ಗುರುವಾರ, ನವೆಂಬರ್ 30
ನೀವು ಇಲ್ಲೇ ಕೂತಿರಿ. ನಾನು ಹೋಗಿ ಪ್ರಾರ್ಥನೆಮಾಡಿ ಬರ್ತಿನಿ.—ಮತ್ತಾ. 26:36.
ಯೇಸು ತನ್ನ ಕೊನೇ ರಾತ್ರಿ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಮತ್ತು ಧ್ಯಾನಿಸೋಕೆ ಯಾರೂ ಇಲ್ಲದೆ ಇರೋ ಜಾಗಕ್ಕೆ ಹೋಗಬೇಕು ಅಂದುಕೊಂಡನು. ಅದಕ್ಕೆ ಆತನು ಗೆತ್ಸೇಮನೆ ತೋಟಕ್ಕೆ ಹೋದನು. ಅಲ್ಲಿ ತನ್ನ ಶಿಷ್ಯರಿಗೆ ಒಂದು ಮುಖ್ಯವಾದ ವಿಷಯ ಹೇಳಿದನು. ಯೇಸು ಗೆತ್ಸೇಮನೆ ತೋಟಕ್ಕೆ ಬಂದಾಗ ಮಧ್ಯರಾತ್ರಿ ಆಗಿದ್ದಿರಬೇಕು. ಆತನು ಅಪೊಸ್ತಲರಿಗೆ “ಎಚ್ಚರವಾಗಿರಿ” ಅಂತ ಹೇಳಿ ಪ್ರಾರ್ಥನೆ ಮಾಡೋಕೆ ಹೋದನು. (ಮತ್ತಾ. 26:37-39) ಆದ್ರೆ ಅವರು ನಿದ್ದೆ ಮಾಡಿಬಿಟ್ರು. ಇದನ್ನ ನೋಡಿ ಯೇಸು ಪುನಃ ಅವರಿಗೆ ‘ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಿ’ ಅಂತ ಹೇಳಿದನು. (ಮತ್ತಾ. 26:40, 41) ಆದ್ರೆ, ಶಿಷ್ಯರಿಗೆ ತುಂಬ ಸುಸ್ತಾಗಿದೆ, ಆಯಾಸ ಆಗಿದೆ ಅಂತ ಯೇಸು ಅರ್ಥಮಾಡಿಕೊಂಡನು. ಹಾಗಾಗಿ ಅವರ “ದೇಹಕ್ಕೆ ಶಕ್ತಿ ಇಲ್ಲ” ಅಂತ ಯೇಸು ಹೇಳಿದನು. ಇದಾದ ಮೇಲೆ ಯೇಸು ಪುನಃ ಎರಡು ಸಲ ಪ್ರಾರ್ಥನೆ ಮಾಡಿ ಬಂದಾಗ್ಲೂ ಶಿಷ್ಯರು ನಿದ್ದೆ ಮಾಡ್ತಿರೋದನ್ನ ನೋಡಿದನು.—ಮತ್ತಾ. 26:42-45. w22.01 28 ¶10-11
ಶುಕ್ರವಾರ, ಡಿಸೆಂಬರ್ 1
ಅವು ನನ್ನ ಮಾತು ಕೇಳ್ತವೆ.—ಯೋಹಾ. 10:16.
ಯೇಸು ತನಗೆ ಮತ್ತು ಶಿಷ್ಯರಿಗೆ ಇರೋ ಸಂಬಂಧನ ಕುರಿ ಮತ್ತು ಕುರುಬನಿಗೆ ಹೋಲಿಸಿದನು. (ಯೋಹಾ. 10:14) ಯಾಕಂದ್ರೆ ಕುರಿಗಳು ಕುರುಬನನ್ನ ಚೆನ್ನಾಗಿ ತಿಳಿದುಕೊಂಡಿರುತ್ತವೆ ಮತ್ತು ಅವನು ಏನು ಹೇಳ್ತಾನೋ ಅದನ್ನೇ ಮಾಡುತ್ತವೆ. ಇದರ ಬಗ್ಗೆ ಒಬ್ಬ ವ್ಯಕ್ತಿ ಹೇಳಿದ್ದು, “ನಾವು ಕುರಿ ಹಿಂಡಿನ ಫೋಟೋ ತೆಗೆಯೋಕೆ ಅವುಗಳನ್ನ ಕರೆದಾಗ ಅವುಗಳು ಬಂದಿಲ್ಲ. ಆದ್ರೆ ಅವನ್ನ ಮೇಯಿಸೋ ಚಿಕ್ಕ ಹುಡುಗ ಕರೆದ ತಕ್ಷಣ ಅವೆಲ್ಲ ಅವನ ಹಿಂದೆ ಹೋದವು.” ಯೇಸು ತನ್ನ ಶಿಷ್ಯರನ್ನ ಕುರಿಗಳಿಗೆ ಹೋಲಿಸ್ತಾ “ಅವು ನನ್ನ ಮಾತು ಕೇಳ್ತವೆ” ಅಂತ ಹೇಳಿದ್ದು ನಿಜ ಅಂತ ಆ ವ್ಯಕ್ತಿಯ ಉದಾಹರಣೆಯಿಂದ ಗೊತ್ತಾಗುತ್ತೆ. ಆದ್ರೆ ಈಗ ಯೇಸು ಸ್ವರ್ಗದಲ್ಲಿ ಇದ್ದಾನೆ. ಅವನ ಮಾತನ್ನ ನಾವು ಹೇಗೆ ಕೇಳೋಕೆ ಆಗುತ್ತೆ? ಯೇಸು ಕಲಿಸಿದ್ದನ್ನು ನಮ್ಮ ಜೀವನದಲ್ಲಿ ಪಾಲಿಸಿದ್ರೆ ಅವನ ಮಾತನ್ನ ಕೇಳಿದ ಹಾಗಾಗುತ್ತೆ.—ಮತ್ತಾ. 7:24, 25. w21.12 16 ¶1-2
ಶನಿವಾರ, ಡಿಸೆಂಬರ್ 2
ಎಲ್ರೂ ಪಾಪ ಮಾಡಿದ್ದಾರೆ. ಹಾಗಾಗಿದೇವರ ಮಹಾ ಗುಣಗಳನ್ನ ತೋರಿಸೋಕೆಯಾರಿಗೂ ಆಗ್ತಿಲ್ಲ.—ರೋಮ. 3:23.
ಮುಂಚೆ ಅಪೊಸ್ತಲ ಪೌಲ ತುಂಬ ಅಹಂಕಾರಿಯಾಗಿದ್ದ, ಕ್ರೈಸ್ತರಿಗೆ ತುಂಬ ಹಿಂಸೆ ಕೊಡುತ್ತಿದ್ದ. ಆದ್ರೆ ಆಮೇಲೆ ಅವನು ಮಾಡುತ್ತಿದ್ದಿದ್ದು ತಪ್ಪು ಅಂತ ಅವನಿಗೆ ಅರ್ಥ ಆಯ್ತು. ಅದನ್ನ ಅವನು ತಿದ್ದಿಕೊಂಡ. (1 ತಿಮೊ. 1:12-16) ಯೆಹೋವ ದೇವರ ಸಹಾಯದಿಂದ ಪ್ರೀತಿ, ಕರುಣೆ, ದೀನತೆ ಇರೋ ಒಬ್ಬ ಹಿರಿಯನಾದ. ಅವನು ಕುಂದು-ಕೊರತೆಗಳ ಬಗ್ಗೆನೇ ಯೋಚನೆ ಮಾಡ್ತಾ ಇರಲಿಲ್ಲ, ಯೆಹೋವ ಅವನನ್ನು ಕ್ಷಮಿಸ್ತಾನೆ ಅಂತ ನಂಬಿದ. (ರೋಮ. 7:21-25) ಇನ್ನೊಂದು ಕಡೆ, ತಾನು ಯಾವ ತಪ್ಪೂ ಮಾಡಬಾರದು, ಪರಿಪೂರ್ಣನಾಗಿ ಇರಬೇಕು ಅಂತಾನೂ ಅಂದುಕೊಳ್ಳಲಿಲ್ಲ. ಯೆಹೋವನಿಗೆ ಇಷ್ಟವಾದ ಗುಣಗಳನ್ನ ಬೆಳೆಸಿಕೊಳ್ಳೋಕೆ ತುಂಬ ಪ್ರಯತ್ನ ಮಾಡುತ್ತಿದ್ದ. ತನ್ನ ಜವಾಬ್ದಾರಿಗಳನ್ನ ಮಾಡೋಕೆ ಯಾವಾಗಲೂ ಯೆಹೋವನ ಹತ್ರ ಸಹಾಯ ಕೇಳುತ್ತಿದ್ದ. (1 ಕೊರಿಂ. 9:27; ಫಿಲಿ. 4:13) ಹಿರಿಯರು ಯಾವತ್ತೂ ತಪ್ಪೇ ಮಾಡಲ್ಲ ಅಂತ ಯೆಹೋವ ಅವರಿಗೆ ಆ ಜವಾಬ್ದಾರಿಯನ್ನ ಕೊಟ್ಟಿಲ್ಲ. ಅವರು ಒಂದುವೇಳೆ ತಪ್ಪುಮಾಡಿದ್ರೆ ಅದನ್ನ ಒಪ್ಪಿಕೊಂಡು ತಿದ್ದುಕೊಳ್ಳಬೇಕು ಮತ್ತು ಯೆಹೋವನಿಗೆ ಇಷ್ಟವಾದ ಗುಣಗಳನ್ನ ಬೆಳಸಿಕೊಳ್ಳಬೇಕು ಅಂತ ಆತನು ಬಯಸ್ತಾನೆ. (ಎಫೆ. 4:23, 24) ಹಾಗಾಗಿ ಹಿರಿಯರು ಬೈಬಲನ್ನ ಓದಿ ತಮ್ಮನ್ನೇ ಪರೀಕ್ಷೆ ಮಾಡಿಕೊಳ್ಳಬೇಕು. ಒಂದುವೇಳೆ ಏನಾದರೂ ಸರಿಮಾಡಿಕೊಳ್ಳಬೇಕಿದ್ರೆ ಅದನ್ನ ಸರಿಮಾಡಿಕೊಳ್ಳಬೇಕು. ಆಗ ಅವರ ಜವಾಬ್ದಾರಿಯನ್ನ ಖುಷಿಖುಷಿಯಿಂದ ಚೆನ್ನಾಗಿ ಮಾಡೋಕೆ ಯೆಹೋವ ಅವರಿಗೆ ಸಹಾಯ ಮಾಡ್ತಾನೆ.—ಯಾಕೋ. 1:25. w22.03 29-30 ¶13-15