ದೇವರ ಆತ್ಮನಿರ್ದೇಶಿತ ಅರಸನ ಮೂಲಕ ಆಶೀರ್ವಾದ ಹೊಂದಿರಿ!
‘ಅವನ ಮೇಲೆ ಯೆಹೋವನ ಆತ್ಮವೇ ನೆಲೆಗೊಂಡಿರುವದು.’—ಯೆಶಾ. 11:2.
1. ಲೋಕದ ಸಮಸ್ಯೆಗಳ ಕುರಿತು ಕೆಲವರು ಯಾವ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ?
“ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಪರಿಸರೀಯವಾಗಿ ಪೂರ್ತಿ ದಿಗ್ಭ್ರಮೆಗೊಂಡಿರುವ ಲೋಕದಲ್ಲಿ ಮಾನವಕುಲವು ಇನ್ನೊಂದು ನೂರು ವರುಷವಾದರೂ ಹೇಗೆ ಬಾಳೀತು?” ಹೀಗೆಂದು ಪ್ರಶ್ನಿಸಿದವರು ಸ್ಟೀಫನ್ ಕಿಂಗ್ ಎಂಬ ವಿಜ್ಞಾನಿ 2006ರಲ್ಲಿ. ನ್ಯೂ ಸ್ಟೇಟ್ಸ್ಮ್ಯಾನ್ ಪತ್ರಿಕೆಯ ಲೇಖನವೊಂದು ಹೇಳಿದ್ದು: “ನಾವು ಬಡತನವನ್ನು ಹೋಗಲಾಡಿಸಿಲ್ಲ, ಲೋಕಶಾಂತಿಯನ್ನೂ ತಂದಿಲ್ಲ. ಇದಕ್ಕೆ ತದ್ವಿರುದ್ಧವಾದುದನ್ನೇ ಸಾಧಿಸಿದ್ದೇವೆ ಎನ್ನಬಹುದು. ನಾವು ಏನೂ ಪ್ರಯತ್ನಿಸಲಿಲ್ಲವೆಂದಲ್ಲ, ಪ್ರಯತ್ನಿಸಿದ್ದೇವೆ. ಕಮ್ಯುನಿಸಮ್ನಿಂದ ಹಿಡಿದು ಬಂಡವಾಳಶಾಹಿಯೇ ಮುಂತಾದ ಪ್ರತಿಯೊಂದು ರಾಜನೀತಿಯನ್ನು ಪ್ರಯತ್ನಿಸಿದ್ದೇವೆ. ಜನಾಂಗಸಂಘವನ್ನು ಸ್ಥಾಪಿಸಿ ಯುದ್ಧ ನಿಲ್ಲಿಸಲು ಯತ್ನಿಸಿದ್ದೇವೆ. ಅಣುಶಸ್ತ್ರಗಳನ್ನು ದಾಸ್ತಾನು ಮಾಡಿಡುವ ಮೂಲಕ ಯುದ್ಧಗಳನ್ನು ತಡೆದಿಡಲು ಪ್ರಯತ್ನಿಸಿದ್ದೇವೆ. ‘ಒಂದು ಯುದ್ಧ ನಿಲ್ಲಿಸಲು ಹಲವಾರು ಯುದ್ಧಗಳನ್ನು’ ಸಹ ಮಾಡಿದ್ದೇವೆ. ಹೀಗೆ ಯುದ್ಧವನ್ನು ಕೊನೆಗಾಣಿಸಲು ನಮಗೆ ತಿಳಿದಿದೆಯೋ ಎಂಬಂತೆ ವರ್ತಿಸಿದ್ದೇವೆ.”
2. ಯೆಹೋವನು ಶೀಘ್ರದಲ್ಲೇ ಭೂಮಿಯ ಮೇಲೆ ತನ್ನ ನ್ಯಾಯಬದ್ಧ ಪರಮಾಧಿಕಾರವನ್ನು ತೋರಿಸುವುದು ಹೇಗೆ?
2 ಇಂಥ ಹೇಳಿಕೆಗಳನ್ನು ಕೇಳುವಾಗ ಯೆಹೋವನ ಸೇವಕರಿಗೆ ಆಶ್ಚರ್ಯವಾಗುವುದಿಲ್ಲ. ಮಾನವರು ತಮ್ಮನ್ನು ತಾವೇ ಆಳಿಕೊಳ್ಳಲು ನಿರ್ಮಿಸಲ್ಪಟ್ಟಿಲ್ಲವೆಂದು ಬೈಬಲು ನಮಗೆ ಹೇಳುತ್ತದೆ. (ಯೆರೆ. 10:23) ಯೆಹೋವನೊಬ್ಬನೇ ನಮ್ಮ ನ್ಯಾಯಬದ್ಧ ಪರಮಾಧಿಕಾರಿ. ಹಾಗಿರುವುದರಿಂದ ನಮಗಾಗಿ ನೀತಿಯ ಮಟ್ಟಗಳನ್ನಿಡುವುದಕ್ಕೆ, ನಮ್ಮ ಜೀವಿತಕ್ಕೆ ಯಾವ ಉದ್ದೇಶವಿರಬೇಕೆಂದು ವಿಧಿಸುವುದಕ್ಕೆ, ಮತ್ತು ಆ ಉದ್ದೇಶದ ಕಡೆಗೆ ನಡಿಸುವುದಕ್ಕೆ ಆತನಿಗೆ ವಿಶೇಷಾಧಿಕಾರವಿದೆ. ಅದಲ್ಲದೆ ಆತನು ಶೀಘ್ರದಲ್ಲೇ ತನ್ನ ಅಧಿಕಾರವನ್ನು ಉಪಯೋಗಿಸಿ ಸ್ವಪ್ರಭುತ್ವವನ್ನು ಸ್ಥಾಪಿಸಲು ಮಾನವರು ಮಾಡಿರುವ ವಿಫಲ ಪ್ರಯತ್ನಗಳನ್ನು ಅಂತ್ಯಗೊಳಿಸುವನು. ಅದೇ ಸಮಯದಲ್ಲಿ ತನ್ನ ನ್ಯಾಯಬದ್ಧ ಪರಮಾಧಿಕಾರವನ್ನು ತಿರಸ್ಕರಿಸಿ ಮಾನವರನ್ನು ಪಾಪ, ಅಪರಿಪೂರ್ಣತೆ ಮತ್ತು ‘ಈ ವಿಷಯಗಳ ವ್ಯವಸ್ಥೆಯ ದೇವನಾದ’ ಪಿಶಾಚ ಸೈತಾನನಿಗೆ ದಾಸರಾಗಿ ಮಾಡಿರುವ ಎಲ್ಲರನ್ನು ಆತನು ನಾಶಗೊಳಿಸಲಿದ್ದಾನೆ.—2 ಕೊರಿಂ. 4:4.
3. ಮೆಸ್ಸೀಯನ ಕುರಿತು ಯೆಶಾಯನು ಏನನ್ನು ಮುಂತಿಳಿಸಿದನು?
3 ಪರದೈಸಾಗಲಿರುವ ಹೊಸಲೋಕದಲ್ಲಿ ಯೆಹೋವನ ಪ್ರೀತಿಯುಳ್ಳ ಪರಮಾಧಿಕಾರವು ಮೆಸ್ಸೀಯ ರಾಜ್ಯದ ಮೂಲಕ ಸುವ್ಯಕ್ತವಾಗುವುದು. (ದಾನಿ. 7:13, 14) ಅದರ ರಾಜನ ಕುರಿತು ಯೆಶಾಯನು ಪ್ರವಾದಿಸಿದ್ದು: “ಇಷಯನ ಬುಡದಿಂದ ಒಂದು ಚಿಗುರು ಒಡೆಯುವದು, ಅದರ ಬೇರಿನಿಂದ ಹೊರಟ ತಳಿರು ಫಲಿಸುವದು; ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು.” (ಯೆಶಾ. 11:1, 2) ದೇವರ ಪವಿತ್ರಾತ್ಮವು ‘ಇಷಯನ ಬುಡದಿಂದ ಬಂದ ಚಿಗುರಾದ’ ಯೇಸು ಕ್ರಿಸ್ತನನ್ನು ಮಾನವರನ್ನಾಳಲು ಯಾವ ನಿರ್ದಿಷ್ಟ ವಿಧಗಳಲ್ಲಿ ಅರ್ಹನನ್ನಾಗಿ ಮಾಡಿದೆ? ಅವನ ಆಳ್ವಿಕೆಯಿಂದ ಯಾವ ಆಶೀರ್ವಾದಗಳು ಫಲಿಸುವವು? ಅಲ್ಲದೆ ಆ ಆಶೀರ್ವಾದಗಳನ್ನು ಹೊಂದಲು ನಾವೇನು ಮಾಡಬೇಕು?
ಆಳಲಿಕ್ಕೆ ಅರ್ಹತೆ ಪಡೆದದ್ದು ದೇವರಿಂದ
4-6. ವಿವೇಕಿ ಮತ್ತು ಕನಿಕರವುಳ್ಳ ರಾಜನೂ ಮಹಾಯಾಜಕನೂ ನ್ಯಾಯಾಧಿಪತಿಯೂ ಆಗಿರಲು ಯೇಸುವನ್ನು ಯಾವ ಮಹತ್ವದ ಜ್ಞಾನವು ಅರ್ಹನನ್ನಾಗಿ ಮಾಡುವುದು?
4 ನಿಜವಾಗಿಯೂ ವಿವೇಕಿ ಹಾಗೂ ಕನಿಕರವುಳ್ಳ ರಾಜನೂ ಮಹಾಯಾಜಕನೂ ನ್ಯಾಯಾಧಿಪತಿಯೂ ಆಗಿರುವವನ ಕೈಕೆಳಗೆ ತನ್ನ ಪ್ರಜೆಗಳು ಪರಿಪೂರ್ಣತೆಗೇರುವಂತೆ ಯೆಹೋವನು ಬಯಸುತ್ತಾನೆ. ಆದ್ದರಿಂದಲೇ ಆತನು ಯೇಸು ಕ್ರಿಸ್ತನನ್ನು ಆರಿಸಿಕೊಂಡು ತನ್ನ ಪವಿತ್ರಾತ್ಮದ ಮೂಲಕ ಅವನನ್ನು ಆ ಅತ್ಯಂತ ಮಹತ್ವದ ಜವಾಬ್ದಾರಿಗಳಿಗೆ ಅರ್ಹನನ್ನಾಗಿ ಮಾಡಿದನು. ಈ ದೇವನೇಮಿತ ಪಾತ್ರಗಳನ್ನು ಯೇಸು ಏಕೆ ಪರಿಪೂರ್ಣವಾಗಿ ನೆರವೇರಿಸುವನೆಂಬುದಕ್ಕೆ ಕೆಲವು ಕಾರಣಗಳನ್ನು ಪರಿಗಣಿಸಿ.
5 ದೇವರ ಕುರಿತು ಆಳವಾದ ಜ್ಞಾನ ಯೇಸುವಿಗಿದೆ. ಏಕೈಕಜಾತ ಪುತ್ರನಾದ ಯೇಸು ತನ್ನ ತಂದೆಯನ್ನು ಬೇರೆ ಯಾರಿಗಿಂತಲೂ ಹೆಚ್ಚು ಸಮಯದಿಂದ ತಿಳಿದಿದ್ದಾನೆ, ಪ್ರಾಯಶಃ ಅನೇಕ ಶತಕೋಟಿ ವರ್ಷಗಳಿಂದ! ಆ ಸಮಯದಲ್ಲಿ ಯೇಸು ಯೆಹೋವನ ಕುರಿತು ಎಷ್ಟು ಕೂಲಂಕಷ ಜ್ಞಾನವನ್ನು ಗಳಿಸಿದ್ದನೆಂದರೆ ಅವನನ್ನು ‘ಅದೃಶ್ಯನಾದ ದೇವರ ಪ್ರತಿರೂಪನೆಂದೇ’ ವರ್ಣಿಸಸಾಧ್ಯವಿದೆ. (ಕೊಲೊ. 1:15) “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಯೇಸು ತಾನೇ ಹೇಳಿದನು.—ಯೋಹಾ. 14:9.
6 ಮಾನವಕುಲವನ್ನೂ ಸೇರಿಸಿ ಸರ್ವಸೃಷ್ಟಿಯ ಕುರಿತು ಅತಿ ವ್ಯಾಪಕ ಜ್ಞಾನವಿರುವುದು ಮೊದಲಾಗಿ ಯೆಹೋವನಿಗೆ, ನಂತರ ಯೇಸುವಿಗೆ ಮಾತ್ರ. ಕೊಲೊಸ್ಸೆ 1:16, 17 ಹೀಗನ್ನುತ್ತದೆ: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ದೃಶ್ಯವಾದ ಮತ್ತು ಅದೃಶ್ಯವಾದ ಇತರ ಎಲ್ಲವುಗಳು, . . . ಅವನ [ದೇವರ ಮಗನ] ಮೂಲಕವೇ ಸೃಷ್ಟಿಸಲ್ಪಟ್ಟವು; . . . ಇದಲ್ಲದೆ ಅವನು ಇತರ ಎಲ್ಲವುಗಳಿಗಿಂತ ಮೊದಲು ಇದ್ದವನು ಮತ್ತು ಅವನ ಮೂಲಕವಾಗಿಯೇ ಎಲ್ಲವೂ ಅಸ್ತಿತ್ವಕ್ಕೆ ತರಲ್ಪಟ್ಟಿತು.” ಆ ಕುರಿತು ಸ್ವಲ್ಪ ಯೋಚಿಸಿ! ದೇವರ ‘ಶಿಲ್ಪಿಯಾದ’ ಯೇಸು ಬೇರೆಲ್ಲ ಸೃಷ್ಟಿಕಾರ್ಯದಲ್ಲಿ ಆತನೊಂದಿಗೆ ಪಾಲಿಗನಾಗಿದ್ದನು. ಆದಕಾರಣ ಯೇಸುವಿಗೆ ಪರಮಾಣುವಿನ ಸೂಕ್ಷ್ಮಾತಿಸೂಕ್ಷ್ಮ ಕಣದಿಂದ ಹಿಡಿದು ಮಾನವನ ವಿಸ್ಮಯಕರ ಮಿದುಳಿನ ವರೆಗೆ ಇಡೀ ವಿಶ್ವದ ಪ್ರತಿಯೊಂದು ವಿವರ ತಿಳಿದಿದೆ. ಹೌದು, ಕ್ರಿಸ್ತನು ನಿಜವಾಗಿಯೂ ವಿವೇಕದ ವ್ಯಕ್ತೀಕರಣ!—ಜ್ಞಾನೋ. 8:12, 22, 30, 31.
7, 8. ದೇವರ ಪವಿತ್ರಾತ್ಮವು ಯೇಸುವಿಗೆ ಶುಶ್ರೂಷೆಯಲ್ಲಿ ಸಹಾಯಮಾಡಿದ್ದು ಹೇಗೆ?
7 ಯೇಸು ದೇವರ ಪವಿತ್ರಾತ್ಮದಿಂದ ಅಭಿಷೇಕ ಹೊಂದಿದನು. “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು; ಬಂದಿಗಳಿಗೆ ಬಿಡುಗಡೆಯನ್ನು ಸಾರುವುದಕ್ಕೂ ಕುರುಡರಿಗೆ ದೃಷ್ಟಿಯನ್ನು ಕೊಡುವುದಕ್ಕೂ ಜಜ್ಜಲ್ಪಟ್ಟವರನ್ನು ಬಿಡುಗಡೆಮಾಡಿ ಕಳುಹಿಸುವುದಕ್ಕೂ ಯೆಹೋವನ ಸ್ವೀಕೃತ ವರ್ಷವನ್ನು ಸಾರುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ” ಎಂದು ಯೇಸು ಹೇಳಿದನು. (ಲೂಕ 4:18, 19) ಯೇಸು ದೀಕ್ಷಾಸ್ನಾನ ಪಡೆದಾಗ ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಅವನು ಕಲಿತಿದ್ದ ವಿಷಯಗಳನ್ನು ಮನಸ್ಸಿಗೆ ತರುವಂತೆ ಪವಿತ್ರಾತ್ಮವು ಸಾಧ್ಯಗೊಳಿಸಿತೆಂಬುದು ವ್ಯಕ್ತ. ಅದರಲ್ಲಿ ಅವನು ಮೆಸ್ಸೀಯನಾಗಿ ಭೂಶುಶ್ರೂಷೆಯಲ್ಲಿ ಏನನ್ನು ಪೂರೈಸುವಂತೆ ದೇವರು ಬಯಸಿದ್ದನೋ ಆ ವಿಷಯ ಕೂಡ ಸೇರಿತ್ತು.—ಯೆಶಾಯ 42:1; ಲೂಕ 3:21, 22; ಯೋಹಾನ 12:50 ಓದಿ.
8 ದೇವರ ಪವಿತ್ರಾತ್ಮದಿಂದ ಶಕ್ತಿಯುತನಾಗಿ ಯೇಸು ಪರಿಪೂರ್ಣ ಶರೀರ ಮತ್ತು ಮನಸ್ಸನ್ನು ಹೊಂದಿದ್ದ ಕಾರಣ ಅವನು ಭೂಮಿಯಲ್ಲಿ ಜೀವಿಸಿರುವವರಲ್ಲೇ ಅತ್ಯಂತ ಮಹಾ ಪುರುಷ ಮಾತ್ರವಲ್ಲ, ಮಹಾ ಬೋಧಕನೂ ಆಗಿದ್ದನು. ವಾಸ್ತವದಲ್ಲಿ ಅವನಿಗೆ ಕಿವಿಗೊಟ್ಟವರು ‘ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟರು.’ (ಮತ್ತಾ. 7:28) ಏಕೆಂದರೆ ಯೇಸು ಮಾನವಕುಲದ ಸಮಸ್ಯೆಗಳಾದ ಪಾಪ, ಅಪರಿಪೂರ್ಣತೆ ಮತ್ತು ದೇವರ ಕುರಿತು ಜನರಿಗಿರುವ ಅಜ್ಞಾನಕ್ಕೆ ಮೂಲಕಾರಣಗಳನ್ನು ವಿವರಿಸಶಕ್ತನಾಗಿದ್ದನು. ಅಲ್ಲದೆ ಜನರು ನಿಜವಾಗಿಯೂ ಆಂತರ್ಯದಲ್ಲಿ ಏನಾಗಿದ್ದರು ಎಂದು ಅರಿತುಕೊಂಡು ಅದಕ್ಕನುಸಾರ ಅವರನ್ನು ಉಪಚರಿಸಶಕ್ತನಾಗಿದ್ದನು.—ಮತ್ತಾ. 9:4; ಯೋಹಾ. 1:47.
9. ಭೂಮಿಯಲ್ಲಿ ಯೇಸುವಿಗಾದ ಅನುಭವಗಳನ್ನು ಯೋಚಿಸುವ ಮೂಲಕ ರಾಜನಾದ ಅವನಲ್ಲಿರುವ ನಿಮ್ಮ ಭರವಸೆಯು ಹೇಗೆ ಬಲಗೊಳ್ಳುತ್ತದೆ?
9 ಯೇಸು ಮನುಷ್ಯನಾಗಿ ಜೀವಿಸಿದನು. ಮನುಷ್ಯನಾಗಿ ಜೀವಿಸಿದಾಗ ದೊರೆತ ಅನುಭವ ಹಾಗೂ ಅಪರಿಪೂರ್ಣ ಜನರೊಂದಿಗೆ ಯೇಸುವಿಗಿದ್ದ ಆಪ್ತ ಸಹವಾಸವು ಅವನು ರಾಜನಾಗಲು ಅರ್ಹನಾಗುವಂತೆ ಹೆಚ್ಚಿನ ಸಹಾಯ ಕೊಟ್ಟಿತು. ಅಪೊಸ್ತಲ ಪೌಲನು ಬರೆದದ್ದು: “ಜನರ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವನ್ನು ನೀಡುವುದಕ್ಕೋಸ್ಕರ ದೇವರಿಗೆ ಸಂಬಂಧಿಸಿದ ವಿಷಯಗಳಲ್ಲಿ [ಯೇಸು] ಕರುಣಾಭರಿತನೂ ನಂಬಿಗಸ್ತನಾದ ಮಹಾ ಯಾಜಕನೂ ಆಗುವಂತೆ ಎಲ್ಲ ವಿಧಗಳಲ್ಲಿ ತನ್ನ ‘ಸಹೋದರರಿಗೆ’ ಸಮಾನನಾಗಬೇಕಾಯಿತು. ಪರೀಕ್ಷಿಸಲ್ಪಟ್ಟಾಗ ಅವನು ತಾನೇ ಕಷ್ಟವನ್ನು ಅನುಭವಿಸಿರುವುದರಿಂದ ಪರೀಕ್ಷಿಸಲ್ಪಡುವವರಿಗೆ ಸಹಾಯಮಾಡಲು ಅವನು ಶಕ್ತನಾಗಿದ್ದಾನೆ.” (ಇಬ್ರಿ. 2:17, 18) ಯೇಸು ಸ್ವತಃ ‘ಪರೀಕ್ಷಿಸಲ್ಪಟ್ಟದ್ದರಿಂದ’ ಪರೀಕ್ಷೆಗೆ ಒಳಪಡುತ್ತಿರುವವರಿಗೆ ಅವನು ಅನುತಾಪ ತೋರಿಸಶಕ್ತನು. ಯೇಸು ತೋರಿಸಿದ ಕನಿಕರವು ಆತನ ಭೂಶುಶ್ರೂಷೆಯ ಸಮಯದಲ್ಲಿ ಸ್ಪಷ್ಟವಾಗಿ ತೋರಿಬಂತು. ರೋಗಿಗಳು, ಅಂಗವಿಕಲರು ಮತ್ತು ದಬ್ಬಾಳಿಕೆಗೆ ಒಳಗಾದವರು ಹಾಗೂ ಮಕ್ಕಳು ಸಹ ನಿರಾತಂಕವಾಗಿ ಅವನನ್ನು ಸಮೀಪಿಸುತ್ತಿದ್ದರು. (ಮಾರ್ಕ 5:22-24, 38-42; 10:14-16) ನಮ್ರರೂ ಆಧ್ಯಾತ್ಮಿಕವಾಗಿ ಹಸಿದವರೂ ಕೂಡ ಅವನೆಡೆಗೆ ಸೆಳೆಯಲ್ಪಟ್ಟರು. ಇನ್ನೊಂದು ಕಡೆ, ದರ್ಪದವರು, ಅಹಂಕಾರಿಗಳು, ‘ದೇವರನ್ನು ಪ್ರೀತಿಸದವರು’ ಅವನನ್ನು ತಿರಸ್ಕರಿಸಿದರು, ದ್ವೇಷಿಸಿದರು, ವಿರೋಧಿಸಿದರು.—ಯೋಹಾ. 5:40-42; 11:47-53.
10. ಯಾವ ಮಹತ್ತಾದ ವಿಧದಲ್ಲಿ ಯೇಸು ನಮಗಾಗಿ ಪ್ರೀತಿ ತೋರಿಸಿದನು?
10 ಯೇಸು ನಮಗಾಗಿ ತನ್ನ ಜೀವವನ್ನೇ ಕೊಟ್ಟನು. ನಮಗಾಗಿ ಸಾಯಲು ಅವನಿಗಿದ್ದ ಸಿದ್ಧಮನಸ್ಸೇ ಅವನು ಅರಸನಾಗಿ ಆಳಲು ಅರ್ಹನೆಂಬುದಕ್ಕೆ ಮಹತ್ತಾದ ರುಜುವಾತು ಕೊಟ್ಟಿತು. (ಕೀರ್ತನೆ 40:6-10 ಓದಿ.) “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ” ಎಂದನು ಕ್ರಿಸ್ತನು. (ಯೋಹಾ. 15:13) ಹೌದು, ಹೆಚ್ಚಾಗಿ ತಮ್ಮ ಪ್ರಜೆಗಳ ವೆಚ್ಚದಿಂದ ಐಷಾರಾಮದ ಜೀವನ ನಡೆಸುವ ಅಪರಿಪೂರ್ಣ ಅರಸರಂತೆ ಯೇಸುವಿರಲಿಲ್ಲ. ಬದಲಿಗೆ ಅವನು ಮಾನವಕುಲಕ್ಕಾಗಿ ತನ್ನ ಸ್ವಂತ ಜೀವವನ್ನೇ ಅರ್ಪಿಸಿದನು.—ಮತ್ತಾ. 20:28.
ವಿಮೋಚನಾ ಮೌಲ್ಯದ ಪ್ರಯೋಜನವನ್ನು ಅನ್ವಯಿಸಶಕ್ತನು
11. ನಮ್ಮ ವಿಮೋಚಕನಾದ ಯೇಸುವಿನಲ್ಲಿ ನಾವೇಕೆ ಪೂರ್ಣ ಭರವಸೆಯನ್ನಿಡಬಲ್ಲೆವು?
11 ಯೇಸು ಮಹಾಯಾಜಕನಾಗಿ ತನ್ನ ವಿಮೋಚನಾ ಮೌಲ್ಯ ಯಜ್ಞದ ಪ್ರಯೋಜನಗಳನ್ನು ನಮಗೆ ಅನ್ವಯಿಸುವುದರಲ್ಲಿ ಮುಂದಾಳುತ್ವ ವಹಿಸುವುದು ಅದೆಷ್ಟು ಸೂಕ್ತ! ವಾಸ್ತವದಲ್ಲಿ ಅವನು ನಮ್ಮ ವಿಮೋಚಕನಾಗಿ ಸಹಸ್ರ ವರ್ಷದಾಳಿಕೆಯಲ್ಲಿ ಏನನ್ನು ಮಾಡಲಿರುವನು ಎಂಬುದರ ಮುನ್ನೋಟವನ್ನು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಕೊಟ್ಟನು. ನಾವು ನಂಬಿಗಸ್ತರಾಗಿದ್ದಲ್ಲಿ ಆ ಆಳಿಕೆಯಲ್ಲಿ ಆನಂದಿಸಬಲ್ಲೆವು. ಅವನು ರೋಗಿಗಳನ್ನು, ದೇಹ ದೌರ್ಬಲ್ಯವಿರುವವರನ್ನು ಗುಣಪಡಿಸಿದನು, ಸತ್ತವರನ್ನು ಎಬ್ಬಿಸಿದನು, ಜನಸಮೂಹಕ್ಕೆ ಊಟಕೊಟ್ಟನು, ನಿಸರ್ಗದ ಶಕ್ತಿಗಳನ್ನೂ ನಿಯಂತ್ರಿಸಿದನು. (ಮತ್ತಾ. 8:26; 14:14-21; ಲೂಕ 7:14, 15) ಅದಲ್ಲದೆ ಅವನು ಇವೆಲ್ಲವನ್ನು ಮಾಡಿದ್ದು ತನ್ನ ಅಧಿಕಾರ, ಶಕ್ತಿಯ ಪ್ರದರ್ಶನ ಮಾಡಲಿಕ್ಕಲ್ಲ, ಬದಲಾಗಿ ತನ್ನ ಕನಿಕರ, ಪ್ರೀತಿಯನ್ನು ತೋರಿಸಲಿಕ್ಕಾಗಿಯೇ. ಕುಷ್ಠರೋಗಿಯೊಬ್ಬನು ತನ್ನನ್ನು ವಾಸಿಮಾಡುವಂತೆ ಬೇಡಿಕೊಂಡಾಗ ಯೇಸು “ನನಗೆ ಮನಸ್ಸುಂಟು” ಎಂದು ಹೇಳಿ ಅವನನ್ನು ವಾಸಿಮಾಡಿದನು. (ಮಾರ್ಕ 1:40, 41) ಅಂಥ ಕನಿಕರವನ್ನು ಯೇಸು ತನ್ನ ಸಹಸ್ರ ವರ್ಷದಾಳಿಕೆಯ ಸಮಯದಲ್ಲೂ ತೋರಿಸುವನು, ಆದರೆ ಭೂವ್ಯಾಪಕ ಮಟ್ಟದಲ್ಲಿ!
12. ಯೆಶಾಯ 11:9 ಹೇಗೆ ನೆರವೇರಿಕೆಯನ್ನು ಹೊಂದುವುದು?
12 ಸುಮಾರು 2,000 ವರ್ಷಗಳ ಹಿಂದೆ ಯೇಸು ಆರಂಭಿಸಿದ್ದ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮವನ್ನು ಸಹ ಅವನು ಮತ್ತು ಅವನ ಜೊತೆ ಅರಸರು ಮುಂದುವರಿಸುವರು. ಹೀಗೆ ಯೆಶಾಯ 11:9ರಲ್ಲಿರುವ ಮಾತುಗಳು ನೆರವೇರಿಕೆಯನ್ನು ಹೊಂದುವವು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಆ ದೈವಿಕ ಶಿಕ್ಷಣ ಕಾರ್ಯಕ್ರಮದಲ್ಲಿ, ಆದಾಮನಿಗೆ ಆರಂಭದಲ್ಲಿ ಹೇಳಲಾದಂತೆ ಭೂಮಿಯನ್ನೂ ಅದರಲ್ಲಿರುವ ಅಸಂಖ್ಯಾತ ಜೀವಸಂಕುಲವನ್ನೂ ನೋಡಿಕೊಳ್ಳುವ ಕುರಿತ ಸೂಚನೆಗಳೂ ಸೇರಿರುವವು. ಆ 1,000 ವರ್ಷಗಳ ಅಂತ್ಯದೊಳಗೆ ಆದಿಕಾಂಡ 1:28ರಲ್ಲಿರುವ ದೇವರ ಮೂಲ ಉದ್ದೇಶವು ನೆರವೇರಿಕೆಯನ್ನು ಹೊಂದಿರುವುದು. ಮಾತ್ರವಲ್ಲ ವಿಮೋಚನಾ ಮೌಲ್ಯ ಯಜ್ಞವು ಪೂರ್ಣವಾಗಿ ಅನ್ವಯಿಸಲ್ಪಟ್ಟಿರುವುದು.
ನ್ಯಾಯತೀರಿಸುವ ಅಧಿಕಾರ
13. ಧರ್ಮನೀತಿಗಾಗಿ ತನ್ನ ಪ್ರೀತಿಯನ್ನು ಯೇಸು ತೋರಿಸಿದ್ದು ಹೇಗೆ?
13 ‘ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಿಸಲ್ಪಟ್ಟಿರುವವನು’ ಕ್ರಿಸ್ತನೇ. (ಅ. ಕಾ. 10:42) ಆದ್ದರಿಂದ ಯೇಸು ನಿರ್ಲಯನಾಗಿದ್ದಾನೆ, ಧರ್ಮನೀತಿ, ಪ್ರಾಮಾಣಿಕತೆಯನ್ನು ಬಲವಾದ ಸೊಂಟಪಟ್ಟಿಯಂತೆ ಕಟ್ಟಿರುತ್ತಾನೆ ಎಂದು ತಿಳಿಯುವುದು ಅದೆಷ್ಟು ಸಾಂತ್ವನಕರ! (ಯೆಶಾ. 11:5) ಅವನು ದುರಾಶೆ, ಕಪಟತನ, ಮತ್ತಿತರ ಕೆಟ್ಟತನಗಳನ್ನು ದ್ವೇಷಿಸಿದನು. ಪರರ ಕಷ್ಟಾನುಭವಗಳ ಕಡೆಗೆ ನಿರ್ಲಕ್ಷ್ಯ ತೋರಿಸಿದವರನ್ನು ಖಂಡಿಸಿದನು. (ಮತ್ತಾ. 23:1-8, 25-28; ಮಾರ್ಕ 3:5) ಅದಲ್ಲದೆ ಜನರ ಹೊರತೋರಿಕೆಯಿಂದ ತಾನು ಮೋಸಹೋಗಲಿಲ್ಲವೆಂದು ಯೇಸು ತೋರಿಸಿದನು. ಏಕೆಂದರೆ ಮನುಷ್ಯನ ಆಂತರ್ಯವನ್ನು ತಾನೆ ಅವನು ಬಲ್ಲಾತನಾಗಿದ್ದನು.—ಯೋಹಾ. 2:25.
14. ಯೇಸು ಧರ್ಮನೀತಿ ಮತ್ತು ನ್ಯಾಯದ ಕಡೆಗಿನ ತನ್ನ ಪ್ರೀತಿಯನ್ನು ಇಂದು ಹೇಗೆ ತೋರಿಸುತ್ತಿದ್ದಾನೆ? ನಾವು ಏನನ್ನು ಕೇಳಿಕೊಳ್ಳಬೇಕು?
14 ಜಗತ್ತಿನ ಇತಿಹಾಸದಲ್ಲೇ ಅತಿ ಮಹತ್ತಾದ ಸಾರುವಿಕೆ ಹಾಗೂ ಬೋಧಿಸುವಿಕೆಯ ಮೇಲ್ವಿಚಾರ ಮಾಡುವ ಮೂಲಕ ಯೇಸು ಧರ್ಮನೀತಿ ಮತ್ತು ನ್ಯಾಯಕ್ಕೆ ತನ್ನ ಪ್ರೀತಿಯನ್ನು ತೋರಿಸುತ್ತಾ ಇದ್ದಾನೆ. ಈ ಕಾರ್ಯವು ದೇವರಿಗೆ ಪೂರ್ಣ ತೃಪ್ತಿಯಾಗುವಷ್ಟರ ಮಟ್ಟಿಗೆ ಪೂರೈಸಲ್ಪಡುವುದನ್ನು ಯಾವ ಮನುಷ್ಯನಾಗಲಿ, ಯಾವ ಮಾನವ ಸರಕಾರವಾಗಲಿ, ಯಾವ ದುಷ್ಟ ಆತ್ಮಜೀವಿಯಾಗಲಿ ತಡೆಯಸಾಧ್ಯವಿಲ್ಲ! ಹೀಗೆ ಅರ್ಮಗೆದೋನ್ನ ನಂತರ ದೈವಿಕ ನ್ಯಾಯವು ಸದಾ ಇರುವುದೆಂಬ ವಿಷಯದಲ್ಲಿ ನಾವು ಪೂರ್ಣ ಆತ್ಮವಿಶ್ವಾಸದಿಂದ ಇರಬಲ್ಲೆವು. (ಯೆಶಾಯ 11:4; ಮತ್ತಾಯ 16:27 ಓದಿ.) ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಜನರ ಕಡೆಗೆ ಯೇಸು ತೋರಿಸಿದಂಥ ಮನೋಭಾವವನ್ನು ನಾನು ನನ್ನ ಶುಶ್ರೂಷೆಯಲ್ಲಿ ತೋರಿಸುತ್ತೇನೋ? ನನ್ನ ಆರೋಗ್ಯ ಅಥವಾ ವೈಯಕ್ತಿಕ ಸನ್ನಿವೇಶಗಳು ನನ್ನ ಸೇವೆಯನ್ನು ಸೀಮಿತಗೊಳಿಸಿದಾಗ್ಯೂ ನಾನು ಯೆಹೋವನಿಗೆ ನನ್ನ ಕೈಲಾದಷ್ಟನ್ನು ಕೊಡುತ್ತೇನೋ?’
15. ಯಾವುದನ್ನು ಮನಸ್ಸಿನಲ್ಲಿಡುವ ಮೂಲಕ ದೇವರಿಗೆ ನಮ್ಮ ಕೈಲಾದಷ್ಟನ್ನು ಕೊಡಲು ನಮಗೆ ಸಹಾಯವಾಗುವುದು?
15 ಸಾರುವ ಕೆಲಸವು ದೇವರು ನೇಮಿಸಿದ ಕೆಲಸವೆಂದು ನಾವು ಮನಸ್ಸಿನಲ್ಲಿಡುವಲ್ಲಿ ಪೂರ್ಣಪ್ರಾಣದಿಂದ ಆತನ ಸೇವೆಮಾಡುವೆವು. ಅದನ್ನು ಆಜ್ಞಾಪಿಸಿದವನು ಆತನೇ; ತನ್ನ ಮಗನ ಮೂಲಕವಾಗಿ ಆ ಕೆಲಸವನ್ನು ಆತನು ಮಾರ್ಗದರ್ಶಿಸುತ್ತಿದ್ದಾನೆ ಮತ್ತು ಅದರಲ್ಲಿ ಭಾಗವಹಿಸುವವರಿಗೆ ಪವಿತ್ರಾತ್ಮದ ಮೂಲಕ ಶಕ್ತಿಯನ್ನು ಕೊಡುತ್ತಾನೆ. ದೇವರ ಜೊತೆಕೆಲಸದವರಾಗಿ ಆತನ ಆತ್ಮನಿರ್ದೇಶಿತ ಪುತ್ರನೊಂದಿಗೆ ಸೇವೆಮಾಡುವ ಸುಯೋಗವನ್ನು ನೀವು ನೆಚ್ಚುತ್ತೀರೋ? 70 ಲಕ್ಷಕ್ಕಿಂತಲೂ ಹೆಚ್ಚು ಜನರು 236 ದೇಶಗಳಲ್ಲಿ ರಾಜ್ಯ ಸಂದೇಶವನ್ನು ಸಾರುವಂತೆ ಪ್ರೇರಿಸಶಕ್ತನು ಯೆಹೋವನಲ್ಲದೆ ಬೇರೆ ಯಾರು? ಅವರಲ್ಲಿ ಹೆಚ್ಚಿನವರು “ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳೆಂದು” ಪರಿಗಣಿಸಲಾದರೂ ಆತನು ಅವರನ್ನು ಪ್ರೇರಿಸುತ್ತಿದ್ದಾನೆ.—ಅ. ಕಾ. 4:13.
ಕ್ರಿಸ್ತನ ಮೂಲಕ ಆಶೀರ್ವಾದಗಳನ್ನು ಪಡೆಯಿರಿ!
16. ಆದಿಕಾಂಡ 22:18 ದೇವರ ಆಶೀರ್ವಾದದ ಕುರಿತು ಏನನ್ನು ಸೂಚಿಸುತ್ತದೆ?
16 ಯೆಹೋವನು ಅಬ್ರಹಾಮನಿಗೆ ಹೇಳಿದ್ದು: “ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿ. 22:18) ಈ ವಚನ ಸೂಚಿಸುವ ಮೇರೆಗೆ ದೇವರ ಮತ್ತು ಕ್ರಿಸ್ತನ ಸೇವೆಯನ್ನು ಗಣ್ಯಮಾಡುವ ಜನರು ಮೆಸ್ಸೀಯ ಸಂತಾನವು ತರುವ ಆಶೀರ್ವಾದಗಳನ್ನು ಭರವಸೆಯಿಂದ ಮುನ್ನೋಡಬಲ್ಲರು. ಅಲ್ಲದೆ ಆ ಆಶೀರ್ವಾದಗಳನ್ನು ಮನಸ್ಸಿನಲ್ಲಿಟ್ಟವರಾಗಿ ಅವರು ಕ್ರಿಯಾಸಕ್ತಿಯಿಂದ ಇಂದು ದೇವರನ್ನು ಸೇವಿಸುತ್ತಾರೆ.
17, 18. ಯೆಹೋವನ ಯಾವ ವಾಗ್ದಾನವನ್ನು ಧರ್ಮೋಪದೇಶಕಾಂಡ 28:2ರಲ್ಲಿ ನಾವು ಓದುತ್ತೇವೆ? ಅದು ನಮಗೆ ಹೇಗೆ ಅನ್ವಯಿಸುತ್ತದೆ?
17 ಅಬ್ರಹಾಮನ ಮಾಂಸಿಕ ಸಂತಾನವಾದ ಇಸ್ರಾಯೇಲ್ ಜನಾಂಗಕ್ಕೆ ದೇವರು ಒಮ್ಮೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ [ಧರ್ಮಶಾಸ್ತ್ರದಲ್ಲಿ ತಿಳಿಸಲಾದ] ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು.” (ಧರ್ಮೋ. 28:2) ಇಂದಿನ ದೇವರ ಸೇವಕರಿಗೂ ಅದನ್ನೇ ಹೇಳಸಾಧ್ಯವಿದೆ. ಯೆಹೋವನ ಆಶೀರ್ವಾದವನ್ನು ನೀವು ಹೊಂದಬೇಕಾದರೆ ಸದಾ ಆತನ ಮಾತಿಗೆ ‘ಕಿವಿಗೊಟ್ಟು ನಡೆಯಿರಿ.’ ಆಗ ಆತನ ಆಶೀರ್ವಾದಗಳು “ನಿಮಗೆ ಪ್ರಾಪ್ತವಾಗುವವು.” ಹಾಗಾದರೆ ‘ಕಿವಿಗೊಟ್ಟು ನಡೆಯುವುದು’ ಅಂದರೇನು?
18 ಏನೆಂದರೆ ದೇವರ ವಾಕ್ಯದಲ್ಲಿ ಹೇಳಿರುವುದನ್ನು ಮತ್ತು ಆತನು ಒದಗಿಸುವ ಆಧ್ಯಾತ್ಮಿಕ ಆಹಾರವನ್ನು ಹೃತ್ಪೂರ್ವಕವಾಗಿ ಸ್ವೀಕರಿಸುವುದಾಗಿದೆ. (ಮತ್ತಾ. 24:45) ದೇವರಿಗೂ ಆತನ ಪುತ್ರನಿಗೂ ವಿಧೇಯರಾಗುವ ಅರ್ಥವೂ ಅದಕ್ಕಿದೆ. ಯೇಸು ಅಂದದ್ದು: “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು.” (ಮತ್ತಾ. 7:21) ದೇವರಿಗೆ ಕಿವಿಗೊಡುವುದು ಅಂದರೆ ಆತನು ಮಾಡಿರುವ ಏರ್ಪಾಡಿಗೆ ನಮ್ಮನ್ನು ಸಿದ್ಧಮನಸ್ಸಿನಿಂದ ಅಧೀನಪಡಿಸಿಕೊಳ್ಳುವುದೂ ಆಗಿದೆ. ಆ ಏರ್ಪಾಡೇ ‘ಮನುಷ್ಯರಲ್ಲಿ ದಾನಗಳಾಗಿರುವ’ ನೇಮಿತ ಹಿರಿಯರಿರುವ ಕ್ರೈಸ್ತ ಸಭೆ.—ಎಫೆ. 4:8.
19. ನಾವು ಹೇಗೆ ಆಶೀರ್ವಾದವನ್ನು ಹೊಂದಸಾಧ್ಯವಿದೆ?
19 ‘ಮನುಷ್ಯರಲ್ಲಿ ದಾನಗಳಾದ’ ಅವರಲ್ಲಿ ಆಡಳಿತ ಮಂಡಲಿಯ ಸದಸ್ಯರೂ ಸೇರಿರುತ್ತಾರೆ. ಇವರು ಇಡೀ ಕ್ರೈಸ್ತ ಸಭೆಯ ಪ್ರತಿನಿಧಿಗಳೋಪಾದಿ ಕಾರ್ಯನಡಿಸುತ್ತಾರೆ. (ಅ. ಕಾ. 15:2, 6) ವಾಸ್ತವದಲ್ಲಿ ಕ್ರಿಸ್ತನ ಆಧ್ಯಾತ್ಮಿಕ ಸಹೋದರರ ಕಡೆಗೆ ನಮಗಿರುವ ಮನೋಭಾವವು ಬರಲಿರುವ ಮಹಾಸಂಕಟದ ಸಮಯದಲ್ಲಿ ನಮಗೆ ಹೇಗೆ ನ್ಯಾಯತೀರ್ಪಾಗುವುದು ಎಂಬುದನ್ನು ನಿರ್ಧರಿಸುವ ಮುಖ್ಯ ಅಂಶ. (ಮತ್ತಾ. 25:34-40) ಆದ್ದರಿಂದ, ನಾವು ಆಶೀರ್ವಾದವನ್ನು ಹೊಂದುವ ಒಂದು ವಿಧವು ದೇವರ ಅಭಿಷಿಕ್ತ ಜನರಿಗೆ ನಿಷ್ಠೆಯ ಬೆಂಬಲವನ್ನು ಕೊಡುವ ಮೂಲಕವೇ.
20. (ಎ) “ಮನುಷ್ಯರಲ್ಲಿ ದಾನಗಳ” ಮುಖ್ಯ ಜವಾಬ್ದಾರಿ ಯಾವುದು? (ಬಿ) ಈ ಸಹೋದರರನ್ನು ನಾವು ಗಣ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು?
20 ಬ್ರಾಂಚ್ ಕಮಿಟಿಯ ಸದಸ್ಯರು, ಸಂಚರಣ ಮೇಲ್ವಿಚಾರಕರು ಮತ್ತು ಸಭಾ ಹಿರಿಯರು ಸಹ ‘ಮನುಷ್ಯರಲ್ಲಿ ದಾನಗಳಾಗಿದ್ದಾರೆ.’ ಇವರೆಲ್ಲರೂ ಪವಿತ್ರಾತ್ಮದಿಂದ ನೇಮಿಸಲ್ಪಟ್ಟವರು. (ಅ. ಕಾ. 20:28) ಈ ಸಹೋದರರ ಪ್ರಮುಖ ಜವಾಬ್ದಾರಿಯೆಂದರೆ, “[ದೇವಜನರೆಲ್ಲರು] ನಂಬಿಕೆಯಲ್ಲಿಯೂ ದೇವಕುಮಾರನ ಕುರಿತಾದ ನಿಷ್ಕೃಷ್ಟ ಜ್ಞಾನದಲ್ಲಿಯೂ ಏಕತೆಯನ್ನು ಹೊಂದಿ ಪೂರ್ಣವಾಗಿ ಬೆಳೆದ ಮನುಷ್ಯರಾಗಿ ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು ಮುಟ್ಟುವ ತನಕ” ಅವರ ಭಕ್ತಿವೃದ್ಧಿ ಮಾಡುವುದೇ. (ಎಫೆ. 4:13) ನಮ್ಮಂತೆಯೇ ಅವರು ಸಹ ಅಪರಿಪೂರ್ಣರು ನಿಜ. ಆದರೆ ನಾವು ಅವರ ಪ್ರೀತಿಪೂರ್ಣ ಪರಿಪಾಲನೆಗೆ ಗಣ್ಯತೆಯಿಂದ ಪ್ರತಿಕ್ರಿಯಿಸುವಾಗ ಆಶೀರ್ವಾದವನ್ನು ಹೊಂದುವೆವು.—ಇಬ್ರಿ. 13:7, 17.
21. ದೇವರ ಪುತ್ರನಿಗೆ ನಾವು ವಿಧೇಯರಾಗುವುದು ಏಕೆ ಅಷ್ಟು ಜರೂರಿ?
21 ಶೀಘ್ರದಲ್ಲೇ ಕ್ರಿಸ್ತನು ಸೈತಾನನ ದುಷ್ಟ ಲೋಕದ ವಿರುದ್ಧ ಕ್ರಿಯೆಗೈಯುವನು. ಅದು ಸಂಭವಿಸುವಾಗ ನಮ್ಮ ಜೀವಗಳು ಯೇಸುವಿನ ಹಸ್ತದಲ್ಲಿರುವವು. ಏಕೆಂದರೆ ಮುಂತಿಳಿಸಲಾದ ‘ಮಹಾ ಸಮೂಹವನ್ನು’ “ಜೀವಜಲದ ಒರತೆಗಳ ಬಳಿಗೆ” ನಡಿಸುವಂತೆ ದೇವರು ಅವನಿಗೆ ಅಧಿಕಾರ ಕೊಟ್ಟಿರುತ್ತಾನೆ. (ಪ್ರಕ. 7:9, 16, 17) ಆದ್ದರಿಂದ ಯೆಹೋವನ ಆತ್ಮನಿರ್ದೇಶಿತ ರಾಜನಿಗೆ ಮನಃಪೂರ್ವಕವಾಗಿಯೂ ಕೃತಜ್ಞತೆಯಿಂದಲೂ ಅಧೀನರಾಗಿರಲು ನಾವು ನಮ್ಮ ಕೈಲಾದದ್ದೆಲ್ಲವನ್ನು ಮಾಡೋಣ.
ಈ ವಚನಗಳಿಂದ ನೀವೇನು ಕಲಿತಿರಿ?
[ಪುಟ 17ರಲ್ಲಿರುವ ಚಿತ್ರ]
ಯಾಯೀರನ ಮಗಳನ್ನು ಪುನರುತ್ಥಾನ ಮಾಡಿದಾಗ ಯೇಸುವಿನ ಕನಿಕರವು ತೋರಿಬಂತು
[ಪುಟ 18ರಲ್ಲಿರುವ ಚಿತ್ರಗಳು]
ಇತಿಹಾಸದಲ್ಲೇ ಮಹತ್ತಾದ ಸಾರುವ ಚಟುವಟಿಕೆಯ ಮೇಲ್ವಿಚಾರವನ್ನು ಯೇಸು ಕ್ರಿಸ್ತನು ನಡೆಸುತ್ತಿದ್ದಾನೆ