ಪಯನೀಯರರು ಆಶೀರ್ವಾದಗಳನ್ನು ಅನುಗ್ರಹಿಸುತ್ತಾರೆ ಹಾಗೂ ಪಡೆಯುತ್ತಾರೆ
“ಪಯನೀಯರ್ ಸೇವೆಯು ಒಂದು ಯಶಸ್ವಿಯಾದ ಐಹಿಕ ವೃತ್ತಿಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿದೆ. ಯೆಹೋವ ಮತ್ತು ಆತನ ಸತ್ಯದ ಕುರಿತು ಜನರು ತಿಳಿಯುವಂತೆ ಸಹಾಯ ಮಾಡುವದಕ್ಕಿಂತ ಹೆಚ್ಚು ತೃಪ್ತಿದಾಯಕವಾದದ್ದು ಬೇರೇನೂ ಇಲ್ಲ.” ಪಯನೀಯರ್ ಸೇವೆಯನ್ನು—ಪೂರ್ಣ ಸಮಯದ ರಾಜ್ಯ ಸಾರುವಿಕೆಯನ್ನು—ಆಕೆಯ ವೃತ್ತಿಯಂತೆ ಆರಿಸಿಕೊಂಡ ಒಬ್ಬಾಕೆ ಕ್ರೈಸ್ತ ಸ್ತ್ರೀಯು ಹೀಗೆ ಹೇಳಿದಳು. ಅಂತಹ ಸಂತೋಷವನ್ನು ಬೇರೆ ಎಷ್ಟು ವೃತ್ತಿಗಳು ಕೊಡಬಲ್ಲವು?
ಪಯನೀಯರ್ ಸೇವೆಯು ಉನ್ನತವಾದ ಗುರಿಯೂ ಅಮೂಲ್ಯವಾದ ಸುಯೋಗವೂ ಆಗಿದೆ. ಇಂತಹ ಜೀವಿತವನ್ನು ವ್ಯಕ್ತಿಯೊಬ್ಬನು ಹೇಗೆ ಆರಿಸಿಕೊಳ್ಳಬಲ್ಲನು? ಅದು ನೀಡುವ ಆಶೀರ್ವಾದಗಳನ್ನು ಪಡೆಯಲು ಪಯನೀಯರ್ ಸೇವೆಯೊಂದಿಗೆ ಬಹಳ ಕಾಲದ ವರೆಗೆ ಅಂಟಿಕೊಂಡಿರಲು ಯಾವುದರ ಅಗತ್ಯವಿದೆ?
ಎರಡು ವಿಷಯಗಳು ಪ್ರಾಮುಖ್ಯವಾಗಿವೆ. ಪ್ರಥಮವಾಗಿ, ಯೋಗ್ಯವಾದ ಸಂದರ್ಭಗಳು. ಪಯನೀಯರ್ ಸೇವೆಯನ್ನು ಸ್ಪಷ್ಟವಾಗಿಗಿ ಅಸಾಧ್ಯ ಮಾಡುವ ಸಂದರ್ಭಗಳಲ್ಲಿ ಅನೇಕರು ಜೀವಿಸುತ್ತಾರೆ. ಮತ್ತು ಎರಡನೆಯದಾಗಿ, ಸೂಕ್ತವಾದ ಆತ್ಮಿಕ ಅರ್ಹತೆಗಳು ಮತ್ತು ಮನೋಭಾವ. ಸದ್ಯದ ಪರಿಸ್ಥಿತಿಗಳು ವ್ಯಕ್ತಿಯೊಬ್ಬನಿಗೆ ಪಯನೀಯರ್ ಸೇವೆ ಮಾಡಲು ಅನುಮತಿ ನೀಡಲಿ, ನೀಡದಿರಲಿ, ನಿಸ್ಸಂದೇಹವಾಗಿ ಎಲ್ಲರು ಪ್ರೌಢ ಕ್ರೈಸ್ತ ಗುಣಗಳನ್ನು ವಿಕಸಿಸುವುದರ ಕಡೆಗೆ ಕೆಲಸ ಮಾಡಬಲ್ಲರು.
ಕೆಲವರು ಪಯನೀಯರ್ ಸೇವೆಮಾಡುವ ಕಾರಣ
ಯಶಸ್ವಿಯಾದ ಪಯನೀಯರ್ ಸೇವೆಗಾಗಿ ಇರುವ ಅರ್ಹತೆಗಳಾವುವು? ಒಳ್ಳೆಯದು, ಸಾರುವ ಕೌಶಲಗಳು ಪ್ರಾಮುಖ್ಯ. ಅಪರಿಚಿತರಿಗೆ ಸುವಾರ್ತೆಯನ್ನು ಹೇಗೆ ಸಾದರಪಡಿಸಬೇಕು, ಆಸಕ್ತಿ ಇರುವವರಲ್ಲಿ ಹೇಗೆ ಪುನಃ ಸಂದರ್ಶನಗಳನ್ನು ಮಾಡಬೇಕು, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಹೇಗೆ ನಡೆಸಬೇಕು ಎಂದು ಪಯನೀಯರರು ತಿಳಿದಿರುವುದು ಅಗತ್ಯ. ಈ ಕೌಶಲಗಳ ಕೊರತೆ ಪಯನೀಯರನ್ನೊಬ್ಬನನ್ನು ನಿರಾಶೆಗೊಳಿಸಬಲ್ಲದು. ಆದರೂ, ಬೇರೆ ವಿಷಯಗಳೂ ಕೂಡ ಪ್ರಾಮುಖ್ಯ.
ಉದಾಹರಣೆಗೆ, ನಮ್ಮ ಆರಾಧನೆಯೊಂದಿಗೆ ಜೊತೆಗೂಡಿರುವ ಎಲ್ಲಾ ವಿಷಯಗಳು ಯೆಹೋವ ಮತ್ತು ಆತನ ಸಂಸ್ಥೆಯೊಂದಿಗೆ ನಮ್ಮ ಸಂಬಂಧಕ್ಕೆ ಸಂಬಂಧಿಸಿದೆ. ಇದು ಪಯನೀಯರ್ ಸೇವೆಯನ್ನು ಒಳಗೊಳ್ಳುತ್ತದೆ. ರಾಡೊ ಎಂಬ ಒಬ್ಬ ಯುವ ಪಯನೀಯರನು ವಿವರಿಸಿದ್ದು: “ಒಬ್ಬ ಯುವ ವ್ಯಕ್ತಿಗೆ, ಯೆಹೋವನನ್ನು ನೆನಸಿಕೊಳ್ಳುವುದಕ್ಕಿಂತ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವುದಕ್ಕಿಂತ ಉತ್ತಮವಾದ ಬೇರೊಂದು ವಿಷಯವು ಇರುವುದಿಲ್ಲ.” ಹೌದು, ಯುವ ಜನರಿಗಾಗಿ ಪಯನೀಯರ್ ಸೇವೆಯು, ಯೆಹೋವನಿಗೆ ತಮ್ಮ ಪ್ರೀತಿಯನ್ನು ಮತ್ತು ಆತನಿಗೆ ಆಪತ್ತೆಯನ್ನು ಪ್ರದರ್ಶಿಸುವ ಒಂದು ಉತ್ತಮ ಮಾರ್ಗವಾಗಿದೆ.—ಪ್ರಸಂಗಿ 12:1.
ಜ್ಞಾನ ಮತ್ತು ತಿಳಿವಳಿಕೆ ಕೂಡ ಕಡೆಗಣಿಸಲಾಗದ ವಿಷಯಗಳಾಗಿವೆ. (ಫಿಲಿಪ್ಪಿ 1:9-11) ಕಾರ್ಯತಃ ನಮ್ಮ ಆತ್ಮಿಕ ಯಂತ್ರವನ್ನು ಓಡುತ್ತಾ ಇರುವಂತೆ ಮಾಡುವ ಇಂಧನ ಇವುಗಳಾಗಿವೆ. ಆತ್ಮಿಕವಾಗಿ ಆಯಾಸಪಡುವುದನ್ನು, ನಮ್ಮ ಉತ್ಸಾಹ ಮತ್ತು ಮನವರಿಕೆಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಕ್ರಮವಾದ ವೈಯಕ್ತಿಕ ಅಭ್ಯಾಸವು ಅಗತ್ಯ. ನಿಸ್ಸಂದೇಹವಾಗಿ, ನಾವು ತೆಗೆದುಕೊಳ್ಳುವ ಜ್ಞಾನವು ಕೇವಲ ಬುದ್ಧಿಶಕ್ತಿಯನ್ನು ಮಾತ್ರವಲ್ಲ ಹೃದಯವನ್ನೂ ಪ್ರಭಾವಿಸಬೇಕು. (ಜ್ಞಾನೋಕ್ತಿ 2:2) ವೈಯಕ್ತಿಕ ಅಭ್ಯಾಸದ ಜೊತೆಗೆ, ನಾವು ಪಡೆಯವಂತಹ ಜ್ಞಾನವು ಹೃದಯವನ್ನು ಸ್ಪರ್ಶಿಸುವಂತೆ ಪ್ರಾರ್ಥನೆ ಮತ್ತು ಮನನಕ್ಕಾಗಿ ಸಮಯದ ಅಗತ್ಯ ನಮಗಿದೆ. ಆಮೇಲೆ, ನಮ್ಮ ಪರಿಸ್ಥಿತಿಗಳು ಅನುಮತಿಸಿದರೆ, ನಾವು ಪಯನೀಯರ್ ಸೇವೆ ಮಾಡಬಯಸುವೆವು.—ಹೋಲಿಸಿ ಎಜ್ರ 7:10.
ಪಯನೀಯರ್ ಸೇವೆಯನ್ನು ಮಾಡುವುದು ಸ್ವತ್ಯಾಗದ ಆತ್ಮವನ್ನು ಕೂಡ ಕೇಳಿಕೊಳ್ಳುತ್ತದೆ. ರಾನ್ ಎಂಬ ಒಬ್ಬ ಯೌವನಸ್ಥನು, ಪಯನೀಯರ್ ಸೇವೆಗಾಗಿ ತನ್ನ ಎಲ್ಲಾ ಯೋಜನೆಗಳನ್ನು ಮಾಡಿದ್ದನು. ಮುಂದುವರಿಯಲು ಸಾಧ್ಯವಾಗುವಂತೆ, ಸರಿಯಾದ ಪರಿಸ್ಥಿತಿಗಳಿಗಾಗಿ ಅವನು ಕಾಯುತ್ತಾ ಇದ್ದನು. ನಿರ್ದಿಷ್ಟವಾಗಿ, ಅವನಿಗೆ ಪಯನೀಯರ್ ಸೇವೆಯನ್ನು ಮಾಡುವಂತೆ ಮತ್ತು ಅದೇ ಸಮಯದಲ್ಲಿ ಜೀವನದ ಕೆಲವೊಂದು ಸುಖ ಭೋಗಗಳನ್ನು ಅನುಭವಿಸುವಂತೆ ಅನುಮತಿಸುವ ಒಂದು ಕೆಲಸವು ಬೇಕಾಗಿತ್ತು. ಒಬ್ಬಾಕೆ ಪ್ರೌಢ ಸಹೋದರಿಗೆ ಅವನು ಇದನ್ನು ತಿಳಿಸಿದಾಗ, ಆಕೆಯ ಉತ್ತರವು ಅವನನ್ನು ಕುಲುಕಾಡಿತು. ಆಕೆ ಅಂದದ್ದು: “ಯೆಹೋವನು ಕೃತ್ಯಗಳನ್ನು ಆಶೀರ್ವದಿಸುತ್ತಾನೆ, ವಾಗ್ದಾನಗಳನ್ನಲ್ಲ.” ಪಯನೀಯರ್ ಸೇವೆಗಾಗಿ ಸಮಯವನ್ನು ಅನುಮತಿಸಿದ ಕಡಿಮೆ ಸಂಬಳವಿದ್ದ ಒಂದು ಕೆಲಸವನ್ನು ಯೌವನಸ್ಥನು ಕಂಡುಕೊಂಡನು. ಕಡಿಮೆ ಆದಾಯದೊಂದಿಗೆ ಮುಂದುವರಿಯಲು ಒಬ್ಬ ವ್ಯಕ್ತಿಗೆ ಮತ್ತಾಯ 6:25-34ರ ಅನ್ವಯ ಸಹಾಯಮಾಡುವುದು.
ಒಳ್ಳೆಯ ಸಲಹೆಗಳನ್ನು ಅನುಸರಿಸಲು ಒಂದು ದೀನ ಮನಃಪೂರ್ವಕತೆ ಕೂಡ ನಾವು ಪಯನೀಯರ್ ಸೇವೆಯನ್ನು ಪ್ರವೇಶಿಸುವಂತೆ ನೆರವಾಗಬಹುದು. ಕ್ರೈಸ್ತಳೋಪಾದಿ ಹಾನಾ, ಆಕೆಯ ಜೀವಿತದ ಆದಿ ಭಾಗದಲ್ಲಿ ಪಯನೀಯರ್ ಸೇವೆ ಮಾಡುವ ಇಚ್ಛೆಯನ್ನು ಬೆಳೆಸಿಕೊಂಡಳು. ಕುಟುಂಬವೊಂದನ್ನು ಬೆಳೆಸುವಾಗ ಅವಳು ಪಯನೀಯರ್ ಸೇವೆಯನ್ನು ಮಾಡಲಿಲ್ಲ ಮತ್ತು ತದನಂತರ ಒಂದು ವ್ಯಾಪಾರ ವೃತ್ತಿಯಲ್ಲಿ ಅವಳು ಒಳಗೊಂಡಳು. ಚುರುಕಾದ ಹಿರಿಯರಿಂದ ಬಂದ ಒಳ್ಳೆಯ ಸಲಹೆಗೆ ಕಿವಿಗೊಡುತ್ತಾ, ಆಕೆಯ ಆಸಕ್ತಿಕರ ಐಹಿಕ ವೃತ್ತಿಯನ್ನು ಅವಳು ಬಿಟ್ಟುಬಿಟ್ಟಳು ಮತ್ತು ಪಯನೀಯರ್ ಸೇವೆಯನ್ನು ಆರಂಭಿಸಿದಳು. ಇತರರನ್ನು ಸಮರ್ಪಣೆಗೆ ತರುವಲ್ಲಿ ಮತ್ತು ನಿಷ್ಕ್ರಿಯ ಪ್ರಚಾರಕರಿಗೆ ಸಹಾಯಮಾಡುವಲ್ಲಿ ಹಾನಾ ಈಗ ಮಹಾ ಆನಂದವನ್ನು ಅನುಭವಿಸುತಾಳ್ತೆ.
ಸತ್ಯವು ಒಬ್ಬನ ಜೀವಿತದಲ್ಲಿ ಏನನ್ನು ಮಾಡಿದೆಯೊ ಅದಕ್ಕಾಗಿ ಕೃತಜ್ಞತೆ ಕೂಡ ಪಯನೀಯರ್ ಸೇವೆ ಮಾಡಲು ಒಂದು ಪ್ರೇರಕವಾಗಿರಬಲ್ಲದು. ಯಾರ ಮದುವೆ ಒಡೆದು ಹೋಗುತ್ತಾ ಇತ್ತೊ ಅಂತಹ ಒಬ್ಬ ಆಳವಾಗಿ ಮನಗುಂದಿದ ಸ್ತ್ರೀಯ ವಿಷಯವನ್ನು ಪರಿಗಣಿಸಿರಿ. ದೇವರ ವಾಕ್ಯದ ಸತ್ಯವನ್ನು ಅವಳು ಕಲಿತು ಅದನ್ನು ಕಾರ್ಯರೂಪಕ್ಕೆ ಹಾಕಿದಾಗ, ಈ ಸನ್ನಿವೇಶವು ನಾಟಕೀಯವಾಗಿ ಬದಲಾಯಿತು. ಸತ್ಯವು ಅವಳಿಗಾಗಿ ಏನನ್ನು ಮಾಡಿದೆಯೊ ಅದರಿಂದ ಪುಳಕಿತಗೊಂಡು, ಗಣ್ಯತೆಯನ್ನು ತೋರಿಸಲು ಅವಳಿಗಿರುವ ಅತ್ಯುತ್ತಮ ಮಾರ್ಗವು ಪಯನೀಯರ್ ಸೇವೆ ಮಾಡಿ ಇತರರಿಗೆ ಸಹಾಯ ಮಾಡುವುದೇ ಆಗಿರುವುದೆಂದು ಅವಳು ನಿರ್ಣಯಿಸಿದಳು. ಇದನ್ನು ಅವಳು ಮಾಡಿದಳು, ಮತ್ತು ಅನೇಕ ಬೈಬಲ್ ಅಧ್ಯಯನಗಳ ಹಾಗೂ ಸಂತೋಷಕರವಾದ ಕುಟುಂಬದ ಆಶೀರ್ವಾದಗಳನ್ನು ಈಗ ಅವಳು ಅನುಭವಿಸುತಾಳ್ತೆ.
ಇತರರು ಸಹಾಯ ಮಾಡಬಲ್ಲರು
ಪಯನೀಯರರು ಅನೇಕ ಬಾರಿ ಇತರ ಪಯನೀಯರರನ್ನು ತಯಾರಿಸುತ್ತಾರೆ. ಇಬ್ಬರು ಪಯನೀಯರರೊಂದಿಗೆ ಹೆತ್ತವರು ಬೈಬಲನ್ನು ಅಭ್ಯಾಸಿಸಿದಾಗ, ಈ ಹಿಂದೆ ತಿಳಿಸಲ್ಪಟ್ಟ ರಾಡೊ ಆರು ವರ್ಷದವನಾಗಿದ್ದ. ಇನ್ನೂ ಬಹಳ ಚಿಕ್ಕವನಿರುವಾಗಲೇ, ಕ್ಷೇತ್ರ ಶುಶ್ರೂಷೆಗೆ ಅವನು ಕ್ರಮವಾಗಿ ಈ ಪೂರ್ಣ ಸಮಯದ ಸಾರುವವರೊಂದಿಗೆ ಹೋಗುತ್ತಿದ್ದ. ರಾಡೊ ತಾನೇ 17ರ ಪ್ರಾಯದಲ್ಲಿ ಒಬ್ಬ ಕ್ರಮದ ಪಯನೀಯರನಾದ. ಆರ್ನೊ ಎಂಬ ಇನ್ನೊಬ್ಬ ಯೌವನಸ್ಥನು, ಕ್ರೈಸ್ತ ಮನೆಯೊಂದರಲ್ಲಿ ಬೆಳೆಸಲ್ಪಟ್ಟಿದ್ದರೂ, ಆತ್ಮಿಕವಾಗಿ ಬಲಹೀನಗೊಂಡನು. ತದನಂತರ, ತನ್ನ ಆತ್ಮಿಕ ಬಲವನ್ನು ಪುನಃಸ್ಥಾಪಿಸಲು ಅವನು ಆರಂಭಿಸಿದ, ಮತ್ತು ಈಗ ಅವನು ಹೇಳುವುದು: “ಪಯನೀಯರರಿಂದ ನಾನು ಬಹಳಷ್ಟು ಉತ್ತೇಜನವನ್ನು ಪಡೆದುಕೊಂಡೆ. ನಾನು ಅವರೊಂದಿಗೆ ವಿಶೇಷವಾಗಿ ಶಾಲಾ ರಜೆಯ ಸಮಯದಲ್ಲಿ ಸಹವಾಸ ಮಾಡಿದೆ ಮತ್ತು ಕೆಲವೊಮ್ಮೆ ಒಂದು ತಿಂಗಳಿಗೆ ಕ್ಷೇತ್ರ ಸೇವೆಯಲ್ಲಿ 60 ತಾಸುಗಳಷ್ಟು ಹೆಚ್ಚು ಸಮಯವನ್ನು ವರದಿಸಿದೆ. ಅದಾದನಂತರ, ಕ್ರಮದ ಪಯನೀಯರ್ ಸೇವೆಯ [ಪ್ರತಿ ತಿಂಗಳು 90 ಗಂಟೆಗಳನ್ನು ಅಗತ್ಯಪಡಿಸುವ] ಹೆಜ್ಜೆಯು ಬಹಳ ದೊಡ್ಡ ವಿಷಯವಾಗಿರಲಿಲ್ಲ.” ಲೋಕವನ್ನು ಸಂಪೂರ್ಣವಾಗಿ ಉಪಯೋಗಿಸಬಾರದೆಂಬ 1 ಕೊರಿಂಥ 7:29-31ರ ಬುದ್ಧಿವಾದದ ಮೇಲೆ ಮನನಮಾಡುವುದು, ನಿಜವಾಗಿಯೂ ಇಂತಹ ಯುವ ಜನರಿಗೆ ಸಹಾಯ ಮಾಡಿದೆ.
ಆತ್ಮಿಕ ಅಭಿರುಚಿಗಳಿಗೆ ಪ್ರಥಮ ಸ್ಥಾನವಿರುವ ಮತ್ತು ಪೂರ್ಣ ಸಮಯದ ಶುಶ್ರೂಷೆಯನ್ನು ತಮ್ಮ ಮಕ್ಕಳು ಪ್ರವೇಶಿಸುವಂತೆ ಉತ್ತೇಜಿಸುವ ಹೆತ್ತವರಿರುವ ಮನೆಯಲ್ಲಿ ಪಯನೀಯರ್ ಆತ್ಮವು ಸುಲಭವಾಗಿ ಬೇರೂರಬಲ್ಲದು. ಅಂತಹ ಒಂದು ಮನೆಯಲ್ಲಿ ಬೆಳೆದ ಫಿಲೊ, ಹೇಳುವುದು: “ಒಂದು ಐಹಿಕ ಭವಿಷ್ಯತ್ತಿಗಾಗಿ ಕೆಲಸಮಾಡಲು ನನ್ನ ಶಿಕ್ಷಣವನ್ನು ಮುಂದುವರಿಸುವಂತೆ ಅನೇಕರು ನನಗೆ ಬುದ್ಧಿಹೇಳಿದರು. ಆದರೆ ಒಂದು ವಿವೇಕಪ್ರದ ಆಯ್ಕೆಯನ್ನು ಮಾಡುವಂತೆ ನನ್ನ ಹೆತ್ತವರು ನನಗೆ ಸಹಾಯಮಾಡಿದರು. ಭವಿಷ್ಯತ್ತಿಗಾಗಿ ಕಟ್ಟಲು ನಾನು ನಿಜವಾಗಿ ಬಯಸಿದರೆ, ಯೆಹೋವನೊಂದಿಗೆ ಒಂದು ಸಂಬಂಧವನ್ನು ವಿಕಸಿಸುವುದು ನನ್ನ ಮೊದಲ ಪ್ರಾಧಾನ್ಯವಾಗಿರಬೇಕೆಂದು ಅವರು ನನಗೆ ಹೇಳಿದರು.”
ಟಾಮಾರ್ ಎಂಬ ಒಬ್ಬಾಕೆ ಯೌವನಸ್ಥೆ ಕೂಡ ಆಕೆಯ ಪಯನೀಯರ್ ಸೇವೆಯು ತನ್ನ ಹೆತ್ತವರ ಉದಾಹರಣೆ ಮತ್ತು ಪ್ರಯತ್ನಗಳ ಕಾರಣವೆಂದು ಹೇಳುತ್ತಾಳೆ. ಅವಳು ಹೇಳುವುದು: “ಜೀವನದ ಆತ್ಮಿಕ ನೋಟವನ್ನು ನಾನು ಯಾವಾಗ ವಿಕಸಿಸಿಕೊಂಡೆ ಎಂದು ನಿಜವಾಗಿ ನನಗೆ ಹೇಳಲಾಗದು, ಆದರೆ ಅಂತಹ ನೋಟದೊಂದಿಗೆ ನಾನು ಜನಿಸಿರಲಿಲ್ಲವೆಂದು ನನಗೆ ಗೊತ್ತಿದೆ. ಕ್ರಮವಾಗಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವ ಮತ್ತು ಕೂಟಗಳಿಗೆ ಹಾಜರಾಗುವ ನನ್ನ ಹೆತ್ತವರ ರೂಢಿಯು, ಅಷ್ಟೇ ಅಲ್ಲದೆ ಸತ್ಯಕ್ಕಿರುವ ಅವರ ಆಳವಾದ ಪ್ರೀತಿಯು, ನನ್ನ ಆತ್ಮಿಕ ದೃಷ್ಟಿಕೋನವನ್ನು ವಿಕಸಿಸುವಂತೆ ನನ್ನನ್ನು ಬಹಳವಾಗಿ ಸಹಾಯಿಸಿತು.”
ನಿಮ್ಮ ನಿರ್ಣಯಕ್ಕೆ ಅಂಟಿಕೊಂಡಿರುವುದು
ಪಯನೀಯರ್ ಸೇವೆಯನ್ನು ವ್ಯಕ್ತಿಯೊಬ್ಬನು ಪ್ರಾರಂಭಿಸಿದ ಅನಂತರ, ಅದರಲ್ಲಿ ಬಿಡದೆ ಮುಂದುವರಿಯುವುದು ಅವನನ್ನು ಯಾ ಅವಳನ್ನು ಆ ವಿವೇಕಪ್ರದ ನಿರ್ಣಯದ ಪೂರ್ತಿ ಪ್ರಯೋಜನವನ್ನು ಪಡೆಯುವಂತೆ ಶಕ್ತಗೊಳಿಸುವುದು. ಆ ವಿಷಯದಲ್ಲಿ ಬಹಳಷ್ಟು ಪ್ರಾಯೋಗಿಕ ಸಲಹೆಯನ್ನು ಕೊಡಸಾಧ್ಯವಿದೆ. ಉದಾಹರಣೆಗೆ, ಅದನ್ನು ಸಾಧ್ಯವಾಗುವಷ್ಟರ ಮಟ್ಟಿಗೆ ಉತ್ಪನ್ನಕಾರಕವಾಗಿ ಮಾಡಲು ತಮ್ಮ ಸಮಯವನ್ನು ಹೇಗೆ ಪಟ್ಟಿ ಮಾಡಬೇಕೆಂದು ಕಲಿಯುವುದು ಪಯನೀಯರರಿಗೆ ಒಳ್ಳೆಯದಾಗಿರುವುದು. ಆದರೂ, ಯೆಹೋವ ಮತ್ತು ಆತನ ಸಂಸ್ಥೆಯೊಂದಿಗೆ ಒಬ್ಬ ವ್ಯಕ್ತಿಯ ಸಂಬಂಧವು ಅತಿ ಪ್ರಾಮುಖ್ಯವಾದ ಅಂಶವಾಗಿ ಉಳಿಯುತ್ತದೆ.
ಪ್ರಾರ್ಥನಾಪೂರ್ವಕವಾದ ಮನೋಭಾವವು ಇದಕ್ಕೆ ಸಂಬಂಧಕವಾದ ವಿಷಯವಾಗಿದೆ. “ನಾನು ಸತ್ಯದೊಳಗೆ ಬಂದಾಗ, ಪಯನೀಯರ್ ಸೇವೆ ಮಾಡುವ ತೀವ್ರ ಬಯಕೆ ನನಗಿತ್ತು,” ಎಂದು ಕೊರ್ ಹೇಳುತ್ತಾನೆ. ಹಾಗಿದ್ದರೂ, ಕೃಷಿ ವಿಶ್ವವಿದ್ಯಾಲಯದಲ್ಲಿ ಒಂದು ಅಭ್ಯಾಸ ಕ್ರಮವನ್ನು ಮೊದಲು ಪೂರ್ತಿಗೊಳಿಸುವಂತೆ ಅವನ ತಂದೆ ತಗಾದೆ ಮಾಡಿದರು. ಅದಾದಮೇಲೆ, ಕೊರ್ ಪಯನೀಯರ್ ಸೇವೆಯನ್ನು ಪ್ರಾರಂಭಿಸಿದನು. ಸಕಾಲದಲ್ಲಿ ಅವನು ಮದುವೆಯಾದನು, ಮತ್ತು ಅವನ ಹೆಂಡತಿಯು ಪಯನೀಯರ್ ಸೇವೆಯಲ್ಲಿ ಅವನ ಜೊತೆಗೂಡಿದಳು. ಅವಳು ಗರ್ಭಿಣಿಯಾದಾಗ, ಪಯನೀಯರ್ ಕೆಲಸವನ್ನು ಬಿಡುವ ಸಾಧ್ಯತೆಯನ್ನು ಅವನು ಎದುರಿಸಿದನು. “ನಾನು ಯೆಹೋವನಿಗೆ ಅನೇಕ ಬಾರಿ ಪ್ರಾರ್ಥಿಸಿದೆ ಮತ್ತು ಪಯನೀಯರ್ ಸೇವೆಯನ್ನು ಮುಂದುವರಿಸುವ ನನ್ನ ಹೃದಯದ ಇಚ್ಛೆಯನ್ನು ಆತನ ಮುಂದೆ ಇಟ್ಟೆ,” ಎಂದು ಕೊರ್ ಹೇಳುತ್ತಾನೆ. ಕಟ್ಟಕಡೆಗೆ, ಒಂದು ಕುಟುಂಬವನ್ನು ಬೆಳೆಸುವಾಗ ಪಯನೀಯರ್ ಸೇವೆಯನ್ನು ಮಾಡಲು ಅವನಿಗೆ ಸಾಧ್ಯಮಾಡಿದ ರೀತಿಯ ಉದ್ಯೋಗವನ್ನು ಕೊರ್ ಕಂಡುಕೊಂಡನು.
ಪ್ರಾಪಂಚಿಕ ಆವಶ್ಯಕತೆಗಳೊಂದಿಗೆ ತೃಪ್ತರಾಗಿರುವುದು, ಪಯನೀಯರ್ ಶುಶ್ರೂಷೆಯಲ್ಲಿ ಉಳಿಯಲು ಒಬ್ಬ ವ್ಯಕ್ತಿಗೆ ಅನೇಕ ಬಾರಿ ಸಹಾಯ ಮಾಡುವ ಇನ್ನೊಂದು ಅಂಶವಾಗಿದೆ. ಅಪೊಸ್ತಲ ಪೌಲನು ಬರೆದದ್ದು: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.” (ಇಬ್ರಿಯ 13:5) ಸದ್ಯದ ವಿಷಯಗಳೊಂದಿಗೆ ತೃಪ್ತರಾಗಿರುವುದು, ಹ್ಯಾರೀ ಮತ್ತು ಈರೇನರನ್ನು ಪಯನೀಯರ್ ಸೇವೆಯಲ್ಲಿ ಮುಂದುವರಿಯುವಂತೆ ಸಹಾಯ ಮಾಡಿದೆ. ಕುರುಡಿಯಾಗಿರುವ ಈರೇನ, ಎಂಟು ವರ್ಷಗಳಿಂದ ಪಯನೀಯರಳಾಗಿದ್ದಾಳೆ. “ನಾವು ನಮ್ಮ ಆರ್ಥಿಕ ಸನ್ನಿವೇಶವನ್ನು ಒಂದು ಸಮಸ್ಯೆಯಂತೆ ಎಂದೂ ವೀಕ್ಷಿಸಿಲ್ಲ,” ಎಂದು ಆಕೆ ಹೇಳುತ್ತಾಳೆ. “ಅನಾವಶ್ಯಕ ಆರ್ಥಿಕ ಹೊರೆಗಳನ್ನು ಎಂದೂ ತೆಗೆದುಕೊಳ್ಳದಂತೆ ನಾವು ಕೇವಲ ಕಾಳಜಿ ವಹಿಸಿದೆವು. ನಾವು ಯಾವಾಗಲೂ ವೆಚ್ಚದ ಎಣಿಕೆಯನ್ನು ಮಾಡಿದ್ದೇವೆ. ನಮ್ಮ ಜೀವಿತಗಳು ಮನೋಹರವಾಗಿದ್ದರೂ, ಯಾವಾಗಲೂ ಸರಳವಾಗಿವೆ, ಮತ್ತು ಅವು ಆಶೀರ್ವಾದಗಳಲ್ಲಿ ಸಮೃದ್ಧವಾಗಿವೆ.”
ಅನೇಕ ಆನಂದಗಳು ಮತ್ತು ಆಶೀರ್ವಾದಗಳು
ಒಂಬತ್ತು ವರ್ಷಗಳ ಪಯನೀಯರ್ ಸೇವೆಯ ಕಡೆಗೆ ಮನಸ್ಸು ತಿರುಗಿಸುತ್ತಾ, ಟಾಮಾರ್ ಹೇಳುತ್ತಾಳೆ: “ಆತನು ನಿಜವಾಗಿಯೂ ನಿಮ್ಮ ಕೈಯನ್ನು ಹಿಡಿದುಕೊಂಡಿದ್ದಾನೋ ಎಂಬಂತೆ, ನೀವು ಯೆಹೋವನಿಗೆ ಅತಿ ಸಮೀಪವಾಗುತ್ತೀರಿ.” (ಕೀರ್ತನೆ 73:23) ಕೆಲವು ಪರೀಕ್ಷೆಗಳು ಕೂಡ ಮನಸ್ಸಿಗೆ ಬರುತ್ತವೆ. “ಇತರರ ಅಪರಿಪೂರ್ಣತೆಗಳೊಂದಿಗೆ ಜೊತೆಗೂಡಿದ ನನ್ನ ಸ್ವಂತ ಅಪರಿಪೂರ್ಣತೆಯು ಕ್ರಮವಾಗಿ ನನ್ನನ್ನು ತೊಂದರೆಗೆ ಈಡುಮಾಡಿತ್ತು,” ಎಂದು ಟಾಮಾರ್ ಕೂಡಿಸುತ್ತಾಳೆ. “ಇನ್ನೂ ಹೆಚ್ಚಾಗಿ, ಪ್ರಾಪಂಚಿಕವಾಗಿ ಹೆಚ್ಚು ಪ್ರತಿಫಲವನ್ನು ಕೊಡುವ ಜೀವನದ ರೀತಿಯನ್ನು ಆರಿಸಿದ ಸಹೋದರ ಸಹೋದರಿಯರ ಕಡೆಗೆ ನಾನು ನೋಡುತ್ತಿದ್ದೆ ಮತ್ತು ನಾನು ಮಳೆ ಹಾಗೂ ಚಳಿಯಲ್ಲಿ ಬಾಗಿಲಿಂದ ಬಾಗಿಲಿಗೆ ನಡೆಯುತ್ತಿರುವಾಗ ಅವರ ಆಯ್ಕೆಯು ಮನವೊಪ್ಪುವಂತೆ ಕಂಡಿತು. ಆದರೆ ನನ್ನ ಹೃದಯದ ಆಳದಲ್ಲಿ, ನಾನು ಸ್ಥಾನಗಳನ್ನು ಬದಲಾಯಿಸಲು ಎಂದಿಗೂ ಬಯಸತ್ತಿರಲಿಲ್ಲ. ಇಂತಹ ಆನಂದ, ಇಂತಹ ಆತ್ಮಿಕ ತೃಪ್ತಿ, ಮತ್ತು ಇಂತಹ ಆಶೀರ್ವಾದಗಳನ್ನು ಪಯನೀಯರ್ ಸೇವೆಯ ಹೊರತು ಯಾವುದು ತರಸಾಧ್ಯವಿತ್ತು?” ಸಮಾನವಾದ ಆನಂದಗಳಿಗೆ ಮತ್ತು ಆಶೀರ್ವಾದಗಳಿಗೆ ನೀವು ಬಹಳವಾಗಿ ಮಹತ್ವ ಕೊಡುವಿರೊ?
ಪಯನೀಯರರು ಹೆಚ್ಚು ಸಮಯವನ್ನು ಕ್ರೈಸ್ತ ಶುಶ್ರೂಷೆಯಲ್ಲಿ ವ್ಯಯಿಸುವುದರಿಂದ, ಬೈಬಲ್ ಸತ್ಯದ ಜ್ಞಾನವನ್ನು ಪಡೆಯುವಂತೆ ಹಲವಾರು ವ್ಯಕ್ತಿಗಳಿಗೆ ಸಹಾಯಮಾಡುವ ಸ್ಥಾನದಲ್ಲಿ ಅವರಿದ್ದಾರೆ. ಈ ಹಿಂದೆ ತಿಳಿಸಲ್ಪಟ್ಟ ಹ್ಯಾರೀ ಮತ್ತು ಈರೇನ ಹೇಳುತ್ತಾರೆ: “ಯೆಹೋವನ ಸಂಸ್ಥೆಯಲ್ಲಿ ಪಡೆಯಲು ಅನೇಕ ಸುಯೋಗಗಳು ಇವೆ, ಆದರೆ ಹೊಸದಾಗಿ ಅಭಿರುಚಿಯಿರುವ ವ್ಯಕ್ತಿಯನ್ನು ಯೆಹೋವನ ಸೇವಕನಾಗುವ ಮಟ್ಟಿಗೆ ಪ್ರಗತಿ ಮಾಡುವಂತೆ ಸಹಾಯ ಮಾಡುವುದು ಎಲ್ಲದಕ್ಕಿಂತ ಅತಿ ಮಹಾ ಸುಯೋಗವಾಗಿದೆ.”
“ಜ್ಞಾನೋಕ್ತಿ 10:22ರ ಮಾತುಗಳು ನನ್ನ ವಿಷಯದಲ್ಲಿ ಸತ್ಯವಾಗಿ ಪರಿಣಮಿಸಿವೆ: ‘ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.’ ಮತ್ತೆ ಮತ್ತೆ, ನಾನು ಯೆಹೋವನನ್ನು ಸೇವಿಸಿದ ಸಮಯದಲ್ಲಿ ಈ ವಚನವು ನನಗಾಗಿ ನೆರವೇರಿದೆ,” ಎಂಬುದಾಗಿ ಹೇಳಿದಾಗ, ಇನ್ನೊಬ್ಬ ಪಯನೀಯರನು ವಿಷಯಗಳನ್ನು ಉತ್ತಮವಾಗಿ ಅಭಿವ್ಯಕ್ತಿಸಿದನು.
ಹೆತ್ತವರೇ, ನಿಮ್ಮ ಮಕ್ಕಳಲ್ಲಿ ಪಯನೀಯರ್ ಸೇವೆ ಮಾಡುವ ಬಯಕೆಯನ್ನು ನೀವು ತುಂಬುತ್ತಿದ್ದೀರೊ? ಪಯನೀಯರರೇ, ಇತರರಲ್ಲಿ ಈ ಬಯಕೆಯನ್ನು ಕೆರಳಿಸಲು ನೀವು ಪ್ರಯತ್ನಿಸುತ್ತೀರೊ? ಹಿರಿಯರೇ, ನಿಮ್ಮ ಸಭೆಯಲ್ಲಿ ಇರುವ ಪಯನೀಯರರನ್ನು ನೀವು ಬೆಂಬಲಿಸಿ, ಇತರರಲ್ಲಿ ಪಯನೀಯರ್ ಆತ್ಮವನ್ನು ಕಟ್ಟಲು ಸಹಾಯ ಮಾಡುತ್ತೀರೊ? ತಾವು ಪಯನೀಯರ್ ಸೇವೆಯಲ್ಲಿ ತೊಡಗುವಾಗ ಇಂತಹ ಸಮೃದ್ಧ ಆಶೀರ್ವಾದಗಳಿಗಾಗಿ ಪ್ರಯತ್ನಿಸುವಂತೆ ಯೆಹೋವನ ಜನರಲ್ಲಿ ಹೆಚ್ಚಿನವರು ಪ್ರೇರೇಪಿಸಲ್ಪಡುವಂತಾಗಲಿ.