ಕ್ಷೇತ್ರ ಸೇವೆಗಾಗಿ ಕೂಟಗಳು
1. ಸುಸಂಘಟಿತ ರೀತಿಯಲ್ಲಿ ಕ್ಷೇತ್ರ ಸೇವೆಗಾಗಿ ಹೊರಡುವ ವಿಷಯಕ್ಕೆ ನಾವೇಕೆ ಗಮನಕೊಡುತ್ತೇವೆ?
1 ರಾಜ್ಯ-ಸಾರುವ ಕೆಲಸವನ್ನು ಸುಸಂಘಟಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದರಲ್ಲಿ ಯೇಸು ಮಾದರಿಯನ್ನಿಟ್ಟನು. ಇಂದು ರಾಜ್ಯ ಸಾರುವಿಕೆಯನ್ನು ಲೋಕವ್ಯಾಪಕವಾಗಿ ನಿರ್ವಹಿಸಲು ಜವಾಬ್ದಾರರಾಗಿರುವವರು ಅದನ್ನು ಅದೇ ರೀತಿಯಲ್ಲಿ ಮಾಡುವ ತೀವ್ರಾಪೇಕ್ಷೆ ಉಳ್ಳವರಾಗಿದ್ದಾರೆ. ಈ ನಿರ್ವಹಣೆಗಾಗಿ ಲೋಕವ್ಯಾಪಕ ಸಭೆಗಳು ಕ್ಷೇತ್ರ ಸೇವೆಗಾಗಿ ಕೂಟವನ್ನು ಉಪಯೋಗಿಸುತ್ತವೆ. ಇದು ರಾಜ್ಯ ಪ್ರಚಾರಕರ ಗುಂಪನ್ನು ಕ್ಷೇತ್ರ ಸೇವೆಗಾಗಿ ಸಂಘಟಿಸುವ ಒಂದು ವಿಧಾನವಾಗಿದೆ.—ಮತ್ತಾ. 24:45-47; 25:21; ಲೂಕ 10:1-7.
2. ಕ್ಷೇತ್ರ ಸೇವೆಗಾಗಿ ಕೂಟಗಳಲ್ಲಿ ಏನನ್ನೆಲ್ಲಾ ಚರ್ಚಿಸಬಹುದು?
2 ಉತ್ತಮ ಏರ್ಪಾಡು: ಸೇವೆಮಾಡಲು ಹೊರಡಲಿರುವವರ ಸಿದ್ಧತೆಗಾಗಿ ಉತ್ತೇಜನ, ವ್ಯಾವಹಾರಿಕ ಸಲಹೆ ಹಾಗೂ ಮಾರ್ಗದರ್ಶನ ಒದಗಿಸಲು ಈ ಕ್ಷೇತ್ರ ಸೇವೆಗಾಗಿ ಕೂಟಗಳು ರಚಿತವಾಗಿವೆ. ದಿನದ ವಚನವು ಶುಶ್ರೂಷೆಗೆ ನೇರವಾಗಿ ಅನ್ವಯಿಸುವಾಗ ಅದನ್ನು ಕೂಟದಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಬಹುದು. ಆ ದಿನದಲ್ಲಿ ಮಾಡುವ ಸೇವೆಗಾಗಿ ಎಲ್ಲರನ್ನೂ ಸಿದ್ಧಗೊಳಿಸಲಿಕ್ಕಾಗಿ ಕೆಲವೊಮ್ಮೆ ನಮ್ಮ ರಾಜ್ಯ ಸೇವೆ, ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆ, ಶುಶ್ರೂಷಾ ಶಾಲೆ ಪುಸ್ತಕದಲ್ಲಿರುವ ವಿಷಯಗಳನ್ನು ಚರ್ಚಿಸಬಹುದು. ಆ ತಿಂಗಳ ನೀಡುವಿಕೆಯ ಚುಟುಕಾದ ಪ್ರತ್ಯಕ್ಷಾಭಿನಯವನ್ನೂ ಮಾಡಬಹುದು. ಯಾರು ಯಾರೊಂದಿಗೆ ಸೇವೆಮಾಡುವರು ಮತ್ತು ಸೇವೆಯ ಟೆರಿಟೊರಿ ಎಲ್ಲಿದೆ ಎಂಬುದು ಸಮಾಪ್ತಿಯ ಪ್ರಾರ್ಥನೆಯ ಮುಂಚೆ ಎಲ್ಲರಿಗೂ ತಿಳಿದಿರಬೇಕು. 15 ನಿಮಿಷಕ್ಕೆ ಮೀರದ ಈ ಕೂಟದ ನಂತರ ಎಲ್ಲರೂ ತಮ್ಮ ಟೆರಿಟೊರಿಗೆ ಹೊರಡಬೇಕು.
3. ಕ್ಷೇತ್ರ ಸೇವೆಗಾಗಿ ಕೂಟಗಳ ಸಂಘಟನೆಗೆ ಯಾರು ಜವಾಬ್ದಾರರು?
3 ಸಂಘಟಿಸುವುದು ಹೇಗೆ? ಸೇವಾ ಮೇಲ್ವಿಚಾರಕನು ನೇತೃತ್ವವಹಿಸುತ್ತಾನೆ. ಅವನು ಕ್ಷೇತ್ರ ಸೇವೆಯ ಕೂಟಗಳ ಸಂಯೋಜನೆಗೆ ಜವಾಬ್ದಾರನು. ಗುಂಪು ಮೇಲ್ವಿಚಾರಕರು ಅಥವಾ ಅವರ ಸಹಾಯಕರು ವಾರಾಂತ್ಯದಲ್ಲಿ ತಮ್ಮ ತಮ್ಮ ಕ್ಷೇತ್ರ ಸೇವಾ ಗುಂಪುಗಳನ್ನು ಜೊತೆಗೂಡಲು ಜವಾಬ್ದಾರರಾಗಿದ್ದಾರೆ. ಕೆಲವು ಮೇಲ್ವಿಚಾರಕರು ಅಥವಾ ಶುಶ್ರೂಷಾ ಸೇವಕರು ವಾರ ಮಧ್ಯೆ ಸೇವೆಮಾಡುವ ಗುಂಪುಗಳನ್ನು ಜೊತೆಗೂಡಲು ಶಕ್ತರಾಗಬಹುದು. ವಾರಾಂತ್ಯದಲ್ಲಿ ತಮ್ಮ ಗುಂಪಿಗೆ ಮನೆಮನೆ ಸೇವೆಮಾಡಲು ಸಾಕಷ್ಟು ಟೆರಿಟೊರಿ ಇದೆಯೋ ಇಲ್ಲವೋ ಎಂಬ ವಿಷಯದಲ್ಲಿ ಗುಂಪು ಮೇಲ್ವಿಚಾರಕರು ಸೇವಾ ಮೇಲ್ವಿಚಾರಕರೊಂದಿಗೆ ನಿಕಟ ಸಂಪರ್ಕವನ್ನಿಡುವರು. ವಾರದ ದಿನಗಳಲ್ಲಿ ಸೇವೆಮಾಡುವ ಗುಂಪುಗಳನ್ನು ಯಾವ ಸಹೋದರರು ಸೇವೆಗಾಗಿ ಒಯ್ಯುವರು ಎಂಬ ಏರ್ಪಾಡಿನ ಮೇಲ್ವಿಚಾರವನ್ನು ಸೇವಾ ಮೇಲ್ವಿಚಾರಕನು ನೋಡಿಕೊಳ್ಳುವನು.
4-6. (ಎ) ಸಭಾ ಟೆರಿಟೊರಿಯ ಸಂಬಂಧದಲ್ಲಿ ಕ್ಷೇತ್ರ ಸೇವೆಗಾಗಿರುವ ಕೂಟಗಳ ಉದ್ದೇಶವೇನು? (ಬಿ) ಕ್ಷೇತ್ರ ಸೇವೆಗಾಗಿ ಕೂಟಗಳ ಅಗತ್ಯವನ್ನು ನಿರ್ಣಯಿಸಲು ಏನನ್ನು ಪರಿಗಣಿಸಸಾಧ್ಯವಿದೆ?
4 ಕೂಟಗಳನ್ನು ನಡೆಸುವುದು ಎಲ್ಲಿ ಮತ್ತು ಯಾವಾಗ? ಸಭಾ ಟೆರಿಟೊರಿಯನ್ನು ಪರಿಣಾಮಕಾರಿಯಾಗಿ ಆವರಿಸುವುದೇ ಈ ಕೂಟಗಳ ಉದ್ದೇಶ. ಇಡೀ ಸಭೆಯು ಒಂದೇ ಸ್ಥಳದಲ್ಲಿ ಕೂಡಿಬರುವ ಬದಲಾಗಿ ಈ ಕೂಟಗಳನ್ನು ಸಾಮಾನ್ಯವಾಗಿ ಅನುಕೂಲವಾದ ಸ್ಥಳದಲ್ಲಿ ಅಂದರೆ ಸಭಾ ಟೆರಿಟೊರಿಯ ಉದ್ದಕ್ಕೂ ಸಾಮಾನ್ಯವಾಗಿ ಸಹೋದರರ ಮನೆಗಳಲ್ಲಿ ನಡೆಸುವುದು ಒಳ್ಳೇದು. ಇದಕ್ಕಾಗಿ ರಾಜ್ಯ ಸಭಾಗೃಹಗಳನ್ನೂ ಉಪಯೋಗಿಸಬಹುದು. ಅನೇಕ ಸಭೆಗಳು ತಮ್ಮ ಭಾನುವಾರದ ಸಾರ್ವಜನಿಕ ಭಾಷಣ ಮತ್ತು ಕಾವಲಿನಬುರುಜು ಅಧ್ಯಯನದ ನಂತರ ಈ ಕ್ಷೇತ್ರ ಸೇವೆಗಾಗಿ ಕೂಟಕ್ಕೆ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತವೆ. ಟೆರಿಟೊರಿಗೆ ಪ್ರಯಾಣಮಾಡುವ ಸಮಯವನ್ನು ಕಡಿಮೆಗೊಳಿಸಲು ಪ್ರಯತ್ನಮಾಡಬೇಕು. ಆದ್ದರಿಂದ, ಟೆರಿಟೊರಿಯನ್ನು ಪರಿಣಾಮಕಾರಿಯಾಗಿ ಮತ್ತು ಪೂರ್ಣವಾಗಿ ಆವರಿಸಲು ಪ್ರಸ್ತುತ ಸ್ಥಳಗಳು ಉಚಿತವಾಗಿರುವವೋ ಎಂದು ಖಾತ್ರಿಪಡಿಸಲು ಆಗಿಂದಾಗ್ಗೆ ಏರ್ಪಾಡುಗಳನ್ನು ಪರಿಶೀಲಿಸಸಾಧ್ಯವಿದೆ.
5 ಈ ಕೂಟಗಳನ್ನು ನಡೆಸಲಿಕ್ಕಾಗಿ ಉತ್ತಮ ಸಮಯ ಯಾವುದು ಮತ್ತು ವಾರದಲ್ಲಿ ಎಷ್ಟು ಸಲ ಅವನ್ನು ನಡೆಸಬೇಕೆಂಬದು ಟೆರಿಟೊರಿಯ ಪರಿಸ್ಥಿತಿಯ ಮೇಲೆ ಹೊಂದಿಕೊಂಡಿದೆ. ಕ್ಷೇತ್ರ ಸೇವೆಗಾಗಿ ಕೂಟಗಳು ಎಲ್ಲಿ ಮತ್ತು ಯಾವಾಗ ನಡೆಸುವುದು ಉತ್ತಮ ಎಂಬುದನ್ನು ನಿರ್ಣಯಿಸಲಿಕ್ಕಾಗಿ ಕೆಳಗಿನ ಪ್ರಶ್ನೆಗಳು ಸಹಾಯಕಾರಿ.
6 ಯಾವ ಟೆರಿಟೊರಿಯಲ್ಲಿ ಇನ್ನೂ ಹೆಚ್ಚು ಸೇವೆಮಾಡುವ ಅಗತ್ಯವಿದೆ? ಮನೆಮನೆ ಸೇವೆಮಾಡಲು ಯಾವುದು ಸೂಕ್ತ ಸಮಯ? ಸಂಜೆಯ ಸಮಯವನ್ನು ಮನೆಮನೆ ಸೇವೆಗಾಗಿ ಉಪಯೋಗಿಸಬೇಕೋ ಅಥವಾ ಪುನರ್ಭೇಟಿಗಳಿಗಾಗಿಯೋ? ಎಲ್ಲ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಸಭಾ ಸೂಚನಾ ಫಲಕದ ಮೇಲೆ ಹಾಕಬೇಕು. ತಮಗೆ ನೇಮಿತವಾದ ಟೆರಿಟೊರಿಯನ್ನು ಪೂರ್ಣವಾಗಿ ಆವರಿಸುವುದು ಎಲ್ಲ ರಾಜ್ಯ ಪ್ರಚಾರಕರ ಅಪೇಕ್ಷೆಯಾಗಿರಬೇಕು. ಎಷ್ಟರ ಮಟ್ಟಿಗೆ ಅಂದರೆ ಅಪೊಸ್ತಲ ಪೌಲನಂತೆ ನಾವು ಸಹ “ಇದುವರೆಗೂ ಸಾರದಿರುವ ಕ್ಷೇತ್ರವಿಲ್ಲ” ಎಂದು ಹೇಳಲು ಶಕ್ತರಾಗಬೇಕು.—ರೋಮ. 15:23.
7. ಕ್ಷೇತ್ರ ಸೇವಾ ಗುಂಪನ್ನು ಸೇವೆಗೆ ಒಯ್ಯಲು ನೇಮಕವಾದವನಿಗೆ ಯಾವ ಜವಾಬ್ದಾರಿಕೆ ಇದೆ?
7 ಕ್ಷೇತ್ರ ಸೇವೆಗಾಗಿ ಕೂಟಗಳನ್ನು ನಡೆಸುವುದು: ಈ ಕೂಟವನ್ನು ನಡೆಸಲು ನೇಮಕವಾಗಿರುವ ಸಹೋದರನು ಚೆನ್ನಾಗಿ ತಯಾರಿಸುವ ಮೂಲಕ ಈ ದೇವಪ್ರಭುತ್ವಾತ್ಮಕ ಏರ್ಪಾಡಿಗೆ ಆಳವಾದ ಗೌರವವನ್ನು ತೋರಿಸುತ್ತಾನೆ. ಈ ಕೂಟಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಬೇಕು. ಅವು ಬೋಧಪ್ರದವೂ ಸಂಕ್ಷಿಪ್ತವೂ ಆಗಿರಬೇಕು. 10-15 ನಿಮಿಷಗಳಲ್ಲಿ ಮುಗಿಸಬೇಕು. ಕೂಟದ ಆರಂಭಕ್ಕೆ ಮುಂಚೆ ಯಾವ ಟೆರಿಟೊರಿಯಲ್ಲಿ ಗುಂಪು ಸೇವೆಮಾಡಲಿದೆ ಎಂದು ನಿರ್ವಾಹಕನಿಗೆ ಗೊತ್ತಿರಬೇಕು. ಕ್ಷೇತ್ರ ಸೇವೆಗಾಗಿ ಕೂಟವು ಮುಗಿದ ಮೇಲೆ ತಡವಾಗಿ ಬರುವವರಿಗಾಗಿ ಕಾಯುವ ಅಗತ್ಯವಿಲ್ಲದಿದ್ದರೂ ಗುಂಪು ಎಲ್ಲಿ ಸೇವೆಮಾಡುತ್ತದೆ ಎಂಬ ಮಾಹಿತಿಯನ್ನು ಅವರಿಗಾಗಿ ಬಿಟ್ಟುಹೋಗುವುದು ಸಹಾಯಕರ. ಕೂಟ ಮುಗಿದ ಮೇಲೆ ಬೇಗನೆ ಎಲ್ಲರೂ ತಮ್ಮ ನೇಮಿತ ಟೆರಿಟೊರಿಗೆ ಹೊರಡಬೇಕು. ಒಂದು ಸುಸಂಘಟಿತ ಹಾಗೂ ಬೋಧಪ್ರದ ಕ್ಷೇತ್ರ ಸೇವಾ ಕೂಟವು ಹಾಜರಾಗುವ ಎಲ್ಲರಿಗೆ ಆ ದಿನದ ಸೇವೆಯನ್ನು ನಿರ್ವಹಿಸಲು ಬೇಕಾದ ಮಾರ್ಗದರ್ಶನವನ್ನು ಒದಗಿಸುವುದು ನಿಶ್ಚಯ.—ಜ್ಞಾನೋ. 11:14.
8. ಕ್ಷೇತ್ರ ಸೇವೆಯ ಕೂಟಗಳನ್ನು ಹಾಜರಾಗುವವರು ನೇತೃತ್ವವನ್ನು ವಹಿಸುವವರಿಗೆ ಯಾವ ವಿಧಗಳಲ್ಲಿ ಸಹಕಾರ ನೀಡಸಾಧ್ಯ?
8 ಕ್ಷೇತ್ರ ಸೇವೆಗಾಗಿರುವ ಕೂಟಗಳಿಗೆ ಹಾಜರಾಗುವುದು: ಸಹಕಾರವು ಅತ್ಯಾವಶ್ಯಕ. (ಇಬ್ರಿ. 13:17) ತಮ್ಮೊಂದಿಗೆ ಸೇವೆಮಾಡಲು ಬೇರೆ ಯಾರಾದರೂ ಬೇಕು ಎಂದು ಬಯಸುವ ಯಾವನಿಗಾದರೂ ಗುಂಪನ್ನು ಸಂಘಟಿಸುವವನು ಸಾಧ್ಯವಾದಾಗಲ್ಲೆಲ್ಲಾ ಸಹಾಯಮಾಡುವನು. ಹೆಚ್ಚು ಅನುಭವವಿಲ್ಲದ ಮತ್ತು ಹೊಸ ಪ್ರಚಾರಕರಿಗೆ ಸಹಾಯಮಾಡಲು ಅನುಭವಸ್ಥ ಪ್ರಚಾರಕನು ಅಲ್ಲಿರುವುದು ಒಳ್ಳೆಯದು. ಕೆಲವೊಮ್ಮೆ ಬೇರೆಯವರೊಂದಿಗೆ ಸೇವೆಮಾಡುವಂತೆ ನೇಮಿಸಲ್ಪಡಲು ಸಿದ್ಧಮನಸ್ಸಿರುವ ಪ್ರಚಾರಕರು ಎಷ್ಟೋ ಒಳ್ಳೇದನ್ನು ಪೂರೈಸ ಶಕ್ತರಾಗುವರು. (ಜ್ಞಾನೋ. 27:17; ರೋಮ. 15:1, 2) ಸಮಯಕ್ಕೆ ಸರಿಯಾಗಿ ಬರುವಂತೆ ಎಲ್ಲರೂ ಹೆಚ್ಚು ಪ್ರಯಾಸಪಡಬೇಕು. ಈ ದೇವಪ್ರಭುತ್ವಾತ್ಮಕ ಏರ್ಪಾಡಿಗೆ ನಮ್ಮ ಗೌರವ ಮತ್ತು ಜೊತೆ ಕೆಲಸಗಾರರಿಗಾಗಿ ಪರಿಗಣನೆಯು ಈ ವಿಷಯದಲ್ಲಿ ಬೇಕಾದ ಹೊಂದಾಣಿಕೆಗಳನ್ನು ಮಾಡುವಂತೆ ನಮ್ಮನ್ನು ಪ್ರೇರಿಸುವುದು.—2 ಕೊರಿಂ. 6:3, 4; ಫಿಲಿ. 2:4.
9. ಪಯನೀಯರರು ಈ ಏರ್ಪಾಡನ್ನು ಯಾವ ಬೆಲೆಯುಳ್ಳ ವಿಧಗಳಲ್ಲಿ ಬೆಂಬಲಿಸಬಲ್ಲರು?
9 ಪಯನೀಯರರ ಬೆಂಬಲ: ಕ್ಷೇತ್ರ ಸೇವೆಗಾಗಿರುವ ಕೂಟಗಳಲ್ಲಿ ಪಯನೀಯರರು ನೀಡುವ ಬೆಂಬಲವು ಬೆಲೆಯುಳ್ಳದ್ದೂ ಎಲ್ಲರಿಗೂ ಉತ್ತೇಜಕವೂ ಆಗಿದೆ. ಪಯನೀಯರರಿಗೆ ಅನೇಕ ಜವಾಬ್ದಾರಿಗಳಿವೆ ನಿಜ. ಬೈಬಲ್ ಅಧ್ಯಯನಗಳನ್ನು ನಡೆಸುವುದು, ಪುನರ್ಭೇಟಿಗಳನ್ನು ಮಾಡುವುದು ಅಲ್ಲದೆ ಅವರ ನಿತ್ಯದ ಶೆಡ್ಯೂಲಿನಲ್ಲಿ ತಮ್ಮ ಕುಟುಂಬ ಜವಾಬ್ದಾರಿಗಳು ಮತ್ತು ಉದ್ಯೋಗದ ನಿರ್ವಹಣೆಯೂ ಸೇರಿದೆ. ಆದ್ದರಿಂದ ಸಭೆಯಿಂದ ಸಂಘಟಿಸಲ್ಪಡುವ ಕ್ಷೇತ್ರ ಸೇವೆಗಾಗಿರುವ ಎಲ್ಲ ಕೂಟವನ್ನು ಪಯನೀಯರರು ಅವಶ್ಯವಾಗಿ ಬೆಂಬಲಿಸಬೇಕು ಎಂದು ಭಾವಿಸಬಾರದು, ವಿಶೇಷವಾಗಿ ಅಂಥ ಕೂಟವು ಪ್ರತಿದಿನ ನಡೆಯುತ್ತಿರುವುದಾದರೆ. ಆದರೂ ಪ್ರತಿವಾರ ಕಡಿಮೆಪಕ್ಷ ಕೆಲವು ಕೂಟಗಳನ್ನಾದರೂ ಬೆಂಬಲಿಸಲು ಪಯನೀಯರರಿಗೆ ಸಾಧ್ಯವಾಗಬಹುದು. ಕ್ಷೇತ್ರ ಸೇವೆಗಾಗಿ ಕೂಟಗಳು ಒಂದು ರೀತಿಯಲ್ಲಿ ತರಬೇತಿಯನ್ನು ಕೊಡುವ ಕೂಟಗಳಾಗಿವೆ. ಪಯನೀಯರರ ಆಧ್ಯಾತ್ಮಿಕ ಹಿನ್ನೆಲೆ ಮತ್ತು ಅನುಭವವು ಇತರರಿಗೆ ದೊಡ್ಡ ಸಹಾಯವಾಗಿ ಪರಿಣಮಿಸಬಲ್ಲದು. ಕ್ಷೇತ್ರ ಸೇವೆಯಲ್ಲಿ ಸದಾ ಭಾಗವಹಿಸುವುದರಿಂದ ಶುಶ್ರೂಷೆಯಲ್ಲಿ ತುಂಬಾ ಅನುಭವ ಅವರಿಗಿದೆ. ಈ ಅನುಭವವನ್ನು ಅವರು ಹಂಚಿಕೊಳ್ಳಬಲ್ಲರು. ಶುಶ್ರೂಷೆಯಲ್ಲಿ ಮತ್ತು ಕ್ಷೇತ್ರ ಸೇವಾ ಕೂಟಗಳಲ್ಲಿ ಅವರ ಹುರುಪಿನ ಭಾಗವಹಿಸುವಿಕೆಯು ಅವರನ್ನು ಅನುಸರಿಸತಕ್ಕ ಒಂದು ಮಾದರಿಯನ್ನಾಗಿ ಮಾಡಿದೆ. ಈ ಕ್ಷೇತ್ರ ಸೇವೆಗಾಗಿ ಕೂಟಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಅತಿಯಾಗಿ ಗಣ್ಯಮಾಡಲಾಗುತ್ತದೆ.
10. ಈ ಏರ್ಪಾಡಿಗೆ ಎಲ್ಲ ರಾಜ್ಯ ಪ್ರಚಾರಕರು ಹೃತ್ಪೂರ್ವಕ ಬೆಂಬಲವನ್ನು ಕೊಡುವುದು ಸೂಕ್ತವಾಗಿದೆ ಏಕೆ?
10 ಯೇಸು ಮತ್ತು ಅವನ ಶಿಷ್ಯರ ವಿಷಯದಲ್ಲಿ ಹೇಗೋ ಹಾಗೆ ನಮ್ಮ ರಾಜ್ಯ ಸಾರುವಿಕೆಯ ಅಧಿಕ ಭಾಗವು ಮನೆಮನೆ ಸಾಕ್ಷಿಕಾರ್ಯದ ಮೂಲಕ ಪೂರೈಸಲ್ಪಡುತ್ತದೆ. ಕ್ಷೇತ್ರ ಸೇವೆಗಾಗಿ ಕೂಟಗಳು ಪರಸ್ಪರ ಉತ್ತೇಜನಕ್ಕಾಗಿ ಹಾಗೂ ಆ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳುವ ಉದ್ದೇಶಕ್ಕಾಗಿ ಇವೆ. ಸುವಾರ್ತೆಯ ಪ್ರಚಾರಕರೆಲ್ಲರೂ ಈ ದೇವಪ್ರಭುತ್ವಾತ್ಮಕ ಏರ್ಪಾಡುಗಳಿಗೆ ಸಾಧ್ಯವಾದಷ್ಟು ಹೆಚ್ಚು ಬೆಂಬಲವನ್ನು ಕೊಡತಕ್ಕದ್ದು. (ಅ. ಕಾ. 5:42; 20:20) ಆದ್ದರಿಂದ ಈ ಕೂಟಗಳಿಗೆ ಹೃತ್ಪೂರ್ವಕ ಬೆಂಬಲಕೊಡಲು ಬೇಕಾದ ಹೊಂದಾಣಿಕೆಗಳನ್ನು ಮಾಡೋಣ. ಹಾಗೆ ಮಾಡುವ ಮೂಲಕ ಯೆಹೋವನ ಹೇರಳ ಆಶೀರ್ವಾದವು ನಮಗೆ ದೊರಕುವುದು. ಹೀಗೆ ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಹೋಗುವಾಗ ನಮ್ಮ ನಾಯಕನಾದ ಯೇಸು ಕ್ರಿಸ್ತನ ಹೃದಯವನ್ನೂ ಸಂತೋಷಪಡಿಸುವೆವು.—ಮತ್ತಾ. 25:34-40; 28:19, 20.