ಒಳ್ಳೆಯ ಮತ್ತು ಕೆಟ್ಟ ಫಲಗಳು
“ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ಕಾಣಮಾಡಿದನು. ಒಂದು ಪುಟ್ಟಿಯಲ್ಲಿ ಫಲಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳ ಹಾಗೆ ಕಾಣುತ್ತಿದ್ದ ಅತ್ಯುತ್ತಮವಾದ ಅಂಜೂರದ ಫಲಗಳು ತುಂಬಿದ್ದವು; ಇನ್ನೊಂದು ಪುಟ್ಟಿಯಲ್ಲಿ ಯಾರೂ ತಿನ್ನದ ಹಾಗೆ ಬಹಳ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.”—ಯೆರೆಮೀಯ 24:1, 2.
1. ತನ್ನ ಜನರಾದ ಇಸ್ರಾಯೇಲಿಗೆ ಯೆಹೋವನು ಕನಿಕರ ತೋರಿಸಿದ್ದು ಹೇಗೆ, ಆದರೆ ಅವರು ಹೇಗೆ ಪ್ರತಿಕ್ರಿಯಿಸಿದರು?
ವರುಷವು ಸಾ.ಶ.ಪೂ. 617 ಆಗಿತ್ತು. ಯೆರೂಸಲೇಮಿನ ಮತ್ತು ಅದರ ಜನರ ವಿರುದ್ಧ ಯೆಹೋವನ ಅರ್ಹವಾದ ನ್ಯಾಯತೀರ್ಪು ಜಾರಿಗೊಳಿಸುವ ಕೇವಲ ಹತ್ತು ವರ್ಷಗಳ ಮುಂಚೆ ಆಗಿತ್ತು. ಯೆರೆಮೀಯನು ಈಗಾಗಲೇ 30 ವರ್ಷಗಳಿಂದ ಶ್ರಮಪೂರ್ವಕವಾಗಿ ಸಾರುತ್ತಾ ಇದ್ದನು. ಎರಡನೆಯ ಪೂರ್ವಕಾಲವೃತ್ತಾಂತ 36:15 ರಲ್ಲಿ ಕಂಡುಬರುವಂತೆ, ಆ ಸನ್ನಿವೇಶದ ಎಜ್ರನ ವೈವಿಧ್ಯಮಯ ವರ್ಣನೆಯನ್ನು ಆಲಿಸಿರಿ: “ಅವರ ಪಿತೃಗಳ ದೇವರಾದ ಯೆಹೋವನು ತನ್ನ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ ಸಾವಕಾಶಮಾಡದೆ ತನ್ನ ದೂತರ ಮುಖಾಂತರವಾಗಿ ಅವರನ್ನು ಎಚ್ಚರಿಸುತ್ತಾ” ಇದ್ದನು. ಮತ್ತು ಈ ಎಲ್ಲಾ ಪ್ರಯತ್ನದ ಫಲಿತಾಂಶ? ವಿಷಾದಕರವಾಗಿ, ವಚನ 16 ರಲ್ಲಿ ಎಜ್ರನು ಅದನ್ನು ವರ್ಣಿಸುವುದನ್ನು ಮುಂದರಿಸುತ್ತಾನೆ: “ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದರ್ದಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.”
2, 3. ಯೆಹೋವನು ಯೆರೆಮೀಯನಿಗೆ ತೋರಿಸಿದ ಮನತಟ್ಟುವ ದೃಶ್ಯವನ್ನು ವರ್ಣಿಸಿರಿ.
2 ಯೆಹೂದ ಜನಾಂಗವು ಸಂಪೂರ್ಣವಾಗಿ ಅಳಿಸಲ್ಪಡುವದು ಎಂದು ಇದರ ಅರ್ಥವಾಗಿತ್ತೋ? ಉತ್ತರವನ್ನು ಕಂಡುಕೊಳ್ಳಲು, ಯೆರೆಮೀಯನಿಗೆ ಈಗ ಕೊಡಲ್ಪಟ್ಟ ಮತ್ತು ಅವನ ಹೆಸರಿರುವ ಪುಸ್ತಕದ 24 ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ ಬಹು ಪರಿಣಾಮಕಾರಿಯಾದ ದರ್ಶನವನ್ನು ನಾವೀಗ ಪರಿಗಣಿಸೋಣ. ಅವನ ಒಡಂಬಡಿಕೆಯ ಜನರ ಮಧ್ಯದ ಬೆಳವಣಿಗೆಗಳನ್ನು ಸಾಂಕೇತಿಸಲು ಈ ದರ್ಶನದಲ್ಲಿ ದೇವರು ಅಂಜೂರದ ಹಣ್ಣುಗಳ ಎರಡು ಪುಟ್ಟಿಗಳನ್ನು ಬಳಸಿದನು. ಇವುಗಳು ಎರಡು ವಿಶಿಷ್ಟ ತೆರನಾದ—ಒಳ್ಳೆಯ ಮತ್ತು ಕೆಟ್ಟ—ಫಲಗಳಿಂದ ಪ್ರತಿನಿಧಿಸಲ್ಪಡಲಿದ್ದವು.
3 ಯೆರೆಮೀಯ ಅಧ್ಯಾಯ 24, ವಚನಗಳು 1 ಮತ್ತು 2, ದೇವರ ಪ್ರವಾದಿಯು ಏನನ್ನು ಕಂಡನೋ ಅದನ್ನು ವರ್ಣಿಸುತ್ತವೆ: “ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಶಿಲ್ಪಿಗಳನ್ನೂ ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆ ಒಯ್ದಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ಕಾಣಮಾಡಿದನು, ಒಂದು ಪುಟ್ಟಿಯಲ್ಲಿ ಫಲಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳ ಹಾಗೆ ಕಾಣುತ್ತಿದ್ದ ಅತ್ಯುತ್ತಮವಾದ ಅಂಜೂರದ ಫಲಗಳು ತುಂಬಿದ್ದವು; ಇನ್ನೊಂದು ಪುಟ್ಟಿಯಲ್ಲಿ ಯಾರೂ ತಿನ್ನದ ಹಾಗೆ ಬಹಳ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.”
ದಾರ್ಶನಿಕ ಒಳ್ಳೆಯ ಅಂಜೂರ ಹಣ್ಣುಗಳು
4. ನಂಬಿಗಸ್ತ ಇಸ್ರಾಯೇಲ್ಯರಿಗೆ ಅಂಜೂರ ಹಣ್ಣುಗಳ ದರ್ಶನವು ಯಾವ ಸಾಂತ್ವನಕಾರಿ ಸಂದೇಶವನ್ನು ಕೊಟ್ಟಿತು?
4 ಅವನೇನನ್ನು ಕಂಡನೋ ಅದರ ಕುರಿತು ಯೆರೆಮೀಯನನ್ನು ವಿಚಾರಿಸಿದ ನಂತರ, ಯೆಹೋವನು ವಚನಗಳು 5 ರಿಂದ 7 ರಲ್ಲಿ ಹೇಳುವುದನ್ನು ಮುಂದರಿಸಿದನು: “ನಾನು ಈ ಸ್ಥಳದೊಳಗಿಂದ ಕಸೀಯ್ದರ ದೇಶಕ್ಕೆ ಕಳುಹಿಸಿಬಿಟ್ಟ ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ ಅವರಿಗೆ ಮೇಲನ್ನುಂಟುಮಾಡುವೆನು. ಅವರನ್ನು ಕಟಾಕ್ಷಿಸಿ ಈ ದೇಶಕ್ಕೆ ತಿರಿಗಿ ಬರಮಾಡುವೆನು; ಅವರನ್ನು ಕಟ್ಟುವೆನು, ಕೆಡವುವದಿಲ್ಲ; ನೆಡುವೆನು, ಕೀಳುವದಿಲ್ಲ. ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು.”
5, 6. (ಎ) ಕೆಲವು ಇಸ್ರಾಯೇಲ್ಯರು ಕಸೀಯ್ದರ ದೇಶಕ್ಕೆ ‘ಉತ್ತಮ ರೀತಿಯಲ್ಲಿ ಕಳುಹಿಸಲ್ಪಟ್ಟದ್ದು’ ಹೇಗೆ? (ಬಿ) ಬಂದಿವಾಸದಲ್ಲಿರುವ ನಂಬಿಗಸ್ತ ಇಸ್ರಾಯೇಲ್ಯರ ಮೇಲೆ ಯೆಹೋವನು ‘ಲಕ್ಷಿಸಿ ಮೇಲನ್ನುಂಟುಮಾಡಿದ್ದು’ ಹೇಗೆ?
5 ಆದುದರಿಂದ, ಸುಸಮಯಗಳು ಮುಂದಕ್ಕೆ ಇವೆ, ಯೆಹೂದ ಜನಾಂಗವು ಸಂಪೂರ್ಣವಾಗಿ ಅಳಿಸಲ್ಪಡುವದಿಲ್ಲ ಎಂದು ಇಲ್ಲಿ ಯೆಹೋವನು ಹೇಳಿದ್ದರಲ್ಲಿ ಕಂಡುಬರುತ್ತದೆ. ಆದರೆ ಒಳ್ಳೆಯ ಅಂಜೂರದ ಹಣ್ಣುಗಳ ಈ ಪುಟ್ಟಿಯ ವೈಶಿಷ್ಟ್ಯವೇನು?
6 ಈಗ ಯೆಕೊನ್ಯನು, ಯಾ ಯೆಹೋಯಾಕೀನನು ಅರಸನಾದ ನೆಬೂಕದ್ನೆಚ್ಚರನಿಗೆ ಸ್ವಇಚ್ಛೆಯಿಂದ ಅವನು ಯೆರೂಸಲೇಮನ್ನು ಶರಣಾಗತ ಮಾಡುವ ಮುಂಚೆ, ಕೇವಲ ಮೂರು ತಿಂಗಳು ಮತ್ತು ಹತ್ತು ದಿನಗಳ ವರೆಗೆ ಯೆಹೂದದ ಮೇಲೆ ಅರಸನಾಗಿ ಇದ್ದನು. ದೇಶಭ್ರಷ್ಟರಾಗಿ ಅವನೊಂದಿಗೆ ಬಂದಿವಾಸಿಗಳಾಗಿ ಕೊಂಡೊಯ್ಯಲ್ಪಟ್ಟವರಲ್ಲಿ ದಾನಿಯೇಲ ಮತ್ತು ಅವನ ಮೂವರು ಹೀಬ್ರು ಸಂಗಾತಿಗಳಾದ ಹನನ್ಯ, ಮೀಶಾಯೇಲ, ಮತ್ತು ಅಜರ್ಯ ಹಾಗೂ ಯೆಹೆಜ್ಕೇಲ ಇದ್ದರು. ಅವರ ಜೀವಗಳನ್ನು ಬಾಬೆಲಿನ ಅರಸನು ಉಳಿಸಿದ್ದನು, ಮತ್ತು ಹೀಗೆ ಯೆಹೋವನು ಈ ಎಲ್ಲಾ ಬಂದಿಗಳನ್ನು ಅವರನ್ನು ಕಸೀಯ್ದರ ದೇಶಕ್ಕೆ ಉತ್ತಮ ರೀತಿಯಲ್ಲಿ ಕಳುಹಿಸಲ್ಪಟ್ಟವರೋಪಾದಿ ವೀಕ್ಷಿಸಿದನು ಎಂದು ಹೇಳಬಹುದು. ‘ಲಕ್ಷಿಸಿ ಅವರಿಗೆ ಮೇಲನ್ನುಂಟುಮಾಡುವೆನು’ ಎಂದು ಯೆಹೋವನು ವಾಗ್ದಾನಿಸಿದ್ದನ್ನು ಸಹ ನೀವು ಗಮನಿಸಿದ್ದಿರೋ? ಇದು ಹೇಗೆ ನೆರವೇರಿತು? ಒಳ್ಳೇದು, 80 ವರ್ಷಗಳ ನಂತರ, ಸಾ.ಶ.ಪೂ. 537 ರಲ್ಲಿ ಅರಸನಾದ ಕೋರೆಷನು, ಯೂದಾಯ ದೇಶಕ್ಕೆ ಅವರ ವಂಶಜರ ಉಳಿಕೆಯವರು ಹಿಂದಿರುಗುವಂತೆ ಅನುಮತಿಸುವಂತಹ ಒಂದು ಶಾಸನವನ್ನು ಹೊರಡಿಸುವಂತೆ ಯೆಹೋವನು ಕಾರಣನಾದನು. ಈ ನಂಬಿಗಸ್ತ ಯೆಹೂದ್ಯರು ಯೆರೂಸಲೇಮ್ ಪಟ್ಟಣವನ್ನು ಪುನಃ ಕಟ್ಟಿದರು; ಅವರ ದೇವರಾದ ಯೆಹೋವನ ಆರಾಧನೆಗಾಗಿ ಅವರು ಒಂದು ಹೊಸ ದೇವಾಲಯವನ್ನು ನಿರ್ಮಿಸಿದರು; ಮತ್ತು ಅವರು ತಮ್ಮೆಲ್ಲಾ ಹೃದಯದಿಂದ ಅವನ ಬಳಿಗೆ ಹಿಂದಿರುಗಿದರು. ಹೀಗೆ ಇವೆಲ್ಲವುಗಳಲ್ಲಿ, ಈ ಸೆರೆವಾಸಿಗಳು ಮತ್ತು ಅವರ ವಂಶಜರು ಯೆಹೋವನಿಗೆ, ಅತ್ಯುತ್ತಮವಾದ ಕಾಲಕ್ಕೆ ಮುಂಚೆ ಮಾಗಿದ ಅಂಜೂರದ ಹಣ್ಣುಗಳಂತೆ ಇದ್ದರು.
7. ಆಧುನಿಕ ಯೆರೆಮೀಯ ವರ್ಗದವರ ಮೇಲೆ ಯಾವಾಗ ಮತ್ತು ಹೇಗೆ ಯೆಹೋವನ ಕಣ್ಣುಗಳು “ಮೇಲನ್ನುಂಟು” ಮಾಡುವಂತೆ ಇದ್ದವು?
7 ಯೆರೆಮೀಯನ ಪ್ರವಾದನಾ ವಾಕ್ಯಗಳ ಕುರಿತಾದ ಹಿಂದಿನ ಲೇಖನದಲ್ಲಿ, ಅವುಗಳಿಗೆ ನಮ್ಮ 20 ನೆಯ ಶತಕಕ್ಕಾಗಿ ಅರ್ಥವಿದೆ ಎಂದು ನಾವು ಕಲಿತಿರುವುದು ನಿಮಗೆ ನೆನಪಿರಬಹುದು. ಮತ್ತು 24 ನೆಯ ಅಧ್ಯಾಯವು ಇದಕ್ಕೆ ಹೊರತಾಗಿ ಇಲ್ಲ. ಮೊದಲನೆಯ ಲೋಕ ಯುದ್ಧದ ಅಂಧಕಾರದ ವರುಷಗಳಲ್ಲಿ, ಯೆಹೋವನ ಅನೇಕ ಸಮರ್ಪಿತ ಸೇವಕರು ಒಂದು ಯಾ ಇನ್ನೊಂದು ರೀತಿಯಲ್ಲಿ ಮಹಾ ಬಾಬೆಲಿನ ಪ್ರಭಾವದ ಕೆಳಗೆ ಬಂದರು. ಆದರೆ ಯೆಹೋವನ ಪಹರೆಯ ಕಣ್ಣು ‘ಮೇಲನ್ನುಂಟುಮಾಡಲು ಅವರ ಮೇಲೆ ಇತ್ತು.’ ಮತ್ತು ಹೀಗೆ ಮಹಾ ಕೋರೆಷನಾದ ಕ್ರಿಸ್ತ ಯೇಸುವಿನ ಮೂಲಕ, ಯೆಹೋವನು ಅವರ ಮೇಲಿದ್ದ ಮಹಾ ಬಾಬೆಲಿನ ಶಕ್ತಿಯನ್ನು ಮುರಿದನು ಮತ್ತು ಕ್ರಮೇಣ ಅವರನ್ನು ಆತ್ಮಿಕ ಪರದೈಸದೊಳಗೆ ತಂದನು. ಈ ಆತ್ಮಿಕ ಇಸ್ರಾಯೇಲ್ಯರು ಪ್ರತಿವರ್ತನೆ ತೋರಿಸಿ, ತಮ್ಮೆಲ್ಲಾ ಹೃದಯದಿಂದ ಯೆಹೋವನ ಬಳಿಗೆ ಹಿಂದಿರುಗಿದರು. ಅನಂತರ, 1931 ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸುವುದರಲ್ಲಿ ಅವರು ಸಂತೋಷಿಸಿದರು. ನಿಜವಾಗಿಯೂ, ಯೆಹೋವನ ದೃಷ್ಟಿಯಲ್ಲಿ ಅವರು ಅತ್ಯುತ್ತಮವಾದ ಅಂಜೂರದ ಹಣ್ಣುಗಳ ಪುಟ್ಟಿಯೋಪಾದಿ ಆಗಿದ್ದರು ಎಂದು ಈಗ ಹೇಳಸಾಧ್ಯವಾಗಿತ್ತು.
8. ರಾಜ್ಯ ಸಂದೇಶದ ಅಂಜೂರದಂತಹ ಸಿಹಿಯನ್ನು ಯೆಹೋವನ ಸಾಕ್ಷಿಗಳು ವಿಸ್ತಾರವಾಗಿ ಯಾವ ರೀತಿಯಲ್ಲಿ ಘೋಷಿಸಿದ್ದಾರೆ?
8 ಮತ್ತು ಮಹಾ ಬಾಬೆಲಿನಿಂದ ಅವರನ್ನು ಬಿಡುಗಡೆಗೊಳಿಸುವುದರಲ್ಲಿ ದೇವರ ಅಪಾತ್ರ ಕೃಪೆಯ ಉದ್ದೇಶವನ್ನು ಯೆಹೋವನ ಸಾಕ್ಷಿಗಳು ತಪ್ಪಿಹೋಗಿಲ್ಲ. ಅಂಜೂರ ಹಣ್ಣಿನಂತಿರುವ ಸುವಾರ್ತೆಯ ರಾಜ್ಯ ಸಂದೇಶದ ಸಿಹಿಯನ್ನು ತಮಗಾಗಿಯೇ ಅವರು ಇಟ್ಟುಕೊಳ್ಳಲಿಲ್ಲ, ಬದಲಿಗೆ ಮತ್ತಾಯ 24:14 ರಲ್ಲಿರುವ ಯೇಸುವಿನ ಮಾತುಗಳಿಗನುಸಾರವಾಗಿ, ಅದನ್ನು ಎಲ್ಲಾ ಕಡೆಗಳಲ್ಲೂ ಘೋಷಿಸಿರುತ್ತಾರೆ: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” ಇದರ ಫಲಿತಾಂಶ? ಆತ್ಮಿಕ ಇಸ್ರಾಯೇಲ್ಯರಲ್ಲದ ಸುಮಾರು 47,00,000 ಕ್ಕಿಂತಲೂ ಅಧಿಕ ಕುರಿಗಳಂತಹ ಜನರು ಮಹಾ ಬಾಬೆಲಿನಿಂದ ಬಿಡುಗಡೆಹೊಂದಿದ್ದಾರೆ!
ದಾರ್ಶನಿಕ ಕೆಟ್ಟ ಅಂಜೂರ ಹಣ್ಣುಗಳು
9. ಯೆರೆಮೀಯನ ದರ್ಶನದಲ್ಲಿ ಕೆಟ್ಟ ಅಂಜೂರ ಹಣ್ಣುಗಳಿಂದ ಯಾರು ಪ್ರತಿನಿಧಿಸಲ್ಪಟ್ಟಿದ್ದರು, ಮತ್ತು ಅವರಿಗೆ ಏನು ಸಂಭವಿಸಲಿಕ್ಕಿತ್ತು?
9 ಯೆರೆಮೀಯನ ದರ್ಶನದ ಕೆಟ್ಟ ಅಂಜೂರದ ಹಣ್ಣುಗಳ ಪುಟ್ಟಿಯ ಕುರಿತಾಗಿ ಏನು? ಯೆರೆಮೀಯ ಅಧ್ಯಾಯ 24, ವಚನಗಳು 8 ರಿಂದ 10 ರಲ್ಲಿ ಕಂಡುಕೊಳ್ಳುವಂತೆ, ಯೆರೆಮೀಯನು ಈಗ ಯೆಹೋವನ ಮಾತುಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಾನೆ: “ಇದಲ್ಲದೆ ಯೆಹೋವನು ಇಂತೆನ್ನುತ್ತಾನೆ—ಯೆಹೂದದ ಅರಸನಾದ ಚಿದ್ಕೀಯ, ಅವನ ಪ್ರಧಾನರು, ಈ ದೇಶದಲ್ಲಿ ನಿಂತಿರುವ ಯೆರೂಸಲೇಮಿನವರ ಶೇಷ, ಐಗುಪ್ತದೇಶಕ್ಕೆ ವಲಸೆಯಾದವರು, ಇವರೆಲ್ಲರನ್ನು ಕೆಟ್ಟು ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ತರುವೆನು. ಅವರ ಕೇಡಿಗಾಗಿ ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು; ನಾನು ಅವರನ್ನು ಅಟ್ಟಿಬಿಡುವ ಸ್ಥಳಗಳಲ್ಲೆಲ್ಲಾ ಅವರು ನಿಂದೆ, ಕಟ್ಟುಗಾದೆ, ಪರಿಹಾಸ್ಯ, ಶಾಪ, ಇವುಗಳಿಗೆ ಗುರಿಯಾಗುವರು. ನಾನು ಅವರಿಗೂ ಅವರ ಪಿತೃಗಳಿಗೂ ಅನುಗ್ರಹಿಸಿದ ದೇಶದೊಳಗಿಂದ ಅವರು ನಿರ್ಮೂಲರಾಗುವ ತನಕ ಖಡ್ಗಕ್ಷಾಮವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು.”
10. ಚಿದ್ಕೀಯನನ್ನು ಯೆಹೋವನು ‘ಒಂದು ಕೆಟ್ಟ ಅಂಜೂರ ಹಣ್ಣು’ ಎಂದು ಪರಿಗಣಿಸಿದ್ದು ಯಾಕೆ?
10 ಹೀಗೆ, ಚಿದ್ಕೀಯನು ಯೆಹೋವನ ದೃಷ್ಟಿಯಲ್ಲಿ ನಿಜವಾಗಿಯೂ ಒಂದು ‘ಕೆಟ್ಟ ಅಂಜೂರದ ಹಣ್ಣು’ ಆದನು. ಯೆಹೋವನ ನಾಮದ ಮೇಲೆ ಅರಸ ನೆಬೂಕದ್ನೆಚ್ಚರನಿಗೆ ನಿಷ್ಠೆಯ ಆಣೆಯಿಟ್ಟು ಪ್ರಮಾಣಮಾಡಿದ್ದನ್ನು ಅವನು ಮುರಿದು ಅವನ ವಿರುದ್ಧ ದಂಗೆ ಎದ್ದದ್ದು ಮಾತ್ರವಲ್ಲದೆ, ಯೆರೆಮೀಯನ ಮೂಲಕ ಅವನಿಗೆ ಒದಗಿಸಲ್ಪಟ್ಟ ಯೆಹೋವನ ಅನುಕಂಪವನ್ನು ಕೂಡ ಅವನು ಸಂಪೂರ್ಣವಾಗಿ ನಿರಾಕರಿಸಿದನು. ವಾಸ್ತವದಲ್ಲಿ, ಅವನು ಯೆರೆಮೀಯನನ್ನು ಕಾರಾಗೃಹಕ್ಕೆ ದೊಬ್ಬುವಷ್ಟು ಕೂಡ ಮುಂದರಿದನು! ಎರಡನೆಯ ಪೂರ್ವಕಾಲವೃತ್ತಾಂತ 36:12 ರಲ್ಲಿ ಅವನು ತಿಳಿಸುವಂತೆ, ಎಜ್ರನು ಅರಸನ ಮನೋಭಾವವನ್ನು ಹೀಗೆ ಸಾರಾಂಶಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ: “ಅವನು ತನ್ನ ದೇವರಾದ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದು . . . ತನ್ನನ್ನು ತಗ್ಗಿಸಿಕೊಳ್ಳಲಿಲ್ಲ.” ಯೆಹೋವನ ಕಣ್ಣುಗಳ ಮುಂದೆ ಚಿದ್ಕೀಯನು ಮತ್ತು ಯೆರೂಸಲೇಮಿನಲ್ಲಿ ಇನ್ನೂ ಉಳಿದುಕೊಂಡವರು ಕೆಟ್ಟ, ಅಸಹ್ಯವಾದ ಅಂಜೂರದ ಹಣ್ಣುಗಳ ಒಂದು ಪುಟ್ಟಿಯೋಪಾದಿ ಇದ್ದರು!
ನಮ್ಮ ದಿನಗಳಲ್ಲಿ ಕೊಳೆತ ಸಾಂಕೇತಿಕ ಅಂಜೂರದ ಹಣ್ಣುಗಳು
11, 12. ಇಂದು ಕೆಟ್ಟ ಅಂಜೂರದ ಹಣ್ಣುಗಳಾಗಿ ಯಾರು ಗುರುತಿಸಲ್ಪಟ್ಟಿದ್ದಾರೆ, ಮತ್ತು ಅವರಿಗೆ ಏನು ಸಂಭವಿಸಲಿದೆ?
11 ಈಗ ಲೋಕದ ಸುತ್ತಲೂ ಒಂದು ದೃಷ್ಟಿ ಹರಿಸಿರಿ. ಕೆಟ್ಟ ಅಂಜೂರದ ಹಣ್ಣುಗಳ ಸಾಂಕೇತಿಕ ಪುಟ್ಟಿಯೊಂದನ್ನು ನಾವು ಕಂಡುಕೊಳ್ಳಬಲ್ಲೆವು ಎಂದು ನೀವು ಎಣಿಸುತ್ತೀರೋ? ಒಳ್ಳೇದು, ಯೆರೆಮೀಯನ ದಿನಗಳೊಂದಿಗೆ ನಮ್ಮದನ್ನು ಹೋಲಿಸುವ ಮೂಲಕ ವಾಸ್ತವಾಂಶಗಳನ್ನು ನಾವು ಪರಿಗಣಿಸೋಣ. ಈ ಇಪ್ಪತ್ತನೆಯ ಶತಮಾನದಲ್ಲಿ, ಯೆಹೋವನು ಯೆರೆಮೀಯ ವರ್ಗದವರನ್ನು, ಅಭಿಷಿಕ್ತ ಉಳಿಕೆಯವರನ್ನು, ಮಹಾ ಸಂಕಟದಲ್ಲಿ ಬರಲಿರುವ ಅವನ ರೋಷಾವೇಶವನ್ನು ಸತತವಾಗಿ ಜನಾಂಗಗಳಿಗೆ ಎಚ್ಚರಿಸಲು ಉಪಯೋಗಿಸಿದ್ದಾನೆ. ಅವನ ಹೆಸರಿಗೆ ಸಲ್ಲತಕ್ಕ ಘನವನ್ನು ಅವನಿಗೆ ಕೊಡುವಂತೆ, ಆತ್ಮ ಮತ್ತು ಸತ್ಯದಿಂದ ಅವನನ್ನು ಆರಾಧಿಸುವಂತೆ, ಮತ್ತು ಅವನ ಆಳುವ ಮಗನಾದ ಕ್ರಿಸ್ತ ಯೇಸುವನ್ನು ಭೂಮಿಯ ಹಕ್ಕುಬದ್ಧ ಅಧಿಪತಿಯೆಂದು ಅಂಗೀಕರಿಸುವಂತೆ ಅವನು ಜನಾಂಗಿಕ ಗುಂಪುಗಳನ್ನು ಒತ್ತಾಯಿಸಿದ್ದಾನೆ. ಪ್ರತಿವರ್ತನೆ ಏನಾಗಿದೆ? ಯೆರೆಮೀಯನ ದಿನಗಳಲ್ಲಿ ಹೇಗಿತ್ತೋ ಹಾಗೆಯೇ ಇದೆ. ಯೆಹೋವನ ದೃಷ್ಟಿಯಲ್ಲಿ ಏನು ಕೆಟ್ಟದ್ದೋ ಅದನ್ನು ಮಾಡುವುದನ್ನು ಜನಾಂಗಗಳು ಮುಂದರಿಸುತ್ತಾ ಇವೆ.
12 ಆದರೆ ಈ ದಂಗೆಕೋರ ಪ್ರವೃತ್ತಿಯನ್ನು ಪ್ರೇರಿಸುವವರು ಯಾರು? ಯೆರೆಮೀಯನಂತಹ ದೇವರ ಈ ಸಂದೇಶವಾಹಕರುಗಳನ್ನು ಗೇಲಿಮಾಡುತ್ತಾ, ದೇವರ ಶುಶ್ರೂಷಕರಾಗಿ ಕಾರ್ಯನಡಿಸಲು ಅವರಿಗಿರುವ ಅಧಿಕಾರವನ್ನು ಪ್ರಶ್ನಿಸುತ್ತಾ ಇರುವವರು ಯಾರು? ದೇವರ ವಾಕ್ಯವನ್ನು ತುಚ್ಛೀಕರಿಸುತ್ತಾ ಇರುವವರು ಯಾರು? ಯೆಹೋವನ ಸಾಕ್ಷಿಗಳ ಅಧಿಕಾಂಶ ಹಿಂಸೆಗಳ ಹಿಂದೆ ಇಂದು ಯಾರು ಇದ್ದಾರೆ? ಉತ್ತರವು ಎಲ್ಲರಿಗೂ ಕಾಣುವಂತೆ ಇದೆ—ಅದು ಕ್ರೈಸ್ತಪ್ರಪಂಚ, ವಿಶೇಷವಾಗಿ ವೈದಿಕರು! ಮತ್ತು ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟ ಕ್ರೈಸ್ತಪ್ರಪಂಚದ ಅಸಹ್ಯವಾದ, ಕೆಟ್ಟ ಫಲಗಳೆಲ್ಲವನ್ನೂ ಕೇವಲ ನೋಡಿರಿ. ಓ, ಹೌದು, ಇಂದು ಭೂಮಿಯಲ್ಲಿ ಕೆಟ್ಟ ಅಂಜೂರದ ಹಣ್ಣುಗಳ ಸಾಂಕೇತಿಕ ಪುಟಿಯ್ಟು ಖಂಡಿತವಾಗಿಯೂ ಇದೆ. ವಾಸ್ತವದಲ್ಲಿ, ಅವರು “ಕೆಟ್ಟು ಯಾರೂ ತಿನ್ನದ ಹಾಗೆ” ಇದ್ದಾರೆ ಎಂದು ಯೆಹೋವನು ಹೇಳುತ್ತಾನೆ. ನಮ್ಮ ದಿನಗಳ ವರೆಗೂ ಯೆರೆಮೀಯನ ಮೂಲಕ ಯೆಹೋವನ ಮಾತುಗಳು ಪ್ರತಿಧ್ವನಿಸುತ್ತವೆ: ‘ಅವರ ನಿರ್ಮೂಲನಕ್ಕೆ ಅವರು ಬರುವರು’! ಕ್ರೈಸ್ತಪ್ರಪಂಚದ ವಿರುದ್ಧ ಯೆಹೋವನ ರೋಷಾವೇಶವು ಯಾವುದೇ ವಾಸಿಯಾಗುವಿಕೆಯನ್ನು ಕಾಣದು.
ನಮಗೆ ಒಂದು ಎಚ್ಚರಿಕೆಯ ಪಾಠ
13. ಒಂದನೆಯ ಕೊರಿಂಥ 10:11 ರಲ್ಲಿ ಕಂಡುಕೊಳ್ಳುವ ಪೌಲನ ಮಾತುಗಳ ನೋಟದಲ್ಲಿ, ಅಂಜೂರದ ಹಣ್ಣುಗಳ ಎರಡು ಪುಟ್ಟಿಗಳ ದರ್ಶನವನ್ನು ನಾವು ಹೇಗೆ ತಿಳಿದುಕೊಳ್ಳತಕ್ಕದ್ದು?
13 ಯೆರೆಮೀಯನ ದೇವಪ್ರೇರಿತ ಎಚ್ಚರಿಕೆಯ ಸಂದೇಶದ ಪರಿಣಾಮಗಳನ್ನು ನಾವು ಪರೀಕ್ಷಿಸುತ್ತಿರುವಂತೆಯೇ, ಒಂದನೆಯ ಕೊರಿಂಥ 10:11 ರಲ್ಲಿರುವ ಅಪೊಸ್ತಲ ಪೌಲನ ಮಾತುಗಳು ನಮ್ಮ ಕಿವಿಗಳಲ್ಲಿ ಘಣಘಣಿಸುತ್ತವೆ: “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.” ಅಂಜೂರದ ಹಣ್ಣುಗಳ ಎರಡು ಪುಟ್ಟಿಗಳ ಈ ದರ್ಶನದ ಮೂಲಕ ನಮಗೆ ತಿಳಿಸಲ್ಪಟ್ಟ ಎಚ್ಚರಿಕೆಯನ್ನು ನಾವು ವೈಯಕ್ತಿಕವಾಗಿ ಹೃದಯಕ್ಕೆ ತೆಗೆದುಕೊಂಡಿದ್ದೇವೊ? ಇಸ್ರಾಯೇಲ್ಯರಿಗೆ ಏನು ಸಂಭವಿಸಿತೋ ಆ ವಿಷಯಗಳ ಪ್ರಾಮುಖ್ಯ ಭಾಗವೊಂದನ್ನು, ನಮ್ಮೆಲ್ಲರ ಎಚ್ಚರಿಕೆಯ ಉದಾಹರಣೆಯಾಗಿ ನಾವು ಈಗ ಚರ್ಚಿಸುತ್ತಾ ಇದ್ದೇವೆ.
14. ಯೆಹೋವನ ಕೋಮಲ ಪರಾಂಬರಿಕೆಗೆ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸಿದರು?
14 ಕೊನೆಯಲ್ಲಿ, ಇಸ್ರಾಯೇಲಿನ ಕುರಿತು ಅರಸ ದಾವೀದನಿಗೆ ಹೇಳಲ್ಪಟ್ಟ ಯೆಹೋವನ ಮಾತುಗಳನ್ನು ನಾವು ನೆನಪಿಗೆ ತರೋಣ, ಇದನ್ನು 2 ಸಮುವೇಲ 7:10 ರಲ್ಲಿ ಕಾಣುತ್ತೇವೆ: “ನನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು.” ಯೆಹೋವನು ಪ್ರತಿಯೊಂದು ವಿಧದಲ್ಲಿ ತನ್ನ ಜನರಾದ ಇಸ್ರಾಯೇಲಿನ ಜಾಗ್ರತೆಯನ್ನು ಕೋಮಲತೆಯಿಂದ ವಹಿಸಿದನು. ಅವರ ಜೀವಿತಗಳಲ್ಲಿ ಉತ್ತಮವಾದ ಫಲಗಳನ್ನು ಉತ್ಪಾದಿಸಲು ಇಸ್ರಾಯೇಲ್ಯರಿಗೆ ಪ್ರತಿಯೊಂದು ಕಾರಣವು ಅಲ್ಲಿತ್ತು. ಅವರು ಕೇವಲ ಯೆಹೋವನ ದೈವಿಕ ಬೋಧನೆಗೆ ಕಿವಿಗೊಡಬೇಕಿತ್ತು ಮತ್ತು ಅವನ ಆಜ್ಞೆಗಳನ್ನು ಪರಿಪಾಲಿಸಬೇಕಿತ್ತು. ಆದರೂ, ಅವರಲ್ಲಿ ಕೇವಲ ಕೊಂಚ ಮಂದಿ ಮಾತ್ರ ಹಾಗೆ ಮಾಡಿದರು. ಅಧಿಕಾಂಶ ಜನರು ಎಷ್ಟೊಂದು ಹಟಮಾರಿಗಳೂ ಮತ್ತು ದಾರಿತಪ್ಪಿಹೋದವರೂ ಆಗಿದ್ದರೆಂದರೆ ಅವರು ಕೆಟ್ಟ, ಅಸಹ್ಯವಾದ ಫಲಗಳನ್ನು ಉತ್ಪಾದಿಸಿದರು.
15. ಇಂದು ಆತ್ಮಿಕ ಇಸ್ರಾಯೇಲ್ ಮತ್ತು ಅವರ ಕುರಿಗಳಂತಹ ಸಂಗಾತಿಗಳು ಯೆಹೋವನ ಕನಿಕರಕ್ಕೆ ಹೇಗೆ ಪ್ರತಿವರ್ತಿಸಿದ್ದಾರೆ?
15 ಒಳ್ಳೇದು, ಹಾಗಾದರೆ ನಮ್ಮ ದಿನಗಳ ಕುರಿತೇನು? ಆತ್ಮಿಕ ಇಸ್ರಾಯೇಲಿನ ಉಳಿಕೆಯವರ ಮತ್ತು ಅವರ ಕುರಿಗಳಂತಹ ಸಂಗಾತಿಗಳ ಕಡೆಗೆ ಯೆಹೋವನು ಬಹಳಷ್ಟು ಕನಿಕರವನ್ನು ತೋರಿಸಿದ್ದಾನೆ. ಅವನ ಕಣ್ಣು, 1919 ರಲ್ಲಿ ಅವರನ್ನು ಆತ್ಮಿಕವಾಗಿ ಬಿಡುಗಡೆಗೊಳಿಸಿದಂದಿನಿಂದ, ಸತತವಾಗಿ ಅವರ ಮೇಲಿದೆ. ಯೆಶಾಯನ ಮೂಲಕ ಅವನು ಮುಂತಿಳಿಸಿದಂತೆ, ಅವರು ವಿಶ್ವದ ಮಹಾ ಬೋಧಕನಾದ ಯೆಹೋವ ದೇವರಿಂದ ದಿನದಿನವೂ ಆತ್ಮಿಕ ಉಪದೇಶವನ್ನು ಪಡೆಯುತ್ತಿದ್ದಾರೆ. (ಯೆಶಾಯ 54:13) ಈ ದೈವಿಕ ಬೋಧನೆಯು ಅವನ ಪ್ರಿಯ ಮಗನಾದ ಯೇಸು ಕ್ರಿಸ್ತನ ಮೂಲಕ ಮಾರ್ಗದರ್ಶಿಸಲ್ಪಟ್ಟು, ಅವರ ನಡುವೆ ಹೇರಳವಾದ ಶಾಂತಿಯನ್ನು ಫಲಿಸಿದೆ ಮತ್ತು ಯೆಹೋವನೊಂದಿಗೆ ಎಡೆಬಿಡದೆ ಒಂದೇ ಸಮನೆ ಹತ್ತಿರದ ಸಂಬಂಧಕ್ಕೆ ಅವರನ್ನು ತಂದಿರುತ್ತದೆ. ಯೆಹೋವನನ್ನು ತಿಳಿಯಲು, ಅವನಿಗೆ ಕಿವಿಕೊಡಲು, ಮತ್ತು ನಮ್ಮ ಜೀವಿತಗಳಲ್ಲಿ ಉತ್ತಮವಾದ ಫಲಗಳನ್ನು—ಯೆಹೋವನಿಗೆ ಸ್ತುತಿಯನ್ನು ತರುವ ಫಲಗಳನ್ನು—ಉತ್ಪಾದಿಸುವುದನ್ನು ಮುಂದರಿಸಲು ನಮಗೆಲ್ಲರಿಗೆ ಎಂತಹ ಆಶ್ಚರ್ಯಕರವಾದ ಒಂದು ಆತ್ಮಿಕ ಪರಿಸರವನ್ನು ಅದು ಒದಗಿಸುತ್ತದೆ! ನಮ್ಮ ಜೀವದ ಅರ್ಥದಲ್ಲಿ ಅದಿದೆ!
16. ನಮ್ಮಲ್ಲಿ ಪ್ರತಿಯೊಬ್ಬನು ಎರಡು ಅಂಜೂರ ಪುಟ್ಟಿಗಳ ದರ್ಶನದ ಯಾವ ವೈಯಕ್ತಿಕ ಅನ್ವಯವನ್ನು ಮಾಡಸಾಧ್ಯವಿದೆ?
16 ದೇವರ ಎಲ್ಲಾ ಅಪಾತ್ರ ಕೃಪೆಯ ಹೊರತಾಗಿ, ಪ್ರಾಚೀನ ಯೆಹೂದದಲ್ಲಿ ಅನೇಕರು ಮಾಡಿದಂತೆ, ಕೆಲವರು ದಂಗೆಕೋರ ಮತ್ತು ಕಠಿನ ಹೃದಯಿಗಳಾಗುವವರು ಇನ್ನೂ ಇದ್ದಾರೆ, ಮತ್ತು ಅವರು ಕೆಟ್ಟ, ಅಸಹ್ಯ ಫಲಗಳನ್ನು ತಮ್ಮ ಜೀವಿತಗಳಲ್ಲಿ ಉತ್ಪಾದಿಸುತ್ತಾರೆ. ಇದು ಎಂತಹ ಒಂದು ದುರಂತವಾಗಿದೆ! ಅಂಜೂರದ ಹಣ್ಣುಗಳ—ಒಳ್ಳೆಯ ಮತ್ತು ಕೆಟ್ಟ ಫಲಗಳ—ಈ ಎರಡು ಪುಟ್ಟಿಗಳ ಮೂಲಕ ನಮ್ಮ ಗಮನಕ್ಕೆ ಸ್ಪಷ್ಟವಾಗಿಗಿ ತರಲ್ಪಟ್ಟ ಎಚ್ಚರಿಕೆಯ ಪಾಠವನ್ನು ನಮ್ಮಲ್ಲಿ ಯಾರೂ ಎಂದಿಗೂ ಮರೆಯದಿರೋಣ. ಯೆಹೋವನ ಅರ್ಹವಾದ ನ್ಯಾಯತೀರ್ಪು ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಮೇಲೆ ಅವಸರಿಸುವಂತೆ, ಅಪೊಸ್ತಲ ಪೌಲನ ಎಚ್ಚರಿಕೆಯನ್ನು ನಮ್ಮ ಹೃದಯಕ್ಕೆ ತೆಗೆದುಕೊಳ್ಳೋಣ: “ಆತನಿಗೆ [ಯೆಹೋವ, NW] ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ” ಇರ್ರಿ.—ಕೊಲೊಸ್ಸೆ 1:10.
ಪರಾಮರ್ಶಿಸುವುದು “ಒಳ್ಳೆಯ ಮತ್ತು ಕೆಟ್ಟ ಫಲಗಳು” ಮತ್ತು “ಜನಾಂಗಗಳೊಂದಿಗೆ ಯೆಹೋವನ ವ್ಯಾಜ್ಯ”ದ ಪ್ಯಾರಗ್ರಾಫ್ಗಳು 1-4
▫ ಒಳ್ಳೆಯ ಅಂಜೂರ ಹಣ್ಣುಗಳ ಪುಟಿಯ್ಟು ಏನನ್ನು ಪ್ರತಿನಿಧಿಸುತ್ತದೆ?
▫ ಕೆಟ್ಟ ಅಂಜೂರ ಹಣ್ಣುಗಳ ದಾರ್ಶನಿಕ ಪುಟಿಯ್ಟು ಹೇಗೆ ವ್ಯಕ್ತವಾಗಿದೆ?
▫ ಯೆರೆಮೀಯನ ಸಂದೇಶವು ನಮಗೆ ಯಾವ ಎಚ್ಚರಿಕೆಯ ಪಾಠವನ್ನು ಒದಗಿಸುತ್ತದೆ?
▫ ಸಾ.ಶ.ಪೂ. 607 ಮತ್ತು ಸಾ.ಶ. 1914 ನೆಯ ವರ್ಷದ ಕುರಿತು ಯಾವುದು ಅರ್ಥಗರ್ಭಿತವಾಗಿತ್ತು?
[ಪುಟ 15 ರಲ್ಲಿರುವ ಚಿತ್ರ]
ಒಳ್ಳೆಯ ಅಂಜೂರ ಹಣ್ಣುಗಳಂತೆ, ದೇವರ ಜನರು ಸವಿಯಾದ ರಾಜ್ಯ ಫಲಗಳನ್ನು ಫಲಿಸಿದ್ದಾರೆ
[ಪುಟ 15 ರಲ್ಲಿರುವ ಚಿತ್ರ]
ಕ್ರೈಸ್ತಪ್ರಪಂಚವು ಕೆಟ್ಟ ಅಂಜೂರ ಹಣ್ಣುಗಳ ಪುಟ್ಟಿಯೋಪಾದಿ ರುಜುವಾಗಿದೆ