ಅವರು ಯೆಹೋವನ ಚಿತ್ತವನ್ನು ಮಾಡಿದರು
ಯೇಸು ಮೆಸ್ಸೀಯನಂತೆಯೂ ರಾಜನಂತೆಯೂ ಸ್ವಾಗತಿಸಲ್ಪಡುತ್ತಾನೆ!
ಸಾ.ಶ. 33, ನೈಸಾನ್ 9ರಂದು ಯೆರೂಸಲೇಮನ್ನು ಪ್ರವೇಶಿಸುತ್ತಿದ್ದ ಆರ್ಭಟಿಸುವ ಗುಂಪು, ಯೆಹೂದದ ಅನೇಕರನ್ನು ಆಶ್ಚರ್ಯಗೊಳಿಸಿತು. ಪಸ್ಕ ಹಬ್ಬದ ಮುಂಚೆ ಜನರು ನಗರದೊಳಗೆ ಪ್ರವಹಿಸುತ್ತಿರುವುದನ್ನು ನೋಡುವುದು ಅಸಾಮಾನ್ಯವಾಗಿರಲಿಲ್ಲವಾದರೂ, ಈ ಸಂದರ್ಶಕರು ಭಿನ್ನರಾಗಿದ್ದರು. ಅವರ ಮಧ್ಯದಲ್ಲಿದ್ದ ಪ್ರಧಾನ ವ್ಯಕ್ತಿಯು, ಕತ್ತೆಮರಿಯ ಮೇಲೆ ಸವಾರಿಮಾಡುತ್ತಿದ್ದ ಒಬ್ಬ ಪುರುಷನಾಗಿದ್ದನು. ಆ ಪುರುಷನು ಯೇಸು ಕ್ರಿಸ್ತನಾಗಿದ್ದನು, ಮತ್ತು ಜನರು ಅವನ ಮುಂದೆ ಬಟ್ಟೆಗಳನ್ನೂ ಖರ್ಜೂರದ ಗರಿಗಳನ್ನು ಹರಡುತ್ತಾ, ಹೀಗೆ ಆರ್ಭಟಿಸುತ್ತಿದ್ದರು: “ದಾವೀದನ ಕುಮಾರನಿಗೆ ಜಯ! ಕರ್ತನ [“ಯೆಹೋವನ,” NW] ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ! ಮೇಲಣ ಲೋಕಗಳಲ್ಲಿ ಜಯ!” ಗುಂಪನ್ನು ನೋಡುತ್ತಾ, ಯೆರೂಸಲೇಮಿನಲ್ಲಿ ಈಗಾಗಲೇ ಇದ್ದ ಅನೇಕರು ಮೆರವಣಿಗೆಯಲ್ಲಿ ಸೇರಿಕೊಳ್ಳುವಂತೆ ಪ್ರಚೋದಿಸಲ್ಪಟ್ಟರು.—ಮತ್ತಾಯ 21:7-9; ಯೋಹಾನ 12:12, 13.
ಈಗ ಅವನನ್ನು ಸ್ವಾಗತಿಸಲಾಗುತ್ತಿದ್ದರೂ, ತನಗಾಗಿ ಸಂಕಷ್ಟಗಳು ಕಾದಿದ್ದವೆಂದು ಯೇಸುವಿಗೆ ಗೊತ್ತಿತ್ತು. ಅಷ್ಟೇಕೆ, ಕೇವಲ ಐದು ದಿನಗಳಲ್ಲಿ ಅವನು, ಅದೇ ನಗರದಲ್ಲಿ ಮರಣ ದಂಡನೆಗೆ ಒಳಗಾಗಲಿದ್ದನು! ಹೌದು, ಯೆರೂಸಲೇಮ್ ಪ್ರತಿಕೂಲವಾದ ಕ್ಷೇತ್ರವೆಂದು ಯೇಸುವಿಗೆ ಗೊತ್ತಿತ್ತು, ಮತ್ತು ಆ ವಿಚಾರವನ್ನೇ ಮನಸ್ಸಿನಲ್ಲಿಟ್ಟವನಾಗಿ ಅವನು ನಗರದೊಳಗಿನ ತನ್ನ ಸುವ್ಯಕ್ತ ಪ್ರವೇಶವನ್ನು ಏರ್ಪಡಿಸಿದನು.
ಪ್ರಾಚೀನ ಪ್ರವಾದನೆಯೊಂದು ಪೂರ್ತಿಗೊಂಡದ್ದು
ಸಾ.ಶ.ಪೂ. 518ರಲ್ಲಿ, ಯೆರೂಸಲೇಮಿನೊಳಕ್ಕೆ ಯೇಸುವಿನ ವಿಜಯೋತ್ಸವದ ಪ್ರವೇಶವನ್ನು ಜೆಕರ್ಯನು ಮುಂತಿಳಿಸಿದನು. ಅವನು ಬರೆದುದು: “ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ. . . . ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವದು; ಆತನ ಆಳಿಕೆಯು ಸಮುದ್ರದಿಂದ ಸಮುದ್ರದ ವರೆಗೂ [ಯೂಫ್ರೇಟೀಸ್] ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಹರಡಿಕೊಂಡಿರುವದು.”—ಜೆಕರ್ಯ 9:9, 10.
ಆದುದರಿಂದ ನೈಸಾನ್ 9ರಂದು ಯೆರೂಸಲೇಮಿನೊಳಕ್ಕೆ ಯೇಸುವಿನ ಪ್ರವೇಶವು, ಆ ಬೈಬಲ್ ಪ್ರವಾದನೆಯನ್ನು ಪೂರ್ತಿಗೊಳಿಸಿತು. ಅದೊಂದು ಆಕಸ್ಮಿಕ ಘಟನೆಯಾಗಿರಲಿಲ್ಲ, ಬದಲಿಗೆ ಜಾಗರೂಕವಾಗಿ ಯೋಜಿಸಲ್ಪಟ್ಟಿತ್ತು. ಈ ಮುಂಚೆ, ಯೆರೂಸಲೇಮಿನ ಹೊರಗೆ ಇದ್ದಾಗಲೇ, ಯೇಸು ತನ್ನ ಶಿಷ್ಯರಲ್ಲಿ ಇಬ್ಬರಿಗೆ ಉಪದೇಶ ನೀಡಿದ್ದು: “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರ ಕೂಡ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತರಕ್ಕೆ ಹಿಡುಕೊಂಡು ಬನ್ನಿರಿ. ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ಇವು ಸ್ವಾಮಿಯವರಿಗೆ ಬೇಕಾಗಿವೆ ಅನ್ನಿರಿ; ಕೂಡಲೆ ಅವುಗಳನ್ನು ಬಿಟ್ಟುಕೊಡುವನು.” (ಮತ್ತಾಯ 21:1-3) ಆದರೆ ಯೇಸು, ಯೆರೂಸಲೇಮಿನೊಳಕ್ಕೆ ಒಂದು ಕತ್ತೆಯ ಮೇಲೆ ಸವಾರಿಮಾಡಲು ಏಕೆ ಬಯಸಿದನು, ಮತ್ತು ಗುಂಪಿನ ಪ್ರತಿಕ್ರಿಯೆಯ ಮಹತ್ವವು ಏನಾಗಿತ್ತು?
ಅರಸುತನದ ಕುರಿತಾದ ವಿಚಾರ
ಆಡಿದ ಮಾತಿಗಿಂತ ದೃಷ್ಟಿಗೋಚರ ದೃಶ್ಯವು ಅನೇಕ ವೇಳೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೀಗೆ, ಕೆಲವೊಮ್ಮೆ ತಮ್ಮ ಪ್ರವಾದನಾತ್ಮಕ ಸಂದೇಶವನ್ನು ಬಲಪಡಿಸಲು, ತನ್ನ ಪ್ರವಾದಿಗಳು ತಮ್ಮ ಸಂದೇಶವನ್ನು ಅಭಿನಯಿಸುವಂತೆ ಯೆಹೋವನು ಮಾಡಿದನು. (1 ಅರಸುಗಳು 11:29-32; ಯೆರೆಮೀಯ 27:1-6; ಯೆಹೆಜ್ಕೇಲ 4:1-17) ಸಂವಾದದ ಈ ತೀರ ಉನ್ನತ ದೃಷ್ಟಿಗೋಚರ ಮಾಧ್ಯಮವು, ಅತ್ಯಂತ ಕಠಿನಹೃದಯದ ಪ್ರೇಕ್ಷಕನ ಮನಸ್ಸಿನಲ್ಲೂ ಅಳಿಸಲಾಗದ ಪ್ರಭಾವವನ್ನು ಬೀರಿತು. ತದ್ರೀತಿಯಲ್ಲಿ, ಯೇಸು ಯೆರೂಸಲೇಮ್ ನಗರದೊಳಕ್ಕೆ ಕತ್ತೆಯ ಮೇಲೆ ಸವಾರಿಮಾಡುತ್ತಾ ಬರುವ ಮೂಲಕ, ಒಂದು ಪ್ರಭಾವಶಾಲಿ ಸಂದೇಶವನ್ನು ಅಭಿನಯಿಸಿದನು. ಹೇಗೆ?
ಬೈಬಲ್ ಸಮಯಗಳಲ್ಲಿ ಕತ್ತೆಯು ಉದಾತ್ತ ಉದ್ದೇಶಗಳಿಗಾಗಿ ಉಪಯೋಗಿಸಲ್ಪಟ್ಟಿತು. ಉದಾಹರಣೆಗೆ, ರಾಜನಾಗಿ ಅಭಿಷೇಕಿಸಲ್ಪಡಲು ಸೊಲೊಮೋನನು ತನ್ನ ತಂದೆಯ ಹೇಸರಕತ್ತೆಯ—ಗಂಡು ಕತ್ತೆಯ ಮಿಶ್ರಜ ಸಂತಾನ—ಮೇಲೆ ಸವಾರಿಮಾಡಿದನು. (1 ಅರಸುಗಳು 1:33-40) ಆದುದರಿಂದ ಯೇಸು ಕತ್ತೆಯ ಮೇಲೆ ಯೆರೂಸಲೇಮಿನೊಳಕ್ಕೆ ಸವಾರಿಮಾಡಿದ್ದು, ಒಬ್ಬ ಅರಸನಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಿದ್ದೇನೆಂಬುದನ್ನು ಅರ್ಥೈಸಿತು.a ಗುಂಪಿನ ಕ್ರಿಯೆಗಳು ಈ ಸಂದೇಶವನ್ನು ಬಲಪಡಿಸಿದವು. ಈ ಗುಂಪು—ಹೆಚ್ಚಾಗಿ ಗಲಿಲಾಯದವರಿಂದ ರಚಿತವಾಗಿತ್ತೆಂಬುದು ನಿಸ್ಸಂದೇಹ—ಯೇಸುವಿನ ಮುಂದೆ ತಮ್ಮ ಬಟ್ಟೆಗಳನ್ನು ಹರಡಿತು. ಈ ಭಾವಾಭಿನಯವು, ಯೇಹುವಿನ ಅರಸುತನದ ಸಾರ್ವಜನಿಕ ಪ್ರಕಟನೆಯನ್ನು ಜ್ಞಾಪಕಕ್ಕೆ ತಂದಿತು. (2 ಅರಸುಗಳು 9:13) ಯೇಸುವನ್ನು “ದಾವೀದನ ಕುಮಾರ”ನೆಂದು ಅವರು ಸೂಚಿಸಿಹೇಳಿದ್ದು, ಆಳಲಿಕ್ಕಿರುವ ಅವನ ನ್ಯಾಯಬದ್ಧ ಹಕ್ಕನ್ನು ಮುನ್ಪ್ರಕಟಿಸಿತು. (ಲೂಕ 1:31-33) ಮತ್ತು ಖರ್ಜೂರದ ಗರಿಗಳ ಅವರ ಉಪಯೋಗವು, ಅವನ ರಾಜಯೋಗ್ಯ ಅಧಿಕಾರಕ್ಕೆ ಅವರ ಅಧೀನತೆಯನ್ನು ಸ್ಪಷ್ಟವಾಗಿ ತೋರಿಸಿತು.—ಹೋಲಿಸಿ ಪ್ರಕಟನೆ 7:9, 10.
ಆದುದರಿಂದ ನೈಸಾನ್ 9ರಂದು ಯೆರೂಸಲೇಮಿನೊಳಕ್ಕೆ ಬಂದಂತಹ ಮೆರವಣಿಗೆಯು, ಯೇಸು ದೇವರ ನೇಮಿತ ಮೆಸ್ಸೀಯನೂ ರಾಜನೂ ಆಗಿದ್ದನು ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಿತು. ಯೇಸು ಈ ವಿಧದಲ್ಲಿ ಪರಿಚಯಿಸಲ್ಪಟ್ಟದ್ದನ್ನು ನೋಡಿ ಎಲ್ಲರೂ ಸಂತೋಷಪಡಲಿಲ್ಲವೆಂಬುದು ನಿಶ್ಚಯ. ಯೇಸುವಿಗೆ ಇಂತಹ ರಾಜಯೋಗ್ಯ ಘನತೆಯನ್ನು ನೀಡುವುದು ಬಹಳ ಅನುಚಿತವಾಗಿತ್ತೆಂದು ವಿಶೇಷವಾಗಿ ಫರಿಸಾಯರು ನೆನಸಿದರು. ತಮ್ಮ ಧ್ವನಿಗಳಲ್ಲಿ ನಿಸ್ಸಂದೇಹವಾಗಿ ಕೋಪವನ್ನು ವ್ಯಕ್ತಪಡಿಸುತ್ತಾ, ಅವರು ತಗಾದೆಮಾಡಿ ಕೇಳಿದ್ದು: “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು.” ಯೇಸು ಉತ್ತರಿಸಿದ್ದು: “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ.” (ಲೂಕ 19:39, 40) ಹೌದು, ಯೇಸುವಿನ ಸಾರುವ ಕಾರ್ಯದ ಮುಖ್ಯವಿಷಯವು ದೇವರ ರಾಜ್ಯವಾಗಿತ್ತು. ಜನರು ಅದನ್ನು ಸ್ವೀಕರಿಸಲಿ, ಸ್ವೀಕರಿಸದಿರಲಿ ಈ ಸಂದೇಶವನ್ನು ಅವನು ಧೈರ್ಯದಿಂದ ಘೋಷಿಸಲಿದ್ದನು.
ನಮಗಾಗಿರುವ ಪಾಠ
ಪ್ರವಾದಿಯಾದ ಜೆಕರ್ಯನ ಮೂಲಕ ಮುಂತಿಳಿಸಲ್ಪಟ್ಟ ವಿಧದಲ್ಲಿ ಯೆರೂಸಲೇಮನ್ನು ಪ್ರವೇಶಿಸಲು ಯೇಸುವಿಗೆ ಬಹಳಷ್ಟು ಧೈರ್ಯವು ಬೇಕಾಗಿತ್ತು. ಹಾಗೆ ಮಾಡುವ ಮೂಲಕ ತನ್ನ ವೈರಿಗಳ ಕೋಪವನ್ನು ತನ್ನ ಮೇಲೆ ತಂದುಕೊಳ್ಳುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ತನ್ನ ಸ್ವರ್ಗಾರೋಹಣಕ್ಕೆ ಮುಂಚೆ ಯೇಸು, ದೇವರ ರಾಜ್ಯದ ಸುವಾರ್ತೆಯನ್ನು ಸಾರುವಂತೆ ಮತ್ತು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡುವಂತೆ ತನ್ನ ಹಿಂಬಾಲಕರಿಗೆ ಆದೇಶನೀಡಿದನು. (ಮತ್ತಾಯ 24:14; 28:19, 20) ಈ ಕೆಲಸವನ್ನು ಸಾಧಿಸಲೂ ಧೈರ್ಯವು ಬೇಕು. ಈ ಸಂದೇಶವನ್ನು ಕೇಳಿ ಎಲ್ಲರೂ ಸಂತೋಷಪಡುವುದಿಲ್ಲ. ಕೆಲವರು ಅದರ ಕಡೆಗೆ ಉದಾಸೀನರಾಗಿರುವಾಗ, ಇತರರು ಅದನ್ನು ವಿರೋಧಿಸುತ್ತಾರೆ. ಕೆಲವು ಸರಕಾರಗಳು ಸಾರುವ ಕೆಲಸದ ಮೇಲೆ ಪ್ರತಿಬಂಧಗಳನ್ನು ಹೇರಿವೆ ಇಲ್ಲವೆ ಅದನ್ನು ನೇರವಾಗಿ ನಿಷೇಧಿಸಿವೆ.
ಆದರೂ, ಜನರು ಕೇಳಲಿ, ಕೇಳದಿರಲಿ, ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯು ಸಾರಲ್ಪಡಲೇಬೇಕೆಂಬುದನ್ನು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. (ಯೆಹೆಜ್ಕೇಲ 2:7) ಅವರು ಈ ಜೀವರಕ್ಷಕ ಕೆಲಸವನ್ನು ಮಾಡುತ್ತಾ ಮುಂದುವರಿದಂತೆ, ಯೇಸುವಿನ ವಾಗ್ದಾನದಿಂದ ಪುನರಾಶ್ವಾಸನೆಯನ್ನು ಪಡೆಯುತ್ತಾರೆ: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾಯ 28:20.
[ಅಧ್ಯಯನ ಪ್ರಶ್ನೆಗಳು]
a ಈ ಕತ್ತೆಮರಿಯ ‘ಮೇಲೆ ಇದುವರೆಗೆ . . . ಯಾರೂ ಹತ್ತಿಲ್ಲ’ ಎಂಬುದಾಗಿ ಮಾರ್ಕನ ವೃತ್ತಾಂತವು ಕೂಡಿಸುತ್ತದೆ. (ಮಾರ್ಕ 11:2) ಆ ಸಮಯದ ವರೆಗೆ ಬಳಸಲ್ಪಡದ ಒಂದು ಪ್ರಾಣಿಯು ವಿಶೇಷವಾಗಿ ಪವಿತ್ರ ಉದ್ದೇಶಗಳಿಗಾಗಿ ಯೋಗ್ಯವಾಗಿತ್ತೆಂಬುದು ಸ್ಪಷ್ಟ.—ಹೋಲಿಸಿ ಅರಣ್ಯಕಾಂಡ 19:2; ಧರ್ಮೋಪದೇಶಕಾಂಡ 21:3; 1 ಸಮುವೇಲ 6:7.