“ಪೋಲಿಷ್ ಬ್ರೆದ್ರನ್” ಪಂಥ—ಅವರು ಏಕೆ ಹಿಂಸಿಸಲ್ಪಟ್ಟರು?
1638ರಲ್ಲಿ, ಪೋಲಿಷ್ ಬ್ರೆದ್ರನ್ (ಪೋಲಿಷ್ ಸಹೋದರರು) ಎಂದು ಪ್ರಸಿದ್ಧವಾಗಿದ್ದ ಒಂದು ಚಿಕ್ಕ ಧಾರ್ಮಿಕ ಗುಂಪಿಗೆ ಪೋಲಿಷ್ ಪಾರ್ಲಿಮೆಂಟ್ ಬಲವಾದ ಹೊಡೆತವನ್ನು ಕೊಟ್ಟಿತು. ಈ ಗುಂಪಿಗೆ ಸೇರಿದ್ದ ಒಂದು ಚರ್ಚನ್ನೂ ಪ್ರಿಂಟಿಂಗ್ ಪ್ರೆಸ್ಸನ್ನೂ ನಾಶಮಾಡಲಾಯಿತು. ರಾಕೌ ವಿಶ್ವವಿದ್ಯಾನಿಲಯವು ಸಹ ಮುಚ್ಚಲ್ಪಟ್ಟಿತು, ಮತ್ತು ಅಲ್ಲಿ ಕಲಿಸುತ್ತಿದ್ದಂತಹ ಪ್ರೊಫೆಸರರು ಸಹ ಗಡೀಪಾರುಮಾಡಲ್ಪಟ್ಟರು.
ಇಪ್ಪತ್ತು ವರ್ಷಗಳ ಬಳಿಕ ಪಾರ್ಲಿಮೆಂಟ್ ಇನ್ನೂ ಒಂದು ಹೆಜ್ಜೆ ಮುಂದಕ್ಕಿಟ್ಟಿತು. ಆ ಗುಂಪಿನ ಪ್ರತಿಯೊಬ್ಬ ಸದಸ್ಯರು, ಅಂದರೆ ಸುಮಾರು 10,000ಕ್ಕಿಂತಲೂ ಹೆಚ್ಚು ಜನರು ದೇಶವನ್ನು ಬಿಟ್ಟುಹೋಗುವಂತೆ ಅದು ಆಜ್ಞೆಯನ್ನು ಹೊರಡಿಸಿತು. ಆ ಸಮಯದಲ್ಲಿ ಇಡೀ ಯೂರೋಪಿನಲ್ಲೇ ಅನ್ಯಮತವನ್ನು ಸಹಿಸಿಕೊಳ್ಳುತ್ತಿದ್ದಂತಹ ದೇಶಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದ ಈ ದೇಶದಲ್ಲಿ ಸನ್ನಿವೇಶವು ಇಷ್ಟೊಂದು ಸಂದಿಗ್ಧ ಸ್ಥಿತಿಯನ್ನು ಹೇಗೆ ಮುಟ್ಟಿತು? ಇಂತಹ ಘೋರ ಶಿಕ್ಷೆಯನ್ನು ಅನುಭವಿಸಲು ಪೋಲಿಷ್ ಬ್ರೆದ್ರೆನ್ ಪಂಥವು ಯಾವ ಅಪರಾಧವನ್ನು ಮಾಡಿತ್ತು?
ಇದೆಲ್ಲಾ ಆರಂಭವಾದದ್ದು ಕ್ಯಾಲ್ವಿನ್ ಪಂಥಿಗಳ ಚರ್ಚಿನೊಳಗೆ ಮನಸ್ತಾಪವು ಉಂಟಾದಾಗಲೇ. ವಾದವಿವಾದದ ಪ್ರಮುಖ ಅಂಶವು ತ್ರಯೈಕ್ಯ ಸಿದ್ಧಾಂತವಾಗಿತ್ತು. ಚರ್ಚಿನೊಳಗೆ, ಹೊಸ ವಿಚಾರಗಳನ್ನು ಸ್ವೀಕರಿಸುತ್ತಿದ್ದ ಒಂದು ಚಳವಳಿಯ ನಾಯಕರು ತ್ರಯೈಕ್ಯ ಸಿದ್ಧಾಂತವನ್ನು ಅಶಾಸ್ತ್ರೀಯವೆಂದು ನಿರಾಕರಿಸಿದರು. ಇದು ಚರ್ಚಿನ ನಾಯಕರಿಗೆ ಕೋಪವನ್ನೆಬ್ಬಿಸಿತು ಮತ್ತು ಹೊಸ ವಿಚಾರಗಳನ್ನು ಸ್ವೀಕರಿಸುತ್ತಿದ್ದ ಚಳವಳಿಯು ಬೇರ್ಪಡುವಂತೆ ಮಾಡಿತು.
ಕ್ಯಾಲ್ವಿನ್ ಪಂಥಿಗಳು ಈ ಭಿನ್ನಮತೀಯರನ್ನು ಏರಿಯಸ್ ಪಂಥಿಗಳೆಂದುa ಕರೆಯುತ್ತಿದ್ದರು. ಆದರೆ ಈ ಹೊಸ ಗುಂಪಿನ ಅನುಯಾಯಿಗಳು ತಮ್ಮನ್ನು ಕ್ರೈಸ್ತರು ಅಥವಾ ಪೋಲಿಷ್ ಬ್ರೆದ್ರನ್ ಎಂದು ಕರೆದುಕೊಳ್ಳಲು ಇಷ್ಟಪಟ್ಟರು. ಇಟಲಿಯ ಲೈಲ್ಯುಸ್ ಸೊಕೀನುಸ್ನು ಸರ್ವೆಟಸ್ನಿಂದ ಪ್ರಭಾವಿತನಾದ ಬಳಿಕ, ಇವರು ಸೊಕೀನಿಯನ್ ಪಂಥಿಗಳೆಂದು ಸಹ ಪ್ರಸಿದ್ಧರಾದರು. ಲೈಲ್ಯುಸ್ ಸೊಕೀನುಸ್ನ ಸೋದರಳಿಯನಾದ ಫೌಸ್ಟಸ್ ಸೊಕೀನುಸ್ನು ಸಹ ಪೋಲೆಂಡ್ಗೆ ಪ್ರಯಾಣಿಸಿ, ಈ ಚಳವಳಿಯಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾದನು.
ಆ ಸಮಯದಲ್ಲಿ ಯಾನ್ ಶೆನ್ಯನ್ಸ್ಕೀ ಎಂಬ ಒಬ್ಬ ಪೋಲಿಷ್ ಕುಲೀನ ವ್ಯಕ್ತಿಯು, ಚರ್ಚು ವೃದ್ಧಿಯಾಗಲಿಕ್ಕಾಗಿ “ಒಂದು ಪ್ರಶಾಂತವಾದ, ಪ್ರತ್ಯೇಕ ಸ್ಥಳ”ವೆಂದು ಯಾವುದನ್ನು ಕರೆದನೋ ಅದನ್ನು ಈ ಹೊಸ ಚರ್ಚಿಗೆ ಕೊಡಲು ಪ್ರಯತ್ನಿಸಿದನು. ಶೆನ್ಯನ್ಸ್ಕೀಯು ಪೋಲೆಂಡ್ನ ರಾಜನು ತನಗೆ ಕೊಟ್ಟಿದ್ದಂತಹ ವಿಶೇಷ ಸುಯೋಗವನ್ನು ಉಪಯೋಗಿಸಿಕೊಳ್ಳುತ್ತಾ, ರಾಕೌ ಎಂಬ ಪಟ್ಟಣವನ್ನು ಸ್ಥಾಪಿಸಿದನು. ಕಾಲಾನಂತರ ಇದು ಪೋಲೆಂಡ್ನಲ್ಲಿನ ಸೊಕೀನಿಯನ್ ಪಂಥಿಗಳ ಕೇಂದ್ರಸ್ಥಾನವಾಯಿತು. ಶೆನ್ಯನ್ಸ್ಕೀಯು ರಾಕೌ ಪಟ್ಟಣದ ಪ್ರಜೆಗಳಿಗೆ ಅನೇಕ ಹಕ್ಕುಗಳನ್ನು ನೀಡಿದನು, ಮತ್ತು ಸ್ವತಂತ್ರವಾಗಿ ಆರಾಧಿಸುವ ಹಕ್ಕು ಸಹ ಅವುಗಳಲ್ಲಿ ಒಳಗೂಡಿತ್ತು.
ಕುಶಲಕರ್ಮಿಗಳು, ವೈದ್ಯರು, ಔಷಧಶಾಸ್ತ್ರಜ್ಞರು, ಪಟ್ಟಣಿಗರು, ಮತ್ತು ಬೇರೆ ಬೇರೆ ವರ್ಗದ ಕುಲೀನರು ಈ ಹೊಸ ಪಟ್ಟಣದ ಕಡೆಗೆ ಆಕರ್ಷಿತರಾದರು. ಇದರೊಂದಿಗೆ, ಪೋಲೆಂಡ್, ಲಿತ್ಯುಏನಿಯ, ಟ್ರ್ಯಾನ್ಸಿಲ್ವೇನಿಯ, ಫ್ರಾನ್ಸ್, ಮತ್ತು ಇಂಗ್ಲೆಂಡ್ನಿಂದಲೂ ಅನೇಕ ಪಾದ್ರಿಗಳು ಇಲ್ಲಿ ಹಿಂಡುಹಿಂಡಾಗಿ ನೆರೆದುಬಂದರು. ಆದರೂ, ಇಲ್ಲಿಗೆ ಆಗಮಿಸಿದ ಹೊಸಬರೆಲ್ಲರೂ ಸೊಕೀನಿಯನ್ನ ನಂಬಿಕೆಗಳನ್ನು ಸ್ವೀಕರಿಸಲಿಲ್ಲ; ಆದುದರಿಂದ ಮುಂದಿನ ಮೂರು ವರ್ಷಗಳ ವರೆಗೆ, ಅಂದರೆ 1569ರಿಂದ 1572ರ ತನಕ ರಾಕೌ ಪಟ್ಟಣವು ಸತತವಾದ ದೇವತಾಶಾಸ್ತ್ರಸಂಬಂಧಿತ ಚರ್ಚೆಗಳ ಕೇಂದ್ರವಾಗಿ ಪರಿಣಮಿಸಿತು. ಇದರ ಫಲಿತಾಂಶವೇನಾಯಿತು?
ವಿಭಾಗಗೊಂಡ ಮನೆ
ಸೊಕೀನಿಯನ್ ಚಳವಳಿಯಲ್ಲೇ ವಿಭಾಗವು ಉಂಟಾಯಿತು. ಯಾರು ಮೂಲಸ್ವರೂಪದ ದೃಷ್ಟಿಕೋನಗಳಿಗೆ ಅಂಟಿಕೊಂಡರೋ ಅವರು ಒಂದು ಪಕ್ಷವನ್ನು ಮಾಡಿಕೊಂಡರು ಮತ್ತು ಯಾರು ಸಾಧಾರಣವಾದ ದೃಷ್ಟಿಕೋನಗಳಿಗೆ ಅಂಟಿಕೊಂಡರೋ ಅವರು ಇನ್ನೊಂದು ಪಕ್ಷವನ್ನು ಮಾಡಿಕೊಂಡರು. ಅವರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ ಅವರು ಸಾಮಾನ್ಯವಾಗಿ ಅನುಸರಿಸುತ್ತಿದ್ದ ನಂಬಿಕೆಗಳು ಮಾತ್ರ ವಿಶಿಷ್ಟವಾಗಿದ್ದವು. ಅವರು ತ್ರಯೈಕ್ಯವನ್ನು ಅಲ್ಲಗಳೆದರು, ಶಿಶು ದೀಕ್ಷಾಸ್ನಾನದ ಪದ್ಧತಿಯನ್ನು ಅನುಸರಿಸಲು ನಿರಾಕರಿಸಿದರು, ಸಾಮಾನ್ಯವಾಗಿ ಅವರು ಶಸ್ತ್ರಗಳನ್ನು ಉಪಯೋಗಿಸುತ್ತಿರಲಿಲ್ಲ ಮತ್ತು ಅನೇಕವೇಳೆ ಸರಕಾರಿ ಉದ್ಯೋಗವನ್ನು ಮಾಡುತ್ತಿರಲಿಲ್ಲ.b ನರಕವೆಂಬ ಯಾತನಾಮಯ ಸ್ಥಳದ ಅಸ್ತಿತ್ವವನ್ನು ಸಹ ಅವರು ನಿರಾಕರಿಸಿದರು. ಹೀಗೆ ಮಾಡುವ ಮೂಲಕ ಅವರು ಜನಪ್ರಿಯವಾದ ಧಾರ್ಮಿಕ ಸಂಪ್ರದಾಯಗಳನ್ನು ಅಲಕ್ಷಿಸಿದರು.
ಕ್ಯಾಲ್ವಿನ್ ಪಂಥಿಗಳು ಮತ್ತು ಕ್ಯಾತೊಲಿಕ್ ಪಾದ್ರಿಗಳು ಸೇರಿಕೊಂಡು ಈ ಗುಂಪಿನ ವಿರುದ್ಧ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದರು. ಆದರೆ ತಮ್ಮ ಸಿದ್ಧಾಂತಗಳನ್ನು ಕಲಿಸಲಿಕ್ಕಾಗಿ ಸೊಕೀನಿಯನ್ ಪಂಥದ ಪಾದ್ರಿಗಳು, ಸಿಗಿಸ್ಮಂಡ್ II ಅಗಸ್ಟಸ್ ಮತ್ತು ಸ್ಟೀಫನ್ ಬೇಥೊರಿ ಎಂಬ ಪೋಲಿಷ್ ಅರಸರಿಂದ ಉತ್ತೇಜಿಸಲ್ಪಟ್ಟ ಧಾರ್ಮಿಕ ಸಹಿಷ್ಣುತೆಯ ವಾತಾವರಣದ ಸದುಪಯೋಗವನ್ನು ಮಾಡಿಕೊಂಡರು.
ಬುಡ್ನಿಯ ಇತಿಹಾಸ ಪ್ರಸಿದ್ಧ ಕೆಲಸ
ಆ ಸಮಯದಲ್ಲಿ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿದ್ದ ಕ್ಯಾಲ್ವಿನ್ ಪಂಥದ ಬೈಬಲ್ ಭಾಷಾಂತರವು, ಅನೇಕ ಓದುಗರ ಆವಶ್ಯಕತೆಗಳನ್ನು ಪೂರೈಸಲಿಲ್ಲ. ಈ ಭಾಷಾಂತರವು ಬೈಬಲಿನ ಮೂಲ ಭಾಷೆಗಳಿಂದಲ್ಲ, ಬದಲಾಗಿ ಲ್ಯಾಟಿನ್ ವಲ್ಗೆಟ್ ಭಾಷಾಂತರದಿಂದ ಹಾಗೂ ಸಮಕಾಲೀನ ಫ್ರೆಂಚ್ ಭಾಷಾಂತರದಿಂದ ತರ್ಜುಮೆಮಾಡಲ್ಪಟ್ಟಿತ್ತು. “ಸುಂದರವಾದ ಭಾಷಾಶೈಲಿಯನ್ನು ಉಪಯೋಗಿಸುವ ಪ್ರಯತ್ನದಲ್ಲಿ, ಭಾಷಾಂತರದ ವಿಶ್ವಾಸಾರ್ಹತೆ ಹಾಗೂ ನಿಷ್ಕೃಷ್ಟತೆಯನ್ನು ತ್ಯಾಗಮಾಡಲಾಯಿತು” ಎಂದು ಒಂದು ಪುಸ್ತಕವು ಹೇಳುತ್ತದೆ. ಆ ಭಾಷಾಂತರದಲ್ಲಿ ಅನೇಕ ತಪ್ಪುಗಳು ಇದ್ದವು. ಆದುದರಿಂದ, ಈ ಭಾಷಾಂತರವನ್ನು ಸರಿಪಡಿಸಲಿಕ್ಕಾಗಿ ಶಿಮಾನ್ ಬುಡ್ನಿ ಎಂಬ ಹೆಸರಿನ ಸುಪ್ರಸಿದ್ಧ ವಿದ್ವಾಂಸನನ್ನು ಕರೆಸಲಾಯಿತು. ಈ ಹಳೆಯ ಭಾಷಾಂತರವನ್ನು ಸರಿಪಡಿಸುವುದಕ್ಕೆ ಬದಲಾಗಿ, ಒಂದು ಹೊಸ ಭಾಷಾಂತರವನ್ನು ಆರಂಭಿಸುವುದೇ ಹೆಚ್ಚು ಸುಲಭವಾದದ್ದಾಗಿದೆ ಎಂಬ ನಿರ್ಧಾರಕ್ಕೆ ಅವನು ಬಂದನು. ಬುಡ್ನಿಯು ಈ ಕೆಲಸವನ್ನು ಸುಮಾರು 1567ರಲ್ಲಿ ಆರಂಭಿಸಿದನು.
ಭಾಷಾಂತರ ಮಾಡುತ್ತಿದ್ದಾಗ, ಈ ಮುಂಚೆ ಪೋಲೆಂಡ್ನಲ್ಲಿ ಯಾರೊಬ್ಬರೂ ಮಾಡಿರದಿದ್ದಂತಹ ರೀತಿಯಲ್ಲಿ ಬುಡ್ನಿಯು ಪ್ರತಿಯೊಂದು ಶಬ್ದವನ್ನು ಹಾಗೂ ಅದರ ಭಿನ್ನರೂಪಗಳನ್ನು ಸಂಪೂರ್ಣವಾಗಿ ಸೂಕ್ಷ್ಮ ದೃಷ್ಟಿಯಿಂದ ಪರಿಶೀಲಿಸಿದನು. ಎಲ್ಲಿ ಹೀಬ್ರು ವಚನದ ಅರ್ಥವನ್ನು ಪೋಲಿಷ್ ಭಾಷೆಗೆ ಭಾಷಾಂತರಿಸುವುದು ತುಂಬ ಕಷ್ಟಕರವಾಗಿತ್ತೋ ಅಲ್ಲೆಲ್ಲ ಅವನು ಪಕ್ಕಟಿಪ್ಪಣಿಯ ನೋಟ್ಸ್ಗಳಲ್ಲಿ ಅಕ್ಷರಾರ್ಥ ಭಾಷಾಂತರವನ್ನು ದಾಖಲಿಸಿದನು. ಅಗತ್ಯವಿದ್ದಾಗ ಅವನು ಹೊಸ ಶಬ್ದಗಳನ್ನು ರಚಿಸಿದನು ಮತ್ತು ತನ್ನ ಸಮಯದಲ್ಲಿ ಪ್ರತಿ ದಿನ ಬಳಕೆಯಲ್ಲಿದ್ದ ಸರಳವಾದ ಪೋಲಿಷ್ ಭಾಷೆಯನ್ನು ಉಪಯೋಗಿಸಲು ಪ್ರಯತ್ನಿಸಿದನು. ಬೈಬಲಿನ ವಿಶ್ವಾಸಾರ್ಹವಾದ ಹಾಗೂ ನಿಷ್ಕೃಷ್ಟವಾದ ಭಾಷಾಂತರವನ್ನು ಓದುಗರಿಗೆ ಒದಗಿಸುವುದೇ ಅವನ ಮುಖ್ಯ ಗುರಿಯಾಗಿತ್ತು.
ಬುಡ್ನಿಯ ಇಡೀ ಬೈಬಲ್ ಭಾಷಾಂತರವು 1572ರಲ್ಲಿ ಪ್ರಕಟಿಸಲ್ಪಟ್ಟಿತು. ಆದರೂ, ಈ ಕೃತಿಯ ಪ್ರಕಾಶಕರು ಗ್ರೀಕ್ ಶಾಸ್ತ್ರವಚನದ ಅವನ ಭಾಷಾಂತರವನ್ನು ಕೆಡಿಸಿಬಿಟ್ಟರು. ಧೈರ್ಯಗುಂದದೆ ಬುಡ್ನಿ ಪುನಃ ಒಮ್ಮೆ ಪರಿಷ್ಕೃತ ಭಾಷಾಂತರವನ್ನು ಮಾಡಲಾರಂಭಿಸಿದನು. ಇದು ಎರಡು ವರ್ಷಗಳ ಬಳಿಕ ಪೂರ್ಣಗೊಂಡಿತು. ಬುಡ್ನಿಯ ಗ್ರೀಕ್ ಶಾಸ್ತ್ರವಚನದ ಅತ್ಯುತ್ತಮ ಭಾಷಾಂತರವು ಮುಂಚಿನ ಪೋಲಿಷ್ ಭಾಷಾಂತರಗಳಿಗಿಂತ ಉತ್ಕೃಷ್ಟವಾಗಿತ್ತು. ಅಷ್ಟುಮಾತ್ರವಲ್ಲ, ತನ್ನ ಭಾಷಾಂತರದಲ್ಲಿ ಅವನು ಅನೇಕ ಸ್ಥಳಗಳಲ್ಲಿ ಯೆಹೋವ ಎಂಬ ದೇವರ ಹೆಸರನ್ನು ಪುನಃ ಸೇರಿಸಿದನು.
16ನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು 17ನೆಯ ಶತಮಾನದ ಮೊದಲ ಮೂರು ದಶಕಗಳಲ್ಲಿ, ಈ ಚಳವಳಿಯ ರಾಜಧಾನಿಯಾಗಿದ್ದ ರಾಕೌ ಒಂದು ಧಾರ್ಮಿಕ ಹಾಗೂ ಬೌದ್ಧಿಕ ಕೇಂದ್ರಸ್ಥಾನವಾಗಿ ಪರಿಣಮಿಸಿತು. ಪೋಲಿಷ್ ಬ್ರೆದ್ರನ್ ಪಂಥದ ನಾಯಕರು ಹಾಗೂ ಬರಹಗಾರರು ತಮ್ಮ ಟ್ರ್ಯಾಕ್ಟ್ಗಳನ್ನು ಹಾಗೂ ಕೃತಿಗಳನ್ನು ಅಲ್ಲಿಯೇ ಮುದ್ರಿಸಿದರು.
ಅವರು ಶಿಕ್ಷಣಕ್ಕೆ ಒತ್ತಾಸೆಕೊಟ್ಟರು
1600ರ ಸುಮಾರಿಗೆ ರಾಕೌನಲ್ಲಿ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಲ್ಪಟ್ಟಾಗ, ಪೋಲಿಷ್ ಬ್ರೆದ್ರನ್ ಪಂಥದ ಮುದ್ರಣ ಕಾರ್ಯವು ತುಂಬ ರಭಸಗೊಳ್ಳಲಾರಂಭಿಸಿತು. ಈ ಪ್ರೆಸ್, ಚಿಕ್ಕ ಪ್ರಕರಣ ಗ್ರಂಥಗಳನ್ನು ಹಾಗೂ ದೊಡ್ಡ ಪುಸ್ತಕಗಳನ್ನು ಅನೇಕ ಭಾಷೆಗಳಲ್ಲಿ ಮುದ್ರಿಸಲು ಸಮರ್ಥವಾಗಿತ್ತು. ರಾಕೌ ಮುದ್ರಣ ಕೇಂದ್ರವು, ಯೂರೋಪಿನಲ್ಲಿದ್ದ ಅತ್ಯುತ್ತಮ ಮುದ್ರಣ ಕೇಂದ್ರದೊಂದಿಗೆ ಪ್ರತಿಸ್ಪರ್ಧಿಯಂತಾಯಿತು. ಮುಂದಿನ 40 ವರ್ಷಗಳಲ್ಲಿ ಆ ಪ್ರೆಸ್ನಲ್ಲಿ 200ಕ್ಕಿಂತಲೂ ಹೆಚ್ಚು ಪ್ರಕಾಶನಗಳು ಮುದ್ರಿಸಲ್ಪಟ್ಟವು ಎಂದು ನಂಬಲಾಗುತ್ತದೆ. ಪೋಲಿಷ್ ಬ್ರೆದ್ರನ್ ಪಂಥಕ್ಕೆ ಸೇರಿದ್ದ, ಪ್ರೆಸ್ನ ಸಮೀಪದಲ್ಲೇ ಇದ್ದ ಒಂದು ಕಾಗದದ ಕಾರ್ಖಾನೆಯು, ಈ ಸಾಹಿತ್ಯಕ್ಕೆ ಅಗತ್ಯವಿದ್ದ ಉತ್ತಮ ಗುಣಮಟ್ಟದ ಕಾಗದವನ್ನು ಸರಬರಾಜುಮಾಡಿತು.
ತಮ್ಮ ಜೊತೆ ವಿಶ್ವಾಸಿಗಳಿಗೆ ಹಾಗೂ ಇನ್ನಿತರರಿಗೆ ಶಿಕ್ಷಣಕೊಡುವ ಆವಶ್ಯಕತೆ ಇದೆಯೆಂಬುದು ಪೋಲಿಷ್ ಬ್ರೆದ್ರನ್ ಪಂಥಕ್ಕೆ ಮನದಟ್ಟಾಯಿತು. ಈ ಉದ್ದೇಶವನ್ನು ಪೂರೈಸಲಿಕ್ಕಾಗಿ, 1602ರಲ್ಲಿ ರಾಕೌ ವಿಶ್ವವಿದ್ಯಾನಿಲಯವು ಸ್ಥಾಪಿಸಲ್ಪಟ್ಟಿತು. ಪೋಲಿಷ್ ಬ್ರೆದ್ರನ್ ಪಂಥದ ಪುತ್ರರು ಹಾಗೂ ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ಧರ್ಮದ ಹುಡುಗರು ಇಲ್ಲಿನ ಕ್ಲಾಸುಗಳಿಗೆ ಹಾಜರಾಗುತ್ತಿದ್ದರು. ಈ ವಿಶ್ವವಿದ್ಯಾನಿಲಯವು ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ಸೆಮಿನೆರಿಯಾಗಿತ್ತಾದರೂ, ಇಲ್ಲಿ ಕೇವಲ ಧಾರ್ಮಿಕ ವಿಷಯಗಳು ಮಾತ್ರ ಕಲಿಸಲ್ಪಡುತ್ತಿರಲಿಲ್ಲ. ವಿದೇಶಿ ಭಾಷೆಗಳು, ನೀತಿತತ್ವಗಳು, ಅರ್ಥಶಾಸ್ತ್ರ, ಇತಿಹಾಸ, ನ್ಯಾಯಶಾಸ್ತ್ರ, ತರ್ಕಶಾಸ್ತ್ರ, ಭೌತ ವಿಜ್ಞಾನ, ಗಣಿತ, ಔಷಧಶಾಸ್ತ್ರ, ಮತ್ತು ಅಂಗಸಾಧನೆಗಳು ಸಹ ಅದರ ವ್ಯಾಸಂಗಕ್ರಮದ ಭಾಗವಾಗಿದ್ದವು. ಈ ವಿಶ್ವವಿದ್ಯಾನಿಲಯದಲ್ಲಿ ಒಂದು ದೊಡ್ಡ ಗ್ರಂಥಾಲಯವಿತ್ತು; ಸ್ಥಳಿಕ ಪ್ರೆಸ್ನಿಂದಾಗಿ ಈ ಗ್ರಂಥಾಲಯವು ಬೆಳೆಯುತ್ತಾ ಮುಂದುವರಿಯಿತು.
17ನೆಯ ಶತಮಾನವು ಮುಂದುವರಿದಂತೆ, ಪೋಲಿಷ್ ಬ್ರೆದ್ರನ್ ಪಂಥವು ಏಳಿಗೆಹೊಂದುತ್ತಾ ಇರುವಂತೆ ತೋರಿತು. ಆದರೆ ಹಾಗಾಗಲಿಲ್ಲ.
ಚರ್ಚ್ ಮತ್ತು ಸರಕಾರಗಳು ಪ್ರತಿಯಾಗಿ ಹೋರಾಡುತ್ತವೆ
ಪೋಲಿಷ್ ಅಕ್ಯಾಡೆಮಿ ಆಫ್ ಸೈಯನ್ಸ್ನ ಸ್ಪೀಗ್ನ್ಯೆವ್ ಆಗಾನಾಫ್ಸ್ಕೀ ವಿವರಿಸುವುದು: “17ನೆಯ ಶತಮಾನದ ಮೂರನೆಯ ದಶಕದ ಕೊನೆಯಲ್ಲಿ, ಪೋಲೆಂಡ್ನಲ್ಲಿದ್ದ ಏರಿಯಸ್ ಪಂಥಿಗಳ ಸ್ಥಿತಿಯು ಅತಿ ಬೇಗನೆ ಹದಗೆಟ್ಟಿತು.” ಇದು ಕ್ಯಾತೊಲಿಕ್ ಪಾದ್ರಿಗಳ ಅತ್ಯಂತ ಧೈರ್ಯಭರಿತ ಚಟುವಟಿಕೆಯ ಕಾರಣದಿಂದಲೇ ಆಗಿತ್ತು. ಪೋಲಿಷ್ ಬ್ರೆದ್ರನ್ ಪಂಥಕ್ಕೆ ಅಪಕೀರ್ತಿಯನ್ನು ತರಲಿಕ್ಕಾಗಿ, ಮಿಥ್ಯಾಪವಾದ ಮತ್ತು ಮಾನನಷ್ಟ ಲೇಖನವನ್ನು ಒಳಗೊಂಡು ಸಾಧ್ಯವಿರುವ ಪ್ರತಿಯೊಂದು ವಿಧಾನವನ್ನು ಈ ಪಾದ್ರಿಗಳು ಉಪಯೋಗಿಸಿದರು. ಪೋಲೆಂಡ್ನಲ್ಲಿನ ರಾಜಕೀಯ ಸನ್ನಿವೇಶವು ಬದಲಾದುದರಿಂದ, ಪೋಲಿಷ್ ಬ್ರೆದ್ರನ್ ಪಂಥದ ಮೇಲೆ ಆಕ್ರಮಣ ಮಾಡುವುದು ಇನ್ನೂ ಹೆಚ್ಚು ಸುಲಭವಾಯಿತು. ಪೋಲೆಂಡ್ನ ಹೊಸ ರಾಜನಾದ IIIನೆಯ ಸಿಗ್ಮೂಂಟ್ ವಾಸಾ, ಪೋಲಿಷ್ ಬ್ರೆದ್ರನ್ ಪಂಥದ ಶತ್ರುವಾಗಿದ್ದನು. ಅವನ ಉತ್ತರಾಧಿಕಾರಿಗಳು, ಅದರಲ್ಲೂ IIನೆಯ ಜಾನ್ ಕ್ಯಾಸಮೀರ್ ವಾಸಾನು, ಪೋಲಿಷ್ ಬ್ರೆದ್ರನ್ ಪಂಥವನ್ನು ವಿರೋಧಿಸುವುದಕ್ಕಾಗಿ ಕ್ಯಾತೊಲಿಕ್ ಚರ್ಚು ಮಾಡಿದ ಪ್ರಯತ್ನಗಳಿಗೆ ತನ್ನೆಲ್ಲಾ ಬೆಂಬಲವನ್ನು ನೀಡಿದನು.
ಉದ್ದೇಶಪೂರ್ವಕವಾಗಿ ಒಂದು ಶಿಲುಬೆಯನ್ನು ಅಪವಿತ್ರೀಕರಿಸಿದ್ದಾರೆ ಎಂಬ ಆರೋಪವು ರಾಕೌ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳ ಮೇಲೆ ಹೊರಿಸಲ್ಪಟ್ಟಾಗ ಸನ್ನಿವೇಶವು ಪರಮಾವಧಿಯನ್ನು ತಲಪಿತು. ಈ ಘಟನೆಯು ಪೋಲಿಷ್ ಬ್ರೆದ್ರನ್ ಪಂಥಿಗಳ ರಾಜಧಾನಿಯ ಧ್ವಂಸಕ್ಕೆ ಒಂದು ನೆಪವಾಗಿ ಪರಿಣಮಿಸಿತು. ರಾಕೌ ವಿಶ್ವವಿದ್ಯಾನಿಲಯದ ಒಡೆಯನನ್ನು ಕರೆಸಿ, ರಾಕೌ ವಿಶ್ವವಿದ್ಯಾನಿಲಯವನ್ನು ಹಾಗೂ ಅದರ ಪ್ರಿಂಟಿಂಗ್ ಪ್ರೆಸ್ಸನ್ನು ಬೆಂಬಲಿಸುವ ಮೂಲಕ ‘ದುಷ್ಟತನವನ್ನು ಹಬ್ಬಿಸುತ್ತಿ’ರುವುದಾಗಿ ಅವನನ್ನು ನಿಂದಿಸಲಾಯಿತು. ಇವರು ವಂಚನಾತ್ಮಕ ಚಟುವಟಿಕೆ ನಡೆಸುತ್ತಾರೆ, ಕಾಮಕೇಳಿಗಳಲ್ಲಿ ಒಳಗೂಡುತ್ತಾರೆ, ಮತ್ತು ಅನೈತಿಕ ರೀತಿಯಲ್ಲಿ ಜೀವಿಸುತ್ತಾರೆ ಎಂಬ ಆರೋಪವನ್ನು ಪೋಲಿಷ್ ಬ್ರೆದ್ರನ್ ಪಂಥದ ಮೇಲೆ ಹೊರಿಸಲಾಯಿತು. ರಾಕೌ ವಿಶ್ವವಿದ್ಯಾನಿಲಯವನ್ನು ಮುಚ್ಚಿಬಿಡಬೇಕು ಮತ್ತು ಪೋಲಿಷ್ ಬ್ರೆದ್ರನ್ ಪಂಥಕ್ಕೆ ಸೇರಿರುವ ಪ್ರಿಂಟಿಂಗ್ ಪ್ರೆಸ್ಸನ್ನು ಹಾಗೂ ಚರ್ಚನ್ನು ನಾಶಮಾಡಬೇಕು ಎಂದು ಪಾರ್ಲಿಮೆಂಟ್ ತೀರ್ಮಾನಿಸಿತು. ಪೋಲಿಷ್ ಬ್ರೆದ್ರನ್ ಪಂಥಕ್ಕೆ ಸೇರಿದ್ದವರಿಗೆ ಪಟ್ಟಣವನ್ನು ಬಿಟ್ಟುಹೋಗುವಂತೆ ಆಜ್ಞೆ ನೀಡಲಾಯಿತು. ವಿಶ್ವವಿದ್ಯಾನಿಲಯದ ಪ್ರೊಫೆಸರರನ್ನು ಮರಣದಂಡನೆಯ ಬೆದರಿಕೆಯೊಡ್ಡಿ ದೇಶದಿಂದ ಗಡೀಪಾರುಮಾಡಲಾಯಿತು. ತದನಂತರ ಪೋಲಿಷ್ ಬ್ರೆದ್ರನ್ ಪಂಥದವರಲ್ಲಿ ಕೆಲವರು ಸೈಲೀಶಿಯ ಮತ್ತು ಸ್ಲೊವಾಕಿಯದಂತಹ ಸುರಕ್ಷಿತ ಆಶ್ರಯತಾಣಗಳಿಗೆ ಹೊರಟುಹೋದರು.
ಪೋಲಿಷ್ ಬ್ರೆದ್ರನ್ ಪಂಥದವರು ಮೂರು ವರ್ಷಗಳೊಳಗೆ ತಮ್ಮ ಆಸ್ತಿಯನ್ನು ಮಾರಿ, ಹೊರದೇಶಗಳಿಗೆ ಹೊರಟುಹೋಗುವಂತೆ ಪಾರ್ಲಿಮೆಂಟ್ 1658ರಲ್ಲಿ ಆಜ್ಞೆಹೊರಡಿಸಿತು. ಸಮಯಾನಂತರ ಆ ಅವಧಿಯು ಎರಡೇ ವರ್ಷಗಳಿಗೆ ಇಳಿಸಲ್ಪಟ್ಟಿತು. ಆ ಅವಧಿಯ ನಂತರ ಪೋಲಿಷ್ ಬ್ರೆದ್ರನ್ ಪಂಥಕ್ಕೆ ಸೇರಿದವರೆಂದು ಹೇಳಿಕೊಳ್ಳುವವರು ಅಲ್ಲಿ ಉಳಿಯುವಲ್ಲಿ ವಧಿಸಲ್ಪಡಲಿದ್ದರು.
ಪೋಲಿಷ್ ಬ್ರೆದ್ರನ್ ಪಂಥಕ್ಕೆ ಸೇರಿದವರಲ್ಲಿ ಕೆಲವರು ನೆದರ್ಲೆಂಡ್ಸ್ಗೆ ಹೋಗಿ ನೆಲೆಸಿದರು ಮತ್ತು ಅಲ್ಲಿ ತಮ್ಮ ಪ್ರಿಂಟಿಂಗ್ ಕೆಲಸವನ್ನು ಮುಂದುವರಿಸಿದರು. 18ನೆಯ ಶತಮಾನದ ಆರಂಭದ ವರೆಗೆ ಟ್ರ್ಯಾನ್ಸಿಲ್ವೇನಿಯದಲ್ಲಿ ಇವರ ಒಂದು ಸಭೆಯು ಕಾರ್ಯನಡಿಸುತ್ತಿತ್ತು. ಒಂದು ವಾರಕ್ಕೆ ಮೂರು ಬಾರಿ ನಡೆಸಲ್ಪಡುತ್ತಿದ್ದ ಅವರ ಕೂಟಗಳಲ್ಲಿ ಅವರು ಕೀರ್ತನೆಗಳನ್ನು ಹಾಡಿದರು, ಪ್ರಸಂಗಗಳಿಗೆ ಕಿವಿಗೊಟ್ಟರು ಮತ್ತು ತಮ್ಮ ಬೋಧನೆಗಳನ್ನು ವಿವರಿಸಲಿಕ್ಕಾಗಿ ತಯಾರಿಸಲ್ಪಟ್ಟಿದ್ದ ಪ್ರಶ್ನೋತ್ತರ ಪುಸ್ತಕದಿಂದ ಓದಿದರು. ಸಭೆಯ ಶುದ್ಧತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಜೊತೆ ವಿಶ್ವಾಸಿಗಳಿಗೆ ತಿದ್ದುಪಾಟು ನೀಡಲಾಗುತ್ತಿತ್ತು, ಬುದ್ಧಿಹೇಳಲಾಗುತ್ತಿತ್ತು ಮತ್ತು ಅಗತ್ಯವಿದ್ದಲ್ಲಿ ಸಭೆಯಿಂದ ಬಹಿಷ್ಕರಿಸಲಾಗುತ್ತಿತ್ತು.
ಸೊಕೀನಿಯನ್ ಪಂಥಿಗಳಲ್ಲಿ ಕೆಲವರು ದೇವರ ವಾಕ್ಯದ ವಿದ್ಯಾರ್ಥಿಗಳಾಗಿದ್ದರು. ಅವರು ಕೆಲವು ಅಮೂಲ್ಯ ಸತ್ಯತೆಗಳನ್ನು ಕಂಡುಹಿಡಿದರು ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಅವುಗಳನ್ನು ಇತರರೊಂದಿಗೆ ಹಂಚಿಕೊಂಡರು. ಆದರೂ, ಕಾಲಕ್ರಮೇಣ ಅವರು ಯೂರೋಪಿನಾದ್ಯಂತ ಚೆದರಿಹೋದರು. ಆದುದರಿಂದ ತಮ್ಮ ಐಕ್ಯಭಾವವನ್ನು ಕಾಪಾಡಿಕೊಳ್ಳುವುದು ಹೆಚ್ಚೆಚ್ಚು ಕಷ್ಟಕರವಾಯಿತು. ಕಾಲಾನಂತರ ಪೋಲಿಷ್ ಬ್ರೆದ್ರನ್ ಪಂಥವು ಕಣ್ಮರೆಯಾಯಿತು.
[ಪಾದಟಿಪ್ಪಣಿಗಳು]
a ಆ್ಯಲೆಕ್ಸಾಂಡ್ರಿಯನ್ ಪಾದ್ರಿಯಾಗಿದ್ದ ಏರಿಯಸ್ (ಸಾ.ಶ. 250-336), ಯೇಸು ತಂದೆಗಿಂತ ಕೆಳಗಿನವನು ಎಂದು ವಾದಿಸಿದ್ದನು. ಸಾ.ಶ. 325ರಲ್ಲಿ ನೈಸೀಯ ಮಂಡಲಿಯು ಅವನ ದೃಷ್ಟಿಕೋನವನ್ನು ತಿರಸ್ಕರಿಸಿತು.—ಎಚ್ಚರ! ಪತ್ರಿಕೆಯ 1989, ಜೂನ್ 22ರ (ಇಂಗ್ಲಿಷ್) ಸಂಚಿಕೆಯ 27ನೆಯ ಪುಟವನ್ನು ನೋಡಿರಿ.
b ಅವೇಕ್! ಪತ್ರಿಕೆಯ 1988, ನವೆಂಬರ್ 22ರ ಸಂಚಿಕೆಯ 19ನೆಯ ಪುಟದಲ್ಲಿರುವ “ಸೊಕೀನಿಯನ್ ಪಂಥಿಗಳು—ಅವರು ತ್ರಯೈಕ್ಯ ಸಿದ್ಧಾಂತವನ್ನು ಏಕೆ ಅಲ್ಲಗಳೆದರು?” ಎಂಬ ಲೇಖನವನ್ನು ನೋಡಿರಿ.
[ಪುಟ 23ರಲ್ಲಿರುವ ಚಿತ್ರ]
ಸೊಕೀನಿಯನ್ ಪಂಥದ ಒಬ್ಬ ಪಾದ್ರಿಗೆ ಸೇರಿದ್ದ ಒಂದು ಮನೆ
[ಪುಟ 23ರಲ್ಲಿರುವ ಚಿತ್ರ]
ಮೇಲೆ: ಇಂದು ರಾಕೌ; ಬಲಗಡೆಯಲ್ಲಿ “ಏರಿಯಸ್ ಪಂಥ”ದ ಯಾವುದೇ ಸುಳಿವನ್ನು ನಿರ್ಮೂಲನಮಾಡಲಿಕ್ಕಾಗಿ 1650ರಲ್ಲಿ ಸ್ಥಾಪಿಸಲ್ಪಟ್ಟ ಸಂನ್ಯಾಸಿ ಮಠವಿದೆ; ಕೆಳಗೆ: ಪೋಲಿಷ್ ಬ್ರೆದ್ರನ್ ಪಂಥದೊಂದಿಗೆ ಜಗಳವನ್ನು ಎಬ್ಬಿಸಲಿಕ್ಕಾಗಿ ಈ ಸ್ಥಳದಲ್ಲಿ ಕ್ಯಾತೊಲಿಕ್ ಪಾದ್ರಿಗಳು ಒಂದು ಶಿಲುಬೆಯನ್ನು ಸ್ಥಾಪಿಸಿದರು
[ಪುಟ 21ರಲ್ಲಿರುವ ಚಿತ್ರ ಕೃಪೆ]
Title card of Biblia nieświeska by Szymon Budny, 1572