ಅಧ್ಯಾಯ ಆರು
ನಿಮ್ಮ ಹದಿಹರೆಯದವನು ಏಳಿಗೆ ಹೊಂದುವಂತೆ ನೆರವಾಗಿರಿ
1, 2. ಹದಿ ವರ್ಷಗಳು ಯಾವ ಪಂಥಾಹ್ವಾನಗಳನ್ನು ಮತ್ತು ಯಾವ ಆನಂದಗಳನ್ನು ತರಬಲ್ಲವು?
ಮನೆಯಲ್ಲಿ ಒಬ್ಬ ಹದಿಹರೆಯದವನಿರುವುದು, ಒಬ್ಬ ಐದು ವರ್ಷ ವಯಸ್ಸಿನವನು ಅಥವಾ ಹತ್ತು ವರ್ಷ ವಯಸ್ಸಿನವನೂ ಇರುವುದಕ್ಕಿಂತಲೂ ತೀರ ಬೇರೆಯಾಗಿದೆ. ಹದಿ ವರ್ಷಗಳು ತಮ್ಮ ಸ್ವಂತ ಪಂಥಾಹ್ವಾನಗಳನ್ನು ಮತ್ತು ಸಮಸ್ಯೆಗಳನ್ನು ತರುತ್ತವೆ, ಆದರೂ ಅವು ಆನಂದಗಳನ್ನೂ ಪ್ರತಿಫಲಗಳನ್ನೂ ತರಬಲ್ಲವು. ಯುವ ಜನರು ಜವಾಬ್ದಾರಿಯಿಂದ ಕಾರ್ಯನಡಿಸಬಲ್ಲರು ಮತ್ತು ಯೆಹೋವನೊಂದಿಗೆ ಒಂದು ಉತ್ತಮ ಸಂಬಂಧವನ್ನು ಹೊಂದಬಲ್ಲರೆಂದು ಯೋಸೇಫ, ದಾವೀದ, ಯೋಷೀಯ, ಮತ್ತು ತಿಮೊಥೆಯರಂತಹ ಮಾದರಿಗಳು ತೋರಿಸುತ್ತವೆ. (ಆದಿಕಾಂಡ 37:2-11; 1 ಸಮುವೇಲ 16:11-13; 2 ಅರಸುಗಳು 22:3-7; ಅ. ಕೃತ್ಯಗಳು 16:1, 2) ಹದಿಹರೆಯದ ಅನೇಕರು ಇಂದು ಅದೇ ಮುಖ್ಯಾಂಶವನ್ನು ರುಜುಪಡಿಸುತ್ತಾರೆ. ಸಂಭವನೀಯವಾಗಿ ಅವರಲ್ಲಿ ಕೆಲವರನ್ನು ನೀವು ತಿಳಿದಿದ್ದೀರಿ.
2 ಆದರೂ, ಕೆಲವರಿಗೆ ಹದಿ ವರ್ಷಗಳು ದುರ್ದಮ್ಯವಾಗಿರುತ್ತವೆ. ತರುಣರು ಭಾವಾತ್ಮಕ ಏಳುಬೀಳುಗಳನ್ನು ಅನುಭವಿಸುತ್ತಾರೆ. ಹದಿಹರೆಯದ ಹುಡುಗರು ಮತ್ತು ಹುಡುಗಿಯರು ಹೆಚ್ಚು ಸ್ವತಂತ್ರರಾಗಿರಲು ಬಯಸಬಹುದು, ಮತ್ತು ತಮ್ಮ ಹೆತ್ತವರಿಂದ ಅವರ ಮೇಲೆ ಇಡಲ್ಪಟ್ಟ ಪರಿಮಿತಿಗಳಿಗೆ ಅವರು ಮುನಿದಾರು. ಆದರೂ, ಅಂತಹ ಯುವ ಜನರು ಇನ್ನೂ ತೀರ ಅನನುಭವಿಗಳು ಮತ್ತು ತಮ್ಮ ಹೆತ್ತವರಿಂದ ಪ್ರೀತಿಯುಳ್ಳ, ತಾಳ್ಮೆಯ ಸಹಾಯದ ಅಗತ್ಯ ಅವರಿಗಿದೆ. ಹೌದು, ಹದಿ ವರ್ಷಗಳು ಉದ್ರೇಕಿತವಾಗಿರಬಲ್ಲವು, ಆದರೆ ಅವು ಗೊಂದಲಮಯವಾಗಿರಲೂ ಸಾಧ್ಯವಿದೆ—ಹೆತ್ತವರು ಮತ್ತು ಹದಿಹರೆಯದವರು ಇವರಿಬ್ಬರಿಗೂ. ಈ ವರ್ಷಗಳಲ್ಲಿ ಯುವ ಜನರಿಗೆ ಹೇಗೆ ಸಹಾಯ ಕೊಡಲ್ಪಡಸಾಧ್ಯವಿದೆ?
3. ಯಾವ ರೀತಿಯಲ್ಲಿ ಹೆತ್ತವರು ತಮ್ಮ ತರುಣ ಸಂತಾನಕ್ಕೆ ಜೀವನದಲ್ಲಿ ಒಂದು ಉತ್ತಮ ಅವಕಾಶವನ್ನು ಕೊಡಬಲ್ಲರು?
3 ತಮ್ಮ ತರುಣ ಸಂತಾನವು ಆ ಸಂಕಷ್ಟಗಳನ್ನು ಯಶಸ್ವಿಯಾಗಿ ಪಾರಾಗಿ, ಜವಾಬ್ದಾರಿಯುತವಾದ ವಯಸ್ಕತನದ ಕಡೆಗೆ ಪ್ರಗತಿಮಾಡುವಂತೆ ಬೈಬಲಿನ ಸಲಹೆಯನ್ನು ಪಾಲಿಸುವ ಹೆತ್ತವರು ಸಾಧ್ಯವಿರುವುದರಲ್ಲಿ ಅತ್ಯುತ್ತಮ ಅವಕಾಶವನ್ನು ಅವರಿಗೆ ಕೊಡುತ್ತಾರೆ. ಬೈಬಲ್ ಮೂಲತತ್ವಗಳನ್ನು ಒಂದುಗೂಡಿ ಅನ್ವಯಿಸಿದ ಹೆತ್ತವರು ಮತ್ತು ಹದಿಹರೆಯದವರು, ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಕಾಲಾವಧಿಗಳಲ್ಲಿ, ಯಶಸ್ಸಿನೊಂದಿಗೆ ಆಶೀರ್ವದಿಸಲ್ಪಟ್ಟಿದ್ದಾರೆ.—ಕೀರ್ತನೆ 119:1.
ಪ್ರಾಮಾಣಿಕವಾದ ಮತ್ತು ತೆರೆದ ಸಂವಾದ
4. ಹದಿ ವರ್ಷಗಳಲ್ಲಿ ಆಂತರ್ಯದ ಮಾತುಕತೆಯು ವಿಶೇಷವಾಗಿ ಪ್ರಾಮುಖ್ಯವಾಗಿದೆಯೇಕೆ?
4 ಬೈಬಲ್ ಅನ್ನುವುದು: “ಅಂತರಂಗದ ಮಾತು ಇಲ್ಲದಿರುವಲ್ಲಿ ಯೋಜನೆಗಳ ಭಂಗಗೊಳ್ಳುವಿಕೆಯಿದೆ.” (ಜ್ಞಾನೋಕ್ತಿ 15:22, NW) ಮಕ್ಕಳು ಸ್ವಲ್ಪ ಚಿಕ್ಕವರಿದ್ದಾಗ ಆಂತರ್ಯದ ಮಾತುಗಳು ಅಗತ್ಯವಿತ್ತೆಂದಾದರೆ, ವಿಶೇಷವಾಗಿ ಹದಿಹರೆಯದಲ್ಲಿ—ಎಳೆಯರು ಮನೆಯಲ್ಲಿ ಸಂಭವನೀಯವಾಗಿ ಕಡಿಮೆ ಸಮಯ ಕಳೆಯುವಾಗ ಮತ್ತು ಶಾಲಾಸ್ನೇಹಿತರೊಂದಿಗೆ ಅಥವಾ ಇತರ ಸಂಗಾತಿಗಳೊಂದಿಗೆ ಹೆಚ್ಚು ಸಮಯ ಕಳೆಯುವಾಗ—ಅದು ಅತ್ಯಾವಶ್ಯಕ. ಆಂತರ್ಯದ ಮಾತುಕತೆಗಳು, ಹೆತ್ತವರ ಮತ್ತು ಮಕ್ಕಳ ನಡುವೆ ಪ್ರಾಮಾಣಿಕವೂ ಸರಳವೂ ಆದ ಸಂವಾದವು ಇರದಿದ್ದಲ್ಲಿ, ಹದಿಹರೆಯದವರು ಮನೆಯಲ್ಲಿ ಆಗಂತುಕರಾಗಬಲ್ಲರು. ಹೀಗಿರಲಾಗಿ, ಆ ಸಂವಾದ ಮಾಧ್ಯಮಗಳನ್ನು ಹೇಗೆ ತೆರೆದಿಡಸಾಧ್ಯವಿದೆ?
5. ತಮ್ಮ ಹೆತ್ತವರೊಂದಿಗೆ ಸಂವಾದಿಸುವ ವಿಷಯವನ್ನು ಹೇಗೆ ವೀಕ್ಷಿಸಲು ಹದಿಹರೆಯದವರು ಪ್ರೋತ್ಸಾಹಿಸಲ್ಪಡುತ್ತಾರೆ?
5 ಹದಿಹರೆಯದವರು ಮತ್ತು ಹೆತ್ತವರು ಇವರಿಬ್ಬರೂ ಇದರಲ್ಲಿ ತಮ್ಮ ಪಾತ್ರವಹಿಸಬೇಕು. ತರುಣರು ತಮ್ಮ ಹೆತ್ತವರೊಂದಿಗೆ ಮಾತಾಡುವುದನ್ನು, ತಾವು ಚಿಕ್ಕವರಿರುವಾಗ ಮಾಡಿದುದಕ್ಕಿಂತ ಹೆಚ್ಚು ಕಷ್ಟಕರವಾಗಿ ಕಂಡಾರು, ನಿಜ. ಆದರೂ, “ನುರಿತ ಮಾರ್ಗದರ್ಶನೆಯಿಲ್ಲದಲ್ಲಿ ಜನರು ಬಿದ್ದುಹೋಗುವರು; ಸಲಹೆಗಾರರ ಸಮುದಾಯದಲ್ಲಿ ರಕ್ಷಣೆಯಿರುವುದು,” ಎಂಬುದನ್ನು ನೆನಪಿನಲ್ಲಿಡಿರಿ. (ಜ್ಞಾನೋಕ್ತಿ 11:14, NW) ಈ ಮಾತುಗಳು ಎಲ್ಲರಿಗೆ, ಆಬಾಲವೃದ್ಧರಿಗೆ ಒಂದೇ ತೆರನಾಗಿ ಅನ್ವಯಿಸುತ್ತವೆ. ಇದನ್ನು ಗ್ರಹಿಸಿಕೊಳ್ಳುವ ಹದಿಹರೆಯದವರು, ತಮಗಿನ್ನೂ ನುರಿತ ಮಾರ್ಗದರ್ಶನೆಯ ಅಗತ್ಯವಿದೆ ಯಾಕಂದರೆ ಮುಂಚಿಗಿಂತ ಅಧಿಕ ಜಟಿಲವಾದ ಸಮಸ್ಯೆಗಳನ್ನು ತಾವು ಎದುರಿಸುತ್ತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ತಮ್ಮ ವಿಶ್ವಾಸಿ ಹೆತ್ತವರು ಸಲಹೆಗಾರರೋಪಾದಿ ಒಳ್ಳೇ ಯೋಗ್ಯತೆಯುಳ್ಳವರು ಯಾಕಂದರೆ ಜೀವನದಲ್ಲಿ ಅವರು ಹೆಚ್ಚು ಅನುಭವಿಗಳು ಮತ್ತು ಅನೇಕ ವರ್ಷಗಳಿಂದ ತಮ್ಮ ಪ್ರೀತಿಯ ಚಿಂತನೆಯನ್ನು ರುಜುಪಡಿಸಿದ್ದಾರೆಂಬುದನ್ನು ಅವರು ಅಂಗೀಕರಿಸಬೇಕು. ಆದಕಾರಣ, ಅವರ ಜೀವಿತದ ಈ ಹಂತದಲ್ಲಿ, ವಿವೇಕಿಗಳಾದ ಹದಿಹರೆಯದವರು ತಮ್ಮ ಹೆತ್ತವರಿಂದ ದೂರತೊಲಗುವುದಿಲ್ಲ.
6. ತಮ್ಮ ಹದಿಹರೆಯದವರೊಂದಿಗೆ ಸಂವಾದಿಸುವ ವಿಷಯದಲ್ಲಿ ವಿವೇಕಿಗಳೂ ಪ್ರೀತಿಯುಳ್ಳವರೂ ಅದ ಹೆತ್ತವರಿಗೆ ಯಾವ ಮನೋಭಾವವಿರುವುದು?
6 ಹದಿಹರೆಯದವನಿಗೆ ಮಾತಾಡುವುದು ಅಗತ್ಯವೆನಿಸುವಾಗ ಹೆತ್ತವರು ಲಭ್ಯವಿರಲು ಕಷ್ಟಪಟ್ಟು ಪ್ರಯತ್ನಿಸುವರೆಂಬುದೇ ತೆರೆದ ಸಂವಾದದ ಅರ್ಥ. ನೀವೊಬ್ಬ ಹೆತ್ತವರಾಗಿರುವುದಾದರೆ, ಕಡಿಮೆಪಕ್ಷ ನಿಮ್ಮ ಪಕ್ಷದಿಂದ ಸಂವಾದ ದ್ವಾರವು ತೆರೆದಿದೆಯೆಂಬುದನ್ನು ನಿಶ್ಚಯ ಮಾಡಿಕೊಳ್ಳಿರಿ. ಇದು ಸುಲಭವಾಗಿರಲಿಕ್ಕಿಲ್ಲ. “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂದು ಬೈಬಲು ಹೇಳುತ್ತದೆ. (ಪ್ರಸಂಗಿ 3:7) ನಿಮ್ಮ ಹದಿಹರೆಯದವನು ಅದು ಮಾತಾಡುವ ಸಮಯವೆಂದು ಭಾವಿಸುವಾಗ, ಅದು ನಿಮ್ಮ ಸುಮ್ಮನಿರುವ ಸಮಯವಾಗಿದ್ದೀತು. ನೀವು ಆ ಸಮಯವನ್ನು ವೈಯಕ್ತಿಕ ಅಭ್ಯಾಸಕ್ಕಾಗಿ, ವಿಹಾರಕ್ಕಾಗಿ, ಅಥವಾ ಮನೆಗೆಲಸಕ್ಕಾಗಿ ಬದಿಗಿಟ್ಟಿರಬಹುದು. ಆದರೂ, ನಿಮ್ಮ ಎಳೆಯನು ನಿಮ್ಮೊಂದಿಗೆ ಮಾತಾಡಲು ಬಯಸುವುದಾದರೆ, ನಿಮ್ಮ ಯೋಜನೆಗಳನ್ನು ಸರಿಹೊಂದಿಸಿಕೊಳ್ಳಲು ಪ್ರಯತ್ನಿಸಿ, ಕಿವಿಗೊಡಿರಿ. ಇಲ್ಲವಾದರೆ, ಅವನು ಇನ್ನೊಮ್ಮೆ ಪ್ರಯತ್ನಿಸಲಿಕ್ಕಿಲ್ಲ. ಯೇಸುವಿನ ಮಾದರಿಯನ್ನು ನೆನಪಿಸಿಕೊಳ್ಳಿ. ಒಂದು ಸಂದರ್ಭದಲ್ಲಿ ಅವನು ವಿರಮಿಸಲಿಕ್ಕಾಗಿ ಒಂದು ಸಮಯವನ್ನು ಗೊತ್ತುಮಾಡಿದ್ದನು. ಆದರೆ ಜನರು ಅವನಿಗೆ ಕಿವಿಗೊಡಲು ಗುಂಪಾಗಿ ಕೂಡಿಬಂದಾಗ, ಅವನು ವಿರಮಿಸುವುದನ್ನು ಬಿಟ್ಟು ಅವರಿಗೆ ಕಲಿಸಲು ತೊಡಗಿದನು. (ಮಾರ್ಕ 6:30-34) ಹೆಚ್ಚಿನ ಹದಿಹರೆಯದವರಿಗೆ ತಮ್ಮ ಹೆತ್ತವರು ಕಾರ್ಯಮಗ್ನ ಜೀವನಗಳನ್ನು ನಡಸುತ್ತಾರೆಂದು ತಿಳಿದಿದೆ, ಆದರೆ ಬೇಕಾದಲ್ಲಿ ತಮ್ಮ ಹೆತ್ತವರು ತಮಗಾಗಿ ಇದ್ದಾರೆಂಬ ಮರುಆಶ್ವಾಸನೆ ಅವರಿಗೆ ಅಗತ್ಯವಿದೆ. ಆದುದರಿಂದ, ನಿಮ್ಮನ್ನು ದೊರಕಿಸಿಕೊಳ್ಳಿರಿ ಮತ್ತು ಗ್ರಹಣಶಕ್ತಿಯುಳ್ಳವರಾಗಿರ್ರಿ.
7. ಹೆತ್ತವರಿಗೆ ಏನನ್ನು ವರ್ಜಿಸುವ ಅಗತ್ಯವಿದೆ?
7 ನೀವು ಹದಿಹರೆಯದವರಾಗಿದ್ದಾಗ ವಿಷಯವು ಹೇಗಿತ್ತೆಂದು ನೆನಪಿಸಿಕೊಳ್ಳಲು ಪ್ರಯತ್ನಿಸಿರಿ ಮತ್ತು ನಿಮ್ಮ ಹಾಸ್ಯದೃಷ್ಟಿಯನ್ನು ಕಳೆದುಕೊಳ್ಳಬೇಡಿ! ತಮ್ಮ ಮಕ್ಕಳೊಂದಿಗೆ ಇರುವುದನ್ನು ಹೆತ್ತವರು ಆನಂದಿಸುವ ಅಗತ್ಯವಿದೆ. ಬಿಡುವಿನ ಸಮಯವು ಲಭ್ಯವಿರುವಾಗ ಹೆತ್ತವರು ಅದನ್ನು ಹೇಗೆ ಕಳೆಯುತ್ತಾರೆ? ತಮ್ಮ ಬಿಡುವಿನ ಸಮಯವನ್ನು ಯಾವಾಗಲೂ ತಮ್ಮ ಕುಟುಂಬವು ಒಳಗೂಡದೇ ಇರುವ ವಿಷಯವನ್ನು ಮಾಡಲು ಅವರು ಬಯಸುವುದಾದರೆ, ಅವರ ಹದಿಹರೆಯದವರು ಗಮನಿಸಲು ತ್ವರಿತರಾಗಿರುವರು. ತಮ್ಮ ಹೆತ್ತವರಿಗಿಂತ ಶಾಲಾ ಮಿತ್ರರು ತಮ್ಮನ್ನು ಹೆಚ್ಚು ಪರಿಗಣಿಸುತ್ತಾರೆಂಬ ತೀರ್ಮಾನಕ್ಕೆ ತರುಣರು ಬರುವುದಾದರೆ, ಅವರಿಗೆ ಸಮಸ್ಯೆಗಳು ಬಂದೇ ತೀರುವವು.
ಸಂವಾದದ ವಿಷಯ
8. ಮಕ್ಕಳಲ್ಲಿ ಪ್ರಾಮಾಣಿಕತೆ, ಕಷ್ಟದ ಕೆಲಸ, ಮತ್ತು ಯೋಗ್ಯವಾದ ನಡವಳಿಕೆಗಾಗಿ ಗಣ್ಯತೆಯನ್ನು ಹೇಗೆ ಅಚ್ಚೊತ್ತಸಾಧ್ಯವಿದೆ?
8 ಹೆತ್ತವರು ತಮ್ಮ ಮಕ್ಕಳಲ್ಲಿ ಪ್ರಾಮಾಣಿಕತೆ ಮತ್ತು ಕಷ್ಟದ ಕೆಲಸಕ್ಕಾಗಿ ಗಣ್ಯತೆಯನ್ನು ಆಗಲೇ ಮನಸ್ಸಿಗೆ ಹತ್ತಿಸದಿದ್ದಲ್ಲಿ, ಖಂಡಿತವಾಗಿಯೂ ಅವರು ಅದನ್ನು ಈ ಹದಿ ವರ್ಷಗಳಲ್ಲಿ ಮಾಡಲೇಬೇಕು. (1 ಥೆಸಲೊನೀಕ 4:11; 2 ಥೆಸಲೊನೀಕ 3:10) ನೈತಿಕವೂ ಶುದ್ಧವೂ ಆದ ಜೀವನವನ್ನು ಜೀವಿಸುವ ಪ್ರಾಮುಖ್ಯವನ್ನು ತಮ್ಮ ಮಕ್ಕಳು ಹೃದಯಪೂರ್ವಕವಾಗಿ ನಂಬುತ್ತಾರೆಂಬುದನ್ನೂ ಅವರು ಖಾತರಿ ಮಾಡಿಕೊಳ್ಳುವುದು ಸಹ ಅವರಿಗೆ ಅತ್ಯಾವಶ್ಯಕವಾಗಿದೆ. (ಜ್ಞಾನೋಕ್ತಿ 20:11) ಈ ಕ್ಷೇತ್ರಗಳಲ್ಲಿ ಒಬ್ಬ ಹೆತ್ತವನು ಹೆಚ್ಚಾಗಿ ಮಾದರಿಯ ಮೂಲಕ ಸಂವಾದಿಸುತ್ತಾನೆ. ಅವಿಶ್ವಾಸಿ ಗಂಡಂದಿರು ‘ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರ ನಡತೆಯಿಂದಲೇ ಸನ್ಮಾರ್ಗಕ್ಕೆ’ ಹೇಗೆ ಬರಬಲ್ಲರೋ ಹಾಗೆಯೇ ಹದಿಹರೆಯದವರು ತಮ್ಮ ಹೆತ್ತವರ ನಡವಳಿಕೆಯ ಮೂಲಕ ಯೋಗ್ಯ ಮೂಲತತ್ವಗಳನ್ನು ಕಲಿಯಬಲ್ಲರು. (1 ಪೇತ್ರ 3:1) ಆದರೂ, ಮಾದರಿಯು ತಾನೇ ಎಂದೂ ಸಾಕಾಗದು, ಯಾಕಂದರೆ ಮಕ್ಕಳು ಮನೆಯ ಹೊರಗೆ ಅನೇಕ ಕೆಟ್ಟ ಮಾದರಿಗಳಿಗೆ ಮತ್ತು ಆಕರ್ಷಕ ಅಪಪ್ರಚಾರದ ಉಕ್ಕಿದ ಪ್ರವಾಹಕ್ಕೆ ಸಹ ಒಡ್ಡಲ್ಪಡುತ್ತಾರೆ. ಆದುದರಿಂದ ಚಿಂತನೆಯ ಹೆತ್ತವರಿಗೆ, ತಮ್ಮ ಹದಿಹರೆಯದವರು ಕೇಳುವ ಮತ್ತು ನೋಡುವ ವಿಷಯಗಳ ಕುರಿತಾದ ಅವರ ವೀಕ್ಷಣಗಳನ್ನು ತಿಳಿಯುವ ಅಗತ್ಯವಿದೆ, ಮತ್ತು ಇದು ಅರ್ಥಭರಿತವಾದ ಸಂಭಾಷಣೆಯನ್ನು ಕೇಳಿಕೊಳ್ಳುತ್ತದೆ.—ಜ್ಞಾನೋಕ್ತಿ 20:5.
9, 10. ಲೈಂಗಿಕ ವಿಷಯಗಳ ಕುರಿತು ತಮ್ಮ ಮಕ್ಕಳಿಗೆ ಉಪದೇಶಿಸಲು ಹೆತ್ತವರು ನಿಶ್ಚಿತರಾಗಿರಬೇಕು ಏಕೆ, ಮತ್ತು ಅವರು ಇದನ್ನು ಹೇಗೆ ಮಾಡಬಲ್ಲರು?
9 ಇದು ಲೈಂಗಿಕ ವಿಷಯಗಳಲ್ಲಿ ವಿಶೇಷವಾಗಿ ಸತ್ಯವಾಗಿದೆ. ಹೆತ್ತವರೇ, ನಿಮ್ಮ ಮಕ್ಕಳೊಂದಿಗೆ ಲೈಂಗಿಕ ವಿಷಯಗಳನ್ನು ಚರ್ಚಿಸಲಿಕ್ಕೆ ನೀವು ಸಂಕೋಚಪಡುತ್ತೀರೋ? ಸಂಕೋಚಪಟ್ಟರೂ, ಹಾಗೆ ಮಾಡಲು ಪ್ರಯತ್ನ ಮಾಡಿರಿ, ಯಾಕಂದರೆ ನಿಮ್ಮ ಎಳೆಯರು ಬೇರೊಬ್ಬನಿಂದ ಆ ವಿಷಯವಾಗಿ ಖಂಡಿತವಾಗಿಯೂ ಕಲಿಯುವರು. ನಿಮ್ಮಿಂದ ಕಲಿಯದಿದ್ದರೆ, ಅವರು ಎಂತಹ ವಕ್ರವಾದ ಮಾಹಿತಿಯನ್ನು ಪಡೆಯುವರೋ ಯಾರಿಗೆ ಗೊತ್ತು? ಬೈಬಲಿನಲ್ಲಿ, ಯೆಹೋವನು ಲೈಂಗಿಕ ಸ್ವರೂಪದ ವಿಷಯಗಳನ್ನು ತಿಳಿಸುವುದನ್ನು ವರ್ಜಿಸುವುದಿಲ್ಲ, ಹೆತ್ತವರು ಸಹ ವರ್ಜಿಸಬಾರದು.—ಜ್ಞಾನೋಕ್ತಿ 4:1-4; 5:1-21.
10 ಕೃತಜ್ಞತಾಪೂರ್ವಕವಾಗಿ, ಲೈಂಗಿಕ ನಡವಳಿಕೆಯ ಕ್ಷೇತ್ರದ ಸ್ಪಷ್ಟ ಮಾರ್ಗದರ್ಶನವು ಬೈಬಲಿನಲ್ಲಿ ಒಳಗೊಂಡಿದೆ, ಮತ್ತು ಈ ಮಾರ್ಗದರ್ಶನವು ಆಧುನಿಕ ಲೋಕಕ್ಕೆ ಇನ್ನೂ ಅನ್ವಯಿಸುತ್ತದೆಂದು ತೋರಿಸುವ ಬಹಳ ಸಹಾಯಕರ ಮಾಹಿತಿಯನ್ನು ವಾಚ್ಟವರ್ ಸೊಸೈಟಿಯು ಪ್ರಕಾಶಿಸಿಯದೆ. ಈ ಸಹಾಯವನ್ನು ಯಾಕೆ ಉಪಯೋಗಿಸಬಾರದು? ಉದಾಹರಣೆಗಾಗಿ, ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ (ಇಂಗ್ಲಿಷ್) ಪುಸ್ತಕದಲ್ಲಿರುವ “ಲೈಂಗಿಕತೆ ಮತ್ತು ನೈತಿಕತೆ”ಯ ವಿಭಾಗವನ್ನು ನಿಮ್ಮ ಮಗ ಅಥವಾ ಮಗಳೊಂದಿಗೆ ಯಾಕೆ ಪುನರ್ವಿಮರ್ಶಿಸಬಾರದು? ಫಲಿತಾಂಶಗಳು ನಿಮ್ಮನ್ನು ಸುಖಾಶ್ಚರ್ಯಗೊಳಿಸಾವು.
11. ಯೆಹೋವನನ್ನು ಸೇವಿಸುವ ವಿಧವನ್ನು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವ ಒಂದು ಅತ್ಯಂತ ಪರಿಣಾಮಕಾರಕ ವಿಧವು ಯಾವುದು?
11 ಹೆತ್ತವರು ಮತ್ತು ಮಕ್ಕಳು ಚರ್ಚಿಸಬೇಕಾದ ಅತ್ಯಂತ ಪ್ರಾಮುಖ್ಯ ವಿಷಯವು ಯಾವುದು? ಅಪೊಸ್ತಲ ಪೌಲನು ಹೀಗೆ ಬರೆದಾಗ ಅವನು ಅದಕ್ಕೆ ನಿರ್ದೇಶಿಸಿದನು: “[ನಿಮ್ಮ ಮಕ್ಕಳನ್ನು] ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಹೋಗಿರಿ.” (ಎಫೆಸ 6:4, NW) ಯೆಹೋವನ ಕುರಿತು ಮಕ್ಕಳು ಕಲಿಯುತ್ತಾ ಇರುವ ಅಗತ್ಯವಿದೆ. ವಿಶಿಷ್ಟವಾಗಿ, ಆತನನ್ನು ಪ್ರೀತಿಸಲು ಕಲಿಯುವ ಅಗತ್ಯವು ಅವರಿಗಿದೆ, ಮತ್ತು ಆತನನ್ನು ಸೇವಿಸಲು ಅವರು ಬಯಸಬೇಕು. ಇಲ್ಲಿಯೂ, ಮಾದರಿಯ ಮೂಲಕ ಅಧಿಕ ವಿಷಯವು ಕಲಿಸಲ್ಪಡಸಾಧ್ಯವಿದೆ. ತಮ್ಮ ಹೆತ್ತವರು ದೇವರನ್ನು ‘ತಮ್ಮ ಪೂರ್ಣಹೃದಯದಿಂದಲೂ ತಮ್ಮ ಪೂರ್ಣಪ್ರಾಣದಿಂದಲೂ ತಮ್ಮ ಪೂರ್ಣಮನಸ್ಸಿನಿಂದಲೂ’ ಪ್ರೀತಿಸುವುದನ್ನು ಮತ್ತು ಇದು ಅವರ ಹೆತ್ತವರ ಜೀವಿತಗಳಲ್ಲಿ ಸುಫಲಗಳನ್ನು ಉತ್ಪಾದಿಸುವುದನ್ನು ತರುಣರು ಕಾಣುವುದಾದರೆ, ಅದನ್ನೇ ಮಾಡಲು ಅವರು ಚೆನ್ನಾಗಿ ಪ್ರಭಾವಿಸಲ್ಪಡಬಹುದು. (ಮತ್ತಾಯ 22:37) ತದ್ರೀತಿಯಲ್ಲಿ ತಮ್ಮ ಹೆತ್ತವರು, ದೇವರ ರಾಜ್ಯವನ್ನು ಪ್ರಥಮವಾಗಿಡುತ್ತಾ, ಪ್ರಾಪಂಚಿಕ ವಸ್ತುಗಳ ಬಗ್ಗೆ ಒಂದು ನ್ಯಾಯಸಮ್ಮತ ನೋಟವನ್ನಿಡುವುದನ್ನು ಯುವ ಜನರು ಕಾಣುವಲ್ಲಿ, ಅದೇ ಮಾನಸಿಕ ಭಾವವನ್ನು ವಿಕಸಿಸಲು ಅವರು ಸಹಾಯ ಮಾಡಲ್ಪಡುವರು.—ಪ್ರಸಂಗಿ 7:12; ಮತ್ತಾಯ 6:31-33.
12, 13. ಕುಟುಂಬ ಅಧ್ಯಯನವು ಯಶಸ್ವಿಯಾಗಬೇಕಾದರೆ ಯಾವ ವಿಷಯಗಳನ್ನು ಮನಸ್ಸಿನಲ್ಲಿಡಬೇಕು?
12 ಯುವ ಜನರಿಗೆ ಆತ್ಮಿಕ ಮೌಲ್ಯಗಳನ್ನು ಸಾಗಿಸುವುದರಲ್ಲಿ ಒಂದು ಮಹತ್ತಾದ ಸಹಾಯವು ಸಾಪ್ತಾಹಿಕ ಕುಟುಂಬ ಬೈಬಲಧ್ಯಯನವಾಗಿದೆ. (ಕೀರ್ತನೆ 119:33, 34; ಜ್ಞಾನೋಕ್ತಿ 4:20-23) ಅಂತಹ ಒಂದು ಅಧ್ಯಯನವನ್ನು ನಿಯತ ಕಾಲಿಕವಾಗಿ ನಡಸುವುದು ಅತ್ಯಾವಶ್ಯಕ. (ಕೀರ್ತನೆ 1:1-3) ಬೇರೆ ವಿಷಯಗಳನ್ನು ಕುಟುಂಬ ಅಧ್ಯಯನದ ಸುತ್ತಲೂ ಅಳವಡಿಸಿಕೊಳ್ಳಬೇಕೇ ಹೊರತು ವಿರುದ್ಧ ಕ್ರಮದಲ್ಲಲ್ಲ ಎಂಬುದನ್ನು ಹೆತ್ತವರು ಮತ್ತು ಅವರ ಮಕ್ಕಳು ಗ್ರಹಿಸಬೇಕು. ಅದಲ್ಲದೆ, ಕುಟುಂಬ ಅಧ್ಯಯನವು ಪರಿಣಾಮಕಾರಿಯಾಗಬೇಕಾದರೆ ಯೋಗ್ಯ ಮನೋಭಾವವು ಅತ್ಯಾವಶ್ಯಕ. ಒಬ್ಬ ತಂದೆಯು ಹೇಳಿದ್ದು: “ಕುಟುಂಬ ಅಭ್ಯಾಸದ ಸಮಯದಲ್ಲಿ ಒಂದು ಬಿಗಿತವಿಲ್ಲದ ಆದರೂ ಗೌರವಯುಕ್ತ—ಅನೌಪಚಾರಿಕವಾದ ಆದರೂ ಹುಡುಗಾಟಿಕೆಯದ್ದಲ್ಲದ ವಾತಾವರಣವನ್ನು ಉತ್ತೇಜಿಸುವುದೇ ಅಭ್ಯಾಸ ನಿರ್ವಾಹಕನ ಕೀಲಿ ಕೈ. ಸರಿಯಾದ ಸಮತೂಕವನ್ನು ಗಳಿಸುವುದು ಯಾವಾಗಲೂ ಸುಲಭವಾಗದೆ ಇದ್ದೀತು ಮತ್ತು ಎಳೆಯರಿಗೆ ಪದೇ ಪದೇ ಮನೋಭಾವದ ಕ್ರಮಪಡಿಸುವಿಕೆಯು ಅಗತ್ಯವಿರುವುದು. ಒಂದೆರಡು ಸಾರಿ ವಿಷಯಗಳು ಸುಗಮವಾಗಿ ಹೋಗದಿದ್ದಲ್ಲಿ, ಪಟ್ಟುಹಿಡಿದು ಮುಂದಿನ ಬಾರಿಗಾಗಿ ಮುನ್ನೋಡಿರಿ.” ಪ್ರತಿ ಅಭ್ಯಾಸದ ಮುಂಚೆ ತನ್ನ ಪ್ರಾರ್ಥನೆಯಲ್ಲಿ, ಒಳಗೂಡಿದ ಎಲ್ಲರಲ್ಲಿ ಯೋಗ್ಯ ದೃಷ್ಟಿಕೋನವಿರುವಂತೆ ಯೆಹೋವನ ಸಹಾಯವನ್ನು ತಾನು ವಿಶಿಷ್ಟವಾಗಿ ವಿನಂತಿಸಿದನೆಂದು ಇದೇ ತಂದೆಯು ಹೇಳಿದನು.—ಕೀರ್ತನೆ 119:66.
13 ಕುಟುಂಬ ಅಧ್ಯಯನವನ್ನು ನಿರ್ವಹಿಸುವುದು ವಿಶ್ವಾಸಿಗಳಾದ ಹೆತ್ತವರ ಜವಾಬ್ದಾರಿಯಾಗಿದೆ. ನಿಜ, ಕೆಲವು ಹೆತ್ತವರು ಪ್ರತಿಭಾವಂತ ಶಿಕ್ಷಕರಾಗಿಲ್ಲದಿರಬಹುದು, ಮತ್ತು ಕುಟುಂಬ ಅಧ್ಯಯನವನ್ನು ಆಸಕ್ತಿಕರವನ್ನಾಗಿ ಮಾಡುವ ವಿಧಾನಗಳನ್ನು ಕಂಡುಹಿಡಿಯಲು ಅವರಿಗೆ ಕಷ್ಟಕರವಾದೀತು. ಆದರೂ, ನೀವು ನಿಮ್ಮ ಹದಿಹರೆಯದವರನ್ನು “ಕೃತ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿಸುವುದಾದರೆ, ಅವರಿಗೆ ಆತ್ಮಿಕವಾಗಿ ಪ್ರಗತಿಮಾಡುವಂತೆ ನಮ್ರತೆಯ ಮತ್ತು ಪ್ರಾಮಾಣಿಕತೆಯ ವಿಧದಲ್ಲಿ ಸಹಾಯ ಮಾಡಬಯಸುವಿರಿ. (1 ಯೋಹಾನ 3:18) ಆಗಾಗ ಅವರು ಗೊಣಗಬಹುದು, ಆದರೆ ಅವರ ಹಿತಾಸಕ್ತಿಯಲ್ಲಿ ನಿಮ್ಮ ಗಾಢಾಭಿರುಚಿಯ ಅರಿವು ಅವರಿಗಾಗುವುದು ಸಂಭವನೀಯ.
14. ಹದಿಹರೆಯದವನಿಗೆ ಆತ್ಮಿಕ ವಿಷಯಗಳನ್ನು ಸಂವಾದಿಸುವಾಗ, ಧರ್ಮೋಪದೇಶಕಾಂಡ 11:18, 19 ಹೇಗೆ ಅನ್ವಯಿಸಲ್ಪಡಬಲ್ಲದು?
14 ಆತ್ಮಿಕವಾಗಿ ಪ್ರಾಮುಖ್ಯವಾಗಿರುವ ವಿಷಯಗಳನ್ನು ಸಂವಾದಿಸುವುದಕ್ಕೆ ಕುಟುಂಬ ಅಭ್ಯಾಸವು ಏಕಮಾತ್ರ ಸಂದರ್ಭವಾಗಿರುವುದಿಲ್ಲ. ಹೆತ್ತವರಿಗೆ ಕೊಡಲ್ಪಟ್ಟ ಯೆಹೋವನ ಆಜ್ಞೆಯು ನಿಮಗೆ ನೆನಪಿದೆಯೇ? ಆತನಂದದ್ದು: “ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು; ಇವುಗಳನ್ನು ಜ್ಞಾಪಕಾರ್ಥವಾಗಿ ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು; ಇವು ನಿಮ್ಮ ಹುಬ್ಬುಗಳ ನಡುವೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು. ನೀವು ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸಮಾಡಿಸಬೇಕು.” (ಧರ್ಮೋಪದೇಶಕಾಂಡ 11:18, 19; ಧರ್ಮೋಪದೇಶಕಾಂಡ 6:6, 7ನ್ನು ಸಹ ನೋಡಿ.) ಹೆತ್ತವರು ಮಕ್ಕಳಿಗೆ ಸದಾ ಸಾರುತ್ತಲೇ ಇರಬೇಕೆಂದು ಇದರ ಅರ್ಥವಲ್ಲ. ಆದರೆ ಒಬ್ಬ ಪ್ರೀತಿಯ ಕುಟುಂಬ ತಲೆಯು ತನ್ನ ಕುಟುಂಬದ ಆತ್ಮಿಕ ಹೊರನೋಟವನ್ನು ಕಟ್ಟಲಿಕ್ಕಾಗಿ ಯಾವಾಗಲೂ ಅವಕಾಶಗಳಿಗಾಗಿ ಎಚ್ಚರದಿಂದ ಹುಡುಕುತ್ತಿರಬೇಕು.
ಶಿಸ್ತು ಮತ್ತು ಗೌರವ
15, 16. (ಎ) ಶಿಸ್ತು ಎಂದರೇನು? (ಬಿ) ಶಿಸ್ತನ್ನು ನಿರ್ವಹಿಸುವುದಕ್ಕೆ ಯಾರು ಜವಾಬ್ದಾರನಾಗಿದ್ದಾನೆ ಮತ್ತು ಅದು ಪಾಲಿಸಲ್ಪಡುವಂತೆ ನಿಶ್ಚಯಮಾಡುವ ಜವಾಬ್ದಾರಿಕೆ ಯಾರದ್ದು?
15 ತಿದ್ದುಪಾಟನ್ನು ಮಾಡುವ ತರಬೇತಿಯು ಶಿಸ್ತಾಗಿದೆ ಮತ್ತು ಇದು ಸಂವಾದವನ್ನು ಒಳಗೂಡುತ್ತದೆ. ಶಿಸ್ತು, ಶಿಕ್ಷೆಗಿಂತ ಹೆಚ್ಚಾಗಿ ತಿದ್ದುಪಾಟಿನ ಒಂದು ಅಭಿಪ್ರಾಯವನ್ನು ಸೂಚಿಸುತ್ತದೆ—ಆದರೂ ಶಿಕ್ಷೆಯ ಅಗತ್ಯವಿರಬಹುದು. ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ಶಿಸ್ತಿನ ಅಗತ್ಯವಿದ್ದವರಾಗಿದ್ದರು, ಮತ್ತು ಈಗ ಅವರು ಹದಿಹರೆಯದವರಾಗಿರುವುದರಿಂದ, ಅದರ ಯಾವುದಾದರೊಂದು ರೂಪವು ಅವರಿಗೆ ಇನ್ನೂ ಬೇಕು, ಪ್ರಾಯಶಃ ಮತ್ತೂ ಅಧಿಕವಾಗಿ. ಇದು ಸತ್ಯವೆಂದು ವಿವೇಕಿಗಳಾದ ಹದಿಹರೆಯದವರಿಗೆ ತಿಳಿದದೆ.
16 ಬೈಬಲು ಅನ್ನುವುದು: “ಮೂರ್ಖನು ತಂದೆಯ ಶಿಕ್ಷೆಯನ್ನು [“ಶಿಸ್ತನ್ನು,” NW] ತಿರಸ್ಕರಿಸುವನು; ಗದರಿಕೆಯನ್ನು ಗಮನಿಸುವವನು ಜಾಣನು.” (ಜ್ಞಾನೋಕ್ತಿ 15:5) ಈ ವಚನದಿಂದ ನಾವು ಹೆಚ್ಚನ್ನು ಕಲಿಯುತ್ತೇವೆ. ಶಿಸ್ತು ನೀಡಲ್ಪಡುವುದೆಂಬುದನ್ನು ಇದು ಸೂಚಿಸುತ್ತದೆ. ಅದು ಕೊಡಲ್ಪಡದೆ ಇದ್ದಲ್ಲಿ ಹದಿಹರೆಯದವನು “ಗದರಿಕೆಯನ್ನು ಗಮನಿಸ”ಲಾರನು. ಶಿಸ್ತನ್ನು ನೀಡುವ ಜವಾಬ್ದಾರಿಯನ್ನು ಯೆಹೋವನು ಹೆತ್ತವರಿಗೆ, ವಿಶೇಷವಾಗಿ ತಂದೆಗೆ ಕೊಡುತ್ತಾನೆ. ಆದರೂ, ಆ ಶಿಸ್ತಿಗೆ ಕಿವಿಗೊಡುವ ಜವಾಬ್ದಾರಿಯು ಹದಿಹರೆಯದವನಿಗೆ ಸೇರುತ್ತದೆ. ಅವನು ತನ್ನ ತಂದೆ ಮತ್ತು ತಾಯಿಯ ವಿವೇಕದ ಶಿಸ್ತನ್ನು ಪಾಲಿಸಿದಲ್ಲಿ ಹೆಚ್ಚನ್ನು ಕಲಿಯುವನು ಮತ್ತು ಕಡಿಮೆ ತಪ್ಪುಗಳನ್ನು ಮಾಡುವನು. (ಜ್ಞಾನೋಕ್ತಿ 1:8) ಬೈಬಲ್ ಅನ್ನುವುದು: “ಶಿಕ್ಷೆಯನ್ನು [“ಶಿಸ್ತನ್ನು,” NW] ತ್ಯಜಿಸುವವನಿಗೆ ಬಡತನ ಮತ್ತು ಅವಮಾನ; ಗದರಿಕೆಯನ್ನು ಗಮನಿಸುವವನಿಗೆ ಮಾನ.”—ಜ್ಞಾನೋಕ್ತಿ 13:18.
17. ಶಿಸ್ತನ್ನು ನಿರ್ವಹಿಸುತ್ತಿರುವಾಗ ಯಾವ ಸಮತೆಗಾಗಿ ಗುರಿಯನ್ನಿಡುವ ಅಗತ್ಯ ಹೆತ್ತವರಿಗಿದೆ?
17 ಹದಿಹರೆಯದವರಿಗೆ ಶಿಸ್ತನ್ನು ನೀಡುತ್ತಿರುವಾಗ ಹೆತ್ತವರು ಸಮತೆಯುಳ್ಳವರಾಗಿರುವುದು ಅಗತ್ಯ. ತಮ್ಮ ಸಂತಾನವನ್ನು ಸಿಟ್ಟಿಗೆಬ್ಬಿಸುವಷ್ಟು, ಪ್ರಾಯಶಃ ತಮ್ಮ ಮಕ್ಕಳ ಆತ್ಮವಿಶ್ವಾಸವನ್ನು ಹಾನಿಗೊಳಿಸುವಷ್ಟೂ ಕಟ್ಟುನಿಟ್ಟಾಗಿರುವುದನ್ನು ಅವರು ವರ್ಜಿಸಬೇಕು. (ಕೊಲೊಸ್ಸೆ 3:21) ಆದರೂ, ತಮ್ಮ ಎಳೆಯರು ಪ್ರಾಮುಖ್ಯ ತರಬೇತನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಸ್ವೇಚ್ಛಾಚಾರಿಗಳಾಗಿರಲು ಹೆತ್ತವರು ಬಯಸುವುದಿಲ್ಲ. ಅಂತಹ ಸ್ವೇಚ್ಛಾಚಾರವು ಆಪತ್ಕಾರಕವಾಗಿರಬಲ್ಲದು. ಜ್ಞಾನೋಕ್ತಿ 29:17 ಹೇಳುವುದು: “ಮಗನನ್ನು ಶಿಕ್ಷಿಸು; ನಿನ್ನನ್ನು ಸುದಾರಿಸುವನು; ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.” ಆದರೂ, 21ನೆಯ ವಚನವು ಹೇಳುವುದು: “ಆಳನ್ನು ಚಿಕ್ಕತನದಿಂದ ಕೋಮಲವಾಗಿ ಸಾಕಿದರೆ ತರುವಾಯ ಅವನು ಎದುರುಬೀಳುವನು.” ಈ ವಚನವು ಒಬ್ಬ ಸೇವಕನ ಕುರಿತು ಹೇಳುತ್ತದಾದರೂ, ಅದು ಸರಿಸಮವಾಗಿ ಮನೆವಾರ್ತೆಯಲ್ಲಿರುವ ಯಾವನೇ ಎಳೆಯನಿಗೆ ಅನ್ವಯಿಸುತ್ತದೆ.
18. ಶಿಸ್ತು ಯಾವುದರ ಒಂದು ಪುರಾವೆಯು, ಮತ್ತು ಹೆತ್ತವರು ಹೊಂದಿಕೆಯಲ್ಲಿ ಶಿಸ್ತನ್ನು ನೀಡುವಾಗ ಏನನ್ನು ವರ್ಜಿಸಲಾಗುತ್ತದೆ?
18 ಸ್ಪಷ್ಟೋಕ್ತಿಯಲ್ಲಿ, ಯೋಗ್ಯ ಶಿಸ್ತು, ಹೆತ್ತವರಿಗೆ ಮಗುವಿಗಾಗಿರುವ ತನ್ನ ಪ್ರೀತಿಯ ಪುರಾವೆಯಾಗಿದೆ. (ಇಬ್ರಿಯ 12:6, 11) ನೀವೊಬ್ಬ ಹೆತ್ತವರಾಗಿರುವುದಾದರೆ, ಹೊಂದಿಕೆಯಾದ, ಸಮಂಜಸವಾದ ಶಿಸ್ತನ್ನು ಉಳಿಸಿಕೊಂಡು ಬರುವುದು ಕಷ್ಟವೆಂದು ನಿಮಗೆ ತಿಳಿದದೆ. ಸಮಾಧಾನದ ಸಲುವಾಗಿ, ಒಬ್ಬ ಮೊಂಡನಾದ ಹದಿಹರೆಯದವನನ್ನು ತನಗೆ ಬೇಕಾದುದನ್ನು ಮಾಡಲು ಬಿಟ್ಟುಬಿಡುವುದು ಸುಲಭವಾಗಿ ಕಂಡೀತು. ಆದರೆ ಕಟ್ಟಕಡೆಗೆ, ಈ ಎರಡನೆಯ ಮಾರ್ಗವನ್ನು ಅನುಸರಿಸುವ ಒಬ್ಬ ಹೆತ್ತವರು, ನಿಯಂತ್ರಣರಹಿತವಾದ ಒಂದು ಮನೆವಾರ್ತೆಯನ್ನು ವೇತನವಾಗಿ ಕೊಯ್ಯುವರೆಂಬುದು ನಿಶ್ಚಯ.—ಜ್ಞಾನೋಕ್ತಿ 29:15; ಗಲಾತ್ಯ 6:9.
ಕೆಲಸ ಮತ್ತು ಆಟ
19, 20. ತಮ್ಮ ಹದಿಹರೆಯದವರ ವಿನೋದದ ವಿಷಯದಲ್ಲಿ ಹೆತ್ತವರು ವಿವೇಕದಿಂದ ಹೇಗೆ ವ್ಯವಹರಿಸಬಲ್ಲರು?
19 ಆರಂಭದ ಕಾಲಗಳಲ್ಲಿ ಮಕ್ಕಳಿಂದ ಸಾಮಾನ್ಯವಾಗಿ ಮನೆಯ ಅಥವಾ ಹೊಲದ ಕೆಲಸಕ್ಕೆ ಸಹಾಯ ಮಾಡುವಂತೆ ಅಪೇಕ್ಷಿಸಲಾಗುತ್ತಿತ್ತು. ಇಂದು ಅನೇಕ ಹದಿಹರೆಯದವರಿಗೆ ಉಸ್ತುವಾರಿಯಿಲ್ಲದ ತುಂಬ ವಿರಾಮ ಸಮಯವಿರುತ್ತದೆ. ಆ ವಿರಾಮ ಸಮಯವನ್ನು ತುಂಬಿಸಲಿಕ್ಕಾಗಿ, ವಸ್ತುಗಳ ಅಪರಿಮಿತ ಸಮೃದ್ಧಿಯನ್ನು ವಾಣಿಜ್ಯ ಜಗತ್ತು ಒದಗಿಸುತ್ತದೆ. ಬೈಬಲಿನ ನೈತಿಕತೆಯ ಮಟ್ಟಗಳಿಗೆ ಲೋಕವು ಕೊಡುವ ಅತಿ ಕೊಂಚ ಮೌಲ್ಯದ ನಿಜತ್ವವನ್ನು ಇದಕ್ಕೆ ಕೂಡಿಸಿರಿ, ಆಗ, ಒಂದು ಸಂಭವನೀಯ ವಿಪತ್ತಿನ ಘಟನಸೂತ್ರಗಳೇ ನಿಮಗಿವೆ.
20 ಆದಕಾರಣ, ವಿವೇಚನೆಯುಳ್ಳ ಹೆತ್ತವರು ವಿನೋದದ ಕುರಿತು ಕೊನೆಯ ನಿರ್ಣಯಗಳನ್ನು ಮಾಡುವ ಹಕ್ಕನ್ನು ಉಳಿಸಿಕೊಳ್ಳುತ್ತಾರೆ. ಆದರೂ ಹದಿಹರೆಯದವನು ಬೆಳೆಯುತ್ತಿದ್ದಾನೆಂಬುದನ್ನು ಮರೆಯಬೇಡಿ. ಪ್ರತಿ ವರ್ಷ ಅವನು ಅಥವಾ ಅವಳು ತಾವು ಹೆಚ್ಚು ವಯಸ್ಕರ ಹಾಗೆ ಉಪಚರಿಸಲ್ಪಡುವಂತೆ ನಿರೀಕ್ಷಿಸುವ ಸಂಭಾವ್ಯತೆ ಇರುವುದು. ಹೀಗೆ, ಹದಿಹರೆಯದವನು ಬೆಳೆಯುತ್ತಾ ಹೋಗುವ ಹಾಗೆ ವಿನೋದದ ಆಯ್ಕೆಯಲ್ಲಿ—ಎಷ್ಟರ ತನಕ ಆ ಆಯ್ಕೆಗಳು ಆತ್ಮಿಕ ಪಕ್ವತೆಯ ಕಡೆಗೆ ಪ್ರಗತಿಯನ್ನು ತೋರಿಸುತ್ತವೋ ಅಷ್ಟರ ತನಕ—ಹೆಚ್ಚು ಸ್ವಾತಂತ್ರ್ಯವನ್ನು ಕೊಡುವುದು ಒಬ್ಬ ಹೆತ್ತವರಿಗೆ ವಿವೇಕಪ್ರದವು. ಕೆಲವೊಮ್ಮೆ, ಆ ಹದಿಹರೆಯದವನು ಸಂಗೀತ, ಸಂಗಡಿಗರು, ಇತ್ಯಾದಿಗಳಲ್ಲಿ ಅವಿವೇಕದ ಆಯ್ಕೆಗಳನ್ನು ಮಾಡಬಹುದು. ಇದು ಸಂಭವಿಸುವಾಗ, ಭವಿಷ್ಯತ್ತಿನಲ್ಲಿ ಹೆಚ್ಚು ಉತ್ತಮ ಆಯ್ಕೆಗಳು ಮಾಡಲ್ಪಡುವಂತೆ, ಹದಿಹರೆಯದವನೊಂದಿಗೆ ಅದನ್ನು ಚರ್ಚಿಸತಕ್ಕದ್ದು.
21. ವಿನೋದದಲ್ಲಿ ಕಳೆಯುವ ಸಮಯದ ಮೊತ್ತದಲ್ಲಿ ಸಮಂಜಸತೆಯು ಹದಿಹರೆಯದವನನ್ನು ಹೇಗೆ ಸಂರಕ್ಷಿಸುವುದು?
21 ವಿನೋದಕ್ಕಾಗಿ ಎಷ್ಟು ಸಮಯವನ್ನು ಗೊತ್ತುಮಾಡಬೇಕು? ಕೆಲವು ದೇಶಗಳಲ್ಲಿ ಹದಿಹರೆಯದವರು ತಾವು ಎಡೆಬಿಡದ ಮನೋರಂಜನೆಗೆ ಅರ್ಹರೆಂದು ನಂಬುವಂತೆ ನಡೆಸಲ್ಪಟ್ಟಿದ್ದಾರೆ. ಆದುದರಿಂದ ಒಂದು “ಮೋಜಿ”ನಿಂದ ಇನ್ನೊಂದಕ್ಕೆ ಮುಂದುವರಿಯಲು ತರುಣನೊಬ್ಬನು ತನ್ನ ಕಾಲಕ್ರಮವನ್ನು ಯೋಜಿಸಾನು. ಕುಟುಂಬ, ವೈಯಕ್ತಿಕ ಅಧ್ಯಯನ, ಆತ್ಮಿಕ ಪಕ್ವತೆಯುಳ್ಳ ವ್ಯಕ್ತಿಗಳೊಂದಿಗೆ ಸಹವಾಸ, ಕ್ರೈಸ್ತ ಕೂಟಗಳು, ಮತ್ತು ಮನೆವಾರ್ತೆಯ ಕೆಲಸಗಳಂತಹ ಇತರ ವಿಷಯಗಳಲ್ಲೂ ಸಮಯ ಕಳೆಯಲಿಕ್ಕದೆ ಎಂಬ ಪಾಠವನ್ನು ಮನಮುಟ್ಟಿಸುವುದು ಹೆತ್ತವರಿಗೆ ಸೇರಿದೆ. ಇದು ‘ಜೀವನದ ಭೋಗಗಳು’ ದೇವರ ವಾಕ್ಯವನ್ನು ಅದುಮಿಬಿಡುವುದರಿಂದ ಕಾಪಾಡುವುದು.—ಲೂಕ 8:11-15.
22. ಒಬ್ಬ ಹದಿಹರೆಯದವನ ಜೀವನದಲ್ಲಿ ವಿನೋದವು ಯಾವುದರೊಂದಿಗೆ ಸಮತೂಕದಲ್ಲಿರಬೇಕು?
22 ಅರಸ ಸೊಲೊಮೋನನು ಹೇಳಿದ್ದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.” (ಪ್ರಸಂಗಿ 3:12, 13) ಹೌದು, ಉಲ್ಲಾಸಪಡುವುದು ಒಂದು ಸಮತೂಕದ ಜೀವನದ ಭಾಗ. ಆದರೆ ಪ್ರಯಾಸದ ಕೆಲಸ ಸಹ ಹಾಗೆಯೆ. ಅನೇಕ ಹದಿಹರೆಯದವರು ಇಂದು ಪ್ರಯಾಸದ ಕೆಲಸದಿಂದ ಬರುವ ಸಂತೃಪ್ತಿಯನ್ನು ಅಥವಾ ಸಮಸ್ಯೆಯನ್ನು ಎದುರಿಸಿ ಅದನ್ನು ನಿಭಾಯಿಸುವುದರಿಂದ ಬರುವ ಆತ್ಮಗೌರವದ ಅನಿಸಿಕೆಯನ್ನು ಕಲಿಯುವುದಿಲ್ಲ. ಕೆಲವರಿಗೆ ಜೀವಿತದಲ್ಲಿ ಮುಂದಕ್ಕೆ ತಮ್ಮನ್ನು ಪೋಷಿಸಿಕೊಳ್ಳುವ ಒಂದು ನೈಪುಣ್ಯವನ್ನು ಅಥವಾ ಕಸಬನ್ನು ವಿಕಸಿಸುವ ಸಂದರ್ಭವನ್ನು ಕೊಡಲಾಗುವುದಿಲ್ಲ. ಇಲ್ಲಿ ಹೆತ್ತವನಿಗೆ ಒಂದು ನಿಜ ಪಂಥಾಹ್ವಾನವಿದೆ. ನಿಮ್ಮ ಎಳೆಯನಿಗೆ ಅಂತಹ ಸಂದರ್ಭಗಳು ದೊರಕುವಂತೆ ನೀವು ಖಾತರಿ ಮಾಡಿಕೊಳ್ಳುವಿರೋ? ಕಷ್ಟದ ಕೆಲಸವನ್ನು ಅಮೂಲ್ಯವೆಂದು ತಿಳಿಯಲು ಅಥವಾ ಆನಂದಿಸಲು ಕೂಡ ನಿಮ್ಮ ಹದಿಹರೆಯದವನಿಗೆ ಕಲಿಸುವುದರಲ್ಲಿ ನೀವು ಯಶಸ್ವಿಯಾಗಬಲ್ಲಿರಾದರೆ, ಅವನು ಅಥವಾ ಅವಳು, ಜೀಮಾನವಿಡೀ ಪ್ರಯೋಜನಗಳನ್ನು ತರುವ ಒಂದು ಸ್ವಸ್ಥ ಹೊರನೋಟವನ್ನು ವಿಕಸಿಸಿಕೊಳ್ಳುವರು.
ಹದಿಹರೆಯದವನಿಂದ ಪ್ರಾಪ್ತವಯಸ್ಕ
23. ಹೆತ್ತವರು ತಮ್ಮ ಹದಿಹರೆಯದವರನ್ನು ಹೇಗೆ ಉತ್ತೇಜಿಸಬಲ್ಲರು?
23 ನಿಮ್ಮ ಹದಿಹರೆಯದವನೊಂದಿಗೆ ನಿಮಗೆ ಸಮಸ್ಯೆಗಳಿರುವಾಗಲೂ, “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” ಎಂಬ ಶಾಸ್ತ್ರವಚನವು ಇನ್ನೂ ಸತ್ಯವಾಗಿ ಅನ್ವಯಿಸುತ್ತದೆ. (1 ಕೊರಿಂಥ 13:8) ನೀವು ನಿಸ್ಸಂದೇಹವಾಗಿ ಅನುಭವಿಸುವ ಪ್ರೀತಿಯನ್ನು ತೋರಿಸುವುದನ್ನು ಎಂದಿಗೂ ನಿಲ್ಲಿಸಬೇಡಿ. ನಿಮ್ಮನ್ನು ಕೇಳಿಕೊಳ್ಳಿ: ‘ಸಮಸ್ಯೆಯನ್ನು ನಿಭಾಯಿಸುವುದರಲ್ಲಿ ಅಥವಾ ಅಡಚಣೆಗಳನ್ನು ನಿವಾರಿಸಿಕೊಳ್ಳುವುದರಲ್ಲಿ ಅವನ ಸಾಫಲ್ಯಗಳಿಗಾಗಿ ನಾನು ಪ್ರತಿ ಮಗುವನ್ನು ಅಭಿನಂದಿಸುತ್ತೇನೋ? ನಾನು ನನ್ನ ಮಕ್ಕಳಿಗಾಗಿ ನನ್ನ ಪ್ರೀತಿ ಮತ್ತು ಗಣ್ಯತೆಯನ್ನು ವ್ಯಕ್ತಪಡಿಸುವ ಅವಕಾಶಗಳನ್ನು, ಆ ಅವಕಾಶಗಳು ದಾಟಿಹೋಗುವ ಮುಂಚೆಯೇ ತುಡುಕುತ್ತೇನೋ?’ ಕೆಲವೊಮ್ಮೆ ತಪ್ಪುಗ್ರಹಿಕೆಗಳಿರಬಹುದಾದರೂ, ನಿಮ್ಮ ಪ್ರೀತಿಯ ಬಗ್ಗೆ ಹದಿಹರೆಯದವರಿಗೆ ಆಶ್ವಾಸನೆಯ ಭಾವನೆಯಿದ್ದಲ್ಲಿ, ಆ ಪ್ರೀತಿಯನ್ನು ಅವರು ಹಿಂದಿರುಗಿಸುವ ಹೆಚ್ಚಿನ ಸಂಭಾವ್ಯತೆ ಇದೆ.
24. ಒಂದು ಸಾಮಾನ್ಯ ನಿಯಮದೋಪಾದಿ ಯಾವ ಶಾಸ್ತ್ರೀಯ ಮೂಲತತ್ವವು ಮಕ್ಕಳನ್ನು ಬೆಳೆಸುವುದರಲ್ಲಿ ಸಾಮಾನ್ಯವಾಗಿ ಸತ್ಯವಾಗಿದೆ, ಆದರೆ ಏನನ್ನು ನೆನಪಿನಲ್ಲಿಡಬೇಕಾಗಿದೆ?
24 ನಿಶ್ಚಯವಾಗಿಯೂ ಮಕ್ಕಳು ತರುಣಾವಸ್ಥೆಗೆ ಬೆಳೆದಂತೆ ಕಟ್ಟಕಡೆಗೆ ಅತಿ ಭಾರವಾದ ನಿರ್ಣಯಗಳನ್ನು ಅವರು ತಾವಾಗಿಯೇ ಮಾಡುವರು. ಕೆಲವು ವಿದ್ಯಮಾನಗಳಲ್ಲಿ ಹೆತ್ತವರು ಆ ನಿರ್ಣಯಗಳನ್ನು ಮೆಚ್ಚಲಿಕ್ಕಿಲ್ಲ. ಅವರ ಮಗನು ಯೆಹೋವ ದೇವರನ್ನು ಸೇವಿಸುತ್ತಾ ಮುಂದುವರಿಯದಿರಲು ನಿರ್ಣಯಿಸುವುದಾದರೆ ಆಗೇನು? ಇದು ಸಂಭವಿಸಬಲ್ಲದು. ಯೆಹೋವನ ಸ್ವಂತ ಆತ್ಮಿಕ ಪುತ್ರರಲ್ಲೂ ಕೆಲವರು ಆತನ ಸಲಹೆಯನ್ನು ತಿರಸ್ಕರಿಸಿ, ದಂಗೆಕೋರರಾಗಿ ಪರಿಣಮಿಸಿದರು. (ಆದಿಕಾಂಡ 6:2; ಯೂದ 6) ಮಕ್ಕಳು, ನಾವು ಬಯಸುವ ರೀತಿಯಲ್ಲಿ ವರ್ತಿಸುವಂತೆ ಏರ್ಪಡಿಸಬಲ್ಲ ಕಂಪ್ಯೂಟರುಗಳಲ್ಲ. ತಾವು ಮಾಡುವ ನಿರ್ಣಯಗಳಿಗೆ ಯೆಹೋವನ ಮುಂದೆ ಜವಾಬ್ದಾರರಾಗಿರುವ, ಚಿತ್ತ ಸ್ವಾತಂತ್ರ್ಯವಿರುವ ಜೀವಿಗಳು ಅವರು. ಆದರೂ, ಒಂದು ಸಾಮಾನ್ಯ ನಿಯಮದೋಪಾದಿ ಜ್ಞಾನೋಕ್ತಿ 22:6 ಸತ್ಯವಾಗಿ ಅನ್ವಯಿಸುತ್ತದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”
25. ಪಿತೃತ್ವದ ಸುಯೋಗಕ್ಕಾಗಿ ಹೆತ್ತವರು ಯೆಹೋವನಿಗೆ ಕೃತಜ್ಞತೆ ತೋರಿಸುವ ಅತ್ಯುತ್ತಮ ಮಾರ್ಗವು ಯಾವುದು?
25 ಹೀಗಿರಲಾಗಿ, ನಿಮ್ಮ ಮಗುವಿಗೆ ಹೇರಳವಾದ ಪ್ರೀತಿಯನ್ನು ತೋರಿಸಿರಿ. ಅವರನ್ನು ಬೆಳೆಸುವುದರಲ್ಲಿ ಬೈಬಲಿನ ಮೂಲತತ್ವಗಳನ್ನು ಅನುಸರಿಸಲು ಸಾಧ್ಯವಾದಷ್ಟನ್ನು ಮಾಡಿರಿ. ದೈವಿಕ ನಡವಳಿಕೆಯ ಒಂದು ಉತ್ತಮ ಮಾದರಿಯನ್ನಿಡಿರಿ. ಹೀಗೆ ನೀವು ನಿಮ್ಮ ಮಕ್ಕಳಿಗೆ ಜವಾಬ್ದಾರಿಯುಳ್ಳ, ದೇವಭಯವುಳ್ಳ ವಯಸ್ಕರಾಗಿ ಬೆಳೆಯುವ ಉತ್ತಮ ಅವಕಾಶವನ್ನು ಕೊಡುವಿರಿ. ಇದು ಹೆತ್ತವರಿಗೆ, ಪಿತೃತ್ವದ ಸುಯೋಗಕ್ಕಾಗಿ ಯೆಹೋವನಿಗೆ ಕೃತಜ್ಞತೆ ತೋರಿಸುವ ಅತ್ಯುತ್ತಮ ಮಾರ್ಗವಾಗಿದೆ.