ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮಾರ್ಚ್ 2-8
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 22-23
“ದೇವರು ಅಬ್ರಹಾಮನನ್ನು ಪರೀಕ್ಷಿಸಿದನು”
ಕಾವಲಿನಬುರುಜು12 7/1 ಪುಟ 20 ಪ್ಯಾರ 4-6
ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ?
ಯೆಹೋವನು ಅಬ್ರಹಾಮನಿಗೆ ಹೇಳಿದ ಮಾತನ್ನು ನೆನಪಿಗೆ ತನ್ನಿ: “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು . . . ಸರ್ವಾಂಗಹೋಮವಾಗಿ ಅರ್ಪಿಸಬೇಕು.” (ಆದಿಕಾಂಡ 22:2) ಇಸಾಕನು “ನಿನಗೆ ಪ್ರಿಯನಾಗಿರುವ” ಮಗ ಎಂದು ದೇವರು ಹೇಳಿದ್ದನ್ನು ಗಮನಿಸಿ. ಅಬ್ರಹಾಮನಿಗೆ ಇಸಾಕನ ಮೇಲೆ ಎಷ್ಟು ಪ್ರೀತಿಯಿತ್ತೆಂದು ದೇವರಿಗೆ ತಿಳಿದಿತ್ತು. ಪುತ್ರಪ್ರೇಮ ಏನೆಂದು ದೇವರಿಗೆ ಗೊತ್ತಿತ್ತು ಏಕೆಂದರೆ ತನ್ನ ಪುತ್ರನಾದ ಯೇಸುವನ್ನು ಆತನು ಅಪಾರವಾಗಿ ಪ್ರೀತಿಸುತ್ತಿದ್ದನು. ಆದ್ದರಿಂದಲೇ ಯೇಸು ಭೂಮಿಯಲ್ಲಿದ್ದಾಗ ಎರಡು ಬಾರಿ ಆಕಾಶದಿಂದ ಗಟ್ಟಿಯಾದ ಸ್ವರದಲ್ಲಿ ಯೇಸುವನ್ನು “ಪ್ರಿಯನಾಗಿರುವ ನನ್ನ ಮಗ” ಎಂದು ಕರೆದನು.—ಮಾರ್ಕ 1:11; 9:7.
ಇಸಾಕನನ್ನು ಅರ್ಪಿಸಲು ಯೆಹೋವನು ಹೇಳಿದಾಗ ಹೀಬ್ರು ಭಾಷೆಯಲ್ಲಿ ಬಳಸಿದ ಪದ ದೇವರು ಅಬ್ರಹಾಮನನ್ನು ವಿನಂತಿಸುವಂತೆ ಇದೆ. “ತಾನೇನು ಕೇಳಿಕೊಳ್ಳುತ್ತಿದ್ದೇನೊ ಅದೆಷ್ಟು ಅಮೂಲ್ಯ ಎಂಬ ಅರಿವು” ದೇವರಿಗಿತ್ತೆಂದು ಆ ಪದದ ಬಳಕೆ ತೋರಿಸುತ್ತದೆ ಎನ್ನುತ್ತಾನೆ ಒಬ್ಬ ಬೈಬಲ್ ವಿದ್ವಾಂಸ. ದೇವರು ಕೇಳಿಕೊಂಡ ಸಂಗತಿಯಿಂದ ಅಬ್ರಹಾಮನಿಗಾದ ಅತೀವ ದುಃಖವನ್ನು ಸ್ವಲ್ಪ ಊಹಿಸಿ. ಹಾಗೆಯೇ ತನ್ನ ಪ್ರಿಯ ಮಗ ಯೇಸು ಯಾತನೆ-ನೋವು ಅನುಭವಿಸಿ ಸಾಯುವುದನ್ನು ನೋಡಿದಾಗ ಯೆಹೋವನಿಗೆಷ್ಟು ನೋವಾಗಿರಬೇಕಲ್ಲವೆ? ಅಂಥ ನೋವನ್ನು ಆತನು ಹಿಂದೆಂದೂ ಅನುಭವಿಸಲಿಲ್ಲ, ಮುಂದೆಂದೂ ಅನುಭವಿಸುವುದೂ ಇಲ್ಲ.
ಯೆಹೋವನು ಅಬ್ರಹಾಮನಿಗೆ ಮಾಡಲು ಹೇಳಿದ ಸಂಗತಿ ನಮಗೆ ಇಷ್ಟವಾಗದಿದ್ದರೂ ಒಂದು ವಿಷಯ ನೆನಪಿಡುವುದು ಒಳ್ಳೇದು. ತಂದೆಯಾದವನೊಬ್ಬನಿಗೆ ಆಗಬಹುದಾದ ಅತ್ಯಂತ ನೋವಿನ ಅನುಭವದಿಂದ ಯೆಹೋವನು ಅಬ್ರಹಾಮನನ್ನು ತಪ್ಪಿಸಿದನು. ಅವನು ಆ ಬಲಿ ಕೊಡುವಂತೆ ಬಿಡಲಿಲ್ಲ. ಇಸಾಕನನ್ನು ಉಳಿಸಿದನು. ಆದರೆ ತನ್ನ ಮಗನ ವಿಷಯದಲ್ಲಿ ಯೆಹೋವನು ಏನು ಮಾಡಿದನು? ‘ಸ್ವಂತ ಮಗನನ್ನು ಉಳಿಸಿಕೊಳ್ಳದೆ ನಮಗೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನು.’ (ರೋಮನ್ನರಿಗೆ 8:32) ಇಂಥ ನೋವನ್ನು ಯೆಹೋವನು ಯಾತಕ್ಕಾಗಿ ಸಹಿಸಿಕೊಂಡನು? ನಾವು ಜೀವವನ್ನು ಪಡೆದುಕೊಳ್ಳಬೇಕೆಂದೇ. (1 ಯೋಹಾನ 4:9) ನೋಡಿ, ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ! ಇದು ನಾವೂ ಆತನಿಗೆ ನಮ್ಮ ಪ್ರೀತಿ ತೋರಿಸುವಂತೆ ಪ್ರೇರಿಸುತ್ತದಲ್ಲವೇ?
ಕಾವಲಿನಬುರುಜು12 10/15 ಪುಟ 23 ಪ್ಯಾರ 6
ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ
6 ಪಾಪಿಗಳಾದ ಮಾನವರು ತನ್ನ ವಾಗ್ದಾನಗಳಲ್ಲಿ ಭರವಸೆಯಿಡುವಂತೆ ಯೆಹೋವ ದೇವರು ಕೂಡ ಆಣೆಯಿಟ್ಟನು. ಉದಾಹರಣೆಗೆ, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ನನ್ನ ಜೀವದಾಣೆ” ಎಂಬ ಅಭಿವ್ಯಕ್ತಿಗಳನ್ನು ಆತನು ಉಪಯೋಗಿಸಿದನು. (ಯೆಹೆ. 17:16) ಹೀಗೆ 40ಕ್ಕಿಂತಲೂ ಹೆಚ್ಚು ಸಂದರ್ಭಗಳಲ್ಲಿ ಆತನು ಆಣೆಯಿಟ್ಟು ಪ್ರಮಾಣ ಮಾಡಿರುವ ಕುರಿತು ಬೈಬಲಿನಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ ಚಿರಪರಿಚಿತವಾದದ್ದು ದೇವರು ಆಣೆಯಿಟ್ಟು ಅಬ್ರಹಾಮನಿಗೆ ನುಡಿದ ಮಾತುಗಳಾಗಿವೆ. ಅಬ್ರಹಾಮನ ಜೀವಮಾನದ ಸಮಯದಲ್ಲಿ ಯೆಹೋವನು ಅವನೊಂದಿಗೆ ಅನೇಕ ವಾಗ್ದಾನಗಳನ್ನು ಮಾಡಿದನು. ಇವುಗಳ ಮೂಲಕ ವಾಗ್ದತ್ತ ಸಂತತಿಯು ತನ್ನ ವಂಶದಲ್ಲಿ ಮಗ ಇಸಾಕನ ಮೂಲಕ ಬರುವುದೆಂದು ಅಬ್ರಹಾಮ ತಿಳಿದುಕೊಂಡನು. (ಆದಿ. 12:1-3, 7; 13:14-17; 15:5, 18; 21:12) ಬಳಿಕ ಅಬ್ರಹಾಮನು ತನ್ನ ಮುದ್ದು ಮಗನನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವನು ಆಜ್ಞಾಪಿಸಿದನು. ಅದು ಅಬ್ರಹಾಮನಿಗೆ ಅತಿ ಕಷ್ಟದ ಪರೀಕ್ಷೆಯಾಗಿತ್ತು. ಆದರೂ ಅವನು ತಡಮಾಡದೆ ವಿಧೇಯನಾಗಲು ಮುಂದಾದ. ಇನ್ನೇನು ಮಗನನ್ನು ಅರ್ಪಿಸಲಿಕ್ಕಿದ್ದಾಗ ದೇವದೂತನು ತಡೆದನು. ಆಗ ದೇವರು ಅಬ್ರಹಾಮನಿಗೆ ಈ ಪ್ರಮಾಣ ಮಾಡಿದನು: “ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು ಎಂಬದಾಗಿ ಯೆಹೋವನು ತನ್ನಾಣೆಯಿಟ್ಟು ಹೇಳಿದ್ದಾನೆ.”—ಆದಿ. 22:1-3, 9-12, 15-18.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು16.02 ಪುಟ 11 ಪ್ಯಾರ 13
“ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ
13 ಅಬ್ರಹಾಮನು ತನ್ನ ಸೇವಕರಿಗೆ ಹೇಳಿದ ಮಾತುಗಳಿಂದ ಅದು ಗೊತ್ತಾಗುತ್ತದೆ. ಅವನು ಹೇಳಿದ್ದು: “ನೀವು ಇಲ್ಲೇ ಕತ್ತೆಯ ಬಳಿಯಲ್ಲಿರ್ರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ತಿರಿಗಿ ಬರುತ್ತೇವೆ.” (ಆದಿ. 22:5) ಅಬ್ರಹಾಮನ ಈ ಮಾತಿನ ಅರ್ಥವೇನು? ಮಗನನ್ನು ಯಜ್ಞವಾಗಿ ಅರ್ಪಿಸಲಿಕ್ಕಿದೆ ಎಂದು ಗೊತ್ತಿದ್ದರೂ ‘ನಾನೂ ನನ್ನ ಮಗನೂ ತಿರುಗಿ ಬರುತ್ತೇವೆ’ ಎಂದು ಅಬ್ರಹಾಮ ಸುಳ್ಳು ಹೇಳುತ್ತಿದ್ದನಾ? ಇಲ್ಲ. ಇಸಾಕನು ಸತ್ತರೂ ಅವನನ್ನು ಪುನಃ ಬದುಕಿಸಲು ಯೆಹೋವನು ಶಕ್ತನೆಂದು ಅಬ್ರಹಾಮನಿಗೆ ಗೊತ್ತಿತ್ತು ಎಂದು ಬೈಬಲ್ ಹೇಳುತ್ತದೆ. (ಇಬ್ರಿಯ 11:19 ಓದಿ.) ತಾನು, ತನ್ನ ಹೆಂಡತಿ ತುಂಬ ವೃದ್ಧರಾಗಿದ್ದರೂ ಒಬ್ಬ ಮಗನನ್ನು ಹುಟ್ಟಿಸುವ ಶಕ್ತಿಯನ್ನು ಯೆಹೋವನು ಕೊಟ್ಟದ್ದನ್ನು ಅಬ್ರಹಾಮ ನೆನಪಿಸಿಕೊಂಡನು. (ಇಬ್ರಿ. 11:11, 12, 18) ಹಾಗಾಗಿ ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ ಎಂದು ಅಬ್ರಹಾಮನಿಗೆ ಮನದಟ್ಟಾಗಿತ್ತು. ಆ ದಿನ ಏನಾಗುತ್ತದೆಂದು ಅಬ್ರಹಾಮನಿಗೆ ಗೊತ್ತಿರಲಿಲ್ಲ. ಆದರೆ ತನ್ನ ಎಲ್ಲ ವಾಗ್ದಾನಗಳನ್ನು ನೆರವೇರಿಸಲಿಕ್ಕಾಗಿ ಅಗತ್ಯವಿದ್ದರೆ ಯೆಹೋವನು ಇಸಾಕನನ್ನು ಪುನರುತ್ಥಾನಗೊಳಿಸಲೂ ಶಕ್ತನು ಎಂಬ ನಂಬಿಕೆ ಅಬ್ರಹಾಮನಿಗಿತ್ತು. ಆದ್ದರಿಂದಲೇ ಅವನನ್ನು ‘ನಂಬಿಕೆಯಿರುವ ಎಲ್ಲರಿಗೆ ತಂದೆ’ ಎಂದು ಕರೆಯಲಾಯಿತು.
it-1-E ಪುಟ 853 ಪ್ಯಾರ 5-6
ಮುನ್ನರಿವು, ಪೂರ್ವ ನಿಶ್ಚಯ
ಅವಶ್ಯವಿರುವ ವಿಷ್ಯಗಳ ಬಗ್ಗೆ ಮಾತ್ರ ಮುನ್ನರಿವು ಪಡಕೊಳ್ಳುವುದು. ದೇವ್ರು ಮನುಷ್ಯರ ಭವಿಷ್ಯವನ್ನ ಮುಂಚೆನೇ ನಿರ್ಧರಿಸಿರಲ್ಲ. ಬದಲಿಗೆ, ತಾನು ಇಷ್ಟಪಡುವಂಥ ವಿಷ್ಯಗಳ ಬಗ್ಗೆ ಮಾತ್ರ ಮುಂದೆ ಏನಾಗುತ್ತೆ ಅಂತ ತಿಳುಕೊಳ್ಳುತ್ತಾನೆ. ಈ ಸಾಮರ್ಥ್ಯವನ್ನು ಉಪಯೋಗಿಸುವಾಗ ದೇವರು ತನ್ನ ನೀತಿನಿಯಮಗಳನ್ನ ಮೀರುವುದಿಲ್ಲ ಮತ್ತು ತನ್ನ ವಾಕ್ಯದಲ್ಲಿ ತನ್ನ ಬಗ್ಗೆ ಏನೆಲ್ಲಾ ಹೇಳಿದ್ದಾನೋ ಅದಕ್ಕೆ ಹೊಂದಿಕೆಯಲ್ಲೇ ಇರುವಂತೆ ನೋಡಿಕೊಳ್ಳುತ್ತಾನೆ. ಬೈಬಲಿನಲ್ಲೆಲ್ಲೂ ದೇವ್ರು, ಮುಂದೆ ಮನುಷ್ಯರಿಗೆ ಹೀಗೇ ಆಗ್ಬೇಕು ಅಂತ ನಿರ್ಣಯ ಮಾಡಿದ್ದರ ಬಗ್ಗೆಯಾಗಲಿ ಹಣೆಬರಹ ಬರೆದಿರುವುದರ ಬಗ್ಗೆಯಾಗಲಿ ಇಲ್ಲ. ಬದಲಿಗೆ, ಆತನು ಅನೇಕ ಸಲ ಆಗ ಇದ್ದ ಪರಿಸ್ಥಿತಿಯನ್ನು ಗಮನಿಸಿ ಅದಕ್ಕೆ ತಕ್ಕಂತೆ ನಿರ್ಣಯಗಳನ್ನು ಮಾಡಿದ ಉದಾಹರಣೆಗಳಿವೆ.
ಉದಾಹರಣೆಗೆ, ಆದಿಕಾಂಡ 11:5-8 ರಲ್ಲಿ ದೇವ್ರು ಭೂಮಿಯ ಕಡೆಗೆ ಗಮನವನ್ನು ಹರಿಸಿ ಬಾಬೆಲಿನಲ್ಲಿ ಎಂಥ ಪರಿಸ್ಥಿತಿ ಇದೆ ಅಂತ ಪರೀಕ್ಷಿಸಿದ್ದರ ಬಗ್ಗೆ ಇದೆ. ಹಾಗೆ ಪರೀಕ್ಷಿಸಿದ ನಂತರನೇ ದೇವ್ರು ತನ್ನ ಇಷ್ಟಕ್ಕೆ ವಿರುದ್ಧವಾಗಿದ್ದ ಅವ್ರ ಕೆಲ್ಸವನ್ನು ನಿಲ್ಲಿಸಲಿಕ್ಕೆ ಹೆಜ್ಜೆಯನ್ನು ತಗೊಳ್ಳಬೇಕು ಅಂತ ನಿರ್ಣಯಿಸಿದನು. ಸೊದೋಮ್ ಗೊಮೋರದಲ್ಲಿ ಸಹ ದುಷ್ಟತನ ಹೆಚ್ಚಾದ ನಂತ್ರನೇ ಯೆಹೋವನು (ತನ್ನ ದೇವದೂತರ ಮೂಲಕ) ‘ತನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ’ ಅಂತ ನಿರ್ಣಯಿಸಿದನು ಮತ್ತು ಅದನ್ನು ಅಬ್ರಹಾಮನಿಗೆ ತಿಳಿಸಿದನು. (ಆದಿ 18:20-22; 19:1) ಅಷ್ಟೇ ಅಲ್ಲ, ತಾನು ‘ಅಬ್ರಹಾಮನನ್ನು ತಿಳುಕೊಂಡಿದ್ದೇನೆ’ ಅಂತ ದೇವ್ರು ಹೇಳಿದನು ಮತ್ತು ಅಬ್ರಹಾಮನು ಇಸಾಕನನ್ನು ಯಜ್ಞವಾಗಿ ಅರ್ಪಿಸಲಿಕ್ಕೆ ಕತ್ತಿಯನ್ನು ಎತ್ತಿದ ನಂತ್ರನೇ ಯೆಹೋವನು ಹೀಗೆ ಹೇಳಿದ್ನು: “ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು.”—ಆದಿ 18:19; 22:11, 12; ನೆಹೆ 9:7, 8 ಹೋಲಿಸಿ; ಗಲಾ 4:9.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
it-1-E ಪುಟ 604 ಪ್ಯಾರ 5
ಯೇಸುವಿನ ಮರಣದ ಮುಂಚೆಯೇ ಅಬ್ರಹಾಮನನ್ನು ನೀತಿವಂತನು ಅಂತ ಯಾಕೆ ಕರೆಯಲಾಯಿತು? ಅಬ್ರಹಾಮನ ಕ್ರಿಯೆಗಳು ಮತ್ತು ಅವನಿಟ್ಟಿದ್ದ ನಂಬಿಕೆ “ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.” (ರೋಮ 4:2-22) ಅದರರ್ಥ ಅವನಾಗಲಿ, ಯೇಸು ಭೂಮಿಗೆ ಬರುವುದಕ್ಕಿಂತ ಮುಂಚೆ ಇದ್ದ ಬೇರೆ ನಂಬಿಗಸ್ತ ಪುರುಷರೇ ಆಗಲಿ ಪರಿಪೂರ್ಣರಾಗಿದ್ದರು ಅಥವಾ ಪಾಪದಿಂದ ಮುಕ್ತರಾಗಿದ್ದರು ಅಂತಲ್ಲ. ಆದರೆ ಅವರು ಸಂತತಿಯ ಬಗ್ಗೆ ದೇವರು ವಾಗ್ದಾನ ಮಾಡಿದ ವಿಷಯಗಳಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ದೇವರ ಆಜ್ಞೆಗಳನ್ನು ಪಾಲಿಸ್ಲಿಕ್ಕೆ ತಮ್ಮಿಂದ ಆಗೋದೆಲ್ಲವನ್ನೂ ಮಾಡ್ತಿದ್ದರು. ಅದಕ್ಕೆ ಅವ್ರನ್ನ, ಲೋಕದ ಬೇರೆ ಜನರಂತೆ ದೇವರ ದೃಷ್ಟಿಯಲ್ಲಿ ಅನೀತಿವಂತರಾಗಿದ್ದಾರೆ ಅಂತ ಲೆಕ್ಕಿಸಲಿಲ್ಲ. (ಆದಿ 3:15; ಕೀರ್ತ 119:2, 3) ದೇವರಿಂದ ದೂರ ಸರಿದ ಈ ಲೋಕದ ಜನ್ರಿಗೆ ಹೋಲಿಸುವಾಗ ಆ ದೇವಭಕ್ತ ಜನರನ್ನ ಯೆಹೋವನು ಪ್ರೀತಿಯಿಂದ ನಿರ್ದೋಷಿಗಳು ಅಂತ ಎಣಿಸಿದನು. (ಕೀರ್ತ 32:1, 2; ಎಫೆ 2:12) ಹಾಗಾಗಿ ದೇವರು ಅವರ ನಂಬಿಕೆಯನ್ನು ನೋಡಿ, ಅವರು ಅಪರಿಪೂರ್ಣರಾಗಿದ್ದರೂ ಅವರ ಜೊತೆ ವ್ಯವಹರಿಸಿದನು ಮತ್ತು ಅವರನ್ನು ಆಶೀರ್ವದಿಸಿದನು. ಹೀಗೆ ಮಾಡುವಾಗ ಆತನು ತನ್ನ ನ್ಯಾಯದ ಪರಿಪೂರ್ಣ ಮಟ್ಟವನ್ನು ಬಿಟ್ಟುಕೊಡಲಿಲ್ಲ. (ಕೀರ್ತ 36:10) ಆದ್ರೂ, ಈ ದೇವಭಕ್ತ ಜನರು ತಮ್ಮ ಪಾಪಗಳಿಗೆ ಬಿಡುಗಡೆ ಸಿಗಬೇಕು ಅನ್ನೋದನ್ನ ಅರ್ಥಮಾಡಿಕೊಂಡಿದ್ದರು ಮತ್ತು ದೇವರು ಆ ಬಿಡುಗಡೆಯನ್ನು ಒದಗಿಸುವ ಸಮಯಕ್ಕಾಗಿ ಎದುರುನೋಡುತ್ತಿದ್ದರು.—ಕೀರ್ತ 49:7-9; ಇಬ್ರಿ 9:26.
ಮಾರ್ಚ್ 9-15
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 24
“ಇಸಾಕನ ವಧು”
ಕಾವಲಿನಬುರುಜು16.3-E ಪುಟ 14 ಪ್ಯಾರ 3
‘ನಾನು ಹೋಗುತ್ತೇನೆ’
ಇಸಾಕನಿಗೆ ಕಾನಾನ್ಯ ಹೆಣ್ಣನ್ನು ತರಬಾರದೆಂದು ಅಬ್ರಹಾಮನು ಎಲಿಯೇಜರನಿಗೆ ಹೇಳಿ ಅವನ ಹತ್ರ ಪ್ರಮಾಣ ಮಾಡಿಸಿಕೊಂಡನು. ಯಾಕೆ? ಯಾಕೆಂದ್ರೆ ಕಾನಾನ್ಯರು ಯೆಹೋವ ದೇವ್ರನ್ನು ಆರಾಧಿಸುತ್ತಿರ್ಲಿಲ್ಲ, ಗೌರವಿಸುತ್ತನೂ ಇರ್ಲಿಲ್ಲ. ಅವ್ರು ಮಾಡ್ತಿದ್ದ ಕೆಟ್ಟ ವಿಷ್ಯಗಳಿಗಾಗಿ ಯೆಹೋವನು ಒಂದಿನ ಅವ್ರನ್ನು ಶಿಕ್ಷಿಸುತ್ತಾನೆ ಅಂತ ಅಬ್ರಹಾಮನಿಗೆ ಗೊತ್ತಿತ್ತು. ತನ್ನ ಪ್ರೀತಿಯ ಮಗ ಇಸಾಕನು ಆ ಜನರಿಗೆ ಆಪ್ತನಾಗೋದು, ಅವ್ರ ಅನೈತಿಕ ರೀತಿಯನ್ನು ಅನುಸರಿಸೋದು ಅಬ್ರಹಾಮನಿಗೆ ಇಷ್ಟ ಇರ್ಲಿಲ್ಲ. ದೇವರ ವಾಗ್ದಾನಗಳನ್ನು ನೆರವೇರಿಸೋದರಲ್ಲಿ ತನ್ನ ಮಗನಿಗೆ ಮುಖ್ಯ ಪಾತ್ರ ಇದೆ ಅಂತ ಆತನಿಗೆ ಗೊತ್ತಿತ್ತು.—ಆದಿಕಾಂಡ 15:16; 17:19; 24:2-4.
ಕಾವಲಿನಬುರುಜು16.3-E ಪುಟ 14 ಪ್ಯಾರ 4
‘ನಾನು ಹೋಗುತ್ತೇನೆ’
ಎಲಿಯೇಜರನು ಹಾರಾನಿನ ಹತ್ತಿರದಲ್ಲಿದ್ದ ಬಾವಿಯ ಬಳಿಗೆ ಬಂದಾಗ ಯೆಹೋವನಿಗೆ ಪ್ರಾರ್ಥಿಸಿದನು. ಅದಕ್ಕೆ ಉತ್ತರವಾಗಿ ಯೆಹೋವನು ಇಸಾಕನಿಗಾಗಿ ಹೆಣ್ಣನ್ನು ಆರಿಸಿದನು. ಹೇಗೆ? ಇಸಾಕನಿಗಾಗಿ ಯೆಹೋವನು ಯಾವ ಹುಡುಗಿಯನ್ನು ಆರಿಸಿದ್ದಾನೋ ಅವಳು ಆ ಬಾವಿಯ ಹತ್ತಿರ ಬರಬೇಕು ಮತ್ತು ತಾನು ಕುಡಿಯಲು ನೀರನ್ನು ಕೇಳಿದಾಗ ತನಗೆ ಮಾತ್ರವಲ್ಲ, ತನ್ನ ಒಂಟೆಗಳಿಗೂ ಕೊಡಲು ಮುಂದೆ ಬರ್ಬೇಕು ಅಂತ ಎಲಿಯೇಜರನು ಪ್ರಾರ್ಥಿಸಿದನು. (ಆದಿಕಾಂಡ 24:12-14) ಆಗ ಬಾವಿಯ ಹತ್ತಿರ ಯಾರು ಬಂದು ಆತನು ಪ್ರಾರ್ಥಿಸಿದಂತೆಯೇ ಮಾಡಿದ್ರು? ರೆಬೆಕ್ಕ! ನಂತರ ಎಲಿಯೇಜರನು ಈ ಎಲ್ಲಾ ವಿಷ್ಯಗಳನ್ನು ರೆಬೆಕ್ಕಳ ಕುಟುಂಬದವ್ರಿಗೆ ವಿವರಿಸಿದನು. ಇದನ್ನು ಕೇಳಿಸಿಕೊಂಡಾಗ ರೆಬೆಕ್ಕಳಿಗೆ ಹೇಗನಿಸಿರಬಹುದಲ್ವಾ!
ಕಾವಲಿನಬುರುಜು16.3-E ಪುಟ 14 ಪ್ಯಾರ 6-7
‘ನಾನು ಹೋಗುತ್ತೇನೆ’
ಇದಕ್ಕೂ ಕೆಲವು ವಾರಗಳ ಹಿಂದೆನೇ ಎಲಿಯೇಜರನು ಅಬ್ರಹಾಮನಿಗೆ “ಒಂದು ವೇಳೆ ನನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದೀತು” ಅಂತ ತನ್ನ ಮನಸ್ಸಿನಲ್ಲಿದ್ದ ಸಂಶಯವನ್ನು ಹೇಳಿದನು. ಆಗ “ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ” ಅಂತ ಅಬ್ರಹಾಮನು ಅವನಿಗೆ ಹೇಳಿದನು. (ಆದಿಕಾಂಡ 24:39, 41) ಬೆತೂವೇಲನ ಮನೆಯಲ್ಲೂ ಯುವ ಸ್ತ್ರೀಯ ಅಭಿಪ್ರಾಯವನ್ನು ಗೌರವಿಸುತ್ತಿದ್ದರು. ತಾನು ಬಂದ ಕೆಲ್ಸ ಚೆನ್ನಾಗಾಗಿದ್ದನ್ನು ನೋಡಿ ಎಲಿಯೇಜರನಿಗೆ ಎಷ್ಟು ಖುಷಿಯಾಯಿತೆಂದರೆ ಮಾರನೇ ದಿನ ಬೆಳಿಗ್ಗೆನೇ ತಾನು ರೆಬೆಕ್ಕಳನ್ನು ಈಗಲೇ ಕಾನಾನಿಗೆ ಕರಕೊಂಡು ಹೋಗ್ಬಹುದಾ ಅಂತ ಕೇಳಿದನು. ರೆಬೆಕ್ಕಳ ಕುಟುಂಬದವ್ರು ಅವಳು ಕಡಿಮೆ ಪಕ್ಷ ಹತ್ತು ದಿನವಾದ್ರೂ ತಮ್ಮ ಜೊತೆ ಇರ್ಬೇಕು ಅಂತ ಇಷ್ಟಪಟ್ರು. ಕೊನೆಗೆ ಈ ವಿಷ್ಯದ ಬಗ್ಗೆ “ಹುಡುಗಿಯನ್ನು ಕರೆದು ಆಕೆಯ ಅಭಿಪ್ರಾಯ ತಿಳಿದುಕೊಳ್ಳುತ್ತೇವೆ” ಅಂತ ಹೇಳಿದ್ರು.—ಆದಿಕಾಂಡ 24:57.
ರೆಬೆಕ್ಕಳ ಮುಂದೆ ಈಗ ಎರಡು ದಾರಿಗಳಿದ್ದವು. ಅವಳು ಯಾವ ದಾರಿಯನ್ನು ಆರಿಸಿಕೊಂಡಳು? ತನ್ನ ತಂದೆ ಮತ್ತು ಅಣ್ಣನ ಕರುಣೆಗೆ ಮನಸೋತು ‘ನನಗೆ ಪರಿಚಯವಿಲ್ಲದ ಆ ಊರಿಗೆ ಹೋಗಲ್ಲ, ನನ್ನನ್ನು ಬಿಟ್ಟುಬಿಡಿ’ ಅಂತ ಕೇಳಿಕೊಂಡಳಾ? ಅಥ್ವಾ ಇಷ್ಟೆಲ್ಲಾ ನಡೆಯುತ್ತಿರೋದು ಯೆಹೋವನ ಮಾರ್ಗದರ್ಶನದಿಂದಲೇ, ಇದ್ರ ಭಾಗವಾಗೋದು ತನಗೆ ಸಿಕ್ಕಿರುವ ಸುಯೋಗ ಅಂತ ಅವಳು ನೆನಸಿದಳಾ? ಅವಳ ಜೀವನದಲ್ಲಿ ದಿಢೀರನೆ ಆದ, ಆದ್ರೆ ಕಳವಳ ತರುವಂಥ ಈ ಬದಲಾವಣೆ ಬಗ್ಗೆ ಅವಳಿಗೆ ಏನನಿಸಿತು ಅಂತ ಅವಳ ಉತ್ತರದಿಂದ ಗೊತ್ತಾಗುತ್ತೆ. ಅವಳು ‘ನಾನು ಹೋಗುತ್ತೇನೆ’ ಅಂತ ಉತ್ತರ ಕೊಟ್ಟಳು.—ಆದಿಕಾಂಡ 24:59.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು16.3-E ಪುಟ 12-13
‘ನಾನು ಹೋಗುತ್ತೇನೆ’
ಒಂದಿನ ಸಂಜೆ ಅವಳು ತನ್ನ ಕೊಡದಲ್ಲಿ ನೀರನ್ನು ತುಂಬಿಸಿಕೊಂಡ ಮೇಲೆ ಒಬ್ಬ ವಯಸ್ಸಾದ ವ್ಯಕ್ತಿ ಅವಳ ಹತ್ರ ಓಡಿಬಂದು ದೀನತೆಯಿಂದ, ನಮ್ರವಾಗಿ “ದಯಮಾಡಿ ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ಕೊಡು” ಅಂತ ಕೇಳಿಕೊಂಡನು. ಅವನು ತುಂಬ ದೂರದಿಂದ ಪ್ರಯಾಣ ಮಾಡಿ ಬಂದಿದ್ದನು ಅಂತ ರೆಬೆಕ್ಕಳಿಗೆ ನೋಡಿದ ಕೂಡಲೇ ಗೊತ್ತಾಯಿತು. ಆದ್ರಿಂದ ಅವಳು ತಕ್ಷಣ ತನ್ನ ಭುಜದ ಮೇಲಿದ್ದ ಕೊಡವನ್ನು ಇಳಿಸಿ ಅವನಿಗೆ ಕುಡಿಯೋಕೆ ನೀರು ಕೊಟ್ಟಳು. ಅವನು ಕೇಳಿದ ಹಾಗೆ ಸ್ವಲ್ಪ ನೀರಲ್ಲ, ಸಾಕಷ್ಟು ನೀರು ಕೊಟ್ಟಳು. ಆ ತಣ್ಣಗಿದ್ದ ನೀರನ್ನು ಕುಡಿದು ಅವನಿಗೆ ಚೈತನ್ಯ ಸಿಕ್ಕಿತು. ಅವನ ಹತ್ರ ಹತ್ತು ಒಂಟೆಗಳಿರೋದನ್ನು ಮತ್ತು ಅವುಗಳಿಗೆ ಕುಡಿಯೋದಕ್ಕೆ ತೊಟ್ಟಿಯಲ್ಲಿ ನೀರಿಲ್ಲ ಅನ್ನೋದನ್ನು ಅವಳು ಗಮನಿಸಿದಳು. ಅವನು ದಯೆಯಿಂದ ಅವಳನ್ನೇ ನೋಡುತ್ತಾ ಇರೋದನ್ನು ಅವಳು ನೋಡಿದಳು ಮತ್ತು ತನ್ನಿಂದಾದಷ್ಟು ಉದಾರವಾಗಿ ಸಹಾಯ ಮಾಡ್ಬೇಕು ಅಂತ ಬಯಸಿದಳು. ಹಾಗಾಗಿ “ನಾನು ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರುತಂದುಕೊಡುತ್ತೇನೆ” ಅಂತ ಹೇಳಿದಳು.—ಆದಿಕಾಂಡ 24:17-19.
ರೆಬೆಕ್ಕ ಹತ್ತು ಒಂಟೆಗಳಿಗೆ ನೀರನ್ನು ಕೊಡುತ್ತೇನೆ ಅಂತಷ್ಟೇ ಹೇಳಲಿಲ್ಲ, ಅವುಗಳಿಗೆ ತೃಪ್ತಿಯಾಗುವಷ್ಟು ನೀರು ಕೊಡುತ್ತೇನೆ ಅಂತ ಹೇಳಿದಳು. ಒಂದು ಒಂಟೆ ತುಂಬ ಬಾಯಾರಿದರೆ, ಸುಮಾರು 95 ಲೀಟರಿನಷ್ಟು ನೀರು ಕುಡಿಯುತ್ತೆ. ಈ ಹತ್ತು ಒಂಟೆಗಳು ಬಾಯಾರಿದ್ದಿದ್ದರೆ ರೆಬೆಕ್ಕ ತುಂಬ ತಾಸುಗಳವರೆಗೆ ನೀರು ತಂದು ಹಾಕಬೇಕಾಗುತ್ತಿತ್ತು. ಆದ್ರೆ ಆ ಒಂಟೆಗಳು ಅಷ್ಟು ಬಾಯಾರಿರಲಿಲ್ಲ ಅಂತ ಕಾಣುತ್ತೆ. ಈ ವಿಷ್ಯ ರೆಬೆಕ್ಕಳಿಗೆ ಅವಳು ನೀರು ತಂದುಕೊಡುತ್ತೇನೆ ಅಂತ ಹೇಳಿದಾಗ ಗೊತ್ತಿರಲಿಲ್ಲ. ಆದ್ರೂ ಅವಳು ಆ ವೃದ್ಧ ಅಪರಿಚಿತ ವ್ಯಕ್ತಿಗೆ ಅತಿಥಿಸತ್ಕಾರ ತೋರಿಸೋಕೆ ಮನಸ್ಸು ಮಾಡಿದಳು, ಅದಕ್ಕೋಸ್ಕರ ಎಷ್ಟು ಬೇಕಾದ್ರೂ ಕಷ್ಟಪಟ್ಟು ಕೆಲ್ಸ ಮಾಡೋಕೆ ಸಿದ್ಧಳಿದ್ದಳು. ನೀರು ತಂದುಕೊಡುತ್ತೇನೆ ಅಂತ ಅವಳು ಹೇಳಿದಾಗ ಎಲಿಯೇಜರ ಒಪ್ಪಿಕೊಂಡನು. ನಂತ್ರ ಅವಳು ಪುನಃ-ಪುನಃ ಬಾವಿಯಿಂದ ನೀರು ತಗೊಂಡು ಬಂದು ತೊಟ್ಟಿಯಲ್ಲಿ ಸುರಿಯುವುದನ್ನೇ ನೋಡುತ್ತಾ ಕೂತುಕೊಂಡನು.—ಆದಿಕಾಂಡ 24:20, 21.
ಕಾವಲಿನಬುರುಜು16.3-E ಪುಟ 13, ಪಾದಟಿಪ್ಪಣಿ
‘ನಾನು ಹೋಗುತ್ತೇನೆ’
ರೆಬೆಕ್ಕ ನೀರು ತರೋಕೆ ಹೋಗುವಾಗಲೇ ಸಂಜೆಯಾಗಿತ್ತು. ಅವಳು ಬಾವಿ ಹತ್ರ ತುಂಬ ತಾಸುಗಳವರೆಗೆ ಇದ್ದಳು ಅಂತ ಬೈಬಲ್ ಹೇಳೋದಿಲ್ಲ. ಅವಳು ಎಲ್ಲಾ ಕೆಲ್ಸ ಮುಗಿಸಿ ಮನೆಗೆ ಬರುವಾಗ ಮನೆಯಲ್ಲಿ ಇರುವವರೆಲ್ರೂ ನಿದ್ದೆ ಹೋಗಿದ್ರು ಅಂತನೋ ಅವಳು ಇನ್ನೂ ಯಾಕೆ ಬಂದಿಲ್ಲ ಅಂತ ಅವಳನ್ನು ಹುಡುಕಿಕೊಂಡು ಬಂದಿದ್ರು ಅಂತನೋ ಬೈಬಲಿನಲ್ಲಿ ಇಲ್ಲ.
ಕಾವಲಿನಬುರುಜು16.3-E ಪುಟ 15 ಪ್ಯಾರ 3
‘ನಾನು ಹೋಗುತ್ತೇನೆ’
ಈ ಲೇಖನದ ಆರಂಭದಲ್ಲಿ ತಿಳಿಸಲಾದ ಆ ದಿನ ಕೊನೆಗೂ ಬಂತು. ಪ್ರಯಾಣ ಮಾಡಿ ಬಂದಿದ್ದ ಆ ಗುಂಪು ಕಾನಾನ್ ದೇಶದ ದಕ್ಷಿಣ ಸೀಮೆಯನ್ನು ತಲುಪಿದಾಗ ಸೂರ್ಯ ಮುಳುಗುತ್ತಾ ಇದ್ದನು, ಸುತ್ತಲೂ ಮೊಬ್ಬು ಆವರಿಸಿತ್ತು. ಒಬ್ಬ ವ್ಯಕ್ತಿ ಅಡವಿಯಲ್ಲಿ ಯೋಚನೆ ಮಾಡುತ್ತಾ, ಧ್ಯಾನಿಸುತ್ತಾ ನಡಕೊಂಡು ಬರುತ್ತಿರೋದನ್ನು ರೆಬೆಕ್ಕ ನೋಡಿದಳು. ಅವಳು ಒಂಟೆ ಇನ್ನೂ ಬಗ್ಗುವುದಕ್ಕೂ ಮುಂಚೆನೇ “ಒಂಟೆಯಿಂದ ಬೇಗ ಇಳಿದು” ಎಲಿಯೇಜರನಿಗೆ ಹೀಗೆ ಕೇಳಿದಳು: ‘ನಮ್ಮನ್ನು ಎದುರುಗೊಳ್ಳುವದಕ್ಕೆ ಅಡವಿಯಲ್ಲಿ ನಡೆದು ಬರುವ ಆ ಮನುಷ್ಯನು ಯಾರು?’ ಆ ವ್ಯಕ್ತಿ ಇಸಾಕ ಅಂತ ಗೊತ್ತಾದ ಕೂಡಲೇ ಅವಳು ತನ್ನ ತಲೆಗೆ ಮುಸುಕು ಹಾಕಿಕೊಂಡಳು. (ಆದಿಕಾಂಡ 24:62-65) ಯಾಕೆ? ಅವಳು ಮುಸುಕು ಹಾಕಿಕೊಂಡಿದ್ದು ತನ್ನ ಭಾವೀ ಗಂಡನ ಕಡೆಗೆ ಅವಳಿಗಿದ್ದ ಗೌರವವನ್ನು ಸೂಚಿಸಿತು. ಇಂದು ಅನೇಕರಿಗೆ ಈ ರೀತಿ ಮಾಡೋದು ಹಳೇ ಕಾಲದ ಪದ್ಧತಿ ಅಂತ ಅನಿಸಬಹುದು. ಆದ್ರೂ ನಾವೆಲ್ರೂ ಅಂದ್ರೆ ಸ್ತ್ರೀಯರೇ ಆಗಿರಲಿ ಪುರುಷರೇ ಆಗಿರಲಿ ರೆಬೆಕ್ಕಳಿಂದ ದೀನತೆಯ ಪಾಠವನ್ನು ಕಲೀಬಹುದು. ಈ ಗುಣ ಇನ್ನೂ ಹೆಚ್ಚು ಬೆಳೆಸಿಕೊಳ್ಳುವ ಅವಶ್ಯಕತೆ ಇಲ್ಲದಿರುವವರು ನಮ್ಮಲ್ಲಿ ಯಾರಿದ್ದಾರೆ ಹೇಳಿ?
ನಮ್ಮ ಕ್ರೈಸ್ತ ಜೀವನ
ವರ್ಷ ಪುಸ್ತಕ 08-E ಪುಟ 11 ಪ್ಯಾರ 3
ಹದಿನಾರು ವಯಸ್ಸಿನ ಜ್ಯಾಕ್ಲಿನ್ ತನ್ನ ಟೀಚರ್ಗೆ ಸ್ಮರಣೆಯ ಆಮಂತ್ರಣ ಪತ್ರ ಕೊಟ್ಟು ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದಳು. ಆಶ್ಚರ್ಯಕರವಾಗಿ ಅವಳ ಟೀಚರ್ ಸ್ಮರಣೆಗೆ ಹಾಜರಾದರು. ಈ ಕಾರ್ಯಕ್ರಮ ಯೆಹೋವನ ಸಾಕ್ಷಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆಸಲ್ಪಟ್ಟದ್ದರಿಂದ ಕಾರ್ಯಕ್ರಮದ ನಂತರ ಜ್ಯಾಕ್ಲಿನ್ ತನ್ನ ಟೀಚರ್ಗೆ ಇಡೀ ಸಭಾಂಗಣವನ್ನು ತೋರಿಸಿದಳು. ಅಲ್ಲಿ ಎಲ್ಲವೂ ವ್ಯವಸ್ಥಿತವಾಗಿ, ಶುಚಿಯಾಗಿ ಇರೋದನ್ನು ನೋಡಿ ಟೀಚರ್ಗೆ ತುಂಬ ಇಷ್ಟ ಆಯ್ತು. ಮುಖ್ಯವಾಗಿ ಇಡೀ ಸಭಾಂಗಣವನ್ನು ಸ್ವಯಂಸೇವಕರೇ ಕಟ್ಟಿ ಸುಸ್ಥಿತಿಯಲ್ಲಿಟ್ಟಿದ್ದಾರೆ ಎಂದು ಕೇಳಿ ಅವರಿಗೆ ಆಶ್ಚರ್ಯನೂ ಆಯ್ತು. ಆ ದಿನ ಕೊಡಲಾದ ಭಾಷಣ ತುಂಬ ಇಷ್ಟ ಆಯ್ತು ಅಂತ ಅವರು ಹೇಳಿದ್ರು. ನಂತರ, “ಭಾಷಣಕಾರನು ಹೇಳಿದಂತೆ ಬೈಬಲ್ ಕಲಿಯಬೇಕಂದ್ರೆ ನಾನೇನು ಮಾಡ್ಬೇಕು?” ಅಂತ ಕೇಳಿದ್ರು. ಆಗ ಜ್ಯಾಕ್ಲಿನ್ ಸಂತೋಷದಿಂದ “ನಾನು ನಿಮಗೆ ಕಲಿಸ್ತೀನಿ” ಅಂತ ಹೇಳಿದಳು. ಜ್ಯಾಕ್ಲಿನ್ ಪ್ರತಿ ಸೋಮವಾರ ಶಾಲೆ ಮುಗಿದ ನಂತರ ತನ್ನ ಟೀಚರ್ಗೆ ಬೈಬಲ್ ಕಲಿಸೋಕೆ ಶುರುಮಾಡಿದಳು.
ವರ್ಷ ಪುಸ್ತಕ 08-E ಪುಟ 14 ಪ್ಯಾರ 1
ಯೆಹೋವನ ಸಾಕ್ಷಿಗಳ ಹತ್ತಿರ ಬೈಬಲ್ ಕಲಿಯುತ್ತಿದ್ದ ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಜಿಮ್ಗೆ ಬರುವವರಿಗೆ ಬೈಬಲಿನಿಂದ ತಾನು ಕಲಿತ ವಿಷಯಗಳನ್ನು ತಿಳಿಸ್ತಿದ್ದ. ಅವರಲ್ಲೊಬ್ಬ ಸ್ತ್ರೀ ಇವನು ಸ್ಮರಣೆಗೆ ಕರೆದಾಗ ಅದಕ್ಕೆ ಹಾಜರಾದಳು. ಅವಳು ಹದಿವಯಸ್ಸಿನಲ್ಲಿದ್ದಾಗ ಯಾವಾಗ್ಲೂ ರಾಜ್ಯಸಭಾಗೃಹದಲ್ಲಿ ಹಾಡು ಹಾಡೋದನ್ನು ಕೇಳಿಸಿಕೊಳ್ತಿದ್ದಳು ಮತ್ತು ಅಲ್ಲಿಗೆ ಹಾಜರಾಗಬಹುದಾ ಅಂತ ತನ್ನ ಹೆತ್ತವರ ಹತ್ತಿರ ಕೇಳಿದಾಗ ಯೆಹೋವನ ಸಾಕ್ಷಿಗಳ ಜೊತೆ ಸೇರಬಾರದು ಅಂತ ಅವರು ಕಟ್ಟುನಿಟ್ಟು ಮಾಡಿದ್ರು. ಆದ್ರೂ ಅವಳು ಕೆಲವೊಮ್ಮೆ ಕೂಟಗಳಿಗೆ ಹಾಜರಾಗುತ್ತಿದ್ದಳು. ಆದ್ರೆ ಇಡೀ ಕುಟುಂಬ ಬೇರೆ ಕಡೆಗೆ ಸ್ಥಳಾಂತರಿಸಿದಾಗ ಯೆಹೋವನ ಸಾಕ್ಷಿಗಳ ಜೊತೆಗಿದ್ದ ಸಂಪರ್ಕ ಕಡಿದು ಹೋಗಿತ್ತು. ಆದ್ರೆ ಈಗ ಸ್ಮರಣೆಗೆ ಹಾಜರಾದಾಗ ಅವಳಿಗೆ ಒಬ್ಬ ಸಹೋದರಿಯನ್ನ ಪರಿಚಯ ಮಾಡಲಾಯಿತು ಮತ್ತು ಆ ಸಹೋದರಿ ಅವಳಿಗೆ ಬೈಬಲ್ ಕಲಿಸೋಕೆ ಶುರು ಮಾಡಿದಳು. ಆ ಸ್ತ್ರೀ ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. ನಂತರ ಅವಳ ಗಂಡ ಸಹ ಆಸಕ್ತಿಯನ್ನು ತೋರಿಸಿದನು. ಅವಳನ್ನು ಸ್ಮರಣೆಗೆ ಆಮಂತ್ರಿಸಿದ ಯುವಕನು ಸಹ ದೀಕ್ಷಾಸ್ನಾನವಾಗಿರದ ಪ್ರಚಾರಕನಾಗಿದ್ದಾನೆ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಪ್ರಗತಿ ಮಾಡುತ್ತಿದ್ದಾನೆ.
ಮಾರ್ಚ್ 16-22
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 25-26
“ಏಸಾವ ತನ್ನ ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟ”
it-1-E ಪುಟ 1242
ಯಾಕೋಬ
ಇಸಾಕನ ಅಚ್ಚುಮೆಚ್ಚಿನ ಮಗ ಏಸಾವನು ಒರಟು ಮನುಷ್ಯ, ಕಾಡಿನಲ್ಲಿ ಅಲೆದಾಡುತ್ತಿದ್ದ ಬೇಟೆಗಾರ ಅಂತ ಬೈಬಲ್ ವರ್ಣಿಸುತ್ತದೆ. ಇದಕ್ಕೆ ವಿರುದ್ಧವಾಗಿ ಯಾಕೋಬನು “ಸಾಧುಮನುಷ್ಯ” (ನಿರ್ದೋಷಿ, NW) [ಹೀಬ್ರು, ಟ್ಯಾಮ್] ಮತ್ತು “ಗುಡಾರಗಳಲ್ಲೇ ವಾಸಿಸಿದ” ವ್ಯಕ್ತಿ ಅಂತ ವರ್ಣಿಸುತ್ತದೆ. ಅವನು ಕುರುಬನಾಗಿದ್ದು, ಮನೆ ಜವಾಬ್ದಾರಿಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದ. ಹಾಗಾಗಿ ಅವನ ತಾಯಿಗೆ ಅವನಂದ್ರೆ ತುಂಬ ಪ್ರೀತಿ. (ಆದಿ 25:27, 28) ಬೈಬಲಿನಲ್ಲಿ, ಟ್ಯಾಮ್ ಎಂಬ ಹೀಬ್ರು ಪದವನ್ನು ಇಲ್ಲಿ ಮಾತ್ರವಲ್ಲದೆ ಬೈಬಲಿನ ಬೇರೆ ಕಡೆಗಳಲ್ಲೂ ದೇವ್ರಿಗೆ ಮೆಚ್ಚಿಕೆಯಾಗುವವರನ್ನು ವರ್ಣಿಸುವಾಗ ಉಪಯೋಗಿಸಲಾಗಿದೆ. ಉದಾಹರಣೆಗೆ, “ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು,” ಆದ್ರೆ “ಅವರು [ನಿರ್ದೋಷಿಗಳು] ಮುಂದೆ ಸಮಾಧಾನದಿಂದ ಇರುವರು” ಅಂತ ಯೆಹೋವನು ಆಶ್ವಾಸನೆಯನ್ನು ಕೊಟ್ಟಿದ್ದಾನೆ. (ಜ್ಞಾನೋ 29:10; ಕೀರ್ತ 37:37, NW) ಸಮಗ್ರತೆಯನ್ನು ಕಾಪಾಡಿಕೊಂಡ ಯೋಬನು ಸಹ “ನಿರ್ದೋಷಿಯೂ [ಹೀಬ್ರು, ಟ್ಯಾಮ್] ಯಥಾರ್ಥಚಿತ್ತನೂ ಆಗಿದ್ದನು” ಅಂತ ತಿಳಿಸಲಾಗಿದೆ.—ಯೋಬ 1:1, 8; 2:3.
ಕಾವಲಿನಬುರುಜು19.02 ಪುಟ 16 ಪ್ಯಾರ 11
ಮೆಚ್ಚುಗೆ ಮನಸ್ಸಲ್ಲಿದ್ದರೆ ಸಾಲದು, ತೋರಿಸಬೇಕು
11 ದುಃಖಕರವಾಗಿ ಬೈಬಲಲ್ಲಿರುವ ಕೆಲವು ವ್ಯಕ್ತಿಗಳು ಮೆಚ್ಚುಗೆ ತೋರಿಸಲು ತಪ್ಪಿಹೋದರು. ಏಸಾವನ ಉದಾಹರಣೆ ನೋಡಿ. ಯೆಹೋವನ ಮೇಲೆ ಪ್ರೀತಿ-ಗೌರವ ಇದ್ದ ಇಸಾಕ ಮತ್ತು ರೆಬೆಕ್ಕ ಅವನನ್ನು ಬೆಳೆಸಿದ್ದರೂ ಏಸಾವನಿಗೆ ಪವಿತ್ರ ವಿಷಯಗಳ ಮೇಲೆ ಮೆಚ್ಚುಗೆ ಇರಲಿಲ್ಲ. (ಇಬ್ರಿಯ 12:16 ಓದಿ.) ಈ ವಿಷಯ ಹೇಗೆ ಬೆಳಕಿಗೆ ಬಂತು? ಬರೀ ಒಂದು ಹೊತ್ತು ಊಟಕ್ಕಾಗಿ ಅವನು ಚೊಚ್ಚಲತನದ ಹಕ್ಕನ್ನು ತನ್ನ ತಮ್ಮನಾದ ಯಾಕೋಬನಿಗೆ ಮಾರಿಬಿಟ್ಟನು. (ಆದಿ. 25:30-34) ಆಮೇಲೆ ಇದನ್ನು ನೆನಸಿ ಏಸಾವ ತುಂಬ ವಿಷಾದಪಟ್ಟನು. ಅದನ್ನು ಕೊಟ್ಟುಬಿಟ್ಟ ಮೇಲೆ ಅದರ ಬಗ್ಗೆ ವಿಷಾದಪಟ್ಟು ಪ್ರಯೋಜನ ಇರಲಿಲ್ಲ. ಯಾಕೆಂದರೆ ತನ್ನ ಹತ್ತಿರ ಏನಿತ್ತೋ ಅದರ ಮೌಲ್ಯ ಅವನಿಗೆ ಗೊತ್ತಿರಲಿಲ್ಲ.
t-1-E ಪುಟ 835
ಹಿರೀಮಗ, ಚೊಚ್ಚಲು ಮರಿ
ಹಿಂದಿನ ಕಾಲದಿಂದಲೂ ಹಿರಿಯ ಮಗನಿಗೆ ಕುಟುಂಬದಲ್ಲಿ ಗೌರವದ ಸ್ಥಾನ ಇತ್ತು ಮತ್ತು ತಂದೆಯ ನಂತರ ಮನೆಯಲ್ಲಿ ಮುಖ್ಯ ಸ್ಥಾನ ಇತ್ತು. ತಂದೆಯ ಆಸ್ತಿಯಲ್ಲಿ ಅವನಿಗೆ ಬೇರೆಲ್ಲರಿಗಿಂತ ಎರಡು ಪಟ್ಟು ಭಾಗ ಸಿಗುತ್ತಿತ್ತು. (ಧರ್ಮೋ 21:17) ಯೋಸೇಫನು ಊಟಕ್ಕಾಗಿ ಎಲ್ಲರನ್ನು ಕೂರಿಸುವಾಗ ರೂಬೇನನು ಮೊದಲನೆಯವನಾಗಿದ್ದರಿಂದ ಅವನನ್ನು ಮೊದಲು ಕೂರಿಸಿದನು. (ಆದಿ 43:33) ಆದ್ರೆ ಬೈಬಲ್, ಮಕ್ಕಳ ಹೆಸರುಗಳ ಪಟ್ಟಿಯನ್ನು ಕೊಡುವಾಗ ಯಾವಾಗ್ಲೂ ಹಿರೀ ಮಗನ ಹೆಸರನ್ನು ಮೊದಲು ದಾಖಲಿಸಿಲ್ಲ. ಹೆಚ್ಚಾಗಿ ಆ ಮಕ್ಕಳಲ್ಲಿ ಯಾರು ಹೆಚ್ಚು ಪ್ರಮುಖ ವ್ಯಕ್ತಿಯಾಗಿದ್ದರೋ ನಂಬಿಗಸ್ತರಾಗಿದ್ದರೋ ಅವ್ರ ಹೆಸ್ರನ್ನು ಮೊದಲು ದಾಖಲಿಸಲಾಗಿದೆ, ಹಿರೀ ಮಗನ ಹೆಸರನ್ನಲ್ಲ.—ಆದಿ 6:10; 1ಪೂರ್ವ 1:28; ಆದಿ 11:26, 32; 12:4 ಹೋಲಿಸಿ. ಚೊಚ್ಚಲತನದ ಹಕ್ಕು; ಸ್ವಾಸ್ತ್ಯ ನೋಡಿ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ವಾಚಕರಿಂದ ಪ್ರಶ್ನೆಗಳು
ಬೈಬಲ್ ಕಾಲದಲ್ಲಿ, ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರೂ ಚೊಚ್ಚಲತನದ ಹಕ್ಕು ಇದ್ದವರಾ?
ಈ ಹಿಂದೆ ನಮ್ಮ ಪ್ರಕಾಶನಗಳಲ್ಲಿ ಕೆಲವೊಮ್ಮೆ ಈ ಅರ್ಥ ಕೊಡುವಂಥ ಹೇಳಿಕೆಗಳನ್ನು ನಾವು ಮಾಡಿದ್ದೆವು. ಇಬ್ರಿಯ 12:16 ರ ಪ್ರಕಾರ ಇದು ಸರಿ ಎಂದು ಕಂಡಿತ್ತು. ಏಸಾವನು ‘ಪವಿತ್ರ ವಿಷಯಗಳನ್ನು ಗಣ್ಯಮಾಡಲಿಲ್ಲ’ ಮತ್ತು “ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನೇ [ಯಾಕೋಬನಿಗೆ] ಕೊಟ್ಟುಬಿಟ್ಟ” ಎಂದು ಆ ವಚನ ಹೇಳುತ್ತದೆ. ಯಾಕೋಬನು ‘ಚೊಚ್ಚಲತನದ ಹಕ್ಕನ್ನು’ ಪಡೆದುಕೊಂಡದ್ದರಿಂದ ಅವನು ಮೆಸ್ಸೀಯನ ಪೂರ್ವಜನು ಆದನೆಂದು ಆ ವಚನ ಸೂಚಿಸುವಂತೆ ಕಂಡಿತ್ತು.—ಮತ್ತಾ. 1:2, 16; ಲೂಕ 3:23, 34.
ಆದರೆ ಬೈಬಲ್ ವೃತ್ತಾಂತಗಳನ್ನು ಪರಿಶೀಲಿಸಿದಾಗ ಮೆಸ್ಸೀಯನ ಪೂರ್ವಜನಾಗಲು ಒಬ್ಬನಿಗೆ ಚೊಚ್ಚಲತನದ ಹಕ್ಕು ಇರಲೇಬೇಕು ಎಂದೇನಿರಲಿಲ್ಲವೆಂದು ಗೊತ್ತಾಗುತ್ತದೆ. ಕೆಲವೊಂದು ಪುರಾವೆಗಳನ್ನು ಇಲ್ಲಿ ಕೊಡಲಾಗಿದೆ.
ಯಾಕೋಬನಿಗೆ (ಇಸ್ರಾಯೇಲನಿಗೆ) ಲೇಯಳಿಂದ ಹುಟ್ಟಿದ ಗಂಡುಮಕ್ಕಳಲ್ಲಿ ಚೊಚ್ಚಲ ಮಗ ರೂಬೇನ್. ನಂತರ, ಯಾಕೋಬನು ಹೆಚ್ಚು ಪ್ರೀತಿಸುತ್ತಿದ್ದ ಪತ್ನಿಯಾದ ರಾಹೇಲಳಿಂದ ಹುಟ್ಟಿದ ಚೊಚ್ಚಲ ಮಗ ಯೋಸೇಫ. ರೂಬೇನನ ಕೆಟ್ಟ ನಡತೆಯಿಂದಾಗಿ ಅವನ ಚೊಚ್ಚಲತನದ ಹಕ್ಕು ಯೋಸೇಫನಿಗೆ ಕೊಡಲ್ಪಟ್ಟಿತು. (ಆದಿ. 29:31-35; 30:22-25; 35:22-26; 49:22-26; 1 ಪೂರ್ವ. 5:1, 2) ಆದರೂ ಮೆಸ್ಸೀಯನು ಹುಟ್ಟಿದ್ದು ರೂಬೇನ್ ಅಥವಾ ಯೋಸೇಫನ ವಂಶದಲ್ಲಿ ಅಲ್ಲ. ಬದಲಾಗಿ ಲೇಯಳ ನಾಲ್ಕನೇ ಪುತ್ರನಾದ ಯೆಹೂದನ ವಂಶದಲ್ಲಿ.—ಆದಿ. 49:10.
ಲೂಕ 3:32 ರಲ್ಲಿ ದಾಖಲಾಗಿರುವ ಮೆಸ್ಸೀಯನ ವಂಶಾವಳಿಯಲ್ಲಿರುವ ಐದು ಪುರುಷರ ಬಗ್ಗೆ ನೋಡಿ. ಆ ಐದು ಪುರುಷರೂ ಚೊಚ್ಚಲ ಮಕ್ಕಳಂತೆ ತೋರುತ್ತದೆ. ಉದಾಹರಣೆಗೆ, ಬೋವಜ ಮತ್ತು ಅವನ ಮಗ ಓಬೇದ ಹಾಗೂ ಓಬೇದನ ಮಗ ಇಷಯ ಚೊಚ್ಚಲ ಮಕ್ಕಳಾಗಿದ್ದರು.—ರೂತ. 4:17, 20-22; 1 ಪೂರ್ವ. 2:10-12.
ಆದರೆ ಇಷಯನ ಮಗನಾದ ದಾವೀದ ಚೊಚ್ಚಲ ಮಗನಾಗಿರಲಿಲ್ಲ. ಇವನು ಇಷಯನ ಎಂಟು ಪುತ್ರರಲ್ಲಿ ಕೊನೇ ಮಗನಾಗಿದ್ದನು. ಹಾಗಿದ್ದರೂ ಮೆಸ್ಸೀಯನು ದಾವೀದನ ವಂಶದಲ್ಲಿ ಹುಟ್ಟಿದನು. (1 ಸಮು. 16:10, 11; 17:12; ಮತ್ತಾ. 1:5, 6) ಅದೇ ರೀತಿ, ಮೆಸ್ಸೀಯನ ವಂಶಾವಳಿಯಲ್ಲಿ ದಾವೀದನ ನಂತರ ಇರುವ ಸೊಲೊಮೋನನು ಕೂಡ ದಾವೀದನ ಚೊಚ್ಚಲ ಮಗನಾಗಿರಲಿಲ್ಲ.—2 ಸಮು. 3:2-5.
ಇದನ್ನೆಲ್ಲ ಪರಿಗಣಿಸಿ ಚೊಚ್ಚಲತನಕ್ಕೆ ಬೆಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಚೊಚ್ಚಲ ಮಗನಿಗೆ ಗೌರವಯುತ ಸ್ಥಾನವಿತ್ತು ಮತ್ತು ತಂದೆಯ ನಂತರ ಹೆಚ್ಚಾಗಿ ಅವನೇ ಕುಟುಂಬದ ಯಜಮಾನನಾಗುತ್ತಿದ್ದ. ಅಷ್ಟೇ ಅಲ್ಲ, ಆಸ್ತಿಯಲ್ಲಿ ಎರಡು ಭಾಗ ಚೊಚ್ಚಲ ಮಗನಿಗೆ ಸಿಗುತ್ತಿತ್ತು.—ಆದಿ. 43:33; ಧರ್ಮೋ. 21:17; ಯೆಹೋ. 17:1.
ಚೊಚ್ಚಲತನದ ಹಕ್ಕನ್ನು ಬೇರೆಯವರಿಗೆ ದಾಟಿಸಬಹುದಿತ್ತು. ಅಬ್ರಹಾಮನು ಇಷ್ಮಾಯೇಲನನ್ನು ಕಳುಹಿಸಿಬಿಟ್ಟಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸಾಕನಿಗೆ ಬಂತು. (ಆದಿ. 21:14-21; 22:2) ಈಗಾಗಲೇ ನೋಡಿದಂತೆ, ರೂಬೇನನ ಚೊಚ್ಚಲತನದ ಹಕ್ಕು ಯೋಸೇಫನಿಗೆ ಸಿಕ್ಕಿತು.
ಈಗ ನಾವು ಪುನಃ ಇಬ್ರಿಯ 12:16 ಕ್ಕೆ ಬರೋಣ. ಅದು ಹೇಳುವುದು: “ಯಾವ ಜಾರನಾಗಲಿ, ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನೇ ಕೊಟ್ಟುಬಿಟ್ಟ ಏಸಾವನಂತೆ ಪವಿತ್ರ ವಿಷಯಗಳನ್ನು ಗಣ್ಯಮಾಡದವನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ.” ಈ ವಚನ ಏನು ತಿಳಿಸುತ್ತಾ ಇದೆ?
ಅಪೊಸ್ತಲ ಪೌಲನು ಮೆಸ್ಸೀಯನ ಪೂರ್ವಜರ ಬಗ್ಗೆ ಚರ್ಚಿಸುತ್ತಿರಲಿಲ್ಲ. ಅವನು ಹಿಂದಿನ ವಚನಗಳಲ್ಲಿ ಕ್ರೈಸ್ತರಿಗೆ ತಮ್ಮ ‘ಪಾದಗಳಿಗೆ ನೇರವಾದ ದಾರಿಗಳನ್ನು ಮಾಡಲು’ ಪ್ರೋತ್ಸಾಹಿಸಿದ್ದನು. ಯಾಕೆಂದರೆ ಅವರು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದರೆ “ದೇವರ ಅಪಾತ್ರ ದಯೆಯನ್ನು ಹೊಂದಲು” ತಪ್ಪಿಹೋಗುತ್ತಿದ್ದರು. (ಇಬ್ರಿ. 12:12-16) ಹೀಗೆ ಪಾಪ ಮಾಡಿದರೆ ಅವರು ಏಸಾವನಂತೆ ಆಗುತ್ತಿದ್ದರು. ಅವನು “ಪವಿತ್ರ ವಿಷಯಗಳನ್ನು ಗಣ್ಯಮಾಡ”ಲಿಲ್ಲ.
ಕುಟುಂಬದ ಯಜಮಾನರು ತಮ್ಮ ಕುಟುಂಬದವರಿಗಾಗಿ ಯಾಜಕರಾಗಿ ಸೇವೆಸಲ್ಲಿಸುತ್ತಿದ್ದ ಸಮಯದಲ್ಲಿ ಏಸಾವನು ಜೀವಿಸಿದ್ದನು. ಹಾಗಾಗಿ ಏಸಾವನಿಗೂ ತನ್ನ ಕುಟುಂಬಕ್ಕಾಗಿ ಆಗೊಮ್ಮೆ ಈಗೊಮ್ಮೆ ಯಜ್ಞಗಳನ್ನು ಅರ್ಪಿಸುವ ಸುಯೋಗ ಸಿಕ್ಕಿರಬಹುದು. (ಆದಿ. 8:20, 21; 12:7, 8; ಯೋಬ 1:4, 5) ಆದರೆ ಶಾರೀರಿಕ ಆಸೆಗಳನ್ನು ತೀರಿಸಿಕೊಳ್ಳುವ ಪ್ರವೃತ್ತಿಯಿದ್ದ ಅವನು ಒಬ್ಬ ಚೊಚ್ಚಲಮಗನಿಗಿದ್ದ ಎಲ್ಲ ಸುಯೋಗಗಳನ್ನು ಒಂದು ಬಟ್ಟಲು ಅಲಸಂದಿಗುಗ್ಗರಿಗಾಗಿ ಕೊಟ್ಟುಬಿಟ್ಟನು. ಅವನು ಅಬ್ರಹಾಮನ ಸಂತತಿಗೆ ಬರಲಿದೆಯೆಂದು ಮುಂತಿಳಿಸಲಾಗಿದ್ದ ಕಷ್ಟದಿಂದ ತಪ್ಪಿಸಿಕೊಳ್ಳಲು ಬಹುಶಃ ಹೀಗೆ ಮಾಡಿದನು. (ಆದಿ. 15:13) ತನಗೆ ಪವಿತ್ರ ವಿಷಯಗಳ ಕಡೆಗೆ ಗಣ್ಯತೆ ಇಲ್ಲ ಎನ್ನುವುದನ್ನೂ ಅವನು ತೋರಿಸಿಕೊಟ್ಟನು. ಹೇಗೆ? ಸುಳ್ಳು ದೇವರ ಆರಾಧಕರಾದ ಇಬ್ಬರು ಹೆಂಗಸರನ್ನು ಮದುವೆ ಮಾಡಿಕೊಳ್ಳುವ ಮೂಲಕ. ಇದರಿಂದ ಅವನ ಹೆತ್ತವರು ದುಃಖಿಸುವಂತಾಯಿತು. (ಆದಿ. 26:34, 35) ಸತ್ಯಾರಾಧಕಳನ್ನೇ ಮದುವೆಯಾಗಲು ಪ್ರಯಾಸಪಟ್ಟ ಯಾಕೋಬನಿಗೂ ಏಸಾವನಿಗೂ ಎಷ್ಟೊಂದು ವ್ಯತ್ಯಾಸ!—ಆದಿ. 28:6, 7; 29:10-12, 18.
ಕೊನೆಗೆ, ಮೆಸ್ಸೀಯನಾದ ಯೇಸುವಿನ ವಂಶಾವಳಿಯ ಬಗ್ಗೆ ಯಾವ ತೀರ್ಮಾನಕ್ಕೆ ಬರಬಹುದು? ಆ ವಂಶಾವಳಿಯಲ್ಲಿದ್ದ ಪುರುಷರಲ್ಲಿ ಕೆಲವರು ಚೊಚ್ಚಲ ಗಂಡುಮಕ್ಕಳಾಗಿದ್ದರು, ಆದರೆ ಎಲ್ಲರೂ ಅಲ್ಲ. ಇದನ್ನು ಯೆಹೂದ್ಯರು ಅರ್ಥಮಾಡಿಕೊಂಡರು ಮತ್ತು ಸ್ವೀಕರಿಸಿದರು. ಆದ್ದರಿಂದಲೇ ಕ್ರಿಸ್ತನು ಇಷಯನ ಕೊನೆ ಮಗನಾದ ದಾವೀದನ ವಂಶದಲ್ಲಿ ಬರುವನೆಂದು ಒಪ್ಪಿಕೊಂಡರು.—ಮತ್ತಾ. 22:42.
it-2-E ಪುಟ 245 ಪ್ಯಾರ 6
ಸುಳ್ಳು
ಬೇರೆಯವ್ರಿಗೆ ಹಾನಿ ಮಾಡಬೇಕೆಂಬ ಉದ್ದೇಶದಿಂದ ಸುಳ್ಳು ಹೇಳೋದನ್ನು ಬೈಬಲ್ ಖಂಡಿಸುತ್ತದೆ. ಆದ್ರೆ ಇದ್ರ ಅರ್ಥ ಯಾರಿಗೆ ಸತ್ಯವನ್ನು ತಿಳುಕೊಳ್ಳುವ ಅರ್ಹತೆ ಇಲ್ವೋ ಅವ್ರಿಗೆ ಸಹ ನಾವು ಎಲ್ಲಾ ವಿಷ್ಯವನ್ನು ಹೇಳಬೇಕು ಅಂತೇನಲ್ಲ. ಯೇಸು ಕ್ರಿಸ್ತನು ಹೀಗೆ ಹೇಳಿದನು: “ಪವಿತ್ರವಾಗಿರುವುದನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಚೆಲ್ಲಿದರೆ ಅವು ತಮ್ಮ ಕಾಲುಗಳಿಂದ ಅವುಗಳನ್ನು ತುಳಿದು ಹಿಂದಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.” (ಮತ್ತಾ 7:6) ಯೇಸು ಕೆಲವೊಮ್ಮೆ ಕೆಲವು ಪ್ರಶ್ನೆಗಳಿಗೆ ನೇರ ಉತ್ತರ ಕೊಡಲಿಲ್ಲ ಅಥವಾ ಪೂರ್ತಿ ಮಾಹಿತಿಯನ್ನು ತಿಳಿಸಲಿಲ್ಲ. ಒಂದುವೇಳೆ ಆತನು ಹಾಗೆ ಮಾಡಿದ್ದಿದ್ರೆ ಅದ್ರಿಂದ ಹಾನಿ ಆಗುತ್ತಿತ್ತು. (ಮತ್ತಾ 15:1-6; 21:23-27; ಯೋಹಾ 7:3-10) ಈ ಕಾರಣದಿಂದಲೇ ಅಬ್ರಹಾಮ, ಇಸಾಕ, ರಾಹಾಬ ಮತ್ತು ಎಲೀಷ ಸಹ ಯೆಹೋವನ ಆರಾಧಕರಲ್ಲದವ್ರಿಗೆ ಸರಿಯಾಗಿ ಮಾಹಿತಿಯನ್ನು ನೀಡಲಿಲ್ಲ ಅಥವಾ ಪೂರ್ತಿ ಮಾಹಿತಿಯನ್ನು ಕೊಡಲಿಲ್ಲ.—ಆದಿ 12:10-19; ಅಧ್ಯಾ 20; 26:1-10; ಯೆಹೋ 2:1-6; ಯಾಕೋ 2:25; 2ಅರ 6:11-23.
ನಮ್ಮ ಕ್ರೈಸ್ತ ಜೀವನ
ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ
ನಾವು ಕಲಿಸುವ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ದೃಶ್ಯ ಸಾಧನಗಳು ಸಹಾಯ ಮಾಡುತ್ತವೆ. ಇದನ್ನೇ ನಮ್ಮ ಮಹೋನ್ನತ ಬೋಧಕನಾದ ಯೆಹೋವನು ಸಹ ಪ್ರಾಮುಖ್ಯ ಪಾಠಗಳನ್ನು ಕಲಿಸುವಾಗ ಉಪಯೋಗಿಸಿದನು. (ಆದಿ 15:5; ಯೆರೆ 18:1-6) ಮಹಾ ಬೋಧಕನಾದ ಯೇಸು ಕೂಡ ದೃಶ್ಯ ಸಾಧನಗಳನ್ನು ಬಳಸಿದನು. (ಮತ್ತಾ 18:2-6; 22:19-21) ಇತ್ತೀಚಿಗೆ ವಿಡಿಯೋಗಳನ್ನು ಉಪಯೋಗಿಸುವುದರಿಂದ ತುಂಬ ಪ್ರಯೋಜನ ಸಿಕ್ಕಿದೆ. ನೀವು ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ ವಿಡಿಯೋಗಳನ್ನು ಚೆನ್ನಾಗಿ ಉಪಯೋಗಿಸುತ್ತೀರಾ?
ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯಲ್ಲಿರುವ ಪಾಠಗಳನ್ನು ಕಲಿಸಲು ಸಹಾಯ ಮಾಡುವ ಹತ್ತು ವಿಡಿಯೋಗಳನ್ನು ತಯಾರಿಸಲಾಗಿದೆ. ಹೆಚ್ಚಿನಾಂಶ, ಪ್ರತಿಯೊಂದು ವಿಡಿಯೋವಿನ ಶೀರ್ಷಿಕೆಯು ಕಿರುಹೊತ್ತಗೆಯಲ್ಲಿ ದಪ್ಪಕ್ಷರದಲ್ಲಿ ಕೊಡಲಾಗಿರುವ ಯಾವುದಾದರೂ ಒಂದು ಪ್ರಶ್ನೆ ತರ ಇದೆ. ಈ ಕಿರುಹೊತ್ತಗೆಯನ್ನು ನಮ್ಮ ವೆಬ್ಸೈಟಲ್ಲಿ ತೆಗೆದು ನೋಡಿದರೆ ಅಲ್ಲಿ ಯಾವ ವಿಡಿಯೋವನ್ನು ಯಾವಾಗ ತೋರಿಸಬೇಕೆಂದು ಕೊಡಲಾಗಿದೆ. ಜೊತೆಗೆ ನಮ್ಮ ಬೋಧನಾ ಸಲಕರಣೆಯಲ್ಲಿ ನಾವು ಅಧ್ಯಯನ ಮಾಡಲು ಉಪಯೋಗಿಸುವ ಬೇರೆ ಪ್ರಕಾಶನಗಳು ಸಹ ಇವೆ. ಈ ಪ್ರಕಾಶನಗಳಲ್ಲಿರುವ ಮಾಹಿತಿಗೆ ಪೂರಕವಾಗಿ ಬೇರೆ ವಿಡಿಯೋಗಳನ್ನು ಸಹ ತಯಾರಿಸಲಾಗಿದೆ.
ನೀವು ನಿಮ್ಮ ವಿದ್ಯಾರ್ಥಿ ಜೊತೆ ಚರ್ಚಿಸುತ್ತಿರುವ ವಿಷಯ ಅವರಿಗೆ ಅರ್ಥಮಾಡಿಕೊಳ್ಳಲು ಕಷ್ಟ ಆಗುತ್ತಿದೆಯಾ? ಅಥವಾ ನಿಮ್ಮ ಬೈಬಲ್ ವಿದ್ಯಾರ್ಥಿ ಯಾವುದಾದರೂ ಪರೀಕ್ಷೆಯನ್ನು ಎದುರಿಸುತ್ತಿದ್ದಾರಾ? jw.orgನಲ್ಲಿ ಮತ್ತು JW ಪ್ರಸಾರದಲ್ಲಿರುವ ಯಾವ ವಿಡಿಯೋದಿಂದ ಅವರಿಗೆ ಸಹಾಯ ಆಗಬಹುದು ಎಂದು ಹುಡುಕಿ. ಅಂಥ ವಿಡಿಯೋ ಸಿಕ್ಕಿದರೆ ನೀವು ಅದನ್ನು ವಿದ್ಯಾರ್ಥಿ ಜೊತೆ ನೋಡಿ ಚರ್ಚಿಸಬಹುದು.
ಪ್ರತಿ ತಿಂಗಳು ಹೊಸ-ಹೊಸ ವಿಡಿಯೋಗಳು ಬರುತ್ತಾ ಇರುತ್ತವೆ. ನೀವು ಆ ವಿಡಿಯೋಗಳನ್ನು ನೋಡುವಾಗ, ‘ಬೇರೆಯವರಿಗೆ ಕಲಿಸುವಾಗ ನಾನು ಈ ವಿಡಿಯೋವನ್ನು ಹೇಗೆ ಉಪಯೋಗಿಸಬಹುದು’ ಎಂದು ಯೋಚಿಸಿ.
ಸಿಹಿಸುದ್ದಿ ಕಿರುಹೊತ್ತಗೆಯಲ್ಲಿರುವ ಮಾಹಿತಿಗೆ ಪೂರಕವಾಗಿರುವ ಕೆಲವು ವಿಡಿಯೋಗಳು
ಪಾಠ 2
ದೇವರಿಗೊಂದು ಹೆಸರಿದೆಯಾ?
ಪಾಠ 3
ಬೈಬಲನ್ನು ಯಾರು ಬರೆಸಿದರು?
ಬೈಬಲ್ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?
ಪಾಠ 4
ಯೇಸು ಏಕೆ ಜೀವಕೊಟ್ಟನು?
ಪಾಠ 5
ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು?
ಪಾಠ 6
ಸತ್ತ ಮೇಲೆ ಏನಾಗುತ್ತದೆ?
ಪಾಠ 7
ದೇವರ ರಾಜ್ಯ ಅಂದರೇನು?
ಪಾಠ 8
ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?
ಪಾಠ 10
ದೇವರು ಎಲ್ಲ ರೀತಿಯ ಆರಾಧನೆಯನ್ನು ಒಪ್ಪುತ್ತಾನಾ?
ಪಾಠ 12
ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ?
ಮಾರ್ಚ್ 23-29
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 27-28
“ಯಾಕೋಬನಿಗೆ ಆಶೀರ್ವಾದ ಸಿಕ್ಕಿತು”
ಕಾವಲಿನಬುರುಜು04 4/15 ಪುಟ 11 ಪ್ಯಾರ 4-5
ರೆಬೆಕ್ಕ ಒಬ್ಬ ಶ್ರಮಶೀಲ ದೇವಭಕ್ತೆ
ಏಸಾವನು ಯಾಕೋಬನ ಸೇವೆಮಾಡಬೇಕೆಂಬುದು ಇಸಾಕನಿಗೆ ತಿಳಿದಿತ್ತೊ ಇಲ್ಲವೊ ಎಂಬದನ್ನು ಬೈಬಲ್ ಹೇಳುವುದಿಲ್ಲ. ಆದರೆ ಹೇಗೂ, ಆಶೀರ್ವಾದಗಳು ಯಾಕೋಬನಿಗೆ ಸೇರತಕ್ಕವುಗಳು ಎಂಬುದು ರೆಬೆಕ್ಕ ಮತ್ತು ಯಾಕೋಬರಿಗೆ ತಿಳಿದಿತ್ತು. ಏಸಾವನು ತನ್ನ ತಂದೆಗೋಸ್ಕರ ಬೇಟೆಯಾಡಿದ ಪ್ರಾಣಿಯ ಭಕ್ಷ್ಯವನ್ನು ತಂದುಕೊಡುವಾಗ ಇಸಾಕನು ಅವನನ್ನು ಆಶೀರ್ವದಿಸಲಿದ್ದಾನೆಂಬ ಸುದ್ದಿ ರೆಬೆಕ್ಕಳ ಕಿವಿಗೆ ಬಿದ್ದ ಕೂಡಲೆ ಅವಳು ಕಾರ್ಯಪ್ರವೃತ್ತಳಾಗುತ್ತಾಳೆ. ಯುವತಿಯಾಗಿದ್ದಾಗ ಅವಳಲ್ಲಿದ್ದ ನಿರ್ಣಾಯಕತೆ ಮತ್ತು ಹುರುಪು, ಅವಳಲ್ಲಿ ಈಗಲೂ ಇದೆ. ಅವಳು ಯಾಕೋಬನಿಗೆ ಎರಡು ಒಳ್ಳೇ ಆಡಿನ ಮರಿಗಳನ್ನು ತರುವಂತೆ ‘ಅಪ್ಪಣೆ ಕೊಡುತ್ತಾಳೆ’ (NW). ಅವಳು ತನ್ನ ಗಂಡನ ಅಚ್ಚುಮೆಚ್ಚಿನ ಭಕ್ಷ್ಯವನ್ನು ತಯಾರಿಸಲಿದ್ದಳು. ಆಮೇಲೆ ಯಾಕೋಬನು ಆ ಆಶೀರ್ವಾದವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ಏಸಾವನಂತೆ ನಟಿಸಬೇಕಿತ್ತು. ಆದರೆ ಯಾಕೋಬನು ಈ ವಿಷಯದಲ್ಲಿ ತಾಯಿಯೊಂದಿಗೆ ಆಕ್ಷೇಪವೆತ್ತುತ್ತಾನೆ. ಅವನ ತಂದೆಗೆ ಈ ನಾಟಕದ ಬಗ್ಗೆ ಖಂಡಿತವಾಗಿ ಗೊತ್ತಾಗುವುದು ಮತ್ತು ಅವನನ್ನು ಶಪಿಸುವನು! ಆದರೆ ರೆಬೆಕ್ಕಳು ಜಗ್ಗುವುದಿಲ್ಲ. “ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ” ಎಂದವಳು ಹೇಳುತ್ತಾಳೆ. ನಂತರ ಅವಳು ಭಕ್ಷ್ಯವನ್ನು ತಯಾರಿಸುತ್ತಾಳೆ, ಮತ್ತು ಯಾಕೋಬನ ವೇಷಮರೆಸಿ, ತನ್ನ ಗಂಡನ ಬಳಿ ಕಳುಹಿಸುತ್ತಾಳೆ.—ಆದಿಕಾಂಡ 27:1-17.
ರೆಬೆಕ್ಕಳು ಏಕೆ ಹೀಗೆ ಮಾಡಿದಳೆಂಬುದು ತಿಳಿಸಲ್ಪಟ್ಟಿಲ್ಲ. ಅನೇಕರು ಅವಳ ಈ ಕೃತ್ಯವನ್ನು ಖಂಡಿಸುತ್ತಾರೆ. ಆದರೆ ಬೈಬಲಾಗಲಿ, ಯಾಕೋಬನಿಗೆ ಆಶೀರ್ವಾದ ಸಿಕ್ಕಿದೆಯೆಂದು ತಿಳಿದುಬಂದ ನಂತರವೂ ಇಸಾಕನಾಗಲಿ ಅವಳ ಆ ಕೃತ್ಯವನ್ನು ಖಂಡಿಸಲಿಲ್ಲ. ಬದಲಾಗಿ ಇಸಾಕನು ಆ ಆಶೀರ್ವಾದವನ್ನು ಇನ್ನೂ ಹೆಚ್ಚಿಸುತ್ತಾನೆ. (ಆದಿಕಾಂಡ 27:29; 28:3, 4) ತನ್ನ ಪುತ್ರರ ಕುರಿತಾಗಿ ಯೆಹೋವನು ಏನನ್ನು ಮುಂತಿಳಿಸಿದ್ದನೊ ಅದು ರೆಬೆಕ್ಕಳಿಗೆ ತಿಳಿದಿತ್ತು. ಆದುದರಿಂದ ನ್ಯಾಯಯುತವಾಗಿ ಯಾಕೋಬನಿಗೆ ಸೇರಬೇಕಾಗಿರುವ ಆಶೀರ್ವಾದವು ಅವನಿಗೆ ಸಿಗುವುದನ್ನು ಖಚಿತಪಡಿಸುವಂತೆ ಆಕೆ ಕ್ರಿಯೆಗೈಯುತ್ತಾಳೆ. ಇದು ಸ್ಪಷ್ಟವಾಗಿ ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿದೆ.—ರೋಮನ್ನರಿಗೆ 9:6-13.
ಕಾವಲಿನಬುರುಜು07-E 10/1 ಪುಟ 31 ಪ್ಯಾರ 2-3
ವಾಚಕರಿಂದ ಪ್ರಶ್ನೆಗಳು
ರೆಬೆಕ್ಕ ಮತ್ತು ಯಾಕೋಬ ಯಾಕೆ ಹಾಗೆ ಮಾಡಿದರು ಅನ್ನೋದರ ಬಗ್ಗೆ ಬೈಬಲ್ ಯಾವುದೇ ಮಾಹಿತಿಯನ್ನು ಕೊಡಲ್ಲ. ಆದ್ರೆ ಆ ಸನ್ನಿವೇಶ ದಿಢೀರನೆ ಎದುರಾಯಿತು ಅನ್ನೋದನ್ನು ಮಾತ್ರ ಅದು ಸೂಚಿಸುತ್ತೆ. ದೇವರ ವಾಕ್ಯ ರೆಬೆಕ್ಕ ಮತ್ತು ಯಾಕೋಬ ಮಾಡಿದ್ದನ್ನು ಸರಿ ಅಂತ ಸಮರ್ಥಿಸುವುದಿಲ್ಲ ತಪ್ಪು ಅಂತನೂ ಹೇಳೋದಿಲ್ಲ. ಹೀಗೆ ಸುಳ್ಳು ಹೇಳುವುದರ ಬಗ್ಗೆ, ಮೋಸ ಮಾಡುವುದರ ಬಗ್ಗೆ ಈ ವೃತ್ತಾಂತವನ್ನು ಒಂದು ಮಾದರಿಯಾಗಿ ಕೊಟ್ಟಿಲ್ಲ. ಆದ್ರೆ ಬೈಬಲ್ ಆಗ ಸನ್ನಿವೇಶ ಹೇಗಿತ್ತು ಅನ್ನೋದನ್ನು ಮಾತ್ರ ವಿವರಿಸುತ್ತೆ.
ತಂದೆಯ ಆಶೀರ್ವಾದವನ್ನು ಪಡಕೊಳ್ಳೋಕೆ ಅರ್ಹನಾಗಿದ್ದದ್ದು ಯಾಕೋಬನೇ ಹೊರತು ಏಸಾವನಲ್ಲ ಅನ್ನೋದು ಆ ವೃತ್ತಾಂತದಿಂದ ಸ್ಪಷ್ಟವಾಗುತ್ತೆ. ಚೊಚ್ಚಲುತನದ ಹಕ್ಕಿನ ಕಡೆಗೆ ಗೌರವನೇ ಇಲ್ಲದಿರೋ ತನ್ನ ಅಣ್ಣನಿಂದ ಯಾಕೋಬನು ಈಗಾಗಲೇ ಆ ಹಕ್ಕನ್ನು ಕಾನೂನುಬದ್ಧವಾಗಿ ಕೊಂಡುಕೊಂಡಿದ್ದನು. ಏಸಾವನು ಅದನ್ನು ತನ್ನ ಹಸಿವೆಯನ್ನು ತಣಿಸಿಕೊಳ್ಳಲಿಕ್ಕೆ, ಒಂದು ಊಟಕ್ಕಾಗಿ ಮಾರಿಬಿಟ್ಟಿದ್ದನು. ಹೀಗೆ ಏಸಾವನು “ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿದನು.” (ಆದಿಕಾಂಡ 25:29-34) ಹಾಗಾಗಿ ಯಾಕೋಬನು ತನ್ನ ತಂದೆಯ ಹತ್ರ ಕೇಳಿಕೊಂಡಿದ್ದು ನ್ಯಾಯವಾಗಿ ಆತನಿಗೆ ಸಿಗಬೇಕಾಗಿದ್ದ ಆಶೀರ್ವಾದವನ್ನೇ ಆಗಿತ್ತು.
it-1-E ಪುಟ 341 ಪ್ಯಾರ 6
ಆಶೀರ್ವಾದ
ಬೈಬಲಿನಲ್ಲಿ ತಿಳಿಸಲಾಗಿರುವ ಪೂರ್ವಜರ ಕಾಲದಲ್ಲಿ ಒಬ್ಬ ತಂದೆ ತಾನು ಸಾಯೋದಕ್ಕೂ ಸ್ವಲ್ಪ ಮುಂಚೆ ತನ್ನ ಎಲ್ಲಾ ಗಂಡು ಮಕ್ಕಳನ್ನು ಆಶೀರ್ವದಿಸುತ್ತಿದ್ದನು. ಇದು ಆಗ ತುಂಬ ಪ್ರಾಮುಖ್ಯವಾದ ವಿಷಯವಾಗಿತ್ತು ಮತ್ತು ಇದಕ್ಕೆ ತುಂಬ ಮಾನ್ಯತೆಯನ್ನು ಕೊಡಲಾಗುತ್ತಿತ್ತು. ಇಸಾಕನು ಯಾಕೋಬನನ್ನು ತನ್ನ ಮೊದಲನೇ ಮಗ ಏಸಾವ ಎಂದು ನೆನಸಿ ಆಶೀರ್ವದಿಸಿದನು. ಇಸಾಕನಿಗೆ ವಯಸ್ಸಾಗಿ ಕಣ್ಣು ಕಾಣಿಸದೇ ಇದ್ದ ಕಾರಣ ಏಸಾವನನ್ನು ಆಶೀರ್ವದಿಸೋದಕ್ಕೂ ಮುಂಚೆನೇ ಯಾಕೋಬನನ್ನು ಆಶೀರ್ವದಿಸಿ, ದೇವರ ಅನುಗ್ರಹ ಸಿಗಲಿ ಮತ್ತು ಆತನು ಸಮೃದ್ಧಿಹೊಂದಲಿ ಅಂತ ಹೇಳಿದನು. ಈ ಆಶೀರ್ವಾದಗಳು ನಿಜವಾಗುವಂತೆ ಆತನು ಯೆಹೋವನ ಹತ್ರ ಪ್ರಾರ್ಥನೆ ಸಹ ಮಾಡಿರುತ್ತಾನೆ. (ಆದಿ 27:1-4, 23-29; 28:1, 6; ಇಬ್ರಿ 11:20; 12:16, 17) ಸಮಯಾನಂತರ ಇಸಾಕನು ತಾನು ಯಾಕೋಬನಿಗೇ ಆಶೀರ್ವದಿಸುತ್ತಿರುವುದು ಅಂತ ಗೊತ್ತಿದ್ದೂ ಈಗಾಗಲೇ ಕೊಟ್ಟ ಆಶೀರ್ವಾದಗಳನ್ನು ಪುನಃ ಹೇಳಿದನು ಮತ್ತು ಹೆಚ್ಚಿನ ಆಶೀರ್ವಾದಗಳನ್ನು ಕೊಟ್ಟನು. (ಆದಿ 28:1-4) ಯಾಕೋಬನು ಸಹ ಇನ್ನೇನು ಸಾಯಲಿದ್ದಾಗ, ತನ್ನ ಗಂಡು ಮಕ್ಕಳಿಗೆ ಆಶೀರ್ವಾದ ಕೊಡೋದಕ್ಕೂ ಮುಂಚೆ ಯೋಸೇಫನ ಇಬ್ಬರು ಗಂಡು ಮಕ್ಕಳಿಗೆ ಆಶೀರ್ವಾದ ಕೊಟ್ಟನು. (ಆದಿ 48:9, 20; 49:1-28; ಇಬ್ರಿ 11:21) ಅದೇರೀತಿ ಮೋಶೆ, ಸಾಯೋದಕ್ಕೂ ಮುಂಚೆ ಇಡೀ ಇಸ್ರಾಯೇಲ್ ಜನಾಂಗವನ್ನು ಆಶೀರ್ವದಿಸಿದನು. (ಧರ್ಮೋ 33:1) ಈ ಎಲ್ಲಾ ಸನ್ನಿವೇಶಗಳಲ್ಲಿ ಅವರೇನು ಆಶೀರ್ವಾದ ಕೊಟ್ಟರೋ ಅದೇರೀತಿ ನಡೆಯಿತು. ಹಾಗಾಗಿ ಇವನ್ನು ಪ್ರವಾದನೆ ಅಂತನೇ ಹೇಳ್ಬಹುದು. ಈ ರೀತಿ ಆಶೀರ್ವಾದ ಕೊಡುವಾಗ ಕೆಲವೊಮ್ಮೆ ಆಶೀರ್ವಾದ ಕೊಡುವವನು ಅದನ್ನು ಪಡಕೊಳ್ಳುವವರ ತಲೆ ಮೇಲೆ ಕೈಯನ್ನು ಇಡುತ್ತಿದ್ದನು.—ಆದಿ 48:13, 14.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು06 4/15 ಪುಟ 6 ಪ್ಯಾರ 3-4
ನಿಮ್ಮ ಸಂಗಾತಿಯೊಂದಿಗೆ ಸಂವಾದಿಸಲು ಕೀಲಿಕೈಗಳು
ಇಸಾಕನು ಮತ್ತು ರೆಬೆಕ್ಕಳು ಉತ್ತಮ ಸಂವಾದ ಕೌಶಲಗಳನ್ನು ವಿಕಸಿಸಿಕೊಂಡಿದ್ದರೋ? ಅವರ ಮಗನಾದ ಏಸಾವನು ಇಬ್ಬರು ಹಿತ್ತಿಯ ಸ್ತ್ರೀಯರನ್ನು ಮದುವೆಯಾದ ಬಳಿಕ ಒಂದು ಗಂಭೀರ ಸಮಸ್ಯೆಯು ಕುಟುಂಬದಲ್ಲಿ ತಲೆದೋರಿತು. ರೆಬೆಕ್ಕಳು ಇಸಾಕನಿಗೆ ಸತತವಾಗಿ, “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ [ಅವರ ಕಿರಿಮಗ] ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು ಎಂದು ಹೇಳಿದಳು.” (ಆದಿಕಾಂಡ 26:34; 27:46) ಹೌದು, ಆಕೆ ತನ್ನ ಚಿಂತೆಯನ್ನು ಸ್ಪಷ್ಟ ಹಾಗೂ ನಿಶ್ಚಿತ ರೀತಿಯಲ್ಲಿ ವ್ಯಕ್ತಪಡಿಸಿದಳು.
ಆದುದರಿಂದ ಇಸಾಕನು ಏಸಾವನ ಅವಳಿ ಸಹೋದರನಾದ ಯಾಕೋಬನಿಗೆ ಕಾನಾನ್ಯ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದೆಂದು ಹೇಳಿದನು. (ಆದಿಕಾಂಡ 28:1, 2) ರೆಬೆಕ್ಕಳು ಈಗಾಗಲೇ ತನ್ನ ಅಭಿಪ್ರಾಯವನ್ನು ತಿಳಿಯಪಡಿಸಿದ್ದಳು. ಹೀಗೆ, ಈ ದಂಪತಿಯು ಕುಟುಂಬಕ್ಕೆ ಸಂಬಂಧಪಟ್ಟ ಅತಿ ಸೂಕ್ಷ್ಮವಾದ ವಿಷಯದ ಬಗ್ಗೆ ಯಶಸ್ವಿಕರವಾಗಿ ಸಂವಾದಿಸಿದರು ಮತ್ತು ನಮಗೆ ಒಂದು ಉತ್ತಮ ಮಾದರಿಯನ್ನು ಒದಗಿಸಿದ್ದಾರೆ. ಹಾಗಿದ್ದರೂ, ಸಂಗಾತಿಗಳು ಏಕಾಭಿಪ್ರಾಯಕ್ಕೆ ಬರಲಾಗದಿರುವಲ್ಲಿ ಆಗೇನು? ಏನು ಮಾಡಸಾಧ್ಯವಿದೆ?
ಕಾವಲಿನಬುರುಜು04 1/15 ಪುಟ 28 ಪ್ಯಾರ 6
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—II
28:12, 13—ಒಂದು ‘ನಿಚ್ಚಣಿಗೆ’ಯನ್ನೊಳಗೊಂಡ ಯಾಕೋಬನ ಕನಸಿನ ಮಹತ್ವವೇನು? ಕಲ್ಲಿನ ಮೆಟ್ಟಿಲುಸಾಲಿನಂತೆ ಕಂಡಿರಬಹುದಾದ ಈ “ನಿಚ್ಚಣಿಗೆ”ಯು ಭೂಲೋಕ ಮತ್ತು ಪರಲೋಕದ ಮಧ್ಯೆ ಮಾತುಸಂಪರ್ಕವಿದೆಯೆಂಬದನ್ನು ಸೂಚಿಸಿತು. ಅದರಲ್ಲಿ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದದ್ದು, ಯೆಹೋವನ ಮತ್ತು ಆತನ ಒಪ್ಪಿಗೆಯಿರುವ ಜನರ ಮಧ್ಯೆ ದೇವದೂತರು ಪ್ರಮುಖವಾದ ಯಾವುದೊ ವಿಧದಲ್ಲಿ ಸೇವೆಮಾಡುತ್ತಾರೆಂಬದನ್ನು ತೋರಿಸಿತು.—ಯೋಹಾನ 1:51.
ಮಾರ್ಚ್ 30—ಏಪ್ರಿಲ್ 5
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 29-30
“ಯಾಕೋಬನ ಮದುವೆ”
ಕಾವಲಿನಬುರುಜ03 10/15 ಪುಟ 29 ಪ್ಯಾರ 6
ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು
ವಧುವಿನ ಕುಟುಂಬಕ್ಕೆ ವಧುದಕ್ಷಿಣೆಯನ್ನು ಕೊಡುವುದರ ಮೇಲೆ ಮದುವೆಯ ಒಪ್ಪಿಗೆಮಾತು ಜಾರಿಗೆ ಬರುತ್ತಿತ್ತು. ಮುಂದಕ್ಕೆ ಮೋಶೆಯ ಧರ್ಮಶಾಸ್ತ್ರವು, ಅತ್ಯಾಚಾರಗೈಯಲ್ಪಟ್ಟ ಕನ್ನಿಕೆಯರಿಗಾಗಿ 50 ಬೆಳ್ಳಿ ರೂಪಾಯಿ (ಶೆಕೆಲ್)ಗಳ ಬೆಲೆಯನ್ನು ನಿಗದಿಪಡಿಸಿತು. ವಿದ್ವಾಂಸ ಗೊರ್ಡನ್ ವೀನಮ್ರವರು, ಇದು “ಗರಿಷ್ಠಮೊತ್ತದ ವಧುದಕ್ಷಿಣೆ” ಆಗಿತ್ತೆಂದೂ, ಆದರೆ ಹೆಚ್ಚಿನವು “ಅದಕ್ಕಿಂತಲೂ ತುಂಬ ಕಡಿಮೆ” ಆಗಿದ್ದವು ಎಂದು ನಂಬುತ್ತಾರೆ. (ಧರ್ಮೋಪದೇಶಕಾಂಡ 22:28, 29) ಯಾಕೋಬನು ಅಷ್ಟು ಹಣವನ್ನು ಕೊಡಲಿಕ್ಕಾಗಿ ಏರ್ಪಾಡು ಮಾಡಸಾಧ್ಯವಿರಲಿಲ್ಲ. ಆದುದರಿಂದ ಅವನು ಲಾಬಾನನಿಗೆ ತಾನು ಏಳು ವರ್ಷಗಳ ವರೆಗೆ ಕೆಲಸಮಾಡಲು ಸಿದ್ಧನಿದ್ದೇನೆಂದು ಹೇಳಿದನು. “ಪ್ರಾಚೀನ ಬಾಬೆಲಿನ ಸಮಯಗಳಲ್ಲಿ ಸಾಮಾನ್ಯ ಕಾರ್ಮಿಕರಿಗೆ, ಒಂದು ತಿಂಗಳಿಗೆ ಅರ್ಧ ಶೆಕೆಲಿನಿಂದ ಒಂದು ಶೆಕೆಲ್ ಸಂಬಳ ಸಿಗುತ್ತಿದ್ದದರಿಂದ,” (ಏಳು ಪೂರ್ಣ ವರ್ಷಗಳಲ್ಲಿ 42 ರಿಂದ 84 ಶೆಕೆಲ್ಗಳು) “ರಾಹೇಲಳ ಕೈಹಿಡಿಯಲಿಕ್ಕೋಸ್ಕರ ಯಾಕೋಬನು ಲಾಬಾನನಿಗೆ ತುಂಬ ಉದಾರ ಮೊತ್ತದ ಕೊಡುಗೆಯನ್ನು ನೀಡುತ್ತಿದ್ದನು” ಎಂದು ವೀನಮ್ ಮುಂದುವರಿಸುತ್ತಾರೆ. ಲಾಬಾನನು ಇದಕ್ಕೆ ಕೂಡಲೇ ಒಪ್ಪಿಕೊಂಡನು.—ಆದಿಕಾಂಡ 29:19.
ಕಾವಲಿನಬುರುಜು07-E 10/1 ಪುಟ 8-9
ಕಷ್ಟದಲ್ಲಿದ್ದರೂ “ಇಸ್ರಾಯೇಲನ ಮನೆಯನ್ನು ಕಟ್ಟಿದ” ಅಕ್ಕ-ತಂಗಿ
ಲೇಯಳು ಯಾಕೋಬನಿಗೆ ಮೋಸ ಮಾಡೋಕೆ ಸಂಚು ಮಾಡಿದಳಾ? ಅಥ್ವಾ ಬೇರೆ ದಾರಿ ಇಲ್ಲದೆ ತನ್ನ ತಂದೆಯ ಮಾತನ್ನು ಕೇಳಬೇಕಾಯಿತಾ? ಆ ಸಮ್ಯದಲ್ಲಿ ರಾಹೇಲಳು ಎಲ್ಲಿದ್ದಳು? ಅಲ್ಲಿ ಏನು ನಡೀತಿದೆ ಅನ್ನೋದು ಅವಳಿಗೆ ಗೊತ್ತಿತ್ತಾ? ಒಂದುವೇಳೆ ಗೊತ್ತಿದ್ರೆ ಅವಳಿಗೆ ಆಗ ಹೇಗನಿಸಿರಬಹುದು? ಅಧಿಕಾರದ ಸ್ಥಾನದಲ್ಲಿದ್ದ ತನ್ನ ತಂದೆಯ ಮಾತಿಗೆ ವಿರುದ್ಧವಾಗಿ ನಡೀತಿದ್ದಳಾ? ಈ ಪ್ರಶ್ನೆಗಳಿಗೆ ಬೈಬಲ್ ಉತ್ತರ ಕೊಡೋದಿಲ್ಲ. ಈ ಮೋಸದ ಬಗ್ಗೆ ಲೇಯ ಮತ್ತು ರಾಹೇಲಳಿಗೆ ಏನನಿಸಿತು ಅಂತ ನಮ್ಗೆ ಗೊತ್ತಿಲ್ಲ. ಆದ್ರೆ ಯಾಕೋಬನಿಗಂತೂ ತುಂಬ ಕೋಪ ಬಂತು. ಆತನು ಲೇಯ ಮತ್ತು ರಾಹೇಲಳ ಹತ್ರ ಅಲ್ಲ, ಲಾಬಾನನ ಹತ್ರ ಹೋಗಿ ಕೋಪದಿಂದ ಹೀಗೆ ಕೇಳಿದನು: “ರಾಹೇಲಳಿಗೋಸ್ಕರ ನಿನಗೆ ಸೇವೆ ಮಾಡಿದೆನಲ್ಲಾ; ಯಾಕೆ ನನಗೆ ಮೋಸಮಾಡಿದಿ?” ಅದಕ್ಕೆ ಲಾಬಾನ ಏನು ಉತ್ರ ಕೊಟ್ಟನು? “ಹಿರೀ ಮಗಳಿಗಿಂತ ಮೊದಲು ಕಿರೀ ಮಗಳನ್ನು ಮದುವೆಮಾಡಿಸಿ ಕೊಡುವದು ನಮ್ಮ . . . ಪದ್ಧತಿಯಲ್ಲ. ಆಕೆಯ [ಮದುವೆಯ] ವಾರವನ್ನು ಪೂರೈಸು; ಅನಂತರ ಈ ನನ್ನ ಕಿರೀ ಮಗಳನ್ನೂ ನಿನಗೆ ಕೊಡುತ್ತೇವೆ; ಈಕೆಗೋಸ್ಕರ ನೀನು ಇನ್ನೂ ಏಳು ವರುಷ ಸೇವೆ ಮಾಡು” ಅಂದನು. (ಆದಿಕಾಂಡ 29:25-27) ಹೀಗೆ ಯಾಕೋಬನು ಮೋಸಹೋಗಿ ಬಹುಪತ್ನೀತ್ವದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡನು. ಇದು ಹೊಟ್ಟೆಕಿಚ್ಚಿಗೆ ನಡೆಸಿತು.
it-2-E ಪುಟ 341 ಪ್ಯಾರ 3
ಮದುವೆ
ಮದುವೆ ಸಮಾರಂಭ. ಇಸ್ರಾಯೇಲ್ಯರ ಕಾಲದಲ್ಲಿ ಮದುವೆ ಸಮಯದಲ್ಲಿ ಯಾವುದೇ ನಿರ್ದಿಷ್ಟ ರೀತಿಯ ಕಾರ್ಯಕ್ರಮ ಇರ್ತಿರಲಿಲ್ಲ. ಆದ್ರೂ ಅದು ಒಂದು ಸಂತೋಷ ಸಮಾರಂಭದ ಸಮಯವಾಗಿರುತ್ತಿತ್ತು. ಮದುವೆ ದಿನ ಮದುಮಗಳು ತನ್ನ ಮನೆಯಲ್ಲೇ ಅನೇಕ ರೀತಿಯ ತಯಾರಿಗಳನ್ನು ಮಾಡುತ್ತಿದ್ದಳು. ಮೊದಲು ಅವಳು ಸ್ನಾನಮಾಡಿ ಸುಗಂಧತೈಲವನ್ನು ಹಚ್ಚಿಕೊಳ್ಳುತ್ತಿದ್ದಳು. (ರೂತ 3:3 ಹೋಲಿಸಿ; ಯೆಹೆ 23:40) ಅವಳ ಸ್ಥಿತಿಗತಿಗೆ ತಕ್ಕಂತೆ ಕಸೂತಿ ಮಾಡಿದಂಥ ಬಿಳೀ ನಾರುಮಡಿಯನ್ನು ಮತ್ತು ಒಡ್ಯಾಣವನ್ನು ತನ್ನ ಸಖಿಯರ ಸಹಾಯದಿಂದ ಧರಿಸಿಕೊಂಡು ಬರುತ್ತಿದ್ದಳು. (ಯೆರೆ 2:32; ಪ್ರಕ 19:7, 8; ಕೀರ್ತ 45:13, 14) ಅವಳ ಹತ್ರ ಆಭರಣಗಳಿದ್ರೆ ಅವುಗಳನ್ನು ಹಾಕಿಕೊಂಡು ತನ್ನನ್ನು ಅಲಂಕರಿಸಿಕೊಳ್ಳುತ್ತಿದ್ದಳು. (ಯೆಶಾ 49:18; 61:10; ಪ್ರಕ 21:2) ಅವಳು ತಲೆಯಿಂದ ಕಾಲಿನವರೆಗೂ ಉದ್ದವಾಗಿದ್ದ, ತೆಳ್ಳಗಿನ ಬಟ್ಟೆಯನ್ನು ಧರಿಸಿಕೊಂಡಿರುತ್ತಿದ್ದಳು. ಇದ್ರಿಂದ ಅವಳ ಮುಖ ಕಾಣಿಸುತ್ತಿರಲಿಲ್ಲ. (ಯೆಶಾ 3:19, 23) ಹಾಗಾಗಿಯೇ ಲಾಬಾನನು ಯಾಕೋಬನಿಗೆ ಸುಲಭವಾಗಿ ಮೋಸಮಾಡೋಕೆ ಸಾಧ್ಯವಾಯಿತು, ಯಾಕೋಬನಿಗೆ ಗೊತ್ತಾಗದಂತೆ ರಾಹೇಲಳ ಬದಲು ಲೇಯಳನ್ನು ಕೊಟ್ಟು ಮದುವೆ ಮಾಡಿದನು. (ಆದಿ 29:23, 25) ರೆಬೆಕ್ಕಳು ಇಸಾಕನನ್ನು ನೋಡಿದಾಗ ತಲೆಗೆ ಮುಸುಕನ್ನು ಹಾಕಿಕೊಂಡಳು. (ಆದಿ 24:65) ಇದು ಮದುಮಗಳು ಮದುಮಗನ ಅಧಿಕಾರಕ್ಕೆ ಅಧೀನಳಾಗೋದನ್ನು ತೋರಿಸಿಕೊಡುತ್ತಿತ್ತು.—1ಕೊರಿಂ 11:5, 10.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1-E ಪುಟ 50
ದತ್ತು ತಗೊಳ್ಳುವುದು
ರಾಹೇಲ ಮತ್ತು ಲೇಯರು ತಮ್ಮ ದಾಸಿಯರಿಗೆ ಯಾಕೋಬನ ಮೂಲಕ ಹುಟ್ಟಿದ ಮಕ್ಕಳನ್ನು ‘ತಮ್ಮ ತೊಡೆಯ ಮೇಲೆ ಹೆರಿಸಿ’ ಸ್ವಂತ ಮಕ್ಕಳಂತೆ ಸ್ವೀಕರಿಸಿದರು. (ಆದಿ 30:3-8, 12, 13, 24) ಯಾಕೋಬನ ಹೆಂಡತಿಯರಿಗೆ ಹುಟ್ಟಿದ ಮಕ್ಕಳಂತೆಯೇ ಈ ಮಕ್ಕಳಿಗೂ ಸ್ವಾಸ್ತ್ಯ ಸಿಕ್ಕಿತು. ಅವರು ಯಾಕೋಬನ ಸ್ವಂತ ಮಕ್ಕಳಾಗಿದ್ದರಿಂದ ಮತ್ತು ಆ ದಾಸಿಯರು ಯಾಕೋಬನ ಹೆಂಡತಿಯರ ಸ್ವತ್ತಾಗಿದ್ದರಿಂದ ಅವರ ಮಕ್ಕಳ ಮೇಲೆ ರಾಹೇಲ ಮತ್ತು ಲೇಯಳಿಗೆ ಅಧಿಕಾರ ಇತ್ತು.
ಕಾವಲಿನಬುರುಜು04 1/15 ಪುಟ 28 ಪ್ಯಾರ 7
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—II
30:14, 15—ರಾಹೇಲಳು ಕಾಮಜನಕ ಫಲಗಳಿಗಾಗಿ ಗರ್ಭಿಣಿಯಾಗುವ ಅವಕಾಶವನ್ನು ತೊರೆದದ್ದೇಕೆ? ಪುರಾತನ ಕಾಲದಲ್ಲಿ ಕಾಮಜನಕ ಗಿಡದ ಹಣ್ಣುಗಳನ್ನು ಔಷಧದಲ್ಲಿ ನಿದ್ರಾಜನಕವಾಗಿಯೂ ಸೆಡೆತವನ್ನು ತಡೆಯಲು ಅಥವಾ ಅದಕ್ಕೆ ಉಪಶಮನವನ್ನು ಕೊಡಲಿಕ್ಕಾಗಿಯೂ ಉಪಯೋಗಿಸಲಾಗುತ್ತಿತ್ತು. ಕಾಮಬಯಕೆಯನ್ನು ಉದ್ರೇಕಿಸಲು ಮತ್ತು ಗರ್ಭಮೂಡಿಸುವ ಶಕ್ತಿಯನ್ನು ಹೆಚ್ಚಿಸಲು ಅಥವಾ ಗರ್ಭಧಾರಣೆಯ ಸಹಾಯಕ್ಕಾಗಿಯೂ ಆ ಹಣ್ಣು ಉಪಯುಕ್ತವೆಂದು ನಂಬಲಾಗುತ್ತಿತ್ತು. (ಪರಮಗೀತ 7:13) ರಾಹೇಲಳ ಈ ವಿನಿಮಯದ ಹಿಂದೆ ಅವಳ ಉದ್ದೇಶವೇನಾಗಿತ್ತೆಂದು ಬೈಬಲ್ ತಿಳಿಸುವುದಿಲ್ಲವಾದರೂ, ಆ ಫಲಗಳು ತಾನು ಗರ್ಭಧರಿಸುವಂತೆ ಮಾಡಬಹುದೆಂದೂ ಮತ್ತು ಹೀಗೆ ಬಂಜೆಯಾಗಿರುವ ತನ್ನ ಅವಮಾನವನ್ನು ನೀಗಿಸಬಹುದೆಂದೂ ಆಕೆ ಭಾವಿಸಿರಬಹುದು. ಆದರೂ, ಯೆಹೋವನು ಆಕೆಗೆ “ಮಕ್ಕಳಾಗುವಂತೆ” ಮಾಡುವ ಮೊದಲು ಕೆಲವು ವರ್ಷಗಳು ದಾಟಿದ್ದವು.—ಆದಿಕಾಂಡ 30:22-24.