ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
© 2023 Watch Tower Bible and Tract Society of Pennsylvania
ಸೆಪ್ಟೆಂಬರ್ 4-10
ಬೈಬಲಿನಲ್ಲಿರುವ ನಿಧಿ | ಎಸ್ತೇರ್ 1-2
“ಎಸ್ತೇರ್ ತರ ದೀನತೆ ತೋರಿಸಿ”
ಕಾವಲಿನಬುರುಜು17.01 ಪುಟ 25 ಪ್ಯಾರ 11
ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ
11 ಜನ ನಮ್ಮನ್ನು ಬಾಯಿ ತುಂಬ ಹೊಗಳುವಾಗ ಅಥವಾ ಅಟ್ಟಕ್ಕೇರಿಸುವಾಗ ನಮ್ಮಲ್ಲಿ ಅಹಂಕಾರ ಬರಬಹುದು. ಎಸ್ತೇರಳು ಅತಿರೂಪ ಸುಂದರಿಯಾಗಿದ್ದಳು. ಈ ಸುರಸುಂದರಿಯನ್ನು ನೋಡಿದವರೆಲ್ಲಾ ಅವಳನ್ನು ಹಾಡಿಹೊಗಳುತ್ತಿದ್ದರು. ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಒಂದು ವರ್ಷದ ವರೆಗೆ ಸೌಂದರ್ಯ ವರ್ಧಕಗಳನ್ನು ಬಳಸಲಾಯಿತು. ರಾಜನ ಮನಸ್ಸನ್ನು ಗೆಲ್ಲಲು ಬಂದಿದ್ದ ಬೇರೆ ಸುಂದರಾಂಗಿಯರ ಸಹವಾಸವೂ ಇತ್ತು. ಆದರೆ ಇದ್ಯಾವುದೂ ಎಸ್ತೇರಳ ವ್ಯಕ್ತಿತ್ವವನ್ನು ಬದಲಾಯಿಸಲಿಲ್ಲ. ಅವಳು ಸ್ವಾರ್ಥಿಯಾಗಲಿಲ್ಲ. ಎಂದಿನಂತೆ ವಿನಯಶೀಲತೆ, ದಯೆ, ಗೌರವ ತೋರಿಸಿದಳು.—ಎಸ್ತೇ. 2:9, 12, 15, 17.
ದೇವಜನರ ಪರವಹಿಸಿ ನಿಂತಾಕೆ
15 ಈಗ ಎಸ್ತೇರಳನ್ನು ರಾಜನ ಮುಂದೆ ನಿಲ್ಲಿಸುವ ಸಮಯ ಬಂತು. ಅಲ್ಲಿಗೆ ಹೋಗುವ ಮುಂಚೆ, ಇನ್ನಷ್ಟು ಸುಂದರ ಕಾಣಲಿಕ್ಕಾಗಿ ಅವಳಿಗೆ ಏನು ಬೇಕೊ ಆ ಶೃಂಗಾರಸಾಮಗ್ರಿಗಳನ್ನು ಆಯ್ಕೆಮಾಡುವ ಅವಕಾಶ ಕೊಡಲಾಯಿತು. ಆದರೆ ವಿನಮ್ರಳಾದ ಎಸ್ತೇರಳು ತನಗೆ ಹೇಗೈ ಏನನ್ನು ಹೇಳಿದ್ದನೊ ಅದನ್ನು ಬಿಟ್ಟು ಬೇರೇನನ್ನೂ ಕೇಳಲಿಲ್ಲ. (ಎಸ್ತೇ. 2:15) ರಾಜ ಮೆಚ್ಚುವುದು ಬರೀ ಸೌಂದರ್ಯವೊಂದನ್ನೇ ಅಲ್ಲ. ಆಸ್ಥಾನದಲ್ಲಿ ತುಂಬ ವಿರಳವಾಗಿದ್ದ ವಿನಮ್ರತೆ, ದೀನತೆಯೂ ಇರುವಂತೆ ಬಯಸುತ್ತಾನೆಂದು ಬಹುಶಃ ಆಕೆ ಅರಿತಿದ್ದಳು. ಅವಳೆಣಿಕೆ ಸರಿಯಾಗಿತ್ತೇ?
ಕಾವಲಿನಬುರುಜು17.01 ಪುಟ 25 ಪ್ಯಾರ 12
ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ
12 ನಾವು ವಿನಯಶೀಲರಾಗಿದ್ದರೆ ಅದು ನಾವು ಹಾಕುವ ಬಟ್ಟೆ ಮತ್ತು ನಡಕೊಳ್ಳುವ ರೀತಿಯಲ್ಲಿ ಗೊತ್ತಾಗುತ್ತದೆ. ಇದು ಬೇರೆಯವರ ಮೇಲೆ ಗೌರವ ಇದೆಯಾ ಮತ್ತು ನಮ್ಮ ಮೇಲೆ ನಮಗೆ ಗೌರವ ಇದೆಯಾ ಎಂದು ಸಹ ತೋರಿಸುತ್ತದೆ. ನಾವು ನಮ್ಮ ಬಗ್ಗೆಯೇ ಕೊಚ್ಚಿಕೊಳ್ಳುವುದಿಲ್ಲ. ಜನರ ಗಮನವನ್ನು ನಮ್ಮ ಕಡೆ ಎಳಕೊಳ್ಳಲು ಪ್ರಯತ್ನಿಸದೆ “ಶಾಂತ ಮತ್ತು ಸೌಮ್ಯಭಾವವೆಂಬ” ಗುಣಗಳನ್ನು ತೋರಿಸುತ್ತೇವೆ. (1 ಪೇತ್ರ 3:3, 4 ಓದಿ; ಯೆರೆ. 9:23, 24) ಒಂದುವೇಳೆ ನಮಗೆ ನಮ್ಮ ಬಗ್ಗೆನೇ ತುಂಬ ಶ್ರೇಷ್ಠ ಭಾವನೆ ಇರಬಹುದು. ಇದು ಮೆಲ್ಲಮೆಲ್ಲನೆ ನಮ್ಮ ಮಾತು ಮತ್ತು ಕ್ರಿಯೆಯಲ್ಲಿ ಗೊತ್ತಾಗಿ ಬಿಡುತ್ತದೆ. ನಮಗಿರುವ ಸುಯೋಗಗಳ ನಿಮಿತ್ತ ನಾವು ಸ್ಪೆಷಲ್ ಅಂತ ತೋರಿಸಿಕೊಳ್ಳಲು ಪ್ರಯತ್ನಿಸಬಹುದು. ಬೇರೆ ಯಾರಿಗೂ ತಿಳಿದಿಲ್ಲದ ಮಾಹಿತಿ ನಮಗೆ ತಿಳಿದಿದೆ ಎಂದು ಹೇಳಿಕೊಳ್ಳಬಹುದು. ಅಥವಾ ದೊಡ್ಡ ವ್ಯಕ್ತಿಗಳ ಪರಿಚಯ ನನಗಿದೆ ಎಂದು ಕೊಚ್ಚಿಕೊಳ್ಳಬಹುದು. ಒಂದು ವಿಷಯವನ್ನು ಬೇರೆಯವರ ಸಹಾಯ ತೊಗೊಂಡು ಮಾಡಿರುವುದಾದರೂ ಎಲ್ಲಾ ನಾನೊಬ್ಬನೇ ಮಾಡಿಮುಗಿಸಿದೆ ಎಂದು ಹೇಳಿಕೊಳ್ಳಬಹುದು. ಆದರೆ ಯೇಸು ಏನು ಮಾಡಿದ ಯೋಚಿಸಿ. ತನ್ನ ಜ್ಞಾನಭಂಡಾರವನ್ನು ತೆರೆದಿದ್ದರೆ ಎಲ್ಲರೂ ಮೈಮರೆತುಹೋಗುತ್ತಿದ್ದರು. ಆದರೆ ಯೇಸು ಯಾವಾಗಲೂ ದೇವರ ವಾಕ್ಯದಿಂದ ಉಲ್ಲೇಖಿಸಿ ಮಾತಾಡುತ್ತಿದ್ದ. ಜನ ತನಗೆ ಜೈಕಾರ ಹಾಕಬೇಕೆಂದು ಬಯಸಲಿಲ್ಲ. ಎಲ್ಲಾ ಕೀರ್ತಿ ಯೆಹೋವನಿಗೇ ಸಲ್ಲಬೇಕೆಂದು ಬಯಸಿದ.—ಯೋಹಾ. 8:28.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು22.11 ಪುಟ 31 ಪ್ಯಾರ 3-6
ನಿಮಗೆ ಗೊತ್ತಿತ್ತಾ?
ಸಂಶೋಧಕರಿಗೆ ಒಂದು ಪರ್ಶಿಯನ್ ಕ್ಯೂನಿಫಾರ್ಮ್ ಬರಹ ಸಿಕ್ತು. ಅದರಲ್ಲಿ ಮಾರ್ದೂಕ ಅನ್ನೋ ಹೆಸರು ಇತ್ತು (ಕನ್ನಡದಲ್ಲಿ ಮೊರ್ದೆಕೈ). ಇವನೊಬ್ಬ ಅಧಿಕಾರಿಯಾಗಿದ್ದ. ಇವನು ಶೂಷನ್ ಆಸ್ಥಾನದಲ್ಲಿ ಲೆಕ್ಕಾಚಾರ ನೋಡಿಕೊಳ್ತಾ ಇದ್ದಿರಬೇಕು. ಆ ಜಾಗದ ಬಗ್ಗೆ ಚೆನ್ನಾಗಿ ಗೊತ್ತಿದ್ದ ಇತಿಹಾಸಗಾರ ಆರ್ಥರ್ ಉಂಗ್ನಾಡ್, “ಬೈಬಲಲ್ಲಿ ಅಲ್ಲದೆ ಬೇರೆ ಕಡೆ ಈ ಮೊರ್ದೆಕೈ ಅನ್ನೋ ಹೆಸರನ್ನ ನೋಡಿದ್ದು ಇದೇ ಮೊದಲನೇ ಸಲ” ಅಂತ ಹೇಳಿದ್ರು.
ಇದಾದಮೇಲೆ ಸಾವಿರಾರು ಪರ್ಶಿಯನ್ ಕ್ಯೂನಿಫಾರ್ಮ್ ಬರಹಗಳು ಸಿಕ್ಕಿದವು. ಅವುಗಳನ್ನ ವಿದ್ವಾಂಸರು ಭಾಷಾಂತರ ಮಾಡಿದ್ರು. ಪರ್ಸೆಪೊಲಿಸ್ ನಗರದ ಗೋಡೆಗಳ ಹತ್ರ ಅಗೆದಾಗ ಅಲ್ಲಿ ಪಾಳುಬಿದ್ದಿದ್ದ ರಾಜನ ಖಜಾನೆಯಲ್ಲಿ ಅವು ಸಿಕ್ಕಿದವು. ಈ ಬರಹಗಳು ಒಂದನೇ ಸರ್ಕ್ಸೀಸ್ ರಾಜನ ಕಾಲದ್ದಾಗಿತ್ತು. ಇವು ಎಲಾಮೈಟ್ ಭಾಷೆಯಲ್ಲಿತ್ತು. ಮೊರ್ದೆಕೈ ಹೆಸರಿನ ಜೊತೆ ಎಸ್ತೇರ್ ಪುಸ್ತಕದಲ್ಲಿ ಹೇಳಿರೋ ಬೇರೆ ವ್ಯಕ್ತಿಗಳ ಹೆಸರುಗಳೂ ಅದರಲ್ಲಿ ಇದ್ದವು.
ಪರ್ಸೆಪೊಲಿಸ್ ನಗರದಲ್ಲಿ ಸಿಕ್ಕಿದ ಎಷ್ಟೋ ಬರಹಗಳಲ್ಲಿ ಮಾರ್ದೂಕ ಅನ್ನೋ ಹೆಸರು ತುಂಬ ಸಲ ಕಂಡುಬಂದಿದೆ. ಅವನು ಒಂದನೇ ಸರ್ಕ್ಸೀಸ್ ಆಳ್ತಿದ್ದ ಸಮಯದಲ್ಲಿ ಶೂಷನ್ ಆಸ್ಥಾನದಲ್ಲಿ ಕಾರ್ಯದರ್ಶಿಯಾಗಿದ್ದ ಅಂತ ಈ ಬರಹಗಳಿಂದ ಗೊತ್ತಾಗುತ್ತೆ. ಇನ್ನೊಂದು ಬರಹದಲ್ಲಿ ಮಾರ್ದೂಕ ಒಬ್ಬ ಭಾಷಾಂತರಗಾರನಾಗಿದ್ದ ಅಂತ ಹೇಳುತ್ತೆ. ಬೈಬಲಿನಲ್ಲೂ ಮೊರ್ದೆಕೈ ಬಗ್ಗೆ ಹೀಗೇ ಹೇಳಿದೆ. ಅವನು ರಾಜ ಅಹಷ್ವೇರೋಷನ (ಒಂದನೇ ಸರ್ಕ್ಸೀಸ್ನ) ಆಸ್ಥಾನದಲ್ಲಿ ಅಧಿಕಾರಿಯಾಗಿ ಕೆಲಸ ಮಾಡ್ತಿದ್ದ. ಅವನಿಗೆ ಕಡಿಮೆಪಕ್ಷ ಎರಡು ಭಾಷೆಗಳು ಬರುತ್ತಿತ್ತು. ಮೊರ್ದೆಕೈ ಯಾವಾಗಲೂ ರಾಜನ ಅರಮನೆಯ ಹೆಬ್ಬಾಗಿಲ ಹತ್ರ ಕೂತುಕೊಳ್ತಿದ್ದ ಅಂತ ಬೈಬಲ್ನಲ್ಲಿ ಇದೆ. (ಎಸ್ತೇ. 2:19, 21; 3:3) ಈ ಹೆಬ್ಬಾಗಿಲು ಒಂದು ದೊಡ್ಡ ಕಟ್ಟಡ ಆಗಿತ್ತು. ಆಸ್ಥಾನದ ಅಧಿಕಾರಿಗಳು ಅಲ್ಲೇ ಕೆಲಸ ಮಾಡ್ತಿದ್ರು.
ಕ್ಯೂನಿಫಾರ್ಮ್ ಬರಹಗಳಲ್ಲಿ ಹೇಳಿರೋ ಮಾರ್ದೂಕನಿಗೂ ಮತ್ತು ಬೈಬಲಲ್ಲಿ ಹೇಳಿರೋ ಮೊರ್ದೆಕೈಗೂ ತುಂಬ ಹೋಲಿಕೆಗಳಿವೆ. ಅವನು ಯಾವಾಗ ಜೀವಿಸ್ತಿದ್ದ, ಎಲ್ಲಿದ್ದ ಮತ್ತು ಏನು ಕೆಲಸ ಮಾಡ್ತಿದ್ದ ಅಂತ ಹೇಳಿರೋ ಮಾಹಿತಿ ಇವೆರಡರಲ್ಲೂ ಒಂದೇ ತರ ಇದೆ. ಭೂಅಗೆತ ಶಾಸ್ತ್ರಜ್ಞರು ಕಂಡುಹಿಡಿದಿರೋ ವಿಷಯಗಳನ್ನ ನೋಡುವಾಗ ಮಾರ್ದೂಕ ಅನ್ನೋ ವ್ಯಕ್ತಿನೇ ಎಸ್ತೇರ್ ಪುಸ್ತಕದಲ್ಲಿ ಹೇಳಿರೋ ಮೊರ್ದೆಕೈ ಅಂತ ಗೊತ್ತಾಗುತ್ತೆ.
ಸೆಪ್ಟೆಂಬರ್ 11-17
ಬೈಬಲಿನಲ್ಲಿರುವ ನಿಧಿ | ಎಸ್ತೇರ್ 3-5
“ಬೇರೆಯವ್ರಿಗೆ ಅವ್ರಿಂದ ಆಗೋದನ್ನೆಲ್ಲ ಮಾಡೋಕೆ ಸಹಾಯ ಮಾಡಿ”
it-2-E ಪುಟ 431 ಪ್ಯಾರ 7
ಮೊರ್ದೆಕೈ
ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡಲಿಲ್ಲ. ರಾಜ ಅಹಷ್ವೇರೋಷ ಹಾಮಾನನಿಗೆ ಅವನ ರಾಜ್ಯದಲ್ಲಿ ಬೇರೆಲ್ಲ ಅಧಿಕಾರಿಗಳಿಗಿಂತ ದೊಡ್ಡ ಸ್ಥಾನ ಕೊಟ್ಟ. ಅಷ್ಟೇ ಅಲ್ಲ, ಹೆಬ್ಬಾಗಿಲ ಹತ್ರ ಹೋಗೋರು ಬರೋರು ಹಾಮಾನನಿಗೆ ನಮಸ್ಕಾರ ಮಾಡಬೇಕು ಅಂತ ಹೇಳಿದ. ಆದ್ರೆ ಮೊರ್ದೆಕೈ ನಮಸ್ಕಾರ ಮಾಡ್ತಾ ಇರಲಿಲ್ಲ. ಯಾಕಂದ್ರೆ ತಾನೊಬ್ಬ ಯೆಹೂದಿ ಅಂತ ಹೇಳಿದ್ದ. (ಎಸ್ತೇ 3:1-4) ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ಅಧಿಕಾರಕ್ಕೆ ಗೌರವ ಕೊಡೋಕೆ ಅಧಿಕಾರಿಗಳ ಮುಂದೆ ಬಗ್ಗಿ ನಮಸ್ಕಾರ ಮಾಡ್ತಿದ್ರು. (2ಸಮು 14:4; 18:28; 1ಅರ 1:16) ಹಾಗಾಗಿ ಮೊರ್ದೆಕೈ ಕೂಡ ಹಾಮಾನನಿಗೆ ನಮಸ್ಕಾರ ಮಾಡಬಹುದಿತ್ತು. ಆದ್ರೂ ಅವನು ಯಾಕೆ ಮಾಡಲಿಲ್ಲ? ಯಾಕಂದ್ರೆ ಹಾಮಾನ ಒಬ್ಬ ಅಮಾಲೇಕ್ಯ ಆಗಿದ್ದಿರಬಹುದು. ಅಮಾಲೇಕ್ಯರ ‘ಮುಂದಿನ ಪೀಳಿಗೆಗಳ ವಿರುದ್ಧನೂ ಯುದ್ಧ ಮಾಡ್ತೀನಿ’ ಅಂತ ಯೆಹೋವ ಮುಂಚೆನೇ ಮಾತು ಕೊಟ್ಟಿದ್ದನು. (ವಿಮೋ 17:16) ಹಾಗಾಗಿ ಮೊರ್ದೆಕೈ ಅದನ್ನ ‘ರಾಜ ಕೊಟ್ಟಿರೋ ಒಂದು ಚಿಕ್ಕ ಆಜ್ಞೆ ಅಲ್ವಾ ಮಾಡಿಬಿಡೋಣ’ ಅಂತ ಅಂದ್ಕೊಳ್ಳಲಿಲ್ಲ. ಬದಲಿಗೆ ತಾನು ಯೆಹೋವನಿಗೆ ನಿಯತ್ತಾಗಿ ಇರಬೇಕಂದ್ರೆ ಹಾಮಾನನಿಗೆ ನಮಸ್ಕಾರ ಮಾಡಬಾರದು ಅನ್ನೋದನ್ನ ಮೊರ್ದೆಕೈ ಅರ್ಥ ಮಾಡ್ಕೊಂಡ.
it-2-E ಪುಟ 431 ಪ್ಯಾರ 9
ಮೊರ್ದೆಕೈ
ಇಸ್ರಾಯೇಲ್ಯರನ್ನ ಕಾಪಾಡೋಕೆ ಇವನನ್ನ ಬಳಸಿದನು. ಎಲ್ಲಾ ಯೆಹೂದ್ಯರನ್ನ ಸಾಯಿಸಬೇಕು ಅಂತ ಆಜ್ಞೆ ಹೊರಡಿಸಿದ್ರ ಬಗ್ಗೆ ಮೊರ್ದೆಕೈಗೆ ಗೊತ್ತಾಯ್ತು. ಆಗ ಅವನು ಎಸ್ತೇರ್ ಹತ್ರ ಹೋಗಿ ‘ಬಹುಶಃ ಯೆಹೂದ್ಯರನ್ನ ಕಾಪಾಡೋಕೆ ಅಂತಾನೇ ಯೆಹೋವ ನಿನ್ನನ್ನ ರಾಣಿಯಾಗಿ ಮಾಡಿರಬೇಕೋ ಏನೋ’ ಅಂತ ಹೇಳಿದ. ಅಷ್ಟೇ ಅಲ್ಲ ಅವ್ರ ಜೀವವನ್ನ ಕಾಪಾಡೋ ದೊಡ್ಡ ಜವಾಬ್ದಾರಿ ಅವಳ ಮೇಲೆ ಇರೋದ್ರಿಂದ ರಾಜನ ಹತ್ರ ಹೋಗಿ ಸಹಾಯ ಕೇಳೋಕೆ ಹೇಳಿದ. ಅವಳು ತನ್ನ ಪ್ರಾಣನೇ ಒತ್ತೆಯಿಟ್ಟು ಅವನು ಹೇಳಿದ್ದನ್ನ ಮಾಡೋಕೆ ಒಪ್ಕೊಂಡಳು.—ಎಸ್ತೇ 4:7–5:2.
ಅನುಕರಿಸಿ ಪುಟ 153-154 ಪ್ಯಾರ 22-23
ದೇವಜನರ ಪರವಹಿಸಿ ನಿಂತಾಕೆ
22 ಆ ಸಂದೇಶ ಕೇಳಿ ಎಸ್ತೇರಳಿಗೆ ಹೃದಯ ಬಾಯಿಗೆ ಬಂದಂತಾಗಿರಬೇಕು. ಅವಳ ನಂಬಿಕೆಯ ಅತ್ಯಂತ ಕಠಿನ ಪರೀಕ್ಷೆ ಇದಾಗಿತ್ತು. ಮೊರ್ದೆಕೈಗೆ ಆಕೆ ಕಳುಹಿಸಿದ ಉತ್ತರದಲ್ಲಿ ತನಗಾಗುತ್ತಿದ್ದ ಭಯವನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಿದಳು. ಅಪ್ಪಣೆಯಿಲ್ಲದೆ ರಾಜನ ಸನ್ನಿಧಿಗೆ ಹೋಗುವವರಿಗೆ ಮರಣ ದಂಡನೆ ಆಗುವುದೆಂಬ ರಾಜಾಜ್ಞೆಯನ್ನು ಅವನಿಗೆ ನೆನಪು ಹುಟ್ಟಿಸಿದಳು. ರಾಜನು ತನ್ನ ಸುವರ್ಣ ದಂಡ ಚಾಚಿದರೆ ಮಾತ್ರ ಆ ತಪ್ಪುಮಾಡಿದವನ ಜೀವ ಉಳಿಯುತ್ತಿತ್ತು. ಆದರೆ ರಾಜನು ಅಷ್ಟೊಂದು ದಯೆ ತೋರಿಸುವನೆಂದು ನಿರೀಕ್ಷಿಸಲು ಎಸ್ತೇರಳಿಗೆ ಆಧಾರವಿರಲಿಲ್ಲ. ಹಿಂದೊಮ್ಮೆ ವಷ್ಟಿಯು ರಾಜನ ಅಪ್ಪಣೆ ಧಿಕ್ಕರಿಸಿದಾಗ ಅವಳಿಗಾದ ಗತಿ ಎಸ್ತೇರಳಿಗೆ ನೆನಪಿರಬೇಕು. 30 ದಿನಗಳ ವರೆಗೆ ರಾಜನ ಬಳಿ ಹೋಗಲು ತನಗೆ ಅಪ್ಪಣೆಯಾಗಿಲ್ಲವೆಂದೂ ಎಸ್ತೇರಳು ಮೊರ್ದೆಕೈಗೆ ಹೇಳಿದಳು. ಹಾಗಾಗಿ ಸಾಮ್ರಾಟನ ಮನಸ್ಸು ಬದಲಾಗಿದೆ, ಬಹುಶಃ ಈಗ ತನ್ನನ್ನು ಮುಂಚಿನಷ್ಟು ಇಷ್ಟಪಡುವುದಿಲ್ಲವೆನೋ ಎಂದು ನೆನಸಲು ಆಕೆಗೆ ಕಾರಣವಿತ್ತು.—ಎಸ್ತೇ. 4:9-11.
23 ಎಸ್ತೇರಳ ನಂಬಿಕೆಯನ್ನು ಬಲಪಡಿಸಲು ಮೊರ್ದೆಕೈ ದೃಢವಾದ ಉತ್ತರಕೊಟ್ಟನು. ಒಂದುವೇಳೆ ಅವಳು ಯಾವುದೇ ಹೆಜ್ಜೆ ತಕ್ಕೊಳ್ಳದಿದ್ದರೆ, ಯೆಹೂದ್ಯರಿಗೆ ಬೇರೆ ಕಡೆಯಿಂದ ರಕ್ಷಣೆ ಬಂದೇ ಬರುವುದೆಂದು ನಿಶ್ಚಿತವಾಗಿ ಹೇಳಿದನು. ಆದರೆ ಯೆಹೂದ್ಯರ ಸಂಹಾರವಾಗುವಾಗ ಅವಳ ಜೀವ ಉಳಿಯುವ ಖಾತರಿಯೂ ಇಲ್ಲವೆಂದು ಹೇಳಿದನು. ಮೊರ್ದೆಕೈ ಹೀಗೆ ಎಸ್ತೇರಳಿಗೆ ಕೊಟ್ಟ ಉತ್ತರದಲ್ಲಿ ಅವನಿಗೆ ಯೆಹೋವನಲ್ಲಿದ್ದ ಗಾಢ ನಂಬಿಕೆಯನ್ನು ತೋರಿಸಿದನು. ಯೆಹೋವನು ತನ್ನ ಜನರು ನಿರ್ನಾಮವಾಗುವಂತೆ ಹಾಗೂ ತನ್ನ ಮಾತು ವ್ಯರ್ಥವಾಗುವಂತೆ ಎಂದಿಗೂ ಬಿಡುವುದಿಲ್ಲವೆಂಬ ವಿಶ್ವಾಸ ಮೊರ್ದೆಕೈಗಿತ್ತು. (ಯೆಹೋ. 23:14) ಅನಂತರ ಅವನು ಎಸ್ತೇರಳಿಗೆ “ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು” ಎಂದೂ ಹೇಳಿದ. (ಎಸ್ತೇ. 4:12-14) ಮೊರ್ದೆಕೈ ನಿಜವಾಗಿ ನಮ್ಮ ಅನುಕರಣೆಗೆ ಯೋಗ್ಯನಾದ ವ್ಯಕ್ತಿಯಲ್ಲವೇ? ಅವನು ತನ್ನ ದೇವರಾದ ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟನು. ಅಷ್ಟು ಭರವಸೆ ನಮಗಿದೆಯಾ?—ಜ್ಞಾನೋ. 3:5, 6.
ಬೈಬಲಿನಲ್ಲಿರುವ ರತ್ನಗಳು
ದೇವರ ಸರ್ಕಾರ-E ಪುಟ 160 ಪ್ಯಾರ 14
ಆರಾಧನೆಗಾಗಿ ಹೋರಾಟ
14 ಎಸ್ತೇರ್ ಮತ್ತು ಮೊರ್ದೆಕೈ ತರ ಇವತ್ತು ನಮ್ಮ ಸಹೋದರ ಸಹೋದರಿಯರು ಯೆಹೋವನನ್ನ ಆತನು ಹೇಳಿರೋ ತರಾನೇ ಆರಾಧಿಸೋಕೆ ತುಂಬ ಹೋರಾಡ್ತಿದ್ದಾರೆ. (ಎಸ್ತೇ. 4:13-16) ಇವ್ರ ಜೊತೆ ಸೇರಿ ನಾವೂ ಹೋರಾಡಬಹುದು. ಅದು ಹೇಗೆ? ವಿರೋಧಿಗಳು ನಮ್ಮ ಸಹೋದರರ ಮೇಲೆ ಅನ್ಯಾಯವಾಗಿ ಕೇಸ್ ಹಾಕಿದ್ದಾರೆ. ಅವ್ರಿಗೋಸ್ಕರ ನಾವು ಯಾವಾಗ್ಲೂ ಪ್ರಾರ್ಥನೆ ಮಾಡಬಹುದು. ಇದ್ರಿಂದ ನಮ್ಮ ಸಹೋದರ ಸಹೋದರಿಯರಿಗೆ ಕಷ್ಟಗಳನ್ನ ತಾಳ್ಕೊಳ್ಳೋಕೆ ತುಂಬ ಸಹಾಯ ಆಗುತ್ತೆ. (ಯಾಕೋಬ 5:16 ಓದಿ.) ಯೆಹೋವ ದೇವರು ನಾವು ಮಾಡೋ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನಾ? ಇಲ್ಲಿ ತನಕ ನಾವು ಗೆದ್ದಿರೋ ಕೇಸ್ಗಳೇ ಅದಕ್ಕೆ ಸಾಕ್ಷಿ!—ಇಬ್ರಿ. 13:18, 19.
ಸೆಪ್ಟೆಂಬರ್ 18-24
ಬೈಬಲಿನಲ್ಲಿರುವ ನಿಧಿ | ಎಸ್ತೇರ್ 6-8
“ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?”
ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ
15 ಎಸ್ತೇರ್ ತಾಳ್ಮೆ ತೋರಿಸಿ ರಾಜನ ಮುಂದೆ ತನ್ನ ಕೋರಿಕೆ ತಿಳಿಸಲಿಕ್ಕೆ ಇನ್ನೊಂದು ದಿನದ ಮಟ್ಟಿಗೆ ಕಾದದ್ದು ಒಳ್ಳೇದೇ ಆಯಿತು. ಏಕೆಂದರೆ ಹಾಮಾನನು ತನ್ನ ಗೋರಿಯನ್ನು ತಾನೇ ತೋಡಿಕೊಳ್ಳಲಾರಂಭಿಸಿದ್ದ. ಅಲ್ಲದೆ, ರಾಜನಿಗೆ ಆ ರಾತ್ರಿ ನಿದ್ದೆ ಬರದ ಹಾಗೆ ಮಾಡಿದ್ದು ಯೆಹೋವ ದೇವರೇ ಆಗಿರಬಹುದು. (ಜ್ಞಾನೋ. 21:1) ದೇವರ ವಾಕ್ಯವು ನಮಗೆ ‘ಕಾದುಕೊಳ್ಳುವಂತೆ’ ಪ್ರೋತ್ಸಾಹಿಸುವುದು ನಮ್ಮ ಒಳಿತಿಗೇ. (ಮೀಕ 7:7 ಓದಿ.) ನಮಗೆ ಸಮಸ್ಯೆಗಳಿರುವಾಗ ಅವನ್ನು ಪರಿಹರಿಸಲು ನಾವು ದೇವರಲ್ಲಿ ಭರವಸೆಯಿಟ್ಟು ಆತನು ಕ್ರಮಗೈಯುವಂತೆ ಕಾಯಬೇಕು. ಆತನದನ್ನು ಪರಿಹರಿಸುವ ವಿಧವು ಎಷ್ಟೋ ಶ್ರೇಷ್ಠವಾಗಿರುತ್ತದೆ. ಒಂದುವೇಳೆ ನಾವಾಗಿಯೇ ಅದನ್ನು ಪರಿಹರಿಸಲು ಹೆಜ್ಜೆ ತಕ್ಕೊಂಡಿರುತ್ತಿದ್ದರೆ ಅದು ಅಷ್ಟು ಉತ್ತಮವಾಗಿರುತ್ತಿರಲಿಲ್ಲ ಎಂದು ನಮಗೆ ಗೊತ್ತಾಗುವುದು.
ಹೇಳಬೇಕಾದದ್ದನ್ನು ಧೈರ್ಯದಿಂದ ಹೇಳಿಬಿಟ್ಟಳು
16 ರಾಜನ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸುವುದು ಉಚಿತವಲ್ಲವೆಂದು ಎಸ್ತೇರಳಿಗನಿಸಿತು. ಎರಡನೇ ದಿನದ ಔತಣದಲ್ಲಿ ರಾಜನಿಗೆ ಎಲ್ಲವನ್ನು ಮುಚ್ಚುಮರೆಯಿಲ್ಲದೆ ಹೇಳಲು ನಿರ್ಧರಿಸಿದಳು. ಆದರೆ ಹೇಳುವುದು ಹೇಗೆ? ಆ ಔತಣದಲ್ಲಿ ರಾಜನು ಪುನಃ ಒಮ್ಮೆ ಅವಳ ಕೋರಿಕೆ ಏನೆಂದು ಕೇಳಿ ಅವಳಿಗೆ ಮಾತಾಡುವ ಅವಕಾಶ ಕೊಟ್ಟನು. (ಎಸ್ತೇ. 7:2) ಕೊನೆಗೂ ಎಸ್ತೇರಳಿಗೆ “ಮಾತಾಡುವ ಸಮಯ” ಬಂತು.
ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ
17 ಮೊದಲು ಅವಳು ಮನಸ್ಸಲ್ಲೇ ದೇವರಿಗೆ ಪ್ರಾರ್ಥಿಸಿರಬಹುದು. ಅನಂತರ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವದಾದರೆ ನನ್ನ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಜನಾಂಗವನ್ನೂ ಉಳಿಯಗೊಡಿಸಬೇಕು” ಎಂದು ರಾಜನಿಗೆ ಹೇಳಿದಳು. (ಎಸ್ತೇ. 7:3) ಅವಳು ರಾಜನೊಟ್ಟಿಗೆ ಮಾತಾಡಿದ ರೀತಿ ಗಮನಿಸಿ. ಅವಳು ಹೇಳಲಿರುವ ವಿಷಯದಲ್ಲಿ ರಾಜನು ಯಾವುದೇ ತೀರ್ಮಾನ ತಕ್ಕೊಂಡರೂ ಅದನ್ನು ಗೌರವಿಸುತ್ತಾಳೆಂದು ಅದು ತೋರಿಸಿತು. ರಾಜನನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದ ಅವನ ಮಾಜಿ ಪತ್ನಿ ವಷ್ಟಿಯಂತೆ ಎಸ್ತೇರ್ ಇರಲಿಲ್ಲ. (ಎಸ್ತೇ. 1:10-12) ಅಲ್ಲದೆ, ರಾಜನು ಹಾಮಾನನಲ್ಲಿ ಭರವಸೆಯಿಟ್ಟದ್ದು ಮೂರ್ಖತನವಾಗಿತ್ತೆಂದು ಅವಳು ಟೀಕಿಸಲಿಲ್ಲ. ಬದಲಿಗೆ, ತನ್ನ ಜೀವಕ್ಕೆ ಬಂದಿರುವ ಅಪಾಯದಿಂದ ತನ್ನನ್ನು ರಕ್ಷಿಸುವಂತೆ ರಾಜನ ಬಳಿ ಅಂಗಲಾಚಿದಳು.
ಅನುಕರಿಸಿ ಪುಟ 162-163 ಪ್ಯಾರ 18-19
ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ
18 ರಾಣಿಯ ವಿನಂತಿ ರಾಜನ ಮನಕಲಕಿತು. ತನ್ನ ಪತ್ನಿಯ ಜೀವಕ್ಕೆ ಕುತ್ತು ತರುವಷ್ಟು ಧೈರ್ಯ ಯಾರು ಮಾಡಿರಬಹುದೆಂದು ಚಕಿತನೂ ಆದ. ಎಸ್ತೇರ್ ಮಾತು ಮುಂದುವರಿಸುತ್ತಾ, “ಜನರು ನಮ್ಮನ್ನು ಕೊಂದು ಸಂಹರಿಸಿ ನಿರ್ನಾಮಗೊಳಿಸುವ ಹಾಗೆ ನನ್ನನ್ನೂ ನನ್ನ ಜನರನ್ನೂ ಮಾರಲಾಗಿದೆ. ಬರೇ ದಾಸದಾಸಿಯರಾಗುವದಕ್ಕೆ ಮಾರಲ್ಪಟ್ಟಿದ್ದರೆ ಸುಮ್ಮನಿರುತ್ತಿದ್ದೆ. ಆದರೆ ಈಗ ಬಂದೊದಗಿರುವ ಆಪತ್ತಿನಿಂದ ರಾಜನಿಗೇ ಹಾನಿ ಆಗಲಿದೆ” ಎಂದು ಹೇಳಿದಳು. (ಎಸ್ತೇ. 7:4, NW) ಸಮಸ್ಯೆಯನ್ನು ಎಸ್ತೇರಳು ಮುಚ್ಚುಮರೆಯಿಲ್ಲದೆ ಹೇಳಿದ್ದನ್ನು ಗಮನಿಸಿ. ಆದರೆ ಅದೇ ಸಮಯದಲ್ಲಿ ಅವಳದನ್ನು ಹೇಳುತ್ತಿರುವುದಕ್ಕೆ ಕಾರಣವನ್ನೂ ವಿವರಿಸಿದಳು. ಅದೇನೆಂದರೆ ತನ್ನನ್ನೂ ತನ್ನ ಜನರನ್ನೂ ದಾಸತ್ವಕ್ಕೆ ಒಳಪಡಿಸುವ ಬೆದರಿಕೆ ಮಾತ್ರ ಆಗಿರುತ್ತಿದ್ದರೆ ಸುಮ್ಮನಿರುತ್ತಿದ್ದೆ, ಆದರೆ ಈ ಮಾರಣಹೋಮದಿಂದ ರಾಜನಿಗೇ ದೊಡ್ಡ ನಷ್ಟ ಆಗಲಿದೆ ಎಂದಳು.
19 ಒಂದು ವಿಷಯದ ಬಗ್ಗೆ ಒಬ್ಬರನ್ನು ಒಡಂಬಡಿಸುವುದು ಹೇಗೆಂಬುದನ್ನು ಎಸ್ತೇರಳ ಮಾದರಿಯಿಂದ ಕಲಿಯಬಲ್ಲೆವು. ಒಡಂಬಡಿಸುವುದು ಒಂದು ಕಲೆ. ಗಂಭೀರ ಸಮಸ್ಯೆಯೊಂದರ ಬಗ್ಗೆ ಕ್ರಮ ತಕ್ಕೊಳ್ಳುವಂತೆ ನಮ್ಮ ಆತ್ಮೀಯರೊಬ್ಬರಿಗೊ ಅಧಿಕಾರದಲ್ಲಿರುವ ವ್ಯಕ್ತಿಗೊ ತಿಳಿಸಬೇಕಾಗಿ ಬಂದರೆ ಅದನ್ನು ತಾಳ್ಮೆಯಿಂದ, ಗೌರವದಿಂದ, ಮುಚ್ಚುಮರೆಯಿಲ್ಲದೆ ಹೇಳುವುದೇ ಸರಿಯಾದ ವಿಧಾನ.—ಜ್ಞಾನೋ. 16:21, 23.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 3/1 ಪುಟ 11 ಪ್ಯಾರ 1
ಎಸ್ತೇರಳು ಪುಸ್ತಕದ ಮುಖ್ಯಾಂಶಗಳು
7:4—ಯೆಹೂದ್ಯರ ನಾಶನವು ‘ರಾಜನಿಗೆ ತೊಂದರೆಯನ್ನು’ ಹೇಗೆ ತರುತ್ತಿತ್ತು? ಯೆಹೂದ್ಯರನ್ನು ದಾಸದಾಸಿಯರನ್ನಾಗಿ ಮಾರುವ ಸಾಧ್ಯತೆಯನ್ನು ಜಾಣ್ಮೆಯಿಂದ ತಿಳಿಸುವ ಮೂಲಕ, ಅವರನ್ನು ನಾಶಮಾಡುವುದು ರಾಜನಿಗೆ ತೊಂದರೆಯ ಅಥವಾ ನಷ್ಟದ ಅರ್ಥದಲ್ಲಿದೆ ಎಂಬುದನ್ನು ಎಸ್ತೇರಳು ತಿಳಿಯಪಡಿಸಿದಳು. ಹಾಮಾನನು ಮಾತುಕೊಟ್ಟ 10,000 ಬೆಳ್ಳಿ ನಾಣ್ಯಗಳು ಅರಸನ ಬೊಕ್ಕಸಕ್ಕೆ ಏನೂ ಅಲ್ಲದವುಗಳಾಗಿದ್ದವು. ಒಂದುವೇಳೆ ಯೆಹೂದ್ಯರನ್ನು ದಾಸದಾಸಿಯಂತೆ ಮಾರಲು ಹಾಮಾನನು ಒಳಸಂಚು ಮಾಡುತ್ತಿದ್ದರೆ ಆಗ ಅರಸನಿಗೆ ಎಷ್ಟೊ ಹೆಚ್ಚು ಲಾಭವಾಗುತ್ತಿತ್ತು. ಆದರೆ ಹಾಮಾನನ ಒಳಸಂಚು ನೆರವೇರಿದರೆ ಅದು ರಾಣಿಯ ನಷ್ಟದ ಅರ್ಥದಲ್ಲಿತ್ತು.
ಸೆಪ್ಟೆಂಬರ್ 25–ಅಕ್ಟೋಬರ್ 1
ಬೈಬಲಿನಲ್ಲಿರುವ ನಿಧಿ | ಎಸ್ತೇರ್ 9-10
“ಜನ್ರಿಗೆ ಸಹಾಯ ಮಾಡೋಕೆ ತನ್ನ ಅಧಿಕಾರ ಉಪಯೋಗಿಸಿದ”
it-2-E ಪುಟ 432 ಪ್ಯಾರ 2
ಮೊರ್ದೆಕೈ
ಹಾಮಾನನ ಸ್ಥಾನ ಮೊರ್ದೆಕೈಗೆ ಸಿಕ್ತು. ಅಷ್ಟೇ ಅಲ್ಲ, ಸರ್ಕಾರೀ ಪತ್ರಗಳಿಗೆ ಮುದ್ರೆ ಹಾಕೋಕೆ ರಾಜ ಮೊರ್ದೆಕೈಗೆ ತನ್ನ ಮುದ್ರೆ ಉಂಗುರನೂ ಕೊಟ್ಟ. ಅದಾರ್ 13ನೇ ತಾರೀಕು ಯೆಹೂದ್ಯರ ಮೇಲೆ ಯುದ್ಧ ಮಾಡಬೇಕು ಅಂತ ಈಗಾಗ್ಲೆ ಒಂದು ಆಜ್ಞೆ ಇತ್ತು. ಆದ್ರೆ ಯೆಹೂದ್ಯರು ತಮ್ಮನ್ನ ಕಾಪಾಡ್ಕೊಳ್ಳೋಕೆ ಅವರು ಕೂಡ ಯುದ್ಧ ಮಾಡಬಹುದು ಅಂತ ಮೊರ್ದೆಕೈ ಈಗ ಆಜ್ಞೆ ಹೊರಡಿಸಿದ. ಇದನ್ನ ಕೇಳಿದಾಗ ಯೆಹೂದ್ಯರಿಗೆ ಸಮಾಧಾನ ಆಯ್ತು, ತುಂಬ ಖುಷಿ ಆಯ್ತು. ಅವರು ಅದಾರ್ 13ನೇ ತಾರೀಕು ಯುದ್ಧಕ್ಕೆ ಸಿದ್ಧರಾಗಿದ್ರು. ಶೂಷನ್ನಲ್ಲಿ ಎರಡು ದಿನಗಳ ತನಕ ಯುದ್ಧ ನಡೀತು. 75,000ಕ್ಕಿಂತ ಜಾಸ್ತಿ ಶತ್ರುಗಳನ್ನ ಯೆಹೂದ್ಯರು ಪರ್ಷಿಯದ ಪ್ರಾಂತ್ಯದಲ್ಲಿ ನಾಶ ಮಾಡಿದ್ರು. ಅವ್ರಲ್ಲಿ ಹಾಮಾನನ 10 ಗಂಡುಮಕ್ಕಳು ಕೂಡ ಸತ್ತುಹೋದ್ರು. (ಎಸ್ತೇ 8:1–9:18) ಮೊರ್ದೆಕೈ ಎಲ್ಲಾ ಯೆಹೂದ್ಯರಿಗೂ ಅದಾರ್ ತಿಂಗಳಿನ 14 ಮತ್ತು 15ನೇ ತಾರೀಕು ಪ್ರತಿವರ್ಷ “ಪೂರೀಮ್ ಹಬ್ಬ” ಆಚರಿಸಬೇಕು ಅಂತ ಹೇಳಿದ. ಹಾಗಾಗಿ ಯೆಹೂದ್ಯರು ಆ ಎರಡೂ ದಿನಗಳಲ್ಲಿ ದೊಡ್ಡ ಔತಣ ಮಾಡಿ ಸಂಭ್ರಮಿಸಿದ್ರು. ಒಬ್ರಿಗೊಬ್ರು ಆಹಾರವನ್ನ, ಬಡವರಿಗೆ ಉಡುಗೊರೆಗಳನ್ನ ಹಂಚಿದ್ರು. ರಾಜನ ಎರಡನೇ ಸ್ಥಾನದಲ್ಲಿದ್ದ ಮೊರ್ದೆಕೈಯನ್ನ ಯೆಹೂದ್ಯರು ತುಂಬ ಗೌರವಿಸ್ತಿದ್ರು. ಅವನು ಅವ್ರ ಒಳಿತಿಗಾಗಿ ತುಂಬ ಕೆಲಸಗಳನ್ನ ಮಾಡ್ತಾ ಇದ್ದ.—ಎಸ್ತೇ 9:19-22, 27-32; 10:2, 3.
it-2-E ಪುಟ 716 ಪ್ಯಾರ 5
ಪೂರೀಮ್
ಉದ್ದೇಶ. ಯೆಹೋವ ತನ್ನ ಜನ್ರನ್ನ ಶತ್ರುಗಳಿಂದ ಕಾಪಾಡಿದ್ದಕ್ಕೆ ಜನ್ರು ಆತನನ್ನ ಕೊಂಡಾಡ್ತಾ ಪೂರೀಮ್ ಹಬ್ಬನ ಆಚರಿಸ್ತಾ ಇದ್ರು. ಆದ್ರೆ ಇವತ್ತು ಯೆಹೂದ್ಯರು ಬೇರೆ ತರಾನೇ ಆಚರಿಸ್ತಾರೆ.
ಸಮೀಪಕ್ಕೆ ಬನ್ನಿರಿ ಪುಟ 101-102 ಪ್ಯಾರ 12-13
ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’
12 ಕ್ರೈಸ್ತ ಸಭೆಯೊಳಗೆ ನಾಯಕತ್ವವನ್ನು ವಹಿಸಲು ಯೆಹೋವನು ಮೇಲ್ವಿಚಾರಕರನ್ನು ಒದಗಿಸಿರುತ್ತಾನೆ. (ಇಬ್ರಿಯ 13:17) ಈ ಅರ್ಹ ಪುರುಷರು ತಮ್ಮ ದೇವದತ್ತ ಅಧಿಕಾರವನ್ನು, ಹಿಂಡಿನ ಆಧ್ಯಾತ್ಮಿಕ ಸಮೃದ್ಧಿಯ ವರ್ಧನೆಗಾಗಿ ಮತ್ತು ಬೇಕಾದ ಸಹಾಯವನ್ನು ಒದಗಿಸಲಿಕ್ಕಾಗಿ ಬಳಸಬೇಕು. ಅವರಿಗಿರುವ ಈ ಸ್ಥಾನವು ಅವರು ತಮ್ಮ ಜೊತೆ ವಿಶ್ವಾಸಿಗಳ ಮೇಲೆ ದೊರೆತನ ನಡಿಸುವ ಹಕ್ಕನ್ನು ಕೊಡುತ್ತದೊ? ಇಲ್ಲವೇ ಇಲ್ಲ! ಹಿರಿಯರು ಸಭೆಯಲ್ಲಿರುವ ತಮ್ಮ ಪಾತ್ರದ ಬಗ್ಗೆ ಸಮತೆಯುಳ್ಳ, ದೀನ ನೋಟವುಳ್ಳವರಾಗಿರಬೇಕು. (1 ಪೇತ್ರ 5:2, 3) ಬೈಬಲು ಮೇಲ್ವಿಚಾರಕರಿಗೆ ಹೇಳುವುದು: ‘ದೇವರು [ತನ್ನ ಪುತ್ರನ] ರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸಿರಿ.’ (ಅ. ಕೃತ್ಯಗಳು 20:28) ಮಂದೆಯ ಪ್ರತಿಯೊಬ್ಬ ಸದಸ್ಯನನ್ನು ಕೋಮಲವಾಗಿ ಉಪಚರಿಸುವುದಕ್ಕೆ ಒಂದು ಪ್ರಬಲವಾದ ಕಾರಣವು ಆ ವಚನದಲ್ಲಿದೆ.
13 ನಾವದನ್ನು ಈ ರೀತಿಯಲ್ಲಿ ದೃಷ್ಟಾಂತಿಸಬಹುದು. ನಿಮ್ಮ ಆತ್ಮೀಯ ಮಿತ್ರನು ತುಂಬ ಇಷ್ಟಪಡುವಂಥ ಒಂದು ವಸ್ತುವನ್ನು ನಿಮಗೆ ಕೊಟ್ಟು ಅದರ ಜೋಕೆವಹಿಸುವಂತೆ ಹೇಳುತ್ತಾನೆ. ನಿಮ್ಮ ಮಿತ್ರನು ಅದಕ್ಕೆ ಬಹಳ ಹಣ ತೆತ್ತಿದ್ದಾನೆಂದು ನಿಮಗೆ ಗೊತ್ತಿದೆ. ನೀವದನ್ನು ಬಹಳ ನಾಜೂಕಿನಿಂದ, ಅತಿ ಜಾಗರೂಕತೆಯಿಂದ ನೋಡಿಕೊಳ್ಳುವುದಿಲ್ಲವೇ? ತದ್ರೀತಿಯಲ್ಲಿ, ನಿಜವಾಗಿಯೂ ಬಹುಮೂಲ್ಯವಾದ ಸೊತ್ತನ್ನು, ಯಾವುದರ ಸದಸ್ಯರು ಕುರಿಗಳಿಗೆ ಹೋಲಿಸಲ್ಪಟ್ಟಿದ್ದಾರೊ ಆ ಸಭೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ದೇವರು ಹಿರಿಯರಿಗೆ ವಹಿಸಿದ್ದಾನೆ. (ಯೋಹಾನ 21:16, 17) ಯೆಹೋವನಿಗೆ ತನ್ನ ಕುರಿಗಳೆಂದರೆ ಪಂಚಪ್ರಾಣ—ಎಷ್ಟರ ಮಟ್ಟಿಗೆಂದರೆ ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನ ಅಮೂಲ್ಯ ರಕ್ತವನ್ನು ಕೊಟ್ಟು ಆತನು ಅವರನ್ನು ಕೊಂಡುಕೊಂಡಿದ್ದಾನೆ. ತನ್ನ ಕುರಿಗಳಿಗಾಗಿ ಯೆಹೋವನು ಕೊಡಸಾಧ್ಯವಿದ್ದ ಉತ್ಕೃಷ್ಟ ಬೆಲೆಯು ಇದಕ್ಕಿಂತ ಬೇರೊಂದಿಲ್ಲ. ದೀನರಾದ ಹಿರಿಯರು ಇದನ್ನು ಮನಸ್ಸಿನಲ್ಲಿಟ್ಟವರಾಗಿ ಯೆಹೋವನ ಕುರಿಗಳನ್ನು ಅದಕ್ಕೆ ಹೊಂದಿಕೆಯಲ್ಲಿ ಉಪಚರಿಸುತ್ತಾರೆ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 3/1 ಪುಟ 11 ಪ್ಯಾರ 4
ಎಸ್ತೇರಳು ಪುಸ್ತಕದ ಮುಖ್ಯಾಂಶಗಳು
9:10, 15, 16—ಸುಲಿಗೆಮಾಡುವುದಕ್ಕೆ ಕಟ್ಟಳೆಯು ಕೊಡಲ್ಪಟ್ಟರೂ ಯೆಹೂದ್ಯರು ಹಾಗೆ ಮಾಡಲು ನಿರಾಕರಿಸಿದ್ದೇಕೆ? ಅವರ ಉದ್ದೇಶವು ತಮ್ಮನ್ನು ರಕ್ಷಿಸಿಕೊಳ್ಳುವುದಾಗಿತ್ತೇ ಹೊರತು ಐಶ್ವರ್ಯವನ್ನು ಗಳಿಸುವುದಾಗಿರಲಿಲ್ಲ ಎಂಬುದನ್ನು ಅವರ ನಿರಾಕರಣೆಯು ಸ್ಪಷ್ಟಪಡಿಸಿತು.
ಅಕ್ಟೋಬರ್ 2-8
ಬೈಬಲಿನಲ್ಲಿರುವ ನಿಧಿ | ಯೋಬ 1-3
“ಯೆಹೋವನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಾ ಇರಿ”
ಕಾವಲಿನಬುರುಜು18.02 ಪುಟ 6 ಪ್ಯಾರ 16-17
ನೋಹ, ದಾನಿಯೇಲ, ಯೋಬ—ಇವರ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಿ
16 ಯೋಬ ಯಾವ ಸವಾಲುಗಳನ್ನು ಎದುರಿಸಿದನು? ಯೋಬನು ಜೀವನದಲ್ಲಿ ದೊಡ್ಡ ಏರುಪೇರುಗಳನ್ನು ನೋಡಿದನು. ಆರಂಭದಲ್ಲಿ “ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವಾಸ್ತ್ಯವುಳ್ಳವನಾಗಿದ್ದನು.” (ಯೋಬ 1:3) ತುಂಬ ಶ್ರೀಮಂತನಾಗಿದ್ದನು ಮತ್ತು ಅನೇಕರಿಗೆ ಅವನ ಪರಿಚಯವಿತ್ತು. ಅವನ ಮೇಲೆ ತುಂಬ ಗೌರವ ಇತ್ತು. (ಯೋಬ 29:7-16) ಇಷ್ಟೆಲ್ಲಾ ಇದ್ದರೂ ತಾನು ಬೇರೆಯವರಿಗಿಂತ ಶ್ರೇಷ್ಠ, ತನಗೆ ದೇವರು ಬೇಕಿಲ್ಲ ಅಂತ ಯೋಬ ನೆನಸಲಿಲ್ಲ. ಆದ್ದರಿಂದಲೇ ಯೆಹೋವನು ಅವನನ್ನು “ನನ್ನ ದಾಸ” ಎಂದು ಕರೆದನು. ಅಲ್ಲದೇ “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ” ಎಂದನು.—ಯೋಬ 1:8.
17 ಆದರೆ ಇದ್ದಕ್ಕಿದ್ದಂತೆ ಯೋಬನ ಜೀವನದಲ್ಲಿ ಎಲ್ಲಾ ತಲೆಕೆಳಗಾಯಿತು. ಅವನ ಹತ್ತಿರ ಇದ್ದ ಎಲ್ಲವನ್ನೂ ಅವನು ಕಳಕೊಂಡನು. ಸಾಯಬೇಕು ಅನ್ನುವಷ್ಟರ ಮಟ್ಟಿಗೆ ಅವನಿಗೆ ದುಃಖವಾಯಿತು. ಅವನಿಗೆ ಬಂದ ಆ ಕಷ್ಟಗಳಿಗೆಲ್ಲ ಸೈತಾನನೇ ಕಾರಣ ಎಂದು ಅವನಿಗೆ ಗೊತ್ತಿರಲಿಲ್ಲ. ಯೋಬನು ಒಬ್ಬ ಸ್ವಾರ್ಥಿ, ದೇವರು ಅವನನ್ನು ಆಶೀರ್ವದಿಸುತ್ತಾ ಇರುವುದರಿಂದ ಆತನ ಆರಾಧನೆ ಮಾಡುತ್ತಿದ್ದಾನೆ ಎಂದು ಸೈತಾನ ಆಪಾದಿಸಿದನು. (ಯೋಬ 1:9, 10 ಓದಿ.) ಯೆಹೋವನು ಇದನ್ನು ತುಂಬ ಗಂಭೀರವಾಗಿ ತೆಗೆದುಕೊಂಡನು. ಸೈತಾನ ಒಬ್ಬ ಮಹಾ ಸುಳ್ಳುಗಾರ ಎಂದು ರುಜುಪಡಿಸಲು ಯೆಹೋವನು ಏನು ಮಾಡಿದನು? ಯೋಬನು ತನ್ನ ನಿಷ್ಠೆಯನ್ನು ರುಜುಪಡಿಸಲು ಮತ್ತು ಯೆಹೋವನನ್ನು ನಿಸ್ವಾರ್ಥ ಪ್ರೀತಿಯಿಂದ ಆರಾಧಿಸುತ್ತಾನೆಂದು ತೋರಿಸಲು ಯೋಬನಿಗೊಂದು ಅವಕಾಶ ಕೊಟ್ಟನು.
ಕಾವಲಿನಬುರುಜು19.02 ಪುಟ 5 ಪ್ಯಾರ 10
ಸದಾ ಸಮಗ್ರತೆ ಕಾಪಾಡಿಕೊಳ್ಳಿ!
10 ಸೈತಾನನು ಯೋಬನ ಸಮಗ್ರತೆಗೆ ಮಸಿ ಬಳಿಯಲು ಪ್ರಯತ್ನಿಸಿದಂತೆ ನಮ್ಮೆಲ್ಲರ ವಿಷಯದಲ್ಲೂ ಮಾಡಲು ಬಯಸುತ್ತಾನೆ. ನಿಮಗೆ ದೇವರ ಮೇಲೆ ನಿಜವಾದ ಪ್ರೀತಿ ಇಲ್ಲ, ಕಷ್ಟ ಬಂದರೆ ದೇವರನ್ನು ಬಿಟ್ಟು ಓಡಿಹೋಗುತ್ತೀರಿ, ಸಮಗ್ರತೆ ಇರೋ ತರ ನಾಟಕ ಆಡುತ್ತೀರಿ ಅಂತಾನೆ. (ಯೋಬ 2:4, 5; ಪ್ರಕ. 12:10) ಇದನ್ನೆಲ್ಲಾ ಕೇಳಿದಾಗ ನಿಮಗೆ ಹೇಗನಿಸುತ್ತದೆ? ತುಂಬ ನೋವಾಗುತ್ತದೆ ಅಲ್ವಾ? ಆದರೂ ಯೆಹೋವನಿಗೆ ನಿಮ್ಮ ಮೇಲೆ ತುಂಬ ನಂಬಿಕೆ ಇರುವುದರಿಂದ ಒಂದು ಅದ್ಭುತ ಅವಕಾಶವನ್ನು ನಿಮ್ಮ ಮುಂದೆ ಇಟ್ಟಿದ್ದಾನೆ. ನಿಮ್ಮ ಸಮಗ್ರತೆಯನ್ನು ಪರೀಕ್ಷಿಸಲು ಸೈತಾನನಿಗೆ ಅನುಮತಿ ಕೊಡುತ್ತಾನೆ. ನೀವು ಖಂಡಿತ ನಿಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ಸೈತಾನ ಒಬ್ಬ ಶುದ್ಧ ಸುಳ್ಳ ಅಂತ ರುಜುಪಡಿಸಲು ಸಹಾಯ ಮಾಡುತ್ತೀರಿ ಅನ್ನುವ ನಂಬಿಕೆ ಯೆಹೋವನಿಗೆ ಇದೆ. ಅಷ್ಟೇ ಅಲ್ಲ, ಸೈತಾನನ ವಿರುದ್ಧ ಜಯಗಳಿಸಲು ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಆತನು ಹೇಳಿದ್ದಾನೆ. (ಇಬ್ರಿ. 13:6) ಇಡೀ ವಿಶ್ವದ ಪರಮಾಧಿಕಾರಿ ನಮ್ಮನ್ನು ನಂಬುತ್ತಾನೆ ಅಂತ ನೆನಸುವಾಗ ಎಷ್ಟು ಸಂತೋಷವಾಗುತ್ತದೆ ಅಲ್ವಾ? ಸಮಗ್ರತೆಗೆ ಎಷ್ಟು ಬೆಲೆ ಇದೆ ನೋಡಿ! ಸೈತಾನ ಮಹಾ ಸುಳ್ಳ ಎಂದು ರುಜುಪಡಿಸಲು ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನಮ್ಮ ಸ್ವರ್ಗೀಯ ತಂದೆಯ ಹೆಸರಿಗೆ ಮಹಿಮೆ ತರಲು ಹಾಗೂ ಆತನು ಆಳುವ ವಿಧವೇ ಅತ್ಯುತ್ತಮವಾದದ್ದು ಎಂದು ರುಜುಪಡಿಸಲು ಸಮಗ್ರತೆ ಸಹಾಯ ಮಾಡುತ್ತದೆ. ಈ ಅತ್ಯಾವಶ್ಯಕ ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು21.04 ಪುಟ 11 ಪ್ಯಾರ 9
ಯೇಸುವಿನ ಕೊನೆ ಮಾತುಗಳು ಕಲಿಸೋ ಪಾಠಗಳು
9 ಯೇಸು ಏನು ಹೇಳಿದನು? ಯೇಸುವಿನ ಪ್ರಾಣ ಹೋಗೋ ಮುಂಚೆ ಅವನು “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅಂತ ಜೋರಾಗಿ ಕೂಗಿದನು. (ಮತ್ತಾ. 27:46) ಯಾಕೆ ಯೇಸು ಹೀಗೆ ಹೇಳಿದನು ಅಂತ ಬೈಬಲ್ ಹೇಳಲ್ಲ. ಆದರೆ ಈ ಮಾತುಗಳಿಂದ ಕೆಲವೊಂದು ವಿಷಯ ನಮಗೆ ಗೊತ್ತಾಗುತ್ತೆ. ಒಂದೇನಂದ್ರೆ, ಕೀರ್ತನೆ 22:1ರಲ್ಲಿರೋ ಭವಿಷ್ಯವಾಣಿಯನ್ನು ಯೇಸು ಈ ಮಾತು ಹೇಳಿ ನೆರವೇರಿಸಿದನು. ಎರಡನೇದು, ಯೆಹೋವ ಯೇಸುವಿನ ‘ಸುತ್ತ ಬೇಲಿ’ ಹಾಕಿ ಕಾಪಾಡಲಿಲ್ಲ ಅಂತ ಈ ಮಾತುಗಳಿಂದ ಗೊತ್ತಾಗುತ್ತೆ. (ಯೋಬ 1:10) ವಿರೋಧಿಗಳು ಯೇಸುವಿನ ನಂಬಿಕೆಯನ್ನ ಪೂರ್ತಿಯಾಗಿ ಪರೀಕ್ಷಿಸೋಕೆ ಯೆಹೋವ ಬಿಟ್ಟುಕೊಟ್ಟನು. ಇದು ಯೇಸುಗೆ ಚೆನ್ನಾಗಿ ಗೊತ್ತಿತ್ತು. ಯೇಸುಗೆ ಬಂದಂಥ ಪರೀಕ್ಷೆ ಯಾವ ಮನುಷ್ಯನಿಗೂ ಬಂದಿಲ್ಲ. ಮೂರನೇದು, ‘ಯಾವ ತಪ್ಪೂ ಮಾಡದೆ ಈ ಶಿಕ್ಷೆ ಅನುಭವಿಸ್ತಾ ಇದ್ದೀನಲ್ಲಾ’ ಅನ್ನೋ ಯೇಸುವಿನ ನೋವು ಈ ಮಾತುಗಳಿಂದ ಗೊತ್ತಾಗುತ್ತೆ.
ಅಕ್ಟೋಬರ್ 9-15
ಬೈಬಲಿನಲ್ಲಿರುವ ನಿಧಿ | ಯೋಬ 4-5
“ತಪ್ಪು ಮಾಹಿತಿಗಳಿವೆ, ಎಚ್ಚರ!”
it-1-E ಪುಟ 713 ಪ್ಯಾರ 11
ಎಲೀಫಜ
2. ಇವನು ಯೋಬನ ಮೂವರು ಸ್ನೇಹಿತರಲ್ಲಿ ಒಬ್ಬನಾಗಿದ್ದ. (ಯೋಬ 2:11) ಅಲ್ಲದೇ ಇವನು ಅಬ್ರಹಾಮನ ವಂಶದವನು, ಯೋಬನ ದೂರದ ಸಂಬಂಧಿಯಾಗಿದ್ದ. ಇವನು ಮತ್ತು ಇವನ ವಂಶದವರು ತಮಗೆ ಜಾಸ್ತಿ ವಿವೇಕ ಇದೆ ಅಂತ ಜಂಬ ಕೊಚ್ಕೊಳ್ತಿದ್ರು. (ಯೆರೆ 49:7) ಯೋಬನಿಗೆ ‘ಸಮಾಧಾನ ಹೇಳ್ತೀವಿ‘ ಅಂತ ಬಂದ ಮೂವರಲ್ಲಿ ಎಲೀಫಜ ತುಂಬಾ ಪ್ರಾಮುಖ್ಯವಾದ ವ್ಯಕ್ತಿಯಾಗಿದ್ದ ಹಾಗೂ ಪ್ರಭಾವಶಾಲಿಯಾಗಿದ್ದ. ವಯಸ್ಸಲ್ಲಿ ಇವನೇ ದೊಡ್ಡವನಾಗಿರಬಹುದು. ಯೋಬನ ಜೊತೆ ಮೂರು ಸಲ ಮಾತಾಡಿದಾಗಲೂ ಇವನೇ ಮೊದಲು ತನ್ನ ಸಂಭಾಷಣೆ ಆರಂಭಿಸಿದ, ಮೂವರಲ್ಲಿ ಇವನ ಮಾತುಕತೆನೇ ಜಾಸ್ತಿಯಾಗಿತ್ತು.
ಕಾವಲಿನಬುರುಜು05 9/15 ಪುಟ 26 ಪ್ಯಾರ 2
ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!
ಎಲೀಫಜನು ತನಗೆ ಒಮ್ಮೆ ಆದಂಥ ಮಾನವಾತೀತ ಅನುಭವವನ್ನು ಜ್ಞಾಪಕಕ್ಕೆ ತಂದುಕೊಳ್ಳುತ್ತಾ ಹೇಳಿದ್ದು: “ಯಾವದೋ ಒಂದು ಉಸಿರು [“ಆತ್ಮವು,” NIBV] ನನ್ನ ಮುಖಕ್ಕೆ ಸುಳಿಯಲು ಮೈಯೆಲ್ಲಾ ನಿಲುಗೂದಲಾಯಿತು. ನನ್ನ ಕಣ್ಣು ಮುಂದೆ ಒಂದು ರೂಪವು ಇತ್ತು. ನಿಂತಿದ್ದರೂ ಅದು ಏನೆಂಬದು ಗೊತ್ತಾಗಲಿಲ್ಲ. ಒಂದು ಸೂಕ್ಷ್ಮ ಧ್ವನಿಯು ಕೇಳಬಂತು.” (ಯೋಬ 4:15, 16) ಯಾವ ರೀತಿಯ ಆತ್ಮವು ಎಲೀಫಜನ ಆಲೋಚನೆಗಳನ್ನು ಪ್ರಭಾವಿಸಿತ್ತು? ಅವನು ಮುಂದೆ ಆಡಿದಂಥ ಮಾತುಗಳ ಟೀಕಾತ್ಮಕ ದನಿಯು, ಆ ಆತ್ಮವು ಖಂಡಿತವಾಗಿಯೂ ದೇವರ ನೀತಿವಂತ ದೂತರಲ್ಲಿ ಒಬ್ಬನಾಗಿರಲಿಲ್ಲ ಎಂಬುದನ್ನು ತೋರಿಸಿತು. (ಯೋಬ 4:17, 18) ಅದೊಂದು ದುಷ್ಟ ಆತ್ಮಜೀವಿಯಾಗಿತ್ತು. ಹೀಗಿಲ್ಲದಿರುತ್ತಿದ್ದಲ್ಲಿ, ಸುಳ್ಳನ್ನು ಆಡಿರುವುದಕ್ಕಾಗಿ ಯೆಹೋವನು ಎಲೀಫಜನನ್ನು ಮತ್ತವನ ಇಬ್ಬರು ಸಂಗಡಿಗರನ್ನು ಏತಕ್ಕೆ ಗದರಿಸುತ್ತಿದ್ದನು? (ಯೋಬ 42:7) ಹೌದು, ಎಲೀಫಜನು ದೆವ್ವದ ಪ್ರಭಾವದಡಿಯಲ್ಲಿದ್ದನು. ಅವನ ಹೇಳಿಕೆಗಳು ದೈವಿಕವಲ್ಲದ ಆಲೋಚನೆಗಳನ್ನು ಪ್ರತಿಫಲಿಸಿದವು.
ಕಾವಲಿನಬುರುಜು10 2/15 ಪುಟ 19 ಪ್ಯಾರ 5-6
ಪೈಶಾಚಿಕ ಅಪಪ್ರಚಾರವನ್ನು ಪ್ರತಿರೋಧಿಸಿರಿ
ಯೋಬನ ಮೂವರು ಸಂದರ್ಶಕ ಸಂಗಡಿಗರಲ್ಲಿ ಒಬ್ಬನಾದ ಎಲೀಫಜನನ್ನು ಸೈತಾನನು ಉಪಯೋಗಿಸುತ್ತಾ ಮನುಷ್ಯರು ಸೈತಾನನ ಆಕ್ರಮಣಗಳನ್ನು ಎದುರಿಸಲು ತೀರಾ ದುರ್ಬಲರು ಎಂದು ವಾದಿಸಿದನು. ಮಾನವರನ್ನು ‘ಮಣ್ಣಿನಿಂದಾದ ಮನೆಗಳೊಳಗೆ ವಾಸಿಸುವವರಾಗಿ’ ಸೂಚಿಸುತ್ತಾ ಅವನು ಯೋಬನಿಗೆ ಹೇಳಿದ್ದು: ‘ಅವರ ಅಸ್ತಿವಾರ ಧೂಳಿನಲ್ಲಿದೆ. ಅವರು ದೀಪದ ಹುಳದಂತೆ ಅಳಿದುಹೋಗುತ್ತಾರೆ. ಉದಯಾಸ್ತಮಾನಗಳ ಮಧ್ಯದಲ್ಲಿ ಜೀವಿಸಿ ಜಜ್ಜಲ್ಪಡುತ್ತಾರೆ, ಹೀಗೆ ನಿತ್ಯನಾಶನಹೊಂದುವದನ್ನು ಯಾರೂ ಲಕ್ಷಿಸುವದಿಲ್ಲ.’—ಯೋಬ 4:19, 20.
ಶಾಸ್ತ್ರಗ್ರಂಥದಲ್ಲಿ ಬೇರೆಕಡೆ ನಾವು ‘ಮಣ್ಣಿನ ಪಾತ್ರೆಗಳಿಗೆ’ ಅಂದರೆ ಜೇಡಿಮಣ್ಣಿನ ಭಿದುರ ಮಡಕೆಗಳಿಗೆ ಹೋಲಿಸಲ್ಪಟ್ಟಿದ್ದೇವೆ. (2 ಕೊರಿಂ. 4:7) ಬಾಧ್ಯತೆಯಾಗಿ ಪಡೆದ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ ನಾವು ದುರ್ಬಲರು. (ರೋಮ. 5:12) ಸ್ವಂತ ಶಕ್ತಿಯಲ್ಲಿ ನಾವು ಸೈತಾನನ ಆಕ್ರಮಣಗಳನ್ನು ಎದುರಿಸಿ ನಿಲ್ಲಲಾರೆವು. ಆದರೆ ಕ್ರೈಸ್ತರೋಪಾದಿ ನಾವು ಸಹಾಯಶೂನ್ಯರಲ್ಲ. ನಮ್ಮ ಬಲಹೀನತೆಗಳ ಹೊರತೂ ದೇವರ ದೃಷ್ಟಿಯಲ್ಲಿ ಅಮೂಲ್ಯರು. (ಯೆಶಾ. 43:4) ಅದಲ್ಲದೆ ಯೆಹೋವನು ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವವರಿಗೆ ಅದನ್ನು ದಯಪಾಲಿಸುತ್ತಾನೆ. (ಲೂಕ 11:13) ಆತನ ಆತ್ಮವು ನಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಟ್ಟು ಸೈತಾನನು ನಮ್ಮ ಮೇಲೆ ತರುವ ಯಾವುದೇ ಸಂಕಷ್ಟವನ್ನು ನಿಭಾಯಿಸಲು ಶಕ್ತಗೊಳಿಸುತ್ತದೆ. (2 ಕೊರಿಂ. 4:7; ಫಿಲಿ. 4:13) “ನಂಬಿಕೆಯಲ್ಲಿ ಸ್ಥಿರರಾಗಿದ್ದು” ಪಿಶಾಚನ ವಿರುದ್ಧವಾಗಿ ನಾವು ನಮ್ಮ ನಿಲುವನ್ನು ತಕ್ಕೊಂಡಲ್ಲಿ ದೇವರು ನಮ್ಮನ್ನು ದೃಢರಾಗಿಯೂ ಬಲವುಳ್ಳವರನ್ನಾಗಿಯೂ ಮಾಡುವನು. (1 ಪೇತ್ರ 5:8-10) ಆದಕಾರಣ ಪಿಶಾಚನಾದ ಸೈತಾನನಿಗೆ ನಾವು ಭಯಪಡುವ ಅಗತ್ಯವಿಲ್ಲ.
ಇತರ ವಿಷಯಗಳು-E 32 ಪ್ಯಾರ 13-17
ತಪ್ಪು ಮಾಹಿತಿ ಅನ್ನೋ ಸುಳಿಗೆ ಸಿಲುಕದಿರಿ
● ಎಲ್ಲಿಂದ ಬಂತು ಮತ್ತು ಅದ್ರಲ್ಲಿರೋ ವಿಷ್ಯ ಸರಿ ಇದ್ಯಾ ಅಂತ ತಿಳ್ಕೊಳಿ
ಬೈಬಲ್ ಏನು ಹೇಳುತ್ತೆ: “ಎಲ್ಲವನ್ನ ಪರೀಕ್ಷಿಸಿ.”—1 ಥೆಸಲೊನೀಕ 5:21.
ಒಂದು ಮಾಹಿತಿ ತುಂಬಾ ಸುದ್ದಿ ಮಾಡ್ತಿರಬಹುದು ಅಥವಾ ಎಲ್ಲಾ ಕಡೆ ಹರಿದಾಡ್ತಿರಬಹುದು. ಅಂಥ ಮಾಹಿತಿಯನ್ನ ನಂಬೋಕೂ ಮುಂಚೆ ಅಥವಾ ಅದನ್ನ ಬೇರೆಯವರಿಗೆ ಕಳಿಸೋ ಮುಂಚೆ ಅದು ನಿಜನಾ ಅಂತ ಪರೀಕ್ಷಿಸಿ ತಿಳ್ಕೊಳ್ಳಿ. ಇದನ್ನ ಮಾಡೋದು ಹೇಗೆ?
ಈ ಮಾಹಿತಿ ಎಲ್ಲಿಂದ ಬಂತು, ಅದನ್ನ ನಂಬಬಹುದಾ ಅಂತ ತಿಳ್ಕೊಳ್ಳಿ. ನ್ಯೂಸ್ ಮಾಧ್ಯಮದವರು ಮತ್ತು ಇತರ ಸಂಸ್ಥೆಗಳು ತಮ್ಮ ಲಾಭಕ್ಕೋಸ್ಕರ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡೋದಕ್ಕೆ ಒಂದು ಮಾಹಿತಿಯನ್ನ ತಿರುಚಿ ಹೇಳುವ ಸಾಧ್ಯತೆ ಇರುತ್ತೆ. ಹಾಗಾಗಿ ಒಂದು ನ್ಯೂಸ್ ಚಾನೆಲ್ನಲ್ಲಿ ಬಂದ ಮಾಹಿತಿಯನ್ನ ಬೇರೆ ಚಾನೆಲ್ನೊಂದಿಗೆ ಹೋಲಿಸಿ ನೋಡಿ. ಕೆಲವು ಸಲ ತಪ್ಪಾದ ಮಾಹಿತಿ ನಮ್ಮ ಸ್ನೇಹಿತರಿಂದ ಬರಬಹುದು. ಅವರು ತಮಗೇ ಗೊತ್ತಿಲ್ಲದೇ ಇಮೇಲ್ ಅಥ್ವಾ ಸೋಶಿಯಲ್ ಮೀಡಿಯಾ ಮೂಲಕ ಈ ತಪ್ಪು ಮಾಹಿತಿಯನ್ನ ಕಳುಹಿಸಬಹುದು. ಆದ್ರಿಂದ ಯಾವುದೇ ಒಂದು ಮಾಹಿತಿಯನ್ನ ನಂಬೋಕೂ ಮುಂಚೆ ಅದರ ಮೂಲ ಯಾವುದು, ಅದು ನಿಜಾನಾ ಅಂತ ತಿಳ್ಕೊಳ್ಳಿ.
ಮಾಹಿತಿಯಲ್ಲಿರೋ ಎಲ್ಲಾ ವಿಷ್ಯಗಳು ಸರಿಯಾಗಿದೆಯಾ ಅಥ್ವಾ ಇದು ಹಳೇ ಸುದ್ದಿನಾ ಅಂತ ತಿಳ್ಕೊಳ್ಳಿ. ದಿನಾಂಕ, ಅಂಕಿಅಂಶಗಳು ಮತ್ತು ಆಧಾರಗಳು ಸರಿಯಾಗಿದೆಯಾ ಅಂತ ತಿಳ್ಕೊಳ್ಳಿ. ಅರ್ಥ ಮಾಡ್ಕೊಳ್ಳೋಕೆ ತುಂಬಾ ಕಷ್ಟವಾಗಿರೋ ಒಂದು ಮಾಹಿತಿಯನ್ನ ತುಂಬಾ ಸರಳವಾಗಿ ಹೇಳಿರೋದಾದ್ರೆ ಅಥವಾ ಒಂದು ವರದಿ ಬೇರೆಯವರ ಭಾವನೆಗಳಿಗೆ ಧಕ್ಕೆ ಬರೋ ರೀತಿ ಇರೋದಾದ್ರೆ ಅಂಥಾ ಮಾಹಿತಿ ಬಗ್ಗೆ ನಾವು ತುಂಬಾ ಹುಷಾರಾಗಿರಬೇಕು.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು03 5/15 ಪುಟ 22 ಪ್ಯಾರ 5-6
ಸ್ಥಿರಚಿತ್ತರಾಗಿದ್ದು, ಜೀವಕ್ಕಾಗಿರುವ ಓಟವನ್ನು ಗೆಲ್ಲಿರಿ
ಸತ್ಯಾರಾಧಕರ ಲೋಕವ್ಯಾಪಕ ಸಂಸ್ಥೆಯ ಭಾಗವಾಗಿರುವುದು, ನಮ್ಮ ಮೇಲೆ ಪ್ರಭಾವಯುಕ್ತವಾದ ಸ್ಥಿರಗೊಳಿಸುವ ಪರಿಣಾಮವನ್ನು ಬೀರಬಲ್ಲದು. ಇಂಥ ಪ್ರೀತಿಪರ, ಭೌಗೋಲಿಕ ಸಹೋದರತ್ವದೊಂದಿಗೆ ಸಹವಾಸಿಸುವುದು ಎಂಥ ಆಶೀರ್ವಾದವಾಗಿದೆ! (1 ಪೇತ್ರ 2:17) ಮತ್ತು ನಮ್ಮ ಜೊತೆ ವಿಶ್ವಾಸಿಗಳ ಮೇಲೆ ನಾವು ಸ್ಥಿರಗೊಳಿಸುವಂಥ ಪರಿಣಾಮವನ್ನು ಬೀರಬಲ್ಲೆವು.
ಯಥಾರ್ಥವಂತನಾದ ಯೋಬನ ಸಹಾಯಕಾರಿ ಕ್ರಿಯೆಗಳನ್ನು ಪರಿಗಣಿಸಿರಿ. ಸುಳ್ಳು ಸಾಂತ್ವನಗಾರನಾದ ಎಲೀಫಜನು ಸಹ ಇದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲ್ಪಟ್ಟನು: “ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದೀ.” (ಯೋಬ 4:4) ನಾವು ಇತರರಿಗೆ ಹೇಗೆ ಸಹಾಯ ನೀಡುತ್ತೇವೆ? ದೇವರ ಸೇವೆಯಲ್ಲಿ ತಾಳಿಕೊಳ್ಳುವಂತೆ ನಮ್ಮ ಆತ್ಮಿಕ ಸಹೋದರ ಸಹೋದರಿಯರಿಗೆ ಸಹಾಯಮಾಡುವ ಜವಾಬ್ದಾರಿಯು ನಮಲ್ಲಿ ಪ್ರತಿಯೊಬ್ಬರಿಗೂ ಇದೆ. ನಾವು ಅವರೊಂದಿಗೆ ವ್ಯವಹರಿಸುತ್ತಿರುವಾಗ, ಈ ಮಾತುಗಳಲ್ಲಿ ತೋರಿಬರುವ ಮನೋವೃತ್ತಿಯೊಂದಿಗೆ ಕ್ರಿಯೆಗೈಯಬಲ್ಲೆವು: “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ.” (ಯೆಶಾಯ 35:3) ಆದುದರಿಂದ ನೀವು ಕೂಡಿಬರುವಾಗ, ಪ್ರತಿಸಲವೂ ಒಬ್ಬರು ಇಲ್ಲವೆ ಇಬ್ಬರು ಜೊತೆ ಕ್ರೈಸ್ತರನ್ನು ಬಲಪಡಿಸಿ, ಉತ್ತೇಜಿಸುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಬಾರದೇಕೆ? (ಇಬ್ರಿಯ 10:24, 25) ಶ್ಲಾಘನೆಯ ಉತ್ತೇಜಕ ಮಾತುಗಳನ್ನಾಡಿರಿ ಮತ್ತು ಯೆಹೋವನನ್ನು ಸಂತೋಷಪಡಿಸಲು ಅವರು ಮಾಡುವ ನಿರಂತರ ಪ್ರಯತ್ನಗಳಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿರಿ. ಇದು, ಅವರು ಜೀವಕ್ಕಾಗಿರುವ ಓಟವನ್ನು ಜಯಿಸುವ ಪ್ರತೀಕ್ಷೆಯೊಂದಿಗೆ ಸ್ಥಿರಚಿತ್ತರಾಗಿ ಉಳಿಯುವಂತೆ ನಿಜವಾಗಿಯೂ ಸಹಾಯಮಾಡುವುದು.
ಅಕ್ಟೋಬರ್ 16-22
ಬೈಬಲಿನಲ್ಲಿರುವ ನಿಧಿ | ಯೋಬ 6-7
“‘ಇನ್ನು ನನ್ನಿಂದ ಆಗಲ್ಲ’ ಅಂತ ಅನಿಸಿದಾಗ”
ಕಾವಲಿನಬುರುಜು06 3/15 ಪುಟ 14 ಪ್ಯಾರ 9
ಯೋಬ ಪುಸ್ತಕದ ಮುಖ್ಯಾಂಶಗಳು
7:1; 14:14—“ದುಡಿಯುವ ವಾಯಿದೆ” ಅಥವಾ ‘ವಾಯಿದೆಯ ದಿನಗಳು’ ಎಂಬುದರ ಅರ್ಥವೇನು? ಯೋಬನ ಸಂಕಟವು ಎಷ್ಟು ಘೋರವಾಗಿತ್ತೆಂದರೆ, ಜೀವನವು ಕಠಿನವಾದ ಮತ್ತು ಸಹಿಸಲು ಕಷ್ಟಕರವಾದ ದುಡಿಮೆಯ ವಾಯಿದೆಯಂತೆ ಕಡ್ಡಾಯವಾಗಿದೆ ಎಂದು ಅವನಿಗನಿಸಿತು. (ಯೋಬ 10:17, NW) ಮತ್ತು ಒಬ್ಬನು ತನ್ನ ಮರಣದ ಸಮಯದಿಂದ ಪುನರುತ್ಥಾನದ ವರೆಗೆ ಷೀಓಲ್ನಲ್ಲಿ ಕಳೆಯುವ ಸಮಯವು ಕಡ್ಡಾಯಭರಿತ ಕಾಲಾವಧಿಯಾಗಿರುವುದರಿಂದ, ಯೋಬನು ಆ ಕಾಲವನ್ನು ಕಡ್ಡಾಯವಾಗಿರುವಂಥ ವಾಯಿದೆಯ ದಿನಗಳಿಗೆ ಹೋಲಿಸಿದನು.
ಕಾವಲಿನಬುರುಜು20.12 ಪುಟ 16 ಪ್ಯಾರ 1
ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ
‘ನಾವು ಬದುಕೋದೇ ಸ್ವಲ್ಪ ದಿನ. ಅದ್ರಲ್ಲೂ ಕಷ್ಟಗಳು ತುಂಬಿದೆ’ ಅಂತ ಕೆಲವೊಮ್ಮೆ ನಮ್ಗೆ ಅನಿಸಬಹುದು. (ಯೋಬ 14:1) ಈ ತರ ಯೋಚಿಸಿ ನಮ್ಗೆ ನಿರುತ್ತೇಜನ ಆಗ್ಬಹುದು. ಪುರಾತನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ನಿರುತ್ತೇಜನ ಕಾಡಿತು. ಅವ್ರಲ್ಲಿ ಕೆಲವರಿಗೆ ಸಾಯಬೇಕು ಅಂತನೂ ಅನಿಸಿತು. (1 ಅರ. 19:2-4; ಯೋಬ 3:1-3, 11; 7:15, 16) ಆದ್ರೆ ಅವ್ರು ನಂಬಿದಂಥ ಯೆಹೋವ ದೇವರು ಅವ್ರನ್ನ ಮತ್ತೆಮತ್ತೆ ಸಂತೈಸಿ ಬಲಪಡಿಸಿದನು. ನಾವು ಅದ್ರ ಬಗ್ಗೆ ತಿಳಿದು ಸಾಂತ್ವನ ಪಡಿಬೇಕು ಮತ್ತು ಪಾಠಗಳನ್ನ ಕಲೀಬೇಕು ಅನ್ನೋ ಉದ್ದೇಶದಿಂದ ಅವ್ರ ಅನುಭವಗಳನ್ನ ಬೈಬಲಿನಲ್ಲಿ ದಾಖಲಿಸಲಾಗಿದೆ.—ರೋಮ. 15:4.
‘ಬದುಕುವುದೇ ಬೇಡ’ ಎಂದು ಅನಿಸುತ್ತಿದೆಯೇ?
‘ನನಗಿರುವಷ್ಟು ದುಃಖ, ಕಷ್ಟ ಯಾರಿಗೂ ಇಲ್ಲ! ಇದರಿಂದ ಹೊರಬರುವ ದಾರಿಯೂ ಕಾಣುತ್ತಿಲ್ಲ’ ಎಂದು ನಿಮಗನಿಸೀತು. ಆದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ತಾಪತ್ರಯ ಇದ್ದೇ ಇರುತ್ತದೆ ಅಲ್ವಾ? “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ” ಎನ್ನುತ್ತದೆ ಬೈಬಲ್. (ರೋಮನ್ನರಿಗೆ 8:22) ಸದ್ಯಕ್ಕಂತೂ ನಿಮ್ಮ ಸಮಸ್ಯೆಗೆ ಪರಿಹಾರವಿಲ್ಲವೆಂದು ತೋರಿದರೂ, ಸಮಯ ದಾಟಿದಂತೆ ನಿಮ್ಮ ಸನ್ನಿವೇಶ ಉತ್ತಮವಾದೀತು. ಅಲ್ಲಿಯ ವರೆಗೆ ನೀವು ಹೇಗೆ ಸಹಿಸಿಕೊಳ್ಳಬಹುದು?
ಪ್ರೌಢ, ವಿಶ್ವಾಸಾರ್ಹ ಆತ್ಮೀಯರೊಂದಿಗೆ ಹೃದಯಬಿಚ್ಚಿ ಮಾತಾಡಿ. ಬೈಬಲ್ ಹೀಗನ್ನುತ್ತದೆ: “ಮಿತ್ರನ ಪ್ರೀತಿಯು ನಿರಂತರ.” ಕಷ್ಟಕಾಲದಲ್ಲೂ ಇಂಥ ಮಿತ್ರನು ನಿಮಗೆ ಸಾಥ್ ಕೊಡುವನು. (ಜ್ಞಾನೋಕ್ತಿ 17:17) ಬೈಬಲಿನಲ್ಲಿ ತಿಳಿಸಲಾಗಿರುವ ಯೋಬ ಎಂಬ ದೇವಭಕ್ತನಿಗೆ ಒಮ್ಮೆ ‘ತನ್ನ ಜೀವವೇ ಬೇಸರ’ ಎಂದನಿಸಿತು. ಆಗವನು “ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು” ಎಂದು ಇತರರ ಮುಂದೆ ತನ್ನ ದುಃಖ ತೋಡಿಕೊಂಡನು. (ಯೋಬ 10:1) ಇತರರಲ್ಲಿ ಅಂತರಂಗ ಬಿಚ್ಚಿಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಸಮಸ್ಯೆಗಳನ್ನು ನೋಡುವ ರೀತಿಯೂ ಬದಲಾಗುತ್ತದೆ.
ಮನಸ್ಸಿನಾಳದ ಭಾವನೆಗಳನ್ನು ಪ್ರಾರ್ಥನೆಯಲ್ಲಿ ಹೇಳಿ. ಪ್ರಾರ್ಥನೆ ‘ಮನಸ್ಸನ್ನು ಹಗುರಗೊಳಿಸುವ ಮಾಧ್ಯಮ ಅಷ್ಟೇ, ಅದಕ್ಕೆ ಕಿವಿಗೊಡುವವರು ಯಾರೂ ಇಲ್ಲ’ ಎಂಬುದು ಕೆಲವರ ಅಭಿಪ್ರಾಯ. ಆದರೆ ಬೈಬಲ್ ಹೇಳುವ ಸಂಗತಿಯೇ ಬೇರೆ. ಕೀರ್ತನೆ 65:2ರಲ್ಲಿ ಯೆಹೋವ ದೇವರನ್ನು “ಪ್ರಾರ್ಥನೆಯನ್ನು ಕೇಳುವವನೇ” ಎಂದು ಕರೆಯಲಾಗಿದೆ. 1 ಪೇತ್ರ 5:7 “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತದೆ. ದೇವರನ್ನು ಅವಲಂಬಿಸುವುದು ಎಷ್ಟು ಮಹತ್ವದ್ದೆಂದು ಬೈಬಲ್ ಆಗಾಗ್ಗೆ ಹೇಳುತ್ತದೆ. ಉದಾಹರಣೆಗೆ:
“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” —ಜ್ಞಾನೋಕ್ತಿ 3:5, 6.
“ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು [ಯೆಹೋವನು] ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.”—ಕೀರ್ತನೆ 145:19.
“ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.” —1 ಯೋಹಾನ 5:14.
“ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.”—ಜ್ಞಾನೋಕ್ತಿ 15:29.
ನಿಮಗಿರುವ ಕಷ್ಟಗಳನ್ನೆಲ್ಲಾ ದೇವರ ಬಳಿ ಹೇಳಿಕೊಂಡರೆ ಆತನು ನೆರವು ನೀಡುವನು. ಈ ಕಾರಣಕ್ಕಾಗಿಯೇ “ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ” ಎಂದು ಬೈಬಲ್ ಪ್ರೋತ್ಸಾಹಿಸುತ್ತದೆ.—ಕೀರ್ತನೆ 62:8.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು20.04 ಪುಟ 16 ಪ್ಯಾರ 10
ಬೇರೆಯವರ ಬಗ್ಗೆ ಯೆಹೋವನ ತರ ಯೋಚಿಸಿ
10 ನಾವು ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸೋ ಮೂಲಕ ಯೆಹೋವನನ್ನು ಅನುಕರಿಸಬಹುದು. ಇದಕ್ಕೋಸ್ಕರ ನಾವು ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಪ್ರಯತ್ನಿಸಬೇಕು. ಕೂಟಗಳಿಗೆ ಮುಂಚೆ ಮತ್ತು ನಂತರ ಅವ್ರ ಹತ್ರ ಮಾತಾಡಬೇಕು. ಅವ್ರ ಜೊತೆ ಸೇವೆ ಮಾಡಬೇಕು. ಸಾಧ್ಯವಾದ್ರೆ ಅವ್ರನ್ನ ಊಟಕ್ಕೂ ಕರೀಬಹುದು. ಹೀಗೆ ಮಾಡೋದಾದ್ರೆ, ಯಾರ ಜೊತೆನೂ ಹೆಚ್ಚು ಬೆರೆಯದೇ ಇರೋ ಸಹೋದರಿಗೆ ನಾಚಿಕೆ ಸ್ವಭಾವ ಇದೆ ಅಂತ ಗೊತ್ತಾಗಬಹುದು. ಶ್ರೀಮಂತ ಸಹೋದರನಿಗೆ ಹಣದ ಹುಚ್ಚಿಲ್ಲ, ಬದಲಿಗೆ ಉದಾರಿಯಾಗಿದ್ದಾನೆ ಅಂತ ಗೊತ್ತಾಗಬಹುದು. ಕೂಟಗಳಿಗೆ ಯಾವಾಗಲೂ ತಡವಾಗಿ ಬರ್ತಿರೋ ಸಹೋದರಿ ಮತ್ತು ಅವಳ ಮಕ್ಕಳು ಕುಟುಂಬದಲ್ಲಿ ವಿರೋಧ ಎದುರಿಸ್ತಿದ್ದಾರೆ ಅಂತ ಗೊತ್ತಾಗಬಹುದು. (ಯೋಬ 6:29) ಹಾಗಂತ ಬೇರೆಯವ್ರ ಬಗ್ಗೆ ಹೆಚ್ಚು ತಿಳುಕೊಳ್ಳೋದಕ್ಕಾಗಿ ನಾವು ಅವರ ‘ವಿಷಯಗಳಲ್ಲಿ ತಲೆ ಹಾಕುವವರು’ ಆಗಿರಬಾರದು. (1 ತಿಮೊ. 5:13) ಆದ್ರೂ ನಮ್ಮ ಸಹೋದರ ಸಹೋದರಿಯರ ಬಗ್ಗೆ, ಅವ್ರ ಜೀವ್ನದಲ್ಲಿ ಏನೆಲ್ಲಾ ಅನುಭವಿಸಿದ್ದಾರೆ ಅನ್ನೋದ್ರ ಬಗ್ಗೆ ತಿಳ್ಕೊಳ್ಳೋದು ಒಳ್ಳೇದು. ಇದ್ರಿಂದ ಅವ್ರನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯ ಆಗುತ್ತೆ.
ಅಕ್ಟೋಬರ್ 23-29
ಬೈಬಲಿನಲ್ಲಿರುವ ನಿಧಿ | ಯೋಬ 8-10
“ಸೈತಾನ ಸುಳ್ಳುಗಾರ ಅಂತ ಯೆಹೋವನ ಶಾಶ್ವತ ಪ್ರೀತಿ ಬಯಲು ಮಾಡುತ್ತೆ”
ಕಾವಲಿನಬುರುಜು15 10/1 ಪುಟ 10 ಪ್ಯಾರ 3
ದೇವರನ್ನು ಮೆಚ್ಚಿಸಲು ಸಾಧ್ಯನಾ?
ಯೋಬನಿಗೆ ಒಂದರ ಮೇಲೊಂದರಂತೆ ಕಷ್ಟಗಳು ಬಂದೆರಗಿದವು. ಆಗ ತನಗೆ ಅನ್ಯಾಯವಾಗುತ್ತಿದೆ ಎಂದು ಅವನಿಗನಿಸಿತು. ತಾನು ನಂಬಿಗಸ್ತನಾಗಿದ್ದರೂ ಇಲ್ಲದಿದ್ದರೂ ದೇವರು ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ ಅಂತ ತಪ್ಪಾಗಿ ಭಾವಿಸಿದನು. (ಯೋಬ 9:20-22) ಅವನು ‘ತನ್ನಷ್ಟು ನೀತಿವಂತನು ಬೇರೆ ಯಾರೂ ಇಲ್ಲ’ ಅನ್ನೋ ರೀತಿಯಲ್ಲಿ ಮಾತಾಡಿದ್ದನ್ನು ಕೇಳಿಸಿಕೊಂಡವರಿಗೆ, ಅವನು ದೇವರಿಗಿಂತ ತಾನೇ ನ್ಯಾಯವಂತನೆಂದು ಭಾವಿಸುತ್ತಾನೆ ಅಂತ ಅನಿಸಿತು.—ಯೋಬ 32:1, 2; 35:1, 2.
ಕಾವಲಿನಬುರುಜು21.11 ಪುಟ 6 ಪ್ಯಾರ 14
ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
14 ಯೆಹೋವ ಶಾಶ್ವತ ಪ್ರೀತಿ ತೋರಿಸೋದ್ರಿಂದ ಆತನ ಜೊತೆ ನಮ್ಮ ಸಂಬಂಧ ಯಾವತ್ತೂ ಹಾಳಾಗಲ್ಲ. ದಾವೀದ ಯೆಹೋವನ ಹತ್ರ ಪ್ರಾರ್ಥಿಸಿದಾಗ ಹೀಗೆ ಹೇಳಿದ: “ನಾನು ಬಚ್ಚಿಟ್ಟುಕೊಳ್ಳೋ ಜಾಗ ನೀನು, ಕಷ್ಟಗಳಿಂದ ನೀನು ನನ್ನನ್ನ ಕಾಪಾಡ್ತೀಯ. ನೀನು ನನ್ನನ್ನ ಬಿಡಿಸಿ ನಾಲ್ಕೂ ದಿಕ್ಕಲ್ಲಿ ಖುಷಿಯನ್ನ ತುಂಬಿಸ್ತೀಯ. . . . ಆದ್ರೆ ಯೆಹೋವನಲ್ಲಿ ಭರವಸೆ ಇಡೋರಿಗೆ ಆತನ ಶಾಶ್ವತ ಪ್ರೀತಿ ಜೊತೆಗಿರುತ್ತೆ.” (ಕೀರ್ತ. 32:7, 10) ಆಗಿನ ಕಾಲದಲ್ಲಿ ಪಟ್ಟಣದ ಗೋಡೆಗಳು ಜನರನ್ನ ಶತ್ರುಗಳಿಂದ ಕಾಪಾಡ್ತಿದ್ದವು. ಅದೇ ತರ ಯೆಹೋವನ ಶಾಶ್ವತ ಪ್ರೀತಿ ನಮ್ಮನ್ನ ಆತನಿಂದ ದೂರ ಹೋಗದ ಹಾಗೆ ಕಾಪಾಡುತ್ತೆ. ಅಷ್ಟೇ ಅಲ್ಲ, ಆತನಿಗೆ ಇನ್ನೂ ಹತ್ರ ಆಗೋಕೆ ನಮಗೆ ಸಹಾಯ ಮಾಡುತ್ತೆ.—ಯೆರೆ. 31:3.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು10 10/15 ಪುಟ 6-7 ಪ್ಯಾರ 19-20
‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’
19 ನಾವು ‘ಯೆಹೋವನ ಮನಸ್ಸಿನ’ ಬಗ್ಗೆ ಏನನ್ನು ಕಲಿತೆವು? ಯೆಹೋವನ ಮನಸ್ಸಿನ ಕುರಿತ ನಮ್ಮ ತಿಳಿವಳಿಕೆಯನ್ನು ದೇವರ ವಾಕ್ಯವು ರೂಪಿಸುವಂತೆ ನಾವು ಬಿಟ್ಟುಕೊಡಬೇಕು. ನಮಗಿರುವ ಇತಿಮಿತಿಗಳಿಂದ ಯೆಹೋವನನ್ನು ಅಳೆಯುತ್ತಾ ನಮ್ಮ ಮಟ್ಟಗಳು ಹಾಗೂ ಆಲೋಚನೆಗನುಸಾರ ಆತನ ಬಗ್ಗೆ ತೀರ್ಪುಮಾಡಬಾರದು. ಯೋಬನು ಹೇಳಿದ್ದು: “[ದೇವರು] ನನ್ನಂಥವನಲ್ಲ, ಮನುಷ್ಯನಲ್ಲ, ನಾನು ಆತನೊಂದಿಗೆ ವಾದಿಸುವದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವದು ಹೇಗೆ?” (ಯೋಬ 9:32) ಯೋಬನಂತೆ ನಾವು ಸಹ ಯೆಹೋವನ ಮನಸ್ಸನ್ನು ಸ್ವಲ್ಪ ಸ್ವಲ್ಪವಾಗಿ ಅರ್ಥಮಾಡಿಕೊಳ್ಳುವಾಗ, “ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?” ಎಂದು ಉದ್ಗರಿಸದಿರಲಾರೆವು.—ಯೋಬ 26:14.
20 ಬೈಬಲನ್ನು ಓದುವಾಗ ಅದರ ಒಂದು ಭಾಗವನ್ನು ಅದರಲ್ಲೂ ಮುಖ್ಯವಾಗಿ ಯೆಹೋವನ ಆಲೋಚನೆಯ ಕುರಿತಾದ ಭಾಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೆ ನಾವೇನು ಮಾಡಬೇಕು? ಅದರ ಕುರಿತು ಸಂಶೋಧನೆ ಮಾಡಿದ ನಂತರ ಇನ್ನೂ ಸ್ಪಷ್ಟ ಉತ್ತರ ಸಿಗಲಿಲ್ಲವಾದರೆ ಅದು ಯೆಹೋವನ ಮೇಲಿರುವ ನಮ್ಮ ಭರವಸೆಯ ಪರೀಕ್ಷೆಯೆಂದು ನೆನಸಬೇಕು. ಕೆಲವೊಮ್ಮೆ ಬೈಬಲಿನಲ್ಲಿರುವ ನಿರ್ದಿಷ್ಟ ಹೇಳಿಕೆಗಳು ಯೆಹೋವನ ಗುಣಗಳಲ್ಲಿರುವ ನಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಅವಕಾಶ ಕೊಡುತ್ತವೆ ಎಂಬುದನ್ನು ಮರೆಯದಿರಿ. ಆದುದರಿಂದ ಆತನು ಮಾಡುವ ಸಕಲವನ್ನೂ ನಾವು ಅರಿಯೆವು, ಅರ್ಥಮಾಡಿಕೊಳ್ಳಲಾರೆವು ಎಂಬುದನ್ನು ದೀನತೆಯಿಂದ ಒಪ್ಪಿಕೊಳ್ಳೋಣ. (ಪ್ರಸಂ. 11:5) ಹೀಗೆ ಅಪೊಸ್ತಲ ಪೌಲನ ಈ ಮಾತುಗಳೊಂದಿಗೆ ನಾವು ಸಮ್ಮತಿಸುವಂತೆ ಪ್ರಚೋದಿಸಲ್ಪಡುವೆವು: “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ! ‘ಯೆಹೋವನ ಮನಸ್ಸನ್ನು ತಿಳಿದಿರುವವರು ಯಾರು ಅಥವಾ ಆತನಿಗೆ ಸಲಹೆಗಾರನಾಗಿರುವವನು ಯಾರು?’ ಇಲ್ಲವೆ ‘ತನಗೆ ಹಿಂದೆ ಸಲ್ಲಿಸಬೇಕಾಗುವಂತೆ ಆತನಿಗೆ ಮೊದಲಾಗಿ ಕೊಟ್ಟಿರುವವನು ಯಾರು?’ ಏಕೆಂದರೆ ಸಮಸ್ತವೂ ಆತನಿಂದಲೇ, ಆತನ ಮೂಲಕವಾಗಿಯೇ ಮತ್ತು ಆತನಿಗಾಗಿಯೇ ಇವೆ. ಆತನಿಗೆ ನಿತ್ಯಕ್ಕೂ ಮಹಿಮೆಯು ಸಲ್ಲಿಸಲ್ಪಡಲಿ. ಆಮೆನ್.”—ರೋಮ. 11:33-36.
ಅಕ್ಟೋಬರ್ 30–ನವೆಂಬರ್ 5
ಬೈಬಲಿನಲ್ಲಿರುವ ನಿಧಿ | ಯೋಬ 11-12
“ವಿವೇಕ ಪಡ್ಕೊಳ್ಳೋಕೆ ಮೂರು ದಾರಿ”
ಕಾವಲಿನಬುರುಜು09 4/15 ಪುಟ 6 ಪ್ಯಾರ 17
ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
17 ಯೋಬನಿಗೆ ಸಮಗ್ರತೆ ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡಿತು? ಖಂಡಿತವಾಗಿ, ಅವನು ವಿಪತ್ತುಗಳು ಬಂದೆರಗುವ ಮುಂಚೆಯೇ ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಂಡಿದ್ದನು. ಸೈತಾನನು ಯೆಹೋವನಿಗೆಸೆದ ಸವಾಲಿನ ಬಗ್ಗೆ ಯೋಬನಿಗೆ ತಿಳಿದಿತ್ತೆಂದು ಹೇಳಲು ಸಾಕ್ಷ್ಯವಿಲ್ಲದಿದ್ದರೂ, ನಿಷ್ಠನಾಗಿ ಉಳಿಯುವ ದೃಢಸಂಕಲ್ಪ ಅವನದ್ದಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವನಂದದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು.” (ಯೋಬ 27:5) ಇಷ್ಟು ಆಪ್ತ ಸಂಬಂಧವನ್ನು ಯೋಬನು ಹೇಗೆ ಬೆಳೆಸಿಕೊಂಡನು? ತನ್ನ ದೂರದ ಸಂಬಂಧಿಗಳಾಗಿದ್ದ ಅಬ್ರಹಾಮ, ಇಸಾಕ ಮತ್ತು ಯಾಕೋಬರೊಂದಿಗೆ ದೇವರು ವ್ಯವಹರಿಸಿದ ರೀತಿಯ ಬಗ್ಗೆ ಕೇಳಿಸಿಕೊಂಡದ್ದನ್ನು ಅವನು ಹೃದಯದಲ್ಲಿ ಜೋಪಾನವಾಗಿರಿಸಿದ್ದನು. ಅಲ್ಲದೇ, ಸೃಷ್ಟಿಯನ್ನು ಅವಲೋಕಿಸುವ ಮೂಲಕ ಯೆಹೋವನ ಅನೇಕ ಗುಣಗಳನ್ನು ಗ್ರಹಿಸಿದನು.—ಯೋಬ 12:7-9, 13, 16 ಓದಿ.
ಕಾವಲಿನಬುರುಜು21.06 ಪುಟ 10 ಪ್ಯಾರ 10-12
ಯೆಹೋವ ಜೊತೆಗಿದ್ದಾನೆ, ನೀವು ಒಂಟಿಯಲ್ಲ
10 ನಂಬಿಗಸ್ತ ಸಹೋದರ ಸಹೋದರಿಯರ ಸ್ನೇಹ ಬೆಳೆಸಿಕೊಳ್ಳಿ. ಅವರು ನಿಮಗಿಂತ ದೊಡ್ಡವರೇ ಆಗಿರಲಿ, ಅವರ ಸಂಸ್ಕೃತಿ ಬೇರೆನೇ ಇರಲಿ ಅವರಿಂದ ತುಂಬ ವಿಷಯ ಕಲಿಯೋಕಾಗುತ್ತೆ. ಯಾಕಂದ್ರೆ “ವಯಸ್ಸಾದವರಲ್ಲಿ ವಿವೇಕ ಇರುತ್ತೆ” ಅಂತ ಬೈಬಲ್ ಹೇಳುತ್ತೆ. (ಯೋಬ 12:12) ಚಿಕ್ಕ ವಯಸ್ಸಿನ ಸಹೋದರ ಸಹೋದರಿಯರಿಂದ ವಯಸ್ಸಾದವರು ಕೂಡ ತುಂಬ ವಿಷಯ ಕಲಿಯೋಕಾಗುತ್ತೆ. ಇದಕ್ಕೊಂದು ಒಳ್ಳೇ ಉದಾಹರಣೆ ದಾವೀದ, ಯೋನಾತಾನ. ಅವರಿಬ್ಬರು ಒಳ್ಳೆ ಸ್ನೇಹಿತರಾಗಿದ್ರು. ದಾವೀದ ಯೋನಾತಾನನಿಗಿಂತ ವಯಸ್ಸಲ್ಲಿ ತುಂಬ ಚಿಕ್ಕವನಾಗಿದ್ದ. ಆದ್ರೆ ಅದು ಅವರ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ. (1 ಸಮು. 18:1) ಅವ್ರಿಗೆ ಎಷ್ಟೇ ದೊಡ್ಡ ದೊಡ್ಡ ಸಮಸ್ಯೆಗಳು ಬಂದ್ರೂ ಯೆಹೋವನ ಆರಾಧನೆಯನ್ನ ಬಿಟ್ಟುಬಿಡದೆ ಇರೋಕೆ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಸಹಾಯ ಮಾಡ್ಕೊಂಡ್ರು. (1 ಸಮು. 23:16-18) ಸತ್ಯದಲ್ಲಿ ಒಬ್ಬರೇ ಇರೋ ಸಹೋದರಿ ಐರಿನ್ ಹೀಗೆ ಹೇಳ್ತಾರೆ, “ನಮ್ಮ ಸಹೋದರ ಸಹೋದರಿಯರು ಅಪ್ಪ ಅಮ್ಮನ ತರ, ಅಣ್ಣ ತಮ್ಮನ ತರ, ಅಕ್ಕ ತಂಗಿಯರ ತರ ಇದ್ದಾರೆ. ಯೆಹೋವ ದೇವರು ಇವ್ರನ್ನ ಉಪಯೋಗಿಸಿ ‘ನಮ್ಗೆ ಕುಟುಂಬ ಇಲ್ವಲ್ಲಾ’ ಅನ್ನೋ ಕೊರಗನ್ನ ನೀಗಿಸುತ್ತಿದ್ದಾರೆ.”
11 ನಿಮಗೆ ನಾಚಿಕೆ ಸ್ವಭಾವ ಇದ್ರೆ ಹೊಸ ಫ್ರೆಂಡ್ಸ್ ಮಾಡಿಕೊಳ್ಳೋಕೆ ಕಷ್ಟ ಆಗಬಹುದು. ರತ್ನ ಅನ್ನೋ ಸಹೋದರಿಯ ಅನುಭವ ನೋಡಿ. ಅವ್ರಿಗೆ ಸ್ವಲ್ಪ ನಾಚಿಕೆ ಸ್ವಭಾವ ಇತ್ತು. ಕುಟುಂಬದಿಂದ ವಿರೋಧ ಬಂದ್ರೂ ಸತ್ಯ ಕಲಿತ್ರು. ಅವರು ಹೀಗೆ ಹೇಳ್ತಾರೆ: “ನಾನು ಸಹೋದರ-ಸಹೋದರಿಯರ ಸಹಾಯ ಪಡಕೊಳ್ಳೋಕೆ ಹಿಂಜರಿತಿದ್ದೆ. ಆದ್ರೆ ಹಾಗೆ ಮಾಡಬಾರದು ಅಂತ ಆಮೇಲೆ ಗೊತ್ತಾಯ್ತು.” ನಿಮ್ಮ ಸಮಸ್ಯೆ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳೋಕೆ ಕಷ್ಟ ಆಗಬಹುದು. ಆದ್ರೆ ಮನಸ್ಸುಬಿಚ್ಚಿ ಮಾತಾಡಿದ್ರೆನೇ ಒಳ್ಳೆ ಸ್ನೇಹಿತರನ್ನು ಮಾಡಿಕೊಳ್ಳೋಕೆ ಆಗೋದು. ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡೋಕೆ ಮುಂದೆ ಬರ್ತಾರೆ. ಆದರೆ ನೀವು ನಿಮ್ಮ ಸಮಸ್ಯೆನಾ ಅವರ ಹತ್ರ ಹೇಳ್ಕೊಬೇಕು.
12 ಸಹೋದರ ಸಹೋದರಿಯರ ಜೊತೆ ಹೆಚ್ಚು ಸೇವೆ ಮಾಡಿದಾಗ ಒಳ್ಳೆ ಸ್ನೇಹಿತರಾಗಬಹುದು. “ಸಹೋದರ ಸಹೋದರಿಯರ ಜೊತೆ ಸೇರಿ ಸಿಹಿಸುದ್ದಿ ಸಾರುವಾಗ ಮತ್ತು ಯೆಹೋವನ ಸೇವೆಗೆ ಸಂಬಂಧಿಸಿದ ಬೇರೆ ಕೆಲಸಗಳನ್ನು ಮಾಡುವಾಗ ನಾನು ತುಂಬಾ ಸ್ನೇಹಿತರನ್ನ ಮಾಡ್ಕೊಂಡೆ. ಈ ಸ್ನೇಹಿತರ ಮೂಲಕ ಯೆಹೋವ ದೇವರು ನಂಗೆ ಯಾವಾಗ್ಲೂ ಸಹಾಯ ಮಾಡ್ತಾ ಬಂದಿದ್ದಾರೆ” ಅಂತ ಕ್ಯಾರಲ್ ಹೇಳ್ತಾರೆ. ಒಳ್ಳೆ ಸ್ನೇಹಿತರನ್ನ ಮಾಡಿಕೊಳ್ಳೋದ್ರಿಂದ ಎಷ್ಟೊಂದು ಪ್ರಯೋಜನ ಇದೆ ಅಲ್ವಾ. ಒಂಟಿತನದಿಂದ ಹೊರಗೆ ಬರೋಕೆ ಯೆಹೋವ ದೇವರು ನಮಗೆ ಇಂಥ ಸ್ನೇಹಿತರನ್ನ ಕೊಟ್ಟಿದ್ದಾನೆ.—ಜ್ಞಾನೋ. 17:17.
it-2-E ಪುಟ 1190 ಪ್ಯಾರ 2
ವಿವೇಕ
ದೇವರು ಕೊಡೋ ವಿವೇಕ. ನಿಜವಾದ ವಿವೇಕದ ಮೂಲ ಯೆಹೋವ ದೇವರು ಒಬ್ಬನೇ. ಅದಕ್ಕೆ ಬೈಬಲ್ ಯೆಹೋವ ದೇವರಷ್ಟು ವಿವೇಕಿ ಬೇರೆ ಯಾರೂ ಇಲ್ಲ ಅಂತ ಹೇಳುತ್ತೆ. ಅದು ಹೇಳೋದು “ಆತನೊಬ್ಬನೇ ವಿವೇಕಿ.” (ರೋಮ 16:27; ಪ್ರಕ 7:12) ಜ್ಞಾನ ಅಂದ್ರೆ ಸತ್ಯದ ಬಗ್ಗೆ ತಿಳ್ಕೊಳ್ಳೋದು. ನಮ್ಮ ಸೃಷ್ಟಿಕರ್ತನಾದ ಯೆಹೋವ ‘ಯಾವಾಗ್ಲೂ ಮತ್ತು ಯಾವತ್ತೂ ದೇವರಾಗಿರೋದ್ರಿಂದ‘ (ಕೀರ್ತ 90:1, 2) ಆತನಿಗೆ ಇಡೀ ವಿಶ್ವ ಮತ್ತು ಅದರ ಇತಿಹಾಸದ ಬಗ್ಗೆ ಇಂಚಿಂಚೂ ಮಾಹಿತಿ ಗೊತ್ತು. ಮನುಷ್ಯರು ತಮ್ಮ ಸಂಶೋಧನೆ ಮತ್ತು ಆವಿಷ್ಕಾರವನ್ನ ದೇವರು ಮಾಡಿರೋ ಭೌತಿಕ ನಿಯಮ ಮತ್ತು ಚಕ್ರಗಳನ್ನ ಆಧಾರವಾಗಿಟ್ಟುಕೊಂಡು ಮಾಡ್ತಾರೆ. ಮನುಷ್ಯರಿಗೆ ಆತನು ಕೊಟ್ಟಿರೋ ನಿಯಮಗಳು ಸರಿಯಾದ ನಿರ್ಧಾರಗಳನ್ನ ಮಾಡೋಕೆ ಮತ್ತು ಜೀವನದಲ್ಲಿ ಸಂತೋಷವಾಗಿರೋಕೆ ತುಂಬಾ ಸಹಾಯ ಮಾಡುತ್ತೆ. (ಧರ್ಮೋ 32:4-6) ಯೆಹೋವನಷ್ಟು ತಿಳುವಳಿಕೆ ಮತ್ತು ಬುದ್ಧಿ ಬೇರೆ ಯಾರಿಗೂ ಇಲ್ಲ. (ಯೆಶಾ 40:13, 14) ಯೆಹೋವನು ತನ್ನ ನೈತಿಕ ಮಟ್ಟಗಳಿಗೆ ಹೊಂದಿಕೆಯಲ್ಲಿಲ್ಲದ ವಿಷಯಗಳು ಸ್ವಲ್ಪ ಸಮಯದವರೆಗೆ ಬೆಳೆಯೋಕೆ ಬಿಟ್ಟರೂ ಅದು ಹಾಗೆ ಮುಂದುವರಿಯೋಕೆ ಬಿಡಲ್ಲ. ಕೊನೆಯಲ್ಲಿ, ಆತನು ಏನು ನಿರ್ಧಾರ ಮಾಡ್ತಾನೋ ಅದೇ ಆಗುತ್ತೆ. ಅದಕ್ಕೆ ದೇವರ ವಾಕ್ಯ ಆತನು ಕೊಟ್ಟ ಮಾತನ್ನ ‘ನೆರವೇರಿಸಿಯೇ ನೆರವೇರಿಸ್ತಾನೆ‘ ಅಂತ ಹೇಳುತ್ತೆ.—ಯೆಶಾ 55:8-11; 46:9-11.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು08 10/1 ಪುಟ 19 ಪ್ಯಾರ 4
ಹದಿವಯಸ್ಕರೊಂದಿಗೆ ಸಂವಾದ
▪ ‘ಮಾತುಗಳ ಹಿಂದಿರುವ ಅವರ ಭಾವನೆಗಳನ್ನು ನಾನು ಗ್ರಹಿಸುತ್ತೇನೋ?’ ಯೋಬ 12:11 ಹೇಳುವುದು: “ಅಂಗಳವು ಆಹಾರವನ್ನು ರುಚಿನೋಡುವ ಪ್ರಕಾರ ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.” ನಿಮ್ಮ ಮಗನು ಅಥವಾ ಮಗಳು ಏನು ಹೇಳುತ್ತಾರೋ ಅದನ್ನು ನೀವು ‘ವಿವೇಚಿಸುವ’ ಅಗತ್ಯ ಎಂದಿಗಿಂತಲೂ ಹೆಚ್ಚಾಗಿ ಈಗ ಇದೆ. ಹದಿವಯಸ್ಕರು ಏನಾದರೂ ಹೇಳುವಾಗ ಅದು ಸತ್ಯವೋ ಎಂಬಂತೆ ಹೇಳಿಬಿಡುತ್ತಾರೆ. ಉದಾಹರಣೆಗೆ, ನಿಮ್ಮ ಮಗನೋ ಮಗಳೋ “ನೀನು ನನ್ನನ್ನು ಯಾವಾಗಲೂ ಚಿಕ್ಕ ಮಗುವಿನ ಹಾಗೆ ನೋಡುತ್ತಿ!” “ನಾನು ಹೇಳುವುದನ್ನು ನೀನು ಕೇಳುವುದೇ ಇಲ್ಲ!” ಎಂದು ಹೇಳಬಹುದು. “ನಾನು ಯಾವಾಗ ಹಾಗೆ ಮಾಡಿದ್ದೇನೆ” ಎಂದು ನೀವು ವಾದ ಮಾಡುವ ಬದಲಾಗಿ, ಅಂಥ ಅರ್ಥದಲ್ಲಿ ಅವರು ಮಾತಾಡಲಿಲ್ಲ ಎಂಬುದನ್ನು ಗ್ರಹಿಸಿರಿ. ಉದಾಹರಣೆಗೆ, “ನೀನು ನನ್ನನ್ನು ಯಾವಾಗಲೂ ಮಗುವಿನ ಹಾಗೆ ನೋಡುತ್ತಿ!” ಎಂಬ ಮಾತಿನ ಅರ್ಥವು “ನೀನು ನನ್ನನ್ನು ನಂಬುವುದಿಲ್ಲ ಎಂದು ನನಗನಿಸುತ್ತದೆ” ಎಂದಾಗಿರಬಹುದು, “ನಾನು ಹೇಳುವುದನ್ನು ನೀನು ಕೇಳುವುದೇ ಇಲ್ಲ” ಎಂಬ ಮಾತಿನ ಅರ್ಥವು “ನನಗೆ ನಿಜವಾಗಿ ಹೇಗನಿಸುತ್ತಿದೆ ಎಂಬುದನ್ನು ನಾನು ನಿನಗೆ ಹೇಳಬಯಸುತ್ತೇನೆ” ಎಂದಾಗಿರಬಹುದು. ಆದ್ದರಿಂದ ಅವರ ಮಾತುಗಳ ಹಿಂದಿರುವ ಅರ್ಥವನ್ನು ಗ್ರಹಿಸಲು ಪ್ರಯತ್ನಿಸಿ.