ಅಧ್ಯಯನ ಲೇಖನ 20
ಗೀತೆ 92 “ವಾಕ್ಯವನ್ನು ಸಾರು”
ಸಾರುತ್ತಾ ಇರೋಕೆ ಪ್ರೀತಿ ನಿಮ್ಮನ್ನ ಪ್ರೇರಿಸಲಿ!
“ಎಲ್ಲ ದೇಶಗಳಲ್ಲಿ ಮೊದಲು ಸಿಹಿಸುದ್ದಿ ಸಾರಬೇಕು.” —ಮಾರ್ಕ 13:10.
ಈ ಲೇಖನದಲ್ಲಿ ಏನಿದೆ?
ಹುರುಪಿಂದ ಮತ್ತು ಪೂರ್ತಿ ಮನಸ್ಸಿಂದ ಸಿಹಿಸುದ್ದಿ ಸಾರೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.
1. 2023ರ ವಾರ್ಷಿಕ ಕೂಟದಲ್ಲಿ ನಾವೇನು ಕಲಿತ್ವಿ?
ನಾವು 2023ರ ವಾರ್ಷಿಕ ಕೂಟದಲ್ಲಿa ಹೊಸ ತಿಳುವಳಿಕೆ ಬಗ್ಗೆ ಮತ್ತು ಸೇವೆಯಲ್ಲಾದ ಕೆಲವು ಬದಲಾವಣೆಗಳ ಬಗ್ಗೆ ತಿಳ್ಕೊಂಡ್ವಿ. ಉದಾಹರಣೆಗೆ, ಮಹಾ ಬಾಬೆಲ್ ನಾಶ ಆದ್ಮೇಲೆ ಕೆಲವ್ರಿಗೆ ಯೆಹೋವನ ಬಗ್ಗೆ ಕಲಿತು ಆತನ ಪಕ್ಷ ನಿಲ್ಲೋ ಅವಕಾಶ ಸಿಗುತ್ತೆ ಅಂತ ಕಲಿತ್ವಿ. ಅಷ್ಟೇ ಅಲ್ಲ ನವೆಂಬರ್ 2023ರಿಂದ ಪ್ರಚಾರಕರು ತಾಸುಗಳನ್ನ ವರದಿ ಮಾಡೋ ಅವಶ್ಯಕತೆ ಇಲ್ಲ ಅಂತನೂ ತಿಳ್ಕೊಂಡ್ವಿ. ಅದ್ರ ಅರ್ಥ ಇನ್ನು ಮುಂದೆ ನಾವು ಸೇವೆಗೆ ಅಷ್ಟು ಪ್ರಾಮುಖ್ಯತೆ ಕೊಡಬೇಕಾಗಿಲ್ಲ ಅಂತನಾ? ಖಂಡಿತ ಅಲ್ಲ!
2. ದಿನ ಕಳೆದ ಹಾಗೆ ಸಿಹಿಸುದ್ದಿ ಸಾರೋದನ್ನ ನಾವ್ಯಾಕೆ ಜಾಸ್ತಿ ಮಾಡಬೇಕು? (ಮಾರ್ಕ 13:10)
2 ದಿನ ಹೋದ ಹಾಗೆ ನಾವು ಸಾರೋ ಕೆಲಸ ಜಾಸ್ತಿ ಮಾಡಬೇಕು. ಯಾಕೆ? ಯಾಕಂದ್ರೆ ನಮಗಿನ್ನು ಜಾಸ್ತಿ ಸಮಯ ಇಲ್ಲ. ಕೊನೇ ದಿನಗಳಲ್ಲಿ ನಡಿಯೋ ಸಾರೋ ಕೆಲಸದ ಬಗ್ಗೆ ಯೇಸು ಮುಂಚೆನೇ ಹೇಳಿದ್ದನು. (ಮಾರ್ಕ 13:10 ಓದಿ.) “ಅಂತ್ಯ” ಬರೋ ಮುಂಚೆ ಲೋಕದ ಎಲ್ಲಾ ಜನ್ರಿಗೆ ಸಿಹಿಸುದ್ದಿ ಸಾರಲಾಗುತ್ತೆ ಅಂತ ಯೇಸು ಹೇಳಿದನು. ಇದು ಮತ್ತಾಯ ಪುಸ್ತಕದಲ್ಲಿದೆ. (ಮತ್ತಾ. 24:14) ಇಲ್ಲಿ ಹೇಳಿರೋ ಅಂತ್ಯ ಸೈತಾನನ ದುಷ್ಟ ಲೋಕ ಕೊನೆ ಆಗೋದನ್ನ ಸೂಚಿಸುತ್ತೆ. ಈ ಅಂತ್ಯ ಬರೋ “ದಿನ ಮತ್ತು ಸಮಯ” ಯೆಹೋವ ಈಗಾಗ್ಲೇ ನಿಶ್ಚಯಿಸಿದ್ದಾನೆ. (ಮತ್ತಾ. 24:36; 25:13; ಅ. ಕಾ. 1:7) ಅಷ್ಟೇ ಅಲ್ಲ ದಿನ ಹೋದ ಹಾಗೆ ನಾವು ಅಂತ್ಯಕ್ಕೆ ಹತ್ರ ಆಗ್ತಾ ಇದ್ದೀವಿ. (ರೋಮ. 13:11) ಹಾಗಾಗಿ ಅಂತ್ಯ ಬರೋ ತನಕ ನಾವು ಸಾರುತ್ತಾನೇ ಇರಬೇಕು.
3. ನಾವ್ಯಾಕೆ ಸಿಹಿಸುದ್ದಿ ಸಾರುತ್ತೀವಿ?
3 ಸಿಹಿಸುದ್ದಿ ಸಾರೋ ವಿಷ್ಯದಲ್ಲಿ ನಾವೆಲ್ರೂ ಒಂದು ಪ್ರಾಮುಖ್ಯ ಪ್ರಶ್ನೆ ಬಗ್ಗೆ ಯೋಚ್ನೆ ಮಾಡಬೇಕು. ನಾವ್ಯಾಕೆ ಸಾರುತ್ತೀವಿ? ಪ್ರೀತಿ ಇರೋದ್ರಿಂದ. ನಾವು ಸಿಹಿಸುದ್ದಿಯನ್ನ ಪ್ರೀತಿಸೋದ್ರಿಂದ, ಜನ್ರನ್ನ ಪ್ರೀತಿಸೋದ್ರಿಂದ, ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನನ್ನ ಮತ್ತು ಆತನ ಹೆಸ್ರನ್ನ ಪ್ರೀತಿಸೋದ್ರಿಂದ ಸಿಹಿಸುದ್ದಿಯನ್ನ ಸಾರುತ್ತೀವಿ. ಈಗ ಒಂದೊಂದಾಗಿ ಇದ್ರ ಬಗ್ಗೆ ಚರ್ಚಿಸೋಣ.
ಸಿಹಿಸುದ್ದಿಯನ್ನ ಪ್ರೀತಿಸೋದ್ರಿಂದ ನಾವು ಸಾರುತ್ತೀವಿ
4. ಒಳ್ಳೇ ಸುದ್ದಿ ಕೇಳಿಸ್ಕೊಂಡಾಗ ನಮಗೆ ಹೇಗೆ ಅನಿಸುತ್ತೆ?
4 ನಿಮ್ಮ ಕುಟುಂಬದಲ್ಲಿ ಒಂದು ಮಗು ಹುಟ್ಟಿದಾಗ, ತುಂಬ ಸಮಯದಿಂದ ಕಾಯ್ತಿದ್ದ ಒಂದು ಕೆಲಸ ಸಿಕ್ಕಾಗ ನಿಮಗೆ ಹೇಗೆ ಅನಿಸುತ್ತೆ? ತುಂಬ ಖುಷಿ ಆಗುತ್ತೆ ಅಲ್ವಾ! ನಿಮ್ಮ ಕುಟುಂಬದವ್ರಿಗೆ, ಸ್ನೇಹಿತರಿಗೆ ಅದನ್ನ ಹೇಳ್ತೀರ ಅಲ್ವಾ? ದೇವರ ಆಳ್ವಿಕೆಯ ಸಿಹಿಸುದ್ದಿ ಅನ್ನೋ ಒಳ್ಳೇ ಸುದ್ದಿಯನ್ನ ಕೇಳಿಸ್ಕೊಂಡಾಗ್ಲೂ ನಿಮಗೆ ಹೀಗೇ ಅನಿಸ್ತಾ?
5. ಮೊದಮೊದ್ಲು ಬೈಬಲಿನಿಂದ ಸತ್ಯ ಕಲಿತಾಗ ನಿಮಗೆ ಹೇಗೆ ಅನಿಸ್ತು? (ಚಿತ್ರಗಳನ್ನ ನೋಡಿ.)
5 ನೀವು ಮೊದಮೊದ್ಲು ಬೈಬಲ್ ಸತ್ಯಗಳನ್ನ ಕಲಿತಾಗ ನಿಮಗೆ ಹೇಗೆ ಅನಿಸ್ತು ಅಂತ ನೆನಪಿಸ್ಕೊಳ್ಳಿ. ಯೆಹೋವ ದೇವರು ನಿಮ್ಮನ್ನ ತುಂಬ ಪ್ರೀತಿಸ್ತಾನೆ, ಆತನ ಕುಟುಂಬದ ಭಾಗವಾಗಬೇಕು ಅಂತ ಆಸೆಪಡ್ತಾನೆ ಅಂತ ನೀವು ತಿಳ್ಕೊಂಡ್ರಿ. ಅಷ್ಟೇ ಅಲ್ಲ ನಿಮ್ಮ ಕಷ್ಟ, ನೋವನ್ನೆಲ್ಲ ಆತನು ತೆಗೆದುಹಾಕ್ತಾನೆ ಮತ್ತು ನೀವು ಪ್ರೀತಿಸೋ ಜನ್ರು ತೀರಿ ಹೋದ್ರೂ ಅವ್ರಿಗೆ ಮತ್ತೆ ಹೊಸ ಲೋಕದಲ್ಲಿ ಜೀವ ಕೊಡ್ತಾನೆ ಅಂತನೂ ಕಲಿತ್ರಿ. (ಮಾರ್ಕ 10:29, 30; ಯೋಹಾ. 5:28, 29; ರೋಮ. 8:38, 39; ಪ್ರಕ. 21:3, 4) ಆಗ ನಿಮ್ಮ ಮನಸ್ಸಿಗೆ ತುಂಬ ಖುಷಿಯಾಗಿತ್ತು ಅಲ್ವಾ? (ಲೂಕ 24:32) ಅದಕ್ಕೇ ನೀವು ಕಲಿತ ವಿಷ್ಯಗಳನ್ನ ತುಂಬ ಪ್ರೀತಿಸಿದ್ರಿ ಮತ್ತು ಅದನ್ನ ಬೇರೆಯವ್ರಿಗೂ ಹೇಳಬೇಕು ಅಂತ ನಿಮಗೆ ಅನಿಸ್ತು.—ಯೆರೆಮೀಯ 20:9 ಹೋಲಿಸಿ.
6. ಅರ್ನೆಸ್ಟ್ ಮತ್ತು ರೋಸ್ನ ಅನುಭವದಿಂದ ನೀವೇನು ಕಲಿತ್ರಿ?
6 ಅರ್ನೆಸ್ಟ್b ಅನ್ನೋ ಸಹೋದರನ ಅನುಭವ ನೋಡಿ. ಅವ್ರಿಗೆ 10 ವರ್ಷ ಇದ್ದಾಗ ಅವ್ರ ಅಪ್ಪ ತೀರಿಕೊಂಡ್ರು. ಅದ್ರ ಬಗ್ಗೆ ಅವರು ಏನು ಹೇಳ್ತಾರೆ ನೋಡಿ: “ಅಪ್ಪನಿಗೆ ಏನಾಗಿದೆ ಅಂತ ತಿಳ್ಕೊಳೋ ಆಸೆ ನನಗಿತ್ತು. ಅದಕ್ಕೆ ‘ಅವ್ರೇನಾದ್ರೂ ಸ್ವರ್ಗಕ್ಕೆ ಹೋಗಿದ್ದಾರಾ? ಅವ್ರನ್ನ ನಾನು ಮತ್ತೆ ನೋಡಕ್ಕೇ ಆಗಲ್ವಾ?’ ಅಂತೆಲ್ಲಾ ಯೋಚಿಸ್ತಿದ್ದೆ. ಬೇರೆ ಮಕ್ಕಳು ಅವ್ರ ಅಪ್ಪನ ಜೊತೆ ಇರೋದನ್ನ ನೋಡ್ದಾಗೆಲ್ಲ ನಂಗೆ ಹೊಟ್ಟೆಕಿಚ್ಚಾಗ್ತಿತ್ತು.” ತುಂಬ ವರ್ಷಗಳ ತನಕ ಅವರು ಅಪ್ಪನ ಸಮಾಧಿ ಹತ್ರ ಹೋಗಿ ಮೊಣಕಾಲೂರಿ “ದೇವ್ರೇ, ನನ್ನ ಅಪ್ಪ ಎಲ್ಲಿದ್ದಾರೆ, ಅದು ನಂಗೆ ಗೊತ್ತಾಗಬೇಕು” ಅಂತ ಪ್ರಾರ್ಥಿಸ್ತಿದ್ರು. ಅವ್ರ ಅಪ್ಪ ತೀರಿ ಹೋಗಿ 17 ವರ್ಷ ಆದ್ಮೇಲೆ ಅವ್ರಿಗೆ ಸತ್ಯ ಸಿಕ್ತು ಮತ್ತು ಅವರು ಬೈಬಲ್ ಕಲಿಯೋಕೆ ಶುರುಮಾಡಿದ್ರು. ಸತ್ತವ್ರಿಗೆ ಏನೂ ಗೊತ್ತಾಗಲ್ಲ, ಅವರು ಗಾಢ ನಿದ್ದೆಯಲ್ಲಿದ್ದಾರೆ. ಅಷ್ಟೇ ಅಲ್ಲ ಅವರು ಮತ್ತೆ ಎದ್ದು ಬರ್ತಾರೆ ಅನ್ನೋ ವಿಷ್ಯ ಬೈಬಲಿನಿಂದ ಗೊತ್ತಾದಾಗ ಅರ್ನೆಸ್ಟ್ಗೆ ತುಂಬ ಖುಷಿ ಆಯ್ತು. (ಪ್ರಸಂ. 9:5, 10; ಅ. ಕಾ. 24:15) ತುಂಬ ವರ್ಷಗಳಿಂದ ಅವ್ರನ್ನ ಕಾಡ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ರ ಸಿಕ್ತು. ಅದಕ್ಕೇ ಅವ್ರ ಹೆಂಡತಿ ರೋಸ್ ಕೂಡ ಬೈಬಲ್ ಕಲಿಯೋಕೆ ಶುರು ಮಾಡಿದ್ರು. ಅವ್ರಿಬ್ರಿಗೂ ಕಲಿತ ವಿಷ್ಯಗಳು ಇಷ್ಟ ಆಗಿದ್ರಿಂದ 1978ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಅಷ್ಟೇ ಅಲ್ಲ ಕಲಿತ ವಿಷ್ಯಗಳನ್ನ ಕುಟುಂಬದವ್ರಿಗೆ, ಸ್ನೇಹಿತರಿಗೆ ಮತ್ತು ಬೇರೆಯವ್ರಿಗೆ ಹೇಳಿದ್ರು. ಇದ್ರಿಂದ 70ಕ್ಕಿಂತ ಜಾಸ್ತಿ ಜನ ದೀಕ್ಷಾಸ್ನಾನ ತಗೊಂಡ್ರು.
7. ಬೈಬಲ್ ಸತ್ಯಗಳನ್ನ ಪ್ರೀತಿಸೋಕೆ ಶುರು ಮಾಡಿದಾಗ ನಾವೇನು ಮಾಡ್ತೀವಿ? (ಲೂಕ 6:45)
7 ನಾವು ಬೈಬಲ್ ಸತ್ಯಗಳನ್ನ ಪ್ರೀತಿಸೋಕೆ ಶುರು ಮಾಡಿದ್ಮೇಲೆ ಅದನ್ನ ಬೇರೆಯವ್ರಿಗೆ ಹೇಳಲೇಬೇಕು ಅಂತ ನಮಗೆ ಅನಿಸುತ್ತೆ. (ಲೂಕ 6:45 ಓದಿ.) ಅದಕ್ಕೇ ಒಂದನೇ ಶತಮಾನದ ಯೇಸುವಿನ ಶಿಷ್ಯರು “ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ” ಅಂದ್ರು. ನಮಗೂ ಅವ್ರ ತರಾನೇ ಅನಿಸುತ್ತೆ ಅಲ್ವಾ? (ಅ. ಕಾ. 4:20) ನಾವು ಬೈಬಲ್ ಸತ್ಯಗಳನ್ನ ಪ್ರೀತಿಸೋದ್ರಿಂದ ನಮ್ಮಿಂದ ಸಾಧ್ಯ ಆದಷ್ಟು ಜನ್ರಿಗೆ ಈ ಸತ್ಯನ ತಿಳಿಸೋಕೆ ಪ್ರಯತ್ನ ಮಾಡ್ತೀವಿ.
ಜನ್ರನ್ನ ಪ್ರೀತಿಸೋದ್ರಿಂದ ನಾವು ಸಾರುತ್ತೀವಿ
8. ನಾವು ಯಾಕೆ ಜನ್ರಿಗೆ ಸಿಹಿಸುದ್ದಿ ಸಾರುತ್ತೀವಿ? (“ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ” ಅನ್ನೋ ಚೌಕ ನೋಡಿ.) (ಚಿತ್ರ ನೋಡಿ.)
8 ಯೆಹೋವ ದೇವರ ತರ ಮತ್ತು ಆತನ ಮಗನ ತರ ನಾವೂ ಜನ್ರನ್ನ ಪ್ರೀತಿಸ್ತೀವಿ. (ಜ್ಞಾನೋ. 8:31; ಯೋಹಾ. 3:16) ‘ನಿರೀಕ್ಷೆ ಇಲ್ಲದ ಮತ್ತು ದೇವರು ಯಾರಂತ ಗೊತ್ತಿಲ್ಲದ’ ಜನ್ರನ್ನ ನೋಡಿದಾಗ ನಮಗೆ ಪಾಪ ಅನಿಸುತ್ತೆ, ಬೇಜಾರ್ ಆಗುತ್ತೆ. (ಎಫೆ. 2:12) ಜೀವನದ ಚಿಂತೆಗಳಲ್ಲಿ ಮುಳುಗಿ ಹೋಗಿರೋ ಅವ್ರನ್ನ ಕಾಪಾಡೋ ಸಂದೇಶ ನಮ್ಮ ಹತ್ರ ಇದೆ. ಅದೇ ದೇವರ ಆಳ್ವಿಕೆಯ ಸಿಹಿಸುದ್ದಿ. ಅಂಥ ಜನ್ರ ಮೇಲೆ ಪ್ರೀತಿ ಮತ್ತು ಕರುಣೆ ಇರೋದ್ರಿಂದ ಅವ್ರಿಗೆ ಸಿಹಿಸುದ್ದಿ ಸಾರೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತೀವಿ. ಈ ಸಿಹಿಸುದ್ದಿಯನ್ನ ಅವರು ಕೇಳಿಸ್ಕೊಂಡಾಗ ಅವ್ರಿಗೆ ನಿರೀಕ್ಷೆ ಸಿಗುತ್ತೆ. ಈಗ ಖುಷಿಖುಷಿಯಾಗಿ ಜೀವನ ಮಾಡೋಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ಅವ್ರಿಗೆ “ನಿಜವಾದ ಜೀವನ” ಸಿಗುತ್ತೆ. ಅಂದ್ರೆ ಅವರು ಹೊಸ ಲೋಕದಲ್ಲಿ ಶಾಶ್ವತವಾಗಿ ಜೀವಿಸೋ ಅವಕಾಶ ಪಡ್ಕೊಳ್ತಾರೆ.—1 ತಿಮೊ. 6:19.
9. ಭವಿಷ್ಯದ ಬಗ್ಗೆ ಜನ್ರಿಗೆ ನಾವು ಯಾವ ಎಚ್ಚರಿಕೆ ಕೊಡ್ತೀವಿ ಮತ್ತು ಯಾಕೆ? (ಯೆಹೆಜ್ಕೇಲ 33:7, 8)
9 ನಮಗೆ ಜನ್ರ ಮೇಲೆ ಪ್ರೀತಿ ಇರೋದ್ರಿಂದಾನೇ ಈ ಕೆಟ್ಟ ಲೋಕ ನಾಶ ಆಗುತ್ತೆ ಅಂತ ಅವ್ರಿಗೆ ಹೇಳ್ತೀವಿ. (ಯೆಹೆಜ್ಕೇಲ 33:7, 8 ಓದಿ.) ಸತ್ಯದಲ್ಲಿ ಇಲ್ಲದೆ ಇರೋ ನಮ್ಮ ಕುಟುಂಬದವ್ರ ಮೇಲೆ, ಎಲ್ಲ ಜನ್ರ ಮೇಲೆ ನಮಗೆ ಪ್ರೀತಿ ಕಾಳಜಿ ಇದೆ. ತುಂಬ ಜನ್ರು ತಮ್ಮ ಜೀವನದಲ್ಲಿ ಎಷ್ಟು ಮುಳುಗಿ ಹೋಗಿದ್ದಾರೆ ಅಂದ್ರೆ ಮುಂದೆ “ಮಹಾ ಸಂಕಟ ಇರುತ್ತೆ. ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ. ಇನ್ನು ಮುಂದೆನೂ ಬರಲ್ಲ” ಅನ್ನೋ ವಿಷ್ಯಾನೇ ಅವ್ರಿಗೆ ಗೊತ್ತಿಲ್ಲ. (ಮತ್ತಾ. 24:21) ಅದಕ್ಕೇ ನಾವು ಅವ್ರಿಗೆ ದೇವರು ನ್ಯಾಯತೀರ್ಪು ಮಾಡುವಾಗ ಸುಳ್ಳು ಧರ್ಮನ ತೆಗೆದುಹಾಕ್ತಾನೆ ಮತ್ತು ಈ ಕೆಟ್ಟ ಲೋಕನ ಹರ್ಮಗೆದೋನ್ ಯುದ್ಧದಲ್ಲಿ ನಾಶ ಮಾಡ್ತಾನೆ ಅಂತ ಹೇಳಬೇಕು. (ಪ್ರಕ. 16:14, 16; 17:16, 17; 19:11, 19, 20) ನಾವು ಹೇಳೋ ಎಚ್ಚರಿಕೆಯ ಸಂದೇಶನ ಜನ್ರು ಕೇಳಿಸ್ಕೊಬೇಕು, ನಮ್ಮ ಜೊತೆ ಅವರೂ ಯೆಹೋವನನ್ನ ಆರಾಧನೆ ಮಾಡಬೇಕು ಅನ್ನೋದೇ ನಮ್ಮ ಆಸೆ. ಆದ್ರೆ ನಾವು ಹೇಳೋದನ್ನ ಕೇಳಿಸ್ಕೊಳ್ಳದೆ ಇರೋರಿಗೆ ಏನಾಗುತ್ತೆ?
10. ನಾವು ಎಚ್ಚರಿಕೆಯ ಸಂದೇಶ ಹೇಳ್ತಾ ಇರೋದು ಯಾಕೆ ಮುಖ್ಯ?
10 ಮಹಾ ಬಾಬೆಲ್ ನಾಶ ಆಗೋದನ್ನ ನೋಡಿ ಕೆಲವು ಒಳ್ಳೆ ಮನಸ್ಸಿನ ಜನ್ರು ಯೆಹೋವನ ಮೇಲೆ ನಂಬಿಕೆ ಇಡಬಹುದು. ಅಂಥವ್ರನ್ನ ಯೆಹೋವ ಕಾಪಾಡಬಹುದು ಅಂತ ನಾವು ಹಿಂದಿನ ಲೇಖನದಲ್ಲಿ ನೋಡಿದ್ವಿ. ಅದಕ್ಕೇ ನಾವು ಈ ಸಂದೇಶನ ಜನ್ರಿಗೆ ಮುಂಚೆಗಿಂತ ಈಗ ಜಾಸ್ತಿ ಹೇಳಬೇಕು. ಒಂದು ವಿಷ್ಯ ನೆನಪಿಡಿ. ಈ ಸಂದೇಶ ಅವ್ರಿಗೆ ಆಗ ನೆನಪಿಗೆ ಬರಬೇಕು ಅಂದ್ರೆ ಅದನ್ನ ಈಗ್ಲೇ ನಾವು ಅವ್ರಿಗೆ ಹೇಳಿರಬೇಕು. (ಯೆಹೆಜ್ಕೇಲ 33:33 ಹೋಲಿಸಿ.) ಆಗ ಕೊನೆ ಕ್ಷಣದಲ್ಲಿ ಅವರು ಮನಸ್ಸು ಬದಲಾಯಿಸಿ ನಮ್ಮ ಜೊತೆ ಸೇರಿ ಯೆಹೋವನನ್ನ ಆರಾಧಿಸಬಹುದು. ಫಿಲಿಪ್ಪಿಯಲ್ಲಿದ್ದ ಜೈಲಿನ ಅಧಿಕಾರಿ “ದೊಡ್ಡ ಭೂಕಂಪ” ಆಗಿದ್ದನ್ನ ನೋಡಿ ತನ್ನ ಮನಸ್ಸನ್ನ ಹೇಗೆ ಬದಲಾಯಿಸ್ಕೊಂಡನೋ ಹಾಗೇ ಮಹಾ ಬಾಬೆಲ್ ನಾಶ ಆಗುವಾಗ ಒಳ್ಳೆ ಮನಸ್ಸಿನ ಜನ್ರು ತಮ್ಮ ಮನಸ್ಸನ್ನ ಬದಲಾಯಿಸ್ಕೊಬಹುದು.—ಅ. ಕಾ. 16:25-34.
ಯೆಹೋವನನ್ನ ಮತ್ತು ಆತನ ಹೆಸ್ರನ್ನ ಪ್ರೀತಿಸೋದ್ರಿಂದ ನಾವು ಸಾರುತ್ತೀವಿ
11. ನಾವು ಹೇಗೆ ಯೆಹೋವ ದೇವರಿಗೆ ಗೌರವ, ಘನತೆ ಮತ್ತು ಶಕ್ತಿಯನ್ನ ಕೊಡ್ತೀವಿ? (ಪ್ರಕಟನೆ 4:11) (ಚಿತ್ರಗಳನ್ನ ನೋಡಿ.)
11 ನಾವು ಸಿಹಿಸುದ್ದಿ ಸಾರೋಕೆ ಮುಖ್ಯ ಕಾರಣ ಏನು? ಯೆಹೋವನ ಮೇಲೆ ಮತ್ತು ಆತನ ಪವಿತ್ರ ಹೆಸ್ರಿನ ಮೇಲೆ ನಮಗಿರೋ ಪ್ರೀತಿನೇ. ನಾವು ಸಿಹಿಸುದ್ದಿ ಸಾರುವಾಗ ನಮ್ಮ ಪ್ರೀತಿಯ ದೇವರಾದ ಯೆಹೋವನನ್ನ ಹೊಗಳ್ತೀವಿ. (ಪ್ರಕಟನೆ 4:11 ಓದಿ.) ಯೆಹೋವ ದೇವರು ಗೌರವ, ಘನತೆ, ಶಕ್ತಿ ಪಡ್ಕೊಳ್ಳೋಕೆ ಯೋಗ್ಯನಾಗಿದ್ದಾನೆ ಅಂತ ನಾವು ಮನಸಾರೆ ಒಪ್ಕೊಳ್ತೀವಿ. ಯೆಹೋವ ದೇವರೇ “ಎಲ್ಲವನ್ನೂ ಸೃಷ್ಟಿ” ಮಾಡಿದ್ದಾನೆ ಅಂತ ಬೇರೆಯವ್ರಿಗೆ ತಿಳಿಸುವಾಗ ಮತ್ತು ನಾವಿವತ್ತು ಜೀವಂತವಾಗಿರೋದು ಯೆಹೋವನಿಂದಾನೇ ಅಂತ ಒಪ್ಕೊಳ್ಳುವಾಗ ನಾವು ಆತನಿಗೆ ಗೌರವ ಮತ್ತು ಘನತೆ ಕೊಡ್ತೀವಿ. ಅಷ್ಟೇ ಅಲ್ಲ ನಮ್ಮ ಸಮಯ, ಶಕ್ತಿ, ಸಾಮರ್ಥ್ಯ ಮತ್ತು ವಸ್ತುಗಳನ್ನ ಉಪಯೋಗಿಸಿ ಆದಷ್ಟು ಜನ್ರಿಗೆ ಸಿಹಿಸುದ್ದಿ ಸಾರುವಾಗ ಯೆಹೋವ ದೇವರಿಗೆ ನಮ್ಮ ಶಕ್ತಿಯನ್ನೂ ಕೊಡ್ತೀವಿ. (ಮತ್ತಾ. 6:33; ಲೂಕ 13:24; ಕೊಲೊ. 3:23) ನಾವು ಯೆಹೋವ ದೇವರನ್ನ ಪ್ರೀತಿಸೋದ್ರಿಂದ ಆತನ ಹೆಸ್ರಿನ ಬಗ್ಗೆ ಬೇರೆಯವ್ರಿಗೆ ಹೇಳ್ತೀವಿ, ಆತನು ಎಷ್ಟು ಒಳ್ಳೆ ದೇವರು ಅಂತಾನೂ ತಿಳಿಸ್ತೀವಿ.
12. ನಾವು ಸಿಹಿಸುದ್ದಿ ಸಾರುವಾಗ ಯೆಹೋವನ ಹೆಸ್ರು ಹೇಗೆ ಪವಿತ್ರ ಆಗುತ್ತೆ?
12 ಯೆಹೋವನ ಮೇಲೆ ನಮಗಿರೋ ಪ್ರೀತಿ ಆತನ ಹೆಸ್ರನ್ನ ಪವಿತ್ರೀಕರಿಸೋಕೆ ಸಹಾಯ ಮಾಡುತ್ತೆ. ಅಂದ್ರೆ ಯೆಹೋವನ ಬಗ್ಗೆ ಸೈತಾನ ಹೇಳಿರೋದೆಲ್ಲ ಸುಳ್ಳು ಅಂತ ನಾವು ಬೇರೆಯವ್ರಿಗೆ ಹೇಳೋಕೆ ಇಷ್ಟಪಡ್ತೀವಿ. (ಆದಿ. 3:1-5; ಯೋಬ 2:4; ಯೋಹಾ. 8:44) ನಾವು ಸಿಹಿಸುದ್ದಿ ಸಾರುವಾಗ ಯೆಹೋವನ ಬಗ್ಗೆ ಸತ್ಯ ತಿಳಿಸೋಕೆ ತುಂಬ ಇಷ್ಟಪಡ್ತೀವಿ. ಆತನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ಆತನು ನ್ಯಾಯ ಮತ್ತು ನೀತಿಯಿಂದ ಆಳ್ತಾನೆ ಮತ್ತು ತನ್ನ ಆಳ್ವಿಕೆಯಲ್ಲಿ ಈಗಿರೋ ಎಲ್ಲ ಕಷ್ಟಗಳನ್ನ ತೆಗೆದುಹಾಕಿ ಜನ್ರೆಲ್ಲ ಶಾಂತಿ ನೆಮ್ಮದಿಯಿಂದ ಇರೋ ತರ ಮಾಡ್ತಾನೆ ಅಂತ ಹೇಳೋಕೆ ಇಷ್ಟಪಡ್ತೀವಿ. (ಕೀರ್ತ. 37:10, 11, 29; 1 ಯೋಹಾ. 4:8) ಈ ತರ ನಾವು ಯೆಹೋವನ ಬಗ್ಗೆ ಬೇರೆಯವ್ರಿಗೆ ಹೇಳುವಾಗ ಆತನ ಹೆಸರು ಪವಿತ್ರ ಆಗೋಕೆ ಸಹಾಯ ಮಾಡ್ತೀವಿ. ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳು ಅನ್ನೋ ಹೆಸ್ರಿಗೆ ತಕ್ಕ ಹಾಗೆ ನಾವು ನಡ್ಕೊಂಡಾಗ ನಮಗೆ ಖುಷಿನೂ ಆಗುತ್ತೆ. ಯಾಕೆ ಹಾಗೆ ಹೇಳಬಹುದು?
13. ಯೆಹೋವನ ಸಾಕ್ಷಿಗಳು ಅಂತ ಕರೆಸ್ಕೊಳ್ಳೋಕೆ ನಾವ್ಯಾಕೆ ಹೆಮ್ಮೆಪಡ್ತೀವಿ? (ಯೆಶಾಯ 43:10-12)
13 ಯೆಹೋವ ನಮ್ಮನ್ನ ತನ್ನ “ಸಾಕ್ಷಿಗಳು” ಅಂತ ಕರೆದಿದ್ದಾನೆ. (ಯೆಶಾಯ 43:10-12 ಓದಿ.) ಕೆಲವು ವರ್ಷಗಳ ಹಿಂದೆ ಆಡಳಿತ ಮಂಡಲಿ ಬರೆದ ಒಂದು ಪತ್ರದಲ್ಲಿ ಹೀಗಿತ್ತು: “ಯೆಹೋವನ ಸಾಕ್ಷಿಗಳು ಅಂತ ಕರೆಸ್ಕೊಳ್ಳೋದೇ ನಮಗೆ ಸಿಕ್ಕಿರೋ ದೊಡ್ಡ ಗೌರವ.” ಯಾಕೆ ಹಾಗೆ ಹೇಳಬಹುದು? ಇದಕ್ಕೊಂದು ಉದಾಹರಣೆ ನೋಡಿ. ನಿಮ್ಮ ನಡತೆ ಸರಿ ಇಲ್ಲ ಅಂತ ಹೇಳಿ ಯಾರೋ ನಿಮ್ಮ ಮೇಲೆ ಒಂದು ಆರೋಪ ಹಾಕಿದ್ದಾರೆ. ಅವರು ಹೇಳಿದ್ದು ತಪ್ಪು ಅಂತ ನಿರೂಪಿಸೋಕೆ ನೀವು ಈಗ ಕೋರ್ಟಿಗೆ ಹೋಗಿದ್ದೀರ. ಆಗ ನಿಮ್ಮ ಪರವಾಗಿ ಸಾಕ್ಷಿ ಹೇಳೋಕೆ ನೀವು ಯಾರನ್ನ ಕರಿತೀರಾ? ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತಿರೋ, ನೀವು ತುಂಬ ನಂಬೋ ಮತ್ತು ಜನ್ರ ಮಧ್ಯೆ ಒಳ್ಳೇ ಹೆಸ್ರಿರೋ ಒಬ್ಬ ವ್ಯಕ್ತಿಯನ್ನ ತಾನೇ? ಯಾಕಂದ್ರೆ ಆ ವ್ಯಕ್ತಿ ಹೇಳೋದನ್ನ ಜನ ನಂಬ್ತಾರೆ. ಅದೇ ತರ, ಯೆಹೋವನಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿದೆ ಮತ್ತು ಯೆಹೋವನೇ ಸತ್ಯ ದೇವರು ಅಂತ ನಾವು ಬೇರೆಯವ್ರಿಗೆ ತಿಳಿಸ್ತೀವಿ ಅನ್ನೋ ನಂಬಿಕೆನೂ ಆತನಿಗಿದೆ. ಅದಕ್ಕೇ ಆತನು ನಮ್ಮನ್ನ ತನ್ನ ಸಾಕ್ಷಿಗಳಾಗಿ ಆರಿಸ್ಕೊಂಡಿದ್ದಾನೆ. ಅದನ್ನ ನಾವು ಅಮೂಲ್ಯವಾಗಿ ನೋಡೋದ್ರಿಂದ ಯೆಹೋವನ ಹೆಸ್ರನ್ನ ಬೇರೆಯವ್ರಿಗೆ ಹೇಳೋಕೆ ಸಿಗೋ ಪ್ರತಿಯೊಂದು ಅವಕಾಶವನ್ನೂ ನಾವು ಬಳಸ್ಕೊತೀವಿ. ಅಷ್ಟೇ ಅಲ್ಲ ಸೈತಾನ ಆತನ ಬಗ್ಗೆ ಹೇಳಿರೋದೆಲ್ಲ ಸುಳ್ಳು ಅಂತಾನೂ ತಿಳಿಸ್ತೀವಿ. ಹೀಗೆ ಮಾಡಿದ್ರೆ ಯೆಹೋವನ ಸಾಕ್ಷಿಗಳು ಅಂತ ಕರೆಸ್ಕೊಳ್ಳೋಕೆ ಮತ್ತು ಆ ಹೆಸ್ರಿಗೆ ತಕ್ಕ ಹಾಗೆ ಜೀವಿಸೋಕೆ ಹೆಮ್ಮೆಪಡ್ತೀವಿ ಅಂತನೂ ತೋರಿಸ್ಕೊಡ್ತೀವಿ.—ಕೀರ್ತ. 83:18; ರೋಮ. 10:13-15.
ಅಂತ್ಯ ಬರೋ ತನಕ ಸಾರುತ್ತಾ ಇರ್ತೀವಿ
14. ಮುಂದೆ ಯಾವೆಲ್ಲ ವಿಷ್ಯಗಳು ನಡಿಬಹುದು?
14 ಮುಂದೆ ಏನೆಲ್ಲ ಆಗುತ್ತೆ ಅಂತ ನೋಡೋಕೆ ತುಂಬ ಆಸೆಯಿಂದ ಕಾಯ್ತಾ ಇದ್ದೀವಿ ಅಲ್ವಾ? ಯೆಹೋವನ ಆಶೀರ್ವಾದ ಇದ್ರೆ ಮಹಾ ಸಂಕಟ ಶುರುವಾಗುವುದಕ್ಕಿಂತ ಮುಂಚೆ ಇನ್ನೂ ತುಂಬ ಜನ ಸತ್ಯಕ್ಕೆ ಬರ್ತಾರೆ. ಅದನ್ನ ನೋಡೋಕೆ ನಾವು ತುಂಬ ಇಷ್ಟಪಡ್ತೀವಿ. ಮಹಾ ಸಂಕಟ ಶುರು ಆದ್ಮೇಲೆ ತುಂಬ ಕಷ್ಟ ಇರುತ್ತೆ. ಆ ಸಮಯದಲ್ಲೂ ಎಷ್ಟೋ ಜನ್ರು ಈ ಸೈತಾನನ ಕೆಟ್ಟ ಲೋಕ ಬಿಟ್ಟು ಯೆಹೋವನನ್ನ ಆರಾಧಿಸೋಕೆ ಬರಬಹುದು. ಇದನ್ನ ಕೇಳಿಸ್ಕೊಂಡಾಗ ನಿಮ್ಮ ಮೈ ಜುಂ ಅನ್ನುತ್ತೆ ಅಲ್ವಾ!—ಅ. ಕಾ. 13:48.
15-16. ನಾವೇನು ಮಾಡ್ತಾ ಇರಬೇಕು ಮತ್ತು ಎಲ್ಲಿವರೆಗೆ?
15 ಮಹಾ ಸಂಕಟ ಬರೋದಕ್ಕಿಂತ ಮುಂಚೆ ಎಲ್ರಿಗೂ ಪ್ರಾಮುಖ್ಯವಾದ ಒಂದು ಕೆಲಸ ಮಾಡೋಕೆ ಇದೆ. ಅದೇ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರೋದು. ಈ ಕೆಲಸನ ನಾವು ಮುಂದೆ ಮತ್ತೆ ಯಾವತ್ತೂ ಮಾಡಲ್ಲ. ಅಷ್ಟೇ ಅಲ್ಲ ಈ ಲೋಕ ತುಂಬ ಬೇಗ ನಾಶ ಆಗುತ್ತೆ ಅಂತ ಜನ್ರಿಗೆ ಎಚ್ಚರಿಸ್ತಾ ಇರಬೇಕು. ಆಗ ಜನ್ರಿಗೆ ನ್ಯಾಯತೀರ್ಪಿನ ಸಮಯದಲ್ಲಿ ಈ ಸಂದೇಶ ದೇವರಿಂದಾನೇ ಬಂದಿದ್ದು ಅಂತ ಗೊತ್ತಾಗುತ್ತೆ.—ಯೆಹೆ. 38:23.
16 ಹಾಗಾಗಿ ನಮ್ಮ ತೀರ್ಮಾನ ಏನಾಗಿರಬೇಕು? ನಾವು ಸಿಹಿಸುದ್ದಿಯನ್ನ ಪ್ರೀತಿಸೋದ್ರಿಂದ, ಜನ್ರನ್ನ ಪ್ರೀತಿಸೋದ್ರಿಂದ, ಯೆಹೋವ ಮತ್ತು ಆತನ ಹೆಸ್ರನ್ನ ಪ್ರೀತಿಸೋದ್ರಿಂದ ಸಾರುತ್ತಾ ಇರಬೇಕು. ಅಷ್ಟೇ ಅಲ್ಲ ಅಂತ್ಯ ಹತ್ರ ಇರೋದ್ರಿಂದ ಈ ಕೆಲಸನ ಈಗ ಇನ್ನೂ ಜಾಸ್ತಿ ಮಾಡಬೇಕು. ಹಾಗಾಗಿ ಯೆಹೋವ “ಸಾಕು” ಅನ್ನೋವರೆಗೂ ಹುರುಪಿಂದ ಈ ಕೆಲಸ ಮಾಡ್ತಾ ಇರೋಣ!
ಗೀತೆ 65 “ಇದೇ ಮಾರ್ಗ”
a ಅಕ್ಟೋಬರ್ 7, 2023ರಂದು ಅಮೆರಿಕದಲ್ಲಿರೋ ನ್ಯೂಯಾರ್ಕಿನ ಯೆಹೋವನ ಸಾಕ್ಷಿಗಳ ನ್ಯೂಬರ್ಗ್ ಅಸೆಂಬ್ಲಿ ಹಾಲಿನಲ್ಲಿ ವಾರ್ಷಿಕ ಕೂಟ ನಡೀತು. ಈ ಕಾರ್ಯಕ್ರಮದ ಮೊದಲನೇ ಭಾಗ ನವೆಂಬರ್ 2023ರ JW ಪ್ರಸಾರದಲ್ಲಿ ಬಂದಿತ್ತು. ಎರಡನೇ ಭಾಗ ಜನವರಿ 2024ರ JW ಪ್ರಸಾರದಲ್ಲಿ ಬಂತು.
b ಫೆಬ್ರವರಿ 1, 2015ರ ಕಾವಲಿನಬುರುಜುವಿನಲ್ಲಿ “ಬದುಕು ಬದಲಾದ ವಿಧ—ಬೈಬಲ್ ಕೊಟ್ಟ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರ ನಂಗೆ ತುಂಬ ಹಿಡಿಸ್ತು” ಅನ್ನೋ ಲೇಖನ ನೋಡಿ.