“ಆ ಹಣ ಎಲ್ಲಿಂದ ಬರುತ್ತದೆ?”
ವಾಚ್ ಟವರ್ ಸೊಸೈಟಿಯ “ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ” ಎಂಬ ವಿಡಿಯೋದ ವೀಕ್ಷಕರು ಪ್ರಭಾವಿತರಾಗುತ್ತಾರೆ. ವಿವಿಧ ಜಾತಿಯ ಮತ್ತು ಹಿನ್ನೆಲೆಗಳ ಚೊಕ್ಕಟ ಪುರುಷರು ಮತ್ತು ಸ್ತ್ರೀಯರು ಒಂದುಗೂಡಿ, ನಸುನಗುತ್ತಾ ಕೆಲಸಮಾಡುತ್ತಾ ಹೊಂದಿಕೆಯಲ್ಲಿರುವುದನ್ನು ಅವರು ಕಾಣುತ್ತಾರೆ. ಗೆಲುವುಳ್ಳ ಸಾವಿರಾರು ಕೆಲಸಗಾರರು ಮಾತ್ರವಲ್ಲ, ಸೊಸೈಟಿಯ ಬ್ರೂಕ್ಲಿನ್ ಮುಖ್ಯ ಕಾರ್ಯಾಲಯದ ದೊಡ್ಡ ದೊಡ್ಡ ಕಟ್ಟಡಗಳ ಸಂಕೀರ್ಣ ಹಾಗೂ ನ್ಯೂ ಯಾರ್ಕ್ನ ವಾಲ್ಕಿಲ್ನಲ್ಲಿರುವ ಅವರ ಹೊಲಗದ್ದೆಗಳು ಸಹ ಅವರ ಗಮನವನ್ನು ಸೆಳೆಯುತ್ತವೆ. ಈ ಕಟ್ಟಡಗಳ ಒಳಗೆ ಅತ್ಯಾಧುನಿಕ ತಂತ್ರಜ್ಞಾನ—ಪ್ರತಿ ತಿಂಗಳು ಲಕ್ಷಾಂತರ ಪ್ರಕಾಶನಗಳನ್ನು ಉತ್ಪಾದಿಸುವ ತೀವ್ರ ವೇಗದ ಪ್ರಿಂಟಿಂಗ್ ಮತ್ತು ಬೈಂಡಿಂಗ್ ಉಪಕರಣ, ಮಹಾ ವೈವಿಧ್ಯದ ಕಂಪ್ಯೂಟರ್ ಸಾಧನ, ಸಾಹಿತ್ಯ ಪ್ರಕಾಶನಕ್ಕೆ ಬೆಂಬಲಕೊಡುವ ಅನೇಕಾನೇಕ ವಿಭಾಗಗಳನ್ನು ಕಾಣಸಾಧ್ಯವಿದೆಯೆಂದು ವಿಡಿಯೋ ತೋರಿಸುತ್ತದೆ.
ಇದು ಒಂದು ಪ್ರಚಂಡವಾದ ಸಾಧನ ಸಂಪನ್ಮೂಲಗಳ ವೆಚ್ಚವನ್ನು ಪ್ರತಿಫಲಿಸುತ್ತದೆ. ಆದುದರಿಂದ ಕೆಲವರು ಕೇಳುವುದು, “ಆ ಹಣ ಎಲ್ಲಿಂದ ಬರುತ್ತದೆ?”
ಸೊಸೈಟಿಯ ಜಾಗತಿಕ ಮುಖ್ಯ ಕಾರ್ಯಾಲಯಕ್ಕೆ ಬರುವ ಸಂದರ್ಶಕರು ಸಹ ತದ್ರೀತಿಯಲ್ಲಿ ಪ್ರಭಾವಿತರಾಗುತ್ತಾರೆ. ಅಲ್ಲಿ ಕೆಲಸ ಮಾಡುವ 3000ಕ್ಕಿಂತಲೂ ಹೆಚ್ಚು ಸ್ವಯಂಸೇವಕ ಶುಶ್ರೂಷಕರ ನಿವಾಸಕ್ಕಾಗಿರುವ ಅನೇಕ ಕಟ್ಟಡಗಳಲ್ಲಿ ಒಂದಾದ 30 ಮಾಳಿಗೆಯ ಹೊಸ ವಸತಿ ಗೃಹವನ್ನು ಸಂದರ್ಶಕರು ಕತ್ತು ಚಾಚಿ ವೀಕ್ಷಿಸುತ್ತಾರೆ. ಬ್ರೂಕ್ಲಿನ್ಗೆ ಸುಮಾರು 110 ಕಿಲೊಮೀಟರ್ ಉತ್ತರದಲ್ಲಿರುವ ಹೊಸತಾದ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ಗೆ ನೀಡಲ್ಪಡುವ ಒಂದು ಭೇಟಿಯು ಸಹ ಅನೇಕರನ್ನು ಬಹಳವಾಗಿ ಚಕಿತಗೊಳಿಸುತ್ತದೆ. ಇನ್ನೂ ಕಟ್ಟಲ್ಪಡುತ್ತಿರುವ ಅದು ಸುಮಾರು 1,200 ಕೆಲಸಗಾರರಿಗೆ ವಸತಿಯನ್ನೊದಗಿಸುತ್ತದೆ. ಪ್ರತಿ ವರ್ಷ ಅಲ್ಲಿ ಮಿಷನೆರಿಗಳ ಎರಡು ತರಗತಿಗಳನ್ನು ತರಬೇತುಮಾಡಿ, ಪರದೇಶಗಳಿಗೆ—ಅವರ ನೇಮಕಗಳಿಗೆ—ಕಳುಹಿಸಲಾಗುವುದು. ಅಮೆರಿಕದ ಯೆಹೋವನ ಸಾಕ್ಷಿಗಳ 10,000ಕ್ಕೂ ಮಿಕ್ಕಿದ ಸಭೆಗಳಿಗೆ ಮಾರ್ಗದರ್ಶನವು ಕೊಡಲ್ಪಡುವುದು ಸಹ ಈ ಸ್ಥಳದಿಂದಲೇ. ಲೋಕ ವ್ಯಾಪಕವಾಗಿ ಅನೇಕ ಬ್ರಾಂಚುಗಳು ಸಹ ಇತ್ತೀಚೆಗೆ ತಮ್ಮ ಸೌಕರ್ಯಗಳನ್ನು ಹೆಚ್ಚಿಸಿವೆ ಅಥವಾ ಹಾಗೆ ಮಾಡುವ ಕಾರ್ಯಗತಿಯಲ್ಲಿವೆ. ಈ ಎಲ್ಲ ಕಾರ್ಯವಿಧಾನಗಳನ್ನು ನಿರ್ವಹಿಸುವುದಕ್ಕೆ ಬಹಳ ಹಣ ತಗಲುತ್ತದೆ. ಜನರು ಕೇಳುತ್ತಾರೆ, “ಆ ಹಣ ಎಲ್ಲಿಂದ ಬರುತ್ತದೆ?”
ಅದು ಬರುವುದು ನಮ್ಮಂತಹ ಯಾವನೇ ಸಾಮಾನ್ಯ ವ್ಯಕ್ತಿಯಿಂದಲೇ ಎಂಬುದು ಉತ್ತರವಾಗಿದೆ. ಸಾರುವ ಮತ್ತು ಕಲಿಸುವ ಮಹತ್ತಾದ ಕ್ರೈಸ್ತ ಕಾರ್ಯವನ್ನು ವರ್ಧಿಸಲು ತಮ್ಮಿಂದ ಸಾಧ್ಯವಾದುದೆಲ್ಲವನ್ನು ಮಾಡಬಯಸುವ ಜಗದ್ವ್ಯಾಪಕವಾಗಿರುವ ವ್ಯಕ್ತಿಗಳು ಅವರಾಗಿದ್ದಾರೆ. ಅಂತಹ ಮನಃಪೂರ್ವಕವಾದ ಆತ್ಮವು ಪೂರ್ವ ನಿದರ್ಶನವಿಲ್ಲದ್ದಾಗಿರುವುದಿಲ್ಲ.
ಪುರಾತನ ಇಸ್ರಾಯೇಲಿನಿಂದ ಇಡಲ್ಪಟ್ಟ ಮಾದರಿ
3,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಉದಾರವಾದ ಅಂಶದಾನಗಳ ಒಂದು ಅಗತ್ಯವು ತಲೆದೋರಿತು. ಯೆಹೋವನು ತನ್ನ ಆರಾಧನೆಗಾಗಿ ಉಪಯೋಗಿಸಲು ಒಂದು ಗುಡಾರವನ್ನು ಅಥವಾ “ದೇವದರ್ಶನದ ಗುಡಾರ”ವನ್ನು ಕಟ್ಟುವಂತೆ ಮೋಶೆಗೆ ಆಜ್ಞಾಪಿಸಿದ್ದನು. ದೈವಿಕವಾಗಿ ಕೊಡಲ್ಪಟ್ಟ ರಚನೆಗಾಗಿ ವಿವಿಧ ಅಮೂಲ್ಯ ವಸ್ತುಗಳು ಬೇಕಿದ್ದವು. ಯೆಹೋವನು ಆಜ್ಞಾಪಿಸಿದ್ದು: “ನೀವು ನಿಮ್ಮನಿಮ್ಮೊಳಗೆ ಯೆಹೋವನಿಗೆ ಕಾಣಿಕೆಯನ್ನು ಎತ್ತಿಕೊಡಬೇಕು. ಮನಃಪೂರ್ವಕವಾಗಿ ಕಾಣಿಕೆಯನ್ನು ಕೊಡುವವರೇ ತರಬೇಕು.” (ವಿಮೋಚನಕಾಂಡ 35:4-9) ಜನರು ಹೇಗೆ ಪ್ರತಿಕ್ರಿಯಿಸಿದರು? “ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರು ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ . . . ಯೆಹೋವನಿಗೆ ಕಾಣಿಕೆಗಳನ್ನು ತಂದರು,” ಎಂದು ವೃತ್ತಾಂತವು ತಿಳಿಸುತ್ತದೆ. ಈ ‘ಮನಃಪೂರ್ವಕ ಕಾಣಿಕೆಯು’ ಮೆಲ್ಲನೆ ಎಷ್ಟು ದೊಡ್ಡದಾಯಿತೆಂದರೆ, ಅದು ‘ಯೆಹೋವನು ಆಜ್ಞಾಪಿಸಿದ ಕೆಲಸಕ್ಕೆ ಬೇಕಾದದ್ದಕ್ಕಿಂತಲೂ ಬಹಳ ಹೆಚ್ಚಾಯಿತು.’ (ವಿಮೋಚನಕಾಂಡ 35:21-29; 36:3-5) ಎಂತಹ ನಿಸ್ವಾರ್ಥವಾದ ಉದಾರ ಆತ್ಮವನ್ನು ಆ ಜನರು ಪ್ರದರ್ಶಿಸಿದರು!
500ಕ್ಕಿಂತ ಕಡಿಮೆ ವರ್ಷಗಳ ನಂತರ, ಇಸ್ರಾಯೇಲ್ಯರಿಂದ ಒಂದು ಉದಾರ ಅಂಶದಾನಕ್ಕಾಗಿ ಕರೆಯು ಪುನಃ ಹೊರಟಿತು. ಯೆಹೋವನಿಗಾಗಿ ಒಂದು ಶಾಶ್ವತವಾದ ಆಲಯವನ್ನು ಕಟ್ಟುವುದಕ್ಕಾಗಿದ್ದ ಅರಸ ದಾವೀದನ ಅಪೇಕ್ಷೆಯು ಅವನ ಮಗನಾದ ಸೊಲೊಮೋನನ ಮೂಲಕ ಪೂರೈಸಲ್ಪಡಲು ಸಿದ್ಧವಾಗಿತ್ತು. ಬೇಕಾಗಿದ್ದ ವಸ್ತುಗಳಲ್ಲಿ ಅಧಿಕಾಂಶವನ್ನು ದಾವೀದನು ತಾನೇ ಒಟ್ಟುಗೂಡಿಸಿದ್ದನು ಮತ್ತು ದಾನಮಾಡಿದ್ದನು. “ಯೆಹೋವನಿಗೋಸ್ಕರ ಕಾಣಿಕೆಯನ್ನು” ತರುವಂತೆ ದಾವೀದನು ಕರೆಕೊಟ್ಟಾಗ ಇತರರೂ ಮುಂದೆಬಂದರು. ಪರಿಣಾಮವೇನು? “ಅವರು ಪೂರ್ಣಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ಕೊಟ್ಟದಕ್ಕಾಗಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷವಾಯಿತು.” (1 ಪೂರ್ವಕಾಲವೃತ್ತಾಂತ 22:14; 29:3-9) ಚಿನ್ನ ಮತ್ತು ಬೆಳ್ಳಿಯು ತಾನೇ ಸದ್ಯದ ಮೌಲ್ಯಗಳಲ್ಲಿ ಸುಮಾರು 5,000 ಕೋಟಿ ಡಾಲರುಗಳಷ್ಟು ಬೆಲೆಯುಳ್ಳದ್ದಾಗಿತ್ತು!—2 ಪೂರ್ವಕಾಲವೃತ್ತಾಂತ 5:1.
ಯಾರೂ ಕೊಡಲಿಕ್ಕಾಗಿ ಒತ್ತಾಯಿಸಲ್ಪಡಲಿಲ್ಲವೆಂದು ಈ ಉದಾಹರಣೆಗಳಿಂದ ನಾವು ಗಮನಿಸುತ್ತೇವೆ. ಅದು ಕಟ್ಟುನಿಟ್ಟಾಗಿ “ಸ್ವೇಚ್ಛೆಯಿಂದ” ಮತ್ತು “ಪೂರ್ಣ ಮನಸ್ಸಿನಿಂದ” ನೀಡಲ್ಪಟ್ಟಿತು. ಯೆಹೋವನಿಗೆ ಅದಕ್ಕಿಂತ ಕಡಿಮೆಯಾದದ್ದು ಯಾವುದೂ ಮೆಚ್ಚಿಗೆಯಾಗಿರುತ್ತಿರಲಿಲ್ಲ. ತತ್ಸಮಾನವಾಗಿ, ಕೊರತೆಯುಳ್ಳ ಕ್ರೈಸ್ತರ ಸಹಾಯಕ್ಕಾಗಿ ದ್ರವ್ಯ ದಾನವನ್ನು ಮಾಡುವ ಸಂದರ್ಭವು ಬಂದಾಗ, ಅದು “ಸುಲಿಗೆಯಂತೆ” ಬರಬಾರದೆಂದು ಪೌಲನು ಬರೆದನು. ಅವನು ಕೂಡಿಸಿದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”—2 ಕೊರಿಂಥ 9:5, 7.
ಇಂದಿನ ಆವಶ್ಯಕತೆ
ಇಂದು ಅಂಶದಾನಗಳ ಅಗತ್ಯವಿದೆಯೇ? ನಿಶ್ಚಯವಾಗಿ ಇದೆ, ಮತ್ತು ಸಮಯವು ದಾಟಿದಂತೆ ಅದು ಇನ್ನೂ ಹೆಚ್ಚಾಗಲಿರುವುದು. ಯಾಕೆ?
ಈ ಅಂತ್ಯಕಾಲದ ಸಮಯಕ್ಕಾಗಿ ಕ್ರೈಸ್ತರಿಗೆ ನಿರ್ದಿಷ್ಟ ಸೂಚನೆಗಳು ಕೊಡಲ್ಪಟ್ಟಿವೆ. ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.”—ಮತ್ತಾಯ 28:19, 20.
“ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಗೆ ನಾವು ಎಂದಿಗಿಂತಲೂ ಹತ್ತಿರವಾಗಿ ಚಲಿಸುತ್ತಿರುವಾಗ, ಈ ಮಹತ್ತಾದ ಕಲಿಸುವ ಮತ್ತು ಸಾರುವ ಕಾರ್ಯವನ್ನು ಪೂರೈಸಲಿಕ್ಕಾಗಿ ಗಣನೀಯ ಸಮಯ ಮತ್ತು ಸಂಪನ್ಮೂಲಗಳು ಬೇಕಾಗಿವೆ. ಯಾಕೆ? ಯಾಕೆಂದರೆ ದೇವರ ರಾಜ್ಯದ ಸಂದೇಶವನ್ನು “ಭೂಲೋಕದ ಕಟ್ಟಕಡೆಯ ವರೆಗೂ” ಒಯ್ಯುವುದರಲ್ಲಿ ಒಳಗೂಡಿರುವ ಸಕಲ ವಿಷಯಗಳಿಗಾಗಿಯೇ. (ಅ. ಕೃತ್ಯಗಳು 1:8) ಒಂದನೆಯ ಶತಮಾನದ ಯೆಹೂದ್ಯರು ಇದ್ದಂತೆ ಹೆಚ್ಚಿನ ಜನರು ಶಾಸ್ತ್ರಗಳಲ್ಲಿ ಸುಪಳಗಿತರಲ್ಲ. ವಾಸ್ತವಿಕವಾಗಿ, ಭೂನಿವಾಸಿಗಳಲ್ಲಿ ಹೆಚ್ಚಿನವರಿಗೆ ಬೈಬಲಿನ ಪರಿಚಯವೂ ಇಲ್ಲ ಮತ್ತು ಅದನ್ನು ದೇವರ ವಾಕ್ಯವಾಗಿ ಅವರು ಮಾನ್ಯಮಾಡುವುದೂ ಇಲ್ಲ. ಸಾರುವವರನ್ನು ತರಬೇತುಗೊಳಿಸಬೇಕಾಗಿದೆ ಮತ್ತು ದೂರದ ದೇಶಗಳಿಗೆ ಕಳುಹಿಸಬೇಕಾಗಿದೆ. (ರೋಮಾಪುರ 10:13-15) ಮತ್ತು ಒಳಗೂಡಿರುವ ಭಾಷೆಗಳ ಸಂಖ್ಯೆಯ ಕುರಿತು ಯೋಚಿಸಿರಿ! ಸಾರಲ್ಪಡುವವರಿಗೆ ತಮ್ಮ ಸ್ವಂತ ಭಾಷೆಯಲ್ಲಿ ಓದಲು ಮತ್ತು ಅಧ್ಯಯನಿಸಲು ಬೈಬಲುಗಳು ಮತ್ತು ಬೈಬಲಾಧಾರಿತ ಪ್ರಕಾಶನಗಳ ಅಗತ್ಯವಿದೆ. ಕ್ರಮಪ್ರಕಾರವಾಗಿ ಎಲ್ಲರನ್ನು ತಲಪಲು, ಮತ್ತು ಅವರನ್ನು ಪ್ರಗತಿಪೂರ್ವಕವಾಗಿ ಆತ್ಮಿಕ ಪ್ರೌಢತೆಗೆ ತಂದು ಅವರು ಇನ್ನೂ ಇತರರಿಗೆ ನೆರವಾಗಲು ಶಕ್ತರಾಗುವಂತೆ ಮಾಡಲು, ಒಂದು ಮಹಾ ಪರಿಮಾಣದ ಸಂಘಟನೆಯ ಅವಶ್ಯವಿದೆ.—2 ತಿಮೊಥೆಯ 2:2.
“ಪರಲೋಕ ರಾಜ್ಯದ ಈ ಸುವಾರ್ತೆಯು” ಮೊದಲಾಗಿ “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು,” ಎಂದು ಯೇಸು ಹೇಳಿದ್ದಾನೆ. (ಮತ್ತಾಯ 24:14) ಆದುದರಿಂದ ಆ ಮಹತ್ವದ ಕಾರ್ಯವನ್ನು ಮಾಡಿ ಮುಗಿಸಲು ನಮಗೆ ಸಾಧ್ಯವಾದುದೆಲ್ಲವನ್ನು ಮೀಸಲಾಗಿಡುವ ಸಮಯವು ಇದೇ ಆಗಿದೆ. ನಮ್ಮ ಭೌತಿಕ ಸಂಪತ್ತಿಗೆ ಯಾವುದೇ ಪ್ರಾಯೋಗಿಕ ಮೌಲ್ಯವೂ ಇಲ್ಲದೆ ಹೋಗುವ ಮುಂಚೆ, ನಮ್ಮ ಸಂಪನ್ಮೂಲಗಳನ್ನು ನಾವು ಹಾಕಸಾಧ್ಯವಿರುವ ಹೆಚ್ಚು ಉತ್ತಮ ಉಪಯೋಗವು ಇರಲಾರದು.—ಯೆಹೆಜ್ಕೇಲ 7:19; ಲೂಕ 16:9.
ಹಣವು ಎಲ್ಲಿಗೆ ಹೋಗುತ್ತದೆ?
ವಾಚ್ ಟವರ್ ಸೊಸೈಟಿಯು ಬೈಬಲ್ ಸಾಹಿತ್ಯವನ್ನು 230ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ, ಹಾಗೂ ಕುರುಡರಿಗಾಗಿ ಬ್ರೇಲ್ ಲೇಖನದಲ್ಲಿ ಮತ್ತು ಕಿವುಡರಿಗಾಗಿ ಸಂಜ್ಞಾ ಭಾಷೆಯಲ್ಲಿ ವಿಡಿಯೋಗಳನ್ನು ಪ್ರಕಾಶಿಸುತ್ತದೆ. ಅದು ಪ್ರತಿ ಭಾಷೆಯಲ್ಲಿ ಭಾಷಾಂತರಕಾರರ ಮತ್ತು ಕರಡಚ್ಚು ತಿದ್ದುವವರ ತಂಡವನ್ನು ಅವಶ್ಯಪಡಿಸುತ್ತದೆ. ವಿಶೇಷವಾಗಿ ಪ್ರತಿ ತಿಂಗಳು 121 ಭಾಷೆಗಳಲ್ಲಿ ಪ್ರಕಾಶಿಸಲ್ಪಡುವ ಮತ್ತು ಅವುಗಳಲ್ಲಿ 101 ಭಾಷೆಗಳು ತಿಂಗಳಿಗೆರಡು ಸಾರಿ ಪ್ರಕಟವಾಗುವ ಕಾವಲಿನಬುರುಜು ಪತ್ರಿಕೆಯ ಈ ಎಲ್ಲ ಕೆಲಸವನ್ನು ತುಸು ಯೋಚಿಸುವುದು ಬೆರಗುಬಡಿಸುತ್ತದೆ. ಆದರೂ ಲೋಕಾದ್ಯಂತ ಜನರು ಒಂದೇ ಮಾಹಿತಿಯನ್ನು ಹೊಂದಲು ಮತ್ತು ಓದಲು ಸಾಧ್ಯವಾಗುವಂತೆ ಇದು ಅತ್ಯಾವಶ್ಯಕವಾಗಿದೆ. ರಾಜ್ಯ ಸಂದೇಶವನ್ನು ಮುದ್ರಣ ರೂಪದಲ್ಲಿ ಅಥವಾ ಆಡಿಯೋ ಯಾ ವಿಡಿಯೋ ರೆಕಾರ್ಡಿಂಗ್ಗಳನ್ನು ಉತ್ಪಾದಿಸಲು ಬಳಸುವ ಕಾಗದ ಮತ್ತು ಇತರ ಸಾಮಗ್ರಿಗಳ ಬೆಲೆಯಲ್ಲಿ ಪ್ರತಿ ವರ್ಷ ಏರಿಕೆಗಳಾಗುತ್ತವೆ. ಸಹೋದರರಿಂದ ಬರುವ ಅಂಶದಾನವನ್ನು ಉಪಯೋಗಿಸುವ ಮೂಲಕ ಅಂತಹ ಖರ್ಚುಗಳನ್ನು ನಿರ್ವಹಿಸಬೇಕಾಗಿದೆ.
ಲೋಕಾದ್ಯಂತ ಇರುವ ಯೆಹೋವನ ಸಾಕ್ಷಿಗಳ 75,000ಕ್ಕೂ ಮಿಕ್ಕಿದ ಸಭೆಗಳಿಂದ ಆವರಿಸಲ್ಪಡುವ ಟೆರಿಟೊರಿಗಳಲ್ಲಿ ಸಾರುವ ಮತ್ತು ಕಲಿಸುವ ಕಾರ್ಯವು ನಿರ್ವಹಿಸಲ್ಪಡುತ್ತದೆ. ಅವರನ್ನು ಐಕ್ಯಗೊಳಿಸಲು ಮತ್ತು ಪ್ರೋತ್ಸಾಹ ನೀಡಲು, ತರಬೇತಾದ ಸಂಚಾರ ಮೇಲ್ವಿಚಾರಕರು ಪ್ರತಿ ವರ್ಷ ಸುಮಾರು ಎರಡು ಸಾರಿ ಪ್ರತಿಯೊಂದು ಸಭೆಯನ್ನು ಭೇಟಿಮಾಡುತ್ತಾರೆ. ಸಮ್ಮೇಳನಗಳು ಸಹ ಉಪದೇಶ ನೀಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಂಬಿಕೆಯನ್ನು ಅಷ್ಟು ಬಲಗೊಳಿಸುವ ಈ ಅಧಿವೇಶನಗಳಿಗಾಗಿ ದೊಡ್ಡ ಸೌಕರ್ಯಗಳನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಅಂಶದಾನಗಳು ಈ ಉದ್ದೇಶಗಳಿಗಾಗಿಯೂ ಬಳಸಲ್ಪಡುತ್ತವೆ.
ಸಮ್ಮೇಳನಗಳು ಸಾಮಾನ್ಯವಾಗಿ ವರ್ಷಕ್ಕೆ ಮೂರು ಬಾರಿ ಮಾತ್ರ ನಡೆಸಲ್ಪಟ್ಟರೂ, ಸ್ಥಳಿಕ ಸಭೆಗಳು ವಾರದಲ್ಲಿ ಐದು ಕೂಟಗಳಿಗಾಗಿ ಕೂಡಿಬರುತ್ತವೆ. (ಹೋಲಿಸಿ ವಿಮೋಚನಕಾಂಡ 34:23, 24.) ಸುವಾರ್ತೆಗೆ ಪ್ರತಿಕ್ರಿಯಿಸುತ್ತಿರುವ ಜನರ ಒಳಹರಿವು, ಪ್ರತಿ ವರ್ಷ ಸಾವಿರಾರು ಹೆಚ್ಚು ಹೊಸ ಸಭೆಗಳ ಅರ್ಥದಲ್ಲಿದೆ. ಸೊಸೈಟಿಯಿಂದ ಹಂಚಲ್ಪಡುವ ಕೋಟಿಗಟ್ಟಲೆ ರೂಪಾಯಿಗಳಷ್ಟು ಸಾಲಗಳ ಸಹಾಯದಿಂದಾಗಿ ನೂರಾರು ಹೊಸ ರಾಜ್ಯ ಸಭಾಗೃಹಗಳು ಕಟ್ಟಲ್ಪಡುತ್ತವೆ, ಮತ್ತು ಬೇರೆ ಅನೇಕ ರಾಜ್ಯ ಸಭಾಗೃಹಗಳು ನವೀಕರಣಗೊಂಡು, ವಿಸ್ತರಿಸಲ್ಪಡುತ್ತವೆ. ಇದು ಮತ್ತೆ ಮತ್ತೆ ಬಳಸಲ್ಪಡುವ ಆವರ್ತನಾ ಸಹಾಯಧನವಾಗಿದ್ದರೂ ಕೇಳಿಕೆ ಹೆಚ್ಚಾಗುತ್ತಾ ಹೋಗುತ್ತದೆ.
ಆಭೂತಪೂರ್ವ ಬೆಳವಣಿಗೆಯಾಗಿರುವ ಒಂದು ಕ್ಷೇತ್ರವು ಯಾವುದೆಂದರೆ, ಹಿಂದಣ ಸೋವಿಯತ್ ಒಕ್ಕೂಟಕ್ಕೆ ಅಧೀನವಾಗಿದ್ದ ಪೂರ್ವ ಯೂರೋಪಿನ ರಾಷ್ಟ್ರಗಳು. ಈ ಸ್ಥಳಗಳಲ್ಲಿ ಕಾರ್ಯವು ತೆರೆಯಲ್ಪಟ್ಟಿತ್ತೆಂಬ ಪ್ರಗತಿಪರ ಸುದ್ದಿಯು ಎಷ್ಟು ಆನಂದಭರಿತವಾಗಿತ್ತು! ಈ ಹೆಚ್ಚಿನ ದೇಶಗಳಿಗೆ ಈಗ ಮಿಷನೆರಿಗಳನ್ನು ಕಳುಹಿಸಲಾಗುತ್ತಿದೆ. ಕೆಲವು ದೇಶಗಳಲ್ಲಿ ಹೊಸ ಬ್ರಾಂಚ್ಗಳು ಸ್ಥಾಪಿಸಲ್ಪಟ್ಟಿವೆ. ಇದು ಲೋಕವ್ಯಾಪಕ ಬೆತೆಲ್ ಕುಟುಂಬ ಸಿಬ್ಬಂದಿಯ ಸ್ವಯಂಸೇವಕ ಶುಶ್ರೂಷಕರ ಸಂಖ್ಯೆಯನ್ನು 15,000ಕ್ಕೂ ಮೀರಿಸಿದೆ. ಅವಶ್ಯವಾಗಿ, ಇವರ ವಸತಿಗಾಗಿ ಬ್ರಾಂಚ್ ಕಟ್ಟಡಗಳು ಖರೀದಿಸಲ್ಪಡಬೇಕು ಅಥವಾ ಕಟ್ಟಲ್ಪಡಬೇಕು. ಈ ಅಗತ್ಯವನ್ನು ತುಂಬಲು ನಿಮ್ಮ ಅಂಶದಾನಗಳು ಸಹಾಯ ಮಾಡುತ್ತವೆ.
ಈ ಎಲ್ಲಾ ಕೆಲಸವು ಸೈತಾನ ಮತ್ತು ಅವನ ದೆವ್ವಗಳ ಗಮನಕ್ಕೆ ಬಾರದೆ ಹೋಗಿರುವುದಿಲ್ಲ. ಅವರು ಯೆಹೋವನ ನಂಬಿಗಸ್ತ ಸೇವಕರ ಪ್ರಯತ್ನಗಳನ್ನು ಭಂಗಪಡಿಸಲು ತಮ್ಮಿಂದಾದದ್ದೆಲ್ಲವನ್ನು ಮಾಡಿ ಅವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತಾರೆ. (ಪ್ರಕಟನೆ 12:17) ಸಾರುವ ಮತ್ತು ದೇವರ ನೀತಿಯುಳ್ಳ ನಿಯಮಗಳಿಗನುಸಾರ ಜೀವಿಸುವ ದೇವಜನರ ಹಕ್ಕುಗಳನ್ನು ರಕ್ಷಿಸಲಿಕ್ಕಾಗಿ, ನ್ಯಾಯಾಂಗ ಹೋರಾಟಗಳನ್ನು ನಡಿಸುವ ಹೊರೆಯು ಅಧಿಕವಾಗುತ್ತಿದೆಯೆಂದು ಇದರ ಅರ್ಥ. ಅದಲ್ಲದೆ, ಸೈತಾನನ ವಿಷಯಗಳ ವ್ಯವಸ್ಥೆಯಲ್ಲಿನ ಯುದ್ಧದ ಹಾವಳಿಗಳು, ಹಾಗೂ ನೈಸರ್ಗಿಕ ವಿಪತ್ತುಗಳಾಗುವಾಗ, ಬಾಧಿತರಾದ ನಮ್ಮ ಸಹೋದರ ಮತ್ತು ಸಹೋದರಿಯರಿಗೆ ಮತ್ತು ಅವರೊಂದಿಗೆ ಇತರರಿಗೆ ಆಪತ್ತು ಪರಿಹಾರ ಸಂಗ್ರಹಗಳು ಆಗಿಂದಾಗ್ಗೆ ಬೇಕಾಗುತ್ತವೆ. ಈ ಆವಶ್ಯಕ ಸಹಾಯವನ್ನು ಒದಗಿಸಲು ನಿಮ್ಮ ಅಂಶದಾನಗಳು ಸಹಾಯ ಮಾಡುತ್ತವೆ.
ಯೆಹೋವನು ನಿಮಗೆ ಪ್ರತಿಫಲ ಕೊಡುವನು
ಕರ್ತನ ಕಾರ್ಯವನ್ನು ಪ್ರವರ್ಧಿಸಲು, ನಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಉದಾರವಾಗಿ ಬಳಸುವುದು ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆ. ಅದು ಹೇಗೆ? ಹೇಗಂದರೆ ಕಟ್ಟಕಡೆಗೆ ಯಾರಿಗೆ ಸಮಸ್ತ ವಸ್ತುಗಳು ಸೇರಿವೆಯೋ ಆ ದೇವರು ನಮಗೆ ಪ್ರತಿಫಲವನ್ನು ಕೊಡುವನು. ಜ್ಞಾನೋಕ್ತಿ 11:25 ಹೇಳುವುದು: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.” ಆತನ ಆರಾಧನೆಯನ್ನು ಪ್ರವರ್ಧಿಸುವುದಕ್ಕಾಗಿ ನಮ್ಮ ಪಾಲನ್ನು ನಾವು ಮಾಡುವಾಗ, ಯೆಹೋವನು ನಿಶ್ಚಯವಾಗಿಯೂ ಸಂತೋಷಿಸುತ್ತಾನೆ. (ಇಬ್ರಿಯ 13:15, 16) ನಿಯಮದೊಡಂಬಡಿಕೆಯ ಕೆಳಗೆ ಅವಶ್ಯಪಡಿಸಲ್ಪಟ್ಟ ಅಂಶದಾನಗಳನ್ನು ತರುವ ಪುರಾತನ ಇಸ್ರಾಯೇಲ್ಯರಿಗೆ ಆತನು ವಾಗ್ದಾನಿಸಿದ್ದು: “ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.” (ಮಲಾಕಿಯ 3:10) ಇಂದು ಯೆಹೋವನ ಸೇವಕರು ಅನುಭವಿಸುವ ಆತ್ಮಿಕ ಸಮೃದ್ಧಯು, ಯೆಹೋವನು ತನ್ನ ವಾಗ್ದಾನವನ್ನು ಪಾಲಿಸುತ್ತಾನೆಂಬುದಕ್ಕೆ ಪುರಾವೆಯಾಗಿದೆ.
ರಕ್ಷಣೆಯ ದಿನವನ್ನು ಸಕಲರಿಗೆ ಘೋಷಿಸುವ ಮತ್ತು ಪ್ರಾಮಾಣಿಕ ಹೃದಯದವರನ್ನು ಜೀವದ ಹಾದಿಗೆ ನಡಿಸುವ ಈ ಮಹಾ ಕಾರ್ಯವು ನಿರಂತರವೂ ಮುಂದುವರಿಯದು. (ಮತ್ತಾಯ 7:14; 2 ಕೊರಿಂಥ 6:2) ಆದರೆ ಕರ್ತನ “ಬೇರೆ ಕುರಿ”ಗಳೆಲ್ಲರು ಒಟ್ಟುಗೂಡಿಸಲ್ಪಡಲೇಬೇಕು. (ಯೋಹಾನ 10:16) ಆ ಪಂಥಾಹ್ವಾನವನ್ನು ಇಂದು ಎದುರಿಸುವುದು ಎಷ್ಟು ಅತ್ಯಗತ್ಯ! ಮತ್ತು ಆ ನೀತಿಯ ನೂತನ ಲೋಕದಿಂದ ಹಿನ್ನೋಟ ಬೀರುವಾಗ, ‘ಆ ಕೊನೆಯ ಒಟ್ಟುಗೂಡಿಸುವ ಕೆಲಸದಲ್ಲಿ ನನಗೆ ಒಂದು ಪೂರ್ಣ ಪಾಲಿತ್ತು’ ಎಂದು ಹೇಳಲು ನಮ್ಮಲ್ಲಿ ಪ್ರತಿಯೊಬ್ಬನು ಎಷ್ಟು ಆನಂದಪಡಲಿರುವನು.—2 ಪೇತ್ರ 3:13.
[ಪುಟ 30,31ರಲ್ಲಿರುವಚೌಕ]
ಕೆಲವರು ರಾಜ್ಯ ಸಾರುವಿಕೆಯ ಕಾರ್ಯಕ್ಕೆ ದಾನಗಳನ್ನು ಮಾಡುವ ವಿಧ
ಲೋಕವ್ಯಾಪಕ ಕಾರ್ಯಕ್ಕಾಗಿ ಅಂಶದಾನಗಳು: ಅನೇಕರು ಒಂದು ಮೊಬಲಗನ್ನು ಬದಿಗಿಟ್ಟು ಅಥವಾ ಆಯವ್ಯಯದ ಅಂದಾಜುಪಟ್ಟಿಮಾಡಿ, “ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೋಸ್ಕರ ಅಂಶದಾನಗಳು—ಮತ್ತಾಯ 24:14,” ಎಂದು ಗುರುತುಮಾಡಲ್ಪಟ್ಟ ಪೆಟ್ಟಿಗೆಗಳಲ್ಲಿ ಹಾಕುತ್ತಾರೆ. ಪ್ರತಿ ತಿಂಗಳು ಸಭೆಗಳು ಈ ಮೊಬಲಗನ್ನು ವಾಚ್ ಟವರ್ ಸೊಸೈಟಿಯ ಅತಿ ಸಮೀಪದ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
ಕೊಡುಗೆಗಳು: ಸ್ವಇಷ್ಟದಿಂದ ಮಾಡುವ ಹಣದ ದಾನಗಳನ್ನು ನೇರವಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಗೆ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ದಾನಗಳೊಂದಿಗೆ, ಇದು ನೇರವಾಗಿ ಮಾಡಿರುವ ದಾನ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜತೆಗೂಡಿರಬೇಕು.
ಷರತ್ತು ದಾನದ ಏರ್ಪಾಡು: ದಾನಿಗೆ ಒಂದುವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆಕೊಡುವ ಷರತ್ತಿನೊಂದಿಗೆ, ವಾಚ್ ಟವರ್ ಸೊಸೈಟಿಗೆ ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನು ಕೊಡಬಹುದು.
ವಿಮೆ: ವಾಚ್ ಟವರ್ ಸೊಸೈಟಿಯನ್ನು ಒಂದು ಜೀವ ವಿಮಾ ಪಾಲಿಸಿ ಅಥವಾ ನಿವೃತ್ತಿ⁄ಪೆನ್ಷನ್ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು. ಇಂತಹ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದ್ದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿ ಟ್ರಸ್ಟಿನಲಿಟ್ಲುಕ್ಟೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ವಾಚ್ ಟವರ್ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಇಂತಹ ಯಾವುದೇ ಏರ್ಪಾಡುಗಳ ಕುರಿತಾಗಿ ಸೊಸೈಟಿಗೆ ತಿಳಿಸಬೇಕು.
ಸಾಕ್ಟ್ ಮತ್ತು ಬಾಂಡ್ಗಳು: ಸಾಕ್ಟ್ ಮತ್ತು ಬಾಂಡ್ಗಳನ್ನು ಒಂದು ನೇರವಾದ ಕೊಡುಗೆಯಾಗಿ ಇಲ್ಲವೇ ಆದಾಯವು ದಾನಿಗೆ ಸಲ್ಲುತ್ತಾ ಇರುವಂತಹ ಒಂದು ಏರ್ಪಾಡಿನೊಂದಿಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
ಉಯಿಲುಗಳು ಮತ್ತು ಟ್ರಸ್ಗ್ಟಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರಗಳ ಮೂಲಕ, ವಾಚ್ ಟವರ್ ಸೊಸೈಟಿ ಇವರಿಗೆ ಬಿಟ್ಟುಬಿಡಬಹುದು. ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನಕರವಾದ ಒಂದು ಟ್ರಸ್ಟ್, ನಿರ್ದಿಷ್ಟ ತೆರಿಗೆ ಲಾಭಗಳನ್ನು ಒದಗಿಸಬಹುದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆ ಪತ್ರದ ನಕಲುಪ್ರತಿಯು ಸೊಸೈಟಿಗೆ ಕಳುಹಿಸಲ್ಪಡಬೇಕು.
ಇಂತಹ ವಿಷಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Watch Tower Bible and Tract Society of India, H-58 Old Khandala Road, Lonavla 410 401, Mah., India, ಇವರಿಗೆ ಅಥವಾ ನಿಮ್ಮ ಸ್ಥಳಿಕ ಬ್ರಾಂಚ್ ಆಫೀಸಿಗೆ ಬರೆಯಿರಿ.