ಅಧ್ಯಾಯ 18
ಉತ್ತರ ಕೊಡುವಾಗ ಬೈಬಲಿನ ಉಪಯೋಗ
ನಮ್ಮ ನಂಬಿಕೆಗಳು, ನಮ್ಮ ಜೀವನ ರೀತಿ, ಸದ್ಯಕ್ಕೆ ನಡೆಯುತ್ತಿರುವ ಘಟನೆಗಳ ಕುರಿತಾದ ನಮ್ಮ ದೃಷ್ಟಿಕೋನ, ಭವಿಷ್ಯತ್ತಿನ ಕುರಿತಾದ ನಮ್ಮ ನಿರೀಕ್ಷೆಯ ವಿಷಯದಲ್ಲಿ ನಮ್ಮನ್ನು ಪ್ರಶ್ನಿಸಲಾಗುವಾಗ, ಉತ್ತರ ಕೊಡಲಿಕ್ಕಾಗಿ ನಾವು ಬೈಬಲನ್ನು ಉಪಯೋಗಿಸಲು ಪೂರ್ಣ ಪ್ರಯತ್ನವನ್ನು ಮಾಡುತ್ತೇವೆ. ಏಕೆ? ಏಕೆಂದರೆ, ಅದು ದೇವರ ವಾಕ್ಯವಾಗಿದೆ. ನಮ್ಮ ನಂಬಿಕೆಗಳನ್ನು ನಾವು ಪಡೆದಿರುವುದು ಬೈಬಲಿನಿಂದಲೇ. ನಮ್ಮ ಜೀವನ ಮಾರ್ಗಕ್ಕೆ ಬೈಬಲೇ ಆಧಾರವಾಗಿದೆ. ಜಾಗತಿಕ ಘಟನೆಗಳ ಕುರಿತಾದ ನಮ್ಮ ದೃಷ್ಟಿಕೋನವನ್ನು ಅದು ರೂಪಿಸುತ್ತದೆ. ಭವಿಷ್ಯದ ಕುರಿತಾದ ನಮ್ಮ ನಿರೀಕ್ಷೆಯು ಸ್ಥಿರವಾಗಿ ಬೇರೂರಿರುವುದು ಬೈಬಲಿನ ಪ್ರೇರಿತ ವಾಗ್ದಾನಗಳಲ್ಲೇ.—2 ತಿಮೊ. 3:16, 17.
ನಮ್ಮ ಹೆಸರಿನೊಂದಿಗೆ ಬರುವ ಜವಾಬ್ದಾರಿಯ ಕುರಿತು ನಾವು ಸೂಕ್ಷ್ಮವಾದ ಅರಿವುಳ್ಳವರಾಗಿದ್ದೇವೆ. ನಾವು ಯೆಹೋವನ ಸಾಕ್ಷಿಗಳು ಆಗಿದ್ದೇವೆ. (ಯೆಶಾ. 43:12) ಆದಕಾರಣ, ನಾವು ಉತ್ತರಗಳನ್ನು ಮಾನವ ತತ್ತ್ವಜ್ಞಾನದ ಮೇಲೆ ಆಧಾರಿಸದೆ, ಯೆಹೋವನು ತನ್ನ ಪ್ರೇರಿತ ವಾಕ್ಯದಲ್ಲಿ ಏನು ಹೇಳುತ್ತಾನೊ ಅದರ ಮೇಲೆ ಆಧಾರಿಸುತ್ತೇವೆ. ನಿಜ, ವ್ಯಕ್ತಿಗತವಾಗಿ ನಮಗೆ ವಿಷಯಗಳ ಕುರಿತು ನಮ್ಮ ಸ್ವಂತ ಅಭಿಪ್ರಾಯಗಳು ಇರುವುದಾದರೂ, ದೇವರ ವಾಕ್ಯವು ನಮ್ಮ ದೃಷ್ಟಿಕೋನಗಳನ್ನು ರೂಪಿಸುವಂತೆ ನಾವು ಬಿಡುತ್ತೇವೆ. ಏಕೆಂದರೆ, ಅದೇ ಸತ್ಯ ಎಂಬ ಸ್ಥಿರವಾದ ನಿಶ್ಚಿತಾಭಿಪ್ರಾಯ ನಮಗಿದೆ. ಬೈಬಲು ನಮಗೆ ಅನೇಕ ವಿಷಯಗಳಲ್ಲಿ ಸ್ವಂತ ಇಷ್ಟದ ಸಂಬಂಧದಲ್ಲಿ ಸ್ವಾತಂತ್ರ್ಯವನ್ನು ಕೊಡುತ್ತದೆ ಎಂಬುದಂತೂ ನಿಶ್ಚಯ. ಆದರೆ ನಮ್ಮ ಇಷ್ಟಗಳನ್ನು ಇತರರ ಮೇಲೆ ಹೇರುವ ಬದಲು, ಶಾಸ್ತ್ರವಚನಗಳಲ್ಲಿ ಕೊಡಲ್ಪಟ್ಟಿರುವ ಮೂಲತತ್ತ್ವಗಳನ್ನು ಕಲಿಸಲು ನಾವು ಬಯಸುತ್ತೇವೆ. ಹೀಗೆ ನಮ್ಮ ಕೇಳುಗರು, ನಾವು ಸಹ ಅನುಭವಿಸುತ್ತಿರುವ ಆಯ್ಕೆಯ ಸ್ವಾತಂತ್ರ್ಯವನ್ನೇ ಅನುಭವಿಸುವಂತೆ ನಾವು ಬಿಡುತ್ತೇವೆ. ಅಪೊಸ್ತಲ ಪೌಲನಂತೆ ನಾವು, ‘ನಂಬಿಕೆಯ ಮೂಲಕ ವಿಧೇಯತ್ವವನ್ನು’ ಉತ್ತೇಜಿಸಲು ಪ್ರಯತ್ನಿಸುತ್ತೇವೆ.—ರೋಮಾ. 16:25, 26.
ಪ್ರಕಟನೆ 3:14 ರಲ್ಲಿ ಯೇಸು ಕ್ರಿಸ್ತನನ್ನು, “ನಂಬತಕ್ಕ ಸತ್ಯಸಾಕ್ಷಿ” ಎಂದು ವರ್ಣಿಸಲಾಗಿದೆ. ಅವನ ಮೇಲೆ ಹೇರಲ್ಪಟ್ಟ ಪ್ರಶ್ನೆಗಳನ್ನೂ ಸನ್ನಿವೇಶಗಳನ್ನೂ ಅವನು ಹೇಗೆ ಉತ್ತರಿಸಿದನು ಮತ್ತು ನಿಭಾಯಿಸಿದನು? ಕೆಲವು ಸಲ ಜನರನ್ನು ಯೋಚಿಸುವಂತೆ ಮಾಡುವ ದೃಷ್ಟಾಂತಗಳನ್ನು ಅವನು ಉಪಯೋಗಿಸಿದನು. ಬೇರೆ ಸಮಯಗಳಲ್ಲಿ, ಯಾರು ಪ್ರಶ್ನೆಯನ್ನು ಕೇಳುತ್ತಿದ್ದನೋ ಅದೇ ವ್ಯಕ್ತಿಗೆ, ಒಂದು ಶಾಸ್ತ್ರವಚನದ ಕುರಿತಾದ ಅವನ ಸ್ವಂತ ತಿಳಿವಳಿಕೆಯನ್ನು ಕೇಳುವ ಮೂಲಕ ಸನ್ನಿವೇಶವನ್ನು ನಿಭಾಯಿಸಿದನು. ಆಗಾಗ, ಶಾಸ್ತ್ರವಚನಗಳನ್ನು ಉಲ್ಲೇಖಿಸುವ ಮೂಲಕ, ಅವುಗಳ ಭಾವಾನುವಾದವನ್ನು ಕೊಡುವ ಮೂಲಕ, ಇಲ್ಲವೆ ಪರೋಕ್ಷವಾಗಿ ಅವುಗಳಿಗೆ ಸೂಚಿಸಿ ಮಾತಾಡುವ ಮೂಲಕವೂ ಸನ್ನಿವೇಶವನ್ನು ನಿಭಾಯಿಸಿದನು. (ಮತ್ತಾ. 4:3-10; 12:1-8; ಲೂಕ 10:25-28; 17:32) ಒಂದನೆಯ ಶತಮಾನದಲ್ಲಿ, ಶಾಸ್ತ್ರದ ಸುರುಳಿಗಳನ್ನು ಸಾಧಾರಣವಾಗಿ ಸಭಾಮಂದಿರಗಳಲ್ಲಿ ಇಡಲಾಗುತ್ತಿತ್ತು. ಯೇಸುವಿನ ಹತ್ತಿರ ಈ ಸುರುಳಿಗಳ ಸ್ವಂತ ಸಂಗ್ರಹವಿತ್ತೆಂಬುದಕ್ಕೆ ಯಾವುದೇ ರುಜುವಾತು ಇಲ್ಲವಾದರೂ, ಅವನು ಶಾಸ್ತ್ರವಚನಗಳನ್ನು ಚೆನ್ನಾಗಿ ತಿಳಿದಿದ್ದನು ಮಾತ್ರವಲ್ಲ, ಇತರರಿಗೆ ಕಲಿಸುವಾಗ ಅವನು ಅದನ್ನು ಧಾರಾಳವಾಗಿ ಉಪಯೋಗಿಸಿದನು. (ಲೂಕ 24:27, 44-47) ತಾನು ಕಲಿಸಿದ ವಿಷಯಗಳು ತನ್ನ ಸ್ವಂತದವುಗಳಲ್ಲವೆಂದು ಅವನು ನಿಜವಾಗಿಯೂ ಹೇಳಸಾಧ್ಯವಿತ್ತು. ಅವನು ತನ್ನ ತಂದೆಯಿಂದ ಏನನ್ನು ಕೇಳಿಸಿಕೊಂಡಿದ್ದನೊ ಅದನ್ನೇ ಬೋಧಿಸಿದನು.—ಯೋಹಾ. 8:26.
ಯೇಸುವಿನ ಮಾದರಿಯನ್ನು ಅನುಸರಿಸುವುದೇ ನಮ್ಮ ಅಪೇಕ್ಷೆಯಾಗಿದೆ. ಯೇಸು ಕೇಳಿಸಿಕೊಂಡಿದ್ದ ಹಾಗೆ, ನಾವು ವೈಯಕ್ತಿಕವಾಗಿ ದೇವರ ಮಾತನ್ನು ಕೇಳಿಸಿಕೊಂಡಿಲ್ಲ. ಆದರೆ ಬೈಬಲು ದೇವರ ವಾಕ್ಯವಾಗಿದೆ. ನಮ್ಮ ಉತ್ತರಗಳಿಗೆ ಆಧಾರವಾಗಿ ನಾವು ಅದನ್ನು ಉಪಯೋಗಿಸುವಾಗ, ನಮ್ಮ ಕಡೆಗೆ ಗಮನ ಸೆಳೆಯುವುದರಿಂದ ನಾವು ದೂರವಿರುತ್ತೇವೆ. ಅಪರಿಪೂರ್ಣ ಮಾನವನೊಬ್ಬನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಬದಲಾಗಿ, ಸತ್ಯವೇನೆಂದು ದೇವರೇ ಹೇಳುವಂತೆ ಬಿಡಲು ನಾವು ದೃಢನಿಶ್ಚಯವನ್ನು ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ.—ಯೋಹಾ. 7:18; ರೋಮಾ. 3:4.
ಆದರೆ ಬೈಬಲನ್ನು ಕೇವಲ ಉಪಯೋಗಿಸುವುದು ನಮ್ಮ ಅಪೇಕ್ಷೆಯಾಗಿರುವುದಿಲ್ಲ. ಬದಲಾಗಿ ಅದನ್ನು ನಮ್ಮ ಕೇಳುಗನಿಗೆ ಅತಿ ಪ್ರಯೋಜನಕರವಾಗುವ ರೀತಿಯಲ್ಲಿ ಉಪಯೋಗಿಸುವುದು ನಮ್ಮ ಅಪೇಕ್ಷೆಯಾಗಿದೆ. ಅವನು ತೆರೆದಮನಸ್ಸಿನಿಂದ ಅದಕ್ಕೆ ಕಿವಿಗೊಡಬೇಕೆಂಬುದು ನಮ್ಮ ಬಯಕೆ. ಆ ವ್ಯಕ್ತಿಯ ಮನೋಭಾವದ ಮೇಲೆ ಹೊಂದಿಕೊಂಡು, ಹೀಗೆ ಹೇಳುವ ಮೂಲಕ ನೀವು ಬೈಬಲಿನ ವಿಚಾರಗಳನ್ನು ಪರಿಚಯಿಸಸಾಧ್ಯವಿದೆ: “ದೇವರು ಏನು ಹೇಳುತ್ತಾನೊ ಅದೇ ನಿಜವಾಗಿಯೂ ಪ್ರಾಮುಖ್ಯವೆಂದು ನೀವು ಒಪ್ಪುವುದಿಲ್ಲವೆ?” ಅಥವಾ ನೀವು ಹೀಗನ್ನಬಹುದು: “ಬೈಬಲು ಅದೇ ವಿಚಾರವನ್ನು ಚರ್ಚಿಸುತ್ತದೆಂದು ನಿಮಗೆ ತಿಳಿದಿದೆಯೆ?” ಆದರೆ ಬೈಬಲನ್ನು ಗೌರವಿಸದಂಥ ಒಬ್ಬ ವ್ಯಕ್ತಿಯೊಂದಿಗೆ ನೀವು ಮಾತಾಡುವಾಗ, ತುಸು ಭಿನ್ನವಾದ ಪೀಠಿಕೆಯನ್ನು ಉಪಯೋಗಿಸಬೇಕಾಗಬಹುದು. ನೀವು ಹೀಗೆ ಹೇಳಬಹುದು: “ಈ ಪ್ರಾಚೀನ ಪ್ರವಾದನೆಯನ್ನು ನಾನು ನಿಮಗೆ ತಿಳಿಸಲೆ?” ಅಥವಾ ನೀವು ಹೀಗನ್ನಬಹುದು: “ಮಾನವ ಇತಿಹಾಸದಲ್ಲೇ ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಗ್ರಂಥವು ಹೀಗೆ ಹೇಳುತ್ತದೆ . . . ”
ಕೆಲವು ಸಂದರ್ಭಗಳಲ್ಲಿ, ನೀವು ಒಂದು ವಚನದ ಭಾವಾನುವಾದ ಮಾಡಲು ನಿಶ್ಚಯಿಸಬಹುದು. ಆದರೆ ಸಾಧ್ಯವಿರುವಲ್ಲಿ, ಬೈಬಲನ್ನೇ ತೆರೆದು ಅದು ಏನು ಹೇಳುತ್ತದೊ ಅದನ್ನು ಓದುವುದು ಅತ್ಯುತ್ತಮವಾಗಿದೆ. ಪ್ರಾಯೋಗಿಕವಾಗಿರುವಾಗೆಲ್ಲ, ಆ ವ್ಯಕ್ತಿಯ ಸ್ವಂತ ಬೈಬಲಿನಿಂದ ವಚನವನ್ನು ತೋರಿಸಿರಿ. ಬೈಬಲಿನ ಈ ನೇರವಾದ ಉಪಯೋಗವು ಅನೇಕವೇಳೆ ಜನರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ.—ಇಬ್ರಿ. 4:12.
ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಬೈಬಲನ್ನು ಉಪಯೋಗಿಸುವ ವಿಶೇಷ ಜವಾಬ್ದಾರಿ ಕ್ರೈಸ್ತ ಹಿರಿಯರಿಗಿದೆ. ಹಿರಿಯನಾಗಿ ಸೇವೆಮಾಡುವ ಸಹೋದರನಿಗಿರಬೇಕಾದ ಅರ್ಹತೆಗಳಲ್ಲಿ ಒಂದು, “ಕ್ರಿಸ್ತಬೋಧಾನುಸಾರವಾದ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದು”ಕೊಳ್ಳುವುದೇ ಆಗಿದೆ. (ತೀತ 1:9) ಹಿರಿಯನು ಸಲಹೆ ನೀಡಿದ ಬಳಿಕ ಸಭೆಯ ಸದಸ್ಯನೊಬ್ಬನು ಒಂದು ಗಂಭೀರವಾದ ನಿರ್ಣಯವನ್ನು ಮಾಡಬಹುದು. ಆದುದರಿಂದ, ಈ ಸಲಹೆಯು ಶಾಸ್ತ್ರವಚನಗಳ ಮೇಲೆ ಆಧಾರಿತವಾಗಿರುವುದು ಎಷ್ಟು ಪ್ರಾಮುಖ್ಯ! ಇದನ್ನು ಮಾಡುವುದರಲ್ಲಿ ಹಿರಿಯನು ಇಡುವ ಮಾದರಿಯು, ಇತರ ಅನೇಕರು ತಮ್ಮ ಬೋಧನಾ ರೀತಿಯಲ್ಲಿಯೂ ಹಾಗೆಯೇ ಮಾಡುವಂತೆ ಪ್ರಭಾವಿಸಬಲ್ಲದು.