ಬೈಬಲ್ ವಿಮರ್ಶಕರನ್ನು ಪೇಚುಗೊಳಿಸಿದ ಒಂದು ಗತ ಸಾಮ್ರಾಜ್ಯ
“ಲೋಕದ ಚರಿತ್ರ ಲೇಖನಗಳಲ್ಲಿ ಒಂದು ಅತ್ಯಂತ ಮಬ್ಬಾದ ಇತಿಹಾಸವು ಗತಕಾಲದ ಅಶ್ಶೂರ ಸಾಮ್ರಾಜ್ಯದ್ದಾಗಿತ್ತು.” “ಪುರಾತನ ನಿನೆವೆಯ ಕುರಿತು ತಿಳಿದಿದದ್ದೆಲ್ಲವು ವಿರಳವಾದ ಅಪ್ರತ್ಯಕ್ಷ ಸೂಚನೆಗಳು ಮತ್ತು ಬೈಬಲಿನಲ್ಲಿ ಅದಕ್ಕೆ ಉದ್ದೇಶಿಸಿ ನುಡಿದ ಪ್ರವಾದನೆಗಳು, ಮತ್ತು ಡೈಯೊಡರಸ್ ಸಿಕ್ಯೂಲಸ್ ಮತ್ತು ಇತರರಿಂದ ಅಶ್ಶೂರದ ಇತಿಹಾಸದ ಅನಿಶ್ಚಿತ ಮತ್ತು ಮುರುಕಾದ ಸೂಚನೆಗಳನ್ನು ಒಳಗೊಂಡಿದ್ದಾಗಿದ್ದವು.”—ಸೈಕ್ಲೊಪೀಡಿಯ ಆಫ್ ಬಿಬ್ಲಿಕಲ್ ಲಿಟ್ರೇಚರ್, ಸಂಪುಟಗಳು 1 ಮತ್ತು 3, 1862.
ಗ್ರೀಕ್ ಇತಿಹಾಸಕಾರ ಡೈಯೊಡರಸ್ ಸಿಕ್ಯೂಲಸ್ 2,000 ವರ್ಷಗಳ ಹಿಂದೆ ಜೀವಿಸಿದ್ದನು. ನಿನೆವೆಯು ಒಂದು ಚತುರ್ಭುಜಾಕೃತಿಯ ನಗರವಾಗಿತ್ತು ಎಂದವನು ವಾದಿಸಿದ್ದನು; ಅದರ ನಾಲ್ಕು ಪಕ್ಕಗಳ ಒಟ್ಟು ಉದ್ದವು 480 ಸ್ಟೇಡಿಯ [ಉದಳ್ದತೆ] ವಾಗಿತ್ತು. ಅದು 96 ಕಿಲೊಮೀಟರ್ (60ಮೈಲು) ಸುತ್ತಳತೆಯಾಗಿದೆ! ಬೈಬಲ್ ತದ್ರೀತಿಯ ಚಿತ್ರವನ್ನು ಕೊಡುತ್ತಾ, ನಿನೆವೆಯನ್ನು “ಮೂರು ದಿನದ ಪ್ರಯಾಣದಷ್ಟು” ವಿಸ್ತಾರದ ಒಂದು ಮಹಾ ಪಟ್ಟಣವಾಗಿ ವರ್ಣಿಸಿಯದೆ.—ಯೋನ 3:3.
ಪುರಾತನ ಲೋಕದ ಒಂದು ಅಜ್ಞಾತ ಪಟ್ಟಣವು ಅಷ್ಟೊಂದು ವಿಸ್ತಾರವಾಗಿತ್ತೆಂದು ನಂಬಲು 19 ನೆಯ ಶತಮಾನದ ಬೈಬಲ್ ವಿಮರ್ಶಕರು ನಿರಾಕರಿಸಿದ್ದರು. ನಿನೆವೆಯು ಎಂದಾದರೂ ಅಸ್ತಿತ್ವದಲ್ಲಿದ್ದದಾದರೆ, ಅದು ಬಾಬೆಲಿಗೆ ಮುಂಚಿನ ಒಂದು ಪುರಾತನ ನಾಗರಿಕತೆಯ ಭಾಗವಾಗಿದ್ದಿರಲೇಬೇಕೆಂದೂ ಅವರು ಹೇಳಿದ್ದರು.
ಈ ನೋಟವು ಆದಿಕಾಂಡ 10 ನೆಯ ಅಧ್ಯಾಯಕ್ಕೆ ಪ್ರತಿಕೂಲವಾಗಿತ್ತು, ಅದು ನೋಹನ ಮರಿ-ಮಗನಾದ ನಿಮ್ರೋದನು ಮೊದಲನೆಯ ರಾಜಕೀಯ ರಾಜ್ಯವನ್ನು ಬ್ಯಾಬಿಲನ್ ಅಥವಾ ಬಾಬೆಲ್ ಎಂಬ ಪ್ರದೇಶದಲ್ಲಿ ಸ್ಥಾಪಿಸಿದನು ಎಂದು ಹೇಳುತ್ತದೆ. “ಅವನು ಆ ದೇಶದಿಂದ ಹೊರಟು,” ಬೈಬಲ್ ಮುಂದುವರಿಸುವುದು, “ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ ನಿನೆವೆಗೂ ಕೆಲಹಕ್ಕೂ ನಡುವೆ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ಇದೆಲ್ಲಾ ಒಟ್ಟಾಗಿ ಮಹಾಪಟ್ಟಣವೆಂದು ಪ್ರಸಿದ್ಧವಾಗಿದೆ.” (ಆದಿಕಾಂಡ 10:8-11) ಆ ನಾಲ್ಕು ಹೊಸ ಅಶ್ಶೂರ ಪಟ್ಟಣಗಳನ್ನು ಒಂದು “ಮಹಾಪಟ್ಟಣವೆಂದು” ಶಾಸ್ತ್ರವಚನವು ವರ್ಣಿಸುವುದನ್ನು ಗಮನಿಸಿರಿ.
ಅಶ್ಶೂರ ಪಟ್ಟಣವಾದ ಕೊರಸ್ಬಡ್ನ ಒಂದು ಭಾಗವಾಗಿ ರುಜುವಾಗಿರುವ ಒಂದು ಅರಮನೆಯ ಅವಶೇಷಗಳನ್ನು 1843 ರಲ್ಲಿ ಫ್ರೆಂಚ್ ಪ್ರಾಚೀನ ಶೋಧನ ಶಾಸ್ತ್ರಜ್ಞ ಪಾಲ್ ಎಮೆಲ್ ಬೋಟ ಕಂಡು ಹಿಡಿದನು. ಈ ಕಂಡುಹಿಡಿತದ ಸುದ್ದಿಯು ಹೊರಗಣ ಲೋಕವನ್ನು ಮುಟ್ಟಿದಾಗ, ಅದು ಮಹಾ ಸಡಗರವನ್ನುಂಟುಮಾಡಿತು. “ಅನ್ಯಥಾ ಅಜ್ಞಾತನಾಗಿದ್ದ ಕಾರಣ ಯಾರ ಅಸ್ತಿತ್ವವು ಸಂದೇಹಿಸಲ್ಪಟ್ಟಿತ್ತೋ ಆ ಯೆಶಾಯ 20:1 ರಲ್ಲಿ ಹೆಸರಿಸಿದ ಅಶ್ಶೂರದ ರಾಜ ಸರ್ಗೋನನಿಗೆ ಆ ಅರಮನೆಯು ಸೇರಿತ್ತೆಂದು ರುಜುವಾದಾಗ,” ಏ್ಯಲನ್ ಮಿಲರ್ಡ್ಲ್, ತನ್ನ ಪುಸ್ತಕವಾದ ಟ್ರೆಷರ್ಸ್ ಫ್ರಮ್ ಬೈಬಲ್ ಟೈಮ್ಸ್ ನಲ್ಲಿ ವಿವರಿಸುವುದು, “ಸಾರ್ವಜನಿಕ ಅಭಿರುಚಿಯು ಉನ್ನತಿಗೇರಿತು.”
ಈ ಮಧ್ಯೆ, ಇನ್ನೊಬ್ಬ ಪ್ರಾಚೀನ ಶೋಧನ ಶಾಸ್ತ್ರಜ್ಞನಾದ ಆಸ್ಟನ್ ಹೆನ್ರಿ ಲೇಯರ್ಡ್, ಕೊರಸ್ಬಡ್ನ ಸುಮಾರು 42 ಕಿಲೊಮೀಟರ್ ಆಗ್ನೇಯಕ್ಕೆ ನಿರ್ಮಡ್ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ಅವಶೇಷಗಳನ್ನು ಅಗೆಯಲಾರಂಭಿಸಿದನು. ಆ ಅವಶೇಷಗಳು ಆದಿಕಾಂಡ 10:11 ರಲ್ಲಿ ತಿಳಿಸಲ್ಪಟ್ಟ ನಾಲ್ಕು ಅಶ್ಶೂರ ಪಟ್ಟಣಗಳಲ್ಲಿ ಒಂದಾದ—ಕೆಲಹವೆಂದು ರುಜುವಾದವು. ಅನಂತರ 1849 ರಲ್ಲಿ, ಕೆಲಹ ಮತ್ತು ಕೊರಸ್ಬಡ್ನ ನಡುವೆ ಕುಯಿಂಜಿಕ್ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ಒಂದು ಮಹಾ ಅರಮನೆಯ ಅವಶೇಷಗಳನ್ನು ಲೇಯರ್ಡ್ ಅಗೆದು ತೆಗೆದನು. ಆ ಅರಮನೆಯು ನಿನೆವೆಯ ಒಂದು ಭಾಗವಾಗಿ ರುಜುವಾಯಿತು. ಕೊರಸ್ಬಡ್ ಮತ್ತು ಕೆಲಹದ ಮಧ್ಯದಲ್ಲಿ, ಕರೆಮ್ಲೆಸ್ ಎಂದು ಕರೆಯಲ್ಪಟ್ಟ ದಿಬ್ಬವೂ ಸೇರಿರುವ ಇತರ ವಸಾಹತುಗಳ ಅವಶೇಷಗಳು ನೆಲೆಸಿರುತ್ತವೆ. “ನಿರ್ಮದ್ [ಕೆಲಹ], ಕೊಯಿಂಜಿಕ್ [ನಿನೆವೆ], ಕೊರಸ್ಬಡ್, ಮತ್ತು ಕರೆಮ್ಲೆಸ್ನ ನಾಲ್ಕು ಮಹಾ ದಿಬ್ಬಗಳನ್ನು ಒಂದು ಚತುರ್ಭುಜದ ಮೂಲೆಗಳಾಗಿ ನಾವು ತಕ್ಕೊಂಡರೆ,” ಲೇಯರ್ಡ್ ಅವಲೋಕಿಸಿದ್ದು, “ಅದರ ನಾಲ್ಕು ಪಕ್ಕಗಳು ಸಾಕಷ್ಟು ತಕ್ಕದಾಗಿಯೇ ಪ್ರವಾದಿ [ಯೋನನ] ಮೂರು ದಿನಗಳ ಪ್ರಯಾಣವು ಒಳಗೂಡಿದ್ದ 480 ಸ್ಟೇಡಿಯ ಅಥವಾ ಭೂಗೋಳ ಶಾಸ್ತ್ರಜ್ಞನ 60 ಮೈಲುಗಳೊಂದಿಗೆ [96 ಕಿಲೊಮೀಟರ್] ನಿಷ್ಕೃಷ್ಟವಾಗಿ ಸರಿಬೀಳುತ್ತವೆ.”
ಹೀಗಿರಲಾಗಿ, ಯೋನನು ಈ ಎಲ್ಲಾ ವಸಾಹತುಗಳನ್ನು ಒಂದು “ಮಹಾಪಟ್ಟಣವೆಂದು” ಒಟ್ಟಾಗಿ ಸೇರಿಸಿ, ಆದಿಕಾಂಡ 10:11 ರಲ್ಲಿ ಮೊದಲಾಗಿ ನಮೂದಿಸಿದ ಪಟ್ಟಣದ ಹೆಸರಿನಿಂದ ಅಂದರೆ, ನಿನೆವೆ ಎಂದು ಕರೆದನೆಂದು ತೋರುತ್ತದೆ. ಈಗಲೂ ಹಾಗೆ ಮಾಡಲ್ಪಡುತ್ತದೆ. ದೃಷ್ಟಾಂತಕ್ಕಾಗಿ, ಯಾವುದನ್ನು ಕೆಲವೊಮ್ಮೆ “ಮಹಾ ಲಂಡನ್” ಎಂದು ಕರೆಯಲಾಗುತ್ತದೋ ಅದರಲ್ಲಿ ಕೂಡಿರುವ ಮೂಲತಃ ಲಂಡನ್ ಪಟ್ಟಣ ಮತ್ತು ಅದರ ಉಪನಗರಗಳ ಮಧ್ಯೆ ವ್ಯತ್ಯಾಸವು ಇದೆ.
ಸೊಕ್ಕಿನ ಅಶ್ಶೂರ್ಯ ರಾಜ
ನಿನೆವೆಯ ಅರಮನೆಯಲ್ಲಿ ಬಹುಮಟ್ಟಿಗೆ ಮೂರು ಕಿಲೊಮೀಟರ್ ಉದ್ದ ಗೋಡೆಗಳುಳ್ಳ 70 ಕೋಣೆಗಳು ಕೂಡಿದ್ದವು. ಈ ಗೋಡೆಗಳ ಮೇಲೆ ಯುದ್ಧ ವಿಜಯಗಳು ಮತ್ತು ಇತರ ಮಹಾಕಾರ್ಯಗಳ ಸ್ಮಾರಕವಾಗಿರುವ ಶಿಲ್ಪಕೃತಿಗಳ ಸುಟ್ಟ ಅವಶೇಷಗಳು ಇದ್ದವು. ಹೆಚ್ಚಿನವು ಪೂರ್ತಿ ಹಾಳಾಗಿದ್ದವು. ಆದರೂ, ಲೇಯಾರ್ಡನು ತನ್ನ ಮೊಕ್ಕಾಮಿನ ಕೊನೆಯಲ್ಲಿ, ಗಮನಾರ್ಹವಾಗಿ ಸುಸ್ಥಿತಿಯಲ್ಲಿದ್ದ ಒಂದು ಕೊಟಡಿಯನ್ನು ಕಂಡುಹಿಡಿದನು. ಗೋಡೆಗಳ ಮೇಲೆ ಬಲವಾದ ಕೋಟೆ-ಕೊತಲ್ತಗಳ ಪಟ್ಟಣದ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ತೋರಿಸುವ ಚಿತ್ರಣವಿತ್ತು, ಆಕ್ರಮಿಸಿದ ರಾಜನು ಪಟ್ಟಣದ ಹೊರಗೆ ಸಿಂಹಾಸನಾಸೀನನಾಗಿದ್ದು ಅವನ ಮುಂದೆ ಸೆರೆವಾಸಿಗಳು ಮುನ್ನಡೆಸಲ್ಪಡುತ್ತಿದ್ದರು. ಅಶ್ಶೂರ ಲಿಪಿಯಲ್ಲಿ ತಜ್ಞರು ಹೀಗೆಂದು ತರ್ಜುಮೆ ಮಾಡಿದ ಸ್ಮಾರಕ ಲೇಖನವು ಅರಸನ ತಲೆಯ ಮೇಲ್ಗಡೆ ಇದೆ: “ಜಗತ್ತಿನ ರಾಜನಾದ, ಅಶ್ಶೂರದ ಅರಸ ಸನ್ಹೇರೀಬನು ಒಂದು ನಿಮೇದು -ಸಿಂಹಾಸನದ ಮೇಲೆ ಕೂತು, ಲಾಕೀಷ್ (ಲಾ-ಕೀ-ಸು) ನಿಂದ (ಒಯ್ದ) ಕೊಳ್ಳೆಯನ್ನು ಔಪಚಾರಿಕವಾಗಿ ಪರೀಕ್ಷಿಸಿದನು.”
ಇಂದು ಈ ಪ್ರದರ್ಶನ ಮತ್ತು ಸ್ಮಾರಕ ಲೇಖನವನ್ನು ಬ್ರಿಟಿಷ್ ಮ್ಯುಸೀಯಮ್ನಲ್ಲಿ ವೀಕ್ಷಿಸ ಸಾಧ್ಯವಿದೆ. ಅದು ಬೈಬಲ್ನಲ್ಲಿ 2 ಅರಸುಗಳು 18:13, 14 ರಲ್ಲಿ ದಾಖಲೆಯಾದ ಚಾರಿತ್ರಿಕ ಘಟನೆಯೊಂದಿಗೆ ಸರಿಬೀಳುತ್ತದೆ: “ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರುಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು. ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ—ನಾನು ಅಪರಾಧಿ; ನೀನು ನನ್ನನ್ನು ಬಿಟ್ಟುಹೋಗು, ನೀನು ನನಗೆ ವಿಧಿಸುವಷ್ಟನ್ನು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದನು. ಅಶ್ಶೂರದ ಅರಸನು ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಬೇಕೆಂದು ಆಜ್ಞಾಪಿಸಿದನು.”
ಯೆಹೂದದ ಮೇಲೆ ಸನ್ಹೇರೀಬನ ಆಕ್ರಮಣ ಮತ್ತು ಹಿಜ್ಕೀಯನಿಂದ ಸಲ್ಲಿಸಲ್ಪಟ್ಟ ಕಪ್ಪದ ಕುರಿತಾದ ಹೆಚ್ಚಿನ ವಿವರಗಳನ್ನು ಕೊಡುವ ಇತರ ಸ್ಮಾರಕ ಲೇಖನಗಳು ನಿನೆವೆಯ ಅವಶೇಷಗಳ ನಡುವೆ ಕಂಡುಬಂದಿವೆ. “ದಾಖಲೆಯಾಗಿರುವ ಐತಿಹಾಸಿಕ ಸಾಕ್ಷಿಯಲ್ಲಿ ಪ್ರಾಯಶಃ ಅತ್ಯಂತ ಗಮನಾರ್ಹ ಸಹಘಟನೆಗಳು, ಎರಡು ಪೂರಾ ಸ್ವತಂತ್ರವರ್ತಿಯಾದ ವೃತ್ತಾಂತಗಳಿಂದ ಒಪ್ಪಲ್ಪಟ್ಟ, ಹಿಜ್ಕೀಯನಿಂದ ಪಡಕೊಂಡ ಬಂಗಾರದ ನಿಧಿಯ ಮೊತ್ತವಾದ ಮೂವತ್ತು ತಲಾಂತುಗಳು,” ಎಂದು ಬರೆದನು ಲೇಯಾರ್ಡ್. ಅಶ್ಶೂರ ಲಿಪಿಯನ್ನು ಬರಹವಾಗಿ ತಿರುಗಿಸಲು ಸಹಾಯ ಮಾಡಿದ ಸರ್ ಹೆನ್ರಿ ರಾಲಿನ್ಸನ್ ಪ್ರಕಟಿಸಿದ್ದೇನಂದರೆ ಆ ಸ್ಮಾರಕ ಲೇಖನಗಳು “[ಸನ್ಹೇರೀಬನ] ಚಾರಿತ್ರಿಕ ಗುರುತನ್ನು ವಾದಕ್ಕೆ ನಿಲುಕಲಾಗದ ಸ್ಥಳದಲ್ಲಿ ಇಟ್ಟಿವೆ.” ಅದಲ್ಲದೆ, ಲೇಯರ್ಡ್ ತನ್ನ ಪುಸ್ತಕವಾದ ನಿನೆವ ಆ್ಯಂಡ್ ಬ್ಯಾಬಿಲನ್ ನಲ್ಲಿ ಕೇಳುವುದು: “ನಿನೆವೆಯ ಪ್ರದೇಶವನ್ನು ಗುರುತಿಸಿದ ಈ ಮಣ್ಣು ಮತ್ತು ಕಚಡದ ಗುಪ್ಪೆಯ ಅಡಿಯಲ್ಲಿ, ಸಥ್ವಃ ಸನ್ಹೇರೀಬನಿಂದ ಬರೆಯಲ್ಪಟ್ಟ, ಮತ್ತು ಬೈಬಲ್ ದಾಖಲೆಯ ಸೂಕ್ಷ್ಮ ವಿವರಗಳನ್ನು ಸಹ ದೃಢೀಕರಿಸುವ ಹಿಜ್ಕೀಯ ಮತ್ತು ಸನ್ಹೇರೀಬನ ನಡುವಣ ಯುದ್ಧಗಳ ಇತಿಹಾಸವು ಕಂಡುಬರುವುದು ಸಂಭವನೀಯ ಯಾ ಶಕ್ಯವೆಂದು, ಈ ಸಂಶೋಧನೆಗಳನ್ನು ಮಾಡುವ ಮುಂಚೆ ನಂಬಿದವರಾದರೂ ಯಾರು?”
ಸನ್ಹೇರೀಬನ ದಾಖಲೆಯ ಕೆಲವು ವಿವರಗಳು ಬೈಬಲ್ನೊಂದಿಗೆ ಸರಿಬೀಳುವುದಿಲ್ಲ ನಿಶ್ಚಯ. ದೃಷ್ಟಾಂತಕ್ಕೆ, ಪ್ರಾಚೀನ ಶೋಧನ ಶಾಸ್ತ್ರಜ್ಞ ಏ್ಯಲನ್ ಮಿಲರ್ಡ್ಲ್ ಗಮನಿಸುವುದು: “ಅತ್ಯಂತ ಗಮನಾರ್ಹ ನಿಜತ್ವವು [ಸನ್ಹೇರೀಬನ ದಾಖಲೆಯ] ಕೊನೆಯಲ್ಲಿ ಬರುತ್ತದೆ. ಹಿಜ್ಕೀಯನು ತನ್ನ ದೂತನನ್ನು, ಮತ್ತು ಕಪ್ಪವೆಲ್ಲವನ್ನು ಸನ್ಹೇರೀಬನಿಗಾಗಿ ‘ಅನಂತರ, ನಿನೆವೆಗೆ’ ಕಳುಹಿಸಿಕೊಟ್ಟನು. ಅದನ್ನು ಅಶ್ಶೂರ ಸೇನೆಯು ಸಾಮಾನ್ಯ ರೀತಿಯ ವಿಜಯೋತ್ಸವದಲ್ಲಿ ಸ್ವದೇಶಕ್ಕೆ ಒಯ್ಯಲಿಲ್ಲ.” ಅಶ್ಶೂರದ ರಾಜನು ನಿನೆವೆಗೆ ಹಿಂತಿರುಗುವ ಮುಂಚೆ ಕಪ್ಪವು ಸಲ್ಲಿಸಲ್ಪಟ್ಟಿತು ಎಂದು ಬೈಬಲ್ ಹೇಳುತ್ತದೆ. (2 ಅರಸುಗಳು 18:15-17) ಈ ವ್ಯತ್ಯಾಸವೇಕೆ? ಮತ್ತು ಯೆಹೂದರಾಜ್ಯದ ಕೋಟೆಯಾದ ಲಾಕೀಷ್ನ ವಿಜಯಕ್ಕಾಗಿ ಕೊಚ್ಚಿಕೊಂಡ ರೀತಿಯಲ್ಲಿ ಯೆಹೂದ ರಾಜಧಾನಿ ಯೆರೂಸಲೇಮನ್ನು ಜಯಿಸಿದರ ಕುರಿತು ಕೊಚ್ಚಿಕೊಳ್ಳಲು ಸನ್ಹೇರೀಬನು ಶಕ್ತನಾಗಲಿಲ್ಲವೇಕೆ? ಮೂವರು ಬೈಬಲ್ ಲೇಖಕರು ಉತ್ತರಕೊಡುತ್ತಾರೆ. ಕಣ್ಣಾರೆಕಂಡ ಸಾಕ್ಷಿಯಾದ ಅವರಲ್ಲೊಬ್ಬನು ಬರೆದದ್ದು: “ಆಗ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲಾ ಹೆಣಗಳಾಗಿದ್ದರು. ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.”—ಯೆಶಾಯ 37:36, 37; 2 ಅರಸುಗಳು 19:35; 2 ಪೂರ್ವಕಾಲವೃತ್ತಾಂತ 32:21.
ತನ್ನ ಪುಸ್ತಕವಾದ ಟ್ರೆಷರ್ಸ್ ಫ್ರಮ್ ಬೈಬಲ್ ಟೈಮ್ಸ್ ನಲ್ಲಿ ಮಿಲರ್ಡ್ಲ್ ಸಮಾಪ್ತಿಗೊಳಿಸಿದ್ದು: “ಈ ವರದಿಯನ್ನು ಸಂದೇಹಿಸುವುದಕ್ಕೆ ಯಾವ ಸಕಾರಣವೂ ಇರುವುದಿಲ್ಲ. . . . ಅಂಥ ಒಂದು ವಿನಾಶವನ್ನು ಅವನ ಉತ್ತರಾಧಿಕಾರಿಗಳು ಓದುವಂತೆ ಸನ್ಹೇರೀಬನು ದಾಖಲಿಸುವಂತಿಲ್ಲವೆಂಬದು ಗ್ರಾಹ್ಯ, ಯಾಕಂದರೆ ಅದು ಅವನನ್ನು ಅಪಕೀರ್ತಿಗೆ ಒಳಪಡಿಸುವುದು.” ಬದಲಿಗೆ ಸನ್ಹೇರೀಬನು, ಯೆಹೂದದ ಆಕ್ರಮಣವು ಯಶಸ್ವಿಯಾಗಿತ್ತೆಂಬ ಮತ್ತು ಹಿಜ್ಕೀಯನು ನಿನೆವೆಗೆ ಕಪ್ಪವನ್ನು ಕಳುಹಿಸುತ್ತಾ ಅಧೀನತೆಯಲ್ಲಿ ಮುಂದರಿದನೆಂಬ ಭಾವನೆಯನ್ನು ನಿರ್ಮಿಸಲು ಪ್ರಯತ್ನಿಸಿದ್ದನು.
ಅಶ್ಶೂರದ ಮೂಲಗಳು ದೃಢೀಕರಿಸಲ್ಪಟ್ಟವು
ಹತ್ತಾರು ಸಾವಿರ ಜೇಡಿಮಣ್ಣಿನ ಫಲಕಗಳು ಅಡಕವಾಗಿರುವ ಪುಸ್ತಕಾಲಯಗಳು ಸಹ ನಿನೆವೆಯಲ್ಲಿ ಕಂಡುಹಿಡಿಯಲ್ಪಟ್ಟಿವೆ. ಆದಿಕಾಂಡ 10:11 ಸೂಚಿಸುವಂತೆಯೇ, ಅಶ್ಶೂರ ಸಾಮ್ರಾಜ್ಯದ ಮೂಲವು ದಕ್ಷಿಣದಲ್ಲಿ ಬಾಬೆಲಿನಲ್ಲಿತ್ತು ಎಂದು ಈ ದಾಖಲೆಗಳು ರುಜುಪಡಿಸುತ್ತವೆ. ಈ ಮಾಹಿತಿಯನ್ನುಪಯೋಗಿಸಿ ಪ್ರಾಚೀನ ಶೋಧನ ಶಾಸ್ತ್ರಜ್ಞರು ತಮ್ಮ ಪ್ರಯತ್ನಗಳನ್ನು ಇನ್ನೂ ಹೆಚ್ಚು ದಕ್ಷಿಣಕ್ಕೆ ಕೇಂದ್ರೀಕರಿಸ ತೊಡಗಿದರು. ದ ಎನ್ಸೈಕ್ಲೊಪೀಡಿಯ ಬಿಬ್ಲಿಕಾ ವಿವರಿಸುವುದು: “ಅಶ್ಶೂರ್ಯರ ಅವಶೇಷಗಳೆಲ್ಲಾ ಅವರ ಬಬಿಲೋನ್ಯ ಮೂಲವನ್ನು ಬಯಲುಪಡಿಸುತ್ತವೆ. ಅವರ ಭಾಷೆ ಮತ್ತು ಬರೆವಣಿಗೆಯ ರೀತಿ, ಅವರ ಸಾಹಿತ್ಯ, ಅವರ ಧರ್ಮ, ಮತ್ತು ಅವರ ವಿಜ್ಞಾನಗಳು ಅವರ ದಾಕ್ಷಿಣ್ಯಾತ ನೆರೆಹೊರೆಯವರಿಂದ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ತಕ್ಕೊಳ್ಳಲ್ಪಟ್ಟವುಗಳಾಗಿದ್ದವು.”
ಮೇಲಿನಂಥ ಕಂಡುಹಿಡಿಯುವಿಕೆಗಳು ಬೈಬಲ್ ವಿಮರ್ಶಕರನ್ನು ಅವರ ವೀಕ್ಷಣೆಗಳನ್ನು ಬದಲಾಯಿಸುವಂತೆ ಒತ್ತಾಯಪಡಿಸಿವೆ. ನಿಶ್ಚಯವಾಗಿ, ಬೈಬಲಿನ ಒಂದು ಪ್ರಾಮಾಣಿಕ ಸಂಶೋಧನೆಯು ಜಾಗರೂಕರಾದ, ಪ್ರಾಮಾಣಿಕ ಲೇಖಕರಿಂದ ಅದು ಬರೆಯಲ್ಪಟ್ಟಿತ್ತೆಂಬದನ್ನು ಪ್ರಕಟಿಸುತ್ತದೆ. ಬೈಬಲಿನ ತನ್ನ ಪರೀಕ್ಷಣೆಯ ಅನಂತರ, ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧಿಪತಿ ಸಾಲ್ಮನ್ ಪಿ. ಚೇಸ್ ಅಂದದ್ದು: “ಅದು ಒಂದು ದೀರ್ಘವಾದ, ಗಂಭೀರ, ಮತ್ತು ಗಾಢವಾದ ಅಧ್ಯಯನವಾಗಿರುತ್ತದೆ. ನಾನು ಯಾವಾಗಲೂ ಐಹಿಕ ವಿಷಯಗಳಲ್ಲಿ ಹೇಗೋ ಹಾಗೆ ಈ ಧಾರ್ಮಿಕ ವಿಷಯದಲ್ಲೂ ಅವೇ ಸಾಕ್ಷ್ಯದ ತತ್ವದೃಷ್ಟಿಯನ್ನುಪಯೋಗಿಸಿ, ಬೈಬಲ್ ಒಂದು ಅಲೌಕಿಕ ಪುಸ್ತಕವಾಗಿದೆ, ಮತ್ತು ಅದು ದೇವರಿಂದ ಬಂದದ್ದು ಎಂಬ ತೀರ್ಮಾನಕ್ಕೆ ಬಂದಿರುತ್ತೇನೆ.”—ದ ಬುಕ್ ಆಫ್ ಬುಕ್ಸ್: ಆನ್ ಇಂಟ್ರೊಡಕ್ಷನ್.
ಬೈಬಲ್ ನಿಷ್ಕೃಷ್ಟ ಇತಿಹಾಸಕ್ಕಿಂತ ಎಷ್ಟೋ ಮಿಗಿಲಾಗಿದೆ ನಿಶ್ಚಯ. ಅದು ದೇವರ ಪ್ರೇರಿತ ವಾಕ್ಯವಾಗಿದೆ, ಮಾನವ ಕುಲದ ಪ್ರಯೋಜನಕ್ಕಾಗಿರುವ ಒಂದು ಕೊಡುಗೆಯಾಗಿದೆ. (2 ತಿಮೊಥೆಯ 3:16) ಬೈಬಲಿನ ಭೂವಿವರಣೆಯನ್ನು ಪರೀಕ್ಷಿಸುವ ಮೂಲಕ ಇದರ ರುಜುವಾತನ್ನು ಕಾಣಸಾಧ್ಯವಿದೆ. ಇದನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸಲಾಗುವುದು.
[ಪುಟ 4 ರಲ್ಲಿರುವ ಚಿತ್ರ ಕೃಪೆ]
Courtesy of the Trustees of The British Museum
[ಪುಟ 6,7 ರಲ್ಲಿರುವ ಚಿತ್ರ ಕೃಪೆ]
ಮೇಲೆ: ಗೋಡೆಯ ಉಬ್ಬುಚಿತ್ರದಿಂದ ತೆಗೆಯಲ್ಪಟ್ಟ ಮೂರು ತಪಶೀಲುಗಳು
ಕೆಳಗೆ: ಲಾಕೀಷ್ನ ಮುತ್ತಿಗೆಯನ್ನು ನಿರೂಪಿಸುವ ಅಶ್ಶೂರ್ಯ ಉಬ್ಬುಚಿತ್ರದ ರೇಖಾಕೃತಿ
[ಕೃಪೆ]
(Courtesy of The British Museum)
(From The Bible in the British Museum, published by British Museum Press)