ಅಧ್ಯಾಯ ಇಪ್ಪತ್ತೇಳು
ಯೆಹೋವನು ಜನಾಂಗಗಳ ಮೇಲೆ ತನ್ನ ಕೋಪಾಗ್ನಿಯನ್ನು ಸುರಿಸುತ್ತಾನೆ
1, 2. (ಎ) ಯೆಹೋವನ ಪ್ರತೀಕಾರದ ವಿಷಯದಲ್ಲಿ, ನಾವು ಯಾವುದರ ಬಗ್ಗೆ ನಿಶ್ಚಿತರಾಗಿರಸಾಧ್ಯವಿದೆ? (ಬಿ) ಮುಯ್ಯಿ ತೀರಿಸುವ ಮೂಲಕ ದೇವರು ಏನನ್ನು ಸಾಧಿಸುತ್ತಾನೆ?
ಯೆಹೋವ ದೇವರು ತನ್ನ ನಂಬಿಗಸ್ತ ಸೇವಕರ ಪರವಾಗಿ ತಾಳ್ಮೆಯನ್ನು ತೋರಿಸುವುದರ ಜೊತೆಗೆ, ತನ್ನ ಉದ್ದೇಶವನ್ನು ನೆರವೇರಿಸುವುದಕ್ಕಾಗಿ ವೈರಿಗಳೊಂದಿಗೂ ತಾಳ್ಮೆಯಿಂದ ನಡೆದುಕೊಳ್ಳುತ್ತಾನೆ. (1 ಪೇತ್ರ 3:19, 20; 2 ಪೇತ್ರ 3:15) ಆದರೆ ಯೆಹೋವನು ತೋರಿಸುವ ತಾಳ್ಮೆಯನ್ನು ಆತನ ವೈರಿಗಳು ಮೆಚ್ಚುವುದಿಲ್ಲ. ಅದರ ಬದಲು ಯೆಹೋವನು ನಾಶನವನ್ನು ತರಲು ಅಸಮರ್ಥನಾಗಿದ್ದಾನೆ ಇಲ್ಲವೆ ಹಾಗೆ ಮಾಡಲು ಆತನಿಗೆ ಮನಸ್ಸಿಲ್ಲವೆಂದೇ ಅವರೆಣಿಕೆ. ಆದರೆ ಯೆಶಾಯ 34ನೆಯ ಅಧ್ಯಾಯವು ತೋರಿಸುವಂತೆ, ಯೆಹೋವನು ಸ್ವಲ್ಪ ಕಾಲ ಸುಮ್ಮನಿದ್ದರೂ, ಕೊನೆಯಲ್ಲಿ ತನ್ನ ವೈರಿಗಳಿಂದ ಲೆಕ್ಕಕೇಳದೆ ಬಿಡುವುದಿಲ್ಲ. (ಚೆಫನ್ಯ 3:8) ಉದಾಹರಣೆಗೆ, ಎದೋಮ್ ಮತ್ತು ಇತರ ಜನಾಂಗಗಳು ಯಾವ ಅಡತಡೆಯೂ ಇಲ್ಲದೆ ತನ್ನ ಜನರನ್ನು ವಿರೋಧಿಸುವಂತೆ ದೇವರು ಅನುಮತಿಸಿದನು. ಆದರೆ ಅವುಗಳ ಮೇಲೆ ಸೇಡು ತೀರಿಸಿಕೊಳ್ಳುವ ಸಮಯವನ್ನೂ ಯೆಹೋವನು ನಿರ್ಧರಿಸಿಟ್ಟಿದ್ದನು. (ಧರ್ಮೋಪದೇಶಕಾಂಡ 32:35) ಅಂತೆಯೇ, ಯೆಹೋವನು ತನ್ನ ನೇಮಿತ ಸಮಯದಲ್ಲಿ, ತನ್ನ ಪರಮಾಧಿಕಾರವನ್ನು ಧಿಕ್ಕರಿಸುವ ಈ ಪ್ರಸ್ತುತ ದುಷ್ಟ ಲೋಕದ ಎಲ್ಲ ಘಟಕಾಂಶಗಳ ಮೇಲೆ ಮುಯ್ಯಿ ತೀರಿಸುವನು.
2 ದೇವರು ಮುಯ್ಯಿ ತೀರಿಸುವ ಪ್ರಧಾನ ಕಾರಣವು, ಆತನ ಪರಮಾಧಿಕಾರವನ್ನು ಪ್ರದರ್ಶಿಸಿ, ಆತನ ನಾಮವನ್ನು ಮಹಿಮೆಪಡಿಸಿಕೊಳ್ಳುವುದೇ ಆಗಿದೆ. (ಕೀರ್ತನೆ 83:13-18) ಅದೂ ಅಲ್ಲದೆ, ಆತನ ಸೇವಕರ ಮೇಲಿರುವ ದೋಷವನ್ನು ಅದು ಪರಿಹರಿಸಿ, ಅವರೇ ಆತನ ನಿಜ ಪ್ರತಿನಿಧಿಗಳೆಂಬ ಸಮರ್ಥನೆಯನ್ನು ನೀಡುತ್ತದೆ ಮತ್ತು ಅವರನ್ನು ಸಂದಿಗ್ಧ ಪರಿಸ್ಥಿತಿಗಳಿಂದ ಬಿಡಿಸುತ್ತದೆ. ಅಲ್ಲದೆ, ಯೆಹೋವನ ಪ್ರತೀಕಾರವು ಆತನ ನ್ಯಾಯಕ್ಕೆ ಸದಾ ಹೊಂದಿಕೆಯಲ್ಲಿದೆ.—ಕೀರ್ತನೆ 58:10, 11.
ಜನಾಂಗಗಳೇ, ಕೇಳಿರಿ
3. ಯೆಶಾಯನ ಮೂಲಕ ಯೆಹೋವನು ಜನಾಂಗಗಳಿಗೆ ಯಾವ ಆಮಂತ್ರಣವನ್ನು ನೀಡುತ್ತಾನೆ?
3 ಎದೋಮಿನ ವಿರುದ್ಧ ಸೇಡು ತೀರಿಸಿಕೊಳ್ಳುವ ಮೊದಲು, ಯೆಶಾಯನ ಮೂಲಕ ಯೆಹೋವನು ಎಲ್ಲ ಜನಾಂಗಗಳಿಗೆ ಒಂದು ವಿಧಿವಿಹಿತ ಆಮಂತ್ರಣವನ್ನು ನೀಡುತ್ತಾನೆ: “ಜನಾಂಗಗಳೇ, ಸಮೀಪಿಸಿ ಕೇಳಿರಿ; ಜನಗಳೇ, ಕಿವಿಗೊಡಿರಿ! ಭೂಮಿಯೂ ಅದರಲ್ಲಿನ ಸಮಸ್ತವೂ, ಲೋಕವೂ ಅದರಿಂದ ಉದ್ಭವಿಸುವದೆಲ್ಲವೂ ಆಲಿಸಲಿ.” (ಯೆಶಾಯ 34:1) ದುಷ್ಟ ಜನಾಂಗಗಳ ವಿರುದ್ಧ ಪ್ರವಾದಿಯು ಸತತವಾಗಿ ಮಾತಾಡಿದ್ದಾನೆ. ಈಗ ಅವರ ವಿರುದ್ಧವಿರುವ ದೈವಾರೋಪಗಳನ್ನು ಅವನು ಸಾರಾಂಶಿಸಲಿದ್ದಾನೆ. ಈ ಎಚ್ಚರಿಕೆಗಳು ಇಂದು ನಮ್ಮ ದಿನಕ್ಕೆ ಅನ್ವಯಿಸುತ್ತವೊ?
4. (ಎ) ಯೆಶಾಯ 34:1ರಲ್ಲಿ ತಿಳಿಸಲ್ಪಟ್ಟಂತೆ, ಜನಾಂಗಗಳು ಏನು ಮಾಡಬೇಕಾಗಿದೆ? (ಬಿ) ಯೆಹೋವನು ಜನಾಂಗಗಳ ಮೇಲೆ ನ್ಯಾಯತೀರಿಸುವುದರಿಂದ, ಆತನೊಬ್ಬ ಕ್ರೂರ ದೇವರೆಂದು ಹೇಳಸಾಧ್ಯವೊ? (ಪುಟ 363ರಲ್ಲಿರುವ ರೇಖಾಚೌಕವನ್ನು ನೋಡಿರಿ.)
4 ಹೌದು, ಅನ್ವಯಿಸುತ್ತವೆ. ವಿಶ್ವದ ಪರಮಾಧಿಕಾರಿಗೆ ಈ ದುಷ್ಟ ವಿಷಯ ವ್ಯವಸ್ಥೆಯ ಎಲ್ಲ ಘಟಕಾಂಶಗಳೊಂದಿಗೆ ಒಂದು ವಿವಾದವಿದೆ. ಆದುದರಿಂದಲೇ, ತಾನು ಲೋಕವ್ಯಾಪಕವಾಗಿ ಪ್ರಕಟಿಸಿರುವಂತಹ ಬೈಬಲ್ ಆಧಾರಿತ ಸಂದೇಶಕ್ಕೆ ಕಿವಿಗೊಡುವಂತೆ, ಯೆಹೋವನು ‘ಜನಗಳನ್ನು’ ಮತ್ತು ‘ಭೂಮಿಯನ್ನು’ ಆಮಂತ್ರಿಸುತ್ತಾನೆ. ಈ ಸಂದೇಶವು ಇಡೀ ಭೂಮಿಯನ್ನು ಆವರಿಸುವುದೆಂದು ಯೆಶಾಯನು ಹೇಳುವಾಗ, ಕೀರ್ತನೆ 24:1ರಲ್ಲಿರುವ ಮಾತುಗಳು ನಮ್ಮ ಜ್ಞಾಪಕಕ್ಕೆ ಬರುತ್ತವೆ. ಯೆಹೋವನ ಸಾಕ್ಷಿಗಳು “ಭೂಲೋಕದ ಕಟ್ಟಕಡೆಯ ವರೆಗೂ” ಸಾರುವುದರಿಂದ, ಈ ಪ್ರವಾದನೆಯು ನಮ್ಮ ದಿನಗಳಲ್ಲಿ ನೆರವೇರಿದೆ. (ಅ. ಕೃತ್ಯಗಳು 1:8) ಆದರೆ ಜನಾಂಗಗಳು ಈ ಸಂದೇಶಕ್ಕೆ ಕಿವಿಗೊಟ್ಟಿಲ್ಲ. ತಮ್ಮ ಭಾವೀ ನಾಶನದ ಎಚ್ಚರಿಕೆಯನ್ನು ಅವು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಕಿವಿಗೊಟ್ಟಿಲ್ಲ ಎಂಬ ಕಾರಣಕ್ಕಾಗಿ ಯೆಹೋವನು ತನ್ನ ಮಾತನ್ನು ನೆರವೇರಿಸದೆ ಹೋಗಲಾರನು.
5, 6. (ಎ) ಯಾವ ವಿಷಯಕ್ಕಾಗಿ ಜನಾಂಗಗಳು ದೇವರಿಗೆ ಲೆಕ್ಕವೊಪ್ಪಿಸಬೇಕು? (ಬಿ) ‘ರಕ್ತಪ್ರವಾಹದಿಂದ ಗುಡ್ಡಗಳು ಕರಗುವದು’ ಹೇಗೆ?
5 ದುಷ್ಟ ಜನಾಂಗಗಳ ಕರಾಳ ಭವಿಷ್ಯತ್ತನ್ನು ಪ್ರವಾದಿಯು ಈಗ ವರ್ಣಿಸುತ್ತಾನೆ. ಅದು ತದನಂತರ ವರ್ಣಿಸಲ್ಪಟ್ಟಿರುವ ದೇವಜನರ ಉಜ್ವಲ ನಿರೀಕ್ಷೆಗಿಂತ ಬಹಳ ಭಿನ್ನವಾಗಿದೆ. (ಯೆಶಾಯ 35:1-10) ಪ್ರವಾದಿಯು ಹೇಳುವುದು: “ಯೆಹೋವನು ಸಕಲಜನಾಂಗಗಳಲ್ಲಿ ಕೋಪಮಾಡಿ ಅವುಗಳ ಸೈನ್ಯದ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ನಿಶ್ಶೇಷವಾಗಿ ಸಂಹರಿಸಿದ್ದಾನಷ್ಟೆ. ಅವರಲ್ಲಿ ಹತರಾದವರು ಬಿಸಾಡಲ್ಪಡುವರು, ಅವರ ಶವಗಳ ದುರ್ವಾಸನೆಯು ಮೇಲಕ್ಕೆ ಬಡಿಯುವದು; ಅವರ ರಕ್ತಪ್ರವಾಹದಿಂದ ಗುಡ್ಡಗಳು ಕರಗುವವು.”—ಯೆಶಾಯ 34:2, 3.
6 ಈಗ ಜನಾಂಗಗಳ ರಕ್ತಾಪರಾಧದ ಕಡೆಗೆ ಗಮನಹರಿಸಲಾಗುತ್ತದೆ. ಇಂದು ಕ್ರೈಸ್ತಪ್ರಪಂಚದ ರಾಷ್ಟ್ರಗಳ ಮೇಲೆಯೇ ಹೆಚ್ಚಿನ ರಕ್ತಾಪರಾಧವಿದೆ. ಎರಡು ಜಾಗತಿಕ ಯುದ್ಧಗಳು ಮತ್ತು ಇನ್ನೂ ಅನೇಕ ಚಿಕ್ಕಪುಟ್ಟ ಯುದ್ಧಗಳ ಮೂಲಕ, ಅವು ಭೂಮಿಯನ್ನು ಮಾನವ ರಕ್ತದಿಂದ ತೊಯಿಸಿವೆ. ಈ ರಕ್ತಾಪರಾಧಕ್ಕೆ ಯಾರು ದಂಡವಿಧಿಸಬೇಕು? ಜೀವದ ಮೂಲನಾಗಿರುವ ಸೃಷ್ಟಿಕರ್ತನಲ್ಲದೆ ಬೇರೆ ಯಾರೂ ಅಲ್ಲ. (ಕೀರ್ತನೆ 36:9) ಏಕೆಂದರೆ, “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ” ಎಂಬ ಮಟ್ಟವನ್ನು ಯೆಹೋವನ ನಿಯಮಶಾಸ್ತ್ರವೇ ಸ್ಥಾಪಿಸಿದೆ. (ವಿಮೋಚನಕಾಂಡ 21:23-25; ಆದಿಕಾಂಡ 9:4-6) ಈ ನಿಯಮಕ್ಕನುಸಾರ, ಜನಾಂಗಗಳು ತಮ್ಮ ರಕ್ತವನ್ನು ಸುರಿಸಿಯೇ ಕೊನೆಯುಸಿರೆಳೆಯುವಂತೆ ಆತನು ಮಾಡುವನು. ಅವರ ಹೂಳಲ್ಪಡದ ಶವಗಳ ದುರ್ವಾಸನೆಯು ಎಲ್ಲೆಲ್ಲೂ ಹರಡುವುದು. ಎಂತಹ ಅವಮಾನಕರ ಸಾವು! (ಯೆರೆಮೀಯ 25:33) ಜನಾಂಗಗಳು ಸುರಿಸಿರುವ ರಕ್ತಕ್ಕೆ ಪ್ರತಿಯಾಗಿ ಕೇಳಿಕೊಳ್ಳಲ್ಪಟ್ಟ ರಕ್ತವು, ದೊಡ್ಡ ದೊಡ್ಡ ಗುಡ್ಡಗಳನ್ನೇ ಕರಗಿಸಲು ಸಾಕಾಗುವಷ್ಟಿರುವುದು. (ಚೆಫನ್ಯ 1:17) ತಮ್ಮ ಮಿಲಿಟರಿ ಪಡೆಗಳು ಸಂಪೂರ್ಣ ನಾಶವಾಗುವಾಗ, ಈ ಲೋಕದ ರಾಷ್ಟ್ರಗಳು ತಮ್ಮ ಸರಕಾರಗಳ ಪತನವನ್ನೂ ನೋಡುವವು. ಈ ಸರಕಾರಗಳನ್ನೇ ಕೆಲವೊಮ್ಮೆ ಬೈಬಲಿನಲ್ಲಿ ಬೆಟ್ಟಗಳೋಪಾದಿ ಚಿತ್ರಿಸಲಾಗಿದೆ.—ದಾನಿಯೇಲ 2:35, 44, 45; ಪ್ರಕಟನೆ 17:9.
7. “ಆಕಾಶಮಂಡಲವು” ಏನಾಗಿದೆ, ಮತ್ತು “ನಕ್ಷತ್ರಸೈನ್ಯವೆಲ್ಲಾ” ಏನನ್ನು ಸೂಚಿಸುತ್ತದೆ?
7 ಸನ್ನಿವೇಶವನ್ನು ಪುನಃ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಯೆಶಾಯನು ಹೇಳುವುದು: “ನಕ್ಷತ್ರಸೈನ್ಯವೆಲ್ಲಾ ಕ್ಷಯಿಸುವದು, ಆಕಾಶಮಂಡಲವು ಸುರಳಿಯಂತೆ ಸುತ್ತಿಕೊಳ್ಳುವದು; ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ತಾರಾಮಂಡಲವೆಲ್ಲಾ ಬಾಡಿ ಬೀಳುವದು.” (ಯೆಶಾಯ 34:4) “ನಕ್ಷತ್ರಸೈನ್ಯವೆಲ್ಲಾ” ಎಂಬ ಅಭಿವ್ಯಕ್ತಿಯು, ಅಕ್ಷರಾರ್ಥ ನಕ್ಷತ್ರಗಳನ್ನು ಮತ್ತು ಗ್ರಹಗಳನ್ನು ಅರ್ಥೈಸುವುದಿಲ್ಲ. ಹಾಗೆಯೇ, 5ನೇ ಮತ್ತು 6ನೇ ವಚನಗಳಲ್ಲಿ, ಆ “ಮೇಲಿನ ಲೋಕದಲ್ಲಿ” ಖಡ್ಗವೊಂದು ರಕ್ತಮಯವಾಗಿರುವುದರ ಬಗ್ಗೆ ನಾವು ಓದುತ್ತೇವೆ. ಇದು ಮಾನವ ಕ್ಷೇತ್ರದಲ್ಲಿರುವ ಯಾವುದೊ ವಿಷಯವನ್ನು ಸೂಚಿಸಲಿಕ್ಕಾಗಿಯೇ ಸಾಂಕೇತಿಕವಾಗಿ ಬಳಸಲ್ಪಟ್ಟಿದೆ. (1 ಕೊರಿಂಥ 15:50) ಮಾನವ ಸರಕಾರಗಳು, ಶ್ರೇಷ್ಠ ಅಧಿಕಾರಿಗಳೋಪಾದಿ ವಹಿಸಿಕೊಂಡಿರುವ ಉನ್ನತ ಸ್ಥಾನಮಾನದಿಂದಾಗಿ ಅವುಗಳನ್ನು ಮಾನವ ಸಮಾಜದ ಮೇಲೆ ಆಡಳಿತ ನಡೆಸುವ ಆಕಾಶಮಂಡಲಕ್ಕೆ ಹೋಲಿಸಲಾಗಿದೆ. (ರೋಮಾಪುರ 13:1-4) ಆದುದರಿಂದ, “ನಕ್ಷತ್ರಸೈನ್ಯವೆಲ್ಲಾ” ಎಂಬುದು, ಈ ಲೋಕದ ಎಲ್ಲಾ ಸರಕಾರಗಳು ಹೊಂದಿರುವ ಸೈನ್ಯದ ಒಟ್ಟುಮೊತ್ತವನ್ನು ಪ್ರತಿನಿಧಿಸುತ್ತದೆ.
8. ಸಾಂಕೇತಿಕ ಆಕಾಶಗಳು “ಸುರುಳಿಯಂತೆ” ಇರುವುದು ಹೇಗೆ, ಮತ್ತು ಅವರ ‘ಸೈನ್ಯಗಳಿಗೆ’ ಏನು ಸಂಭವಿಸುತ್ತದೆ?
8 ಈ ‘ಸೈನ್ಯವು,’ ಹಾಳಾಗಿಹೋಗುವ ಒಂದು ಪದಾರ್ಥದಂತೆ “ಕ್ಷಯಿಸುವದು” ಇಲ್ಲವೆ ಕೊಳೆತುಹೋಗುವುದು. (ಕೀರ್ತನೆ 102:26; ಯೆಶಾಯ 51:6) ನಮ್ಮ ಮೇಲಿರುವ ಆಕಾಶವನ್ನು ಬರಿಯ ಕಣ್ಣುಗಳಿಂದ ನೋಡುವಾಗ, ಅದು ಒಳಪಕ್ಕದಲ್ಲಿ ಮಾತ್ರ ಬರವಣಿಗೆಯನ್ನು ಹೊಂದಿರುವ ಪುರಾತನ ಸುರುಳಿಯಂತೆ ಬಾಗಿರುವುದು ಕಾಣಿಸುತ್ತದೆ. ಸುರುಳಿಯ ಒಳಪಕ್ಕದಲ್ಲಿ ಬರೆಯಲ್ಪಟ್ಟಿರುವ ವಿಷಯವನ್ನು ಒಬ್ಬನು ಓದಿಯಾದ ಬಳಿಕ, ಆ ಸುರುಳಿಯನ್ನು ಸುತ್ತಿಡಲಾಗುತ್ತದೆ. ಅಂತೆಯೇ, “ಆಕಾಶಮಂಡಲವು ಸುರಳಿಯಂತೆ ಸುತ್ತಿಕೊಳ್ಳುವದು” ಎಂದು ಪ್ರವಾದನೆಯು ಹೇಳುವಾಗ, ಮಾನವ ಸರಕಾರಗಳು ಖಂಡಿತವಾಗಿಯೂ ಕೊನೆಗೊಳ್ಳುವವು ಎಂಬುದೇ ಇದರರ್ಥ. ತಮ್ಮ ಇತಿಹಾಸದ ಕೊನೆಯ ಪುಟದೊಳಕ್ಕೆ ಕಾಲಿರಿಸುತ್ತಿರುವ ಈ ಸರಕಾರಗಳು, ಅರ್ಮಗೆದೋನ್ ಯುದ್ಧದಲ್ಲಿ ನಾಶಗೊಳಿಸಲ್ಪಡುವವು. ಅವುಗಳ ಪ್ರಭಾವಕಾರಿ ‘ಸೈನ್ಯಗಳು,’ ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ಒಣ ಅಂಜೂರವು ‘ಉದುರುವ’ ಹಾಗೆಯೂ ಇರುವವು. ಅವುಗಳ ಸಮಯವು ಮುಗಿದುಹೋಗಿರುವುದು.—ಹೋಲಿಸಿ ಪ್ರಕಟನೆ 6:12-14.
ಮುಯ್ಯಿ ತೀರಿಸುವ ದಿನ
9. (ಎ) ಎದೋಮಿನ ಮೂಲವನ್ನು ತಿಳಿಸಿರಿ, ಮತ್ತು ಇಸ್ರಾಯೇಲ್ ಹಾಗೂ ಎದೋಮಿನ ಮಧ್ಯೆ ಎಂತಹ ಸಂಬಂಧವು ವಿಕಸಿಸಿತು? (ಬಿ) ಯೆಹೋವನು ಎದೋಮಿನ ಬಗ್ಗೆ ಏನನ್ನು ಆದೇಶಿಸುತ್ತಾನೆ?
9 ಈಗ ಯೆಶಾಯನ ದಿನದಲ್ಲಿದ್ದಂತಹ ಒಂದು ಜನಾಂಗಕ್ಕೆ, ಪ್ರವಾದನೆಯು ವಿಶೇಷ ಗಮನ ನೀಡುತ್ತದೆ. ಅದು ಎದೋಮ್ ಜನಾಂಗವೇ ಆಗಿದೆ. ಎದೋಮ್ಯರು ಏಸಾವನ (ಎದೋಮಿನ) ವಂಶಸ್ಥರು. ಇವನು ಒಂದಿಷ್ಟು ರೊಟ್ಟಿ ಹಾಗೂ ಅಲಸಂದಿಗುಗ್ಗರಿಗಾಗಿ ಚೊಚ್ಚಲತನದ ಹಕ್ಕನ್ನು ತನ್ನ ಅವಳಿ ಸಹೋದರನಾದ ಯಾಕೋಬನಿಗೆ ಮಾರಿಬಿಟ್ಟಿದ್ದನು. (ಆದಿಕಾಂಡ 25:24-34) ಈಗ ತನ್ನ ಹಕ್ಕು ಯಾಕೋಬನ ಕೈಸೇರಿದ್ದರಿಂದ, ಏಸಾವನು ತನ್ನ ಸಹೋದರನನ್ನು ಬಹಳವಾಗಿ ದ್ವೇಷಿಸಿದನು. ಈ ಅವಳಿ ಸಹೋದರರ ವಂಶದಿಂದಲೇ ಎದೋಮ್ ಮತ್ತು ಇಸ್ರಾಯೇಲ್ ಜನಾಂಗಗಳು ಬಂದಿದ್ದರೂ, ಅವು ಬದ್ಧ ವೈರಿಗಳಂತೆ ನಡೆದುಕೊಂಡವು. ದೇವಜನರನ್ನು ದ್ವೇಷಿಸಿದ್ದಕ್ಕಾಗಿ ಎದೋಮ್ ಯೆಹೋವನ ಕೋಪಕ್ಕೆ ತುತ್ತಾಯಿತು. ಆತನು ಹೇಳುವುದು: “ನನ್ನ ಖಡ್ಗವು ಮೇಲಿನ ಲೋಕದಲ್ಲಿ ರೋಷಪಾನಮಾಡಿ ನಾನು ಶಪಿಸಿದ ಎದೋಮೆಂಬ ಜನಾಂಗದ ಮೇಲೆ ನ್ಯಾಯತೀರಿಸುವದಕ್ಕೆ ದುಮುಕುವದು. ಯೆಹೋವನ ಖಡ್ಗವು ರಕ್ತಮಯವಾಗಿದೆ; ಅದು ವಪೆಯಿಂದಲೂ ಕುರಿ ಹೋತಗಳ ರಕ್ತದಿಂದಲೂ ಟಗರುಗಳ ಹುರುಳಿಕಾಯಿಗಳ ಕೊಬ್ಬಿನಿಂದಲೂ ಭರಿತವಾಗಿದೆ; ಯೆಹೋವನು ಬೊಚ್ರದಲ್ಲಿ ಬಲಿಯನ್ನೂ ಎದೋಮ್ ಸೀಮೆಯಲ್ಲಿ ದೊಡ್ಡ ಕೊಲೆಯನ್ನೂ ಮಾಡಬೇಕೆಂದಿದ್ದಾನಷ್ಟೆ.”—ಯೆಶಾಯ 34:5, 6.
10. (ಎ) ಯೆಹೋವನು “ಮೇಲಿನ ಲೋಕದಲ್ಲಿ” ಖಡ್ಗ ಚಲಾಯಿಸಿದಾಗ, ಯಾರು ಕೆಳಕ್ಕುರುಳುತ್ತಾರೆ? (ಬಿ) ಬಾಬೆಲು ಯೆಹೂದವನ್ನು ಆಕ್ರಮಿಸಿದಾಗ ಎದೋಮ್ ಯಾವ ಮನೋಭಾವವನ್ನು ಪ್ರದರ್ಶಿಸುತ್ತದೆ?
10 ಎದೋಮ್, ಎತ್ತರವಾದ ಗುಡ್ಡಬೆಟ್ಟಗಳ ಪ್ರದೇಶದಲ್ಲಿ ನೆಲೆಸಿದೆ. (ಯೆರೆಮೀಯ 49:16; ಓಬದ್ಯ 8, 9, 19, 21) ಹಾಗಿದ್ದರೂ, ಯೆಹೋವನು “ಮೇಲಿನ ಲೋಕದಲ್ಲಿ” ನ್ಯಾಯತೀರ್ಪಿನ ಖಡ್ಗವನ್ನು ಚಲಾಯಿಸಿ, ಎದೋಮಿನ ಪ್ರಭುಗಳನ್ನು ತಮ್ಮ ಉನ್ನತ ಸ್ಥಾನಗಳಿಂದ ಕೆಳಗುರುಳಿಸುವಾಗ, ಈ ನೈಸರ್ಗಿಕ ರಕ್ಷಣೋಪಾಯಗಳು ಯಾವ ಪ್ರಯೋಜನಕ್ಕೂ ಬಾರದೆ ಇರುವವು. ಅದೂ ಅಲ್ಲದೆ, ಎದೋಮಿನ ಮಿಲಿಟರಿ ಶಕ್ತಿ ಅಪಾರವಾಗಿದೆ, ಮತ್ತು ತಮ್ಮ ದೇಶವನ್ನು ಸಂರಕ್ಷಿಸುವ ಸಲುವಾಗಿ ಶಸ್ತ್ರಸಜ್ಜಿತ ಸೈನಿಕರು ಬೆಟ್ಟಗುಡ್ಡಗಳ ಮಧ್ಯೆಯೂ ಗಸ್ತು ತಿರುಗುತ್ತಾರೆ. ಇಂತಹ ಬಲಶಾಲಿ ಎದೋಮ್, ಬಾಬೆಲಿನ ದಾಳಿಗೆ ಒಳಗಾದ ಯೆಹೂದಕ್ಕೆ ಯಾವ ರೀತಿಯ ನೆರವನ್ನೂ ನೀಡುವುದಿಲ್ಲ. ಅದರ ಬದಲು, ಯೆಹೂದ ರಾಜ್ಯವು ಕೆಳಗುರುಳುವುದನ್ನು ನೋಡಿ ಎದೋಮ್ ಹಿರಿ ಹಿರಿ ಹಿಗ್ಗುತ್ತದೆ ಮಾತ್ರವಲ್ಲ, ಬಾಬೆಲಿನ ಸೈನಿಕರನ್ನು ಹುರಿದುಂಬಿಸುತ್ತದೆ. (ಕೀರ್ತನೆ 137:7) ತಮ್ಮ ಜೀವಗಳಿಗಾಗಿ ಓಡಿಹೋಗುತ್ತಿರುವ ಯೆಹೂದ್ಯರನ್ನು ಎದೋಮ್ ಬೆನ್ನಟ್ಟಿ, ಅವರನ್ನು ಹಿಡಿದು ಬಬಿಲೋನ್ಯರ ಕೈಗೆ ಒಪ್ಪಿಸುತ್ತದೆ. (ಓಬದ್ಯ 11-14) ಇಸ್ರಾಯೇಲ್ಯರು ತೊರೆದುಹೋದ ದೇಶವನ್ನು ಎದೋಮ್ಯರು ವಶಪಡಿಸಿಕೊಳ್ಳಲು ಯೋಜಿಸುತ್ತಾರೆ ಮಾತ್ರವಲ್ಲ, ಯೆಹೋವನ ವಿರುದ್ಧವಾಗಿಯೂ ಜಂಬದಿಂದ ಮಾತಾಡುತ್ತಾರೆ.—ಯೆಹೆಜ್ಕೇಲ 35:10-15.
11. ಎದೋಮ್ಯರ ದುಷ್ಟ ನಡತೆಗಾಗಿ ಯೆಹೋವನು ಹೇಗೆ ಸೇಡು ತೀರಿಸಿಕೊಳ್ಳುವನು?
11 ಎದೋಮ್ಯರು ತಮ್ಮ ಸಹೋದರರೊಂದಿಗೆ ಇಷ್ಟು ದುಷ್ಟತನದಿಂದ ನಡೆದುಕೊಂಡದ್ದನ್ನು ಯೆಹೋವನು ಮರೆತುಬಿಡುವನೊ? ಇಲ್ಲ, ಆತನು ಎದೋಮಿನ ಬಗ್ಗೆ ಮುಂತಿಳಿಸುವುದು: “ಈ ಯಜ್ಞಪಶುಗಳೊಂದಿಗೆ ಕಾಡುಕೋಣಗಳೂ ಹೋರಿಗೂಳಿಗಳೂ ಬರುವವು; ಆ ದೇಶವು ರಕ್ತದಿಂದ ನೆನೆಯುವದು, ಅಲ್ಲಿನ ದೂಳು ಕೊಬ್ಬಿನಿಂದ ಜಿಡ್ಡಾಗುವದು.” (ಯೆಶಾಯ 34:7) ಆ ಜನಾಂಗದ ಭಾಗವಾಗಿರುವ ದೊಡ್ಡವರ ಹಾಗೂ ಚಿಕ್ಕವರ ಬಗ್ಗೆ ಸಾಂಕೇತಿಕವಾಗಿ ಮಾತಾಡುತ್ತಾ, ಯೆಹೋವನು ಅವರನ್ನು ಕಾಡುಕೋಣಗಳಿಗೂ ಹೋರಿಗಳಿಗೂ ಮತ್ತು ಟಗರುಗಳಿಗೂ ಹೋತಗಳಿಗೂ ಹೋಲಿಸುತ್ತಾನೆ. ಈ ರಕ್ತಾಪರಾಧಿ ಜನಾಂಗದ ದೇಶವು, ಯೆಹೋವನ ‘ಖಡ್ಗದ’ ಮೂಲಕ ಸುರಿಸಲ್ಪಡುವ ಅದರ ಸ್ವಂತ ಜನರ ರಕ್ತದಿಂದಲೇ ನೆನೆಯಬೇಕು.
12. (ಎ) ಎದೋಮಿನ ಮೇಲೆ ದಂಡನೆಯನ್ನು ತರಲು ಯೆಹೋವನು ಯಾರನ್ನು ಉಪಯೋಗಿಸುತ್ತಾನೆ? (ಬಿ) ಎದೋಮಿನ ಬಗ್ಗೆ ಪ್ರವಾದಿ ಓಬದ್ಯನು ಏನನ್ನು ಮುಂತಿಳಿಸುತ್ತಾನೆ?
12 ಚೀಯೋನ್ ಎಂಬ ದೇವರ ಭೂಸಂಸ್ಥೆಯೊಂದಿಗೆ ಎದೋಮ್ ಮತ್ಸರದಿಂದ ನಡೆದುಕೊಂಡ ಕಾರಣ, ದೇವರು ಅದನ್ನು ದಂಡಿಸಲಪೇಕ್ಷಿಸುತ್ತಾನೆ. ಪ್ರವಾದನೆಯು ಹೇಳುವುದು: “ಯೆಹೋವನು ಮುಯ್ಯಿತೀರಿಸುವ ದಿನವು ಬಂದಿದೆ; ಚೀಯೋನಿನ ವ್ಯಾಜ್ಯದಲ್ಲಿ [ಎದೋಮಿಗೆ] ದಂಡನೆವಿಧಿಸತಕ್ಕ ವರುಷವು ಒದಗಿದೆ.” (ಯೆಶಾಯ 34:8) ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶವಾದ ಬಳಿಕ, ಯೆಹೋವನು ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ ಮೂಲಕ ಎದೋಮ್ಯರ ಮೇಲೆ ಯುಕ್ತವಾದ ಕೋಪವನ್ನು ವ್ಯಕ್ತಪಡಿಸಲು ಆರಂಭಿಸುತ್ತಾನೆ. (ಯೆರೆಮೀಯ 25:15-17, 21) ಬಾಬೆಲಿನ ಸೇನೆಗಳು ಎದೋಮಿನ ಮೇಲೆ ದಾಳಿಮಾಡಿದಾಗ, ಯಾರೊಬ್ಬರೂ ಎದೋಮ್ಯರನ್ನು ರಕ್ಷಿಸಸಾಧ್ಯವಿಲ್ಲ! ಆ ಬೆಟ್ಟಗುಡ್ಡಗಳ ದೇಶಕ್ಕೆ ಅದು “ದಂಡನೆವಿಧಿಸತಕ್ಕ ವರುಷ”ವಾಗಿದೆ. ಪ್ರವಾದಿಯಾದ ಓಬದ್ಯನ ಮೂಲಕ ಯೆಹೋವನು ಮುಂತಿಳಿಸುವುದು: “ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿಮಿತ್ತ ಅವಮಾನವು ನಿನ್ನನ್ನು ಕವಿಯುವದು; ನಿತ್ಯನಾಶನಕ್ಕೆ ಈಡಾಗುವಿ. . . . ನೀನು ಮಾಡಿದ್ದೇ ನಿನಗಾಗುವದು; ನಿನ್ನ ಕೃತ್ಯವೇ ನಿನ್ನ ತಲೆಗೆ ಬರುವದು.”—ಓಬದ್ಯ 10, 15; ಯೆಹೆಜ್ಕೇಲ 25:12-14.
ಕ್ರೈಸ್ತಪ್ರಪಂಚದ ಆಶಾಹೀನ ಭವಿಷ್ಯತ್ತು
13. ಇಂದು ಎದೋಮಿನಂತೆ ಯಾರಿದ್ದಾರೆ, ಮತ್ತು ಏಕೆ?
13 ಆಧುನಿಕ ಸಮಯಗಳಲ್ಲಿ, ಎದೋಮಿಗೆ ಸರಿಹೋಲುವಂತಹ ಒಂದು ಸಂಸ್ಥೆಯು ಇದೆ. ಯಾವ ಸಂಸ್ಥೆಯದು? ಆಧುನಿಕ ಸಮಯಗಳಲ್ಲಿ ಯೆಹೋವನ ಸೇವಕರನ್ನು ನಿಂದಿಸುವುದರಲ್ಲಿ ಮತ್ತು ಹಿಂಸಿಸುವುದರಲ್ಲಿ ನಾಯಕತ್ವವನ್ನು ವಹಿಸಿಕೊಂಡಿರುವವರು ಯಾರು? ತನ್ನ ವೈದಿಕ ವರ್ಗದ ಮೂಲಕ ಈ ಕಾರ್ಯವನ್ನು ಮಾಡುವ ಕ್ರೈಸ್ತಪ್ರಪಂಚವೇ ಅದಾಗಿಲ್ಲವೊ? ಖಂಡಿತವಾಗಿಯೂ! ಲೋಕದ ವ್ಯವಹಾರಗಳಲ್ಲಿ ಕ್ರೈಸ್ತಪ್ರಪಂಚವು ತನ್ನನ್ನು ಬೆಟ್ಟದಂತಹ ಸ್ಥಾನದಲ್ಲಿ ಇರಿಸಿಕೊಂಡಿದೆ. ಮಾನವವರ್ಗದ ವಿಷಯ ವ್ಯವಸ್ಥೆಯಲ್ಲಿ ತನಗೊಂದು ಉನ್ನತ ಸ್ಥಾನವಿರುವುದಾಗಿ ಅದು ಹೇಳಿಕೊಳ್ಳುತ್ತದೆ ಮಾತ್ರವಲ್ಲ, ಅದರ ಧರ್ಮಗಳು ಮಹಾ ಬಾಬೆಲಿನಲ್ಲಿ ಒಂದು ಪ್ರಮುಖ ಸ್ಥಾನವನ್ನು ವಹಿಸಿಕೊಂಡಿವೆ. ಆದರೆ ಆಧುನಿಕ ದಿನದ ಈ ಎದೋಮ್, ಯೆಹೋವನ ಜನರ ಕಡೆಗೆ, ಆತನ ಸಾಕ್ಷಿಗಳೊಂದಿಗೆ ಅತಿ ದೌರ್ಜನ್ಯದಿಂದ ವರ್ತಿಸಿರುವ ಕಾರಣ, ಆತನು ಅದರ ವಿರುದ್ಧ “ದಂಡನೆವಿಧಿಸತಕ್ಕ ವರುಷ”ವನ್ನು ಬರಮಾಡುವನು.
14, 15. (ಎ) ಎದೋಮಿಗೂ ಕ್ರೈಸ್ತಪ್ರಪಂಚಕ್ಕೂ ಏನು ಸಂಭವಿಸುವುದು? (ಬಿ) ರಾಳಕ್ಕೆ ಬೆಂಕಿಯಿಡುವುದು ಮತ್ತು ನಿರಂತರವಾಗಿ ಹೊಗೆಯು ಏರುತ್ತಿರುವುದು ಏನನ್ನು ಅರ್ಥೈಸುತ್ತದೆ, ಮತ್ತು ಏನನ್ನು ಅರ್ಥೈಸುವುದಿಲ್ಲ?
14 ಆದುದರಿಂದ, ಈ ಪ್ರವಾದನೆಯ ಭಾಗದಲ್ಲಿ ಉಳಿದ ವಿಷಯಗಳನ್ನು ಪರಿಗಣಿಸುವಾಗ, ನಾವು ಪುರಾತನ ಎದೋಮಿನ ಜೊತೆಗೆ ಕ್ರೈಸ್ತಪ್ರಪಂಚದ ಬಗ್ಗೆಯೂ ನೆನಸಬೇಕು: “ಅಲ್ಲಿ ತೊರೆಗಳು ಶಿಲಾಜತುವಾಗಿ ಹರಿಯುವವು, ದೂಳು ಗಂಧಕವಾಗುವದು, ದೇಶವೆಲ್ಲಾ ಉರಿಯುವ ಶಿಲಾಜತುವಾಗುವದು, ಅದು ಹಗಲಿರುಳೂ ಆರದು, ಅದರ ಹೊಗೆ ನಿರಂತರ ಏರುತ್ತಿರುವದು.” (ಯೆಶಾಯ 34:9, 10ಎ) ಎದೋಮ್ ದೇಶವು ಯಾವ ರೀತಿಯಲ್ಲಿ ಬತ್ತಿಹೋಗುವುದೆಂದರೆ, ಅದರ ದೂಳು ಗಂಧಕದಂತಿರುವುದು ಮತ್ತು ತೊರೆಗಳಲ್ಲಿ ನೀರಿನ ಬದಲು ರಾಳ ತುಂಬಿಕೊಂಡಿರುವುದು. ತರುವಾಯ ಈ ದಹನಶೀಲ ವಸ್ತುಗಳಿಗೆ ಬೆಂಕಿ ಹೊತ್ತಿಸಲಾಗುವದು!—ಹೋಲಿಸಿ ಪ್ರಕಟನೆ 17:16.
15 ಬೆಂಕಿ, ರಾಳ ಮತ್ತು ಗಂಧಕದ ಉಲ್ಲೇಖವು, ಒಂದು ನರಕಾಗ್ನಿಯ ಅಸ್ತಿತ್ವಕ್ಕೆ ಪುರಾವೆಯಾಗಿದೆ ಎಂದು ಕೆಲವರು ನೆನಸಿದ್ದಾರೆ. ಆದರೆ ಸದಾಕಾಲ ಉರಿಯುತ್ತಾ ಇರುವಂತೆ, ಎದೋಮನ್ನು ಯಾವುದೊ ಕಾಲ್ಪನಿಕ ನರಕಾಗ್ನಿಯಲ್ಲಿ ಹಾಕಲಾಗುವುದಿಲ್ಲ. ಬದಲಿಗೆ, ಬೆಂಕಿ ಗಂಧಕಗಳಿಂದ ಸಂಪೂರ್ಣವಾಗಿ ದಹಿಸಲ್ಪಟ್ಟು, ಅದು ಲೋಕರಂಗದಿಂದ ಕಣ್ಮರೆಯಾಗುತ್ತದೆ. ಪ್ರವಾದನೆಯು ಮುಂದುವರಿಸಿ ಹೇಳುವಂತೆ, ಅಂತಿಮ ಪರಿಣಾಮವು ನಿತ್ಯಯಾತನೆ ಆಗಿರುವುದಿಲ್ಲ, ಬದಲಿಗೆ ಅದು ‘ಹಾಳಾಗಿ . . . ಪಾಳಾಗಿ . . . ಇಲ್ಲದೇ’ ಹೋಗುವುದು. (ಯೆಶಾಯ 34:11, 12) ‘ನಿರಂತರ ಏರುತ್ತಿರುವ’ ಹೊಗೆಯು ಇದನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ. ಮನೆಯೊಂದಕ್ಕೆ ಬೆಂಕಿಹತ್ತಿ ಅದು ಸುಟ್ಟುಹೋಗುವಾಗ, ಜ್ವಾಲೆಗಳು ಆರಿದ ಮೇಲೆಯೂ ಸ್ವಲ್ಪ ಸಮಯದ ವರೆಗೆ ಅಲ್ಲಿಂದ ಹೊಗೆಯು ಬರುತ್ತಾ ಇರುತ್ತದೆ. ಈ ಹೊಗೆಯನ್ನು ನೋಡುವ ಜನರು, ಅಲ್ಲೊಂದು ಮನೆಯು ಸುಟ್ಟುಹೋಗಿರಬೇಕೆಂದು ಅರ್ಥಮಾಡಿಕೊಳ್ಳುತ್ತಾರೆ. ಹಾಗೆಯೇ, ಇಂದು ಎದೋಮಿನ ನಾಶನದಿಂದ ಕ್ರೈಸ್ತರು ಅನೇಕ ಪಾಠಗಳನ್ನು ಕಲಿಯುತ್ತಿರುವುದರಿಂದ, ಎದೋಮಿನ ಹೊಗೆಯು ಒಂದರ್ಥದಲ್ಲಿ ಈಗಲೂ ಏರುತ್ತಿದೆ ಎಂದೇ ಹೇಳಬಹುದು.
16, 17. ಎದೋಮ್ ಏನಾಗುವುದು, ಮತ್ತು ಎಷ್ಟರ ವರೆಗೆ ಅದು ಆ ಸ್ಥಿತಿಯಲ್ಲಿರುವುದು?
16 ಯೆಶಾಯನ ಪ್ರವಾದನೆಯು ಮುಂದುವರಿಯುತ್ತದೆ. ಬರಲಿರುವ ಧ್ವಂಸದ ಸೂಚನೆಯನ್ನು ನೀಡುತ್ತಾ, ಇನ್ನುಮುಂದೆ ಎದೋಮಿನಲ್ಲಿ ಜನರ ಬದಲು ಕಾಡು ಪ್ರಾಣಿಗಳೇ ವಾಸಿಸುವವೆಂದು ಅವನು ಮುಂತಿಳಿಸುತ್ತಾನೆ: “ದೇಶವು ತಲತಲಾಂತರಕ್ಕೂ ಹಾಳು ಬಿದ್ದಿರುವದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದು ಹೋಗರು. ಅದು ಕೊಕ್ಕರೆ ಮುಳ್ಳುಹಂದಿಗಳ ಹಕ್ಕು ಆಗುವದು; ಕಾಗೆಗೂಗೆಗಳು ಅಲ್ಲಿ ವಾಸಿಸುವವು; ಯೆಹೋವನು ಅದರ ಮೇಲೆ ಹಾಳೆಂಬ ನೂಲನ್ನೂ ಪಾಳೆಂಬ ಮಟ್ಟಗೋಲನ್ನೂ ಎಳೆಯುವನು. ಅಲ್ಲಿ ಪಟ್ಟಕ್ಕೆ ಕರೆಯಲು ಪ್ರಮುಖರಲ್ಲಿ ಯಾರೂ ಸಿಕ್ಕರು; ದೇಶದಲ್ಲಿ ಪ್ರಧಾನರೇ ಇಲ್ಲ. ಅಲ್ಲಿನ ಅರಮನೆಗಳಲ್ಲಿ ದಬ್ಬೆಗಳ್ಳಿಗಳೂ ಕೋಟೆಗಳಲ್ಲಿ ಮುಳ್ಳುಗಿಳ್ಳುಗಳೂ ಹಬ್ಬಿಕೊಳ್ಳುವವು; ಅದು ನರಿಗಳಿಗೆ ಹಕ್ಕೆಯಾಗಿಯೂ ಉಷ್ಟ್ರಪಕ್ಷಿಗಳಿಗೆ ಎಡೆಯಾಗಿಯೂ ಇರುವದು. ಕಾಡುನಾಯಿ ತೋಳಗಳು ಅಲ್ಲಿ ಸಂಧಿಸುವವು, ದೆವ್ವವು ತನ್ನ ಜೊತೆಯನ್ನು ಕೂಗುವದು, ಬೇತಾಳವು ಅಲ್ಲಿ ಹಾಯಾಗಿ ಆಸರೆಗೊಳ್ಳುವದು. ಹಾರುವ ಹಾವು ಅಲ್ಲಿ ಗೂಡುಮಾಡಿಕೊಂಡು ಮೊಟ್ಟೆಯಿಕ್ಕಿ ಮರಿಮಾಡಿ ತನ್ನ ಮರೆಯಲ್ಲಿ ಕೂಡಿಸಿಕೊಳ್ಳುವದು; ಹೌದು, ಹದ್ದುಗಳು ಅಲ್ಲಿ ಜೋಡಿಜೋಡಿಯಾಗಿ ಸೇರಿಕೊಳ್ಳುವವು.”—ಯೆಶಾಯ 34:10ಬಿ-15.a
17 ಹೌದು, ಎದೋಮ್ ನಿರ್ಜನ ದೇಶವಾಗುವುದು. ಅದು ಪಾಳುಬಿದ್ದು, ಕಾಡು ಪ್ರಾಣಿಗಳ, ಪಕ್ಷಿಗಳ ಮತ್ತು ಹಾವುಗಳ ಬೀಡಾಗುವುದು. ಮತ್ತು 10ನೇ ವಚನವು ಹೇಳುವ ಪ್ರಕಾರ, ಈ ಸ್ಥಿತಿಯು “ಯುಗಯುಗಾಂತರಕ್ಕೂ” ಮುಂದುವರಿಯುವುದು. ಅದೆಂದಿಗೂ ಪುನಸ್ಸ್ಥಾಪಿಸಲ್ಪಡದು.—ಓಬದ್ಯ 18.
ಯೆಹೋವನ ಮಾತು ಖಂಡಿತವಾಗಿಯೂ ನೆರವೇರುವುದು
18, 19. “ಯೆಹೋವನ ಶಾಸ್ತ್ರ” ಎಂದರೇನು, ಮತ್ತು ಈ “ಶಾಸ್ತ್ರದಲ್ಲಿ” ಕ್ರೈಸ್ತಪ್ರಪಂಚಕ್ಕಾಗಿ ಏನು ಕಾದಿರಿಸಲ್ಪಟ್ಟಿದೆ?
18 ಇಂದು ಎದೋಮಿಗೆ ಸಮವಾಗಿರುವ ಕ್ರೈಸ್ತಪ್ರಪಂಚಕ್ಕೆ ಎಂತಹ ಆಶಾಹೀನ ಭವಿಷ್ಯತ್ತನ್ನು ಇದು ಮುನ್ಸೂಚಿಸುತ್ತದೆ! ಅದು ಯೆಹೋವ ದೇವರ ಕಟು ವೈರಿಯಾಗಿದ್ದು, ಆತನ ಸಾಕ್ಷಿಗಳನ್ನು ಕ್ರೂರವಾಗಿ ಹಿಂಸಿಸುತ್ತದೆ. ಮತ್ತು ಯೆಹೋವನು ತನ್ನ ಮಾತನ್ನು ನೆರವೇರಿಸುವನೆಂಬುದರಲ್ಲಿ ಸಂದೇಹವೇ ಇಲ್ಲ. ಯಾರಾದರೂ ಪ್ರವಾದನೆಯನ್ನು ಅದರ ನೆರವೇರಿಕೆಯೊಂದಿಗೆ ಹೋಲಿಸುವಾಗ, ಹೇಗೆ ಪಾಳುಬಿದ್ದ ಎದೋಮಿನಲ್ಲಿ ವಾಸಿಸುವ ಪ್ರಾಣಿಗಳು ‘ಜೊತೆಜೊತೆಯಾಗಿವೆಯೊ,’ ಹಾಗೆಯೇ ಪ್ರವಾದನೆಯೂ ನೆರವೇರಿಕೆಯೂ ಏಕರೂಪವಾಗಿರುವುದನ್ನು ಕಾಣುವರು. ಯೆಶಾಯನು ಬೈಬಲ್ ಪ್ರವಾದನೆಯ ಭಾವಿ ವಿದ್ಯಾರ್ಥಿಗಳನ್ನು ಸಂಬೋಧಿಸುತ್ತಾ ಹೇಳುವುದು: “ಯೆಹೋವನ ಶಾಸ್ತ್ರದಲ್ಲಿ ಹುಡುಕಿ ಓದಿರಿ, ಇವುಗಳಲ್ಲಿ ಯಾವದೂ ಇಲ್ಲದಿರದು, ಎಲ್ಲವೂ ಜೊತೆಜೊತೆಯಾಗಿರುವವು; ಆತನ ಬಾಯಿಂದ ಅಪ್ಪಣೆಯಾಯಿತಲ್ಲವೆ, ಆತನ ಆತ್ಮವು ಇವುಗಳನ್ನು ಒಟ್ಟಿಗೆ ಬರಮಾಡಿತಷ್ಟೆ. ಆತನೇ ಇವುಗಳಿಗೆ ಪಾಲುಮಾಡಿಕೊಟ್ಟಿದ್ದಾನೆ, ಆತನ ಕೈಯೇ ನೂಲುಹಾಕಿ ದೇಶವನ್ನು ಹಂಚಿದೆ; ಅದು ಇವುಗಳಿಗೆ ನಿತ್ಯಸ್ವಾಸ್ತ್ಯವಾಗುವದು, ಅವು ತಲತಲಾಂತರಕ್ಕೂ ಅಲ್ಲಿ ವಾಸಿಸುವವು.”—ಯೆಶಾಯ 34:16, 17.
19 ಕ್ರೈಸ್ತಪ್ರಪಂಚದ ಭಾವೀ ನಾಶನವು “ಯೆಹೋವನ ಶಾಸ್ತ್ರದಲ್ಲಿ” ಮುಂತಿಳಿಸಲ್ಪಟ್ಟಿದೆ. ಯೆಹೋವನು ತನ್ನ ಕಠೋರ ವೈರಿಗಳೊಂದಿಗೆ ಮತ್ತು ತನ್ನ ಜನರನ್ನು ನಿರ್ದಯವಾಗಿ ವಿರೋಧಿಸುವವರೊಂದಿಗೆ ಹೇಗೆ ಲೆಕ್ಕ ತೀರಿಸುವನೆಂಬ ವಿವರಗಳು “ಯೆಹೋವನ ಶಾಸ್ತ್ರದಲ್ಲಿ” ಇದೆ. ಪುರಾತನ ಎದೋಮಿನ ಬಗ್ಗೆ ಬರೆದ ವಿಷಯಗಳೆಲ್ಲಾ ನೆರವೇರಿದವು. ಈ ಕಾರಣ, ಆಧುನಿಕ ದಿನದ ಎದೋಮಿನಂತಿರುವ ಕ್ರೈಸ್ತಪ್ರಪಂಚಕ್ಕೂ ಅನ್ವಯಿಸುವ ಈ ಪ್ರವಾದನೆಯು ಖಂಡಿತವಾಗಿಯೂ ನೆರವೇರುವುದೆಂಬ ನಮ್ಮ ಭರವಸೆಯು ಬಲಗೊಳ್ಳುತ್ತದೆ. ಯೆಹೋವನು ‘ಹಾಕಿರುವ ನೂಲು’ ಅಂದರೆ ಆತನ ಕ್ರಿಯಾವಧಿಯು, ಆತ್ಮಿಕವಾಗಿ ಸತ್ತುಹೋಗಿರುವ ಈ ಸಂಸ್ಥೆಯು ಬೇಗನೆ ಪಾಳುಬಿದ್ದ ದೇಶವಾಗುವುದೆಂಬ ಖಾತ್ರಿಯನ್ನು ನೀಡುತ್ತದೆ.
20. ಪುರಾತನ ಎದೋಮಿನಂತೆ, ಕ್ರೈಸ್ತಪ್ರಪಂಚವು ಏನನ್ನು ಅನುಭವಿಸುವುದು?
20 ತನ್ನ ರಾಜಕೀಯ ಮಿತ್ರರನ್ನು ಸಮಾಧಾನಪಡಿಸಲು ಕ್ರೈಸ್ತಪ್ರಪಂಚವು ತನ್ನ ಕೈಮೀರಿ ಪ್ರಯತ್ನಿಸಿದರೂ, ಯಾವ ಪ್ರಯೋಜನವೂ ಸಿಗಲಾರದು! ಪ್ರಕಟನೆ ಪುಸ್ತಕದ 17ನೇ ಮತ್ತು 18ನೇ ಅಧ್ಯಾಯಗಳಿಗನುಸಾರ, ಸರ್ವಶಕ್ತ ದೇವರಾದ ಯೆಹೋವನು, ಕ್ರೈಸ್ತಪ್ರಪಂಚವನ್ನು ಸೇರಿಸಿ ಮಹಾ ಬಾಬೆಲಿನ ವಿರುದ್ಧ ಕ್ರಿಯೆಗೈಯುವ ವಿಚಾರವನ್ನು ರಾಜಕಾರಣಿಗಳ ಮನಸ್ಸಿನಲ್ಲಿ ನೆಡುವನು. ಹೀಗೆ, ಭೂಮಿಯಿಂದ ಸುಳ್ಳು ಕ್ರೈಸ್ತತ್ವವು ಇಲ್ಲದೆಹೋಗುವುದು. ಕ್ರೈಸ್ತಪ್ರಪಂಚದ ಸ್ಥಿತಿಯು, ಯೆಶಾಯ 34ನೇ ಅಧ್ಯಾಯದಲ್ಲಿ ವಿವರಿಸಲ್ಪಟ್ಟ ಆಶಾಹೀನ ಪರಿಸ್ಥಿತಿಯಂತಾಗುವುದು. ಅದು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವನ್ನೂ ನೋಡಲು ಬದುಕಿರಲಾರದು! (ಪ್ರಕಟನೆ 16:14) ಪುರಾತನ ಎದೋಮಿನಂತೆ, ಕ್ರೈಸ್ತಪ್ರಪಂಚವು “ಯುಗಯುಗಾಂತರಕ್ಕೂ” ಇಲ್ಲದ ಹಾಗೆ ಭೂಮಿಯಿಂದ ಸಂಪೂರ್ಣವಾಗಿ ಕೀಳಲ್ಪಡುವುದು.
[ಪಾದಟಿಪ್ಪಣಿ]
a ಮಲಾಕಿಯನ ಸಮಯದೊಳಗಾಗಿ, ಈ ಪ್ರವಾದನೆಯು ನೆರವೇರಿತ್ತು. (ಮಲಾಕಿಯ 1:3) ಹಾಳುಬಿದ್ದಿದ್ದ ತಮ್ಮ ದೇಶವನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಎದೋಮ್ಯರು ನಿರೀಕ್ಷಿಸಿದರೆಂದು ಮಲಾಕಿಯನು ವರದಿಸುತ್ತಾನೆ. (ಮಲಾಕಿಯ 1:4) ಆದರೆ, ಇದು ಯೆಹೋವನ ಚಿತ್ತವಾಗಿರಲಿಲ್ಲ, ಮತ್ತು ತದನಂತರ ಎದೋಮ್ಯರ ದೇಶವನ್ನು ನಾಬಾತ್ಯರು ವಶಪಡಿಸಿಕೊಂಡರು.
[ಪುಟ 363ರಲ್ಲಿರುವ ಚೌಕ]
ಕೋಪಾವೇಶದ ದೇವರೊ?
ಯೆಶಾಯ 34:2-7ರಲ್ಲಿರುವಂತಹ ಅಭಿವ್ಯಕ್ತಿಗಳನ್ನು ಓದಿದ ಹೆಚ್ಚಿನ ಜನರು, ಹೀಬ್ರು ಶಾಸ್ತ್ರಗಳಲ್ಲಿ ವರ್ಣಿಸಲ್ಪಟ್ಟಿರುವ ಯೆಹೋವನು ಒಬ್ಬ ಕ್ರೂರ ಹಾಗೂ ಕೋಪಾವೇಶದ ದೇವರೆಂದು ನೆನಸಿದ್ದಾರೆ. ಇದು ನಿಜವೊ?
ಇಲ್ಲ. ದೇವರು ಕೆಲವೊಮ್ಮೆ ತನ್ನ ಕೋಪವನ್ನು ತೋರಿಸಿದರೂ, ಅದು ಯಾವಾಗಲೂ ನ್ಯಾಯಯುತವಾಗಿರುತ್ತದೆ. ಅದು ಅನಿಯಂತ್ರಿತ ಭಾವನೆಗಳಿಂದ ಹೊಮ್ಮದೆ, ಯಾವಾಗಲೂ ತತ್ವದ ಮೇಲೆ ಆಧಾರಿತವಾಗಿದೆ. ಅಲ್ಲದೆ, ಸೃಷ್ಟಿಕರ್ತನೋಪಾದಿ ಆತನು ಅನನ್ಯ ಭಕ್ತಿಯನ್ನು ಅಪೇಕ್ಷಿಸುವ ಮತ್ತು ಸತ್ಯದ ವಿಷಯದಲ್ಲಿ ನಿಷ್ಠೆಯನ್ನು ನಿರೀಕ್ಷಿಸುವ ಹಕ್ಕಿರುವುದರಿಂದಲೇ ಆತನು ಕೆಲವೊಮ್ಮೆ ಕೋಪಗೊಳ್ಳುತ್ತಾನೆ. ದೇವರು ನೀತಿಯನ್ನು ಮತ್ತು ನೀತಿವಂತರನ್ನು ಪ್ರೀತಿಸುವುದರಿಂದಲೇ ದೈವಿಕ ಕೋಪವನ್ನು ವ್ಯಕ್ತಪಡಿಸುತ್ತಾನೆ. ಒಂದು ವಿಷಯದಲ್ಲಿ ಒಳಗೂಡಿರುವ ಎಲ್ಲ ವಿಷಯಗಳನ್ನು ಯೆಹೋವನು ನೋಡುತ್ತಾನೆ, ಮತ್ತು ಒಂದು ಸನ್ನಿವೇಶದ ಬಗ್ಗೆ ಆತನಿಗೆ ಸಂಪೂರ್ಣವಾದ ಮಾಹಿತಿಯಿದೆ. (ಇಬ್ರಿಯ 4:13) ಆತನು ಹೃದಯಗಳನ್ನು ಪರೀಕ್ಷಿಸುತ್ತಾನೆ; ಅಜ್ಞಾನ, ಅಲಕ್ಷ್ಯ ಇಲ್ಲವೆ ಉದ್ದೇಶಭರಿತ ಪಾಪದ ಮಟ್ಟವನ್ನು ಆತನು ಗಮನಿಸುತ್ತಾನೆ; ಮತ್ತು ಎಂದಿಗೂ ಪಕ್ಷಪಾತದಿಂದ ಕ್ರಿಯೆಗೈಯುವುದಿಲ್ಲ.—ಧರ್ಮೋಪದೇಶಕಾಂಡ 10:17, 18; 1 ಸಮುವೇಲ 16:7; ಅ. ಕೃತ್ಯಗಳು 10:34, 35.
ಹಾಗಿದ್ದರೂ, ಯೆಹೋವ ದೇವರು “ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಆಗಿದ್ದಾನೆ. (ವಿಮೋಚನಕಾಂಡ 34:6) ಆತನಿಗೆ ಭಯಪಟ್ಟು ನೀತಿಯನ್ನು ಅನುಕರಿಸಲು ಪ್ರಯಾಸಪಡುವವರು ಆತನ ಕರುಣೆಗೆ ಪಾತ್ರರಾಗುತ್ತಾರೆ. ಏಕೆಂದರೆ ಸರ್ವಶಕ್ತನು ಮಾನವನ ಪಿತ್ರಾರ್ಜಿತ ಅಪರಿಪೂರ್ಣತೆಯನ್ನು ಗ್ರಹಿಸಿ, ಆ ಕಾರಣ ಕರುಣೆಯನ್ನು ತೋರಿಸುತ್ತಾನೆ. ಇಂದು, ಯೇಸುವಿನ ಯಜ್ಞದ ಆಧಾರದ ಮೇಲೆ ದೇವರು ಇಂತಹ ಕರುಣೆಯನ್ನು ತೋರಿಸುತ್ತಾನೆ. (ಕೀರ್ತನೆ 103:13, 14) ಯಾರು ತಮ್ಮ ಪಾಪವನ್ನು ಅಂಗೀಕರಿಸಿ, ಪಶ್ಚಾತ್ತಾಪಪಟ್ಟು ಆತನನ್ನು ಸೇವಿಸುತ್ತಾರೊ, ಅಂತಹವರ ಮೇಲೆ ಯೆಹೋವನು ಕೋಪಗೊಳ್ಳುವುದಿಲ್ಲ. (ಯೆಶಾಯ 12:1) ಮೂಲಭೂತವಾಗಿ ಯೆಹೋವನು ಕೋಪಾವೇಶದ ದೇವರಲ್ಲ, ಸಂತೋಷದ ದೇವರು; ಸಮೀಪಿಸಸಾಧ್ಯವಿಲ್ಲದ ದೇವರಲ್ಲ ಬದಲಿಗೆ ಆತನನ್ನು ಯೋಗ್ಯವಾಗಿ ಸಮೀಪಿಸುವವರನ್ನು ಸ್ವಾಗತಿಸುವ, ಶಾಂತಿದಾಯಕ ಹಾಗೂ ಪ್ರಶಾಂತ ದೇವರು ಆಗಿದ್ದಾನೆ. (1 ತಿಮೊಥೆಯ 1:11, NW) ವಿಧರ್ಮಿ ಸುಳ್ಳು ದೇವರುಗಳ ಕರುಣಾರಹಿತ ಕ್ರೂರ ಗುಣಗಳಿಗೆ ಮತ್ತು ಅವುಗಳ ಭಾವಚಿತ್ರಗಳಿಗೆ ಹೋಲಿಸುವಾಗ ಈತನೆಷ್ಟು ಭಿನ್ನನಾಗಿದ್ದಾನೆ.
[ಪುಟ 362ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಮಹಾ ಸಮುದ್ರ
ದಮಸ್ಕ
ಸೀದೋನ್
ತೂರ್
ಇಸ್ರಾಯೇಲ್
ದಾನ್
ಗಲಿಲಾಯ ಸಮುದ್ರ
ಯೊರ್ದನ್ ನದಿ
ಮೆಗಿದ್ದೋ
ರಾಮೋತ್ಗಿಲ್ಯಾದ್
ಸಮಾರ್ಯ
ಫಿಲಿಷ್ಟಿಯ
ಯೆಹೂದ
ಯೆರೂಸಲೇಮ್
ಲಿಬ್ನ
ಲಾಕೀಷ್
ಬೇರ್ಷೆಬ
ಕಾದೇಶ್ಬರ್ನೇಯ
ಲವಣ ಸಮುದ್ರ
ಅಮ್ಮೋನ್
ರಬ್ಬಾ
ಮೋವಾಬ್
ಕೀರ್ಹರೆಷೆತ್
ಎದೋಮ್
ಬೊಚ್ರ
ತೇಮಾನ್
[ಪುಟ 359ರಲ್ಲಿರುವ ಚಿತ್ರಗಳು]
ಕ್ರೈಸ್ತಪ್ರಪಂಚವು ಭೂಮಿಯನ್ನು ರಕ್ತದಿಂದ ತೊಯಿಸಿದೆ
[ಪುಟ 360ರಲ್ಲಿರುವ ಚಿತ್ರ]
“ಆಕಾಶಮಂಡಲವು ಸುರಳಿಯಂತೆ ಸುತ್ತಿಕೊಳ್ಳುವದು”