ಯೆಹೋವನ ವಾಕ್ಯವು ಸಜೀವವಾದದ್ದು
ಎರಡನೇ ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು
ಬೈಬಲಿನ ಎರಡನೇ ಪೂರ್ವಕಾಲವೃತ್ತಾಂತ ಪುಸ್ತಕವು, ಇಸ್ರಾಯೇಲಿನಲ್ಲಿ ಸೊಲೊಮೋನನು ಅರಸನಾಗಿ ಆಳ್ವಿಕೆ ನಡೆಸುವ ವಿಷಯದೊಂದಿಗೆ ಆರಂಭವಾಗುತ್ತದೆ. ಈ ಪುಸ್ತಕವು, ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಯೆಹೂದ್ಯರಿಗೆ ಪಾರಸಿಯ ಅರಸನಾದ ಕೋರೆಷನು ನುಡಿದ ಈ ಮಾತುಗಳೊಂದಿಗೆ ಕೊನೆಗೊಳ್ಳುತ್ತದೆ: “ಯೆಹೋವನು ನನಗೆ . . . ತನಗೋಸ್ಕರ ಯೆಹೂದದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಸ್ವದೇಶಕ್ಕೆ [ಯೆರೂಸಲೇಮಿಗೆ] ಹೋಗಲಿ; ಅವರ ದೇವರಾದ ಯೆಹೋವನು ಅವರ ಸಂಗಡ ಇರುವನು.” (2 ಪೂರ್ವಕಾಲವೃತ್ತಾಂತ 36:23) ಸಾ.ಶ.ಪೂ. 460ರಲ್ಲಿ ಯಾಜಕನಾದ ಎಜ್ರನಿಂದ ಪೂರ್ಣಗೊಳಿಸಲ್ಪಟ್ಟ ಈ ಪುಸ್ತಕವು, ಸಾ.ಶ.ಪೂ. 1037ರಿಂದ ಸಾ.ಶ.ಪೂ. 537ರ ವರೆಗಿನ 500 ವರ್ಷಗಳ ಘಟನೆಗಳನ್ನು ಒಳಗೂಡಿದೆ.
ಕೋರೆಷನ ಆಜ್ಞೆಯಿಂದಾಗಿ ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗಲು ಮತ್ತು ಅಲ್ಲಿ ಯೆಹೋವನ ಆರಾಧನೆಯನ್ನು ಪುನಸ್ಸ್ಥಾಪಿಸಲು ಸಾಧ್ಯವಾಗುತ್ತದೆ. ಆದರೆ, ಬಾಬೆಲಿನ ಬಂಧಿವಾಸದಲ್ಲಿ ಅವರು ಕಳೆದಿರುವ ಅನೇಕ ವರ್ಷಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ತಂದೊಡ್ಡಿವೆ. ಹಿಂದಿರುಗಿರುವಂಥ ದೇಶಭ್ರಷ್ಟರಿಗೆ ತಮ್ಮ ರಾಷ್ಟ್ರೀಯ ಇತಿಹಾಸದ ಕುರಿತಾದ ಜ್ಞಾನದ ಕೊರತೆಯಿದೆ. ಎರಡನೇ ಪೂರ್ವಕಾಲವೃತ್ತಾಂತವು ಅವರಿಗೆ, ದಾವೀದನ ರಾಜವಂಶದ ಅರಸರುಗಳ ಕೆಳಗೆ ನಡೆದ ಘಟನೆಗಳ ಸುಸ್ಪಷ್ಟ ಸಾರಾಂಶವನ್ನು ಒದಗಿಸುತ್ತದೆ. ಈ ಕಥನವು ನಮಗೆ ಸಹ ಆಸಕ್ತಿಕರವಾದದ್ದಾಗಿದೆ, ಏಕೆಂದರೆ ಸತ್ಯ ದೇವರಿಗೆ ವಿಧೇಯರಾಗುವುದರಿಂದ ಬರುವ ಆಶೀರ್ವಾದಗಳನ್ನು ಮತ್ತು ಆತನಿಗೆ ಅವಿಧೇಯರಾಗುವುದರ ಪರಿಣಾಮಗಳನ್ನು ಅದು ಎತ್ತಿತೋರಿಸುತ್ತದೆ.
ಅರಸನೊಬ್ಬನು ಯೆಹೋವನಿಗೆ ಒಂದು ಆಲಯವನ್ನು ಕಟ್ಟಿಸುತ್ತಾನೆ
(2 ಪೂರ್ವಕಾಲವೃತ್ತಾಂತ 1:1-9:31)
ಧನಸಂಪತ್ತು ಮತ್ತು ಘನತೆಯೊಂದಿಗೆ ಅರಸನಾದ ಸೊಲೊಮೋನನು ಏನನ್ನು ಹೃದಯದಾಳದಿಂದ ಬಯಸುತ್ತಾನೋ ಅದನ್ನು, ಅಂದರೆ ವಿವೇಕ ಮತ್ತು ಜ್ಞಾನವನ್ನು ಯೆಹೋವನು ಅವನಿಗೆ ದಯಪಾಲಿಸುತ್ತಾನೆ. ಈ ಅರಸನು ಯೆರೂಸಲೇಮಿನಲ್ಲಿ ಯೆಹೋವನಿಗಾಗಿ ಭವ್ಯವಾದ ಒಂದು ಆಲಯವನ್ನು ಕಟ್ಟಿಸುತ್ತಾನೆ ಮತ್ತು ಜನರು ‘ಆನಂದಭರಿತರಾಗಿದ್ದಾರೆ ಮತ್ತು ಹರ್ಷಿಸುತ್ತಿದ್ದಾರೆ.’ (2 ಪೂರ್ವಕಾಲವೃತ್ತಾಂತ 7:10) ಸೊಲೊಮೋನನು “ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿ” ಪರಿಣಮಿಸಿದನು.—2 ಪೂರ್ವಕಾಲವೃತ್ತಾಂತ 9:22.
ಇಸ್ರಾಯೇಲ್ಯರನ್ನು 40 ವರ್ಷ ಆಳಿದ ಬಳಿಕ ಸೊಲೊಮೋನನು ತನ್ನ “ಪಿತೃಗಳ ಬಳಿಗೆ ಸೇರಿದನು; . . . ಅವನಿಗೆ ಬದಲಾಗಿ ಅವನ ಮಗನಾದ ರೆಹಬ್ಬಾಮನು ಅರಸನಾದನು.” (2 ಪೂರ್ವಕಾಲವೃತ್ತಾಂತ 9:30, 31) ಸೊಲೊಮೋನನು ಸತ್ಯ ಆರಾಧನೆಯಿಂದ ದಾರಿತಪ್ಪಿದ್ದನ್ನು ಎಜ್ರನು ದಾಖಲಿಸುವುದಿಲ್ಲ. ಈ ಅರಸನ ಕುರಿತು ಯಾವ ನಕಾರಾತ್ಮಕ ಅಂಶಗಳು ಮಾತ್ರವೇ ತಿಳಿಸಲ್ಪಟ್ಟಿವೆಯೆಂದರೆ, ಅವಿವೇಕತನದಿಂದ ಅವನು ಐಗುಪ್ತದಿಂದ ಅನೇಕ ಕುದುರೆಗಳನ್ನು ಒಟ್ಟುಗೂಡಿಸಿಕೊಂಡದ್ದು ಮತ್ತು ಫರೋಹನ ಮಗಳೊಂದಿಗೆ ಅವನು ವಿವಾಹವಾದದ್ದು. ಹೀಗೆ ಎಜ್ರನು ತನ್ನ ವೃತ್ತಾಂತವನ್ನು ರಚನಾತ್ಮಕ ದೃಷ್ಟಿಕೋನದಲ್ಲಿ ಸಾದರಪಡಿಸುತ್ತಾನೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
2:14—ಇಲ್ಲಿ ಅಕ್ಕಸಾಲಿಗನ ವಂಶಾವಳಿಯ ಕುರಿತು ಕೊಡಲ್ಪಟ್ಟಿರುವ ವಿವರಣೆಯು, 1 ಅರಸುಗಳು 7:14ರಲ್ಲಿ ಕೊಡಲ್ಪಟ್ಟಿರುವ ವಿವರಣೆಗಿಂತ ಭಿನ್ನವಾಗಿದೆ ಏಕೆ? ಒಂದನೇ ಅರಸುಗಳು ಪುಸ್ತಕವು ಅಕ್ಕಸಾಲಿಗನ ತಾಯಿಯು “ನಫ್ತಾಲಿಕುಲದ ಒಬ್ಬ ವಿಧವೆ” ಎಂದು ಸೂಚಿಸುತ್ತದೆ, ಏಕೆಂದರೆ ಅವಳು ಆ ಕುಲದ ಒಬ್ಬ ಪುರುಷನನ್ನು ವಿವಾಹವಾಗಿದ್ದಳು. ಆದರೆ ಸ್ವತಃ ಅವಳು ದಾನ್ಕುಲದಿಂದ ಬಂದವಳಾಗಿದ್ದಳು. ಅವಳ ಗಂಡನು ಮರಣಪಟ್ಟ ಬಳಿಕ ಅವಳು ತೂರಿನ ಪುರುಷನೊಬ್ಬನನ್ನು ವಿವಾಹವಾದಳು ಮತ್ತು ಅಕ್ಕಸಾಲಿಗನು ಈ ವಿವಾಹದಲ್ಲಿ ಹುಟ್ಟಿದ ಸಂತಾನವಾಗಿದ್ದನು.
2:18; 8:10—ಬಿಟ್ಟೀಕೆಲಸ ಮಾಡುವವರ ಮೇಲ್ವಿಚಾರಕರಾಗಿ ಮತ್ತು ಅಧಿಕಾರಿಗಳಾಗಿ ಕಾರ್ಯನಡಿಸುತ್ತಿದ್ದ ಮುಖ್ಯಾಧಿಪತಿಗಳ ಸಂಖ್ಯೆ 3,600 ಹಾಗೂ 250 ಎಂದು ಈ ವಚನಗಳು ತಿಳಿಸುತ್ತವೆ. ಆದರೆ 1 ಅರಸುಗಳು 5:16; 9:23ಕ್ಕನುಸಾರ ಅವರ ಸಂಖ್ಯೆ 3,300 ಮತ್ತು 550 ಆಗಿತ್ತು. ಇಲ್ಲಿ ಸಂಖ್ಯೆಗಳಲ್ಲಿ ಭಿನ್ನತೆ ಇದೆ ಏಕೆ? ಮುಖ್ಯಾಧಿಪತಿಗಳು ವರ್ಗೀಕರಿಸಲ್ಪಟ್ಟಿರುವ ವಿಧದಲ್ಲಿ ಭಿನ್ನತೆಯು ಇರುವಂತೆ ತೋರುತ್ತದೆ. ಎರಡನೇ ಪೂರ್ವಕಾಲವೃತ್ತಾಂತವು 3,600 ಮಂದಿ ಇಸ್ರಾಯೇಲ್ಯೇತರ ಹಾಗೂ 250 ಮಂದಿ ಇಸ್ರಾಯೇಲ್ಯ ಮುಖ್ಯಾಧಿಪತಿಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತಿರುವಾಗ, ಒಂದನೇ ಅರಸುಗಳು ಪುಸ್ತಕವು 3,300 ಅಧಿಕಾರಿಗಳು ಮತ್ತು ಉಚ್ಚ ಸ್ಥಾನಮಾನದ 550 ಮಂದಿ ಮೇಲ್ವಿಚಾರಕರ ನಡುವಣ ಭಿನ್ನತೆಯನ್ನು ತೋರಿಸುತ್ತಿರಬಹುದು. ವಿಷಯವು ಏನೇ ಇರಲಿ, ಮುಖ್ಯಾಧಿಪತಿಗಳಾಗಿ ಕಾರ್ಯನಡಿಸುತ್ತಿದ್ದವರ ಒಟ್ಟು ಸಂಖ್ಯೆಯು 3,850 ಆಗಿತ್ತು.
4:2-4—ಎರಕದ ಪಾತ್ರೆಯ ತಳದ ನಿರ್ಮಾಣದಲ್ಲಿ ಹೋರಿಗಳ ಪ್ರತಿರೂಪಗಳನ್ನು ಏಕೆ ಉಪಯೋಗಿಸಲಾಯಿತು? ಶಾಸ್ತ್ರವಚನಗಳಲ್ಲಿ ಹೋರಿಗಳು ಬಲದ ಸಂಕೇತವಾಗಿವೆ. (ಯೆಹೆಜ್ಕೇಲ 1:10; ಪ್ರಕಟನೆ 4:6, 7) ಪ್ರತಿರೂಪವಾಗಿ ಹೋರಿಗಳನ್ನು ಆಯ್ಕೆಮಾಡಿದ್ದು ಸೂಕ್ತವಾದದ್ದಾಗಿತ್ತು, ಏಕೆಂದರೆ ಸುಮಾರು 30 ಟನ್ನುಗಳಷ್ಟು ತೂಕವಿದ್ದ ಈ ದೊಡ್ಡ ಎರಕದ ‘ಪಾತ್ರೆಗೆ’ ತಾಮ್ರದ 12 ಹೋರಿಗಳು ಆಧಾರವಾಗಿದ್ದವು. ಈ ಉದ್ದೇಶಕ್ಕಾಗಿ ಹೋರಿಗಳನ್ನು ಮಾಡುವುದು, ಆರಾಧನೆಗೋಸ್ಕರ ಮೂರ್ತಿಗಳನ್ನು ಮಾಡಿಕೊಳ್ಳುವುದನ್ನು ನಿಷೇಧಿಸಿದ್ದ ಎರಡನೇ ಆಜ್ಞೆಯ ಯಾವುದೇ ರೀತಿಯ ಉಲ್ಲಂಘನೆಯಾಗಿರಲಿಲ್ಲ.—ವಿಮೋಚನಕಾಂಡ 20:4, 5.
4:5—ಈ ಎರಕದ ಪಾತ್ರೆಯಲ್ಲಿ ನೀರನ್ನು ಎಷ್ಟು ಗರಿಷ್ಠ ಪ್ರಮಾಣದಲ್ಲಿ ಶೇಖರಿಸಸಾಧ್ಯವಿತ್ತು? ಪೂರ್ಣ ರೀತಿಯಲ್ಲಿ ತುಂಬಿಸಲ್ಪಟ್ಟಾಗ ಈ ಪಾತ್ರೆಯು ಮೂರು ಸಾವಿರ ಬತ್, ಅಂದರೆ ಸುಮಾರು 66,000 ಲೀಟರುಗಳಷ್ಟು ನೀರನ್ನು ಹಿಡಿಯುತ್ತಿತ್ತು. ಆದರೆ, ಸಾಮಾನ್ಯವಾಗಿ ಇದರ ಗರಿಷ್ಠ ಪ್ರಮಾಣದ ಮೂರನೇ ಎರಡು ಭಾಗದಷ್ಟು ನೀರು ಮಾತ್ರ ಇದರಲ್ಲಿ ತುಂಬಿಸಲ್ಪಡುತ್ತಿದ್ದಿರಬಹುದು. ಒಂದನೇ ಅರಸುಗಳು 7:26 ತಿಳಿಸುವುದು: “[ಎರಕದ ಪಾತ್ರೆಯು] ಎರಡು ಸಾವಿರ ಬತ್ [44,000 ಲೀಟರುಗಳಷ್ಟು] ನೀರನ್ನು ಹಿಡಿಯುವದು.”
5:4, 5, 10—ಆರಂಭದ ದೇವದರ್ಶನದ ಗುಡಾರದ ಯಾವ ಸಾಮಾನುಗಳು ಸೊಲೊಮೋನನ ಆಲಯದಲ್ಲಿ ಉಪಯೋಗಿಸಲ್ಪಟ್ಟವು? ಆರಂಭದ ದೇವದರ್ಶನದ ಗುಡಾರದಿಂದ ಕೊಂಡೊಯ್ಯಲ್ಪಟ್ಟು ಸೊಲೊಮೋನನ ಆಲಯದಲ್ಲಿ ಇಡಲ್ಪಟ್ಟ ಏಕಮಾತ್ರ ವಸ್ತುವು ಮಂಜೂಷವೇ ಆಗಿತ್ತು. ದೇವಾಲಯವು ನಿರ್ಮಿಸಲ್ಪಟ್ಟ ಬಳಿಕ, ಆ ದೇವದರ್ಶನದ ಗುಡಾರವನ್ನು ಗಿಬ್ಯೋನಿನಿಂದ ಯೆರೂಸಲೇಮಿಗೆ ಕೊಂಡೊಯ್ಯಲಾಯಿತು ಮತ್ತು ಅದನ್ನು ಅಲ್ಲಿಯೇ ದಾಸ್ತಾನುಮಾಡಲಾಯಿತು ಎಂಬುದು ಸುವ್ಯಕ್ತ.—2 ಪೂರ್ವಕಾಲವೃತ್ತಾಂತ 1:3, 4.
ನಮಗಾಗಿರುವ ಪಾಠಗಳು:
1:11, 12. ಸೊಲೊಮೋನನ ವಿನಂತಿಯು ಯೆಹೋವನಿಗೆ, ವಿವೇಕ ಮತ್ತು ಜ್ಞಾನವನ್ನು ಪಡೆದುಕೊಳ್ಳುವುದು ಅವನ ಕಡುಬಯಕೆಯಾಗಿತ್ತು ಎಂಬುದನ್ನು ತೋರಿಸಿಕೊಟ್ಟಿತು. ಹೌದು, ದೇವರಿಗೆ ನಾವು ಮಾಡುವ ಪ್ರಾರ್ಥನೆಗಳು, ನಮ್ಮ ಕಡುಬಯಕೆಗಳೇನು ಎಂಬುದನ್ನು ತಿಳಿಯಪಡಿಸುತ್ತವೆ. ನಮ್ಮ ಪ್ರಾರ್ಥನೆಗಳಲ್ಲಿ ಏನು ಒಳಗೂಡಿದೆ ಎಂಬುದನ್ನು ವಿಶ್ಲೇಷಿಸುವುದು ವಿವೇಕಯುತವಾದದ್ದಾಗಿದೆ.
6:4. ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಒಳ್ಳೇತನಕ್ಕಾಗಿರುವ ಹೃತ್ಪೂರ್ವಕ ಗಣ್ಯತೆಯು, ಯೆಹೋವನನ್ನು ಕೊಂಡಾಡುವಂತೆ ಅಂದರೆ ಪ್ರೀತಿ ಮತ್ತು ಕೃತಜ್ಞತೆಯಿಂದ ಆತನನ್ನು ಸ್ತುತಿಸುವಂತೆ ನಮ್ಮನ್ನು ಪ್ರಚೋದಿಸಬೇಕು.
6:18-21. ದೇವರು ಯಾವುದೇ ಕಟ್ಟಡದಲ್ಲಿ ನಿವಾಸಿಸಲು ಸಾಧ್ಯವಿಲ್ಲದಿರುವುದಾದರೂ, ದೇವಾಲಯವು ಯೆಹೋವನ ಆರಾಧನೆಯ ಕೇಂದ್ರವಾಗಿ ಕಾರ್ಯನಡಿಸಲಿಕ್ಕಿತ್ತು. ಇಂದು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳು ಸಮುದಾಯದಲ್ಲಿ ಸತ್ಯ ಆರಾಧನೆಯ ಕೇಂದ್ರಗಳಾಗಿವೆ.
6:19, 22, 32. ಯೆಹೋವನು ಎಲ್ಲರ ಪ್ರಾರ್ಥನೆಗಳಿಗೆ ಅಂದರೆ ಇಸ್ರಾಯೇಲ್ ಜನಾಂಗದ ಅರಸನಿಂದ ಹಿಡಿದು ಸಾಮಾನ್ಯ ಪ್ರಜೆಗಳ ವರೆಗೆ ಮತ್ತು ಯಥಾರ್ಥ ಮನಸ್ಸಿನಿಂದ ತನ್ನನ್ನು ಸಮೀಪಿಸುತ್ತಿದ್ದ ಒಬ್ಬ ಪರದೇಶಿಯನ ಪ್ರಾರ್ಥನೆಗೆ ಸಹ ಕಿವಿಗೊಡುತ್ತಿದ್ದನು.a—ಕೀರ್ತನೆ 65:2.
ದಾವೀದನ ವಂಶದಲ್ಲಿ ಅರಸರ ಸಾಲು
(2 ಪೂರ್ವಕಾಲವೃತ್ತಾಂತ 10:1–36:23)
ಇಸ್ರಾಯೇಲಿನ ಐಕ್ಯ ರಾಜ್ಯವು ಇಬ್ಭಾಗಗೊಂಡಿದೆ—ಉತ್ತರದ ಹತ್ತು ಕುಲಗಳ ರಾಜ್ಯ ಹಾಗೂ ಯೆಹೂದ ಮತ್ತು ಬೆನ್ಯಾಮೀನ್ ಎಂಬ ದಕ್ಷಿಣದ ಎರಡು ಕುಲಗಳ ರಾಜ್ಯ. ಇಸ್ರಾಯೇಲಿನಾದ್ಯಂತ ಇರುವ ಯಾಜಕರು ಮತ್ತು ಲೇವಿಯರು ರಾಷ್ಟ್ರೀಯತೆಗಿಂತಲೂ ರಾಜ್ಯದೊಡಂಬಡಿಕೆಗೆ ನಿಷ್ಠೆಯನ್ನು ತೋರಿಸುತ್ತಾರೆ ಮತ್ತು ಸೊಲೊಮೋನನ ಮಗನಾದ ರೆಹಬ್ಬಾಮನ ಪಕ್ಷವಹಿಸುತ್ತಾರೆ. ದೇವಾಲಯವು ಪೂರ್ಣಗೊಂಡು 30ಕ್ಕಿಂತಲೂ ಹೆಚ್ಚು ವರ್ಷಗಳಾದ ಬಳಿಕ ಅದರ ಭಂಡಾರಗಳು ಸೂರೆಗೈಯಲ್ಪಡುತ್ತವೆ.
ರೆಹಬ್ಬಾಮನ ಬಳಿಕ ಆಳ್ವಿಕೆಮಾಡಿದ 19 ಅರಸರುಗಳಲ್ಲಿ 5 ಮಂದಿ ನಂಬಿಗಸ್ತರಾಗಿದ್ದಾರೆ, 3 ಮಂದಿ ಒಳ್ಳೇ ರೀತಿಯಲ್ಲಿ ಆರಂಭಿಸಿದರೂ ತದನಂತರ ಅಪನಂಬಿಗಸ್ತರಾಗುತ್ತಾರೆ ಮತ್ತು ಒಬ್ಬನು ತನ್ನ ಕೆಟ್ಟ ಮಾರ್ಗದಿಂದ ಹಿಂದಿರುಗುತ್ತಾನೆ. ಇನ್ನುಳಿದ ಅರಸರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನೇ ಮಾಡುತ್ತಾರೆ.b ಯೆಹೋವನಲ್ಲಿ ಭರವಸೆಯಿಡುವಂಥ ಐವರು ಅರಸರ ಚಟುವಟಿಕೆಗಳು ಎತ್ತಿತೋರಿಸಲ್ಪಟ್ಟಿವೆ. ಹಿಜ್ಕೀಯನು ದೇವಾಲಯದ ಸೇವೆಗಳನ್ನು ಪುನಃ ಆರಂಭಿಸಿದ್ದು ಮತ್ತು ಯೋಷೀಯನು ದೊಡ್ಡ ಪಸ್ಕಹಬ್ಬವನ್ನು ಆಚರಿಸುವಂತೆ ಏರ್ಪಾಡನ್ನು ಮಾಡಿದುದರ ಕುರಿತಾದ ವೃತ್ತಾಂತಗಳು, ಯೆರೂಸಲೇಮಿನಲ್ಲಿ ಯೆಹೋವನ ಆರಾಧನೆಯನ್ನು ಪುನಸ್ಸ್ಥಾಪಿಸುವುದರಲ್ಲಿ ಆಸಕ್ತರಾಗಿದ್ದ ಯೆಹೂದ್ಯರಿಗೆ ಭಾರೀ ಉತ್ತೇಜನವನ್ನು ನೀಡಿದ್ದಿರಬೇಕು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
13:5—“ಉಪ್ಪಿನ ಒಡಂಬಡಿಕೆ” ಎಂಬ ಅಭಿವ್ಯಕ್ತಿಯ ಅರ್ಥವೇನು? ಉಪ್ಪಿನ ಸಂರಕ್ಷಕ ಗುಣದಿಂದಾಗಿ ಅದು ಶಾಶ್ವತತೆ ಮತ್ತು ಮಾರ್ಪಾಡಾಗದಿರುವಿಕೆಯ ಸಂಕೇತವಾಗಿ ಪರಿಣಮಿಸಿತು. ಆದುದರಿಂದ, “ಉಪ್ಪಿನ ಒಡಂಬಡಿಕೆ” ಎಂಬುದು ಬದ್ಧಪಡಿಸುವ ಒಪ್ಪಂದವೊಂದನ್ನು ಸೂಚಿಸುತ್ತದೆ.
14:2-5; 15:17—ಅರಸನಾದ ಆಸನು ಎಲ್ಲ ‘ಪೂಜಾಸ್ಥಳಗಳನ್ನು’ ತೆಗೆದುಹಾಕಿದನೊ? ಇಲ್ಲ ಎಂಬುದು ವ್ಯಕ್ತ. ಆಸನು ಸುಳ್ಳು ದೇವರುಗಳ ಆರಾಧನೆಗೆ ಸಂಬಂಧಿಸಿದ ಪೂಜಾಸ್ಥಳಗಳನ್ನು ಮಾತ್ರವೇ ತೆಗೆದುಹಾಕಿದ್ದಿರಬಹುದು, ಆದರೆ ಜನರು ಎಲ್ಲಿ ಯೆಹೋವನನ್ನು ಆರಾಧಿಸುತ್ತಿದ್ದರೋ ಆ ಸ್ಥಳಗಳನ್ನು ಅವನು ತೆಗೆದುಹಾಕಲಿಲ್ಲ. ಆಸನ ಆಳ್ವಿಕೆಯ ಕೊನೆಯ ಕಾಲಾವಧಿಯಲ್ಲಿ ಇತರ ಪೂಜಾಸ್ಥಳಗಳು ಪುನಃ ಕಟ್ಟಲ್ಪಟ್ಟಿದ್ದಿರುವ ಸಾಧ್ಯತೆಯೂ ಇದೆ. ಈ ಪೂಜಾಸ್ಥಳಗಳನ್ನು ಅವನ ಮಗನಾದ ಯೆಹೋಷಾಫಾಟನು ತೆಗೆದುಹಾಕಿದನು. ವಾಸ್ತವದಲ್ಲಿ, ಯೆಹೋಷಾಫಾಟನ ಆಳ್ವಿಕೆಯ ಸಮಯದಲ್ಲಿಯೂ ಪೂಜಾಸ್ಥಳಗಳು ಸಂಪೂರ್ಣವಾಗಿ ಕಣ್ಮರೆಯಾಗಲಿಲ್ಲ.—2 ಪೂರ್ವಕಾಲವೃತ್ತಾಂತ 17:5, 6; 20:31-33.
15:9; 34:6—ಇಸ್ರಾಯೇಲ್ ರಾಜ್ಯದ ವಿಭಜನೆಯ ಸಂಬಂಧದಲ್ಲಿ ಸಿಮೆಯೋನ್ ಕುಲದ ಸ್ಥಾನವೇನಾಗಿತ್ತು? ಸಿಮೆಯೋನನು ಯೆಹೂದದ ಪ್ರದೇಶದೊಳಗಿದ್ದ ಬೇರೆ ಬೇರೆ ಕ್ಷೇತ್ರಗಳನ್ನು ಸ್ವಾಸ್ತ್ಯವಾಗಿ ಪಡೆದುದರಿಂದ, ಭೂಗೋಳಶಾಸ್ತ್ರೀಯವಾಗಿ ಆ ಕುಲವು ಯೆಹೂದ ಮತ್ತು ಬೆನ್ಯಾಮೀನ್ ರಾಜ್ಯದೊಳಗಿತ್ತು. (ಯೆಹೋಶುವ 19:1) ಆದರೆ, ಧಾರ್ಮಿಕ ಮತ್ತು ರಾಜಕೀಯ ರೀತಿಯಲ್ಲಿ ಸಿಮೆಯೋನ್ ಕುಲವು ಉತ್ತರ ರಾಜ್ಯದ ಪಕ್ಷವಹಿಸಿತು. (1 ಅರಸುಗಳು 11:30-33; 12:20-24) ಆದುದರಿಂದ, ಸಿಮೆಯೋನ್ ಕುಲವು ಹತ್ತು ಕುಲಗಳ ರಾಜ್ಯದೊಂದಿಗೆ ಲೆಕ್ಕಿಸಲ್ಪಟ್ಟಿತು.
35:3—ಯೋಷೀಯನು ಯಾವ ಸ್ಥಳದಿಂದ ಪವಿತ್ರ ಮಂಜೂಷವನ್ನು ದೇವಾಲಯಕ್ಕೆ ತರಿಸಿದನು? ಈ ಮುಂಚೆ ದುಷ್ಟ ಅರಸರಲ್ಲಿ ಒಬ್ಬರಿಂದ ಮಂಜೂಷವು ತೆಗೆದುಹಾಕಲ್ಪಟ್ಟಿತ್ತೊ ಅಥವಾ ದೇವಾಲಯದ ಬೃಹತ್ಪ್ರಮಾಣದ ಜೀರ್ಣೋದ್ಧಾರ ಕೆಲಸದ ಸಮಯದಲ್ಲಿ ಸುರಕ್ಷಿತವಾಗಿರಿಸಲಿಕ್ಕಾಗಿ ಯೋಷೀಯನು ಅದನ್ನು ಬೇರೆ ಕಡೆ ಇರಿಸಿದ್ದನೊ ಎಂಬುದನ್ನು ಬೈಬಲ್ ತಿಳಿಯಪಡಿಸುವುದಿಲ್ಲ. ಸೊಲೊಮೋನನ ದಿನದ ಬಳಿಕ ಮಂಜೂಷದ ಬಗ್ಗೆ ಇರುವ ಏಕಮಾತ್ರ ಐತಿಹಾಸಿಕ ಉಲ್ಲೇಖವು, ಯೋಷೀಯನು ಅದನ್ನು ದೇವಾಲಯಕ್ಕೆ ತರಿಸಿದಾಗಿನ ಕುರಿತಾಗಿದೆ.
ನಮಗಾಗಿರುವ ಪಾಠಗಳು:
13:13-18; 14:11, 12; 32:9-23. ಯೆಹೋವನನ್ನು ಅವಲಂಬಿಸುವುದರ ಪ್ರಮುಖತೆಯ ವಿಷಯದಲ್ಲಿ ನಾವು ಎಂಥ ಪಾಠವನ್ನು ಕಲಿಯಬಲ್ಲೆವು!
16:1-5, 7; 18:1-3, 28-32; 21:4-6; 22:10-12; 28:16-22. ಪರದೇಶಿಯರು ಅಥವಾ ಅವಿಶ್ವಾಸಿಗಳೊಂದಿಗೆ ಮೈತ್ರಿಸಂಬಂಧಗಳನ್ನು ಬೆಳೆಸಿಕೊಳ್ಳುವುದರಿಂದ ದುರಂತಕರ ಪರಿಣಾಮಗಳು ಉಂಟಾಗುತ್ತವೆ. ನಾವು ಲೋಕದೊಂದಿಗಿನ ಯಾವುದೇ ಅನಗತ್ಯ ಒಳಗೂಡುವಿಕೆಯಿಂದ ದೂರವಿರುವುದು ವಿವೇಕಯುತವಾದದ್ದಾಗಿದೆ.—ಯೋಹಾನ 17:14, 16; ಯಾಕೋಬ 4:4.
16:7-12; 26:16-21; 32:25, 26. ಹಟಮಾರಿತನವು ಅರಸನಾದ ಆಸನು ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಕೆಟ್ಟ ರೀತಿಯಲ್ಲಿ ವರ್ತಿಸುವಂತೆ ಮಾಡಿತು. ಅಹಂಕಾರದ ಮನೋಭಾವವು ಉಜ್ಜೀಯನ ಅವನತಿಗೆ ಕಾರಣವಾಯಿತು. ಹಿಜ್ಕೀಯನು ಬಾಬೆಲಿನ ಗುಪ್ತದೂತರಿಗೆ ತನ್ನ ಭಂಡಾರದಲ್ಲಿದ್ದದ್ದೆಲ್ಲವನ್ನೂ ತೋರಿಸಿದಾಗ, ಅವನು ಮೂರ್ಖತನದಿಂದ ಮತ್ತು ಬಹುಶಃ ಅಹಂಭಾವದಿಂದ ಕ್ರಿಯೆಗೈದನು. (ಯೆಶಾಯ 39:1-7) “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು” ಎಂದು ಬೈಬಲ್ ಎಚ್ಚರಿಕೆ ನೀಡುತ್ತದೆ.—ಜ್ಞಾನೋಕ್ತಿ 16:18.
16:9. ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರಿಗೆ ಯೆಹೋವನು ಸಹಾಯಮಾಡುತ್ತಾನೆ ಮತ್ತು ಅವರ ಪರವಾಗಿ ತನ್ನ ಶಕ್ತಿಯನ್ನು ಉಪಯೋಗಿಸಲು ಆತನು ಕಾತರನಾಗಿದ್ದಾನೆ.
18:12, 13, 23, 24, 27. ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಮಾತಾಡುವುದರಲ್ಲಿ ಮೀಕಾಯೆಹುವಿನಂತೆ ನಾವು ಸಹ ಧೈರ್ಯವಂತರಾಗಿರಬೇಕು.
19:1-3. ನಾವು ಯೆಹೋವನಿಗೆ ನೋವನ್ನು ಉಂಟುಮಾಡುವಾಗಲೂ, ಆತನು ನಮ್ಮಲ್ಲಿ ಏನು ಒಳ್ಳೇತನವಿದೆಯೋ ಅದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.
20:1-28. ನಾವು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ತಿರುಗುವಾಗ ನಾವು ಆತನನ್ನು ಕಂಡುಕೊಳ್ಳುವಂತೆ ಆತನು ಅನುಮತಿಸುವನು ಎಂಬ ದೃಢವಿಶ್ವಾಸ ನಮಗಿರಸಾಧ್ಯವಿದೆ.—ಜ್ಞಾನೋಕ್ತಿ 15:29.
20:17. ‘ಯೆಹೋವನ ರಕ್ಷಣಾಕಾರ್ಯವನ್ನು’ ನೋಡಲಿಕ್ಕೋಸ್ಕರ ನಾವು ದೇವರ ರಾಜ್ಯವನ್ನು ಕ್ರಿಯಾಶೀಲ ರೀತಿಯಲ್ಲಿ ಬೆಂಬಲಿಸುವ ಮೂಲಕ “[ನಮ್ಮ] ಸ್ಥಾನದಲ್ಲಿರುವ” (NW) ಅಗತ್ಯವಿದೆ. ವಿಷಯಗಳನ್ನು ನಮ್ಮಷ್ಟಕ್ಕೇ ಮಾಡುವ ಬದಲು, ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡುತ್ತಾ ನಾವು ‘ಸುಮ್ಮನೆ ನಿಂತುಕೊಳ್ಳಬೇಕಾಗಿದೆ.’
24:17-19; 25:14. ಯೆಹೋವಾಷನಿಗೆ ಮತ್ತು ಅವನ ಮಗನಾದ ಅಮಚ್ಯನಿಗೆ ವಿಗ್ರಹಾರಾಧನೆಯು ಒಂದು ಪಾಶವಾಗಿ ಪರಿಣಮಿಸಿತು. ಇಂದು, ವಿಶೇಷವಾಗಿ ಲೋಭ ಅಥವಾ ರಾಷ್ಟ್ರೀಯತೆಯ ನವಿರಾದ ರೂಪಗಳಲ್ಲಿ ವಿಗ್ರಹಾರಾಧನೆಯು ವ್ಯಕ್ತಪಡಿಸಲ್ಪಡುವಾಗ, ಅದು ಅಂದಿನಷ್ಟೇ ಪ್ರಲೋಭಕವಾಗಿರಸಾಧ್ಯವಿದೆ.—ಕೊಲೊಸ್ಸೆ 3:5; ಪ್ರಕಟನೆ 13:4.
32:6, 7. “ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿ”ಕೊಂಡು ಆಧ್ಯಾತ್ಮಿಕ ಯುದ್ಧವನ್ನು ಮುಂದುವರಿಸುವಾಗ, ನಾವು ಸಹ ಧೈರ್ಯವಂತರಾಗಿರಬೇಕು ಮತ್ತು ಬಲಶಾಲಿಗಳಾಗಿರಬೇಕು.—ಎಫೆಸ 6:11-18.
33:2-9, 12, 13, 15, 16. ಒಂದು ಕೆಟ್ಟ ಮಾರ್ಗಕ್ರಮವನ್ನು ತೊರೆಯುವ ಮೂಲಕ ಮತ್ತು ಸರಿಯಾದದ್ದನ್ನು ಮಾಡಲು ದೃಢನಿರ್ಧಾರದ ಪ್ರಯತ್ನವನ್ನು ಮಾಡುವ ಮೂಲಕ ಒಬ್ಬ ವ್ಯಕ್ತಿಯು ನಿಜವಾದ ಪಶ್ಚಾತ್ತಾಪವನ್ನು ತೋರಿಸುತ್ತಾನೆ. ನಿಜವಾದ ಪಶ್ಚಾತ್ತಾಪದ ಆಧಾರದ ಮೇಲೆ, ಅರಸನಾದ ಮನಸ್ಸೆಯಷ್ಟು ದುಷ್ಟನಾಗಿ ವರ್ತಿಸಿರುವಂಥ ಒಬ್ಬ ವ್ಯಕ್ತಿಯು ಸಹ ಯೆಹೋವನ ಕರುಣೆಯನ್ನು ಪಡೆದುಕೊಳ್ಳಸಾಧ್ಯವಿದೆ.
34:1-3. ಬಾಲ್ಯದಲ್ಲಿನ ಯಾವುದೇ ನಕಾರಾತ್ಮಕ ಸನ್ನಿವೇಶಗಳು, ನಾವು ದೇವರನ್ನು ತಿಳಿದುಕೊಳ್ಳುವುದರಿಂದ ಮತ್ತು ಆತನ ಸೇವೆಮಾಡುವುದರಿಂದ ನಮ್ಮನ್ನು ತಡೆಗಟ್ಟುವ ಅಗತ್ಯವಿಲ್ಲ. ತನ್ನ ಆರಂಭದ ವರ್ಷಗಳಲ್ಲಿ ಯೋಷೀಯನು ಹೊಂದಿರಬಹುದಾಗಿದ್ದ ಸಕಾರಾತ್ಮಕ ಪ್ರಭಾವವು, ಪಶ್ಚಾತ್ತಾಪಪಟ್ಟ ಅವನ ಅಜ್ಜನಾದ ಮನಸ್ಸೆಯಿಂದ ಬಂದದ್ದಾಗಿರಸಾಧ್ಯವಿದೆ. ಯೋಷೀಯನು ಪಡೆದುಕೊಂಡಿದ್ದಿರಬಹುದಾದ ಯಾವುದೇ ಸಕಾರಾತ್ಮಕ ಪ್ರಭಾವಗಳು ಕಾಲಕ್ರಮೇಣ ಅತ್ಯುತ್ತಮ ಫಲಿತಾಂಶಗಳನ್ನು ಉಂಟುಮಾಡಿದವು. ನಮ್ಮ ವಿಷಯದಲ್ಲಿಯೂ ಇದೇ ರೀತಿ ಆಗಸಾಧ್ಯವಿದೆ.
36:15-17. ಯೆಹೋವನು ಸಹಾನುಭೂತಿಯುಳ್ಳವನೂ ಸಹನೆಯುಳ್ಳವನೂ ಆಗಿದ್ದಾನೆ. ಆದರೆ, ಆತನ ಸಹಾನುಭೂತಿ ಮತ್ತು ಸಹನೆಗೆ ಯಾವುದೇ ಮಿತಿ ಇಲ್ಲವೆಂದಲ್ಲ. ಯೆಹೋವನು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವಾಗ ಜನರು ಬದುಕಿ ಉಳಿಯಬೇಕಾದರೆ, ಅವರು ರಾಜ್ಯ ಸಾರುವಿಕೆಯ ಕೆಲಸಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸಬೇಕು.
36:17, 22, 23. ಯೆಹೋವನ ಮಾತು ಯಾವಾಗಲೂ ನಿಜವಾಗುತ್ತದೆ.—1 ಅರಸುಗಳು 9:7, 8; ಯೆರೆಮೀಯ 25:9-11.
ಒಂದು ಪುಸ್ತಕವು ಕ್ರಿಯೆಗೈಯುವಂತೆ ಅವನನ್ನು ಪ್ರಚೋದಿಸಿತು
“ಯೋಷೀಯನು ಇಸ್ರಾಯೇಲ್ಯರಿಗೆ ಸೇರಿದ ಎಲ್ಲಾ ಪ್ರಾಂತಗಳೊಳಗಿನ ಅಸಹ್ಯಮೂರ್ತಿಗಳನ್ನೆಲ್ಲಾ ತೆಗೆದುಹಾಕಿಸಿ ಇಸ್ರಾಯೇಲ್ಯರಲ್ಲಿ ಉಳಿದಿರುವವರು ತಮ್ಮ ದೇವರಾದ ಯೆಹೋವನನ್ನೇ ಸೇವಿಸುವಂತೆ ಮಾಡಿದನು” ಎಂದು 2 ಪೂರ್ವಕಾಲವೃತ್ತಾಂತ 34:33 ತಿಳಿಸುತ್ತದೆ. ಹೀಗೆ ಮಾಡುವಂತೆ ಯೋಷೀಯನನ್ನು ಯಾವುದು ಪ್ರಚೋದಿಸಿತು? ಲೇಖಕನಾದ ಶಾಫಾನನು ಹೊಸದಾಗಿ ಕಂಡುಕೊಳ್ಳಲ್ಪಟ್ಟ ಯೆಹೋವಧರ್ಮಶಾಸ್ತ್ರ ಎಂಬ ಗ್ರಂಥವನ್ನು ಅರಸನಾದ ಯೋಷೀಯನ ಬಳಿಗೆ ತಂದಾಗ, ಅರಸನು ಅದನ್ನು ಗಟ್ಟಿಯಾಗಿ ಓದಿಸಿದನು. ತಾನು ಏನನ್ನು ಕೇಳಿಸಿಕೊಂಡನೋ ಅದರಿಂದ ಯೋಷೀಯನು ಎಷ್ಟರ ಮಟ್ಟಿಗೆ ಪ್ರಭಾವಿತನಾದನೆಂದರೆ, ತನ್ನ ಜೀವಮಾನದಾದ್ಯಂತ ಅವನು ಹುರುಪಿನಿಂದ ಶುದ್ಧಾರಾಧನೆಯನ್ನು ಪ್ರವರ್ಧಿಸಿದನು.
ದೇವರ ವಾಕ್ಯವನ್ನು ಓದುವುದು ಮತ್ತು ನಾವು ಏನನ್ನು ಓದುತ್ತೇವೊ ಅದರ ಕುರಿತು ಧ್ಯಾನಿಸುವುದು ನಮ್ಮ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು. ದಾವೀದನ ವಂಶದ ಅರಸರ ಕುರಿತಾದ ವೃತ್ತಾಂತದ ಕುರಿತು ಮನನ ಮಾಡುವುದು, ಯೆಹೋವನ ಮೇಲೆ ಪೂರ್ಣ ರೀತಿಯಲ್ಲಿ ಭರವಸೆಯಿಟ್ಟವರ ಮಾದರಿಗಳನ್ನು ಅನುಕರಿಸುವಂತೆ ಮತ್ತು ಯಾರು ಹಾಗೆ ಮಾಡಲಿಲ್ಲವೋ ಅಂಥವರ ನಡತೆಯನ್ನು ತಿರಸ್ಕರಿಸುವಂತೆ ನಮ್ಮನ್ನು ಪ್ರಚೋದಿಸುತ್ತದಲ್ಲವೇ? ಎರಡನೇ ಪೂರ್ವಕಾಲವೃತ್ತಾಂತವು, ನಮ್ಮ ಅನನ್ಯ ಭಕ್ತಿಯನ್ನು ಸತ್ಯ ದೇವರಿಗೆ ಸಲ್ಲಿಸುವಂತೆ ಮತ್ತು ಆತನಿಗೆ ನಂಬಿಗಸ್ತರಾಗಿ ಉಳಿಯುವಂತೆ ನಮ್ಮನ್ನು ಹುರಿದುಂಬಿಸುತ್ತದೆ. ಅದರ ಸಂದೇಶವು ನಿಶ್ಚಯವಾಗಿಯೂ ಸಜೀವವಾದದ್ದಾಗಿದೆ ಮತ್ತು ಕಾರ್ಯಸಾಧಕವಾದದ್ದಾಗಿದೆ.—ಇಬ್ರಿಯ 4:12.
[ಪಾದಟಿಪ್ಪಣಿಗಳು]
a ದೇವಾಲಯದ ಪ್ರತಿಷ್ಠಾಪನೆ ಮತ್ತು ಆ ಸಂದರ್ಭದಲ್ಲಿ ಸೊಲೊಮೋನನು ಮಾಡಿದ ಪ್ರಾರ್ಥನೆಯಿಂದ ಸಿಗುವ ಇನ್ನಿತರ ಪಾಠಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ಜುಲೈ 1, 2005ರ ಕಾವಲಿನಬುರುಜು ಪತ್ರಿಕೆಯ 28-31ನೇ ಪುಟಗಳನ್ನು ನೋಡಿರಿ.
b ಯೆಹೂದದ ಅರಸರ ಕಾಲಾನುಕ್ರಮದ ಪಟ್ಟಿಗಾಗಿ, ಆಗಸ್ಟ್ 1, 2005ರ ಕಾವಲಿನಬುರುಜು ಪತ್ರಿಕೆಯ 12ನೇ ಪುಟವನ್ನು ನೋಡಿ.
[ಪುಟ 18ರಲ್ಲಿರುವ ಚಿತ್ರ]
ಎರಕದ ಪಾತ್ರೆಯ ತಳಭಾಗದಲ್ಲಿದ್ದ ಹೋರಿಗಳು ಏಕೆ ಸೂಕ್ತವಾದ ಪ್ರತಿರೂಪವಾಗಿದ್ದವು ಎಂಬುದು ನಿಮಗೆ ತಿಳಿದಿದೆಯೊ?
[ಪುಟ 21ರಲ್ಲಿರುವ ಚಿತ್ರಗಳು]
ಯೋಷೀಯನು ಚಿಕ್ಕವನಿದ್ದಾಗ ಅವನಿಗೆ ಅಲ್ಪವೇ ಸಹಾಯವು ದೊರಕಿತ್ತಾದರೂ, ಅವನು ಯೆಹೋವನಿಗೆ ನಂಬಿಗಸ್ತನಾದ ವ್ಯಕ್ತಿಯಾಗಿ ಬೆಳೆದನು