ಅಧ್ಯಾಯ ಹನ್ನೆರಡು
ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ
1. ಕೆಲವು ಕುಟುಂಬಗಳಲ್ಲಿ ಯಾವ ಮರೆಯಾದ ಸಮಸ್ಯೆಗಳು ಅಸ್ತಿತ್ವದಲ್ಲಿವೆ?
ಒಂದು ಹಳೆಯ ಕಾರನ್ನು ಈಗತಾನೇ ತೊಳೆದು ಮೇಣಹಚ್ಚಿ ಶುಭ್ರಗೊಳಿಸಲಾಗಿದೆ. ದಾರಿಹೋಕರಿಗೆ ಅದು ಮಿರುಗುವ, ಬಹುಮಟ್ಟಿಗೆ ಹೊಸದೇ ಆಗಿರುವ ಕಾರಿನಂತೆ ತೋರುತ್ತದೆ. ಆದರೆ ಮೇಲ್ಮೈಯ ಕೆಳಗೆ, ನಾಶಕಾರಿ ತುಕ್ಕು ಆ ವಾಹನದ ಒಡಲನ್ನು ತಿಂದುಹಾಕುತ್ತಿದೆ. ಕೆಲವು ಕುಟುಂಬಗಳು ಇದೇ ರೀತಿಯಲ್ಲಿವೆ. ಹೊರಗಿನ ತೋರ್ಕೆಗೆ ಎಲ್ಲವು ಒಳ್ಳೇದಾಗಿ ಕಾಣುತ್ತದಾದರೂ, ನಗು ಮುಖಗಳು ಭಯ ಮತ್ತು ವೇದನೆಯನ್ನು ಮರೆಮಾಡುತ್ತವೆ. ಮುಚ್ಚಿದ ಬಾಗಿಲುಗಳ ಮರೆಯಲ್ಲಿ ತುಕ್ಕುಹಿಡಿಸುವ ಘಟಕಾಂಶಗಳು ಕುಟುಂಬದ ಶಾಂತಿಯನ್ನು ತಿಂದುಹಾಕುತ್ತಿವೆ. ಈ ಪರಿಣಾಮವನ್ನು ತರಬಲ್ಲ ಎರಡು ಸಮಸ್ಯೆಗಳು ಮದ್ಯರೋಗಾವಸ್ಥೆ ಮತ್ತು ಹಿಂಸಾಚಾರ ಇವೇ.
ಮದ್ಯರೋಗಾವಸ್ಥೆಯಿಂದ ಆಗುವ ಭಂಗ
2. (ಎ) ಮದ್ಯಸಾರ ಪಾನೀಯಗಳ ಕುರಿತು ಬೈಬಲಿನ ವೀಕ್ಷಣೆಯೇನು? (ಬಿ) ಮದ್ಯರೋಗಾವಸ್ಥೆ ಎಂದರೇನು?
2 ಮದ್ಯಸಾರ ಪಾನೀಯಗಳ ಮಿತವಾದ ಉಪಯೋಗವನ್ನು ಬೈಬಲು ಖಂಡಿಸುವುದಿಲ್ಲ, ಆದರೆ ಕುಡುಕತನವನ್ನು ಅದು ಖಂಡಿಸುತ್ತದೆ ನಿಶ್ಚಯ. (ಜ್ಞಾನೋಕ್ತಿ 23:20, 21; 1 ಕೊರಿಂಥ 6:9, 10; 1 ತಿಮೊಥೆಯ 5:23; ತೀತ 2:2, 3) ಮದ್ಯರೋಗಾವಸ್ಥೆಯಾದರೋ ಕುಡುಕತನಕ್ಕಿಂತಲೂ ಹೆಚ್ಚಿನದ್ದು; ಮದ್ಯಪಾನಗಳಲ್ಲಿ ಮಗ್ನರಾಗಿರುವ ಮತ್ತು ಅವುಗಳ ಸೇವನೆಯ ಮೇಲೆ ಅಂಕೆಯಿಲ್ಲದಿರುವ ಅಸ್ಥಿಗತವಾದ ವ್ಯಸನವು ಅದಾಗಿದೆ. ಮದ್ಯರೋಗಿಗಳು ವಯಸ್ಕರಾಗಿರಸಾಧ್ಯವಿದೆ. ವಿಷಾದಕರವಾಗಿ, ಅವರು ಯುವ ಜನರೂ ಆಗಿರಬಲ್ಲರು.
3, 4. ಮದ್ಯರೋಗಿಯ ಜೊತೆಗಾರ್ತಿಯ ಮೇಲೆ ಮತ್ತು ಮಕ್ಕಳ ಮೇಲೆ ಮದ್ಯರೋಗಾವಸ್ಥೆಯ ಪರಿಣಾಮಗಳನ್ನು ವರ್ಣಿಸಿರಿ.
3 ಮದ್ಯಸಾರದ ದುರುಪಯೋಗವು ಕುಟುಂಬ ಶಾಂತಿಯನ್ನು ಕೆಡಿಸಬಲ್ಲದೆಂದು ಬೈಬಲು ಬಹಳ ಪೂರ್ವದಲ್ಲೆ ಸೂಚಿಸಿತು. (ಧರ್ಮೋಪದೇಶಕಾಂಡ 21:18-21) ಮದ್ಯರೋಗಾವಸ್ಥೆಯ ನಾಶಕಾರಕ ಪರಿಣಾಮಗಳು ಇಡೀ ಕುಟುಂಬದಿಂದ ಅನುಭವಿಸಲ್ಪಡುತ್ತವೆ. ಜೊತೆಗಾರ್ತಿಯು ಮದ್ಯರೋಗಿಯ ಕುಡಿತವನ್ನು ನಿಲ್ಲಿಸುವ ಪ್ರಯತ್ನಗಳಲ್ಲಿ ಅಥವಾ ಅವನ ಮುಂತಿಳಿಯದ ವರ್ತನೆಗಳನ್ನು ನಿಭಾಯಿಸುವುದರಲ್ಲಿ ತಲ್ಲೀನಳಾಗಿ ಹೋಗಬಹುದು.a ಅವಳು ಮದ್ಯವನ್ನು ಅಡಗಿಸಿಡಲು ಪ್ರಯತ್ನಿಸುತ್ತಾಳೆ, ಹೊರಗೆಸೆದುಬಿಡುತ್ತಾಳೆ, ಅವನ ಹಣವನ್ನು ಬಚ್ಚಿಡುತ್ತಾಳೆ, ಕುಟುಂಬಕ್ಕಾಗಿ, ಜೀವಕ್ಕಾಗಿ, ದೇವರಿಗಾಗಿಯೂ ಅವನಿಗಿರುವ ಪ್ರೀತಿಗೆ ಆಕೆ ಮೊರೆಯಿಡುತ್ತಾಳೆ—ಆದರೆ ಮದ್ಯರೋಗಿ ಇನ್ನೂ ಕುಡಿಯುತ್ತಾ ಇರುತ್ತಾನೆ. ಅವನ ಕುಡಿಯುವ ಹವ್ಯಾಸವನ್ನು ನಿಯಂತ್ರಿಸುವ ಆಕೆಯ ಪ್ರಯತ್ನಗಳು ಪದೇಪದೇ ಸೋಲುವಾಗ, ಆಕೆಗೆ ಹತಾಶೆಯ ಮತ್ತು ಕೊರತೆಯುಳ್ಳ ಭಾವನೆ ಬರುತ್ತದೆ. ಭಯ, ಕೋಪ, ದೋಷಿಭಾವನೆ, ಗಾಬರಿ, ಚಿಂತೆ ಮತ್ತು ಆತ್ಮಗೌರವದ ಕೊರತೆಯನ್ನು ಆಕೆ ಅನುಭವಿಸಲಾರಂಭಿಸಬಹುದು.
4 ಹೆತ್ತವರೊಬ್ಬರ ಮದ್ಯರೋಗಾವಸ್ಥೆಯ ಪರಿಣಾಮಗಳನ್ನು ಮಕ್ಕಳು ಪಾರಾಗುವುದಿಲ್ಲ. ಕೆಲವರು ಶಾರೀರಿಕವಾಗಿ ಆಕ್ರಮಿಸಲ್ಪಡುತ್ತಾರೆ. ಇತರರು ಲೈಂಗಿಕವಾಗಿ ಪೀಡಿಸಲ್ಪಡುತ್ತಾರೆ. ಹೆತ್ತವರ ಮದ್ಯರೋಗಾವಸ್ಥೆಗಾಗಿ ಅವರು ತಮ್ಮನ್ನೇ ದೂರಿಕೊಳ್ಳಲೂಬಹುದು. ಇತರರ ಮೇಲೆ ಭರವಸೆಯಿಡುವ ಅವರ ಸಾಮರ್ಥ್ಯವು, ಮದ್ಯರೋಗಿಯ ಅಸಂಗತವಾದ ವರ್ತನೆಯಿಂದಾಗಿ ಆಗಿಂದಾಗ್ಗೆ ನುಚ್ಚುನೂರಾಗುತ್ತದೆ. ಮನೆಯಲ್ಲಿ ಸಂಭವಿಸುತ್ತಿರುವ ವಿಷಯದ ಕುರಿತು ಅವರು ಹಾಯಾಗಿ ಮಾತಾಡಲಾರದ ಕಾರಣ, ಮಕ್ಕಳು ತಮ್ಮ ಭಾವನೆಗಳನ್ನು ನಿಗ್ರಹಿಸಿಕೊಳ್ಳಲು ಕಲಿಯಬಹುದು, ಇದು ಅನೇಕವೇಳೆ ಹಾನಿಕರವಾದ ಶಾರೀರಿಕ ಪರಿಣಾಮಗಳನ್ನು ತರುತ್ತದೆ. (ಜ್ಞಾನೋಕ್ತಿ 17:22) ಅಂತಹ ಮಕ್ಕಳು ಈ ಆತ್ಮವಿಶ್ವಾಸ ಅಥವಾ ಆತ್ಮಗೌರವದ ಕೊರತೆಯನ್ನು ವಯಸ್ಕತನಕ್ಕೂ ಒಯ್ಯಬಹುದು.
ಕುಟುಂಬವು ಏನು ಮಾಡಸಾಧ್ಯವಿದೆ?
5. ಮದ್ಯರೋಗಾವಸ್ಥೆಯನ್ನು ಹೇಗೆ ನಿರ್ವಹಿಸಸಾಧ್ಯವಿದೆ, ಮತ್ತು ಇದು ಕಷ್ಟಕರವೇಕೆ?
5 ಮದ್ಯರೋಗಾವಸ್ಥೆಯನ್ನು ವಾಸಿಮಾಡಸಾಧ್ಯವಿಲ್ಲವೆಂದು ಅನೇಕ ಅಧಿಕಾರಿಗಳು ಹೇಳುತ್ತಾರಾದರೂ, ಪೂರ್ಣ ವರ್ಜನೆಯ ಕಾರ್ಯಕ್ರಮದಿಂದ ಸ್ವಲ್ಪಮಟ್ಟಿಗಿನ ವಾಸಿಯು ಶಕ್ಯವೆಂದು ಹೆಚ್ಚಿನವರು ಒಪ್ಪುತ್ತಾರೆ. (ಹೋಲಿಸಿ ಮತ್ತಾಯ 5:29.) ಆದರೂ, ಮದ್ಯರೋಗಿಯೊಬ್ಬನು ಸಹಾಯವನ್ನು ಸ್ವೀಕರಿಸುವಂತೆ ಮಾಡುವುದಕ್ಕಿಂತ ಹೇಳುವುದು ಹೆಚ್ಚು ಸುಲಭ, ಯಾಕೆಂದರೆ ಅವನು ಸಾಮಾನ್ಯವಾಗಿ ತನಗೊಂದು ಸಮಸ್ಯೆಯಿದೆಯೆಂಬುದನ್ನು ಅಲ್ಲಗಳೆಯುತ್ತಾನೆ. ಆದಾಗ್ಯೂ, ಮದ್ಯರೋಗಾವಸ್ಥೆಯು ತಮ್ಮನ್ನು ಬಾಧಿಸಿರುವ ರೀತಿಯೊಂದಿಗೆ ವ್ಯವಹರಿಸಲು ಕುಟುಂಬ ಸದಸ್ಯರು ಕ್ರಿಯೆ ಕೈಕೊಳ್ಳುವಾಗ, ಮದ್ಯರೋಗಿಯು ತನಗೊಂದು ಸಮಸ್ಯೆಯಿದೆಯೆಂದು ಗ್ರಹಿಸಲಾರಂಭಿಸಬಹುದು. ಮದ್ಯರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ನೆರವಾಗುವುದರಲ್ಲಿ ಅನುಭವಿಯಾದ ಒಬ್ಬ ವೈದ್ಯನು ಹೇಳಿದ್ದು: “ಕುಟುಂಬಕ್ಕೆ ಅತ್ಯಂತ ಮಹತ್ವದ ವಿಷಯವೇನಂದರೆ ತಮ್ಮ ಜೀವನದ ದಿನಚರ್ಯೆಯನ್ನು ತಮ್ಮಿಂದಾದಷ್ಟು ಅತ್ಯಂತ ಉಪಯುಕ್ತವಾದ ರೀತಿಯಲ್ಲಿ ಕೇವಲ ನಡೆಸಿಕೊಂಡು ಹೋಗುವುದೆಂದು ನನ್ನ ಯೋಚನೆ. ಮದ್ಯರೋಗಿಯು ತನ್ನ ಮತ್ತು ಕುಟುಂಬದ ಇತರರ ನಡುವೆ ಎಷ್ಟು ದೊಡ್ಡ ವ್ಯತ್ಯಾಸವಿದೆಯೆಂಬ ಸಂಗತಿಯಿಂದ ಅಧಿಕಾಧಿಕವಾಗಿ ಎದುರಿಸಲ್ಪಡುತ್ತಾ ಇರುತ್ತಾನೆ.”
6. ಮದ್ಯರೋಗಾವಸ್ಥೆಯ ಸದಸ್ಯನಿರುವ ಕುಟುಂಬಕ್ಕೆ ಸಲಹೆಯ ಅತ್ಯುತ್ತಮ ಮೂಲವು ಯಾವುದು?
6 ನಿಮ್ಮ ಕುಟುಂಬದಲ್ಲಿ ಒಬ್ಬ ಮದ್ಯರೋಗಿಯು ಇರುವುದಾದರೆ, ಬೈಬಲಿನ ಪ್ರೇರಿತ ಸಲಹೆಯು ಶಕ್ಯವಾದ ಅತ್ಯಂತ ಉಪಯುಕ್ತಕರ ಜೀವನವನ್ನು ಜೀವಿಸಲು ನಿಮಗೆ ನೆರವಾಗಬಲ್ಲದು. (ಯೆಶಾಯ 48:17; 2 ತಿಮೊಥೆಯ 3:16, 17) ಮದ್ಯರೋಗಾವಸ್ಥೆಯೊಂದಿಗೆ ಯಶಸ್ವಿಕರವಾಗಿ ವ್ಯವಹರಿಸಲು ಕುಟುಂಬಗಳಿಗೆ ಸಹಾಯ ಮಾಡಿರುವ ಕೆಲವು ಮೂಲತತ್ವಗಳನ್ನು ಪರಿಗಣಿಸಿರಿ.
7. ಒಂದು ಕುಟುಂಬದ ಸದಸ್ಯನು ಮದ್ಯರೋಗಿಯಾಗಿದ್ದರೆ ಅದಕ್ಕೆ ಜವಾಬ್ದಾರನು ಯಾರು?
7 ತಪ್ಪಿಗೆ ಎಲ್ಲ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿರಿ. ಬೈಬಲು ಹೇಳುವುದು: “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಮತ್ತು “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ಗಲಾತ್ಯ 6:5; ರೋಮಾಪುರ 14:12) ಕುಟುಂಬ ಸದಸ್ಯರು ಜವಾಬ್ದಾರರೆಂದು ಸೂಚಿಸಲು ಮದ್ಯರೋಗಿಯು ಪ್ರಯತ್ನಿಸಬಹುದು. ಉದಾಹರಣೆಗಾಗಿ, ಅವನು ಹೀಗನ್ನಬಹುದು: “ನೀವು ನನ್ನನ್ನು ಹೆಚ್ಚು ಉತ್ತಮವಾಗಿ ಉಪಚರಿಸುತ್ತಿದ್ದರೆ ನಾನು ಕುಡಿಯುತ್ತಿರಲಿಲ್ಲ.” ಇತರರು ಅವನೊಂದಿಗೆ ಸಮ್ಮತಿಸುವಂತೆ ಕಂಡರೆ, ಅವರು ಅವನಿಗೆ ಕುಡಿಯುವುದನ್ನು ಮುಂದುವರಿಸಲು ಉತ್ತೇಜನ ಕೊಡುತ್ತಾರೆ. ಆದರೆ ನಾವು ಪರಿಸ್ಥಿತಿಗಳಿಂದ ಅಥವಾ ಬೇರೆ ಜನರಿಂದ ಬಲಿಪಶುಗಳಾಗಿಸಲ್ಪಡುವಲ್ಲಿಯೂ, ನಾವೆಲ್ಲರೂ—ಮದ್ಯರೋಗಿಗಳನ್ನು ಒಳಗೊಂಡು—ನಾವೇನು ಮಾಡುತ್ತೇವೊ ಅದಕ್ಕೆ ಜವಾಬ್ದಾರರು.—ಹೋಲಿಸಿ ಫಿಲಿಪ್ಪಿ 2:12.
8. ಮದ್ಯರೋಗಿಗೆ ಅವನ ಸಮಸ್ಯೆಯ ಫಲಿತಾಂಶಗಳನ್ನು ಎದುರಿಸಲು ಸಹಾಯ ನೀಡಬಹುದಾದ ಕೆಲವು ಮಾರ್ಗಗಳು ಯಾವುವು?
8 ಮದ್ಯರೋಗಿಯನ್ನು ಅವನ ಕುಡಿತದ ಪರಿಣಾಮಗಳಿಂದ ನೀವು ಯಾವಾಗಲೂ ರಕ್ಷಿಸಲೇಬೇಕೆಂದು ಭಾವಿಸಬೇಡಿರಿ. ಕೋಪಿಷ್ಠ ವ್ಯಕ್ತಿಯೊಬ್ಬನ ಕುರಿತ ಬೈಬಲಿನ ಒಂದು ಜ್ಞಾನೋಕ್ತಿಯನ್ನು ಮದ್ಯರೋಗಿಗೂ ಸರಿಸಮವಾಗಿ ಅನ್ವಯಿಸಸಾಧ್ಯವಿದೆ: “ಬಿಡಿಸಿದರೆ ಬಾರಿಬಾರಿಗೆ ಬಿಡಿಸಬೇಕಾಗುವದು.” (ಜ್ಞಾನೋಕ್ತಿ 19:19) ಮದ್ಯರೋಗಿಯು ತನ್ನ ಕುಡುಕತನದ ಫಲವನ್ನು ಅನುಭವಿಸಲಿ. ಅವನು ತನ್ನ ಕೊಳಕನ್ನು ಶುಚಿಮಾಡಲಿ ಅಥವಾ ಕುಡಿತದ ಘಟನಾವಳಿಯ ಮಾರನೆಯ ಬೆಳಗಾತ ತಾನೇ ಧಣಿಗೆ ಫೋನ್ಮಾಡಿ ತಿಳಿಸಲಿ.
9, 10. ಮದ್ಯರೋಗಿಗಳ ಕುಟುಂಬಗಳು ಯಾಕೆ ಸಹಾಯವನ್ನು ಸ್ವೀಕರಿಸಬೇಕು, ಮತ್ತು ವಿಶೇಷವಾಗಿ ಯಾರ ಸಹಾಯವನ್ನು ಅವರು ಹುಡುಕಬೇಕು?
9 ಇತರರಿಂದ ಸಹಾಯವನ್ನು ಸ್ವೀಕರಿಸಿರಿ. ಜ್ಞಾನೋಕ್ತಿ 17:17 ಹೇಳುವುದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” ನಿಮ್ಮ ಕುಟುಂಬದಲ್ಲಿ ಒಬ್ಬ ಮದ್ಯರೋಗಿಯು ಇರುವಾಗ, ಅಲ್ಲಿ ಆಪತ್ತಿರುತ್ತದೆ. ನಿಮಗೆ ಸಹಾಯದ ಅಗತ್ಯವಿದೆ. ಬೆಂಬಲಕ್ಕಾಗಿ ‘ನಿಜ ಮಿತ್ರರ’ ಮೇಲೆ ಆತುಕೊಳ್ಳುವುದಕ್ಕೆ ಹಿಂಜರಿಯದಿರಿ. (ಜ್ಞಾನೋಕ್ತಿ 18:24) ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಅಥವಾ ತದ್ರೀತಿಯ ಪರಿಸ್ಥಿತಿಯನ್ನು ಎದುರಿಸಿರುವ ಇತರರೊಂದಿಗೆ ಮಾತಾಡುವುದರಿಂದ ನೀವು ಮಾಡುವ ಅಥವಾ ಮಾಡಬಾರದ ವಿಷಯಗಳ ಮೇಲೆ ಪ್ರಾಯೋಗಿಕ ಸಲಹೆಗಳನ್ನು ಅವರು ನಿಮಗೆ ಒದಗಿಸಬಹುದು. ಆದರೆ ಸಮತೆಯಿಂದಿರಿ. ನೀವು ಭರವಸೆಯಿಡಬಲ್ಲವರೊಂದಿಗೆ, ನಿಮ್ಮ ‘ಗುಟ್ಟಿನ’ ಮಾತನ್ನು ಕಾಪಾಡುವವರೊಂದಿಗೆ ಮಾತಾಡಿರಿ.—ಜ್ಞಾನೋಕ್ತಿ 11:13.
10 ಕ್ರೈಸ್ತ ಹಿರಿಯರಲ್ಲಿ ಭರವಸೆಯಿಡಲು ಕಲಿಯಿರಿ. ಕ್ರೈಸ್ತ ಸಭೆಯಲ್ಲಿರುವ ಹಿರಿಯರು ಸಹಾಯದ ಒಂದು ಮಹಾ ಉಗಮವಾಗಿರಬಲ್ಲರು. ಈ ಪಕ್ವತೆಯ ಪುರುಷರು ದೇವರ ವಾಕ್ಯದಲ್ಲಿ ಶಿಕ್ಷಿತರೂ ಅದರ ಮೂಲತತ್ವಗಳ ಅನ್ವಯಿಸುವಿಕೆಯಲ್ಲಿ ಅನುಭವಸ್ಥರೂ ಆಗಿದ್ದಾರೆ. ಅವರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿ” ಆಗಿ ಪರಿಣಮಿಸಬಲ್ಲರು. (ಯೆಶಾಯ 32:2) ಕ್ರೈಸ್ತ ಹಿರಿಯರು ಇಡೀ ಸಭೆಯನ್ನು ಹಾನಿಕರವಾದ ಪ್ರಭಾವಗಳಿಂದ ರಕ್ಷಿಸುತ್ತಾರೆ ಮಾತ್ರವಲ್ಲ, ಸಮಸ್ಯೆಗಳಿರುವ ವ್ಯಕ್ತಿಗಳನ್ನು ಸಂತೈಸಿ, ಚೈತನ್ಯಗೊಳಿಸಿ, ಅವರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳುತ್ತಾರೆ. ಅವರ ಸಹಾಯದ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳಿರಿ.
11, 12. ಮದ್ಯರೋಗಿಗಳ ಕುಟುಂಬಗಳಿಗೆ ಅತ್ಯಂತ ದೊಡ್ಡ ಸಹಾಯವನ್ನು ಯಾರು ಒದಗಿಸುತ್ತಾರೆ, ಮತ್ತು ಆ ಬೆಂಬಲವು ಹೇಗೆ ಕೊಡಲ್ಪಡುತ್ತದೆ?
11 ಎಲ್ಲದಕ್ಕಿಂತ ಹೆಚ್ಚಾಗಿ ಯೆಹೋವನಿಂದ ಬಲವನ್ನು ಸೆಳೆದುಕೊಳ್ಳಿರಿ. ಬೈಬಲು ನಮಗೆ ಹೃತ್ಪೂರ್ವಕವಾಗಿ ಆಶ್ವಾಸನೆಯನ್ನೀಯುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ [“ಹತ್ತಿರವಿದ್ದಾನೆ,” NW]; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:18) ಮದ್ಯರೋಗಿಯಾದ ಕುಟುಂಬ ಸದಸ್ಯನೊಬ್ಬನೊಂದಿಗೆ ಜೀವಿಸುವ ಒತ್ತಡಗಳ ಕಾರಣ, ಮನಮುರಿದವರೂ ಕುಗ್ಗಿಹೋದವರೂ ಆಗಿರುವ ಅನಿಸಿಕೆ ನಿಮಗಾಗುವುದಾದರೆ, “ಯೆಹೋವನು ಹತ್ತಿರವಿದ್ದಾನೆ” ಎಂಬುದನ್ನು ನೆನಪಿನಲ್ಲಿಡಿರಿ. ನಿಮ್ಮ ಕುಟುಂಬ ಸನ್ನಿವೇಶವು ಎಷ್ಟು ಕಷ್ಟಕರವಾಗಿದೆಯೆಂಬುದನ್ನು ಆತನು ತಿಳಿದುಕೊಳ್ಳುತ್ತಾನೆ.—1 ಪೇತ್ರ 5:6, 7.
12 ಯೆಹೋವನು ತನ್ನ ವಾಕ್ಯದಲ್ಲಿ ಏನು ಹೇಳುತ್ತಾನೊ ಅದರಲ್ಲಿ ನಂಬಿಕೆಯಿಡುವುದು ಚಿಂತೆಯನ್ನು ನಿಭಾಯಿಸುವುದಕ್ಕೆ ನಿಮಗೆ ಸಹಾಯ ಮಾಡಬಲ್ಲದು. (ಕೀರ್ತನೆ 130:3, 4; ಮತ್ತಾಯ 6:25-34; 1 ಯೋಹಾನ 3:19, 20) ದೇವರ ವಾಕ್ಯವನ್ನು ಅಭ್ಯಸಿಸುವುದು ಮತ್ತು ಅದರ ಮೂಲತತ್ವಕ್ಕನುಸಾರ ಜೀವಿಸುವುದು ನಿಮ್ಮನ್ನು ದೇವರ ಪವಿತ್ರಾತ್ಮದ ಸಹಾಯವನ್ನು ಪಡೆಯಲು ಶಕ್ಯರನ್ನಾಗಿ ಮಾಡುವುದು, ಅದು ನಿಮಗೆ ಒಂದೊಂದು ದಿನವನ್ನು ನಿಭಾಯಿಸಲು “ಬಲಾಧಿಕ್ಯ”ದೊಂದಿಗೆ ಸನ್ನದ್ಧಗೊಳಿಸಬಲ್ಲದು.—2 ಕೊರಿಂಥ 4:7.b
13. ಅನೇಕ ಕುಟುಂಬಗಳನ್ನು ಭಂಗಗೊಳಿಸುವ ಎರಡನೆಯ ಸಮಸ್ಯೆಯು ಯಾವುದು?
13 ಮದ್ಯಸಾರದ ದುರುಪಯೋಗವು ಅನೇಕ ಕುಟುಂಬಗಳನ್ನು ಭಂಗಗೊಳಿಸುವ ಇನ್ನೊಂದು ಸಮಸ್ಯೆಯಾದ ಗೃಹ್ಯ ಹಿಂಸಾಚಾರಕ್ಕೆ ನಡೆಸಬಲ್ಲದು.
ಗೃಹ್ಯ ಹಿಂಸಾಚಾರದಿಂದಾಗುವ ಭಂಗ
14. ಗೃಹ್ಯ ಹಿಂಸಾಚಾರವು ಪ್ರಾರಂಭಿಸಿದ್ದು ಯಾವಾಗ, ಮತ್ತು ಇಂದಿನ ಸನ್ನಿವೇಶವು ಏನಾಗಿದೆ?
14 ಮಾನವ ಇತಿಹಾಸದಲ್ಲಿ ಮೊದಲನೆ ಹಿಂಸಾತ್ಮಕ ಕೃತ್ಯವು ಗೃಹ್ಯ ಹಿಂಸಾಚಾರದ ಒಂದು ಘಟನಾವಳಿಯಾಗಿದ್ದು ಕಾಯಿನ ಮತ್ತು ಹೇಬೆಲನೆಂಬ ಇಬ್ಬರು ಸೋದರರನ್ನು ಒಳಗೊಂಡಿತ್ತು. (ಆದಿಕಾಂಡ 4:8) ಅಂದಿನಿಂದ ಹಿಡಿದು ಮಾನವಕುಲವು ಎಲ್ಲಾ ತೆರದ ಗೃಹ್ಯ ಹಿಂಸಾಚಾರದಿಂದ ಬಾಧಿಸಲ್ಪಟ್ಟಿದೆ. ಹೆಂಡತಿಯರನ್ನು ಜಜ್ಜುಬಡಿಯುವ ಗಂಡಂದಿರು, ಗಂಡಂದಿರನ್ನು ಆಕ್ರಮಿಸುವ ಹೆಂಡತಿಯರು, ತಮ್ಮ ಎಳೆಯ ಮಕ್ಕಳನ್ನು ಕ್ರೂರವಾಗಿ ಹೊಡೆಯುವ ಹೆತ್ತವರು, ಮತ್ತು ತಮ್ಮ ವೃದ್ಧ ಹೆತ್ತವರನ್ನು ಅಪಪ್ರಯೋಗಿಸುವ ಬೆಳೆದ ಮಕ್ಕಳು ಇದ್ದಾರೆ.
15. ಗೃಹ್ಯ ಹಿಂಸಾಚಾರದಿಂದ ಕುಟುಂಬ ಸದಸ್ಯರು ಭಾವಾತ್ಮಕವಾಗಿ ಹೇಗೆ ಬಾಧಿತರಾಗುತ್ತಾರೆ?
15 ಗೃಹ್ಯ ಹಿಂಸಾಚಾರದಿಂದ ಉಂಟಾಗುವ ಭಂಗ, ಶಾರೀರಿಕ ಕಲೆಗಳನ್ನು ಬಹಳ ಮೀರಿ ಹೋಗುತ್ತದೆ. ಜಜ್ಜುಬಡಿಯಲ್ಪಟ್ಟ ಒಬ್ಬಾಕೆ ಹೆಂಡತಿಯು ಅಂದದ್ದು: “ಬಹಳ ದೋಷಿಭಾವನೆ ಮತ್ತು ನಾಚಿಕೆಯನ್ನು ನಿಮಗೆ ಅನುಭವಿಸಲಿರುತ್ತದೆ. ಹೆಚ್ಚಿನ ಬೆಳಗಾತಗಳಲ್ಲಿ ಅದು ಬರೇ ಒಂದು ಕೆಟ್ಟ ಕನಸು ಎಂದು ನಿರೀಕ್ಷಿಸುತ್ತಾ ಹಾಸಿಗೆಯಲ್ಲೇ ಬಿದ್ದಿರಲು ಬಯಸುತ್ತೇನೆ.” ಗೃಹ್ಯ ಹಿಂಸಾಚಾರವನ್ನು ವೀಕ್ಷಿಸುವ, ಅಥವಾ ಅನುಭವಿಸುವ ಮಕ್ಕಳು ಬೆಳೆದು ದೊಡ್ಡವರಾಗಿ ಸ್ವಂತ ಕುಟುಂಬಗಳನ್ನು ಹೊಂದುವಾಗ ತಾವೇ ಹಿಂಸಾಚಾರಿಗಳಾಗಬಹುದು.
16, 17. ಭಾವಾತ್ಮಕ ಅಪಪ್ರಯೋಗ ಎಂದರೇನು, ಮತ್ತು ಕುಟುಂಬ ಸದಸ್ಯರು ಅದರಿಂದ ಹೇಗೆ ಬಾಧಿತರಾಗುತ್ತಾರೆ?
16 ಗೃಹ್ಯ ಹಿಂಸಾಚಾರವು ಶಾರೀರಿಕ ಅಪಪ್ರಯೋಗಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅನೇಕವೇಳೆ ಆಕ್ರಮಣವು ಮೌಖಿಕವಾಗಿರುತ್ತದೆ. ಜ್ಞಾನೋಕ್ತಿ 12:18 ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು.” ಗೃಹ್ಯ ಹಿಂಸಾಚಾರದ ವೈಲಕ್ಷಣ್ಯವಾಗಿರುವ ಈ “ಕತ್ತಿತಿವಿದ” ಹಾಗಿನ ಗಾಯಗಳಲ್ಲಿ, ಬಯ್ಯುವಿಕೆ, ಚೀರಾಟ, ಹಾಗೂ ಎಡೆಬಿಡದ ಟೀಕೆ, ಹೀನೈಸುವ ಮುಖಭಂಗಗಳು, ಮತ್ತು ದೈಹಿಕ ಹಿಂಸಾಚಾರದ ಬೆದರಿಕೆಗಳು ಸೇರುತ್ತವೆ. ಭಾವಾತ್ಮಕ ಹಿಂಸಾಚಾರದ ಗಾಯಗಳು ಅದೃಶ್ಯವಾಗಿದ್ದು ಅನೇಕವೇಳೆ ಇತರರಿಗೆ ಅಗೋಚರವಾಗಿರುತ್ತವೆ.
17 ಒಂದು ಮಗುವಿಗೆ ಭಾವಾತ್ಮಕವಾಗಿ ಜಜ್ಜುಬಡಿಯುವುದು—ಮಗುವಿನ ಸಾಮರ್ಥ್ಯಗಳನ್ನು, ಬುದ್ಧಿಶಕ್ತಿಯನ್ನು, ಅಥವಾ ಒಬ್ಬ ವ್ಯಕ್ತಿಯೋಪಾದಿ ಅದರ ಮೌಲ್ಯವನ್ನು ಎಡೆಬಿಡದೆ ಟೀಕಿಸುತ್ತಾ ತೃಣೀಕರಿಸುತ್ತಾ ಇರುವುದು ವಿಶೇಷವಾಗಿ ವಿಷಾದಕರ. ಅಂತಹ ಮೌಖಿಕ ಅಪಪ್ರಯೋಗವು ಒಂದು ಮಗುವಿನ ಮನೋಭಾವವನ್ನು ನಷ್ಟಗೊಳಿಸಬಲ್ಲದು. ನಿಜ, ಮಕ್ಕಳೆಲ್ಲರಿಗೆ ಶಿಸ್ತಿನ ಅಗತ್ಯವಿದೆ. ಆದರೆ ಬೈಬಲು ತಂದೆಗಳಿಗೆ ಉಪದೇಶಿಸುವುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”—ಕೊಲೊಸ್ಸೆ 3:21.
ಗೃಹ್ಯ ಹಿಂಸಾಚಾರವನ್ನು ವರ್ಜಿಸುವ ವಿಧ
18. ಗೃಹ್ಯ ಹಿಂಸಾಚಾರವು ಎಲ್ಲಿ ಆರಂಭಿಸುತ್ತದೆ, ಮತ್ತು ಅದನ್ನು ನಿಲ್ಲಿಸುವ ಮಾರ್ಗವು ಯಾವುದೆಂದು ಬೈಬಲು ತೋರಿಸುತ್ತದೆ?
18 ಗೃಹ್ಯ ಹಿಂಸಾಚಾರವು ಹೃದಯ ಮತ್ತು ಮನಸ್ಸಿನಲ್ಲಿ ಪ್ರಾರಂಭಿಸುತ್ತದೆ; ನಾವು ಕ್ರಿಯೆನಡಿಸುವ ರೀತಿಯು, ನಾವು ಹೇಗೆ ಯೋಚಿಸುತ್ತೇವೊ ಅದರಿಂದ ಆರಂಭಗೊಳ್ಳುತ್ತದೆ. (ಯಾಕೋಬ 1:14, 15) ಹಿಂಸಾಚಾರವನ್ನು ನಿಲ್ಲಿಸಲು, ದುರುಪಯೋಗಿಗೆ ತನ್ನ ಯೋಚನಾ ವಿಧಾನವನ್ನು ಬದಲಾಯಿಸುವ ಅಗತ್ಯವಿದೆ. (ರೋಮಾಪುರ 12:2) ಅದು ಸಾಧ್ಯವೊ? ಹೌದು. ದೇವರ ವಾಕ್ಯಕ್ಕೆ ಜನರನ್ನು ಬದಲಾಯಿಸುವ ಶಕ್ತಿ ಇದೆ. ನಾಶಕಾರಕ ವೀಕ್ಷಣಗಳ ‘ಬಲವಾದ ಕೋಟೆಗಳನ್ನು’ ಸಹ ಅದು ಕೆಡವಿಹಾಕಬಲ್ಲದು. (2 ಕೊರಿಂಥ 10:4; ಇಬ್ರಿಯ 4:12) ಬೈಬಲಿನ ನಿಷ್ಕೃಷ್ಟ ಜ್ಞಾನವು ಜನರಲ್ಲಿ ಎಷ್ಟು ಸಂಪೂರ್ಣವಾದ ಬದಲಾವಣೆಯನ್ನು ಉತ್ಪಾದಿಸಬಲ್ಲದೆಂದರೆ, ಅವರು ಒಂದು ಹೊಸ ವ್ಯಕ್ತಿತ್ವವನ್ನು ಧರಿಸಿದವರೆಂದು ಹೇಳಲಾಗುತ್ತದೆ.—ಎಫೆಸ 4:22-24; ಕೊಲೊಸ್ಸೆ 3:8-10.
19. ಒಬ್ಬ ವಿವಾಹ ಸಂಗಾತಿಯನ್ನು ಒಬ್ಬ ಕ್ರೈಸ್ತನು ಹೇಗೆ ವೀಕ್ಷಿಸಬೇಕು ಮತ್ತು ಉಪಚರಿಸಬೇಕು?
19 ವಿವಾಹ ಸಂಗಾತಿಯ ಕುರಿತಾದ ನೋಟ. ದೇವರ ವಾಕ್ಯವು ಹೇಳುವುದು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.” (ಎಫೆಸ 5:28) ಗಂಡನು ತನ್ನ ಹೆಂಡತಿಯನ್ನು “ಬಲಹೀನಳೆಂಬುದನ್ನು ಜ್ಞಾಪಕಮಾಡಿಕೊಂಡು” ಆಕೆಯನ್ನು ಗೌರವಿಸಬೇಕೆಂದೂ ಬೈಬಲು ಹೇಳುತ್ತದೆ. (1 ಪೇತ್ರ 3:7) ಹೆಂಡತಿಯರು ತಮ್ಮ “ಗಂಡಂದಿರನ್ನೂ . . . ಪ್ರೀತಿಸುವವರೂ” ಅವರಿಗೆ “ಆಳವಾದ ಗೌರವ” ತೋರಿಸುವವರೂ ಆಗಿರಬೇಕೆಂದು ಉಪದೇಶಿಸಲಾಗಿದೆ. (ತೀತ 2:4; ಎಫೆಸ 5:33, NW) ದೈವಭಯವುಳ್ಳವನಾದ ಯಾವ ಗಂಡನೂ ತನ್ನ ಹೆಂಡತಿಯನ್ನು ಶಾರೀರಿಕವಾಗಿ ಅಥವಾ ಮೌಖಿಕವಾಗಿ ಆಕ್ರಮಿಸುವುದಾದರೆ, ನಿಜವಾಗಿಯೂ ತಾನು ತನ್ನ ಹೆಂಡತಿಗೆ ಗೌರವವನ್ನು ತೋರಿಸುತ್ತೇನೆಂದು ಸತ್ಯವಾಗಿ ವಾದಿಸಲಾರನು. ಮತ್ತು ತನ್ನ ಗಂಡನೆಡೆಗೆ ಚೀರಾಡುವ, ಅವನನ್ನು ಕೆಣಕುತ್ತಾ ಸಂಬೋಧಿಸುವ ಅಥವಾ ಸತತವಾಗಿ ಅವನನ್ನು ಬಯ್ಯುವ ಯಾವ ಹೆಂಡತಿಯೂ ತಾನು ನಿಜವಾಗಿ ಅವನಿಗೆ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತೇನೆಂದು ಹೇಳಲಾರಳು.
20. ತಮ್ಮ ಮಕ್ಕಳಿಗಾಗಿ ಹೆತ್ತವರು ಯಾರ ಮುಂದೆ ಜವಾಬ್ದಾರರಾಗಿದ್ದಾರೆ, ಮತ್ತು ಹೆತ್ತವರು ತಮ್ಮ ಮಕ್ಕಳಿಂದ ಅವಾಸ್ತವಿಕ ನಿರೀಕ್ಷಣೆಗಳನ್ನು ಮಾಡಬಾರದೇಕೆ?
20 ಮಕ್ಕಳೆಡೆಗೆ ಯೋಗ್ಯ ನೋಟ. ಮಕ್ಕಳು ತಮ್ಮ ಹೆತ್ತವರ ಪ್ರೀತಿ ಮತ್ತು ಗಮನಕ್ಕೆ ಅರ್ಹರು, ಹೌದು, ಅವರಿಗೆ ಅದರ ಅಗತ್ಯವಿದೆ. ದೇವರ ವಾಕ್ಯವು ಮಕ್ಕಳನ್ನು “ಯೆಹೋವನಿಂದ ಬಂದ ಸ್ವಾಸ್ತ್ಯ” ಮತ್ತು “ಬಹುಮಾನ,” ಎಂದು ಕರೆಯುತ್ತದೆ. (ಕೀರ್ತನೆ 127:3) ಆ ಸ್ವಾಸ್ತ್ಯದ ಪರಾಮರಿಕೆಯನ್ನು ಮಾಡುವುದಕ್ಕೆ ಹೆತ್ತವರು ಯೆಹೋವನ ಮುಂದೆ ಜವಾಬ್ದಾರರಾಗಿದ್ದಾರೆ. ಬೈಬಲು “ಹಸುಳೆಯ ಸ್ವಭಾವಲಕ್ಷಣಗಳ” ಕುರಿತು ಮತ್ತು ಹುಡುಗತನದ “ಮೂರ್ಖತನ”ದ ಕುರಿತು ಮಾತಾಡುತ್ತದೆ. (1 ಕೊರಿಂಥ 13:11, NW; ಜ್ಞಾನೋಕ್ತಿ 22:15) ತಮ್ಮ ಮಕ್ಕಳಲ್ಲಿ ಮೂರ್ಖತನವನ್ನು ಎದುರಿಸುವಲ್ಲಿ ಹೆತ್ತವರು ಆಶ್ಚರ್ಯಪಡಬಾರದು. ಎಳೆಯರು ವಯಸ್ಕರಲ್ಲ. ಮಗುವಿನ ಪ್ರಾಯ, ಕುಟುಂಬ ಹಿನ್ನೆಲೆ, ಮತ್ತು ಸಾಮರ್ಥ್ಯಕ್ಕೆ ತಕ್ಕದಾದುದಕ್ಕಿಂತ ಹೆಚ್ಚನ್ನು ಹೆತ್ತವರು ನಿರ್ಬಂಧಿಸಿ ಕೇಳಬಾರದು.—ಆದಿಕಾಂಡ 33:12-14 ನೋಡಿ.
21. ವೃದ್ಧ ಹೆತ್ತವರನ್ನು ವೀಕ್ಷಿಸುವ ಮತ್ತು ಅವರೊಂದಿಗೆ ವ್ಯವಹರಿಸುವ ದೈವಿಕ ವಿಧಾನವು ಯಾವುದು?
21 ವೃದ್ಧರಾದ ಹೆತ್ತವರೆಡೆಗಿನ ನೋಟ. ಯಾಜಕಕಾಂಡ 19:32 ಹೇಳುವುದು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.” ಹೀಗೆ ದೇವರ ನಿಯಮವು ವೃದ್ಧರಿಗಾಗಿ ಗೌರವ ಮತ್ತು ಅತಿ ಆದರವನ್ನು ಪ್ರೋತ್ಸಾಹಿಸಿತು. ವೃದ್ಧ ಹೆತ್ತವರಲ್ಲೊಬ್ಬರು ಅತಿಯಾಗಿ ಹಕ್ಕೊತ್ತಾಯ ಮಾಡುವಂತೆ ತೋರುವಾಗ ಅಥವಾ ಅಸ್ವಸ್ಥನೂ, ಪ್ರಾಯಶಃ ಬೇಗನೆ ಚಲಿಸಲು ಅಥವಾ ಯೋಚಿಸಲು ಶಕ್ತನಾಗದವನೂ ಆದಾಗ ಇದೊಂದು ಪಂಥಾಹ್ವಾನವಾಗಿರಬಹುದು. ಆದರೂ, “ತಮ್ಮ ತಂದೆತಾಯಿಗಳಿಗೆ ತಕ್ಕದ್ದಾದ ಪರಿಹಾರವನ್ನು ಸಲ್ಲಿಸುತ್ತಾ ಇರುವ” ಮರುಜ್ಞಾಪನವನ್ನು ಮಕ್ಕಳಿಗೆ ಕೊಡಲಾಗಿದೆ. (1 ತಿಮೊಥೆಯ 5:4, NW) ಅವರನ್ನು ಘನತೆ ಮತ್ತು ಗೌರವದಿಂದ ಉಪಚರಿಸುತ್ತಾ, ಪ್ರಾಯಶಃ ಆರ್ಥಿಕವಾಗಿ ಒದಗಿಸುವಿಕೆಯನ್ನು ಮಾಡುವುದೆಂದೂ ಇದು ಅರ್ಥೈಸುವುದು. ಶಾರೀರಿಕವಾಗಿ ಅಥವಾ ಬೇರೆ ರೀತಿಯಲ್ಲಿ ವೃದ್ಧ ಹೆತ್ತವರನ್ನು ಕೆಟ್ಟದಾಗಿ ಉಪಚರಿಸುವುದು, ಬೈಬಲು ನಮಗೆ ಕ್ರಿಯೆಗೈಯುವಂತೆ ಹೇಳುವ ರೀತಿಗೆ ಪೂರ್ತಿ ಪ್ರತಿವಿರುದ್ಧವಾಗಿದೆ.
22. ಗೃಹ್ಯ ಹಿಂಸಾಚಾರವನ್ನು ಜಯಿಸುವ ಮುಖ್ಯ ಗುಣವು ಯಾವುದು, ಮತ್ತು ಅದನ್ನು ಹೇಗೆ ನಿರ್ವಹಿಸಸಾಧ್ಯವಿದೆ?
22 ಆತ್ಮಸಂಯಮವನ್ನು ಬೆಳೆಸಿಕೊಳ್ಳಿರಿ. ಜ್ಞಾನೋಕ್ತಿ 29:11 ಹೇಳುವುದು: “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು. ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.” ನೀವು ನಿಮ್ಮ ಕೋಪವನ್ನು ಹೇಗೆ ನಿಯಂತ್ರಿಸಿಕೊಳ್ಳಬಲ್ಲಿರಿ? ಹತಾಶೆಯು ಒಳಗೆ ತುಂಬಿಕೊಂಡುಬರುವಂತೆ ಬಿಡುವ ಬದಲಿಗೆ, ಏಳುವ ಕಷ್ಟಗಳನ್ನು ಬಗೆಹರಿಸಲು ಶೀಘ್ರವಾಗಿ ಕ್ರಿಯೆಗೈಯಿರಿ. (ಎಫೆಸ 4:26, 27) ಸಂಯಮವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನಿಮಗೆ ಅನಿಸುವಲ್ಲಿ ಆ ರಂಗವನ್ನು ಬಿಟ್ಟುಹೋಗಿರಿ. ನಿಮ್ಮಲ್ಲಿ ಆತ್ಮಸಂಯಮವನ್ನು ಉತ್ಪಾದಿಸುವಂತೆ ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿರಿ. (ಗಲಾತ್ಯ 5:22, 23) ನಡೆದಾಡುವುದು ಅಥವಾ ಯಾವುದಾದರೂ ದೈಹಿಕ ವ್ಯಾಯಾಮದಲ್ಲಿ ತೊಡಗಿರುವುದು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದಕ್ಕೆ ಸಹಾಯ ಮಾಡಬಹುದು. (ಜ್ಞಾನೋಕ್ತಿ 17:14, 27) “ಕೋಪಕ್ಕೆ ನಿಧಾನಿ”ಗಳಾಗಿರಲು ಪ್ರಯಾಸಪಡಿರಿ.—ಜ್ಞಾನೋಕ್ತಿ 14:29, NW.
ಪ್ರತ್ಯೇಕಿಸಿಕೊಳ್ಳುವುದೊ ಅಥವಾ ಒಂದುಗೂಡಿ ಇರುವುದೊ?
23. ಕ್ರೈಸ್ತ ಸಭೆಯ ಸದಸ್ಯನೊಬ್ಬನು ಪದೇಪದೇ ಮತ್ತು ಪಶ್ಚಾತ್ತಾಪರಹಿತವಾಗಿ ತನ್ನನ್ನು ತೀಕ್ಷ್ಣ ಕೋಪಾವೇಶಗಳಿಗೆ, ಪ್ರಾಯಶಃ ತನ್ನ ಕುಟುಂಬದ ಶಾರೀರಿಕ ಅಪಪ್ರಯೋಗದ ಸಹಿತ, ಬಿಟ್ಟುಕೊಡುತ್ತಾನಾದರೆ, ಏನು ಸಂಭವಿಸಬಹುದು?
23 ದೇವರಿಂದ ಖಂಡಿಸಲ್ಪಟ್ಟ ಕೃತ್ಯಗಳಲ್ಲಿ “ಹಗೆತನ, ಜಗಳ, . . . ಸಿಟ್ಟು” ಇವುಗಳನ್ನು ಬೈಬಲು ಸೇರಿಸುತ್ತದೆ ಮತ್ತು “ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ,” ಎಂದು ಹೇಳುತ್ತದೆ. (ಗಲಾತ್ಯ 5:19-21) ಆದುದರಿಂದ, ಕ್ರೈಸ್ತನೆಂದು ಹೇಳಿಕೊಳ್ಳುವ ಯಾವನಾದರೂ ಪದೇ ಪದೇ ಮತ್ತು ಪಶ್ಚಾತ್ತಾಪವಿಲ್ಲದೆ ಹಿಂಸಾತ್ಮಕ ಕೋಪಾವೇಶಕ್ಕೆ, ಪ್ರಾಯಶಃ ಜೊತೆಗಾರ್ತಿಯ ಅಥವಾ ಮಕ್ಕಳ ಶಾರೀರಿಕ ಅಪಪ್ರಯೋಗ ಸಹಿತವಾಗಿ, ಬಲಿಬೀಳುತ್ತಾನಾದರೆ, ಅವನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡಬಲ್ಲನು. (ಹೋಲಿಸಿ 2 ಯೋಹಾನ 9, 10.) ಈ ರೀತಿಯಲ್ಲಿ ದುರಾಚಾರಿ ವ್ಯಕ್ತಿಗಳಿಂದ ಸಭೆಯನ್ನು ಶುದ್ಧವಾಗಿಡಲಾಗುತ್ತದೆ.—1 ಕೊರಿಂಥ 5:6, 7; ಗಲಾತ್ಯ 5:9.
24. (ಎ) ಅಪಪ್ರಯೋಗಿಸಲ್ಪಟ್ಟ ಜೊತೆಗಾರರು ಹೇಗೆ ಕ್ರಿಯೆಗೈಯಲು ಆಯ್ದುಕೊಳ್ಳಬಹುದು? (ಬಿ) ಚಿಂತಿತ ಮಿತ್ರರು ಮತ್ತು ಹಿರಿಯರು ಅಪಪ್ರಯೋಗಿಸಲ್ಪಟ್ಟ ಜೊತೆಗಾರರನ್ನು ಹೇಗೆ ಬೆಂಬಲಿಸಬಹುದು, ಆದರೆ ಅವರೇನು ಮಾಡಬಾರದು?
24 ಬದಲಾಗುವ ಯಾವ ಸುಳಿವನ್ನೂ ತೋರಿಸದ ದುರಾಚಾರಿ ಜೊತೆಗಾರನಿಂದ ಸದ್ಯ ಜಜ್ಜುಬಡಿಯಲ್ಪಡುತ್ತಿರುವ ಕ್ರೈಸ್ತರ ಕುರಿತೇನು? ಕೆಲವರು ದುರಾಚಾರಿ ಜೊತೆಗಾರನೊಂದಿಗೆ ಒಂದಲ್ಲ ಒಂದು ಕಾರಣಕ್ಕಾಗಿ ಜೀವಿಸಲು ಆಯ್ದುಕೊಂಡಿದ್ದಾರೆ. ಇನ್ನಿತರರು ತಮ್ಮ ಶಾರೀರಿಕ, ಮಾನಸಿಕ, ಮತ್ತು ಆತ್ಮಿಕ ಕ್ಷೇಮವು—ಪ್ರಾಯಶಃ ಅವರ ಜೀವವು ಸಹ—ಅಪಾಯದಲ್ಲಿದೆಯೆಂದು ಭಾವಿಸಿದವರಾಗಿ ಬಿಟ್ಟುಹೋಗಲು ಆರಿಸಿಕೊಂಡಿದ್ದಾರೆ. ಈ ಸನ್ನಿವೇಶಗಳಲ್ಲಿ ಗೃಹ್ಯ ಹಿಂಸಾಚಾರದ ಬಲಿಪಶುವು ಏನು ಮಾಡಲು ಆರಿಸಿಕೊಳ್ಳುತ್ತಾನೆಂಬುದು ಯೆಹೋವನ ಮುಂದೆ ಒಂದು ವ್ಯಕ್ತಿಪರ ನಿರ್ಣಯವಾಗಿದೆ. (1 ಕೊರಿಂಥ 7:10, 11) ಸದುದ್ದೇಶವುಳ್ಳ ಮಿತ್ರರು, ಸಂಬಂಧಿಕರು, ಅಥವಾ ಕ್ರೈಸ್ತ ಹಿರಿಯರು ಸಹಾಯ ಮತ್ತು ಸಲಹೆಯನ್ನು ನೀಡಲು ಇಚ್ಛಿಸಬಹುದು, ಆದರೆ ಯಾವುದೇ ನಿರ್ದಿಷ್ಟ ಮಾರ್ಗಕ್ರಮವನ್ನು ಕೈಕೊಳ್ಳುವಂತೆ ಅವರು ಬಾಧಿತನ ಮೇಲೆ ಒತ್ತಡವನ್ನು ಹಾಕಬಾರದು. ಅದು ಅವನು ಅಥವಾ ಅವಳು ಮಾಡುವ ಸ್ವಂತ ನಿರ್ಣಯವಾಗಿದೆ.—ರೋಮಾಪುರ 14:4; ಗಲಾತ್ಯ 6:5.
ಭಂಗಗೊಳಿಸುವಂತಹ ಸಮಸ್ಯೆಗಳಿಗೆ ಅಂತ್ಯ
25. ಕುಟುಂಬಕ್ಕಾಗಿ ಯೆಹೋವನ ಉದ್ದೇಶವು ಏನು?
25 ಯೆಹೋವನು ಆದಾಮ ಮತ್ತು ಹವ್ವರನ್ನು ವಿವಾಹದಲ್ಲಿ ಒಟ್ಟುಗೂಡಿಸಿದಾಗ, ಕುಟುಂಬಗಳು ಮದ್ಯರೋಗಾವಸ್ಥೆ ಅಥವಾ ಹಿಂಸಾಚಾರಗಳಂತಹ ಭಂಗಗೊಳಿಸುವ ಸಮಸ್ಯೆಗಳಿಂದ ನಶಿಸಿಹೋಗಬೇಕೆಂದು ಆತನು ಎಂದೂ ಉದ್ದೇಶಿಸಲಿಲ್ಲ. (ಎಫೆಸ 3:14, 15) ಕುಟುಂಬವು ಪ್ರೀತಿ ಮತ್ತು ಶಾಂತಿಯು ಸಮೃದ್ಧಗೊಳ್ಳುವ ಮತ್ತು ಪ್ರತಿಯೊಬ್ಬ ಸದಸ್ಯನ ಮಾನಸಿಕ, ಭಾವಾತ್ಮಕ, ಮತ್ತು ಆತ್ಮಿಕ ಅಗತ್ಯಗಳು ಪರಾಮರಿಸಲ್ಪಡುವ ಒಂದು ಸ್ಥಳವಾಗಿರಲಿತ್ತು. ಆದರೆ ಪಾಪದ ಒಳಸೇರಿಕೆಯಿಂದಾಗಿ ಕುಟುಂಬ ಜೀವನವು ಬೇಗನೆ ಅವನತಿಗಿಳಿಯಿತು.—ಹೋಲಿಸಿ ಪ್ರಸಂಗಿ 8:9.
26. ಯೆಹೋವನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸುವವರಿಗೆ ಯಾವ ಭವಿಷ್ಯತ್ತು ಕಾದಿದೆ?
26 ಸಂತೋಷಕರವಾಗಿ, ಕುಟುಂಬಕ್ಕಾಗಿರುವ ತನ್ನ ಉದ್ದೇಶವನ್ನು ಯೆಹೋವನು ತ್ಯಜಿಸಿಬಿಟ್ಟಿಲ್ಲ. ಯಾವುದರಲ್ಲಿ ಜನರು “ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸು”ವರೊ ಆ ಶಾಂತಿಭರಿತ ನೂತನ ಲೋಕವೊಂದನ್ನು ಬರಮಾಡುವನೆಂದು ಆತನು ವಾಗ್ದಾನಿಸುತ್ತಾನೆ. (ಯೆಹೆಜ್ಕೇಲ 34:28) ಆ ಸಮಯದಲ್ಲಿ ಮದ್ಯರೋಗಾವಸ್ಥೆ, ಗೃಹ್ಯ ಹಿಂಸಾಚಾರ, ಮತ್ತು ಇಂದು ಕುಟುಂಬವನ್ನು ಭಂಗಗೊಳಿಸುವ ಬೇರೆ ಎಲ್ಲಾ ಸಮಸ್ಯೆಗಳು ಗತಕಾಲದ ವಿಷಯಗಳಾಗಿರುವವು. ಜನರು ಭಯವನ್ನಾಗಲಿ ನೋವನ್ನಾಗಲಿ ಅಡಗಿಸಲಿಕ್ಕಾಗಿ ಅಲ್ಲ, ಬದಲಾಗಿ, “ಶಾಂತಿಯ ಸಮೃದ್ಧಿಯಲ್ಲಿ ಉತ್ಕೃಷ್ಟ ಆನಂದವನ್ನು” ಕಂಡುಕೊಳ್ಳುತ್ತಿರುವ ಕಾರಣದಿಂದ ನಸುನಗುವರು.—ಕೀರ್ತನೆ 37:11, NW.
a ಮದ್ಯರೋಗಿಯನ್ನು ನಾವು ಒಬ್ಬ ಗಂಡಾಗಿ ಸೂಚಿಸುವುದಾದರೂ, ಈ ಮೂಲತತ್ವಗಳು ಮದ್ಯರೋಗಿಯು ಒಬ್ಬ ಹೆಣ್ಣಾಗಿರುವಾಗಲೂ ಸರಿಸಮವಾಗಿ ಅನ್ವಯಿಸುತ್ತವೆ.
b ಮದ್ಯರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ವಿಶೇಷ ನೆರವನ್ನೀಯುವುದಕ್ಕಾಗಿ ಕೆಲವು ದೇಶಗಳಲ್ಲಿ ಔಷಧೋಪಚಾರ ಕೇಂದ್ರಗಳು, ಆಸ್ಪತ್ರೆಗಳು, ಮತ್ತು ವಾಸಿಗೊಳಿಸುವ ಕಾರ್ಯಕ್ರಮಗಳಿವೆ. ಇಂತಹ ಸಹಾಯವನ್ನು ಹುಡುಕಬೇಕೊ ಬಾರದೊ ಎಂಬುದು ಒಂದು ವೈಯಕ್ತಿಕ ನಿರ್ಣಯ. ವಾಚ್ ಟವರ್ ಸೊಸೈಟಿಯು ಯಾವುದೇ ವಿಶಿಷ್ಟ ಔಷಧೋಪಚಾರವನ್ನು ಅನುಮೋದಿಸುವುದಿಲ್ಲ. ಆದರೂ, ಸಹಾಯವನ್ನು ಹುಡುಕುವಲ್ಲಿ, ಒಬ್ಬನು ಶಾಸ್ತ್ರೀಯ ಮೂಲತತ್ವಗಳಲ್ಲಿ ಸಂಧಾನಮಾಡಿಕೊಳ್ಳುವ ಚಟುವಟಿಕೆಗಳಲ್ಲಿ ಒಳಗೊಳ್ಳದಂತೆ ಜಾಗ್ರತೆವಹಿಸಬೇಕು.