ದೇವರ ಸಮೀಪಕ್ಕೆ ಬನ್ನಿರಿ
ಯೆಹೋವನು ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ
“ಯೆಹೋವನಿಗೆ ನಾನು ನಂಬಿಗಸ್ತಳಾಗಿ ಉಳಿಯಲಿಕ್ಕಿಲ್ಲ ಎಂಬ ಭಯ ನನ್ನನ್ನು ವಿನಾ ಕಾರಣ ಕಾಡುತ್ತಿತ್ತು” ಎಂದು ಒಬ್ಬಾಕೆ ಕ್ರೈಸ್ತ ಸ್ತ್ರೀ ಹೇಳಿದಳು. ಬಾಲ್ಯದ ಕಹಿ ಅನುಭವಗಳಿಂದಾಗಿ, ತಾನು ಏನೇ ಮಾಡಿದರೂ ಸೋಲು ಕಟ್ಟಿಟ್ಟ ಬುತ್ತಿ ಎಂಬ ಅನಿಸಿಕೆ ಅವಳನ್ನು ಆವರಿಸಿತ್ತು. ಅವಳು ನೆನಸಿದಂತೆ, ನಾವು ಪರಿಸ್ಥಿತಿಯ ಕೈಗೊಂಬೆಯಾಗಿ ಏನೂ ಮಾಡಲಾಗದಷ್ಟು ಅಸಹಾಯಕರೋ? ಖಂಡಿತ ಇಲ್ಲ. ಯೆಹೋವ ದೇವರು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ವರ ಕೊಟ್ಟಿದ್ದಾನೆ. ಆದ್ದರಿಂದ ಹೇಗೆ ಬದುಕಬೇಕೆಂಬ ಆಯ್ಕೆಯನ್ನು ನಾವೇ ಮಾಡಬಹುದು. ಆದರೆ ಸರಿಯಾದ ಆಯ್ಕೆಗಳನ್ನೇ ಮಾಡಬೇಕೆಂಬುದು ಯೆಹೋವನ ಇಚ್ಛೆ. ಅದನ್ನು ಮಾಡುವುದು ಹೇಗೆಂದು ಆತನ ವಾಕ್ಯವಾದ ಬೈಬಲ್ ತಿಳಿಸುತ್ತದೆ. ಆ ಬಗ್ಗೆ ಬೈಬಲಿನ ಧರ್ಮೋಪದೇಶಕಾಂಡ ಪುಸ್ತಕದ 30ನೇ ಅಧ್ಯಾಯದಲ್ಲಿ ದೇವಭಕ್ತ ಮೋಶೆ ಹೇಳಿರುವ ಮಾತುಗಳನ್ನು ನಾವೀಗ ಪರಿಗಣಿಸೋಣ.
ದೇವರು ನಮ್ಮಿಂದ ಕೇಳಿಕೊಳ್ಳುವ ವಿಷಯಗಳನ್ನು ತಿಳಿದುಕೊಂಡು ಅದರಂತೆ ನಡೆಯುವುದು ತುಂಬ ಕಷ್ಟಕರವೋ?a “ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶವು ನಿಮಗೆ ಗ್ರಹಿಸುವದಕ್ಕೆ ಕಷ್ಟವಾದದ್ದೂ ಅಲ್ಲ, ಹೊಂದುವದಕ್ಕೆ ಅಸಾಧ್ಯವಾದದ್ದೂ ಅಲ್ಲ” ಎಂದು ಮೋಶೆ ಹೇಳಿದನು. (ವಚನ 11) ಯೆಹೋವನೆಂದೂ ನಮ್ಮ ಕೈಲಾಗದ್ದನ್ನು ಮಾಡಲು ಹೇಳುವುದಿಲ್ಲ. ಆತನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳು ಅತಿರೇಕದ್ದೂ ಅಲ್ಲ, ಮಾಡಲು ಅಸಾಧ್ಯವಾದದ್ದೂ ಅಲ್ಲ. ಅಲ್ಲದೆ ಆ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಲ್ಲೆವು. ಅದಕ್ಕಾಗಿ ನಾವು “ಮೇಲಣ ಲೋಕವನ್ನು ಏರಿ” ಹೋಗಬೇಕಾಗಿಲ್ಲ ಅಥವಾ “ಸಮುದ್ರದ ಆಚೆ” ಪ್ರಯಾಣಿಸಬೇಕಾಗಿಲ್ಲ. (ವಚನಗಳು 12, 13) ನಾವು ಹೇಗೆ ಜೀವಿಸಬೇಕೆಂಬದನ್ನು ಬೈಬಲ್ ಸರಳವಾಗಿ ತಿಳಿಸಿಕೊಡುತ್ತದೆ.—ಮೀಕ 6:8.
ಆದರೆ ನಾವು ವಿಧೇಯರಾಗಲೇಬೇಕೆಂದು ಯೆಹೋವನು ಒತ್ತಾಯಿಸುವುದಿಲ್ಲ. ಆತನು ಮೋಶೆ ಮುಖಾಂತರ ಹೇಳಿದ್ದು: “ನಾನು ಜೀವಶುಭಗಳನ್ನೂ ಮರಣಾಶುಭಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ.” (ವಚನ 15) ಜೀವ-ಮರಣ, ಶುಭ-ಅಶುಭ ಯಾವುದನ್ನು ಬೇಕಾದರೂ ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಒಂದೋ, ನಾವು ದೇವರನ್ನು ಆರಾಧಿಸಿ ಆತನಿಗೆ ವಿಧೇಯರಾಗುವ ಆಯ್ಕೆಮಾಡಿ ಆಶೀರ್ವಾದಗಳನ್ನು ಪಡೆಯಬಹುದು ಇಲ್ಲವೆ ಆತನಿಗೆ ಅವಿಧೇಯರಾಗುವ ಆಯ್ಕೆಮಾಡಿ ಅದರ ಕೆಟ್ಟ ಪರಿಣಾಮಗಳನ್ನು ಅನುಭವಿಸಬಹುದು. ಆಯ್ಕೆ ನಮ್ಮ ಕೈಯಲ್ಲಿದೆ.—ವಚನಗಳು 16-18; ಗಲಾತ್ಯ 6:7, 8.
ನಾವು ಯಾವ ಆಯ್ಕೆ ಮಾಡುತ್ತೇವೆಂಬ ವಿಷಯದಲ್ಲಿ ಯೆಹೋವನಿಗೆ ಆಸಕ್ತಿಯಿದೆಯೋ? ಖಂಡಿತ ಇದೆ! “ಜೀವವನ್ನೇ ಆದುಕೊಳ್ಳಿರಿ” ಎಂದನು ಮೋಶೆ ದೇವಪ್ರೇರಣೆಯಿಂದ. (ವಚನ 19) ಆದರೆ ನಾವು ಜೀವವನ್ನು ಆದುಕೊಳ್ಳುವುದು ಹೇಗೆ? ಮೋಶೆ ಹೇಳಿದ್ದು: “ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ.” (ವಚನ 20) ನಾವು ಯೆಹೋವನನ್ನು ಪ್ರೀತಿಸುವುದಾದರೆ ಆತನ ಮಾತಿಗೆ ವಿಧೇಯರಾಗುವ ಮನಸ್ಸು ನಮಗಿರುತ್ತದೆ ಮತ್ತು ಏನೇ ಕಷ್ಟ ಬಂದರೂ ಆತನಿಗೆ ನಿಷ್ಠರಾಗಿರುತ್ತೇವೆ. ಹೀಗೆ ನಾವು ಜೀವವನ್ನು ಆದುಕೊಳ್ಳುತ್ತೇವೆ. ಇದು ಈಗ ಅತ್ಯುತ್ತಮವಾದ ಜೀವನ ರೀತಿಯಾಗಿದೆ. ಅದರೊಂದಿಗೆ ಭವಿಷ್ಯತ್ತಿನಲ್ಲಿ ದೇವರು ತರಲಿರುವ ಹೊಸ ಲೋಕದಲ್ಲಿ ಶಾಶ್ವತ ಜೀವನದ ಪ್ರತೀಕ್ಷೆಯೂ ಸೇರಿದೆ.—2 ಪೇತ್ರ 3:11-13; 1 ಯೋಹಾನ 5:3.
ಮೋಶೆಯ ಮಾತುಗಳು ಭರವಸೆ ಕೊಡುವ ಸತ್ಯವೊಂದನ್ನು ಕಲಿಸುತ್ತವೆ. ಈ ದುಷ್ಟ ಲೋಕದಲ್ಲಿ ನಿಮಗೆ ಯಾವುದೇ ಕಹಿ ಅನುಭವವಾಗಿದ್ದರೂ ನೀವು ಅಸಹಾಯಕರಲ್ಲ. ಸೋಲು ನಿಮಗೆ ಕಟ್ಟಿಟ್ಟ ಬುತ್ತಿಯಲ್ಲ. ಯೆಹೋವನು ಇಚ್ಛಾಸ್ವಾತಂತ್ರ್ಯ ಎಂಬ ವರ ಕೊಟ್ಟು ನಿಮ್ಮನ್ನು ಗೌರವಿಸಿದ್ದಾನೆ. ಆದ್ದರಿಂದ ಯೆಹೋವನನ್ನು ಪ್ರೀತಿಸುವ, ಆತನಿಗೆ ವಿಧೇಯರಾಗುವ ಮತ್ತು ನಿಷ್ಠರಾಗಿ ಉಳಿಯುವ ಆಯ್ಕೆ ನಿಮಗೆ ಬಿಟ್ಟದ್ದು. ಆ ಆಯ್ಕೆಮಾಡುವಲ್ಲಿ ಆತನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು.
ಯೆಹೋವನನ್ನು ಪ್ರೀತಿಸಿ ಆತನ ಸೇವೆಮಾಡುವ ಆಯ್ಕೆಯನ್ನು ಆತನು ನಮಗೇ ಬಿಟ್ಟಿದ್ದಾನೆ ಎಂಬ ಸತ್ಯವು ಆರಂಭದಲ್ಲಿ ತಿಳಿಸಲಾದ ಸ್ತ್ರೀಗೆ ತುಂಬ ಸಾಂತ್ವನ ಕೊಟ್ಟಿತು. ಅವಳು ಹೇಳುವುದು: “ಯೆಹೋವನಿಗೆ ನಂಬಿಗಸ್ತಳಾಗಿ ಉಳಿಯಲು ಆತನ ಮೇಲೆ ನನಗಿರುವ ಪ್ರೀತಿಯೇ ಅತಿ ಪ್ರಾಮುಖ್ಯ ಎಂಬದನ್ನು ನಾನು ಕೆಲವೊಮ್ಮೆ ಮರೆತುಬಿಟ್ಟದ್ದುಂಟು. ನಾನು ನಿಜವಾಗಿಯೂ ಯೆಹೋವನನ್ನು ಪ್ರೀತಿಸುವುದರಿಂದ ಖಂಡಿತ ನಂಬಿಗಸ್ತಳಾಗಿ ಉಳಿಯಬಲ್ಲೆ.” ಯೆಹೋವನ ಸಹಾಯದಿಂದ ನೀವೂ ಆತನಿಗೆ ನಂಬಿಗಸ್ತರಾಗಿರಬಲ್ಲಿರಿ. (w09-E 11/01)
[ಪಾದಟಿಪ್ಪಣಿ]
a ಇದೇ ಸಂಚಿಕೆಯ ಪುಟ 16ರಲ್ಲಿರುವ “ದೇವರ ಸಮೀಪಕ್ಕೆ ಬನ್ನಿರಿ—ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?” ಲೇಖನ ನೋಡಿ.