“ಇವುಗಳಲ್ಲಿ ಮಹತ್ತಮವಾದುದು ಪ್ರೀತಿಯೆ”
“ಹೀಗಿರುವದರಿಂದ ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತವೆ. ಇವುಗಳಲ್ಲಿ ದೊಡ್ಡದು[ಮಹತ್ತಮವಾದುದು, [NW] ಪ್ರೀತಿಯೇ.”—1 ಕೊರಿಂಥ 13:13.
1. ಒಬ್ಬ ಮಾನವಶಾಸ್ತ್ರಜ್ಞನು ಪ್ರೀತಿಯ ಕುರಿತು ಏನಂದಿದ್ದಾನೆ?
ಜಗತ್ತಿನ ಅತ್ಯಂತ ಪ್ರಸಿದ್ಧ ಮಾನವಶಾಸ್ತ್ರಜ್ಞರಲ್ಲಿ ಒಬ್ಬರು ಒಮ್ಮೆ ಹೇಳಿದ್ದು: “ನಮ್ಮ ಪ್ರಕೃತಿಜಾತಿಯ ಇತಿಹಾಸದಲ್ಲಿ ಪ್ರಥಮ ಬಾರಿ, ಮಾನವ ಶಾಸ್ತ್ರದ ಮೂಲ ಆವಶ್ಯಕತೆಗಳಲ್ಲಿ ಅತಿ ಪ್ರಾಮುಖ್ಯವಾದುದು ಪ್ರೀತಿಯೆಂದು ನಮಗೆ ತಿಳಿದು ಬರುತ್ತದೆ. ಸೂರ್ಯನು ನಮ್ಮ ಸೌರವ್ಯೂಹದ ಕೇಂದ್ರವಾಗಿದ್ದು ಗ್ರಹಗಳು ಅದರ ಸುತ್ತ ಹೇಗೆ ಸುತ್ತುತ್ತಿವೆಯೊ ಹಾಗೆಯೆ ಸಕಲ ಮಾನವ ಆವಶ್ಯಕತೆಗಳ ಕೇಂದ್ರವಾಗಿ ಇದು ನಿಂತಿದೆ. . . ಪ್ರೀತಿ ತೋರಿಸಲ್ಪಡದ ಮಗು, ತೋರಿಸಲ್ಪಟ್ಟ ಮಗುವಿಗಿಂತ ಜೀವರಾಸಾಯನಿಕವಾಗಿ, ಶರೀರ ವೈಜ್ಞಾನಿಕವಾಗಿ ಮತ್ತು ಮನಶಾಸ್ತ್ರೀಯವಾಗಿ ತೀರಾ ಭಿನ್ನವಾಗಿದೆ. ಮೊದಲನೆಯ ಮಗು ಕೊನೆಯದಕ್ಕಿಂತ ಬೆಳವಣಿಗೆಯಲ್ಲಿಯೂ ವಿಭಿನ್ನವಾಗಿದೆ. ಜೀವಿಸುವುದು ಮತ್ತು ಪ್ರೀತಿಸುವುದು ಒಂದೆ ಆಗಿದೆಯೊ ಎಂಬಂತೆ ಮಾನವನು ಹುಟ್ಟುತ್ತಾನೆಂದು ಈಗ ನಮಗೆ ತಿಳಿದದೆ. ಇದು ಹೊಸದೇನೂ ಅಲ್ಲ. ಇದು ಪರ್ವತ ಪ್ರಸಂಗದ ಸ್ಥಿರೀಕರಣವಾಗಿದೆ.”
2. (ಎ) ಅಪೊಸ್ತಲ ಪೌಲನು ಪ್ರೀತಿಯ ಪ್ರಾಮುಖ್ಯತೆಯನ್ನು ಹೇಗೆ ತೋರಿಸಿದನು? (ಬಿ) ಈಗ ಯಾವ ಪ್ರಶ್ನೆಗಳು ಪರಿಗಣನೆಗೆ ಯೋಗ್ಯವಾಗಿವೆ?
2 ಹೌದು, ಐಹಿಕ ಕಲಿಕೆಯ ಈ ವ್ಯಕ್ತಿ ಒಪ್ಪಿಕೊಂಡಂತೆ, ಮಾನವ ಹಿತಕ್ಕೆ ಪ್ರೀತಿಯು ಎಷ್ಟು ಪ್ರಾಮುಖ್ಯವೆಂಬ ಈ ಸತ್ಯ ಹೊಸದೇನೂ ಅಲ್ಲ. ಲೋಕದ ಜ್ಞಾನಿಗಳು ಇದನ್ನು ಕೇವಲ ಈಗ ಗಣ್ಯ ಮಾಡುತ್ತಿರಬಹುದಾದರೂ ದೇವರ ವಾಕ್ಯದಲ್ಲಿ ಇದು 19 ಶತಮಾನಗಳಿಗೂ ಹಿಂದೆ ತೋರಿಬಂತು. ಈ ಕಾರಣದಿಂದಲೆ ಅಪೊಸ್ತಲ ಪೌಲನಿಗೆ ಬರೆಯ ಸಾಧ್ಯವಾದದ್ದು: “ಈಗ ಹೇಗೂ, ನಂಬಿಕೆ, ನಿರೀಕ್ಷೆ, ಪ್ರೀತಿ, ಈ ಮೂರೇ ಉಳಿದಿವೆ. ಆದರೆ ಇವುಗಳಲ್ಲಿ ಮಹತ್ತಮವಾದುದು ಪ್ರೀತಿಯೆ.” (1 ಕೊರಿಂಥ 13:13, NW) ಪ್ರೀತಿಯು ನಂಬಿಕೆ ಮತ್ತು ನಿರೀಕ್ಷೆಗಿಂತ ಹೆಚ್ಚು ದೊಡ್ಡದಾಗಿರುವುದು ಏಕೆಂದು ನಿಮಗೆ ತಿಳಿದಿದೆಯೆ? ದೇವರ ಗುಣಗಳಲ್ಲಿ ಮತ್ತು ಆತನ ಆತ್ಮದ ಫಲಗಳಲ್ಲಿ ಪ್ರೀತಿ ಮಹತ್ತಮವೆಂದು ಏಕೆ ಹೇಳಬಹುದು?
ನಾಲ್ಕು ವಿಧದ ಪ್ರೀತಿ
3. ಕಲ್ಪನಾ ಪ್ರಣಯ ಪ್ರೇಮದ ಯಾವ ಶಾಸ್ತ್ರಸಂಬಂಧವಾದ ಉದಾಹರಣೆಗಳಿವೆ?
3 ಪ್ರೀತಿ ತೋರಿಸಲು ಮನುಷ್ಯನಿಗಿರುವ ಸಾಮರ್ಥ್ಯವು ದೇವರ ವಿವೇಕ ಮತ್ತು ಮಾನವ ಸಂತತಿಯ ಕಡೆಗೆ ಆತನ ಪ್ರೀತಿಯ ಪರಾಮರಿಕೆಯ ಅಭಿವ್ಯಕ್ತಿಯಾಗಿದೆ. ರಸಕರವಾಗಿ, ಪುರಾತನದ ಗ್ರೀಕರಲ್ಲಿ ಪ್ರೀತಿಗೆ ನಾಲ್ಕು ಪದಗಳಿದ್ದವು. ಇದರಲ್ಲಿ ಒಂದು ಲೈಂಗಿಕಾಕರ್ಷಣೆಯೊಂದಿಗೆ ಜೊತೆಗೊಂಡಿರುವ ಕಾಲ್ಪನಿಕ ಪ್ರಣಯ ಪ್ರೇಮವಾದ ಈರೋಸ್. ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಲೇಖಕರಿಗೆ ಈ ಈರೋಸ್ ಪದವನ್ನು ಉಪಯೋಗಿಸುವ ಸಂದರ್ಭವೆ ಇರಲಿಲ್ಲ. ಆದರೂ, ಸೆಪ್ಟುಜಿಂಟ್ ಇದರ ರೂಪಗಳನ್ನು ಜ್ಞಾನೋಕ್ತಿ 7:18 ಮತ್ತು 30:16ರಲ್ಲಿ ಉಪಯೋಗಿಸುತ್ತದೆ. ಮತ್ತು ಹಿಬ್ರು ಶಾಸ್ತ್ರಗ್ರಂಥಗಳಲ್ಲಿ ಈ ಪ್ರಣಯಪ್ರೇಮದ ಇತರ ಸೂಚನೆಗಳಿವೆ. ಉದಾಹರಣೆಗೆ, ಇಸಾಕನು ರೆಬೆಕ್ಕಳನ್ನು “ಪ್ರೀತಿಸಿ”ದನೆಂದು ನಾವು ಓದುತ್ತೇವೆ. (ಆದಿಕಾಂಡ 24:67) ಈ ವಿಧದ ಪ್ರೀತಿಯ ನಿಜವಾಗಿಯೂ ಗಮನಾರ್ಹ ಮಾದರಿಯು, ಮೊದಲ ದೃಷ್ಟಿಯಲ್ಲಿಯೆ ಸುಂದರಿಯಾದ ರಾಹೇಲಳನ್ನು ಪ್ರೀತಿಸಿದನೆಂದು ಹೇಳಲಾದ ಯಾಕೋಬನಲ್ಲಿದೆ. ವಾಸ್ತವವೇನಂದರೆ, ಅವನು “ಆಕೆಯಲ್ಲಿ ಬಹಳ ಪ್ರೀತಿಯನ್ನಿಟ್ಟದ್ದರಿಂದ ಅದು ಅವನಿಗೆ ಸ್ವಲ್ಪ ದಿವಸದಂತೆ ಕಾಣಿಸಿತು.” (ಆದಿಕಾಂಡ 29:9-11, 17, 20) ಸೊಲೊಮೋನನ ಪರಮಗೀತವೂ ಒಬ್ಬ ಕುರುಬ ಮತ್ತು ಒಬ್ಬ ಕನ್ಯೆಯ ಮಧ್ಯೆ ಇದ್ದ ಪ್ರಣಯಪ್ರೇಮದ ಕುರಿತು ತಿಳಿಸುತ್ತದೆ. ಆದರೆ, ಸಂತೃಪ್ತಿ ಮತ್ತು ಸಂತೋಷದ ಮೂಲವಾಗಿರ ಸಾಧ್ಯವುಳ್ಳ ಈ ಪ್ರೀತಿಯನ್ನು ದೇವರ ನೀತಿಯ ಮಟ್ಟಗಳಿಗೆ ಹೊಂದಿಕೊಂಡೇ ತೋರಿಸಬೇಕೆಂಬುದರ ಪ್ರಾಮಖ್ಯತೆಯನ್ನು ಹೆಚ್ಚು ಬಲವಾಗಿ ಒತ್ತಿಹೇಳಬೇಕಾಗಿಲ್ಲ. ಪುರುಷನ ಶಾಸನಬದ್ಧವಾಗಿ ವಿವಾಹವಾಗಿರುವ ಪತ್ನಿಯಲ್ಲಿ ಮಾತ್ರ ಅವನು “ಸರ್ವದಾ ತೃಪ್ತಿ” ಹೊಂದಬೇಕೆಂದು ಬೈಬಲು ನಮಗೆ ತಿಳಿಸುತ್ತದೆ.—ಜ್ಞಾನೋಕ್ತಿ 5:15-20.
4. ಕುಟುಂಬ ಪ್ರೀತಿಯು ಶಾಸ್ತ್ರದಲ್ಲಿ ಹೇಗೆ ಉದಾಹರಿಸಲ್ಪಟ್ಟಿದೆ?
4 ಇನ್ನು, ರಕ್ತಸಂಬಂಧದ ಮೇಲೆ ಆಧಾರಿತವಾದ ಕುಟುಂಬ ಪ್ರೀತಿ ಯಾ ಸ್ವಾಭಾವಿಕ ಮಮತೆಯೂ ಇದೆ. ಗ್ರೀಕರಲ್ಲಿ ಇದಕ್ಕೆ ಸ್ಟಾರ್ಜಿ ಎಂಬ ಪದವಿತ್ತು. “ರಕ್ತಸಂಬಂಧವು ಇತರ ಸಂಬಂಧಗಳಿಗಿಂತ ಪ್ರಬಲವಾದುದು” ಎಂಬ ಹೇಳಿಕೆಗೆ ಇದೇ ಕಾರಣ. ಸೋದರಿಯರಾಗಿದ್ದ ಮರಿಯ ಮತ್ತು ಮಾರ್ಥರಿಗೆ ತಮ್ಮ ಸೋದರ ಲಾಜರನ ಕಡೆಗಿದ್ದ ಪ್ರೇಮ ಇದಕ್ಕೆ ಒಂದು ಉತ್ತಮ ಮಾದರಿ. ಅವನು ಫಕ್ಕನೆ ಸತ್ತಾಗ ಅವರಿಗಾದ ಮಹಾ ಶೋಕದಿಂದ ಅವರಿಗೆ ಅವನಲ್ಲಿ ಎಷ್ಟು ಪ್ರೀತಿಯಿತ್ತೆಂದು ತೋರಿಸಿತು. ಮತ್ತು ಪ್ರಿಯ ಲಾಜರನಿಗೆ ಯೇಸು ಪುನರ್ಜೀವ ಕೊಟ್ಟಾಗ ಅವರಿಗಾದ ಆನಂದವೆಷ್ಟು! (ಯೋಹಾನ 11:1-44) ಒಬ್ಬ ತಾಯಿಗೆ ತನ್ನ ಮಗುವಿನ ಮೇಲಿರುವ ಪ್ರೀತಿ, ಈ ಪ್ರೀತಿಯ ಇನ್ನೊಂದು ಉದಾಹರಣೆ. (1 ಥೆಸಲೊನೀಕ 2:7 ಹೋಲಿಸಿ.) ಹೀಗೆ, ಚೀಯೋನಿನ ಮೇಲೆ ಯೆಹೋವನಿಗಿದ್ದ ಪ್ರೀತಿಯ ಮಹಾ ಗಾತ್ರವನ್ನು ಒತ್ತಿ ಹೇಳಲು ಯೆಹೋವನು, ಅದು ತಾಯಿಗೆ ಮಗುವಿನ ಮೇಲಿರುವ ಪ್ರೀತಿಗೂ ಹೆಚ್ಚು ಮಹತ್ತರವಾದುದೆಂದು ಹೇಳಿದನು.—ಯೆಶಾಯ 49:15.
5. ಸ್ವಾಭಾವಿಕ ಮಮತೆಯ ಕೊರತೆ ಇಂದು ಹೇಗೆ ವ್ಯಕ್ತವಾಗುತ್ತದೆ?
5 ನಾವು “ಕಡೇ ದಿವಸಗಳಲ್ಲಿ ಕಠಿಣ ಕಾಲ”ಗಳಲ್ಲಿ ಬದುಕುತ್ತೇವೆಂಬುದಕ್ಕೆ ಒಂದು ಸೂಚನೆ “ಮಮತೆಯಿಲ್ಲ”ದಿರುವಿಕೆಯೆ. (2 ತಿಮೊಥಿ 3:1, 3) ಕುಟುಂಬ ಪ್ರೇಮದ ಕೊರತೆಯ ಕಾರಣ ಹಲವು ಯುವ ಜನರು ಮನೆಯಿಂದ ಓಡಿಹೋಗುತ್ತಾರೆ. ಮತ್ತು ದೊಡ್ಡವರಾದ ಕೆಲವು ಮಕ್ಕಳು ತಮ್ಮ ವೃದ್ಧ ಹೆತ್ತವರನ್ನು ಅಸಡ್ಡೆ ಮಾಡುತ್ತಾರೆ. (ಜ್ಞಾನೋಕ್ತಿ 23:22 ಹೋಲಿಸಿ.) ಸ್ವಾಭಾವಿಕ ಮಮತೆಯ ಕೊರತೆಯು ಚಿಕ್ಕ ಮಕ್ಕಳ ಅಪಪ್ರಯೋಗ—ಕೆಲವು ಮಕ್ಕಳನ್ನು ಹೆತ್ತವರು ಎಷ್ಟು ಕಠಿಣವಾಗಿ ಹೊಡೆಯುತ್ತಾರೆಂದರೆ ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಬೇಕಾಗುತ್ತದೆ—ದಲ್ಲಿಯೂ ತೋರಿಬರುತ್ತದೆ. ತಮ್ಮ ಮಕ್ಕಳಿಗೆ ಅನೇಕ ಹೆತ್ತವರು ಶಿಕ್ಷೆಕೊಡಲು ತಪ್ಪುವುದೂ ಹೆತ್ತವರ ಪ್ರೀತಿಯ ಕೊರತೆಯನ್ನು ತೋರಿಸುತ್ತದೆ. ಮಕ್ಕಳು ಇಷ್ಟ ಬಂದಂತೆ ಮಾಡಲು ಬಿಡುವುದು ಪ್ರೀತಿಯ ಚಿಹ್ನೆಯಲ್ಲ. ಅದು ತೀರಾ ಕಡಮೆ ಕಷ್ಟದ ಮಾರ್ಗದ ಆಯ್ಕೆಯಾಗಿದೆ. ಮಕ್ಕಳನ್ನು ನಿಜವಾಗಿಯೂ ಪ್ರೀತಿಸುವ ತಂದೆ ಅಗತ್ಯವಿರುವಲ್ಲಿ ಶಿಸ್ತನ್ನು ಒದಗಿಸುವವನಾಗಿದ್ದಾನೆ.—ಜ್ಞಾನೋಕ್ತಿ 13:24; ಇಬ್ರಿಯ 12:5-11.
6. ಮಿತ್ರರ ಮಧ್ಯೆ ಇರುವ ಮಮತೆಯ ಶಾಸ್ತ್ರಸಂಬಂಧವಾದ ಉದಾಹರಣೆಗಳನ್ನು ಕೊಡಿರಿ.
6 ಇನ್ನು ಫಿಲಿಯ ಎಂಬ ಗ್ರೀಕ್ ಪದವು, ಪ್ರೌಢ ಪುರುಷರ ಯಾ ಸ್ತ್ರೀಯರ ಮಧ್ಯೆ ಇರುವ ಮಮತೆ (ಇದರಲ್ಲಿ ಲೈಂಗಿಕತೆಯ ಸೂಚನೆಯಿಲ್ಲ)ಯನ್ನು ಸೂಚಿಸುತ್ತದೆ. ದಾವೀದ ಮತ್ತು ಯೋನಾತಾನರ ಮಧ್ಯೆ ಇದ್ದ ಪರಸ್ಪರ ಪ್ರೀತಿಯಲ್ಲಿ ಇದರ ಉತ್ತಮ ಮಾದರಿ ನಮಗಿದೆ. ಯೋನಾತಾನನು ರಣರಂಗದಲ್ಲಿ ಸತ್ತಾಗ ದಾವೀದನು ಶೋಕಿಸುತ್ತಾ ಹೇಳಿದ್ದು: “ಯೋನಾತಾನನೇ, ನನ್ನ ಸಹೋದರನೇ, ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ; ನೀನು ನನಗೆ ಬಹು ಮನೋಹರನಾಗಿದ್ದಿ. ನನ್ನ ಮೇಲಿದ್ದ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದೇ ಸರಿ. ಅದು ಸತಿಪ್ರೇಮಕ್ಕಿಂತ ಶ್ರೇಷ್ಠವಾದದ್ದು.” (2 ಸಮುವೇಲ 1:26) “ಯೇಸುವಿಗೆ ಪ್ರಿಯನಾಗಿದ್ದ. . . ಶಿಷ್ಯ”ನಾದ ಅಪೊಸ್ತಲ ಯೋಹಾನನ ಕಡೆಗೆ ಕ್ರಿಸ್ತನಿಗೆ ವಿಶೇಷ ಮಮತೆಯಿತ್ತು.—ಯೋಹಾನ 20:2.
7. ಅಗಾಪೆಯ ಪ್ರಕೃತಿಯೇನು, ಮತ್ತು ಈ ಪ್ರೀತಿಯನ್ನು ಹೇಗೆ ತೋರಿಸಲಾಗಿದೆ?
7 ಪೌಲನು 1 ಕೊರಿಂಥ 13:13ರಲ್ಲಿ, ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ ಕುರಿತು ಹೇಳಿ, “ಇವುಗಳಲ್ಲಿ ಮಹತ್ತಮವಾದುದು ಪ್ರೀತಿಯೆ” ಎಂದು ಹೇಳಿದಾಗ ಯಾವ ಗ್ರೀಕ್ ಪದವನ್ನು ಉಪಯೋಗಿಸಿದನು? “ದೇವರು ಪ್ರೀತಿಸ್ವರೂಪಿ” ಎಂದು ಬರೆದಾಗ ಅಪೊಸ್ತಲ ಯೋಹಾನನು ಉಪಯೋಗಿಸಿದ ಅಗಾಪೆ ಎಂಬ ಪದವನ್ನೇ. (1 ಯೋಹಾನ 4:8, 16) ಇದು ಮೂಲಸೂತ್ರದಿಂದ ನಡೆಸಲ್ಪಡುವ ಯಾ ಅಳಲ್ಪಡುವ ಪ್ರೀತಿ. ಇದರಲ್ಲಿ ಮಮತೆ ಮತ್ತು ಅತಿಲಾಲನೆ ಸೇರಿರಲೂ ಬಹುದು, ಇಲ್ಲದಿರಲೂ ಬಹುದು. ಇದು, ಇತರರಿಗೆ, ಅವರು ಯೋಗ್ಯರಾಗಲಿ ಅಯೋಗ್ಯರಾಗಲಿ ಯಾ ಕೊಡುವವನಿಗೆ ಲಾಭ ದೊರೆಯಲಿ ಇಲ್ಲದಿರಲಿ, ಒಳ್ಳೆಯದನ್ನು ಮಾಡುವ ನಿಸ್ವಾರ್ಥವಾದ ಭಾವುಕತೆ ಯಾ ಅನಿಸಿಕೆಯಾಗಿದೆ. ಈ ವಿಧದ ಪ್ರೀತಿಯೆ, ದೇವರು ತನ್ನ ಹೃದಯಕ್ಕೆ ಅತಿ ಪ್ರಿಯ ನಿಧಿಯಾಗಿದ್ದ ತನ್ನ ಏಕಜಾತ ಪುತ್ರನನ್ನು, “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು” ಕೊಡುವಂತೆ ಮಾಡಿತು. (ಯೋಹಾನ 3:16) ಪೌಲನು ಚೆನ್ನಾಗಿ ನಮಗೆ ಜ್ಞಾಪಕ ಹುಟ್ಟಿಸುವಂತೆ, “ನೀತಿವಂತರಿಗಾಗಿ ಯಾರಾದರೂ ಪ್ರಾಣಕೊಡುವದು ಅಪರೂಪ. ಉಪಕಾರಿಗೋಸ್ಕರ ಪ್ರಾಣಕೊಡುವದಕ್ಕೆ ಯಾರಾದರೂ ಧೈರ್ಯ ಮಾಡಿದರೂ ಮಾಡಾನು. ಆದರೆ, ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತ ಪಡಿಸಿದ್ದಾನೆ. (ರೋಮಾಪುರ 5:7, 8) ಹೌದು, ಅಗಾಪೆ ಒಬ್ಬನ ಜೀವನಸ್ಥಾನ ಯಾವುದೇ ಆಗಿರಲಿ ಯಾ ಪ್ರೀತಿ ತೋರಿಸುವವನಿಗೆ ಎಷ್ಟೇ ನಷ್ಟವಾಗಲಿ, ಇತರರಿಗೆ ಒಳ್ಳೆಯದನ್ನು ಮಾಡುತ್ತದೆ.
ನಂಬಿಕೆ ಮತ್ತು ನಿರೀಕ್ಷೆಗಿಂತ ಏಕೆ ಹೆಚ್ಚಿನದು?
8. ಅಗಾಪೆ ನಂಬಿಕೆಗಿಂತ ಹೇಗೆ ಹೆಚ್ಚು ದೊಡ್ಡದಾಗಿದೆ?
8 ಆದರೆ, ಈ ವಿಧದ ಪ್ರೀತಿ (ಅಗಾಪೆ) ನಂಬಿಕೆಗಿಂತ ಮಹತ್ತರವಾದುದೆಂದು ಪೌಲನು ಹೇಳಿದ್ದೇಕೆ? ಅವನು 1 ಕೊರಿಂಥ 13:2ರಲ್ಲಿ ಬರೆದುದು: “ನನಗೆ ಪ್ರವಾದನಾವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದ ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.” (ಮತ್ತಾಯ 17:20 ಹೋಲಿಸಿ.) ಹೌದು, ಜ್ಞಾನ ಸಂಪಾದಿಸಿ ನಂಬಿಕೆಯಲ್ಲಿ ಬೆಳೆಯುವ ನಮ್ಮ ಪ್ರಯತ್ನ, ಸ್ವಾರ್ಥೋದ್ದೇಶದಿಂದ ಮಾಡಲ್ಪಡುವುದಾದರೆ ದೇವರಿಂದ ನಮಗೆ ಯಾವ ಪ್ರಯೋಜನವೂ ಲಭ್ಯವಾಗದು. ಇದೇ ರೀತಿ ಯೇಸು, ಕೆಲವರು ‘ತನ್ನ ಹೆಸರಿನಲ್ಲಿ ಪ್ರವಾದಿಸುವರು, ತನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು ಮತ್ತು ತನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡುವರು’ ಎಂದೂ ಆದರೆ, ಅವರಿಗೆ ತನ್ನ ಸಮ್ಮತಿ ಇಲ್ಲವೆಂದೂ ತೋರಿಸಿದನು.—ಮತ್ತಾಯ 7:22, 23.
9. ಪ್ರೀತಿ ನಿರೀಕ್ಷೆಗಿಂತ ಹೆಚ್ಚು ದೊಡ್ಡದೇಕೆ?
9 ಪ್ರೀತಿಯ ಈ ಅಗಾಪೆ ರೂಪವು ನಿರೀಕ್ಷೆಗಿಂತಲೂ ಹೆಚ್ಚು ದೊಡ್ಡದೇಕೆ? ಏಕೆಂದರೆ ನಿರೀಕ್ಷೆಯು ಆತ್ಮಕೇಂದ್ರಿತವಾಗಿರಬಲ್ಲದು. ಒಬ್ಬನು ತನಗೆ ದೊರೆಯುವ ಪ್ರಯೋಜನಗಳನ್ನು ಮುಖ್ಯವಾಗಿ ಚಿಂತಿಸಬಹುದು. ಆದರೆ ಪ್ರೀತಿಯು ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ” (1 ಕೊರಿಂಥ 13:4, 5) ಇದಲ್ಲದೆ, “ಮಹಾ ಸಂಕಟ”ವನ್ನು ಪಾರಾಗಿ ನೂತನ ಜಗತ್ತಿನಲ್ಲಿ ಜೀವಿಸುವಂಥ ನಿರೀಕ್ಷೆಯು, ಆ ನಿರೀಕ್ಷೆ ನೆರವೇರಿದಾಗ ಅಂತ್ಯಗೊಳ್ಳುತ್ತದೆ. (ಮತ್ತಾಯ 24:21) ಪೌಲನು ಹೇಳುವಂತೆ, “ನಾವು ರಕ್ಷಣೆಯನ್ನು ಹೊಂದಿದವರಾದರೂ ಇನ್ನು ಎದುರು ನೋಡುವವರಾಗಿದ್ದೇವೆ. ಎದುರು ನೋಡುವ ಪದವಿ ಪ್ರತ್ಯಕ್ಷವಾಗಿದ್ದರೆ ಎದುರು ನೋಡುವದೇಕೆ? ಪ್ರತ್ಯಕ್ಷವಾದದ್ದನ್ನು ಎದುರು ನೋಡುವದುಂಟೇ? ಆದರೆ ಕಾಣದಿರುವದನ್ನು ನಾವು ಎದುರು ನೋಡುವವರಾಗಿದ್ದರೆ ತಾಳ್ಮೆಯಿಂದ ಕಾದುಕೊಂಡಿರುವೆವು.” (ರೋಮಾಪುರ 8:24, 25) ಪ್ರೀತಿ ಸಕಲವನ್ನು ಸಹಿಸಿಕೊಳ್ಳುತ್ತದೆ, ಅದು ಎಂದಿಗೂ ನಿಷ್ಫಲವಾಗುವುದಿಲ್ಲ. (1 ಕೊರಿಂಥ 13:7, 8) ಹೀಗೆ, ನಿಸ್ವಾರ್ಥ ಪ್ರೀತಿ (ಅಗಾಪೆ), ನಂಬಿಕೆ ಮತ್ತು ನಿರೀಕ್ಷೆಗಿಂತ ಹೆಚ್ಚು ದೊಡ್ಡದು.
ವಿವೇಕ, ನ್ಯಾಯ ಮತ್ತು ಶಕಿಗ್ತಿಂತಲೂ ಹೆಚ್ಚು ದೊಡ್ಡದೆ?
10. ದೇವರ ನಾಲ್ಕು ಮೂಲಾಧಾರದ ಗುಣಗಳಲ್ಲಿ ಪ್ರೀತಿ ಮಹತ್ತಮವೆಂದು ಏಕೆ ಹೇಳಸಾಧ್ಯವಿದೆ?
10 ಈಗ ನಾವು ಯೆಹೋವ ದೇವರ ನಾಲ್ಕು ಮೂಲಾಧಾರದ ಗುಣಗಳನ್ನು ಅಂದರೆ ವಿವೇಕ, ನ್ಯಾಯ, ಶಕ್ತಿ ಮತ್ತು ಪ್ರೀತಿಯನ್ನು ಪರಿಗಣಿಸೋಣ. ಇವುಗಳ ಮಧ್ಯೆಯೂ ಪ್ರೀತಿ ದೊಡ್ಡದೆಂದು ಹೇಳಸಾಧ್ಯವೆ? ಹೌದು, ನಿಶ್ಚಯವಾಗಿ. ಏಕೆ? ಏಕೆಂದರೆ ದೇವರು ಮಾಡುವ ಕೆಲಸಗಳ ಹಿಂದಿರುವ ಪ್ರೇರಕ ಶಕ್ತಿ ಪ್ರೀತಿಯೆ. ಈ ಕಾರಣದಿಂದಲೆ, “ದೇವರು ಪ್ರೀತಿ ಸ್ವರೂಪಿ” ಎಂದು ಅಪೊಸ್ತಲ ಯೋಹಾನನು ಬರೆದನು. ಹೌದು, ಯೆಹೋವನು ಪ್ರೀತಿಯ ವ್ಯಕ್ತೀಕರಣವಾಗಿದ್ದಾನೆ. (1 ಯೋಹಾನ 4:8, 16) ಶಾಸ್ತ್ರದಲ್ಲಿ ನಾವೆಲಿಯ್ಲೂ ದೇವರು ವಿವೇಕ, ನ್ಯಾಯ ಯಾ ಶಕ್ತಿಯಾಗಿದ್ದಾನೆಂದು ಓದುವುದಿಲ್ಲ. ಬದಲಾಗಿ, ಆತನಲ್ಲಿ ಈ ಗುಣಗಳು ಅಡಕವಾಗಿವೆ ಎಂದು ನಮಗೆ ಹೇಳಲಾಗುತ್ತದೆ. (ಯೋಬ 12:13; ಕೀರ್ತನೆ 147:5; ದಾನಿಯೇಲ 4:37) ಆತನಲ್ಲಿ ಈ ನಾಲ್ಕು ಗುಣಗಳು ಪರಿಪೂರ್ಣ ಸಮತೆಯಲ್ಲಿವೆ. ಪ್ರೀತಿಯಿಂದ ಪ್ರೇರಿತನಾಗಿ ಯೆಹೋವನು ತನ್ನ ಉದ್ದೇಶಗಳನ್ನು, ಇತರ ಮೂರು ಗುಣಗಳನ್ನು ಉಪಯೋಗಿಸುತ್ತಾ ಯಾ ಅವುಗಳನ್ನು ಲೆಕ್ಕಕ್ಕೆ ಹಿಡಿಯುತ್ತಾ ನೆರವೇರಿಸುತ್ತಾನೆ.
11. ಯೆಹೋವನು ವಿಶ್ವವನ್ನು ಮತ್ತು ಆತ್ಮ ಮತ್ತು ಮಾನವಜೀವಿಗಳನ್ನು ಸೃಷ್ಟಿಸುವಂತೆ ಯಾವುದು ಪ್ರಚೋದಿಸಿತು?
11 ಹಾಗಾದರೆ, ಯೆಹೋವನು ವಿಶ್ವವನ್ನೂ ಆತ್ಮ ಮತ್ತು ಮಾನವ ಜೀವಿಗಳನ್ನೂ ಸೃಷ್ಟಿಸುವಂತೆ ಯಾವುದು ಪ್ರಚೋದಿಸಿತು? ವಿವೇಕ ಯಾ ಶಕಿಯ್ತೊ? ಅಲ್ಲ. ಏಕೆಂದರೆ ದೇವರು ತನ್ನ ವಿವೇಕ ಮತ್ತು ಶಕ್ತಿಯನ್ನು ಸೃಷ್ಟಿಸುವಾಗ ಕೇವಲ ಉಪಯೋಗಿಸಿದನು, ಅಷ್ಟೆ. ಉದಾಹರಣೆಗೆ, “ಯೆಹೋವನು ಜ್ಞಾನ [ವಿವೇಕ, NW] ದ ಮೂಲಕ ಭೂಮಿಯನ್ನು” ಸ್ಥಾಪಿಸಿದನೆಂದು ನಾವು ಓದುತ್ತೇವೆ. (ಜ್ಞಾನೋಕ್ತಿ 3:19) ಇದಲ್ಲದೆ, ಆತನ ನ್ಯಾಯಗುಣ, ಆತನು ನೈತಿಕ ಇಚ್ಫಾಸ್ವಾತಂತ್ರ್ಯವುಳ್ಳವರನ್ನು ಸೃಷ್ಟಿಸುವಂತೆ ಅವಶ್ಯಪಡಲಿಲ್ಲ. ದೇವರ ಪ್ರೀತಿಯೆ ಬುದ್ಧಿಜೀವಿಗಳ ಅಸ್ತಿತ್ವದ ಸಂತೋಷದಲ್ಲಿ ಪಾಲಿಗನಾಗುವಂತೆ ಆತನನ್ನು ಪ್ರಚೋದಿಸಿತು. ಆದಾಮನ ತಪ್ಪಿನ ಕಾರಣ ಮಾನವ ಸಂತತಿಯ ಮೇಲೆ ನ್ಯಾಯವು ಹಾಕಿದ ತೀರ್ಪನ್ನು ನಿವಾರಿಸಲು ದಾರಿಯನ್ನು ಕಂಡುಹಿಡಿದದ್ದು ಪ್ರೀತಿಯೆ. (ಯೋಹಾನ 3:16) ಹೌದು, ವಿಧೇಯ ಮಾನವಸಂತತಿಯು ಬರಲಿರುವ ಭೂಪ್ರಮೋದವನದಲ್ಲಿ ಜೀವಿಸಬೇಕೆಂದು ಯೆಹೋವನು ಉದ್ದೇಶಿಸುವಂತೆ ಪ್ರೇರಿಸಿದ್ದು ಪ್ರೀತಿಯೆ.—ಲೂಕ 23:43.
12. ದೇವರ ಶಕ್ತಿ, ನ್ಯಾಯ ಮತ್ತು ಪ್ರೀತಿಗೆ ನಾವು ಹೇಗೆ ಪ್ರತಿವರ್ತನೆ ತೋರಿಸಬೇಕು?
12 ದೇವರ ಸರ್ವಶಕ್ತಿಯ ಕಾರಣ ನಾವು ಆತನನ್ನು ರೇಗಿಸಲು ಧೈರ್ಯಗೊಳ್ಳಲಾರೆವು. ಪೌಲನು ಕೇಳಿದ್ದು: “ಕರ್ತ [ಯೆಹೋವ, NW] ನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು?” (1 ಕೊರಿಂಥ 10:22) ಹೌದು, ಯೆಹೋವನು “ಈರ್ಷ್ಯೆಯುಳ್ಳ ದೇವರು”, ಕೆಟ್ಟ ಅರ್ಥದಲ್ಲಲ್ಲ, “ಏಕಮಾತ್ರ ಭಕ್ತಿಯನ್ನು ನಿರ್ಬಂಧಿಸುವ” ದೇವರು ಎಂಬ ಅರ್ಥದಲಿಯ್ಲೆ. (ವಿಮೋಚನಕಾಂಡ 20:5; ಕಿಂಗ್ ಜೇಮ್ಸ್ ವರ್ಷನ್) ಕ್ರೈಸ್ತರಾಗಿರುವ ನಾವು ದೇವರ ಅಗಮ್ಯ ವಿವೇಕದ ಅನೇಕ ರೂಪಗಳಿಂದ ಭಯಚಕಿತರಾಗುತ್ತೇವೆ. (ರೋಮಾಪುರ 11:33-35) ಆತನ ನ್ಯಾಯಕ್ಕೆ ನಮಗಿರುವ ಗೌರವವು, ಇಚ್ಫಾಪೂರ್ವಕ ಪಾಪದಿಂದ ನಾವು ದೂರವಿರುವಂತೆ ಮಾಡಬೇಕು. (ಇಬ್ರಿಯ 10:26-31) ಆದರೆ ದೇವರ ಈ ನಾಲ್ಕು ಪ್ರಧಾನ ಗುಣಗಳಲ್ಲಿ ಪ್ರೀತಿ ಮಹತ್ತಮವಾದುದೆಂಬುದು ನಿಸ್ಸಂಶಯಾಸ್ಪದ. ಮತ್ತು ದೇವರ ನಿಸ್ವಾರ್ಥ ಪ್ರೀತಿಯೆ ಆತನ ಬಳಿಗೆ ನಮ್ಮನ್ನು ಸೆಳೆದು ನಾವು ಆತನನ್ನು ಮೆಚ್ಚಿಸುವಂತೆ, ಆರಾಧಿಸುವಂತೆ ಮತ್ತು ಆತನ ಪವಿತ್ರ ನಾಮದ ಶುದ್ಧೀಕರಣದಲ್ಲಿ ಪಾಲಿಗರಾಗುವಂತೆ ಮಾಡುತ್ತದೆ.—ಜ್ಞಾನೋಕ್ತಿ 27:11.
ಆತ್ಮದ ಫಲಗಳಲ್ಲಿ ಮಹತ್ತಮ
13. ದೇವರಾತ್ಮದ ಫಲಗಳಲ್ಲಿ ಪ್ರೀತಿಯ ಸ್ಥಾನ ಯಾವುದು?
13 ಪ್ರೀತಿಯು, ಗಲಾತ್ಯ 5:22, 23 ರಲ್ಲಿ ಹೇಳಿರುವ ದೇವರಾತ್ಮದ ಒಂಭತ್ತು ಫಲಗಳಲ್ಲಿ ಯಾವ ಸ್ಥಾನದಲ್ಲಿದೆ? “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”, ಇವೇ ಆ ಗುಣಗಳು. ಪೌಲನು ಪ್ರೀತಿಯನ್ನು ಸಕಾರಣದಿಂದಲೆ ಪ್ರಥಮವಾಗಿ ಬರೆದನು. ಪ್ರೀತಿಯು ಅವನು ಬರೆದ ಮುಂದಿನ ಗುಣವಾದ ಸಂತೋಷಕ್ಕಿಂತ ಶ್ರೇಷ್ಠವೆ? ಹೌದು, ಏಕೆಂದರೆ ಪ್ರೀತಿಯಿಲ್ಲದಿದ್ದರೆ ಬಾಳಿಕೆ ಬರುವ ಸಂತೋಷವಿರಲು ಸಾಧ್ಯವಿಲ್ಲ. ವಾಸ್ತವವೇನಂದರೆ, ಸ್ವಾರ್ಥದ, ಪ್ರೀತಿಯ ಅಭಾವದ ಕಾರಣ ಜಗತ್ತು ಸಂತೋಷರಹಿತವಾಗಿದೆ. ಆದರೆ ಯೆಹೋವನ ಸಾಕ್ಷಿಗಳಲ್ಲಿ ಪರಸ್ಪರ ಪ್ರೇಮವಿದೆ ಮತ್ತು ತಮ್ಮ ಸ್ವರ್ಗೀಯ ತಂದೆಯ ಕಡೆಗೂ ಅವರಿಗೆ ಪ್ರೀತಿಯಿದೆ. ಆದುದರಿಂದ ಅವರು ಆನಂದಭರಿತರೆಂದು ನಾವು ನಿರೀಕ್ಷಿಸಬೇಕು ಮತ್ತು ಅವರು “ಹೃದಯಾನಂದದಿಂದ ಹರ್ಷಧ್ವನಿಗೈಯುವರು” ಎಂದು ಮುಂತಿಳಿಸಲಾಗಿತ್ತು.—ಯೆಶಾಯ 65:14.
14. ಪ್ರೀತಿಯು ಆತ್ಮದ ಫಲವಾದ ಸಮಾಧಾನಕ್ಕಿಂತ ಹೆಚ್ಚು ದೊಡ್ಡದೆಂದು ಹೇಗೆ ಹೇಳಬಹುದು?
14 ಪ್ರೀತಿ ಆತ್ಮದ ಫಲವಾದ ಸಮಾಧಾನಕ್ಕಿಂತಲೂ ಶ್ರೇಷ್ಠ. ಪ್ರೀತಿಯ ಅಭಾವದ ಕಾರಣ ಜಗತ್ತು ಘರ್ಷಣೆ, ಕಲಹಗಳಿಂದ ತುಂಬಿದೆ. ಆದರೆ ಭೂವ್ಯಾಪಕವಾಗಿ, ಯೆಹೋವನ ಜನರು ಪರಸ್ಪರವಾಗಿ ಶಾಂತಿಯಿಂದಿದ್ದಾರೆ. ಅವರ ವಿಷಯದಲ್ಲಿ ಕೀರ್ತನೆಗಾರನ ಮಾತುಗಳು ಸತ್ಯ: “ಯೆಹೋವನು ತಾನೇ ತನ್ನ ಜನರನ್ನು ಸಮಾಧಾನದಿಂದ ಆಶೀರ್ವದಿಸುವನು.” (ಕೀರ್ತನೆ 29:11, NW) ಅವರಲ್ಲಿ ಈ ಶಾಂತಿಯಿರುವುದು, ನಿಜಕ್ರೈಸ್ತರ ಗುರುತು ಸ್ಥಾಪಿಸುವ ಗುಣ ಅಂದರೆ ಪ್ರೀತಿ ಅವರಲ್ಲಿ ಇರುವುದರಿಂದಲೆ. (ಯೋಹಾನ 13:35) ಕೇವಲ ಪ್ರೀತಿಯೆ ಸಕಲ ಪ್ರತ್ಯೇಕಿಸುವ ಸಂಗತಿಗಳನ್ನು—ಕುಲ, ರಾಷ್ಟ್ರ ಯಾ ಸಂಸ್ಕೃತಿ ಸಂಬಂಧವಾದ ಪ್ರತ್ಯೇಕಿಸುವ ವಿಷಯಗಳನ್ನು—ಜಯಿಸಬಲ್ಲದು. ಅದು “ಸಮಸ್ತವನ್ನು ಸಂಪೂರ್ಣ ಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:14.
15. ಆತ್ಮದ ದೀರ್ಘಶಾಂತಿಯೆಂಬ ಫಲಕ್ಕೆ ಹೋಲಿಸುವಾಗ ಪ್ರೀತಿಯ ಪರಮ ಪಾತ್ರವು ಹೇಗೆ ವ್ಯಕ್ತವಾಗುತ್ತದೆ?
15 ಪ್ರೀತಿಯ ಪರಮ ಪಾತ್ರವನ್ನು ದೀರ್ಘಶಾಂತಿ ಅಂದರೆ, ತಪ್ಪನ್ನು ಅಥವಾ ಉದ್ರೇಕವನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ಗುಣದೊಂದಿಗೆ ಹೋಲಿಸುವಾಗಲೂ ನೋಡಸಾಧ್ಯವಿದೆ. ದೀರ್ಘಶಾಂತಿಯೆಂದರೆ ತಾಳ್ಮೆ ಹಾಗೂ ಕೋಪಕ್ಕೆ ನಿಧಾನವೆಂದರ್ಥ. ಜನರು ಅಸಹನೆ ತೋರಿಸಿ ಥಟ್ಟನೆ ಕೋಪಿಗಳಾಗುವಂತೆ ಯಾವುದು ಮಾಡುತ್ತದೆ? ಪ್ರೀತಿಯ ಕೊರತೆಯೆ ಅಲ್ಲವೆ? ಆದರೂ ನಮ್ಮ ಸ್ವರ್ಗೀಯ ತಂದೆ ದೀರ್ಘಶಾಂತನು ಮತ್ತು “ಕೋಪಕ್ಕೆ ನಿಧಾನಿ.” (ವಿಮೋಚನಕಾಂಡ 34:6, NW; ಲೂಕ 18:7) ಏಕೆ? ಏಕೆಂದರೆ ಆತನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟ” ಪಡುವುದಿಲ್ಲ.—2 ಪೇತ್ರ 3:9.
16. ದಯೆ, ಒಳ್ಳೇತನ ಮತ್ತು ಶಮೆದಮೆಗಳೊಂದಿಗೆ ಪ್ರೀತಿ ಹೇಗೆ ಹೋಲುತ್ತದೆ?
16 ನಾವು ಈ ಹಿಂದೆ, ಪ್ರೀತಿ ನಂಬಿಕೆಗಿಂತ ಏಕೆ ದೊಡ್ಡದೆಂದು ನೋಡಿರುತ್ತೇವೆ, ಮತ್ತು ಇದಕ್ಕೆ ಕೊಡಲ್ಪಟ್ಟಿರುವ ಕಾರಣಗಳು ಉಳಿದಿರುವ ಆತ್ಮದ ಫಲಗಳಿಗೆ ಅಂದರೆ ದಯೆ, ಉಪಕಾರ, ಸಾಧುತ್ವ ಶಮೆದಮೆಗಳಿಗೂ ಅನ್ವಯಿಸುತ್ತದೆ. ಇವೆಲ್ಲ ಅವಶ್ಯ ಗುಣಗಳು. ಆದರೆ ಪೌಲನು 1 ಕೊರಿಂಥ 13:3ರಲ್ಲಿ ಗಮನಿಸಿ ಬರೆದಂತೆ, ಪ್ರೀತಿ ಇಲ್ಲದಿದ್ದರೆ ಇವು ನಮಗೆ ಪ್ರಯೋಜನ ತರಲಾರವು: “ನಮಗಿರುವದೆಲ್ಲವನ್ನು ಅನ್ನದಾನ ಮಾಡಿದರೂ ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.” ಇನ್ನೊಂದು ಕಡೆಯಲ್ಲಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ ಮತ್ತು ಶಮೆದಮೆಗಳಂಥ ಗುಣಗಳನ್ನು ಎತ್ತಿ ತೋರಿಸುವುದು ಪ್ರೀತಿಯಾಗಿದೆ. ಹೀಗೆ, ಪೌಲನು, ಪ್ರೀತಿ ದಯೆ ತೋರಿಸುತ್ತದೆ ಮತ್ತು “ಅದು ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ” ಎಂದು ಹೇಳಿದನು. ಹೌದು, “ಪ್ರೀತಿಯು ಎಂದಿಗೂ ಬಿದ್ದು ಹೋಗುವದಿಲ್ಲ.” (1 ಕೊರಿಂಥ 13:4, 7, 8) ಆತ್ಮದ ಇತರ ಫಲಗಳೆಲ್ಲ ಮೊದಲನೆಯ ಗುಣವಾದ ಪ್ರೀತಿಯ ತೋರಿಕೆಗಳು ಯಾ ವಿವಿಧ ರೂಪಗಳಾಗಿವೆಯೆಂದು ಗಮನಿಸಲ್ಪಟ್ಟಿರುದು ಸಮಂಜಸ. ಹೀಗೆ, ಸತ್ಯವಾಗಿಯೆ, ಆತ್ಮದ ಎಲ್ಲ ಒಂಭತ್ತು ಫಲಗಳಲ್ಲಿ ಪ್ರೀತಿ ಮಹತ್ತಮವಾದುದೆಂಬುದು ನ್ಯಾಯಸಮ್ಮತವಾಗಿದೆ.
17. ಆತ್ಮದ ಫಲಗಳಲ್ಲಿ ಪ್ರೀತಿ ಮಹತ್ತಮವೆಂಬುದನ್ನು ಶಾಸ್ತ್ರದ ಯಾವ ಹೇಳಿಕೆಗಳು ಬೆಂಬಲಿಸುತ್ತವೆ?
17 ದೇವರಾತ್ಮದ ಫಲಗಳಲ್ಲಿ ಪ್ರೀತಿಯು ಮಹತ್ತಮವಾದುದೆಂಬ ತೀರ್ಮಾನವನ್ನು ಪೌಲನು ಈ ಮಾತುಗಳಲ್ಲಿ ಬೆಂಬಲಿಸುತ್ತಾನೆ: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು. ಮತ್ತೊಬ್ಬನನ್ನು ಪ್ರೀತಿಸುವವನು ಧರ್ಮಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ. ಹೇಗಂದರೆ. . . ಎಲ್ಲಾ ಕಟ್ಟಳೆಗಳು—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬ ಒಂದೇ ಮಾತಿನಲ್ಲಿ ಅಡಕವಾಗಿವೆ. ಪ್ರೀತಿಯು ಮತ್ತೊಬ್ಬನಿಗೆ ಯಾವ ಕೇಡನ್ನೂ ಮಾಡುವದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ.” (ರೋಮಾಪುರ 13:8-10) ಅತಿ ಸಮಂಜಸವಾಗಿಯೇ, ಶಿಷ್ಯಯಾಕೋಬನು, ನೆರೆಯವನನ್ನು ತನ್ನಂತೆಯೆ ಪ್ರೀತಿಸುವ ಈ ನಿಯಮವನ್ನು “ರಾಜಾಜ್ಞೆ” ಎಂದು ಹೇಳಿ ಸೂಚಿಸುತ್ತಾನೆ.—ಯಾಕೋಬ 2:8.
18. ಪ್ರೀತಿ ಮಹತ್ತಮ ಗುಣವೆಂಬುದಕ್ಕೆ ಇನ್ನಾವ ಸಾಕ್ಷ್ಯವಿದೆ?
18 ಪ್ರೀತಿಯು ಮಹತ್ತಮ ಗುಣವೆಂಬುದಕ್ಕೆ ಇನ್ನೇನಾದರೂ ಸಾಕ್ಷಿಗಳಿವೆಯೆ? ಹೌದು, ನಿಶ್ಚಯವಾಗಿ. ಒಬ್ಬ ಶಾಸ್ತ್ರಿಯು ಯೇಸುವನ್ನು, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವದು?” ಎಂದು ಕೇಳಿದಾಗ ಸಂಭವಿಸಿದ್ದನ್ನು ಪರ್ಯಾಲೋಚಿಸಿರಿ. ಯೇಸು ದಶಾಜ್ಞೆಗಳಲ್ಲಿ ಒಂದನ್ನು ಉಲ್ಲೇಖಿಸುವನೆಂದು ಶಾಸ್ತ್ರಿ ನಿರೀಕ್ಷಿಸಿದಿರ್ದಬಹುದು. ಆದರೆ ಯೇಸು ಧರ್ಮೋಪದೇಶಕಾಂಡ 6:4,5ನ್ನು ಉಲ್ಲೇಖಿಸಿ ಹೇಳಿದ್ದು: “ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತ[ಯೆಹೋವ, NW]ನು ಒಬ್ಬನೇ ದೇವರು. ನಿನ್ನ ದೇವರಾದ ಕರ್ತನನ್ನು ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ ಪೂರ್ಣ ಶಕಿಯ್ತಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ.” ಬಳಿಕ ಯೇಸು ಕೂಡಿಸಿ ಹೇಳಿದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ.”—ಮಾರ್ಕ 12:28-31.
19. ಅಗಾಪೆಯ ಕೆಲವು ಗಮನಾರ್ಹ ಫಲಗಳಾವುವು?
19 ಸತ್ಯವಾಗಿಯೂ, ಪೌಲನು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯನ್ನು ಹೆಸರಿಸಿ “ಇವುಗಳಲ್ಲಿ ಮಹತ್ತಮವಾದುದು ಪ್ರೀತಿಯೆ” ಎಂದು ಹೇಳಿದ್ದು ಅತಿಶಯೋಕ್ತಿಯಲ್ಲ. ಪ್ರೀತಿಯನ್ನು ತೋರಿಸುವುದು, ನಮ್ಮ ಸ್ವರ್ಗೀಯ ಪಿತನೊಂದಿಗೆ ಮತ್ತು ಸಭೆ ಮತ್ತು ಕುಟುಂಬದ ಸದಸ್ಯರು ಸೇರಿರುವ ಇತರರೊಂದಿಗೆ ಸುಸಂಬಂಧವನ್ನು ಫಲಿಸುತ್ತದೆ. ಪ್ರೀತಿಯು ನಮ್ಮಲ್ಲಿ ಭಕ್ತಿವೃದ್ಧಿಯ ಪರಿಣಾಮವನ್ನುಂಟುಮಾಡುತ್ತದೆ. ನಿಜ ಪ್ರೀತಿ ಎಷ್ಟು ಪ್ರತಿಫಲದಾಯಕವೆಂಬುದನ್ನು ಮುಂದಿನ ಲೇಖನ ತೋರಿಸುವುದು. (w90 11/15)
ನೀವು ಹೇಗೆ ಉತ್ತರಿಸುವಿರಿ?
▪ ಪ್ರೀತಿಯು ನಂಬಿಕೆ ಮತ್ತು ನಿರೀಕ್ಷೆಗಿಂತ ಹೆಚ್ಚು ದೊಡ್ಡದು ಹೇಗೆ?
▪ ಅಗಾಪೆ ಎಂದರೇನು, ಮತ್ತು ಇಂಥ ಪ್ರೀತಿ ಹೇಗೆ ತೋರಿಸಲ್ಪಡುತ್ತದೆ?
▪ ದೇವರ ನಾಲ್ಕು ಪ್ರಧಾನ ಗುಣಗಳಲ್ಲಿ ಪ್ರೀತಿ ಮಹತ್ತಮವಾದುದೇಕೆ?
▪ ಆತ್ಮದ ಇತರ ಫಲಗಳಿಗಿಂತ ಪ್ರೀತಿ ಯಾವ ವಿಧಗಳಲ್ಲಿ ಹೆಚ್ಚು ದೊಡ್ಡದಾಗಿದೆ?
[ಪುಟ 13 ರಲ್ಲಿರುವ ಚಿತ್ರ]
ಮಾನವಕುಲವನ್ನು ಭೂಪ್ರಮೋದವನದಲ್ಲಿ ಜೀವಕ್ಕಾಗಿ ಸೃಷ್ಟಿಸುವಂತೆ ಪ್ರೀತಿಯು ದೇವರನ್ನು ಪ್ರಚೋದಿಸಿತು. ನೀವು ಅಲ್ಲಿರಲು ನಿರೀಕ್ಷಿಸುತ್ತೀರೊ?