ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!
“ಯೆಹೋವನೇ, ನಾನು ನಂಬಿಗಸ್ತನಾಗಿಯೂ ಪೂರ್ಣಹೃದಯದಿಂದಲೂ ನಿನ್ನ ಮುಂದೆ ನಡೆದಿದ್ದೇನೆಂದು ದಯವಿಟ್ಟು ನೆನಪು ಮಾಡಿಕೋ.”—2 ಅರ. 20:3, ನೂತನ ಲೋಕ ಭಾಷಾಂತರ.
1-3. ‘ಪೂರ್ಣ ಹೃದಯದಿಂದ’ ಯೆಹೋವನ ಸೇವೆ ಮಾಡುವುದು ಅಂದರೇನು? ಇದಕ್ಕೊಂದು ಉದಾಹರಣೆ ಕೊಡಿ.
ನಾವೆಲ್ಲರೂ ಅಪರಿಪೂರ್ಣರು, ತಪ್ಪು ಮಾಡುತ್ತೇವೆ. ಆದರೆ ಯೆಹೋವನು “ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು” ಶಿಕ್ಷಿಸುವುದಿಲ್ಲ. ನಮಗಾಗಿ ಆತನು ವಿಮೋಚನಾ ಮೌಲ್ಯ ಕೊಟ್ಟಿದ್ದಾನೆ. ನಾವು ಪಶ್ಚಾತ್ತಾಪಪಟ್ಟು ಆತನ ಕ್ಷಮೆ ಬೇಡಿದರೆ ಕ್ಷಮಿಸಲು ಸಿದ್ಧನಿದ್ದಾನೆ. (ಕೀರ್ತ. 103:10) ಆದರೂ ಆತನು ನಮ್ಮ ಆರಾಧನೆಯನ್ನು ಸ್ವೀಕರಿಸಬೇಕಾದರೆ ನಾವು ‘ಸಂಪೂರ್ಣಹೃದಯದಿಂದ ಆತನನ್ನು ಸೇವಿಸಬೇಕು.’ (1 ಪೂರ್ವ. 28:9) ಅಪರಿಪೂರ್ಣರಾದ ನಾವಿದನ್ನು ಹೇಗೆ ಮಾಡಲಿಕ್ಕಾಗುತ್ತದೆ?
2 ಇದನ್ನು ತಿಳಿದುಕೊಳ್ಳಲು ರಾಜ ಆಸ ಮತ್ತು ರಾಜ ಅಮಚ್ಯನ ಜೀವನವನ್ನು ಹೋಲಿಸಿ ನೋಡೋಣ. ಇಬ್ಬರೂ ಒಳ್ಳೇ ವಿಷಯಗಳನ್ನು ಮಾಡಿದರೂ ಅಪರಿಪೂರ್ಣರಾಗಿದ್ದ ಕಾರಣ ತಪ್ಪುಗಳನ್ನೂ ಮಾಡಿದರು. ಆದರೆ “ಆಸನು ತನ್ನ ಜೀವಮಾನದಲ್ಲೆಲ್ಲಾ ಯಥಾರ್ಥಚಿತ್ತನಾಗಿa ನಡೆದುಕೊಂಡನು” ಎಂದು ಬೈಬಲ್ ಹೇಳುತ್ತದೆ. (2 ಪೂರ್ವ. 15:16, 17; 25:1, 2; ಜ್ಞಾನೋ. 17:3) ಅವನು ಯೆಹೋವನ ಮೆಚ್ಚಿಕೆ ಗಳಿಸಲು ಯಾವಾಗಲೂ ಶ್ರಮಿಸುತ್ತಿದ್ದನು ಮತ್ತು ಯೆಹೋವನ ಮೇಲೆ ಅವನಿಗೆ ತುಂಬ ಭಕ್ತಿ ಇತ್ತು. ಆದರೆ ಅಮಚ್ಯ “ಯಥಾರ್ಥಚಿತ್ತನಾಗಿರಲಿಲ್ಲ.” ಅವನು ದೇವರ ವೈರಿಗಳನ್ನು ಸೋಲಿಸಿದ ಮೇಲೆ ಅವರ ದೇವದೇವತೆಗಳ ವಿಗ್ರಹಗಳನ್ನು ತಂದು ಆರಾಧಿಸಿದನು.—2 ಪೂರ್ವ. 25:11-16.
3 ‘ಪೂರ್ಣ ಹೃದಯದಿಂದ’ ದೇವರ ಸೇವೆಮಾಡುವುದು ಅಂದರೇನು? ಯೆಹೋವನನ್ನು ತುಂಬ ಪ್ರೀತಿಸುವುದು ಮತ್ತು ಆತನನ್ನು ಸದಾಕಾಲ ಆರಾಧಿಸಬೇಕೆಂಬ ಆಸೆ ಇರುವುದು ಎಂದು ಅರ್ಥ. ಸಾಮಾನ್ಯವಾಗಿ ಬೈಬಲಿನಲ್ಲಿ “ಹೃದಯ” ಎಂಬ ಪದವು ನಮ್ಮ ಅಂತರಂಗದಲ್ಲಿ ಏನಾಗಿದ್ದೇವೆ ಎನ್ನುವುದನ್ನು ಸೂಚಿಸುತ್ತದೆ. ಇದರಲ್ಲಿ ನಮ್ಮ ಯೋಚನಾ ರೀತಿ, ಇಷ್ಟಗಳು, ಗುರಿಗಳು, ಉದ್ದೇಶಗಳು ಸೇರಿವೆ. ನಾವು ಅಪರಿಪೂರ್ಣರಾಗಿದ್ದರೂ ಯೆಹೋವನನ್ನು ಪೂರ್ಣ ಹೃದಯದಿಂದ ಆರಾಧಿಸಲು ಸಾಧ್ಯ. ಹಾಗಾಗಿ ನಾವು ಯೆಹೋವನ ಸೇವೆಯನ್ನು ‘ಏನೋ ಮಾಡಬೇಕಲ್ಲಾ’ ಅನ್ನುವ ಮನೋಭಾವದಿಂದ ಅಥವಾ ‘ಏನೋ ರೂಢಿಯಾಗಿ ಬಿಟ್ಟಿದೆ’ ಅನ್ನುವ ಕಾರಣಕ್ಕೆ ಮಾಡುವುದಿಲ್ಲ. ಬದಲಾಗಿ ಯೆಹೋವನ ಸೇವೆಯನ್ನು ತುಂಬ ಇಷ್ಟಪಟ್ಟು ಮಾಡುತ್ತೇವೆ.—2 ಪೂರ್ವ. 19:9.
4. ನಾವು ಏನನ್ನು ಚರ್ಚಿಸಲಿದ್ದೇವೆ?
4 ಸಂಪೂರ್ಣ ಹೃದಯದಿಂದ ಸೇವೆ ಮಾಡುವುದು ಅಂದರೇನು ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಸ ಮತ್ತು ಯೆಹೋಷಾಫಾಟ, ಹಿಜ್ಕೀಯ, ಯೋಷೀಯನ ಜೀವನ ನಮಗೆ ಸಹಾಯ ಮಾಡುತ್ತದೆ. ಯೆಹೂದದ ಈ ನಂಬಿಗಸ್ತ ರಾಜರು ಯೆಹೋವನನ್ನು ಸಂತೋಷಪಡಿಸಿದರು. ಅವರು ತಪ್ಪು ಮಾಡಿದರೂ ಪೂರ್ಣ ಹೃದಯದಿಂದ ತನ್ನ ಸೇವೆಮಾಡುತ್ತಿದ್ದಾರೆ ಎಂದು ದೇವರು ಎಣಿಸಿದನು. ಯಾಕೆ? ಆ ರಾಜರನ್ನು ನಾವು ಹೇಗೆ ಅನುಕರಿಸಬಹುದು? ಈ ವಿಷಯಗಳನ್ನು ಚರ್ಚಿಸೋಣ.
ಆಸನು “ಯಥಾರ್ಥಮನಸ್ಸಿನಿಂದ” ನಡೆದುಕೊಂಡನು
5. ಆಸನು ಯಾವ ದಿಟ್ಟ ಕ್ರಮಗಳನ್ನು ತೆಗೆದುಕೊಂಡನು?
5 ಇಸ್ರಾಯೇಲ್ ಮತ್ತು ಯೆಹೂದ ಎಂಬ ಎರಡು ರಾಜ್ಯಗಳಾಗಿ ಇಸ್ರಾಯೇಲ್ ಜನಾಂಗ ವಿಭಾಗವಾಯಿತು. ಯೆಹೂದ ರಾಜ್ಯದ ಮೂರನೇ ರಾಜ ಆಸ. ಇವನು ತನ್ನ ರಾಜ್ಯದಿಂದ ಸುಳ್ಳಾರಾಧನೆ ಮತ್ತು ಲೈಂಗಿಕ ಅನೈತಿಕತೆಯನ್ನು ಬೇರುಸಹಿತ ಕಿತ್ತುಹಾಕಬೇಕು ಎಂದು ತೀರ್ಮಾನ ಮಾಡಿದನು. ಜನರು ಆರಾಧಿಸುತ್ತಿದ್ದ ವಿಗ್ರಹಗಳನ್ನು ನಾಶಮಾಡಿದನು, ದೇವದಾಸರನ್ನು ದೇಶದಿಂದ ಹೊರಹಾಕಿದನು. ಅಷ್ಟೇ ಅಲ್ಲ, “ತನ್ನ ಅಜ್ಜಿ ಮಾಕಳು ಆಶೇರ ಸ್ಥಂಭವನ್ನು ನಿಲ್ಲಿಸಿದ್ದರಿಂದ ಅವಳನ್ನು ರಾಜಮಾತೆಯಾಗಿರದ ಹಾಗೆ ತೆಗೆದು”ಹಾಕಿದನು. (1 ಅರ. 15:11-13, ಪವಿತ್ರ ಗ್ರಂಥ ಭಾಷಾಂತರ) “ಯೆಹೋವನನ್ನೇ ಆಶ್ರಯಿಸಿಕೊಂಡು ಧರ್ಮಶಾಸ್ತ್ರವಿಧಿಗಳನ್ನು ಕೈಕೊಳ್ಳಿರಿ” ಎಂದೂ ಜನರನ್ನು ಪ್ರೋತ್ಸಾಹಿಸಿದನು. ಹೀಗೆ ಜನರು ಯೆಹೋವನನ್ನೇ ಆರಾಧಿಸುವಂತೆ ತನ್ನಿಂದಾದ ಎಲ್ಲವನ್ನೂ ಮಾಡಿದನು.—2 ಪೂರ್ವ. 14:4.
6. ಕೂಷ್ಯರು ಯೆಹೂದದ ಮೇಲೆ ದಾಳಿಮಾಡಿದಾಗ ಆಸ ಏನು ಮಾಡಿದನು?
6 ಆಸ ರಾಜನಾದ ಮೇಲೆ 10 ವರ್ಷಗಳ ವರೆಗೆ ರಾಜ್ಯದಲ್ಲಿ ಶಾಂತಿ ಇತ್ತು. ಯುದ್ಧಗಳೇ ಇರಲಿಲ್ಲ. ಆದರೆ ಆಮೇಲೆ ಕೂಷ್ಯರು ಯೆಹೂದದ ವಿರುದ್ಧ ಯುದ್ಧಕ್ಕೆ ಬಂದರು. ಕೂಷ್ಯರ ಪಕ್ಷದಲ್ಲಿ 10 ಲಕ್ಷ ಸೈನಿಕರು ಮತ್ತು 300 ರಥಗಳಿದ್ದವು. (2 ಪೂರ್ವ. 14:1, 6, 9, 10) ಆಗ ಆಸ ಏನು ಮಾಡಿದನು? ಯೆಹೋವನು ತನಗೆ ಸಹಾಯ ಮಾಡುತ್ತಾನೆ ಎನ್ನುವುದರಲ್ಲಿ ಅವನಿಗೆ ಯಾವ ಸಂಶಯವೂ ಇರಲಿಲ್ಲ. ಆದ್ದರಿಂದ ಯುದ್ಧದಲ್ಲಿ ಗೆಲ್ಲಲು ಸಹಾಯ ಮಾಡುವಂತೆ ಯೆಹೋವನನ್ನು ಬೇಡಿಕೊಂಡನು. (2 ಪೂರ್ವಕಾಲವೃತ್ತಾಂತ 14:11 ಓದಿ.) ಕೆಲವೊಮ್ಮೆ ರಾಜರು ತನಗೆ ನಂಬಿಗಸ್ತರಾಗಿ ಇಲ್ಲದಿದ್ದಾಗಲೂ ತಾನೇ ಸತ್ಯದೇವರು ಎಂದು ತೋರಿಸಿಕೊಡಲು ಯೆಹೋವನು ತನ್ನ ಜನರಿಗೆ ಜಯಕೊಟ್ಟನು. (1 ಅರ. 20:13, 26-30) ಆದರೆ ಆಸನಿಗೆ ದೇವರು ಸಹಾಯ ಮಾಡಿದ್ದು ಅವನು ದೇವರ ಮೇಲೆ ಭರವಸೆ ಇಟ್ಟದ್ದರಿಂದ. ಆಸನ ಪ್ರಾರ್ಥನೆಗೆ ಉತ್ತರವಾಗಿ ಯುದ್ಧದಲ್ಲಿ ಜಯಕೊಟ್ಟನು. (2 ಪೂರ್ವ. 14:12, 13) ಸಮಯಾನಂತರ ಆಸನು ಯೆಹೋವನ ಮೇಲೆ ಭರವಸೆ ಇಡದೆ ಅರಾಮ್ಯರ ರಾಜನ ಸಹಾಯ ಕೋರುವ ಮೂಲಕ ಒಂದು ದೊಡ್ಡ ತಪ್ಪು ಮಾಡಿದನು. (1 ಅರ. 15:16-22) ಆದರೂ ಯೆಹೋವನ ಮೇಲೆ ಆಸನಿಗಿದ್ದ ಪ್ರೀತಿಯನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಂಡನು. ಆಸ “ಜೀವಮಾನದಲ್ಲೆಲ್ಲಾ ಯಥಾರ್ಥಮನಸ್ಸಿನಿಂದ ಯೆಹೋವನಿಗೆ ನಡೆದುಕೊಂಡನು.” ಅವನ ಒಳ್ಳೇ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?—1 ಅರ. 15:14.
7, 8. ನೀವು ಆಸನನ್ನು ಹೇಗೆ ಅನುಕರಿಸುವಿರಿ?
7 ನಾವು ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುತ್ತಿದ್ದೇವಾ ಎಂದು ತಿಳಿದುಕೊಳ್ಳುವುದು ಹೇಗೆ? ‘ಯೆಹೋವನಿಗೆ ವಿಧೇಯತೆ ತೋರಿಸಲು ಕಷ್ಟವಾದಾಗಲೂ ನಾನು ವಿಧೇಯತೆ ತೋರಿಸುತ್ತೇನಾ? ಆತನ ಸಭೆಯನ್ನು ಶುದ್ಧವಾಗಿಡಬೇಕು ಎಂಬ ದೃಢಮನಸ್ಸು ನನಗಿದೆಯಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ಆಸನ ಬಗ್ಗೆ ಸ್ವಲ್ಪ ಯೋಚಿಸಿ. ತನ್ನ ಅಜ್ಜಿಯನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಲು ಅವನಿಗೆ ನಿಜವಾಗಲೂ ತುಂಬ ಧೈರ್ಯ ಬೇಕಾಗಿತ್ತು! ಅವನಂತೆ ನಾವು ಕೆಲವೊಮ್ಮೆ ಧೈರ್ಯ ತೋರಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಕುಟುಂಬದಲ್ಲಿ ಒಬ್ಬರು ಅಥವಾ ಸ್ನೇಹಿತರು ಪಾಪಮಾಡಿ ಪಶ್ಚಾತ್ತಾಪಪಡದಿದ್ದಾಗ ಬಹಿಷ್ಕಾರವಾದರೆ ನೀವೇನು ಮಾಡುತ್ತೀರಾ? ಅವರೊಂದಿಗೆ ಸಹವಾಸ ಮಾಡಬಾರದೆಂದು ಗಟ್ಟಿಮನಸ್ಸು ಮಾಡುತ್ತೀರಾ? ಏನು ಮಾಡಬೇಕೆಂದು ನಿಮ್ಮ ಹೃದಯ ಹೇಳಬಹುದು?
8 ಜನರು ನಿಮ್ಮ ವಿರುದ್ಧವಾಗಿ ನಿಲ್ಲುವಾಗ ಆಸನಂತೆ ನೀವು ಯೆಹೋವನ ಮೇಲೆ ಭರವಸೆ ಇಡುವ ಮೂಲಕ ಪೂರ್ಣ ಹೃದಯದಿಂದ ಯೆಹೋವನ ಆರಾಧನೆ ಮಾಡುತ್ತಿದ್ದೀರಿ ಎಂದು ತೋರಿಸುತ್ತೀರಿ. ಉದಾಹರಣೆಗೆ, ಶಾಲೆಯಲ್ಲಿ ಮಕ್ಕಳು ಅಥವಾ ಶಿಕ್ಷಕರು ನೀವೊಬ್ಬ ಯೆಹೋವನ ಸಾಕ್ಷಿ ಎನ್ನುವ ಕಾರಣಕ್ಕೆ ನಿಮ್ಮನ್ನು ಗೇಲಿಮಾಡಬಹುದು. ಅಥವಾ ಕೆಲಸದ ಜಾಗದಲ್ಲಿ ಬೇರೆಯವರ ಹಾಗೆ ನೀವು ಯಾವಾಗಲೂ ಓವರ್ಟೈಮ್ ಮಾಡದೆ ಇರುವುದರಿಂದ ಅಥವಾ ಸಮ್ಮೇಳನಕ್ಕೆ ಹೋಗಲು ರಜೆ ಹಾಕುವುದರಿಂದ ನಿಮ್ಮನ್ನು ಮೂರ್ಖ ಎಂದು ಹೇಳಬಹುದು. ಹೀಗೆ ಆಗುವಾಗ ಆಸನಂತೆ ಯೆಹೋವನಿಗೆ ಪ್ರಾರ್ಥಿಸಿ, ಧೈರ್ಯ ತೋರಿಸಿ, ಯಾವುದು ಸರಿಯೋ ಅದನ್ನೇ ಮಾಡಿ. ನೆನಪಿಡಿ ದೇವರು ಆಸನಿಗೆ ಸಹಾಯ ಮಾಡಿದಂತೆ ನಿಮಗೂ ಸಹಾಯ ಮಾಡುತ್ತಾನೆ, ನಿಮ್ಮನ್ನು ಬಲಪಡಿಸುತ್ತಾನೆ.
9. ನಾವು ಸಾರುವಾಗ ಯೆಹೋವನಿಗೆ ಯಾಕೆ ಸಂತೋಷವಾಗುತ್ತದೆ?
9 ಆಸನು ಸ್ವತಃ ಯೆಹೋವನ ಮೇಲೆ ಭರವಸೆ ಇಟ್ಟದ್ದು ಮಾತ್ರವಲ್ಲ ‘ಯೆಹೋವನನ್ನು ಆಶ್ರಯಿಸಿಕೊಳ್ಳುವಂತೆ’ ಬೇರೆಯವರಿಗೂ ಪ್ರೋತ್ಸಾಹಿಸಿದನು. ನಾವು ಕೂಡ ಜನರಿಗೆ ಯೆಹೋವನನ್ನು ಆರಾಧಿಸಲು ಸಹಾಯ ಮಾಡುತ್ತೇವೆ. ನಾವು ಜನರೊಟ್ಟಿಗೆ ಆತನ ಬಗ್ಗೆ ಮಾತಾಡುವುದನ್ನು ನೋಡಿ ಆತನಿಗೆ ಸಂತೋಷವಾಗುತ್ತದೆ. ಯಾಕೆಂದರೆ ನಾವು ಇದನ್ನು ಮಾಡುವ ಮೂಲಕ ಆತನ ಮೇಲೆ ನಮಗಿರುವ ಪ್ರೀತಿ ಮತ್ತು ಜನರ ಬಗ್ಗೆ, ಅವರ ಭವಿಷ್ಯದ ಬಗ್ಗೆ ನಮಗಿರುವ ಕಾಳಜಿಯನ್ನು ತೋರಿಸಿಕೊಡುತ್ತೇವೆ!
ಯೆಹೋಷಾಫಾಟ ಯೆಹೋವನನ್ನು ಹುಡುಕಿದನು
10, 11. ನಾವು ಯೆಹೋಷಾಫಾಟನನ್ನು ಹೇಗೆ ಅನುಕರಿಸಬಹುದು?
10 ಯೆಹೋಷಾಫಾಟ ತನ್ನ “ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ” ಇದ್ದನು. (2 ಪೂರ್ವ. 20:31, 32) ಹೇಗೆ? ತನ್ನ ತಂದೆಯಂತೆ ಇವನೂ ಜನರಿಗೆ ಯೆಹೋವನನ್ನೇ ಆರಾಧಿಸುವಂತೆ ಪ್ರೋತ್ಸಾಹಿಸಿದನು. ಯೆಹೂದದ ಪಟ್ಟಣಗಳ ಜನರಿಗೆ “ಯೆಹೋವಧರ್ಮಶಾಸ್ತ್ರವನ್ನು” ಬೋಧಿಸುವ ಏರ್ಪಾಡು ಮಾಡಿದನು. (2 ಪೂರ್ವ. 17:7-10) ಅಷ್ಟೇ ಅಲ್ಲ, ಅವನು ಉತ್ತರದ ಇಸ್ರಾಯೇಲ್ ರಾಜ್ಯದಲ್ಲಿ ಎಫ್ರಾಯೀಮ್ ಪರ್ವತದ ಜನರನ್ನು ‘ಯೆಹೋವನ ಕಡೆಗೆ ತಿರುಗಿಸಲು’ ಅಲ್ಲಿಗೂ ಹೋದನು. (2 ಪೂರ್ವ. 19:4) ಯೆಹೋಷಾಫಾಟನು “ಪೂರ್ಣ ಹೃದಯದಿಂದ ಯೆಹೋವನನ್ನು ಹುಡುಕಿದ” ರಾಜನಾಗಿದ್ದನು.—2 ಪೂರ್ವ. 22:9, ಪವಿತ್ರ ಗ್ರಂಥ ಭಾಷಾಂತರ.
11 ಲೋಕದಲ್ಲೆಡೆ ಇರುವ ಜನರು ತನ್ನ ಬಗ್ಗೆ ಕಲಿಯಬೇಕು ಎನ್ನುವುದು ಯೆಹೋವನ ಆಸೆ. ಆತನ ಬಗ್ಗೆ ಕಲಿಸುವ ಈ ಕೆಲಸದಲ್ಲಿ ನಾವು ಭಾಗಿಯಾಗಬಹುದು. ಈ ಕೆಲಸದಲ್ಲಿ ನೀವು ಪ್ರತಿ ತಿಂಗಳು ಪಾಲ್ಗೊಳ್ಳಬೇಕು ಎಂಬ ಗುರಿ ಇಟ್ಟಿದ್ದೀರಾ? ಜನರು ಯೆಹೋವನನ್ನು ಆರಾಧಿಸುವಂತಾಗಲು ಅವರಿಗೆ ಆತನ ಬಗ್ಗೆ ಕಲಿಸಲು ಬಯಸುತ್ತೀರಾ? ಬೈಬಲ್ ಅಧ್ಯಯನ ಆರಂಭಿಸುವ ನಿಮ್ಮ ಗುರಿಯ ಬಗ್ಗೆ ಪ್ರಾರ್ಥಿಸುತ್ತೀರಾ? ನೀವು ಪ್ರಯತ್ನಪಟ್ಟರೆ ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ. ಆರಾಮ ಮಾಡಲು ನೀವು ಬದಿಗಿಟ್ಟ ಸಮಯವನ್ನು ಜನರಿಗೆ ಬೈಬಲಿನ ಬಗ್ಗೆ ಕಲಿಸಲಿಕ್ಕಾಗಿ ಬಳಸಲು ಸಿದ್ಧರಿದ್ದೀರಾ? ಜನರು ಪುನಃ ಯೆಹೋವನ ಸೇವೆಮಾಡಲು ಯೆಹೋಷಾಫಾಟನು ಸಹಾಯ ಮಾಡಿದಂತೆ ನಾವು ಕೂಡ ನಿಷ್ಕ್ರಿಯ ವ್ಯಕ್ತಿಗಳಿಗೆ ಸಹಾಯ ಮಾಡಬಹುದು. ಬಹಿಷ್ಕಾರ ಆಗಿರುವ ವ್ಯಕ್ತಿಗಳು ತಮ್ಮ ಸಭೆಯ ಸೇವಾಕ್ಷೇತ್ರದಲ್ಲಿ ಇದ್ದರೆ ಅವರನ್ನು ಹಿರಿಯರು ಭೇಟಿಯಾಗಿ, ಅವರು ಹಿಂದೆ ಮಾಡುತ್ತಿದ್ದ ಪಾಪವನ್ನು ಬಿಟ್ಟುಬಿಟ್ಟಿದ್ದರೆ ಸಹಾಯ ಮಾಡಬಹುದು.
12, 13. (ಎ) ಯೆಹೋಷಾಫಾಟನಿಗೆ ಭಯವಾದಾಗ ಏನು ಮಾಡಿದನು? (ಬಿ) ಯೆಹೋಷಾಫಾಟನ ಮಾದರಿಯನ್ನು ನಾವು ಅನುಕರಿಸಬೇಕು ಯಾಕೆ?
12 ಒಂದು ದೊಡ್ಡ ಶತ್ರು ಸೈನ್ಯ ಯೆಹೂದದ ವಿರುದ್ಧ ಯುದ್ಧಕ್ಕೆ ಬಂದಾಗ ತನ್ನ ತಂದೆಯಾದ ಆಸನಂತೆ ಯೆಹೋಷಾಫಾಟ ಯೆಹೋವನ ಮೇಲೆ ಭರವಸೆ ಇಟ್ಟನು. (2 ಪೂರ್ವಕಾಲವೃತ್ತಾಂತ 20:2-4 ಓದಿ.) ಅವನಿಗೆ ತುಂಬ ಭಯವಾಗಿತ್ತು. ಯೆಹೋವನ ಸಹಾಯ ಯಾಚಿಸಿದನು. ಶತ್ರುಗಳನ್ನು ಸೋಲಿಸಲು ತಮ್ಮಿಂದ ಆಗುವುದಿಲ್ಲ ಎಂದು ಪ್ರಾರ್ಥನೆಯಲ್ಲಿ ಹೇಳಿದನು. ಏನು ಮಾಡಬೇಕೆಂದು ತನಗೂ ತನ್ನ ಜನರಿಗೂ ತೋಚುತ್ತಿಲ್ಲ ಎಂದು ಸಹ ಹೇಳಿದನು. ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ ಎಂದು ಯೆಹೋಷಾಫಾಟನಿಗೆ ಭರವಸೆ ಇತ್ತು. ಹಾಗಾಗಿ “ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ” ಎಂದು ಹೇಳಿದನು.—2 ಪೂರ್ವ. 20:12.
13 ಯೆಹೋಷಾಫಾಟನಿಗೆ ಬಂದಂತೆ ಕೆಲವೊಮ್ಮೆ ಸಮಸ್ಯೆಗಳು ಬಂದಾಗ ಏನು ಮಾಡಬೇಕೆಂದು ತೋಚದೆ ನಾವು ಕಂಗಾಲಾಗಬಹುದು, ಹೆದರಿಕೆಯೂ ಆಗಬಹುದು. (2 ಕೊರಿಂ. 4:8, 9) ಆಗ ಯೆಹೋಷಾಫಾಟ ಏನು ಮಾಡಿದನೋ ಅದನ್ನು ಮಾಡಲು ಮರೆಯಬಾರದು. ಎಲ್ಲ ಜನರ ಮುಂದೆ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ತಮಗೆ ಬಲವಿಲ್ಲ ಎಂದು ಹೇಳಿದನು. (2 ಪೂರ್ವ. 20:5) ಕುಟುಂಬದ ಯಜಮಾನರೇ, ಯೆಹೋಷಾಫಾಟ ನಿಮಗೆ ಒಳ್ಳೇ ಮಾದರಿ. ಒಂದು ಸಮಸ್ಯೆ ಎದುರಾದಾಗ ಅದನ್ನು ನಿಭಾಯಿಸಲು ನಿಮಗೂ ನಿಮ್ಮ ಕುಟುಂಬಕ್ಕೂ ಸಹಾಯ ಮಾಡುವಂತೆ ಯೆಹೋವನನ್ನು ಬೇಡಿಕೊಳ್ಳಿ. ನಿಮ್ಮ ಕುಟುಂಬದ ಮುಂದೆ ಈ ರೀತಿ ಬೇಡಿಕೊಳ್ಳಲು ನಾಚಿಕೆಪಡಬೇಡಿ. ಆಗ ಯೆಹೋವನ ಮೇಲೆ ನೀವು ಎಷ್ಟು ಭರವಸೆ ಇಟ್ಟಿದ್ದೀರಿ ಎಂದು ಅವರಿಗೂ ಗೊತ್ತಾಗುತ್ತದೆ. ಯೆಹೋಷಾಫಾಟನಿಗೆ ಸಹಾಯ ಮಾಡಿದಂತೆ ಯೆಹೋವನು ನಿಮಗೂ ಸಹಾಯ ಮಾಡುತ್ತಾನೆ.
ಹಿಜ್ಕೀಯ ಸರಿಯಾದದ್ದನ್ನು ಮಾಡುತ್ತಾ ಇದ್ದನು
14, 15. ಯೆಹೋವನ ಮೇಲೆ ಹಿಜ್ಕೀಯ ಹೇಗೆ ಪೂರ್ಣ ಭರವಸೆ ಇಟ್ಟನು?
14 “ಯೆಹೋವನನ್ನೇ ಹೊಂದಿಕೊಂಡು” ನಡೆದ ಇನ್ನೊಬ್ಬ ರಾಜ ಹಿಜ್ಕೀಯ. ಇವನ ತಂದೆ ವಿಗ್ರಹಗಳನ್ನು ಪೂಜಿಸುತ್ತಿದ್ದ. ಒಳ್ಳೇ ಮಾದರಿ ಇಡಲಿಲ್ಲ. ಆದರೆ ಹಿಜ್ಕೀಯ ತನ್ನ ತಂದೆಯಂತೆ ಇರಲಿಲ್ಲ. “ಪೂಜಾಸ್ಥಳಗಳನ್ನು ಹಾಳುಮಾಡಿ ಕಲ್ಲುಕಂಬಗಳನ್ನು ಒಡೆದು ಅಶೇರವಿಗ್ರಹಸ್ತಂಭಗಳನ್ನು ಕಡಿದುಹಾಕಿದನು; ಮೋಶೆಯು ಮಾಡಿಸಿದ ತಾಮ್ರಸರ್ಪವನ್ನು ಚೂರುಚೂರುಮಾಡಿದನು.” ಯಾಕೆಂದರೆ ಇಸ್ರಾಯೇಲ್ಯರು ಆ ತಾಮ್ರದ ಸರ್ಪವನ್ನು ಆರಾಧಿಸುತ್ತಿದ್ದರು. ಹಿಜ್ಕೀಯ ಯೆಹೋವನಿಗೆ ಪೂರ್ಣ ಭಕ್ತಿ ತೋರಿಸಿದನು. ದೇವರು “ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಗಳನ್ನು” ಹಿಜ್ಕೀಯನು ಕೈಕೊಂಡು ನಡೆಯುತ್ತಾ ಇದ್ದನು.—2 ಅರ. 18:1-6.
15 ಒಮ್ಮೆ ಅಶ್ಶೂರದ ದೊಡ್ಡ ಸೈನ್ಯ ಯೆಹೂದ ರಾಜ್ಯದ ಮೇಲೆ ದಾಳಿಮಾಡಿತು. ಯೆರೂಸಲೇಮನ್ನು ನಾಶಮಾಡುವ ಬೆದರಿಕೆ ಹಾಕಿತು. ಅಶ್ಶೂರ್ಯರ ರಾಜನಾದ ಸನ್ಹೇರೀಬ ಯೆಹೋವನನ್ನು ಅಪಹಾಸ್ಯಮಾಡಿ ಹಿಜ್ಕೀಯನನ್ನು ಶರಣಾಗಿಸಲು ಪ್ರಯತ್ನಿಸಿದನು. ಇಂಥ ಅಪಾಯಕರ ಸನ್ನಿವೇಶದಲ್ಲಿ ಹಿಜ್ಕೀಯ ಯೆಹೋವನ ಮೇಲೆ ಸಂಪೂರ್ಣ ಭರವಸೆ ಇಟ್ಟನು. ಆತನ ಸಹಾಯಕ್ಕಾಗಿ ಪ್ರಾರ್ಥಿಸಿದನು. ದೇವರು ಅಶ್ಶೂರ್ಯರಿಗಿಂತ ಬಲಶಾಲಿ ಮತ್ತು ತನ್ನ ಜನರನ್ನು ರಕ್ಷಿಸಲು ಸಮರ್ಥ ಎಂದು ಅವನಿಗೆ ಗೊತ್ತಿತ್ತು. (ಯೆಶಾಯ 37:15-20 ಓದಿ.) ಅವನ ಪ್ರಾರ್ಥನೆಯನ್ನು ದೇವರು ಕೇಳಿದನು. ಒಬ್ಬ ದೇವದೂತನನ್ನು ಕಳುಹಿಸಿ ಶತ್ರು ಸೈನ್ಯದ 1,85,000 ಸೈನಿಕರನ್ನು ಹತಿಸಿಬಿಟ್ಟನು.—ಯೆಶಾ. 37:36, 37.
16, 17. ನಾವು ಹಿಜ್ಕೀಯನನ್ನು ಹೇಗೆ ಅನುಕರಿಸಬಹುದು?
16 ಮುಂದೆ ಹಿಜ್ಕೀಯ ಕಾಯಿಲೆಬಿದ್ದು ಸಾಯುವ ಪರಿಸ್ಥಿತಿ ಬಂತು. ಆಗ ಅವನು ಯೆಹೋವನಿಗೆ ಪ್ರಾರ್ಥಿಸಿ ತನ್ನ ನಂಬಿಗಸ್ತಿಕೆಯನ್ನು ನೆನಪಿಗೆ ತಂದುಕೊಂಡು ಸಹಾಯ ಮಾಡುವಂತೆ ಕೇಳಿಕೊಂಡನು. (2 ಅರಸುಗಳು 20:1-3 ಓದಿ.) ಯೆಹೋವನು ಆ ಪ್ರಾರ್ಥನೆಯನ್ನು ಕೇಳಿ ಅವನನ್ನು ವಾಸಿಮಾಡಿದನು. ಇಂದು ನಮಗೆ ಕಾಯಿಲೆ ಬಂದಾಗ ಅದ್ಭುತವಾಗಿ ವಾಸಿಯಾಗುವುದಿಲ್ಲ ಅಥವಾ ನಮ್ಮ ಆಯಸ್ಸು ಹೆಚ್ಚಾಗುವುದಿಲ್ಲ ಎಂದು ನಮಗೆ ಬೈಬಲಿನಿಂದ ಗೊತ್ತು. ಆದರೆ ನಾವು ಹಿಜ್ಕೀಯನಂತೆ ಯೆಹೋವನ ಮೇಲೆ ಭರವಸೆ ಇಡಬಹುದು. ‘ಯೆಹೋವನೇ, ನಾನು ನಂಬಿಗಸ್ತನಾಗಿ, ಯಥಾರ್ಥಚಿತ್ತನಾಗಿ ನಿನಗೆ ನಡೆದುಕೊಂಡದ್ದನ್ನು ನೆನಪು ಮಾಡಿಕೋ’ ಎಂದು ಹಿಜ್ಕೀಯನಂತೆ ಪ್ರಾರ್ಥಿಸಬಹುದು. ಯೆಹೋವನು ಯಾವಾಗಲೂ ನೀವು ಕಾಯಿಲೆಬಿದ್ದಾಗಲೂ ನಿಮ್ಮ ಕಾಳಜಿವಹಿಸುತ್ತಾನೆ ಎಂದು ನಂಬುತ್ತೀರಾ?—ಕೀರ್ತ. 41:3.
17 ನಾವು ಹಿಜ್ಕೀಯನನ್ನು ಇನ್ನೂ ಹೇಗೆಲ್ಲ ಅನುಕರಿಸಬಹುದು? ಅವನು ತನ್ನ ರಾಜ್ಯದಲ್ಲಿದ್ದ ವಿಗ್ರಹಾರಾಧನೆಯನ್ನು ಬೇರುಸಮೇತ ಕಿತ್ತುಹಾಕಿದನು. ಅದೇ ರೀತಿ ನಮ್ಮ ಮತ್ತು ಯೆಹೋವನ ಸಂಬಂಧಕ್ಕೆ ಅಪಾಯ ತರುವ ಅಥವಾ ಆತನ ಸೇವೆಗೆ ಕೊಡಬೇಕಾದ ಸಮಯವನ್ನು ಕಬಳಿಸುತ್ತಿರುವ ವಿಷಯವಿದ್ದರೆ ಅದನ್ನು ಬೇರುಸಮೇತ ಕಿತ್ತುಹಾಕಬೇಕು. ಉದಾಹರಣೆಗೆ, ಇಂದು ಅನೇಕ ಜನರು ಸಿನೆಮಾ, ಕ್ರೀಡಾ ತಾರೆಯರ ಅಥವಾ ತಮಗೆ ಪರಿಚಯವೇ ಇಲ್ಲದವರನ್ನು ಆರಾಧ್ಯವ್ಯಕ್ತಿಗಳಾಗಿ ಮಾಡಿಕೊಳ್ಳುತ್ತಾರೆ. ಅವರ ಮೇಲೆ ಎಷ್ಟು ಅಭಿಮಾನವೆಂದರೆ ಅವರ ಬಗ್ಗೆ ಓದಲು, ಅವರ ಫೋಟೋಗಳನ್ನು ನೋಡಲು ಗಂಟೆಗಟ್ಟಲೆ ಸಮಯ ಹಾಳುಮಾಡುತ್ತಾರೆ. ಅವರನ್ನು ಸಂಪರ್ಕಿಸಲು ಇಂಟರ್ನೆಟ್ನಲ್ಲಿ ಸಾಮಾಜಿಕ ಮಾಧ್ಯಮ ಅಥವಾ ಬೇರೆ ಮಾಧ್ಯಮಗಳನ್ನು ಬಳಸುತ್ತಾರೆ. ನಾವೂ ಕೂಡ ನಮ್ಮ ಕುಟುಂಬದವರ, ಆಪ್ತ ಸ್ನೇಹಿತರ ಜೊತೆ ಮಾತಾಡಲು ಇಂಥ ಮಾಧ್ಯಮಗಳನ್ನು ಬಳಸುತ್ತಿರಬಹುದು. ಆದರೆ ನಾವು ಇದರಲ್ಲೇ ಮುಳುಗಿದ್ದರೆ ತುಂಬ ಸಮಯ ಹಾಳಾಗುತ್ತದೆ. ನಾವು ಇಂಟರ್ನೆಟ್ನಲ್ಲಿ ಹಾಕಿರುವ ಫೋಟೋ ಅಥವಾ ಕಮೆಂಟುಗಳನ್ನು ತುಂಬ ಜನರು ನೋಡಿ ಇಷ್ಟಪಟ್ಟಿದ್ದಾರೆಂದು ಸೂಚಿಸುವಾಗ ನಮ್ಮಲ್ಲಿ ಅಹಂಕಾರ ಬೆಳೆಯಬಹುದು. ಅಥವಾ ಕೆಲವರು ನಮ್ಮ ಫೋಟೋ, ಕಮೆಂಟುಗಳನ್ನು ನೋಡುವುದನ್ನು ನಿಲ್ಲಿಸಿದ್ದಾರೆಂದು ಗೊತ್ತಾದಾಗ ನಮಗೆ ಸಿಟ್ಟುಬರಬಹುದು. ನಾವು ಅಪೊಸ್ತಲ ಪೌಲ ಮತ್ತು ಅಕ್ವಿಲ ಪ್ರಿಸ್ಕಿಲ್ಲರನ್ನು ಅನುಕರಿಸಬೇಕು. ಜನರು ಅದರಲ್ಲೂ ಯೆಹೋವನನ್ನು ಆರಾಧಿಸದವರು ಪ್ರತಿದಿನ, ಪ್ರತಿಕ್ಷಣ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಾ ಅವರು ಸಮಯ ಕಳೆಯುತ್ತಿದ್ದರಾ? ದೇವರ “ವಾಕ್ಯವನ್ನು ಸಾರುವುದರಲ್ಲಿ ಪೌಲನು ತೀವ್ರಾಸಕ್ತಿಯಿಂದ ನಿರತನಾಗಿದ್ದನು” ಎಂದು ಬೈಬಲ್ ಹೇಳುತ್ತದೆ. ಅಕ್ವಿಲ ಪ್ರಿಸ್ಕಿಲ್ಲರು ಕೂಡ ಸಾರುವುದರಲ್ಲಿ ನಿರತರಾಗಿದ್ದರು ಮತ್ತು ‘ದೇವರ ಮಾರ್ಗವನ್ನು ಇನ್ನೂ ಸರಿಯಾದ ರೀತಿಯಲ್ಲಿ’ ವಿವರಿಸುವುದರಲ್ಲಿ ಸಮಯ ಕಳೆಯುತ್ತಿದ್ದರು. (ಅ. ಕಾ. 18:4, 5, 26) ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನು ಮನುಷ್ಯರನ್ನು ಆರಾಧ್ಯವ್ಯಕ್ತಿಗಳಾಗಿ ಮಾಡಿಕೊಳ್ಳುತ್ತಿದ್ದೇನಾ? ಪ್ರಾಮುಖ್ಯವಲ್ಲದ ವಿಷಯಗಳಲ್ಲಿ ತುಂಬ ಸಮಯ ಕಳೆಯುತ್ತಿದ್ದೇನಾ?’ ಹಾಗಿದ್ದರೆ ಇದರಲ್ಲಿರುವ ಅಪಾಯವನ್ನು ಅರಿತು ಬೇಕಾದ ಹೊಂದಾಣಿಕೆ ಮಾಡಿಕೊಳ್ಳಿ.—ಎಫೆಸ 5:15, 16 ಓದಿ.
ಯೋಷೀಯನು ಯೆಹೋವನ ಆಜ್ಞೆಗಳನ್ನು ಪಾಲಿಸಿದನು
18, 19. ಯೋಷೀಯ ಮಾಡಿದಂತೆ ನೀವು ಏನು ಮಾಡಬೇಕು?
18 ಯೋಷೀಯನು ಸಹ ಯೆಹೋವನ ಆಜ್ಞೆಗಳನ್ನು “ಪೂರ್ಣಮನಸ್ಸಿನಿಂದ” ಪಾಲಿಸಿದನು. (2 ಪೂರ್ವ. 34:31) ಅವನು ಹಿಜ್ಕೀಯನ ಮರಿಮೊಮ್ಮಗನಾಗಿದ್ದನು. ಹದಿವಯಸ್ಸಿನಲ್ಲಿದ್ದಾಗ ಅವನು “ದಾವೀದನ ದೇವರನ್ನು ಹುಡುಕುವವನಾದನು.” 20ನೇ ವಯಸ್ಸಿನಲ್ಲಿ ಯೆಹೂದದಿಂದ ವಿಗ್ರಹಾರಾಧನೆಯನ್ನು ನಿರ್ಮೂಲ ಮಾಡಲು ಆರಂಭಿಸಿದನು. (2 ಪೂರ್ವಕಾಲವೃತ್ತಾಂತ 34:1-3 ಓದಿ.) ಯೆಹೋವನನ್ನು ಮೆಚ್ಚಿಸಲು ಯೆಹೂದದ ಬೇರೆ ರಾಜರುಗಳಿಗಿಂತ ಇವನು ಹೆಚ್ಚಾಗಿ ಶ್ರಮಿಸಿದನು. ಒಂದು ದಿನ ಮಹಾ ಯಾಜಕನಿಗೆ ದೇವಾಲಯದಲ್ಲಿ ಯೆಹೋವನ ಧರ್ಮೋಪದೇಶದ ಗ್ರಂಥ ಸಿಕ್ಕಿತು. ಇದು ಬಹುಶಃ ಮೋಶೆಯೇ ಕೈಯಾರೆ ಬರೆದ ಸುರುಳಿ ಆಗಿದ್ದಿರಬಹುದು! ಇದನ್ನು ಕಾರ್ಯದರ್ಶಿಯು ಯೋಷೀಯನ ಮುಂದೆ ಓದಿದನು. ಆಗ ಯೋಷೀಯನು ದೇವರ ಸೇವೆಯನ್ನು ಪೂರ್ಣವಾಗಿ ಮಾಡಬೇಕಾದರೆ ತಾನೀಗ ಮಾಡುತ್ತಿರುವುದಕ್ಕಿಂತ ಇನ್ನೂ ಹೆಚ್ಚು ಮಾಡಬೇಕು ಅಂತ ತಿಳಿದುಕೊಂಡನು. ಅದನ್ನು ಮಾಡುವಂತೆ ಇತರರನ್ನು ಕೂಡ ಪ್ರೋತ್ಸಾಹಿಸಿದನು. ಇದರಿಂದಾಗಿ ಯೋಷೀಯ ಬದುಕಿರುವವರೆಗೆ ಜನರು “ಯೆಹೋವನನ್ನು ಬಿಡದೆ ಹಿಂಬಾಲಿಸಿದರು.”—2 ಪೂರ್ವ. 34:27, 33.
19 ಮಕ್ಕಳು ಯೋಷೀಯನಂತೆ ಯೆಹೋವನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಮಾಡಬೇಕು. ಯೆಹೋವನು ಕ್ಷಮಿಸಲು ಸಿದ್ಧನು ಎನ್ನುವುದನ್ನು ಪಶ್ಚಾತ್ತಾಪಪಟ್ಟ ತನ್ನ ಅಜ್ಜನಾದ ರಾಜ ಮನಸ್ಸೆಯಿಂದ ಯೋಷೀಯನು ತಿಳಿದುಕೊಂಡಿರಬಹುದು. ಅದೇ ರೀತಿ ಮಕ್ಕಳೇ, ನಿಮ್ಮ ಕುಟುಂಬದಲ್ಲಿ, ಸಭೆಯಲ್ಲಿ ಇರುವ ದೊಡ್ಡವರಿಂದ ಯೆಹೋವನ ಬಗ್ಗೆ ನೀವು ಕಲಿಯಬಹುದು. ಅವರಿಗಾಗಿ ಯೆಹೋವನು ಏನೇನು ಮಾಡಿದ್ದಾನೆ ಎಂದು ಕೇಳಿ ತಿಳಿದುಕೊಳ್ಳಿ. ಯೋಷೀಯನಿಂದ ಕಲಿಯಬಹುದಾದ ಇನ್ನೊಂದು ಪಾಠವಿದೆ. ದೇವರ ವಾಕ್ಯ ಏನು ಹೇಳುತ್ತದೆ ಎಂದು ತಿಳಿದ ಮೇಲೆ ಅವನು ಏನು ಮಾಡಿದನು? ಯೆಹೋವನನ್ನು ಸಂತೋಷಪಡಿಸಲಿಕ್ಕಾಗಿ ಬೇಕಾದ ಬದಲಾವಣೆಗಳನ್ನು ಕೂಡಲೇ ಮಾಡಿದನು. ನೀವು ಬೈಬಲನ್ನು ಓದುತ್ತಾ ಹೋದಹಾಗೆ ಯೆಹೋವನ ನಿಯಮಗಳನ್ನು ಪಾಲಿಸಲು ಹೆಚ್ಚು ಮನಸ್ಸಾಗುತ್ತದೆ. ಇದರಿಂದ ಯೆಹೋವನೊಟ್ಟಿಗಿನ ನಿಮ್ಮ ಸ್ನೇಹ ಬಲವಾಗುತ್ತದೆ, ನಿಮ್ಮ ಸಂತೋಷ ಹೆಚ್ಚಾಗುತ್ತದೆ. ಯೆಹೋವನ ಬಗ್ಗೆ ಇತರರಿಗೂ ಹೇಳಲು ನಿಮಗೆ ಮನಸ್ಸಾಗುತ್ತದೆ. (2 ಪೂರ್ವಕಾಲವೃತ್ತಾಂತ 34:18, 19 ಓದಿ.) ಬೈಬಲಿನ ಅಧ್ಯಯನ ಮಾಡುವಾಗ ಯೆಹೋವನ ಸೇವೆಯನ್ನು ಚೆನ್ನಾಗಿ ಮಾಡುವುದು ಹೇಗೆಂದು ನಿಮಗೆ ಗೊತ್ತಾಗುತ್ತದೆ. ಆಗ ಯೋಷೀಯನಂತೆ ಬೇಕಾದ ಬದಲಾವಣೆಗಳನ್ನು ಮಾಡಲು ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡಿ.
ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!
20, 21. (ಎ) ಯೆಹೂದದ ನಾಲ್ಕು ರಾಜರಲ್ಲಿ ಯಾವ ಸಮಾನ ಅಂಶಗಳಿದ್ದವು? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಿದ್ದೇವೆ?
20 ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡಿದ ಯೆಹೂದದ ಈ ನಾಲ್ಕು ರಾಜರಿಂದ ನಾವೇನು ಕಲಿಯುತ್ತೇವೆ? ಯೆಹೋವನನ್ನು ಮೆಚ್ಚಿಸಿ ಜೀವನಪರ್ಯಂತ ಆತನನ್ನೇ ಆರಾಧಿಸಬೇಕು ಎಂಬ ದೃಢಮನಸ್ಸು ಅವರಿಗಿತ್ತು. ಶಕ್ತಿಯುತವಾದ ಶತ್ರು ಸೈನ್ಯಗಳು ಯುದ್ಧಕ್ಕೆ ಬಂದಾಗ ಯೆಹೋವನ ಮೇಲೆ ಭರವಸೆ ಇಟ್ಟರು. ಎಲ್ಲಕ್ಕಿಂತ ಮುಖ್ಯವಾಗಿ, ಆತನ ಮೇಲೆ ಅವರಿಗಿದ್ದ ಪ್ರೀತಿಯ ಕಾರಣ ಆತನ ಸೇವೆಮಾಡಿದರು.
21 ಈ ನಾಲ್ಕು ರಾಜರು ಅಪರಿಪೂರ್ಣರಾಗಿದ್ದರು, ತಪ್ಪುಗಳನ್ನು ಮಾಡಿದರು. ಆದರೂ ಯೆಹೋವನು ಅವರ ಸೇವೆಯನ್ನು ಮೆಚ್ಚಿದನು. ಅವರ ಹೃದಯವನ್ನು ನೋಡಿ ಅವರಿಗೆ ಆತನ ಮೇಲೆ ನಿಜವಾದ ಪ್ರೀತಿ ಇರುವುದನ್ನು ಗಮನಿಸಿದನು. ನಾವು ಕೂಡ ಅಪರಿಪೂರ್ಣರು, ತಪ್ಪುಗಳನ್ನು ಮಾಡುತ್ತೇವೆ. ಆದರೆ ನಮ್ಮ ಪೂರ್ಣ ಹೃದಯದಿಂದ ಆತನ ಸೇವೆಮಾಡುವಾಗ ಯೆಹೋವನು ನಮ್ಮನ್ನು ಮೆಚ್ಚುತ್ತಾನೆ. ಮುಂದಿನ ಲೇಖನದಲ್ಲಿ ಈ ರಾಜರು ಮಾಡಿದ ತಪ್ಪುಗಳಿಂದ ನಮಗೇನು ಪಾಠವಿದೆ ಎಂದು ನೋಡೋಣ.
a ಸತ್ಯವೇದ ಬೈಬಲು ಹೆಚ್ಚಾಗಿ “ಯಥಾರ್ಥಚಿತ್ತ,” “ಯಥಾರ್ಥಮನಸ್ಸು” ಎಂದು ಭಾಷಾಂತರಿಸಿರುವ ಪದಗಳು ಬೈಬಲಿನ ಮೂಲ ಭಾಷೆಯಲ್ಲಿ “ಪೂರ್ಣ ಹೃದಯ” ಎಂದಾಗಿದೆ.