ಹೆತ್ತವರೇ—ನಿಮ್ಮ ಮಗುವಿಗೆ ಶೈಶವದಿಂದಲೇ ತರಬೇತಿ ನೀಡಿ
“ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನ” ಎನ್ನುತ್ತದೆ ಬೈಬಲ್. (ಕೀರ್ತ. 127:3) ಹಾಗಾಗಿ ಕುಟುಂಬದಲ್ಲಿ ಮಗುವಿನ ಆಗಮನವಾದಾಗ ಕ್ರೈಸ್ತ ಹೆತ್ತವರು ಆನಂದದ ಹೊನಲಲ್ಲಿ ತೇಲುವುದು ಸಹಜ.
ಈ ಆನಂದದೊಂದಿಗೆ ಜವಾಬ್ದಾರಿ ಕೂಡ ಹೆತ್ತವರ ಹೆಗಲೇರುತ್ತದೆ. ಹೇಗೆ ನವಜಾತ ಕೂಸು ಆರೋಗ್ಯದಿಂದ ಬೆಳೆಯಬೇಕಾದರೆ ಕ್ರಮವಾಗಿ ಪೌಷ್ಠಿಕ ಆಹಾರ ಕೊಡಬೇಕೋ ಹಾಗೆಯೇ ಸತ್ಯಾರಾಧನೆಯಲ್ಲಿ ದೃಢವಾಗಿ ಬೇರೂರಬೇಕಾದರೆ ಮಗುವಿಗೆ ಆಧ್ಯಾತ್ಮಿಕ ಪೋಷಣೆ ಹಾಗೂ ಮಾರ್ಗದರ್ಶನೆ ನೀಡಬೇಕು. ಹೆತ್ತವರು ತಮ್ಮ ಮಗುವಿನಲ್ಲಿ ದೈವಿಕ ತತ್ವಗಳನ್ನು ನಾಟಿಸಲು ಶ್ರಮವಹಿಸಬೇಕು. (ಜ್ಞಾನೋ. 1:8) ಆದರೆ ಇದನ್ನು ಮಾಡಲು ಯಾವಾಗ ಆರಂಭಿಸಬೇಕು? ಏನೆಲ್ಲ ಮಾಡಬೇಕು?
ಹೆತ್ತವರಿಗೆ ದೇವರ ಸಹಾಯ ಬೇಕು
ಪುರಾತನ ಇಸ್ರಾಯೇಲಿನ ಚೊರ್ಗಾ ಊರಿನಲ್ಲಿ ವಾಸಿಸುತ್ತಿದ್ದ ದಾನ್ ಕುಲದವನಾಗಿದ್ದ ಮಾನೋಹನ ಉದಾಹರಣೆ ನಮಗಿದೆ. ಅವನ ಪತ್ನಿ ಬಂಜೆಯಾಗಿದ್ದಳು. ಅವಳು ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮ ನೀಡುವಳು ಎಂದು ದೇವದೂತನು ಮಾನೋಹನ ಪತ್ನಿಗೆ ಹೇಳಿದನು. (ನ್ಯಾಯ. 13:2, 3) ಇದನ್ನು ಕೇಳಿ ಅವನಿಗೂ ಅವನ ಹೆಂಡತಿಗೂ ಅತ್ಯಾನಂದವಾಯಿತು. ಆದರೂ ಅವರು ಒಂದು ವಿಷಯದ ಕುರಿತು ಗಂಭೀರವಾಗಿ ಯೋಚಿಸಿದರು. ಅದೇನು? ಮಗುವನ್ನು ಹೇಗೆ ಬೆಳೆಸಬೇಕು ಎನ್ನುವುದರ ಕುರಿತು. ಇದು ಮಾನೋಹನು ನಂತರ ಯೆಹೋವನಲ್ಲಿ ಮಾಡಿದ ಪ್ರಾರ್ಥನೆಯಿಂದ ತಿಳಿಯುತ್ತದೆ: “ಸ್ವಾಮೀ, ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ.” (ನ್ಯಾಯ. 13:8) ಹೌದು, ಮಗ ಸಂಸೋನ ಹುಟ್ಟಿದ ನಂತರ ಮಾನೋಹನೂ ಅವನ ಪತ್ನಿಯೂ ಅವನಿಗೆ ದೇವರ ಧರ್ಮಶಾಸ್ತ್ರದಿಂದ ಕಲಿಸಿದರು. ಅವರ ಪ್ರಯತ್ನ ಸಫಲವಾಯಿತು ಸಹ. ಹಾಗಾಗಿಯೇ ಬೈಬಲ್ ಹೇಳುತ್ತದೆ: “ಯೆಹೋವನ ಆತ್ಮವು [ಸಂಸೋನನನ್ನು] ಪ್ರೇರೇಪಿಸಹತ್ತಿತು.” ಇದರಿಂದ ಸಂಸೋನನು ಇಸ್ರಾಯೇಲ್ಯರ ನ್ಯಾಯಸ್ಥಾಪಕನಾಗಿದ್ದು ಅನೇಕ ಪರಾಕ್ರಮಗಳನ್ನು ಮಾಡಿದನು.—ನ್ಯಾಯ. 13:25; 14:5, 6; 15:14, 15.
ಮಗುವಿಗೆ ಯಾವಾಗಿನಿಂದ ತರಬೇತಿ ಕೊಡಲು ಆರಂಭಿಸಬೇಕು? ತಿಮೊಥೆಯನ ಕುರಿತು ನೆನಪಿಸಿಕೊಳ್ಳಿ. ಅವನ ತಾಯಿ ಯೂನಿಕೆ ಮತ್ತು ಅಜ್ಜಿ ಲೋವಿ ಅವನಿಗೆ “ಶೈಶವದಿಂದಲೇ” “ಪವಿತ್ರ ಬರಹಗಳ” ಮೂಲಕ ತರಬೇತಿ ಕೊಟ್ಟರು. (2 ತಿಮೊ. 1:5; 3:15) ಹೌದು ತಿಮೊಥೆಯನಿಗೆ ಬಾಲ್ಯದ ಆರಂಭದಿಂದಲೇ ಶಾಸ್ತ್ರಗ್ರಂಥದ ತರಬೇತಿ ನೀಡಲಾಯಿತು.
ಹಾಗೆಯೇ ಇಂದಿರುವ ಹೆತ್ತವರು ತಮ್ಮ ಮಗುವಿಗೆ “ಶೈಶವದಿಂದಲೇ” ತರಬೇತಿ ಕೊಡಸಾಧ್ಯವಾಗುವಂತೆ ಯೋಜನೆಗಳನ್ನು ಮಾಡಬೇಕು. ಯೆಹೋವನ ಮಾರ್ಗದರ್ಶನಕ್ಕಾಗಿ ಕೋರಬೇಕು. ಜ್ಞಾನೋಕ್ತಿ 21:5 ಹೇಳುತ್ತದೆ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ [ಯೋಜನೆಗಳಿಂದ, NW] ಸಮೃದ್ಧಿ.” ಅನೇಕ ಹೆತ್ತವರು ಮಗು ಹುಟ್ಟುವ ಮುಂಚೆಯೇ ತುಂಬ ತಯಾರಿಗಳನ್ನು ಮಾಡುತ್ತಾರೆ. ಮಗುವಿಗೆ ಏನೆಲ್ಲ ಬೇಕು ಎಂಬ ಪಟ್ಟಿಯನ್ನೂ ಕೆಲವರು ಮಾಡುತ್ತಾರೆ. ಹಾಗಿರುವಾಗ, ಮಗುವಿಗಾಗಿ ಆಧ್ಯಾತ್ಮಿಕ ಚಟುವಟಿಕೆಗಳನ್ನು ಯೋಜಿಸುವುದು ಅದಕ್ಕಿಂತ ಮುಖ್ಯವಲ್ಲವೆ? ಮಗು ಜನಿಸಿದಾಗಿನಿಂದ ಅದಕ್ಕೆ ತರಬೇತಿ ನೀಡುವ ಗುರಿ ನಿಮ್ಮದಾಗಿರಲಿ.
ಮಗುವಿನ ಬೆಳವಣಿಗೆಯ ಕುರಿತಾದ ಒಂದು ಪುಸ್ತಕದಲ್ಲಿ ಹೀಗೆ ಹೇಳಲಾಗಿದೆ: “ಜನನದ ನಂತರದ ತಿಂಗಳುಗಳಲ್ಲಿ ಮಗುವಿನ ಮಿದುಳಿನಲ್ಲಿ ಪ್ರಾಮುಖ್ಯ ಬೆಳವಣಿಗೆ ಆಗುತ್ತಿರುತ್ತದೆ. ಕಲಿಯುವುದನ್ನು ಸಾಧ್ಯಮಾಡುವ ಜೀವಕೋಶಗಳ ಕೂಡಿಕೆಗಳು (synapses), ಮಗು ಹುಟ್ಟಿದಾಗ ಇದ್ದದ್ದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಾಗುತ್ತವೆ.” ಜಾಣ ಹೆತ್ತವರು ಈ ಅವಧಿಯನ್ನು ಸದುಪಯೋಗಿಸಿಕೊಳ್ಳುತ್ತಾರೆ. ಮಗುವಿನ ಮಾನಸಿಕ ಬೆಳವಣಿಗೆಯಾಗುವ ಈ ಘಟ್ಟದಲ್ಲಿ ಅದರ ಮನಸ್ಸಿನೊಳಗೆ ಆಧ್ಯಾತ್ಮಿಕ ವಿಚಾರಗಳನ್ನು ಹಾಗೂ ಮೌಲ್ಯಗಳನ್ನು ನಾಟಿಸಲು ಆರಂಭಿಸುತ್ತಾರೆ.
ರೆಗ್ಯುಲರ್ ಪಯನೀಯರ್ ಆಗಿರುವ ಒಬ್ಬ ತಾಯಿ ತನ್ನ ಯುವ ಮಗಳ ಕುರಿತು ಹೇಳುತ್ತಾರೆ: “ಅವಳು ಒಂದು ತಿಂಗಳ ಮಗುವಾಗಿದ್ದ ಸಮಯದಿಂದಲೂ ಸೇವೆಗೆ ಕರೆದುಕೊಂಡು ಹೋಗುತ್ತಿದ್ದೆ. ಏನು ನಡೆಯುತ್ತಿದೆ ಎಂದು ಅವಳಿಗೆ ತಿಳಿಯುತ್ತಿರಲಿಲ್ಲವಾದರೂ, ಹಾಗೆ ಮಾಡಿದ್ದು ಅವಳ ಮೇಲೆ ಖಂಡಿತ ಒಳ್ಳೇ ಪರಿಣಾಮ ಬೀರಿರಬೇಕು. ಅವಳು ಎರಡು ವರ್ಷದವಳಾದಾಗ ಸೇವೆಯಲ್ಲಿ ಜನರಿಗೆ ಧೈರ್ಯದಿಂದ ಕರಪತ್ರಗಳನ್ನು ಕೊಡುತ್ತಿದ್ದಳು.”
ಮಗುವಿಗೆ ಆರಂಭದಿಂದಲೇ ಆಧ್ಯಾತ್ಮಿಕ ತರಬೇತಿ ಕೊಡುವುದು ತುಂಬ ಪ್ರಯೋಜನ ತರುತ್ತದೆ.ಆದರೆ ಅದು ಸುಲಭದ ಕೆಲಸವೇನಲ್ಲ, ಸವಾಲುಗಳಿರುತ್ತವೆ.
“ಸುಸಮಯವನ್ನು ಖರೀದಿಸಿಕೊಳ್ಳಿ”
ಹೆತ್ತವರಿಗಿರುವ ದೊಡ್ಡ ಸವಾಲೆಂದರೆ, ಮಗು ಕೂತಲ್ಲಿ ಕೂರದೆ ಇರುವುದು ಹಾಗೂ ಮಗುವಿನ ಗಮನವನ್ನು ಹೆಚ್ಚು ಹೊತ್ತು ಹಿಡಿದಿಡಲು ಆಗದಿರುವುದು. ಚಿಕ್ಕ ಮಕ್ಕಳು ಹಾಗೆಯೇ. ಅವರ ಗಮನ ಒಂದರಿಂದ ಇನ್ನೊಂದರ ಕಡೆಗೆ ಓಡುತ್ತಲೇ ಇರುತ್ತದೆ. ಅವರಿಗೆ ತಮ್ಮ ಸುತ್ತಮುತ್ತಲಿರುವ ಎಲ್ಲವನ್ನು ನೋಡುವ, ತಿಳಿದುಕೊಳ್ಳುವ ಕುತೂಹಲ. ಹಾಗಾದರೆ ಕಲಿಸುತ್ತಿರುವ ವಿಷಯದ ಮೇಲೆ ಗಮನವಿಡುವಂತೆ ಹೆತ್ತವರು ಮಗುವಿಗೆ ಸಹಾಯಮಾಡುವುದು ಹೇಗೆ?
ಮೋಶೆ ಏನೆಂದನು ಗೊತ್ತೆ? ಧರ್ಮೋಪದೇಶಕಾಂಡ 6:6, 7ರಲ್ಲಿ ಅವನು ಹೇಳುತ್ತಾನೆ: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ಇಲ್ಲಿರುವ “ಅಭ್ಯಾಸಮಾಡಿಸಿ” ಎಂಬ ಪದ, ‘ಆಗಾಗ್ಗೆ ಪುನರಾವರ್ತಿಸುವ ಮೂಲಕ ಕಲಿಸುವುದು’ ಎಂಬರ್ಥ ಕೊಡುತ್ತದೆ. ಚಿಕ್ಕ ಮಗು ಒಂದು ಪುಟ್ಟ ಸಸಿಯಂತೆ. ಆಗಾಗ್ಗೆ ನೀರು ಹಾಕಬೇಕು. ದೊಡ್ಡವರಿಗೆ ಸಹ, ಪುನರಾವರ್ತನೆ ಮಾಡುವುದರಿಂದ ವಿಷಯಗಳನ್ನು ಬೇಗನೆ ಕಲಿಯಲಾಗುತ್ತದೆ. ಅಂದ ಮೇಲೆ ಮಕ್ಕಳಿಗೆ ಇದರಿಂದ ಇನ್ನೂ ಹೆಚ್ಚು ಪ್ರಯೋಜನವಿದೆಯಲ್ಲವೆ?
ದೇವರ ಕುರಿತಾದ ಸತ್ಯವನ್ನು ಮಕ್ಕಳಿಗೆ ಕಲಿಸಬೇಕಾದರೆ ಹೆತ್ತವರು ಅವರೊಟ್ಟಿಗೆ ಸಮಯ ಕಳೆಯಬೇಕು. ಭರದಿಂದ ಸಾಗುತ್ತಿರುವ ಈ ಪ್ರಪಂಚದಲ್ಲಿ ಸಮಯ ಸಿಗುವುದೇ ಕಷ್ಟ. ಆದರೆ ಅಗತ್ಯವಾದ ಕ್ರೈಸ್ತ ಚಟುವಟಿಕೆಗಳಿಗಾಗಿ “ಸುಸಮಯವನ್ನು ಖರೀದಿಸಿಕೊಳ್ಳಿ” ಎಂದು ಅಪೊಸ್ತಲ ಪೌಲ ಹೇಳಿದ್ದಾನೆ. (ಎಫೆ. 5:15, 16) ಒಬ್ಬ ಕ್ರೈಸ್ತ ಮೇಲ್ವಿಚಾರಕ ಇದನ್ನು ಹೇಗೆ ಮಾಡಿದರು ನೋಡಿ. ಸಭೆಯಲ್ಲಿನ ಜವಾಬ್ದಾರಿ ನಿರ್ವಹಿಸುತ್ತಾ, ಐಹಿಕ ಕೆಲಸ ಮಾಡುತ್ತಾ ತಮ್ಮ ಪುಟ್ಟ ಮಗಳಿಗೆ ಕಲಿಸಲು ಸಮಯ ಮಾಡಿಕೊಳ್ಳುವುದು ಅವರಿಗೆ ಸವಾಲಾಗಿತ್ತು. ಅವರ ಪತ್ನಿ ರೆಗ್ಯುಲರ್ ಪಯನೀಯರ್ ಆಗಿರುವುದರಿಂದ ಆಕೆಗೂ ಸಮಯ ಸಿಗೋದು ವಿರಳ. ಹಾಗಾದರೆ ಅವರು ಮಗಳಿಗೆ ತರಬೇತಿ ಹೇಗೆ ಕೊಟ್ಟರು? ತಂದೆ ಹೇಳುತ್ತಾರೆ: “ಪ್ರತಿದಿನ ಬೆಳಗ್ಗೆ ನಾನು ಕೆಲಸಕ್ಕೆ ಹೋಗುವ ಮುಂಚೆ ನಾನೂ ನನ್ನ ಪತ್ನಿ ಮಗಳೊಂದಿಗೆ ಬೈಬಲ್ ಕಥೆಗಳ ನನ್ನ ಪುಸ್ತಕದಿಂದ ಅಥವಾ ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ ಕಿರುಪುಸ್ತಿಕೆಯಿಂದ ಓದುತ್ತೇವೆ. ರಾತ್ರಿ ಅವಳು ಮಲಗುವ ಮೊದಲು ಸಹ ಅವಳೊಂದಿಗೆ ಓದುತ್ತೇವೆ. ಸೇವೆಗೆ ಕರೆದುಕೊಂಡು ಹೋಗುತ್ತೇವೆ. ಅವಳಿಗೆ ಜೀವನದ ಈ ಮೊದಲ ವರ್ಷಗಳಲ್ಲಿ ಕಲಿಸುವುದು ಪ್ರಾಮುಖ್ಯವಾದ್ದರಿಂದ ಈ ಅವಕಾಶ ಬಿಟ್ಟುಕೊಡಲು ನಮಗಿಷ್ಟವಿಲ್ಲ.”
‘ಮಕ್ಕಳು ಅಂಬುಗಳಂತೆ’
ನಮ್ಮ ಮಕ್ಕಳು ಬೆಳೆದು ಜವಾಬ್ದಾರಿಯುತ ವ್ಯಕ್ತಿಗಳಾಗಬೇಕೆಂದು ನಮ್ಮೆಲ್ಲರ ಆಸೆ. ಆದರೆ ಅವರಿಗೆ ತರಬೇತಿ ನೀಡುವುದರ ಹಿಂದಿರುವ ಮುಖ್ಯ ಕಾರಣ, ಅವರ ಹೃದಯದಲ್ಲಿ ಯೆಹೋವನ ಮೇಲೆ ಪ್ರೀತಿಯನ್ನು ಅಂಕುರಿಸುವುದೇ.—ಮಾರ್ಕ 12:28-30.
ಕೀರ್ತನೆ 127:4 ಹೇಳುತ್ತದೆ: “ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ.” ಇಲ್ಲಿ ಮಕ್ಕಳನ್ನು ಅಂಬು ಅಥವಾ ಬಾಣಗಳಿಗೆ ಹೋಲಿಸಲಾಗಿದೆ. ಅವುಗಳನ್ನು ಗುರಿಗೆ ಸರಿಯಾಗಿ ಹೊಡೆಯಬೇಕು. ಹಾಗೆ ಮಾಡಲು ಬಿಲ್ಲುಗಾರನ ಹತ್ತಿರ ಸ್ವಲ್ಪವೇ ಸಮಯವಿರುತ್ತದೆ, ಮತ್ತವನು ಒಮ್ಮೆ ಬಾಣವೆಸೆದ ಮೇಲೆ ಅದನ್ನು ಮತ್ತೆ ಹಿಂದೆ ತರಲಾರ. ಹಾಗೆಯೇ ಹೆತ್ತವರ ಕೈಯಲ್ಲಿ ‘ಬಾಣಗಳಂತಿರುವ’ ಮಕ್ಕಳು ಸ್ವಲ್ಪವೇ ಸಮಯ ಇರುತ್ತಾರೆ. ಆ ಸಮಯವನ್ನು ಸದ್ಬಳಕೆ ಮಾಡಿ ಮಕ್ಕಳ ಹೃದಮನದಲ್ಲಿ ದೈವಿಕ ತತ್ವಗಳನ್ನು ನಾಟಿಸಬೇಕು.
ಅಪೊಸ್ತಲ ಯೋಹಾನನು ತನ್ನ ಆಧ್ಯಾತ್ಮಿಕ ಮಕ್ಕಳ ಕುರಿತು ಹೀಗೆ ಬರೆದನು: “ನನ್ನ ಮಕ್ಕಳು ಸತ್ಯದಲ್ಲಿ ನಡೆಯುತ್ತಾ ಇದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಕೃತಜ್ಞತೆಯನ್ನು ಸಲ್ಲಿಸಲು ಹೆಚ್ಚಿನ ಕಾರಣ ನನಗಿಲ್ಲ.” (3 ಯೋಹಾ. 4) ಹೌದು, ಮಕ್ಕಳು ‘ಸತ್ಯದಲ್ಲಿ ನಡೆಯುತ್ತಾ ಇರುವುದನ್ನು’ ನೋಡುವಾಗ ಇಂದಿರುವ ಕ್ರೈಸ್ತ ಹೆತ್ತವರ ಹೃದಯಗಳು ಸಹ ಕೃತಜ್ಞತೆಯಿಂದ ತುಂಬುವವು.