ಹಿಂದೆ ನಡೆದ ವಿಷಯಗಳಿಂದ ಪಾಠ ಕಲಿಯಿರಿ
“ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಇವು ಎಚ್ಚರಿಕೆ ನೀಡಲಿಕ್ಕಾಗಿ ಬರೆಯಲ್ಪಟ್ಟವು.”—1 ಕೊರಿಂ. 10:11.
1, 2. ಯೆಹೂದದ ನಾಲ್ಕು ರಾಜರ ಬಗ್ಗೆ ನಾವು ಯಾಕೆ ಚರ್ಚಿಸಲಿದ್ದೇವೆ?
ನಿಮ್ಮ ಮುಂದೆ ನಡೆಯುತ್ತಿರುವ ವ್ಯಕ್ತಿ ಜಾರಿ ಬಿದ್ದನೆಂದು ಇಟ್ಟುಕೊಳ್ಳಿ. ತಕ್ಷಣ ನೀವು ಹುಷಾರಾಗಿ, ಜಾಗ್ರತೆಯಿಂದ ಹೆಜ್ಜೆಯಿಟ್ಟು ನಡೆಯುತ್ತೀರಲ್ಲವಾ? ಅದೇ ರೀತಿ, ಬೇರೆಯವರು ಮಾಡಿದ ತಪ್ಪುಗಳ ಬಗ್ಗೆ ಕಲಿಯುವುದರಿಂದ ಅಂಥ ತಪ್ಪನ್ನು ನಾವು ಮಾಡದೇ ಇರಲು ಸಹಾಯ ಆಗುತ್ತದೆ. ಉದಾಹರಣೆಗೆ, ಬೈಬಲಿನಲ್ಲಿ ಕೆಲವರು ಮಾಡಿರುವ ತಪ್ಪುಗಳ ಬಗ್ಗೆ ದಾಖಲೆ ಇದೆ. ಅವುಗಳಿಂದ ನಾವು ಪಾಠ ಕಲಿಯಬಹುದು.
2 ಹಿಂದಿನ ಲೇಖನದಲ್ಲಿ ನಾವು ಚರ್ಚಿಸಿದ ಯೆಹೂದದ ನಾಲ್ಕು ರಾಜರು ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡಿದರು. ಆದರೆ ಅವರು ಗಂಭೀರ ತಪ್ಪುಗಳನ್ನೂ ಮಾಡಿದರು. ಇದನ್ನು ಬೈಬಲಿನಲ್ಲಿ ಬರೆಯಲಾಗಿದೆ. ನಾವು ಅದರ ಬಗ್ಗೆ ಧ್ಯಾನಿಸಿ, ಅಮೂಲ್ಯ ಪಾಠಗಳನ್ನು ಕಲಿಯಬಹುದು. ಆ ಪಾಠಗಳೇನು? ಅವರು ಮಾಡಿದಂಥ ತಪ್ಪುಗಳನ್ನು ನಾವು ಹೇಗೆ ಮಾಡದೇ ಇರಬಹುದು?—ರೋಮನ್ನರಿಗೆ 15:4 ಓದಿ.
ಮಾನವನಿಗೆ ತೋಚುವ ದಾರಿ ಅಪಾಯಕಾರಿ
3-5. (ಎ) ಆಸನು ಯೆಹೋವನಿಗೆ ಪೂರ್ಣ ಹೃದಯದಿಂದ ಭಕ್ತಿ ತೋರಿಸುತ್ತಿದ್ದರೂ ಯಾವ ತಪ್ಪು ಮಾಡಿದನು? (ಬಿ) ಬಾಷನ ವಿರುದ್ಧ ಯುದ್ಧ ಮಾಡುವಾಗ ಆಸ ಮನುಷ್ಯರ ಮೇಲೆ ಏಕೆ ಭರವಸೆಯಿಟ್ಟನು?
3 ಮೊದಲಾಗಿ ರಾಜ ಆಸನ ಬಗ್ಗೆ ಚರ್ಚಿಸೋಣ. ಹತ್ತು ಲಕ್ಷ ಕೂಷ್ಯರು ಯೆಹೂದದ ಮೇಲೆ ದಾಳಿಮಾಡಿದಾಗ ಅವನು ಯೆಹೋವನ ಮೇಲೆ ಭರವಸೆಯಿಟ್ಟನು. ಆದರೆ ಇದನ್ನೇ ಅವನು ಇಸ್ರಾಯೇಲಿನ ರಾಜ ಬಾಷನ ವಿರುದ್ಧ ಹೋರಾಡುವಾಗ ಮಾಡಲಿಲ್ಲ. ಬಾಷನು ಇಸ್ರಾಯೇಲಿನ ಒಂದು ಮುಖ್ಯ ಪಟ್ಟಣವಾದ ರಾಮದ ಕೋಟೆಯನ್ನು ಬಲಪಡಿಸುತ್ತಿದ್ದ. ಇದು ಯೆಹೂದ ರಾಜ್ಯದ ಗಡಿಯ ಹತ್ತಿರವಿತ್ತು. ಅವನ ಈ ಕೆಲಸಕ್ಕೆ ಆಸನು ತಡೆ ತರಬೇಕೆಂದಿದ್ದ. (2 ಪೂರ್ವ. 16:1-3) ಇದಕ್ಕಾಗಿ ಅವನು ಅರಾಮ್ಯರ ಅರಸನ ಸಹಾಯ ಕೋರುತ್ತಾ ಅವನಿಗೆ ಲಂಚ ಕೊಟ್ಟ. ಹಾಗಾಗಿ ಅರಾಮ್ಯರು ಇಸ್ರಾಯೇಲಿನ ರಾಜ್ಯದಲ್ಲಿದ್ದ ಪಟ್ಟಣಗಳ ಮೇಲೆ ದಾಳಿ ಮಾಡಿದರು. ಆಗ ಬಾಷ ‘ರಾಮಕೋಟೆ ಕಟ್ಟಿಸುವ ಕೆಲಸವನ್ನು ನಿಲ್ಲಿಸಿಬಿಟ್ಟನು.’ (2 ಪೂರ್ವ. 16:5) ಆಸನು ತಾನು ಒಳ್ಳೇ ನಿರ್ಣಯ ಮಾಡಿದ್ದೇನೆಂದು ನೆನಸಿರಬೇಕು!
4 ಆದರೆ ಯೆಹೋವನಿಗೆ ಇದರ ಬಗ್ಗೆ ಹೇಗನಿಸಿತು? ಯೆಹೋವನಿಗೆ ಸಂತೋಷವಾಗಲಿಲ್ಲ. ಏಕೆಂದರೆ ಆಸನು ದೇವರ ಮೇಲೆ ಭರವಸೆಯಿಡಲಿಲ್ಲ. ಅವನನ್ನು ತಿದ್ದಲು ಪ್ರವಾದಿ ಹನಾನಿಯನ್ನು ಕಳುಹಿಸಿದನು. (2 ಪೂರ್ವಕಾಲವೃತ್ತಾಂತ 16:7-9 ಓದಿ.) ಹನಾನಿ ಆಸನಿಗೆ ಹೀಗಂದನು: “ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುವವು.” ರಾಮ ಪಟ್ಟಣವೇನೊ ಆಸನ ಕೈಸೇರಿತು. ಆದರೆ ಜೀವಮಾನವಿಡೀ ಅವನು ಮತ್ತು ಅವನ ಜನರು ಯುದ್ಧಗಳಲ್ಲಿ ಹೋರಾಡುತ್ತಾ ಇರಬೇಕಾಯಿತು!
5 ಯೆಹೋವನು ಆಸನನ್ನು ಮೆಚ್ಚಿದನೆಂದು ನಾವು ಹಿಂದಿನ ಲೇಖನದಲ್ಲಿ ಕಲಿತೆವು. ಅವನು ಅಪರಿಪೂರ್ಣನಾಗಿದ್ದರೂ ತನ್ನ ಕಡೆಗೆ ಪೂರ್ಣ ಹೃದಯದಿಂದ ಭಕ್ತಿ ತೋರಿಸುತ್ತಿದ್ದನೆಂದು ಯೆಹೋವನು ನೋಡಿದನು. (1 ಅರ. 15:14) ಹೀಗಿದ್ದರೂ ಆಸನು ಒಂದು ಕೆಟ್ಟ ನಿರ್ಧಾರ ಮಾಡಿದಾಗ ಅದರ ಫಲಿತಾಂಶಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅವನು ಯೆಹೋವನನ್ನು ಬಿಟ್ಟು ತನ್ನ ಮೇಲೆ, ಬೇರೆ ಮಾನವರ ಮೇಲೆ ಭರವಸೆಯಿಟ್ಟದ್ದೇಕೆ? ಯುದ್ಧ ಗೆಲ್ಲಲು ತನ್ನ ಮಿಲಿಟರಿ ತಂತ್ರಗಳನ್ನು ಬಳಸಬಹುದೆಂದು ಅವನು ನೆನಸಿರಬೇಕು. ಅಥವಾ ಬೇರೆಯವರು ಕೊಟ್ಟ ತಪ್ಪಾದ ಸಲಹೆಗೆ ಕಿವಿಗೊಟ್ಟು ಹಾಗೆ ಮಾಡಿರಬೇಕು.
6. ಆಸನ ತಪ್ಪಿನಿಂದ ನಾವೇನು ಪಾಠ ಕಲಿಯಬಹುದು? ಉದಾಹರಣೆ ಕೊಡಿ.
6 ಆಸನ ಆ ತಪ್ಪಿನಿಂದ ನಮಗೇನು ಪಾಠ ಇದೆ? ಸನ್ನಿವೇಶ, ಸಮಸ್ಯೆ ಏನೇ ಆಗಿರಲಿ ನಾವು ನಮ್ಮ ಸ್ವಂತ ಬುದ್ಧಿಯ ಮೇಲಲ್ಲ ಬದಲಾಗಿ ಯೆಹೋವನ ಮೇಲೆ ಭರವಸೆ ಇಡಬೇಕು. ಸಮಸ್ಯೆ ದೊಡ್ಡದಾಗಿರಲಿ ಚಿಕ್ಕದಾಗಿರಲಿ ಯೆಹೋವನ ಸಹಾಯ ಕೋರಬೇಕು. ನಮ್ಮಿಂದ ಏನೂ ಮಾಡಲಿಕ್ಕಾಗಲ್ಲ ಎಂಬಂಥ ದೊಡ್ಡ ಸಮಸ್ಯೆಗಳಿರುವಾಗ ಯೆಹೋವನ ಮೇಲೆ ಭರವಸೆಯಿಡಬೇಕು ಅಂತ ಯೋಚಿಸುವುದು ಸುಲಭ. ಆದರೆ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಬಂದಾಗ ಏನು ಮಾಡುತ್ತೇವೆ? ನಮಗೆ ಸರಿ ತೋಚಿದ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇವಾ? ಅಥವಾ ಮೊದಲು ನಮ್ಮ ಸನ್ನಿವೇಶಕ್ಕೆ ಯಾವ ಬೈಬಲ್ ತತ್ವಗಳು ಅನ್ವಯವಾಗುತ್ತವೆ, ಅದನ್ನು ಹೇಗೆ ಅನ್ವಯಿಸಬೇಕೆಂದು ನೋಡುತ್ತೇವಾ? ಹೀಗೆ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ನಾವು ಯೆಹೋವನ ಮೇಲೆ ಆತುಕೊಳ್ಳುತ್ತಿದ್ದೇವೆಂದು ಅರ್ಥ. ನೆನಸಿ, ನಿಮ್ಮ ಕುಟುಂಬ ನಿಮಗೆ ಕೂಟಕ್ಕೊ ಸಮ್ಮೇಳನಕ್ಕೊ ಹೋಗಲು ಒಮ್ಮೊಮ್ಮೆ ಬಿಡುವುದಿಲ್ಲ. ಈ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ನಿಮಗೆ ಗೊತ್ತಾಗುವಂತೆ ಯೆಹೋವನ ಸಹಾಯ ಕೇಳುತ್ತೀರಾ? ಇನ್ನೊಂದು ಸನ್ನಿವೇಶದ ಬಗ್ಗೆ ನೆನಸಿ. ನೀವು ತುಂಬ ಸಮಯದಿಂದ ಕೆಲಸಕ್ಕಾಗಿ ಹುಡುಕಿಹುಡುಕಿ ಕೊನೆಗೊಂದು ಕೆಲಸ ಸಿಗುವ ಹಾಗಿದೆ. ಆ ಕೆಲಸಕ್ಕೆ ಸೇರುವ ಮುಂಚೆ ‘ನಾನು ಕೂಟಗಳಿಗೆ ಪ್ರತಿವಾರ ತಪ್ಪದೇ ಹಾಜರಾಗಬೇಕು’ ಎಂಬ ವಿಷಯವನ್ನು ನಿಮ್ಮ ಧಣಿಗೆ ತಿಳಿಸುತ್ತೀರಾ? ನಿಮಗಿರುವ ಸಮಸ್ಯೆ ಏನೇ ಆಗಿರಲಿ, ಕೀರ್ತನೆಗಾರನ ಈ ಬುದ್ಧಿವಾದ ಮನಸ್ಸಿನಲ್ಲಿಡಿ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.”—ಕೀರ್ತ. 55:22.
ತಪ್ಪಾದ ಒಡನಾಟ ಮಾಡಿದರೆ ಏನಾಗಬಹುದು?
7, 8. (ಎ) ಯೆಹೋಷಾಫಾಟನು ಯಾವ ತಪ್ಪುಗಳನ್ನು ಮಾಡಿದನು? (ಬಿ) ಇದರ ಪರಿಣಾಮಗಳು ಏನಾಗಿದ್ದವು? (ಲೇಖನದ ಆರಂಭದ ಚಿತ್ರ ನೋಡಿ.)
7 ಆಸನ ಮಗನಾದ ಯೆಹೋಷಾಫಾಟನ ಮಾದರಿಯ ಬಗ್ಗೆ ಈಗ ಚರ್ಚಿಸೋಣ. ಅವನಲ್ಲಿ ಹಲವಾರು ಒಳ್ಳೇ ಗುಣಗಳಿದ್ದವು. ಅವನು ಯೆಹೋವನ ಮೇಲೆ ಭರವಸೆ ಇಟ್ಟು ಒಳ್ಳೇ ಕೆಲಸಗಳನ್ನು ಮಾಡಿದ್ದನು. ಹಾಗಾಗಿ ಯೆಹೋವನು ಅವನನ್ನು ಮೆಚ್ಚಿದನು. ಆದರೆ ಅವನು ಕೆಲವು ಕೆಟ್ಟ ನಿರ್ಧಾರಗಳನ್ನು ಮಾಡಿದನು. ಉದಾಹರಣೆಗೆ, ದುಷ್ಟ ರಾಜನಾದ ಅಹಾಬನ ಮಗಳನ್ನು ಸೊಸೆಯಾಗಿ ಮಾಡಿಕೊಂಡನು. ಮುಂದೆ, ಅರಾಮ್ಯರ ವಿರುದ್ಧದ ಯುದ್ಧದಲ್ಲಿ ಅಹಾಬನ ಜೊತೆ ಸೇರಿದನು. ಹೀಗೆ ಮಾಡಬೇಡ ಅಂತ ಪ್ರವಾದಿ ಮೀಕಾಯೆಹು ಎಚ್ಚರಿಸಿದರೂ ಕೇಳಲಿಲ್ಲ. ಆ ಯುದ್ಧದಲ್ಲಿ ಅರಾಮ್ಯರು ಯೆಹೋಷಾಫಾಟನ ಮೇಲೆ ದಾಳಿಮಾಡಿದಾಗ ಅವನು ಕೂದಲೆಳೆಯಷ್ಟರಲ್ಲಿ ಬಚಾವಾಗಿ ಯೆರೂಸಲೇಮಿಗೆ ಹಿಂದಿರುಗಿದನು. (2 ಪೂರ್ವ. 18:1-32) ಅವನು ಮಾಡಿದ್ದನ್ನು ಪ್ರಶ್ನಿಸುತ್ತಾ ಪ್ರವಾದಿ ಯೇಹೂ “ನೀನು ಕೆಟ್ಟವನಿಗೆ ಸಹಾಯಮಾಡತಕ್ಕದ್ದೋ? ಯೆಹೋವನ ಹಗೆಗಾರರನ್ನು ಪ್ರೀತಿಸುವದೋ”? ಎಂದು ಕೇಳಿದನು.—2 ಪೂರ್ವಕಾಲವೃತ್ತಾಂತ 19:1-3 ಓದಿ.
8 ಯೆಹೋಷಾಫಾಟ ತನಗಾದ ಈ ಅನುಭವದಿಂದ ಮತ್ತು ಪ್ರವಾದಿಯ ಆ ಎಚ್ಚರಿಕೆಯ ಮಾತಿನಿಂದ ಪಾಠ ಕಲಿತನಾ? ಇಲ್ಲ! ಅವನಿಗೆ ಯೆಹೋವನ ಮೇಲೆ ಪ್ರೀತಿ ಇತ್ತು ನಿಜ, ಆತನನ್ನು ಮೆಚ್ಚಿಸಲು ಮನಸ್ಸೂ ಇತ್ತು. ಆದರೂ ಪುನಃ ತಪ್ಪು ಮಾಡಿದನು. ಯೆಹೋವನನ್ನು ಆರಾಧಿಸಲು ಇಷ್ಟವಿಲ್ಲದಿದ್ದ ಅಹಾಬನ ಮಗನಾದ ರಾಜ ಅಹಜ್ಯನೊಟ್ಟಿಗೆ ಸ್ನೇಹ ಬೆಳೆಸಿಕೊಂಡ. ಇಬ್ಬರೂ ಸೇರಿ ಹಡಗುಗಳನ್ನು ಕಟ್ಟಿಸಿದರು. ಆದರೆ ಅವುಗಳನ್ನು ಬಳಸುವುದಕ್ಕೆ ಮುಂಚೆಯೇ ಅವು ಒಡೆದುಹೋದವು.—2 ಪೂರ್ವ. 20:35-37.
9. ತಪ್ಪಾದ ಒಡನಾಟ ಮಾಡಿದರೆ ಏನಾಗಬಹುದು?
9 ಯೆಹೋಷಾಫಾಟನಿಗೆ ಏನಾಯಿತೊ ಅದರಿಂದ ನಮಗೇನು ಪಾಠವಿದೆ? ಯೆಹೋಷಾಫಾಟ ಸರಿಯಾದ ಕೆಲಸಗಳನ್ನು ಮಾಡಿದನು, ‘ಪೂರ್ಣಹೃದಯದಿಂದ ಯೆಹೋವನನ್ನು ಹುಡುಕಿದನು’ ನಿಜ. (2 ಪೂರ್ವ. 22:9, ಪವಿತ್ರ ಗ್ರಂಥ ಭಾಷಾಂತರ) ಆದರೆ ಯೆಹೋವನ ಮೇಲೆ ಪ್ರೀತಿಯಿಲ್ಲದ ಜನರೊಟ್ಟಿಗೆ ಸಮಯ ಕಳೆಯುವ ಆಯ್ಕೆಮಾಡಿದನು. ಇದರಿಂದಾಗಿ ಅವನ ಜೀವನದಲ್ಲಿ ಗಂಭೀರ ಸಮಸ್ಯೆಗಳು ಎದ್ದವು. ಅವನ ಜೀವ ಹೋಗುವ ಅಪಾಯವೂ ಎದುರಾಯಿತು! ಬೈಬಲಿನ ಈ ಜ್ಞಾನೋಕ್ತಿ ನೆನಪುಮಾಡಿಕೊಳ್ಳಿ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋ. 13:20) ಬೇರೆಯವರಿಗೆ ಯೆಹೋವನ ಬಗ್ಗೆ ತಿಳಿಸಲು ನಮಗೆ ತುಂಬ ಮನಸ್ಸಿದೆ ನಿಜ. ಹಾಗಂತ, ಆತನ ಸೇವೆಮಾಡದೇ ಇರುವವರೊಟ್ಟಿಗೆ ಅನಾವಶ್ಯಕವಾದ ಆಪ್ತ ಒಡನಾಟ ಮಾಡಿದರೆ ನಾವು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ!
10. (ಎ) ಮದುವೆ ಆಗಬೇಕೆಂದಿರುವವರು ಯೆಹೋಷಾಫಾಟನಿಂದ ಏನು ಕಲಿಯಬಹುದು? (ಬಿ) ನಾವೇನು ನೆನಪಿಡಬೇಕು?
10 ಮದುವೆಯಾಗಲು ಮನಸ್ಸಿರುವವರು ಯೆಹೋಷಾಫಾಟನಿಂದ ಏನು ಕಲಿಯಬಹುದು? ‘ಸಾಕ್ಷಿಗಳಲ್ಲಿ ನನಗೆ ತಕ್ಕ ಜೋಡಿ ಸಿಗುವುದಿಲ್ಲ’ ಅಂತ ನೀವು ನೆನಸುತ್ತಿರಬಹುದು. ಅಥವಾ ‘ವಯಸ್ಸಾಗುವ ಮುಂಚೆ ಮದುವೆಮಾಡಿಕೊ’ ಅಂತ ಅವಿಶ್ವಾಸಿ ಸಂಬಂಧಿಕರು ಒತ್ತಾಯಿಸುತ್ತಿರಬಹುದು. ಹಾಗಾಗಿ ಯೆಹೋವನನ್ನು ಪ್ರೀತಿಸದ ಒಬ್ಬ ಹುಡುಗ ಅಥವಾ ಹುಡುಗಿಯ ಮೇಲೆ ನಿಮಗೆ ಪ್ರೀತಿಪ್ರೇಮದ ಭಾವನೆಗಳು ಹುಟ್ಟಿರಬಹುದು. ಪ್ರೀತಿಸುವ, ಪ್ರೀತಿ ಪಡೆಯುವ ಅಗತ್ಯ ನಮ್ಮಲ್ಲಿ ಸಹಜವಾಗಿಯೇ ಇದೆ, ಏಕೆಂದರೆ ಯೆಹೋವನೇ ನಮ್ಮನ್ನು ಹಾಗೆ ಸೃಷ್ಟಿಸಿದ್ದಾನೆ. ಹೀಗಿರುವಾಗ ಸರಿಯಾದ ವ್ಯಕ್ತಿ ಸಿಗದೇ ಹೋದರೆ ಏನು ಮಾಡಬೇಕು? ಯೆಹೋಷಾಫಾಟನಿಗೆ ಏನಾಯಿತೊ ಅದರ ಬಗ್ಗೆ ಧ್ಯಾನಿಸಿದರೆ ಏನು ಮಾಡಬೇಕೆಂದು ತಿಳಿಯುತ್ತದೆ. ಅವನು ಸಾಮಾನ್ಯವಾಗಿ ಯಾವುದೇ ಕೆಲಸ ಮಾಡುವ ಮುಂಚೆ ಯೆಹೋವನ ಮಾರ್ಗದರ್ಶನ ಕೇಳುತ್ತಿದ್ದ. (2 ಪೂರ್ವ. 18:4-6) ಆದರೆ ಯೆಹೋವನನ್ನು ಪ್ರೀತಿಸದ ಅಹಾಬನ ಸ್ನೇಹ ಬೆಳೆಸಿಕೊಂಡ ಬಳಿಕ ಅವನು ದೇವರ ಎಚ್ಚರಿಕೆಯನ್ನು ಅಲಕ್ಷ್ಯಮಾಡಿದ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂಬ ಮಾತನ್ನು ಅವನು ನೆನಪಿನಲ್ಲಿಡಬೇಕಿತ್ತು. (2 ಪೂರ್ವ. 16:9) ನಿಮಗೂ ಸಹಾಯಮಾಡಲು ಯೆಹೋವನಿಗೆ ಮನಸ್ಸಿದೆಯೆಂದು ನೆನಪಿಡಿ. ಆತನಿಗೆ ನಮ್ಮ ಸನ್ನಿವೇಶ ಅರ್ಥವಾಗುತ್ತದೆ. ನಮ್ಮನ್ನು ತುಂಬ ಪ್ರೀತಿಸುತ್ತಾನೆ. ನಿಮಗೆ ಮದುವೆಯಾಗುವ ಆಸೆ ಇದ್ದರೆ ಯೆಹೋವನು ಅದನ್ನು ಪೂರೈಸುವನು ಎಂದು ನಂಬುತ್ತೀರಾ? ಇವತ್ತಲ್ಲ ನಾಳೆ ಆತನು ಆ ಆಸೆಯನ್ನು ಪೂರೈಸುತ್ತಾನೆ ಎಂದು ನಂಬಿ!
ನಿಮ್ಮ ಹೃದಯದಲ್ಲಿ ಅಹಂಕಾರ ಬೆಳೆಯದಿರಲಿ
11, 12. (ಎ) ಹಿಜ್ಕೀಯನ ಹೃದಯದಲ್ಲಿ ಏನಿದೆಯೆಂದು ಅವನು ಮಾಡಿದ ಯಾವ ವಿಷಯ ತೋರಿಸಿಕೊಟ್ಟಿತು? (ಬಿ) ಯೆಹೋವನು ಹಿಜ್ಕೀಯನನ್ನು ಏಕೆ ಕ್ಷಮಿಸಿದನು?
11 ಹಿಜ್ಕೀಯನಿಂದ ನಾವೇನು ಕಲಿಯಬಹುದು? ಅವನ ಅಂತರ್ಯದಲ್ಲಿ ಅಂದರೆ ಹೃದಯದಲ್ಲಿ ನಿಜವಾಗಿ ಏನಿದೆಯೆಂದು ತಿಳಿದುಕೊಳ್ಳಲು ಯೆಹೋವನು ಅವನಿಗೆ ಸಹಾಯಮಾಡಿದನು. (2 ಪೂರ್ವಕಾಲವೃತ್ತಾಂತ 32:31 ಓದಿ.) ಹಿಜ್ಕೀಯನು ಒಮ್ಮೆ ಗಂಭೀರ ಕಾಯಿಲೆಗೆ ಒಳಗಾದಾಗ ಅವನು ವಾಸಿಯಾಗುತ್ತಾನೆಂದು ದೇವರು ಹೇಳಿ, ಧೈರ್ಯ ತುಂಬಿಸಲು ಒಂದು ಸೂಚನೆಯನ್ನೂ ಕೊಟ್ಟನು. ಮೆಟ್ಟಿಲ ಮೇಲಿನ ನೆರಳು ಹತ್ತು ಹೆಜ್ಜೆ ಹಿಂದೆ ಹೋಗುವಂತೆ ಮಾಡಿದನು. ನಂತರ ಬಾಬೆಲಿನ ಪ್ರಭುಗಳು ಈ ಸೂಚನೆಯ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು ಹಿಜ್ಕೀಯನ ಹತ್ತಿರ ರಾಯಭಾರಿಗಳನ್ನು ಕಳುಹಿಸಿದರು. (2 ಅರ. 20:8-13; 2 ಪೂರ್ವ. 32:24) ಅವರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಯೆಹೋವನು ಹಿಜ್ಕೀಯನಿಗೆ ಹೇಳಲಿಲ್ಲ. ಏನು ಮಾಡುತ್ತಾನೆಂದು ನೋಡಲು “ಅವನನ್ನು ಕೈಬಿಟ್ಟನು” ಅಂದರೆ ಬಿಟ್ಟುಬಿಟ್ಟನೆಂದು ಬೈಬಲ್ ಹೇಳುತ್ತದೆ. ಹಿಜ್ಕೀಯನು ಬಾಬೆಲಿನ ಆ ಪುರುಷರಿಗೆ ತನ್ನ ಬಳಿ ಇದ್ದ ಎಲ್ಲ ಐಶ್ವರ್ಯವನ್ನು ತೋರಿಸಿದ. ಇದು ಹಿಜ್ಕೀಯನ ಹೃದಯದಲ್ಲಿ ಏನಿತ್ತೆಂದು ತೋರಿಸಿಕೊಟ್ಟಿತು. ಹೇಗೆ?
12 ಹಿಜ್ಕೀಯನು ಅಹಂಕಾರಿ ಆಗಿಬಿಟ್ಟಿದ್ದನು. ಹಾಗಾಗಿ, ದೇವರು ಅವನಿಗೆ ಮಾಡಿದ್ದ “ಉಪಕಾರಕ್ಕೆ ತಕ್ಕಂತೆ ನಡೆಯದೆ ಹೋದನು.” ಅವನ ಮನೋಭಾವ ಈ ರೀತಿ ಬದಲಾಗಲು ಕಾರಣವೇನೆಂದು ಬೈಬಲ್ ಹೇಳುವುದಿಲ್ಲ. ಅಶ್ಶೂರ್ಯರ ಮೇಲೆ ಅವನಿಗೆ ಸಿಕ್ಕಿದ ಜಯ ಅಥವಾ ಯೆಹೋವನು ಅವನನ್ನು ವಾಸಿಮಾಡಿದ್ದು ಕಾರಣ ಆಗಿರಬಹುದು. ಅಥವಾ ತಾನೀಗ ಶ್ರೀಮಂತನು, ಪ್ರಸಿದ್ಧನು ಆಗಿದ್ದೇನೆಂಬ ಕಾರಣಕ್ಕೂ ಇರಬಹುದು. ಹಿಜ್ಕೀಯನು ಯೆಹೋವನನ್ನು ಪೂರ್ಣ ಹೃದಯದಿಂದ ಸೇವೆಮಾಡಿದರೂ, ಸ್ವಲ್ಪ ಸಮಯ ಅಹಂಕಾರಿಯಾದನು. ಇದನ್ನು ಯೆಹೋವನು ಖಂಡಿತ ಮೆಚ್ಚಲಿಲ್ಲ. ಆದರೆ ಮುಂದೆ ಹಿಜ್ಕೀಯನು “ತನ್ನನ್ನು ತಗ್ಗಿಸಿಕೊಂಡದ್ದರಿಂದ” ದೇವರು ಅವನನ್ನು ಕ್ಷಮಿಸಿದನು.—2 ಪೂರ್ವ. 32:25-27; ಕೀರ್ತ. 138:6.
13, 14. (ಎ) ನಮ್ಮ ಹೃದಯದಲ್ಲೇನಿದೆ ಎಂಬದನ್ನು ತೋರಿಸಿಕೊಡುವ ಒಂದು ಸನ್ನಿವೇಶದ ಬಗ್ಗೆ ಹೇಳಿ. (ಬಿ) ಬೇರೆಯವರು ನಮ್ಮನ್ನು ಹೊಗಳುವಾಗ ನಾವೇನು ಮಾಡಬೇಕು?
13 ಹಿಜ್ಕೀಯನು ಮಾಡಿದ ತಪ್ಪಿನಿಂದ ನಮಗೇನು ಪಾಠವಿದೆ? ಯೆಹೋವನು ಅಶ್ಶೂರ್ಯರನ್ನು ಸೋಲಿಸಿ, ಹಿಜ್ಕೀಯನ ಗಂಭೀರ ಕಾಯಿಲೆಯನ್ನು ವಾಸಿಮಾಡಿದ ನಂತರವೇ ಅವನು ಅಹಂಕಾರದಿಂದ ವರ್ತಿಸ ತೊಡಗಿದನೆಂದು ನೆನಪಿಡಿ. ಅದೇ ರೀತಿ ನಮ್ಮ ಜೀವನದಲ್ಲಿ ಏನಾದರೂ ಒಳ್ಳೇದಾದಾಗ ಅಥವಾ ಬೇರೆಯವರು ನಮ್ಮನ್ನು ಹೊಗಳುವಾಗ ಏನು ಮಾಡುತ್ತೇವೆ? ಆಗ ನಾವೇನು ಹೇಳುತ್ತೇವೊ ಮಾಡುತ್ತೇವೊ ಅದು ನಮ್ಮ ಹೃದಯದಲ್ಲೇನಿದೆ ಎಂದು ತೋರಿಸಿಕೊಡುತ್ತದೆ. ಒಬ್ಬ ಸಹೋದರನು ತುಂಬ ಶ್ರಮಪಟ್ಟು ಭಾಷಣ ತಯಾರಿಸಿ ದೊಡ್ಡ ಜನಸಮೂಹದ ಮುಂದೆ ಅದನ್ನು ಕೊಡುತ್ತಾನೆ ಎಂದಿಟ್ಟುಕೊಳ್ಳಿ. ‘ಭಾಷಣ ತುಂಬ ಚೆನ್ನಾಗಿತ್ತು’ ಅಂತ ಅನೇಕರು ಅವನನ್ನು ಹೊಗಳುತ್ತಾರೆ. ಆಗ ಅವನು ಏನು ಮಾಡಬೇಕು?
14 ಯೇಸು ಹೇಳಿದ ಈ ಮಾತನ್ನು ನೆನಪಿನಲ್ಲಿಡಬೇಕು: “ನಿಮಗೆ ನೇಮಿಸಲ್ಪಟ್ಟಿರುವ ಎಲ್ಲವನ್ನೂ ಮಾಡಿ ಮುಗಿಸಿದ ಬಳಿಕ, ‘ನಾವು ಕೆಲಸಕ್ಕೆ ಬಾರದ ಆಳುಗಳು. ನಾವು ಮಾಡಬೇಕಾಗಿದ್ದುದನ್ನೇ ಮಾಡಿದ್ದೇವೆ’ ಎಂದು ಹೇಳಿರಿ.” (ಲೂಕ 17:10) ಹಿಜ್ಕೀಯನು ಅಹಂಕಾರಿಯಾದಾಗ ಏನು ಮಾಡಿದನೆಂದು ನೆನಪಿಸಿಕೊಳ್ಳಿ. ಹಿಂದೆ ಯೆಹೋವನು ತನಗೆ ಮಾಡಿದ ಉಪಕಾರವನ್ನು ಅವನು ಮನಸ್ಸಿಗೆ ತರಲಿಲ್ಲ. ನಾವು ಹಾಗೆ ಮಾಡದೆ ಯೆಹೋವನು ನಮಗಾಗಿ ಏನೆಲ್ಲ ಮಾಡಿದ್ದಾನೊ ಅದರ ಬಗ್ಗೆ ಧ್ಯಾನಿಸಬೇಕು. ನಾವು ಕೊಟ್ಟ ಭಾಷಣಕ್ಕಾಗಿ ಯಾರಾದರೂ ಹೊಗಳಿದರೆ ದೀನರಾಗಿರಲು ಇದು ಸಹಾಯಮಾಡುತ್ತದೆ. ಅಂಥ ಸಮಯದಲ್ಲಿ ನಾವು ಯೆಹೋವನ ಬಗ್ಗೆ, ಆತನು ನಮಗೆ ಹೇಗೆ ಸಹಾಯಮಾಡಿದ್ದಾನೆ ಎಂಬದರ ಬಗ್ಗೆ ಮಾತಾಡುತ್ತೇವೆ. ಎಷ್ಟೆಂದರೂ, ನಾವು ಭಾಷಣ ಕೊಡಲು ಶಕ್ತರಾದದ್ದು ಆತನು ನಮಗೆ ಬೈಬಲನ್ನು, ಪವಿತ್ರಾತ್ಮವನ್ನು ಕೊಟ್ಟದ್ದರಿಂದ ತಾನೇ?
ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ
15, 16. ಯೋಷೀಯ ಏನು ಮಾಡಿದ್ದರಿಂದ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾಯಿತು?
15 ಕೊನೆಯದಾಗಿ ಯೋಷೀಯನ ಬಗ್ಗೆ ಚರ್ಚಿಸೋಣ. ಅವನಿಂದ ನಮಗೇನು ಪಾಠ? ಅವನೊಬ್ಬ ಒಳ್ಳೇ ರಾಜನಾಗಿದ್ದ. ಆದರೆ ಅವನು ಮಾಡಿದ ತಪ್ಪಿನಿಂದ ಅವನ ಜೀವವನ್ನೇ ಕಳೆದುಕೊಂಡ. (2 ಪೂರ್ವಕಾಲವೃತ್ತಾಂತ 35:20-22 ಓದಿ.) ಏನಾಯಿತು? ಯೋಷೀಯನು ಐಗುಪ್ತದ ರಾಜನಾದ ನೆಕೋ ಜೊತೆ ಯುದ್ಧಕ್ಕಿಳಿದ. ಅವನು ಆ ಯುದ್ಧಮಾಡುವ ಅಗತ್ಯವೇ ಇರಲಿಲ್ಲ. ತನಗೆ ಯುದ್ಧಮಾಡಲು ಮನಸ್ಸಿಲ್ಲ ಎಂದೂ ನೆಕೋ ಹೇಳಿದ್ದ. ನೆಕೋವಿನ ಆ ಮಾತುಗಳು “ದೇವೋಕ್ತಿ” ಆಗಿದ್ದವೆಂದು ಬೈಬಲ್ ಹೇಳುತ್ತದೆ. ಆದರೂ ಯೋಷೀಯ ಯುದ್ಧಕ್ಕೆ ಕೈಹಾಕಿ ಅದರಲ್ಲಿ ಸತ್ತುಹೋದ. ಆದರೆ ಅವನು ಯುದ್ಧಕ್ಕಿಳಿದಿದ್ದಾದರೂ ಯಾಕೆ? ಕಾರಣವನ್ನು ಬೈಬಲ್ ತಿಳಿಸುವುದಿಲ್ಲ.
16 ನೆಕೋವಿನ ಮಾತನ್ನು ಅಲಕ್ಷ್ಯಮಾಡದೇ ಅದನ್ನು ಯೆಹೋವನೇ ಹೇಳಿರಬಹುದಾ ಅಂತ ಯೋಷೀಯನು ತಿಳಿದುಕೊಳ್ಳಬೇಕಿತ್ತು. ಹೇಗೆ? ಯೆಹೋವನ ಪ್ರವಾದಿಯಾಗಿದ್ದ ಯೆರೆಮೀಯನನ್ನು ಕೇಳಬಹುದಿತ್ತು. (2 ಪೂರ್ವ. 35:23, 25) ಅಷ್ಟುಮಾತ್ರವಲ್ಲ, ನೆಕೋ ಯೆರೂಸಲೇಮಿನ ಮೇಲೆ ದಾಳಿ ಮಾಡಲಿಕ್ಕೆ ಬರಲಿಲ್ಲ. ಬದಲಾಗಿ ಇನ್ನೊಂದು ಜನಾಂಗದ ಮೇಲೆ ದಾಳಿ ಮಾಡಲು ಹೋಗುತ್ತಿದ್ದನು. ಅವನು ಯೆಹೋವನನ್ನಾಗಲಿ, ಆತನ ಜನರನ್ನಾಗಲಿ ಅವಮಾನಿಸಿರಲೂ ಇಲ್ಲ. ಯೋಷೀಯ ನಿರ್ಣಯ ಮಾಡುವ ಮುಂಚೆ ಇದೆಲ್ಲದ್ದರ ಬಗ್ಗೆ ಚೆನ್ನಾಗಿ ಯೋಚಿಸಬೇಕಿತ್ತು. ಇದರಿಂದ ನಮಗೇನು ಪಾಠ? ಒಂದು ಸಮಸ್ಯೆ ಎದ್ದಾಗ ನಿರ್ಣಯ ಮಾಡುವ ಮುಂಚೆ, ನಾವೇನು ಮಾಡುವಂತೆ ಯೆಹೋವನು ಬಯಸುತ್ತಾನೆಂದು ಮೊದಲು ತಿಳಿದುಕೊಳ್ಳಬೇಕು.
17. ಸಮಸ್ಯೆ ಎದ್ದಾಗ ನಾವು ಯೋಷೀಯನ ಹಾಗೆ ತಪ್ಪುಮಾಡದಿರಲು ಏನು ಮಾಡಬೇಕು?
17 ನಾವೊಂದು ನಿರ್ಣಯ ಮಾಡಬೇಕಾಗಿರುವಾಗ, ಸಂಬಂಧಪಟ್ಟ ಬೈಬಲ್ ತತ್ವಗಳು ಯಾವುದು, ಅವುಗಳನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಎನ್ನುವುದರ ಕುರಿತು ಮೊದಲು ಯೋಚಿಸಬೇಕು. ಕೆಲವೊಮ್ಮೆ ನಮ್ಮ ಪ್ರಕಾಶನಗಳಲ್ಲಿ ಹೆಚ್ಚು ಸಂಶೋಧನೆ ಮಾಡಬೇಕಾಗಬಹುದು ಅಥವಾ ಒಬ್ಬ ಹಿರಿಯನ ಸಲಹೆ ಕೇಳಬೇಕಾಗಬಹುದು. ಆಗ ಆ ಹಿರಿಯನು ಇನ್ನೂ ಹೆಚ್ಚು ಬೈಬಲ್ ತತ್ವಗಳ ಕುರಿತು ಯೋಚಿಸುವಂತೆ ಸಹಾಯ ಮಾಡಬಲ್ಲನು. ಈ ಸನ್ನಿವೇಶ ಕಲ್ಪಿಸಿಕೊಳ್ಳಿ: ಒಬ್ಬ ಸಹೋದರಿ ಒಂದು ನಿರ್ದಿಷ್ಟ ದಿನ ಸೇವೆಗೆ ಹೋಗಬೇಕೆಂದು ನಿರ್ಧರಿಸಿದ್ದಾಳೆ. (ಅ. ಕಾ. 4:20) ಆದರೆ ಆ ದಿನ ಬಂದಾಗ, ಸತ್ಯದಲ್ಲಿಲ್ಲದ ಅವಳ ಗಂಡ ಅವಳಿಗೆ ಸೇವೆಗೆ ಹೋಗಬೇಡ ಅಂತ ಹೇಳುತ್ತಾನೆ. ‘ನಿನ್ನ ಜೊತೆ ಸಮಯ ಕಳೆದು ತುಂಬ ದಿನ ಆಯ್ತು, ಎಲ್ಲಾದರೂ ಹೊರಗೆ ಹೋಗೋಣ’ ಅಂತ ಹೇಳುತ್ತಾನೆ. ಆಗ ಈ ಸಹೋದರಿ ಸರಿಯಾದ ನಿರ್ಣಯ ಮಾಡಲಿಕ್ಕಾಗಿ ಕೆಲವೊಂದು ಬೈಬಲ್ ವಚನಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾಳೆ. ದೇವರಿಗೆ ವಿಧೇಯತೆ ತೋರಿಸಬೇಕು ಮತ್ತು ಯೇಸು ಆಜ್ಞೆ ಕೊಟ್ಟಂತೆ ಶಿಷ್ಯರನ್ನಾಗಿ ಮಾಡುವ ಕೆಲಸ ಮಾಡಬೇಕೆಂದು ಆಕೆಗೆ ಗೊತ್ತು. (ಮತ್ತಾ. 28:19, 20; ಅ. ಕಾ. 5:29) ಹೆಂಡತಿಯಾಗಿ ತಾನು ಗಂಡನಿಗೆ ಅಧೀನಳಾಗಿರಬೇಕು ಮತ್ತು ದೇವರ ಸೇವಕಳಾಗಿ ತಾನು ನ್ಯಾಯಸಮ್ಮತತೆ ತೋರಿಸಬೇಕೆಂದೂ ನೆನಪಿಗೆ ತರುತ್ತಾಳೆ. (ಎಫೆ. 5:22-24; ಫಿಲಿ. 4:5) ಆಕೆ ಸೇವೆಗೆ ಹೋಗದಂತೆ ಗಂಡ ತಡೆಯುತ್ತಿದ್ದಾನಾ ಅಥವಾ ಆಕೆಯ ಜೊತೆ ಸಮಯ ಕಳೆಯಲು ಇಷ್ಟಪಡುವುದರಿಂದ ಬರೀ ಆ ದಿನ ಹೋಗಬೇಡ ಅಂತ ಹೇಳುತ್ತಿದ್ದಾನಾ? ಯೆಹೋವನ ಸೇವಕರಾದ ನಾವು ಆತನಿಗೆ ಮೆಚ್ಚಿಕೆಯಾಗುವ, ನ್ಯಾಯಸಮ್ಮತವಾದ ನಿರ್ಣಯಗಳನ್ನು ಮಾಡಬೇಕು.
ಪೂರ್ಣ ಹೃದಯದಿಂದ ಸೇವೆಮಾಡುತ್ತಾ ಸಂತೋಷವಾಗಿರಿ
18. ಯೆಹೂದದ ಆ ನಾಲ್ಕು ರಾಜರ ಕುರಿತು ಧ್ಯಾನಿಸುವುದರಿಂದ ನೀವೇನು ಕಲಿತಿರಿ?
18 ಕೆಲವೊಮ್ಮೆ ನಾವೂ ಯೆಹೂದದ ಆ ನಾಲ್ಕು ರಾಜರು ಮಾಡಿದಂಥ ತಪ್ಪುಗಳನ್ನು ಮಾಡಿಬಿಡಬಹುದು. ಅಂದರೆ (1) ನಮ್ಮ ಸ್ವಂತ ಬುದ್ಧಿ ಮೇಲೆ ಭರವಸೆ ಇಡಬಹುದು, (2) ತಪ್ಪಾದ ಒಡನಾಟ ಮಾಡಬಹುದು, (3) ಅಹಂಕಾರಿಗಳಾಗಬಹುದು, (4) ದೇವರು ಏನು ಬಯಸುತ್ತಾನೆಂದು ಮೊದಲು ಯೋಚಿಸದೇ ನಿರ್ಣಯಗಳನ್ನು ಮಾಡಿಬಿಡಬಹುದು. ಹೀಗಾದರೆ ನಾವು ಯೆಹೋವನನ್ನು ಮೆಚ್ಚಿಸಲು ಸಾಧ್ಯವೇ ಇಲ್ಲವೆಂದು ನೆನಸಬಾರದು. ಆ ನಾಲ್ಕು ರಾಜರಲ್ಲಿ ಒಳ್ಳೇದನ್ನು ನೋಡಿದಂತೆ ಯೆಹೋವನು ನಮ್ಮಲ್ಲೂ ಒಳ್ಳೇದನ್ನು ನೋಡುತ್ತಾನೆ. ನಮಗೆ ಆತನ ಮೇಲೆ ಎಷ್ಟು ಪ್ರೀತಿ ಇದೆ, ಪೂರ್ಣ ಹೃದಯದಿಂದ ಆತನ ಸೇವೆಮಾಡಲು ನಾವೆಷ್ಟು ಬಯಸುತ್ತೇವೆ ಎಂದೂ ನೋಡುತ್ತಾನೆ. ಆದ್ದರಿಂದಲೇ ನಾವು ಗಂಭೀರ ತಪ್ಪುಗಳನ್ನು ಮಾಡದಂತೆ ಈ ಎಚ್ಚರಿಕೆಯ ಮಾದರಿಗಳನ್ನು ಕೊಟ್ಟಿದ್ದಾನೆ. ಈ ಬೈಬಲ್ ವೃತ್ತಾಂತಗಳ ಬಗ್ಗೆ ಧ್ಯಾನಿಸೋಣ. ಅದನ್ನು ನಮಗೆ ಕೊಟ್ಟದ್ದಕ್ಕಾಗಿ ಯೆಹೋವನಿಗೆ ಧನ್ಯವಾದ ಹೇಳೋಣ!