ದೇವರು ನಿಮ್ಮನ್ನು ನಿಜವಾಗಿ ತಿಳಿದಿದ್ದಾನೋ?
“ಯೆಹೋವನೇ, . . . ನನ್ನ ನಡತೆಯೆಲ್ಲವೂ ನಿನಗೆ ಗೋಚರವಾಗಿದೆ.”—ಕೀರ್ತನೆ 139:1, 3.
1. ನಾವು ಎದುರಿಸುತ್ತಿರುವ ಚಿಂತೆಗಳನ್ನು, ಸಮಸ್ಯೆಗಳನ್ನು, ಮತ್ತು ಒತ್ತಡಗಳನ್ನು ‘ಇತರರು ತಿಳುಕೊಳ್ಳುವದಿಲ್ಲ’ ಎಂಬ ಭಾವನೆಯು ಎಷ್ಟು ವ್ಯಾಪಕವಾಗಿದೆ?
ನೀವು ಎದುರಿಸುತ್ತಿರುವ ಚಿಂತೆಗಳನ್ನು, ಒತ್ತಡಗಳನ್ನು, ಮತ್ತು ಸಮಸ್ಯೆಗಳನ್ನು ಯಾರಾದರೂ ನಿಜವಾಗಿ ತಿಳಿದುಕೊಳ್ಳುತ್ತಾರೋ? ತಮಗೇನು ಸಂಭವಿಸುತ್ತಿದೆಯೆಂದು ಲಕ್ಷ್ಯಿಸಲು ಯಾವ ಕುಟುಂಬವೂ ಸಂಬಂಧಿಕರೂ ಇರದ, ಯುವಕರೂ ವೃದ್ಧರೂ ಆಗಿರುವ ಲಕ್ಷಾಂತರ ಜನರು ಲೋಕದಾದ್ಯಂತ ಇದ್ದಾರೆ. ಕುಟುಂಬಗಳ ಒಳಗೆ ಸಹ, ಅನೇಕ ಪತ್ನಿಯರು—ಹೌದು, ಗಂಡಂದಿರು ಕೂಡ—ತಮ್ಮ ವಿವಾಹ ಸಂಗಾತಿಗಳು, ತಮ್ಮನ್ನು ಕುಗ್ಗಿಸುತ್ತಾ ಇರುವ ಒತ್ತಡಗಳನ್ನು ನಿಜವಾಗಿ ಗ್ರಹಿಸುವುದಿಲ್ಲವೆಂದು ಭಾವಿಸುತ್ತಾರೆ. ಕೆಲವೊಮ್ಮೆ ಹತಾಶೆಯಿಂದ ಅವರು ಪ್ರತಿಭಟಿಸುವುದು: “ನೀನು ತಿಳುಕೊಳ್ಳುವುದಿಲ್ಲ!” ತಮ್ಮನ್ನು ಸಹ ಯಾರೂ ತಿಳುಕೊಳ್ಳುವುದಿಲ್ಲವೆಂದು ತೀರ್ಮಾನಿಸಿರುವ ಯುವ ಜನರಾದರೊ ಅನೇಕರಿದ್ದಾರೆ. ಆದರೂ, ಇತರರಿಂದ ಹೆಚ್ಚಿನ ತಿಳುವಳಿಕೆಯನ್ನು ಹಾರೈಸುವವರ ನಡುವೆ, ಯಾರ ಜೀವಿತಗಳು ಅನಂತರ ವಿಶೇಷಾರ್ಥವನ್ನು ತೆಗೆದುಕೊಂಡಿವೆಯೋ ಅವರೂ ಕೆಲವರಾಗಿದ್ದಾರೆ. ಅದು ಹೇಗೆ ಸಾಧ್ಯ?
2. ಹೇರಳವಾದ ಸಂತುಷ್ಟಿಕರ ಜೀವಿತಗಳನ್ನು ಪಡೆಯಲು ಯಾವುದು ಯೆಹೋವನ ಆರಾಧಕರನ್ನು ಶಕ್ತರನ್ನಾಗಿ ಮಾಡಬಲ್ಲದು?
2 ಹೇಗಂದರೆ, ಜೊತೆ ಮಾನವರು ಅವರ ಭಾವನೆಗಳನ್ನು ಪೂರ್ಣವಾಗಿ ತಿಳುಕೊಳ್ಳಲಿ ಯಾ ತಿಳುಕೊಳ್ಳದಿರಲಿ, ತಾವು ಅನುಭವಿಸುತ್ತಿರುವವುಗಳನ್ನು ದೇವರು ತಿಳಿದಿದ್ದಾನೆ ಮತ್ತು ಆತನ ಸೇವಕರೋಪಾದಿ, ಅವರು ತಮ್ಮ ಸಮಸ್ಯೆಗಳನ್ನು ಒಬ್ಬಂಟಿಗರಾಗಿ ಎದುರಿಸಬೇಕಿಲ್ಲವೆಂಬ ಭರವಸೆಯಿಂದ ಅವರಿದ್ದಾರೆ. (ಕೀರ್ತನೆ 46:1) ಅದಲ್ಲದೆ, ದೇವರ ವಾಕ್ಯವು ವಿವೇಚನೆಯುಳ್ಳ ಕ್ರೈಸ್ತ ಹಿರಿಯರ ಸಹಾಯದೊಂದಿಗೆ ಅವರ ವೈಯಕ್ತಿಕ ಸಮಸ್ಯೆಗಳ ಆಚೇಕಡೆಗೂ ನೋಡುವಂತೆ ಶಕ್ತರಾಗಿ ಮಾಡುತ್ತದೆ. ಅವರ ನಂಬಿಗಸ್ತ ಸೇವೆಯು ದೇವರ ದೃಷ್ಟಿಯಲ್ಲಿ ಅಮೂಲ್ಯವೆಂದೂ ಮತ್ತು ಆತನಲ್ಲಿ ಮತ್ತು ಆತನು ಯೇಸು ಕ್ರಿಸ್ತನ ಮೂಲಕವಾಗಿ ಮಾಡಿದ ಒದಗಿಸುವಿಕೆಗಳಲ್ಲಿ ತಮ್ಮ ನಿರೀಕ್ಷೆಯನ್ನಿಡುವವರಿಗಾಗಿ ಒಂದು ಸುರಕ್ಷಿತ ಭವಿಷ್ಯವು ಇದೆಯೆಂದೂ ಗಣ್ಯಮಾಡಲು ಶಾಸ್ತ್ರಗ್ರಂಥವು ಅವರಿಗೆ ಸಹಾಯ ಮಾಡುತ್ತದೆ.—ಜ್ಞಾನೋಕ್ತಿ 27:11; 2 ಕೊರಿಂಥ 4:17, 18.
3, 4. (ಎ) “ಯೆಹೋವನೇ ದೇವರು” ಮತ್ತು “ನಮ್ಮನ್ನು ಉಂಟುಮಾಡಿದವನು” ಆತನೇ ಎಂಬ ನಿಜತ್ವದ ಗಣ್ಯತೆಯು ಆತನ ಸೇವೆಯಲ್ಲಿ ಸಂತೋಷವನ್ನು ಕಾಣುವಂತೆ ನಮಗೆ ಹೇಗೆ ನೆರವಾಗಬಲ್ಲದು? (ಬಿ) ಯೆಹೋವನ ಪ್ರೀತಿಪೂರ್ವಕ ಶುಶ್ರೂಷೆಯಲ್ಲಿ ನಮಗೆ ಪೂರ್ಣ ಭರವಸೆ ಇದೆ ಯಾಕೆ?
3 ಕೀರ್ತನೆ 100:2ರ ಪರಿಚಯವು ನಿಮಗಿರಬಹುದು, ಅದನ್ನುವುದು: “ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ.” ಎಷ್ಟು ಮಂದಿ ನಿಜವಾಗಿಯೂ ಯೆಹೋವನಿಗೆ ಆ ರೀತಿಯಲ್ಲಿ ಆರಾಧನೆಯನ್ನು ಸಲ್ಲಿಸುತ್ತಾರೆ? ಹಾಗೆ ಮಾಡುವುದಕ್ಕೆ ಯೋಗ್ಯ ಕಾರಣಗಳು 3 ನೇ ವಚನದಲ್ಲಿ ಕೊಡಲ್ಪಟ್ಟಿದ್ದು, ನಮಗೆ ನೆನಪಿಸುವುದು: “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” ಹೀಬ್ರು ಮೂಲಪಾಠದಲ್ಲಿ ಅವನು, ’ಇಲೋಹಿಮ್’ ಎಂದು ನಿರ್ದೇಶಿಸಲ್ಪಟ್ಟಿದ್ದು, ಹೀಗೆ ಘನತೆ, ಗಾಂಭೀರ್ಯ, ಶ್ರೇಷ್ಠತೆಯಲ್ಲಿ ಆತನ ಮಹೋನ್ನತೆಯನ್ನು ಸೂಚಿಸಿದೆ. ಆತನೊಬ್ಬನೇ ಸತ್ಯ ದೇವರು. (ಧರ್ಮೋಪದೇಶಕಾಂಡ 4:39; 7:9; ಯೋಹಾನ 17:3) ಆತನ ಸೇವಕರು ಆತನ ದೇವತ್ವದ ಕುರಿತು ತಿಳಿದಿರುವುದು, ಅವರಿಗೆ ಕಲಿಸಲ್ಪಟ್ಟಿರುವ ಕೇವಲ ನಿಜತ್ವವಾಗಿ ಮಾತ್ರವಲ್ಲ, ಬದಲಿಗೆ, ಅವರು ಅನುಭವಿಸುವ ಒಂದು ವಿಷಯವಾಗಿ ಮತ್ತು ವಿಧೇಯತೆ, ಭರವಸೆ, ಮತ್ತು ಭಕ್ತಿಯ ಮೂಲಕ ಅದಕ್ಕೆ ಅವರು ಪುರಾವೆ ಕೊಡುತ್ತಾರೆ.—1 ಪೂರ್ವಕಾಲವೃತ್ತಾಂತ 28:9; ರೋಮಾಪುರ 1:20.
4 ನಮ್ಮ ಹೃದಯವನ್ನೂ ನೋಡಲು ಶಕ್ತನಾಗಿರುವ ಜೀವಸ್ವರೂಪನಾದ ದೇವರು ಯೆಹೋವನಾಗಿರುವುದರಿಂದ, ಆತನ ನೇತ್ರಗಳಿಂದ ಏನೂ ಮರೆಯಾಗಿರುವುದಿಲ್ಲ. ನಮ್ಮ ಜೀವಿತಗಳಲ್ಲಿ ಏನು ಸಂಭವಿಸುತ್ತಾ ಇದೆ ಎಂಬದನ್ನು ಆತನು ಪೂರ್ಣ ಬಲ್ಲಾತನಾಗಿದ್ದಾನೆ. ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಯಾವುದು ಉಂಟುಮಾಡುತ್ತದೆ ಹಾಗೂ ಅವುಗಳಿಂದ ಫಲಿಸಬಹುದಾದ ಮಾನಸಿಕ ಮತ್ತು ಭಾವನಾತ್ಮಕ ಸಂಕ್ಷೋಭೆಯನ್ನು ಆತನು ತಿಳಿದಿರುತ್ತಾನೆ. ನಿರ್ಮಾಣಿಕನೋಪಾದಿ ಆತನು, ನಾವು ನಮ್ಮನ್ನು ತಿಳಿದಿರುವುದಕ್ಕಿಂತಲೂ ಹೆಚ್ಚು ಉತ್ತಮವಾಗಿ ನಮ್ಮನ್ನು ಬಲ್ಲನು. ನಮ್ಮ ಪರಿಸ್ಥಿತಿಯೊಂದಿಗೆ ನಿಭಾಯಿಸಲು ನಮಗೆ ಸಹಾಯ ಮಾಡುವುದು ಹೇಗೆ ಮತ್ತು ಬಾಳುವ ಪರಿಹಾರವನ್ನು ಒದಗಿಸುವುದು ಹೇಗೆ ಎಂಬದೂ ಆತನಿಗೆ ತಿಳಿದದೆ. ನಾವು ನಮ್ಮೆಲ್ಲಾ ಹೃದಯದಿಂದ ಆತನಲ್ಲಿ ಭರವಸೆಯಿಡುವಾಗ—ಕುರಿಮರಿಯನ್ನು ಎದೆಗೆತ್ತಿಕೊಳ್ಳುವ ಕುರುಬನ ಹಾಗೆ—ಆತನು ಪ್ರೀತಿಪೂರ್ವಕವಾಗಿ ನಮಗೆ ಸಹಾಯ ಮಾಡುವನು. (ಜ್ಞಾನೋಕ್ತಿ 3:5, 6; ಯೆಶಾಯ 40:10, 11) ಆ ಭರವಸೆಯನ್ನು ಬಲಗೊಳಿಸಲು ಕೀರ್ತನೆ 139ರ ಅಧ್ಯಯನವು ಹೆಚ್ಚನ್ನು ಮಾಡಬಲ್ಲದು.
ನಮ್ಮ ನಡತೆಯೆಲ್ಲಾ ನೋಡುವಾತನು
5. ಯೆಹೋವನು ನಮ್ಮನ್ನು ‘ಪರೀಕ್ಷಿಸಿ ತಿಳುಕೊಂಡಿರುವ’ ಅರ್ಥವೇನು, ಮತ್ತು ಅದು ಏಕೆ ಅಪೇಕ್ಷಣೀಯವಾಗಿದೆ?
5 ಆಳವಾದ ಗಣ್ಯತೆಯೊಂದಿಗೆ ಕೀರ್ತನೆಗಾರ ದಾವೀದನು ಬರೆದದ್ದು: “ಕರ್ತನೇ, [ಯೆಹೋವನೇ, NW] ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ.” (ಕೀರ್ತನೆ 139:1) ಅವನ ಕುರಿತಾಗಿ ಯೆಹೋವನಿಗಿದ್ದ ಜ್ಞಾನವು ಮೇಲುಮೇಲಿದ್ದಲ್ಲವೆಂಬ ಭರವಸೆಯು ದಾವೀದನಿಗಿತ್ತು. ಕೇವಲ ಅವನ ಶಾರೀರಿಕ ಸ್ಥೈರ್ಯ, ವಾಕ್ಜಾತುರ್ಯ, ಅಥವಾ ಕಿನ್ನರಿ ಬಾರಿಸುವುದರಲ್ಲಿ ಅವನ ನೈಪುಣ್ಯವನ್ನು ಮಾತ್ರವೇ ಗಮನಿಸುತ್ತಾ, ದೇವರು ದಾವೀದನನ್ನು ಮಾನವರು ನೋಡುವಂತೆ ನೋಡಲಿಲ್ಲ. (1 ಸಮುವೇಲ 16:7, 18) ಯೆಹೋವನು ದಾವೀದನ ಆಂತರ್ಯದಾಳವನ್ನು “ಪರೀಕ್ಷಿಸಿ ತಿಳುಕೊಂಡನು” ಮತ್ತು ಅವನ ಆತ್ಮಿಕ ಹಿತಚಿಂತನೆಗಾಗಿ ಪ್ರೀತಿಪೂರ್ಣ ಗಮನದೊಂದಿಗೆ ಹಾಗೆ ಮಾಡಿದ್ದನು. ಯೆಹೋವನ ಭಯಭಕ್ತ ಸೇವಕರಲ್ಲಿ ನೀವು ಒಬ್ಬರಾಗಿದ್ದರೆ, ಆತನು ದಾವೀದನನ್ನು ಅರಿತಿದ್ದಷ್ಟೇ ಚೆನ್ನಾಗಿ ನಿಮ್ಮನ್ನೂ ಬಲ್ಲಾತನಾಗಿದ್ದಾನೆ. ಅದು ನಿಮ್ಮೊಳಗೆ ಕೃತಜ್ಞತೆ ಮತ್ತು ಭಯಭಕ್ತಿಯ ಎರಡೂ ಭಾವನೆಗಳನ್ನು ಹುರಿದುಂಬಿಸುವುದಿಲ್ಲವೇ?
6. ನಾವು ಮಾಡುವ ಎಲ್ಲವು, ನಮ್ಮೆಲ್ಲಾ ಯೋಚನೆಗಳು ಸಹ, ಯೆಹೋವನಿಗೆ ತಿಳಿದಿವೆ ಎಂದು ಕೀರ್ತನೆ 139:2, 3 ಹೇಗೆ ತೋರಿಸುತ್ತದೆ?
6 ದಾವೀದನ ಚಟುವಟಿಕೆಗಳೆಲ್ಲವು ಯೆಹೋವನ ನೋಟಕ್ಕೆ ಬಯಲಾಗಿದ್ದವು, ಮತ್ತು ದಾವೀದನಿಗೆ ಅದರ ಅರಿವಿತ್ತು. “ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ,” ಎಂದು ಬರೆದನು ಕೀರ್ತನೆಗಾರನು. “ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿದ್ದೀ; ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ.” (ಕೀರ್ತನೆ 139:2, 3) ಯೆಹೋವನು ಭೂಮಿಯಿಂದ ಎಷ್ಟೋ ಹೆಚ್ಚು ದೂರದ, ಪರಲೋಕದಲ್ಲಿದ್ದಾನೆಂಬ ನಿಜತ್ವವು, ದಾವೀದನು ಮಾಡುತ್ತಿದ್ದ ಯಾ ಯೋಚಿಸುತ್ತಿದ್ದ ವಿಷಯಗಳನ್ನು ತಿಳಿಯುವುದರಿಂದ ಆತನನ್ನು ತಡೆಯಲಿಲ್ಲ. ದಾವೀದನ ಚಟುವಟಿಕೆಗಳ ಸ್ಥಿತಿಗತಿಯನ್ನು ತಿಳಿಯುವುದಕ್ಕಾಗಿ, ಆತನು ಹಗಲೂ ರಾತ್ರಿಯೂ ಅವನನ್ನು “ಶೋಧಿಸಿ ಗ್ರಹಿಸಿಕೊಂಡನು” ಅಥವಾ ಜಾಗರೂಕತೆಯಿಂದ ಪರೀಕ್ಷಿಸಿದನು.
7. (ಎ) ದಾವೀದನ ಜೀವಿತದ ಘಟನೆಗಳನ್ನು ಆಧಾರವಾಗಿರಿಸಿ, ನಮ್ಮ ಜೀವಿತದಲ್ಲಿ ದೇವರು ಅರಿತಿರುವ ಕೆಲವು ವಿಷಯಗಳ ಮೇಲೆ ಹೇಳಿಕೆ ಕೊಡಿರಿ. (ಬಿ) ಇದರ ಅರಿವು ನಮ್ಮ ಮೇಲೆ ಹೇಗೆ ಪರಿಣಾಮ ಬೀರಬೇಕು?
7 ದೇವರಲ್ಲಿ ಪ್ರೀತಿ ಮತ್ತು ಆತನ ರಕ್ಷಿಸುವ ಶಕ್ತಿಯಲ್ಲಿ ಭರವಸೆಯು ಯುವಕನಾದ ದಾವೀದನನ್ನು ಫಿಲಿಷ್ಟಿಯ ದೈತ್ಯ ಗೊಲ್ಯಾತನೊಂದಿಗೆ ಹೋರಾಡಲು ನೀಡಿಕೊಳ್ಳುವಂತೆ ಪ್ರೇರಿಸಿದಾಗ, ಯೆಹೋವನಿಗೆ ಅದು ತಿಳಿದಿತ್ತು. (1 ಸಮುವೇಲ 17:32-37, 45-47) ತದನಂತರ, ಜನರ ವಿರೋಧವು ದಾವೀದನ ಹೃದಯಕ್ಕೆ ಕಡು ಬೇನೆಯನ್ನು ಉಂಟುಮಾಡಿದಾಗ, ರಾತ್ರಿಯಲ್ಲಿ ಅವನು ಕಣ್ಣೀರಿಡುವಷ್ಟು ದೊಡ್ಡ ಒತ್ತಡವನ್ನು ತಂದಾಗ, ಯೆಹೋವನು ಅವನ ಭಿನ್ನಹವನ್ನು ಲಾಲಿಸಿದನೆಂಬ ಅರಿವಿನಿಂದ ಅವನು ಸಂತೈಸಲ್ಪಟ್ಟನು. (ಕೀರ್ತನೆ 6:6, 9; 55:2-5, 22) ಅಂತೆಯೇ, ಕೃತಜ್ಞತೆಯಿಂದ ತುಂಬಿದ ಹೃದಯವು ನಿದ್ರಾರಹಿತ ರಾತ್ರಿಯಲ್ಲಿ ಯೆಹೋವನ ಕುರಿತು ಧ್ಯಾನಿಸುವಂತೆ ದಾವೀದನನ್ನು ಮಾಡಿದಾಗ, ಯೆಹೋವನಿಗೆ ಅದು ಚೆನ್ನಾಗಿ ತಿಳಿದಿತ್ತು. (ಕೀರ್ತನೆ 63:6; ಹೋಲಿಸಿ ಫಿಲಿಪ್ಪಿ 4:8, 9.) ಒಂದು ಸಂಜಾವೇಳೆಯಲ್ಲಿ, ನೆರೆಯವನ ಪತ್ನಿಯೊಬ್ಬಳು ಸ್ನಾನಮಾಡುವುದನ್ನು ದಾವೀದನು ನೋಡುತ್ತಾ ನಿಂತಾಗ, ಯೆಹೋವನಿಗೆ ಅದು ಕೂಡ ತಿಳಿದಿತ್ತು, ಮತ್ತು ದಾವೀದನು ಕೊಂಚ ಸಮಯಕ್ಕಾದರೂ, ಆ ಪಾಪಪೂರ್ಣ ಬಯಕೆಯು ದೇವರನ್ನು ತನ್ನ ಯೋಚನೆಗಳಿಂದ ಹೊರಗಟ್ಟುವಂತೆ ಬಿಟ್ಟುಕೊಟ್ಟಾಗ ಏನು ಸಂಭವಿಸಿತೆಂಬದನ್ನು ಆತನು ಕಂಡನು. (2 ಸಮುವೇಲ 11:2-4) ತದನಂತರ, ಅವನ ಪಾಪದ ಗಂಭೀರತೆಯೊಂದಿಗೆ ದಾವೀದನನ್ನು ಎದುರಿಸಲು ಪ್ರವಾದಿ ನಾತಾನನು ಕಳುಹಿಸಲ್ಪಟ್ಟಾಗ, ದಾವೀದನ ಬಾಯಿಂದ ಹೊರಟ ಮಾತುಗಳನ್ನು ಯೆಹೋವನು ಆಲಿಸಿದನು ಮಾತ್ರವೇ ಅಲ್ಲ, ಅವು ಹೊರಟುಬಂದ ಪಶ್ಚಾತ್ತಾಪಿ ಹೃದಯವನ್ನು ಸಹ ಶೋಧಿಸಿ ತಿಳುಕೊಂಡನು. (2 ಸಮುವೇಲ 12:1-14; ಕೀರ್ತನೆ 51:1, 17) ನಾವೆಲ್ಲಿಗೆ ಹೋಗುತ್ತೇವೆ, ಏನು ಮಾಡುತ್ತೇವೆ, ಮತ್ತು ನಮ್ಮ ಹೃದಯದಲ್ಲಿ ಏನಿದೆ ಎಂಬದನ್ನು ಗಂಭೀರವಾಗಿ ಯೋಚಿಸುವಂತೆ ಅದು ನಮ್ಮನ್ನು ಮಾಡಬೇಕಲ್ಲವೇ?
8. (ಎ) ‘ನಮ್ಮ ನಾಲಿಗೆಯ ಮಾತುಗಳು’ ಯಾವ ರೀತಿಯಲ್ಲಿ ದೇವರೊಂದಿಗೆ ನಮ್ಮ ನಿಲುವನ್ನು ಪ್ರಭಾವಿಸುತ್ತವೆ? (ಬಿ) ನಾಲಿಗೆಯ ಉಪಯೋಗದಲ್ಲಿ ನಮ್ಮ ದುರ್ಬಲತೆಗಳನ್ನು ಹೇಗೆ ಜಯಿಸಸಾಧ್ಯವಿದೆ? (ಮತ್ತಾಯ 15:18; ಲೂಕ 6:45)
8 ನಾವು ಮಾಡುವ ಎಲ್ಲವೂ ದೇವರಿಗೆ ತಿಳಿದಿರುವುದರಿಂದ, ನಾವು ನಮ್ಮ ದೇಹದ ಒಂದು ಅಂಗವನ್ನು, ನಾಲಿಗೆಯಂಥ ಚಿಕ್ಕ ಅಂಗವನ್ನು ಸಹ, ಹೇಗೆ ಉಪಯೋಗಿಸುತ್ತೇವೆಂಬದನ್ನು ಆತನು ಅರಿತಿದ್ದಾನೆಂಬದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಅರಸ ದಾವೀದನು ಇದನ್ನು ಸ್ಪಷ್ಟವಾಗಿಗಿ ಅರಿತುಕೊಂಡನು, ಮತ್ತು ಅವನು ಬರೆದದ್ದು: “ಕರ್ತನೇ, [ಯೆಹೋವನೇ, NW] ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ.” (ಕೀರ್ತನೆ 139:4) ಯೆಹೋವನ ಗುಡಾರದಲ್ಲಿ ಅತಿಥಿಗಳಾಗಿ ಸ್ವಾಗತಿಸಲ್ಪಡುವ ಜನರು, ಇತರರನ್ನು ನಿಂದಿಸದವರೂ, ಒಂದು ಅಪ್ತ ಪರಿಚಯದ ಮೇಲೆ ಕುಂದನ್ನು ತರುವ ರಸಭರಿತ ಚಾಡಿಯನ್ನು ಹರಡಿಸಲು ತಮ್ಮ ನಾಲಿಗೆಯನ್ನು ಬಳಸಲು ನಿರಾಕರಿಸುವವರೂ ಆಗಿರಬೇಕೆಂದು ದಾವೀದನಿಗೆ ಚೆನ್ನಾಗಿ ತಿಳಿದಿತ್ತು. ಯೆಹೋವನಿಂದ ಮೆಚ್ಚಲ್ಪಡುವವರು ತಮ್ಮ ಹೃದಯಗಳಲ್ಲೂ ಸತ್ಯವನ್ನೇ ಆಡುವ ಜನರಾಗಿರುವರು. (ಕೀರ್ತನೆ 15:1-3; ಜ್ಞಾನೋಕ್ತಿ 6:16-19) ನಮ್ಮಲ್ಲಿ ಯಾರೂ ನಮ್ಮ ನಾಲಿಗೆಯನ್ನು ಪರಿಪೂರ್ಣ ಅಂಕೆಯಲ್ಲಿಡ ಶಕ್ತರಲ್ಲ, ಆದರೆ ತನ್ನ ಸನ್ನಿವೇಶವನ್ನು ಸುಧಾರಿಸಲು ತಾನೇನೂ ಮಾಡಶಕ್ತನಲ್ಲವೆಂದು ದಾವೀದನು ದುರ್ಬಲ ತೀರ್ಮಾನ ಮಾಡಲಿಲ್ಲ. ಯೆಹೋವನಿಗಾಗಿ ಸ್ತುತಿ ಕೀರ್ತನೆಗಳನ್ನು ರಚಿಸುವುದರಲ್ಲಿ ಮತ್ತು ಹಾಡುವುದರಲ್ಲಿ ಅವನು ಹೆಚ್ಚು ಸಮಯವನ್ನು ಕಳೆದನು. ಸಹಾಯಕ್ಕಾಗಿ ತನಗಿರುವ ಅಗತ್ಯವನ್ನು ಅವನು ಸರಾಗವಾಗಿ ಒಪ್ಪಿಕೊಂಡನು ಮತ್ತು ಅದಕ್ಕಾಗಿ ದೇವರಿಗೆ ಪ್ರಾರ್ಥಿಸಿದನು. (ಕೀರ್ತನೆ 19:12-14) ನಮ್ಮ ನಾಲಿಗೆಯ ಉಪಯೋಗಕ್ಕೆ ಸಹ ಪ್ರಾರ್ಥನಾಪೂರ್ವಕ ಗಮನದ ಅಗತ್ಯವಿದೆಯೇ?
9. (ಎ) ದೇವರು ನಮ್ಮ ಪರಿಸ್ಥಿತಿಯನ್ನು ಎಷ್ಟು ಪೂರ್ಣವಾಗಿ ಬಲ್ಲನು ಎಂಬ ವಿಷಯದಲ್ಲಿ ಕೀರ್ತನೆ 139:5 ವರ್ಣನೆ ಏನನ್ನು ಸೂಚಿಸುತ್ತದೆ? (ಬಿ) ಇದು ಯಾವುದರಲ್ಲಿ ಕುರಿತು ಭರವಸೆಯುಳ್ಳವರಾಗುವಂತೆ ನಮ್ಮನ್ನು ಮಾಡುತ್ತದೆ?
9 ಯೆಹೋವನು ನಮ್ಮನ್ನು ಅಥವಾ ನಮ್ಮ ಪರಿಸ್ಥಿತಿಯನ್ನು ಕೇವಲ ಒಂದು ಸೀಮಿತ ದೃಷ್ಟಿಕೋನದಿಂದ ನೋಡುವುದಿಲ್ಲ. ಪ್ರತಿಯೊಂದು ಕೋನದಿಂದ, ನಮ್ಮ ಪೂರ್ಣವಾದ ಚಿತ್ರವು ಆತನಲ್ಲಿದೆ. ಮುತ್ತಿಗೆ ಹಾಕಲ್ಪಟ್ಟ ಒಂದು ಪಟ್ಟಣವನ್ನು ಉದಾಹರಣೆಯಾಗಿ ಉಪಯೋಗಿಸುತ್ತಾ, ದಾವೀದನು ಬರೆದದ್ದು: “ಸುತ್ತಲೂ ನನ್ನನ್ನು ಆವರಿಸಿದ್ದೀ.” ದಾವೀದನ ವಿದ್ಯಮಾನದಲ್ಲಿ, ದೇವರು ಮುತ್ತಿಗೆ ಹಾಕಿರುವ ಶತ್ರುವಾಗಿರಲಿಲ್ಲ, ಬದಲಿಗೆ, ಎಚ್ಚರವುಳ್ಳ ಕಾವಲುಗಾರನಾಗಿದ್ದನು. “ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದೀ,” ಎಂದು ಕೂಡಿಸಿದನು ದಾವೀದನು, ಹೀಗೆ, ಆತನನ್ನು ಪ್ರೀತಿಸುವವರ ಶಾಶ್ವತ ಪ್ರಯೋಜನಕ್ಕಾಗಿ ನಡಿಸಲ್ಪಡುವ ದೇವರ ಹತೋಟಿ ಮತ್ತು ಸುರಕ್ಷೆಯನ್ನು ಸೂಚಿಸಿದನು. “ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; ಅದು ಉನ್ನತವಾದದ್ದು, ನನಗೆ ನಿಲುಕುವದಿಲ್ಲ,” ಎಂದು ದಾವೀದನು ಅಂಗೀಕರಿಸಿದನು. (ಕೀರ್ತನೆ 139:5, 6) ತನ್ನ ಸೇವಕರ ಕುರಿತು ದೇವರ ಜ್ಞಾನವು ಎಷ್ಟು ಸಂಪೂರ್ಣ, ಎಷ್ಟು ಪರಿಷ್ಕಾರವಾಗಿದೆಯೆಂದರೆ, ನಾವದನ್ನು ಪೂರ್ಣವಾಗಿ ಗ್ರಹಿಸಿಕೊಳ್ಳಲಾರೆವು. ಆದರೆ ಯೆಹೋವನು ನಮ್ಮನ್ನು ನಿಜವಾಗಿ ತಿಳುಕೊಂಡಿದ್ದಾನೆ ಮತ್ತು ಆತನು ಒದಗಿಸುವ ಸಹಾಯವು ಅತ್ಯಂತ ಉತ್ತಮವೇ ಆಗಿರುವುದೆಂಬ ಭರವಸೆಯಿಂದಿರಲು ನಮಗೆ ಸಾಕಷ್ಟು ತಿಳಿದಿದೆ.—ಯೆಶಾಯ 48:17, 18.
ನಾವೆಲ್ಲಿಯೇ ಇರಲಿ, ದೇವರು ನಮಗೆ ಸಹಾಯ ಮಾಡಶಕ್ತನು
10. ಕೀರ್ತನೆ 139:7-12ರ ಸ್ಫುಟವಾದ ವರ್ಣನೆಯಿಂದ ಯಾವ ಉತ್ತೇಜಕ ಸತ್ಯವು ತಲಪಿಸಲ್ಪಟ್ಟಿದೆ?
10 ಯೆಹೋವನ ಪ್ರೀತಿಯುಳ್ಳ ಪರಾಮರಿಕೆಯನ್ನು ಇನ್ನೊಂದು ದೃಷ್ಟಿಕೋನದಿಂದ ವೀಕ್ಷಿಸುತ್ತಾ, ಕೀರ್ತನೆಗಾರನು ಮುಂದುವರಿಸುವುದು: “ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ?” ಯೆಹೋವನಿಂದ ದೂರ ಓಡಿಹೋಗ ಪ್ರಯತ್ನಿಸುವ ಯಾವ ಅಪೇಕ್ಷೆಯೂ ಅವನಿಗಿರಲಿಲ್ಲ; ಬದಲಿಗೆ, ತಾನೆಲ್ಲಿಯೇ ಇರಲಿ, ಯೆಹೋವನಿಗೆ ಅದು ತಿಳಿದಿರುವುದು, ಮತ್ತು ಪವಿತ್ರ ಆತ್ಮದಿಂದ ತನಗೆ ಸಹಾಯ ಮಾಡಶಕ್ತನೆಂದು ಅವನಿಗೆ ತಿಳಿದಿತ್ತು. “ಮೇಲಣ ಲೋಕಕ್ಕೆ ಏರಿಹೋದರೆ,” ಅವನು ಮುಂದರಿಸಿದ್ದು, “ಅಲ್ಲಿ ನೀನಿರುತ್ತೀ; ಪಾತಾಳಕ್ಕೆ [ಶಿಯೋಲ್ಗೆ, NW] ಹೋಗಿ ಮಲಗಿಕೊಂಡೇನಂದರೆ ಅಲಿಯ್ಲೂ ನೀನಿರುವಿ. ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡೇನಂದರೆ ಅಲಿಯ್ಲೂ ನಿನ್ನ ಕೈ ನನ್ನನ್ನು ನಡಿಸುವದು; ನಿನ್ನ ಬಲಗೈ ನನ್ನನ್ನು ಹಿಡಿದಿರುವದು. ಕಾರ್ಗತ್ತಲೆಯು ನನ್ನನ್ನು ಕವಿಯುವದು, ಹಗಲು ಹೋಗಿ ನನ್ನ ಸುತ್ತಲೂ ಇರುಳಾಗುವದು ಎಂದು ಹೇಳಿಕೊಂಡರೇನು? ನಿನಗೆ ಕತ್ತಲೆಯು ಕತ್ತಲೆಯಲ್ಲ. ಇರುಳು ಹಗಲಾಗಿಯೇ ಇರುತ್ತದೆ; ಕತ್ತಲು ಬೆಳಕುಗಳೆರಡೂ ನಿನಗೆ ಒಂದೇ.” (ಕೀರ್ತನೆ 139:7-12) ಯೆಹೋವನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿಸುವ ಯಾ ನಮ್ಮ ಸಹಾಯಕ್ಕಾಗಿ ಆತನ ಆತ್ಮವು ನಿಲುಕಲಾರದೆ ಇರುವ ಯಾವ ಸ್ಥಳಕ್ಕೂ ನಾವು ಹೋಗುವಂತಿಲ್ಲ, ಯಾವ ಪರಿಸ್ಥಿತಿಯನ್ನೂ ಎದುರಿಸುವಂತಿಲ್ಲ.
11, 12. (ಎ) ತುಸು ಸಮಯ ಯೋನನು ಅದನ್ನು ಮರೆತುಬಿಟ್ಟರೂ, ಯೆಹೋವನ ವೀಕ್ಷಿಸುವ ಮತ್ತು ಸಹಾಯ ಮಾಡುವ ಸಾಮರ್ಥ್ಯವು ಯೋನನ ಪರಿಸ್ಥಿತಿಯಲ್ಲಿ ಹೇಗೆ ಪ್ರದರ್ಶಿತವಾಯಿತು? (ಬಿ) ಯೋನನ ಅನುಭವವು ನಮಗೆ ಹೇಗೆ ಪ್ರಯೋಜನವಾಗಬೇಕು?
11 ಒಂದು ಬಿಂದುವಿನಲ್ಲಿ ಪ್ರವಾದಿ ಯೋನನು ಅದನ್ನು ಮರೆತುಬಿಟ್ಟನು. ಯೆಹೋವನು ಅವನನ್ನು ನಿನೆವೆಯ ಜನರಿಗೆ ಸಾರುವುದಕ್ಕಾಗಿ ನೇಮಿಸಿದ್ದನು. ಕೆಲವೊಂದು ಕಾರಣದಿಂದಾಗಿ ತಾನು ಆ ನೇಮಕವನ್ನು ನಿರ್ವಹಿಸಶಕ್ತನಲ್ಲವೆಂದು ಆತನು ಭಾವಿಸಿದನು. ಪ್ರಾಯಶಃ ಅಶ್ಶೂರ್ಯರ ಕ್ರೂರ ಕುಪ್ರಸಿದ್ಧಿಯಿಂದಾಗಿ, ನಿನೆವೆಯಲ್ಲಿ ಸೇವೆಮಾಡುವ ವಿಚಾರವು ಯೋನನನ್ನು ಹೆದರಿಸಿತು. ಆದುದರಿಂದ ಅವನು ಅವಿತುಕೊಳ್ಳಲು ಪ್ರಯತ್ನಿಸಿದನು. ಯೊಪ್ಪದ ಬಂದರಿನಲ್ಲಿ, ನಿನೆವೆಯಿಂದ ಸುಮಾರು 3,500 ಕಿಲೊಮೀಟರ್ಕ್ಕಿಂತಲೂ ಹೆಚ್ಚು ಪಶ್ಚಿಮದಲ್ಲಿ, ಸಾಮಾನ್ಯವಾಗಿ ಸ್ಪೈನ್ನೊಂದಿಗೆ ಜತೆಗೂಡಿರುವ ತಾರ್ಷೀಷಿಗೆ ಹೋಗುವ ಹಡಗದಲ್ಲಿ ಸವಾರಿ ಕೈಗೊಂಡನು. ಆದರೂ, ಅವನು ಹಡಗು ಹತ್ತಿ, ಅದರ ಒಳಭಾಗಕ್ಕೆ ಹೋಗಿ ಮಲಗಿದ್ದನ್ನು ಯೆಹೋವನು ಕಂಡನು. ಅನಂತರ, ಹಡಗದಿಂದ ಹೊರಗೆಸೆಯಲ್ಪಟ್ಟಾಗಲೂ ಯೋನನು ಎಲ್ಲಿದ್ದನೆಂದು ಯೆಹೋವನಿಗೆ ತಿಳಿದಿತ್ತು, ಮತ್ತು ತಾನು ಮಾಡಿಕೊಂಡ ಹರಕೆಯನ್ನು ಸಲ್ಲಿಸುವನೆಂದು ಒಂದು ದೊಡ್ಡ ಮೀನಿನ ಹೊಟ್ಟೆಯೊಳಗಿಂದ ಯೋನನು ವಚನಕೊಟ್ಟಾಗ ಯೆಹೋವನು ಅವನನ್ನು ಆಲಿಸಿದನು. ಪುನಃ ಒಣನೆಲಕ್ಕೆ ಪಾರುಗೊಳಿಸಲ್ಪಟ್ಟು, ಅವನ ನೇಮಕವನ್ನು ನೆರವೇರಿಸುವಂತೆ ಯೋನನಿಗೆ ಇನ್ನೊಮ್ಮೆ ಸಂದರ್ಭವನ್ನು ಕೊಡಲಾಯಿತು.—ಯೋನ 1:3, 17; 2:1–3:4.
12 ಆರಂಭದಿಂದಲೇ ತನ್ನ ನೇಮಕವನ್ನು ನೆರವೇರಿಸಲು ಸಹಾಯಕ್ಕಾಗಿ ಯೆಹೋವನ ಆತ್ಮದಲ್ಲಿ ಆತುಕೊಂಡಿರುತ್ತಿದ್ದರೆ ಯೋನನಿಗೆ ಅದೆಷ್ಟು ಹೆಚ್ಚು ಒಳ್ಳೇದಾಗುತ್ತಿತ್ತು! ಆದರೂ ತರುವಾಯ, ಯೋನನು ನಮ್ರನಾಗಿ ತನ್ನ ಅನುಭವವನ್ನು ದಾಖಲೆಮಾಡಿದನು, ಮತ್ತು ಆ ದಾಖಲೆಯು ಅಂದಿನಿಂದ, ಯೋನನಿಗೆ ಗಳಿಸಲು ಅಷ್ಟು ಕಷ್ಟಕರವಾಗಿ ಕಂಡುಬಂದಿದ್ದ ಯೆಹೋವನಲ್ಲಿನ ಭರವಸೆಯನ್ನು ತೋರಿಸಲು, ಅನೇಕರಿಗೆ ಸಹಾಯ ಮಾಡಿದೆ.—ರೋಮಾಪುರ 15:4.
13. (ಎ) ರಾಣಿ ಈಜೆಬೆಲಳಿಂದ ಓಡಿಹೋಗುವ ಮುಂಚೆ ಎಲೀಯನು ಯಾವ ನೇಮಕಗಳನ್ನು ನಂಬಿಗಸ್ತಿಕೆಯಿಂದ ನೆರವೇರಿಸಿದ್ದನು? (ಬಿ) ಇಸ್ರೇಲಿನ ಕ್ಷೇತ್ರದ ಹೊರಗೆ ಅಡಗಿಕೊಳ್ಳುವಂತೆ ಹವಣಿಸಿದಾಗ್ಯೂ ಯೆಹೋವನು ಎಲೀಯನಿಗೆ ಹೇಗೆ ಸಹಾಯ ಮಾಡಿದನು?
13 ಎಲೀಯನ ಅನುಭವವಾದರೂ ಕೊಂಚಮಟ್ಟಿಗೆ ಭಿನ್ನವಾಗಿತ್ತು. ಇಸ್ರಾಯೇಲ್ಯರು ಅವರ ಪಾಪಗಳ ಶಿಕ್ಷೆಯಾಗಿ ಅನಾವೃಷ್ಟಿಯನ್ನು ಅನುಭವಿಸುವರೆಂಬ ಯೆಹೋವನ ವಿಧಿಯನ್ನು ಅವನು ನಂಬಿಗಸ್ತಿಕೆಯಿಂದ ಪ್ರಕಟಿಸಿದನು. (1 ಅರಸು 16:30-33; 17:1) ಕರ್ಮೆಲ್ ಬೆಟ್ಟದಲ್ಲಿ ಯೆಹೋವ ಮತ್ತು ಬಾಳನ ನಡುವಣ ಪ್ರತಿಸ್ಪರ್ಧೆಯಲ್ಲಿ ಅವನು ಸತ್ಯಾರಾಧನೆಯನ್ನು ಧೈರ್ಯದಿಂದ ಎತ್ತಿಹಿಡಿದಿದ್ದನು. ಅದನ್ನು ಹಿಂಬಾಲಿಸಿ ಕೀಷೋನ್ ಹಳ್ಳದಲ್ಲಿ ಬಾಳನ 450 ಮಂದಿ ಪ್ರವಾದಿಗಳ ಸಂಹಾರವನ್ನು ನಿರ್ವಹಿಸಿದನು. ಆದರೆ ರಾಣಿ ಈಜೆಬೆಲಳು ಕ್ರೋಧಿತಳಾಗಿ ಎಲೀಯನನ್ನು ಕೊಲ್ಲಲು ಪ್ರತಿಜ್ಞೆ ಮಾಡಿದಾಗ, ಎಲೀಯನು ದೇಶದಿಂದ ಪಲಾಯನಗೈದನು. (1 ಅರಸು 18:18-40; 19:1-4) ಆ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಯೆಹೋವನು ಅಲ್ಲಿದ್ದನೋ? ಹೌದು ನಿಶ್ಚಯವಾಗಿಯೂ. ಎಲೀಯನು ಪರಲೋಕಕ್ಕೋ ಎಂಬಂತೆ ಒಂದು ಎತ್ತರವಾದ ಬೆಟ್ಟಕ್ಕೆ ಹತ್ತಿದರೂ, ಶಿಯೋಲಿನಲ್ಲೋ ಎಂಬಂತೆ ಭೂಮಿಯಾಳದ ಒಂದು ಗುಹೆಯಲ್ಲಿ ಅವಿತುಕೊಂಡರೂ, ಅರುಣೋದಯವು ಭೂಮಿಯ ಮೇಲೆ ಬೆಳಕನ್ನು ಹರಡಿಸುವ ವೇಗದಲ್ಲಿ ಒಂದು ದೂರದ ದ್ವೀಪಕ್ಕೆ ಪಲಾಯನಗೈದರೂ—ಯೆಹೋವನ ಕೈಯು ಅವನನ್ನು ಬಲಪಡಿಸಲು ಮತ್ತು ನಡಿಸಲು ಅಲ್ಲಿರುತ್ತಿತ್ತು. (ಹೋಲಿಸಿ ರೋಮಾಪುರ 8:38, 39.) ಮತ್ತು ಯೆಹೋವನು ಎಲೀಯನನ್ನು, ಪ್ರಯಾಣಕ್ಕಾಗಿ ಆಹಾರವನ್ನು ಒದಗಿಸಿದ್ದು ಮಾತ್ರವೇ ಅಲ್ಲ ತನ್ನ ಕ್ರಿಯಾಶೀಲ ಶಕ್ತಿಯ ವಿಸ್ಮಯಕರ ಪ್ರದರ್ಶನದಿಂದಲೂ ಬಲಪಡಿಸಿದನು. ಹೀಗೆ ಬಲಪಡಿಸಲ್ಪಟ್ಟು, ಎಲೀಯನು ತನ್ನ ಮುಂದಣ ಪ್ರವಾದನಾ ನೇಮಕವನ್ನು ಕೈಕೊಂಡನು.—1 ಅರಸು 19:5-18.
14. (ಎ) ದೇವರು ಸರ್ವತ್ರ ಗೋಚರನು ಎಂದು ತೀರ್ಮಾನಿಸುವುದು ಏಕೆ ತಪ್ಪಾಗಿರುವುದು? (ಬಿ) ಆಧುನಿಕ ಸಮಯದಲ್ಲಿ ಯಾವ ಪರಿಸ್ಥಿತಿಗಳ ಕೆಳಗೆ ಯೆಹೋವನು ತನ್ನ ಸೇವಕರನ್ನು ಪ್ರೀತಿಯಿಂದ ಪೋಷಿಸಿದ್ದಾನೆ? (ಸಿ) ನಾವು ಶಿಯೋಲಿನಲ್ಲಿದ್ದರೂ, ದೇವರು ಅಲ್ಲಿರುವನು ಹೇಗೆ?
14 ಕೀರ್ತನೆ 139:7-12ರ ಪ್ರವಾದನಾ ಮಾತುಗಳ ಅರ್ಥವು, ದೇವರು ಸರ್ವತ್ರ ಗೋಚರನು, ಅಂದರೆ, ಎಲ್ಲೆಲ್ಲಿಯೂ ಎಲ್ಲಾ ಸಮಯಗಳಲ್ಲಿ ವ್ಯಕ್ತಿಪರನಾಗಿ ಉಪಸ್ಥಿತನಿದ್ದಾನೆ ಎಂದಲ್ಲ. ದೇವರ ವಾಕ್ಯವು ಸ್ಪಷ್ಟವಾಗಿಗಿ ಬೇರೆ ರೀತಿಯಾಗಿ ತೋರಿಸುತ್ತದೆ. (ಧರ್ಮೋಪದೇಶಕಾಂಡ 26:15; ಇಬ್ರಿಯ 9:24) ಆದರೂ, ಆತನ ಸೇವಕರು ಅವನ ನಿಲುಕಿಗೆ ಎಂದೂ ಮೀರಿದವರಲ್ಲ. ಯಾರ ದೇವಪ್ರಭುತ್ವ ನೇಮಕಗಳು ಅವರನ್ನು ದೂರದ ಸ್ಥಳಗಳಿಗೆ ಒಯ್ದಿವೆಯೋ ಅವರ ವಿಷಯದಲ್ಲಿ ಇದು ಸತ್ಯವಾಗಿದೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ನಾಜೀ ಕೂಟಶಿಬಿರಗಳಲ್ಲಿದ್ದ ನಿಷ್ಠಾವಂತ ಸಾಕ್ಷಿಗಳ ವಿಷಯದಲ್ಲಿ ಇದು ಸತ್ಯವಾಗಿತ್ತು, ಮತ್ತು 1958 ರಿಂದ 1965ರ ಸಮಯದಲ್ಲಿ ಚೀನಾದಲ್ಲಿ ಏಕಾಂತ ಬಂಧನದಲ್ಲಿ ಇಡಲ್ಪಟ್ಟ ಮಿಷನೆರಿಗಳ ವಿಷಯದಲ್ಲಿ ಇದು ಸತ್ಯವಾಗಿತ್ತು. ಮಧ್ಯ ಆಫ್ರಿಕದ ಒಂದು ದೇಶದಲ್ಲಿ ಪದೇ ಪದೇ ತಮ್ಮ ಹಳ್ಳಿಗಳಿಂದ, ತಮ್ಮ ದೇಶದಿಂದಲೂ ಪಲಾಯನಗೈಯಬೇಕಾಗಿದ್ದ ನಮ್ಮ ಪ್ರಿಯ ಸಹೋದರ ಮತ್ತು ಸಹೋದರಿಯರ ವಿಷಯದಲ್ಲೂ ಇದು ಸತ್ಯವಾಗಿತ್ತು. ಅಗತ್ಯಬಿದ್ದಲ್ಲಿ, ಸಾಮಾನ್ಯ ಸಮಾಧಿಯಾದ ಶಿಯೋಲಿಗಾದರೂ ಯೆಹೋವನು ನೇರವಾಗಿ ಎಟಕಿಸಿಕೊಂಡು, ಪುನರುತ್ಥಾನದ ಮೂಲಕ ತನ್ನ ನಂಬಿಗಸ್ತರನ್ನು ಹಿಂದೆ ತರಶಕ್ತನು.—ಯೋಬ 14:13-15; ಲೂಕ 20:37, 38.
ನಮ್ಮನ್ನು ನಿಜವಾಗಿ ತಿಳುಕೊಳ್ಳುವಾತನು
15. (ಎ) ಎಷ್ಟು ಆರಂಭದ ಸಮಯದಿಂದ ಯೆಹೋವನು ನಮ್ಮ ವಿಕಾಸವನ್ನು ಅವಲೋಕಿಸಶಕ್ತನಾಗಿದ್ದಾನೆ? (ಬಿ) ಮೂತ್ರಜನಕಾಂಗಗಳಿಗೆ ಕೀರ್ತನೆಗಾರನ ನಿರ್ದೇಶನದಿಂದ ನಮ್ಮ ಕುರಿತ ದೇವರ ಜ್ಞಾನದ ವಿಸ್ತಾರ್ಯವು ಹೇಗೆ ಸೂಚಿಸಲ್ಪಟ್ಟಿದೆ?
15 ಪ್ರೇರಣೆಯ ಕೆಳಗೆ ಕೀರ್ತನೆಗಾರನು, ನಮ್ಮ ಕುರಿತಾದ ದೇವರ ಜ್ಞಾನವು ನಮ್ಮ ಜನನಕ್ಕೂ ಪೂರ್ವಗಾಮಿಯಾಗಿದೆ ಎಂಬ ನಿಜತ್ವಕ್ಕೆ ಗಮನ ಸೆಳೆಯುತ್ತಾ, ಅನ್ನುವುದು: “ನನ್ನ ಅಂತರಿಂದ್ರಿಯಗಳನ್ನು [ಮೂತ್ರಜನಕಾಂಗಗಳನ್ನು, NW] ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:13, 14) ಗರ್ಭಧಾರಣೆಯ ಸಮಯದಲ್ಲಿ ನಮ್ಮ ತಂದೆಯ ಮತ್ತು ತಾಯಿಯ ವಂಶಾಣುಗಳು ನಮ್ಮ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಬಹಳ ಆಳವಾಗಿ ಪ್ರಭಾವಿಸುವ ನಮೂನೆಯನ್ನು ಉತ್ಪಾದಿಸುತ್ತವೆ. ಆ ಸಾಮರ್ಥ್ಯವನ್ನು ದೇವರು ತಿಳುಕೊಳ್ಳುತ್ತಾನೆ. ಆಗಿಂದಾಗ್ಗೆ ಶಾಸ್ತ್ರಗ್ರಂಥದಲ್ಲಿ ವ್ಯಕ್ತಿತ್ವದ ಅಂತರ್ಯದಾಳದ ಅಂಶಗಳನ್ನು ಪ್ರತಿನಿಧಿಸಲು ಬಳಸಲ್ಪಡುವ ಮೂತ್ರಜನಕಾಂಗಗಳನ್ನು, ಈ ಕೀರ್ತನೆಯಲ್ಲಿ ವಿಶೇಷವಾಗಿ ತಿಳಿಸಲಾಗಿದೆ.a (ಕೀರ್ತನೆ 7:9; ಯೆರೆಮೀಯ 17:10) ನಾವು ಹುಟ್ಟುವುದಕ್ಕೆ ಮುಂಚಿನಿಂದಲೂ ನಮ್ಮ ಕುರಿತಾದ ಈ ಎಲ್ಲಾ ವಿವರಗಳನ್ನು ಯೆಹೋವನು ತಿಳಿದಿರುತ್ತಾನೆ. ತಾಯಿಯ ಗರ್ಭದೊಳಗಿನ ಒಂದು ಫಲವತ್ತಾದ ಕೋಶವು, ಗರ್ಭವನ್ನು ‘ಮರೆಮಾಡ’ ಲಿಕ್ಕಾಗಿ ಮತ್ತು ಅದು ವಿಕಾಸಗೊಂಡ ಹಾಗೆ ಅದನ್ನು ರಕ್ಷಿಸಲು ಒಂದು ಸಂರಕ್ಷಕ ಆಸರೆಯನ್ನು ಉತ್ಪಾದಿಸುವಂತೆ ಮಾನವ ಶರೀರವನ್ನು ಪ್ರೀತಿಯುಳ್ಳ ಗಮನದಿಂದ ರಚಿಸಿದಾತನೂ ಆತನೇ.
16. (ಎ) ದೇವರ ನೋಟದ ಭೇದ್ಯ ಶಕ್ತಿಯನ್ನು ಕೀರ್ತನೆ 139:15, 16 ಯಾವ ರೀತಿಯಲ್ಲಿ ಎತ್ತಿಹೇಳುತ್ತದೆ? (ಬಿ) ಇದು ನಮಗೆ ಏಕೆ ಉತ್ತೇಜಕವಾಗಿರಬೇಕು?
16 ಅನಂತರ ದೇವರ ದೃಷ್ಟಿಯ ಭೇದ್ಯ ಶಕ್ತಿಯನ್ನು ಒತ್ತಿಹೇಳುತ್ತಾ, ಕೀರ್ತನೆಗಾರನು ಕೂಡಿಸುವುದು: “ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ [ಮಾತೆಯ ಗರ್ಭಕ್ಕೆ ಕವಿತಾರೂಪದ ನಿರ್ದೇಶನವೆಂದು ಸ್ಫುಟವಾದರೂ ಆದಾಮನ ನಿರ್ಮಾಣವು ಮಣ್ಣಿನಿಂದಾದಕ್ಕೆ ಅಪ್ರತ್ಯಕ್ಷ ಸೂಚನೆಯೊಂದಿಗೆ] ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ತಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ [ದೇಹದ ಅಂಗಗಳು] ಪ್ರಥಮದಿನವು ಪ್ರಾರಂಭವಾಗುವ [ನಿರ್ದಿಷ್ಟ ದೇಹ ಭಾಗವಾಗುವ] ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” (ಕೀರ್ತನೆ 139:15, 16) ಜೊತೆ ಮಾನವರು ನಮ್ಮನ್ನು ತಿಳಿಯಲಿ, ತಿಳಿಯದೆ ಇರಲಿ—ಯೆಹೋವನು ತಿಳುಕೊಳ್ಳುತ್ತಾನೆ—ಎಂಬದರ ಕುರಿತು ಯಾವ ಸಂಶಯವೂ ಇಲ್ಲ. ಅದು ನಮ್ಮನ್ನು ಹೇಗೆ ಪ್ರಭಾವಿಸಬೇಕು?
17. ದೇವರ ಕೃತ್ಯಗಳು ಆಶ್ಚರ್ಯಕರವೆಂದು ನಾವು ವೀಕ್ಷಿಸುವಾಗ, ಇದು ನಮ್ಮನ್ನು ಏನು ಮಾಡುವಂತೆ ಪ್ರೇರೇಪಿಸುತ್ತದೆ?
17 ತಾನು ಯಾವುದರ ಕುರಿತು ಬರೆಯುತ್ತಿದ್ದನೋ ಆ ದೇವರ ಕೃತ್ಯಗಳು ಆಶ್ಚರ್ಯಕರವಾಗಿವೆಯೆಂದು ಕೀರ್ತನೆ 139ರ ಲೇಖಕನು ಒಪ್ಪಿಕೊಂಡನು. ನೀವು ಸಹ ಆ ರೀತಿ ಭಾವಿಸುತ್ತೀರೋ? ಆಶ್ಚರ್ಯಕರವಾಗಿರುವ ಒಂದು ವಿಷಯವು ವ್ಯಕ್ತಿಯೊಬ್ಬನನ್ನು ಆಳವಾಗಿ ಯೋಚಿಸುವಂತೆ ಮತ್ತು ತನ್ಮಯವಾದ ಗಮನವನ್ನು ಕೊಡುವಂತೆ ಮಾಡುತ್ತದೆ. ದೈಹಿಕ ಸೃಷ್ಟಿಯ ಯೆಹೋವನ ಕೃತ್ಯಗಳಿಗೆ ಅದೇ ರೀತಿಯ ಪ್ರತಿವರ್ತನೆಯನ್ನು ನೀವು ತೋರಿಸುವುದು ಸಂಭವನೀಯ. (ಹೋಲಿಸಿ ಕೀರ್ತನೆ 8:3, 4, 9.) ಮೆಸ್ಸಿಯನೀಕ ರಾಜ್ಯವನ್ನು ಸ್ಥಾಪಿಸುವುದರಲ್ಲಿ ಆತನು ಮಾಡಿರುವ ಸಂಗತಿಗಳಿಗೆ, ಭೂಮಿಯಲ್ಲೆಲ್ಲಾ ಸುವಾರ್ತೆಯು ಸಾರಲ್ಪಡುವಂತೆ ಆತನು ಮಾಡುತ್ತಿರುವ ವಿಷಯಗಳಿಗೆ, ಮತ್ತು ಆತನ ವಾಕ್ಯವು ಮಾನವ ವ್ಯಕ್ತಿತ್ವಗಳನ್ನು ಮಾರ್ಪಡಿಸುವಂಥ ರೀತಿಗೆ ನೀವು ಅದೇ ರೀತಿಯ ಗಮನವನ್ನು ಕೊಡುತ್ತಿರೋ?—ಹೋಲಿಸಿ 1 ಪೇತ್ರ 1:10-12.
18. ದೇವರ ಕೃತ್ಯಗಳು ಭಯಭಕ್ತಿ ಹುಟ್ಟಿಸುವಂಥವುಗಳೆಂದು ನಾವು ಕಾಣುವುದಾದರೆ, ಅದು ನಮ್ಮನ್ನು ಹೇಗೆ ಪ್ರಭಾವಿಸುವುದು?
18 ತದ್ರೀತಿ ದೇವರ ಕೃತ್ಯಗಳ ಧ್ಯಾನಿಸುವಿಕೆಯು ಭಯಭಕ್ತಿ-ಪ್ರೇರಕವಾಗಿದೆ, ಅದು ನಿಮ್ಮಲ್ಲಿ ಹಿತಕರವಾದ ಭಯವನ್ನು ಉಂಟುಮಾಡುತ್ತದೆ, ಪ್ರಬಲವಾಗಿ ಪ್ರಚೋದಿಸುವಂಥದ್ದೂ, ನಿಮ್ಮ ವ್ಯಕ್ತಿತ್ವದ ಮೇಲೆ ಮತ್ತು ನಿಮ್ಮ ಜೀವಿತವನ್ನು ನೀವು ಉಪಯೋಗಿಸುವ ರೀತಿಯ ಮೇಲೆ ಗಹನವಾದ ಪರಿಣಾಮ ಬೀರುವಂಥದ್ದೂ ಆಗಿರುತ್ತದೆ ಎಂಬದು ನಿಮ್ಮ ಅನುಭವವಾಗಿದೆಯೇ? (ಹೋಲಿಸಿ ಕೀರ್ತನೆ 66:5.) ಹಾಗಿದ್ದರೆ, ಯೆಹೋವನನ್ನು ಕೊಂಡಾಡಲು, ಆತನನ್ನು ಸ್ತುತಿಸಲು, ಆತನ ಉದ್ದೇಶಗಳ ಕುರಿತು ಮತ್ತು ಆತನನ್ನು ಪ್ರೀತಿಸುವವರಿಗಾಗಿ ಆತನು ಕಾದಿಟ್ಟಿರುವ ಆಶ್ಚರ್ಯಕರ ವಿಷಯಗಳ ಕುರಿತು ಇತರರಿಗೆ ತಿಳಿಸಲು ಸಂದರ್ಭಗಳನ್ನು ಮಾಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರೇರೇಪಿಸುವುದು.—ಕೀರ್ತನೆ 145:1-3.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇವರಿಂದ ಪ್ರಕಾಶಿತವಾದ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟ 150 ನೋಡಿ.
ನಿಮ್ಮ ಹೇಳಿಕೆಯೇನು?
▫ “ಯೆಹೋವನೇ ದೇವರು” ಎಂಬ ನಮ್ಮ ತಿಳಿಯುವಿಕೆಯು, ಆತನನ್ನು ಉಲ್ಲಾಸದಿಂದ ಸೇವಿಸುವಂತೆ ನಮಗೆ ಹೇಗೆ ಸಹಾಯ ಮಾಡುತ್ತದೆ?
▫ ನಾವು ಮಾಡುವ ಎಲ್ಲವು ದೇವರಿಗೆ ತಿಳಿದಿರುವುದು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕು?
▫ ನಾವು ದೇವರ ನೋಟದಿಂದ ಎಂದೂ ಹೊರಗಿಲ್ಲವೆಂಬ ನಿಜತ್ವವು ಏಕೆ ಉತ್ತೇಜನೀಯವು?
▫ ಯಾವ ಮಾನವನಿಗೂ ಸಾಧ್ಯವಿಲ್ಲದ ವಿಧಗಳಲ್ಲಿ ದೇವರು ನಮ್ಮನ್ನು ತಿಳಿಯಶಕ್ತನಾಗಿದ್ದಾನೆ ಏಕೆ?
▫ ಇಂಥ ಒಂದು ಅಧ್ಯಯನವು ನಮ್ಮನ್ನು, ಯೆಹೋವನನ್ನು ಕೊಂಡಾಡ ಬಯಸುವಂತೆ ಮಾಡುತ್ತದೆಯೇಕೆ?