ವಾಗ್ದತ್ತ ದೇಶದಿಂದ ದೃಶ್ಯಗಳು
ಯೊಪ್ಪ—ಗಮನಾರ್ಹ ಪ್ರಾಚೀನ ಬಂದರು
ಪ್ರಾಚೀನ ಇಸ್ರಾಯೇಲಿಗೆ ಉದ್ದವಾದ ಮರಳಿನ ಕರಾವಳಿ ಇತ್ತು. ಆದರೂ ಇಸ್ರಾಯೇಲ್ಯರು ವಿಶಿಷ್ಟವಾಗಿ ಸಮುದ್ರಯಾನಿಗಳೆಂದು ಜ್ಞಾತರಲ್ಲ. ಅವರ ಕರಾವಳಿಯ ಪ್ರಕೃತಿಯು ಇದಕ್ಕೆ ಒಂದು ಕಾರಣವಾಗಿದ್ದಿರಬಹುದು.
ನೈಲ್ ನದಿಯಿಂದ ಸಮುದ್ರಕ್ಕೆ ಒಯ್ಯಲ್ಪಡುತ್ತಿದ್ದ ಮರಳಿನಿಂದಾಗಿ ಉಂಟಾದ ಕೊನೆಯಿಲ್ಲದ ತೀರಗಳ ಸಾಲು ಮತ್ತು ಮರಳಿನ ದಿಬ್ಬಗಳು ಅಲ್ಲಿವೆ.a ನೀವು ಐಗುಪ್ತದ ಮೇರೆಯಿಂದ ಸಮುದ್ರಯಾನ ಮಾಡಿದ್ದರೆ, ಕರ್ಮೆಲ್ ಬೆಟ್ಟದ ದಕ್ಷಿಣಕ್ಕಿರುವ ನಿಜವಾಗಿ ಎದ್ದುಕಾಣುವ ಒಂದು ಸ್ವಾಭಾವಿಕ ಬಂದರನ್ನು ಕಾಣಲಿಕ್ಕಿಲ್ಲ.
ಆದರೆ ಇಸ್ರಾಯೇಲಿನ ಕರಾವಳಿಯ ಸುಮಾರು ನಡುಮಧ್ಯೆ ಬೆಟ್ಟದ ಮೇಲೆ ಯೊಪ್ಪ ನಗರವನ್ನು ನೀವು ಕಾಣಬಹುದು. ಚಿತ್ರವು ತೋರಿಸುವಂತೆ, ತೀರದಾಚೆಯ ಬಂಡೆಗಳ ಸಾಲು ಒಂದು ಸಣ್ಣ ಕೊಲ್ಲಿಯನ್ನು ರೂಪಿಸಿವೆ. ಫಲಿತಾಂಶವಾಗಿ ಈ ಬಂದರು ಉತ್ತರ ಕಡೆಯಾಚೆ ಇರುವ ಎಕ್ರೆ (ಟೋಲ್ಮೈಸ್) ಗಿಂತ ಕೀಳ್ಮಟ್ಟದ್ದಾಗಿದ್ದರೂ, ಅದಿನ್ನೂ ಯೊಪ್ಪವನ್ನು ಗಮನಾರ್ಹವಾಗಿ ಮಾಡಿತ್ತು. (ಅಪೋ. 21:7) ಮಹಾ ಹೆರೋದನು ಕೈಸರೇಯದ ಕೃತಕ ರೇವನ್ನು ಕಟ್ಟುವ ತನಕ ಯೊಪ್ಪವು ಹಡಗು ತಂಗಲು ಅತ್ಯುತ್ತಮ ಕರಾವಳಿ ಸ್ಥಳವಾಗಿತ್ತು. ಯೊಪ್ಪದ ಕುರಿತಾದ ಕೆಲವು ಬೈಬಲ್ ಉಲ್ಲೇಖಗಳ ಮೇಲೆ ಇದು ಪ್ರಕಾಶಬೀರುತ್ತದೆ.
ತೂರಿನ ಅರಸನಾದ ಹೀರಾಮನು ಸೊಲಮೋನನಿಗೆ ದೇವಾಲಯ ಕಟ್ಟಲು ಸಹಾಯ ನೀಡಿದಾಗ ಅಂದದ್ದು: “ನಾವಾದರೋ ನಿಮಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು ತೆಪ್ಪಗಳಾಗಿ ಕಟ್ಟಿ ಸಮುದ್ರ ಮಾರ್ಗವಾಗಿ ಯೊಪ್ಪಕ್ಕೆ ಕಳುಹಿಸುವೆವು. ಅಲ್ಲಿಂದ ನೀನು ಅವುಗಳನ್ನು ಯೆರೂಸಲೇಮಿಗೆ ತರಿಸಿಕೊಳ್ಳಬಹುದು.” (2 ಪೂರ್ವಕಾಲ 2:1, 11, 16) ಈ ತೆಪ್ಪಗಳು ತೂರಿನ ಯಾ ಸಿದೋನಿನ ಫೊನೀಶಿಯರ ಬಂದರುಗಳಿಂದ ಕಳುಹಿಸಲ್ಪಟ್ಟಿರುಬೇಕು. (ಯೆಶಾಯ 23:1, 2: ಯೆಹೆಜ್ಕೇಲ 27:8, 9) ಕರ್ಮೆಲನ್ನು ದಾಟಿ ಈ ದೇವದಾರು ಮರದ ತೆಪ್ಪಗಳು ಯೊಪ್ಪಕ್ಕೆ ಬರುತ್ತಿದ್ದವು. ಅಲ್ಲಿಂದ 34 ಮೈಲು ದೂರ ಪೂರ್ವ⁄ಆಗ್ನೇಯದಲ್ಲಿರುವ ಯೆರೂಸಲೇಮಿಗೆ ಈ ದೇವದಾರುಗಳನ್ನು ಕೊಂಡೊಯ್ಯುತ್ತಿದ್ದರು. ಬಂಧಿವಾಸದ ನಂತರ ಯೆಹೂದ್ಯರು ದೇವಾಲಯವನ್ನು ಪುನ: ಕಟ್ಟಿದಾಗ ಯೊಪ್ಪವು ದೇವದಾರು ಮರಗಳನ್ನು ಇಳಿಸುವ ರೇವು ಕೂಡಾ ಆಗಿತ್ತು.—ಎಜ್ರ 3:7.
ಪ್ರಾಯಶ: ಮರಗಳೊಂದಿಗೆ ಬರುತ್ತಿದ್ದ ಕೆಲಸಗಾರರು ತಕ್ಕಡಿಯಾಕಾರದಂತಹ ಫೊನಿಶಿಯ ಹಡಗಗಳಲ್ಲಿ ಪ್ರಯಾಣಿಸುತ್ತಿದ್ದರು. ನೀವದನ್ನು ಪರೀಕ್ಷಿಸುವಲ್ಲಿ, ಯೆಹೋವನು ಯೋನನಿಗೆ ನಿನೆವೆಯ ನೇಮಕವನ್ನು ಕೊಟ್ಟನಂತರ ಪ್ರವಾದಿಯು ವಿರುದ್ಧ ದಿಕ್ಕಿಗೆ ಪಲಾಯನಗೈದದ್ದನ್ನುನೆನಪಿಗೆ ತನ್ನಿರಿ. “[ಯೋನನು] ತಾರ್ಶೀಷಿಗೆ ಓಡಿಹೋಗಬೇಕೆಂದು ಹೊರಟು ಯೊಪ್ಪದಲ್ಲಿ ಇಳಿದು ಅಲ್ಲಿ ತಾರ್ಶೀಷಿಗೆ ತೆರಳುವ ಹಡಗನ್ನು ಕಂಡು ಬಾಡಿಗೆ ಕೊಟ್ಟು ಯೆಹೋವನ ಸನ್ನಿಧಿಯಿಂದ ಓಡಿಹೋಗಲು ಹಡಗಿನವರೊಡನೆ ಅದನ್ನು ಹತ್ತಿದನು.”—ಯೋನ 1:1-3.
ಪ್ರಾಯಶ: ಯೋನನು ಯೊಪ್ಪದಿಂದ ತಾರ್ಶಿಷಿಗೆ (ಪ್ರಾಚೀನ ಸ್ಪೈನ್ ಇರಬಹುದು) ದೀರ್ಘ ಸಮುದ್ರಯಾನ ಮಾಡಶಕ್ತವಾದ ಈ ರೀತಿಯ ಹಡಗವನ್ನು ಹತ್ತಿರಬೇಕು. ಅದಕ್ಕೆ ಪ್ರಾಯಶ: ಎತ್ತರವಾದ ಮೂತಿ ಇದ್ದು, ಹತ್ತಿರದಲ್ಲಿ ಒಂದು ಕಲ್ಲಿನ ಲಂಗರವಿತ್ತು. ಈ ನಮೂನೆಯಲ್ಲಿ ತೋರಿಸದ ಹಡಗಿನ ಅಟ್ಟದಲ್ಲಿ ಪ್ರಯಾಣಿಕರು, ನಾವಿಕರು ಮತ್ತು ಸ್ವಲ್ಪ ಸರಕು ಇರಸಾಧ್ಯವಿತ್ತು. ಅಟ್ಟದ ಕೆಳಗೆ ತಳಭಾಗದಲ್ಲಿ ಹೆಚ್ಚು ಸರಕನ್ನು ಇಡಬಹುದಿತ್ತು ಮತ್ತು ಯೋನನು ನಿದ್ದೆಮಾಡಿದ್ದು ಇಲ್ಲಿಯೇ. ಹಡಗವು ಗಟ್ಟಿಯಾದ ಜೂನಿಫರ್ ಮರದ ಹಲಗೆಗಳಿಂದ ಮಾಡಲ್ಪಟ್ಟಿದ್ದು, ಅದರ ದೊಡ್ಡ ಬಟ್ಟೆಯ ಹಾಯಿಯನ್ನು ಆಧರಿಸಲು ದೇವದಾರು ಮರದ ಕಂಭವೂಂದಿತ್ತು. ಎರಡು ಪಕ್ಕಗಳಲ್ಲಿ ಉದ್ದವಾದ ಹುಟ್ಟುಗೋಲುಗಳ (ಪ್ರಾಯಶ: ಬಾಷಾನಿನ ಓಕ್ ಮರದ್ದು) ಸಾಲನ್ನು ನೋಡಿರಿ. ಹಡಗವು ಸಮುದ್ರದಲ್ಲಿದೆ ಮತ್ತು ಭೀಕರ ತುಫಾನು ಎದಿದ್ದೆ ಎಂದೀಗ ಊಹಿಸಿರಿ. ನಾವಿಕರು ತಮ್ಮೆಲ್ಲಾ ದೇವರುಗಳಿಗೆ ಸಹಾಯಕ್ಕಾಗಿ ಕೂಗಿದ್ದನ್ನೂ, ಮತ್ತು ಕೊನೆಗೆ ತಮ್ಮ ಬಚಾವಿಗಾಗಿ ಯೋನನನ್ನು ಬಲವಂತವಾಗಿ ಎತ್ತಿ ಸಮುದ್ರಕ್ಕೆ ಹಾಕಿದ್ದನ್ನೂ ನೆನಪಿಸಿರಿ.—ಯೆಹೆಜ್ಕೇಲ 27:5-9; ಯೋನ 1:4-15.
ಒಂದನೇ ಶತಕದ ಯೊಪ್ಪವು ಕ್ರೈಸ್ತ ಸಭೆಯೊಂದರ ಬೀಡಾಗಿದ್ದು ಅವರಲ್ಲಿ ಕೆಲವರು ರೇವು ಕಾರ್ಮಿಕರು ಯಾ ಮಾಜಿ ನಾವಿಕರಾಗಿದ್ದಿರಬಹುದು. ಈ ಕಾರ್ಯಮಗ್ನ ರೇವಿನ ಒಬ್ಬ ಸಭಾಸದಸ್ಯೆ ಯೆಹೂದ್ಯಳಾಗಿದ್ದ ದೊರ್ಕಳು (ತಬೀಥ). “ಆಕೆಯು ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.” ಸಾ.ಶ. 36 ರಲ್ಲಿ ದೊರ್ಕಳು ಅಸ್ವಸ್ಥ ಬಿದ್ದು ಸತ್ತಾಗ ಅನೇಕರು ಅವಳ ಸತ್ಕ್ರಿಯೆಗಳನ್ನು ನೆನಸಿಕೊಂಡು ಗೋಳಾಡಿದರು. ಜತೆಕ್ರೈಸ್ತರು ಹೋಗಿ ಅಪೋಸ್ತಲ ಪೇತ್ರನನ್ನು ಲುದ್ದ (ಟೆಲ್ ಎವೀವ್ ವಿಮಾನ ನಿಲ್ದಾಣ ಸಮೀಪದ ಆಧುನಿಕ ಲೊಡ್) ದಿಂದ ಯೊಪ್ಪಕ್ಕೆ ಕರತಂದರು. ಪೇತ್ರನು ಈ ಪ್ರಿಯ ಸಹೋದರಿಯನ್ನು ಪುನರುತ್ಥಾನ ಮಾಡಿದನು, ಈ ಅದ್ಭುತವು “ಯೊಪ್ಪದಲ್ಲೆಲ್ಲಾ ತಿಳಿಯಬಂದು ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು.”—ಅಪೋಸ್ತಲರ ಕೃತ್ಯ 9:36-42.
ಯೊಪ್ಪದಲ್ಲಿ ಪೇತ್ರನು ಚರ್ಮಕಾರ ಸೀಮೋನನ ಮನೆಯಲ್ಲಿ ಸ್ವಲ್ಪ ಸಮಯ ಉಳಿದನು. ಇಲ್ಲಿ ಅಪೋಸ್ತಲನಿಗಾದ ಒಂದು ದರ್ಶನವು ಅವನನ್ನು ಯೊಪ್ಪ ಸಭೆಯ ಹಲವು ಸಹೋದರರ ಜತೆಯಲ್ಲಿ ಉತ್ತರ ಕರಾವಳಿ ಮಾರ್ಗವಾಗಿ ಕೈಸರೇಯದ ಹೊಸರೇವಿಗೆ ನಡಿಸಿತು. ಅಲ್ಲಿ ಪೇತ್ರನು ರೋಮನ್ ಸೇನಾಧಿಕಾರಿ ಕೊರ್ನೇಲ್ಯನಿಗೆ ಸಾರಿ, ದೀಕ್ಷಾಸ್ನಾನ ಕೊಟ್ಟನು, ಸುನ್ನತಿಯಿಲ್ಲದ ಅನ್ಯರಲ್ಲಿ ಆತ್ಮಾಭಿಕ್ತ ಕ್ರೈಸ್ತನಾಗಿ ಪರಿಣಮಿಸಿದವನು ಇವನೇ ಮೊದಲು. (ಅಪೋ. 9:43–10:48) ಕ್ರೈಸ್ತ ಇತಿಹಾಸದಲ್ಲಿ ನಡೆದ ಈ ಸಂದಿಗ್ದ ಬೆಳವಣಿಗೆಯ ಸುದ್ಧಯೊಂದಿಗೆ ಸಹೋದರರು ಹಿಂದಿರುಗಿದಾಗ ಯೊಪ್ಪದಲ್ಲಿ ಎಂತಹ ಸಂತೋಷ ಮತ್ತು ಸಂಭ್ರಮಗಳು ಆಗಿದ್ದಿರಬೇಕು!
ಇಂದು ಆಧುನಿಕ ಟೆಲ್ ಎವೀವ್-ಜಾಫಾದ ಭಾಗವಾದ ಯೊಪ್ಪವನ್ನು ಅನೇಕ ಸಂದರ್ಶಕರು ಸಂದರ್ಶಿಸುತ್ತಾರೆ ಮತ್ತು ಈ ಗಮನಾರ್ಹವಾದ ಬಂದರಿನಲ್ಲಿ ಸಂಭವಿಸಿದ ಬೈಬಲಿನ ಘಟನೆಗಳನ್ನು ಅವರು ಸುಲಭವಾಗಿ ಮರುಕಳಿಸಬಲ್ಲರು. (w89 9/1)
[ಅಧ್ಯಯನ ಪ್ರಶ್ನೆಗಳು]
a 1989ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ನ ಮುಖಪುಟದಲ್ಲಿರುವ ಉಪಗ್ರಹದ ಚಿತ್ರದಲ್ಲಿ ಈ ಮರಳಿನ ಕರಾವಳಿಯನ್ನು ನೀವು ಸುಲಭವಾಗಿ ಕಾಣಬಲ್ಲಿರಿ. ಮೇಲಿನ ಯೊಪ್ಪದ ದೊಡ್ಡ ಚಿತ್ರವನ್ನೂ ಈ ಕ್ಯಾಲೆಂಡರ್ ಒದಗಿಸುತ್ತದೆ.
[ಪುಟ 10 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 11 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.