ರಾಕ್ ಬ್ಯಾಜರ್ ಚತುಷ್ಪಾದಿಗಳು ಪ್ರೀತಿಯೋಗ್ಯವಾದವುಗಳೂ ಹುಟ್ಟರಿವಿನ ವಿವೇಕವುಳ್ಳವುಗಳೂ
ಎಚ್ಚರ! ಪತ್ರಿಕೆಯ ದಕ್ಷಿಣ ಆಫ್ರಿಕದ ಸುದ್ದಿಗಾರರಿಂದ
ಬೈಬಲು ಯಾವ ಪ್ರಾಣಿಗಳನ್ನು “ಹುಟ್ಟರಿವಿನ ವಿವೇಕವುಳ್ಳವುಗಳು . . . ಬಲಾಢ್ಯವಲ್ಲದಿದ್ದರೂ ಬಂಡೆಯಲ್ಲಿ ತಮ್ಮ ಮನೆಗಳನ್ನು ಮಾಡುತ್ತವೆ” ಎಂದು ಕರೆಯತ್ತದೆ? ಮೊಲದ ಗಾತ್ರದ ಈ ಗಮನಾರ್ಹವಾದ ಸಣ್ಣ ಪ್ರಾಣಿಗಳನ್ನು ಬೈಬಲಿನ ವಿವಿಧ ಭಾಷಾಂತರಗಳು ಕನಿ ಮೊಲ, ಮಾರ್ಮಟ್ ಅಳಿಲು ಅಥವಾ ಬಂಡೆಯ ಬ್ಯಾಜರ್ ಕರಡಿಗಳು ಎಂದು ಕರೆಯತ್ತವೆ.—ಜ್ಞಾನೋಕ್ತಿ 30:24-26, NW.
ಈ ರಾಕ್ ಬ್ಯಾಜರ್ ಆಫ್ರಿಕದ ಕೆಲವು ಭಾಗಗಳಲ್ಲಿ ಮತ್ತು ಏಷ್ಯಾದ ತೀರಾ ನೈಋತ್ಯ ಭಾಗಗಳಲ್ಲಿ ಮಾತ್ರ ಕಾಣಸಿಗುವ ಒಂದು ಚತುಷ್ಪಾದಿ. ದಕ್ಷಿಣ ಆಫ್ರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುವ ಇದನ್ನು, “ಬ್ಯಾಜರ್” ಎಂಬುದಕ್ಕೆ ಡಚ್ ಭಾಷೆಯ ಪದದಿಂದ ಬಂದಿರುವ ರಾಕ್ ಡ್ಯಾಸಿ ಎಂದು ಕರೆಯಲಾಗುತ್ತದೆ.
ಈ ಡ್ಯಾಸಿಗಳು ದಂಶಕ ಪ್ರಾಣಿಗಳಂತೆ ಕಂಡರೂ, ಅವುಗಳಲ್ಲಿರುವ ಕೆಲವು ಲಕ್ಷಣಗಳು, ವಿಜ್ಞಾನಿ ಜೆರಿ ಡಿಗ್ರಾಫ್ ಅವರಿಗನುಸಾರ, “ಪ್ರತಿಯೊಂದು ಪ್ರಾಣಿಯ ಮಿಶ್ರಣವಾಗಿದೆ.” “ಅವುಗಳ ಬಾಚಿಹಲ್ಲು ದಂಶಕದ್ದು, ದವಡೆಹಲ್ಲು ಖಡ್ಗಮೃಗದ್ದು, ನಾಳರಚನೆ ತಿಮಿಂಗಿಲದ್ದು, ಮತ್ತು ಅವುಗಳ ಪಾದ ಆನೆಗಳದ್ದು!” ಪ್ರಾಣಿ ಶಾಸ್ತ್ರಜ್ಞರನ್ನು ಇದು ಗಲಿಬಿಲಿಗೊಳಿಸಿರುವುದು ಆಶ್ಚರ್ಯವಲ್ಲ!
ಅವುಗಳು ವೇಗ ಚಲಿಸುವ ಪ್ರಾಣಿಗಳಲ್ಲವಾದುದರಿಂದ ಮತ್ತು ಸರ್ವಕ್ಷಣೆಗೆ ಅಷ್ಟೊಂದು ಯೋಗ್ಯತೆಯುಳ್ಳವುಗಳಲ್ಲವಾದುದರಿಂದ ಈ ಡ್ಯಾಸಿಗಳು ವಿವೇಕಯುಕ್ತವಾಗಿ ಬಂಡೆಯ ಸರ್ತಗಳ ಯಾ ಪ್ರಪಾತಗಳ ಕಡಿದಾದ ಬಂಡೆ ಮತ್ತು ಬಿರುಕುಗಳಲ್ಲಿ ಜೀವಿಸುತ್ತದೆ. ಇದು ಗಾಳಿ, ಮಳೆ. ಹಾಗೂ ಕೊಂದು ತಿನ್ನುವ ಪ್ರಾಣಿಗಳಿಂದ ಅವುಗಳಿಗೆ ರಕ್ಷಣೆಯನ್ನು ಒದಗಿಸುತ್ತವೆ. ಆದುದರಿಂದ, ದಿನಕ್ಕೆ ಎರಡು ಪ್ರಧಾನ ಊಟಗಳಿಗಲ್ಲದೆ ಇನ್ನಾವ ವಿಷಯಗಳಿಗೂ ಸ್ಧಳಬಿಟ್ಟು ದೂರಹೋಗುವುದು ವಿರಳವೆಂಬುದು ಗ್ರಹಿಸಸಾಧ್ಯವಿರುವ ವಿಷಯ.
ಮತ್ತು ಎಂಥ ಊಟ! ಅಷ್ಟು ಸಣ್ಣ ಪ್ರಾಣಿಗಳಾಗಿರುವುದಕ್ಕೆ ಅವು ಆಶ್ಚರ್ಯಕರವಾಗುವಷ್ಟು ದೊಡ್ಡ ಗಾತ್ರದ ಸಸ್ಯಾಹಾರವನ್ನು ತಿನ್ನುತ್ತವೆ. ಇದಕ್ಕಿಂತಲೂ ಆಶ್ಚರ್ಯಕರವಾದುದು ಅವು ಆಹಾರವನ್ನು ನುಂಗುವ ವೇಗ. ದಿನದಲ್ಲಿ ಒಂದು ತಾಸಿಗಿಂತಲೂ ಕಡಮೆ ಸಮಯವನ್ನು ಅವು ತಿನ್ನುವುದರಲ್ಲಿ ಕಳೆಯುತ್ತವೆ! ಮತ್ತು ಅವುಗಳ ಈ ಅಭ್ಯಾಸವನ್ನು ಆಶ್ಚರ್ಯಕರವಾಗಿ ನಿಭಾಯಿಸುವ ಅವುಗಳ ಪಚನ ರಚನೆಯನ್ನು ಪ್ರಾಣಿ ಶಾಸ್ತ್ರಜ್ಞ ಜೆ. ಜೆ. ಸಿ. ಸಾರ್, “ಪ್ರಾಣಿರಾಜ್ಯದಲ್ಲಿ ಅದ್ವಿತೀಯ” ವೆಂದು ಹೇಳಿ ವರ್ಣಿಸಿದ್ದಾರೆ.
ಒಂದು ಸುಲಭಸಾಧ್ಯ ಆಹಾರವಲ್ಲ
ಬಂಡೆ ವಠಾರಗಳಲ್ಲಿ, ಬಂಡೆಗಳಂತೆಯೇ ತೋರುವ ಡ್ಯಾಸಿಗಳು ತೇಜೋಮಯವಾದ ಆಫ್ರಿಕನ್ ಬಿಸಿಲಿನಲ್ಲಿ ತಮ್ಮನ್ನು ಕಾಯಿಸಿಕೊಳ್ಳುವುದು ಒಂದು ಸಾಮಾನ್ಯ ನೋಟವಾಗಿದೆ. ಡ್ಯಾಸಿಗಳಿಗಾಗಿ ಒಂದು ವಿಶೇಷ ಒಲುಮೆಯಿರುವ ಕಪ್ಪು ಗಿಡುಗನಿಗೆ ಇದು ತುಂಬಾ ಆಕರ್ಷಕವಾಗಿದೆ. ಆದರೆ ಈ ಚಿಕ್ಕ ಪ್ರಾಣಿಯು ಸುಲಭವಾಗಿ ಎಟಕುವುದಿಲ್ಲ. ಅವನ ದೃಷ್ಟಿಶಕ್ತಿಯು ಎಷ್ಟು ಚೂಪಾಗಿದೆಯೆಂದರೆ ಒಂದು ಕಿ.ಮೀ.ಗಿಂತ ದೂರದಲ್ಲಿ ಆಗುವ ಚಲನೆಯನ್ನು ಆತನು ಪತ್ತೆಮಾಡುತ್ತಾನೆ! ಮತ್ತು ಗಿಡುಗ ಸೂರ್ಯನ ಮುಂದೆ ಇದ್ದರೂ, ಡ್ಯಾಸಿ ಅವನನ್ನು ಕಂಡುಹಿಡಿಯುತ್ತದೆ. ಅದು ಹೇಗೆ ಸಾಧ್ಯ? ಹಾನಿಯಿಲ್ಲದೇ ಸೂರ್ಯನನ್ನು ನೇರವಾಗಿ ನೋಡಲು ಅವನಿಗೆ ಸಾಧ್ಯಮಾಡುವಂತೆ, ಅವನ ಕಣ್ಣುಗಳು ಸೂರ್ಯನ ಕಿರಣಗಳನ್ನು ಸೋಸುವ ಒಂದು ವಿಶೇಷ ಪೊರೆಯೊಂದಿಗೆ ಅಣಿಮಾಡಲ್ಪಟ್ಟಿವೆ. ಶತ್ರುವನ್ನು ಕಂಡೊಡನೆ ಅಪಾಯ ಸೂಚನೆ ಕೊಡಲಾಗುತ್ತದೆ—ಸಿಪಾಯಿ ಡ್ಯಾಸಿಯಿಂದ ಒಂದು ಕೀರಲು ಬೊಗಳುವಿಕೆ—ಮತ್ತು ತತ್ಕ್ಷಣ ಬಂಡೆಗಳು ಬರಿದಾಗುತ್ತವೆ, ಎಲ್ಲ ಡ್ಯಾಸಿಗಳು ಬಂಡೆಗಳ ನಡುವೆ ಮತ್ತು ಕೆಳಗಡೆ ಇರುವ ಬಿರುಕುಗಳಲ್ಲಿ ಹೋಗಿ ಸೇರುತ್ತವೆ. ಆತನ ಆಹಾರಕ್ಕಾಗಿ ಗಿಡುಗನು ಪುನಃ ಒಮ್ಮೆ ಪ್ರಯತ್ನಿಸಬೇಕಾದೀತು.
ಉನ್ನತ ಶ್ರೇಣಿಯ ಸಹವಾಸಿಪ್ರಿಯರು
ಸಾಮಾಜಿಕ ಜೀವನ—ರಾತ್ರಿಗಳಲ್ಲಿ ಡ್ಯಾಸಿಗಳಿಗೆ ಚಳಿಯಾಗುವಾಗ ಎಂತಹ ಪ್ರಯೋಜನ! ಸಹ ಡ್ಯಾಸಿಗಳೊಂದಿಗೆ, ಒಟ್ಟಿಗೆ ಗಟ್ಟಿಯಾಗಿ ಒತ್ತಲ್ಪಟ್ಟು, ಎಲ್ಲರ ಮುಖಗಳು ಹೊರಗೆ ಇರುವುದು ಎಷ್ಟು ಸಹಾಯಕಾರಿಯು. ಮುದುರಿಕೊಂಡಿರುವ ಗುಂಪಿನ ಮೇಲೆ—ಕೆಲವೊಮ್ಮೆ 25ರಷ್ಟು—ಮೂರು ಅಥವಾ ನಾಲ್ಕು ಸರ್ತಗಳಷ್ಟು ಎತ್ತರಕ್ಕೆ ಕೆಲವು ಡ್ಯಾಸಿಗಳು ರಾಶಿಹಾಕುವರು—ಒಬ್ಬರು ಇನ್ನೊಬ್ಬರೊಂದಿಗೆ ಬೆಚ್ಚಗೆಯನ್ನು ಹಂಚುವರು!
ಆದಾಗ್ಯೂ, ಅದಕ್ಕೆ ಆದರ ಕುಂದುಗಳಿರಸಾಧ್ಯವಿದೆ, ಏಕೆಂದರೆ ಅವು ಕೆಣಕುವ ಚಿಕ್ಕ ಪ್ರಾಣಿಗಳಾಗಿವೆ. ಆದರೆ ಅವರ ಹುಟ್ಟರಿವಿನ ಬುದ್ಧಿ ಅವರ ಸಹಾಯಕ್ಕೆ ಬರುತ್ತದೆ. ಡಾ. ಪಿ. ಬಿ. ಫೌರಿ ವಿವರಿಸುವುದು: “ಸಾಧಾರಣವಾಗಿ, ಅವರು ತಮ್ಮ ತಲೆಗಳನ್ನು ಒಬ್ಬರು ಇನ್ನೊಬ್ಬರಿಗಿಂತ ದೂರವಿರಿಸುತ್ತಾ ಮಲಗುತ್ತಾರೆ, ಒಬ್ಬರು ಇನ್ನೊಬ್ಬರಿಗೆ ಹತ್ತಿರದ ಅಪ್ರಸನ್ನತೆಯಲ್ಲಿ ಉಣ್ಣುವುದಿಲ್ಲ ಮತ್ತು ಒಬ್ಬರು ಇನ್ನೊಬ್ಬರಿಗೆ ದಾಟಿಹೋಗಲು ಒತ್ತಾಯಿಸಲ್ಪಟ್ಟಾಗ ವಿವಿಧ ಶಾಂತಗೊಳಿಸುವ ಕರೆಗಳನ್ನು ಉಚ್ಛರಿಸುತ್ತವೆ.” ಮತ್ತು ಅವರ ಕರೆಗಳು ಸಾಮಾನ್ಯವಾಗಿ ಕೆಳ ಸ್ಥಾಯಿದ್ದಾಗಿದ್ದು ಕೇವಲ ಕೆಲವು ಮೀಟರುಗಳಷ್ಟು ದೂರದಲ್ಲಿ ಕೇಳಿಸಸಾಧ್ಯವಿರುವುದರಿಂದ, ಶತ್ರುಗಳನ್ನು ಆಕರ್ಷಿಸದೆ ಅವರು ಒಬ್ಬರು ಇನ್ನೊಬ್ಬರೊಂದಿಗೆ ಸಂಪರ್ಕಿಸಬಹುದು.
ಚುರುಕಾದ, ಪ್ರೀತಿಯೋಗ್ಯವಾದ ಮುದ್ದಿನ ಪ್ರಾಣಿಗಳು
ನುಣುಪಾದ ಮತ್ತು ಅಧಿಕಾಂಶ ಲಂಬವಾಗಿರುವ ಕಡಿದಾದ ಬಂಡೆಯನ್ನು ಈ ಡ್ಯಾಸಿಗಳು ಹತ್ತುವ ವಿಧವನ್ನು ಕಂಡು ಅನೇಕ ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಅವು ಹತ್ತುವುದು ಹೇಗೆ? ಅವು ತಮ್ಮ ದಪ್ಪವಾದ ಮತ್ತು ನುಣುಪಾದ ಪಾದತಲಗಳಿರುವ ಪಾದಗಳನ್ನು ಘರ್ಷಣೆಯಿರುವ ಮೆತ್ತೆಗಳಾಗಿ ರೂಪಿಸಿಯೆ. ಮತ್ತು ಅವುಗಳ ಪಾದಗಳು ದೇಹದಲ್ಲಿ ಬೆವರುವ ಒಂದೇ ಅಂಗಭಾಗಗಳಾಗಿದ್ದು ಸದಾ ಒದೆಯ್ದಾಗಿರುವುದರಿಂದ, ಅವುಗಳಿಗಿರುವ ಕರ್ಷಣ ಅಷ್ಟು ಹೆಚ್ಚು ಬಲವಾಗಿದೆ.
ಈ ಮೆಚ್ಚಿನ ಪ್ರಾಣಿಗಳನ್ನು ಸುಲಭವಾಗಿ ಪಳಗಿಸಬಹುದು. ಮತ್ತು ಅವುಗಳ ಸ್ವಚ್ಛತೆಯ ಕುರಿತು ಚಿಂತಿಸುವ ಅವಶ್ಯವಿಲ್ಲ. ಇದೇ ಉದ್ದೇಶಕ್ಕಾಗಿರುವ ಒಂದು ಅನುಕೂಲವಾದ ಮೊನೆಯುಗುರು ಇರುವ ಅವುಗಳ ಹಿಂಗಾಲಿನಿಂದ ಅವು ಪದೇ ಪದೇ ಶುಚಿಮಾಡಿಕೊಳ್ಳುತ್ತವೆ. ಬಾರ್ನ್ ಫ್ರೀ ಎಂಬ ತನ್ನ ಪುಸ್ತಕದಲ್ಲಿ ಜೈ ಆ್ಯಡಮ್ಸನ್ ಮೊದಲಾಗಿ ತನ್ನ ಮುದ್ದಿನ ಡ್ಯಾಸಿಗೆ ತುರಿಸುವ ಚಾಳಿ ಇರುವುದನ್ನು ಕಂಡು ತಾನು ಗಾಬರಿಗೊಂಡೆನೆಂದು ಒಪ್ಪಿಕೊಂಡರು. ಆ ಬಳಿಕ, ಈ ಮೊನೆಯುಗುರಿನ ಮೂಲಕ ಅದು ತನ್ನ ಕೂದಲನ್ನು ಮೃದುನಯವಾಗಿ ಇಟ್ಟುಕೊಳ್ಳುತ್ತಿತ್ತೆಂದೂ ಆ ಪ್ರಾಣಿಯಲ್ಲಿ ಯಾವ ಚಿಗಟವೂ ಉಣ್ಣೆಹುಳುವೂ ಕಂಡುಬರಲಿಲ್ಲವೆಂದೂ ಅವರ ಗ್ರಹಿಕೆಗೆ ಬಂತು.
ಮುದ್ದಿನ ಡ್ಯಾಸಿಗೆ ಮಲಮೂತ್ರದ ತರಬೇತನ್ನು ಕಲಿಸುವುದು ಹೇಗೆ? ಇದರ ಅಗತ್ಯವಿಲ್ಲ. ಕಾಡಿನಲ್ಲಿ ಅವುಗಳ ಇಡೀ ಡ್ಯಾಸಿ ಸಮುದಾಯವೆ ಒಂದು ನಿರ್ದಿಷ್ಟ ಸ್ಥಳವನ್ನು ತಮ್ಮ ಪಾಯಿಖಾನೆಗಾಗಿ ಪ್ರತ್ಯೇಕಿಸಿಡುತ್ತವೆ. ಆದುದರಿಂದ, ಮುದ್ದಿನ ಪ್ರಾಣಿಗಳಾದ ಡ್ಯಾಸಿಗಳು, “ಸ್ವಪ್ರೇರಣೆಯಿಂದಲೆ ಪಾಯಿಖಾನೆಯನ್ನು ಉಪಯೋಗಿಸಲು ಕಲಿಯುತ್ತವೆ” ಎನ್ನುತ್ತಾರೆ ಫೌರಿ. “ಆದರೆ ನೀರು ಹಾಯಿಸುವುದಿಲ್ಲ, ನಿಜ!” ಎಂದು ಅವರು ಕೂಡಿಸಿ ಹೇಳುತ್ತಾರೆ. ಜೈ ಆ್ಯಡಮ್ಸನ್ ಅವರ ಡ್ಯಾಸಿ ಹೀಗೆಯೆ ಮಾಡಿತು. “ಅವಳ ಮಲ ವಿಸರ್ಜನೆಯ ಅಭ್ಯಾಸ ವಿಚಿತ್ರ . . . ಮನೆಯಲ್ಲಿ ಪ್ಯಾಟಿ (ಎಂಬ ಹೆಸರಿನ ಡ್ಯಾಸಿ) ಪಾಯಿಖಾನೆಯ ಕುರ್ಚಿಯ ಬದಿಯಲ್ಲಿ ತಪ್ಪದೆ ಕುಳಿತುಕೊಳ್ಳುತ್ತಿತ್ತು, ಮತ್ತು ಇದು ನಗಿಸುವ ನೋಟವನ್ನು ನಮಗೆ ಒದಗಿಸುತ್ತಿತ್ತು. ಸಫಾರಿಯ [ವನ್ಯವಿಹಾರದ] ಸಮಯದಲ್ಲಿ ಅದಕ್ಕೆ ಇಂಥ ಸೌಕರ್ಯ ದೊರೆಯದೆ ಇದ್ದಾಗ, ಅದು ತೀರಾ ಗಲಿಬಿಲಿಗೊಳ್ಳುತ್ತಿತ್ತು ಮತ್ತು ನಾವು ಕೊನೆಗೆ ಅದರ ಉಪಯೋಗಕ್ಕಾಗಿ ಒಂದು ಪಾಯಿಖಾನೆಯನ್ನು ತಯಾರಿಸಿ ಕೊಡಬೇಕಾಯಿತು.”
ಯೆಹೋವನು ಹೀಗೆ “ಹುಟ್ಟರಿವಿನ ವಿವೇಕವುಳ್ಳವುಗಳಾಗಿ” ಉಂಟುಮಾಡಿರುವ ಈ ಮತ್ತು ಇತರ ಪ್ರಾಣಿಗಳ ಪೂರ್ಣ ಪರಿಚಯವನ್ನು ಸಕಾಲದಲ್ಲಿ ಮಾಡಿಕೊಳ್ಳುವುದು ಅದೆಷ್ಟು ಉಲ್ಲಾಸಕರವಾಗಿರುವುದು! (g90 9/8)