ಯೆಹೋವನ ಆಶೀರ್ವಾದವು ಐಶ್ವರ್ಯದಾಯಕವು
“ಯೆಹೋವನ ಆಶೀರ್ವಾದವು ಭಾಗ್ಯದಾಯಕವು [ಐಶ್ವರ್ಯದಾಯಕವು, NW] ಅದು ವ್ಯಸನವನ್ನು ಸೇರಿಸದು.”—ಜ್ಞಾನೋಕ್ತಿ 10:22.
1-3. ಅನೇಕರು ಪ್ರಾಪಂಚಿಕ ವಿಷಯಗಳ ಕುರಿತು ಚಿಂತಿಸುತ್ತಿರುವಾಗ, ಭೌತಿಕ ಐಶ್ವರ್ಯದ ಕುರಿತು ಯಾವ ನಿಜತ್ವವನ್ನು ಎಲ್ಲರೂ ಅಂಗೀಕರಿಸಬೇಕು?
ಕೆಲವು ಜನರು ಹಣದ ಕುರಿತು—ಅಥವಾ ಅದರ ಅಭಾವದ ಕುರಿತು ಮಾತಾಡುವುದನ್ನೆಂದೂ ನಿಲ್ಲಿಸುವುದಿಲ್ಲ. ಅವರಿಗೆ ಅಸಂತೋಷಕರವಾಗಿ, ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಚರ್ಚಿಸಲು ಬಹಳಷ್ಟು ಇತ್ತು. ಧನಿಷ್ಠ ಪಾಶ್ಚಿಮಾತ್ಯ ಪ್ರಪಂಚವು ಸಹ, 1992 ರಲ್ಲಿ ವ್ಯಾಪಾರ ಕುಸಿತವನ್ನು ಅನುಭವಿಸಿತು, ಮತ್ತು ಅನೇಕ ಕಾರ್ಯ ನಿರ್ವಾಹಕರು ಹಾಗೂ ಸಾಮಾನ್ಯ ಕಾರ್ಮಿಕರು ಕೆಲಸ ಕಳಕೊಂಡವರಾದರು. ಸ್ಥಿರ ಸಮೃದ್ಧಿಯ ಒಂದು ಸಮಯವನ್ನು ತಾವು ಪುನಃ ಎಂದಾದರೂ ಕಾಣಲಿಕ್ಕಿರುವೆವೋ ಎಂದು ಅನೇಕರು ಯೋಚನೆಗೀಡಾದರು.
2 ನಮ್ಮ ಭೌತಿಕ ಸುಕ್ಷೇಮದ ಕುರಿತು ಚಿಂತಿಸುತ್ತಿರುವುದು ತಪ್ಪೋ? ಇಲ್ಲ, ಒಂದು ಮಟ್ಟದ ತನಕ ಅದು ಕೇವಲ ಸ್ವಾಭಾವಿಕವಾಗಿದೆ. ಅದೇ ಸಮಯದಲ್ಲಿ, ಐಶ್ವರ್ಯದ ಕುರಿತು ನಾವು ಅಂಗೀಕರಿಸಬೇಕಾದ ಒಂದು ಮೂಲಭೂತ ಸತ್ಯವು ಇದೆ. ಮೂಲತತ್ವದಲ್ಲಿ, ಭೌತಿಕ ವಸ್ತುಗಳೆಲ್ಲವೂ ನಿರ್ಮಾಣಿಕನಿಂದಲೇ ಬಂದವುಗಳಾಗಿವೆ. “ಭೂಮಂಡಲವನ್ನೂ ಅದರ ಉತ್ಪತ್ತಿಯನ್ನೂ ವಿಸ್ತರಿಸಿ . . . ಭೂಚರರಿಗೆ ಜೀವಾತ್ಮವನ್ನು ದಯಪಾಲಿಸುವ ಯೆಹೋವನೆಂಬ [ಸತ್ಯ, NW ] ದೇವರು” ಆತನಾಗಿದ್ದಾನೆ.—ಯೆಶಾಯ 42:5.
3 ಯಾರು ಐಶ್ವರ್ಯವಂತರಾಗಿರಬೇಕು ಮತ್ತು ಯಾರು ಬಡವರಾಗಿರಬೇಕು ಎಂದು ಯೆಹೋವನು ಪೂರ್ವನಿಶ್ಚಯ ಮಾಡುವುದಿಲ್ಲವಾದರೂ, “ಭೂಮಂಡಲ . . . ಅದರ ಉತ್ಪತ್ತಿ” ಯಲ್ಲಿ ನಮ್ಮ ಯಾವುದೇ ಪಾಲನ್ನು ನಾವು ಬಳಸುವ ರೀತಿಗಾಗಿ ನಾವೆಲ್ಲರೂ ಜವಾಬ್ದಾರರಾಗಿದ್ದೇವೆ. ನಮ್ಮ ಐಶ್ವರ್ಯವನ್ನು ನಾವು ಇತರರ ಮೇಲೆ ಅಧಿಕಾರ ಚಲಾಯಿಸಲು ಉಪಯೋಗಿಸಿದರೆ, ಯೆಹೋವನು ನಮ್ಮನ್ನು ಹೊಣೆಯಾಗಿ ಹಿಡಿಯುವನು. ಮತ್ತು ಯೆಹೋವನ ಬದಲಾಗಿ ಐಶ್ವರ್ಯಕ್ಕಾಗಿಯೇ ದುಡಿಯುವ ಯಾವನಾದರೂ, “ಧನವನ್ನೇ ನಂಬಿದವನು—ಬಿದ್ದುಹೋಗುವನು” ಎಂಬದನ್ನು ಕಂಡುಕೊಳ್ಳುವನು. (ಜ್ಞಾನೋಕ್ತಿ 11:28; ಮತ್ತಾಯ 6:24; 1 ತಿಮೊಥೆಯ 6:9) ಯೆಹೋವನಿಗೆ ತಗ್ಗಿನಡೆಯುವ ಒಂದು ಹೃದಯದೊಂದಿಗೆ ಜತೆಗೂಡಿರದ ಪ್ರಾಪಂಚಿಕ ಸಮೃದ್ಧಯು ಕಟ್ಟಕಡೆಗೆ ಯಾವ ಬೆಲೆಯೂ ಇಲ್ಲದ್ದಾಗಿದೆ.—ಪ್ರಸಂಗಿ 2:3-11, 18, 19; ಲೂಕ 16:9.
ಅತ್ಯಂತ ಮಹತ್ವದ ಸಮೃದ್ಧಿ
4. ಆತ್ಮಿಕ ಸಮೃದ್ಧಯು ಭೌತಿಕ ಸಮೃದ್ಧಿಗಿಂತ ಏಕೆ ಒಳ್ಳೆಯದು?
4 ಪ್ರಾಪಂಚಿಕ ಸಮೃದ್ಧಿಯ ಕುರಿತು ಮಾತ್ರವಲ್ಲದೆ ಆತ್ಮಿಕ ಸಮೃದ್ಧಿಯ ಕುರಿತೂ ಬೈಬಲು ಮಾತಾಡುತ್ತದೆ. ಇದು ಸ್ಪಷ್ಟವಾಗಿಗಿ ಒಳ್ಳೇ ರೀತಿಯ ಸಮೃದ್ಧಿಯಾಗಿದೆ. (ಮತ್ತಾಯ 6:19-21) ಆತ್ಮಿಕ ಸಮೃದ್ಧಯು ಯೆಹೋವನೊಂದಿಗೆ ನಿತ್ಯವಾಗಿ ಬಾಳಬಲ್ಲ ಒಂದು ಸಂತೃಪ್ತಿಕರ ಸಂಬಂಧವನ್ನು ಪ್ರಾಪ್ತಿಸುತ್ತದೆ. (ಪ್ರಸಂಗಿ 7:12) ಅಷ್ಟಲ್ಲದೆ, ಆತ್ಮಿಕವಾಗಿ ಐಶ್ವರ್ಯವಂತರಾಗಿರುವ ದೇವರ ಸೇವಕರು, ಹಿತಕರವಾದ ಭೌತಿಕ ಆಶೀರ್ವಾದಗಳನ್ನು ಕಳೆದುಕೊಳ್ಳುವದಿಲ್ಲ. ಹೊಸ ಲೋಕದಲ್ಲಿ ಆತ್ಮಿಕ ಐಶ್ವರ್ಯವು ಭೌತಿಕ ಸಮೃದ್ಧಿಯೊಂದಿಗೆ ಜೋಡಿಸಲ್ಪಡುವುದು. ಇಂದು ಎಷ್ಟೋ ಹೆಚ್ಚಾಗಿ ನಡೆಯುವ ಪ್ರಕಾರ, ಕಟು ಮೇಲಾಟದಿಂದ ಅಥವಾ ದೇಹಾರೋಗ್ಯ ಮತ್ತು ಸಂತೋಷದ ತ್ಯಾಗದಿಂದ ಸಂಪಾದಿಸಲ್ಪಡದ ಒಂದು ಭೌತಿಕ ಭದ್ರತೆಯನ್ನು ನಂಬಿಗಸ್ತ ಜನರು ಆನಂದಿಸುವರು. (ಕೀರ್ತನೆ 72:16; ಜ್ಞಾನೋಕ್ತಿ 10:28; ಯೆಶಾಯ 25:6-8) ಎಲ್ಲಾ ರೀತಿಯಲ್ಲಿ “ಯೆಹೋವನ ಆಶೀರ್ವಾದವು ಐಶ್ವರ್ಯದಾಯಕವು; ಅದು ವ್ಯಸನವನ್ನು ಸೇರಿಸದು” ಎಂಬದನ್ನು ಅವರು ಕಂಡುಕೊಳ್ಳುವರು.—ಜ್ಞಾನೋಕ್ತಿ 10:22.
5. ಭೌತಿಕ ವಸ್ತುಗಳ ಕುರಿತು ಯೇಸು ಯಾವ ವಾಗ್ದಾನವನ್ನು ಕೊಟ್ಟನು?
5 ಇಂದು ಕೂಡ ಯಾರು ಆತ್ಮಿಕ ವಿಷಯಗಳನ್ನು ಮೂಲ್ಯ ಮಾಡುತ್ತಾರೋ ಅವರು ಪ್ರಾಪಂಚಿಕ ವಸ್ತುಗಳ ಸಂಬಂಧದಲ್ಲಿ ಒಂದು ನಿರ್ದಿಷ್ಟ ನೆಮ್ಮದಿಯ ಅನಿಸಿಕೆಯುಳ್ಳವರಾಗಿದ್ದಾರೆ. ತಮ್ಮ ಬೆಲೆಪಟ್ಟಿಗಳ ಪಾವತಿಗಾಗಿ ಮತ್ತು ತಮ್ಮ ಕುಟುಂಬಗಳನ್ನು ಉಣಿಸಲಿಕ್ಕಾಗಿ ಅವರು ಕೆಲಸಮಾಡುತ್ತಾರೆ ನಿಜ. ಅಥವಾ, ವ್ಯಾಪಾರ ಕುಸಿತದ ಸಮಯಗಳಲ್ಲಿ ಕೆಲವರು ತಮ್ಮ ಉದ್ಯೋಗಗಳನ್ನೂ ಕಳಕೊಳ್ಳಬಹುದು. ಆದರೂ ಅಂಥ ಚಿಂತೆಗಳಿಂದಾಗಿ ಅವರು ಪೂರ್ತಿ ಮುಳುಗಿಹೋಗುವುದಿಲ್ಲ. ಬದಲಾಗಿ ಅವರು, ಯೇಸು ಕೊಟ್ಟ ವಚನದಲ್ಲಿ ನಂಬಿಕೆ ಇಡುತ್ತಾರೆ, ಆತನಂದದ್ದು: “ಏನು ಊಟ ಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ. . . . ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:31-33.
ಆತ್ಮಿಕ ಐಶ್ವರ್ಯ ಇಂದು
6, 7. (ಎ) ದೇವ ಜನರ ಆತ್ಮಿಕ ಸಮೃದ್ಧಿಯ ಕೆಲವು ವೈಶಿಷ್ಟ್ಯಗಳನ್ನು ವರ್ಣಿಸಿರಿ. (ಬಿ) ಯಾವ ಪ್ರವಾದನೆಯು ಇಂದು ನೆರವೇರುತ್ತಲಿದೆ, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?
6 ಆದಕಾರಣ, ಯೆಹೋವನ ಜನರು ತಮ್ಮ ಜೀವಿತದಲ್ಲಿ ದೇವರ ರಾಜ್ಯವನ್ನು ಪ್ರಥಮವಾಗಿಡಲು ಆರಿಸಿಕೊಂಡಿದ್ದಾರೆ, ಮತ್ತು ಅವರೆಷ್ಟು ಧನ್ಯರು! ಶಿಷ್ಯರನ್ನಾಗಿ ಮಾಡುವ ತಮ್ಮ ಕಾರ್ಯದಲ್ಲಿ ಹೇರಳವಾದ ಸಾಫಲ್ಯವನ್ನು ಅವರು ಆನಂದಿಸುತ್ತಾರೆ. (ಯೆಶಾಯ 60:22) ಅವರು ಯೆಹೋವನಿಂದ ಕಲಿಸಲ್ಪಟ್ಟವರಾಗಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕವಾಗಿ ಒದಗಿಸಲ್ಪಟ್ಟ ಆತ್ಮಿಕ ಸುವಸ್ತುಗಳ ಒಂದು ಅನಂತ ಪ್ರವಾಹವನ್ನೇ ಆನಂದಿಸುತ್ತಿದ್ದಾರೆ. (ಮತ್ತಾಯ 24:45-47; ಯೆಶಾಯ 54:13) ಅದಲ್ಲದೆ, ಯೆಹೋವನ ಆತ್ಮವು ಅವರ ಮೇಲಿದ್ದು, ಒಂದು ಉಲ್ಲಾಸಭರಿತ ಅಂತರ್ರಾಷ್ಟ್ರೀಯ ಸಹೋದರತ್ವದೊಳಗೆ ಅವರನ್ನು ರೂಪಿಸಿಯದೆ.—ಕೀರ್ತನೆ 133:1; ಮಾರ್ಕ 10:29, 30.
7 ಇದು ನಿಜವಾಗಿಯೂ ಆತ್ಮಿಕ ಸಮೃದ್ಧಯು, ಹಣದಿಂದ ಖರೀದಿಸಲಾಗದ ಒಂದು ಸಂಗತಿಯು. ಯೆಹೋವನ ವಾಗ್ದಾನದ ಗಮನಾರ್ಹ ನೆರವೇರಿಕೆಯು ಇದಾಗಿದೆ: “ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರನಾದ ಯೆಹೋವನ ನುಡಿ.” (ಮಲಾಕಿಯ 3:10) ನಾವು ಇಂದು ಈ ವಾಗ್ದಾನವು ನೆರವೇರಿರುವುದನ್ನು ಕಂಡಿರುತ್ತೇವೆ. ಆದರೂ, ಸಕಲ ಐಶ್ವರ್ಯಗಳ ಮೂಲನಾದ ಯೆಹೋವನು, ತನ್ನ ಸೇವಕರು ಹತ್ತನೆಯ ಒಂದಂಶವನ್ನು ಅಥವಾ ದಶಮಾಂಶವನ್ನು ತರುವಂತೆ ಕೇಳುವುದಾದರೂ ಏತಕ್ಕೆ? ದಶಮಾಂಶದಿಂದ ಯಾರು ಪ್ರಯೋಜನ ಹೊಂದುತ್ತಾರೆ? ಈ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ, ಸಾ.ಶ.ಪೂ. ಐದನೆಯ ಶತಮಾನದಲ್ಲಿ ಮಲಾಕಿಯನ ಮೂಲಕ ಯೆಹೋವನು ಈ ಮಾತುಗಳನ್ನಾಡಿದ್ದೇಕೆ ಎಂಬದನ್ನು ಪರಿಗಣಿಸಿರಿ.
ದಶಮಾಂಶಗಳು ಮತ್ತು ಅರ್ಪಣೆಗಳು
8. ನಿಯಮದೊಡಂಬಡಿಕೆಗೆ ಅನುಸಾರವಾಗಿ, ಇಸ್ರಾಯೇಲ್ಯರ ಪ್ರಾಪಂಚಿಕ ಸಮೃದ್ಧಯು ಯಾವುದರ ಮೇಲೆ ಆಧರಿಸಿತ್ತು?
8 ಮಲಾಕಿಯನ ಕಾಲದಲ್ಲಿ ಜನರು ಸಮೃದ್ಧಿಯನ್ನು ಪಡೆಯುತ್ತಿದ್ದಿರಲಿಲ್ಲ. ಏಕೆ ಇಲ್ಲ? ಅಂಶಿಕವಾಗಿ ಅದು ಅರ್ಪಣೆಗಳು ಮತ್ತು ದಶಮಾಂಶಗಳ ಕಾರಣದಿಂದಾಗಿತ್ತು. ಅಲ್ಲಿ ಹಿಂದೆ, ಇಸ್ರಾಯೇಲು ಮೋಶೆಯ ನಿಯಮದೊಡಂಬಡಿಕೆಯ ಕೆಳಗಿತ್ತು. ಯೆಹೋವನು ಆ ಒಡಂಬಡಿಕೆಯನ್ನು ಮಾಡಿದಾಗ, ಇಸ್ರಾಯೇಲ್ಯರು ಅದರಲ್ಲಿ ತಮ್ಮ ಪಾಲನ್ನು ನಡಿಸಿದ್ದಾದರೆ, ತಾನು ಅವರನ್ನು ಆತ್ಮಿಕವಾಗಿಯೂ ಭೌತಿಕವಾಗಿಯೂ ಆಶೀರ್ವದಿಸುವನೆಂದು ವಚನ ಕೊಟ್ಟಿದ್ದನು. ಕಾರ್ಯತಃ ಇಸ್ರಾಯೇಲಿನ ಸಮೃದ್ಧಯು, ಅವರ ನಂಬಿಗಸ್ತಿಕೆಯ ಮೇಲೆ ಆಧರಿಸಿತ್ತು.—ಧರ್ಮೋಪದೇಶಕಾಂಡ 28:1-19.
9. ಪ್ರಾಚೀನ ಇಸ್ರಾಯೇಲ್ಯರ ದಿನಗಳಲ್ಲಿ, ದಶಮಾಂಶಗಳನ್ನು ಸಲ್ಲಿಸುವಂತೆ ಮತ್ತು ಅರ್ಪಣೆಗಳನ್ನು ತರುವಂತೆ ಯೆಹೋವನು ಇಸ್ರಾಯೇಲ್ಯರನ್ನು ಆವಶ್ಯಪಡಿಸಿದ್ದೇಕೆ?
9 ಆ ನಿಯಮಶಾಸ್ತ್ರದ ಕೆಳಗೆ ಇಸ್ರಾಯೇಲ್ಯರ ಹಂಗಿನ ಭಾಗವು ಆಲಯಕ್ಕೆ ಅರ್ಪಣೆಗಳನ್ನು ತರುವುದು ಮತ್ತು ದಶಮಾಂಶಗಳನ್ನು ಸಲ್ಲಿಸುವುದು ಆಗಿತ್ತು. ಕೆಲವು ಅರ್ಪಣೆಗಳು ಯೆಹೋವನ ಯಜ್ಞವೇದಿಯ ಮೇಲೆ ಪೂರ್ತಿಯಾಗಿ ಹೋಮಮಾಡಲ್ಪಡುತ್ತಿದ್ದವು, ಬೇರೆಯವುಗಳನ್ನು ಯಾಜಕರ ಮತ್ತು ಅರ್ಪಣೆಯನ್ನು ಕೊಡುವವರ ನಡುವೆ ಪಾಲುಮಾಡಲಾಗುತ್ತಿತ್ತು, ವಿಶೇಷ ಅಂಶಗಳು ಯೆಹೋವನಿಗೆ ಸಮರ್ಪಿಸಲ್ಪಡುತ್ತಿದ್ದವು. (ಯಾಜಕಕಾಂಡ 1:3-9; 7:1-15) ದಶಮಾಂಶಗಳ ಕುರಿತು ಮೋಶೆಯು ಇಸ್ರಾಯೇಲ್ಯರಿಗೆ ಅಂದದ್ದು: “ಹೊಲದ ಬೆಳೆಯಾಗಲಿ ತೋಟದ ಹಣ್ಣುಗಳಾಗಲಿ ಭೂಮಿಯಿಂದುಂಟಾದ ಎಲ್ಲಾ ಆದಾಯದಲ್ಲಿ ಹತ್ತನೆಯ ಪಾಲು ಯೆಹೋವನದಾಗಿರಬೇಕು; ಅದು ಯೆಹೋವನಿಗೆ ಮೀಸಲಾದದ್ದು.” (ಯಾಜಕಕಾಂಡ 27:30) ಆ ದಶಮಾಂಶವು ಗುಡಾರದಲ್ಲಿ ಮತ್ತು ತದನಂತರ ಆಲಯದಲ್ಲಿದ್ದ ಲೇವ್ಯ ಕೆಲಸಗಾರರಿಗೆ ನೀಡಲಾಗುತ್ತಿತ್ತು. ಪ್ರತಿಯಾಗಿ, ಯಾಜಕರಲ್ಲದ ಲೇವಿಯರು ತಮಗೆ ಸಿಕ್ಕಿದರಲ್ಲಿ ಹತ್ತನೆಯ ಒಂದಂಶವನ್ನು ಆರೋನ್ಯ ಯಾಜಕರಿಗೆ ಕೊಡುತ್ತಿದ್ದರು. (ಅರಣ್ಯಕಾಂಡ 18:21-29) ಇಸ್ರಾಯೇಲು ದಶಮಾಂಶಗಳನ್ನು ಕೊಡುವಂತೆ ಯೆಹೋವನು ಆವಶ್ಯಪಡಿಸಿದ್ದೇಕೆ? ಮೊದಲನೆಯದಾಗಿ, ಒಂದು ಸ್ಫುಟವಾದ ರೀತಿಯಲ್ಲಿ ಅವರು ಯೆಹೋವನ ಒಳ್ಳೇತನಕ್ಕಾಗಿ ತಮ್ಮ ಗಣ್ಯತೆಯನ್ನು ತೋರಿಸುವದಕ್ಕೋಸ್ಕರವೇ. ಮತ್ತು ಎರಡನೆಯದಾಗಿ, ಲೇವಿಯರ ಬೆಂಬಲಕ್ಕಾಗಿ ಅವರು ತಮ್ಮ ಸಹಾಯವನ್ನು ನೀಡಲು ಶಕ್ತರಾಗುವಂತೆಯೇ, ಹೀಗೆ ಲೇವಿಯರು ಧರ್ಮಶಾಸ್ತ್ರವನ್ನು ಕಲಿಸುವುದೂ ಕೂಡಿದ್ದ ತಮ್ಮ ಹಂಗುಗಳ ಮೇಲೆ ಏಕಾಗ್ರತೆಯನ್ನಿಡಲು ಸಾಧ್ಯವಾಗುತ್ತಿತ್ತು. (2 ಪೂರ್ವಕಾಲ 17:7-9) ಈ ರೀತಿಯಲ್ಲಿ ಶುದ್ಧಾರಾಧನೆಯು ಕೂಡ ಬೆಂಬಲಿಸಲ್ಪಡುತ್ತಿತ್ತು, ಮತ್ತು ಪ್ರತಿಯೊಬ್ಬರು ಪ್ರಯೋಜನವನ್ನು ಹೊಂದುತ್ತಿದ್ದರು.
10. ಇಸ್ರಾಯೇಲ್ಯರು ದಶಮಾಂಶಗಳನ್ನು ಮತ್ತು ಅರ್ಪಣೆಗಳನ್ನು ತರಲು ತಪ್ಪಿದಾಗ ಏನು ಸಂಭವಿಸಿತು?
10 ದಶಮಾಂಶಗಳು ಮತ್ತು ಅರ್ಪಣೆಗಳು ತದನಂತರ ಲೇವಿಯರಿಂದ ಉಪಯೋಗಿಸಲ್ಪಟ್ಟರೂ, ಅವು ನಿಜವಾಗಿಯೂ ಯೆಹೋವನಿಗೆ ಕಾಣಿಕೆಗಳಾಗಿದ್ದವು, ಆದುದರಿಂದ ಆತನಿಗೆ ಪಾತ್ರವಾದ ಒಳ್ಳೇ ಗುಣಮಟ್ಟದವುಗಳಾಗಿರಬೇಕಿತ್ತು. (ಯಾಜಕಕಾಂಡ 22:21-25) ಇಸ್ರಾಯೇಲ್ಯರು ತಮ್ಮ ದಶಮಾಂಶಗಳನ್ನು ತರಲು ತಪ್ಪಿದಾಗ ಅಥವಾ ಅವರು ಕೆಳದರ್ಜೆಯ ಅರ್ಪಣೆಗಳನ್ನು ತಂದಾಗ ಏನು ಸಂಭವಿಸಿತು? ನಿಯಮಶಾಸ್ತ್ರದಲ್ಲಿ ಯಾವ ಶಿಕ್ಷೆಯೂ ನಮೂದಿಸಲ್ಪಟ್ಟಿರಲ್ಲಿಲ, ಆದರೆ ಅಂತಿಮ ಫಲಿತಾಂಶಗಳಿದ್ದವು. ಯೆಹೋವನು ತನ್ನ ಆಶೀರ್ವಾದವನ್ನು ತಡೆದುಹಿಡಿದನು, ಮತ್ತು ಲೇವಿಯರು ಭೌತಿಕ ಬೆಂಬಲವನ್ನು ಕಳಕೊಂಡವರಾಗಿ, ತಮ್ಮ ಸ್ವಂತ ಜೀವನೋಪಾಯವನ್ನು ನಡಿಸಲಿಕ್ಕಾಗಿ ಆಲಯ ಸೇವೆಗಳನ್ನು ಬಿಟ್ಟುಬಿಟ್ಟರು. ಹೀಗೆ ಇಸ್ರಾಯೇಲ್ಯರೆಲ್ಲರು ಬಾಧಿತರಾದರು.
“ನಿಮ್ಮ ಮಾರ್ಗಗಳನ್ನು ಹೃದಯಕ್ಕೆ ತಂದುಕೊಳ್ಳಿರಿ”
11, 12. (ಎ) ನಿಯಮಶಾಸ್ತ್ರವನ್ನು ಪಾಲಿಸಲು ಇಸ್ರಾಯೇಲ್ಯರು ದುರ್ಲಕ್ಷಿಸಿದಾಗ ಸಂಭವಿಸಿದ್ದೇನು? (ಬಿ) ಇಸ್ರಾಯೇಲ್ಯರನ್ನು ಬಾಬೆಲಿನಿಂದ ಹಿಂದೆ ತಂದಾಗ ಯೆಹೋವನು ಅವರಿಗೆ ಯಾವ ನಿಯೋಗವನ್ನು ಕೊಟ್ಟನು?
11 ಇಸ್ರಾಯೇಲ್ಯರ ಇತಿಹಾಸದ ಪಥದಲ್ಲಿ, ಕೆಲವರು ದಶಮಾಂಶಗಳ ಸಲ್ಲಿಸುವಿಕೆಯೂ ಸೇರಿದ್ದ ನಿಯಮಶಾಸ್ತ್ರದ ಪಾಲನೆಯ ಪ್ರಯತ್ನದಲ್ಲಿ ಆದರ್ಶವಾದಿಗಳಾಗಿದ್ದರು. (2 ಪೂರ್ವಕಾಲ 31:2-16) ಸಾಮಾನ್ಯವಾಗಿಯಾದರೂ, ಜನಾಂಗವು ದುರ್ಲಕ್ಷ್ಯದಿಂದಿತ್ತು. ಪದೇ ಪದೇ ಅವರು ಯೆಹೋವನೊಂದಿಗೆ ಒಡಂಬಡಿಕೆಯನ್ನು ಮುರಿದರು, ಕಟ್ಟಕಡೆಗೆ ಅವರು ಸೋಲಿಸಲ್ಪಡುವಂತೆ, ಮತ್ತು ಸಾ.ಶ.ಪೂ. 607 ರಲ್ಲಿ ಬಾಬೆಲಿಗೆ ಗಡೀಪಾರು ಮಾಡಲ್ಪಡುವಂತೆ ಆತನು ಬಿಟ್ಟುಕೊಟ್ಟನು.—2 ಪೂರ್ವಕಾಲ 36:15-21.
12 ಅದು ಕಠಿಣ ಶಿಕ್ಷೆಯಾಗಿತ್ತು, ಆದರೆ 70 ವರ್ಷಗಳ ತರುವಾಯ ಯೆಹೋವನು ತನ್ನ ಜನರನ್ನು ಅವರ ಸ್ವದೇಶಕ್ಕೆ ಪುನಃಸ್ಥಾಪಿಸಿದನು. ಯೆಶಾಯನ ಪುಸ್ತಕದ ಪರದೈಸ ಪ್ರವಾದನೆಗಳಲ್ಲಿ ಹೆಚ್ಚಿನವು ಆ ಹಿಂತಿರುಗುವಿಕೆಯ ಅನಂತರವೇ ತಮ್ಮ ಪ್ರಾರಂಭದ ನೆರವೇರಿಕೆಯನ್ನು ಪಡೆಯಲಿಕ್ಕಿದ್ದವು. (ಯೆಶಾಯ 35:1, 2; 52:1-9; 65:17-19) ಆದರೂ, ಯೆಹೋವನು ತನ್ನ ಜನರನ್ನು ಹಿಂದೆ ತಂದ ಮುಖ್ಯ ಕಾರಣವು ಒಂದು ಐಹಿಕ ಪರದೈಸವನ್ನು ಕಟಲ್ಟಿಕ್ಕಾಗಿ ಅಲ್ಲ, ಬದಲಾಗಿ, ಆಲಯವನ್ನು ಪುನಃ ಕಟಲ್ಟಿಕ್ಕಾಗಿ ಮತ್ತು ಸತ್ಯಾರಾಧನೆಯನ್ನು ಪುನಃಸ್ಥಾಪಿಸಲಿಕ್ಕಾಗಿಯೇ. (ಎಜ್ರ 1:2, 3) ಇಸ್ರಾಯೇಲ್ಯರು ಯೆಹೋವನಿಗೆ ವಿಧೇಯರಾಗಿದ್ದರೆ, ಭೌತಿಕ ಪ್ರಯೋಜನಗಳು ಹಿಂಬಾಲಿಸುವುವು, ಮತ್ತು ಯೆಹೋವನ ಆಶೀರ್ವಾದವು ಅವರನ್ನು ಆತ್ಮಿಕವಾಗಿಯೂ ಭೌತಿಕವಾಗಿಯೂ ಐಶ್ವರ್ಯವಂತರಾಗಿ ಮಾಡುವುದು. ಇದಕ್ಕನುಸಾರ, ಸಾ.ಶ.ಪೂ. 537 ರಲ್ಲಿ ಅವರು ತಮ್ಮ ಸ್ವದೇಶದಲ್ಲಿ ಆಗಮಿಸಿದ ಕೂಡಲೇ, ಯೆಹೂದ್ಯರು ಯೆರೂಸಲೇಮಿನಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿದರು ಮತ್ತು ದೇವಾಲಯದ ಕೆಲಸವನ್ನು ಪ್ರಾರಂಭಿಸಿದರು. ಆದರೆ ಕಟು ವಿರೋಧವು ಅವರಿಗೆದುರಾಯಿತು ಮತ್ತು ಕೆಲಸವನ್ನು ನಿಲ್ಲಿಸಿದರು. (ಎಜ್ರ 4:1-4, 23) ಫಲಿತಾಂಶವಾಗಿ, ಇಸ್ರಾಯೇಲ್ಯರು ಯೆಹೋವನ ಆಶೀರ್ವಾದವನ್ನು ಆನಂದಿಸಲಿಲ್ಲ.
13, 14. (ಎ) ಇಸ್ರಾಯೇಲ್ಯರು ದೇವಾಲಯವನ್ನು ಪುನಃಕಟ್ಟಲು ತಪ್ಪಿದಾಗ ಏನು ಹಿಂಬಾಲಿಸಿತು? (ಬಿ) ಕಟ್ಟಕಡೆಗೆ ಅಲಯವು ಪುನಃಕಟ್ಟಲ್ಪಟ್ಟದ್ದು ಹೇಗೆ, ಆದರೆ ಇಸ್ರಾಯೇಲ್ಯರ ವಿಷಯದಲ್ಲಿ ಬೇರೆ ಯಾವ ಮಾರ್ಗಚ್ಯುತಿಗಳು ವರದಿಸಲ್ಪಟ್ಟವು?
13 ಆಲಯವನ್ನು ಕಟ್ಟುವ ಕೆಲಸಕ್ಕಾಗಿ ಹಿಂತಿರುಗುವಂತೆ ಇಸ್ರಾಯೇಲ್ಯರನ್ನು ಪ್ರೇರಿಸಲಿಕ್ಕಾಗಿ, ಸಾ.ಶ.ಪೂ. 520 ನೆಯ ವರ್ಷದಲ್ಲಿ, ಯೆಹೋವನು ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರನ್ನು ಎಬ್ಬಿಸಿದನು. ಜನಾಂಗವು ಭೌತಿಕ ಕೊರತೆಗಳನ್ನು ಅನುಭವಿಸುತ್ತಿದದ್ದನ್ನು ಹಗ್ಗಾಯನು ತೋರಿಸಿದನು ಮತ್ತು ಯೆಹೋವನ ಆಲಯಕ್ಕಾಗಿ ಅವರ ಹುರುಪಿನಲ್ಲಿ ಕೊರತೆಗೆ ಅದನ್ನು ಸಂಬಂಧಿಸಿದನು. ಅವನಂದದ್ದು: “ಈ ಸಮಯದಲ್ಲಿ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ [ನಿಮ್ಮ ಮಾರ್ಗಗಳನ್ನು ಹೃದಯಕ್ಕೆ, NW] ತಂದುಕೊಳ್ಳಿರಿ. ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ತಿನ್ನುತ್ತೀರಿ, ತೃಪ್ತಿಯಾಗದು, ಕುಡಿಯುತ್ತೀರಿ, ಆನಂದವಾಗದು; ಹೊದಿಯುತ್ತೀರಿ, ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಿನದು. ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಿಮ್ಮ ಗತಿಯು ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ. ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ; ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು.”—ಹಗ್ಗಾಯ 1:5-8.
14 ಹಗ್ಗಾಯ ಮತ್ತು ಜೆಕರ್ಯರಿಂದ ಪ್ರೋತ್ಸಾಹಿಸಲ್ಪಟ್ಟವರಾಗಿ ಇಸ್ರಾಯೇಲ್ಯರು ತಮ್ಮ ಮಾರ್ಗಗಳನ್ನು ಹೃದಯಕ್ಕೆ ತಂದುಕೊಂಡರು ಮತ್ತು ಆಲಯವು ಕಟ್ಟಲ್ಪಟ್ಟಿತು. ಆದರೆ, ಸುಮಾರು 60 ವರ್ಷಗಳ ತರುವಾಯ, ನೆಹೆಮೀಯನು ಯೆರೂಸಲೇಮನ್ನು ಸಂದರ್ಶಿಸಿದನು ಮತ್ತು ಇಸ್ರಾಯೇಲ್ಯರು ಪುನಃ ಯೆಹೋವನ ಧರ್ಮಶಾಸ್ತ್ರವನ್ನು ಅಸಡ್ಡೆ ಮಾಡುವವರಾಗಿ ಪರಿಣಮಿಸಿದ್ದನ್ನು ಕಂಡನು. ಅದನ್ನು ಅವನು ಸರಿಪಡಿಸಿದನು. ಆದರೆ ಎರಡನೆಯ ಸಂದರ್ಶನೆಯಲ್ಲಿ, ವಿಷಯಗಳು ಪುನಃ ಅವನತಿಗಿಳಿದಿರುವುದನ್ನು ಅವನು ಕಂಡನು. ಅವನು ವರದಿಮಾಡಿದ್ದು: “ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡಿಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಭೂಸ್ವಾಸ್ತ್ಯಗಳಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು.” (ನೆಹೆಮೀಯ 13:10) ಈ ಸಮಸ್ಯೆಯು ಸರಿಪಡಿಸಲ್ಪಟ್ಟಿತು, “ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ ದ್ರಾಕ್ಷಾರಸ ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು.”—ನೆಹೆಮೀಯ 13:12.
ಯೆಹೋವನಿಂದ ಕದ್ದುಕೊಳ್ಳುವುದು
15, 16. ಯಾವ ತಪ್ಪುಗಳಿಗಾಗಿ ಯೆಹೋವನು ಮಲಾಕಿಯನ ಮೂಲಕ ಇಸ್ರಾಯೇಲ್ಯರನ್ನು ಗದರಿಸಿದನು?
15 ಮಲಾಕಿಯನಿಂದ ಪ್ರವಾದಿಸುವಿಕೆ ನಡೆದದ್ದು ಇದೇ ಸಾಮಾನ್ಯ ಕಾಲಾವಧಿಯಲ್ಲಿ ಎಂಬದು ಸಂಭವನೀಯ ಮತ್ತು ಇಸ್ರಾಯೇಲಿನ ಅಪನಂಬಿಗಸತ್ತೆಯ ಕುರಿತು ಪ್ರವಾದಿಯು ನಮಗೆ ಹೆಚ್ಚನ್ನು ತಿಳಿಸುತ್ತಾನೆ. ಅವನು ಇಸ್ರಾಯೇಲಿಗೆ ಯೆಹೋವನ ಮಾತುಗಳನ್ನು ದಾಖಲೆಮಾಡಿದ್ದು: “ನನ್ನ ನಾಮವನ್ನು ಧಿಕ್ಕರಿಸುವ ಯಾಜಕರೇ, . . . ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ; ಧಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ ಎಂದು ಸೇನಾಧೀಶ್ವರ ಯೆಹೋವನು ನಿಮಗೇ ನುಡಿಯುತ್ತಾನೆ.” ತಪ್ಪೇನಾಗಿತ್ತು? ಯೆಹೋವನು ವಿವರಿಸುವದು: “ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ ರೋಗದ ಪಶುವನ್ನೂ ಅರ್ಪಿಸುವದು ದೋಷವಲ್ಲವೆಂದು ನಂಬುತ್ತೀರೋ?”—ಮಲಾಕಿಯ 1:6-8.
16 ಈ ಸುಸ್ಪಷ್ಟ ವರ್ಣನೆಯಲ್ಲಿ, ಇಸ್ರಾಯೇಲ್ಯರು ಅರ್ಪಣೆಗಳನ್ನು ತರುತ್ತಿದ್ದರೂ, ಅವುಗಳ ಕೀಳು ಗುಣಮಟ್ಟವು ಘೋರ ಅಗೌರವವನ್ನು ಬಯಲುಪಡಿಸಿತು. ಮಲಾಕಿಯನು ಇದನ್ನೂ ಬರೆದನು: “ನಿಮ್ಮ ಪಿತೃಗಳ ಕಾಲದಿಂದಲೂ ನೀವು ನನ್ನ ವಿಧಿಗಳಿಗೆ ಓರೆಯಾದಿರಿ, ಅವುಗಳನ್ನು ಅನುಸರಿಸಲಿಲ್ಲ. ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು. ಇದು ಸೇನಾಧೀಶ್ವರನಾದ ಯೆಹೋವನ ನುಡಿ.” ತಾವು ವಿಶಿಷ್ಟವಾಗಿ ಏನು ಮಾಡತಕ್ಕದೆಂದು ಇಸ್ರಾಯೇಲ್ಯರು ಯೋಚನೆಗೀಡಾದರು, ಆದದರಿಂದ ಅವರು ಕೇಳಿದ್ದು: “ಯಾವ ವಿಷಯದಲ್ಲಿ ತಿರುಗೋಣ?” ಯೆಹೋವನು ಉತ್ತರಿಸಿದ್ದು: “ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತಿದ್ತೀರ್ದಿ.” ಇಸ್ರಾಯೇಲ್ಯರು ಯೆಹೋವನಿಂದ, ಸಕಲ ಐಶ್ವರ್ಯಗಳ ಮೂಲನಾದಾತನಿಂದ, ಹೇಗೆ ಕದ್ದುಕೊಳ್ಳ ಶಕ್ತರು? ಯೆಹೋವನು ಉತ್ತರಿಸಿದ್ದು: “ದಶಮಾಂಶ, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ [ಕಾಣಿಕೆಗಳು, NW] ಇವುಗಳನ್ನೇ.” (ಮಲಾಕಿಯ 3:7, 8) ಹೌದು, ತಮ್ಮ ದಶಮಾಂಶಗಳನ್ನು ಮತ್ತು ಅರ್ಪಣೆಗಳನ್ನು ತರುವುದಕ್ಕೆ ತಪ್ಪಿದ ಮೂಲಕ, ಇಸ್ರಾಯೇಲ್ಯರು ಯೆಹೋವನಿಂದ ಕದ್ದುಕೊಳ್ಳುತ್ತಿದ್ದರು!
17. ಇಸ್ರಾಯೇಲಿನಲ್ಲಿ ದಶಮಾಂಶಗಳು ಮತ್ತು ಅರ್ಪಣೆಗಳು ಯಾವ ಉದ್ದೇಶವನ್ನು ಪೂರೈಸಿದವು, ಮತ್ತು ದಶಮಾಂಶಗಳ ಕುರಿತು ಯೆಹೋವನು ಯಾವ ವಾಗ್ದಾನವನ್ನು ಮಾಡುತ್ತಾನೆ?
17 ಈ ಚಾರಿತ್ರಿಕ ಹಿನ್ನೆಲೆಯು ಇಸ್ರಾಯೇಲಿನಲ್ಲಿ ದಶಮಾಂಶಗಳ ಮತ್ತು ಅರ್ಪಣೆಗಳ ಮಹತ್ವವನ್ನು ತೋರಿಸುತ್ತದೆ. ಅವು ಕೊಡುವವನ ಪಾಲಿನ ಗಣ್ಯತೆಯ ಒಂದು ನಿದರ್ಶನವಾಗಿತ್ತು. ಮತ್ತು ಅವು ಒಂದು ಭೌತಿಕ ರೀತಿಯಲ್ಲಿ ಸತ್ಯಾರಾಧನೆಯನ್ನು ಬೆಂಬಲಿಸಲು ಸಹಾಯಮಾಡಿದ್ದವು. ಹೀಗೆ ಯೆಹೋವನು ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸುವುದನ್ನು ಮುಂದರಿಸಿದನು: “ನೀವು ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ.” ಅವರು ಹಾಗೆ ಮಾಡಿದರೆ ಏನು ಹಿಂಬಾಲಿಸುವದೆಂದು ತೋರಿಸುತ್ತಾ, ಯೆಹೋವನು ವಚನವಿತ್ತದ್ದು: “ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನು.” (ಮಲಾಕಿಯ 3:10) ಯೆಹೋವನ ಆಶೀರ್ವಾದವು ಅವರನ್ನು ಐಶ್ವರ್ಯವಂತರಾಗಿ ಮಾಡುವದು.
“ಸತ್ಯ ಕರ್ತ” ನಿಂದ ತೀರ್ಪುಮಾಡಲ್ಪಟ್ಟದ್ದು
18. (ಎ) ಯಾರ ಬರುವಿಕೆಯ ಕುರಿತು ಯೆಹೋವನು ಎಚ್ಚರಿಕೆ ಕೊಡುತ್ತಾನೆ? (ಬಿ) ಯಾವಾಗ ಒಂದು ಆಲಯಕ್ಕೆ ಬರುವಿಕೆಯು ನಡೆಯಿತು, ಯಾರು ಒಳಗೂಡಿದ್ದರು, ಇಸ್ರಾಯೇಲ್ಯರಿಗಾದ ಫಲಿತಾಂಶವೇನು?
18 ಯೆಹೋವನು ಮಲಾಕಿಯನ ಮೂಲಕ ತಾನು ತನ್ನ ಜನರ ತೀರ್ಪಿಗಾಗಿ ಬರುವನೆಂಬ ಎಚ್ಚರಿಕೆಯನ್ನೂ ಕೊಟ್ಟನು. “ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು [ಸತ್ಯ ಕರ್ತನು, NW] ತನ್ನ ಆಲಯಕ್ಕೆ ಫಕ್ಕನೆ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಐತರುತ್ತಾನೆ.” (ಮಲಾಕಿಯ 3:1) ವಾಗ್ದಾನಿಸಲ್ಪಟ್ಟ ಆಲಯಕ್ಕೆ ಬರುವಿಕೆಯು ಸಂಭವಿಸಿದ್ದು ಯಾವಾಗ? ಮತ್ತಾಯ 11:10 ರಲ್ಲಿ ಯೇಸುವು, ದಾರಿ ಸಿದ್ಧಮಾಡುವ ಒಬ್ಬ ದೂತನ ಕುರಿತಾದ ಮಲಾಕಿಯನ ಪ್ರವಾದನೆಯನ್ನು ಉದ್ಧರಿಸಿ, ಅದನ್ನು ಸ್ನಾನಿಕನಾದ ಯೋಹಾನನಿಗೆ ಅನ್ವಯಿಸಿದನು. (ಮಲಾಕಿಯ 4:5; ಮತ್ತಾಯ 11:14) ಹೀಗೆ ಸಾ.ಶ. 29 ರಲ್ಲಿ, ತೀರ್ಪಿನ ಸಮಯವು ಆಗಮಿಸಿತ್ತು! “ಸತ್ಯ ಕರ್ತ” ನಾದ ಯೆಹೋವನೊಂದಿಗೆ ಆಲಯಕ್ಕೆ ಬರುವ ಒಡಂಬಡಿಕೆಯ ದೂತನಾದ ಆ ಎರಡನೆಯ ದೂತನು ಯಾರು? ಸ್ವತಃ ಯೇಸುವೇ ಅವನು, ಮತ್ತು ಎರಡು ಸಂದರ್ಭಗಳಲ್ಲಿ ಅವನು ಯೆರೂಸಲೇಮಿನ ದೇವಾಲಯಕ್ಕೆ ಬಂದು, ಅಲ್ಲಿನ ಅಪ್ರಾಮಾಣಿಕ ಚಿನಿವಾರರನ್ನು ಹೊರಗಟ್ಟಿ, ಅದನ್ನು ನಾಟಕೀಯವಾಗಿ ಶುದ್ಧೀಕರಿಸಿದನು. (ಮಾರ್ಕ 11:15-17; ಯೋಹಾನ 2:14-17) ಈ ಒಂದನೆಯ ಶತಕದ ತೀರ್ಪಿನ ಸಮಯದ ಕುರಿತು, ಯೆಹೋವನು ಪ್ರವಾದನಾರೂಪವಾಗಿ ಕೇಳುವುದು: “ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು?” (ಮಲಾಕಿಯ 3:2) ವಾಸ್ತವದಲ್ಲಿ, ಇಸ್ರಾಯೇಲು ನಿಲ್ಲಲಿಲ್ಲ. ಅವರು ಪರೀಕ್ಷಿಸಲ್ಪಟ್ಟರು, ಅವರಲ್ಲಿ ಕೊರತೆಯು ಕಂಡು ಬಂತು, ಮತ್ತು ಸಾ.ಶ. 33 ರಲ್ಲಿ ಅವರು ಯೆಹೋವನಾದುಕೊಂಡ ಜನಾಂಗದೋಪಾದಿ ಹೊರಗಟ್ಟಲ್ಪಟ್ಟರು.—ಮತ್ತಾಯ 23:37-39.
19. ಯಾವ ರೀತಿಯಲ್ಲಿ ಉಳಿಕೆಯವರು ಒಂದನೆಯ ಶತಮಾನದಲ್ಲಿ ಯೆಹೋವನ ಬಳಿಗೆ ಹಿಂತಿರುಗಿದರು, ಮತ್ತು ಅವರು ಯಾವ ಆಶೀರ್ವಾದವನ್ನು ಪಡೆದರು?
19 ಆದರೂ, ಮಲಾಕಿಯನು ಸಹ ಬರೆದದ್ದು: “ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ [ಯೆಹೋವನು] ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿ ಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು. ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.” (ಮಲಾಕಿಯ 3:3) ಇದಕ್ಕೆ ಹೊಂದಿಕೆಯಲ್ಲಿ, ಒಂದನೆಯ ಶತಮಾನದಲ್ಲಿ ಯೆಹೋವನನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುತ್ತಿದ್ದವರಲ್ಲಿ ಹೆಚ್ಚಿನವರು ತ್ಯಜಿಸಲ್ಪಟ್ಟರೂ, ಕೆಲವರು ಶುದ್ಧೀಕರಿಸಲ್ಪಟ್ಟವರಾಗಿ, ಸ್ವೀಕರಣೀಯ ಯಜ್ಞಗಳನ್ನು ಅರ್ಪಿಸುತ್ತಾ ಯೆಹೋವನ ಬಳಿಗೆ ಬಂದರು. ಅವರು ಯಾರು? ಒಡಂಬಡಿಕೆಯ ದೂತನಾದ ಯೇಸುವಿಗೆ ಪ್ರತಿಕ್ರಿಯೆಯನ್ನು ತೋರಿಸಿದ ಆ ಜನರೇ. ಸಾ.ಶ. 33 ರ ಪಂಚಾಶತ್ತಮದಲ್ಲಿ, ಈ ಪ್ರತಿವರ್ತನೆ ತೋರಿದ 120 ಮಂದಿ, ಯೆರೂಸಲೇಮಿನ ಒಂದು ಮೇಲ್ಮಾಳಿಗೆಯ ಕೊಠಡಿಯಲ್ಲಿ ಕೂಡಿಬಂದಿದ್ದರು. ಪವಿತ್ರಾತ್ಮದಿಂದ ಬಲಗೊಂಡವರಾಗಿ, ಅವರು ನೀತಿಯಲ್ಲಿ ಒಂದು ನೈವೇದ್ಯವನ್ನು ಸಾದರಪಡಿಸಿದರು, ಮತ್ತು ಅವರ ಸಂಖ್ಯೆಯು ಬೇಗನೇ ವೃದ್ಧಿಗೊಂಡಿತು. ಶೀಘ್ರದಲ್ಲೇ, ಅವರು ಇಡೀ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಹರಡಿಕೊಂಡರು. (ಅ. ಕೃತ್ಯಗಳು 2:41; 4:4; 5:14) ಹೀಗೆ, ಒಂದು ಉಳಿಕೆಯವರು ಯೆಹೋವನ ಬಳಿಗೆ ಹಿಂತಿರುಗಿದರು.—ಮಲಾಕಿಯ 3:7.
20. ಯೆರೂಸಲೇಮ್ ಮತ್ತು ದೇವಾಲಯವು ನಾಶವಾದಾಗ, ದೇವರ ಹೊಸ ಇಸ್ರಾಯೇಲಿಗೆ ಏನು ಸಂಭವಿಸಿತು?
20 ಇಸ್ರಾಯೇಲಿನ ಮೂಲಕಾಂಡಕ್ಕೆ ಕಸಿಕಟ್ಟಲ್ಪಟ್ಟವರೋ ಎಂಬಂತೆ ಇದ್ದ ಅನ್ಯಜನರನ್ನು ಒಳಗೊಂಡದ್ದಾಗಿ ಪರಿಣಮಿಸಿದ್ದ ಈ ಇಸ್ರಾಯೇಲ್ಯ ಉಳಿಕೆಯವರು, ಆತ್ಮಾಭಿಷಿಕ್ತ ಕ್ರೈಸ್ತರನ್ನೊಳಗೊಂಡ ಒಂದು ಜನಾಂಗ, ಒಂದು ಹೊಸ “ದೇವರ ಇಸ್ರಾಯೇಲು” ಆಗಿದ್ದರು. (ಗಲಾತ್ಯ 6:16; ರೋಮಾಪುರ 11:17) ಯೆರೂಸಲೇಮು ಮತ್ತು ಅದರ ಆಲಯವು ರೋಮನ್ ಸೇನೆಯಿಂದ ನಾಶಮಾಡಲ್ಪಟ್ಟ ಸಾ.ಶ. 70 ರಲ್ಲಿ, ಒಂದು “ಒಲೆಯಂತೆ ಉರಿಯುವ . . . ದಿನವು” ಮಾಂಸಿಕ ಇಸ್ರಾಯೇಲ್ಯರ ಮೇಲೆ ಬಂತು. (ಮಲಾಕಿಯ 4:1; ಲೂಕ 19:41-44) ದೇವರ ಆತ್ಮಿಕ ಇಸ್ರಾಯೇಲ್ಯರಿಗೆ ಏನು ಸಂಭವಿಸಿತು? ಯೆಹೋವನು “ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ . . . ಕರುಣೆ” ತೋರಿಸಿದನು. (ಮಲಾಕಿಯ 3:17) ಅಭಿಷಿಕ್ತ ಕ್ರೈಸ್ತ ಸಭೆಯು ಯೇಸುವಿನ ಪ್ರವಾದನಾರೂಪದ ಎಚ್ಚರಿಕೆಗೆ ಕಿವಿಗೊಟ್ಟಿತು. (ಮತ್ತಾಯ 24:15, 16) ಅವರು ಪಾರಾದರು, ಮತ್ತು ಯೆಹೋವನ ಆಶೀರ್ವಾದವು ಅವರನ್ನು ಆತ್ಮಿಕವಾಗಿ ಐಶ್ವರ್ಯವಂತರಾಗಿ ಮಾಡುತ್ತಾ ಮುಂದರಿಯಿತು.
21. ಮಲಾಕಿಯ 3:1 ಮತ್ತು 10 ರ ಕುರಿತು ಯಾವ ಪ್ರಶ್ನೆಗಳು ಉಳಿದಿವೆ?
21 ಯೆಹೋವನ ಎಂತಹ ಒಂದು ನಿರ್ದೋಷೀಕರಣವು! ಆದರೂ, ಇಂದು ಮಲಾಕಿಯ 3:1 ಹೇಗೆ ನೆರವೇರುತ್ತಲಿದೆ? ಮತ್ತು ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡು ಬರುವುದಕ್ಕೆ ಮಲಾಕಿಯ 3:10 ರಲ್ಲಿ ಕೊಟ್ಟ ಪ್ರೋತ್ಸಾಹನೆಗೆ ಒಬ್ಬ ಕ್ರೈಸ್ತನು ಹೇಗೆ ಪ್ರತಿಕ್ರಿಯೆ ತೋರಿಸಬೇಕು? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
ನೀವು ವಿವರಿಸಬಲ್ಲಿರೋ?
▫ ಮೂಲತತ್ವದಲ್ಲಿ, ಸಮಸ್ತ ಐಶ್ವರ್ಯಗಳ ಮೂಲನು ಯಾರು?
▫ ಆತ್ಮಿಕ ಸಮೃದ್ಧಯು ಭೌತಿಕ ಐಶ್ವರ್ಯಕ್ಕಿಂತ ಏಕೆ ಒಳ್ಳೆಯದು?
▫ ದಶಮಾಂಶಗಳು ಮತ್ತು ಅರ್ಪಣೆಗಳು ಇಸ್ರಾಯೇಲಿನಲ್ಲಿ ಯಾವ ಉದ್ದೇಶವನ್ನು ಪೂರೈಸಿದವು?
▫ “ಸತ್ಯ ಕರ್ತ” ನಾದ ಯೆಹೋವನು ಇಸ್ರಾಯೇಲ್ಯರ ತೀರ್ಪಿಗಾಗಿ ಆಲಯಕ್ಕೆ ಬಂದದ್ದು ಯಾವಾಗ, ಯಾವ ಫಲಿತಾಂಶದೊಂದಿಗೆ?
▫ ಸಾ.ಶ. ಒಂದನೆಯ ಶತಮಾನದಲ್ಲಿ ಆತನು ತನ್ನ ಆಲಯಕ್ಕೆ ಬಂದ ಅನಂತರ ಯೆಹೋವನ ಬಳಿಗೆ ಹಿಂತಿರುಗಿದವರು ಯಾರು?
[ಪುಟ 10 ರಲ್ಲಿರುವ ಚಿತ್ರ]
ಒಡಂಬಡಿಕೆಯ ದೂತನಾದ ಯೇಸುವು, ಯೆಹೋವನನ್ನು ಪ್ರತಿನಿಧಿಸುತ್ತಾ, ಸಾ.ಶ. ಒಂದನೆಯ ಶತಮಾನದಲ್ಲಿ ತೀರ್ಪಿಗಾಗಿ ಆಲಯಕ್ಕೆ ಬಂದನು