ಅಧ್ಯಾಯ ಹತ್ತು
ಕುಟುಂಬ ಸದಸ್ಯನೊಬ್ಬನು ಅಸ್ವಸ್ಥನಾಗಿರುವಾಗ
1, 2. ಯೋಬನ ಸಮಗ್ರತೆಯನ್ನು ಮುರಿಯುವ ಪ್ರಯತ್ನದಲ್ಲಿ ದುರಂತ ಮತ್ತು ಅಸ್ವಸ್ಥತೆಯನ್ನು ಸೈತಾನನು ಹೇಗೆ ಬಳಸಿದನು?
ಯೋಬನೆಂಬ ಮನುಷ್ಯನು ಒಂದು ಸಂತೋಷದ ಕುಟುಂಬ ಜೀವನವನ್ನು ಅನುಭವಿಸಿದವರಲ್ಲಿ ಒಬ್ಬನಾಗಿ ಖಂಡಿತವಾಗಿಯೂ ಎಣಿಸಲ್ಪಡಬೇಕು. ಬೈಬಲು ಅವನನ್ನು “ಪೌರಸ್ತ್ಯರೆಲ್ಲರಲ್ಲಿ ಅತ್ಯಂತ ಮಹಾನ್ ವ್ಯಕ್ತಿ” ಎಂದು ಕರೆಯುತ್ತದೆ. ಅವನಿಗೆ ಒಟ್ಟಿಗೆ ಹತ್ತು ಮಕ್ಕಳಿದ್ದರು—ಏಳು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು. ತನ್ನ ಕುಟುಂಬಕ್ಕೆ ಸಮೃದ್ಧವಾಗಿ ಒದಗಿಸಲಿಕ್ಕೆ ಅವನಿಗೆ ಅನುಕೂಲತೆಗಳೂ ಇದ್ದವು. ಅತಿ ಪ್ರಾಮುಖ್ಯವಾಗಿ, ಅವನು ಆತ್ಮಿಕ ಚಟುವಟಿಕೆಗಳಲ್ಲಿ ನಾಯಕತ್ವ ವಹಿಸಿದನು ಮತ್ತು ಯೆಹೋವನ ಮುಂದೆ ತನ್ನ ಮಕ್ಕಳ ನಿಲುವಿನ ಕುರಿತಾಗಿ ಚಿಂತಿಸಿದನು. ಇದೆಲ್ಲವು ಆಪ್ತವಾದ ಮತ್ತು ಸಂತೋಷದ ಕುಟುಂಬ ಬಂಧಗಳಲ್ಲಿ ಫಲಿಸಿತು.—ಯೋಬ 1:1-5, NW.
2 ಯೋಬನ ಸನ್ನಿವೇಶವು ಯೆಹೋವ ದೇವರ ಪ್ರಧಾನ ಶತ್ರುವಾದ ಸೈತಾನನ ಗಮನವನ್ನು ತಪ್ಪಿಸಿಕೊಳ್ಳಲಿಲ್ಲ. ದೇವರ ಸೇವಕರ ಸಮಗ್ರತೆಯನ್ನು ಮುರಿಯುವ ವಿಧಾನಗಳನ್ನು ಸದಾ ಹುಡುಕುತ್ತಿರುವ ಸೈತಾನನು, ಯೋಬನ ಸಂತಸಕರವಾದ ಕುಟುಂಬವನ್ನು ನಾಶಗೊಳಿಸುವ ಮೂಲಕ ಅವನ ಮೇಲೆ ಆಕ್ರಮಣಗೈದನು. ತರುವಾಯ ಅವನು “ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ಕೆಟ್ಟ ಕುರುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು.” ಹೀಗೆ ದುರಂತ ಮತ್ತು ಅಸ್ವಸ್ಥತೆಯನ್ನು ಉಪಯೋಗಿಸಿ ಯೋಬನ ಸಮಗ್ರತೆಯನ್ನು ಮುರಿಯಲು ಸೈತಾನನು ನಿರೀಕ್ಷಿಸಿದನು.—ಯೋಬ 2:6, 7.
3. ಯೋಬನ ಅಸ್ವಸ್ಥತೆಯ ರೋಗಲಕ್ಷಣಗಳೇನಾಗಿದ್ದವು?
3 ಯೋಬನ ಅಸ್ವಸ್ಥತೆಯ ಕುರಿತಾದ ವೈದ್ಯಕೀಯ ಹೆಸರನ್ನು ಬೈಬಲ್ ಕೊಡುವುದಿಲ್ಲ. ಆದರೂ ರೋಗಲಕ್ಷಣಗಳನ್ನು ಅದು ಅವಶ್ಯವಾಗಿ ನಮಗೆ ತಿಳಿಸುತ್ತದೆ. ಅವನ ಮಾಂಸವು ಹುಳುಗಳಿಂದ ತುಂಬಿಕೊಂಡಿತ್ತು, ಮತ್ತು ಅವನ ಚರ್ಮವು ಗಡುಸಾಗಿ ಕೊಳೆಯುತ್ತಾ ಹೋಯಿತು. ಯೋಬನ ಉಸಿರು ಅಸಹ್ಯವಾಗಿತ್ತು ಮತ್ತು ಅವನ ದೇಹವು ಹೊಲಸು ನಾರುತ್ತಿತ್ತು. ಅವನು ನೋವಿನಿಂದ ನರಳಾಡಿದನು. (ಯೋಬ 7:5; 19:17; 30:17, 30) ಯಾತನೆಪಡುತ್ತಾ ಯೋಬನು ಬೂದಿಯಲ್ಲಿ ಕುಳಿತುಕೊಂಡು, ಮಡಕೆಯ ಚೂರಿನಿಂದ ತನ್ನ ಮೈಯನ್ನು ಕೆರೆದುಕೊಂಡನು. (ಯೋಬ 2:8) ನಿಜವಾಗಿಯೂ ಶೋಚನೀಯವಾದ ದೃಶ್ಯ!
4. ಆಗಿಂದಾಗ್ಗೆ ಪ್ರತಿಯೊಂದು ಕುಟುಂಬವು ಏನನ್ನು ಅನುಭವಿಸುತ್ತದೆ?
4 ಅಂತಹ ಒಂದು ಗಂಭೀರವಾದ ರೋಗದಿಂದ ನೀವು ಬಾಧಿತರಾಗಿದ್ದರೆ ನೀವು ಹೇಗೆ ಪ್ರತಿವರ್ತಿಸುತ್ತಿದ್ದಿರಿ? ಯೋಬನಿಗೆ ಮಾಡಿದಂತೆ ಸೈತಾನನು ಇಂದು ದೇವರ ಸೇವಕರನ್ನು ರೋಗದಿಂದ ಹೊಡೆಯುವುದಿಲ್ಲ. ಆದರೂ, ಮಾನವ ಅಪರಿಪೂರ್ಣತೆ, ದಿನನಿತ್ಯ ಜೀವಿತದ ಒತ್ತಡಗಳು, ಮತ್ತು ನಾವು ಜೀವಿಸುವ ಕ್ಷೀಣಿಸುತ್ತಿರುವ ಪರಿಸರದ ಕಾರಣ, ಆಗಿಂದಾಗ್ಗೆ ಕುಟುಂಬ ಸದಸ್ಯರು ಅಸ್ವಸ್ಥರಾಗುತ್ತಾರೆಂಬುದು ನಿರೀಕ್ಷಿಸಬೇಕಾದದ್ದೇ. ನಾವು ತೆಗೆದುಕೊಳ್ಳಬಹುದಾದ ರೋಗನಿವಾರಕ ಕ್ರಮಗಳ ಹೊರತೂ, ನಾವೆಲ್ಲರೂ ಅನಾರೋಗ್ಯಕ್ಕೆ ಗುರಿಯಾಗುತ್ತೇವೆ, ಆದರೂ ಯೋಬನಿಗಾದಷ್ಟು ಮಟ್ಟಿಗೆ ಬಾಧೆಗೊಳಗಾಗುವವರು ಕೊಂಚ ಮಂದಿ. ಅನಾರೋಗ್ಯವು ನಮ್ಮ ಮನೆವಾರ್ತೆಯನ್ನು ಮುತ್ತುವಾಗ, ಅದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿರಬಲ್ಲದು. ಆದುದರಿಂದ ಮಾನವಕುಲದ ಈ ಸದಾಉಪಸ್ಥಿತವಿರುವ ಶತ್ರುವನ್ನು ನಿಭಾಯಿಸಲು ಬೈಬಲು ನಮಗೆ ಹೇಗೆ ಸಹಾಯ ಮಾಡುತ್ತದೆಂಬುದನ್ನು ನಾವು ನೋಡೋಣ.—ಪ್ರಸಂಗಿ 9:11; 2 ತಿಮೊಥೆಯ 3:16.
ಅದರ ಕುರಿತು ನಿಮಗೆ ಹೇಗನಿಸುತ್ತದೆ?
5. ತಾತ್ಕಾಲಿಕ ಅಸ್ವಸ್ಥತೆಯ ಸನ್ನಿವೇಶಗಳಲ್ಲಿ ಕುಟುಂಬ ಸದಸ್ಯರು ಸಾಮಾನ್ಯವಾಗಿ ಹೇಗೆ ಪ್ರತಿಕ್ರಿಯಿಸುತ್ತಾರೆ?
5 ಕಾರಣವು ಏನೇ ಇರಲಿ, ಜೀವನದ ಸಾಮಾನ್ಯ ದಿನಚರಿಯ ಭಂಗವು ಯಾವಾಗಲೂ ಕಷ್ಟಕರ, ಮತ್ತು ಆ ಭಂಗವು ದೀರ್ಘಕಾಲದ ಅಸ್ವಸ್ಥತೆಯಿಂದ ಆಗಿರುವುದಾದರೆ ಇದು ವಿಶೇಷವಾಗಿ ಸತ್ಯ. ಒಂದು ಅಲ್ಪಾವಧಿಯ ಅಸ್ವಸ್ಥತೆಯು ಸಹ ಸರಿಹೊಂದಿಸುವಿಕೆಗಳು, ವಿನಾಯಿತಿಗಳು, ಮತ್ತು ತ್ಯಾಗಗಳನ್ನು ಕೇಳಿಕೊಳ್ಳುತ್ತದೆ. ರೋಗಿಯು ವಿಶ್ರಾಂತಿಯನ್ನು ಪಡೆಯುವಂತೆ ಬಿಡಲು ಆರೋಗ್ಯವಂತ ಕುಟುಂಬ ಸದಸ್ಯರು ಸುಮ್ಮನಿರಬೇಕಾದೀತು. ಕೆಲವು ಚಟುವಟಿಕೆಗಳನ್ನು ಅವರು ಬಿಟ್ಟುಕೊಡಬೇಕಾದೀತು. ವಿಚಾರಪರರಾಗಿರಲು ಆಗಿಂದಾಗ್ಗೆ ಜ್ಞಾಪಕ ಹುಟ್ಟಿಸಬೇಕಾದರೂ, ಹೆಚ್ಚಿನ ಕುಟುಂಬಗಳಲ್ಲಿ ಚಿಕ್ಕ ಮಕ್ಕಳು ಸಹ ಅಸ್ವಸ್ಥನಾದ ರಕ್ತಸಂಬಂಧಿಯನ್ನು ಅಥವಾ ಹೆತ್ತವರನ್ನು ಕನಿಕರಿಸುತ್ತಾರೆ. (ಕೊಲೊಸ್ಸೆ 3:12) ತಾತ್ಕಾಲಿಕ ಅಸೌಖ್ಯದ ಸನ್ನಿವೇಶದಲ್ಲಿ, ಅಗತ್ಯವಾದುದನ್ನು ಮಾಡಲು ಕುಟುಂಬವು ಸಾಮಾನ್ಯವಾಗಿ ಸಿದ್ಧವಾಗಿರುತ್ತದೆ. ಅದಲ್ಲದೆ, ಪ್ರತಿ ಕುಟುಂಬ ಸದಸ್ಯನು, ಒಂದುವೇಳೆ ಅವನು ಅಥವಾ ಅವಳು ಅಸ್ವಸ್ಥಳಾದದ್ದಾದರೆ ತದ್ರೀತಿಯ ಪರಿಗಣನೆಗಾಗಿ ನಿರೀಕ್ಷಿಸುವರು.—ಮತ್ತಾಯ 7:12.
6. ಕುಟುಂಬ ಸದಸ್ಯನೊಬ್ಬನು ಒಂದು ಗಂಭೀರವಾದ, ದೀರ್ಘಾವಧಿಯ ಅಸ್ವಸ್ಥತೆಗೆ ಗುರಿಯಾಗುವುದಾದರೆ, ಕೆಲವು ಸಲ ಯಾವ ಪ್ರತಿಕ್ರಿಯೆಗಳು ಕಂಡುಬರುತ್ತವೆ?
6 ಅಸ್ವಸ್ಥತೆಯು ಅತಿ ಗಂಭೀರತರದ್ದೂ ಭಂಗಗಳು ತೀವ್ರವೂ ದೀರ್ಘಾವಧಿಯದ್ದೂ ಆಗಿರುವುದಾದರೆ ಆಗೇನು? ಉದಾಹರಣೆಗಾಗಿ, ಕುಟುಂಬದಲ್ಲಿ ಯಾರಿಗಾದರೂ ಲಕ್ವಾ ಹೊಡೆದಲ್ಲಿ, ಮುಪ್ಪಿನ ಮಾನಸಿಕ ದೌರ್ಬಲ್ಯ (ಅಲ್ಸೈಮರ್ಸ್ ರೋಗ)ಕ್ಕೆ ಗುರಿಯಾದಲ್ಲಿ, ಅಥವಾ ಬೇರೆ ಯಾವುದೊ ಅಸ್ವಸ್ಥತೆಯಿಂದ ತ್ರಾಣಗುಂದಿದಲ್ಲಿ ಆಗೇನು? ಅಥವಾ ಕುಟುಂಬ ಸದಸ್ಯನೊಬ್ಬನು ಸ್ಕಟ್ಸೊಫ್ರೀನೀಯದಂತಹ ಮನೋರೋಗದಿಂದ ಬಾಧಿತನಾದಲ್ಲಿ ಆಗೇನು? ಒಂದು ಸಾಮಾನ್ಯವಾದ ಆರಂಭಿಕ ಪ್ರತಿಕ್ರಿಯೆಯು ಕನಿಕರ—ಪ್ರಿಯನೊಬ್ಬನು ಅಷ್ಟು ಕಷ್ಟಪಡುತ್ತಿದ್ದಾನೆಂಬ ಖೇದ. ಆದರೂ, ಕನಿಕರವು ಬೇರೆ ಪ್ರತಿಕ್ರಿಯೆಗಳಿಂದ ಹಿಂಬಾಲಿಸಲ್ಪಡಬಹುದು. ಒಬ್ಬ ವ್ಯಕ್ತಿಯ ಅಸ್ವಸ್ಥತೆಯಿಂದ ತಾವು ಅತಿಯಾಗಿ ನಿರ್ಬಂಧಿಸಲ್ಪಡುವುದನ್ನು ಮತ್ತು ತಮ್ಮ ಸ್ವಾತಂತ್ರ್ಯಗಳು ಸೀಮಿತವಾಗುವುದನ್ನು ಕುಟುಂಬ ಸದಸ್ಯರು ಕಾಣುವಾಗ, ಅವರು ತೀವ್ರ ಅಸಮಾಧಾನದ ಭಾವನೆಯುಳ್ಳವರಾಗಬಹುದು. “ಇದು ನನಗೆ ಸಂಭವಿಸಬೇಕು ಏಕೆ?” ಎಂದವರು ಕುತೂಹಲಪಟ್ಟಾರು.
7. ಯೋಬನ ಹೆಂಡತಿಯು ಅವನ ಅಸ್ವಸ್ಥತೆಗೆ ಹೇಗೆ ಪ್ರತಿಕ್ರಿಯಿಸಿದಳು, ಮತ್ತು ಅವಳು ಏನನ್ನು ಮರೆತುಬಿಟ್ಟಳೆಂಬುದು ವ್ಯಕ್ತ?
7 ತದ್ರೀತಿಯ ವಿಷಯವು ಯೋಬನ ಹೆಂಡತಿಯ ಮನಸ್ಸಿನಲ್ಲೂ ಹಾದುಹೋದಂತೆ ತೋರುತ್ತದೆ. ನೆನಪಿನಲ್ಲಿಡಿರಿ, ಅವಳು ಈ ಮೊದಲೇ ತನ್ನ ಮಕ್ಕಳನ್ನು ಕಳೆದುಕೊಂಡಿದ್ದಳು. ಆ ದುರಂತಮಯ ಘಟನೆಗಳು ಅನಾವರಣೆಗೊಂಡಂತೆ, ಅವಳು ಪ್ರಗತಿಪರವಾಗಿ ಹೆಚ್ಚು ನಿಷ್ಠುರಗೊಂಡಳೆಂಬುದು ನಿಸ್ಸಂಶಯ. ಕೊನೆಗೆ, ಒಮ್ಮೆ ಕ್ರಿಯಾಶೀಲನೂ ಕಸುವುಳ್ಳವನೂ ಆಗಿದ್ದ ತನ್ನ ಗಂಡನು ವೇದನಾಮಯವಾದ, ಅಸಹ್ಯಕರ ರೋಗದಿಂದ ಬಾಧಿತನಾದುದನ್ನು ಕಂಡಂತೆ, ಸಕಲ ದುರಂತಗಳನ್ನು ಮಬ್ಬುಗವಿಸಿದ ಪ್ರಧಾನ ವಿಷಯಾಂಶವನ್ನು—ದೇವರೊಂದಿಗೆ ತನಗೆ ಮತ್ತು ತನ್ನ ಗಂಡನಿಗಿದ್ದ ಸುಸಂಬಂಧವನ್ನು—ಅವಳು ಮರೆತುಬಿಟ್ಟಳೆಂಬಂತೆ ತೋರುತ್ತದೆ. ಬೈಬಲು ಹೇಳುವುದು: ಕೊನೆಗೆ “[ಯೋಬನ] ಹೆಂಡತಿ ಅವನಿಗೆ—ನಿನ್ನ ಯಥಾರ್ಥತ್ವವನ್ನು [“ಸಮಗ್ರತೆಯನ್ನು,” NW] ಇನ್ನೂ ಬಿಡಲಿಲ್ಲವೋ ದೇವರನ್ನು ದೂಷಿಸಿ ಸಾಯಿ ಎಂದು ಹೇಳಿದಳು.”—ಯೋಬ 2:9.
8. ಕುಟುಂಬ ಸದಸ್ಯನೊಬ್ಬನು ತುಂಬ ಅಸ್ವಸ್ಥನಾಗಿರುವಾಗ, ಇತರ ಕುಟುಂಬ ಸದಸ್ಯರಿಗೆ ಒಂದು ಯೋಗ್ಯ ದೃಷ್ಟಿಕೋನವನ್ನಿಡಲು ಯಾವ ಶಾಸ್ತ್ರವಚನವು ಸಹಾಯ ಮಾಡುವುದು?
8 ಇನ್ನೊಬ್ಬನ ಅಸ್ವಸ್ಥತೆಯಿಂದಾಗಿ ತಮ್ಮ ಜೀವನವು ತೀವ್ರ ಬದಲಾಗುವಾಗ ಅನೇಕರು ಹತಾಶೆಗೊಳ್ಳುತ್ತಾರೆ, ಸಿಟ್ಟುಗೊಳ್ಳುತ್ತಾರೆ ಸಹ. ಆದರೂ, ಸನ್ನಿವೇಶದ ಕುರಿತಾಗಿ ವಿವೇಚಿಸುವ ಕ್ರೈಸ್ತನೊಬ್ಬನು, ಇದು ತನ್ನ ಪ್ರೀತಿಯ ನೈಜತೆಯನ್ನು ಪ್ರದರ್ಶಿಸಲು ತನಗೆ ಒಂದು ಅವಕಾಶ ಕೊಡುತ್ತದೆಂದು ಕಟ್ಟಕಡೆಗೆ ಗ್ರಹಿಸಿಕೊಳ್ಳಬೇಕು. ನಿಜ ಪ್ರೀತಿಯು ‘ಬಹು ತಾಳ್ಮೆಯುಳ್ಳ ಮತ್ತು ದಯೆತೋರಿಸುವ . . . ಸ್ವಪ್ರಯೋಜನವನ್ನು ಚಿಂತಿಸದ . . . ಎಲ್ಲವನ್ನೂ ಅಡಗಿಸಿಕೊಳ್ಳುವ, ಎಲ್ಲವನ್ನೂ ನಂಬುವ, ಎಲ್ಲವನ್ನೂ ನಿರೀಕ್ಷಿಸುವ, ಎಲ್ಲವನ್ನೂ ಸಹಿಸುವ’ ವಿಷಯವಾಗಿದೆ. (1 ಕೊರಿಂಥ 13:4-7) ಆದುದರಿಂದ, ನಕಾರಾತ್ಮಕ ಭಾವನೆಗಳನ್ನು ಆಳುವಂತೆ ಅನುಮತಿಸುವ ಬದಲಿಗೆ, ಅವುಗಳನ್ನು ಅಂಕೆಯಲ್ಲಿಡುವಂತೆ ಮಾಡಲಿಕ್ಕಾಗಿ ನಾವು ನಮ್ಮಿಂದಾದಷ್ಟನ್ನು ಮಾಡುವುದು ಅತ್ಯಾವಶ್ಯಕ.—ಜ್ಞಾನೋಕ್ತಿ 3:21.
9. ಸದಸ್ಯನೊಬ್ಬನು ಗಂಭೀರ ಅಸ್ವಸ್ಥತೆಯಲ್ಲಿರುವಾಗ, ಕುಟುಂಬಕ್ಕೆ ಆತ್ಮಿಕ ಮತ್ತು ಮಾನಸಿಕ ಸಹಾಯಕೊಡಲು ಯಾವ ಆಶ್ವಾಸನೆಯು ಸಹಾಯ ಮಾಡಬಲ್ಲದು?
9 ಕುಟುಂಬದ ಸದಸ್ಯನೊಬ್ಬನು ಗಂಭೀರವಾಗಿ ಅಸ್ವಸ್ಥನಾಗಿರುವಾಗ, ಕುಟುಂಬದ ಆತ್ಮಿಕ ಮತ್ತು ಮಾನಸಿಕ ಕ್ಷೇಮವನ್ನು ಕಾಪಾಡಲು ಏನು ಮಾಡಸಾಧ್ಯವಿದೆ? ಪ್ರತಿಯೊಂದು ರೋಗವು ತನ್ನದೇ ಆದ ನಿರ್ದಿಷ್ಟ ಪರಾಮರಿಕೆ ಮತ್ತು ಔಷಧೋಪಚಾರವನ್ನು ಕೇಳಿಕೊಳ್ಳುತ್ತದೆ ನಿಶ್ಚಯ, ಮತ್ತು ವೈದ್ಯಕೀಯವಾದ ಅಥವಾ ಗೃಹಚಿಕಿತ್ಸೆಯ ಯಾವುದೇ ಕಾರ್ಯವಿಧಾನಗಳನ್ನು ಈ ಪ್ರಕಾಶನದಲ್ಲಿ ಶಿಫಾರಸ್ಸು ಮಾಡುವುದು ಯೋಗ್ಯವಾಗಿರದು. ಆದಾಗ್ಯೂ, ಒಂದು ಆತ್ಮಿಕ ಅರ್ಥದಲ್ಲಿ, ಯೆಹೋವನು “ಕುಗ್ಗಿದವರನ್ನೆಲ್ಲಾ ಉದ್ಧರಿಸು”ತ್ತಾನೆ. (ಕೀರ್ತನೆ 145:14) ಅರಸ ದಾವೀದನು ಬರೆದುದು: “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು. . . . ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು.” (ಕೀರ್ತನೆ 41:1-3) ತನ್ನ ಸೇವಕರು ಭಾವಾತ್ಮಕವಾಗಿ ತಮ್ಮ ಸ್ವಂತ ಶಕ್ತಿಗೆ ಮೀರಿ ಶೋಧಿಸಲ್ಪಡುವಾಗಲೂ, ಯೆಹೋವನು ಅವರನ್ನು ಆತ್ಮಿಕವಾಗಿ ಸಜೀವವಾಗಿ ಉಳಿಸುತ್ತಾನೆ. (2 ಕೊರಿಂಥ 4:7) ತಮ್ಮ ಮನೆವಾರ್ತೆಯಲ್ಲಿ ಗಂಭೀರ ಅಸ್ವಸ್ಥತೆಯನ್ನು ಎದುರಿಸುತ್ತಿರುವ ಅನೇಕ ಕುಟುಂಬ ಸದಸ್ಯರು ಕೀರ್ತನೆಗಾರನ ಈ ಮಾತುಗಳನ್ನು ಪ್ರತಿಧ್ವನಿಸಿದ್ದಾರೆ: “ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ; ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.”—ಕೀರ್ತನೆ 119:107.
ಒಂದು ವಾಸಿಕಾರಕ ಆತ್ಮ
10, 11. (ಎ) ಕುಟುಂಬವೊಂದು ಅಸ್ವಸ್ಥತೆಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾದರೆ ಯಾವುದು ಅತ್ಯಾವಶ್ಯಕ? (ಬಿ) ಒಬ್ಬ ಸ್ತ್ರೀಯು ತನ್ನ ಗಂಡನ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಿದಳು?
10 “ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು,” ಎನ್ನುತ್ತದೆ ಒಂದು ಬೈಬಲ್ ಜ್ಞಾನೋಕ್ತಿ, “ಆತ್ಮವೇ ನೊಂದರೆ ಸಹಿಸುವವರು ಯಾರು?” (ಜ್ಞಾನೋಕ್ತಿ 18:14) ರೋಗ ಸ್ಥಿತಿಯು ಒಂದು ಕುಟುಂಬದ ಆತ್ಮವನ್ನು ಹಾಗೂ “ಒಬ್ಬ ಮನುಷ್ಯನ ಆತ್ಮವನ್ನು” ಬಾಧಿಸಬಲ್ಲದು. ಆದರೂ “ಶಾಂತಿಗುಣವು [“ಶಾಂತ ಹೃದಯವು,” NW] ದೇಹಕ್ಕೆ ಜೀವಾಧಾರವು.” (ಜ್ಞಾನೋಕ್ತಿ 14:30) ಒಂದು ಕುಟುಂಬವು ಗಂಭೀರವಾದ ಅಸ್ವಸ್ಥತೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತದೊ ಇಲ್ಲವೊ ಎಂಬುದು ಬಹಳ ಮಟ್ಟಿಗೆ ಅದರ ಸದಸ್ಯರ ಮನೋಭಾವ ಅಥವಾ ಆತ್ಮದ ಮೇಲೆ ಹೊಂದಿಕೊಳ್ಳುತ್ತದೆ.—ಹೋಲಿಸಿ ಜ್ಞಾನೋಕ್ತಿ 17:22.
11 ಒಬ್ಬ ಕ್ರೈಸ್ತ ಸ್ತ್ರೀಗೆ ಅವಳು ವಿವಾಹವಾದ ಆರು ವರ್ಷಗಳಲ್ಲೇ ತನ್ನ ಗಂಡನು ಲಕ್ವಾ ಪೀಡಿತನಾದುದನ್ನು ನೋಡುತ್ತಾ ತಾಳಿಕೊಳ್ಳಬೇಕಾಗಿತ್ತು. “ನನ್ನ ಗಂಡನ ವಾಕ್ಶಕ್ತಿಯು ಬಹಳವಾಗಿ ಬಾಧಿತವಾಗಿತ್ತು, ಮತ್ತು ಅವರೊಂದಿಗೆ ಸಂಭಾಷಿಸುವುದೇ ಬಹುಮಟ್ಟಿಗೆ ಅಶಕ್ಯವಾಯಿತು,” ಎಂದು ಆಕೆ ಜ್ಞಾಪಿಸಿಕೊಂಡಳು. “ಅವರು ಏನು ಹೇಳಲು ಒದ್ದಾಡುತ್ತಿದ್ದರೊ ಅದನ್ನು ತಿಳಿದುಕೊಳ್ಳಲು ಯತ್ನಿಸುವ ಮಾನಸಿಕ ಶ್ರಮವು ಅತಿರೇಕವಾಗಿತ್ತು.” ಆ ಗಂಡನು ಅನುಭವಿಸಿದ್ದಿರಬೇಕಾದ ವೇದನೆ ಮತ್ತು ಹತಾಶೆಯನ್ನು ಸಹ ಊಹಿಸಿಕೊಳ್ಳಿ. ಆ ದಂಪತಿಗಳು ಏನು ಮಾಡಿದರು? ಕ್ರೈಸ್ತ ಸಭೆಯಿಂದ ಬಹಳ ದೂರ ವಾಸಿಸಿದರೂ, ಆ ಸಹೋದರಿಯು ಸಂಸ್ಥಾವಿಷಯವಾದ ಸಕಲ ಅತ್ಯಾಧುನಿಕ ಮಾಹಿತಿಯಿಂದ ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿನ ಆತ್ಮಿಕ ಆಹಾರದ ನಿರಂತರ ಸರಬರಾಯಿಯಿಂದ ತನ್ನನ್ನು ಸದ್ಯೋಚಿತಳಾಗಿಟ್ಟುಕೊಂಡ ಮೂಲಕ, ಆತ್ಮಿಕವಾಗಿ ದೃಢವಾಗಿ ಉಳಿಯಲು ತನ್ನಿಂದಾಗುವಷ್ಟನ್ನು ಮಾಡಿದಳು. ನಾಲ್ಕು ವರ್ಷಗಳ ತರುವಾಯ ತನ್ನ ಪ್ರಿಯ ಗಂಡನ ಮರಣದ ತನಕ ಅವನನ್ನು ಪರಾಮರಿಸಲು ಬೇಕಾದ ಆತ್ಮಿಕ ಬಲವನ್ನು ಇದು ಅವಳಿಗೆ ಕೊಟ್ಟಿತು.
12. ಯೋಬನ ವಿದ್ಯಮಾನದಲ್ಲಿ ನೋಡಿದಂತೆ, ಅಸ್ವಸ್ಥನಾದ ವ್ಯಕ್ತಿಯು ಕೆಲವೊಮ್ಮೆ ಯಾವ ಸಹಾಯವನ್ನು ಮಾಡುತ್ತಾನೆ?
12 ಯೋಬನ ವಿದ್ಯಮಾನದಲ್ಲಿ, ದೃಢವಾಗಿ ಉಳಿದವನು ಬಾಧಿತನಾದ ಅವನೇ ಆಗಿದ್ದನು. “ದೇವರ ಹಸ್ತದಿಂದ ನಾವು ಒಳ್ಳೇದನ್ನು ಹೊಂದುತ್ತೇವಷ್ಟೆ; ಕೆಟ್ಟದ್ದನ್ನು ಹೊಂದಬಾರದೋ,” ಎಂದು ಅವನು ತನ್ನ ಹೆಂಡತಿಗೆ ಕೇಳಿದನು. (ಯೋಬ 2:10) ಸಮಯಾನಂತರ ಶಿಷ್ಯ ಯಾಕೋಬನು ಯೋಬನನ್ನು ತಾಳ್ಮೆ ಮತ್ತು ಸೈರಣೆಯ ಮಹತ್ತಾದ ಮಾದರಿಯಾಗಿ ಉದಾಹರಿಸಿದ್ದು ಆಶ್ಚರ್ಯವಲ್ಲ! ಯಾಕೋಬ 5:11ರಲ್ಲಿ ನಾವು ಓದುವುದು: “ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು [“ಯೆಹೋವನು,” NW] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” ತದ್ರೀತಿಯಲ್ಲಿ ಇಂದು, ಕುಟುಂಬದ ಅಸ್ವಸ್ಥ ಸದಸ್ಯನ ಧೀರ ಮನೋಭಾವವು, ಅನೇಕ ವಿದ್ಯಮಾನಗಳಲ್ಲಿ ಮನೆವಾರ್ತೆಯಲ್ಲಿರುವ ಇತರರಿಗೆ ಒಂದು ಸಕಾರಾತ್ಮಕ ಹೊರನೋಟವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ.
13. ಗಂಭೀರ ಅಸ್ವಸ್ಥತೆಯನ್ನು ಅನುಭವಿಸುತ್ತಿರುವ ಕುಟುಂಬದಿಂದ ಯಾವ ತುಲನೆಯು ಮಾಡಲ್ಪಡಬಾರದು?
13 ಕುಟುಂಬದಲ್ಲಿ ಅಸ್ವಸ್ಥತೆಯೊಂದಿಗೆ ವ್ಯವಹರಿಸಲಿಕ್ಕಿದ್ದ ಹೆಚ್ಚಿನವರು, ಕುಟುಂಬ ಸದಸ್ಯರಿಗೆ ಆರಂಭದಲ್ಲಿ ವಾಸ್ತವಿಕತೆಗಳನ್ನು ಎದುರಿಸಲು ಕಷ್ಟವಾಗುವುದು ಅಸಾಮಾನ್ಯವಲ್ಲವೆಂದು ಒಪ್ಪುತ್ತಾರೆ. ಪರಿಸ್ಥಿತಿಯನ್ನು ಒಬ್ಬನು ವೀಕ್ಷಿಸುವ ರೀತಿಯು ಅತ್ಯಂತ ಪ್ರಾಮುಖ್ಯವೆಂದು ಸಹ ಅವರು ತಿಳಿಸುತ್ತಾರೆ. ಮನೆವಾರ್ತೆಯ ದಿನಚರಿಯಲ್ಲಿ ಬದಲಾವಣೆಗಳನ್ನು ಮತ್ತು ಸರಿಹೊಂದಿಸುವಿಕೆಗಳನ್ನು ಮಾಡುವುದು ಆರಂಭದಲ್ಲಿ ಕಷ್ಟವಾದೀತು. ಆದರೆ ಒಬ್ಬ ವ್ಯಕ್ತಿಯು ನಿಜವಾಗಿಯೂ ಪ್ರಯತ್ನ ಮಾಡುವಲ್ಲಿ, ಅವನು ಒಂದು ಹೊಸ ಸನ್ನಿವೇಶಕ್ಕೆ ಹೊಂದಿಸಿಕೊಳ್ಳಬಲ್ಲನು. ಹಾಗೆ ಮಾಡುವುದರಲ್ಲಿ, ಯಾವ ಕುಟುಂಬದಲ್ಲಿ ಅಸ್ವಸ್ಥೆಯಿಲ್ಲವೊ ಅವರ ಜೀವನವು ಹೆಚ್ಚು ಸುಲಭವೆಂದು ನೆನಸಿ, ‘ಇದು ಎಷ್ಟು ಮಾತ್ರಕ್ಕೂ ನ್ಯಾಯವಲ್ಲ’ ಎನ್ನುತ್ತಾ ನಾವು ನಮ್ಮ ಪರಿಸ್ಥಿತಿಗಳನ್ನು ಅವರದ್ದರೊಂದಿಗೆ ಹೋಲಿಸದಿರುವುದು ಪ್ರಾಮುಖ್ಯ! ಕಾರ್ಯತಃ, ಇತರರಿಗೆ ಯಾವ ಹೊರೆಗಳನ್ನು ಹೊರಲಿದೆಯೆಂದು ಯಾರೊಬ್ಬರಿಗೂ ನಿಜವಾಗಿಯೂ ಗೊತ್ತಿಲ್ಲ. ಕ್ರೈಸ್ತರೆಲ್ಲರು ಯೇಸುವಿನ ಮಾತುಗಳಲ್ಲಿ ಆದರಣೆಯನ್ನು ಕಂಡುಕೊಳ್ಳುತ್ತಾರೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.”—ಮತ್ತಾಯ 11:28.
ಆದ್ಯತೆಗಳನ್ನು ಸ್ಥಾಪಿಸುವುದು
14. ಯೋಗ್ಯ ಆದ್ಯತೆಗಳನ್ನು ಹೇಗೆ ಸ್ಥಾಪಿಸಸಾಧ್ಯವಿದೆ?
14 ಗಂಭೀರವಾದ ಅಸ್ವಸ್ಥತೆಯ ಎದುರಿನಲ್ಲಿ, ಈ ಪ್ರೇರಿತ ಮಾತುಗಳನ್ನು ಒಂದು ಕುಟುಂಬವು ನೆನಪಿನಲ್ಲಿಡುವುದು ಪ್ರಯೋಜನಕರವಾಗಿದೆ: “ಬಹು ಮಂದಿ ಆಲೋಚನಾಪರರಿರುವಲ್ಲಿ [ಉದ್ದೇಶಗಳು] ಈಡೇರುವವು.” (ಜ್ಞಾನೋಕ್ತಿ 15:22) ಕುಟುಂಬ ಸದಸ್ಯರು ಒಂದುಗೂಡಿ ಒಂದು ಅಸ್ವಸ್ಥತೆಯಿಂದ ಉಂಟುಮಾಡಲ್ಪಟ್ಟ ಪರಿಸ್ಥಿತಿಯನ್ನು ಚರ್ಚಿಸುವುದು ಸಾಧ್ಯವೊ? ಪ್ರಾರ್ಥನಾಪೂರ್ವಕವಾಗಿ ಹಾಗೆ ಮಾಡಿ, ಮಾರ್ಗದರ್ಶನಕ್ಕಾಗಿ ದೇವರ ವಾಕ್ಯದ ಕಡೆಗೆ ತಿರುಗಿಕೊಳ್ಳುವುದು ಖಂಡಿತವಾಗಿಯೂ ಸೂಕ್ತವಾಗಿರುವುದು. (ಕೀರ್ತನೆ 25:4) ಅಂತಹ ಒಂದು ಚರ್ಚೆಯಲ್ಲಿ ಏನು ಪರಿಗಣಿಸಲ್ಪಡಬೇಕು? ಒಳ್ಳೇದು, ವೈದ್ಯಕೀಯ, ಹಣಕಾಸಿನ, ಮತ್ತು ಕೌಟುಂಬಿಕ ನಿರ್ಣಯಗಳನ್ನು ಮಾಡಲಿಕ್ಕಿರುತ್ತದೆ. ಮುಖ್ಯ ಆರೈಕೆಯನ್ನು ಒದಗಿಸುವವರಾರು? ಆ ಆರೈಕೆಯನ್ನು ಬೆಂಬಲಿಸಲು ಕುಟುಂಬವು ಹೇಗೆ ಸಹಕರಿಸಬಲ್ಲದು? ಮಾಡಲ್ಪಟ್ಟ ಏರ್ಪಾಡುಗಳು ಕುಟುಂಬದ ಪ್ರತಿಯೊಬ್ಬ ಸದಸ್ಯನನ್ನು ಹೇಗೆ ಪ್ರಭಾವಿಸುವವು? ಮುಖ್ಯ ಆರೈಕೆಗಾರನ ಆತ್ಮಿಕ ಮತ್ತು ಇತರ ಅಗತ್ಯಗಳು ಹೇಗೆ ನೋಡಿಕೊಳ್ಳಲ್ಪಡುವವು?
15. ಗಂಭೀರ ಅಸ್ವಸ್ಥತೆಯನ್ನು ಅನುಭವಿಸುತ್ತಿರುವ ಕುಟುಂಬಗಳಿಗಾಗಿ ಯೆಹೋವನು ಯಾವ ಬೆಂಬಲವನ್ನು ಒದಗಿಸುತ್ತಾನೆ?
15 ಯೆಹೋವನ ನಿರ್ದೇಶನಕ್ಕಾಗಿ ಶ್ರದ್ಧೆಯಿಂದ ಪ್ರಾರ್ಥಿಸುವುದು, ಆತನ ವಾಕ್ಯವನ್ನು ಮನನ ಮಾಡುವುದು, ಮತ್ತು ಬೈಬಲಿನಲ್ಲಿ ಸೂಚಿಸಲಾದ ಮಾರ್ಗವನ್ನು ಧೈರ್ಯದಿಂದ ಪಾಲಿಸುತ್ತಿರುವುದು ಆಗಾಗ ನಮ್ಮ ಅಪೇಕ್ಷೆಗಳಿಗೆ ಮೀರಿದ ಆಶೀರ್ವಾದಗಳಲ್ಲಿ ಪರಿಣಮಿಸುತ್ತವೆ. ಅಸ್ವಸ್ಥನಾಗಿರುವ ಕುಟುಂಬ ಸದಸ್ಯನೊಬ್ಬನ ರೋಗವು ಯಾವಾಗಲೂ ತಗ್ಗದೆ ಇರಬಹುದು. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಯೆಹೋವನ ಮೇಲೆ ಆತುಕೊಳ್ಳುವುದು ಯಾವಾಗಲೂ ಅತ್ಯುತ್ತಮ ಫಲಿತಾಂಶಕ್ಕೆ ನಡಿಸುತ್ತದೆ. (ಕೀರ್ತನೆ 55:22) ಕೀರ್ತನೆಗಾರನು ಬರೆದುದು: “ಯೆಹೋವನೇ, . . . ನಿನ್ನ ಕೃಪೆಯು ನನಗೆ ಆಧಾರವಾಯಿತು. ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತನೆ 94:18, 19; ಕೀರ್ತನೆ 63:6-8ನ್ನು ಸಹ ನೋಡಿ.
ಮಕ್ಕಳಿಗೆ ಸಹಾಯ ಮಾಡುವುದು
16, 17. ಒಬ್ಬ ರಕ್ತಸಂಬಂಧಿಯ ಅಸ್ವಸ್ಥತೆಯನ್ನು ಎಳೆಯಮಕ್ಕಳೊಂದಿಗೆ ಚರ್ಚಿಸುವಾಗ ಯಾವ ವಿಷಯಗಳನ್ನು ತಿಳಿಸಸಾಧ್ಯವಿದೆ?
16 ಗಂಭೀರ ಅಸ್ವಸ್ಥತೆಯು ಕುಟುಂಬದಲ್ಲಿ ಮಕ್ಕಳಿಗೆ ಸಮಸ್ಯೆಗಳನ್ನು ಉಂಟುಮಾಡಬಲ್ಲದು. ಎದ್ದಿರುವ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಹಾಯ ಮಾಡಲು ಅವರೇನು ಮಾಡಬಹುದೆಂದು ತಿಳಿದುಕೊಳ್ಳಲು ಹೆತ್ತವರು ಮಕ್ಕಳಿಗೆ ಸಹಾಯ ಮಾಡುವುದು ಪ್ರಾಮುಖ್ಯವಾಗಿದೆ. ಅಸ್ವಸ್ಥನಾದವನು ಮಗುವಾಗಿರುವಲ್ಲಿ, ಅಸ್ವಸ್ಥನು ಪಡೆಯುತ್ತಿರುವ ಹೆಚ್ಚಿನ ಗಮನ ಮತ್ತು ಆರೈಕೆಯು, ಇತರ ಮಕ್ಕಳು ಕಡಿಮೆ ಪ್ರೀತಿಸಲ್ಪಡುತ್ತಾರೆಂಬ ಅರ್ಥದಿಂದಲ್ಲವೆಂಬುದನ್ನು ಅವನ ಸೋದರ ಸೋದರಿಯರು ತಿಳಿಯುವಂತೆ ಸಹಾಯ ಮಾಡಲ್ಪಡಬೇಕು. ಕೋಪ ಅಥವಾ ಪ್ರತಿಸ್ಪರ್ಧೆಯನ್ನು ವಿಕಸಿಸುವಂತೆ ಬಿಡುವ ಬದಲಿಗೆ, ಅಸ್ವಸ್ಥದಿಂದಾಗಿ ಉಂಟಾದ ಸನ್ನಿವೇಶವನ್ನು ನಿರ್ವಹಿಸುವುದರಲ್ಲಿ ಅವರು ಸಹಕರಿಸುವಾಗ, ಒಬ್ಬರಿಗೊಬ್ಬರು ಒಂದು ಆಪ್ತ ಬಂಧವನ್ನು ರೂಪಿಸುವಂತೆ ಮತ್ತು ನಿಜ ಪ್ರೀತಿಯನ್ನು ಹೊಂದಿರುವಂತೆ ಹೆತ್ತವರು ಆ ಇತರ ಮಕ್ಕಳಿಗೆ ಸಹಾಯ ಮಾಡಬಲ್ಲರು.
17 ರೋಗಸ್ಥಿತಿಗಳ ದೀರ್ಘವಾದ ಅಥವಾ ಜಟಿಲವಾದ ವಿವರಣೆಗಳಿಗೆ ಬದಲಾಗಿ, ಹೆತ್ತವರು ಅವರ ಭಾವನೆಗಳಿಗೆ ಹಿಡಿಸುವಂತೆ ಮಾತಾಡುವುದಾದರೆ, ಎಳೆಯ ಮಕ್ಕಳು ಸಾಮಾನ್ಯವಾಗಿ ಹೆಚ್ಚು ಸುಲಭವಾಗಿ ಪ್ರತಿಕ್ರಿಯಿಸುವರು. ಆದುದರಿಂದ ಅಸ್ವಸ್ಥನಾದ ಕುಟುಂಬ ಸದಸ್ಯನೊಬ್ಬನು ಏನು ಅನುಭವಿಸುತ್ತಿದ್ದಾನೆಂಬ ತುಸು ವಿಚಾರವನ್ನು ಅವರಿಗೆ ತಿಳಿಯಪಡಿಸಸಾಧ್ಯವಿದೆ. ಅನಾರೋಗ್ಯವು ಅಸ್ವಸ್ಥನನ್ನು, ತಾವು ಸ್ವತಃ ಮಾಮೂಲಾಗಿ ತೆಗೆದುಕೊಳ್ಳುವ ಅನೇಕ ವಿಷಯಗಳನ್ನು ಮಾಡುವುದರಿಂದ ಹೇಗೆ ತಡೆಯುತ್ತದೆಂದು ಆರೋಗ್ಯವಂತ ಮಕ್ಕಳು ಕಂಡರೆ, ಅವರು ಹೆಚ್ಚು “ಸೋದರಿಕೆಯ ಮಮತೆ” ಮತ್ತು “ಕೋಮಲವಾದ ಕನಿಕರ”ವುಳ್ಳವರಾಗಿರುವುದು ಸಂಭವನೀಯ.—1 ಪೇತ್ರ 3:8, NW.
18. ಅಸ್ವಸ್ಥವು ಉಂಟುಮಾಡಿದ ಸಮಸ್ಯೆಗಳನ್ನು ತಿಳಿದುಕೊಳ್ಳಲು ದೊಡ್ಡ ಮಕ್ಕಳಿಗೆ ಹೇಗೆ ಸಹಾಯ ಮಾಡಸಾಧ್ಯವಿದೆ, ಮತ್ತು ಇದು ಅವರಿಗೆ ಹೇಗೆ ಪ್ರಯೋಜನವಾದೀತು?
18 ಒಂದು ಕಷ್ಟದ ಸನ್ನಿವೇಶವು ಅಸ್ತಿತ್ವದಲ್ಲಿದೆ ಮತ್ತು ಕುಟುಂಬದ ಪ್ರತಿಯೊಬ್ಬನಿಂದ ಅದು ತ್ಯಾಗಗಳನ್ನು ಅವಶ್ಯಪಡುತ್ತದೆಂದು ತಿಳಿದುಕೊಳ್ಳಲು ದೊಡ್ಡ ಮಕ್ಕಳಿಗೆ ಸಹಾಯ ಕೊಡಲ್ಪಡಬೇಕು. ಡಾಕ್ಟರರ ರುಸುಮು ಮತ್ತು ಔಷಧೋಪಚಾರದ ಖರ್ಚು ತೆರಲಿರುವುದರಿಂದ, ಇತರ ಮಕ್ಕಳಿಗೆ ತಾವು ಇಷ್ಟೈಸುವಂತೆ ಒದಗಿಸಲು ಹೆತ್ತವರಿಗೆ ಸಾಧ್ಯವಾಗಲಿಕ್ಕಿಲ್ಲ. ಮಕ್ಕಳು ಇದಕ್ಕಾಗಿ ಮುನಿಯುವರೊ ಮತ್ತು ತಾವು ವಂಚಿಸಲ್ಪಡುತ್ತಿದ್ದೇವೆಂಬ ಭಾವವನ್ನು ತಾಳುವರೊ? ಅಥವಾ ಸನ್ನಿವೇಶವನ್ನು ಅರಿತುಕೊಂಡು ಅವರು ಬೇಕಾದ ತ್ಯಾಗಗಳನ್ನು ಮಾಡಲು ಸಿದ್ಧರಾಗಿರುವರೊ? ಹೆಚ್ಚಿನದ್ದು ಚರ್ಚಿಸಲ್ಪಡುವ ವಿಧಾನದ ಮೇಲೆ ಮತ್ತು ಕುಟುಂಬದಲ್ಲಿ ಹುಟ್ಟಿಸಲ್ಪಟ್ಟ ಆತ್ಮದ ಮೇಲೆ ಆತುಕೊಂಡಿರುತ್ತದೆ. ಅನೇಕ ಕುಟುಂಬಗಳಲ್ಲಿ ಕುಟುಂಬ ಸದಸ್ಯನೊಬ್ಬನ ಅಸೌಖ್ಯವು, ಪೌಲನ ಸಲಹೆಯನ್ನು ಅನುಸರಿಸುವಂತೆ ಮಕ್ಕಳಿಗೆ ತರಬೇತು ಮಾಡುವುದರಲ್ಲಿ ಸಹಾಯ ಮಾಡಿದೆ: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ, ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.”—ಫಿಲಿಪ್ಪಿ 2:3, 4.
ವೈದ್ಯಕೀಯ ಚಿಕಿತ್ಸೆಯನ್ನು ವೀಕ್ಷಿಸುವ ವಿಧ
19, 20. (ಎ) ಕುಟುಂಬ ಸದಸ್ಯನೊಬ್ಬನು ಅಸ್ವಸ್ಥನಾಗುವಾಗ ಕುಟುಂಬ ತಲೆಗಳು ಯಾವ ಜವಾಬ್ದಾರಿಗಳನ್ನು ಹೊರುತ್ತಾರೆ? (ಬಿ) ವೈದ್ಯಕೀಯ ಪಠ್ಯಪುಸ್ತಕವಲ್ಲವಾದರೂ, ಅಸ್ವಸ್ಥತೆಯನ್ನು ನಿರ್ವಹಿಸುವುದರಲ್ಲಿ ಬೈಬಲು ಹೇಗೆ ಮಾರ್ಗದರ್ಶನವನ್ನು ಒದಗಿಸುತ್ತದೆ?
19 ಸಮತೆಯ ಕ್ರೈಸ್ತರು ವೈದ್ಯಕೀಯ ಚಿಕಿತ್ಸೆಯನ್ನು, ಅದು ಎಷ್ಟರ ತನಕ ದೇವರ ನಿಯಮಕ್ಕೆ ವಿರುದ್ಧವಾಗಿ ಹೋಗುವುದಿಲ್ಲವೊ ಅಷ್ಟರ ತನಕ ಆಕ್ಷೇಪಿಸುವುದಿಲ್ಲ. ಅವರ ಕುಟುಂಬದ ಸದಸ್ಯನೊಬ್ಬನು ಅಸ್ವಸ್ಥನಾಗುವಾಗ, ಬಾಧಿತನ ಕಷ್ಟಾನುಭವವನ್ನು ನೀಗಿಸುವುದಕ್ಕೆ ಸಹಾಯವನ್ನು ಕೋರಲು ಅವರು ಆತುರಪಡುತ್ತಾರೆ. ಆದರೂ, ತೂಗಿನೋಡಬೇಕಾದ ಪ್ರತಿವಿರುದ್ಧವಾದ ವೈದ್ಯಕೀಯ ಅಭಿಪ್ರಾಯಗಳು ಇದ್ದಾವು. ಅದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹೊಸ ರೋಗಗಳು ಮತ್ತು ಅಸ್ವಸ್ಥತೆಗಳು ಅನಿರೀಕ್ಷಿತವಾಗಿ ಸಂಭವಿಸುತ್ತಿವೆ ಮತ್ತು ಇವುಗಳಲ್ಲಿ ಹೆಚ್ಚಿನವುಗಳಿಗೆ ಸಾಮಾನ್ಯವಾದ ಯಾವ ಸ್ವೀಕೃತ ಔಷಧ ವಿಧಾನವೂ ಇರುವುದಿಲ್ಲ. ಕೆಲವೊಮ್ಮೆ ನಿಷ್ಕೃಷ್ಟವಾದ ರೋಗನಿರ್ಣಯಗಳನ್ನು ಪಡೆದುಕೊಳ್ಳುವುದು ಸಹ ಕಷ್ಟಕರವಾಗಿರುತ್ತದೆ. ಹಾಗಾದರೆ ಕ್ರೈಸ್ತನೊಬ್ಬನು ಏನು ಮಾಡಬೇಕು?
20 ಬೈಬಲ್ ಲೇಖಕನೊಬ್ಬನು ವೈದ್ಯನಾಗಿದ್ದರೂ ಮತ್ತು ಅಪೊಸ್ತಲ ಪೌಲನು ತನ್ನ ಮಿತ್ರನಾದ ತಿಮೊಥೆಯನಿಗೆ ಸಹಾಯಕರ ವೈದ್ಯಕೀಯ ಬುದ್ಧಿವಾದವನ್ನು ಕೊಟ್ಟರೂ, ಶಾಸ್ತ್ರಗಳು ಒಂದು ನೈತಿಕ ಮತ್ತು ಆತ್ಮಿಕ ಮಾರ್ಗದರ್ಶಕವಾಗಿವೆ, ಒಂದು ವೈದ್ಯಕೀಯ ಪಠ್ಯಪುಸ್ತಕವಲ್ಲ. (ಕೊಲೊಸ್ಸೆ 4:14; 1 ತಿಮೊಥೆಯ 5:23) ಆದಕಾರಣ, ವೈದ್ಯಕೀಯ ಚಿಕಿತ್ಸೆಯ ವಿಷಯಗಳಲ್ಲಿ ಕ್ರೈಸ್ತ ಕುಟುಂಬ ತಲೆಗಳು ತಮ್ಮ ಸ್ವಂತ ಸಮತೆಯ ನಿರ್ಣಯಗಳನ್ನು ಮಾಡಬೇಕಾಗಿದೆ. ಪ್ರಾಯಶಃ ಒಂದಕ್ಕಿಂತ ಹೆಚ್ಚು ನುರಿತ ಅಭಿಪ್ರಾಯವನ್ನು ಪಡೆದುಕೊಳ್ಳುವ ಅಗತ್ಯ ತಮಗಿದೆಯೆಂದು ಅವರು ಭಾವಿಸಾರು. (ಹೋಲಿಸಿ ಜ್ಞಾನೋಕ್ತಿ 18:17.) ತಮ್ಮ ಅಸ್ವಸ್ಥ ಕುಟುಂಬ ಸದಸ್ಯನಿಗೆ ಲಭ್ಯವಿರುವ ಅತ್ಯುತ್ತಮ ಸಹಾಯವನ್ನು ಕೊಡಲು ಅವರು ಖಂಡಿತವಾಗಿಯೂ ಬಯಸುವರು, ಮತ್ತು ಹೆಚ್ಚಿನವರು ಇದನ್ನು ಕ್ರಮದ ವೈದ್ಯರಿಂದ ಹುಡುಕುತ್ತಾರೆ. ಕೆಲವರಿಗೆ ಪರ್ಯಾಯ ಆರೋಗ್ಯ ಔಷಧೋಪಚಾರದಲ್ಲಿ ಹೆಚ್ಚು ಆರಾಮವೆನಿಸುತ್ತದೆ. ಇದು ಸಹ ಒಂದು ವ್ಯಕ್ತಿಪರ ನಿರ್ಣಯ. ಆದರೂ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವಾಗ, ಕ್ರೈಸ್ತರು ‘ದೇವರ ವಾಕ್ಯವನ್ನು ತಮ್ಮ ಕಾಲಿಗೆ ದೀಪವೂ ದಾರಿಗೆ ಬೆಳಕೂ ಆಗಿ’ ಇರಿಸುವುದನ್ನು ಬಿಡುವುದಿಲ್ಲ. (ಕೀರ್ತನೆ 119:105) ಬೈಬಲಿನಲ್ಲಿ ಇಡಲ್ಪಟ್ಟ ಮಾರ್ಗದರ್ಶಕಗಳನ್ನು ಅನುಸರಿಸುವುದನ್ನು ಅವರು ಮುಂದುವರಿಸುತ್ತಾರೆ. (ಯೆಶಾಯ 55:8, 9) ಹೀಗೆ ಅವರು ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ರೋಗನಿರ್ಣಯ ವಿಧಾನಗಳಿಂದ ದೂರವಿರುತ್ತಾರೆ, ಮತ್ತು ಬೈಬಲಿನ ಮೂಲತತ್ವಗಳನ್ನು ಉಲ್ಲಂಘನೆ ಮಾಡುವ ಔಷಧೋಪಚಾರಗಳನ್ನು ವರ್ಜಿಸುತ್ತಾರೆ.—ಕೀರ್ತನೆ 36:9; ಅ. ಕೃತ್ಯಗಳು 15:28, 29; ಪ್ರಕಟನೆ 21:8.
21, 22. ಏಷಿಯಾದ ಒಬ್ಬ ಸ್ತ್ರೀಯು ಒಂದು ಬೈಬಲ್ ಮೂಲತತ್ವದ ಕುರಿತಾಗಿ ವಿವೇಚಿಸಿದ್ದು ಹೇಗೆ, ಮತ್ತು ಅವಳು ಮಾಡಿದ ನಿರ್ಣಯವು ಅವಳ ಸನ್ನಿವೇಶದಲ್ಲಿ ಸರಿಯಾದುದೆಂದು ಹೇಗೆ ಸಿದ್ಧವಾಯಿತು?
21 ಏಷಿಯಾದ ಒಬ್ಬ ಯುವ ಸ್ತ್ರೀಯ ವಿದ್ಯಮಾನವನ್ನು ಪರಿಗಣಿಸಿರಿ. ಯೆಹೋವನ ಸಾಕ್ಷಿಗಳಲ್ಲೊಬ್ಬರೊಂದಿಗೆ ಅಭ್ಯಾಸಮಾಡಿದ ಪರಿಣಾಮವಾಗಿ ಬೈಬಲಿನ ಕುರಿತು ಆಕೆ ಕಲಿಯತೊಡಗಿದ ಸ್ವಲ್ಪ ಸಮಯದಲ್ಲೇ, ಅವಳು ಅಕಾಲಿಕವಾಗಿ ಕೇವಲ 1,470 ಗ್ರ್ಯಾಮ್ಗಳಷ್ಟು ತೂಕದ ಒಂದು ಹೆಣ್ಣು ಕೂಸನ್ನು ಹಡೆದಳು. ಕೂಸು ತೀರಾ ಕುಂಠಿತಗೊಂಡು, ಎಂದೂ ನಡೆಯಶಕ್ತವಾಗದೆಂದು ಒಬ್ಬ ವೈದ್ಯರು ಹೇಳಿದಾಗ, ಆ ಸ್ತ್ರೀಯು ಬಹಳ ದುಃಖಿತಳಾದಳು. ಒಂದು ಅನಾಥಾಲಯಕ್ಕೆ ಮಗುವನ್ನು ಬಿಟ್ಟುಕೊಡುವಂತೆ ಅವರು ಅವಳಿಗೆ ಸೂಚಿಸಿದರು. ಅವಳ ಗಂಡನು ವಿಷಯದ ಕುರಿತು ಅನಿಶ್ಚಿತನಾಗಿದ್ದನು. ಅವಳು ಯಾರ ಕಡೆಗೆ ತಿರುಗಸಾದ್ಯವಿತ್ತು?
22 ಅವಳು ಹೇಳುವುದು: “‘ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ’ ಎಂಬುದನ್ನು ಬೈಬಲಿನಿಂದ ಕಲಿತ ನೆನಪು ನನಗಿದೆ.” (ಕೀರ್ತನೆ 127:3) ಈ “ಸ್ವಾಸ್ತ್ಯವನ್ನು” ಮನೆಗೊಯ್ದು ಅವಳ ಆರೈಕೆಮಾಡುವಂತೆ ಆಕೆ ನಿರ್ಣಯಿಸಿದಳು. ಮೊದಮೊದಲು ವಿಷಯಗಳು ಕಷ್ಟಕರವಾಗಿದ್ದವು, ಆದರೆ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯ ಕ್ರೈಸ್ತ ಸ್ನೇಹಿತರ ಸಹಾಯದಿಂದ, ಆ ಸ್ತ್ರೀಯು ನಿರ್ವಹಿಸಲು ಮತ್ತು ಮಗುವಿಗೆ ಬೇಕಾದ ವಿಶೇಷ ಬೆಂಬಲವನ್ನು ಒದಗಿಸಲು ಶಕ್ತಳಾದಳು. ಹನ್ನೆರಡು ವರ್ಷಗಳ ಅನಂತರ, ಆ ಮಗು ರಾಜ್ಯ ಸಭಾಗೃಹದ ಕೂಟಗಳಿಗೆ ಹೋಗುತ್ತಿತ್ತು ಮತ್ತು ಅಲ್ಲಿನ ಎಳೆಯ ಮಕ್ಕಳ ಸಹವಾಸದಲ್ಲಿ ಆನಂದಿಸುತ್ತಿತ್ತು. ತಾಯಿ ಹೇಳಿಕೆಯನ್ನಿತ್ತದ್ದು: “ಸರಿಯಾದುದನ್ನು ಮಾಡುವಂತೆ ಬೈಬಲಿನ ಮೂಲತತ್ವಗಳು ನನ್ನನ್ನು ಪ್ರೇರಿಸಿದುದಕ್ಕಾಗಿ ನಾನು ತುಂಬ ಕೃತಜ್ಞಳು. ಯೆಹೋವನ ಮುಂದೆ ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ಮತ್ತು ಜೀವಮಾನವಿಡೀ ಇರುತ್ತಿದ್ದ ವಿಷಾದದಿಂದ ಬಾಧಿಸಲ್ಪಡದಿರಲು ಬೈಬಲ್ ನನಗೆ ಸಹಾಯ ಮಾಡಿತು.”
23. ರೋಗಿಗಳಿಗೆ ಮತ್ತು ಅವರ ಆರೈಕೆಯನ್ನು ಮಾಡುವವರಿಗೆ ಬೈಬಲು ಯಾವ ಸಾಂತ್ವನವನ್ನು ಕೊಡುತ್ತದೆ?
23 ಅಸ್ವಸ್ಥತೆಯು ಸದಾ ನಮ್ಮೊಂದಿಗಿರದು. “ಯಾವ ನಿವಾಸಿಯೂ ತಾನು ಅಸ್ವಸ್ಥನೆಂದು” ಹೇಳದ ಒಂದು ಸಮಯಕ್ಕೆ ಪ್ರವಾದಿ ಯೆಶಾಯನು ಮುನ್ಸೂಚಿಸಿದನು. (ಯೆಶಾಯ 33:24) ತ್ವರಿತಗತಿಯಲ್ಲಿ ಸಮೀಪಿಸುತ್ತಿರುವ ನೂತನ ಲೋಕದಲ್ಲಿ ಆ ವಾಗ್ದಾನವು ನೆರವೇರಲಿರುವುದು. ಆ ತನಕವಾದರೋ ನಾವು ಅಸ್ವಸ್ಥತೆ ಮತ್ತು ಮರಣದೊಂದಿಗೆ ಜೀವಿಸಲೇಬೇಕು. ಸಂತೋಷಕರವಾಗಿ, ದೇವರ ವಾಕ್ಯವು ನಮಗೆ ಮಾರ್ಗದರ್ಶನ ಮತ್ತು ಸಹಾಯವನ್ನು ಕೊಡುತ್ತದೆ. ಬೈಬಲು ನೀಡುವಂತಹ ಮೂಲಭೂತ ನಡವಳಿಕೆಯ ನಿಯಮಗಳು ಶಾಶ್ವತವಾದವುಗಳು, ಮತ್ತು ಅವು ಅಪರಿಪೂರ್ಣ ಮಾನವರ ಸದಾ ಬದಲಾಗುತ್ತಿರುವ ಅಭಿಪ್ರಾಯಗಳನ್ನು ಮೀರಿರುತ್ತವೆ. ಆದುದರಿಂದ ಹೀಗೆಂದು ಬರೆದ ಕೀರ್ತನೆಗಾರನೊಂದಿಗೆ ಒಬ್ಬ ವಿವೇಕಿಯಾದ ವ್ಯಕ್ತಿಯು ಸಮ್ಮತಿಸುತ್ತಾನೆ: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. . . . ಯೆಹೋವನ ವಿಧಿಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. . . . ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.”—ಕೀರ್ತನೆ 19:7, 9, 11.