ಕೆಲವರು ಜ್ಞಾಪಿಸಿಕೊಳ್ಳಲ್ಪಟ್ಟಿರುವ ವಿಧ
ಸುಮಾರು ಮೂರು ಸಾವಿರ ವರುಷಗಳ ಹಿಂದೆ, ದಾವೀದನು ತನ್ನ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಇಸ್ರಾಯೇಲ್ಯರ ಅರಸನಾದ ಸೌಲನಿಂದ ತಪ್ಪಿಸಿಕೊಂಡು ಓಡುತ್ತಿದ್ದನು. ದಾವೀದನು ಆಹಾರ ಮತ್ತು ನೀರಿಗಾಗಿ, ಅನೇಕ ಆಡುಕುರಿಗಳನ್ನು ಹೊಂದಿದ್ದ ಬಹು ಐಶ್ವರ್ಯವಂತ ಮನಷ್ಯನಾದ ನಾಬಾಲನ ಬಳಿಗೆ ತನ್ನ ಜನರನ್ನು ಕಳುಹಿಸಿದನು. ವಾಸ್ತವದಲ್ಲಿ, ದಾವೀದನು ಮತ್ತು ಅವನ ಹಿಂಬಾಲಕರು ನಾಬಾಲನ ಕುರುಬರಿಗೆ ರಕ್ಷಣೆಯನ್ನು ನೀಡಿದ್ದ ಕಾರಣ ನಾಬಾಲನು ಅವರಿಗೆ ಋಣಿಯಾಗಿದ್ದನು. ಹಾಗಿದ್ದರೂ, ನಾಬಾಲನು ಅವರಿಗೆ ಯಾವುದೇ ಅತಿಥಿ ಸತ್ಕಾರವನ್ನು ನೀಡಲು ನಿರಾಕರಿಸಿದನು. ಅಷ್ಟುಮಾತ್ರವಲ್ಲದೆ, ಅವನು ದಾವೀದನ ಸೇವಕರನ್ನು ತೀವ್ರವಾಗಿ ಖಂಡಿಸಿದನು. ಈ ರೀತಿಯಲ್ಲಿ ವರ್ತಿಸುವ ಮೂಲಕ ನಾಬಾಲನು ಬೆಂಕಿಯೊಂದಿಗೆ ಆಡುತ್ತಿದ್ದನು, ಏಕೆಂದರೆ ದಾವೀದನನ್ನು ಯಾರೂ ಅಲ್ಪ ವ್ಯಕ್ತಿಯಂತೆ ಪರಿಗಣಿಸಸಾಧ್ಯವಿರಲಿಲ್ಲ.—1 ಸಮುವೇಲ 25:5, 8, 10, 11, 14.
ನಾಬಾಲನ ಮನೋಭಾವವು, ಸಂದರ್ಶಕರಿಗೆ ಮತ್ತು ಅಪರಿಚಿತರಿಗೆ ಅತಿಥಿ ಸತ್ಕಾರವನ್ನು ತೋರಿಸುವಂಥ ಮಧ್ಯಪೂರ್ವ ದೇಶಗಳ ಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಹೀಗೆ ಮಾಡುವ ಮೂಲಕ, ನಾಬಾಲನು ತನಗಾಗಿ ಯಾವ ಹೆಸರನ್ನು ಗಳಿಸಿಕೊಂಡನು? ಬೈಬಲಿನ ದಾಖಲೆಯು ತಿಳಿಸುವಂತೆ, ಅವನು “ನಿಷ್ಠುರನೂ ದುಷ್ಕರ್ಮಿಯೂ” ಮತ್ತು “ಮೂರ್ಖ” ವ್ಯಕ್ತಿಯೂ ಆಗಿದ್ದನು. ಅವನ ಹೆಸರಿನ ಅರ್ಥವು “ಮೂರ್ಖ” ಎಂಬುದಾಗಿತ್ತು ಮತ್ತು ಅವನು ತನ್ನ ಹೆಸರಿನ ಅರ್ಥಕ್ಕೆ ತಕ್ಕಂತೆ ಜೀವಿಸಿದನು. (1 ಸಮುವೇಲ 25:3, 17, 25) ನೀವು ಈ ರೀತಿಯಲ್ಲಿ ಜ್ಞಾಪಿಸಿಕೊಳ್ಳಲ್ಪಡಲು ಬಯಸುತ್ತೀರೋ? ಇತರರೊಂದಿಗೆ, ಮುಖ್ಯವಾಗಿ ನಿಮಗಿಂತ ಕಡಿಮೆ ಪ್ರಭಾವಶಾಲಿಯಾದ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ನೀವು ನಿಷ್ಠುರರೂ ಕಾರುಣ್ಯರಹಿತರೂ ಆಗಿರುತ್ತೀರೋ? ಅಥವಾ ನೀವು ದಯಾಪರರು, ಸತ್ಕರಿಸುವವರು ಮತ್ತು ಇತರರನ್ನು ಗಣನೆಗೆ ತೆಗೆದುಕೊಳ್ಳುವವರು ಆಗಿದ್ದೀರೋ?
ಅಬೀಗೈಲ್—ಬಹುಬುದ್ಧಿವಂತೆಯಾದ ಸ್ತ್ರೀ
ನಾಬಾಲನು ತನ್ನ ನಿಷ್ಠುರ ಮನೋಭಾವದ ಕಾರಣ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡನು. ದಾವೀದನು ಮತ್ತು ಅವನ ಜನರಲ್ಲಿ ನಾನೂರು ಮಂದಿ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು, ನಾಬಾಲನಿಗೆ ಪಾಠವನ್ನು ಕಲಿಸಲು ಹೊರಟುಬಂದರು. ಏನು ಸಂಭವಿಸಿತೆಂಬ ವಿಷಯವನ್ನು ನಾಬಾಲನ ಹೆಂಡತಿಯಾದ ಅಬೀಗೈಲಳು ಕೇಳಿಸಿಕೊಂಡಳು. ಒಂದು ಕಾದಾಟವು ಬೇಗನೆ ಆರಂಭಗೊಳ್ಳಲಿದೆ ಎಂಬುದನ್ನು ಅವಳು ಗ್ರಹಿಸಿಕೊಂಡಳು. ಈ ಸನ್ನಿವೇಶದಲ್ಲಿ ಅವಳು ಏನು ಮಾಡಸಾಧ್ಯವಿತ್ತು? ಅವಳು ಶೀಘ್ರವಾಗಿ ಬೇಕಾದಷ್ಟು ಆಹಾರವನ್ನು ಮತ್ತು ಇತರ ಆವಶ್ಯಕತೆಗಳನ್ನು ಸಿದ್ಧಮಾಡಿ, ದಾವೀದ ಮತ್ತು ಅವನ ಜನರನ್ನು ಎದುರುಗೊಳ್ಳಲು ಹೊರಟಳು. ಅವಳು ಅವರನ್ನು ಎದುರುಗೊಂಡಾಗ, ರಕ್ತಾಪರಾಧಕ್ಕೆ ಗುರಿಯಾಗದಂತೆ ದಾವೀದನನ್ನು ಬೇಡಿಕೊಂಡಳು. ದಾವೀದನ ಮನಕರಗಿತು. ಅವನು ಆಕೆಯ ವಿಜ್ಞಾಪನೆಯನ್ನು ಲಾಲಿಸಿ, ಆಕೆಗೆ ಕನಿಕರ ತೋರಿಸಿದನು. ಇದಾದ ಕೆಲವು ದಿನಗಳ ನಂತರ ನಾಬಾಲನು ಮೃತಪಟ್ಟನು. ಅಬೀಗೈಲಳ ಉತ್ತಮ ಗುಣಗಳನ್ನು ಗಣ್ಯಮಾಡಿದ ದಾವೀದನು ಆಕೆಯನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದನು.—1 ಸಮುವೇಲ 25:14-42.
ಅಬೀಗೈಲಳು ತನಗಾಗಿ ಯಾವ ಖ್ಯಾತಿಯನ್ನು ಪಡೆದುಕೊಂಡಳು? ಆಕೆಯು “ವಿವೇಚನೆಯುಳ್ಳವಳು” ಅಥವಾ ಮೂಲ ಇಬ್ರಿಯ ಪದವು ತಿಳಿಸುವಂತೆ “ಬಹುಬುದ್ಧಿವಂತೆ” ಆಗಿದ್ದಳು. ಅವಳು ನಿಜವಾಗಿಯೂ ವಿವೇಚನೆಯುಳ್ಳವಳೂ ಪ್ರಾಯೋಗಿಕ ಜ್ಞಾನವುಳ್ಳವಳೂ ಆಗಿದ್ದು ಯಾವಾಗ ಏನನ್ನು ಮಾಡಬೇಕೆಂಬ ಅರಿವನ್ನು ಹೊಂದಿದವಳಾಗಿದ್ದಳು. ತನ್ನ ಮೂರ್ಖನಾದ ಗಂಡನನ್ನು ಮತ್ತು ಅವನ ಮನೆಯನ್ನು ಗಂಡಾಂತರದಿಂದ ಪಾರುಮಾಡಲು ಅವಳು ನಿಷ್ಠೆಯಿಂದ ಕ್ರಿಯೆಗೈದಳು. ಸಮಯಾನಂತರ, ಅವಳು ಬಹುಬುದ್ಧಿವಂತೆಯಾದ ಸ್ತ್ರೀ ಎಂಬ ಒಂದು ಅತ್ಯುತ್ತಮವಾದ ಖ್ಯಾತಿಯೊಂದಿಗೆ ಮರಣವನ್ನಪ್ಪಿದಳು.—1 ಸಮುವೇಲ 25:3, NW.
ಪೇತ್ರನು ಯಾವ ದಾಖಲೆಯನ್ನು ಬಿಟ್ಟುಹೋದನು
ಈಗ ನಾವು ಸಾ.ಶ. ಮೊದಲನೆಯ ಶತಮಾನದ ಸಮಯಕ್ಕೆ ಮುನ್ನಡೆಯೋಣ ಮತ್ತು ಯೇಸುವಿನ 12 ಮಂದಿ ಅಪೊಸ್ತಲರ ಕುರಿತು ಪರಿಗಣಿಸೋಣ. ಇವರಲ್ಲಿ, ಗಲಿಲಾಯದಲ್ಲಿ ಬೆಸ್ತನಾಗಿದ್ದ ಪೇತ್ರ ಅಥವಾ ಕೇಫನು ಬಹಳ ಭಾವಗರ್ಭಿತ ಮತ್ತು ಆವೇಗಪರ ಸ್ವಭಾವದವನಾಗಿದ್ದನು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಯಾವುದೇ ಭಯವಿಲ್ಲದ ಬಹಳ ಶಕ್ತಿಯುತ ವ್ಯಕ್ತಿಯಾಗಿದ್ದನು. ಉದಾಹರಣೆಗೆ, ಒಂದು ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆದನು. ಪೇತ್ರನ ಕಾಲುಗಳನ್ನು ತೊಳೆಯುವ ಸರದಿ ಬಂದಾಗ ಅವನು ಹೇಗೆ ಪ್ರತಿಕ್ರಿಯಿಸಿದನು?
ಪೇತ್ರನು ಯೇಸುವಿಗೆ ಹೇಳಿದ್ದು: “ಸ್ವಾಮೀ, ನೀನು ನನ್ನ ಕಾಲುಗಳನ್ನು ತೊಳೆಯಬೇಕೇ?” ಯೇಸು ಉತ್ತರಿಸುತ್ತಾ ಹೇಳಿದ್ದು: “ನಾನು ಮಾಡುವದು ಈಗ ನಿನಗೆ ತಿಳಿಯುವದಿಲ್ಲ, ಇನ್ನು ಮೇಲೆ ನಿನಗೆ ತಿಳಿಯುವದು ಅಂದನು.” ಅದಕ್ಕೆ ಪೇತ್ರನು ಉತ್ತರಿಸಿದ್ದು: “ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು.” ಪೇತ್ರನ ಅರ್ಥವತ್ತಾದ ಆದರೆ ಅದೇ ಸಮಯದಲ್ಲಿ ಆವೇಗಪರ ಪ್ರತಿಕ್ರಿಯೆಯನ್ನು ಗಮನಿಸಿರಿ. ಇದಕ್ಕೆ ಯೇಸು ಹೇಗೆ ಪ್ರತಿವರ್ತಿಸಿದನು?
“ನಾನು ನಿನ್ನನ್ನು ತೊಳೆಯದಿದ್ದರೆ ನನ್ನ ಸಂಗಡ ನಿನಗೆ ಪಾಲಿಲ್ಲ,” ಎಂಬುದಾಗಿ ಯೇಸು ಉತ್ತರಿಸಿದನು. ಅದಕ್ಕೆ ಸೀಮೋನ ಪೇತ್ರನು: “ಸ್ವಾಮೀ, ನನ್ನ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನೂ ತಲೆಯನ್ನೂ ಸಹ ತೊಳೆಯಬೇಕು ಅಂದನು.” ಈಗ ಪೇತ್ರನು ಇನ್ನೊಂದು ಪರಾಕಾಷ್ಠೆಗೆ ಹೋಗುತ್ತಾನೆ! ಆದರೆ ಪೇತ್ರನ ಮನೋಭಾವ ಏನಾಗಿದೆ ಎಂಬುದು ಜನರೆಲ್ಲರಿಗೂ ತಿಳಿದಿತ್ತು. ಅವನಲ್ಲಿ ಯಾವುದೇ ಕಪಟವಿರಲಿಲ್ಲ.—ಯೋಹಾನ 13:6-9.
ಪೇತ್ರನು ಅವನ ಬಲಹೀನತೆಗಳ ಸಲುವಾಗಿಯೂ ಜ್ಞಾಪಿಸಿಕೊಳ್ಳಲ್ಪಡುತ್ತಾನೆ. ಉದಾಹರಣೆಗೆ, ನಜರೇತಿನ ದೂಷಿತ ಯೇಸುವಿನ ಕೂಡ ಇದ್ದವನು ಎಂಬುದಾಗಿ ಜನರು ಆಪಾದಿಸಿದಾಗ, ಅವನು ಕ್ರಿಸ್ತನನ್ನು ಮೂರು ಬಾರಿ ಅಲ್ಲಗಳೆದನು. ಆದರೆ ಪೇತ್ರನು ತನ್ನ ತಪ್ಪನ್ನು ಗ್ರಹಸಿಕೊಂಡ ಬಳಿಕ ಬಹು ವ್ಯಥೆಪಟ್ಟು ಅತ್ತನು. ತನ್ನ ದುಃಖವನ್ನು ಮತ್ತು ಪಶ್ಚಾತ್ತಾಪವನ್ನು ವ್ಯಕ್ತಪಡಿಸಲು ಅವನು ಭಯಪಡಲಿಲ್ಲ. ಪೇತ್ರನ ಈ ಅಲ್ಲಗಳೆಯುವಿಕೆಯು ಎಲ್ಲಾ ಸುವಾರ್ತಾ ಬರಹಗಾರರಿಂದ ದಾಖಲಿಸಲ್ಪಟ್ಟಿದೆ. ಪ್ರಾಯಶಃ ಅವರಿಗೆ ಈ ಮಾಹಿತಿಯನ್ನು ಪೇತ್ರನೇ ನೀಡಿದ್ದಿರಬೇಕು! ತನ್ನ ತಪ್ಪನ್ನು ಒಪ್ಪಿಕೊಳ್ಳುವಷ್ಟರ ಮಟ್ಟಿಗೆ ಅವನು ದೀನನಾಗಿದ್ದನು. ನಿಮ್ಮಲ್ಲಿ ಈ ಸದ್ಗುಣವಿದೆಯೋ?—ಮತ್ತಾಯ 26:69-75; ಮಾರ್ಕ 14:66-72; ಲೂಕ 22:54-62; ಯೋಹಾನ 18:15-18, 25-27.
ಪೇತ್ರನು ಕ್ರಿಸ್ತನನ್ನು ಅಲ್ಲಗಳೆದು ಕೆಲವೇ ವಾರಗಳಲ್ಲಿ ಪವಿತ್ರಾತ್ಮದಿಂದ ತುಂಬಿದವನಾಗಿ ಪಂಚಾಶತ್ತಮ ದಿನದಂದು ಸಹಸ್ರಾರು ಯೆಹೂದ್ಯರಿಗೆ ಧೈರ್ಯದಿಂದ ಪ್ರಸಂಗಮಾಡಿದನು. ಪುನರುತ್ಥಿತ ಯೇಸುವಿಗೆ ಇವನಲ್ಲಿ ಭರವಸೆಯಿತ್ತೆಂಬುದಕ್ಕೆ ಇದೊಂದು ನಿಶ್ಚಯವಾದ ಸೂಚನೆಯಾಗಿತ್ತು.—ಅ. ಕೃತ್ಯಗಳು 2:14-21.
ಇನ್ನೊಂದು ಸಂದರ್ಭದಲ್ಲಿ ಪೇತ್ರನು ಬೇರೊಂದು ಪಾಶದಲ್ಲಿ ಸಿಲುಕಿದನು. ಅಪೊಸ್ತಲ ಪೌಲನು ವಿವರಿಸಿದ್ದು, ಯಾಕೋಬನ ಕಡೆಯಿಂದ ಕೆಲವರು ಬರುವದಕ್ಕೆ ಮುಂಚೆ ಪೇತ್ರನು ಅನ್ಯಜನರ ಸಂಗಡ ಧೈರ್ಯದಿಂದ ಬೆರೆಯುತ್ತಿದ್ದನು. ಆದರೂ, ಯೆರೂಸಲೇಮಿನಿಂದ ಬಂದ “ಸುನ್ನತಿಯವರಾದ ಅವರಿಗೆ ಅವನು ಭಯಪಟ್ಟು” ತನ್ನನ್ನು ಅನ್ಯಜನರಿಂದ ಪ್ರತ್ಯೇಕಿಸಿಕೊಂಡನು. ಪೌಲನು ಪೇತ್ರನ ಇಬ್ಬಗೆಯ ಮಟ್ಟವನ್ನು ಖಂಡಿಸಿದನು.—ಗಲಾತ್ಯ 2:11-14.
ಆದರೂ, ಯೇಸುವಿನ ಹೆಚ್ಚಿನ ಹಿಂಬಾಲಕರು ಅವನನ್ನು ಬಿಟ್ಟುಹೋಗಲು ಸಿದ್ಧರಿದ್ದಂತಹ ಕಠಿಣ ಸಂದರ್ಭದಲ್ಲಿ, ಧೈರ್ಯದಿಂದ ತನ್ನ ಅಭಿಪ್ರಾಯವನ್ನು ತಿಳಿಸಿದವನು ಯಾರು? ಇದು, ಯೇಸು ತನ್ನ ಮಾಂಸವನ್ನು ತಿಂದು ತನ್ನ ರಕ್ತವನ್ನು ಕುಡಿಯಬೇಕೆಂಬ ಹೊಸ ವಿಷಯವನ್ನು ತಿಳಿಸಿದಂಥ ಸಂದರ್ಭವಾಗಿತ್ತು. ಅವನಂದದ್ದು: “ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ.” ಯೇಸುವಿನ ಯೆಹೂದಿ ಹಿಂಬಾಲಕರಲ್ಲಿ ಹೆಚ್ಚಿನವರು ಈ ಮಾತಿನಿಂದ ಎಡವಿಬಿದ್ದರು ಮತ್ತು ಅವರಂದದ್ದು: “ಇದು ಕಠಿಣವಾದ ಮಾತು, ಇದನ್ನು ಯಾರು ಕೇಳಾರು?” ನಂತರ ಏನು ಸಂಭವಿಸಿತು? “ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು.”—ಯೋಹಾನ 6:50-66.
ಈ ಕಠಿನ ಪರಿಸ್ಥಿತಿಯ ಸಮಯದಲ್ಲಿ, ಯೇಸು ತನ್ನ 12 ಮಂದಿ ಅಪೊಸ್ತಲರ ಕಡೆಗೆ ತಿರುಗಿ, ಹೃದಯ ಸ್ಪರ್ಶಿಸುವಂಥ ಒಂದು ಪ್ರಶ್ನೆಯನ್ನು ಕೇಳಿದನು: “ನೀವು ಸಹ ಹೋಗಬೇಕೆಂದಿದ್ದೀರಾ?” ಪೇತ್ರನು ಪ್ರತಿಕ್ರಿಯಿಸುತ್ತಾ ಹೇಳಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು. ನೀನು ದೇವರು ಪ್ರತಿಷ್ಟಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.”—ಯೋಹಾನ 6:67-69.
ಪೇತ್ರನು ತನಗಾಗಿ ಯಾವ ರೀತಿಯ ಖ್ಯಾತಿಯನ್ನು ಸ್ಥಾಪಿಸಿಕೊಂಡನು? ಅವನ ವೃತ್ತಾಂತವನ್ನು ಓದುವ ಯಾರೊಬ್ಬರೂ ಅವನ ಪ್ರಾಮಾಣಿಕತೆ ಮತ್ತು ಮುಚ್ಚುಮರೆಯಿಲ್ಲದ ವ್ಯಕ್ತಿತ್ವ, ನಿಷ್ಠೆ, ಹಾಗೂ ತನ್ನ ಸ್ವಂತ ಬಲಹೀನತೆಯನ್ನು ಗುರುತಿಸಿ ಅದನ್ನು ಒಪ್ಪಿಕೊಳ್ಳುವ ಇಚ್ಛೆಯಿಂದ ನಿಶ್ಚಯವಾಗಿಯೂ ಪ್ರಭಾವಿತರಾಗುವರು. ಅವನು ತನಗಾಗಿ ಎಂಥ ಉತ್ತಮ ಹೆಸರನ್ನು ಮಾಡಿಕೊಂಡಿದ್ದಾನೆ!
ಯೇಸುವಿನ ಕುರಿತು ಜನರು ಏನನ್ನು ಜ್ಞಾಪಿಸಿಕೊಂಡರು?
ಯೇಸುವಿನ ಭೂಶುಶ್ರೂಷೆಯು ಕೇವಲ ಮೂರುವರೆ ವರುಷಗಳ ವರೆಗೆ ಮಾತ್ರ ಮುಂದುವರಿಯಿತು. ಆದರೂ, ಅವನ ಹಿಂಬಾಲಕರಿಂದ ಅವನು ಯಾವ ವಿಧದಲ್ಲಿ ಜ್ಞಾಪಿಸಿಕೊಳ್ಳಲ್ಪಟ್ಟನು? ಅವನು ಪರಿಪೂರ್ಣನೂ ಯಾವ ಪಾಪವನ್ನು ಮಾಡದವನೂ ಆಗಿದ್ದ ಕಾರಣ ತನ್ನನ್ನು ಜನರಿಂದ ಪ್ರತ್ಯೇಕವಾಗಿರಿಸಿಕೊಂಡನೋ? ತಾನು ದೇವರ ಮಗನಾಗಿದ್ದೇನೆಂದ ತಿಳಿದಿರುವ ಕಾರಣ, ತನ್ನ ಅಧಿಕಾರವನ್ನು ಪ್ರಶ್ನಾತೀತವಾದ ರೀತಿಯಲ್ಲಿ ಉಪಯೋಗಿಸಿದನೋ? ವಿಧೇಯರಾಗುವಂತೆ ತನ್ನ ಹಿಂಬಾಲಕರನ್ನು ಬೆದರಿಸಿ, ಬಲಾತ್ಕರಿಸಿದನೋ? ವಿನೋದ ಪ್ರವೃತ್ತಿಯೇ ಇಲ್ಲದಷ್ಟು ಮಟ್ಟಿಗೆ ತನ್ನನ್ನು ಬಹಳ ಗಂಭೀರವಾಗಿ ಪರಿಗಣಿಸಿಕೊಂಡನೋ? ಬಲಹೀನರಿಗೆ, ಅಸ್ವಸ್ಥರಿಗೆ, ಅಥವಾ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗದಷ್ಟು ಮಟ್ಟಿಗೆ ಅವನು ಕಾರ್ಯಮಗ್ನನಾಗಿದ್ದನೋ? ಅವನ ಸಮಯದಲ್ಲಿ ಜೀವಿಸಿದ ಪುರುಷರು, ಇತರ ಕುಲದ ಜನರನ್ನು ಮತ್ತು ಸ್ತ್ರೀಯರನ್ನು ತುಚ್ಛವಾಗಿ ನೋಡುತ್ತಿದ್ದಂತೆ ಅವನೂ ನೋಡಿದನೋ? ದಾಖಲೆಯು ನಮಗೆ ಯೇಸುವಿನ ಕುರಿತಾಗಿ ಏನನ್ನು ತಿಳಿಸುತ್ತದೆ?
ಯೇಸುವಿಗೆ ಜನರಲ್ಲಿ ಆಸಕ್ತಿಯಿತ್ತು. ಅವನು ಅನೇಕ ಸಂದರ್ಭಗಳಲ್ಲಿ ಕುಂಟರನ್ನು ಮತ್ತು ರೋಗಿಗಳನ್ನು ಗುಣಪಡಿಸಿದನೆಂದು ಅವನ ಶುಶ್ರೂಷೆಯ ಕುರಿತಾದ ಅಧ್ಯಯನವು ತಿಳಿಸುತ್ತದೆ. ಅಗತ್ಯದಲ್ಲಿರುವವರಿಗೆ ಸಹಾಯಮಾಡಲು ಅವನು ತನ್ನನೇ ನೀಡಿಕೊಂಡನು. ಚಿಕ್ಕ ಮಕ್ಕಳಲ್ಲಿ ಸಹ ಅವನು ಆಸಕ್ತಿಯನ್ನು ತೋರಿಸಿದನು. ಅವನು ತನ್ನ ಶಿಷ್ಯರಿಗೆ ಬೋಧಿಸಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” ನಂತರ ಯೇಸು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.” ನೀವು ಸಹ ಮಕ್ಕಳಿಗಾಗಿ ಸಮಯವನ್ನು ಬದಿಗಿಡುತ್ತೀರೋ ಇಲ್ಲವೆ ಅವರು ಇದ್ದಾರೆಂಬುದನ್ನು ಗಮನಿಸಲು ಸಹ ಸಮಯವಿಲ್ಲದಷ್ಟು ಕಾರ್ಯಮಗ್ನರಾಗಿದ್ದೀರೋ?—ಮಾರ್ಕ 10:13-16; ಮತ್ತಾಯ 19:13-15.
ಯೇಸು ಭೂಮಿಯಲ್ಲಿದ್ದಾಗ, ಧರ್ಮಶಾಸ್ತ್ರವು ಅಗತ್ಯಪಡಿಸುವುದಕ್ಕಿಂತಲೂ ಹೆಚ್ಚಿನ ಧಾರ್ಮಿಕ ನಿಯಮಗಳು ಮತ್ತು ಕಟ್ಟಳೆಗಳೆಂಬ ಭಾರವಾದ ಹೊರೆಗಳಿಂದ ಯೆಹೂದಿ ಜನರು ಕುಗ್ಗಿಸಲ್ಪಟ್ಟಿದ್ದರು. ಅವರ ಧಾರ್ಮಿಕ ಮುಖಂಡರು, ಭಾರವಾದ ಹೊರೆಗಳನ್ನು ಜನರ ಹೆಗಲಿನ ಮೇಲೆ ಹೊರಿಸುತ್ತಿದ್ದರು, ಆದರೆ ತಾವಾದರೋ ಬೆರಳಿನಿಂದಲೂ ಅವುಗಳನ್ನು ಮುಟ್ಟುತ್ತಿರಲಿಲ್ಲ. (ಮತ್ತಾಯ 23:4; ಲೂಕ 11:46) ಆದರೆ ಯೇಸು ಇವರಿಗಿಂತ ಎಷ್ಟು ಭಿನ್ನವಾಗಿದ್ದನು! ಅವನಂದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ [“ಚೈತನ್ಯ,” NW]ಕೊಡುವೆನು.”—ಮತ್ತಾಯ 11:28-30.
ಯೇಸುವಿನೊಂದಿಗೆ ಸಹವಾಸಮಾಡುವಾಗ ಜನರು ಚೈತನ್ಯವನ್ನು ಕಂಡುಕೊಂಡರು. ಅವನು, ತನ್ನ ಶಿಷ್ಯರು ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳಲು ಹಿಂಜರಿಯುವಂತೆ ಅವರನ್ನು ಹೆದರಿಸಿಡಲಿಲ್ಲ. ವಾಸ್ತವದಲ್ಲಿ, ಅವರ ಹೃದಯದ ಅನಿಸಿಕೆಗಳನ್ನು ಹೊರಸೆಳೆಯಲು ಅವನು ಪ್ರಶ್ನೆಗಳನ್ನು ಕೇಳಿದನು. (ಮಾರ್ಕ 8:27-29) ಕ್ರೈಸ್ತ ಮೇಲ್ವಿಚಾರಕರು ತಮ್ಮನ್ನೇ ಹೀಗೆ ಕೇಳಿಕೊಳ್ಳಸಾಧ್ಯವಿದೆ: ‘ನಾನು ಸಹ ನನ್ನ ಜೊತೆ ವಿಶ್ವಾಸಿಗಳ ಮೇಲೆ ಅದೇ ರೀತಿಯ ಪ್ರಭಾವವನ್ನು ಬೀರುತ್ತಿದ್ದೇನೋ? ಇತರ ಹಿರಿಯರು ತಮ್ಮ ಅಭಿಪ್ರಾಯವನ್ನು ಯಾವುದೇ ಮುಚ್ಚುಮರೆಯಿಲ್ಲದೆ ನನ್ನಲ್ಲಿ ಹೇಳುತ್ತಾರೋ ಅಥವಾ ಹಾಗೆ ತಿಳಿಸಲು ಹಿಂಜರಿಯುತ್ತಾರೋ?’ ಮೇಲ್ವಿಚಾರಕರು ಸಮೀಪಿಸಸಾಧ್ಯವಿರುವ, ಇತರರಿಗೆ ಕಿವಿಗೊಡುವ ಮತ್ತು ಮಣಿಯುವಂಥ ಸ್ವಭಾವವಿರುವ ವ್ಯಕ್ತಿಗಳಾಗಿರುವಲ್ಲಿ ಅದೆಷ್ಟು ಚೈತನ್ಯದಾಯಕವಾಗಿರಬಹುದು! ವಿಚಾರಹೀನತೆಯು, ಮುಚ್ಚುಮರೆಯಿಲ್ಲದ ಮತ್ತು ಅಡಚಣೆಯಿಲ್ಲದ ಮಾತುಕತೆಯನ್ನು ನಿರುತ್ತೇಜಿಸುತ್ತದೆ.
ಯೇಸು ದೇವರ ಮಗನಾಗಿದ್ದರೂ, ತನ್ನ ಶಕ್ತಿಯನ್ನು ಅಥವಾ ಅಧಿಕಾರವನ್ನು ದುರುಪಯೋಗಿಸಲಿಲ್ಲ. ಬದಲಾಗಿ ಅವನು ತನ್ನ ಕೇಳುಗರೊಂದಿಗೆ ತರ್ಕಿಸಿದನು. ಫರಿಸಾಯರು ತಮ್ಮ ವಂಚನಾತ್ಮಕ ಪ್ರಶ್ನೆಯ ಮೂಲಕ ಅವನನ್ನು ಸಿಕ್ಕಿಸಿಹಾಕಲು ಪ್ರಯತ್ನಿಸಿದಾಗ ಇದು ನಿಜವಾಗಿತ್ತು: “ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ?” ಯೇಸು ಅವರಿಗೆ, ತೆರಿಗೆಗೆ ಕೊಡುವ ನಾಣ್ಯವನ್ನು ತೋರಿಸಲು ಹೇಳಿದನು ಮತ್ತು “ಈ ತಲೆಯೂ ಈ ಮುದ್ರೆಯೂ ಯಾರದು?” ಎಂಬುದಾಗಿ ಅವರನ್ನು ಕೇಳಿದನು. ಅದಕ್ಕೆ ಅವರು “ಕೈಸರನದು” ಅಂದರು. ನಂತರ ಅವನು ಅವರಿಗೆ: “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು. (ಮತ್ತಾಯ 22:15-21) ಅವರ ಪ್ರಶ್ನೆಯನ್ನು ಉತ್ತರಿಸಲು ಸರಳವಾದ ತರ್ಕಬದ್ಧತೆಯು ಸಾಕಾಗಿತ್ತು.
ಯೇಸುವಿನಲ್ಲಿ ವಿನೋದ ಪ್ರವೃತ್ತಿಯಿತ್ತೋ? ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭವೆಂದು ಯೇಸು ಹೇಳಿದ ವಿಷಯಭಾಗವನ್ನು ಕೆಲವು ವಾಚಕರು ಓದುವಾಗ, ಅವರಿಗೆ ಅದರಲ್ಲಿ ಯೇಸುವಿನ ವಿನೋದ ಪ್ರವೃತ್ತಿಯು ಸ್ವಲ್ಪಮಟ್ಟಿಗೆ ತೋರಿಬರುತ್ತದೆ. (ಮತ್ತಾಯ 19:23, 24) ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗಲು ಪ್ರಯತ್ನಿಸುವ ಚಿತ್ರಣವು ತಾನೇ ಒಂದು ಅತಿಶಯೋಕ್ತಿಯಾಗಿದೆ. ಅಂತಹ ಇನ್ನೊಂದು ಅತಿಶಯೋಕ್ತಿಯು, ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ನೋಡುವುದು. (ಲೂಕ 6:41, 42) ನಿಶ್ಚಯವಾಗಿಯೂ, ಯೇಸು ತೀರಾ ಕಟ್ಟುನಿಟ್ಟಿನ ವ್ಯಕ್ತಿಯಾಗಿರಲಿಲ್ಲ. ಅವನು ಬೆಚ್ಚಗಿನ, ಸ್ನೇಹಪರ ಸ್ವಭಾವದವನಾಗಿದ್ದನು. ಇಂದಿರುವ ಕ್ರೈಸ್ತರಿಗೆ, ಈ ಒತ್ತಡಭರಿತ ಸಮಯದಲ್ಲಿ ವಿನೋದ ಪ್ರವೃತ್ತಿಯು ಒತ್ತಡವನ್ನು ಕಡಿಮೆಗೊಳಿಸಲು ಸಹಾಯಮಾಡಸಾಧ್ಯವಿದೆ.
ಸ್ತ್ರೀಯರ ಕಡೆಗೆ ಯೇಸುವಿನ ಸಹಾನುಭೂತಿ
ಯೇಸುವಿನ ಸಮ್ಮುಖದಲ್ಲಿ ಸ್ತ್ರೀಯರಿಗೆ ಹೇಗನಿಸಿತು? ಅವನ ತಾಯಿಯಾದ ಮರಿಯಳನ್ನು ಒಳಗೊಂಡು ಅವನಿಗೆ ಅನೇಕ ನಿಷ್ಠಾವಂತ ಸ್ತ್ರೀ ಹಿಂಬಾಲಕರಿದ್ದರು. (ಲೂಕ 8:1-3; 23:55, 56; 24:8-10) ಸ್ತ್ರೀಯರು ಅವನನ್ನು ಯಾವುದೇ ಸಂಕೋಚವಿಲ್ಲದೆ ಸಮೀಪಿಸುತ್ತಿದ್ದರು. ಒಂದು ಸಂದರ್ಭದಲ್ಲಿ “ದುರಾಚಾರಿ” ಎಂಬುದಾಗಿ ಜನರಿಂದ ತಿಳಿಯಲ್ಪಟ್ಟ ಒಬ್ಬ ಹೆಂಗಸು ಅವನ ಪಾದಗಳನ್ನು ತನ್ನ ಕಣ್ಣೀರಿನಿಂದ ಒರಸಿ, ಅವುಗಳಿಗೆ ತೈಲವನ್ನು ಹಚ್ಚಿದಳು. (ಲೂಕ 7:37, 38) ಅನೇಕ ವರುಷಗಳಿಂದ ರಕ್ತಕುಸುಮ ರೋಗವಿದ್ದ ಇನ್ನೊಬ್ಬ ಹೆಂಗಸು, ಜನರ ಗುಂಪಿನಲ್ಲಿ ಮಧ್ಯ ನುಗ್ಗಿ ವಾಸಿಯಾಗಬೇಕೆಂಬ ಆಸೆಯಿಂದ ಅವನ ಉಡುಪಿನ ಗೊಂಡೆಯನ್ನು ಮುಟ್ಟಿದಳು. ಯೇಸು ಅವಳ ನಂಬಿಕೆಯನ್ನು ಶ್ಲಾಘಿಸಿದನು. (ಮತ್ತಾಯ 9:20-22) ಹೌದು, ಸ್ತ್ರೀಯರು ಯೇಸುವನ್ನು ಸಮೀಪಿಸಬಹುದಾದ ವ್ಯಕ್ತಿಯಾಗಿ ಕಂಡುಕೊಂಡರು.
ಇನ್ನೊಂದು ಸಂದರ್ಭದಲ್ಲಿ, ಯೇಸು ಬಾವಿಯ ಬಳಿಯಲ್ಲಿ ಸಮಾರ್ಯದ ಸ್ತ್ರೀಯೊಬ್ಬಳೊಂದಿಗೆ ಮಾತನಾಡಿದನು. ಆಕೆಗೆ ಎಷ್ಟು ಆಶ್ಚರ್ಯವಾಯಿತೆಂದರೆ ಅವಳು ಹೇಳಿದ್ದು: “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ನೀರು ಬೇಡುವದು ಹೇಗೆ?” ನೆನಪಿನಲ್ಲಿಡಿರಿ, ಯೆಹೂದ್ಯರಿಗೆ ಸಮಾರ್ಯದವರೊಂದಿಗೆ ಯಾವುದೇ ಹೊಕ್ಕುಬಳಿಕೆಯಿರಲಿಲ್ಲ. ಯೇಸು ಅವಳಿಗೆ, ‘ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವ ನೀರಿನ’ ಕುರಿತು ಒಂದು ಅದ್ಭುತಕರವಾದ ಸತ್ಯವನ್ನು ತಿಳಿಸಿದನು. ಅವನು ಸ್ತ್ರೀಯರೊಂದಿಗೆ ನಿರಾತಂಕವಾಗಿ ಮಾತನಾಡುತ್ತಿದ್ದನು. ತನ್ನ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟಾಗಬಹುದು ಎಂಬುದಾಗಿ ಅವನೆಂದೂ ಭಾವಿಸಲಿಲ್ಲ.—ಯೋಹಾನ 4:7-15.
ಸ್ವತ್ಯಾಗದ ಮನೋಭಾವವನ್ನು ಒಳಗೊಂಡು ಅವನ ಅನೇಕ ದಯಾಪರ ಗುಣಗಳಿಗಾಗಿ ಯೇಸು ಜ್ಞಾಪಿಸಿಕೊಳ್ಳಲ್ಪಡುತ್ತಾನೆ. ಅವನು ದೈವಿಕ ಪ್ರೀತಿಯ ಸಾಕಾರರೂಪವಾಗಿದ್ದಾನೆ. ಯೇಸು ತನ್ನ ಹಿಂಬಾಲಕರಾಗಲು ಬಯಸುವ ಪ್ರತಿಯೊಬ್ಬರಿಗೂ ಮಟ್ಟಗಳನ್ನು ಸ್ಥಾಪಿಸಿದ್ದಾನೆ. ನೀವು ಅವನ ಮಾದರಿಯನ್ನು ಎಷ್ಟು ನಿಕಟವಾಗಿ ಹಿಂಬಾಲಿಸುತ್ತೀರಿ?—1 ಕೊರಿಂಥ 13:4-8; 1 ಪೇತ್ರ 2:21.
ಆಧುನಿಕ ದಿನದ ಕ್ರೈಸ್ತರು ಯಾವ ರೀತಿಯಲ್ಲಿ ಜ್ಞಾಪಿಸಿಕೊಳ್ಳಲ್ಪಡುತ್ತಾರೆ?
ಆಧುನಿಕ ದಿನದಲ್ಲಿ ಸಾವಿರಾರು ನಂಬಿಗಸ್ತ ಕ್ರೈಸ್ತರು ಮೃತರಾಗಿದ್ದಾರೆ. ಕೆಲವರು ವೃದ್ಧರಾಗಿ, ಇನ್ನು ಕೆಲವರು ಯುವ ಪ್ರಾಯದಲ್ಲಿಯೇ ಮರಣವನ್ನು ಹೊಂದಿದರು. ಆದರೂ ಅವರೆಲ್ಲರೂ ಒಳ್ಳೆಯ ಖ್ಯಾತಿಯನ್ನು ಬಿಟ್ಟುಹೋಗಿದ್ದಾರೆ. ವೃದ್ಧಾಪ್ಯದಲ್ಲಿ ಮೃತರಾದ ಕ್ರಿಸ್ಟಲ್ರಂಥ ಕೆಲವರು ತಮ್ಮ ಪ್ರೀತಿ ಮತ್ತು ಸಹವಾಸ ಪ್ರಿಯ ಸ್ವಭಾವಕ್ಕಾಗಿ ಜ್ಞಾಪಿಸಿಕೊಳ್ಳಲ್ಪಡುತ್ತಾರೆ. ಇತರರು, 40ರ ಪ್ರಾಯದಲ್ಲಿ ಮರಣಹೊಂದಿದ ಡರ್ಕ್ರಂತೆ, ತಮ್ಮ ಸಂತೋಷಕರ ಮನೋಭಾವ ಮತ್ತು ಸಿದ್ಧಮನಸ್ಸಿಗಾಗಿ ಜ್ಞಾಪಿಸಿಕೊಳ್ಳಲ್ಪಡುತ್ತಾರೆ.
ಅಷ್ಟುಮಾತ್ರವಲ್ಲದೆ, ಸ್ಪೆಯಿನ್ ದೇಶದ ಹೋಸೇ ಎಂಬ ಸಹೋದರನ ಕುರಿತು ಪರಿಗಣಿಸಿರಿ. 1960ರಲ್ಲಿ, ಆ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ನಿಷೇಧಿಸಲ್ಪಟ್ಟಿತ್ತು. ಆ ಸಮಯದೊಳಗಾಗಿ, ಹೋಸೇಗೆ ವಿವಾಹವಾಗಿ, ಯುವ ಪ್ರಾಯದ ಮೂರು ಹೆಣ್ಣು ಮಕ್ಕಳಿದ್ದರು. ಬಾರ್ಸಿಲೋನದಲ್ಲಿ ಅವನಿಗೊಂದು ಸುಭದ್ರ ಉದ್ಯೋಗವಿತ್ತು. ಆದರೆ ಆ ಸಮಯದಲ್ಲಿ, ದಕ್ಷಿಣ ಸ್ಪೆಯಿನ್ನಲ್ಲಿರುವ ಸಭೆಗೆ ಪ್ರೌಢ ಹಿರಿಯನೊಬ್ಬನ ಅಗತ್ಯವಿತ್ತು. ಆದುದರಿಂದ, ಹೋಸೇ ತನ್ನ ಸುಭದ್ರವಾದ ಉದ್ಯೋಗವನ್ನು ಬಿಟ್ಟು, ತನ್ನ ಕುಟುಂಬದೊಂದಿಗೆ ಮಾಲಗ ಎಂಬ ಸ್ಥಳಕ್ಕೆ ಹೋದನು. ಅಲ್ಲಿ ಅವರು ಕಠಿನವಾದ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಅನೇಕಬಾರಿ ಉದ್ಯೋಗವಿಲ್ಲದೆ ಜೀವಿಸಬೇಕಾಯಿತು.
ಹಾಗಿದ್ದರೂ, ಹೋಸೇ ತಮ್ಮ ನಂಬಿಗಸ್ತಿಕೆಗಾಗಿ, ಶುಶ್ರೂಷೆಯಲ್ಲಿ ಅವರಿಟ್ಟಂಥ ಭರವಸಾರ್ಹ ಮಾದರಿಗಾಗಿ, ಮತ್ತು ಅವರ ಬೆಂಬಲ ನೀಡುವ ಹೆಂಡತಿಯಾದ ಕಾರ್ಮೆಲ್ಳ ಸಹಾಯದಿಂದ ಅವರು ತಮ್ಮ ಹೆಣ್ಣು ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಬಂದದ್ದಕ್ಕಾಗಿ ಪ್ರಖ್ಯಾತರಾಗಿದ್ದರು. ಆ ಕ್ಷೇತ್ರದಲ್ಲಿ ಜಿಲ್ಲಾ ಅಧಿವೇಶನವನ್ನು ವ್ಯವಸ್ಥಾಪಿಸಲು ಯಾರ ಅಗತ್ಯವಾದರೂ ಇರುತ್ತಿದ್ದಾಗ, ಹೋಸೇ ಯಾವಾಗಲೂ ತಮ್ಮನ್ನು ಸಿದ್ಧರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ದುಃಖಕರವಾಗಿ, ಅವರು ತಮ್ಮ 50ರ ಪ್ರಾಯದಲ್ಲಿರುವಾಗ ಒಂದು ಗಂಭೀರವಾದ ರೋಗಕ್ಕೆ ತುತ್ತಾಗಿ ಮರಣಹೊಂದಿದರು. ಹಾಗಿದ್ದರೂ, ಭರವಸಾರ್ಹ ಹಾಗು ಶ್ರಮಪಟ್ಟು ದುಡಿಯುವ ಹಿರಿಯರು ಮತ್ತು ಪ್ರೀತಿಪರ ಪತಿ ಹಾಗು ತಂದೆ ಎಂಬ ಖ್ಯಾತಿಯನ್ನು ಅವರು ಬಿಟ್ಟುಹೋದರು.
ಹಾಗಾದರೆ, ನೀವು ಹೇಗೆ ಜ್ಞಾಪಿಸಿಕೊಳ್ಳಲ್ಪಡುವಿರಿ? ಒಂದುವೇಳೆ ನಿನ್ನೆ ನೀವು ಮರಣಹೊಂದಿರುತ್ತಿದ್ದಲ್ಲಿ, ಇಂದು ನಿಮ್ಮ ಕುರಿತು ಜನರು ಏನು ಹೇಳುತ್ತಿರಬಹುದು? ಈ ಪ್ರಶ್ನೆಯು ನಾವು ವರ್ತಿಸುವ ರೀತಿಯಲ್ಲಿ ಪ್ರಗತಿಮಾಡುವಂತೆ ನಮ್ಮೆಲ್ಲರನ್ನು ಪ್ರಚೋದಿಸುತ್ತದೆ.
ನಾವು ಉತ್ತಮವಾದ ಖ್ಯಾತಿಯನ್ನು ಸ್ಥಾಪಿಸಿಕೊಳ್ಳಲು ಏನು ಮಾಡಸಾಧ್ಯವಿದೆ? ಇತರ ಗುಣಗಳನ್ನು ಸೇರಿಸಿ, ಪ್ರೀತಿ, ದೀರ್ಘಶಾಂತಿ, ದಯೆ, ಸಾಧುತ್ವ, ಮತ್ತು ಶಮೆದಮೆ ಮುಂತಾದ ಪವಿತ್ರಾತ್ಮದ ಫಲಗಳನ್ನು ವ್ಯಕ್ತಪಡಿಸುವುದರಲ್ಲಿ ನಾವೆಲ್ಲರೂ ಯಾವಾಗಲೂ ಪ್ರಗತಿಯನ್ನು ಮಾಡಸಾಧ್ಯವಿದೆ. (ಗಲಾತ್ಯ 5:22, 23) ಹೌದು, ನಿಶ್ಚಯವಾಗಿಯೂ “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು.”—ಪ್ರಸಂಗಿ 7:1, 2; ಮತ್ತಾಯ 7:12.
[ಪುಟ 5ರಲ್ಲಿರುವ ಚಿತ್ರ]
ಅಬೀಗೈಲಳು ಆಕೆಯ ಬುದ್ಧಿವಂತಿಕೆಗಾಗಿ ಜ್ಞಾಪಿಸಿಕೊಳ್ಳಲ್ಪಡುತ್ತಾಳೆ
[ಪುಟ 7ರಲ್ಲಿರುವ ಚಿತ್ರ]
ಆವೇಗಪರ ಆದರೂ ಪ್ರಾಮಾಣಿಕ ವ್ಯಕ್ತಿತ್ವಕ್ಕಾಗಿ ಪೇತ್ರನು ಜ್ಞಾಪಿಸಿಕೊಳ್ಳಲ್ಪಡುತ್ತಾನೆ
[ಪುಟ 8ರಲ್ಲಿರುವ ಚಿತ್ರ]
ಮಕ್ಕಳಿಗಾಗಿ ಯೇಸು ಸಮಯವನ್ನು ಬದಿಗಿರಿಸಿದನು