ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
© 2024 Watch Tower Bible and Tract Society of Pennsylvania
ಜುಲೈ 1-7
ಬೈಬಲಿನಲ್ಲಿರುವ ನಿಧಿ | ಕೀರ್ತನೆ 57-59
ತನ್ನ ಜನ್ರ ವಿರುದ್ಧ ಬರೋವ್ರನ್ನ ಯೆಹೋವ ಗೆಲ್ಲೋಕೆ ಬಿಡಲ್ಲ
ಕೂಲಂಕಷ ಸಾಕ್ಷಿ ಪುಟ 220-221 ಪ್ಯಾರ 14-15
‘ಇಡೀ ಭೂಮಿಯಲ್ಲಿ ಸಾಕ್ಷಿ ಕೊಡ್ತೀರ’
14 ಸ್ತೆಫನನನ್ನ ವಿರೋಧಿಗಳು ಕೊಲ್ಲೋ ಮುಂಚೆ ಅವನು ಧೈರ್ಯವಾಗಿ ಸಾಕ್ಷಿ ಕೊಟ್ಟ. (ಅ. ಕಾ. 6:5; 7:54-60) ಆ ಸಮಯದಲ್ಲಿ “ಮಹಾ ಹಿಂಸೆ” ಆರಂಭವಾದಾಗ ಅಪೊಸ್ತಲರನ್ನ ಬಿಟ್ಟು ಉಳಿದೆಲ್ಲಾ ಶಿಷ್ಯರು ಯೂದಾಯ ಮತ್ತು ಸಮಾರ್ಯದಲ್ಲಿ ಚೆಲ್ಲಾಪಿಲ್ಲಿ ಆದ್ರು. ಆದ್ರೆ ಇದ್ರಿಂದ ಸಾಕ್ಷಿ ಕೊಡೋ ಕೆಲಸ ನಿಂತುಹೋಗಲಿಲ್ಲ. ಆಗ ಫಿಲಿಪ್ಪ ಸಮಾರ್ಯಕ್ಕೆ ಹೋಗಿ “ಕ್ರಿಸ್ತನ ಬಗ್ಗೆ ಹೇಳೋಕೆ ಶುರುಮಾಡಿದ” ಮತ್ತು ಇದಕ್ಕೆ ಒಳ್ಳೇ ಫಲಿತಾಂಶಗಳು ಸಿಕ್ಕಿದ್ವು. (ಅ. ಕಾ. 8:1-8, 14, 15, 25) ಅಷ್ಟೇ ಅಲ್ಲದೆ, “ಸ್ತೆಫನನ ಕೊಲೆ ಆದಮೇಲೆ ಬೇರೆ ಶಿಷ್ಯರಿಗೂ ಹಿಂಸೆ ಬಂತು. ಹಾಗಾಗಿ ಅವರು ಫೊಯಿನಿಕೆ, ಸೈಪ್ರಸ್, ಅಂತಿಯೋಕ್ಯದ ತನಕ ಚೆಲ್ಲಾಪಿಲ್ಲಿಯಾದ್ರು. ಹಾಗೆ ಹೋದವರು ಯೆಹೂದ್ಯರಿಗೆ ಮಾತ್ರ ದೇವರ ಸಂದೇಶ ಹೇಳ್ತಿದ್ರು. ಆದ್ರೆ ಸೈಪ್ರಸ್ ಮತ್ತು ಕುರೇನ್ಯದಿಂದ ಅಂತಿಯೋಕ್ಯಕ್ಕೆ ಬಂದ ಶಿಷ್ಯರಲ್ಲಿ ಕೆಲವರು ಗ್ರೀಕ್ ಭಾಷೆ ಮಾತಾಡ್ತಿದ್ದ ಜನ್ರ ಜೊತೆ ಮಾತಾಡ್ತಾ ಅವ್ರಿಗೆ ಯೇಸು ಪ್ರಭು ಬಗ್ಗೆ ಸಿಹಿಸುದ್ದಿ ಹೇಳೋಕೆ ಶುರುಮಾಡಿದ್ರು.” (ಅ. ಕಾ. 11:19, 20) ಹೀಗೆ ಹಿಂಸೆ ಬಂದಾಗ ಸಿಹಿಸುದ್ದಿ ಹಬ್ಬೋದು ನಿಂತುಹೋಗಲಿಲ್ಲ. ಬದಲಿಗೆ ಕ್ರೈಸ್ತರು ಎಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಹೋಗಿದ್ರೋ ಅಲ್ಲೆಲ್ಲ ಸಾರಿ ಸಿಹಿಸುದ್ದಿ ಇನ್ನೂ ಜಾಸ್ತಿ ಹಬ್ಬೋ ತರ ಮಾಡಿದ್ರು.
15 ನಮ್ಮ ಕಾಲದಲ್ಲೂ ಇದೇ ತರ ನಡೀತು. 1950ರ ವರ್ಷಗಳಲ್ಲಿ ಆಗಿನ ಸೋವಿಯತ್ ಒಕ್ಕೂಟದಲ್ಲಿ ಸಾವಿರಾರು ಯೆಹೋವನ ಸಾಕ್ಷಿಗಳನ್ನ ಸೈಬೀರಿಯಕ್ಕೆ ಗಡೀಪಾರು ಮಾಡಿಬಿಟ್ರು. ಅವರು ಬೇರೆ ಬೇರೆ ಕಡೆಗೆ ಹೋಗಿದ್ರಿಂದ ಸಿಹಿಸುದ್ದಿ ಆ ದೊಡ್ಡ ದೇಶದಲ್ಲಿ ಹಬ್ಬಿತು. 10,000 ಕಿ.ಮೀ. ದೂರದ ಆ ಪ್ರದೇಶಕ್ಕೆ ಹೋಗಿ ಸಿಹಿಸುದ್ದಿ ಸಾರೋಕೆ ಬೇಕಾದ ಹಣ ಆ ಸಾಕ್ಷಿಗಳ ಹತ್ರ ಇರಲಿಲ್ಲ. ಆದ್ರೆ ಸರ್ಕಾರನೇ ಅಷ್ಟು ದೂರಕ್ಕೆ ಅವ್ರನ್ನ ಕಳಿಸಿತ್ತು. “ಇದ್ರಿಂದ ಸೈಬೀರಿಯದಲ್ಲಿದ್ದ ಒಳ್ಳೇ ಮನಸ್ಸಿನ ಸಾವಿರಾರು ಜನರು ಸತ್ಯ ತಿಳ್ಕೊಳ್ಳೋಕೆ ಅಧಿಕಾರಿಗಳೇ ಸಹಾಯ ಮಾಡಿದ ಹಾಗಾಯ್ತು” ಅಂತ ಒಬ್ಬ ಸಹೋದರ ಹೇಳ್ತಾರೆ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು23.07 ಪುಟ 18-19 ಪ್ಯಾರ 16-17
“ಸ್ಥಿರವಾಗಿರಿ, ಕದಲಬೇಡಿ”
16 ಮನಸ್ಸು ಚಂಚಲ ಆಗದ ಹಾಗೆ ನೋಡ್ಕೊಳ್ಳಿ. ರಾಜ ದಾವೀದನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅದಕ್ಕೆ ಅವನು “ದೇವರೇ, ನನ್ನ ಹೃದಯ ಸ್ಥಿರವಾಗಿದೆ” ಅಂತ ಹಾಡಿದ. (ಕೀರ್ತ. 57:7) ನಮ್ಮ ಹೃದಯನೂ ಸ್ಥಿರವಾಗಿ ಇರಬೇಕಂದ್ರೆ ನಾವು ಯೆಹೋವ ದೇವರನ್ನ ಪೂರ್ತಿಯಾಗಿ ನಂಬಬೇಕು. (ಕೀರ್ತನೆ 112:7 ಓದಿ.) ಸಹೋದರ ಬಾಬ್ಗೂ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇತ್ತು. ಅದಕ್ಕೆ ಡಾಕ್ಟರ್ ‘ನಿಮಗೆ ರಕ್ತ ಕೊಡಲ್ಲ, ಆದ್ರೆ ಕೊಡ್ಲೇಬೇಕಾದ ಪರಿಸ್ಥಿತಿ ಏನಾದ್ರೂ ಬಂದ್ರೆ ಅಂತ ಸುಮ್ನೆ ಪಕ್ಕದಲ್ಲಿ ಇಟ್ಟಿರ್ತೀವಿ’ ಅಂತ ಹೇಳಿದಾಗ ಆ ಸಹೋದರ ತಕ್ಷಣ ಒಂದು ಕ್ಷಣನೂ ಯೋಚ್ನೆ ಮಾಡದೆ ‘ಹಾಗಾದ್ರೆ ನಾನು ಈಗ್ಲೇ ಆಸ್ಪತ್ರೆಯಿಂದ ಹೋಗಿಬಿಡ್ತೀನಿ’ ಅಂತ ಹೇಳಿಬಿಟ್ರು. ಇದ್ರ ಬಗ್ಗೆ ಬಾಬ್ ಏನು ಹೇಳ್ತಾರಂದ್ರೆ “ನನ್ನ ಮನಸ್ಸು ಚಂಚಲ ಆಗ್ಲಿಲ್ಲ. ನನ್ನ ಜೀವ ಹೋಗಿಬಿಡುತ್ತೇನೋ ಅನ್ನೋ ಭಯನೂ ಇರಲಿಲ್ಲ.”
17 ಸಹೋದರ ಬಾಬ್ ಆಸ್ಪತ್ರೆಗೆ ಹೋಗೋ ಮುಂಚೆನೇ ರಕ್ತ ತಗೊಳ್ಳಲೇಬಾರದು ಅಂತ ತೀರ್ಮಾನ ಮಾಡಿದ್ರು. ಅವರು ಇಷ್ಟು ಸ್ಥಿರವಾಗಿ ಇರೋಕೆ ಕಾರಣ ಏನು? ಒಂದು, ‘ಏನೇ ಆದ್ರೂ ನಾನು ಯೆಹೋವನ ಮನಸ್ಸನ್ನ ಖುಷಿಪಡಿಸಬೇಕು’ ಅಂತ ಅವರು ತೀರ್ಮಾನ ಮಾಡಿದ್ರು. ಎರಡು, ಅವರು ಬೈಬಲ್ ಮತ್ತು ಬೇರೆ ಪ್ರಕಾಶನಗಳನ್ನ ಓದಿ ಜೀವ ಮತ್ತು ರಕ್ತ ಎಷ್ಟು ಪವಿತ್ರವಾಗಿದೆ ಅಂತ ಚೆನ್ನಾಗಿ ಅರ್ಥ ಮಾಡ್ಕೊಂಡ್ರು. ಮೂರು, ಯೆಹೋವನ ಮಾತು ಕೇಳಿದ್ರೆ ಈಗ ಮಾತ್ರ ಅಲ್ಲ ಮುಂದಕ್ಕೂ ಒಳ್ಳೇದಾಗುತ್ತೆ ಅಂತ ನಂಬಿದ್ರು. ಇದ್ರಿಂದ ಏನು ಗೊತ್ತಾಗುತ್ತೆ? ನಮಗೆ ಏನೇ ಕಷ್ಟ ಬಂದ್ರೂ ನಮ್ಮ ಮನಸ್ಸು ಕೂಡ ಬಾಬ್ ತರ ಸ್ಥಿರವಾಗಿ ಇರೋಕಾಗುತ್ತೆ ಅಂತ ಗೊತ್ತಾಗುತ್ತೆ.
ಜುಲೈ 8-14
ಬೈಬಲಿನಲ್ಲಿರುವ ನಿಧಿ | ಕೀರ್ತನೆ 60-62
ಯೆಹೋವ ನಮ್ಮನ್ನ ಯಾವಾಗ್ಲೂ ಕಾಪಾಡ್ತಾರೆ, ಸಂರಕ್ಷಿಸ್ತಾರೆ
it-2-E ಪುಟ 1118 ಪ್ಯಾರ 7
ಗೋಪುರ
ಸಾಂಕೇತಿಕ ಅರ್ಥ. ಯಾರು ಯೆಹೋವ ದೇವರ ಮೇಲೆ ನಂಬಿಕೆ ಇಡ್ತಾರೋ ಆತನ ಮಾತನ್ನ ಕೇಳ್ತಾರೋ ಅವರಿಗೆ ಆತನು ಸಂಪೂರ್ಣ ಸಂರಕ್ಷಣೆ ಕೊಡ್ತಾನೆ. ಅದಕ್ಕೆ ದಾವೀದ ಹೀಗೆ ಹೇಳಿದ: “ನೀನು [ಯೆಹೋವ] ನನ್ನ ಆಶ್ರಯ, ಶತ್ರುವಿಂದ ನನ್ನನ್ನ ಕಾಪಾಡೋ ದೊಡ್ಡ ಗೋಪುರ.” (ಕೀರ್ತ 61:3) ಯೆಹೋವ ದೇವರ ಹೆಸರನ್ನ ತಿಳ್ಕೊಂಡು ಅದರಲ್ಲಿ ನಂಬಿಕೆ ಇಡುವವರು ಆತನ ಹೆಸರಿಗೆ ತಕ್ಕಂತೆ ನಡ್ಕೊಳ್ಳುವವರು ಯಾವುದಕ್ಕೂ ಭಯಪಡಬೇಕಾಗಿಲ್ಲ. ಯಾಕಂದ್ರೆ “ಯೆಹೋವನ ಹೆಸ್ರು ಬಲವಾದ ಕೋಟೆ. ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ” ಅಂತ ಬೈಬಲ್ ಹೇಳುತ್ತೆ.—ಜ್ಞಾನೋ 18:10; 1ಸಮು 17:45-47 ಹೋಲಿಸಿ.
it-2-E ಪುಟ 1084 ಪ್ಯಾರ 8
ಡೇರೆ
ಬೈಬಲಿನಲ್ಲಿ ಡೇರೆಯನ್ನ ತುಂಬ ಕಡೆ ಸಾಂಕೇತಿಕ ಅರ್ಥದಲ್ಲಿ ಬಳಸಿದ್ದಾರೆ. ಡೇರೆಯಲ್ಲಿ ಒಬ್ಬ ವ್ಯಕ್ತಿ ವಿಶ್ರಾಂತಿ ಪಡ್ಕೊಳ್ಳಬಹುದಿತ್ತು. ಮಳೆ, ಚಳಿ, ಬಿಸಿಲಿಂದ ರಕ್ಷಣೆ ಪಡೆದುಕೊಳ್ಳಬಹುದಿತ್ತು. (ಆದಿ 18:1) ಹಿಂದಿನ ಕಾಲದಲ್ಲಿ ಅತಿಥಿಸತ್ಕಾರ ಮಾಡೋಕೆ ಒಬ್ಬ ವ್ಯಕ್ತಿಯನ್ನ ಡೇರೆಗೆ ಕರೆದ್ರೆ ಅವನಿಗೆ ತುಂಬ ಕಾಳಜಿ ತೋರಿಸ್ತಿದ್ರು ತುಂಬ ಗೌರವ ಕೊಡ್ತಿದ್ರು. ಪ್ರಕಟನೆ 7:15ರ ಪಾದಟಿಪ್ಪಣಿಯಲ್ಲಿ ದೇವರು ಮಹಾ ಸಮೂಹದ “ಮೇಲೆ ಡೇರೆ ಹಾಕ್ತಾನೆ” ಅಂತ ಇದೆ. ಆತನು ಅವರಿಗೆ ಕಾಳಜಿ ಮತ್ತು ಭದ್ರತೆ ತೋರಿಸ್ತಾನೆ ಅನ್ನೋದೆ ಇದರ ಅರ್ಥ. (ಕೀರ್ತ 61:3, 4) ದೇವರ ಪತ್ನಿ ಚಿಯೋನ್, ಮುಂದೆ ತನಗೆ ಹುಟ್ಟಲಿರೋ ಮಕ್ಕಳಿಗಾಗಿ ತಯಾರಿ ಮಾಡ್ತಾಳೆ ಅಂತ ಯೆಶಾಯ ಹೇಳಿದ್ದಾನೆ. ಅವಳಿಗೆ “ನಿನ್ನ ಡೇರೆಯನ್ನ ಇನ್ನು ಸ್ವಲ್ಪ ವಿಶಾಲಗೊಳಿಸು” ಅಂತ ಆಜ್ಞೆ ಕೊಡಲಾಗಿದೆ. (ಯೆಶಾ 54:2) ಅವಳು ತನ್ನ ಸಂರಕ್ಷಣಾ ಜಾಗವನ್ನ ಇನ್ನೂ ಜಾಸ್ತಿ ಮಾಡ್ತಾಳೆ ಅನ್ನೋದೆ ಇದರ ಅರ್ಥ.
ಕಾವಲಿನಬುರುಜು02 4/15 ಪುಟ 16 ಪ್ಯಾರ 14
ದೇವರ ನಿಯಮಗಳು ನಮ್ಮ ಪ್ರಯೋಜನಕ್ಕಾಗಿವೆ
14 ದೇವರ ನಿಯಮಗಳು ಎಂದಿಗೂ ಬದಲಾಗುವುದಿಲ್ಲವೆಂಬುದು ಆಶ್ವಾಸನಾದಾಯಕವಾಗಿದೆ. ನಾವಿಂದು ಜೀವಿಸುತ್ತಿರುವ ಕೋಲಾಹಲಭರಿತ ಸಮಯಗಳಲ್ಲಿ, ಯೆಹೋವನು ಸ್ಥಿರತೆಯ ಬಂಡೆಯಂತಿದ್ದು, ನಿತ್ಯಕ್ಕೂ ಅಸ್ತಿತ್ವದಲ್ಲಿರುವವನಾಗಿದ್ದಾನೆ. (ಕೀರ್ತನೆ 90:2) “ಯೆಹೋವನಾದ ನಾನು ಮಾರ್ಪಟ್ಟಿಲ್ಲ” ಎಂದು ಆತನು ತನ್ನ ಬಗ್ಗೆ ಹೇಳಿದ್ದಾನೆ. (ಮಲಾಕಿಯ 3:6) ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೇವರ ಮಟ್ಟಗಳು ಸಂಪೂರ್ಣವಾಗಿ ಭರವಸಾರ್ಹವಾಗಿವೆ. ಅವು ಸತತವಾಗಿ ಬದಲಾಗುತ್ತಾ ಇರುವ ಮನುಷ್ಯನ ವಿಚಾರಗಳಂತಿರುವುದಿಲ್ಲ. (ಯಾಕೋಬ 1:17) ಉದಾಹರಣೆಗಾಗಿ, ಅನೇಕ ವರ್ಷಗಳಿಂದ ಮನಶ್ಶಾಸ್ತ್ರಜ್ಞರು ಮಕ್ಕಳನ್ನು ತುಂಬ ಸ್ವಾತಂತ್ರ್ಯ ಕೊಟ್ಟು ಬೆಳೆಸಬೇಕು ಎಂಬ ವಿಚಾರವನ್ನು ಪ್ರವರ್ಧಿಸುತ್ತಿದ್ದರು. ಆದರೆ ಅನಂತರ ಕೆಲವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ, ತಾವು ಕೊಟ್ಟ ಬುದ್ಧಿವಾದವು ತಪ್ಪಾಗಿತ್ತೆಂಬುದನ್ನು ಒಪ್ಪಿಕೊಂಡರು. ಈ ವಿಷಯದ ಮೇಲೆ ಲೋಕದ ಮಟ್ಟಗಳು ಮತ್ತು ನಿರ್ದೇಶನಸೂತ್ರಗಳು, ಗಾಳಿಯಿಂದ ದೂಡಲ್ಪಡುತ್ತಾ ಇರುವಂತೆ ಹಿಂದೆ ಮುಂದೆ ತೂಗಾಡುತ್ತಾ ಇರುತ್ತವೆ. ಆದರೆ ಯೆಹೋವನ ವಾಕ್ಯವಾದರೊ ಅಚಲವಾಗಿದೆ. ಮಕ್ಕಳನ್ನು ಪ್ರೀತಿಯಿಂದ ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಬೈಬಲ್ ಅನೇಕ ಶತಮಾನಗಳಿಂದ ಸಲಹೆಯನ್ನು ಒದಗಿಸಿದೆ. ಅಪೊಸ್ತಲ ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.” (ಎಫೆಸ 6:4) ನಾವು ಯೆಹೋವನ ಮಟ್ಟಗಳ ಮೇಲೆ ಆತುಕೊಳ್ಳಬಹುದು, ಅವು ಎಂದಿಗೂ ಬದಲಾಗವು ಎಂಬ ಅರಿವು ನಮಗೆ ಎಷ್ಟು ಪುನರಾಶ್ವಾಸನಾದಾಯಕವಾಗಿದೆ!
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 6/1 ಪುಟ 11 ಪ್ಯಾರ 6
ಕೀರ್ತನೆ ಪುಸ್ತಕದ ದ್ವಿತೀಯ ಭಾಗದ ಮುಖ್ಯಾಂಶಗಳು
62:11. ಯೆಹೋವನು ಸರ್ವಾಧಿಕಾರಿ ಇಲ್ಲವೆ ಸರ್ವಬಲವನ್ನು ಹೊಂದಿರುವವನು. ಆತನು ಬಲಕ್ಕಾಗಿ ಬಾಹ್ಯ ಮೂಲಗಳತ್ತ ನೋಡಬೇಕಾಗಿಲ್ಲ. ಆತನೇ ಶಕ್ತಿಯ ಮೂಲನಾಗಿದ್ದಾನೆ.
ಜುಲೈ 15-21
ಬೈಬಲಿನಲ್ಲಿರುವ ನಿಧಿ | ಕೀರ್ತನೆ 63-65
“ನಿನ್ನ ಶಾಶ್ವತ ಪ್ರೀತಿ ಜೀವಕ್ಕಿಂತ ಅಮೂಲ್ಯ”
ಕಾವಲಿನಬುರುಜು01 10/15 ಪುಟ 15-16 ಪ್ಯಾರ 17-18
ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸುವವರಾರು?
17 ದೇವರ ಪ್ರೀತಿಯು ನಿಮಗೆಷ್ಟು ಮಹತ್ವಪೂರ್ಣವಾಗಿದೆ? “ನಿನ್ನ ಪ್ರೇಮಾನುಭವವು [“ಪ್ರೀತಿದಯೆಯು,” NW] ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವದು. ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು” ಎಂದು ಬರೆದಂಥ ದಾವೀದನಂತೆ ನಿಮಗನಿಸುತ್ತದೊ? (ಕೀರ್ತನೆ 63:3, 4) ಈ ಲೋಕದಲ್ಲಿನ ಜೀವನವು, ದೇವರ ಪ್ರೀತಿ ಮತ್ತು ನಿಷ್ಠಾವಂತ ಸ್ನೇಹವನ್ನು ಅನುಭವಿಸುವುದಕ್ಕಿಂತಲೂ ಹೆಚ್ಚು ಉತ್ತಮವಾದದ್ದೇನನ್ನಾದರೂ ನೀಡಬಲ್ಲದೊ? ಉದಾಹರಣೆಗಾಗಿ, ಒಂದು ಲಾಭಕರ ಐಹಿಕ ಜೀವನವೃತ್ತಿಯನ್ನು ಬೆನ್ನಟ್ಟಿಕೊಂಡು ಹೋಗುವುದು, ದೇವರೊಂದಿಗಿನ ಒಂದು ಆಪ್ತ ಸಂಬಂಧದಿಂದ ಫಲಿಸುವ ಮನಶ್ಶಾಂತಿ ಮತ್ತು ಸಂತೋಷಕ್ಕಿಂತಲೂ ಹೆಚ್ಚು ಉತ್ತಮವಾಗಿದೆಯೊ? (ಲೂಕ 12:15) ಕೆಲವು ಕ್ರೈಸ್ತರ ಮುಂದೆ, ಯೆಹೋವನನ್ನು ತ್ಯಜಿಸಿಬಿಡುವ ಇಲ್ಲವೇ ಮರಣವನ್ನು ಎದುರಿಸುವ ಆಯ್ಕೆಯನ್ನು ಇಡಲಾಯಿತು. II ನೆಯ ಲೋಕ ಯುದ್ಧದ ಸಮಯದಲ್ಲಿ ನಾಸಿ ಸೆರೆ ಶಿಬಿರಗಳಲ್ಲಿದ್ದ ಅನೇಕ ಯೆಹೋವನ ಸಾಕ್ಷಿಗಳಿಗೆ ಹೀಗಾಯಿತು. ಕೆಲವು ವ್ಯಕ್ತಿಗಳನ್ನು ಬಿಟ್ಟರೆ, ನಮ್ಮ ಬೇರೆಲ್ಲ ಕ್ರೈಸ್ತ ಸಹೋದರರು ದೇವರ ಪ್ರೀತಿಯಲ್ಲಿ ಉಳಿಯುವ ಆಯ್ಕೆಯನ್ನು ಮಾಡಿದರು, ಮತ್ತು ಇದಕ್ಕಾಗಿ ಅಗತ್ಯವಿರುವಲ್ಲಿ ಅವರು ಮರಣವನ್ನು ಎದುರಿಸಲೂ ಸಿದ್ಧರಿದ್ದರು. ಆತನ ಪ್ರೀತಿಯಲ್ಲಿ ನಿಷ್ಠೆಯಿಂದ ಉಳಿಯುವವರು, ದೇವರಿಂದ ಒಂದು ನಿತ್ಯ ಭವಿಷ್ಯತ್ತನ್ನು ಪಡೆಯುವರೆಂಬ ಭರವಸೆಯಿಂದಿರಬಲ್ಲರು. ಇದು ಲೋಕವು ನಮಗೆ ಕೊಡಲಾರದ ಒಂದು ವಿಷಯವಾಗಿದೆ. (ಮಾರ್ಕ 8:34-36) ಆದರೆ ನಿತ್ಯ ಜೀವವನ್ನು ಪಡೆಯುವುದಕ್ಕಿಂತಲೂ ಹೆಚ್ಚಿನ ಸಂಗತಿಯು ಇದರಲ್ಲಿ ಒಳಗೂಡಿದೆ.
18 ಯೆಹೋವನಿಲ್ಲದೆ ಸದಾಕಾಲ ಜೀವಿಸುವುದು ಅಸಾಧ್ಯವಾಗಿರುವುದಾದರೂ, ನಮ್ಮ ಸೃಷ್ಟಿಕರ್ತನಿಲ್ಲದೆ ತುಂಬ ದೀರ್ಘವಾದ ಜೀವಿತವನ್ನು ನಡೆಸುವುದು ಹೇಗಿರಬಹುದೆಂಬುದನ್ನು ಸ್ವಲ್ಪ ಊಹಿಸಿ ನೋಡಿ. ನಿಜವಾದ ಉದ್ದೇಶವಿಲ್ಲದೆ ಅದು ಬರಿದಾಗಿರುವುದು. ಯೆಹೋವನು ತನ್ನ ಜನರಿಗೆ, ಈ ಕಡೇ ದಿವಸಗಳಲ್ಲಿ ಮಾಡಲಿಕ್ಕಾಗಿ ತೃಪ್ತಿದಾಯಕ ಕೆಲಸವನ್ನು ಕೊಟ್ಟಿದ್ದಾನೆ. ಆದುದರಿಂದ, ಮಹಾ ಉದ್ದೇಶಕರ್ತನಾಗಿರುವ ಯೆಹೋವನು ನಿತ್ಯ ಜೀವವನ್ನು ಕೊಡುವಾಗ, ಅದು ಕಲಿಯಲು ಮತ್ತು ಮಾಡಲು ಅತ್ಯಾಶ್ಚರ್ಯಕರವಾದ ಹಾಗೂ ಪ್ರಯೋಜನಾರ್ಹವಾದ ಕೆಲಸಗಳಿಂದ ತುಂಬಿರುವುದೆಂಬ ಭರವಸೆ ನಮಗಿರಬಲ್ಲದು. (ಪ್ರಸಂಗಿ 3:11) ಮುಂದಿನ ಸಹಸ್ರಮಾನಗಳಲ್ಲಿ ನಾವು ಎಷ್ಟೇ ಕಲಿತರೂ, ‘ದೇವರ ಐಶ್ವರ್ಯ, ಜ್ಞಾನ, ವಿವೇಕದ ಆಗಾಧತೆಯನ್ನು’ ನಾವು ಎಂದಿಗೂ ಪೂರ್ಣವಾಗಿ ಗ್ರಹಿಸಲಾರೆವು!—ರೋಮಾಪುರ 11:33.
ಕಾವಲಿನಬುರುಜು19.12 ಪುಟ 28 ಪ್ಯಾರ 4
“ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ”
ಬೇರೆ ಎಲ್ಲರಿಗಿಂತಲೂ ಯೆಹೋವನಿಗೆ ಕೃತಜ್ಞರಾಗಿರೋದು ತುಂಬ ಮುಖ್ಯ. ಯಾಕೆಂದರೆ ಆತನು ನಮಗಾಗಿ ಅನೇಕ ಒಳ್ಳೇ ವಿಷಯಗಳನ್ನು ಕೊಟ್ಟಿದ್ದಾನೆ, ಕೊಡುತ್ತಿದ್ದಾನೆ ಮತ್ತು ಮುಂದಕ್ಕೂ ಕೊಡುತ್ತಾನೆ. (ಧರ್ಮೋ. 8:17, 18; ಅ. ಕಾ. 14:17) ಇದರ ಬಗ್ಗೆ ಒಂದು ಕ್ಷಣ ಯೋಚಿಸಿ ಮರೆತು ಬಿಡಬಾರದು. ಬದಲಿಗೆ ಆತನು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಏನೆಲ್ಲಾ ಒಳ್ಳೇದನ್ನ ಮಾಡಿದ್ದಾನೆ ಅಂತ ಯೋಚಿಸೋಕೆ ಸಮಯ ಮಾಡ್ಕೋಬೇಕು. ಇದರಿಂದ ಆತನ ಮೇಲಿನ ಕೃತಜ್ಞತಾಭಾವ ಹೆಚ್ಚುತ್ತೆ. ಮಾತ್ರವಲ್ಲ, ಆತನು ನಮ್ಮನ್ನ ಪ್ರೀತಿಸುತ್ತಿದ್ದಾನೆ, ಮಾನ್ಯ ಮಾಡುತ್ತಿದ್ದಾನೆ ಅನ್ನೋದು ಖಚಿತವಾಗುತ್ತೆ.—1 ಯೋಹಾ. 4:9
ಕಾವಲಿನಬುರುಜು15 10/15 ಪುಟ 24 ಪ್ಯಾರ 7
ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇರಿ
7 ನಾವು ಅಧ್ಯಯನ ಮಾಡುವ ವಿಷಯಕ್ಕೆ ಪೂರ್ತಿ ಗಮನಕೊಡಲು, ಧ್ಯಾನಿಸಲು ತುಂಬ ಪ್ರಯತ್ನ ಹಾಕಬೇಕಾಗುತ್ತದೆ. ಆದ್ದರಿಂದಲೇ ನಿಮಗೆ ಸುಸ್ತಾಗಿರದ ಸಮಯದಲ್ಲಿ, ಸದ್ದುಗದ್ದಲ ಹಾಗೂ ಯಾವುದೇ ಅಪಕರ್ಷಣೆ ಇಲ್ಲದ ಜಾಗದಲ್ಲಿ ಧ್ಯಾನಿಸುವುದು ಉತ್ತಮ. ಕೀರ್ತನೆಗಾರ ದಾವೀದನು, ರಾತ್ರಿ ಹಾಸಿಗೆಯಲ್ಲಿ ಎಚ್ಚರವಿದ್ದಾಗ ಧ್ಯಾನಿಸುತ್ತಿದ್ದನು. (ಕೀರ್ತ. 63:6) ಪರಿಪೂರ್ಣ ಮನುಷ್ಯನಾದ ಯೇಸು ಸಹ ಧ್ಯಾನಿಸಲು ಮತ್ತು ಪ್ರಾರ್ಥಿಸಲು ಪ್ರಶಾಂತ ಸ್ಥಳಗಳನ್ನು ಆರಿಸಿಕೊಂಡನು.—ಲೂಕ 6:12.
ಕಾವಲಿನಬುರುಜು09 7/15 ಪುಟ 16 ಪ್ಯಾರ 6
ಯೇಸುವನ್ನು ಅನುಕರಿಸುತ್ತಾ ಪ್ರೀತಿಯಿಂದ ಬೋಧಿಸಿರಿ
6 ನಮಗೆ ತುಂಬ ಇಷ್ಟವಾಗುವಂಥ ವಿಷಯಗಳ ಬಗ್ಗೆ ಮಾತಾಡಲು ಬಹಳ ಖುಷಿಯಾಗುತ್ತದೆ. ಅಂತಹ ವಿಷಯಗಳ ಕುರಿತು ಮಾತಾಡುವಾಗ ನಮ್ಮಲ್ಲಿ ಕಳೆತುಂಬಿ ಉತ್ಸಾಹ ಮತ್ತು ಲವಲವಿಕೆ ತೋರಿಬರುತ್ತದೆ. ನಮಗೆ ಯಾರ ಮೇಲೆ ಪ್ರೀತಿಯಿದೆಯೋ ಅಂಥವರ ಬಗ್ಗೆ ಮಾತಾಡುವಾಗಲಂತೂ ಇದು ಸತ್ಯ. ಸಾಮಾನ್ಯವಾಗಿ, ಆ ವ್ಯಕ್ತಿಯ ಕುರಿತು ನಮಗೇನು ಗೊತ್ತಿದೆಯೋ ಅದನ್ನು ಇತರರಿಗೆ ತಿಳಿಸುವ ಅವಕಾಶಕ್ಕಾಗಿ ಕಾಯುತ್ತಿರುತ್ತೇವೆ. ನಾವು ಆ ವ್ಯಕ್ತಿಯ ಗುಣಗಾನ ಮಾಡುತ್ತೇವೆ, ಅವರನ್ನು ಗೌರವಿಸುತ್ತೇವೆ ಮತ್ತು ಅವರ ಪರವಹಿಸಿ ಮಾತಾಡುತ್ತೇವೆ. ಇತರರು ಕೂಡ ನಮ್ಮಂತೆಯೇ ಆ ವ್ಯಕ್ತಿಯ ಕಡೆಗೆ ಹಾಗೂ ಆತನ ಗುಣಗಳೆಡೆಗೆ ಆಕರ್ಷಿತರಾಗಬೇಕೆಂದು ನಾವು ಬಯಸುವುದರಿಂದಲೇ ಹೀಗೆ ಮಾಡುತ್ತೇವೆ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು 07-E 11/15 ಪುಟ 15 ಪ್ಯಾರ 6
ನಿಮ್ಮ ಮಾತು ಪ್ರೋತ್ಸಾಹ ಕೊಡೋ ತರ ಇದೆಯಾ?
ಒಂದು ಕಟ್ಟಡವನ್ನ ಕಟ್ಟೋದು ಕಷ್ಟ, ಆದರೆ ಕೆಡವೋದು ತುಂಬ ಸುಲಭ. ನಮ್ಮ ಮಾತಿನ ವಿಷಯದಲ್ಲೂ ಇದು ಸತ್ಯ. ನಾವೆಲ್ಲರೂ ಅಪರಿಪೂರ್ಣರಾಗಿರೋದ್ರಿಂದ ಒಂದಲ್ಲ ಒಂದು ತಪ್ಪು ಮಾಡ್ತೀವಿ. ಅದಕ್ಕೆ ರಾಜ ಸೊಲೊಮೋನ “ಯಾವಾಗ್ಲೂ ಒಳ್ಳೇದನ್ನೇ ಮಾಡ್ತಾ ಪಾಪನೇ ಮಾಡದಿರೋ ನೀತಿವಂತ ಭೂಮಿ ಮೇಲೆ ಯಾರೂ ಇಲ್ಲ” ಅಂತ ಹೇಳಿದ. (ಪ್ರಸಂಗಿ 7:20) ಬೇರೆಯವರ ತಪ್ಪುಗಳನ್ನ ಹುಡುಕಿ ಅವರಿಗೆ ನೋವಾಗೋ ತರ ಮಾತಾಡೋದು ತುಂಬ ಸುಲಭ. (ಕೀರ್ತನೆ 64:2-4) ಆದ್ರೆ ಅವರಿಗೆ ಪ್ರೋತ್ಸಾಹ ಕೊಡೋ ರೀತಿಯಲ್ಲಿ ಮಾತಾಡಬೇಕಾದರೆ ತುಂಬ ಪ್ರಯತ್ನ ಮಾಡಬೇಕು. ನಿಜಕ್ಕೂ ಅದೊಂದು ಕಲೆ.
ಜುಲೈ 22-28
ಬೈಬಲಿನಲ್ಲಿರುವ ನಿಧಿ | ಕೀರ್ತನೆ 66-68
ಯೆಹೋವ ನಮ್ಮ ಭಾರವನ್ನ ಹೊತ್ಕೊಳ್ತಾನೆ
ಕಾವಲಿನಬುರುಜು23.05 ಪುಟ 12 ಪ್ಯಾರ 15
ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆ ಉತ್ರ ಕೊಡ್ತಾನೆ?
15 ಯೆಹೋವ ದೇವರು ನಾವು ಬೇಡ್ಕೊಂಡಿದ್ದನ್ನ ನಮ್ಮ ಕಣ್ಮುಂದೆನೇ ನಡೆಯೋ ತರ ಮಾಡಿ ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ ಅಂತ ಹೇಳಕ್ಕಾಗಲ್ಲ. ಆದ್ರೆ ನಾವು ಆತನಿಗೆ ನಿಯತ್ತಾಗಿ ಇರೋಕೆ ಏನು ಸಹಾಯ ಬೇಕೋ ಅದನ್ನ ಮಾಡೇ ಮಾಡ್ತಾನೆ. ಹಾಗಾಗಿ ಆತನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ರ ಕೊಡ್ತಾನೆ ಅಂತ ತಿಳ್ಕೊಳ್ಳೋಕೆ ಪ್ರಯತ್ನ ಮಾಡಬೇಕು. ಸಹೋದರಿ ಯೋಕೋ ಇದನ್ನೇ ಮಾಡಿದ್ರು. ಅವ್ರ ಪ್ರಾರ್ಥನೆಗಳಿಗೆ ಯೆಹೋವ ಉತ್ರ ಕೊಡ್ತಿಲ್ಲ ಅಂತ ಅನಿಸ್ತಿತ್ತು. ಹಾಗಾಗಿ ಅವರು ಯೆಹೋವನ ಹತ್ರ ಪ್ರಾರ್ಥನೆಯಲ್ಲಿ ಏನೆಲ್ಲ ಕೇಳ್ತಿದ್ರೋ ಅದನ್ನ ಒಂದು ಪುಸ್ತಕದಲ್ಲಿ ಬರೆದಿಡೋಕೆ ಶುರು ಮಾಡಿದ್ರು. ಸ್ವಲ್ಪ ದಿನ ಆದ್ಮೇಲೆ ಆ ಪುಸ್ತಕವನ್ನ ತೆರೆದು ನೋಡಿದ್ರು. ಆಗ ಅವ್ರಿಗೆ ಅವರು ಮಾಡಿದ ಎಲ್ಲಾ ಪ್ರಾರ್ಥನೆಗೆ ಉತ್ರ ಸಿಕ್ಕಿದೆ ಅಂತ ಗೊತ್ತಾಯ್ತು. ಅಷ್ಟೇ ಅಲ್ಲ, ಪುಸ್ತಕದಲ್ಲಿ ಬರೆಯೋಕೆ ಮರೆತುಹೋದ ವಿಷ್ಯಗಳಿಗೂ ಯೆಹೋವ ಉತ್ರ ಕೊಟ್ಟಿದ್ದಾನೆ ಅಂತ ಗೊತ್ತಾಯ್ತು. ನಾವು ಕೂಡ ಈ ಸಹೋದರಿ ತರಾನೇ ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆಲ್ಲ ಉತ್ರ ಕೊಟ್ಟಿದ್ದಾನೆ ಅಂತ ಆಗಾಗ ಯೋಚ್ನೆ ಮಾಡೋದು ಒಳ್ಳೇದು.—ಕೀರ್ತ. 66:19, 20.
ಕಾವಲಿನಬುರುಜು11 4/1 ಪುಟ 31 ಪ್ಯಾರ 5
ಒಂಟಿ ಹೆತ್ತವರಿಗೆ ಗಮನಕೊಡಿ
ಯೆಹೋವನ ಪ್ರೇರಣೆಯಿಂದ ಕೀರ್ತನೆಗಳನ್ನು ಅಂದರೆ ಪವಿತ್ರ ಗೀತೆಗಳನ್ನು ಬರೆಯಲಾಯಿತು. ಈ ಗೀತೆಗಳನ್ನು ಇಸ್ರಾಯೇಲ್ಯರು ಆರಾಧನಾ ಸಂದರ್ಭಗಳಲ್ಲಿ ಹಾಡುತ್ತಿದ್ದರು. ದಿಕ್ಕಿಲ್ಲದವರಿಗೂ ವಿಧವೆಯರಿಗೂ ಯೆಹೋವನು ತಂದೆಯೆಂದೂ ಸಹಾಯಕನೆಂದೂ ಆತನೇ ಪರಿಹಾರ ಕೊಡುವವನೆಂದೂ ಹೇಳುವ ಮಾತುಗಳು ಆ ಗೀತೆಗಳಲ್ಲಿದ್ದವು. ಈ ದೇವಪ್ರೇರಿತ ಗೀತೆಗಳನ್ನು ಹಾಡುವಾಗ ಇಸ್ರಾಯೇಲ್ಯ ವಿಧವೆಯರಿಗೂ ಅವರ ಮಕ್ಕಳಿಗೂ ಎಷ್ಟೊಂದು ಪ್ರೋತ್ಸಾಹ ಸಿಗುತ್ತಿತ್ತೆಂದು ಸ್ವಲ್ಪ ಊಹಿಸಿ! (ಕೀರ್ತನೆ 68:5; 146:9) ನಾವು ಸಹ ಒಂಟಿ ಹೆತ್ತವರಿಗೆ ಪ್ರೋತ್ಸಾಹನೀಯ ಮಾತುಗಳನ್ನಾಡಬಹುದು. ಆ ಮಾತುಗಳು ಹಲವಾರು ವರ್ಷಗಳ ವರೆಗೆ ಅವರ ನೆನಪಿನಲ್ಲಿ ಉಳಿಯುವವು. “ನಿನ್ನ ಇಬ್ಬರು ಹುಡುಗರನ್ನು ಚೆನ್ನಾಗಿ ಬೆಳೆಸುತ್ತಿರುವಿ. ತುಂಬ ಒಳ್ಳೇದು!” ಎಂದು 20 ವರ್ಷಗಳ ಹಿಂದೆ ಒಬ್ಬ ಅನುಭವಸ್ಥ ತಂದೆಯು ರೂತ್ ಎಂಬ ಒಂಟಿ ಹೆತ್ತವಳಿಗೆ ಹೇಳಿದ್ದನ್ನು ಆಕೆ ಈಗಲೂ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತಾಳೆ. “ಅವರ ಬಾಯಿಂದ ಆ ಮಾತುಗಳನ್ನು ಕೇಳಿ ನನಗಾದ ಸಂತೋಷ ಅಷ್ಟಿಷ್ಟಲ್ಲ” ಎನ್ನುತ್ತಾಳೆ ರೂತ್. ಹೌದು, ‘ಕನಿಕರದ ಮಾತು ಮನಸ್ಸನ್ನು ಹಿಗ್ಗಿಸುವದು.’ ಅದು ಒಂಟಿ ಹೆತ್ತವರಿಗೆ ನಾವು ನೆನಸುವುದಕ್ಕಿಂತಲೂ ಎಷ್ಟೋ ಹೆಚ್ಚು ಪ್ರೋತ್ಸಾಹ ಕೊಡುತ್ತದೆ. (ಜ್ಞಾನೋಕ್ತಿ 12:25) ಒಂಟಿ ಹೆತ್ತವರೊಬ್ಬರನ್ನು ಶ್ಲಾಘಿಸಲಿಕ್ಕಾಗಿ ಯಥಾರ್ಥವೂ ನಿರ್ದಿಷ್ಟವೂ ಆದ ವಿಷಯವೊಂದರ ಕುರಿತು ಯೋಚಿಸಬಲ್ಲಿರೋ?
ಕಾವಲಿನಬುರುಜು09 10/1 ಪುಟ 21 ಪ್ಯಾರ 1
ಅನಾಥ ಮಕ್ಕಳಿಗೆ ತಂದೆ
‘ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ [“ತಂದೆಯಿಲ್ಲದ ಹುಡುಗರಿಗೆ,” NW] ತಂದೆಯೂ ಆಗಿದ್ದಾನೆ.’ (ಕೀರ್ತನೆ 68:5) ಆ ಪ್ರೇರಿತ ಮಾತುಗಳು ದಿಕ್ಕಿಲ್ಲದವರ ಅಗತ್ಯತೆಗಳ ಕಡೆಗೆ ಯೆಹೋವ ದೇವರ ಸಂವೇದನಾಶೀಲತೆಯ ಕುರಿತು ಮನತಟ್ಟುವ ಪಾಠವನ್ನು ಕಲಿಸುತ್ತದೆ. ತಂದೆ ಅಥವಾ ತಾಯಿ ಇಲ್ಲದ ಮಕ್ಕಳ ಕಡೆಗೆ ಆತನಿಗಿರುವ ಚಿಂತೆಯು ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ತೋರಿಬಂದಿತ್ತು. “ತಂದೆಯಿಲ್ಲದ ಹುಡುಗನ” ವಿಷಯದಲ್ಲಿ ಬೈಬಲ್ ತಿಳಿಸಿದ ಮೊದಲ ಹೇಳಿಕೆಯನ್ನು ನಾವೀಗ ಪರೀಕ್ಷಿಸೋಣ. ಅದು ವಿಮೋಚನಕಾಂಡ 22:22-24ರಲ್ಲಿ ಕಂಡುಬರುತ್ತದೆ.
ಕಾವಲಿನಬುರುಜು23.01 ಪುಟ 19 ಪ್ಯಾರ 17
ಯೆಹೋವ ನಿಮ್ಮನ್ನ ಆಶೀರ್ವದಿಸ್ತಾ ಇದ್ದಾನೆ!
17 ಕೀರ್ತನೆ 40:5 ಓದಿ. ಬೆಟ್ಟ ಹತ್ತುವವರು ಅದರ ತುದಿಯನ್ನ ಮುಟ್ಟಬೇಕು ಅನ್ನೋ ಆಸೆಯಿಂದ ಅದನ್ನ ಹತ್ತುತ್ತಾರೆ. ಹತ್ತುವಾಗ ಮಧ್ಯಮಧ್ಯದಲ್ಲಿ ನಿಂತು ಪ್ರಕೃತಿ ಸೌಂದರ್ಯನ ಸವಿತಾರೆ. ಅದೇ ತರ ನೀವು ಕಷ್ಟ ಅನುಭವಿಸ್ತಾ ಇರುವಾಗಲೂ ಯೆಹೋವ ನಿಮ್ಮನ್ನ ಹೇಗೆ ಆಶೀರ್ವದಿಸ್ತಿದ್ದಾನೆ ಅನ್ನೋದನ್ನ ಸ್ವಲ್ಪ ನಿಂತು ಯೋಚನೆ ಮಾಡಿ. ಹಾಗಾಗಿ ಪ್ರತಿ ರಾತ್ರಿ ಮಲಗೋ ಮುಂಚೆ ‘ಇವತ್ತು ಯೆಹೋವ ನನಗೆ ಯಾವ ಆಶೀರ್ವಾದ ಕೊಟ್ಟನು? ನನ್ನ ಕಷ್ಟ ಪರಿಹಾರ ಆಗದೇ ಇದ್ರೂ ಅದನ್ನ ಸಹಿಸಿಕೊಳ್ಳೋಕೆ ಹೇಗೆ ಸಹಾಯ ಮಾಡ್ತಿದ್ದಾನೆ?’ ಅಂತ ಯೋಚನೆ ಮಾಡಿ. ಯೆಹೋವ ಖಂಡಿತ ನಿಮಗೆ ಏನಾದ್ರೂ ಒಂದು ಆಶೀರ್ವಾದ ಕೊಟ್ಟಿರುತ್ತಾನೆ. ಅದನ್ನ ಕಂಡುಹಿಡಿಯೋಕೆ ಪ್ರಯತ್ನ ಮಾಡಿ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 6/1 ಪುಟ 10 ಪ್ಯಾರ 4
ಕೀರ್ತನೆ ಪುಸ್ತಕದ ದ್ವಿತೀಯ ಭಾಗದ ಮುಖ್ಯಾಂಶಗಳು
68:18—“ಮನುಷ್ಯರಿಂದಲೇ ಕಪ್ಪಗಳನ್ನು” ಸಂಗ್ರಹಿಸಿದ್ದಿ ಎಂಬುದರ ಅರ್ಥವೇನು? ಮೂಲ ಗ್ರಂಥಪಾಠದಲ್ಲಿ ಈ ಅಭಿವ್ಯಕ್ತಿಯು ‘ಪುರುಷರ ರೂಪದಲ್ಲಿರುವ ದಾನಗಳು’ ಎಂದಾಗಿದೆ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ವಶಪಡಿಸಿಕೊಂಡಾಗ ಸೆರೆಹಿಡಿದ ಪುರುಷರಲ್ಲಿ ಇವರು ಕೆಲವರಾಗಿದ್ದರು. ಅನಂತರ ಇವರನ್ನು ಲೇವಿಯರಿಗೆ ಸಹಾಯಮಾಡುವಂತೆ ನೇಮಿಸಲಾಯಿತು.—ಎಜ್ರ 8:20.
ಜುಲೈ 29-ಆಗಸ್ಟ್ 4
ಬೈಬಲಿನಲ್ಲಿರುವ ನಿಧಿ | ಕೀರ್ತನೆ 69
69ನೇ ಕೀರ್ತನೆಯಲ್ಲಿರೋ ಮಾತುಗಳು ಯೇಸುವಿನ ಜೀವನದಲ್ಲಿ ಹೇಗೆ ನಿಜ ಆಯ್ತು?
ಕಾವಲಿನಬುರುಜು11 8/15 ಪುಟ 11 ಪ್ಯಾರ 17
ಮೆಸ್ಸೀಯನನ್ನು ಎದುರುನೋಡಿದರು
17 ಮೆಸ್ಸೀಯನನ್ನು ವಿನಾಕಾರಣ ದ್ವೇಷಿಸುವರು. (ಕೀರ್ತ. 69:4) ಅಪೊಸ್ತಲ ಯೋಹಾನನು ದಾಖಲಿಸಿದ ಯೇಸುವಿನ ಮಾತುಗಳನ್ನು ಗಮನಿಸಿ: “ಬೇರೆ ಯಾರೂ ಮಾಡದ ಕಾರ್ಯಗಳನ್ನು ನಾನು [ಜನರ] ಮಧ್ಯೆ ನಡಿಸದಿರುತ್ತಿದ್ದರೆ ಅವರಲ್ಲಿ ಯಾವುದೇ ಪಾಪವಿರುತ್ತಿರಲಿಲ್ಲ; ಈಗ ಅವರು ನನ್ನ ಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ. ಹೀಗೆ ‘ಯಾವುದೇ ಕಾರಣವಿಲ್ಲದೆ ಅವರು ನನ್ನನ್ನು ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಇದೆಲ್ಲವೂ ಆಯಿತು.” (ಯೋಹಾ. 15:24, 25) ಯೇಸುವನ್ನು ಜನರು ದ್ವೇಷಿಸಿದರೆಂದೂ ಅದರಲ್ಲೂ ಯೆಹೂದಿ ಧಾರ್ಮಿಕ ಮುಖಂಡರು ದ್ವೇಷದ ವಿಷ ಕಾರಿದರೆಂದೂ ಸುವಾರ್ತಾ ವೃತ್ತಾಂತಗಳು ಸಾಕ್ಷ್ಯ ಒದಗಿಸುತ್ತವೆ. ಮಾತ್ರವಲ್ಲ, “ನಿಮ್ಮನ್ನು ದ್ವೇಷಿಸಲು ಲೋಕಕ್ಕೆ ಯಾವುದೇ ಕಾರಣವಿಲ್ಲ, ಆದರೆ ಅದರ ಕೃತ್ಯಗಳು ಕೆಟ್ಟವುಗಳೆಂದು ನಾನು ಸಾಕ್ಷಿಕೊಡುವುದರಿಂದ ಅದು ನನ್ನನ್ನು ದ್ವೇಷಿಸುತ್ತದೆ” ಎಂದು ಕ್ರಿಸ್ತನು ಹೇಳಿದನು.—ಯೋಹಾ. 7:7.
ಕಾವಲಿನಬುರುಜು10 12/15 ಪುಟ 8 ಪ್ಯಾರ 7-8
ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ
7 ಯೇಸುವಿನ ಜೀವನದಲ್ಲಾದ ಒಂದು ಘಟನೆಯು ಅವನಿಗೆ ಎಂಥಾ ಹುರುಪಿತ್ತೆಂಬುದಕ್ಕೆ ಬಲವಾದ ಪುರಾವೆ ಕೊಟ್ಟಿತು. ಅದು ಯೇಸುವಿನ ಶುಶ್ರೂಷೆಯ ಆರಂಭದಲ್ಲಾಗಿತ್ತು ಅಂದರೆ ಕ್ರಿ.ಶ. 30ರ ಪಸ್ಕ ಹಬ್ಬದ ಸಮಯದಲ್ಲಿ. ಯೇಸು ಮತ್ತು ಅವನ ಶಿಷ್ಯರು ಯೆರೂಸಲೇಮಿನ ದೇವಾಲಯಕ್ಕೆ ಬಂದಿದ್ದರು. ಅವರು ಅಲ್ಲಿ “ಜಾನುವಾರು, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವವರನ್ನೂ ಹಣವಿನಿಮಯಗಾರರು ತಮ್ಮ ಆಸನಗಳಲ್ಲಿ ಕುಳಿತುಕೊಂಡಿರುವುದನ್ನೂ” ಕಂಡರು. ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಅದು ಅವನ ಶಿಷ್ಯರ ಮೇಲೆ ಯಾವ ಪರಿಣಾಮ ಬೀರಿತು?—ಯೋಹಾನ 2:13-17 ಓದಿ.
8 ಆ ಸಂದರ್ಭದಲ್ಲಿ ಯೇಸು ಮಾಡಿದ ಮತ್ತು ಹೇಳಿದ ವಿಷಯಗಳು, “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ” ಎಂಬ ದಾವೀದನ ಕೀರ್ತನೆಯೊಂದರ ಪ್ರವಾದನಾ ಮಾತುಗಳನ್ನು ಶಿಷ್ಯರ ಮನಸ್ಸಿಗೆ ತಂದವು. (ಕೀರ್ತ. 69:9) ಏಕೆ? ಏಕೆಂದರೆ ಅಲ್ಲಿ ಯೇಸು ಮಾಡಿದ ವಿಷಯವು ಅವನ ಜೀವವನ್ನು ಬಹುದೊಡ್ಡ ಅಪಾಯಕ್ಕೊಡ್ಡಿತ್ತು. ಎಷ್ಟೆಂದರೂ ಅಲ್ಲಿ ನಡೆಯುತ್ತಿದ್ದ ಹಣದೋಚುವ ಕುಟಿಲ ವ್ಯಾಪಾರದ ಹಿಂದಿದ್ದವರು ಆ ಆಲಯದ ಅಧಿಕಾರಿಗಳಾದ ಯಾಜಕರು, ಫರಿಸಾಯರು, ಮತ್ತಿತರರೇ. ಅವರ ವ್ಯಾಪಾರದ ಕುಟಿಲತನವನ್ನು ಬಯಲುಪಡಿಸಿ ತಡೆಯಲಿಕ್ಕಾಗಿ ಆಗಿನ ಧಾರ್ಮಿಕ ಮುಖಂಡರ ವಿರೋಧವನ್ನೇ ಯೇಸು ತಂದುಕೊಂಡನು. ಶಿಷ್ಯರು ಆ ಸನ್ನಿವೇಶವನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ದೇವರ “ಆಲಯಾಭಿಮಾನವು” ಅಂದರೆ ಸತ್ಯಾರಾಧನೆಗಾಗಿ ಅವನಿಗಿದ್ದ ಹುರುಪು ಅಲ್ಲಿ ಸ್ಪಷ್ಟವಾಗಿ ತೋರಿಬಂತು. ಹಾಗಾದರೆ ಹುರುಪು ಅಂದರೇನು? ಅದು ತುರ್ತಿಗಿಂತ ಬೇರೆಯೋ?
ಎಚ್ಚರ!-E 95 10/22 ಪುಟ 31 ಪ್ಯಾರ 4
ಭಾವನಾತ್ಮಕ ನೋವಿನಿಂದ ಒಬ್ಬ ವ್ಯಕ್ತಿ ಸಾಯ್ತಾನಾ?
ಕೀರ್ತನೆ 69:20ರಲ್ಲಿ “ಆರೋಪದಿಂದ ನನ್ನ ಹೃದಯ ಒಡೆದು ಹೋಗಿದೆ, ನನ್ನ ಈ ಗಾಯ ವಾಸಿನೇ ಆಗ್ತಾ ಇಲ್ಲ” ಅಂತ ಯೇಸುವಿನ ಸಾವಿನ ಬಗ್ಗೆ ಭವಿಷ್ಯವಾಣಿ ಹೇಳಲಾಗಿದೆ. ಇದ್ರ ಪ್ರಕಾರ ಯೇಸುವಿನ ಹೃದಯದಲ್ಲಾದ ಸಮಸ್ಯೆಯಿಂದ ಆತನು ತೀರಿ ಹೋದನು ಅನ್ನೋದು ಕೆಲವರ ನಂಬಿಕೆ. ಇದನ್ನ ನಂಬೋಕೆ ಕಾರಣವಿದೆ. ಯಾಕಂದ್ರೆ ಯೇಸು ಸಾಯೋ ಮುಂಚೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ತುಂಬ ನೋವನ್ನ ಅನುಭವಿಸಿದನು. (ಮತ್ತಾ 27:46; ಲೂಕ 22:44; ಇಬ್ರಿ 5:7) ಅಷ್ಟೇ ಅಲ್ಲ ಒಬ್ಬ ಸೈನಿಕ ಯೇಸುವಿನ ಪಕ್ಕೆಲುಬಿಗೆ ಚುಚ್ಚಿದಾಗ “ರಕ್ತ ಮತ್ತು ನೀರು” ಬಂದಿದ್ದು ಕೂಡ ಹೃದಯದಲ್ಲಾದ ಸಮಸ್ಯೆಯಿಂದನೇ ಆತನು ತೀರಿ ಹೋದ ಅನ್ನೋದಕ್ಕೆ ಇದು ಇನ್ನೊಂದು ಕಾರಣ. ಸಾಮಾನ್ಯವಾಗಿ ಹೃದಯ ಮತ್ತು ಪ್ರಮುಖ ರಕ್ತನಾಳ ಒಡೆದು ಹೋದರೆ ಹೃದಯದ ಸುತ್ತ ಇರೋ ಪೊರೆ (ಪೆರಿಕಾರ್ಡಿಯಮ್) ಅಥವಾ ಎದೆಯ ಒಳಗೆ ರಕ್ತಸ್ರಾವ ಆಗುತ್ತೆ. ಆ ಜಾಗದಲ್ಲಿ ಚುಚ್ಚಿದಾಗ ರಕ್ತ ಮತ್ತು ನೀರಿನ ತರ ಇರೋ ದ್ರವ ಹೊರಕ್ಕೆ ಬರುತ್ತೆ. —ಯೋಹಾನ 19:34.
it-2-E ಪುಟ 650
ವಿಷಕಾರಿ ಗಿಡ
ಕೀರ್ತನೆ 69:21ರಲ್ಲಿ “ಊಟದ ಬದಲಾಗಿ ವಿಷ” ಕೊಡ್ತಾರೆ ಅಂತ ಮೆಸ್ಸೀಯನ ಬಗ್ಗೆ ಭವಿಷ್ಯವಾಣಿ ಹೇಳಲಾಗಿತ್ತು. (ಕೀರ್ತ 69:21) ಯೇಸುವನ್ನ ಕಂಬಕ್ಕೆ ಹಾಕೋದಕ್ಕಿಂತ ಮುಂಚೆ ಆತನಿಗೆ ಕಹಿರಸ ಸೇರಿಸಿದ ದ್ರಾಕ್ಷಾಮದ್ಯವನ್ನ ಕೊಟ್ಟಾಗ ಈ ಭವಿಷ್ಯವಾಣಿ ನಿಜ ಆಯ್ತು. ಈ ದ್ರಾಕ್ಷಾಮದ್ಯದಿಂದ ಮತ್ತು ಬರ್ತಿತ್ತು, ಅದನ್ನ ಕುಡಿದ್ರೆ ನೋವು ಗೊತ್ತಾಗಲ್ಲ ಅಂತ ತಿಳಿದಿದ್ರೂ ಯೇಸು ಅದನ್ನ ಬೇಡ ಅಂದನು.
ಯೇಸುಗೆ ಕೊಟ್ಟ ಕಹಿರಸ ಸೇರಿಸಿದ ದ್ರಾಕ್ಷಾಮದ್ಯದ ಬಗ್ಗೆ ಮತ್ತಾಯ ಹೇಳುವಾಗ ಕೀರ್ತನೆ 69:21ರಲ್ಲಿ ಹೇಳಿರೋದಕ್ಕೆ ಹೊಂದಿಕೆಯಲ್ಲಿರೋ ಗ್ರೀಕ್ ಪದವನ್ನ ಉಪಯೋಗಿಸಿದ್ದಾನೆ. ಮಾರ್ಕ ಇದ್ರ ಬಗ್ಗೆ ಹೇಳೋವಾಗ “ಗಂಧರಸ” ಅಂತ ಹೇಳಿದ್ದಾನೆ. ಹಾಗಾಗಿ ಕೀರ್ತನೆ 69:21ರಲ್ಲಿ ಹೇಳಿರೋ ವಿಷಕಾರಿ ಗಿಡ ಕಹಿರಸ ಅಥವಾ ಗಂಧರಸ ಆಗಿದ್ದಿರಬಹುದು. (ಮತ್ತ 27:34; ಮಾರ್ಕ 15:23) ಅಥವಾ ಈ ಮದ್ಯದಲ್ಲಿ ಕಹಿರಸ ಮತ್ತು ಗಂಧರಸ ಎರಡೂ ಇದ್ದಿರಬಹುದು.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು99 1/15 ಪುಟ 18 ಪ್ಯಾರ 11
ನಿಷ್ಠಾವಂತ ಕೈಗಳನ್ನೆತ್ತಿ ಪ್ರಾರ್ಥಿಸಿರಿ
11 ಇಂದು ಅನೇಕ ಜನರು ತಮಗೆ ಏನಾದರೂ ಅಗತ್ಯವಿದ್ದಾಗ ಮಾತ್ರ ಪ್ರಾರ್ಥನೆ ಮಾಡುತ್ತಾರೆ. ಆದರೆ ನಾವು, ಯೆಹೋವ ದೇವರಿಗಾಗಿರುವ ನಮ್ಮ ಪ್ರೀತಿಯಿಂದಾಗಿ ಆತನಿಗೆ ಖಾಸಗಿ ಹಾಗೂ ಸಾರ್ವಜನಿಕ ಪ್ರಾರ್ಥನೆಯಲ್ಲಿ ಉಪಕಾರಸ್ತುತಿಗಳನ್ನು ಕೊಡುವಂತೆ ಪ್ರಚೋದಿಸಲ್ಪಡಬೇಕು. “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೌದು, ವಿಜ್ಞಾಪನೆಗಳು ಮತ್ತು ಬೇಡಿಕೆಗಳೊಂದಿಗೆ, ನಾವು ಆತ್ಮಿಕ ಮತ್ತು ಭೌತಿಕ ಆಶೀರ್ವಾದಗಳಿಗಾಗಿ ಯೆಹೋವನಿಗೆ ಉಪಕಾರವನ್ನು ಸಲ್ಲಿಸಬೇಕು. (ಜ್ಞಾನೋಕ್ತಿ 10:22) ಕೀರ್ತನೆಗಾರನು ಹಾಡಿದ್ದು: “ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; ಮಾಡಿದ ಹರಕೆಗಳನ್ನು ಪರಾತ್ಪರನಿಗೆ ಸಲ್ಲಿಸಿರಿ.” (ಕೀರ್ತನೆ 50:14) ಮತ್ತು ದಾವೀದನು ಮಾಡಿದಂತಹ ಒಂದು ಪ್ರಾರ್ಥನಾಪೂರ್ವಕ ಸಂಗೀತದಲ್ಲಿ ಈ ಮನತಟ್ಟುವ ಮಾತುಗಳಿದ್ದವು: “ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು.” (ಕೀರ್ತನೆ 69:30) ಸಾರ್ವಜನಿಕ ಮತ್ತು ಖಾಸಗಿ ಪ್ರಾರ್ಥನೆಯಲ್ಲಿ ನಾವು ಸಹ ಅದನ್ನೇ ಮಾಡಬೇಕಲ್ಲವೇ?
ಆಗಸ್ಟ್ 5-11
ಬೈಬಲಿನಲ್ಲಿರುವ ನಿಧಿ | ಕೀರ್ತನೆ 70-72
ದೇವರ ಶಕ್ತಿ ಬಗ್ಗೆ “ಮುಂದಿನ ಪೀಳಿಗೆಗೆ” ಹೇಳಿ
ಕಾವಲಿನಬುರುಜು99 9/1 ಪುಟ 18 ಪ್ಯಾರ 17
ಯುವ ಜನರೇ—ನಿಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಿರಿ!
17 ಸೈತಾನನ ಪಾಶಗಳಿಂದ ದೂರವಿರಲು ನೀವು ಸದಾ ಜಾಗೃತರಾಗಿರುವ ಅಗತ್ಯವಿದೆ. ಕೆಲವೊಮ್ಮೆ ಇದು ಬಹಳಷ್ಟು ಧೈರ್ಯವನ್ನೂ ಕೇಳಿಕೊಳ್ಳಬಹುದು. ಕೆಲವೊಮ್ಮೆ ನೀವು ಸಮವಯಸ್ಕರಿಗೆ ಮಾತ್ರವಲ್ಲ, ಇಡೀ ಲೋಕಕ್ಕೆ ಎದುರಾಗಿರಬಹುದು. ಕೀರ್ತನೆಗಾರನಾದ ದಾವೀದನು ಪ್ರಾರ್ಥಿಸಿದ್ದು: “ಕರ್ತನೇ ಯೆಹೋವನೇ, ಬಾಲ್ಯಾರಭ್ಯ [“ಯುವಪ್ರಾಯದಿಂದ,” NW] ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ? ದೇವರೇ, ನೀನು ಬಾಲ್ಯಾರಭ್ಯ [“ಯುವಪ್ರಾಯದಿಂದ,” NW] ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.” (ಕೀರ್ತನೆ 71:5, 17) ದಾವೀದನು ತನ್ನ ಧೈರ್ಯಕ್ಕಾಗಿ ಸುಪ್ರಸಿದ್ಧನಾಗಿದ್ದನು. ಅದನ್ನು ಅವನು ಯಾವಾಗ ಬೆಳೆಸಿಕೊಂಡನು? ಯುವಕನಾಗಿರುವಾಗಲೇ! ಗೊಲ್ಯಾತನ ವಿರುದ್ಧ ನಡೆದ ಆ ಸುಪ್ರಸಿದ್ಧ ಘಟನೆಗೂ ಮುಂಚಿತವಾಗಿ, ದಾವೀದನು ತನ್ನ ತಂದೆಯ ಹಿಂಡನ್ನು ಸಂರಕ್ಷಿಸುತ್ತಾ ಒಂದು ಸಿಂಹವನ್ನು ಹಾಗೂ ಕರಡಿಯನ್ನು ಕೊಂದಾಗ, ಅಸಾಧಾರಣವಾದ ಧೈರ್ಯವನ್ನು ತೋರಿಸಿದ್ದನು. (1 ಸಮುವೇಲ 17:34-37) ಆದರೂ, ದಾವೀದನು ತನ್ನ ಧೈರ್ಯಕ್ಕಾಗಿ ಯೆಹೋವನಿಗೇ ಸಂಪೂರ್ಣ ಕೀರ್ತಿಯನ್ನು ಸಲ್ಲಿಸುತ್ತಾ ಆತನನ್ನು “ಯುವಪ್ರಾಯದಿಂದ ನನ್ನ ಭರವಸವೂ” ನೀನೇ ಎಂದು ಪ್ರಕಟಿಸಿದನು. ದಾವೀದನು ಯಾವಾಗಲೂ ಯೆಹೋವನ ಮೇಲೆ ಆತುಕೊಂಡದ್ದರಿಂದ, ಯಾವುದೇ ಸಂಕಷ್ಟವನ್ನು ಎದುರಿಸಲು ಅವನು ಸಮರ್ಥನಾಗಿದ್ದನು. ನೀವು ಸಹ ಯೆಹೋವನ ಮೇಲೆ ಆತುಕೊಳ್ಳುವುದಾದರೆ, ‘ಲೋಕವನ್ನು ಜಯಿಸಲು’ ನಿಮಗೆ ಬೇಕಾದ ಧೈರ್ಯ ಹಾಗೂ ಬಲವನ್ನು ಆತನು ಕೊಡುತ್ತಾನೆಂಬುದನ್ನು ನೀವು ಕಂಡುಕೊಳ್ಳುವಿರಿ.—1 ಯೋಹಾನ 5:4.
ಎಚ್ಚರ!-E 04 10/8 ಪುಟ 23 ಪ್ಯಾರ 3
ವಯಸ್ಸಾದವರ ಜೊತೆ ಹೇಗೆ ನಡ್ಕೊಬೇಕು?
ಕೀರ್ತನೆಗಾರ “ನನಗೆ ವಯಸ್ಸಾದಾಗ ದಯವಿಟ್ಟು ನನ್ನನ್ನ ತಳ್ಳಿಬಿಡಬೇಡ, ನನಗೆ ಶಕ್ತಿ ಇಲ್ಲದೆ ಹೋದಾಗ ನನ್ನ ಕೈಬಿಡಬೇಡ” ಅಂತ ದೇವರ ಹತ್ರ ಪ್ರಾರ್ಥನೆ ಮಾಡಿದ. (ಕೀರ್ತ 71:9) ಈ ಮಾತಿನ ಅರ್ಥ ಕೀರ್ತನೆಗಾರನನ್ನ ದೇವರ ತಳ್ಳಿಬಿಟ್ಟ ಅಂತಲ್ಲ, ಬದಲಿಗೆ ವಯಸ್ಸಾದಂತೆ ಸೃಷ್ಟಿಕರ್ತ ದೇವರ ಮೇಲೆ ಜಾಸ್ತಿ ಆತುಕೊಳ್ಳಬೇಕು ಅನ್ನೋದೇ ಆಗಿತ್ತು. ವಯಸ್ಸಾದ ದೇವರ ಸೇವಕರಿಗೆ ‘ತಾವು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಿದ್ರೂ ಯೆಹೋವ ದೇವರು ಅವರನ್ನ ಯಾವತ್ತೂ ‘ತಳ್ಳಿಬಿಡಲ್ಲ.‘ ವಯಸ್ಸಾದ ತನ್ನ ನಂಬಿಗಸ್ತ ಸೇವಕರಿಗೆ ಯೆಹೋವ ಯಾವಾಗ್ಲೂ ಬೆಂಬಲ ಕೊಡ್ತಾನೆ. (ಕೀರ್ತನೆ 18:25) ಈ ಬೆಂಬಲವನ್ನ ಸಹೋದರ ಸಹೋದರಿಯರ ಮೂಲಕ ಕೊಡ್ತಾನೆ.
ಕಾವಲಿನಬುರುಜು14 1/15 ಪುಟ 23 ಪ್ಯಾರ 4-5
ಕಷ್ಟದ ದಿನಗಳು ಬರುವುದರೊಳಗೆ ಯೆಹೋವನ ಸೇವೆ ಮಾಡಿ
4 ದಶಕಗಳಿಂದ ಯೆಹೋವನ ಸೇವೆಮಾಡಿರುವ ಕ್ರೈಸ್ತರು ನೀವಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನನ್ನಲ್ಲಿ ಇನ್ನೂ ಶಕ್ತಿಸಾಮರ್ಥ್ಯ ಇರುವುದರಿಂದ ನನ್ನ ಜೀವನವನ್ನು ದೇವರ ಸೇವೆಯಲ್ಲಿ ಹೇಗೆ ಉಪಯೋಗಿಸಬಲ್ಲೆ?’ ಒಬ್ಬ ಅನುಭವಸ್ಥ ಕ್ರೈಸ್ತರು ನೀವಾಗಿರುವುದರಿಂದ ಬೇರೆಯವರಿಗೆ ಇಲ್ಲದ ಕೆಲವು ಅಪೂರ್ವ ಅವಕಾಶಗಳು ನಿಮಗಿವೆ. ಉದಾಹರಣೆಗೆ, ಯೆಹೋವನು ನಿಮಗೆ ಕಲಿಸಿರುವ ವಿಷಯಗಳನ್ನು ನೀವು ಯುವ ಪೀಳಿಗೆಯವರಿಗೆ ದಾಟಿಸಬಲ್ಲಿರಿ. ದೇವರ ಸೇವೆಯಲ್ಲಿ ದೊರೆತ ಅನುಭವಗಳನ್ನು ಹೇಳುವ ಮೂಲಕ ಇತರರ ನಂಬಿಕೆಯನ್ನು ಬಲಪಡಿಸಬಲ್ಲಿರಿ. ಇಂಥ ಸದವಕಾಶಗಳನ್ನು ಕೊಡೆಂದು ರಾಜ ದಾವೀದನು ಪ್ರಾರ್ಥಿಸುತ್ತಾ ಅಂದದ್ದು: “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ . . . ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”—ಕೀರ್ತ. 71:17, 18.
5 ಇಷ್ಟೆಲ್ಲ ವರ್ಷಗಳಲ್ಲಿ ನೀವು ಪಡೆದಿರುವ ವಿವೇಕವನ್ನು ಇತರರೊಂದಿಗೆ ಹೇಗೆ ಹಂಚಿಕೊಳ್ಳಬಹುದು? ಬಹುಶಃ ನೀವು ಯುವ ಕ್ರೈಸ್ತರನ್ನು ನಿಮ್ಮ ಮನೆಗೆ ಆಮಂತ್ರಿಸಬಹುದು. ಆಗ ಅವರೊಂದಿಗೆ ಸಹವಾಸಮಾಡುತ್ತಾ ಅವರನ್ನು ಪ್ರೋತ್ಸಾಹಿಸಬಹುದು. ಇಲ್ಲವೆ ಅವರನ್ನು ನಿಮ್ಮೊಟ್ಟಿಗೆ ಸೇವೆಗೆ ಕರೆದುಕೊಂಡು ಹೋಗಿ ಯೆಹೋವನ ಸೇವೆಯಲ್ಲಿ ನೀವೆಷ್ಟು ಆನಂದಿಸುತ್ತೀರೆಂಬುದನ್ನು ತೋರಿಸಬಹುದು. ಪ್ರಾಚೀನ ಕಾಲದ ಎಲೀಹು ಹೀಗಂದನು: “ಹೆಚ್ಚು ದಿನಗಳವರು ಮಾತಾಡಲಿ, ಬಹಳ ವರುಷದವರು ಜ್ಞಾನೋಪದೇಶಮಾಡಲಿ.” (ಯೋಬ 32:7) ಅನುಭವಸ್ಥ ಕ್ರೈಸ್ತ ಸ್ತ್ರೀಯರು ಇತರರನ್ನು ಮಾತಿನಿಂದಲೂ ಮಾದರಿಯಿಂದಲೂ ಉತ್ತೇಜಿಸುವಂತೆ ಅಪೊಸ್ತಲ ಪೌಲನು ಸಹ ಸಲಹೆಕೊಟ್ಟನು. “ವೃದ್ಧೆಯರು . . . ಒಳ್ಳೇದನ್ನು ಬೋಧಿಸುವವರಾಗಿರಲಿ” ಎಂದು ಬರೆದನು.—ತೀತ 2:3.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 768
ಯೂಫ್ರೆಟಿಸ್
ಇಸ್ರಾಯೇಲ್ಯರಿಗೆ ಕೊಟ್ಟ ಪ್ರದೇಶದ ಗಡಿ. ದೇವರು ಅಬ್ರಹಾಮನ ಜೊತೆ ಮಾಡಿದ ಒಪ್ಪಂದದಲ್ಲಿ ಅವನ ಸಂತತಿಗೆ “ಈಜಿಪ್ಟಿನ ನದಿಯಿಂದ ಹಿಡಿದು ಯೂಫ್ರೆಟಿಸ್ ಮಹಾ ನದಿ ತನಕ ಇರೋ” ಈ ದೇಶವನ್ನ ಕೊಡ್ತೀನಿ ಅಂತ ಹೇಳಿದನು. (ಆದಿ 15:18) ಈ ಮಾತನ್ನ ಇಸ್ರಾಯೇಲ್ ಜನಾಂಗಕ್ಕೆ ಮತ್ತೆ ಹೇಳಲಾಯ್ತು. (ವಿಮೋ 23:31; ಧರ್ಮೋ 1:7, 8; 11:24; ಯೆಹೋ 1:4) 1 ಪೂರ್ವಕಾಲವೃತ್ತಾಂತ 5:9ರಲ್ಲಿ ದಾವೀದ ಆಳ್ವಿಕೆ ಶುರು ಮಾಡೋ ಮುಂಚೆ ರೂಬೇನ್ ವಂಶದವರಲ್ಲಿ ಕೆಲವರು “ಯೂಫ್ರೆಟಿಸ್ ನದಿ ಪಕ್ಕ ಇರೋ ಕಾಡಿನ ತನಕ ಹೋಗಿ ಅಲ್ಲಿವರೆಗೆ ವಾಸ ಮಾಡಿದ್ರು” ಅಂತ ಹೇಳುತ್ತೆ. ‘ಗಿಲ್ಯಾದಿನ ಪೂರ್ವದ’ ಕಡೆಗೆ ಹೋಗೋವಾಗ ಸುಮಾರು 800 ಕಿ.ಮೀ ದೂರದಲ್ಲಿ ಯೂಫ್ರೆಟಿಸ್ ನದಿ ಇತ್ತು. (1ಪೂರ್ವ 5:9, 10) ರೂಬೆನ್ ವಂಶದವರು ತಮ್ಮ ಪ್ರದೇಶವನ್ನ ಸಿರಿಯಾದ ಮರುಭೂಮಿಯ ಅಂಚಿನವರೆಗೆ ವಿಸ್ತರಿಸಿದ್ರು, ಈ ಮರುಭೂಮಿಯ ಅಂಚು ಯೂಫ್ರೆಟಿಸ್ ನದಿಯಾಗಿತ್ತು.
ಈ ಮಾತು ದಾವೀದ ಮತ್ತು ಸೊಲೊಮೋನ ಆಳ್ತಿದ್ದಾಗ ನಿಜ ಆಯ್ತು. ಯಾಕಂದ್ರೆ ಆಗ ಇಸ್ರಾಯೇಲ್ ಸಾಮ್ರಾಜ್ಯ ಅರಾಮ್ಯರ ಚೋಬ ಸಾಮ್ರಾಜ್ಯದವರೆಗೂ ಹರಡಿತ್ತು. ಇದು ಉತ್ತರ ಸಿರಿಯಾದ ಯೂಫ್ರೆಟಿಸ್ ನದಿವರೆಗೂ ತಲುಪ್ತಿತ್ತು. (2ಸಮು 8:3; 1ಅರ 4:21; 1ಪೂರ್ವ 18:3-8; 2ಪೂರ್ವ 9:26) ಯೂಫ್ರೆಟಿಸ್ ತುಂಬಾ ಹೆಸರುವಾಸಿಯಾಗಿದ್ರಿಂದ ತುಂಬ ಸಲ ಅದನ್ನ ಬರಿ “ನದಿ” ಅಂತ ಕರಿತಿದ್ರು. (ಯೆಹೋ 24:2, 15; ಕೀರ್ತ 72:8)
ಆಗಸ್ಟ್ 12-18
ಬೈಬಲಿನಲ್ಲಿರುವ ನಿಧಿ | ಕೀರ್ತನೆ 73-74
ಲೋಕದ ಜನರನ್ನ ನೋಡಿ ಹೊಟ್ಟೆಕಿಚ್ಚು ಪಡ್ತೀರಾ?
ಕಾವಲಿನಬುರುಜು20.12 ಪುಟ 19 ಪ್ಯಾರ 14
ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ
14 ಕೀರ್ತನೆ 73 ನ್ನು ಬರೆದಿದ್ದು ಒಬ್ಬ ಲೇವಿಯ. ಅವ್ನಿಗೆ ಯೆಹೋವನನ್ನು ಆರಾಧಿಸೋ ಸ್ಥಳದಲ್ಲಿ ಸೇವೆ ಮಾಡೋ ಸುಯೋಗ ಇತ್ತು. ಆದ್ರೂ ಒಂದು ಸಂದರ್ಭದಲ್ಲಿ ಅವ್ನಿಗೆ ನಿರುತ್ಸಾಹ ಕಾಡ್ತು. ಯಾಕೆ? ಅವ್ನಿಗೆ ದುಷ್ಟರನ್ನು ಮತ್ತು ಅಹಂಕಾರಿಗಳನ್ನು ನೋಡಿ ಹೊಟ್ಟೆಕಿಚ್ಚಾಯ್ತು. ಅದ್ರ ಅರ್ಥ ಅವ್ರ ತರ ತಾನೂ ಕೆಟ್ಟ ಕೆಲ್ಸ ಮಾಡೋಕೆ ಇಷ್ಟಪಟ್ಟ ಅಂತಲ್ಲ. ಬದ್ಲಿಗೆ ಅವ್ರೆಷ್ಟೇ ಕೆಟ್ಟ ಕೆಲ್ಸ ಮಾಡಿದ್ರೂ ತನಗಿಂತ ಚೆನ್ನಾಗಿದ್ದಾರಲ್ಲಾ ಅಂತ ಹೊಟ್ಟೆಕಿಚ್ಚಾಯ್ತು. (ಕೀರ್ತ. 73:2-9, 11-14) ಅವ್ರಿಗೆ ಜೀವ್ನದಲ್ಲಿ ಎಲ್ಲಾ ಸುಖಸೌಕರ್ಯ ಇದೆ, ಯಾವ್ದಕ್ಕೂ ಕೊರತೆಯಿಲ್ಲ, ಯಾವ ಚಿಂತೆನೂ ಇಲ್ಲ ಅಂತ ಈ ಕೀರ್ತನೆಗಾರನಿಗೆ ಅನಿಸ್ತು. ಇದನ್ನೆಲ್ಲಾ ನೋಡಿ ನಿರಾಶೆಯಾಗಿ ಹೀಗೆ ಹೇಳ್ದ: “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ.” ಹೀಗೆ ಅವ್ನು ನಿರಾಶೆಯಲ್ಲಿ ಮುಳುಗಿ ಹೋಗಿದ್ದಿದ್ರೆ ಮುಂದೆ ಯೆಹೋವನ ಸೇವೆನಾ ನಿಲ್ಸಿಬಿಡ್ತಿದ್ದ ಅಂತ ಅನ್ಸುತ್ತೆ.
ಕಾವಲಿನಬುರುಜು20.12 ಪುಟ 19 ಪ್ಯಾರ 15-16
ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ
15 ಕೀರ್ತನೆ 73:16-19 ಮತ್ತು 22-25 ಓದಿ. ಲೇವಿಯ ‘ದೇವಾಲಯಕ್ಕೆ ಹೋದ್ನು.’ ಅಲ್ಲಿ ಅವ್ನು ಜೊತೆ ಆರಾಧಕರೊಂದಿಗೆ ಇದ್ದ ಕಾರಣ ಸಮಾಧಾನವಾಗಿರೋಕೆ, ಚೆನ್ನಾಗಿ ಯೋಚಿಸೋಕೆ, ಪ್ರಾರ್ಥಿಸೋಕೆ ಸಾಧ್ಯವಾಯ್ತು. ಆಗ ತಾನು ಎಷ್ಟು ಮೂರ್ಖನಾಗಿ ಯೋಚಿಸಿಬಿಟ್ಟೆ ಅಂತ ಅವ್ನಿಗೆ ಅರ್ಥ ಆಯ್ತು. ಇದೇ ತರ ಯೋಚಿಸ್ತಾ ಇದ್ರೆ ಯೆಹೋವನಿಂದ ದೂರ ಹೋಗ್ಬಿಡ್ತೀನಿ ಅಂತನೂ ಗೊತ್ತಾಯ್ತು. ಅಷ್ಟೇ ಅಲ್ಲ ದುಷ್ಟಜನ್ರು ಜಾರಿ ಬೀಳುವಂಥ ‘ಅಪಾಯಕರ ಸ್ಥಳದಲ್ಲಿ’ ನಿಂತಿದ್ದಾರೆ, ‘ಭಯಂಕರ ರೀತಿಯಲ್ಲಿ ಸಂಹಾರವಾಗ್ತಾರೆ’ ಅಂತನೂ ಅರ್ಥಮಾಡ್ಕೊಂಡ. ಅವನು ಯೆಹೋವನ ತರ ಯೋಚಿಸೋಕೆ ಶುರುಮಾಡಿದ. ಆಗ ದುಷ್ಟರನ್ನು ಕಂಡು ಹೊಟ್ಟೆಕಿಚ್ಚು ಪಡೋದನ್ನ ಬಿಟ್ಟುಬಿಟ್ಟ ಮತ್ತು ನಿರುತ್ಸಾಹದಿಂದ ಹೊರಗೆ ಬಂದ. ಅವ್ನ ಮನಸ್ಸಿಗೆ ನೆಮ್ಮದಿ, ಸಂತೋಷ ಸಿಗ್ತು. ಅವ್ನು ಹೀಗೆ ಹೇಳ್ದ: “ಇಹಲೋಕದಲ್ಲಿ [ಯೆಹೋವನನ್ನಲ್ಲದೆ] ಇನ್ನಾರನ್ನೂ ಬಯಸುವುದಿಲ್ಲ.”
16 ನಮಗಿರೋ ಪಾಠ. ದುಷ್ಟಜನ್ರು ಚೆನ್ನಾಗಿರೋದನ್ನು ನೋಡಿ ನಾವು ಹೊಟ್ಟೆಕಿಚ್ಚು ಪಡಬಾರ್ದು. ಅವ್ರ ಸಂತೋಷ ಏನಿದ್ರೂ ಮೇಲ್ಮೇಲಷ್ಟೇ ಮತ್ತು ಅವ್ರಿಗಿರೋ ಸುಖ ನೆಮ್ಮದಿ ನೀರಿನ ಮೇಲಿರೋ ಗುಳ್ಳೆ ತರ. ಅವ್ರು ಶಾಶ್ವತವಾಗಿ ಬದುಕೋದೂ ಇಲ್ಲ. (ಪ್ರಸಂ. 8:12, 13) ನಾವು ಅಂಥವ್ರ ಬಗ್ಗೆ ಹೊಟ್ಟೆಕಿಚ್ಚುಪಟ್ರೆ ನಮ್ಗೇ ನಿರುತ್ಸಾಹ ಆಗುತ್ತೆ. ಅಷ್ಟೇ ಅಲ್ಲ ಯೆಹೋವನೊಟ್ಟಿಗಿನ ಆಪ್ತಸಂಬಂಧನೂ ಕಳ್ಕೊಂಡು ಬಿಡಬಹುದು. ಹಾಗಾಗಿ ದುಷ್ಟರನ್ನು ನೋಡಿ ನಿಮ್ಗೆ ಹೊಟ್ಟೆಕಿಚ್ಚಾದ್ರೆ ಆ ಲೇವಿಯ ಮಾಡಿದ ಹಾಗೆ ನೀವೂ ಮಾಡಿ. ಯೆಹೋವ ಬೈಬಲಿನಲ್ಲಿ ಕೊಟ್ಟಿರೋ ಪ್ರೀತಿಯ ಸಲಹೆನ ಅನ್ವಯಿಸಿ ಮತ್ತು ಯೆಹೋವನ ಇಷ್ಟವನ್ನು ಮಾಡೋ ಜನ್ರ ಜೊತೆ ಸಹವಾಸ ಮಾಡಿ. ಬೇರೆಲ್ಲದಕ್ಕಿಂತ ಹೆಚ್ಚಾಗಿ ನೀವು ಯೆಹೋವನನ್ನು ಪ್ರೀತಿಸಿದಾಗ ನಿಜ ಸಂತೋಷ ಸಿಗುತ್ತೆ. ‘ವಾಸ್ತವವಾದ ಜೀವನಕ್ಕೆ’ ನಡೆಸೋ ದಾರಿಲಿ ನೀವು ಇರ್ತೀರ.—1 ತಿಮೊ. 6:19.
ಕಾವಲಿನಬುರುಜು14 4/15 ಪುಟ 4 ಪ್ಯಾರ 5
ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ
5 ‘ಪಾಪದ ತಾತ್ಕಾಲಿಕ ಸುಖಾನುಭವವನ್ನು’ ನೀವು ಹೇಗೆ ತಿರಸ್ಕರಿಸಬಹುದು? ಪಾಪಭರಿತ ಸುಖ ಕ್ಷಣಿಕ ಎನ್ನುವುದನ್ನು ಮರೆಯದಿರಿ. ‘ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿರುವುದನ್ನು’ ನಂಬಿಕೆಯ ಕಣ್ಣುಗಳಿಂದ ನೋಡಿ. (1 ಯೋಹಾ. 2:15-17) ಪಶ್ಚಾತ್ತಾಪಪಡದೆ ಪಾಪ ಮಾಡುತ್ತಿರುವವರಿಗೆ ಸಿಗುವ ಅಂತ್ಯಫಲದ ಬಗ್ಗೆ ಯೋಚಿಸಿ. ಅಂಥವರು ‘ಜಾರುವ ಸ್ಥಳಗಳಲ್ಲಿ ಇದ್ದಾರೆ. ನಾಶಕ್ಕೆ ದೊಬ್ಬಲ್ಪಡುತ್ತಾರೆ.’ (ಕೀರ್ತ. 73:18, 19, ಪವಿತ್ರ ಗ್ರಂಥ ಭಾಷಾಂತರ) ಪಾಪ ಮಾಡಲು ನಿಮಗೆ ಪ್ರಲೋಭನೆಯಾದಲ್ಲಿ ‘ಭವಿಷ್ಯತ್ತಿನಲ್ಲಿ ನನಗೆ ಯಾವ ರೀತಿಯ ಜೀವನ ಬೇಕು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.
ಕಾವಲಿನಬುರುಜು13 2/15 ಪುಟ 25-26 ಪ್ಯಾರ 3-5
ದೇವರಿಂದ ಮಹಿಮೆಯನ್ನು ಹೊಂದಲು ಯಾವುದೂ ನಿಮಗೆ ಅಡ್ಡಿಯಾಗದಿರಲಿ
3 ಯೆಹೋವನು ‘ನನ್ನ ಬಲಗೈಯನ್ನು ಹಿಡಿದು ಮಹಿಮೆಗೆ ನಡೆಸುವನು’ ಎಂದು ಹೇಳುವ ಮೂಲಕ ಕೀರ್ತನೆಗಾರನು ಯೆಹೋವನಲ್ಲಿ ತನಗಿದ್ದ ಭರವಸೆಯನ್ನು ವ್ಯಕ್ತಪಡಿಸಿದನು. (ಕೀರ್ತನೆ 73:23, 24 ಓದಿ.) ಹಾಗಾದರೆ ಯೆಹೋವನು ತನ್ನ ದೀನ ಸೇವಕರಿಗೆ ಹೇಗೆ ಮಹಿಮೆ ಕೊಡುತ್ತಾನೆ? ಅವರನ್ನು ಗೌರವಿಸುವ ಮೂಲಕ. ಅದನ್ನು ಆತನು ಅನೇಕ ವಿಧಗಳಲ್ಲಿ ಮಾಡುತ್ತಾನೆ. ಉದಾಹರಣೆಗೆ, ಅವರು ತನ್ನ ಚಿತ್ತವನ್ನು ಅರ್ಥ ಮಾಡಿಕೊಳ್ಳಲು ಸಹಾಯಮಾಡುತ್ತಾನೆ. (1 ಕೊರಿಂ. 2:7) ತನ್ನ ವಾಕ್ಯವನ್ನು ಆಲಿಸಿ ಪಾಲಿಸುವವರಿಗೆ ತನ್ನೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ಅವಕಾಶ ಕೊಡುವ ಮೂಲಕ ಘನಮಾನ ಕೊಡುತ್ತಾನೆ.—ಯಾಕೋ. 4:8.
4 ಯೆಹೋವನು ತನ್ನ ಸೇವಕರಿಗೆ ಸುವಾರ್ತೆ ಸಾರುವ ಮಹಿಮಾನ್ವಿತ ಸುಯೋಗವನ್ನು ಸಹ ಕೊಟ್ಟಿದ್ದಾನೆ. (2 ಕೊರಿಂ. 4:1, 7) ಈ ಸುಯೋಗ ನಮ್ಮನ್ನು ಮಹಿಮೆಗೆ ನಡೆಸುತ್ತದೆ. ಯಾರು ಈ ಸುಯೋಗವನ್ನು ಯೆಹೋವನನ್ನು ಸ್ತುತಿಸಲಿಕ್ಕಾಗಿ ಮತ್ತು ಇತರರಿಗೆ ಪ್ರಯೋಜನ ತರಲಿಕ್ಕಾಗಿ ಉಪಯೋಗಿಸುತ್ತಾರೋ ಅವರಿಗೆ ಯೆಹೋವನು ಹೀಗೆ ವಾಗ್ದಾನ ಮಾಡಿದ್ದಾನೆ: “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು.” (1 ಸಮು. 2:30) ಹೌದು, ಅವರು ಯೆಹೋವನಿಂದ ಒಂದು ಉತ್ತಮ ಹೆಸರನ್ನು ಗಳಿಸುತ್ತಾರೆ. ಅಷ್ಟೇ ಅಲ್ಲ ಸಭೆಯಲ್ಲಿರುವ ಇತರರ ಮೆಚ್ಚುಗೆಗೂ ಪಾತ್ರರಾಗುತ್ತಾರೆ.—ಜ್ಞಾನೋ. 11:16; 22:1.
5 ‘ಯೆಹೋವನನ್ನು ನಿರೀಕ್ಷಿಸಿ ಆತನ ಮಾರ್ಗವನ್ನೇ ಅನುಸರಿಸುವವರಿಗೆ’ ಯಾವ ಭವಿಷ್ಯವಿದೆ? ಈ ವಾಗ್ದಾನ ಅವರಿಗಿದೆ: “ಆತನು [ಯೆಹೋವನು] ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.” (ಕೀರ್ತ. 37:34) ಹೌದು, ಅವರು ಭೂಮಿಯ ಮೇಲೆ ನಿತ್ಯನಿರಂತರ ಜೀವಿಸುವರು. ಯೆಹೋವನಿಂದ ಎಂಥ ಅಪೂರ್ವ ಮಹಿಮೆ ಅವರಿಗೆ!—ಕೀರ್ತ. 37:29.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 240
ಲಿವ್ಯಾತಾನ್
ಕೀರ್ತನೆ 74ರಲ್ಲಿ ದೇವರು ತನ್ನ ಜನರನ್ನ ಕಾಪಾಡಿದ್ರ ಬಗ್ಗೆ ಇದೆ. ವಚನ 13 ಮತ್ತು 14ರಲ್ಲಿ ಈಜಿಪ್ಟಿನಿಂದ ಇಸ್ರಾಯೇಲ್ಯರನ್ನ ಬಿಡುಗಡೆ ಮಾಡೋದನ್ನ ಸಾಂಕೇತಿಕವಾಗಿ ತಿಳಿಸಲಾಗಿದೆ. ಸಮುದ್ರದಲ್ಲಿರೋ ದೊಡ್ಡದೊಡ್ಡ ಜೀವಿಗಳ ಬಗ್ಗೆ ಹೇಳೋವಾಗ ಲಿವ್ಯಾತಾನ್ ಬಗ್ಗೆನೂ ಹೇಳಿದೆ. ಇದು ಇಸ್ರಾಯೇಲ್ಯರನ್ನ ಬಿಡುಗಡೆ ಮಾಡೋವಾಗ ಫರೋಹ ಮತ್ತು ಅವನ ಸೈನ್ಯವನ್ನ ಸೋಲಿಸೋದ್ರ ಬಗ್ಗೆ ಹೇಳೋಕೆ ಬಳಸಿರಬಹುದು. ಬೇರೆ ಕೆಲವು ಭಾಷಾಂತರಗಳಲ್ಲಿ ‘ಲಿವ್ಯಾತಾನ್ ತಲೆಗಳನ್ನ’ “ಫರೋಹನ ಬಲಿಷ್ಟರು” ಅಂತ ಹಾಕಿದ್ದಾರೆ. (ಯೆಹೆ 29:3-5; 32:2) ಯೆಶಾಯ 27:1ರಲ್ಲಿರೋ ಲಿವ್ಯಾತಾನ್ “ಘಟಸರ್ಪ” ಮತ್ತು “ಹಾವು” ಅಂತ ಬೈಬಲ್ ಯಾರನ್ನ ಕರೆಯುತ್ತೋ ಅವನ ಕೈಕೆಳಗಿರುವ ಒಂದು ಅಂತರಾಷ್ಟ್ರೀಯ ಸಂಘಟನೆಯಾಗಿದೆ. (ಪ್ರಕ 12:9) ಇಸ್ರಾಯೇಲ್ಯರ ಪುನಸ್ಥಾಪನೆ ಬಗ್ಗೆ ಇರೋ ಭವಿಷ್ಯವಾಣಿಗಳಲ್ಲಿ ಇದೂ ಒಂದು. ಹಾಗಾಗಿ ಯೆಹೋವನು ಲಿವ್ಯಾತಾನ್ ಮೇಲೆ “ಆಕ್ರಮಣ ಮಾಡ್ತಾನೆ” ಅನ್ನೋದ್ರಲ್ಲಿ ಬಾಬೆಲ್ ಕೂಡ ಸೇರಿದೆ. ಆದ್ರೆ ಯೆಶಾಯ 27:12, 13ರಲ್ಲಿ ಅಶ್ಶೂರ್ ಮತ್ತು ಈಜಿಪ್ಟ್ ಬಗ್ಗೆನೂ ಹೇಳಲಾಗಿದೆ. ಹಾಗಾಗಿ ಲಿವ್ಯಾತಾನ್, ಯೆಹೋವನನ್ನ ಮತ್ತು ಆತನ ಆರಾಧಕರನ್ನ ವಿರೋಧಿಸೋ ಒಂದು ಅಂತರಾಷ್ಟ್ರೀಯ ಸಂಘಟನೆ ಅಥವಾ ಸಾಮ್ರಾಜ್ಯವನ್ನು ಸೂಚಿಸುತ್ತಿರಬಹುದು.
ಆಗಸ್ಟ್ 19-25
ಬೈಬಲಿನಲ್ಲಿರುವ ನಿಧಿ | ಕೀರ್ತನೆ 75-77
ನಾವು ಯಾಕೆ ಕೊಚ್ಕೊಬಾರದು?
ಕಾವಲಿನಬುರುಜು18.01 ಪುಟ 28 ಪ್ಯಾರ 4-5
ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ
4 ಕಡೇ ದಿವಸಗಳಲ್ಲಿ ಅನೇಕರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಆಗಿರುತ್ತಾರೆ ಎಂದು ಹೇಳಿದ ಮೇಲೆ ಪೌಲನು ಸ್ವಪ್ರತಿಷ್ಠೆಯುಳ್ಳವರು, ಅಹಂಕಾರಿಗಳು, ಹೆಮ್ಮೆಯಿಂದ ಉಬ್ಬಿಕೊಳ್ಳುವವರು ಇರುತ್ತಾರೆ ಎಂದು ಹೇಳಿದನು. ಈ ಗುಣಗಳಿರುವ ಜನರು ಅವರಲ್ಲಿರುವ ಸೌಂದರ್ಯ, ಸಾಮರ್ಥ್ಯ, ಸಂಪತ್ತು, ಸ್ಥಾನಮಾನದಿಂದಾಗಿ ತಾವು ಬೇರೆಯವರಿಗಿಂತ ಶ್ರೇಷ್ಠರು ಎಂದು ಹೆಚ್ಚಾಗಿ ನೆನಸುತ್ತಾರೆ. ಇಂಥವರು ಜನರ ಮೆಚ್ಚಿಕೆ, ಹೊಗಳಿಕೆಗಾಗಿ ಕಾಯುತ್ತಾ ಇರುತ್ತಾರೆ. ಈ ರೀತಿಯ ಜನರ ಬಗ್ಗೆ ಒಬ್ಬ ವಿದ್ವಾಂಸ ಹೀಗೆ ಬರೆದನು: “ಇಂಥ ಒಬ್ಬ ವ್ಯಕ್ತಿ ತನ್ನ ಹೃದಯದಲ್ಲಿ ಒಂದು ಚಿಕ್ಕ ಯಜ್ಞವೇದಿ ಕಟ್ಟಿಕೊಂಡು ತನ್ನನ್ನು ತಾನೇ ಆರಾಧಿಸುತ್ತಾನೆ.” ಇನ್ನು ಕೆಲವರು ಹೇಳುವಂತೆ, ಹೆಮ್ಮೆ ಎನ್ನುವುದು ಎಂಥ ಅಸಹ್ಯವಾದ ಗುಣವೆಂದರೆ ಹೆಮ್ಮೆಯಿರುವ ವ್ಯಕ್ತಿಗೇ ಅದನ್ನು ಬೇರೆಯವರಲ್ಲಿ ನೋಡಿದಾಗ ಸಹಿಸಕ್ಕಾಗಲ್ಲ.
5 ಯೆಹೋವನು ಹೆಮ್ಮೆ ಎನ್ನುವ ಗುಣವನ್ನು ದ್ವೇಷಿಸುತ್ತಾನೆ. ‘ಹೆಮ್ಮೆಯ ಕಣ್ಣುಗಳನ್ನು’ ಹಗೆಮಾಡುತ್ತಾನೆ. (ಜ್ಞಾನೋ. 6:16, 17) ನಿಜವೇನೆಂದರೆ, ಹೆಮ್ಮೆ ಒಬ್ಬ ವ್ಯಕ್ತಿಯನ್ನು ದೇವರಿಂದ ದೂರಮಾಡುತ್ತದೆ. (ಕೀರ್ತ. 10:4) ಹೆಮ್ಮೆ ಪಿಶಾಚನ ಗುಣ. (1 ತಿಮೊ. 3:6) ದುಃಖದ ಸಂಗತಿಯೇನಂದರೆ, ಈ ಕೆಟ್ಟ ಗುಣ ಯೆಹೋವನ ಕೆಲವು ನಿಷ್ಠಾವಂತ ಸೇವಕರಿಗೂ ಬಂದಿತ್ತು. ಉದಾಹರಣೆಗೆ, ಯೆಹೂದದ ರಾಜನಾದ ಉಜ್ಜೀಯನು ಅನೇಕ ವರ್ಷಗಳ ವರೆಗೆ ನಂಬಿಗಸ್ತನಾಗಿದ್ದನು. ಆದರೆ “ಅವನು ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿ” ಆದನು ಎಂದು ಬೈಬಲ್ ಹೇಳುತ್ತದೆ. ಎಷ್ಟರ ಮಟ್ಟಿಗೆಂದರೆ, ಅವನು ದೇವಾಲಯಕ್ಕೆ ಹೋಗಿ ಧೂಪಹಾಕಲು ಮುಂದಾದನು. ಇದನ್ನು ಮಾಡುವ ಅಧಿಕಾರ ಅವನಿಗಿರಲಿಲ್ಲ. ನಂತರ, ನಂಬಿಗಸ್ತನಾದ ರಾಜ ಹಿಜ್ಕೀಯನು ಕೂಡ ಸ್ವಲ್ಪ ಸಮಯಕ್ಕೆ ಅಹಂಕಾರಿ ಆಗಿಬಿಟ್ಟಿದ್ದನು.—2 ಪೂರ್ವ. 26:16; 32:25, 26.
ಕಾವಲಿನಬುರುಜು06 8/1 ಪುಟ 4 ಪ್ಯಾರ 1
ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳ ಮುಖ್ಯಾಂಶಗಳು
75:4, 5, 10—“ಕೊಂಬು” ಎಂಬ ಪದದಿಂದ ಏನು ಸೂಚಿಸಲ್ಪಟ್ಟಿದೆ? ಪ್ರಾಣಿಗೆ ಕೊಂಬುಗಳು ಬಲಾಢ್ಯ ಆಯುದ್ಧಗಳಾಗಿವೆ. ಹಾಗಾಗಿ “ಕೊಂಬು” ಸಾಂಕೇತಿಕವಾಗಿ ಶಕ್ತಿ ಅಥವಾ ಬಲವನ್ನು ಸೂಚಿಸುತ್ತದೆ. ಯೆಹೋವನು ತನ್ನ ಜನರ ಕೊಂಬುಗಳನ್ನು ಮೇಲೆತ್ತುವ ಮೂಲಕ ಅವರನ್ನು ಘನಪಡಿಸುತ್ತಾನೆ ಆದರೆ ‘ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವನು.’ ನಮ್ಮ ‘ಕೊಂಬುಗಳನ್ನು ಮೇಲೆತ್ತಬಾರದು’ ಅಂದರೆ, ಹೆಮ್ಮೆ ಇಲ್ಲವೆ ಗರ್ವಿಷ್ಟ ಮನೋಭಾವವನ್ನು ನಾವೆಂದಿಗೂ ತಾಳಬಾರದೆಂದು ಎಚ್ಚರಿಸಲಾಗಿದೆ. ಮೇಲೆತ್ತುವುದು ಯೆಹೋವನ ಕೆಲಸವಾಗಿರುವುದರಿಂದ, ಸಭೆಯಲ್ಲಿನ ಜವಾಬ್ದಾರಿಯ ನೇಮಕಗಳನ್ನು ಮಾಡುವವನು ಆತನೇ ಎಂಬ ದೃಷ್ಟಿಕೋನ ನಮಗಿರಬೇಕು.—ಕೀರ್ತನೆ 75:7.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 8/1 ಪುಟ 4 ಪ್ಯಾರ 2
ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳ ಮುಖ್ಯಾಂಶಗಳು
76:10—‘ಮನುಷ್ಯರ ಕೋಪವು’ ಯೆಹೋವನನ್ನು ಹೇಗೆ ಘನಪಡಿಸಸಾಧ್ಯವಿದೆ? ನಾವು ಯೆಹೋವನ ಸೇವಕರಾಗಿದ್ದೇವೆಂಬ ಕಾರಣಕ್ಕಾಗಿ ಜನರು ತಮ್ಮ ಕೋಪವನ್ನು ನಮ್ಮ ಮೇಲೆ ತೋರಿಸುವುದನ್ನು ದೇವರು ಅನುಮತಿಸುವಾಗ, ಒಳ್ಳೆಯ ಫಲಿತಾಂಶವು ಸಿಗುವುದು. ನಾವು ಅನುಭವಿಸಬೇಕಾದ ಯಾವುದೇ ಕಷ್ಟವು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ತರಬೇತುಗೊಳಿಸಸಾಧ್ಯವಿದೆ. ಇಂಥ ತರಬೇತನ್ನು ಕೊಡುವುದಕ್ಕಾಗಿಯೇ ಯೆಹೋವನು ಕಷ್ಟಗಳನ್ನು ಅನುಮತಿಸುತ್ತಾನೆ. (1 ಪೇತ್ರ 5:10) ಆತನು ‘ಮನುಷ್ಯರ ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುತ್ತಾನೆ.’ ಆದರೆ ನಾವು ಸಾಯುವಷ್ಟರ ಮಟ್ಟಿಗೆ ಕಷ್ಟಾನುಭವಿಸುವುದಾದರೆ ಆಗೇನು? ಇದು ಸಹ ಯೆಹೋವನನ್ನು ಘನಪಡಿಸಸಾಧ್ಯವಿದೆ ಹೇಗೆಂದರೆ, ನಾವು ನಂಬಿಗಸ್ತಿಕೆಯಿಂದ ತಾಳುವುದನ್ನು ಯಾರು ನೋಡುತ್ತಾರೊ ಅವರು ಸಹ ದೇವರನ್ನು ಸ್ತುತಿಸಲಾರಂಭಿಸಬಹುದು.
ಆಗಸ್ಟ್ 26-ಸೆಪ್ಟೆಂಬರ್1
ಬೈಬಲಿನಲ್ಲಿರುವ ನಿಧಿ | ಕೀರ್ತನೆ 78
ಇಸ್ರಾಯೇಲ್ಯರ ತರ ನಂಬಿಕೆ ದ್ರೋಹ ಮಾಡಬೇಡಿ
ಕಾವಲಿನಬುರುಜು96 12/1 ಪುಟ 29-30
“ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ”—ಏಕೆ?
ದುಃಖಕರವಾಗಿ, ಇಸ್ರಾಯೇಲ್ಯರು ಅನೇಕ ವೇಳೆ ವಿಸ್ಮರಣೆಯ ಪಾಪವಶವಾದರು. ಯಾವ ಪರಿಣಾಮದೊಂದಿಗೆ? “[ದೇವರನ್ನು] ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು. ಅವರು ಆತನ ಭುಜಬಲವನ್ನೂ ಶತ್ರುಗಳಿಂದ ಬಿಡಿಸಿದ ಸಮಯವನ್ನೂ ಮರೆತುಬಿಟ್ಟರು.” (ಕೀರ್ತನೆ 78:41, 42) ಅಂತಿಮವಾಗಿ, ಯೆಹೋವನ ಆಜ್ಞೆಗಳ ಅವರ ವಿಸ್ಮರಣೆಯು, ಆತನು ಅವರನ್ನು ತಳ್ಳಿಹಾಕುವುದರಲ್ಲಿ ಪರ್ಯವಸಾನಗೊಂಡಿತು.—ಮತ್ತಾಯ 21:42, 43.
“ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು,” ಎಂದು ಬರೆದ ಕೀರ್ತನೆಗಾರನಿಂದ ಒಂದು ಶ್ರೇಷ್ಠ ಮಾದರಿಯು ಇಡಲ್ಪಟ್ಟಿತು. (ಕೀರ್ತನೆ 77:11, 12) ಗತಕಾಲದ ನಿಷ್ಠಾವಂತ ಸೇವೆ ಮತ್ತು ಯೆಹೋವನ ಪ್ರೀತಿಯ ಕೃತ್ಯಗಳನ್ನು ಹೀಗೆ ಧ್ಯಾನಪೂರ್ವಕವಾಗಿ ನೆನಪಿಸಿಕೊಳ್ಳುವುದು, ನಮಗೆ ಬೇಕಾದ ಪ್ರೇರಕ ಶಕ್ತಿ, ಪ್ರೋತ್ಸಾಹನೆ, ಮತ್ತು ಗಣ್ಯತೆಯನ್ನು ಒದಗಿಸುವುದು. ಇನ್ನು, “ಹಿಂದಿನ ದಿನಗಳನ್ನು ನೆನಪಿಗೆ” ತಂದುಕೊಳ್ಳುವುದು, ನಮ್ಮ ದಣಿವನ್ನು ತೊಲಗಿಸುವ ಕಾರ್ಯವನ್ನು ಮಾಡಿ, ನಮಗೆ ಸಾಧ್ಯವಿರುವುದನ್ನೆಲ್ಲ ಮಾಡಲು ಮತ್ತು ನಂಬಿಗಸ್ತಿಕೆಯ ಸಹನೆಗೆ ನಮ್ಮನ್ನು ಉತ್ತೇಜಿಸಬಲ್ಲದು.
ಕಾವಲಿನಬುರುಜು06 8/1 ಪುಟ 10 ಪ್ಯಾರ 16
‘ಗುಣುಗುಟ್ಟದಿರಿ’
16 ಗುಣುಗುಟ್ಟುವಾಗ, ನಮ್ಮ ಮನಸ್ಸು ನಮ್ಮ ಮೇಲೆ ಮತ್ತು ನಮ್ಮ ತೊಂದರೆಗಳ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ ಮತ್ತು ಯೆಹೋವನ ಸಾಕ್ಷಿಗಳಾಗಿ ನಾವು ಆನಂದಿಸುವಂಥ ಆಶೀರ್ವಾದಗಳನ್ನು ಹಿಂದೆ ತಳ್ಳುತ್ತದೆ. ನಮಗೆ ದೂರುವ ಪ್ರವೃತ್ತಿಯಿದ್ದು ನಾವದನ್ನು ಜಯಿಸಲು ಇಚ್ಛಿಸುವಲ್ಲಿ, ಆ ಆಶೀರ್ವಾದಗಳನ್ನು ನಾವು ನೆನಪಿಸಿಕೊಳ್ಳುತ್ತಾ ಇರಬೇಕು. ಉದಾಹರಣೆಗಾಗಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಯೆಹೋವನ ವೈಯಕ್ತಿಕ ಹೆಸರನ್ನು ಧರಿಸುವ ಸನ್ಮಾನವಿದೆ. (ಯೆಶಾಯ 43:10) ನಾವು ಆತನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ‘ಪ್ರಾರ್ಥನೆಯನ್ನು ಕೇಳುವಾತ’ನೊಂದಿಗೆ ಯಾವುದೇ ಸಮಯದಲ್ಲಿ ಮಾತಾಡಸಾಧ್ಯವಿದೆ. (ಕೀರ್ತನೆ 65:2; ಯಾಕೋಬ 4:8) ನಮ್ಮ ಬದುಕಿಗೆ ನಿಜವಾದ ಅರ್ಥವಿದೆ, ಏಕೆಂದರೆ ನಾವು ವಿಶ್ವ ಪರಮಾಧಿಕಾರದ ವಿವಾದಾಂಶವನ್ನು ಗ್ರಹಿಸುತ್ತೇವೆ ಮತ್ತು ದೇವರ ಕಡೆಗೆ ಸಮಗ್ರತೆ ಕಾಪಾಡಿಕೊಳ್ಳುವುದು ನಮಗಿರುವ ವಿಶೇಷ ಗೌರವವಾಗಿದೆ ಎಂಬುದನ್ನು ನೆನಪಿನಲ್ಲಿಡುತ್ತೇವೆ. (ಜ್ಞಾನೋಕ್ತಿ 27:11) ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಾವು ಕ್ರಮವಾಗಿ ಪಾಲ್ಗೊಳ್ಳಸಾಧ್ಯವಿದೆ. (ಮತ್ತಾಯ 24:14) ಯೇಸು ಕ್ರಿಸ್ತನ ವಿಮೋಚನಾ ಯಜ್ಞದಲ್ಲಿನ ನಂಬಿಕೆಯು, ನಮಗೊಂದು ಶುದ್ಧ ಮನಸ್ಸಾಕ್ಷಿ ಇರುವಂತೆ ಸಾಧ್ಯಗೊಳಿಸುತ್ತದೆ. (ಯೋಹಾನ 3:16) ಇವೆಲ್ಲವೂ, ನಾವು ಏನೇ ತಾಳಲಿಕ್ಕಿದ್ದರೂ ಆನಂದಿಸಸಾಧ್ಯವಿರುವ ಆಶೀರ್ವಾದಗಳಾಗಿವೆ.
ಕೈಪಿಡಿಯ ರೆಫರೆನ್ಸ್ಗಳು (mwbr)16.07 ಪುಟ 2 ಪ್ಯಾರ 1-2
ಯೆಹೋವನಿಗೆ ಭಾವನೆಗಳು ಇವೆಯಾ?
“ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ ಅಲ್ಲಿ ಆತನನ್ನು ನೋಯಿಸಿದರು.” (ವಚನ 40) ‘ಆತನನ್ನು ಪದೇಪದೇ ಪರೀಕ್ಷಿಸಿದರು’ ಎಂದು ಕೀರ್ತನೆಗಾರನು ಹೇಳಿದನು. (ವಚನ 41) ಇಲ್ಲಿ ಅವರು ಪುನಃ ಪುನಃ ದಂಗೆ ಎದ್ದರೆಂದು ಕೀರ್ತನೆಗಾರನು ಹೇಳಿದ್ದನ್ನು ಗಮನಿಸಿ. ಈಜಿಪ್ಟಿನಿಂದ ಬಿಡುಗಡೆಯಾಗಿ ಸ್ವಲ್ಪ ಸಮಯದಲ್ಲೇ ಅವರು ದಂಗೆ ಏಳಲು ಪ್ರಾರಂಭಿಸಿದರು. ತಮ್ಮನ್ನು ನೋಡಿಕೊಳ್ಳುವ ಸಾಮರ್ಥ್ಯ ಮತ್ತು ಮನಸ್ಸು ದೇವರಿಗಿದೆಯಾ ಎಂದು ಪ್ರಶ್ನಿಸುತ್ತಾ ಅವರು ದೇವರ ವಿರುದ್ಧ ಗುಣಗುಟ್ಟಲು ಆರಂಭಿಸಿದರು. (ಅರಣ್ಯಕಾಂಡ 14:1-4) ‘ಅವರು ಎಷ್ಟೋ ಸಾರಿ ಅವಿಧೇಯರಾದರು’ ಎಂಬ ಮಾತನ್ನು ಬೈಬಲ್ ಭಾಷಾಂತರಕಾರರ ಸಂಶೋಧನೆ ಪುಸ್ತಕ ಅಲಂಕಾರಿಕವಾಗಿ ‘ಅವರು ದೇವರ ವಿರುದ್ಧ ತಮ್ಮ ಹೃದಯಗಳನ್ನು ಕಲ್ಲು ಮಾಡಿಕೊಂಡರು’ ಅಥವಾ ‘ಅವರು ದೇವರಿಗೆ “ಇಲ್ಲ” ಎಂದರು’ ಎಂದು ಹೇಳಬಹುದು” ಅಂತ ತಿಳಿಸುತ್ತದೆ. ಆದರೂ ಅವರು ಪಶ್ಚಾತ್ತಾಪಪಟ್ಟಾಗ ಯೆಹೋವನು ಕರುಣೆ ತೋರಿಸುತ್ತಾ ಅವರನ್ನು ಕ್ಷಮಿಸಿದನು. ಆದರೆ ಹಿಂದೆ ಮಾಡಿದಂತೆಯೇ ಅವರು ಮತ್ತೆ ದಂಗೆ ಎದ್ದರು. ಈ ರೀತಿ ಪಶ್ಚಾತ್ತಾಪಪಡುವುದು, ಕ್ಷಮಿಸಿದ ನಂತರ ದಂಗೆ ಏಳುವುದು ನಡೆಯುತ್ತಲೇ ಇತ್ತು.—ಕೀರ್ತನೆ 78: 10-19, 38.
ಚಂಚಲ ಮನಸ್ಸಿನ ತನ್ನ ಈ ಜನರು ದಂಗೆ ಎದ್ದಾಗ ಯೆಹೋವನಿಗೆ ಹೇಗನಿಸಿತು? ‘ಅವರು ಆತನನ್ನು ನೋಯಿಸಿದರು’ ಎಂದು 40ನೇ ವಚನ ತಿಳಿಸುತ್ತದೆ. ಇನ್ನೊಂದು ಭಾಷಾಂತರ ‘ಆತನನ್ನು ದುಃಖಪಡಿಸಿದರು’ ಎಂದು ಹೇಳುತ್ತದೆ. “ಇದರ ಅರ್ಥ, ಮಕ್ಕಳು ಅವಿಧೇಯರಾದಾಗ ಅಥವಾ ದಂಗೆ ಎದ್ದಾಗ ಹೆತ್ತವರಿಗೆ ನೋವಾಗುವಂತೆಯೇ ಹೀಬ್ರು ಜನರ ನಡತೆಯು ಯೆಹೋವನನ್ನು ನೋಯಿಸುತ್ತಿತ್ತು” ಎಂದು ಬೈಬಲ್ ಸಂಶೋಧನೆ ಮಾಡಿ ಬರೆದ ಒಂದು ಪುಸ್ತಕ ತಿಳಿಸುತ್ತದೆ. ನಿಷ್ಠೆ ಇಲ್ಲದ ಮಕ್ಕಳು ಹೇಗೆ ಹೆತ್ತವರನ್ನು ನೋಯಿಸುತ್ತಾರೋ ಹಾಗೆಯೇ ಇಸ್ರಾಯೇಲ್ಯರು ಸರ್ವೋನ್ನತನಾದ ಯೆಹೋವನಿಗೆ ಅವಿಧೇಯತೆ ತೋರಿಸುತ್ತಾ ಆತನನ್ನು ನೋಯಿಸಿದರು.—ವಚನ 41.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 8/1 ಪುಟ 4 ಪ್ಯಾರ 3
ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳ ಮುಖ್ಯಾಂಶಗಳು
78:24, 25—ಇಸ್ರಾಯೇಲ್ಯರಿಗೆ ಒದಗಿಸಲಾದ ಮನ್ನವನ್ನು “ಸ್ವರ್ಗಧಾನ್ಯ” ಮತ್ತು “ದೇವದೂತರ ಆಹಾರ” ಎಂದು ಏಕೆ ಕರೆಯಲಾಗಿದೆ? ಮನ್ನವು ದೇವದೂತರು ಸೇವಿಸುತ್ತಿದ್ದ ಆಹಾರವಾಗಿತ್ತು ಎಂದು ಈ ಎರಡೂ ಅಭಿವ್ಯಕ್ತಿಗಳ ಅರ್ಥವಲ್ಲ. ಅದು “ಸ್ವರ್ಗಧಾನ್ಯ”ವಾಗಿತ್ತು ಏಕೆಂದರೆ ಅದು ಯೆಹೋವನ ಅಪ್ಪಣೆಯಂತೆ ಸ್ವರ್ಗದಿಂದ ಬರುತ್ತಿತ್ತು. (ಕೀರ್ತನೆ 105:40) ದೇವದೂತರು ಸ್ವರ್ಗದಲ್ಲಿ ವಾಸಿಸುವುದರಿಂದ “ದೇವದೂತರ ಆಹಾರ” ಎಂಬ ವಾಕ್ಸರಣಿಯ ಅರ್ಥವು, ಅದನ್ನು ಸ್ವರ್ಗದಲ್ಲಿರುವ ದೇವರು ಒದಗಿಸಿದ್ದನು ಎಂದಾಗಿರಬಹುದು. (ಕೀರ್ತನೆ 11:4) ಇಸ್ರಾಯೇಲ್ಯರಿಗೆ ಮನ್ನವನ್ನು ಒದಗಿಸಲು ಯೆಹೋವನು ದೇವದೂತರನ್ನು ಉಪಯೋಗಿಸಿದ್ದಿರಲೂಬಹುದು.