ಅಧ್ಯಯನ ಲೇಖನ 45
ಪರೀಕ್ಷೆಯ ಸಮಯದಲ್ಲಿ ಪವಿತ್ರಾತ್ಮದ ಸಹಾಯ
“ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿ. 4:13.
ಗೀತೆ 71 ಪವಿತ್ರಾತ್ಮವೆಂಬ ದೇವರ ವರ
ಕಿರುನೋಟa
1-2. (ಎ) ಪ್ರತಿದಿನ ನಮ್ಮ ಕಷ್ಟಗಳನ್ನು ತಾಳಿಕೊಂಡು ಮುಂದುವರಿಯಲು ನಮಗೆ ಯಾವುದು ಸಹಾಯ ಮಾಡುತ್ತದೆ? ವಿವರಿಸಿ. (ಬಿ) ಈ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?
“ನನ್ನ ಸ್ವಂತ ಶಕ್ತಿಯಿಂದ ನನಗೆ ಆ ಕಷ್ಟನ ಸಹಿಸಿಕೊಳ್ಳೋಕೆ ಆಗುತ್ತಿರಲಿಲ್ಲ.” ಈ ಮಾತನ್ನು ನೀವು ಯಾವತ್ತಾದರೂ ಹೇಳಿದ್ದೀರಾ? ನಮ್ಮಲ್ಲಿ ಹೆಚ್ಚಿನವರು ಹೇಳಿರುತ್ತೇವೆ. ಹಿಂದೆ ನಿಮಗೆ ಒಂದು ಗಂಭೀರ ಕಾಯಿಲೆ ಬಂದಿರಬಹುದು ಅಥವಾ ಪ್ರೀತಿಪಾತ್ರರು ತೀರಿಹೋಗಿರಬಹುದು. ಆಗ ನೀವದನ್ನು ಹೇಗೆ ಸಹಿಸಿಕೊಂಡಿರಿ ಅಂತ ಹೇಳುವಾಗ ನೀವು ಆ ಮಾತನ್ನು ಹೇಳಿರುತ್ತೀರಿ. ಯೆಹೋವನ ಶಕ್ತಿಯಾದ ಪವಿತ್ರಾತ್ಮ ನಿಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಟ್ಟಿದ್ದರಿಂದಲೇ ಆ ಕಷ್ಟನ ತಾಳಿಕೊಂಡು ಮುಂದುವರಿಯಲು ಸಾಧ್ಯವಾಯಿತು ಅಂತ ನಿಮಗನಿಸುತ್ತದೆ.—2 ಕೊರಿಂ. 4:7-9.
2 ಈ ದುಷ್ಟ ಲೋಕದ ಪ್ರಭಾವಕ್ಕೆ ತುತ್ತಾಗದಿರಲು ಸಹ ನಮಗೆ ಪವಿತ್ರಾತ್ಮ ಬೇಕು. (1 ಯೋಹಾ. 5:19) ಅಷ್ಟೇ ಅಲ್ಲ, “ದುಷ್ಟಾತ್ಮ ಸೇನೆಗಳ ವಿರುದ್ಧ” ಹೋರಾಡಲೂ ನಮಗೆ ಶಕ್ತಿ ಬೇಕು. (ಎಫೆ. 6:12) ಹಾಗಾಗಿ ಈ ಎಲ್ಲ ಕಷ್ಟ-ಸಮಸ್ಯೆಗಳನ್ನು ಎದುರಿಸಲು ಪವಿತ್ರಾತ್ಮ ಯಾವ ಎರಡು ವಿಧಗಳಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದು ನೋಡೋಣ. ನಂತರ ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳಲು ನಾವೇನು ಮಾಡಬೇಕು ಅನ್ನೋದನ್ನು ಚರ್ಚಿಸೋಣ.
ಪವಿತ್ರಾತ್ಮ ಕೊಡುವ ಬಲ
3. ಪವಿತ್ರಾತ್ಮದ ಮೂಲಕ ಯೆಹೋವನು ನಮಗೆ ಸಹಾಯ ಮಾಡುವ ಒಂದು ವಿಧ ಯಾವುದು?
3 ಯೆಹೋವನ ಪವಿತ್ರಾತ್ಮದಿಂದ ಕಷ್ಟಗಳ ಮಧ್ಯೆಯೂ ನಮ್ಮ ಜವಾಬ್ದಾರಿಗಳನ್ನು ಮಾಡಿ ಮುಗಿಸಲಿಕ್ಕೆ ಬೇಕಾದ ಬಲ ಸಿಗುತ್ತದೆ. ಅಪೊಸ್ತಲ ಪೌಲ ಕಷ್ಟಗಳ ಮಧ್ಯೆಯೂ ಯೆಹೋವನ ಸೇವೆಯನ್ನು ಮಾಡುತ್ತಾ ಇದ್ದನು. ಆತನು ‘ಕ್ರಿಸ್ತನ ಬಲದ’ ಮೇಲೆ ಆತುಕೊಂಡಿದ್ದರಿಂದಲೇ ಇದು ಸಾಧ್ಯವಾಯಿತು. (2 ಕೊರಿಂ. 12:9) ಎರಡನೇ ಮಿಷನರಿ ಪ್ರಯಾಣದ ಸಮಯದಲ್ಲಿ ಪೌಲ ಸುವಾರ್ತೆ ಸಾರುವುದರ ಜೊತೆಗೆ ತನ್ನ ಖರ್ಚುವೆಚ್ಚವನ್ನೂ ನೋಡಿಕೊಳ್ಳಬೇಕಿತ್ತು. ಆತನು ಕೊರಿಂಥದಲ್ಲಿ ಅಕ್ವಿಲ ಮತ್ತು ಪ್ರಿಸ್ಕಿಲ್ಲರ ಮನೆಯಲ್ಲಿ ಉಳುಕೊಂಡನು. ಅವರು ಡೇರೆಮಾಡುವ ವೃತ್ತಿಯವರಾಗಿದ್ದರು. ಪೌಲನಿಗೂ ಡೇರೆಮಾಡುವ ವೃತ್ತಿ ಗೊತ್ತಿದ್ದರಿಂದ ಆತನೂ ಅವರ ಜೊತೆ ಸೇರಿ ಕೆಲಸ ಮಾಡುತ್ತಿದ್ದನು. (ಅ. ಕಾ. 18:1-4) ಹೀಗೆ ಪೌಲನು ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತಾ ಸಾರುವ ಕೆಲಸವನ್ನು ಮಾಡಲು ಬೇಕಾದ ಬಲವನ್ನು ಪವಿತ್ರಾತ್ಮ ಆತನಿಗೆ ನೀಡಿತು.
4. ಎರಡನೇ ಕೊರಿಂಥ 12:7ಬಿ-9 ರ ಪ್ರಕಾರ ಪೌಲನಿಗೆ ಯಾವ ಕಷ್ಟ ಇತ್ತು?
4 ಎರಡನೇ ಕೊರಿಂಥ 12:7ಬಿ-9 ಓದಿ. ಈ ವಚನಗಳಲ್ಲಿ ಪೌಲನು ತನ್ನ “ಶರೀರದಲ್ಲಿ ಒಂದು ಮುಳ್ಳು” ಇರೋದರಿಂದ ತನಗೆ ಕಷ್ಟ ಆಗುತ್ತಿದೆ ಎಂದು ಹೇಳಿದ್ದಾನೆ. ಅದರ ಅರ್ಥವೇನು? ನಿಮ್ಮ ದೇಹಕ್ಕೆ ಒಂದು ಮುಳ್ಳು ಚುಚ್ಚಿದರೆ ಅದರಿಂದ ತುಂಬ ನೋವಾಗುತ್ತಲ್ವಾ? ಅದೇ ರೀತಿ ತುಂಬ ನೋವಾಗುವ ಯಾವುದೋ ಒಂದು ಸಮಸ್ಯೆ ತನಗೆ ಇದೆ ಅನ್ನುವುದು ಪೌಲನ ಮಾತಿನ ಅರ್ಥವಾಗಿತ್ತು. ಈ ಸಮಸ್ಯೆ ಹೇಗಿತ್ತೆಂದರೆ “ಸೈತಾನನ ಒಬ್ಬ ದೂತ” ಪೌಲನಿಗೆ “ಹೊಡೆಯುತ್ತಾ” ಇರುವಂತೆ ಇತ್ತು. ಈ ಮುಳ್ಳನ್ನು ಚುಚ್ಚಿದ್ದು ಅಂದರೆ ಸಮಸ್ಯೆಯನ್ನು ತಂದಿದ್ದು ಸೈತಾನನೋ ಅವನ ದೂತರೋ ಆಗಿರಲಿಕ್ಕಿಲ್ಲ. ಆದರೆ ಆ ದುಷ್ಟಾತ್ಮಗಳು ‘ಮುಳ್ಳನ್ನು’ ಆತನ ಶರೀರದಲ್ಲಿ ಇನ್ನೂ ಒಳಕ್ಕೆ ಹೊಕ್ಕಿಸುವ ಪ್ರಯತ್ನ ಮಾಡಿರುತ್ತವೆ. ಅಂದರೆ ಸಮಸ್ಯೆಯನ್ನು ಅಥವಾ ನೋವನ್ನು ಹೆಚ್ಚು ಮಾಡಲು ಪ್ರಯತ್ನಿಸಿರುತ್ತವೆ. ಆಗ ಪೌಲ ಏನು ಮಾಡಿದನು?
5. ಪೌಲನ ಪ್ರಾರ್ಥನೆಗಳಿಗೆ ಯೆಹೋವನು ಹೇಗೆ ಉತ್ತರ ಕೊಟ್ಟನು?
5 ಆ ‘ಮುಳ್ಳನ್ನು’ ದೇವರು ತೆಗೆಯಬೇಕೆಂದು ಪೌಲನು ಬಯಸಿದನು. ಆ ಮುಳ್ಳು “ನನ್ನನ್ನು ಬಿಟ್ಟುಹೋಗಬೇಕೆಂದು ನಾನು ಮೂರು ಸಾರಿ ಕರ್ತನನ್ನು [ಯೆಹೋವನನ್ನು] ಬೇಡಿಕೊಂಡೆನು” ಎಂದು ಆತನು ಹೇಳಿದನು. ಪೌಲನು ಪ್ರಾರ್ಥನೆಗಳನ್ನು ಮಾಡಿದರೂ ಆ ಮುಳ್ಳು ಆತನ ಶರೀರದಲ್ಲೇ ಉಳಿಯಿತು. ಇದರರ್ಥ ಪೌಲನ ಪ್ರಾರ್ಥನೆಗಳಿಗೆ ಯೆಹೋವನು ಉತ್ತರ ಕೊಡಲಿಲ್ಲ ಅಂತನಾ? ಅಲ್ಲ. ಯೆಹೋವನು ಉತ್ತರ ಕೊಟ್ಟನು. ಆ ಸಮಸ್ಯೆಯನ್ನು ತೆಗೆದುಹಾಕಲಿಲ್ಲವಾದರೂ ಅದನ್ನು ತಾಳಿಕೊಳ್ಳಲು ಪೌಲನಿಗೆ ಬಲ ಕೊಟ್ಟನು. ಜೊತೆಗೆ “ನನ್ನ ಬಲವು ಬಲಹೀನತೆಯಲ್ಲಿ ಪರಿಪೂರ್ಣಗೊಳಿಸಲ್ಪಡುತ್ತದೆ” ಅಂದನು. ಅಂದರೆ ಪೌಲನು ಬಲಹೀನ ಆಗಿರುವಾಗಲೇ ತಾನು ಬಲ ಕೊಡುತ್ತೇನೆ ಎಂದು ಯೆಹೋವನು ಹೇಳಿದನು. (2 ಕೊರಿಂ. 12:8, 9) ಹೌದು, ದೇವರ ಸಹಾಯದಿಂದಲೇ ಪೌಲ ಸಂತೋಷ ಕಾಪಾಡಿಕೊಂಡನು, ಸಮಾಧಾನದಿಂದ ಇರೋಕೆ ಸಾಧ್ಯವಾಯಿತು.—ಫಿಲಿ. 4:4-7.
6. (ಎ) ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ತರ ಕೊಡಬಹುದು? (ಬಿ) ಪ್ಯಾರದಲ್ಲಿರುವ ವಚನಗಳಲ್ಲಿನ ಯಾವ ಆಶ್ವಾಸನೆಗಳಿಂದ ನಿಮಗೆ ಬಲ ಸಿಗುತ್ತದೆ?
6 ಒಂದು ಸಮಸ್ಯೆಯನ್ನು ತೆಗೆದುಹಾಕಬೇಕೆಂದು ಪೌಲನಂತೆ ನೀವು ಯಾವತ್ತಾದರೂ ಯೆಹೋವನನ್ನು ಬೇಡಿದ್ದೀರಾ? ನೀವು ಅದರ ಬಗ್ಗೆ ಪುನಃ ಪುನಃ ಬೇಡಿದ್ದರೂ ಆ ಸಮಸ್ಯೆ ಇನ್ನೂ ಹಾಗೇ ಇರಬಹುದು ಅಥವಾ ಹೆಚ್ಚಾಗಿರಬಹುದು. ಇದರಿಂದಾಗಿ, ಯೆಹೋವನಿಗೆ ನಿಮ್ಮನ್ನು ಕಂಡರೆ ಇಷ್ಟ ಇಲ್ಲ ಅಂತ ಅನಿಸುತ್ತಿದೆಯಾ? ಹಾಗನಿಸುತ್ತಿದ್ದರೆ ಪೌಲನ ಉದಾಹರಣೆ ನೆನಪಿಸಿಕೊಳ್ಳಿ. ಪೌಲನ ಪ್ರಾರ್ಥನೆಗಳಿಗೆ ಯೆಹೋವನು ಹೇಗೆ ಉತ್ತರ ಕೊಟ್ಟನೋ ಹಾಗೇ ನಿಮ್ಮ ಪ್ರಾರ್ಥನೆಗಳಿಗೂ ಉತ್ತರ ಕೊಟ್ಟೇ ಕೊಡುತ್ತಾನೆ! ಯೆಹೋವನು ನಿಮ್ಮ ಸಮಸ್ಯೆ ತೆಗೆಯದೇ ಇರಬಹುದು, ಆದರೆ ಅದನ್ನು ತಾಳಿಕೊಳ್ಳಲು ಬೇಕಾದ ಬಲವನ್ನು ಪವಿತ್ರಾತ್ಮದ ಮೂಲಕ ನಿಮಗೆ ಕೊಡುತ್ತಾನೆ. (ಕೀರ್ತ. 61:3, 4) ನೀವು ‘ಕೆಡವಲ್ಪಡಬಹುದು,’ ಆದರೆ ಯೆಹೋವನು ನಿಮ್ಮ ಕೈಬಿಡಲ್ಲ.—2 ಕೊರಿಂ. 4:8, 9; ಫಿಲಿ. 4:13.
ಯೆಹೋವನ ಸೇವೆ ಮಾಡುತ್ತಾ ಮುಂದುವರಿಯಲು ಪವಿತ್ರಾತ್ಮ ಕೊಡುವ ಸಹಾಯ
7-8. (ಎ) ಪವಿತ್ರಾತ್ಮ ಯಾವ ವಿಧದಲ್ಲಿ ಗಾಳಿಯಂತೆ ಕೆಲಸ ಮಾಡುತ್ತದೆ? (ಬಿ) ಪವಿತ್ರಾತ್ಮ ಮಾಡುವ ಕೆಲಸದ ಬಗ್ಗೆ ಪೇತ್ರನು ಏನೆಂದು ವಿವರಿಸಿದನು?
7 ಪವಿತ್ರಾತ್ಮ ಇನ್ನು ಯಾವ ವಿಧದಲ್ಲಿ ನಮಗೆ ಸಹಾಯ ಮಾಡುತ್ತದೆ? ಪವಿತ್ರಾತ್ಮವನ್ನು ಗಾಳಿಗೆ ಹೋಲಿಸಬಹುದು. ಸಮುದ್ರದಲ್ಲಿ ತೂಫಾನು ಎದ್ದರೂ ಒಂದು ಹಾಯಿ ಹಡಗು ಸುರಕ್ಷಿತವಾಗಿ ತನ್ನ ಗುರಿಯನ್ನು ತಲುಪಲು ಸರಿಯಾದ ದಿಕ್ಕಿನಲ್ಲಿ ಬೀಸುವ ಗಾಳಿ ಸಹಾಯ ಮಾಡುತ್ತದೆ. ಅದೇ ರೀತಿ ನಮ್ಮ ಜೀವನದಲ್ಲಿ ತೂಫಾನಿನಂಥ ಸಮಸ್ಯೆಗಳು ಎದ್ದರೂ ಯೆಹೋವನ ಸೇವೆ ನಿಲ್ಲಿಸದೆ ನಮ್ಮ ಗುರಿಯಾದ ದೇವರ ರಾಜ್ಯಕ್ಕೆ ತಲುಪಲು ಪವಿತ್ರಾತ್ಮ ಸಹಾಯ ಮಾಡುತ್ತದೆ.
8 ಅಪೊಸ್ತಲ ಪೇತ್ರನು ಒಬ್ಬ ಮೀನುಗಾರನಾಗಿದ್ದ ಕಾರಣ ಆತನಿಗೆ ಹಾಯಿ ಹಡಗಿನ ಪ್ರಯಾಣದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಬಹುಶಃ ಈ ಕಾರಣದಿಂದಲೇ ಆತನು ಪವಿತ್ರಾತ್ಮ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸುವಾಗ ಸಮುದ್ರ ಪ್ರಯಾಣಕ್ಕೆ ಸಂಬಂಧಿಸಿದ ಪದವನ್ನು ಉಪಯೋಗಿಸಿದ್ದಾನೆ. ಆತನು ಬರೆದದ್ದು: “ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” ಇಲ್ಲಿ “ಮಾರ್ಗದರ್ಶಿಸಲ್ಪಟ್ಟು” ಅನ್ನುವುದಕ್ಕಿರುವ ಗ್ರೀಕ್ ಪದ “ಮತ್ತೊಂದು ಕಡೆ ಸಾಗಿಸು” ಎಂಬರ್ಥ ಕೊಡುತ್ತದೆ.—2 ಪೇತ್ರ 1:21.
9. ಪೇತ್ರನು ಉಪಯೋಗಿಸಿದ “ಮತ್ತೊಂದು ಕಡೆ ಸಾಗಿಸು” ಎಂಬರ್ಥ ಕೊಡುವ ಗ್ರೀಕ್ ಪದ ಯಾವ ಚಿತ್ರಣವನ್ನು ಮನಸ್ಸಿಗೆ ತರುತ್ತದೆ?
9 ಪೇತ್ರನು ಉಪಯೋಗಿಸಿದ “ಮತ್ತೊಂದು ಕಡೆ ಸಾಗಿಸು” ಎಂಬರ್ಥ ಕೊಡುವ ಗ್ರೀಕ್ ಪದ ಯಾವ ಚಿತ್ರಣವನ್ನು ಮನಸ್ಸಿಗೆ ತರುತ್ತದೆ? ಇದೇ ಗ್ರೀಕ್ ಪದವನ್ನು ಅಪೊಸ್ತಲ ಕಾರ್ಯಗಳು ಪುಸ್ತಕದ ಬರಹಗಾರನಾದ ಲೂಕನು ಗಾಳಿಯಿಂದ ‘ನೂಕಲಾದ’ ಹಡಗಿನ ಬಗ್ಗೆ ವಿವರಿಸುವಾಗ ಉಪಯೋಗಿಸಿದ್ದಾನೆ. (ಅ. ಕಾ. 27:15) ಬೈಬಲ್ ಬರಹಗಾರರು ಪವಿತ್ರಾತ್ಮದಿಂದ ‘ಮಾರ್ಗದರ್ಶಿಸಲ್ಪಟ್ಟರು’ ಅನ್ನುವುದಕ್ಕೆ ಪೇತ್ರನು ಬಳಸಿದ ಗ್ರೀಕ್ ಪದ ಕೇಳುವಾಗ ಜನರ ಮನಸ್ಸಿಗೆ ಹಾಯಿ ಹಡಗಿನಲ್ಲಿ ಪ್ರಯಾಣಿಸುವ ಚಿತ್ರಣ ಬರುತ್ತದೆ ಎಂದು ಒಬ್ಬ ಬೈಬಲ್ ವಿದ್ವಾಂಸ ಹೇಳುತ್ತಾನೆ. ಒಂದು ಹಾಯಿ ಹಡಗು ಮುಟ್ಟಬೇಕಾದ ಜಾಗಕ್ಕೆ ತಲುಪಲು ಗಾಳಿ ಸಹಾಯ ಮಾಡುವಂತೆಯೇ ಬೈಬಲ್ ಪ್ರವಾದಿಗಳು ಮತ್ತು ಬರಹಗಾರರು ತಮಗೆ ಕೊಟ್ಟ ನೇಮಕವನ್ನು ಮಾಡಿಮುಗಿಸಲು ಪವಿತ್ರಾತ್ಮ ಸಹಾಯ ಮಾಡಿದೆ ಅನ್ನುವುದು ಪೇತ್ರನು ಹೇಳಿದ ಮಾತಿನ ಅರ್ಥವಾಗಿತ್ತು. ಮೇಲೆ ತಿಳಿಸಲಾದ ಬೈಬಲ್ ವಿದ್ವಾಂಸನು ಹೇಳುವಂತೆ, ಬೈಬಲ್ ಬರಹಗಾರರು ಹಾಯಿ ಅಥವಾ ಪಟ ಮೇಲಕ್ಕೇರಿಸಿರುವ ಹಡಗಿನಂತೆ ಇದ್ದರು. ಯೆಹೋವನು ಅವರಿಗೆ “ಗಾಳಿ” ಅಂದರೆ ಪವಿತ್ರಾತ್ಮ ಕೊಟ್ಟನು. ಹೀಗೆ ತನ್ನ ಪಾಲಿನ ಕೆಲಸವನ್ನು ಮಾಡಿದನು. ಬೈಬಲ್ ಬರಹಗಾರರು ಪವಿತ್ರಾತ್ಮದಿಂದ ಬಂದ ನಿರ್ದೇಶನಕ್ಕನುಸಾರ ಕೆಲಸ ಮಾಡಿದರು. ಹೀಗೆ ಅವರು ತಮ್ಮ ಪಾಲಿನ ಕೆಲಸವನ್ನು ಮಾಡಿದರು. ಇದು ಗಾಳಿ ಬೀಸಿದ ಕಡೆಗೇ ಹಡಗು ಹೋದಂತೆ ಇತ್ತು.
10-11. ಪವಿತ್ರಾತ್ಮ ನಮ್ಮನ್ನು ಮಾರ್ಗದರ್ಶಿಸಲು ನಾವು ಯಾವ ಎರಡು ವಿಷಯಗಳನ್ನು ಮಾಡಬೇಕು? ಒಂದು ಉದಾಹರಣೆ ಕೊಡಿ.
10 ಇಂದು ಯೆಹೋವನು ತನ್ನ ಪವಿತ್ರಾತ್ಮ ಕೊಟ್ಟು ಜನರ ಕೈಯಲ್ಲಿ ಬೈಬಲನ್ನು ಬರೆಸುತ್ತಾ ಇಲ್ಲ. ಆದರೆ ಆತನು ಈಗಲೂ ತನ್ನ ಜನರಿಗೆ ನಿರ್ದೇಶನ ಕೊಡಲು ಪವಿತ್ರಾತ್ಮ ಉಪಯೋಗಿಸುತ್ತಿದ್ದಾನೆ. ಹೀಗೆ ತನ್ನ ಪಾಲಿನ ಕೆಲಸ ಮಾಡುತ್ತಿದ್ದಾನೆ. ನಾವು ಹೇಗೆ ದೇವರ ಪವಿತ್ರಾತ್ಮದ ಪೂರ್ಣ ಪ್ರಯೋಜನ ಪಡಕೊಳ್ಳಬಹುದು? ನಾವು ನಮ್ಮ ಪಾಲಿನ ಕೆಲಸವನ್ನು ಮಾಡುತ್ತಾ ಇರಬೇಕು. ಅದು ಯಾವ ಕೆಲಸ?
11 ಈ ಉದಾಹರಣೆ ಬಗ್ಗೆ ಯೋಚಿಸಿ. ನಾವಿಕನಿಗೆ ಗಾಳಿಯ ಸಹಾಯ ಬೇಕಿದ್ದರೆ ಅವನು ಎರಡು ವಿಷಯಗಳನ್ನು ಮಾಡಬೇಕು. ಮೊದಲಿಗೆ, ಅವನು ಗಾಳಿ ಎಲ್ಲಿ ಬೀಸುತ್ತಿದೆಯೋ ಆ ಮಾರ್ಗದಲ್ಲಿ ತನ್ನ ದೋಣಿಯನ್ನು ನಡೆಸಬೇಕು. ಯಾಕೆಂದರೆ ಗಾಳಿ ಬೀಸುವ ಜಾಗದಿಂದ ದೂರದ ತೀರದಲ್ಲಿ ದೋಣಿ ನಿಲ್ಲಿಸಿದರೆ ಅದು ಮುಂದಕ್ಕೆ ಹೋಗಲ್ಲ. ಎರಡನೇದಾಗಿ, ಅವನು ದೋಣಿಯ ಹಾಯಿಯನ್ನು ಪೂರ್ತಿಯಾಗಿ ಬಿಚ್ಚಿ ಮೇಲಕ್ಕೇರಿಸಲು ತನ್ನಿಂದಾದಷ್ಟು ಪ್ರಯತ್ನಿಸಬೇಕು. ಯಾಕೆಂದರೆ ಹಾಯಿಯ ಮೇಲೆ ಗಾಳಿ ಬೀಸಿದಾಗಲೇ ದೋಣಿ ಮುಂದಕ್ಕೆ ಹೋಗಲು ಸಾಧ್ಯ. ಅದೇ ರೀತಿ ನಾವು ಪವಿತ್ರಾತ್ಮದ ಸಹಾಯ ಪಡಕೊಂಡರೆ ಮಾತ್ರ ಯೆಹೋವನ ಸೇವೆ ಮಾಡುತ್ತಾ ಮುಂದುವರಿಯಲು ಸಾಧ್ಯ. ಆ ಸಹಾಯ ಪಡಕೊಳ್ಳಲು ನಾವು ಎರಡು ವಿಷಯಗಳನ್ನು ಮಾಡಬೇಕು. (1) ಪವಿತ್ರಾತ್ಮ ಕೆಲಸ ಮಾಡುವಂಥ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. (2) ಹಾಯಿಯನ್ನು ಆದಷ್ಟು ಪೂರ್ತಿಯಾಗಿ ಬಿಚ್ಚಿ ಮೇಲಕ್ಕೇರಿಸಬೇಕು ಅಂದರೆ ಪವಿತ್ರಾತ್ಮ ಕೆಲಸ ಮಾಡುವಂಥ ಚಟುವಟಿಕೆಗಳನ್ನು ನಮ್ಮಿಂದಾದಷ್ಟು ಉತ್ತಮವಾಗಿ ಮಾಡಬೇಕು. (ಕೀರ್ತ. 119:2) ಈ ವಿಷಯಗಳನ್ನು ಮಾಡಿದರೆ ಕಷ್ಟ-ಪರೀಕ್ಷೆಗಳ ಅಲೆಗಳು ಬಡಿದರೂ ನಾವು ದೇವರ ರಾಜ್ಯವನ್ನು ತಲುಪುವ ತನಕ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಯನ್ನು ಮಾಡುತ್ತಾ ಇರಲು ಪವಿತ್ರಾತ್ಮ ನಮಗೆ ಸಹಾಯ ಮಾಡುತ್ತದೆ.
12. ನಾವೀಗ ಏನು ಚರ್ಚಿಸಲಿದ್ದೇವೆ?
12 ಪವಿತ್ರಾತ್ಮ ನಮಗೆ ಸಹಾಯ ಮಾಡುವ ಎರಡು ವಿಧಗಳನ್ನು ಇಲ್ಲಿಯವರೆಗೂ ಚರ್ಚಿಸಿದೆವು. ಪವಿತ್ರಾತ್ಮ ನಮಗೆ ಬಲ ಕೊಟ್ಟು ಕಷ್ಟಗಳ ಮಧ್ಯೆಯೂ ನಾವು ಯೆಹೋವನಿಗೆ ನಂಬಿಗಸ್ತರಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ಅದು ನಮ್ಮನ್ನು ಮಾರ್ಗದರ್ಶಿಸುತ್ತಾ ಶಾಶ್ವತ ಜೀವನಕ್ಕೆ ಹೋಗುವ ದಾರಿಯಲ್ಲೇ ಮುಂದೆ ಸಾಗಲು ಸಹಾಯ ಮಾಡುತ್ತದೆ. ನಾವೀಗ ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳಲು ಮಾಡಬೇಕಾದ ನಾಲ್ಕು ವಿಷಯಗಳ ಬಗ್ಗೆ ಚರ್ಚಿಸೋಣ.
ಪವಿತ್ರಾತ್ಮದಿಂದ ನಾವು ಹೇಗೆ ಪೂರ್ತಿ ಪ್ರಯೋಜನ ಪಡಕೊಳ್ಳಬಹುದು?
13. (ಎ) ಎರಡನೇ ತಿಮೊಥೆಯ 3:16, 17 ರ ಪ್ರಕಾರ ದೇವರ ವಾಕ್ಯ ನಮ್ಮ ಮೇಲೆ ಯಾವ ಪ್ರಭಾವ ಬೀರುತ್ತದೆ? (ಬಿ) ಆದರೆ ನಾವೇನು ಮಾಡಬೇಕು?
13 ಮೊದಲನೇದಾಗಿ, ದೇವರ ವಾಕ್ಯವನ್ನು ಅಧ್ಯಯನ ಮಾಡಬೇಕು. (2 ತಿಮೊಥೆಯ 3:16, 17 ಓದಿ.) “ದೇವರಿಂದ ಪ್ರೇರಿತ” ಎಂದು ಭಾಷಾಂತರವಾಗಿರುವ ಗ್ರೀಕ್ ಪದದ ಅರ್ಥ “ದೇವರು ಊದಿದನು” ಎಂದಾಗಿದೆ. ದೇವರು ತನ್ನ ಆಲೋಚನೆಗಳನ್ನು ಬೈಬಲ್ ಬರಹಗಾರರ ಮನಸ್ಸಿನಲ್ಲಿ ಊದಲು ಅಂದರೆ ಹಾಕಲು ತನ್ನ ಪವಿತ್ರಾತ್ಮವನ್ನು ಬಳಸಿದ್ದಾನೆ. ನಾವು ಬೈಬಲನ್ನು ಓದಿ, ಅದನ್ನು ಧ್ಯಾನಿಸಿದಾಗ ದೇವರು ಕೊಡುವ ನಿರ್ದೇಶನಗಳು ನಮ್ಮ ಹೃದಮನಕ್ಕೆ ಪ್ರವೇಶಿಸುತ್ತವೆ. ಈ ನಿರ್ದೇಶನಗಳು ದೇವರು ಮೆಚ್ಚುವಂಥ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. (ಇಬ್ರಿ. 4:12) ಹಾಗಾದರೆ ನಾವು ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳಬೇಕೆಂದರೆ ದೇವರ ವಾಕ್ಯವನ್ನು ಪ್ರತಿದಿನ ಓದಲು ಮತ್ತು ಓದಿದ್ದರ ಬಗ್ಗೆ ಯೋಚಿಸಲು ಸಮಯ ಮಾಡಿಕೊಳ್ಳಬೇಕು. ಆಗ ದೇವರ ವಾಕ್ಯ ನಮ್ಮ ನಡೆ-ನುಡಿಗಳ ಮೇಲೆ ಪ್ರಭಾವ ಬೀರುತ್ತದೆ.
14. (ಎ) ಕ್ರೈಸ್ತ ಕೂಟಗಳಲ್ಲಿ ಪವಿತ್ರಾತ್ಮ ಇರುತ್ತದೆ ಅಂತ ಯಾಕೆ ಹೇಳಬಹುದು? (ಬಿ) ಕೂಟಗಳಲ್ಲಿ ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳಲು ನಾವೇನು ಮಾಡಬೇಕು?
14 ಎರಡನೇದಾಗಿ, ನಾವೆಲ್ಲರೂ ಜೊತೆಯಾಗಿ ದೇವರನ್ನು ಆರಾಧಿಸಬೇಕು. (ಕೀರ್ತ. 22:22) ಕ್ರೈಸ್ತ ಕೂಟಗಳಲ್ಲಿ ಯೆಹೋವನ ಆತ್ಮ ಇರುತ್ತದೆ. (ಪ್ರಕ. 2:29) ಯಾಕೆ ಹಾಗೆ ಹೇಳಬಹುದು? ಯಾಕೆಂದರೆ ಜೊತೆ ಕ್ರೈಸ್ತರೊಂದಿಗೆ ನಾವು ಆರಾಧನೆಗೆಂದು ಒಟ್ಟಾಗಿ ಸೇರಿಬಂದಾಗ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುತ್ತೇವೆ. ದೇವರ ವಾಕ್ಯದ ಆಧಾರಿತವಾಗಿರುವ ರಾಜ್ಯ ಗೀತೆಗಳನ್ನು ಹಾಡುತ್ತೇವೆ. ಅಷ್ಟೇ ಅಲ್ಲದೆ, ಪವಿತ್ರಾತ್ಮದಿಂದ ನೇಮಿತರಾಗಿರುವ ಸಹೋದರರು ಕೊಡುವ ಬೈಬಲಾಧಾರಿತ ನಿರ್ದೇಶನಗಳನ್ನು ನಾವು ಕೇಳಿಸಿಕೊಳ್ಳುತ್ತೇವೆ. ಸಹೋದರಿಯರು ತಮ್ಮ ಭಾಗಗಳನ್ನು ತಯಾರಿಸಿ, ಅವನ್ನು ನಿರ್ವಹಿಸಲು ಸಹ ಇದೇ ಪವಿತ್ರಾತ್ಮ ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಇದ್ದರೂ, ಪವಿತ್ರಾತ್ಮದಿಂದ ನಾವು ಪೂರ್ತಿ ಪ್ರಯೋಜನ ಪಡಕೊಳ್ಳಬೇಕೆಂದರೆ ಕೂಟಗಳಲ್ಲಿ ಉತ್ತರ ನೀಡಲು ಚೆನ್ನಾಗಿ ತಯಾರಿ ಮಾಡಿ ಬರಬೇಕು. ಹಾಗೆ ಮಾಡಿದಾಗ ಮಾತ್ರ, “ಹಾಯಿ ತೆರೆದ ದೋಣಿಯಂತೆ” ನಾವು ಪವಿತ್ರಾತ್ಮದಿಂದ ಪ್ರಯೋಜನ ಪಡಕೊಳ್ಳಲು ತಯಾರಿದ್ದೇವೆ ಎಂದು ತೋರಿಸಿಕೊಡುತ್ತೇವೆ.
15. ಸೇವೆಯಲ್ಲಿ ಪವಿತ್ರಾತ್ಮ ಕೆಲಸ ಮಾಡಬೇಕೆಂದರೆ ನಾವೇನು ಮಾಡಬೇಕು?
15 ಮೂರನೇದಾಗಿ, ಸುವಾರ್ತೆ ಸಾರಬೇಕು. ಸಾರುವಾಗ ಮತ್ತು ಕಲಿಸುವಾಗ ನಾವು ಬೈಬಲನ್ನು ಬಳಸಿದರೆ ನಮ್ಮ ಸೇವೆಯಲ್ಲಿ ಪವಿತ್ರಾತ್ಮ ಕೆಲಸ ಮಾಡುವಂತೆ ನಾವು ಬಿಟ್ಟುಕೊಡುತ್ತೇವೆ. (ರೋಮ. 15:18, 19) ನಾವು ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳಬೇಕೆಂದರೆ, ತಪ್ಪದೇ ಸಾರಬೇಕು ಮತ್ತು ಸಾಧ್ಯವಾದಾಗೆಲ್ಲ ಬೈಬಲನ್ನು ಬಳಸಬೇಕು. ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಬರುವ ಮಾದರಿ ಸಂಭಾಷಣೆಗಳನ್ನು ಸೇವೆಯಲ್ಲಿ ಉಪಯೋಗಿಸಬೇಕು. ಇದರಿಂದಾಗಿ ಜನರೊಂದಿಗೆ ಚೆನ್ನಾಗಿ ಮಾತಾಡೋಕೆ ಸಾಧ್ಯವಾಗುತ್ತದೆ.
16. ಪವಿತ್ರಾತ್ಮವನ್ನು ನೇರವಾಗಿ ಪಡಕೊಳ್ಳುವ ವಿಧ ಯಾವುದು?
16 ನಾಲ್ಕನೇದಾಗಿ, ಯೆಹೋವನಿಗೆ ಪ್ರಾರ್ಥಿಸಬೇಕು. (ಮತ್ತಾ. 7:7-11; ಲೂಕ 11:13) ಪವಿತ್ರಾತ್ಮವನ್ನು ನೇರವಾಗಿ ಪಡಕೊಳ್ಳುವ ವಿಧ ಅದಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುವುದೇ ಆಗಿದೆ. ನಮ್ಮ ಪ್ರಾರ್ಥನೆಗಳು ಯೆಹೋವನಿಗೆ ತಲುಪದಂತೆ ಮಾಡಲು ಅಥವಾ ಆತನ ಪವಿತ್ರಾತ್ಮ ನಮಗೆ ಸಿಗದಂತೆ ಮಾಡಲು ಯಾರಿಂದಲೂ ಮತ್ತು ಯಾವುದರಿಂದಲೂ ಸಾಧ್ಯವಿಲ್ಲ. ನಾವು ಜೈಲಿನ ಬಿಗಿ ಬಂದೋಬಸ್ತಿನಲ್ಲಿದ್ದರೂ ಪವಿತ್ರಾತ್ಮ ನಮಗೆ ಸಹಾಯ ಮಾಡುತ್ತದೆ. ನಮಗೆ ಪವಿತ್ರಾತ್ಮ ಸಿಗದಂತೆ ತಡೆಯಲು ಸೈತಾನನಿಂದಲೂ ಸಾಧ್ಯವಿಲ್ಲ. (ಯಾಕೋ. 1:17) ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳಬೇಕೆಂದರೆ ನಾವು ಹೇಗೆ ಪ್ರಾರ್ಥಿಸಬೇಕು? ಉತ್ತರಕ್ಕಾಗಿ ಪ್ರಾರ್ಥನೆ ಬಗ್ಗೆ ಲೂಕನು ತನ್ನ ಸುವಾರ್ತಾ ಪುಸ್ತಕದಲ್ಲಿ ಬರೆದ ಉದಾಹರಣೆ ನೋಡೋಣ.b
ಪಟ್ಟುಹಿಡಿದು ಪ್ರಾರ್ಥಿಸಿ
17. ಲೂಕ 11:5-9, 13 ರಲ್ಲಿ ದಾಖಲಾಗಿರುವ ಯೇಸು ಕೊಟ್ಟ ಉದಾಹರಣೆಯಿಂದ ನಾವು ಯಾವ ಪಾಠ ಕಲಿಯಬಹುದು?
17 ಲೂಕ 11:5-9, 13 ಓದಿ. ನಾವು ಪವಿತ್ರಾತ್ಮಕ್ಕಾಗಿ ಹೇಗೆ ಪ್ರಾರ್ಥಿಸಬೇಕೆಂದು ಯೇಸು ಕೊಟ್ಟ ಈ ಉದಾಹರಣೆಯಿಂದ ಕಲಿಯಬಹುದು. ಆ ಉದಾಹರಣೆಯಲ್ಲಿದ್ದ ಮನುಷ್ಯನು “ಧೈರ್ಯದಿಂದ ಪಟ್ಟುಹಿಡಿದ ಕಾರಣ” ಅವನಿಗೆ ಬೇಕಾದದ್ದು ಸಿಕ್ಕಿತು. ತಡರಾತ್ರಿಯಾಗಿದ್ದರೂ ತನ್ನ ಸ್ನೇಹಿತನ ಹತ್ತಿರ ಸಹಾಯ ಕೇಳಲಿಕ್ಕೆ ಅವನು ಹಿಂದೆ-ಮುಂದೆ ನೋಡಲಿಲ್ಲ.c ಯೇಸು ಕೊಟ್ಟ ಈ ಉದಾಹರಣೆಯಿಂದ ಪ್ರಾರ್ಥನೆ ಬಗ್ಗೆ ಏನು ಕಲಿಯಬಹುದು? ಆತನು ಹೇಳಿದ್ದು: “ಕೇಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.” ಇದರಿಂದ ನಮಗೇನು ಪಾಠ? ಪವಿತ್ರಾತ್ಮದ ಸಹಾಯ ಪಡಕೊಳ್ಳಬೇಕೆಂದರೆ ನಾವು ಅದಕ್ಕಾಗಿ ಪಟ್ಟುಹಿಡಿದು ಪ್ರಾರ್ಥಿಸಬೇಕು.
18. ಯೇಸು ಕೊಟ್ಟ ಉದಾಹರಣೆ ಪ್ರಕಾರ ಯೆಹೋವನು ನಮಗೆ ಪವಿತ್ರಾತ್ಮ ಕೊಟ್ಟೇ ಕೊಡುತ್ತಾನೆ ಎಂದು ಯಾಕೆ ಭರವಸೆ ಇಡಬಹುದು?
18 ಯೇಸು ಕೊಟ್ಟ ಉದಾಹರಣೆಯಿಂದ ಯೆಹೋವನು ಯಾಕೆ ನಮಗೆ ಪವಿತ್ರಾತ್ಮ ಕೊಡುತ್ತಾನೆ ಅನ್ನುವುದನ್ನು ಸಹ ಕಲಿಯಬಹುದು. ಆ ಉದಾಹರಣೆಯಲ್ಲಿದ್ದ ಮನುಷ್ಯನು ಮನೆಗೆ ಬಂದ ಅತಿಥಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸಿದನು. ತಡರಾತ್ರಿಯಲ್ಲಿ ಬಂದ ಅತಿಥಿಗೆ ಊಟ ಕೊಡಬೇಕೆಂದು ಅವನಿಗೆ ಅನಿಸಿತು. ಆದರೆ ಅವನ ಹತ್ತಿರ ಕೊಡುವುದಕ್ಕೆ ಏನೂ ಇರಲಿಲ್ಲ. ಅವನು ತನ್ನ ನೆರೆಯವನ ಹತ್ತಿರ ಆಹಾರಕ್ಕಾಗಿ ಪಟ್ಟುಹಿಡಿದು ಕೇಳಿದ್ದರಿಂದ ಆ ನೆರೆಯವನು ಅವನಿಗೆ ಆಹಾರ ಕೊಡುವುದಕ್ಕೆ ಮನಸ್ಸು ಮಾಡಿದನು. ಈ ಉದಾಹರಣೆ ಮೂಲಕ ಯೇಸು ಏನು ಹೇಳಲು ಪ್ರಯತ್ನಿಸಿದನು? ಪಟ್ಟುಹಿಡಿದು ಕೇಳಿದ್ದಕ್ಕಾಗಿ ಒಬ್ಬ ಅಪರಿಪೂರ್ಣ ಮನುಷ್ಯನೇ ಸಹಾಯ ಮಾಡಿದ ಅಂದಮೇಲೆ, ಪವಿತ್ರಾತ್ಮಕ್ಕಾಗಿ ಪಟ್ಟುಹಿಡಿದು ಕೇಳುವವರಿಗೆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆ ಅದನ್ನು ಕೊಡಲ್ವಾ? ಖಂಡಿತ ಕೊಡುತ್ತಾನೆ! ಹಾಗಾಗಿ, ನಾವು ಪವಿತ್ರಾತ್ಮಕ್ಕಾಗಿ ಕೇಳುವಾಗ ಯೆಹೋವನು ನಮಗೆ ಅದನ್ನು ಕೊಟ್ಟೇ ಕೊಡುತ್ತಾನೆ ಎಂಬ ಭರವಸೆಯಿಂದ ಪ್ರಾರ್ಥಿಸಬಹುದು.—ಕೀರ್ತ. 10:17; 66:19.
19. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ದೃಢಭರವಸೆ ನಮಗೆ ಯಾಕಿದೆ?
19 ನಮ್ಮನ್ನು ಸೋಲಿಸಲು ಸೈತಾನ ಶತಪ್ರಯತ್ನ ಹಾಕಿದರೂ ಗೆಲ್ಲೋದು ನಾವೇ ಎಂಬ ಭರವಸೆ ನಮಗಿದೆ. ಯಾಕೆಂದರೆ ಪವಿತ್ರಾತ್ಮ ನಮಗೆ ಎರಡು ವಿಧಗಳಲ್ಲಿ ಸಹಾಯ ಮಾಡುತ್ತದೆ. ಮೊದಲನೇದಾಗಿ, ಸಮಸ್ಯೆಗಳನ್ನು ತಾಳಿಕೊಳ್ಳಲು ಬೇಕಾದ ಶಕ್ತಿಯನ್ನು ಅದು ನಮಗೆ ಕೊಡುತ್ತದೆ. ಎರಡನೇದಾಗಿ, ನಾವು ಹೊಸ ಲೋಕಕ್ಕೆ ಮುಟ್ಟುವ ತನಕ ಯೆಹೋವನ ಸೇವೆಯನ್ನು ಮಾಡುತ್ತಾ ಮುಂದುವರಿಯಲು ಅದು ಸಹಾಯ ಮಾಡುತ್ತದೆ. ಹಾಗಾಗಿ ಪವಿತ್ರಾತ್ಮದಿಂದ ಪೂರ್ತಿ ಪ್ರಯೋಜನ ಪಡಕೊಳ್ಳುವ ದೃಢತೀರ್ಮಾನ ಮಾಡೋಣ!
ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
a ಕಷ್ಟಗಳನ್ನು ತಾಳಿಕೊಳ್ಳಲು ಪವಿತ್ರಾತ್ಮ ನಮಗೆ ಹೇಗೆ ಸಹಾಯ ಮಾಡುತ್ತದೆ, ಪವಿತ್ರಾತ್ಮದ ಸಹಾಯವನ್ನು ಆದಷ್ಟು ಹೆಚ್ಚು ಪಡಕೊಳ್ಳಲು ನಾವೇನು ಮಾಡಬೇಕು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.
b ಬೇರೆಯವರು ಬರೆದ ಸುವಾರ್ತಾ ಪುಸ್ತಕಗಳಿಗಿಂತ ಹೆಚ್ಚಾಗಿ ಲೂಕನು ಬರೆದ ಸುವಾರ್ತಾ ಪುಸ್ತಕದಲ್ಲಿ, ಯೇಸು ತನ್ನ ಜೀವನದಲ್ಲಿ ಪ್ರಾರ್ಥನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದನು ಅನ್ನುವುದನ್ನು ನೋಡಬಹುದು.—ಲೂಕ 3:21; 5:16; 6:12; 9:18, 28, 29; 18:1; 22:41, 44.
c ಧೈರ್ಯದಿಂದ ಪಟ್ಟುಹಿಡಿಯುವುದರ ಬಗ್ಗೆ 2018 ರ ಜುಲೈ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ನಲ್ಲಿ ಬಂದಿರುವ ಅಧ್ಯಯನ ಬೈಬಲ್ ಮಾಹಿತಿ ನೋಡಿ.
d ಚಿತ್ರ ವಿವರಣೆ: ಮೊದಲ ಹೆಜ್ಜೆ: ಸಹೋದರ ಮತ್ತು ಸಹೋದರಿ ರಾಜ್ಯ ಸಭಾಗೃಹಕ್ಕೆ ಬಂದಿದ್ದಾರೆ. ಅವರು ಜೊತೆ ಆರಾಧಕರೊಟ್ಟಿಗೆ ಕೂಟಗಳಿಗೆ ಕೂಡಿ ಬರುವ ಮೂಲಕ ಯೆಹೋವನ ಪವಿತ್ರಾತ್ಮ ಕೆಲಸ ಮಾಡುವ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎರಡನೇ ಹೆಜ್ಜೆ: ಕೂಟದಲ್ಲಿ ಭಾಗವಹಿಸಲು ಅವರು ತಯಾರಿ ಮಾಡಿದ್ದಾರೆ. ಪವಿತ್ರಾತ್ಮ ಕೆಲಸ ಮಾಡುವ ಇನ್ನಿತರ ಚಟುವಟಿಕೆಗಳಲ್ಲೂ ನಮ್ಮನ್ನು ತೊಡಗಿಸಿಕೊಂಡು ಅವುಗಳನ್ನು ಉತ್ತಮವಾಗಿ ಮಾಡಬೇಕು. ಅವು ಯಾವುವೆಂದರೆ, ದೇವರ ವಾಕ್ಯವನ್ನು ಓದುವುದು, ಸುವಾರ್ತೆ ಸಾರುವುದು ಮತ್ತು ಯೆಹೋವನಿಗೆ ಪ್ರಾರ್ಥಿಸುವುದು.