ಯೆಹೋವನ ವಾಕ್ಯವು ಸಜೀವವಾದದ್ದು
ಕೀರ್ತನೆ ಪುಸ್ತಕದ ದ್ವಿತೀಯ ಭಾಗದ ಮುಖ್ಯಾಂಶಗಳು
ಯೆಹೋವನ ಸೇವಕರಾದ ನಮಗೆ ಪರೀಕ್ಷೆಗಳು ಮತ್ತು ಕಷ್ಟಸಂಕಟಗಳು ಎದುರಾಗುತ್ತವೆ ಎಂಬುದನ್ನು ನಾವು ತಿಳಿದಿದ್ದೇವೆ. ಅಪೊಸ್ತಲ ಪೌಲನ ಮಾತುಗಳಿಗನುಸಾರ, “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ದೇವರಿಗೆ ನಮ್ಮ ಸಮಗ್ರತೆಯನ್ನು ತೋರಿಸುತ್ತಾ, ಪರೀಕ್ಷೆಗಳನ್ನು ಮತ್ತು ಹಿಂಸೆಗಳನ್ನು ತಾಳಿಕೊಳ್ಳಲು ನಮಗೆ ಯಾವುದು ಸಹಾಯಮಾಡುವುದು?
ಐದು ಭಾಗಗಳನ್ನು ಹೊಂದಿರುವ ಕೀರ್ತನೆ ಪುಸ್ತಕದ ಎರಡನೇ ಭಾಗವು ಇದಕ್ಕೆ ಬೇಕಾದ ಸಹಾಯವನ್ನು ನೀಡುತ್ತದೆ. ನಾವು ಕಷ್ಟಸಂಕಟಗಳನ್ನು ತಾಳಿಕೊಳ್ಳುವುದರಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಯೆಹೋವನ ಮೇಲೆ ಸಂಪೂರ್ಣ ಭರವಸೆಯನ್ನಿಟ್ಟು ಆತನಲ್ಲಿ ಅವಲಂಬಿಸಲು ಕಲಿತುಕೊಳ್ಳಬೇಕೆಂದು ಕೀರ್ತನೆ 42ರಿಂದ 72 ತೋರಿಸುತ್ತದೆ. ಇದು ನಿಜವಾಗಿಯೂ ಒಂದು ಅತ್ಯುತ್ತಮ ಸಲಹೆಯಾಗಿದೆ. ಬೈಬಲಿನ ಇತರ ಪುಸ್ತಕಗಳಂತೆ, ಕೀರ್ತನೆ ಪುಸ್ತಕದ ಎರಡನೇ ಭಾಗದಲ್ಲಿರುವ ಸಂದೇಶವು ಸಹ ಇಂದಿಗೂ ‘ಸಜೀವವಾಗಿದ್ದು, ಕಾರ್ಯಸಾಧಕವಾಗಿದೆ.’—ಇಬ್ರಿಯ 4:12.
ಯೆಹೋವನು ನಮ್ಮ “ಆಶ್ರಯದುರ್ಗವಾಗಿದ್ದಾನೆ”
ಒಬ್ಬ ಲೇವಿಯನು ದೇಶಾಂತರದಲ್ಲಿದ್ದಾನೆ. ದೇವರನ್ನು ಆರಾಧಿಸುವ ಸಲುವಾಗಿ ಆತನ ಮಂದಿರಕ್ಕೆ ಹೋಗಲು ಅಸಾಧ್ಯವಾಗಿರುವ ಕಾರಣ ದುಃಖಿತನಾಗಿರುವ ಅವನು ತನ್ನನ್ನು ಸಮಾಧಾನಪಡಿಸಿಕೊಳ್ಳುತ್ತಾ ಹೀಗೆ ಹೇಳುತ್ತಾನೆ: “ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು! ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು.” (ಕೀರ್ತನೆ 42:5, 11; 43:5) ಪದೇ ಪದೇ ಪುನರಾವರ್ತಿಸುವ ಈ ವಚನವು ಕೀರ್ತನೆ 42 ಮತ್ತು 43ರಲ್ಲಿರುವ ಮೂರು ಸಾಲನ್ನು ಒಂದು ಪದ್ಯವಾಗಿ ಒಟ್ಟುಗೂಡಿಸುತ್ತದೆ. ಕೀರ್ತನೆ 44, ಬಹುಶಃ ರಾಜ ಹಿಜ್ಕೀಯನ ದಿನಗಳಲ್ಲಿ ಅಶ್ಶೂರ್ಯರ ದಾಳಿಯ ಬೆದರಿಕೆಯಿಂದಾಗಿ ಸಂಕಷ್ಟದಲ್ಲಿದ್ದ ಜನಾಂಗವಾದ ಯೆಹೂದದ ಪರವಾಗಿ ಮಾಡಲ್ಪಟ್ಟ ಬಿನ್ನಹವಾಗಿದೆ.
ರಾಜ ವಿವಾಹಕ್ಕೆ ಸಂಬಂಧಿಸಿದ ಗೀತೆಯಾಗಿರುವ 45ನೇ ಕೀರ್ತನೆಯು ಮೆಸ್ಸೀಯ ರಾಜನಿಗೆ ಪ್ರವಾದನಾತ್ಮಕವಾಗಿ ಸೂಚಿಸುತ್ತದೆ. ನಂತರದ ಮೂರು ಕೀರ್ತನೆಗಳು ಯೆಹೋವನನ್ನು “ಆಶ್ರಯದುರ್ಗ,” “ಭೂಲೋಕಕ್ಕೆಲ್ಲಾ ಅಧಿರಾಜ” ಮತ್ತು “ಭದ್ರವಾದ ಬುರುಜು” ಎಂಬುದಾಗಿ ಚಿತ್ರಿಸುತ್ತದೆ. (ಕೀರ್ತನೆ 46:1; 47:2; 48:3) ಯಾವ ಮನುಷ್ಯನೂ ‘ತನ್ನ ಸಹೋದರನಿಗೆ ಈಡನ್ನು ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು’ ಎಂಬುದನ್ನು ಕೀರ್ತನೆ ಪುಸ್ತಕವು ಬಹಳ ಸ್ಪಷ್ಟವಾಗಿ ತೋರಿಸಿಕೊಡುತ್ತದೆ. (ಕೀರ್ತನೆ 49:7) ಈ ಎರಡನೇ ವಿಭಾಗದ ಮೊದಲ ಎಂಟು ಕೀರ್ತನೆಗಳನ್ನು ಕೋರಹನ ಮಕ್ಕಳು ರಚಿಸಿದರು. ಎರಡನೇ ವಿಭಾಗದ ಒಂಬತ್ತನೇ ಕೀರ್ತನೆಯಾದ 50ನೇ ಕೀರ್ತನೆಯನ್ನು ಆಸಾಫನು ರಚಿಸಿದನು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
44:19—ದೇಶವನ್ನು “ನರಿಗಳಿರುವ ಕಾಡನ್ನಾಗಿ” ಮಾಡುವುದರ ಅರ್ಥವೇನು? ಪ್ರಾಯಶಃ ಇಲ್ಲಿ ಕೀರ್ತನೆಗಾರನು ದೇಶವನ್ನು ಒಂದು ಯುದ್ಧಭೂಮಿಗೆ ಸೂಚಿಸಿ ಮಾತಾಡುತ್ತಿರಬಹುದು. ಯುದ್ಧದಲ್ಲಿ ಕೊಲ್ಲಲ್ಪಟ್ಟವರ ದೇಹಗಳನ್ನು ನರಿಗಳು ತಿನ್ನಲು ಬರುವುದರಿಂದ ಆ ದೇಶವು ನರಿಗಳಿರುವ ಕಾಡಾಗಿ ಮಾರ್ಪಡುವುದು.
45:13, 14—“ಅರಸನ ಬಳಿಗೆ ಬರುವ . . . ರಾಜಕುಮಾರಿ” ಯಾರಾಗಿದ್ದಾಳೆ? ಅವಳು ‘ಸರ್ವಜನಾಂಗಗಳ ಅರಸನಾದ’ ಯೆಹೋವ ದೇವರ ಮಗಳಾಗಿದ್ದಾಳೆ. (ಪ್ರಕಟನೆ 15:3) ಯೆಹೋವನು ತನ್ನ ಆತ್ಮದಿಂದ ಅಭಿಷೇಕಿಸುವ ಮೂಲಕ ತನ್ನ ಮಕ್ಕಳಾಗಿ ದತ್ತುತೆಗೆದುಕೊಂಡಿರುವ 1,44,000 ಮಂದಿ ಕ್ರೈಸ್ತರ ಮಹಿಮಾಭರಿತ ಸಭೆಯನ್ನು ಅವಳು ಪ್ರತಿನಿಧಿಸುತ್ತಾಳೆ. (ರೋಮಾಪುರ 8:16) ಯೆಹೋವನ ಈ “ಕುಮಾರಿ,” “ತನ್ನ ಗಂಡನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ” ಶೃಂಗರಿಸಲ್ಪಟ್ಟು, ಮೆಸ್ಸೀಯ ರಾಜನಾದ ತನ್ನ ಮದಲಿಂಗನ ಬಳಿಗೆ ಬರುವಳು.—ಪ್ರಕಟನೆ 21:2.
45:14ಬಿ, 15—‘ಕನ್ಯೆಯರು’ ಯಾರನ್ನು ಪ್ರತಿನಿಧಿಸುತ್ತಾರೆ? ಅಭಿಷಿಕ್ತ ಉಳಿಕೆಯವರೊಂದಿಗೆ ಸೇರಿ, ಅವರನ್ನು ಬೆಂಬಲಿಸುವ ಸತ್ಯಾರಾಧಕರ ‘ಮಹಾ ಸಮೂಹವನ್ನು’ ಪ್ರತಿನಿಧಿಸುತ್ತಾರೆ. “ಮಹಾ ಹಿಂಸೆಯನ್ನು ಅನುಭವಿಸಿ” ಪಾರಾಗಿ ಬಂದವರಾದ ಇವರು ಮೆಸ್ಸೀಯ ರಾಜನ ವಿವಾಹವು ಸ್ವರ್ಗದಲ್ಲಿ ಪೂರ್ಣಗೊಳ್ಳುವಾಗ ಇನ್ನೂ ಈ ಭೂಮಿಯಲ್ಲಿರುವರು. (ಪ್ರಕಟನೆ 7:9, 13, 14) ಆ ಸಮಯದಲ್ಲಿ ಅವರು “ಸಂಭ್ರಮೋತ್ಸವದಿಂದ” ಆನಂದಪಡುವರು.
45:16—“[ಅರಸನೇ,] ವಂಶಪಾರಂಪರ್ಯವಾಗಿ ಬಂದ ಸ್ಥಾನದಲ್ಲಿರುವದಕ್ಕೆ ನಿನಗೆ ಮಕ್ಕಳು ಹುಟ್ಟುವರು” [“ಪಿತೃಗಳ ಸ್ಥಳಗಳನ್ನು ನಿನ್ನ ಮಕ್ಕಳು ತೆಗೆದುಕೊಳ್ಳುವರು,” NIBV] ಎಂಬುದರ ಅರ್ಥವೇನು? ಯೇಸು ಈ ಭೂಮಿಯಲ್ಲಿ ಹುಟ್ಟಿದಾಗ ಅವನಿಗೆ ಈ ಭೂಮಿಯಲ್ಲಿ ಪೂರ್ವಿಕರಿದ್ದರು. ಆದರೆ ಅವನ ಸಾವಿರ ವರುಷದ ಆಳ್ವಿಕೆಯ ಸಮಯದಲ್ಲಿ ಅವನು ಆ ಪೂರ್ವಿಕರನ್ನು ಪುನರುತ್ಥಾನಗೊಳಿಸುವಾಗ ಅವರು ಅವನಿಗೆ ಮಕ್ಕಳಾಗುವರು. ಅವರಲ್ಲಿ ಕೆಲವರು ‘ದೇಶದಲ್ಲೆಲ್ಲಾ ಅಧಿಕಾರಿಗಳಾಗಿ’ ಇಲ್ಲವೆ ಪ್ರಭುಗಳಾಗಿ ನೇಮಿಸಲ್ಪಡುವರು.
50:2—ಯೆರೂಸಲೇಮನ್ನು “ಅತ್ಯಂತ ರಮಣೀಯವಾದ” ಸ್ಥಳ ಎಂದು ಏಕೆ ಕರೆಯಲಾಯಿತು? ಪಟ್ಟಣದ ತೋರಿಕೆಯಿಂದಾಗಿ ಅದು ಹೀಗೆ ಕರೆಯಲ್ಪಡಲಿಲ್ಲ. ಯೆಹೋವನು ತನ್ನ ಆಲಯವನ್ನು ಕಟ್ಟಲು ಯೆರೂಸಲೇಮ್ ಪಟ್ಟಣವನ್ನು ಉಪಯೋಗಿಸಿದನು ಮತ್ತು ಅದನ್ನು ತನ್ನ ಅಭಿಷಿಕ್ತ ರಾಜರ ರಾಜಧಾನಿಯನ್ನಾಗಿ ಮಾಡಿದನು. ಈ ರೀತಿಯಲ್ಲಿ ಯೆಹೋವನು ಆ ಪಟ್ಟಣಕ್ಕೆ ವೈಭವವನ್ನು ನೀಡಿದ್ದರಿಂದ ಅದು ಅತಿ ಆಕರ್ಷಣೀಯವಾಯಿತು.
ನಮಗಾಗಿರುವ ಪಾಠಗಳು:
42:1-3. ಬರಡು ಭೂಮಿಯಲ್ಲಿ ನೀರಿಗಾಗಿ ಹಾತೊರೆಯುವ ಜಿಂಕೆಯಂತೆ ಈ ಲೇವಿಯನು ಯೆಹೋವನಿಗಾಗಿ ಹಾತೊರೆದನು. ಯೆಹೋವನನ್ನು ಆತನ ಮಂದಿರದಲ್ಲಿ ಆರಾಧಿಸಲು ಅಸಾಧ್ಯವಾಗಿದ್ದ ಕಾರಣ ಈ ಮನುಷ್ಯನ ದುಃಖವು ಎಷ್ಟು ತೀವ್ರವಾಗಿತ್ತೆಂದರೆ ಅವನಿಗೆ ‘ಹಗಲಿರುಳು ಕಣ್ಣೀರೇ ಆಹಾರವಾಯಿತು’—ಅವನು ತನ್ನ ಹಸಿವನ್ನೇ ಕಳೆದುಕೊಂಡನು. ಯೆಹೋವನನ್ನು ನಮ್ಮ ಜೊತೆ ಆರಾಧಕರೊಂದಿಗೆ ಆರಾಧಿಸಲು ಇದೇ ರೀತಿಯ ಆಳವಾದ ಇಚ್ಛೆಯನ್ನು ನಾವೂ ಬೆಳೆಸಿಕೊಳ್ಳಬೇಕಲ್ಲವೆ?
42:4, 5, 11; 43:3-5. ನಮ್ಮ ಹತೋಟಿಯನ್ನು ಮೀರಿರುವ ಯಾವುದೊ ಕಾರಣದಿಂದಾಗಿ ನಾವು ತಾತ್ಕಾಲಿಕವಾಗಿ ಕ್ರೈಸ್ತ ಸಭೆಯಿಂದ ಪ್ರತ್ಯೇಕಿಸಲ್ಪಟ್ಟಿರುವುದಾದರೆ, ಹಿಂದೆ ನಾವು ಆನಂದಿಸಿದ ಸಹವಾಸದ ಸವಿನೆನಪುಗಳು ನಮಗೆ ಬಲವನ್ನು ನೀಡಬಲ್ಲವು. ಆರಂಭದಲ್ಲಿ ಆ ಸವಿನೆನಪುಗಳು ನಮ್ಮ ಏಕಾಂತತೆಯ ನೋವನ್ನು ತೀವ್ರಗೊಳಿಸಬಹುದಾದರೂ, ದೇವರು ನಮ್ಮ ದುರ್ಗವಾಗಿದ್ದಾನೆ ಮತ್ತು ಬಿಡುಗಡೆಗಾಗಿ ನಾವು ಆತನಲ್ಲಿ ಕಾಯಬೇಕು ಎಂಬ ಜ್ಞಾಪಕವನ್ನು ಸಹ ಅವು ನಮಗೆ ನೀಡುವವು.
46:1-3. ನಮಗೆ ಯಾವುದೇ ಸಂಕಷ್ಟವು ಎದುರಾದರೂ, “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ” ಎಂಬ ಸಂಪೂರ್ಣ ಭರವಸೆ ನಮಗಿರಬೇಕು.
50:16-19. ವಂಚನಾತ್ಮಕ ಮಾತುಗಳನ್ನಾಡುವವರಿಗೆ ಮತ್ತು ಕೆಟ್ಟ ವಿಷಯಗಳನ್ನು ಅಭ್ಯಾಸಿಸುವವರಿಗೆ ದೇವರನ್ನು ಪ್ರತಿನಿಧಿಸುವ ಹಕ್ಕಿಲ್ಲ.
50:20. ಇತರರ ತಪ್ಪುಗಳನ್ನು ಬಹಿರಂಗಪಡಿಸುವುದರಲ್ಲಿ ಆಸಕ್ತರಾಗಿರುವ ಬದಲು ನಾವು ಅವುಗಳನ್ನು ಬಿಟ್ಟುಬಿಡಬೇಕಾಗಿದೆ.—ಕೊಲೊಸ್ಸೆ 3:13.
“ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು”
ಈ ಗುಂಪಿನಲ್ಲಿರುವ ಕೀರ್ತನೆಗಳು, ದಾವೀದನು ಬತ್ಷೆಬೆಯೊಂದಿಗೆ ಪಾಪಗೈದ ನಂತರ ಮಾಡಿದ ಹೃದಯದಾಳದ ಪ್ರಾರ್ಥನೆಯ ಮಾತುಗಳೊಂದಿಗೆ ಆರಂಭಿಸುತ್ತವೆ. ಯಾರು ಯೆಹೋವನ ಮೇಲೆ ತಮ್ಮ ಭಾರವನ್ನು ಹಾಕಿ, ರಕ್ಷಣೆಗಾಗಿ ಆತನಲ್ಲಿ ನಂಬಿಕೆ ಇಡುತ್ತಾರೊ ಅವರನ್ನು ಆತನು ಪಾರುಗೊಳಿಸುತ್ತಾನೆ ಎಂಬುದಾಗಿ ಕೀರ್ತನೆ 52ರಿಂದ 57 ತೋರಿಸುತ್ತದೆ. 58-64ನೇ ಕೀರ್ತನೆಗಳಲ್ಲಿ ತಿಳಿಸಿರುವಂತೆ, ದಾವೀದನು ತನ್ನ ಎಲ್ಲ ಇಕ್ಕಟ್ಟಿನ ಸಮಯಗಳಲ್ಲಿ ಯೆಹೋವನನ್ನೇ ಆಶ್ರಯದುರ್ಗವನ್ನಾಗಿ ಮಾಡಿದನು. ಅವನು ಹಾಡುವುದು: “ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವದು ಆತನಿಂದಲೇ.”—ಕೀರ್ತನೆ 62:5.
ನಮ್ಮ ರಕ್ಷಕನೊಂದಿಗಿನ ಆಪ್ತ ಸಂಬಂಧವು, ‘ಆತನ ನಾಮದ ಮಹತ್ತನ್ನು ಕೀರ್ತಿಸುವಂತೆ’ ನಮ್ಮನ್ನು ಪ್ರೇರೇಪಿಸುತ್ತದೆ. (ಕೀರ್ತನೆ 66:2) ಯೆಹೋವನು ಉದಾರವಾಗಿ ಒದಗಿಸುವಾತನು ಎಂದು ಕೀರ್ತನೆ 65 ಆತನನ್ನು ಕೊಂಡಾಡುತ್ತದೆ. ಕೀರ್ತನೆ 67 ಮತ್ತು 68ರಲ್ಲಿ ಆತನನ್ನು ರಕ್ಷಣಾ ಕೃತ್ಯಗಳ ದೇವರು ಎಂದು ಕರೆಯಲಾಗಿದೆ. 70 ಮತ್ತು 71ನೇ ಕೀರ್ತನೆಯಲ್ಲಿ ಯೆಹೋವನನ್ನು ಬಿಡುಗಡೆಯನ್ನು ಒದಗಿಸುವಾತನು ಎಂದು ವರ್ಣಿಸಲಾಗಿದೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
53:1—ದೇವರ ಅಸ್ತಿತ್ವವನ್ನು ಅಲ್ಲಗಳೆಯುವ ವ್ಯಕ್ತಿಯು ಯಾವ ಅರ್ಥದಲ್ಲಿ “ದುರ್ಮತಿ”ಯಾಗಿದ್ದಾನೆ? ಇಲ್ಲಿ ದುರ್ಮತಿ ಎಂದು ಹೇಳುವಾಗ ಬುದ್ಧಿಶಕ್ತಿಯ ಕೊರತೆಯಿರುವವನು ಎಂಬುದನ್ನು ಅರ್ಥೈಸುವುದಿಲ್ಲ. ವಾಸ್ತವದಲ್ಲಿ ಇಂಥ ವ್ಯಕ್ತಿಯು ನೈತಿಕವಾಗಿ ದುರ್ಮತಿಯಾಗಿದ್ದಾನೆ ಎಂಬುದು ಅವನು ಅನುಭವಿಸುವ, ಕೀರ್ತನೆ 53:1-4ರಲ್ಲಿ ವರ್ಣಿಸಲ್ಪಟ್ಟಿರುವ ನೈತಿಕ ಅವನತಿಯಿಂದ ತಿಳಿದುಬರುತ್ತದೆ.
58:3-5—ಯಾವ ವಿಧದಲ್ಲಿ ದುಷ್ಟರು ಸರ್ಪದಂತಿದ್ದಾರೆ? ಇತರರ ಕುರಿತು ಅವರು ಹೇಳುವ ಸುಳ್ಳುಗಳು ಸರ್ಪದ ವಿಷದಂತಿರುತ್ತವೆ. ಸರ್ಪದ ವಿಷವು ದೇಹವನ್ನು ನಾಶಮಾಡುವಂತೆ ಅವರು ಹೇಳುವ ಸುಳ್ಳುಗಳು ವ್ಯಕ್ತಿಗಳ ಸತ್ಕೀರ್ತಿಯನ್ನು ನಾಶಮಾಡುತ್ತದೆ. ದುಷ್ಟರು “ಕಿವಿಗೊಡದ ಕಳ್ಳಹಾವಿನಂತೆ” ಮಾರ್ಗದರ್ಶನ ಇಲ್ಲವೆ ತಿದ್ದುಪಾಟಿಗೆ ಕಿವಿಗೊಡುವುದಿಲ್ಲ.
58:7—ದುಷ್ಟರು “ಕ್ಷಣದಲ್ಲಿ ಹರಿದು ಕಾಣದೆಹೋಗುವ ನೀರಿನಂತೆ” ಹೇಗೆ ಮಾಯವಾಗುವರು? ವಾಗ್ದತ್ತ ದೇಶದಲ್ಲಿದ್ದ ಕೆಲವು ತೊರೆ ಕಣಿವೆಗಳಲ್ಲಿನ ನೀರಿನ ಬಗ್ಗೆ ದಾವೀದನು ಆಲೋಚಿಸಿ ಹೀಗೆ ಹೇಳಿರಬಹುದು. ದಿಢೀರ್ ನೆರೆಯ (ಭಾರೀ ಮಳೆಯಿಂದಾಗಿ ಇದ್ದಕ್ಕಿದ್ದಂತೆ ಬರುವ ನೆರೆ) ಕಾರಣ ಅಂಥ ಕಣಿವೆಗಳಲ್ಲಿ ಒಮ್ಮೆಲೆ ನೀರಿನ ಮಟ್ಟವು ಹೆಚ್ಚಾಗುತ್ತಿತ್ತು ಮತ್ತು ಅಷ್ಟೇ ತ್ವರಿತವಾಗಿ ಆ ನೀರು ಹರಿದು ಕಾಣದೆಹೋಗುತ್ತಿತ್ತು. ಅದೇ ರೀತಿಯಲ್ಲಿ ದುಷ್ಟರು ತ್ವರಿತಗತಿಯಲ್ಲಿ ಕಾಣದೆಹೋಗಲಿ ಎಂದು ದಾವೀದನು ದೇವರನ್ನು ಪ್ರಾರ್ಥಿಸುತ್ತಿದ್ದನು.
68:13—‘ಪಾರಿವಾಳದ ರಕ್ಕೆಗಳು ಬೆಳ್ಳಿಯಿಂದಲೂ ಅದರ ಗರಿಗಳು ಬಂಗಾರದಿಂದಲೂ ಥಳಥಳಿಸುವುದು’ ಹೇಗೆ? ನೀಲಿ-ಬೂದು ಬಣ್ಣದ ನಿರ್ದಿಷ್ಟ ಜಾತಿಯ ಪಾರಿವಾಳಗಳ ಕೆಲವು ಪುಕ್ಕಗಳು ಕಾಮನಬಿಲ್ಲಿನಂತೆ ವೈವಿಧ್ಯವಾದ ಬಣ್ಣವನ್ನು ಹೊಂದಿರುತ್ತವೆ. ಆ ಪುಕ್ಕಗಳ ಮೇಲೆ ಸೂರ್ಯನ ಹೊಂಬಣ್ಣದ ಕಿರಣಗಳು ಬೀಳುವಾಗ ಅವು ಲೋಹದಂತೆ ಹೊಳೆಯುತ್ತವೆ. ಇಲ್ಲಿ ದಾವೀದನು, ಪ್ರಾಯಶಃ ಯುದ್ಧದಲ್ಲಿ ಜಯಹೊಂದಿ ಹಿಂದಿರುಗಿ ಬರುತ್ತಿರುವ ಇಸ್ರಾಯೇಲ್ ಸೈನಿಕರನ್ನು ವೇಗವಾಗಿ ಹಾರುವ ಮತ್ತು ಹೊಳಪಿನ ತೋರಿಕೆಯುಳ್ಳ ಇಂಥ ರೀತಿಯ ಪಾರಿವಾಳಕ್ಕೆ ಹೋಲಿಸುತ್ತಿರಬಹುದು. ಕೆಲವು ಬೈಬಲ್ ವಿದ್ವಾಂಸರು ತಿಳಿಸುವಂತೆ, ಈ ವಿವರಣೆಯು ಶತ್ರುಜನಾಂಗವನ್ನು ಪರಾಜಯಪಡಿಸಿ ಸೂರೆಯಾಗಿ ತರುವ ಬಹುಮಾನಕ್ಕೆ ಸೂಚಿಸುತ್ತಿರಬಹುದು. ಏನೇ ಆಗಿರಲಿ, ಯೆಹೋವನು ತನ್ನ ಜನರಿಗೆ ನೀಡಿದ ವಿಜಯವನ್ನು ಇಲ್ಲಿ ದಾವೀದನು ಸೂಚಿಸುತ್ತಿದ್ದಾನೆ.
68:18—“ಮನುಷ್ಯರಿಂದಲೇ ಕಪ್ಪಗಳನ್ನು” ಸಂಗ್ರಹಿಸಿದ್ದಿ ಎಂಬುದರ ಅರ್ಥವೇನು? ಮೂಲ ಗ್ರಂಥಪಾಠದಲ್ಲಿ ಈ ಅಭಿವ್ಯಕ್ತಿಯು ‘ಪುರುಷರ ರೂಪದಲ್ಲಿರುವ ದಾನಗಳು’ ಎಂದಾಗಿದೆ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ವಶಪಡಿಸಿಕೊಂಡಾಗ ಸೆರೆಹಿಡಿದ ಪುರುಷರಲ್ಲಿ ಇವರು ಕೆಲವರಾಗಿದ್ದರು. ಅನಂತರ ಇವರನ್ನು ಲೇವಿಯರಿಗೆ ಸಹಾಯಮಾಡುವಂತೆ ನೇಮಿಸಲಾಯಿತು.—ಎಜ್ರ 8:20.
68:30—“ಆಪಿನೊಳಗೆ ವಾಸಿಸುವ” ಕಾಡುಮೃಗಗಳನ್ನು “ಬೆದರಿಸು” ಎಂಬ ಬಿನ್ನಹದ ಅರ್ಥವೇನು? ದೇವಜನರ ವೈರಿಗಳನ್ನು ಸಾಂಕೇತಿಕವಾಗಿ ಕಾಡುಮೃಗಳಿಗೆ ಹೋಲಿಸುತ್ತಾ, ಯೆಹೋವನು ಅವರನ್ನು ಬೆದರಿಸುವಂತೆ ಅಥವಾ ಹಾನಿಗೊಳಿಸಲು ಅವರಿಗಿರುವ ಶಕ್ತಿಯನ್ನು ಹತೋಟಿಯಲ್ಲಿಡುವಂತೆ ದಾವೀದನು ಆತನನ್ನು ಬಿನ್ನಹಿಸಿದನು.
69:23—‘ಶತ್ರುಗಳ ನಡುವು ಬಳುಕುವಂತೆ’ ಮಾಡುವುದರ ಅರ್ಥವೇನು? ಒಬ್ಬ ವ್ಯಕ್ತಿಯು ಭಾರವಾದ ವಸ್ತುಗಳನ್ನು ಎತ್ತಿಕೊಂಡೊಯ್ಯುವಂಥ ಶ್ರಮದ ಕೆಲಸವನ್ನು ಮಾಡಬೇಕಾದರೆ ಅವನ ಸೊಂಟದಲ್ಲಿನ ಸ್ನಾಯುಗಳು ಬಲವಾಗಿರುವ ಅಗತ್ಯವಿದೆ. ಅಸ್ಥಿರವಾದ ಸೊಂಟವು ಶಕ್ತಿಗುಂದಿರುವ ಸ್ಥಿತಿಯನ್ನು ಸೂಚಿಸುತ್ತದೆ. ತನ್ನ ಶತ್ರುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳಲಿ ಎಂಬುದಾಗಿ ಇಲ್ಲಿ ದಾವೀದನು ಪ್ರಾರ್ಥಿಸುತ್ತಿದ್ದಾನೆ.
ನಮಗಾಗಿರುವ ಪಾಠಗಳು:
51:1-4, 17. ನಾವು ಮಾಡುವ ಪಾಪಗಳು ನಮ್ಮನ್ನು ದೇವರಿಂದ ದೂರಮಾಡಬೇಕು ಎಂದೇನಿಲ್ಲ. ನಾವು ಪಶ್ಚಾತ್ತಾಪಪಡುವುದಾದರೆ, ಆತನ ಕರುಣೆಯನ್ನು ಖಂಡಿತವಾಗಿಯೂ ಹೊಂದಬಲ್ಲೆವು.
51:5, 7-10. ನಾವು ಪಾಪವನ್ನು ಪಿತ್ರಾರ್ಜಿತವಾಗಿ ಪಡೆದಿರುವುದರಿಂದ, ಈಗ ನಾವು ಯಾವುದೇ ಪಾಪಗೈಯುವುದಾದರೆ ಕ್ಷಮೆಗಾಗಿ ಯೆಹೋವನಲ್ಲಿ ಬೇಡಿಕೊಳ್ಳಬಲ್ಲೆವು. ಮಾತ್ರವಲ್ಲದೆ ಯೆಹೋವನು ನಮ್ಮನ್ನು ಶುದ್ಧೀಕರಿಸುವಂತೆ, ಪುನಃ ಒಳ್ಳೇ ನಿಲುವನ್ನು ಕೊಡುವಂತೆ, ಪಾಪ ಪ್ರವೃತ್ತಿಯನ್ನು ನಮ್ಮ ಹೃದಯದಿಂದ ತೆಗೆದುಹಾಕುವಂತೆ ಮತ್ತು ಸ್ಥಿರಚಿತ್ತತೆಯನ್ನು ನಮಗೆ ನೀಡುವಂತೆ ನಾವು ಪ್ರಾರ್ಥಿಸತಕ್ಕದ್ದು.
51:18. ದಾವೀದನು ಮಾಡಿದ ಪಾಪಗಳು ಇಡೀ ಜನಾಂಗದ ಹಿತಕ್ಷೇಮಕ್ಕೆ ಬೆದರಿಕೆಯನ್ನೊಡ್ಡಿದವು. ಆದುದರಿಂದಲೇ, ಚೀಯೋನನ್ನು ಕಟಾಕ್ಷಿಸುವಂತೆ ಅವನು ದೇವರಲ್ಲಿ ಪ್ರಾರ್ಥಿಸಿದನು. ಅಂತೆಯೇ, ನಾವು ಗಂಭೀರವಾದ ಪಾಪವನ್ನು ಗೈದಾಗ ಅದು ಅನೇಕವೇಳೆ ಯೆಹೋವನ ಹೆಸರಿಗೆ ಮತ್ತು ಸಭೆಗೆ ನಿಂದೆಯನ್ನು ತರುತ್ತದೆ. ಹಾಗಾಗಿ, ನಮ್ಮಿಂದಾಗಿ ಉಂಟಾದ ಹಾನಿಯನ್ನು ಸರಿಪಡಿಸಲು ನಾವು ಯೆಹೋವನಲ್ಲಿ ಪ್ರಾರ್ಥಿಸತಕ್ಕದ್ದು.
52:8. ಯೆಹೋವನಿಗೆ ವಿಧೇಯರಾಗುವ ಮತ್ತು ಆತನಿಂದ ಬರುವ ಶಿಸ್ತನ್ನು ಮನಃಪೂರ್ವಕವಾಗಿ ಸ್ವೀಕರಿಸುವ ಮೂಲಕ ನಾವು ‘ದೇವಾಲಯದ ಸೊಗಸಾದ ಎಣ್ಣೇಮರದಂತೆ’ ದೇವರಿಗೆ ಆಪ್ತರಾಗಿಯೂ ಆತನ ಸೇವೆಯಲ್ಲಿ ಫಲಪ್ರದರಾಗಿಯೂ ಇರುವೆವು.—ಇಬ್ರಿಯ 12:5, 6.
55:4, 5, 12-14, 16-18. ತನ್ನ ಮಗನಾದ ಅಬ್ಷಾಲೋಮನ ಒಳಸಂಚು ಮತ್ತು ಭರವಸಾರ್ಹ ಸಲಹೆಗಾರನಾದ ಅಹೀತೋಫೆಲನ ವಿಶ್ವಾಸಘಾತವು ದಾವೀದನಿಗೆ ತೀವ್ರವಾದ ಭಾವನಾತ್ಮಕ ನೋವನ್ನು ಉಂಟುಮಾಡಿತು. ಆದರೆ, ಅದು ಯೆಹೋವನಲ್ಲಿ ಅವನ ಭರವಸೆಯನ್ನು ಕುಂದಿಸಲಿಲ್ಲ. ಅಂತೆಯೇ ನಮಗೆ ಉಂಟಾಗುವ ಭಾವನಾತ್ಮಕ ನೋವು ದೇವರಲ್ಲಿನ ನಮ್ಮ ಭರವಸೆಯನ್ನು ಕುಂದಿಸುವಂತೆ ಬಿಡಬಾರದು.
55:22. ನಾವು ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವುದು ಹೇಗೆ? (1) ನಮ್ಮನ್ನು ಕಾಡುತ್ತಿರುವ ವಿಚಾರವನ್ನು ಪ್ರಾರ್ಥನೆಯಲ್ಲಿ ಆತನ ಬಳಿಗೆ ಕೊಂಡೊಯ್ಯುವ, (2) ಮಾರ್ಗದರ್ಶನೆ ಮತ್ತು ಬೆಂಬಲಕ್ಕಾಗಿ ಆತನ ವಾಕ್ಯ ಹಾಗೂ ಸಂಘಟನೆಯ ಕಡೆಗೆ ತಿರುಗುವ ಮತ್ತು (3) ಪರಿಸ್ಥಿತಿಯನ್ನು ಸರಿಪಡಿಸಲು ನಮ್ಮಿಂದಾಗುವುದನ್ನು ಮಾಡುವ ಮೂಲಕ ನಾವು ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುತ್ತೇವೆ.—ಜ್ಞಾನೋಕ್ತಿ 3:5, 6; 11:14; 15:22; ಫಿಲಿಪ್ಪಿ 4:6, 7.
56:8. ನಮ್ಮ ಪರಿಸ್ಥಿತಿಯನ್ನು ಮಾತ್ರವಲ್ಲ ಅದರಿಂದಾಗಿ ನಮಗುಂಟಾಗುವ ಮಾನಸಿಕ ನೋವನ್ನು ಸಹ ಯೆಹೋವನು ಬಲ್ಲವನಾಗಿದ್ದಾನೆ.
62:11. ಯೆಹೋವನು ಸರ್ವಾಧಿಕಾರಿ ಇಲ್ಲವೆ ಸರ್ವಬಲವನ್ನು ಹೊಂದಿರುವವನು. ಆತನು ಬಲಕ್ಕಾಗಿ ಬಾಹ್ಯ ಮೂಲಗಳತ್ತ ನೋಡಬೇಕಾಗಿಲ್ಲ. ಆತನೇ ಶಕ್ತಿಯ ಮೂಲನಾಗಿದ್ದಾನೆ.
63:3. ದೇವರ “ಪ್ರೇಮಾನುಭವವು” ಅಥವಾ ಪ್ರೀತಿಪೂರ್ವಕ ದಯೆಯು “ಜೀವಕ್ಕಿಂತಲೂ ಶ್ರೇಷ್ಠ.” ಏಕೆಂದರೆ, ಅದಿಲ್ಲದಿರುವಲ್ಲಿ ಜೀವಿಸುವುದರಲ್ಲಿ ಯಾವುದೇ ಅರ್ಥವಾಗಲಿ ಉದ್ದೇಶವಾಗಲಿ ಇರುವುದಿಲ್ಲ. ಆದುದರಿಂದ ಯೆಹೋವನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದು ವಿವೇಕಯುತವಾಗಿದೆ.
63:6. ರಾತ್ರಿವೇಳೆಯು ನಿಶ್ಶಬ್ದವಾಗಿಯೂ ಯಾವುದೇ ಅಪಕರ್ಷಣೆಯಿಲ್ಲದೆಯೂ ಇರುವ ಕಾರಣ ಯೆಹೋವನ ಕುರಿತು ಧ್ಯಾನಿಸಲು ಅದು ಅತಿ ಸೂಕ್ತವಾದ ಸಮಯವಾಗಿದೆ.
64:2-4. ಹಾನಿಕಾರಕ ಚಾಡಿಯು ಒಬ್ಬ ಮುಗ್ಧ ವ್ಯಕ್ತಿಯ ಒಳ್ಳೇ ಹೆಸರನ್ನು ಹಾಳುಮಾಡಬಲ್ಲದು. ನಾವು ಅಂಥ ಚಾಡಿಮಾತುಗಳನ್ನು ಕೇಳಲೂ ಬಾರದು ಹಬ್ಬಿಸಲೂ ಬಾರದು.
69:4. ತಪ್ಪು ನಮ್ಮದೊ ಅಲ್ಲವೊ ಎಂಬುದು ನಮಗೆ ಮಂದಟ್ಟಾಗಿರದಿದ್ದರೂ ಶಾಂತಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕ್ಷಮೆಯಾಚಿಸುವುದು ಕೆಲವೊಮ್ಮೆ ವಿವೇಕಯುತವಾಗಿರಬಹುದು.
70:1-5. ಸಹಾಯಕ್ಕಾಗಿ ನಾವು ಮಾಡುವ ತುರ್ತಿನ ಬಿನ್ನಹವನ್ನು ಯೆಹೋವನು ಆಲಿಸುತ್ತಾನೆ. (1 ಥೆಸಲೊನೀಕ 5:17; ಯಾಕೋಬ 1:13; 2 ಪೇತ್ರ 2:9) ಸಂಕಷ್ಟವು ಮುಂದುವರಿಯುವಂತೆ ಯೆಹೋವನು ಒಂದುವೇಳೆ ಅನುಮತಿಸಬಹುದಾದರೂ, ಅದನ್ನು ನಿಭಾಯಿಸಲು ಬೇಕಾಗಿರುವ ವಿವೇಕವನ್ನು ಮತ್ತು ಸಹಿಸಿಕೊಳ್ಳಲು ಬೇಕಾಗಿರುವ ಶಕ್ತಿಯನ್ನು ಆತನು ನಮಗೆ ನೀಡುತ್ತಾನೆ. ನಮ್ಮ ಶಕ್ತಿಗೆ ಮೀರಿದ ಶೋಧನೆಯನ್ನು ಆತನು ಬರಗೊಡಿಸುವುದಿಲ್ಲ.—1 ಕೊರಿಂಥ 10:13; ಇಬ್ರಿಯ 10:36; ಯಾಕೋಬ 1:5-8.
71:5, 17. ಯೌವನದಲ್ಲಿ ದಾವೀದನು ಯೆಹೋವನನ್ನು ತನ್ನ ಭರವಸೆಯನ್ನಾಗಿ ಮಾಡಿಕೊಳ್ಳುವ ಮೂಲಕ ಧೈರ್ಯ ಮತ್ತು ಬಲವನ್ನು ಬೆಳೆಸಿಕೊಂಡನು. ಫಿಲಿಷ್ಟಿಯದ ದೈತ್ಯನಾದ ಗೊಲ್ಯಾತನನ್ನು ಎದುರಿಸುವುದಕ್ಕಿಂತ ಮುಂಚೆಯೇ ಈ ಧೈರ್ಯವನ್ನು ಅವನು ಬೆಳೆಸಿಕೊಂಡಿದ್ದನು. (1 ಸಮುವೇಲ 17:34-37) ಹಾಗೆಯೇ, ಯುವ ಜನರು ತಾವು ಮಾಡುವ ಎಲ್ಲ ಕೆಲಸಗಳಲ್ಲಿ ಯೆಹೋವನ ಮೇಲೆ ಅವಲಂಬಿಸಿರಬೇಕು.
“ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ”
ಕೀರ್ತನೆ ಪುಸ್ತಕದ ಎರಡನೇ ವಿಭಾಗದಲ್ಲಿರುವ ಕೊನೆಯ ಗೀತೆಯಾದ ಕೀರ್ತನೆ 72 ಸೊಲೊಮೋನನ ಆಳ್ವಿಕೆಯ ಕುರಿತಾಗಿದೆ. ಇದು ಮೆಸ್ಸೀಯನ ಆಳ್ವಿಕೆಯ ಕೆಳಗಿರುವ ಪರಿಸ್ಥಿತಿಯನ್ನು ಮುನ್ಚಿತ್ರಿಸುತ್ತದೆ. ಎಂಥ ಸಂತೋಷಕರ ಆಶೀರ್ವಾದಗಳನ್ನು ಅಲ್ಲಿ ವರ್ಣಿಸಲಾಗಿದೆ—ಪರಿಪೂರ್ಣಸೌಭಾಗ್ಯ, ಕುಯುಕ್ತಿ ಬಲಾತ್ಕಾರಗಳ ಅಂತ್ಯ, ದೇಶದಲ್ಲಿ ಸಮೃದ್ಧವಾದ ಬೆಳೆ! ಇಂಥ ಮತ್ತು ಇನ್ನಿತರ ಆಶೀರ್ವಾದಗಳನ್ನು ಆನಂದಿಸಲು ನಾವು ಅಲ್ಲಿರುವೆವೊ? ಕೀರ್ತನೆಗಾರನಂತೆ ನಾವು ಯೆಹೋವನಲ್ಲಿ ನಂಬಿಕೆಯಿಡುವುದಾದರೆ ಮತ್ತು ಆತನನ್ನು ನಮ್ಮ ಆಶ್ರಯದುರ್ಗವನ್ನಾಗಿ ಮಾಡುವುದಾದರೆ ನಾವಲ್ಲಿರುವೆವು.
‘ಇಲ್ಲಿಗೆ ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು’ ಈ ಮಾತುಗಳೊಂದಿಗೆ ಸಮಾಪ್ತಿಗೊಳ್ಳುತ್ತವೆ: “ಮಹತ್ಕಾರ್ಯಗಳನ್ನು ನಡಿಸುವದರಲ್ಲಿ ಅದ್ವಿತೀಯನೂ ಇಸ್ರಾಯೇಲ್ಯರ ದೇವರೂ ಆದ ಯೆಹೋವ ದೇವರಿಗೆ ಸ್ತೋತ್ರವು. ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲವೂ ಪ್ರಣಾಮವಿರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.” (ಕೀರ್ತನೆ 72:18-20) ನಾವು ಸಹ ಇದರಂತೆಯೇ ಯೆಹೋವನನ್ನು ಪೂರ್ಣಹೃದಯದಿಂದ ಕೊಂಡಾಡೋಣ ಮತ್ತು ಆತನ ಮಹಿಮಾನ್ವಿತ ನಾಮವನ್ನು ಕೀರ್ತಿಸೋಣ.
[ಪುಟ 9ರಲ್ಲಿರುವ ಚಿತ್ರ]
“ರಾಜಕುಮಾರಿ” ಯಾರನ್ನು ಚಿತ್ರಿಸುತ್ತಾಳೆಂದು ನಿಮಗೆ ತಿಳಿದಿದೆಯೊ?
[ಪುಟ 10, 11ರಲ್ಲಿರುವ ಚಿತ್ರ]
ಯೆರೂಸಲೇಮನ್ನು “ಅತ್ಯಂತ ರಮಣೀಯವಾದ” ಸ್ಥಳ ಎಂಬುದಾಗಿ ಏಕೆ ಕರೆಯಲಾಯಿತೆಂದು ನಿಮಗೆ ತಿಳಿದಿದೆಯೊ?