ನಮ್ಮ ಅಮೂಲ್ಯ ಸ್ವಾಸ್ತ್ಯ—ಇದು ನಿಮಗೆ ಯಾವ ಅರ್ಥದಲ್ಲಿದೆ?
“ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.”—ಮತ್ತಾಯ 25:34.
1. ಜನರು ಯಾವೆಲ್ಲ ವಿಷಯಗಳನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ?
ಪ್ರತಿಯೊಬ್ಬ ಮಾನವನಿಗೆ ಒಂದಲ್ಲ ಒಂದು ವಿಷಯವು ಪಿತ್ರಾರ್ಜಿತವಾಗಿ ಬಂದಿರುತ್ತದೆ. ಕೆಲವರು ಐಶ್ವರ್ಯವನ್ನು ಪಿತ್ರಾರ್ಜಿತವಾಗಿ ಪಡೆದವರಾಗಿದ್ದು, ಭೌತಿಕವಾಗಿ ಸಂತೃಪ್ತಿಕರ ಜೀವನವನ್ನು ಅವರು ನಡೆಸುತ್ತಾರೆ. ಇನ್ನಿತರರಿಗೆ ಬಡತನವು ಪಿತ್ರಾರ್ಜಿತವಾಗಿ ಬಂದಿರುತ್ತದೆ. ಇನ್ನು ಕೆಲವರ ವಿಷಯದಲ್ಲಿ ಹೇಳುವುದಾದರೆ, ಒಂದು ಪೀಳಿಗೆಯು ತಮ್ಮ ಜೀವನದಲ್ಲಿ ಅನುಭವಿಸಿದ ಅಥವಾ ಕೇಳಿಸಿಕೊಂಡ ಘಟನೆಗಳಿಂದಾಗಿ, ಇನ್ನೊಂದು ಕುಲದ ಕಡೆಗೆ ಕಡು ದ್ವೇಷವನ್ನು ತೋರಿಸುವ ಸ್ವಾಸ್ತ್ಯವನ್ನು ತಮ್ಮ ಮುಂದಿನ ಸಂತತಿಗೆ ದಾಟಿಸಿರುತ್ತದೆ. ಏನೇ ಆಗಲಿ, ಒಂದು ವಿಷಯದಲ್ಲಂತೂ ನಾವೆಲ್ಲರೂ ಸಮಾನರಾಗಿದ್ದೇವೆ. ಅದೇನೆಂದರೆ, ಪ್ರಥಮ ಮಾನವನಾದ ಆದಾಮನಿಂದ ಪಾಪವನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ, ನಾವೆಲ್ಲರೂ ಪಾಪಿಗಳಾಗಿದ್ದೇವೆ. ವಂಶಾನುಕ್ರಮವಾಗಿ ಪಡೆದಂತಹ ಈ ಪಾಪವು ಕಾಲಕ್ರಮೇಣ ಮರಣಕ್ಕೆ ನಡಿಸುತ್ತದೆ.—ಪ್ರಸಂಗಿ 9:2, 10; ರೋಮಾಪುರ 5:12.
2, 3. ಆದಾಮಹವ್ವರ ಸಂತತಿಯವರಿಗಾಗಿ ಯೆಹೋವನು ಆರಂಭದಲ್ಲಿ ಯಾವ ಸ್ವಾಸ್ತ್ಯವನ್ನು ಒದಗಿಸುವ ಏರ್ಪಾಡನ್ನು ಮಾಡಿದನು, ಮತ್ತು ಅವರಿಗೆ ಅದು ಏಕೆ ಸಿಗಲಿಲ್ಲ?
2 ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾಗಿರುವ ಯೆಹೋವನು ಮಾನವಕುಲಕ್ಕೆ, ಇವೆಲ್ಲದಕ್ಕಿಂತ ಭಿನ್ನವಾದಂತಹ ಒಂದು ಸ್ವಾಸ್ತ್ಯವನ್ನು ಆರಂಭದಲ್ಲಿ ನೀಡಿದನು. ಅದೇನೆಂದರೆ, ಪ್ರಮೋದವನದಲ್ಲಿ ಪರಿಪೂರ್ಣ ಸ್ಥಿತಿಯಲ್ಲಿ ಸದಾಕಾಲ ಜೀವಿಸುವ ಸ್ವಾಸ್ತ್ಯ. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರಿಗೆ ದೇವರು ಪರಿಪೂರ್ಣವಾದ, ಪಾಪರಹಿತ ಜೀವಿತವನ್ನು ನೀಡಿದ್ದನು. ಅಷ್ಟುಮಾತ್ರವಲ್ಲ, ಯೆಹೋವ ದೇವರು ಮಾನವಕುಲಕ್ಕೆ ಭೂಮಿಯನ್ನು ಒಂದು ಉಡುಗೊರೆಯಾಗಿ ನೀಡಿದ್ದನು. (ಕೀರ್ತನೆ 115:16) ಮುಂದೆ ಇಡೀ ಭೂಮಿಯು ಏನಾಗಿ ಪರಿಣಮಿಸಸಾಧ್ಯವಿತ್ತೋ ಆ ಪರಿಸ್ಥಿತಿಯ ಒಂದು ನಮೂನೆಯೋಪಾದಿ ಆತನು ಏದೆನ್ ತೋಟವನ್ನು ಒದಗಿಸಿದ್ದನು. ಹಾಗೂ ನಮ್ಮ ಪ್ರಥಮ ಹೆತ್ತವರಿಗೆ ಅದ್ಭುತಕರವಾದ, ಮನೋಹರವಾದ ಒಂದು ನೇಮಕವನ್ನು ನೀಡಿದ್ದನು. ಅವರು ಮಕ್ಕಳನ್ನು ಪಡೆಯಬೇಕಿತ್ತು, ಭೂಮಿ ಹಾಗೂ ಅದರಲ್ಲಿರುವ ಎಲ್ಲ ಸಸ್ಯವರ್ಗ ಹಾಗೂ ಪ್ರಾಣಿಜೀವಿಗಳನ್ನು ನೋಡಿಕೊಳ್ಳಬೇಕಿತ್ತು. ಮತ್ತು ಪ್ರಮೋದವನದ ಗಡಿಗಳನ್ನು ಭೂವ್ಯಾಪಕವಾಗಿ ವಿಸ್ತರಿಸಬೇಕಿತ್ತು. (ಆದಿಕಾಂಡ 1:28; 2:8, 9, 15) ಅವರ ಸಂತತಿಯವರು ಸಹ ಈ ಕೆಲಸದಲ್ಲಿ ಪಾಲ್ಗೊಳ್ಳಲಿಕ್ಕಿದ್ದರು. ತಮ್ಮ ಸಂತತಿಯವರಿಗೆ ದಾಟಿಸಲು ಎಂತಹ ಒಂದು ಅದ್ಭುತಕರ ಸ್ವಾಸ್ತ್ಯವು ಅವರಿಗೆ ಕೊಡಲ್ಪಟ್ಟಿತ್ತು!
3 ಆದರೂ, ಆದಾಮಹವ್ವರು ಮತ್ತು ಅವರ ಸಂತತಿಯವರು ಈ ಎಲ್ಲ ಸುಯೋಗಗಳಲ್ಲಿ ಆನಂದಿಸಬೇಕಾಗಿದ್ದಲ್ಲಿ, ಅವರು ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಪಡೆದುಕೊಂಡಿರಬೇಕಿತ್ತು. ಅವರು ಯೆಹೋವನಿಗೆ ಪ್ರೀತಿ ಹಾಗೂ ವಿಧೇಯತೆಯನ್ನು ತೋರಿಸುವ ಹಂಗಿನಲ್ಲಿದ್ದರು. ಆದರೂ, ದೇವರು ತಮಗೆ ಕೊಟ್ಟದ್ದನ್ನು ಗಣ್ಯಮಾಡಲು ಆದಾಮಹವ್ವರು ತಪ್ಪಿಹೋದರು ಮತ್ತು ಆತನ ಆಜ್ಞೆಗೆ ಅವಿಧೇಯರಾದರು. ಇದರಿಂದಾಗಿ, ಅವರು ಪ್ರಮೋದವನದಂತಿದ್ದ ಮನೆಯನ್ನೂ ದೇವರು ತಮ್ಮ ಮುಂದೆ ಇಟ್ಟಿದ್ದಂತಹ ಮಹಾನ್ ಪ್ರತೀಕ್ಷೆಗಳನ್ನೂ ಕಳೆದುಕೊಂಡರು. ಆದುದರಿಂದ, ಇದನ್ನು ಅವರು ತಮ್ಮ ಸಂತತಿಯವರಿಗೆ ಪಿತ್ರಾರ್ಜಿತವಾಗಿ ದಾಟಿಸಲು ಅಸಮರ್ಥರಾದರು.—ಆದಿಕಾಂಡ 2:16, 17; 3:1-24.
4. ಆದಾಮನು ಕಳೆದುಕೊಂಡ ಸ್ವಾಸ್ತ್ಯವನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ?
4 ಆದರೆ, ಕರುಣಾಭರಿತನಾದ ಯೆಹೋವನು, ಆದಾಮನು ಕಳೆದುಕೊಂಡ ಸ್ವಾಸ್ತ್ಯವನ್ನು ಆದಾಮಹವ್ವರ ಸಂತತಿಯವರು ಪಡೆದುಕೊಳ್ಳಸಾಧ್ಯವಾಗುವಂತೆ ಏರ್ಪಾಡನ್ನು ಮಾಡಿದನು. ಹೇಗೆ? ತನ್ನ ನೇಮಿತ ಸಮಯದಲ್ಲಿ ದೇವರು, ಆದಾಮನ ಸಂತತಿಗೋಸ್ಕರ ತನ್ನ ಸ್ವಂತ ಮಗನಾದ ಯೇಸು ಕ್ರಿಸ್ತನ ಪರಿಪೂರ್ಣ ಮಾನವ ಜೀವಿತವನ್ನು ಒಪ್ಪಿಸಿಕೊಟ್ಟನು. ಈ ರೀತಿಯಲ್ಲಿ ಕ್ರಿಸ್ತನು ಆದಾಮನ ಸಂತತಿಯವರನ್ನು ಕ್ರಯಕ್ಕೆ ಕೊಂಡುಕೊಂಡನು. ಆದರೂ, ಅವರ ಮುಂದಿದ್ದ ಸ್ವಾಸ್ತ್ಯವು ತಾನಾಗಿಯೇ ಅವರದ್ದಾಗಸಾಧ್ಯವಿರಲಿಲ್ಲ. ಇದಕ್ಕಾಗಿ ಅವರು ದೇವರೊಂದಿಗೆ ಅಂಗೀಕೃತ ಸ್ಥಾನದಲ್ಲಿರುವ ಅಗತ್ಯವಿದೆ; ಯೇಸುವಿನ ಯಜ್ಞದ ಪಾಪಪರಿಹಾರಕ ಮೌಲ್ಯದಲ್ಲಿ ನಂಬಿಕೆಯನ್ನಿಡುವ ಮೂಲಕ ಹಾಗೂ ವಿಧೇಯತೆಯಿಂದ ಆ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಈ ಅಂಗೀಕೃತ ಸ್ಥಾನದಲ್ಲಿ ಅವರು ನಿಲ್ಲಸಾಧ್ಯವಿದೆ. (ಯೋಹಾನ 3:16, 36; 1 ತಿಮೊಥೆಯ 2:5, 6; ಇಬ್ರಿಯ 2:9; 5:9) ಹಾಗಾದರೆ, ನಿಮ್ಮ ಜೀವನ ರೀತಿಯು ದೇವರ ಈ ಒದಗಿಸುವಿಕೆಗಾಗಿ ಗಣ್ಯತೆಯನ್ನು ತೋರಿಸುವಂತಿದೆಯೊ?
ಅಬ್ರಹಾಮನ ಮೂಲಕ ದಾಟಿಸಲ್ಪಟ್ಟ ಒಂದು ಸ್ವಾಸ್ತ್ಯ
5. ಯೆಹೋವನೊಂದಿಗಿನ ತನ್ನ ಸಂಬಂಧಕ್ಕೆ ಅಬ್ರಹಾಮನು ಹೇಗೆ ಗಣ್ಯತೆಯನ್ನು ತೋರಿಸಿದನು?
5 ಭೂಮಿಯ ಕುರಿತಾದ ತನ್ನ ಉದ್ದೇಶವನ್ನು ಪೂರೈಸುವಾಗ, ಅಬ್ರಹಾಮನೊಂದಿಗೆ ಯೆಹೋವನು ವಿಶೇಷ ರೀತಿಯಲ್ಲಿ ವ್ಯವಹರಿಸಿದನು. ಈ ನಂಬಿಗಸ್ತ ಮನುಷ್ಯನು ತನ್ನ ಸ್ವದೇಶವನ್ನು ಬಿಟ್ಟು, ತಾನು ತೋರಿಸುವಂತಹ ದೇಶಕ್ಕೆ ಸ್ಥಳಾಂತರಿಸುವಂತೆ ಯೆಹೋವನು ಅವನಿಗೆ ಅಪ್ಪಣೆ ಕೊಟ್ಟನು. ಅಬ್ರಹಾಮನು ಮನಃಪೂರ್ವಕವಾಗಿ ಆ ಅಪ್ಪಣೆಗೆ ವಿಧೇಯನಾದನು. ಅಬ್ರಹಾಮನು ಈ ಸ್ಥಳಕ್ಕೆ ಬಂದ ಬಳಿಕ, ಸ್ವತಃ ಅಬ್ರಹಾಮನಲ್ಲ, ಬದಲಾಗಿ ಅಬ್ರಹಾಮನ ಸಂತತಿಯು ಆ ದೇಶವನ್ನು ಸ್ವಾಸ್ತ್ಯವಾಗಿ ಪಡೆಯುವುದು ಎಂದು ಯೆಹೋವನು ಹೇಳಿದನು. (ಆದಿಕಾಂಡ 12:1, 2, 7) ಇದಕ್ಕೆ ಅಬ್ರಹಾಮನು ಹೇಗೆ ಪ್ರತಿಕ್ರಿಯೆ ತೋರಿಸಿದನು? ಯೆಹೋವನು ಏನನ್ನೇ ಮಾರ್ಗದರ್ಶಿಸಲಿ ಮತ್ತು ಹೇಗೇ ಮಾರ್ಗದರ್ಶಿಸಲಿ, ತನ್ನ ಸಂತತಿಯವರು ತಮ್ಮ ಸ್ವಾಸ್ತ್ಯವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಅಬ್ರಹಾಮನು ಯೆಹೋವನ ಸೇವೆಮಾಡಲು ಸಿದ್ಧಮನಸ್ಕನಾಗಿದ್ದನು. ತನ್ನದಲ್ಲದ ಒಂದು ದೇಶದಲ್ಲಿ ಅಬ್ರಹಾಮನು ಸುಮಾರು 100 ವರ್ಷಗಳ ವರೆಗೆ, ಅಂದರೆ ತನ್ನ ಮರಣದ ತನಕ ಯೆಹೋವನ ಸೇವೆಮಾಡಿದನು. (ಆದಿಕಾಂಡ 12:4; 25:8-10) ನೀವು ಸಹ ಹಾಗೆ ಮಾಡುತ್ತಿದ್ದಿರೊ? ಆದುದರಿಂದಲೇ, ಅಬ್ರಹಾಮನನ್ನು ತನ್ನ “ಸ್ನೇಹಿತ”ನೆಂದು ಯೆಹೋವನು ಹೇಳಿದನು.—ಯೆಶಾಯ 41:8.
6. (ಎ) ತನ್ನ ಮಗನನ್ನು ಅರ್ಪಿಸಲು ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ಮೂಲಕ ಅಬ್ರಹಾಮನು ಏನನ್ನು ತೋರ್ಪಡಿಸಿದನು? (ಬಿ) ಯಾವ ಅಮೂಲ್ಯ ಸ್ವಾಸ್ತ್ಯವನ್ನು ಅಬ್ರಹಾಮನು ತನ್ನ ಸಂತತಿಯವರಿಗೆ ದಾಟಿಸಸಾಧ್ಯವಿತ್ತು?
6 ಅನೇಕ ವರ್ಷಗಳ ನಂತರ ಅಬ್ರಹಾಮನು ಒಬ್ಬ ಮಗನನ್ನು ಪಡೆದನು. ಅಬ್ರಹಾಮನು ಅವನಿಗೆ ಇಸಾಕನೆಂದು ಹೆಸರಿಟ್ಟನು ಮತ್ತು ಅವನನ್ನು ತುಂಬ ಪ್ರೀತಿಸುತ್ತಿದ್ದನು. ಈ ಹುಡುಗನು ಸಾಕಷ್ಟು ದೊಡ್ಡವನಾದಾಗ, ಇವನನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವನು ಅಬ್ರಹಾಮನಿಗೆ ಅಪ್ಪಣೆ ನೀಡಿದನು. ಆದರೆ ಅಬ್ರಹಾಮನಿಗೆ ಒಂದು ವಿಷಯವು ತಿಳಿದಿರಲಿಲ್ಲ. ಅದೇನೆಂದರೆ, ತನ್ನ ಮಗನನ್ನು ಒಂದು ಪ್ರಾಯಶ್ಚಿತ್ತವಾಗಿ ನೀಡುವ ಮೂಲಕ, ತನ್ನ ಉದ್ದೇಶವನ್ನು ನೆರವೇರಿಸಲಿದ್ದೇನೆ ಎಂಬುದನ್ನು ದೇವರು ತೋರ್ಪಡಿಸುತ್ತಿದ್ದನು. ಇದು ತಿಳಿದಿರಲಿಲ್ಲವಾದರೂ ಅವನು ದೇವರ ಅಪ್ಪಣೆಗೆ ವಿಧೇಯನಾದನು ಮತ್ತು ತನ್ನ ಮಗನಾದ ಇಸಾಕನನ್ನು ಬಲಿಕೊಡಲು ಮುಂದುವರಿದನು. ಆದರೆ ಯೆಹೋವನ ದೇವದೂತನು ಅವನನ್ನು ತಡೆದನು. (ಆದಿಕಾಂಡ 22:9-14) ಅಬ್ರಹಾಮನಿಗೆ ತಾನು ಮಾಡಿದ ವಾಗ್ದಾನಗಳು ಇಸಾಕನ ಮೂಲಕ ನೆರವೇರಿಸಲ್ಪಡುವವು ಎಂದು ಯೆಹೋವನು ಈಗಾಗಲೇ ಹೇಳಿದ್ದನು. ಆದುದರಿಂದ, ಒಂದುವೇಳೆ ಇಸಾಕನು ಮೃತಪಟ್ಟರೂ, ಅಗತ್ಯಬೀಳುವಲ್ಲಿ ಯೆಹೋವನು ಅವನನ್ನು ಪುನರುತ್ಥಾನಗೊಳಿಸಬಲ್ಲನು ಎಂಬ ನಂಬಿಕೆ ಅಬ್ರಹಾಮನಿಗಿತ್ತು; ಹಿಂದೆಂದೂ ಈ ರೀತಿ ನಡೆದಿರಲಿಲ್ಲವಾದರೂ ಅವನು ದೇವರಲ್ಲಿ ನಂಬಿಕೆಯಿಟ್ಟನು. (ಆದಿಕಾಂಡ 17:15-18; ಇಬ್ರಿಯ 11:17-19) ಅಬ್ರಹಾಮನು ತನ್ನ ಮಗನನ್ನು ಅರ್ಪಿಸಲು ಸಹ ಹಿಂಜರಿಯದ ಕಾರಣ ಯೆಹೋವನು ಘೋಷಿಸಿದ್ದು: “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:15-18) ಆದಿಕಾಂಡ 3:15ರಲ್ಲಿ ತಿಳಿಸಲ್ಪಟ್ಟಿರುವ ಸಂತತಿಯಾದ ಮೆಸ್ಸೀಯ ಸಂಬಂಧಿತ ವಿಮೋಚಕನು, ಅಬ್ರಹಾಮನ ವಂಶಾವಳಿಯಲ್ಲಿ ಬರಲಿಕ್ಕಿದ್ದನು ಎಂಬುದನ್ನು ಇದು ಸೂಚಿಸಿತು. ತನ್ನ ಸಂತತಿಯವರಿಗೆ ದಾಟಿಸಲಿಕ್ಕಾಗಿ ಅಬ್ರಹಾಮನ ಬಳಿ ಎಷ್ಟು ಅಮೂಲ್ಯವಾದ ಸ್ವಾಸ್ತ್ಯವಿತ್ತು!
7. ಅಬ್ರಹಾಮ, ಇಸಾಕ, ಮತ್ತು ಯಾಕೋಬರು ತಮ್ಮ ಸ್ವಾಸ್ತ್ಯಕ್ಕಾಗಿ ಹೇಗೆ ಗಣ್ಯತೆಯನ್ನು ತೋರಿಸಿದರು?
7 ಆಗ ಯೆಹೋವನು ಏನು ಮಾಡುತ್ತಿದ್ದನೋ ಅದರ ಮಹತ್ವವು ಅಬ್ರಹಾಮನಿಗೆ ಗೊತ್ತಿರಲಿಲ್ಲ; ‘ಅದೇ ವಾಗ್ದಾನಕ್ಕೆ ಸಹಬಾಧ್ಯನಾಗಿದ್ದ’ ಅವನ ಮಗ ಇಸಾಕನಿಗೂ ಗೊತ್ತಿರಲಿಲ್ಲ ಮತ್ತು ಅವನ ಮೊಮ್ಮಗ ಯಾಕೋಬನಿಗೂ ಗೊತ್ತಿರಲಿಲ್ಲ. ಆದರೆ ಅವರೆಲ್ಲರಿಗೂ ಯೆಹೋವನಲ್ಲಿ ಭರವಸೆಯಿತ್ತು. ಆದುದರಿಂದ, ಅವರು ತಮ್ಮ ದೇಶದಲ್ಲಿ ಯಾವುದೇ ನಗರ ಅಥವಾ ಪಟ್ಟಣಗಳೊಂದಿಗೆ ಜೊತೆಗೂಡಲಿಲ್ಲ. ಏಕೆಂದರೆ ಇದಕ್ಕಿಂತಲೂ ಉತ್ತಮವಾದ ಒಂದು ಭವಿಷ್ಯತ್ತನ್ನು, “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು” ಅವರು ಎದುರುನೋಡುತ್ತಿದ್ದರು. (ಇಬ್ರಿಯ 11:8-10, 13-16) ಆದರೂ, ಅಬ್ರಹಾಮನ ಮೂಲಕ ಲಭ್ಯಗೊಳಿಸಲ್ಪಟ್ಟ ಸ್ವಾಸ್ತ್ಯದ ಮಹತ್ವವನ್ನು, ಅಬ್ರಹಾಮನ ಸಂತತಿಯವರಲ್ಲಿ ಎಲ್ಲರೂ ಗಣ್ಯಮಾಡಲಿಲ್ಲ.
ಸ್ವಾಸ್ತ್ಯವನ್ನು ಕಡೆಗಣಿಸಿದಂತಹ ಕೆಲವು ವ್ಯಕ್ತಿಗಳು
8. ತನ್ನ ಸ್ವಾಸ್ತ್ಯದ ಮಹತ್ವವನ್ನು ಅವನು ಗಣ್ಯಮಾಡಲಿಲ್ಲ ಎಂಬುದನ್ನು ಏಸಾವನು ಹೇಗೆ ತೋರಿಸಿದನು?
8 ಇಸಾಕನ ಚೊಚ್ಚಲು ಮಗನಾಗಿದ್ದ ಏಸಾವನು, ಚೊಚ್ಚಲು ಮಗನೋಪಾದಿ ತನ್ನ ಚೊಚ್ಚಲುತನದ ಹಕ್ಕಿನ ಬೆಲೆಯನ್ನು ಗ್ರಹಿಸಲು ತಪ್ಪಿಹೋದನು. ಪವಿತ್ರ ಸಂಗತಿಗಳಿಗೆ ಅವನು ಪರಿಗಣನೆಯನ್ನು ತೋರಿಸಲಿಲ್ಲ. ಹೇಗೆಂದರೆ, ಒಂದು ದಿನ ಏಸಾವನಿಗೆ ತುಂಬ ಹಸಿವೆಯಾಗಿದ್ದಾಗ, ಅವನು ತನ್ನ ಚೊಚ್ಚಲುತನದ ಹಕ್ಕನ್ನು ತನ್ನ ತಮ್ಮನಾದ ಯಾಕೋಬನಿಗೆ ಮಾರಿಬಿಟ್ಟನು. ಯಾಕೆ ಹೀಗೆ ಮಾಡಿದನು? ಕೇವಲ ಒಂದು ಹೊತ್ತಿನ ರೊಟ್ಟಿ ಮತ್ತು ಅಲಸಂದಿಗುಗ್ಗರಿಯ ಊಟಕ್ಕೆ ಪ್ರತಿಯಾಗಿ ಅವನು ತನ್ನ ಹಕ್ಕನ್ನೇ ಮಾರಿಬಿಟ್ಟನು! (ಆದಿಕಾಂಡ 25:29-34; ಇಬ್ರಿಯ 12:14-17) ದೇವರು ಅಬ್ರಹಾಮನಿಗೆ ಮಾಡಿದಂತಹ ವಾಗ್ದಾನಗಳು ಯಾವ ಜನಾಂಗದ ಮೂಲಕ ನೆರವೇರಿಸಲ್ಪಡಲಿಕ್ಕಿದ್ದವೋ ಆ ಜನಾಂಗವು, ಅಬ್ರಹಾಮನ ಮೊಮ್ಮಗನಾಗಿದ್ದ ಯಾಕೋಬನಿಂದ ಬರಲಿಕ್ಕಿತ್ತು. ಮತ್ತು ಸಮಯಾನಂತರ ದೇವರು ಯಾಕೋಬನ ಹೆಸರನ್ನು ಇಸ್ರಾಯೇಲ್ ಎಂದು ಬದಲಾಯಿಸಿದನು. ಆ ವಿಶೇಷ ಸ್ವಾಸ್ತ್ಯವು ಅವರಿಗೆ ಯಾವ ಸದವಕಾಶಗಳನ್ನು ತೆರೆಯಿತು?
9. ತಮ್ಮ ಆತ್ಮಿಕ ಸ್ವಾಸ್ತ್ಯದಿಂದಾಗಿ, ಯಾಕೋಬನ ಅಥವಾ ಇಸ್ರಾಯೇಲ್ನ ಸಂತತಿಯವರು ಯಾವ ಬಿಡುಗಡೆಯನ್ನು ಅನುಭವಿಸಿದರು?
9 ಒಮ್ಮೆ ಬರಗಾಲ ಬಂದಾಗ, ಯಾಕೋಬನು ಮತ್ತು ಅವನ ಕುಟುಂಬವು ಐಗುಪ್ತದೇಶಕ್ಕೆ ಹೋಗಿ ನೆಲೆಸಿತು. ಅಲ್ಲಿ ಅವರ ಸಂತಾನವೃದ್ಧಿಯಾಯಿತು ಮತ್ತು ಅವರು ಅಸಂಖ್ಯಾತ ಸಂಖ್ಯೆಯಲ್ಲಿ ಬೆಳೆದರು. ಆದರೆ ಅವರು ಅಲ್ಲಿ ಗುಲಾಮರಾಗಿ ಕೆಲಸಮಾಡಬೇಕಾಯಿತು. ಆದರೂ, ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಮಾತ್ರ ಯೆಹೋವನು ಮರೆಯಲಿಲ್ಲ. ದೇವರ ನೇಮಿತ ಸಮಯದಲ್ಲಿ ಆತನು ಇಸ್ರಾಯೇಲ್ಯರನ್ನು ಗುಲಾಮಗಿರಿಯಿಂದ ಬಿಡಿಸಿದನು. ಅಷ್ಟುಮಾತ್ರವಲ್ಲ, ತಾನು ಅಬ್ರಹಾಮನಿಗೆ ವಾಗ್ದಾನಿಸಿದ್ದಂತಹ ದೇಶಕ್ಕೆ, ಅಂದರೆ “ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ” ಅವರನ್ನು ಬರಮಾಡುವೆನೆಂದು ಸಹ ಯೆಹೋವನು ಅವರಿಗೆ ತಿಳಿಸಿದನು.—ವಿಮೋಚನಕಾಂಡ 3:7, 8; ಆದಿಕಾಂಡ 15:18-21.
10. ಸೀನಾಯಿ ಬೆಟ್ಟದ ಬಳಿಯಲ್ಲಿ, ಇಸ್ರಾಯೇಲ್ಯರ ಸ್ವಾಸ್ತ್ಯದ ಸಂಬಂಧದಲ್ಲಿ ಇನ್ನೂ ಯಾವ ವಿಶೇಷ ಸಂಗತಿಗಳು ನಡೆದವು?
10 ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಹೋಗುತ್ತಿರುವಾಗ, ಯೆಹೋವನು ಅವರನ್ನು ಸೀನಾಯಿ ಬೆಟ್ಟದ ಬಳಿಯಲ್ಲಿ ಒಟ್ಟುಗೂಡಿಸಿದನು. ಅಲ್ಲಿ ಆತನು ಅವರಿಗೆ ಹೇಳಿದ್ದು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವು ಪರಿಶುದ್ಧಜನವೂ ಆಗಿರುವಿರಿ.” (ವಿಮೋಚನಕಾಂಡ 19:5, 6) ಎಲ್ಲ ಜನರು ಸ್ವಇಷ್ಟದಿಂದ ಮತ್ತು ಸಂಪೂರ್ಣ ಸಹಮತದಿಂದ ಇದಕ್ಕೆ ಒಪ್ಪಿಕೊಂಡ ಬಳಿಕ, ಯೆಹೋವನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಆದರೆ ಈ ಮುಂಚೆ ಬೇರೆ ಯಾರಿಗೂ ಆತನು ಈ ರೀತಿ ಮಾಡಿರಲಿಲ್ಲ.—ಕೀರ್ತನೆ 147:19, 20.
11. ಇಸ್ರಾಯೇಲ್ಯರ ಆತ್ಮಿಕ ಸ್ವಾಸ್ತ್ಯದಲ್ಲಿ ಕೆಲವು ಅಮೂಲ್ಯ ಸಂಗತಿಗಳು ಯಾವುವು?
11 ಆ ಹೊಸ ಜನಾಂಗವು ಎಂತಹ ಒಂದು ಆತ್ಮಿಕ ಸ್ವಾಸ್ತ್ಯವನ್ನು ಪಡೆದಿತ್ತು! ಅವರು ಏಕಮಾತ್ರ ಸತ್ಯ ದೇವರನ್ನು ಆರಾಧಿಸಿದರು. ಅವರು ಐಗುಪ್ತದೇಶದಿಂದ ಬಿಡುಗಡೆಮಾಡಲ್ಪಟ್ಟಿದ್ದರು ಮತ್ತು ಸೀನಾಯಿ ಬೆಟ್ಟದ ಬಳಿಯಲ್ಲಿ ಧರ್ಮಶಾಸ್ತ್ರವು ಕೊಡಲ್ಪಟ್ಟಾಗ ನಡೆದ ಅದ್ಭುತಕರ ಘಟನೆಗಳನ್ನು ಕಣ್ಣಾರೆ ಕಂಡಿದ್ದರು. ಅಷ್ಟುಮಾತ್ರವಲ್ಲ, ಪ್ರವಾದಿಗಳ ಮೂಲಕ ಇನ್ನೂ ಹೆಚ್ಚಿನ “ದೈವೋಕ್ತಿಗಳು” ಅವರಿಗೆ ಕೊಡಲ್ಪಟ್ಟಾಗ ಅವರ ಸ್ವಾಸ್ತ್ಯವು ಇನ್ನೂ ಮಹತ್ವಪೂರ್ಣವಾಯಿತು. (ರೋಮಾಪುರ 3:1, 2) ಇವರು ತನ್ನ ಸಾಕ್ಷಿಗಳೆಂದು ಯೆಹೋವನಿಂದ ಕರೆಯಲ್ಪಟ್ಟರು. (ಯೆಶಾಯ 43:10-12) ಮೆಸ್ಸೀಯ ಸಂಬಂಧಿತ ಸಂತತಿಯು ಈ ಜನಾಂಗದಲ್ಲಿ ಜನಿಸಲಿಕ್ಕಿತ್ತು. ಧರ್ಮಶಾಸ್ತ್ರವು ಆ ಸಂತತಿಯ ಕಡೆಗೆ ಕೈತೋರಿಸಿತು, ಅದು ಅವನನ್ನು ಗುರುತಿಸಲಿಕ್ಕಿತ್ತು, ಮತ್ತು ಅವನ ಅಗತ್ಯ ಏಕಿದೆ ಎಂಬುದನ್ನು ಗಣ್ಯಮಾಡುವಂತೆ ಅವರಿಗೆ ಸಹಾಯಮಾಡಲಿಕ್ಕಿತ್ತು. (ಗಲಾತ್ಯ 3:19, 24) ಇದಲ್ಲದೆ, ಯಾಜಕ ರಾಜ್ಯ ಮತ್ತು ಪರಿಶುದ್ಧ ಜನರೋಪಾದಿ ಆ ಮೆಸ್ಸೀಯ ಸಂತತಿಯೊಂದಿಗೆ ಸೇವೆಮಾಡುವ ಸದವಕಾಶವು ಅವರಿಗೆ ಸಿಗಲಿಕ್ಕಿತ್ತು.—ರೋಮಾಪುರ 9:4, 5.
12. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದರಾದರೂ, ಅವರು ಏನನ್ನು ಅನುಭವಿಸಲು ತಪ್ಪಿಹೋದರು? ಮತ್ತು ಏಕೆ?
12 ತಾನು ವಾಗ್ದಾನ ಮಾಡಿದಂತೆ ಯೆಹೋವನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡಿಸಿದನು. ಆದರೆ ಸಮಯಾನಂತರ ಅಪೊಸ್ತಲ ಪೌಲನು ವಿವರಿಸಿದಂತೆ, ಇಸ್ರಾಯೇಲ್ಯರು ನಂಬಿಕೆಯಲ್ಲಿ ಕೊರತೆಯನ್ನು ತೋರಿಸಿದ್ದರಿಂದ, ಆ ದೇಶವು ನಿಜವಾಗಿಯೂ “ಒಂದು ವಿಶ್ರಾಂತಿಯ ಸ್ಥಳವಾಗಿ” (NW) ಪರಿಣಮಿಸಲಿಲ್ಲ. ಒಂದು ಜನಾಂಗದೋಪಾದಿ ಅವರು ‘ದೇವರ ವಿಶ್ರಾಂತಿಯನ್ನು’ ಪ್ರವೇಶಿಸಲಿಲ್ಲ; ಏಕೆಂದರೆ, ಆದಾಮಹವ್ವರ ಸೃಷ್ಟಿಯ ನಂತರ ಆರಂಭವಾದ ದೇವರ ಸ್ವಂತ ವಿಶ್ರಾಂತಿಯ ದಿನದ ಉದ್ದೇಶಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸಲು ಮತ್ತು ಆ ಉದ್ದೇಶವನ್ನು ಗ್ರಹಿಸಲು ಅವರು ತಪ್ಪಿಹೋದರು.—ಇಬ್ರಿಯ 4:3-10.
13. ಇಸ್ರಾಯೇಲ್ ಜನಾಂಗವು ತನ್ನ ಆತ್ಮಿಕ ಸ್ವಾಸ್ತ್ಯವನ್ನು ಗಣ್ಯಮಾಡಲು ತಪ್ಪಿಹೋದುದಕ್ಕಾಗಿ ಯಾವ ದಂಡವನ್ನು ತೆರಬೇಕಾಯಿತು?
13 ಮೆಸ್ಸೀಯನ ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ ಯಾಜಕ ರಾಜ್ಯವೂ ಪರಿಶುದ್ಧ ಜನವೂ ಆಗಿ ಸೇವೆಮಾಡಲು ಎಷ್ಟು ಮಂದಿ ಬೇಕಾಗಿದ್ದರೋ ಅಷ್ಟು ಮಂದಿಯನ್ನು ಮಾಂಸಿಕ ಇಸ್ರಾಯೇಲ್ಯರು ಒದಗಿಸಸಾಧ್ಯವಿತ್ತು. ಆದರೆ ಅವರು ತಮ್ಮ ಅಮೂಲ್ಯ ಸ್ವಾಸ್ತ್ಯವನ್ನು ಗಣ್ಯಮಾಡಲಿಲ್ಲ. ಮೆಸ್ಸೀಯನು ಬಂದಾಗ, ಮಾಂಸಿಕ ಇಸ್ರಾಯೇಲ್ಯರಲ್ಲಿ ಕೆಲವರು ಮಾತ್ರವೇ ಅವನನ್ನು ಅಂಗೀಕರಿಸಿದರು. ಇದರ ಫಲಿತಾಂಶವಾಗಿ, ಮುಂತಿಳಿಸಲ್ಪಟ್ಟಿದ್ದ ಯಾಜಕ ರಾಜ್ಯದಲ್ಲಿ ಕೇವಲ ಕೆಲವೇ ಮಂದಿ ಒಳಗೂಡಿದ್ದರು. ಆದುದರಿಂದ, ಆ ರಾಜ್ಯವು ಮಾಂಸಿಕ ಇಸ್ರಾಯೇಲ್ಯರಿಂದ ಹಿಂದೆಗೆದುಕೊಳ್ಳಲ್ಪಟ್ಟಿತು ಮತ್ತು ‘ಆ ರಾಜ್ಯದ ಫಲಗಳನ್ನು ಕೊಡುವ ಜನಕ್ಕೆ ಕೊಡಲ್ಪಟ್ಟಿತು.’ (ಮತ್ತಾಯ 21:43) ಅದು ಯಾವ ಜನಾಂಗವಾಗಿದೆ?
ಸ್ವರ್ಗದಲ್ಲಿ ಒಂದು ಸ್ವಾಸ್ತ್ಯ
14, 15. (ಎ) ಯೇಸುವಿನ ಮರಣಾನಂತರ, ಅಬ್ರಹಾಮನ ‘ಸಂತತಿಯ’ ಮೂಲಕ ಜನಾಂಗಗಳು ಹೇಗೆ ಆಶೀರ್ವಾದವನ್ನು ಪಡೆದುಕೊಳ್ಳಲು ಆರಂಭಿಸಿದವು? (ಬಿ) ‘ದೇವರ ಇಸ್ರಾಯೇಲ್ನ’ ಸದಸ್ಯರು ಒಂದು ಸ್ವಾಸ್ತ್ಯದೋಪಾದಿ ಏನನ್ನು ಪಡೆದುಕೊಳ್ಳುತ್ತಾರೆ?
14 ಯಾವ ಜನಾಂಗಕ್ಕೆ ರಾಜ್ಯವು ಕೊಡಲ್ಪಟ್ಟಿತೋ ಅದು ‘ದೇವರ ಇಸ್ರಾಯೇಲ್’ ಅಂದರೆ ಆತ್ಮಿಕ ಇಸ್ರಾಯೇಲ್ ಆಗಿತ್ತು. ಮತ್ತು ಈ ಜನಾಂಗವು ಯೇಸು ಕ್ರಿಸ್ತನ 1,44,000 ಮಂದಿ ಆತ್ಮಾಭಿಷಿಕ್ತ ಹಿಂಬಾಲಕರಿಂದ ರಚಿತವಾಗಿತ್ತು. (ಗಲಾತ್ಯ 6:16; ಪ್ರಕಟನೆ 5:9, 10; 14:1-3) ಈ 1,44,000 ಮಂದಿಯಲ್ಲಿ ಕೆಲವರು ಮಾಂಸಿಕ ಯೆಹೂದ್ಯರಾಗಿದ್ದರು. ಆದರೆ ಅವರಲ್ಲಿ ಹೆಚ್ಚಿನವರು ಅನ್ಯಜನಾಂಗಗಳವರಾಗಿದ್ದರು. ಈ ರೀತಿಯಲ್ಲಿ, ಅಬ್ರಹಾಮನ ‘ಸಂತತಿಯ’ ಮೂಲಕ ಎಲ್ಲ ಜನಾಂಗಗಳು ಆಶೀರ್ವದಿಸಲ್ಪಡುವವು ಎಂದು ಯೆಹೋವನು ಅವನಿಗೆ ಮಾಡಿದಂತಹ ವಾಗ್ದಾನವು ನೆರವೇರತೊಡಗಿತು. (ಅ. ಕೃತ್ಯಗಳು 3:25, 26; ಗಲಾತ್ಯ 3:8, 9) ಆ ಆರಂಭದ ನೆರವೇರಿಕೆಯಲ್ಲಿ, ಅನ್ಯಜನಾಂಗಗಳ ಜನರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟರು ಮತ್ತು ಆತ್ಮಿಕ ಪುತ್ರರೋಪಾದಿ, ಅಂದರೆ ಯೇಸು ಕ್ರಿಸ್ತನ ಸಹೋದರರೋಪಾದಿ ಯೆಹೋವ ದೇವರಿಂದ ಸ್ವೀಕರಿಸಲ್ಪಟ್ಟರು. ಹೀಗೆ, ಅವರು ಸಹ ಆ ‘ಸಂತತಿಯ’ ಎರಡನೆಯ ಭಾಗವಾಗಿ ಪರಿಣಮಿಸಿದರು.—ಗಲಾತ್ಯ 3:28, 29.
15 ತನ್ನ ಮರಣಕ್ಕೆ ಮುಂಚೆ ಯೇಸು, ಆ ಹೊಸ ಜನಾಂಗದ ಯೆಹೂದಿ ಸದಸ್ಯರಿಗೆ ಹೊಸ ಒಡಂಬಡಿಕೆಯನ್ನು ಪರಿಚಯಿಸಿದನು. ಅವನು ತನ್ನ ಸ್ವಂತ ರಕ್ತದ ಮೂಲಕ ಈ ಹೊಸ ಒಡಂಬಡಿಕೆಯನ್ನು ನ್ಯಾಯಸಮ್ಮತಗೊಳಿಸಲಿಕ್ಕಿದ್ದನು. ಆ ನ್ಯಾಯಸಮ್ಮತ ಯಜ್ಞಾರ್ಪಣೆಯಲ್ಲಿ ತಮ್ಮ ನಂಬಿಕೆಯ ಆಧಾರದ ಮೇಲೆ ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟ ಇವರು, “ನಿರಂತರವಾಗಿ ಸಿದ್ಧಿಗೆ” ಬರಲಿದ್ದರು. (ಇಬ್ರಿಯ 10:14-18) ಅವರು “ನೀತಿವಂತರೆಂಬ ನಿರ್ಣಯವನ್ನು ಹೊಂದ”ಸಾಧ್ಯವಿತ್ತು ಮತ್ತು ಅವರ ಪಾಪಗಳು ಕ್ಷಮಿಸಲ್ಪಡಲಿಕ್ಕಿದ್ದವು. (1 ಕೊರಿಂಥ 6:11) ಹೀಗೆ, ಆ ಅರ್ಥದಲ್ಲಿ ಇವರು ಆದಾಮನು ಪಾಪಮಾಡುವುದಕ್ಕೆ ಮೊದಲು ಹೇಗಿದ್ದನೋ ಆ ಸ್ಥಿತಿಯನ್ನು ತಲಪಲಿದ್ದರು. ಆದರೂ, ಇವರು ಒಂದು ಭೂಪ್ರಮೋದವನದಲ್ಲಿ ಜೀವಿಸುವವರಾಗಿರುವುದಿಲ್ಲ. ಏಕೆಂದರೆ, ಸ್ವರ್ಗದಲ್ಲಿ ತಾನು ಅವರಿಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತೇನೆಂದು ಯೇಸು ಹೇಳಿದನು. (ಯೋಹಾನ 14:2, 3) ‘ತಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿರುವ ಸ್ವಾಸ್ತ್ಯವನ್ನು’ ಪಡೆದುಕೊಳ್ಳಲಿಕ್ಕಾಗಿ ಅವರು ತಮ್ಮ ಭೂ ಪ್ರತೀಕ್ಷೆಗಳನ್ನು ಬಿಟ್ಟುಕೊಡುತ್ತಾರೆ. (1 ಪೇತ್ರ 1:4, NW) ಅಲ್ಲಿ ಅವರು ಏನು ಮಾಡುತ್ತಾರೆ? ಯೇಸು ವಿವರಿಸಿದ್ದು: “ಒಂದು ರಾಜ್ಯಕ್ಕೋಸ್ಕರ . . . ನಾನು ನಿಮ್ಮೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುತ್ತೇನೆ.”—ಲೂಕ 22:29, NW.
16. ಅಭಿಷಿಕ್ತ ಕ್ರೈಸ್ತರಿಗೆ ಅದ್ಭುತಕರವಾದ ಯಾವ ಸೇವಾ ನೇಮಕವು ಕಾದಿರಿಸಲ್ಪಟ್ಟಿದೆ?
16 ಕ್ರಿಸ್ತನೊಂದಿಗೆ ಸ್ವರ್ಗದಿಂದ ಆಳ್ವಿಕೆ ನಡಿಸಲಿರುವವರು ಅನೇಕ ವಿಷಯಗಳನ್ನು ನಿರ್ವಹಿಸುವರು; ಈ ಭೂಮಿಯಲ್ಲಿ ಯೆಹೋವನ ಪರಮಾಧಿಕಾರದ ವಿರುದ್ಧ ನಡೆಸಲ್ಪಡುವ ದಂಗೆಯ ಎಲ್ಲ ಕುರುಹನ್ನು ತೆಗೆದುಹಾಕಲು ಸಹಾಯಮಾಡುವುದು ಸಹ ಇದರಲ್ಲಿ ಸೇರಿದೆ. (ಪ್ರಕಟನೆ 2:26, 27) ಅಬ್ರಹಾಮನ ಆತ್ಮಿಕ ಸಂತತಿಯ ಎರಡನೆಯ ಭಾಗದೋಪಾದಿ, ಎಲ್ಲ ಜನಾಂಗಗಳ ಜನರಿಗೆ ಪರಿಪೂರ್ಣ ಜೀವಿತದ ಆಶೀರ್ವಾದವನ್ನು ತರುವುದರಲ್ಲಿ ಇವರು ಪಾಲ್ಗೊಳ್ಳುವರು. (ರೋಮಾಪುರ 8:17-21) ಎಂತಹ ಅಮೂಲ್ಯ ಸ್ವಾಸ್ತ್ಯ ಇವರಿಗಿದೆ!—ಎಫೆಸ 1:16-18.
17. ಅಭಿಷಿಕ್ತ ಕ್ರೈಸ್ತರು ಇನ್ನೂ ಭೂಮಿಯಲ್ಲಿರುವಾಗ, ತಮ್ಮ ಸ್ವಾಸ್ತ್ಯದ ಯಾವ ಅಂಶಗಳಲ್ಲಿ ಅವರು ಆನಂದಿಸುತ್ತಾರೆ?
17 ಆದರೆ ಯೇಸುವಿನ ಅಭಿಷಿಕ್ತ ಹಿಂಬಾಲಕರ ಸ್ವಾಸ್ತ್ಯವು, ಕೇವಲ ಭವಿಷ್ಯತ್ತಿನಲ್ಲಿ ಮಾತ್ರ ಸಿಗುವಂತಹದ್ದಲ್ಲ. ಈಗಲೂ ಅದರ ಆಶೀರ್ವಾದಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಹೇಗೆಂದರೆ, ಏಕಮಾತ್ರ ಸತ್ಯ ದೇವರಾಗಿರುವ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಬೇರೆ ಯಾರೂ ಮಾಡಸಾಧ್ಯವಿರದ ರೀತಿಯಲ್ಲಿ ಯೇಸು ಅವರಿಗೆ ಸಹಾಯಮಾಡಿದನು. (ಮತ್ತಾಯ 11:27; ಯೋಹಾನ 17:3, 26) ತನ್ನ ನಡೆನುಡಿಯ ಮೂಲಕ ಅವನು ‘ದೇವರ ಮೇಲೆ ಭರವಸವಿಡುವುದರ’ ಅರ್ಥವೇನು ಮತ್ತು ಯೆಹೋವನಿಗೆ ವಿಧೇಯತೆ ತೋರಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದನ್ನು ಅವರಿಗೆ ಕಲಿಸಿದನು. (ಇಬ್ರಿಯ 2:13; 5:7-9) ದೇವರ ಉದ್ದೇಶದ ಕುರಿತಾದ ಸತ್ಯತೆಯ ಜ್ಞಾನವನ್ನು ಯೇಸು ಅವರಿಗೆ ನೀಡಿದನು. ಅಷ್ಟುಮಾತ್ರವಲ್ಲ, ದೇವರ ಉದ್ದೇಶದ ಕುರಿತಾದ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಳ್ಳುವಂತೆ ಪವಿತ್ರಾತ್ಮವು ಅವರಿಗೆ ಸಹಾಯಮಾಡುವುದೆಂಬ ಆಶ್ವಾಸನೆಯನ್ನು ಸಹ ಕೊಟ್ಟನು. (ಯೋಹಾನ 14:24-26) ದೇವರ ರಾಜ್ಯದ ಮಹತ್ವವನ್ನು ಅವನು ಅವರ ಹೃದಮನಗಳ ಮೇಲೆ ಅಚ್ಚೊತ್ತಿದನು. (ಮತ್ತಾಯ 6:10, 33) ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿನೀಡುವ ಹಾಗೂ ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಯೇಸು ಅವರಿಗೆ ವಹಿಸಿಕೊಟ್ಟನು.—ಮತ್ತಾಯ 24:14; 28:19, 20; ಅ. ಕೃತ್ಯಗಳು 1:8.
ಒಂದು ಮಹಾಸಮೂಹಕ್ಕೆ ಕಾದಿರಿಸಲ್ಪಟ್ಟಿರುವ ಅಮೂಲ್ಯ ಸ್ವಾಸ್ತ್ಯ
18. ಅಬ್ರಹಾಮನ ‘ಸಂತತಿಯ’ ಮೂಲಕ ಎಲ್ಲ ಜನಾಂಗಗಳು ಆಶೀರ್ವದಿಸಲ್ಪಡುವವು ಎಂಬ ಯೆಹೋವನ ವಾಗ್ದಾನವು ಇಂದು ಯಾವ ರೀತಿಯಲ್ಲಿ ನೆರವೇರುತ್ತಿದೆ?
18 ಆತ್ಮಿಕ ಇಸ್ರಾಯೇಲ್ನ, ಅಂದರೆ ರಾಜ್ಯದ ಬಾಧ್ಯಸ್ಥರ ‘ಚಿಕ್ಕ ಹಿಂಡಿನ’ ಸಂಪೂರ್ಣ ಸಂಖ್ಯೆಯು ಈಗಾಗಲೇ ಪೂರ್ಣಗೊಂಡಿದೆ. (ಲೂಕ 12:32) ಆದುದರಿಂದ, ಈಗ ಕೆಲವು ದಶಕಗಳಿಂದ ಯೆಹೋವನು ಎಲ್ಲ ಜನಾಂಗಗಳಿಂದ ಒಂದು ಮಹಾಸಮೂಹವನ್ನು ಒಟ್ಟುಗೂಡಿಸುವ ಕೆಲಸಕ್ಕೆ ಗಮನವನ್ನು ಕೊಡುತ್ತಿದ್ದಾನೆ. ಹೀಗೆ, ಅಬ್ರಹಾಮನ ‘ಸಂತತಿಯ’ ಮೂಲಕ ಎಲ್ಲ ಜನಾಂಗಗಳು ಆಶೀರ್ವದಿಸಲ್ಪಡುವವು ಎಂದು ಯೆಹೋವನು ಅವನಿಗೆ ಮಾಡಿದ ವಾಗ್ದಾನವು, ಮಹತ್ತರವಾದ ರೀತಿಯಲ್ಲಿ ಇಂದು ನೆರವೇರುತ್ತಿದೆ. ಅಭಿಷಿಕ್ತ ಕ್ರೈಸ್ತರಂತೆ ಈ ಮಹಾಸಮೂಹದವರು ಸಹ ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ; ಮತ್ತು ದೇವರ ಕುರಿಯಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೇಲೆ ತಮ್ಮ ರಕ್ಷಣೆಯು ಅವಲಂಬಿಸಿದೆ ಎಂಬುದನ್ನು ಅವರು ಗ್ರಹಿಸುತ್ತಾರೆ. (ಪ್ರಕಟನೆ 7:9, 10) ಆ ಸಂತೋಷಭರಿತ ಜನರ ಗುಂಪಿನ ಭಾಗವಾಗುವಂತೆ ಕೊಡಲ್ಪಟ್ಟಿರುವ ಯೆಹೋವನ ಕೃಪಾಪೂರ್ಣ ಆಮಂತ್ರಣವನ್ನು ನೀವು ಸ್ವೀಕರಿಸಿದ್ದೀರೊ?
19.ಈಗ ಆಶೀರ್ವದಿಸಲ್ಪಡುತ್ತಿರುವ ಜನಾಂಗಗಳವರು ಯಾವ ಸ್ವಾಸ್ತ್ಯವನ್ನು ಮುನ್ನೋಡುತ್ತಿದ್ದಾರೆ?
19 ಚಿಕ್ಕ ಹಿಂಡಿನ ಭಾಗವಾಗಿರದಂತಹ ಜನರಿಗೆ ಯೆಹೋವನು ಯಾವ ಅಮೂಲ್ಯ ಸ್ವಾಸ್ತ್ಯವನ್ನು ಕೊಡಲಿದ್ದಾನೆ? ಸ್ವರ್ಗಕ್ಕೆ ಹೋಗುವ ಸ್ವಾಸ್ತ್ಯವಂತೂ ಅವರಿಗೆ ಸಿಗುವುದಿಲ್ಲ. ಆದರೆ ಆದಾಮನು ತನ್ನ ಸಂತತಿಯವರಿಗೆ ದಾಟಿಸಸಾಧ್ಯವಿದ್ದಂತಹ ಒಂದು ಸ್ವಾಸ್ತ್ಯವು ಅವರಿಗೆ ಕೊಡಲ್ಪಡುವುದು. ಅದೇನೆಂದರೆ, ಕಾಲಕ್ರಮೇಣ ಇಡೀ ಭೂಮಿಯನ್ನು ಆವರಿಸುವಂತಹ ಒಂದು ಭೂಪ್ರಮೋದವನದಲ್ಲಿ ಪರಿಪೂರ್ಣವಾದ ಜೀವಿತದೊಂದಿಗೆ ಶಾಶ್ವತವಾಗಿ ಜೀವಿಸುವ ಪ್ರತಿಕ್ಷೆಯೇ ಆಗಿದೆ. ‘ಇನ್ನು ಮರಣವಾಗಲಿ ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರದಂತಹ’ ಒಂದು ಲೋಕವು ಅವರಿಗೆ ದೊರಕುವುದು. (ಪ್ರಕಟನೆ 21:4) ಹಾಗಾದರೆ, ದೇವರ ಪ್ರೇರಿತ ವಾಕ್ಯವು ನಿಮಗೆ ಹೀಗೆ ಹೇಳುತ್ತದೆ: “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು. ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು. ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:3, 4, 10, 11, 29.
20. ಅಭಿಷಿಕ್ತ ಕ್ರೈಸ್ತರ ಆತ್ಮಿಕ ಸ್ವಾಸ್ತ್ಯದಲ್ಲಿ ಹೆಚ್ಚಿನದ್ದನ್ನು ‘ಬೇರೆ ಕುರಿಗಳು’ ಸಹ ಹೇಗೆ ಅನುಭವಿಸುತ್ತಾರೆ?
20 ಯೇಸುವಿನ ‘ಬೇರೆ ಕುರಿಗಳಿಗೆ’ ಸ್ವರ್ಗೀಯ ರಾಜ್ಯದ ಭೂಕ್ಷೇತ್ರದಲ್ಲಿ ಜೀವಿಸುವ ಅವಕಾಶವು ಕೊಡಲ್ಪಟ್ಟಿದೆ. (ಯೋಹಾನ 10:16ಎ) ಇವರು ಸ್ವರ್ಗದಲ್ಲಿ ಇರುವುದಿಲ್ಲವಾದರೂ, ಅಭಿಷಿಕ್ತ ಕ್ರೈಸ್ತರಿಂದ ಆನಂದಿಸಲ್ಪಟ್ಟಿರುವ ಆತ್ಮಿಕ ಸ್ವಾಸ್ತ್ಯವು ಇವರಿಗೆ ದಾಟಿಸಲ್ಪಡುವುದು. ಅಭಿಷಿಕ್ತರ ಸಾಮೂಹಿಕ ಮಂಡಲಿಯಾಗಿರುವ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ, ದೇವರ ವಾಕ್ಯದಲ್ಲಿರುವ ಅಮೂಲ್ಯ ವಾಗ್ದಾನಗಳ ತಿಳುವಳಿಕೆಯನ್ನು ಪಡೆದುಕೊಳ್ಳುವ ಮಾರ್ಗವು ಬೇರೆ ಕುರಿಗಳಿಗೆ ತೆರೆಯಲ್ಪಟ್ಟಿದೆ. (ಮತ್ತಾಯ 24:45-47; 25:34) ಅಭಿಷಿಕ್ತ ಕ್ರೈಸ್ತರು ಹಾಗೂ ಬೇರೆ ಕುರಿಗಳು, ಏಕಮಾತ್ರ ಸತ್ಯ ದೇವರಾಗಿರುವ ಯೆಹೋವ ದೇವರ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಆತನನ್ನು ಆರಾಧಿಸುತ್ತಾರೆ. (ಯೋಹಾನ 17:20, 21) ಯೇಸುವಿನ ಪಾಪನಿವಾರಕ ಯಜ್ಞದ ಮೌಲ್ಯಕ್ಕಾಗಿ ಅವರು ಒಟ್ಟುಗೂಡಿ ದೇವರಿಗೆ ಉಪಕಾರ ಸಲ್ಲಿಸುತ್ತಾರೆ. ಒಂದೇ ಹಿಂಡಿನೋಪಾದಿ ಒಬ್ಬನೇ ಕುರುಬನಾಗಿರುವ ಯೇಸು ಕ್ರಿಸ್ತನ ಕೆಳಗೆ ಅವರು ಒಟ್ಟುಗೂಡಿ ಸೇವೆಮಾಡುತ್ತಾರೆ. (ಯೋಹಾನ 10:16ಬಿ) ಇವರೆಲ್ಲರೂ ಪ್ರೀತಿಯಿಂದ ತುಂಬಿರುವ ಒಂದು ವಿಶ್ವವ್ಯಾಪಿ ಸಹೋದರತ್ವದ ಭಾಗವಾಗಿದ್ದಾರೆ. ಯೆಹೋವನ ಹಾಗೂ ಆತನ ರಾಜ್ಯದ ಸಾಕ್ಷಿಗಳಾಗಿರುವ ಸುಯೋಗದಲ್ಲಿ ಇವರು ಒಟ್ಟುಗೂಡಿ ಭಾಗವಹಿಸುತ್ತಾರೆ. ಹೌದು, ಒಂದುವೇಳೆ ನೀವು ಯೆಹೋವನ ಸಮರ್ಪಿತ ಹಾಗೂ ದೀಕ್ಷಾಸ್ನಾನ ಪಡೆದುಕೊಂಡ ಸೇವಕರಾಗಿರುವಲ್ಲಿ, ನಿಮಗೆ ಸಿಕ್ಕಿರುವ ಆತ್ಮಿಕ ಸ್ವಾಸ್ತ್ಯದಲ್ಲಿ ಇದೆಲ್ಲವೂ ಒಳಗೂಡಿದೆ.
21, 22. ನಮ್ಮ ಆತ್ಮಿಕ ಸ್ವಾಸ್ತ್ಯವನ್ನು ನಾವು ಗಣ್ಯಮಾಡುತ್ತೇವೆ ಎಂಬುದನ್ನು ನಾವೆಲ್ಲರೂ ಹೇಗೆ ತೋರಿಸಸಾಧ್ಯವಿದೆ?
21 ಈ ಆತ್ಮಿಕ ಸ್ವಾಸ್ತ್ಯವು ನಿಮಗೆ ಎಷ್ಟು ಅಮೂಲ್ಯವಾದದ್ದಾಗಿದೆ? ನಿಮ್ಮ ಜೀವಿತದಲ್ಲಿ ದೇವರ ಚಿತ್ತವನ್ನು ಪೂರೈಸುವುದಕ್ಕೇ ಪ್ರಥಮ ಸ್ಥಾನವನ್ನು ಕೊಡುವಷ್ಟು ಬೆಲೆಯುಳ್ಳದ್ದಾಗಿ ನೀವು ಅದನ್ನು ಪರಿಗಣಿಸುತ್ತೀರೊ? ಇದಕ್ಕೆ ಪುರಾವೆ ನೀಡಲಿಕ್ಕಾಗಿ, ಕ್ರೈಸ್ತ ಸಭೆಯ ಎಲ್ಲ ಕೂಟಗಳಲ್ಲಿ ಕ್ರಮವಾಗಿ ಹಾಜರಾಗುವಂತೆ ಆತನ ವಾಕ್ಯಕ್ಕೆ ಹಾಗೂ ಆತನ ಸಂಸ್ಥೆಯಿಂದ ಕೊಡಲ್ಪಡುವ ಸಲಹೆಗೆ ನೀವು ಕಿವಿಗೊಡುತ್ತಿದ್ದೀರೊ? (ಇಬ್ರಿಯ 10:24, 25) ಕಷ್ಟಸಂಕಟಗಳ ಎದುರಿನಲ್ಲಿಯೂ ದೇವರ ಸೇವೆಯನ್ನು ಮುಂದುವರಿಸುವಷ್ಟರ ಮಟ್ಟಿಗೆ ನೀವು ಆ ಸ್ವಾಸ್ತ್ಯವನ್ನು ಅಮೂಲ್ಯವಾದದ್ದಾಗಿ ಪರಿಗಣಿಸುತ್ತೀರೊ? ಆ ಸ್ವಾಸ್ತ್ಯಕ್ಕೆ ನೀವು ತೋರಿಸುವ ಗಣ್ಯತೆಯು, ಅದನ್ನು ಕಳೆದುಕೊಳ್ಳುವಂತೆ ನಿಮ್ಮನ್ನು ದಾರಿತಪ್ಪಿಸಬಹುದಾದ ಯಾವುದೇ ಶೋಧನೆಯನ್ನು ಎದುರಿಸುವಾಗ, ಅದು ನಿಮ್ಮನ್ನು ಬಲಪಡಿಸುವಷ್ಟು ಪ್ರಬಲವಾದದ್ದಾಗಿದೆಯೊ?
22 ದೇವರು ನಮಗೆ ಕೊಟ್ಟಿರುವ ಆತ್ಮಿಕ ಸ್ವಾಸ್ತ್ಯವನ್ನು ನಾವೆಲ್ಲರೂ ಗಣ್ಯಮಾಡೋಣ. ಮುಂದೆ ಬರಲಿರುವ ಪ್ರಮೋದವನದ ಮೇಲೆ ನಾವು ನಮ್ಮ ದೃಷ್ಟಿಯನ್ನು ಇಟ್ಟಿರುವಾಗ, ಈಗ ಯೆಹೋವನು ನಮಗೆ ಕೊಡುತ್ತಿರುವ ಆತ್ಮಿಕ ಸುಯೋಗಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳೋಣ. ಯೆಹೋವನೊಂದಿಗಿನ ನಮ್ಮ ಸಂಬಂಧಕ್ಕೆ ಜೀವಿತದಲ್ಲಿ ಪ್ರಥಮ ಸ್ಥಾನವನ್ನು ಕೊಡುವ ಮೂಲಕ, ನಮ್ಮ ದೇವರಿಂದ ಕೊಡಲ್ಪಟ್ಟಿರುವ ಸ್ವಾಸ್ತ್ಯವು ನಮಗೆ ನಿಜವಾಗಿಯೂ ತುಂಬ ಅಮೂಲ್ಯವಾದದ್ದಾಗಿದೆ ಎಂಬುದಕ್ಕೆ ಬಲವಾದ ಪುರಾವೆಯನ್ನು ನೀಡುವೆವು. ಹೀಗೆ, “ನನ್ನ ದೇವರೇ, ಒಡೆಯನೇ, ನಿನ್ನನ್ನು ಘನಪಡಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು” ಎಂದು ಘೋಷಿಸುವವರಲ್ಲಿ ನಾವು ಸಹ ಸೇರಿರುವಂತಾಗಲಿ.—ಕೀರ್ತನೆ 145:1.
ನೀವು ಹೇಗೆ ವಿವರಿಸುವಿರಿ?
• ಒಂದುವೇಳೆ ಆದಾಮನು ದೇವರಿಗೆ ನಿಷ್ಠಾವಂತನಾಗಿರುತ್ತಿದ್ದಲ್ಲಿ, ಅವನು ಯಾವ ಸ್ವಾಸ್ತ್ಯವನ್ನು ನಮಗೆ ದಾಟಿಸಿದ್ದಿರಸಾಧ್ಯವಿತ್ತು?
• ತಮಗೆ ಲಭ್ಯಗೊಳಿಸಲ್ಪಟ್ಟ ಸ್ವಾಸ್ತ್ಯದ ವಿಷಯದಲ್ಲಿ ಅಬ್ರಹಾಮನ ಸಂತತಿಯವರಿಗೆ ಯಾವ ದೃಷ್ಟಿಕೋನವಿತ್ತು?
• ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ಸ್ವಾಸ್ತ್ಯದಲ್ಲಿ ಏನು ಒಳಗೂಡಿದೆ?
• ಮಹಾಸಮೂಹದವರಿಗೆ ಯಾವ ಸ್ವಾಸ್ತ್ಯವು ಕೊಡಲ್ಪಡುವುದು, ಮತ್ತು ನಿಜವಾಗಿಯೂ ಅದನ್ನು ತಾವು ಗಣ್ಯಮಾಡುತ್ತೇವೆ ಎಂಬುದನ್ನು ಅವರು ಹೇಗೆ ತೋರಿಸಸಾಧ್ಯವಿದೆ?
[ಪುಟ 20ರಲ್ಲಿರುವ ಚಿತ್ರಗಳು]
ಅಬ್ರಹಾಮನ ಸಂತತಿಯವರು ಒಂದು ಅಮೂಲ್ಯ ಸ್ವಾಸ್ತ್ಯದ ವಾಗ್ದಾನವನ್ನು ಪಡೆದುಕೊಂಡರು
[ಪುಟ 23ರಲ್ಲಿರುವ ಚಿತ್ರಗಳು]
ನಿಮ್ಮ ಆತ್ಮಿಕ ಸ್ವಾಸ್ತ್ಯವನ್ನು ನೀವು ಗಣ್ಯಮಾಡುತ್ತೀರೊ?