ಯೆಹೋವನ ಬಲದಿಂದ ಸಂಸೋನನು ಜಯಗಳಿಸುತ್ತಾನೆ!
ಸೆರೆಹಿಡಿದವರು ಸಂಸೋನನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಅವನ ಕಣ್ಣುಗಳನ್ನು ಕಿತ್ತು ಅವನನ್ನು ಅತಿ ಕಠಿನವಾದ ದುಡಿಮೆಗೆ ಹಚ್ಚಿದರು. ಅನಂತರ ಅವರು ಜನಸಮೂಹದ ವಿನೋದಕ್ಕೋಸ್ಕರ ಅವನನ್ನು ಸೆರೆಮನೆಯಿಂದ ವಿಧರ್ಮಿ ದೇವಸ್ಥಾನಕ್ಕೆ ಕರತಂದು ನಿಲ್ಲಿಸಿದರು. ಸಾವಿರಾರು ವೀಕ್ಷಕರ ಮುಂದೆ ಅವನನ್ನು ಒತ್ತಾಯಪೂರ್ವಕವಾಗಿ ನಡೆಸಿದರು ಮತ್ತು ಅವನಿಗೆ ಗೇಲಿಮಾಡಿದರು. ಈ ಸೆರೆವಾಸಿಯು ಒಬ್ಬ ಪಾತಕಿಯಾಗಿರಲಿಲ್ಲ ಅಥವಾ ವಿರೋಧಿ ಸೈನ್ಯದ ಸೇನಾಪತಿಯೂ ಆಗಿರಲಿಲ್ಲ. ಅವನು ಒಬ್ಬ ಯೆಹೋವನ ಆರಾಧಕನಾಗಿದ್ದನು ಮತ್ತು ಇಸ್ರಾಯೇಲಿನಲ್ಲಿ 20 ವರುಷಗಳ ವರೆಗೆ ನ್ಯಾಯಸ್ಥಾಪಕನಾಗಿ ಸೇವೆಸಲ್ಲಿಸಿದ್ದನು.
ಜೀವಿಸಿರುವವರಲ್ಲಿ ಅತ್ಯಂತ ಶಕ್ತಿಶಾಲಿ ಪುರುಷನಾಗಿದ್ದ ಈ ಸಂಸೋನನು ಇಂಥ ಹೀನಾಯಕರ ಪರಿಸ್ಥಿತಿಯಲ್ಲಿ ಹೇಗೆ ಸಿಕ್ಕಿಬಿದ್ದನು? ಅವನ ಅಸಾಧಾರಣ ಬಲವು ಅವನನ್ನು ರಕ್ಷಿಸಿತೊ? ಸಂಸೋನನ ಬಲದ ರಹಸ್ಯವೇನಾಗಿತ್ತು? ಅವನ ಜೀವನ ಕಥೆಯಿಂದ ನಾವೇನಾದರೂ ಕಲಿಯಬಲ್ಲೆವೊ?
ಅವನು ‘ಇಸ್ರಾಯೇಲ್ಯರನ್ನು ಬಿಡಿಸುವದಕ್ಕೆ ಪ್ರಾರಂಭಿಸುವನು’
ಅನೇಕಬಾರಿ ಸತ್ಯಾರಾಧನೆಗೆ ಬೆನ್ನುಹಾಕಿದ ಇತಿಹಾಸ ಇಸ್ರಾಯೇಲ್ಯರಿಗಿತ್ತು. ಆದುದರಿಂದ ಅವರು ‘ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದಾಗ ಆತನು ಅವರನ್ನು ನಾಲ್ವತ್ತು ವರುಷಗಳ ತನಕ ಫಿಲಿಷ್ಟಿಯರ ಕೈಗೆ ಒಪ್ಪಿಸಿದನು.’—ನ್ಯಾಯಸ್ಥಾಪಕರು 13:1.
ಸಂಸೋನನ ಕಥೆಯು ಹೀಗೆ ಆರಂಭವಾಯಿತು: ಇಸ್ರಾಯೇಲ್ಯನಾದ ಮಾನೋಹನ ಹೆಂಡತಿಯು ಬಂಜೆಯಾಗಿದ್ದಳು. ಒಮ್ಮೆ ಯೆಹೋವನ ದೂತನು ಅವಳಿಗೆ ಪ್ರತ್ಯಕ್ಷನಾಗಿ, ನೀನು ಗರ್ಭವತಿಯಾಗಿ ಮಗನನ್ನು ಹೆರುವಿ ಎಂದು ಹೇಳಿದನು. ದೇವದೂತನು ಅವಳಿಗೆ ಹೀಗೆ ಸಲಹೆನೀಡಿದನು: “[ಅವನ] ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು [“ನಾಜೀರನು,” ಸತ್ಯವೇದ ರೆಫರೆನ್ಸ್ ಎಡಿಷನ್ ಪಾದಟಿಪ್ಪಣಿ]; ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವದಕ್ಕೆ ಪ್ರಾರಂಭಿಸುವನು.” (ನ್ಯಾಯಸ್ಥಾಪಕರು 13:2-5) ಸಂಸೋನನು ತನ್ನ ತಾಯಿಯ ಗರ್ಭದಲ್ಲಿ ಉಂಟಾಗುವ ಮುನ್ನವೇ ಯೆಹೋವನು ಅವನಿಗೆ ಒಂದು ನಿರ್ದಿಷ್ಟ ನೇಮಕವನ್ನು ಗೊತ್ತುಪಡಿಸಿದನು. ಅವನು ಹುಟ್ಟಿದ ಕ್ಷಣದಿಂದ ಒಬ್ಬ ನಾಜೀರನು, ಅಂದರೆ ಒಂದು ವಿಶೇಷ ರೀತಿಯ ಪವಿತ್ರ ಸೇವೆಗೆ ಮೀಸಲಾಗಿರಿಸಲ್ಪಟ್ಟವನು ಆಗಿರಲಿದ್ದನು.
ಅವಳು “ನನಗೆ ಸೂಕ್ತವಾದವಳು”
ಸಂಸೋನನು ದೊಡ್ಡವನಾಗುತ್ತಾ ಬಂದಂತೆ “ಯೆಹೋವನ ಆಶೀರ್ವಾದವು ಅವನ ಮೇಲಿತ್ತು.” (ನ್ಯಾಯಸ್ಥಾಪಕರು 13:24) ಒಂದು ದಿನ ಸಂಸೋನನು ತನ್ನ ತಂದೆತಾಯಿಯ ಬಳಿ ಬಂದು ಹೀಗೆ ಹೇಳಿದನು: “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿರಿ.” (ನ್ಯಾಯಸ್ಥಾಪಕರು 14:2) ಇದನ್ನು ಕೇಳಿಸಿಕೊಂಡಾಗ ಅವರಿಗಾಗಿರಬಹುದಾದ ಆಶ್ಚರ್ಯವನ್ನು ತುಸು ಊಹಿಸಿರಿ. ಅವರ ಮಗನು, ಇಸ್ರಾಯೇಲ್ಯರನ್ನು ವಿರೋಧಿಗಳ ಕೈಯಿಂದ ಬಿಡಿಸುವ ಬದಲಿಗೆ ಅವರೊಂದಿಗೇ ವಿವಾಹಸಂಬಂಧವನ್ನು ರಚಿಸಲು ಬಯಸುತ್ತಿದ್ದಾನೆ. ವಿಧರ್ಮಿ ದೇವರುಗಳ ಆರಾಧಕರನ್ನು ವಿವಾಹವಾಗುವುದು ದೇವರ ನಿಯಮಕ್ಕೆ ವಿರುದ್ಧವಾಗಿತ್ತು. (ವಿಮೋಚನಕಾಂಡ 34:11-16) ಆದುದರಿಂದ ಅವನ ಹೆತ್ತವರು ಆಕ್ಷೇಪವೆತ್ತುತ್ತಾರೆ: “ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ವರಿಸಬೇಕೆಂದಿರುತ್ತೀ; ನಿನ್ನ ಬಂಧುಗಳಲ್ಲಿಯೂ ನಮ್ಮ ಎಲ್ಲಾ ಜನರಲ್ಲಿಯೂ ನಿನಗೆ ಹೆಣ್ಣು ಸಿಕ್ಕುವದಿಲ್ಲವೋ”? ಅದರ ಹೊರತಾಗಿಯೂ ಸಂಸೋನನು ಹೆತ್ತವರನ್ನು ಒತ್ತಾಯಿಸಿದನು: “ನನಗೋಸ್ಕರ ಆಕೆಯನ್ನೇ ತೆಗೆದುಕೊಳ್ಳಬೇಕು; ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ [“ಅವಳೇ ನನಗೆ ಸೂಕ್ತವಾದವಳು,” NW].”—ನ್ಯಾಯಸ್ಥಾಪಕರು 14:3.
ಈ ನಿರ್ದಿಷ್ಟ ಫಿಲಿಷ್ಟಿಯ ಸ್ತ್ರೀಯು ಯಾವ ವಿಧದಲ್ಲಿ ಸಂಸೋನನಿಗೆ ಸೂಕ್ತವಾದವಳಾಗಿದ್ದಳು? ಅವಳು “ಸುಂದರವಾಗಿದ್ದಳು, ಆಕರ್ಷಕಳಾಗಿದ್ದಳು” ಎಂಬ ಅರ್ಥದಲ್ಲಿ ಅಲ್ಲ, “ಬದಲಾಗಿ ಒಂದು ಕೆಲಸವನ್ನು, ಉದ್ದೇಶವನ್ನು, ಅಥವಾ ಗುರಿಯನ್ನು ಸಾಧಿಸಲು ಸೂಕ್ತವಾಗಿದ್ದಳು” ಎಂಬುದನ್ನು ಇದು ಸೂಚಿಸುತ್ತದೆ ಎಂದು ಮೆಕ್ಲಿಂಟಕ್ ಹಾಗೂ ಸ್ಟ್ರಾಂಗ್ರವರ ಸೈಕ್ಲಪೀಡೀಯ ಹೇಳುತ್ತದೆ. ಯಾವ ಉದ್ದೇಶವನ್ನು ಸಾಧಿಸಲು? ಸಂಸೋನನು “ಫಿಲಿಷ್ಟಿಯರ ಕೇಡಿಗೆ ಕಾರಣ ಹುಡುಕುತ್ತಿದ್ದ” ಎಂದು ನ್ಯಾಯಸ್ಥಾಪಕರು 14:4 ವಿವರಿಸುತ್ತದೆ. ಈ ಉದ್ದೇಶದಿಂದಲೇ ಸಂಸೋನನು ಆ ಸ್ತ್ರೀಯಲ್ಲಿ ಆಸಕ್ತನಾಗಿದ್ದನು. ಅಷ್ಟುಮಾತ್ರವಲ್ಲದೆ ಸಂಸೋನನು ಬೆಳೆದು ವಯಸ್ಕನಾದಾಗ, “ಯೆಹೋವನ ಆತ್ಮವು ಅವನನ್ನು ಪ್ರೇರೇಪಿಸಹತ್ತಿತು” ಅಥವಾ ಕ್ರಿಯೆಗೈಯುವಂತೆ ಅವನನ್ನು ಮುಂದೂಡಿತು. (ನ್ಯಾಯಸ್ಥಾಪಕರು 13:25) ಹೀಗಿರುವುದರಿಂದ ಫಿಲಿಷ್ಟಿಯರ ಹೆಣ್ಣನ್ನು ಮದುವೆಮಾಡಿಕೊಡುವಂತೆ ಸಂಸೋನನು ಮಾಡಿದ ಅಸಾಮಾನ್ಯ ವಿನಂತಿಯ ಹಿಂದೆ ಮತ್ತು ಇಸ್ರಾಯೇಲ್ಯರ ನ್ಯಾಯಸ್ಥಾಪಕನಾಗಿ ಅವನ ಇಡೀ ಜೀವನವೃತ್ತಿಯ ಹಿಂದೆ ಯೆಹೋವನ ಆತ್ಮವೇ ಚಾಲಕ ಶಕ್ತಿಯಾಗಿತ್ತು. ಸಂಸೋನನು ಹುಡುಕುತ್ತಿದ್ದ ಸಂದರ್ಭವು ಅವನಿಗೆ ದೊರಕಿತೊ? ನಾವು ಇದನ್ನು ಕಂಡುಕೊಳ್ಳುವ ಮೊದಲು ಯೆಹೋವನು ಅವನಿಗೆ ದೈವಿಕ ಬೆಂಬಲದ ಆಶ್ವಾಸನೆಯನ್ನು ಹೇಗೆ ನೀಡಿದನೆಂಬುದನ್ನು ಪರಿಗಣಿಸೋಣ.
ಸಂಸೋನನು ತನ್ನ ಭಾವೀ ವಧುವಿನ ಊರಾದ ತಿಮ್ನಾಕ್ಕೆ ಪ್ರಯಾಣಿಸುತ್ತಿದ್ದನು. ಶಾಸ್ತ್ರೀಯ ವೃತ್ತಾಂತವು ತಿಳಿಸುವುದು: “[ಅವನು] ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷೇ ತೋಟಗಳ ಬಳಿಗೆ ಬಂದಾಗ ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು. . . . ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದರಿಂದ ಆ ಸಿಂಹವನ್ನು . . . ಸೀಳಿಬಿಟ್ಟನು.” ಬಲದ ಈ ಗಮನಾರ್ಹವಾದ ಪ್ರದರ್ಶನವು ಸಂಸೋನನು ಒಬ್ಬನೇ ಇದ್ದಾಗ ಸಂಭವಿಸಿತು. ಈ ಸಂಗತಿಗೆ ಪ್ರತ್ಯಕ್ಷ ಸಾಕ್ಷಿಗಳಾರೂ ಇರಲಿಲ್ಲ. ಇದು, ಒಬ್ಬ ನಾಜೀರನಾಗಿ ಸಂಸೋನನು ತನ್ನ ದೇವದತ್ತ ನೇಮಕವನ್ನು ನೆರವೇರಿಸಶಕ್ತನು ಎಂಬ ಆಶ್ವಾಸನೆಯನ್ನು ಕೊಡಲಿಕ್ಕಾಗಿ ಯೆಹೋವನು ಉಪಯೋಗಿಸಿದ ವಿಧವಾಗಿತ್ತೊ? ಬೈಬಲ್ ಇದನ್ನು ಹೇಳುವುದಿಲ್ಲ, ಆದರೆ ಅಂಥ ಅಸಾಮಾನ್ಯ ಶಕ್ತಿಯು ತನ್ನ ಸ್ವಂತದ್ದಲ್ಲ ಎಂಬುದನ್ನು ಸಂಸೋನನು ಖಂಡಿತವಾಗಿಯೂ ಗ್ರಹಿಸಿದನು. ಇದು ದೇವರಿಂದಲೇ ಬಂದಿರಬೇಕು. ಮುಂದೆ ತಾನು ಮಾಡಲಿದ್ದ ಕೆಲಸಗಳಿಗೆ ಸಹಾಯಕ್ಕಾಗಿ ಅವನು ದೇವರ ಮೇಲೆ ಅವಲಂಬಿಸಸಾಧ್ಯವಿತ್ತು. ಸಿಂಹದೊಂದಿಗೆ ನಡೆದ ಘಟನೆಯಿಂದ ಬಲಹೊಂದಿದವನಾಗಿ ಸಂಸೋನನು “ಊರೊಳಗೆ ಹೋಗಿ ಆ ಸ್ತ್ರೀಯನ್ನು ಮಾತಾಡಿಸಿ ಆಕೆಯನ್ನು ಮೆಚ್ಚಿಕೊಂಡನು [“ಆಕೆಯು ಆಗಲೂ ಅವನಿಗೆ ಸೂಕ್ತವಾಗಿದ್ದಳು,” NW].”—ನ್ಯಾಯಸ್ಥಾಪಕರು 14:5-7.
ಕೆಲವು ದಿವಸಗಳಾದ ಮೇಲೆ ಸಂಸೋನನು ಆ ಸ್ತ್ರೀಯನ್ನು ವರಿಸುವದಕ್ಕೋಸ್ಕರ ತಿರಿಗಿ ಆ ಊರಿಗೆ ಹೋಗುತ್ತಿದ್ದಾಗ, “ದಾರೀಬಿಟ್ಟು ಸಿಂಹದ ಹೆಣವನ್ನು ನೋಡುವದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ ಜೇನನ್ನೂ” ಕಂಡನು. ತನ್ನ ವಿವಾಹದ ಸಮಯದಲ್ಲಿ ಅದನ್ನು ನೆನಪಿಸಿಕೊಂಡು ತನ್ನ ಜೊತೆಯಲ್ಲಿದ್ದ 30 ಮಂದಿ ಫಿಲಿಷ್ಟಿಯ ಯೌವನಸ್ಥರಿಗೆ ಅವನು ಈ ಒಗಟನ್ನು ಹೇಳಿದನು: “ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು; ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು.” ಅವರು ಈ ಒಗಟಿನ ಅರ್ಥವನ್ನು ಸರಿಯಾಗಿ ಹೇಳಿದರೆ ಅವರಿಗೆ ಸಂಸೋನನು 30 ದುಪ್ಪಟಿಗಳನ್ನೂ ವಿಶೇಷವಸ್ತ್ರಗಳನ್ನೂ ಕೊಡಲಿದ್ದನು. ಒಂದುವೇಳೆ ಹೇಳದಿದ್ದಲ್ಲಿ, ಅವರು ಅದನ್ನು ಸಂಸೋನನಿಗೆ ಕೊಡಬೇಕಿತ್ತು. ಮೂರು ದಿವಸಗಳ ವರೆಗೆ ಫಿಲಿಷ್ಟಿಯರು ಆ ಒಗಟಿನ ಅರ್ಥವನ್ನು ತಿಳಿಯದೆ ಕಳವಳಪಟ್ಟರು. ನಾಲ್ಕನೇ ದಿವಸ, ಅವರು ಆ ಸ್ತ್ರೀಗೆ ಹೀಗೆ ಹೇಳಿ ಬೆದರಿಸಿದರು: “ನಿನ್ನ ಗಂಡನನ್ನು ಮರುಳುಗೊಳಿಸಿ ಅವನಿಂದ ಒಗಟಿನ ಅರ್ಥವನ್ನು ತಿಳಿದುಕೋ; ಇಲ್ಲವಾದರೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯವರನ್ನೂ ಬೆಂಕಿಯಿಂದ ಸುಟ್ಟುಬಿಡುವೆವು.” ಎಂಥ ಕ್ರೂರವಾದ ಬೆದರಿಕೆ! ಫಿಲಿಷ್ಟಿಯರು ತಮ್ಮ ಸ್ವಂತ ಜನರನ್ನೇ ಈ ರೀತಿಯಲ್ಲಿ ಉಪಚರಿಸುತ್ತಿದ್ದರೆ, ಅವರ ದಬ್ಬಾಳಿಕೆಯ ಕೆಳಗಿದ್ದ ಇಸ್ರಾಯೇಲ್ಯರ ಪರಿಸ್ಥಿತಿ ಹೇಗಿದ್ದಿರಬಹುದೆಂಬುದನ್ನು ತುಸು ಯೋಚಿಸಿ!—ನ್ಯಾಯಸ್ಥಾಪಕರು 14:8-15.
ಹೆದರಿಹೋದ ಸಂಸೋನನ ಹೆಂಡತಿಯು ಆ ಒಗಟಿನ ಅರ್ಥವನ್ನು ತಿಳಿಸುವಂತೆ ಸಂಸೋನನನ್ನು ಒತ್ತಾಯಿಸಿದಳು. ಸಂಸೋನನ ಕಡೆಗೆ ಪ್ರೀತಿ ಮತ್ತು ನಿಷ್ಠೆಯ ಕೊರತೆಯನ್ನು ತೋರಿಸುತ್ತಾ ಅವಳು ಅವನಿಂದ ಪಡೆದಂಥ ಒಗಟಿನ ಅರ್ಥವನ್ನು ತಡಮಾಡದೆ ಫಿಲಿಷ್ಟಿಯ ಯೌವನಸ್ಥರಿಗೆ ತಿಳಿಸಿದಳು ಮತ್ತು ಅವರು ಒಗಟನ್ನು ಬಿಡಿಸಿದರು. ಅವರು ಹೇಗೆ ಇದನ್ನು ಹೇಳಶಕ್ತರಾದರೆಂಬುದು ಸಂಸೋನನಿಗೆ ತಿಳಿದಿತ್ತು. ಅವನು ಅವರಿಗೆ ಹೇಳಿದ್ದು: “ನೀವು ನನ್ನ ಕಡಸಿನಿಂದ ಉಳದಿದ್ದರೆ ಒಗಟನ್ನು ಬಿಚ್ಚುವದು ನಿಮ್ಮಿಂದಾಗುತ್ತಿರಲಿಲ್ಲ.” ಸಂಸೋನನು ಕಾಯುತ್ತಿದ್ದ ಸಂದರ್ಭವು ಈಗ ಬಂದೊದಗಿತು. “ಯೆಹೋವನ ಆತ್ಮವು ಫಕ್ಕನೆ ಅವನ ಮೇಲೆ ಬಂದಿತು; ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು ಅವರ ವಸ್ತ್ರಗಳನ್ನು ಸುಲುಕೊಂಡು ಒಗಟನ್ನು ಬಿಚ್ಚಿದವರಿಗೆ ತಂದು ಕೊಟ್ಟನು.”—ನ್ಯಾಯಸ್ಥಾಪಕರು 14:18, 19.
ಅಷ್ಕೆಲೋನಿನಲ್ಲಿ ಸಂಸೋನನು ಏನು ಮಾಡಿದನೊ ಅದು ಸೇಡುತೀರಿಸಬೇಕೆಂಬ ಇಚ್ಛೆಯಿಂದ ಪ್ರೇರೇಪಿಸಲ್ಪಟ್ಟದ್ದಾಗಿತ್ತೊ? ಇಲ್ಲ. ಅದು, ತಾನು ಆರಿಸಿಕೊಂಡ ವಿಮೋಚಕನ ಮೂಲಕ ದೇವರು ಮಾಡಿಸಿದ ಕೃತ್ಯವಾಗಿತ್ತು. ಸಂಸೋನನ ಮೂಲಕ ಯೆಹೋವನು ತನ್ನ ಜನರ ಕ್ರೂರ ದಬ್ಬಾಳಿಕೆಗಾರರ ವಿರುದ್ಧ ಹೋರಾಟವನ್ನು ಆರಂಭಿಸಿದನು. ಈ ಹೋರಾಟವು ಮುಂದುವರಿಯಲಿತ್ತು. ಸಂಸೋನನು ತನ್ನ ಹೆಂಡತಿಯನ್ನು ಭೇಟಿಯಾಗಲು ಹೋದಾಗ ಮುಂದಿನ ಸಂದರ್ಭವು ಒದಗಿತು.
ಸಂಸೋನನು ಒಬ್ಬಂಟಿಗನಾಗಿ ಹೋರಾಡಿದನು
ತಿಮ್ನಾಕ್ಕೆ ಹಿಂದಿರುಗಿ ಬಂದಾಗ, ಸಂಸೋನನು ಅವನ ಹೆಂಡತಿಯನ್ನು ಹಗೆಮಾಡುತ್ತಾನೆಂದು ತಿಳಿದು ಅವನ ಮಾವನು ಅವಳನ್ನು ಇನ್ನೊಬ್ಬನಿಗೆ ಮದುವೆಮಾಡಿಕೊಟ್ಟನೆಂದು ಸಂಸೋನನಿಗೆ ತಿಳಿದುಬಂತು. ಇದರಿಂದಾಗಿ ಸಂಸೋನನು ತೀವ್ರವಾಗಿ ಕೋಪಗೊಂಡವನಂತೆ ತೋರಿದನು. ಅವನು ಮುನ್ನೂರು ನರಿಗಳನ್ನು ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ ಪಂಜುಗಳಿಗೆ ಬೆಂಕಿಹೊತ್ತಿಸಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಲ್ಲಿ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು. ಹೀಗೆ ಅವರ ವರುಷದ ಮೂರು ಮುಖ್ಯ ಪೈರುಗಳು ನಾಶವಾದವು. ಕೋಪದಿಂದ ಹುಚ್ಚೆದ್ದ ಫಿಲಿಷ್ಟಿಯರು ತಮ್ಮ ಕ್ರೂರತನವನ್ನು ತೋರ್ಪಡಿಸಿದರು. ಈ ಅನಾಹುತಕ್ಕೆ ಸಂಸೋನನ ಹೆಂಡತಿ ಮತ್ತು ಆಕೆಯ ತಂದೆಯೇ ಕಾರಣರೆಂದು ತಿಳಿದು ಅವರನ್ನು ಸುಟ್ಟುಬಿಟ್ಟರು. ಈ ರೀತಿಯಲ್ಲಿ ಅವರು ಕ್ರೂರವಾಗಿ ಸೇಡುತೀರಿಸಿದ್ದು ಸಂಸೋನನ ಉದ್ದೇಶವನ್ನು ಪೂರೈಸಿತು. ಸಂಸೋನನು ಅವರನ್ನು ದೊಡ್ಡ ಸಂಖ್ಯೆಯಲ್ಲಿ ಸಂಹರಿಸಿದನು.—ನ್ಯಾಯಸ್ಥಾಪಕರು 15:1-8.
ಯೆಹೋವ ದೇವರು ಸಂಸೋನನನ್ನು ಉಪಯೋಗಿಸುತ್ತಿದ್ದಾನೆ ಮತ್ತು ಈ ಕಾರಣ ‘ನಾವು ಸಹ ಅವನೊಂದಿಗೆ ಸೇರಿಕೊಂಡು ಫಿಲಿಷ್ಟಿಯರ ದಬ್ಬಾಳಿಕೆಗೆ ಅಂತ್ಯವನ್ನು ತರೋಣ’ ಎಂದು ಇಸ್ರಾಯೇಲ್ಯರು ನೆನಸಿದರೊ? ಇಲ್ಲ. ಅದಕ್ಕೆ ಬದಲಾಗಿ, ಯೂದಾಯದ ಜನರು ಸಮಸ್ಯೆಯನ್ನು ತಡೆಗಟ್ಟಲಿಕ್ಕೋಸ್ಕರ ದೇವರ ಈ ನೇಮಿತ ನಾಯಕನನ್ನು ಕೈದುಮಾಡಿ ವೈರಿಗಳ ಕೈಗೆ ಒಪ್ಪಿಸಿಕೊಡಲು 3,000 ಮಂದಿ ಪುರುಷರನ್ನು ಕಳುಹಿಸಿದರು. ಹಾಗಿದ್ದರೂ, ಇಸ್ರಾಯೇಲ್ಯರ ಈ ನಿಷ್ಠಾಹೀನತೆಯು ತನ್ನ ವಿರೋಧಿಗಳಿಗೆ ಇನ್ನೂ ಹೆಚ್ಚಿನ ಹಾನಿಯನ್ನುಂಟುಮಾಡಲು ಸಂಸೋನನಿಗೆ ಇನ್ನೊಂದು ಅವಕಾಶವನ್ನು ಒದಗಿಸಿತು. ಅವನನ್ನು ಇನ್ನೇನು ಫಿಲಿಷ್ಟಿಯರ ಕೈಗೆ ಒಪ್ಪಿಸಲಿದ್ದಾಗ, “ಯೆಹೋವನ ಆತ್ಮವು ಅವನ ಮೇಲೆ ಬಂದದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.” ಆಗ ಅವನು ಒಂದು ಕತ್ತೆಯ ದವಡೇ ಎಲುಬನ್ನು ತೆಗೆದುಕೊಂಡು, ಅದರಿಂದ ಸಾವಿರ ಜನರನ್ನು ಹತಿಸಿಬಿಟ್ಟನು.—ನ್ಯಾಯಸ್ಥಾಪಕರು 15:10-15.
ಯೆಹೋವನಿಗೆ ಮೊರೆಯಿಡುತ್ತಾ ಸಂಸೋನನು ಹೀಗೆ ಹೇಳಿದನು: “ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟುಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ.” ಸಂಸೋನನ ಪ್ರಾರ್ಥನೆಯನ್ನು ಆಲಿಸಿ ಯೆಹೋವನು ಅದಕ್ಕೆ ಉತ್ತರವನ್ನು ನೀಡಿದನು. “ಆತನು . . . ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಕುಡಿದು ಪುನಃ ಚೈತನ್ಯ ಹೊಂದಿದನು.”—ನ್ಯಾಯಸ್ಥಾಪಕರು 15:18, 19.
ಫಿಲಿಷ್ಟಿಯರ ವಿರುದ್ಧ ಹೋರಾಡುವ ತನ್ನ ಗುರಿಯನ್ನು ಸಾಧಿಸುವುದರಲ್ಲಿ ಸಂಸೋನನು ದೃಢನಿಶ್ಚಿತನಾಗಿದ್ದನು. ದೇವರ ವಿರೋಧಿಗಳ ವಿರುದ್ಧ ಹೋರಾಡಬೇಕೆಂಬ ಉದ್ದೇಶದಿಂದಲೇ ಅವನು ಗಾಜದಲ್ಲಿ ಒಬ್ಬ ಸೂಳೆಯ ಮನೆಯಲ್ಲಿ ತಂಗಿದನು. ವೈರಿಗಳ ಪಟ್ಟಣದಲ್ಲಿ ಉಳುಕೊಳ್ಳಲು ಸಂಸೋನನಿಗೆ ಒಂದು ವಾಸಸ್ಥಳದ ಅಗತ್ಯವಿತ್ತು, ಮತ್ತು ಅದು ಕೇವಲ ಒಬ್ಬ ಸೂಳೆಯ ಮನೆಯಲ್ಲಿ ಮಾತ್ರ ಸಿಗಸಾಧ್ಯವಿತ್ತು. ಸಂಸೋನನ ಮನಸ್ಸಿನಲ್ಲಿ ಯಾವುದೇ ಅನೈತಿಕ ಉದ್ದೇಶವಿರಲಿಲ್ಲ. ಮಧ್ಯರಾತ್ರಿಯಲ್ಲಿಯೇ ಅವನು ಆ ಸ್ತ್ರೀಯ ಮನೆಯಿಂದ ಹೊರಟು, ಊರುಬಾಗಲಿನ ಕದಗಳನ್ನೂ ಅದರ ಎರಡು ನಿಲುವು ಪಟ್ಟಿಗಳನ್ನೂ ಕಿತ್ತು ಹೆಗಲ ಮೇಲೆ ಹೊತ್ತುಕೊಂಡು ಹೋಗಿ 60 ಕಿಲೋಮೀಟರ್ಗಳಷ್ಟು ದೂರದಲ್ಲಿದ್ದ ಹೆಬ್ರೋನಿನ ಎದುರಿಗಿರುವ ಪರ್ವತದ ಶಿಖರದ ಮೇಲೆ ಇಟ್ಟನು. ಇದನ್ನು ಅವನು ದೈವಿಕ ಒಪ್ಪಿಗೆಯಿಂದ ಮತ್ತು ದೇವದತ್ತ ಬಲದಿಂದ ಮಾಡಿದನು.—ನ್ಯಾಯಸ್ಥಾಪಕರು 16:1-3.
ಅಸಾಮಾನ್ಯ ಸನ್ನಿವೇಶಗಳ ಕಾರಣ ಪವಿತ್ರಾತ್ಮವು ಸಂಸೋನನ ವಿಷಯದಲ್ಲಿ ಅದ್ವಿತೀಯ ರೀತಿಯಲ್ಲಿ ಕಾರ್ಯವೆಸಗಿತು. ಇಂದಿರುವ ದೇವರ ನಂಬಿಗಸ್ತ ಸೇವಕರು ಸಹ ಬಲಹೊಂದಲು ಅದೇ ಆತ್ಮದ ಮೇಲೆ ಅವಲಂಬಿಸಸಾಧ್ಯವಿದೆ. ಯೆಹೋವನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’ ಎಂದು ಯೇಸು ತನ್ನ ಹಿಂಬಾಲಕರಿಗೆ ಆಶ್ವಾಸನೆಯಿತ್ತನು.—ಲೂಕ 11:13.
ಯೆಹೋವನು ‘ಸಂಸೋನನನ್ನು ಬಿಟ್ಟುಹೋದದ್ದು’ ಏಕೆ?
ಸಂಸೋನನು ದೆಲೀಲಾ ಎಂಬ ಹೆಸರಿನ ಒಬ್ಬ ಸ್ತ್ರೀಯಲ್ಲಿ ಮೋಹಿತನಾದನು. ಸಂಸೋನನನ್ನು ಸೋಲಿಸಬೇಕೆಂದು ಫಿಲಿಷ್ಟಿಯರ ಐದು ಪ್ರಭುಗಳು ಬಹಳ ಆತುರರಾಗಿದ್ದುದರಿಂದ ಅವರು ದೆಲೀಲಳ ಸಹಾಯವನ್ನು ಕೋರಿದರು. ಅವರು ಅವಳನ್ನು ಸಮೀಪಿಸಿ ಹೀಗೆ ಹೇಳಿದರು: “ನೀನು ಅವನನ್ನು ಮರುಳುಗೊಳಿಸಿ ಅವನ ಮಹಾಶಕ್ತಿಯ ಮೂಲ ಯಾವದೆಂಬದನ್ನೂ ನಾವು ಅವನನ್ನು ಗೆದ್ದು ಕಟ್ಟಿ ಕುಂದಿಸುವದು ಹೇಗೆಂಬದನ್ನೂ ಗೊತ್ತುಮಾಡಿಕೊಂಡು ನಮಗೆ ತಿಳಿಸು.” ಇದಕ್ಕೆ ಪ್ರತಿಯಾಗಿ ಅವರಲ್ಲಿ ಪ್ರತಿಯೊಬ್ಬರೂ “ಸಾವಿರದ ನೂರು ರೂಪಾಯಿ [“ಬೆಳ್ಳಿ ತುಂಡುಗಳು,” NW]” ಲಂಚವನ್ನು ಕೊಡುತ್ತೇವೆಂದು ಹೇಳಿದರು.—ನ್ಯಾಯಸ್ಥಾಪಕರು 16:4, 5.
ಆ ಬೆಳ್ಳಿ ತುಂಡುಗಳು ಒಂದುವೇಳೆ ಶೆಕೆಲ್ಗಳಾಗಿರುವಲ್ಲಿ, ಅವು 5,500 ಶೆಕೆಲ್ಗಳಾಗಿದ್ದು ನಿಜವಾಗಿಯೂ ದೊಡ್ಡ ಮೊತ್ತದ ಲಂಚವಾಗಿತ್ತು. ಅಬ್ರಹಾಮನು ತನ್ನ ಪತ್ನಿಯ ಸಮಾಧಿಗೆ 400 ಶೆಕೆಲ್ಗಳ ಬೆಲೆಯನ್ನು ನೀಡಿದನು, ಮತ್ತು ಒಬ್ಬ ದಾಸನನ್ನು ಕೇವಲ 30 ಶೆಕೆಲ್ ಬೆಲೆಗೆ ಮಾರಲಾಗುತ್ತಿತ್ತು. (ಆದಿಕಾಂಡ 23:14-20; ವಿಮೋಚನಕಾಂಡ 21:32) ಫಿಲಿಷ್ಟಿಯರ ಐದು ಪಟ್ಟಣಗಳ ಅಧಿಕಾರಿಗಳಾದ ಆ ಪ್ರಭುಗಳು ದೆಲೀಲಳಿಗೆ ಅವಳು ತನ್ನ ಕುಲಕ್ಕೆ ನಿಷ್ಠೆಯನ್ನು ತೋರಿಸುವಂತೆ ಕೇಳಿಕೊಳ್ಳುವ ಬದಲು ಅವಳ ದುರಾಶೆಯನ್ನು ಉಪಯೋಗಿಸಿ ತಮ್ಮ ಕೆಲಸವನ್ನು ಸಾಧಿಸಲು ಪ್ರಯತ್ನಿಸಿದ ಸಂಗತಿಯು ತಾನೇ ಅವಳು ಒಬ್ಬ ಇಸ್ರಾಯೇಲ್ ಸ್ತ್ರೀಯಾಗಿರಬೇಕೆಂಬುದನ್ನು ಸೂಚಿಸುತ್ತದೆ. ಏನೇ ಆಗಿರಲಿ, ದೆಲೀಲಳು ಆ ನೀಡಿಕೆಯನ್ನು ಸ್ವೀಕರಿಸಿದಳು.
ದೆಲೀಲಳ ಕುತೂಹಲಕಾರಿ ಪ್ರಶ್ನೆಗೆ ಮೂರು ಬಾರಿ ಸಂಸೋನನು ತಪ್ಪಾದ ಉತ್ತರವನ್ನು ನೀಡಿದನು, ಮತ್ತು ಮೂರು ಬಾರಿಯೂ ಅವಳು ಅವನನ್ನು ವಿರೋಧಿಗಳ ಕೈಗೆ ಒಪ್ಪಿಸಲು ಪ್ರಯತ್ನಿಸುವ ಮೂಲಕ ದ್ರೋಹವೆಸಗಿದಳು. ಆದರೆ, “ಅವಳು ಅವನನ್ನು ದಿನ ದಿನವೂ ಮಾತಿನಿಂದ ಪೀಡಿಸಿದ್ದರಿಂದ ಅವನಿಗೆ ಸಾಯುವದು ಒಳ್ಳೇದನ್ನುವಷ್ಟು ಬೇಸರವಾಯಿತು.” ಕೊನೆಗೆ ಸಂಸೋನನು, ತನ್ನ ತಲೆಗೂದಲು ಇಷ್ಟರ ವರೆಗೆ ಕತ್ತರಿಸಲ್ಪಟ್ಟಿಲ್ಲ ಎಂಬ ಸತ್ಯವನ್ನು ಬಯಲುಪಡಿಸುತ್ತಾನೆ. ಒಂದುವೇಳೆ ಅದು ಕತ್ತರಿಸಲ್ಪಡುವುದಾದರೆ, ಅವನು ಬಲಹೀನನಾಗಿ ಬೇರೆ ಮನುಷ್ಯನಂತಾಗುವನು.—ನ್ಯಾಯಸ್ಥಾಪಕರು 16:6-17.
ಇದು ಸಂಸೋನನ ಪತನಕ್ಕೆ ನಡೆಸಿತು. ದೆಲೀಲಳು ಬಹಳ ಕುತಂತ್ರದಿಂದ ಅವನ ತಲೆಗೂದಲನ್ನು ಬೋಳಿಸುವಂಥ ಸನ್ನಿವೇಶವನ್ನು ಉಂಟುಮಾಡಿದಳು. ಆದರೆ ಸಂಸೋನನ ಬಲವು ವಾಸ್ತವದಲ್ಲಿ ಅವನ ತಲೆಗೂದಲಲ್ಲಿ ಇರಲಿಲ್ಲ. ಅವನ ತಲೆಗೂದಲು ನಾಜೀರನಾಗಿ ದೇವರೊಂದಿಗಿದ್ದ ಅವನ ವಿಶೇಷ ಸಂಬಂಧವನ್ನು ಸೂಚಿಸುತ್ತಿತ್ತು ಅಷ್ಟೆ. ತಲೆಗೂದಲು ಬೋಳಿಸಲ್ಪಡುವ ಮೂಲಕ ತನ್ನ ನಾಜೀರ ವ್ರತಕ್ಕೆ ಧಕ್ಕೆತಂದ ಪರಿಸ್ಥಿತಿಯಲ್ಲಿ ತನ್ನನ್ನೇ ಸಿಕ್ಕಿಸಿಕೊಳ್ಳುವಂತೆ ಸಂಸೋನನು ಅನುಮತಿಸಿದಾಗ, ‘ಯೆಹೋವನು ಅವನನ್ನು ಬಿಟ್ಟುಹೋದನು.’ ಈಗ ಫಿಲಿಷ್ಟಿಯರು ಅವನನ್ನು ಸೋಲಿಸಿದರು, ಅವನ ಕಣ್ಣುಗಳನ್ನು ಕಿತ್ತು ಅವನನ್ನು ಸೆರೆಮನೆಗೆ ಹಾಕಿದರು.—ನ್ಯಾಯಸ್ಥಾಪಕರು 16:18-21.
ಇದು ನಮಗೆ ಎಂಥ ಒಂದು ಪ್ರಬಲವಾದ ಪಾಠವನ್ನು ಕಲಿಸುತ್ತದೆ! ಯೆಹೋವನೊಂದಿಗಿರುವ ನಮ್ಮ ಸಂಬಂಧವನ್ನು ಅತ್ಯಮೂಲ್ಯವಾದದ್ದೆಂದು ನಾವು ಪರಿಗಣಿಸಬಾರದೋ? ಯಾವುದೇ ರೀತಿಯಲ್ಲಿ ನಾವು ನಮ್ಮ ಕ್ರೈಸ್ತ ಸಮರ್ಪಣೆಯನ್ನು ರಾಜಿಮಾಡಿಕೊಂಡರೆ, ದೇವರು ನಮ್ಮನ್ನು ಆಶೀರ್ವದಿಸುತ್ತಾ ಹೋಗುವಂತೆ ನಾವು ಹೇಗೆ ನಿರೀಕ್ಷಿಸಸಾಧ್ಯವಿದೆ?
“ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು”
ಸಂತಸಗೊಂಡ ಫಿಲಿಷ್ಟಿಯರು ಸಂಸೋನನನ್ನು ತಮ್ಮ ಕೈಗೆ ಒಪ್ಪಿಸಿದಕ್ಕಾಗಿ ತಮ್ಮ ದೇವರಾದ ದಾಗೋನನಿಗೆ ಉಪಕಾರವನ್ನು ಸಲ್ಲಿಸಿದರು. ಅವರು ವಿಜಯವನ್ನು ಆಚರಿಸುತ್ತಿದ್ದಾಗ, ತಮ್ಮ ಕೈದಿಯಾದ ಸಂಸೋನನನ್ನು ದಾಗೋನನ ದೇವಸ್ಥಾನಕ್ಕೆ ಕರತಂದರು. ಆದರೆ ತನ್ನ ಪತನಕ್ಕೆ ನಿಜವಾದ ಕಾರಣವೇನೆಂಬುದು ಸಂಸೋನನಿಗೆ ತಿಳಿದಿತ್ತು. ತನ್ನನ್ನು ಯೆಹೋವನು ಏಕೆ ಕೈಬಿಟ್ಟನು ಎಂಬುದು ಸಹ ಅವನಿಗೆ ತಿಳಿದಿತ್ತು, ಮತ್ತು ತಾನು ತಪ್ಪಿಬಿದ್ದದ್ದಕ್ಕಾಗಿ ಸಂಸೋನನು ಪಶ್ಚಾತ್ತಾಪಪಟ್ಟನು. ಸಂಸೋನನು ಸೆರೆಮನೆಯಲ್ಲಿದ್ದಾಗ ಅವನ ತಲೆಗೂದಲು ಚೆನ್ನಾಗಿ ಬೆಳೆಯಿತು. ಈಗ ಅವನು ಸಾವಿರಾರು ಮಂದಿ ಫಿಲಿಷ್ಟಿಯರ ಮುಂದಿದ್ದಾಗ ಯಾವ ಕ್ರಿಯೆಯನ್ನು ಕೈಗೊಳ್ಳಲಿದ್ದನು?
“ಕರ್ತನೇ, ಯೆಹೋವನೇ, ಫಿಲಿಷ್ಟಿಯರು ಕಿತ್ತುಹಾಕಿದ ನನ್ನ ಎರಡೂ ಕಣ್ಣುಗಳಲ್ಲಿ ಒಂದಕ್ಕೋಸ್ಕರವಾದರೂ ನಾನು ಅವರಿಗೆ ಮುಯ್ಯಿತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸು” ಎಂದು ಸಂಸೋನನು ಮೊರೆಯಿಟ್ಟನು. ಅನಂತರ ಅವನು ಆ ಕಟ್ಟಡದ ಆಧಾರಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ ಇನ್ನೊಂದನ್ನು ಎಡಗೈಯಿಂದಲೂ ಹಿಡಿದು ‘ಅವುಗಳನ್ನು ಒತ್ತಿ ಬಲವಾಗಿ ಬಾಗಿಕೊಂಡನು.’ ಫಲಿತಾಂಶವೇನಾಯಿತು? “ಮನೆಯು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಿತ್ತು.”—ನ್ಯಾಯಸ್ಥಾಪಕರು 16:22-30.
ಶಾರೀರಿಕ ಬಲದ ಕುರಿತು ಹೇಳಬೇಕೆಂದರೆ ಸಂಸೋನನಿಗೆ ಸಮಾನರಾದವರು ಯಾರೂ ಇರಲಿಲ್ಲ. ಅವನ ಸಾಹಸಕಾರ್ಯಗಳು ನಿಜವಾಗಿಯೂ ಗಮನಾರ್ಹವಾಗಿದ್ದವು. ಆದರೆ ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಷಯವು ಯಾವುದೆಂದರೆ, ಯೆಹೋವನ ವಾಕ್ಯವು ನಂಬಿಕೆಯಲ್ಲಿ ಬಲಶಾಲಿಗಳಾಗಿದ್ದ ವ್ಯಕ್ತಿಗಳ ಪಟ್ಟಿಯಲ್ಲಿ ಸಂಸೋನನ ಹೆಸರನ್ನೂ ಸೇರಿಸುತ್ತದೆ.—ಇಬ್ರಿಯ 11:32-34.
[ಪುಟ 26ರಲ್ಲಿರುವ ಚಿತ್ರ]
ಸಂಸೋನನ ಬಲದ ರಹಸ್ಯವೇನಾಗಿತ್ತು?