ಸಮಸ್ಯೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಒಂದು ಪಾಠ
ಯೋಬನಿಗಿದ್ದಷ್ಟು ಸಮಸ್ಯೆಗಳನ್ನು ನಿಭಾಯಿಸಲು ಎಂದಾದರೂ ಇದ್ದದ್ದು ಕೊಂಚ ಜನರಿಗೆ ಮಾತ್ರ. ತುಸು ಕಾಲಾವಧಿಯೊಳಗೆ, ಅವನು ತನ್ನ ಐಶ್ಚರ್ಯ ಮತ್ತು ಜೀವನೋಪಾಯದ ನಷ್ಟದಿಂದ, ಅವನ ಮಕ್ಕಳೆಲ್ಲರ ಆಕಸ್ಮಿಕ ನಿಧನದಿಂದ, ಮತ್ತು ಕೊನೆಗೆ ಒಂದು ಅತಿ ವೇದನಾಮಯ ವ್ಯಾಧಿಯಿಂದ ಜರ್ಜರಿತನಾಗಿ ಹೋಗಿದ್ದನು. ಸ್ನೇಹಿತರು ಮತ್ತು ಸಂಬಂಧಿಕರಿಂದ ಬಹಿಷ್ಕರಿಸಲ್ಪಟ್ಟ ಅವನು, ತನ್ನ ಪತ್ನಿಯಿಂದ, “ದೇವರನ್ನು ದೂಷಿಸಿ ಸಾಯಿ” ಎಂದು ಪ್ರಚೋದಿಸಲ್ಪಟ್ಟನು.—ಯೋಬ 2:9; 19:13, 14.
ಆದಾಗ್ಯೂ ಯೋಬನು, ತದ್ರೀತಿಯ ಸಂಕಟಗಳನ್ನು ಅನುಭವಿಸುವ ಯಾವನಿಗಾದರೂ ಉತ್ತೇಜನದ ಒಂದು ಅಪೂರ್ವ ಮೂಲವಾಗಿದ್ದಾನೆ. ಅವನ ಸಂಕಷ್ಟದ ಸಕಾರಾತ್ಮಕ ಅಂತ್ಯಫಲವು ತೋರಿಸುತ್ತದೇನಂದರೆ ವೈಯಕ್ತಿಕ ಸ್ವಾರ್ಥಪರ ಪ್ರಯೋಜನಗಳ ಬದಲಾಗಿ ನಿಜವಾದ ದಿವ್ಯ ಭಕ್ತಿಯಿಂದ ನಾವು ಪ್ರೇರಿಸಲ್ಪಡುವಾಗ, ಆಪತ್ತುಗಳ ಎದುರಲ್ಲಿ ತಾಳ್ಮೆಯು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತದೆ.—ಯೋಬ, ಅಧ್ಯಾಯಗಳು 1, 2; 42:10-17; ಜ್ಞಾನೋಕ್ತಿ 27:11.
ಈ ಬೈಬಲ್ ವೃತ್ತಾಂತದಲ್ಲಿ ಸಮಸ್ಯೆಗಳನ್ನು ನಿರ್ವಹಿಸುವ ವಿಧಾನದ ಕುರಿತಾದ ಬೆಲೆಯುಳ್ಳ ಪಾಠಗಳೂ ಅಡಕವಾಗಿವೆ. ಸಂಕಷ್ಟಗಳನ್ನು ಎದುರಿಸುತ್ತಿರುವ ಒಬ್ಬನಿಗೆ ಹೇಗೆ ಬುದ್ಧಿವಾದ ನೀಡಲ್ಪಡಬೇಕು—ಮತ್ತು ಹೇಗೆ ನೀಡಲ್ಪಡಬಾರದು—ಎಂಬ ಗಮನಾರ್ಹ ಮಾದರಿಗಳನ್ನು ಅದು ಒದಗಿಸುತ್ತದೆ. ಅದಲ್ಲದೆ, ನಾವು ನಮ್ಮನ್ನು ಪ್ರತಿಕೂಲ ಪರಿಸ್ಥಿತಿಗಳಿಂದ ಪೀಡಿತರಾಗುವುದನ್ನು ಕಾಣುವಾಗ, ಸಮತೆಯಿಂದ ಪ್ರತಿಕ್ರಿಯೆದೋರುವಂತೆ ಯೋಬನ ಸ್ವಂತ ಉದಾಹರಣೆಯು ನಮಗೆ ಸಹಾಯಮಾಡಬಲ್ಲದು.
ನಕಾರಾತ್ಮಕ ಸಲಹೆನೀಡುವುದರಲ್ಲಿ ಒಂದು ಪಾಠ
“ಯೋಬನ ಸಾಂತ್ವನಗಾರ” ಎಂಬ ಅಭಿವ್ಯಕ್ತಿಯು, ಯಾರು ದುರವಸ್ಥೆಯ ಸಮಯದಲ್ಲಿ ಅನುಕಂಪ ತೋರಿಸುವ ಬದಲಾಗಿ ಗಾಯಕ್ಕೆ ಉಪ್ಪುಬಳಿಯುತ್ತಾನೊ ಆ ವ್ಯಕ್ತಿಯೊಂದಿಗೆ ಸಮಾನಾರ್ಥಕವಾಗಿದೆ. ಆದರೆ ಯೋಬನ ಮೂವರು ಸಂಗಡಿಗರು ತಮ್ಮ ಅರ್ಹತೆಗೆ ತಕ್ಕಂತೆ ಕೀರ್ತಿಗಳಿಸಿದರೂ, ಅವರ ಹೇತುಗಳೆಲ್ಲವೂ ತಪ್ಪಾಗಿದ್ದವೆಂದು ನಾವು ಊಹಿಸಕೂಡದು. ತಮ್ಮ ತಪ್ಪಾದ ನೋಟಗಳಿಗೆ ಅನುಗುಣವಾಗಿ, ಅವರು ಯೋಬನಿಗೆ ಸ್ವಲ್ಪ ಮಟ್ಟಿಗೆ ಸಹಾಯವನ್ನು ನೀಡಲು ಬಯಸಿದ್ದಿರಬೇಕು. ಅವರು ವಿಫಲರಾದದ್ದು ಹೇಗೆ? ಅವರು ಯೋಬನ ಸಮಗ್ರತೆಯನ್ನು ಮುರಿಯಲು ದೃಢನಿಶ್ಚಯ ಮಾಡಿದ ಸೈತಾನನ ಸಾಧನಗಳಾದದ್ದು ಹೇಗೆ?
ಒಳ್ಳೇದು, ಅವರು ಕಾರ್ಯತಃ ತಮ್ಮೆಲ್ಲ ಬುದ್ಧಿವಾದವನ್ನು, ಪಾಪ ಮಾಡಿದವರಿಗೆ ಮಾತ್ರ ಕಷ್ಟ ಬರುತ್ತದೆ ಎಂಬ ತಪ್ಪು ಕಲ್ಪನೆಯ ಮೇಲೆ ಆಧರಿಸಿದರು. ತನ್ನ ಮೊದಲನೆಯ ಭಾಷಣದಲ್ಲಿ, ಎಲೀಫಜನು ಹೇಳಿದ್ದು: “ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ, ಯಥಾರ್ಥರು ಅಳಿದುಹೋದದ್ದೆಲ್ಲಿ? ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು.” (ಯೋಬ 4:7, 8) ನಿರಪರಾಧಿಗಳಿಗೆ ವಿಪತ್ತು ತಟ್ಟದು ಎಂಬದಾಗಿ ಎಲೀಫಜನು ತಪ್ಪಭಿಪ್ರಾಯಪಟ್ಟನು. ಯೋಬನು ತೀವ್ರ ದುಸ್ಥಿತಿಗೆ ಬಿದ್ದಿರಲಾಗಿ, ಅವನು ದೇವರ ವಿರುದ್ಧವಾಗಿ ಪಾಪ ಮಾಡಿರಲೇಬೇಕೆಂದು ಅವನು ತರ್ಕಿಸಿದನು.a ಬಿಲ್ದದ್ ಮತ್ತು ಚೋಫರ ಇಬ್ಬರೂ ಯೋಬನು ತನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಡುವಂತೆ ತದ್ರೀತಿ ಒತ್ತಾಯ ಮಾಡಿದರು.—ಯೋಬ 8:5, 6; 11:13-15.
ಯೋಬನ ಮೂವರು ಸಂಗಡಿಗರು ದಿವ್ಯ ಜ್ಞಾನದ ಬದಲಾಗಿ ವ್ಯಕ್ತಿಪರ ವಿಚಾರಗಳನ್ನು ವ್ಯಕ್ತಪಡಿಸಿದ ಮೂಲಕ ಅವನನ್ನು ಇನ್ನಷ್ಟು ಎದೆಗುಂದಿಸಿದರು. ಎಲೀಫಜನು, ‘ದೇವರಿಗೆ ಆತನ ಸೇವಕರಲ್ಲಿ ನಂಬಿಕೆಯಿಲ್ಲ’ ವೆಂದೂ ಮತ್ತು ಯೋಬನು ನೀತಿವಂತನಿರಲಿ ಇಲ್ಲದಿರಲಿ, ಅದು ನಿಜವಾಗಿ ಯೆಹೋವನಿಗೆ ಪ್ರಾಮುಖ್ಯವಲ್ಲ ಎಂದು ಹೇಳುವಷ್ಟರ ಮಟ್ಟಿಗೂ ಹೋದನು. (ಯೋಬ 4:18; 22:2, 3) ಇದಕ್ಕಿಂತ ಹೆಚ್ಚು—ನಿರುತ್ತೇಜನಕರ—ಅಥವಾ ಹೆಚ್ಚು ಅಸತ್ಯವಾದ ಮಾತನ್ನು ಊಹಿಸುವುದೂ ಕಷ್ಟ! ಯೆಹೋವನು ಎಲೀಫಜನನ್ನು ಮತ್ತು ಅವನ ಸಂಗಡಿಗರನ್ನು ಈ ದೂಷಣೆಗಾಗಿ ತದನಂತರ ಖಂಡಿಸಿದ್ದೇನೂ ಆಶ್ಚರ್ಯವಲ್ಲ. “[ಯೋಬನು] ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ” ಎಂದನಾತನು. (ಯೋಬ 42:7) ಆದರೆ ಅತ್ಯಂತ ಹಾನಿಕರವಾದ ಪ್ರತಿಪಾದನೆಯು ಇನ್ನೂ ಬರಲಿತ್ತು.
ಎಲೀಫಜನು ಕೊನೆಗೆ ನೇರವಾಗಿ ಆರೋಪಗಳನ್ನು ಹೊರಿಸುವ ಅತಿರೇಕಕ್ಕೆ ಹೋದನು. ಪಾಪದ ಅರಿಕೆಯನ್ನು ಯೋಬನಿಂದ ಹೊರಸೆಳೆಯಲು ಅವನಿಂದ ಅಸಾಧ್ಯವಾದಾಗ, ಯೋಬನು ಮಾಡಿರಲೇಬೇಕೆಂದು ಅವನು ನೆನಸಿದ ಪಾಪಗಳನ್ನು ಕಲ್ಪಿಸುವ ಪ್ರಯತ್ನಕ್ಕೂ ಇಳಿದನು. “ನಿನ್ನ ಕೆಟ್ಟತನವು ದೊಡ್ಡದೇ ಸರಿ. ನಿನ್ನ ಪಾಪಗಳಿಗೆ ಮಿತಿಯೇ ಇಲ್ಲ” ಎಂದನು ಎಲೀಫಜನು. “ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಗಳನ್ನು ತೆಗೆದುಕೊಂಡಿದ್ದೀ. ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದೀ. ಬಳಲಿದವನಿಗೆ ನೀರು ಕೊಡದೆ ಹಸಿದವನಿಗೆ ಅನ್ನವಿಕ್ಕದೆಹೋಗಿದ್ದೀ.” (ಯೋಬ 22:5-7) ಈ ದೋಷಾರೋಪಗಳು ಪೂರ್ಣ ನಿರಾಧಾರವಾದುವುಗಳು. ಯೆಹೋವನು ಸ್ವತಃ ಯೋಬನನ್ನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿರುವ ಮನುಷ್ಯನಾಗಿ ವರ್ಣಿಸಿದ್ದನು.—ಯೋಬ 1:8.
ತನ್ನ ವೈಯಕ್ತಿಕ ಸಮಗ್ರತೆಯ ಮೇಲಿನ ಈ ಆಕ್ರಮಣಗಳಿಗೆ ಯೋಬನು ಹೇಗೆ ಪ್ರತಿವರ್ತಿಸಿದನು? ಅವು ಅವನನ್ನು ತುಸು ಕಹಿ ಮನೋಭಾವದವನನ್ನಾಗಿ ಮತ್ತು ಖಿನ್ನನಾಗಿ ಮಾಡಿದವೆಂಬುದು ಗ್ರಾಹ್ಯವಾದರೂ, ಈ ಆರೋಪಗಳು ಅಸತ್ಯವಾದವುಗಳೆಂದು ರುಜುಪಡಿಸಲು ಎಂದಿಗಿಂತಲೂ ಹೆಚ್ಚು ದೃಢನಿಶ್ಚಯವುಳ್ಳವನಾದನು. ವಾಸ್ತವಿಕವಾಗಿ ಅವನು ತನ್ನನ್ನು ಸಮರ್ಥಿಸಿಕೊಳ್ಳುವುದರಲ್ಲಿ ಎಷ್ಟು ತಲ್ಲೀನನಾದನೆಂದರೆ, ಒಂದು ರೀತಿಯಲ್ಲಿ, ಅವನು ತನ್ನ ದುರವಸ್ಥೆಗಾಗಿ ಯೆಹೋವನನ್ನು ದೂರಲು ತೊಡಗಿದನು. (ಯೋಬ 6:4; 9:16-18; 16:11, 12) ಒಳಗೊಂಡಿದ್ದ ನಿಜ ವಾದಾಂಶಗಳು ಬದಿಗೆ ತಳ್ಳಲ್ಪಟ್ಟವು, ಮತ್ತು ಯೋಬನು ನೀತಿವಂತನಾದ ಮನುಷ್ಯನೊ ಅಲ್ಲವೊ ಎಂಬುದರ ಕುರಿತ ಸಂವಾದವು ವ್ಯರ್ಥ ಚರ್ಚೆಯಾಗಿ ಪರಿಣಮಿಸಿತು. ಈ ಹಾನಿಕಾರಕ ಸೂಚನಾತ್ಮಕ ಸಂವಾದದಿಂದ ಕ್ರೈಸ್ತರು ಯಾವ ಪಾಠಗಳನ್ನು ಕಲಿಯಬಲ್ಲರು?
1. ಒಬ್ಬ ಪ್ರೀತಿಯುಳ್ಳ ಕ್ರೈಸ್ತನು ಆರಂಭದಿಂದಲೆ ಸಹೋದರನೊಬ್ಬನ ಸಮಸ್ಯೆಗಳು ಅವನ ಸ್ವಂತ ತಪ್ಪುಗಳ ಕಾರಣದಿಂದ ಎಂದು ಭಾವಿಸುವುದಿಲ್ಲ. ಹಿಂದಣ ತಪ್ಪುಗಳ ಕಟು ಟೀಕೆಯು, ನೈಜ ಯಾ ಕಾಲ್ಪನಿಕದ್ದಾಗಿರಲಿ, ಧೈರ್ಯಗೆಡದೆ ಮುಂದರಿಯಲು ಶ್ರಮಿಸುವ ಒಬ್ಬ ವ್ಯಕ್ತಿಯನ್ನು ಪೂರ್ತಿಯಾಗಿ ಎದೆಗುಂದಿಸಬಲ್ಲದು. ಕುಗ್ಗಿದ ಆತ್ಮಕ್ಕೆ ಬೈಗಳ ಬದಲಾಗಿ ‘ಸಂತೈಸ’ ಲ್ಪಡುವಿಕೆಯ ಅಗತ್ಯವಿದೆ. (1 ಥೆಸಲೊನೀಕ 5:14) ಮೇಲ್ವಿಚಾರಕರು “ಗಾಳಿಯಲ್ಲಿ ಮರೆಯಂತೆ” ಇರಲು ಯೆಹೋವನು ಬಯಸುತ್ತಾನೆ, ಎಲೀಫಜ, ಬಿಲ್ದದ್ ಮತ್ತು ಚೋಫರರಂತೆ “ಬೇಸರಿಕೆಯನ್ನು ಹುಟ್ಟಿಸುವ ಆದರಣೆಯವ” ರಾಗಿ ಅಲ್ಲ.’—ಯೆಶಾಯ 32:2; ಯೋಬ 16:2.
2. ಸ್ಪಷ್ಟವಾಗಿದ ಪುರಾವೆಗಳ ಹೊರತು ನಾವೆಂದೂ ಆಪಾದನೆಯನ್ನು ಮಾಡಬಾರದು. ಗಾಳಿಸುದ್ದಿ ಅಥವಾ ಊಹೆಗಳು—ಎಲೀಫಜನಂತವುಗಳು—ಗದರಿಕೆಯನ್ನು ನೀಡುವುದಕ್ಕೆ ಯುಕ್ತವಾದ ಆಧಾರಗಳಲ್ಲ. ಉದಾಹರಣೆಗೆ ಹಿರಿಯನೊಬ್ಬನು ತಪ್ಪಾದ ಆಪಾದನೆಯನ್ನು ಮಾಡಿದಲ್ಲಿ, ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುವ ಸಂಭಾವ್ಯತೆ ಇದೆ. ಅಂತಹ ತಪ್ಪು ದಾರಿಗೆಳೆಯುವ ಸಲಹೆಗೆ ಕಿವಿಗೊಡಬೇಕಾದ ಕುರಿತು ಯೋಬನಿಗೆ ಹೇಗೆನಿಸಿತು? ಅವನು ತನ್ನ ಬೇಗುದಿಯನ್ನು ವ್ಯಂಗ್ಯ ಉದ್ಗಾರದಿಂದ ಹೊರಗೆಡವಿದನು: “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು!” (ಯೋಬ 26:2) ಚಿಂತಿತನಾಗಿರುವ ಮೇಲ್ವಿಚಾರಕನು “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನು ಸುಧಾರಿಸು” ವನು, ಸಮಸ್ಯೆಯನ್ನು ಇನ್ನಷ್ಟು ಕೆಟ್ಟದಾಗಿ ಮಾಡನು.—ಇಬ್ರಿಯ 12:12.
3. ಬುದ್ಧಿವಾದವು ದೇವರ ವಾಕ್ಯದ ಮೇಲೆ ಆಧರಿತವಾಗಿರಬೇಕು, ವೈಯಕ್ತಿಕ ವಿಚಾರಗಳ ಮೇಲಲ್ಲ. ಯೋಬನ ಸಂಗಡಿಗರ ತರ್ಕಗಳು ಅಸತ್ಯವೂ ನಾಶಕಾರಕವೂ ಆಗಿದ್ದವು. ಯೋಬನನ್ನು ಯೆಹೋವನ ಹತ್ತಿರ ತರುವ ಬದಲಾಗಿ, ಅವನ ಸ್ವರ್ಗೀಯ ತಂದೆಯೊಂದಿಗೆ ಅವನನ್ನು ಪ್ರತ್ಯೇಕಿಸಿದ ಒಂದು ತಡೆಗಟ್ಟು ಇತ್ತೆಂದು ಅವನು ನೆನಸುವಂತೆ ಅವರು ನಡಿಸಿದರು. (ಯೋಬ 19:2, 6, 8) ಇನ್ನೊಂದು ಕಡೆ, ಬೈಬಲಿನ ಕೌಶಲಯುಕ್ತ ಉಪಯೋಗವು ವಿಷಯಗಳನ್ನು ಸರಿಪಡಿಸಬಲ್ಲದು, ಇತರರನ್ನು ಚೈತನ್ಯಗೊಳಿಸಬಲ್ಲದು, ಮತ್ತು ನಿಜ ಆದರಣೆಯನ್ನು ನೀಡಬಲ್ಲದು.—ಲೂಕ 24:32; ರೋಮಾಪುರ 15:4; 2 ತಿಮೊಥೆಯ 3:16; 4:2.
ಯೋಬನ ಪುಸ್ತಕವು ನಿರ್ದಿಷ್ಟ ಅಪಾಯಗಳನ್ನು ಗುರುತಿಸಲು ಕ್ರೈಸ್ತರಿಗೆ ಸಹಾಯ ಮಾಡುವಾಗ, ಪರಿಣಾಮಕಾರಿ ಸೂಚನೆಯನ್ನು ಕೊಡುವುದು ಹೇಗೆಂಬುದರಲ್ಲಿ ಒಂದು ಉಪಯುಕ್ತ ಪಾಠವನ್ನೂ ಕಲಿಸುತ್ತದೆ.
ಬುದ್ಧಿವಾದವನ್ನು ಕೊಡುವ ವಿಧ
ಎಲೀಹುವಿನ ಬುದ್ಧಿವಾದವು ಯೋಬನ ಮೂವರು ಸಂಗಡಿಗರದ್ದಕ್ಕಿಂತ ಪೂರ್ಣ ಬೇರೆಯಾಗಿತ್ತು, ಒಳವಿಷಯದಲ್ಲಿ ಹಾಗೂ ಎಲೀಹು ಯೋಬನೊಂದಿಗೆ ವ್ಯವಹರಿಸಿದ ರೀತಿಯಲ್ಲಿ ಎರಡರಲ್ಲೂ. ಅವನು ಯೋಬನ ಹೆಸರನ್ನು ಬಳಸಿ ಅವನೊಂದಿಗೆ ಒಬ್ಬ ಸ್ನೇಹಿತನೋಪಾದಿ ಮಾತನಾಡಿದನು, ಯೋಬನ ತೀರ್ಪುಗಾರನಂತೆ ಅಲ್ಲ. “ಅದಿರಲಿ; ಯೋಬನೇ, ನನ್ನ ನುಡಿಯನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು, ನೋಡು, ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ.” (ಯೋಬ 33:1, 6) ಯೋಬನ ನೀತಿಯ ಮಾರ್ಗಕ್ಕಾಗಿ ಅವನನ್ನು ಪ್ರಶಂಸಿಸಲಿಕ್ಕೂ ಎಲೀಹು ಕ್ಷಿಪ್ರನಾದನು. “ನಿನ್ನ ನೀತಿಯಲ್ಲಿ ನಾನು ಆನಂದವನ್ನು ಕಂಡುಕೊಂಡಿದ್ದೇನೆ” ಎಂಬ ಪುನರಾಶ್ವಾಸನೆಯನ್ನು ಯೋಬನಿಗೆ ಕೊಟ್ಟನು. (ಯೋಬ 33:22, NW) ಬುದ್ಧಿವಾದ ನೀಡುವ ಈ ದಯೆಯ ವಿಧಾನವಲ್ಲದೆ, ಬೇರೆ ಕಾರಣಗಳಿಂದಾಗಿಯೂ ಎಲೀಹು ಯಶಸ್ವಿಯಾದನು.
ಬೇರೆಯವರು ಮಾತಾಡುವುದನ್ನು ಮುಗಿಸುವ ತನಕ ತಾಳ್ಮೆಯಿಂದ ಕಾದದರಿಂದ, ಎಲೀಹು ಬುದ್ಧಿವಾದವನ್ನು ನೀಡುವ ಮುಂಚೆ ವಾದಾಂಶಗಳನ್ನು ಗ್ರಹಿಸಿಕೊಳ್ಳಲು ಅಧಿಕ ಶಕ್ತನಾದನು. ಯೋಬನು ನೀತಿವಂತನಾದ ಮನುಷ್ಯನೆಂಬುದು ಗ್ರಾಹ್ಯ, ಆದರೆ ಯೆಹೋವನು ಅವನನ್ನು ಶಿಕ್ಷಿಸುವನೊ? “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ” ಎಂದು ಉದ್ಗಾರವೆತ್ತಿದನು ಎಲೀಹು. ಆತನು “ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ” ಇರುವನು.—ಯೋಬ 34:10; 36:7.
ಯೋಬನ ನೀತಿಯು ನಿಜವಾಗಿ ಮುಖ್ಯ ವಾದಾಂಶವಾಗಿತ್ತೊ? ಅಸಮತೆಯ ಒಂದು ದೃಷ್ಟಿಕೋನಕ್ಕೆ ಎಲೀಹು ಯೋಬನ ಗಮನ ಸೆಳೆದನು: “ನ್ಯಾಯವೆಂದು ನೀನು ಊಹಿಸಿಕೊಂಡು ನನ್ನ ನೀತಿಯು ದೇವರ ನೀತಿಗಿಂತ ಹೆಚ್ಚೆಂದುಕೊಳ್ಳುತ್ತಿಯಾ?” ಎಂದು ಅವನು ವಿವರಿಸಿದನು. “ಕಣ್ಣೆತ್ತಿ ಗಗನಮಂಡಲವನ್ನು ನೋಡು, ಮೇಘಮಾರ್ಗವನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ!” (ಯೋಬ 35:3, 5) ಮೇಘಗಳು ನಮಗಿಂತ ಹೆಚ್ಚು ಉನ್ನತವಾಗಿರುವಂತೆಯೆ, ಯೆಹೋವನ ಮಾರ್ಗಗಳು ನಮಗಿಂತ ಅಧಿಕ ಉನ್ನತವಾಗಿವೆ. ಅವನು ವಿಷಯಗಳನ್ನು ಮಾಡುವ ರೀತಿಯನ್ನು ನಾವು ತೀರ್ಪುಮಾಡುವ ಸ್ಥಾನದಲ್ಲಿಲ್ಲ. “ಆದಕಾರಣ ಮನುಷ್ಯರು ಆತನಿಗೆ ಭಯಪಡುವರು, ಜ್ಞಾನಿಗಳೆಂದು ಎಣಿಸಿಕೊಳ್ಳುವವರನ್ನು ಅವನು ಲಕ್ಷಿಸುವದೇ ಇಲ್ಲ” ಎಂದು ಎಲೀಹು ಕೊನೆಗೊಳಿಸಿದನು.—ಯೋಬ 37:24; ಯೆಶಾಯ 55:9.
ಎಲೀಹುವಿನ ಸೂಕ್ತವಾದ ಬುದ್ಧಿವಾದವು ಸ್ವತಃ ಯೆಹೋವನಿಂದ ತಾನೇ ಅಧಿಕ ಸೂಚನೆಯನ್ನು ಪಡೆಯಲು ಯೋಬನನ್ನು ಯೋಗ್ಯ ಮನೋಸ್ಥಿತಿಯಲ್ಲಿ ಹಾಕಿತು. ವಾಸ್ತವವಾಗಿ, ಅಧ್ಯಾಯ 37 ರಲ್ಲಿ “ದೇವರ ಅದ್ಭುತಕಾರ್ಯಗಳ” ಕುರಿತ ಎಲೀಹುವಿನ ಪರಾಮರ್ಶೆ ಮತ್ತು 38 ರಿಂದ 41 ವರೆಗಿನ ಅಧ್ಯಾಯಗಳಲ್ಲಿ ದಾಖಲಿಸಲ್ಪಟ್ಟ, ಸ್ವತಃ ಯೆಹೋವನು ಯೋಬನಿಗೆ ನುಡಿದ ಮಾತುಗಳ ನಡುವೆ ಒಂದು ಎದ್ದುಕಾಣುವ ಸಮಾನಾಂತರತೆ ಇದೆ. ಪ್ರತ್ಯಕ್ಷವಾಗಿ, ಎಲೀಹು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಿದನು. (ಯೋಬ 37:14) ಎಲೀಹುವಿನ ಉತ್ತಮ ಮಾದರಿಯನ್ನು ಕ್ರೈಸ್ತರು ಹೇಗೆ ಅನುಕರಿಸಬಲ್ಲರು?
ಎಲೀಹುವಿನಂತೆ, ವಿಶೇಷವಾಗಿ ಮೇಲ್ವಿಚಾರಕರು, ತಾವು ಸಹ ಅಸಂಪೂರ್ಣರೆಂದು ನೆನಪಿಸಿಕೊಂಡು, ಸಹಾನುಭೂತಿ ಮತ್ತು ದಯೆಯುಳ್ಳವರಾಗಲು ಬಯಸಬೇಕು. ಬುದ್ಧಿವಾದವನ್ನು ಕೊಡುವ ಮೊದಲು ಸಂಬಂಧಿಸಿದ ನಿಜತ್ವಗಳನ್ನು ತಿಳಿಯಲು ಮತ್ತು ವಾದಾಂಶವನ್ನು ಗ್ರಹಿಸಿಕೊಳ್ಳಲು ಅವರು ಜಾಗ್ರತೆಯಿಂದ ಕಿವಿಗೊಡುವುದು ಅವರಿಗೆ ಅಪೇಕ್ಷಣೀಯವಾಗಿರುವುದು. (ಜ್ಞಾನೋಕ್ತಿ 18:13) ಅದಲ್ಲದೆ, ಬೈಬಲನ್ನು ಮತ್ತು ಶಾಸ್ತ್ರೀಯ ಪ್ರಕಾಶನಗಳನ್ನು ಉಪಯೋಗಿಸುವ ಮೂಲಕ, ಯೆಹೋವನ ದೃಷ್ಟಿಕೋನವು ಮೇಲುಗೈಯಾಗುವಂತೆ ಅವರು ಖಾತ್ರಿಮಾಡಬಲ್ಲರು.—ರೋಮಾಪುರ 3:4.
ಯೋಬನ ಪುಸ್ತಕವು ಈ ವ್ಯಾವಹಾರ್ಯ ಪಾಠಗಳನ್ನು ಹಿರಿಯರಿಗೆ ಕೊಡುವುದಲ್ಲದೆ, ಸಮಸ್ಯೆಗಳನ್ನು ಸಮತೆಯಿಂದ ಎದುರಿಸುವ ವಿಧವನ್ನೂ ನಮಗೆ ಕಲಿಸುತ್ತದೆ.
ಪ್ರತಿಕೂಲ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸದಿರುವ ವಿಧ
ತನ್ನ ಕಷ್ಟಾನುಭವದಿಂದ ಜರ್ಜರಿತನಾಗಿ ಮತ್ತು ಸುಳ್ಳು ಸಾಂತ್ವನಗಾರರಿಂದ ಆಶಾಭಂಗಪಟ್ಟು, ಯೋಬನು ಕಹಿಮನಸ್ಕನೂ ಖಿನ್ನನೂ ಆದನು. “ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, . . . ನನ್ನ ಜೀವವೇ ನನಗೆ ಬೇಸರವಾಗಿದೆ” ಎಂದು ನರಳಿದನಾತ. (ಯೋಬ 3:3; 10:1) ಸೈತಾನನು ಅಪರಾಧಿ ಎಂಬುದನ್ನು ಅರಿಯದವನಾಗಿ, ದೇವರೇ ವಿಪತ್ತುಗಳನ್ನು ಬರಮಾಡಿದನೆಂದು ಅವನು ಊಹಿಸಿದನು. ಒಬ್ಬ ನೀತಿವಂತ ಮನುಷ್ಯನಾದ ತಾನು ಕಷ್ಟವನ್ನು ಅನುಭವಿಸುವುದು ಬಹಳ ಅನ್ಯಾಯವಾಗಿ ಅವನಿಗೆ ತೋರಿತು. (ಯೋಬ 23:10, 11; 27:2; 30:20, 21) ಈ ಮನೋಭಾವವು ಯೋಬನನ್ನು ಬೇರೆ ಪರಿಗಣನೆಗಳಿಗೆ ಕುರುಡನನ್ನಾಗಿ ಮಾಡಿ, ಮಾನವಕುಲದೊಂದಿಗೆ ದೇವರ ವ್ಯವಹಾರಗಳನ್ನು ಟೀಕಿಸುವಂತೆ ಆತನನ್ನು ನಡಿಸಿತು. ಯೆಹೋವನು ಕೇಳಿದ್ದು: “ಏನು! ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದೂ ನಿರ್ಣಯಿಸುವಿಯೋ?”—ಯೋಬ 40:8.
ಆಪತ್ತುಗಳು ಎದುರಾಗುವಾಗ ಪ್ರಾಯಶಃ ನಮ್ಮ ತತ್ಕ್ಷಣದ ಪ್ರತಿಕ್ರಿಯೆಯು, ಯೋಬನು ನೆನಸಿದಂತೆ, ಶಿಕ್ಷೆವಿಧಿಸಲ್ಪಟ್ಟ ಭಾವನೆಯನ್ನು ತಾಳುವುದಾಗಿರಬಹುದು. ಸಾಮಾನ್ಯ ಪ್ರತಿಕ್ರಿಯೆಯು, ‘ನಾನೇ ಯಾಕೆ? ಬೇರೆಯವರು—ನನಗಿಂತಲೂ ಹೆಚ್ಚು ಕೆಟ್ಟವರು—ತುಲನಾತ್ಮಕವಾಗಿ ಸಮಸ್ಯೆಮುಕ್ತ ಜೀವನವನ್ನು ಯಾಕೆ ಆನಂದಿಸುತ್ತಾರೆ?’ ಎಂದು ಕೇಳುವುದಾಗಿದೆ. ದೇವರ ವಾಕ್ಯದ ಮನನದ ಮೂಲಕವಾಗಿ ನಾವು ಪ್ರತಿಭಟಿಸಬಲ್ಲ ನಕಾರಾತ್ಮಕ ವಿಚಾರಗಳು ಇವಾಗಿವೆ.
ನಾವಾದರೊ ಯೋಬನ ಹಾಗಿರದೆ, ಒಳಗೊಂಡಿರುವ ಮಹತ್ತಾದ ವಾದಾಂಶಗಳನ್ನು ಗ್ರಹಿಸಿಕೊಳ್ಳುವ ಸ್ಥಾನದಲ್ಲಿದ್ದೇವೆ. ಸೈತಾನನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಎಂಬುದು ನಮಗೆ ತಿಳಿದದೆ. (1 ಪೇತ್ರ 5:8) ಯೋಬನ ಪುಸ್ತಕವು ಪ್ರಕಟಪಡಿಸುವಂತೆ, ನಮಗೆ ಸಮಸ್ಯೆಗಳನ್ನುಂಟುಮಾಡುವ ಮೂಲಕ ನಮ್ಮ ಸಮಗ್ರತೆಯನ್ನು ಮುರಿಯಲು ಪಿಶಾಚನು ಸಂತೋಷಪಡುವನು. ನಾವು ಕೇವಲ ಅನುಕೂಲ ಕಾಲದ ಯೆಹೋವನ ಸಾಕ್ಷಿಗಳು ಎಂಬ ಅವನ ವಾದವನ್ನು ರುಜುಪಡಿಸಲು ಅವನು ದೃಢನಿಶ್ಚಯದಿಂದಿದ್ದಾನೆ. (ಯೋಬ 1:9-11; 2:3-5) ಯೆಹೋವನ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಮತ್ತು ಹೀಗೆ ಪಿಶಾಚನನ್ನು ಸುಳ್ಳುಗಾರನೆಂದು ರುಜುಪಡಿಸಲು ನಮಗೆ ಧೈರ್ಯವಿರುವುದೊ?
ಯೇಸುವಿನ ಮತ್ತು ಇತರ ಅಸಂಖ್ಯಾತ ನಂಬಿಗಸ್ತ ಯೆಹೋವನ ಸಾಕ್ಷಿಗಳ ಮಾದರಿಯು, ಈ ವಿಷಯಗಳ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ರೀತಿಯ ಕಷ್ಟಾನುಭವವು ಇರುವುದು ಬಹುಮಟ್ಟಿಗೆ ಅನಿವಾರ್ಯವೇ ಎಂದು ತೋರಿಸುತ್ತದೆ. ಅವನ ಶಿಷ್ಯರು ಅವನನ್ನು ಹಿಂಬಾಲಿಸಲು ಬಯಸುವುದಾದರೆ ಅವರು ‘ತಮ್ಮ ಯಾತನಾ ಕಂಬವನ್ನು ಹೊತ್ತು’ ಕೊಳ್ಳಲು ಸಿದ್ಧರಾಗಿರಬೇಕೆಂದು ಯೇಸು ಹೇಳಿದನು. (ಲೂಕ 9:23, NW) ನಮ್ಮ ವೈಯಕ್ತಿಕ “ಯಾತನಾ ಕಂಬ”ವು ಯೋಬನು ತಾಳಿಕೊಂಡ ಆಪತ್ತುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು—ಅನಾರೋಗ್ಯ, ಪ್ರಿಯಜನರ ಮರಣ, ಖಿನ್ನತೆ, ಆರ್ಥಿಕ ಬಿಕ್ಕಟ್ಟು, ಅಥವಾ ಅವಿಶ್ವಾಸಿಗಳಿಂದ ವಿರೋಧ ಆಗಿರಬಹುದು. ಯಾವುದೆ ರೀತಿಯ ಸಮಸ್ಯೆಯನ್ನು ನಾವು ಎದುರಿಸುತ್ತಿರಲಿ, ಸನ್ನಿವೇಶದ ಒಂದು ಸಕಾರಾತ್ಮಕವಾದ ಭಾಗವಿದೆ. ನಮ್ಮ ತಾಳ್ಮೆಯನ್ನು ಮತ್ತು ಯೆಹೋವನಿಗೆ ನಿಶ್ಚಂಚಲ ನಿಷ್ಠೆಯನ್ನು ಪ್ರದರ್ಶಿಸುವ ಸದವಕಾಶವಾಗಿ ನಾವು ನಮ್ಮ ಸನ್ನಿವೇಶಗಳನ್ನು ವೀಕ್ಷಿಸಬಲ್ಲೆವು.—ಯಾಕೋಬ 1:2, 3.
ಯೇಸುವಿನ ಅಪೊಸ್ತಲರು ಪ್ರತಿಕ್ರಿಯಿಸಿದ್ದು ಅದೇ ರೀತಿಯಲ್ಲಿ. ಯೇಸುವಿನ ಕುರಿತು ಸಾರಿದುದಕ್ಕಾಗಿ ಪಂಚಾಶತ್ತಮದ ಬಳಿಕ ಬೇಗನೆ ಅವರು ಹೊಡೆತಗಳಿಗೆ ಗುರಿಯಾದರು. ನಿರುತ್ತೇಜಿತರಾಗುವ ಬದಲಾಗಿ, ಅವರು “ಸಂತೋಷಿಸುತ್ತಾ” ಹೊರಟುಹೋದರು. ಅವರು ಸಂತೋಷಪಟ್ಟದ್ದು ಕಷ್ಟಾನುಭವಕ್ಕಾಗಿ ತಾನೆ ಅಲ್ಲ, ಬದಲಾಗಿ “ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು” ಸಂತೋಷಪಟ್ಟರು.—ಅ. ಕೃತ್ಯಗಳು 5:40, 41.
ನಮ್ಮ ಎಲ್ಲ ಕಷ್ಟಗಳು ಯೆಹೋವನನ್ನು ಸೇವಿಸುವ ಪಲಿತಾಂಶವಾಗಿ ನಮ್ಮ ಮೇಲೆ ಬರುವುದಿಲ್ಲ ನಿಶ್ಚಯ. ನಮ್ಮ ಸಮಸ್ಯೆಗಳು ಕಡಿಮೆ ಪಕ್ಷ ನಿರ್ದಿಷ್ಟ ಮಟ್ಟಿಗೆ—ಸ್ವಯಂಕೃತವಾಗಿರಲೂಬಹುದು. ಆಥವಾ ಪ್ರಾಯಶಃ, ನಮ್ಮ ಯಾವ ತಪ್ಪೂ ಇಲ್ಲದೆ, ಸಮಸ್ಯೆಯು ನಮ್ಮ ಆತ್ಮಿಕ ಸಮತೆಯನ್ನು ಬಾಧಿಸಿರಬಹುದು. ಪರಿಸ್ಥಿತಿಯು ಏನೇ ಇರಲಿ, ಎಲ್ಲಿ ತಪ್ಪುಗಳು ಮಾಡಲ್ಪಟ್ಟಿವೆ ಎಂದು ವಿವೇಚಿಸಲು ಯೋಬನಂತಹ ನಮ್ರ ಭಾವವು ನಮಗೆ ಸಾಧ್ಯಮಾಡುವುದು. ಯೋಬನು ಯೆಹೋವನಿಗೆ ಅರಿಕೆಮಾಡಿದ್ದು: “ನಾನು ತಿಳಿಯದ ಸಂಗತಿಗಳನ್ನೂ ನನಗೆ ಗೊತ್ತಿಲ್ಲದೆ . . . ಮಾತಾಡಿದ್ದೇನೆ.” (ಯೋಬ 42:3) ಯಾರು ತನ್ನ ತಪ್ಪುಗಳನ್ನು ಈ ರೀತಿಯಲ್ಲಿ ಅಂಗೀಕರಿಸುತ್ತಾನೊ ಅವನಿಗೆ ಭವಿಷ್ಯದಲ್ಲಿ ತದ್ರೀತಿಯ ಕಷ್ಟಗಳನ್ನು ವರ್ಜಿಸುವ ಹೆಚ್ಚು ಸಂಭಾವ್ಯತೆ ಇರುತ್ತದೆ. ಜ್ಞಾನೋಕ್ತಿ ಹೇಳುವಂತೆ, “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು”—ಜ್ಞಾನೋಕ್ತಿ 22:3.
ಅತ್ಯಂತ ಪ್ರಾಮುಖ್ಯವಾಗಿ, ಯೋಬನ ಪುಸ್ತಕವು, ನಮ್ಮ ಸಮಸ್ಯೆಗಳು ಸದಾ ಉಳಿಯಲಾರವೆಂಬ ಜ್ಞಾಪಕವನ್ನು ನಮಗೆ ಕೊಡುತ್ತದೆ. ಬೈಬಲು ಅನ್ನುವುದು: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು [ಯೆಹೋವನು, NW] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು [ಯೆಹೋವನು] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ಇಂದು ಯೆಹೋವನು ತದ್ರೀತಿಯಲ್ಲಿ ತನ್ನ ಸೇವಕರ ನಂಬಿಗಸ್ತಿಕೆಯನ್ನು ಬಹುಮಾನಿಸುವನೆಂಬ ಖಾತ್ರಿಯು ನಮಗಿರಬಲ್ಲದು.
ಪ್ರತಿಯೊಂದು ವಿಧದ ಸಮಸ್ಯೆಯು—“ಮೊದಲಿದ್ದದ್ದೆಲ್ಲಾ”—ಇಲ್ಲದೆ ಹೋಗುವ ಸಮಯಕ್ಕಾಗಿಯೂ ನಾವು ಎದುರುನೋಡುತ್ತೇವೆ. (ಪ್ರಕಟನೆ 21:4) ಆ ದಿನವು ಉದಯವಾಗುವ ತನಕ, ಯೋಬನ ಪುಸ್ತಕವು ಸಮಸ್ಯೆಗಳನ್ನು ವಿವೇಕದಿಂದ ಮತ್ತು ಸೈರಣೆಯಿಂದ ನಿರ್ವಹಿಸಲು ನಮಗೆ ಸಹಾಯಮಾಡಬಲ್ಲ ಒಂದು ಅಮೂಲ್ಯ ಮಾರ್ಗದರ್ಶಕವಾಗಿ ಕಾರ್ಯನಡಿಸುತ್ತದೆ.
[ಅಧ್ಯಯನ ಪ್ರಶ್ನೆಗಳು]
a “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು” ಎಂದು ಬೈಬಲು ಹೇಳುತ್ತದಾದರೂ, ದೈವಿಕ ಶಿಕ್ಷೆಯಿಂದಾಗಿಯೆ ವ್ಯಕ್ತಿಯು ಕಷ್ಟಾನುಭವ ಪಡೆಯುತ್ತಾನೆಂದು ಇದರ ಅರ್ಥವಲ್ಲ. (ಗಲಾತ್ಯ 6:7) ಸೈತಾನನ ದಬ್ಬಾಳಿಕೆಯ ಕೆಳಗಿರುವ ಈ ಲೋಕದಲ್ಲಿ, ದುಷ್ಟರಿಗಿಂತ ಹೆಚ್ಚಾಗಿ ನೀತಿವಂತರು ಅಧಿಕ ಸಮಸ್ಯೆಗಳನ್ನು ಆಗಿಂದಾಗ್ಗೆ ಎದುರಿಸುತ್ತಾರೆ. (1 ಯೋಹಾನ 5:19) ಯೇಸು ತನ್ನ ಶಿಷ್ಯರಿಗೆ “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು” ಎಂದು ಹೇಳಿದನು. (ಮತ್ತಾಯ 10:22) ಅಸೌಖ್ಯ ಮತ್ತು ಇತರ ವಿಧದ ದುರವಸ್ಥೆಯು ದೇವರ ನಂಬಿಗಸ್ತ ಸೇವಕರಲ್ಲಿ ಯಾರ ಮೇಲೂ ಬೀಳಬಲ್ಲದು.—ಕೀರ್ತನೆ 41:3; 73:3-5; ಫಿಲಿಪ್ಪಿ 2:25-27.
[ಪುಟ 28 ರಲ್ಲಿರುವ ಚಿತ್ರ]
“ಮೇಘಮಾರ್ಗವನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ.” ದೇವರ ಮಾರ್ಗಗಳು ಮನುಷ್ಯನ ಮಾರ್ಗಗಳಿಗಿಂತ ಉನ್ನತವಾಗಿವೆ ಎಂಬುದನ್ನು ಯೋಬನು ತಿಳಿದುಕೊಳ್ಳಲು ಎಲೀಹು ಹೀಗೆ ಸಹಾಯಮಾಡಿದನು