ವಾಚಕರಿಂದ ಪ್ರಶ್ನೆಗಳು
ಪುರುಷನೊಬ್ಬನು ಕನ್ಯೆಯನ್ನು ಠಕ್ಕಿನಿಂದ ಭ್ರಷ್ಠೆಯಾಗಿಮಾಡುವ ವಿಧವು “ಬುದ್ಧಿಯನ್ನು ಮೀರಿವೆ” ಎಂದು ಜ್ಞಾನೋಕ್ತಿ 30:19 ರ ಲೇಖಕನು ನಿಜವಾಗಿಯೂ ಎಣಿಸಿದನೋ?
ಅರ್ಥೈಸಿಕೊಳ್ಳಲು ಇದು ಸುಲಭವಲ್ಲವೆಂದು ಒಪ್ಪತಕ್ಕದ್ದಾದರೂ, ಜ್ಞಾನೋಕ್ತಿ 30:19 ರ ಸಂಭಾವ್ಯ ಅರ್ಥವು ಅದಾಗಿರುತ್ತದೆ.
ಈ ವಚನದ ಪರಿಜ್ಞಾನವನ್ನು ಹುಡುಕುವದರಲ್ಲಿ, ನಾವು ಪೂರ್ವಾಪರವನ್ನು ಮರೆಯಕೂಡದು. ಪ್ರಸ್ತುತ ಭಾಗದ ಮುಂಚೆ, ಕೆಲವೊಂದು ನಿರ್ದಿಷ್ಟ ರೀತಿಗಳಲ್ಲಿ ತೃಪ್ತಿಪಡಲಾಗದಂತಹ ನಾಲ್ಕು ಸಂಗತಿಗಳ ಪಟ್ಟಿಯನ್ನು ಪ್ರೇರಿತ ಲೇಖಕನು ಮಾಡಿದ್ದಾನೆ. (ಜ್ಞಾನೋಕ್ತಿ 30:15, 16) ಅನಂತರ ಅವನು ಈ ಪಟ್ಟಿಯನ್ನು ನಮೂದಿಸುತ್ತಾನೆ: “ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, [ಅತಿ ಅದ್ಭುತವಾಗಿವೆ, NW ] ಹೌದು, ನಾಲ್ಕನ್ನು ಗ್ರಹಿಸಲಾರೆನು; ಯಾವವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ [ಕನ್ಯೆಯಲ್ಲಿ, NW ] ಪುರುಷನ ಪದ್ಧತಿ, ಇವೇ.”—ಜ್ಞಾನೋಕ್ತಿ 30:18, 19.
ಈ ನಾಲ್ಕು ಸಂಗತಿಗಳಲ್ಲಿ “ಬುದ್ಧಿಯನ್ನು ಮೀರಿ”ದ್ದು ಏನಾಗಿರಸಾಧ್ಯವಿದೆ?
“ಬುದ್ಧಿಯನ್ನು ಮೀರಿ”ದ್ದು ಸಕಾರಾತ್ಮಕ ಯಾ ಒಳಿತನ್ನು ಒಳಗೂಡಿರಬೇಕು ಎಂದು ಪ್ರಾಯಶಃ ಭಾವಿಸಿ, ಕೆಲವು ವಿದ್ವಾಂಸರು ಈ ನಾಲ್ಕು ಸಂಗತಿಗಳಲ್ಲಿ ಪ್ರತಿಯೊಂದು ದೇವರ ಸೃಷ್ಟಿಯ ವಿವೇಕವನ್ನು ಪ್ರದರ್ಶಿಸುತ್ತವೆಂದು ವಿವರಿಸುತ್ತಾರೆ: ಒಂದು ದೊಡ್ಡ ಪಕ್ಷಿಯು ಆಕಾಶದಲ್ಲಿ ಹಾರುವ ವಿಧ, ಬಂಡೆಗಳ ನಡುವೆ ಕಾಲಿಲ್ಲದ ಹಾವು ಚಲಿಸುವ ವಿಧ, ಪ್ರಕುಬ್ಧ ಸಮುದ್ರವೊಂದರಲ್ಲಿ ಭಾರವಾದ ಹಡಗವು ತೇಲಿಕೊಂಡಿರುವ ವಿಧ, ಮತ್ತು ಒಬ್ಬ ದೃಢಕಾಯದ ಯುವಕನು ನಿರೀಕ್ಷಾರಹಿತನಾಗಿ ಪ್ರೇಮದ ಸೆಳೆವಿನಲ್ಲಿ ಬಿದ್ದು, ಮುದ್ದಾದ ಕನ್ಯೆಯೊಂದನ್ನು ಮದುವೆಯಾಗಿ, ನಂತರ ಅವರು ಒಂದು ಆಶ್ಚರ್ಯಭರಿತ ಮಾನವ ಮಗುವನ್ನು ಉತ್ಪಾದಿಸುವ ವಿಧಗಳ ಕುರಿತ ಬೆರಗು. ಈ ನಾಲ್ಕು ಸಂಗತಿಗಳಲ್ಲಿ ಇನ್ನೊಂದು ಹೋಲಿಕೆಯನ್ನು ಒಬ್ಬ ಪ್ರೊಫೆಸರ್ ಕಂಡನು, ಪ್ರತಿಯೊಂದು ಎಂದಿಗೂ ಹೊಸತಾಗಿರುವ ಒಂದು ಪಥದಲ್ಲಿ ಪಯಣಿಸುತ್ತದೆ—ಹದ್ದಿನ, ಸರ್ಪದ, ಮತ್ತು ಪಥವಿಲ್ಲದಿರುವಲ್ಲಿ ಹಡಗಿನ ಹೋಗುವಿಕೆ ಮತ್ತು ದಂಪತಿಯೊಂದರ ಪ್ರೀತಿಯ ಬೆಳವಣಿಗೆಯ ನವೀನತೆ.
ಆದಾಗ್ಯೂ, ಅವುಗಳೆಲ್ಲವುಗಳಿಗೆ ಯಾವುದೋ ಒಂದು ಸಕಾರಾತ್ಮಕವಾದದ್ದು ಸರ್ವಸಾಮಾನ್ಯವಾಗಿ ಇದೆಯೊ ಎಂಬಂತೆ, ನಾಲ್ಕು ಸಂಗತಿಗಳು ಒಳ್ಳೆಯ ಪರಿಜ್ಞಾನದಲ್ಲಿ “ಬುದ್ಧಿಯನ್ನು ಮೀರಿ” ದವುಗಳಾಗಿರುವ ಅಗತ್ಯವೇನೂ ಇಲ್ಲ. “ಯೆಹೋವನು ಹಗೆಮಾಡುವ ವಸ್ತುಗಳನ್ನು” ಜ್ಞಾನೋಕ್ತಿ 6:16-19 ಪಟ್ಟಿಮಾಡಿದೆ. ಮತ್ತು ವಿವಾದಾತ್ಮಕವಾಗಿರುವ ಈ ವಚನಗಳ ಮೊದಲು, ಜ್ಞಾನೋಕ್ತಿ 30:15, 16 “ಸಾಕೆನ್ನದ” (ಪಾತಾಳ, ಹೆರದ ಗರ್ಭ, ಒಣಗಿಹೋದ ನೆಲ, ಮತ್ತು ಉರಿಯುತ್ತಿರುವ ಬೆಂಕಿ) ವಿಷಯಗಳ ಪಟ್ಟಿಯನ್ನು ಮಾಡಿರುವದನ್ನು ಗಮನಿಸಿದೆವು. ಖಂಡಿತವಾಗಿಯೂ ಅವುಗಳೇನೂ ಅದ್ಭುತಕರವಾಗಿ ಒಳ್ಳೆಯದಾಗಿರುವದಿಲ್ಲ.
ಇಲ್ಲಿ ಜ್ಞಾನೋಕ್ತಿ 30:18 ರಲ್ಲಿ “ಬುದ್ಧಿಗೆ ಮೀರಿದ” ಎಂಬ ಹೀಬ್ರು ಶಬ್ದಕ್ಕೆ “ವಿಂಗಡಿಸು, ಭೇದ ಗುರುತಿಸು; ಭೇದ ಗುರುತಿಸುವಂಥದ್ದಾಗಿ, ಅಸಾಮಾನ್ಯವಾದುದಾಗಿ, ಅದ್ಭುತವಾಗಿ ಮಾಡು,” ಎಂದರ್ಥವಿದೆ. ಒಳ್ಳೆಯದಾಗಿರದಿದ್ದರೂ, ಒಂದು ಸಂಗತಿಯನ್ನು ಭೇದ ಗುರುತಿಸುವಂಥದ್ದಾಗಿ, ಅಸಾಮಾನ್ಯವಾದುದಾಗಿ, ಅದ್ಭುತವಾಗಿ ಕಾಣಬಹುದು. ಭಯಂಕರ ರಾಜನೊಬ್ಬನು “ಅತ್ಯಧಿಕವಾಗಿ [ಅದ್ಭುತವಾದ ರೀತಿಯಲ್ಲಿ, NW ]” ನಾಶನಕ್ಕೆ ಕಾರಣನಾಗುವನು ಮತ್ತು ಪವಿತ್ರ ಜನರ ಸಹಿತವಾಗಿ “ಬಲಿಷ್ಠರನ್ನೂ . . . ಧ್ವಂಸಮಾಡುವನು” ಎಂದು ದಾನಿಯೇಲ 8:23, 24 ಮುಂತಿಳಿಸಿದೆ.—ಹೋಲಿಸಿರಿ ಧರ್ಮೋಪದೇಶಕಾಂಡ 17:8; 28:59; ಜೆಕರ್ಯ 8:6.
ಜ್ಞಾನೋಕ್ತಿ 30:18, 19 ನ್ನು ಹಿಂಬಾಲಿಸಿ ಬರುವ ವಚನವು, ಲೇಖಕನು ಗ್ರಹಿಸಿಕೊಳ್ಳಲು ಕಷ್ಟಕರವಾಗಿ ಕಂಡದ್ದನ್ನು ತಿಳಿಯಲು ಒಂದು ಸುಳಿವು ಒದಗಿಸಬಹುದು. ವಚನ 20 ಒಂದು ಜಾರಸ್ತ್ರೀಯ ಕುರಿತು ಉಲ್ಲೇಖಿಸಿ, ಅವಳು “ತಿಂದು ಬಾಯಿ ಒರಸಿಕೊಂಡು ನಾನು ತಪ್ಪುಮಾಡಲಿಲ್ಲವಲ್ಲವೆ ಅಂದುಕೊಳ್ಳುವಳು.” ಪ್ರಾಯಶಃ ರಹಸ್ಯ ಮತ್ತು ಚಾತುರ್ಯದೊಂದಿಗೆ ಅವಳು ಪಾಪವನ್ನು ಗೈದಿದ್ದಾಳೆ, ಆದರೆ ಅವಳ ದುಷ್ಕರ್ಮದ ಯಾವುದೇ ಕುರುಹು ಅಲ್ಲಿಲ್ಲದಿರುವದರಿಂದ, ತಾನು ನಿರಪರಾಧಿ ಎಂದವಳು ಹೇಳಿಕೊಳ್ಳಬಹುದು.
ಇದರ ಮೊದಲಿನ ಪಟ್ಟಿಯಲ್ಲಿಯೂ ಒಂದು ಹೋಲಿಕೆ ಇದೆ. ಆಕಾಶದ ಮೂಲಕ ಒಂದು ಹದ್ದು ಮೇಲಕ್ಕೇರುತ್ತದೆ, ಸರ್ಪವೊಂದು ಬಂಡೆಯನ್ನು ದಾಟುತ್ತದೆ, ಅಲೆಗಳನ್ನು ಕತ್ತರಿಸುತ್ತಾ ಹಡಗವು ಮುಂದರಿಯುತ್ತದೆ—ಯಾವುದೇ ತುಳಿದ ದಾರಿಯ ಜಾಡನ್ನು ಬಿಟ್ಟುಬರುವದಿಲ್ಲ ಮತ್ತು ಈ ಮೂರರಲ್ಲಿ ಯಾವುದಾದರೊಂದರ ಮಾರ್ಗದ ಕುರುಹನ್ನು ಕಂಡುಕೊಳ್ಳುವದು ಕಷ್ಟವಾಗಿರುತ್ತದೆ. ಈ ಮೂರು ಸಂಗತಿಗಳ ಸಮಾನಗುಣತ್ವ ಇದಾಗಿರುವುದಾದರೆ, ನಾಲ್ಕನೆಯ “ಸ್ತ್ರೀಯಲ್ಲಿ ಪುರುಷನ ಪದ್ಧತಿ”ಯ ಕುರಿತೇನು?
ಇಲಿಯ್ಲೂ ಕೂಡ ಹತ್ತೆಹಚ್ಚುವುದು ಪ್ರಾಯಶಃ ಕಷ್ಟ. ಒಬ್ಬ ಯುವಕನು ಕುಯುಕ್ತಿಯ, ನಯವಾಗಿ ಮಾತಾಡುವ ಮತ್ತು ಮೋಸತನದ ದಾರಿಗಳನ್ನು ಬಳಸಿ, ನಿರಪರಾಧಿ ಕನ್ಯೆಯ ಒಲುಮೆಗಳೊಳಗೆ ಮೆಲ್ಲಗೆ ಜಾರಿ ನುಸುಳಬಹುದು. ಅನನುಭವಿಯಾಗಿರುವದರಿಂದ, ಅವಳು ಅವನ ಕುಯುಕ್ತಿಗಳನ್ನು ಪತ್ತೆಹಚ್ಚದೆ ಹೋಗಬಹುದು. ಭ್ರಷ್ಠೆಯಾದ ನಂತರವೂ, ಅವನು ಅವಳ ಮೇಲೆ ವಿಜಯಿಯಾದ ಸಂಗತಿಯ ಕುರಿತು ವಿವರಿಸಲು ಅವಳಿಗೆ ಅಸಾಧ್ಯವಾಗಬಹುದು; ಅವಲೋಕಿಸುವವರು ಕೂಡ ಅದನ್ನು ವಿವರಿಸುವದು ಕಷ್ಟವೆಂದು ಕಾಣಬಹುದು. ಆದರೂ, ಇಂಥ ಕುತಂತ್ರದ ಶೀಲಹರಣಗಾರರಿಂದ ಅನೇಕ ಯುವ ಕನ್ಯೆಯರು ತಮ್ಮ ಸಚ್ಛಾರಿತ್ರ್ಯವನ್ನು ಕಳಕೊಂಡಿರುತ್ತಾರೆ. ಇಂಥ ಜಾರಿಕೆಯ ಪುರುಷರ ಮಾರ್ಗದ ಕುರುಹನ್ನು ಕಂಡುಹಿಡಿಯುವದು ಬಲು ಕಷ್ಟ, ಆದರೂ ಹದ್ದಿಗೆ ಅದರ ಹಾರಾಟದಲ್ಲಿ, ಜಾರುವ ಸರ್ಪಕ್ಕೆ, ಯಾ ಸಮುದ್ರದಲ್ಲಿರುವ ಹಡಗಕ್ಕೆ ಒಂದು ಗುರಿಯಿರುವಂತೆ, ಅವರಿಗೊಂದು ಗುರಿಯಿರುತ್ತದೆ. ದುಷ್ಪ್ರೇರಕರಿಗೆ, ಧ್ಯೇಯವು ಲೈಂಗಿಕವಾಗಿ ಸ್ವಪ್ರಯೇಜನ ಪಡೆದುಕೊಳ್ಳುವದಾಗಿದೆ.
ಇದರ ಪ್ರಕಾಶದಲ್ಲಿ, ಜ್ಞಾನೋಕ್ತಿ 30:18, 19 ರಲ್ಲಿರುವ ವಿಚಾರವು ಸೃಷ್ಟಿಯ ವೈಜ್ಞಾನಿಕ ಯಾ ತಾಂತ್ರಿಕತೆಯ ವಿಷಯಗಳ ಕುರಿತಾಗಿ ಅಲ್ಲ. ಬದಲಾಗಿ, ಜ್ಞಾನೋಕ್ತಿ 7:1-27 ಮನವೊಡಂಬಡಿಸುವ ಜಾರಸ್ತ್ರೀಯ ಅಪಾಯಗಳನ್ನು ಹೋಗಲಾಡಿಸುವದರ ಕುರಿತು ಹೇಗೆ ಎಚ್ಚರವನ್ನೀಯುತ್ತದೋ, ಹಾಗೆಯೇ ಈ ಭಾಗವು ನಮಗೊಂದು ನೈತಿಕ ಎಚ್ಚರಿಕೆಯನ್ನು ನೀಡುತ್ತದೆ. ಜ್ಞಾನೋಕ್ತಿ 30:18, 19 ರ ಎಚ್ಚರಿಕೆಯನ್ನು ಕ್ರೈಸ್ತ ಸಹೋದರಿಯರು ಹೃದಯಕ್ಕೆ ತಕ್ಕೊಳ್ಳುವ ಒಂದು ವಿಧವು ಬೈಬಲನ್ನು ಕಲಿಯಲು ಆಸಕ್ತಿ ತೋರಿಸುತ್ತೇನೆಂದು ಹೇಳುವ ಪುರುಷರ ಕುರಿತಾಗಿಯೇ. ಒಬ್ಬ ಸ್ನೇಹಪರ ಪುರುಷನು, ಸಹ ಕಾರ್ಮಿಕನೇ ಆಗಿರಲಿ, ಅಂಥ ಆಸಕ್ತಿಯನ್ನು ತೋರಿಸುತ್ತಾನೆಂದು ಭಾಸವಾಗುವಲ್ಲಿ, ಸಹೋದರಿಯು ಅವನನ್ನು ಸಭೆಯ ಒಬ್ಬ ಸಹೋದರನೆಡೆಗೆ ಮಾರ್ಗದರ್ಶಿಸತಕ್ಕದ್ದು. “ಸ್ತ್ರೀಯಲ್ಲಿ ಪುರುಷನ ಪದ್ಧತಿಯ” ಅಪಾಯಗಳಿಲ್ಲದೆ ಯಾವುದೇ ಅಪ್ಪಟವಾದ ಆಸಕ್ತಿಯನ್ನೂ ಸಹೋದರನು ತೃಪ್ತಿಗೊಳಿಸಬಲ್ಲನು.