ಅ. ಕಾರ್ಯ
6 ಈ ದಿನಗಳಲ್ಲಿ ಶಿಷ್ಯರ ಸಂಖ್ಯೆಯು ಹೆಚ್ಚುತ್ತಾ ಬರುತ್ತಿದ್ದಾಗ, ಗ್ರೀಕ್ ಭಾಷೆಯ ಯೆಹೂದ್ಯರು ಹೀಬ್ರು ಭಾಷೆಯ ಯೆಹೂದ್ಯರ ವಿರುದ್ಧ ಗುಣುಗುಟ್ಟತೊಡಗಿದರು; ಏಕೆಂದರೆ ಅವರ ವಿಧವೆಯರನ್ನು ದೈನಂದಿನ ಆಹಾರದ ವಿತರಣೆಯಲ್ಲಿ ಅಲಕ್ಷಿಸಲಾಗುತ್ತಿತ್ತು. 2 ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯರನ್ನೆಲ್ಲ ತಮ್ಮ ಬಳಿಗೆ ಕರೆದು, “ನಾವು ದೇವರ ವಾಕ್ಯವನ್ನು ಬೋಧಿಸುವುದನ್ನು ಬಿಟ್ಟು ಆಹಾರ ವಿತರಣೆಯಲ್ಲಿ ತೊಡಗುವುದು ನಮಗೆ ಹಿತವೆನಿಸುವುದಿಲ್ಲ. 3 ಆದುದರಿಂದ ಸಹೋದರರೇ, ನಾವು ಈ ಆವಶ್ಯಕ ಕೆಲಸದ ಮೇಲೆ ನೇಮಿಸಲಿಕ್ಕಾಗಿ ಪವಿತ್ರಾತ್ಮಭರಿತರೂ ವಿವೇಕಭರಿತರೂ ಆಗಿರುವ ಏಳು ಮಂದಿ ಒಳ್ಳೇ ಹೆಸರುಳ್ಳ ಅರ್ಹ ಪುರುಷರನ್ನು ನಿಮ್ಮೊಳಗಿಂದ ಆರಿಸಿಕೊಳ್ಳಿರಿ; 4 ನಾವಾದರೋ ಪ್ರಾರ್ಥನೆಯಲ್ಲಿಯೂ ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿಯೂ ನಿರತರಾಗಿರುವೆವು” ಎಂದು ಹೇಳಿದರು. 5 ಈ ಮಾತುಗಳು ಇಡೀ ಜನಸಮೂಹಕ್ಕೆ ಮೆಚ್ಚಿಕೆಯಾದವು; ಮತ್ತು ಅವರು ನಂಬಿಗಸ್ತನೂ ಪವಿತ್ರಾತ್ಮಭರಿತನೂ ಆದ ಸ್ತೆಫನನನ್ನೂ ಫಿಲಿಪ್ಪ ಪ್ರೊಖೋರ ನಿಕನೋರ ತಿಮೋನ ಪರ್ಮೇನ ಯೆಹೂದಿ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬವರನ್ನೂ ಆರಿಸಿಕೊಂಡು, 6 ಅಪೊಸ್ತಲರ ಮುಂದೆ ತಂದು ನಿಲ್ಲಿಸಿದಾಗ ಅವರು ಪ್ರಾರ್ಥನೆಮಾಡಿ ಈ ಪುರುಷರ ಮೇಲೆ ತಮ್ಮ ಕೈಗಳನ್ನಿಟ್ಟರು.
7 ಪರಿಣಾಮವಾಗಿ ದೇವರ ವಾಕ್ಯವು ಅಭಿವೃದ್ಧಿಹೊಂದುತ್ತಾ ಮತ್ತು ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚುತ್ತಾ ಹೋಯಿತು; ಯಾಜಕರಲ್ಲಿಯೂ ಬಹು ಜನರು ಕ್ರಿಸ್ತನಂಬಿಕೆಗೆ ವಿಧೇಯರಾಗಲಾರಂಭಿಸಿದರು.
8 ಸೌಜನ್ಯದಿಂದಲೂ ಶಕ್ತಿಯಿಂದಲೂ ತುಂಬಿದ್ದ ಸ್ತೆಫನನು ಜನರ ನಡುವೆ ಅನೇಕ ಸೂಚಕಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಮಾಡುತ್ತಾ ಇದ್ದನು. 9 ಆದರೆ ‘ಮುಕ್ತ ಗುಲಾಮರ’ * ಸಭಾಮಂದಿರದವರಲ್ಲಿಯೂ * ಕುರೇನ್ಯ ಮತ್ತು ಅಲೆಕ್ಸಾಂದ್ರಿಯದವರಲ್ಲಿಯೂ ಕಿಲಿಕ್ಯ ಮತ್ತು ಏಷ್ಯಾದಿಂದ ಬಂದಿದ್ದವರಲ್ಲಿಯೂ ಕೆಲವರು ಸ್ತೆಫನನೊಂದಿಗೆ ವಾಗ್ವಾದ ಮಾಡಲು ಎದ್ದರು; 10 ಆದರೂ ಅವನು ವಿವೇಕದಿಂದಲೂ ಪವಿತ್ರಾತ್ಮದಿಂದಲೂ ಮಾತಾಡುತ್ತಿದ್ದುದರಿಂದ ಅವರು ತಮ್ಮ ವಾದವನ್ನು ಸ್ಥಾಪಿಸಲಾರದೆ ಹೋದರು. 11 ಆಗ ಅವರು, “ಇವನು ಮೋಶೆಗೆ ಮತ್ತು ದೇವರಿಗೆ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವುದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂದು ಜನರು ಹೇಳುವಂತೆ ರಹಸ್ಯವಾಗಿ ಒಡಂಬಡಿಸಿದರು. 12 ಮತ್ತು ಅವರು ಜನರನ್ನೂ ಹಿರೀಪುರುಷರನ್ನೂ ಶಾಸ್ತ್ರಿಗಳನ್ನೂ ಕೆರಳಿಸಿ ಥಟ್ಟನೆ ಅವನ ಮೇಲೆ ಬಿದ್ದು ಅವನನ್ನು ಬಲಾತ್ಕಾರದಿಂದ ಹಿಡಿದು ಹಿರೀಸಭೆಯ ಮುಂದೆ ತಂದು ನಿಲ್ಲಿಸಿದರು. 13 ಮತ್ತು ಅವರು ಸುಳ್ಳುಸಾಕ್ಷಿಗಳನ್ನು ಹಾಜರುಪಡಿಸಿದಾಗ ಆ ಸಾಕ್ಷಿಗಳು, “ಈ ಮನುಷ್ಯನು ಈ ಪವಿತ್ರ ಸ್ಥಳಕ್ಕೆ ಹಾಗೂ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಮಾತಾಡುವುದನ್ನು ನಿಲ್ಲಿಸುವುದೇ ಇಲ್ಲ. 14 ನಜರೇತಿನವನಾದ ಈ ಯೇಸು ಈ ಸ್ಥಳವನ್ನು ಕೆಡವಿಹಾಕಿ ಮೋಶೆಯು ನಮಗೆ ಒಪ್ಪಿಸಿರುವ ಪದ್ಧತಿಗಳನ್ನು ಬದಲಾಯಿಸುವನು ಎಂದು ಇವನು ಹೇಳುವುದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂದರು.
15 ಹಿರೀಸಭೆಯಲ್ಲಿ ಕುಳಿತುಕೊಂಡಿದ್ದವರೆಲ್ಲರೂ ಅವನನ್ನು ದಿಟ್ಟಿಸಿ ನೋಡಿದಾಗ, ಅವನ ಮುಖವು ಒಬ್ಬ ದೇವದೂತನ ಮುಖದಂತೆ ಇರುವುದನ್ನು ಕಂಡರು.