಜಿತ ಆಕಾಶಗಳು, ದಾವೀದನೊಡನೆ ಮಾತಾಡಿದಂತೆಯೇ ಮಾತಾಡುತ್ತವೆ: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ.”—ಕೀರ್ತನೆ 19:1-4.
14. ನಕ್ಷತ್ರಗಳಲ್ಲಿ ಒಂದರ ಬಲವತ್ತಾದ ಶಕ್ತಿಯು ನಮಗೆ ಅಷ್ಟು ಮಹತ್ವದ್ದೇಕೆ?
14 ನಮಗೆ ನಕ್ಷತ್ರಗಳ ಪರಿಚಯ ಎಷ್ಟು ಹೆಚ್ಚಾಗಿದೆಯೋ ಅಷ್ಟು ಗಟ್ಟಿಯಾಗಿ ಅವು ನಮ್ಮೊಂದಿಗೆ ಮಾತಾಡುತ್ತವೆ. ಯೆಶಾಯ 40:26 ರಲ್ಲಿ, ಅವುಗಳ ಭಾರಿ ಶಕ್ತಿಯನ್ನು ಗಮನಿಸುವಂತೆ ನಾವು ಆಮಂತ್ರಿಸಲ್ಪಡುತ್ತೇವೆ: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” ಅವುಗಳಲ್ಲಿ ಒಂದಾದ ನಮ್ಮ ಸೂರ್ಯನ ಗುರುತ್ವಾಕರ್ಷಣ ಶಕ್ತಿ ಮತ್ತು ಬಲವತ್ತಾದ ಶಕ್ತಿಯೇ ಭೂಮಿಯನ್ನು ಅದರ ಕಕ್ಷೆಯಲ್ಲಿ ಹಿಡಿದಿಟ್ಟು, ಸಸ್ಯಗಳನ್ನು ಬೆಳೆಸಿ, ನಮ್ಮನ್ನು ಬೆಚ್ಚಗಾಗಿಟ್ಟು, ಭೂಮಿಯಲ್ಲಿರುವ ಸಕಲ ಜೀವವನ್ನು ಸಾಧ್ಯಮಾಡುತ್ತದೆ. ಅಪೊಸ್ತಲ ಪೌಲನು ಪ್ರೇರಿತನಾಗಿ ಹೇಳಿದ್ದು: “ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚುಕಡಿಮೆಯುಂಟಷ್ಟೆ.” (1 ಕೊರಿಂಥ 15:41) ನಮ್ಮ ಸೂರ್ಯನಂತಹ ಹಳದಿ ನಕ್ಷತ್ರಗಳು, ನೀಲ ನಕ್ಷತ್ರಗಳು, ಕೆಂಪು ದೈತ್ಯ ನಕ್ಷತ್ರಗಳು, ಬಿಳಿ ಗುಜ್ಜಾರಿ ನಕ್ಷತ್ರಗಳು, ನ್ಯೂಟ್ರಾನ್ ನಕ್ಷತ್ರಗಳು, ಮತ್ತು ಅಸಂವೇದ್ಯ ಶಕ್ತಿಯನ್ನು ಹೊರಬಿಡುವ ಸಿಡಿಯುವ ಸೂಪರ್ನೋವಗಳು—ಇವನ್ನು ವಿಜ್ಞಾನವು ತಿಳಿದಿದೆ.
15. ಅನೇಕ ನಿರ್ಮಾಪಕರು ಸೃಷ್ಟಿಯಿಂದ ಯಾವುದನ್ನು ಕಲಿತಿದ್ದಾರೆ ಮತ್ತು ಅನುಕರಿಸಲು ಪ್ರಯತ್ನಿಸಿದ್ದಾರೆ?
15 ಅನೇಕ ನಿರ್ಮಾಪಕರು ಸೃಷ್ಟಿಯಿಂದ ಕಲಿತು ಅನೇಕ ಜೀವಿಗಳ ಸಾಮರ್ಥ್ಯಗಳನ್ನು ನಕಲು ಮಾಡಲು ಪ್ರಯತ್ನಿಸಿದ್ದಾರೆ. (ಯೋಬ 12:7-10) ಸೃಷ್ಟಿಯ ಕೆಲವು ಎದ್ದುಕಾಣುವ ಅಂಶಗಳನ್ನು ಗಮನಿಸಿರಿ. ಕಡಲನೀರನ್ನು ಉಪ್ಪಿಲ್ಲದ್ದಾಗಿ ಮಾಡುವ ಗ್ರಂಥಿಗಳಿರುವ ಕಡಲಹಕ್ಕಿಗಳು; ವಿದ್ಯುತ್ತನ್ನು ಉತ್ಪಾದಿಸುವ ಮೀನು ಮತ್ತು ಈಲ್ ಹಾವು ಮೀನುಗಳು; ಶೀತಲ ಬೆಳಕನ್ನುಂಟುಮಾಡುವ ಮೀನು, ಹುಳುಗಳು ಮತ್ತು ಕೀಟಗಳು; ಶ್ರವಣ ಶಕ್ತಿಯನ್ನು ಬಳಸುವ ಬಾವಲಿಗಳು ಮತ್ತು ಹಂದಿಮೀನುಗಳು; ಕಾಗದವನ್ನು ತಯಾರಿಸುವ ಕಣಜ ಹುಳುಗಳು; ಸೇತುವೆಗಳನ್ನು ಕಟ್ಟುವ ಇರುವೆಗಳು; ಅಣೆಕಟ್ಟುಗಳನ್ನು ಕಟ್ಟುವ ಬೀವರ್ಗಳು; ತಮ್ಮೊಳಗೇ ಶಾಖಭಾರಮಾಪಕಗಳಿರುವ ಹಾವುಗಳು; ನೀರಿನೊಳಗೆ ಉಸಿರಾಡಲು ಸಾಧನಗಳಿರುವ ಮತ್ತು ಮುಳುಕು ಗಂಟೆಗಳಿರುವ ಕೊಳದ ಕೀಟಗಳು; ಜೆಟ್ ಮುನ್ನೂಕುವ ಶಕ್ತಿಯನ್ನು ಬಳಸುವ ಅಷ್ಟಪಾದಿಗಳು; ಏಳು ರೀತಿಯ ಬಲೆಗಳನ್ನು, ಕೀಲು ಕವಾಟಗಳನ್ನು, ಜಾಲಗಳನ್ನು, ಮತ್ತು ತೊಗಲಬಾರುಗಳನ್ನು ಮಾಡುವ, ಮತ್ತು ಆಕಾಶಬುಟ್ಟಿಗರಾಗಿ ಮಹಾ ಎತ್ತರಗಳಲ್ಲಿ ಸಾವಿರಾರು ಕಿಲೊಮೀಟರ್ ಪ್ರಯಾಣಿಸುವ, ಮರಿಗಳಿರುವ ಜೇಡರು; ಸಬ್ಮರೀನ್ಗಳಂತೆ ಪವ್ಲನ ತೊಟ್ಟಿಗಳನ್ನು ಬಳಸುವ ಮೀನುಗಳು ಮತ್ತು ವಲ್ಕವಂತ ಪ್ರಾಣಿಗಳು; ವಲಸೆಹೋಗುವ ಅದ್ಭುತಕಾರ್ಯ—ವಿಜ್ಞಾನಕ್ಕಿರುವ ವಿವರಿಸುವ ಸಾಮರ್ಥ್ಯಕ್ಕೆ ಮೀರಿದ್ದು—ಗಳನ್ನು ಮಾಡುವ ಪಕ್ಷಿಗಳು, ಕೀಟಗಳು, ಕಡಲಾಮೆಗಳು, ಮೀನು ಮತ್ತು ಸಸ್ತನಿ ಜೀವಿಗಳು.
16. ವಿಜ್ಞಾನವು ಕಂಡುಹಿಡಿಯುವುದಕ್ಕೆ ಸಾವಿರಾರು ವರ್ಷಗಳ ಮೊದಲು ಯಾವ ವೈಜ್ಞಾನಿಕ ಸತ್ಯಗಳನ್ನು ಬೈಬಲು ದಾಖಲೆ ಮಾಡಿದೆ?
16 ವಿಜ್ಞಾನವು ತಿಳಿಯುವುದಕ್ಕೆ ಸಾವಿರಾರು ವರ್ಷಗಳಿಗೆ ಮೊದಲೇ ಬೈಬಲು ವೈಜ್ಞಾನಿಕ ಸತ್ಯಗಳನ್ನು ದಾಖಲೆ ಮಾಡಿತು. ಮೋಶೆಯ ಧರ್ಮಶಾಸ್ತ್ರವು (ಸಾ.ಶ.ಪೂ. 16 ನೆಯ ಶತಮಾನ) ರೋಗಾಣುಗಳಿವೆಯೆಂಬ ಪ್ರಜ್ಞೆಯನ್ನು ಪ್ಯಾಸ್ಟರ್ಗಿಂತ ಸಾವಿರಾರು ವರ್ಷಗಳ ಮೊದಲೇ ಪ್ರತಿಬಿಂಬಿಸಿತು. (ಯಾಜಕಕಾಂಡ, 13, 14 ಅಧ್ಯಾಯಗಳು) ಸಾ.ಶ.ಪೂ. 15 ನೆಯ ಶತಮಾನದಲ್ಲಿ, ಯೋಬ ಹೇಳಿದ್ದು: “ಆತನು ಶೂನ್ಯದ ಮೇಲೆ . . . ಭೂಲೋಕವನ್ನು . . . ತೂಗಹಾಕಿದ್ದಾನೆ.” (ಯೋಬ 26:7) ಕ್ರಿಸ್ತನಿಗೆ ಒಂದು ಸಾವಿರ ವರ್ಷಗಳ ಪೂರ್ವದಲ್ಲಿ, ಸೊಲೊಮೋನನು ರಕ್ತ ಪರಿಚಲನೆಯ ವಿಷಯದಲ್ಲಿ ಬರೆದನು. ಅದರ ಕುರಿತು ಕಲಿಯಲು ವೈದ್ಯಕೀಯ ವಿಜ್ಞಾನಕ್ಕೆ 15 ನೆಯ ಶತಮಾನದ ತನಕ ಕಾಯಬೇಕಾಯಿತು. (ಪ್ರಸಂಗಿ 12:6) ಇದಕ್ಕೆ ಮೊದಲು, ಕೀರ್ತನೆ 139:16, ಅನುವಂಶೀಯತೆಯ ಸಂಕೇತ ಪದ್ಧತಿಯನ್ನು ಪ್ರತಿಬಿಂಬಿಸಿತು: “ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮ ದಿನಗಳು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” ಸಾ.ಶ.ಪೂ. 7 ನೆಯ ಶತಕದಲ್ಲಿ, ಪಕ್ಷಿಗಳು ವಲಸೆ ಹೋಗುವುದನ್ನು ನಿಸರ್ಗ ವಿಜ್ಞಾನಿಗಳು ಗ್ರಹಿಸುವ ಮೊದಲೇ, ಯೆರೆಮೀಯನು, ಯೆರೆಮೀಯ 8:7 ರಲ್ಲಿ ವರದಿಸಿದಂತೆ ಬರೆದುದು: “ಆಕಾಶದಲ್ಲಿ ಹಾರುವ ಬಕವೂ ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ, ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ ತಮ್ಮ ಗಮನಾಗಮನ ಸಮಯಗಳನ್ನು ಗಮನಿಸುತ್ತವೆ.”
ವಿಕಾಸವಾದಿಗಳು ಆರಿಸಿಕೊಳ್ಳುವ “ಸೃಷ್ಟಿಕರ್ತನು”
17. (ಎ) ಅದ್ಭುತ ಸೃಷ್ಟಿಕ್ರಿಯೆಗಳ ಹಿಂದೆ ಬುದ್ಧಿಶಕ್ತಿಯ ಒಬ್ಬ ಸೃಷ್ಟಿಕರ್ತನನ್ನು ನೋಡಲು ನಿರಾಕರಿಸುವವರ ವಿಷಯದಲ್ಲಿ ರೋಮಾಪುರ 1:21-23 ಏನು ಹೇಳುತ್ತದೆ? (ಬಿ) ಒಂದು ಅರ್ಥದಲ್ಲಿ, ವಿಕಾಸವಾದಿಗಳು ಯಾರನ್ನು ತಮ್ಮ “ಸೃಷ್ಟಿಕರ್ತ” ನೆಂದು ಆರಿಸಿಕೊಳ್ಳುತ್ತಾರೆ?
17 ಈ ಸೃಷ್ಟಿಸಲ್ಪಟ್ಟ ಅದ್ಭುತಗಳ ಹಿಂದೆ ಒಬ್ಬ ಬುದ್ಧಿಶಕ್ತಿಯ ಸೃಷ್ಟಿಕರ್ತನನ್ನು ವಿವೇಚಿಸಿ ತಿಳಿಯಲು ನಿರಾಕರಿಸುವ ಕೆಲವರ ಕುರಿತು ಒಂದು ಶಾಸ್ತ್ರವಚನವು ಹೇಳುವುದು: “ಅವರು ವಿಚಾರ ಮಾಡಿಮಾಡಿ ಫಲ ಕಾಣಲಿಲ್ಲ; ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಯಿತು. ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚರಾದರು. ಲಯವಿಲ್ಲದ ದೇವರ ಮಹಿಮೆಯನ್ನು ಬಿಟ್ಟು ಅದಕ್ಕೆ ಬದಲಾಗಿ ಲಯವಾಗುವ ಮನುಷ್ಯ ಪಶು ಪಕ್ಷಿ ಸರ್ಪಾದಿಗಳ ಮೂರ್ತಿಯನ್ನು ಮಾಡಿಕೊಂಡರು.” “ಅವರು ಸತ್ಯದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವಿಸುವವರಾದರು.” (ರೋಮಾಪುರ 1:21-23, 25) ವಿಕಾಸವಾದದ ವಿಜ್ಞಾನಿಗಳೂ ಹೀಗೆಯೇ. ಅವರು ಕಾರ್ಯತಃ, ಏಕಾಣು ಪ್ರಾಣಿವರ್ಗದ ಒಂದು ಕಲ್ಪನಾತ್ಮಕವಾದ ಆರೋಹಣ ಸರಪಣಿ—ಹುಳುಗಳು, ಮೀನು, ಸ್ಥಲ ಜಲೋಭಯ ಜೀವಿಗಳು, ಸರೀಸೃಪ ಜೀವಿಗಳು, ಸಸ್ತನಿ ಪ್ರಾಣಿಗಳು ಮತ್ತು “ವಾನರ ಮನುಷ್ಯರನ್ನು”—ಯನ್ನು ತಮ್ಮ “ಸೃಷ್ಟಿಕರ್ತ” ನೆಂದು ಮಹಿಮೆಪಡಿಸುತ್ತಾರೆ. ಆದರೂ, ಆ ಸರಪಣಿಯನ್ನು ಆರಂಭಿಸಲು ನಿಜವಾಗಿಯೂ ಒಂದು ಸರಳ ಏಕಾಣುಜೀವಿಯು ಇಲ್ಲವೆಂಬುದು ಅವರಿಗೆ ಗೊತ್ತು. ಅತಿ ಸರಳವಾದ ಏಕಾಣುಜೀವಿಯಲ್ಲಿ ಸಾವಿರಾರು ರಾಸಾಯನಿಕ ಪ್ರತಿಕ್ರಿಯೆಗಳು ಏಕಕಾಲದಲ್ಲಿ ನಡೆಯುತ್ತಿರುವ 10,000 ಕೋಟಿ ಪರಮಾಣುಗಳಿವೆ.
18, 19. (ಎ) ಜೀವವನ್ನು ಆರಂಭಿಸಿದ ಖ್ಯಾತಿಗೆ ಯೋಗ್ಯನಾದಾತನು ಯಾರು? (ಬಿ) ಯೆಹೋವನ ಸೃಷ್ಟಿಯಲ್ಲಿ ಎಷ್ಟನ್ನು ನಾವು ನೋಡಬಲ್ಲೆವು?
18 ಯೆಹೋವ ದೇವರು ಜೀವವನ್ನು ಸೃಷ್ಟಿಸಿದಾತನು. (ಕೀರ್ತನೆ 36:9) ಆತನು ಮಹಾ ಆದಿ ಕಾರಣನು. ಆತನ ಯೆಹೋವ ಎಂಬ ನಾಮದ ಅರ್ಥವು “ಆತನು ಉಂಟಾಗಿಸುತ್ತಾನೆ.” ಆತನ ಸೃಷ್ಟಿಕ್ರಿಯೆಗಳೋ ನಮ್ಮ ಲೆಕ್ಕಕ್ಕೆ ಮೀರಿವೆ. ಮನುಷ್ಯನಿಗೆ ತಿಳಿದಿರುವುದಕ್ಕಿಂತಲೂ ಎಷ್ಟೋ ಲಕ್ಷ ಹೆಚ್ಚು ಸೃಷ್ಟಿವಸ್ತುಗಳಿವೆಯೆಂಬುದು ಖಂಡಿತ. ಕೀರ್ತನೆ 104:24, 25, ಇದರ ಸುಳಿವನ್ನು ಕೊಡುತ್ತದೆ: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ.” ಯೋಬ 26:14, (NW) ಇದರ ವಿಷಯದಲ್ಲಿ ಸ್ಪಷ್ಟವಾಗಿಗಿ ಮಾತಾಡುತ್ತದೆ: “ನೋಡು! ಇವು ಆತನ ಮಾರ್ಗಗಳ ಕೇವಲ ಆರಂಭಗಳಾಗಿವೆ, ಮತ್ತು ಆತನ ವಿಷಯದಲ್ಲಿ ಎಷ್ಟು ಸೂಕ್ಷ್ಮಶಬ್ದವು ಮಾತ್ರ ಕೇಳಲ್ಪಟ್ಟಿದೆ! ಆತನ ಪ್ರಬಲವಾದ ಘರ್ಜನೆಯ ವಿಷಯದಲ್ಲಿ ಯಾರು ತಾನೇ ಗ್ರಹಿಕೆಯನ್ನು ತೋರಿಸಾರು?” ನಾವು ಕೆಲವು ಅಂಚುಗಳನ್ನು ನೋಡುತ್ತೇವೆ, ಕೆಲವು ಪಿಸುಮಾತುಗಳನ್ನು ಕೇಳುತ್ತೇವೆ, ಆದರೆ ಆತನ ಪ್ರಬಲವಾದ ಸಿಡಿಲಿನ ಪೂರ್ಣ ಮಹತ್ವವನ್ನು ಗ್ರಹಿಸುವುದು ನಮಗೆ ಮೀರಿದ್ದು.
19 ಆದರೂ, ಆತನ ಭೌತಿಕ ಸೃಷ್ಟಿಯ ಮೂಲಕ ಆತನನ್ನು ನೋಡುವುದಕ್ಕಿಂತಲೂ ಹೆಚ್ಚು ಉತ್ತಮವಾದ ಒಂದು ಮೂಲವು ನಮಗಿದೆ. ಆ ಹೆಚ್ಚು ಉತ್ತಮ ಮೂಲವು ಆತನ ವಾಕ್ಯವಾದ ಬೈಬಲೇ. ನಾವೀಗ ಮುಂದಿನ ಲೇಖನದಲ್ಲಿ ಆ ಮೂಲಕ್ಕೆ ತಿರುಗುತ್ತೇವೆ.
ನಿಮಗೆ ಜ್ಞಾಪಕವಿದೆಯೆ?
◻ ಬಿರುಗಾಳಿಯಲ್ಲಿ ಯೆಹೋವನು ಯೋಬನೊಂದಿಗೆ ಮಾತಾಡಿದಾಗ ಅವನು ಏನು ಕಲಿತನು?
◻ ಕೆಲವರು ಅಕ್ಷಮ್ಯರೆಂದು ಪೌಲನು ಏಕೆ ಹೇಳಿದನು?
◻ ಜಲ ಚಕ್ರವು ಹೇಗೆ ಕಾರ್ಯ ನಡೆಸುತ್ತದೆ?
◻ ಸೂರ್ಯನ ಬೆಳಕು ನಮಗೆ ಯಾವ ಪ್ರಾಮುಖ್ಯ ಸಂಗತಿಗಳನ್ನು ಮಾಡುತ್ತದೆ?
◻ ವಿಜ್ಞಾನವು ಕಂಡುಹಿಡಿಯುವ ಮೊದಲು, ಬೈಬಲು ಯಾವ ವೈಜ್ಞಾನಿಕ ಸತ್ಯಗಳನ್ನು ತಿಳಿಸಿತು?