ರೋಮನ್ನರಿಗೆ
3 ಹಾಗಾದರೆ ಯೆಹೂದ್ಯನ ಶ್ರೇಷ್ಠತೆ ಏನು? ಅಥವಾ ಸುನ್ನತಿಯಿಂದ ಪ್ರಯೋಜನವೇನು? 2 ಪ್ರತಿಯೊಂದು ವಿಧದಲ್ಲೂ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ ಪವಿತ್ರ ದೈವೋಕ್ತಿಗಳು ಅವರ ವಶಕ್ಕೆ ಕೊಡಲ್ಪಟ್ಟ ಕಾರಣದಿಂದ. 3 ಹಾಗಾದರೆ ಏನು? ಕೆಲವರು ನಂಬಿಕೆಯನ್ನು ತೋರಿಸದಿದ್ದರೆ ಅವರ ನಂಬಿಕೆಯ ಕೊರತೆಯು ದೇವರ ನಂಬಿಗಸ್ತಿಕೆಯನ್ನು ನಿಷ್ಪ್ರಯೋಜಕಗೊಳಿಸುವುದೊ? 4 ಹಾಗೆ ಎಂದಿಗೂ ಆಗದಿರಲಿ! “ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ರುಜುವಾಗುವಿ ಮತ್ತು ನೀನು ತೀರ್ಪುಮಾಡಲ್ಪಡುವಾಗ ಜಯವನ್ನು ಹೊಂದುವಿ” ಎಂದು ಬರೆದಿರುವ ಮಾತಿಗನುಸಾರ ಪ್ರತಿಯೊಬ್ಬ ಮನುಷ್ಯನು ಸುಳ್ಳುಗಾರನಾಗಿ ಕಂಡುಬಂದರೂ ದೇವರು ಸತ್ಯವಂತನಾಗಿ ಕಂಡುಬರಲಿ. 5 ಆದರೆ ಒಂದುವೇಳೆ ನಮ್ಮ ಅನೀತಿಯು ದೇವರ ನೀತಿಯನ್ನು ಪ್ರಸಿದ್ಧಿಗೆ ತಂದರೆ ನಾವು ಏನು ಹೇಳೋಣ? ದೇವರು ತನ್ನ ಕ್ರೋಧವನ್ನು ವ್ಯಕ್ತಪಡಿಸುವಾಗ ಆತನು ಅನ್ಯಾಯಗಾರನಲ್ಲ, ಅಲ್ಲವೆ? (ನಾನು ಮನುಷ್ಯನಂತೆ ಮಾತಾಡುತ್ತಿದ್ದೇನೆ.) 6 ಹಾಗೆ ಎಂದಿಗೂ ಆಗದಿರಲಿ! ಇಲ್ಲವಾದರೆ ದೇವರು ಲೋಕಕ್ಕೆ ಹೇಗೆ ತೀರ್ಪುಮಾಡುವನು?
7 ಆದರೂ ನನ್ನ ಸುಳ್ಳಿನಿಂದ ದೇವರ ಸತ್ಯವು ಆತನ ಮಹಿಮೆಗಾಗಿ ಹೆಚ್ಚು ಪ್ರಸಿದ್ಧಿಗೊಂಡರೆ ನಾನು ಇನ್ನೂ ಪಾಪಿಯೆಂದು ತೀರ್ಪುಮಾಡಲ್ಪಡುತ್ತಿರುವುದು ಏಕೆ? 8 “ಒಳ್ಳೆಯ ವಿಷಯಗಳು ಸಂಭವಿಸುವಂತಾಗಲು ನಾವು ಕೆಟ್ಟ ವಿಷಯಗಳನ್ನು ಮಾಡೋಣ” ಎಂದು ನಾವು ಹೇಳುತ್ತಿರುವುದಾಗಿ ಕೆಲವರು ನಮ್ಮ ಮೇಲೆ ಸುಳ್ಳಾರೋಪ ಹೊರಿಸುವಂತೆಯೇ ನಾವು ಏಕೆ ಹೇಳಬಾರದು? ಅಂಥ ಮನುಷ್ಯರ ವಿರುದ್ಧ ನ್ಯಾಯತೀರ್ಪಾಗುವುದು ನ್ಯಾಯಕ್ಕೆ ಹೊಂದಿಕೆಯಲ್ಲಿದೆ.
9 ಹಾಗಾದರೆ ಏನು? ನಾವು ಹೆಚ್ಚು ಉತ್ತಮ ಸ್ಥಿತಿಯಲ್ಲಿದ್ದೇವೊ? ಇಲ್ಲವೇ ಇಲ್ಲ. ಯೆಹೂದ್ಯರಾಗಿರಲಿ ಗ್ರೀಕರಾಗಿರಲಿ ಎಲ್ಲರೂ ಪಾಪದ ಕೆಳಗಿದ್ದಾರೆ ಎಂಬ ಆಪಾದನೆಯನ್ನು ನಾವು ಈ ಮೊದಲೆ ಹೊರಿಸಿದ್ದೇವೆ; 10 ಬರೆಯಲ್ಪಟ್ಟಿರುವಂತೆ, “ನೀತಿವಂತನು ಒಬ್ಬನೂ ಇಲ್ಲ, ಒಬ್ಬನಾದರೂ ಇಲ್ಲ; 11 ಯಾವುದೇ ಒಳನೋಟವಿರುವವನು ಒಬ್ಬನೂ ಇಲ್ಲ, ದೇವರಿಗಾಗಿ ಹುಡುಕುವವನು ಒಬ್ಬನೂ ಇಲ್ಲ. 12 ಮನುಷ್ಯರೆಲ್ಲರು ದಾರಿತಪ್ಪಿದವರೇ, ಅವರೆಲ್ಲರೂ ಒಟ್ಟಾಗಿ ಕೆಲಸಕ್ಕೆ ಬಾರದವರಾಗಿದ್ದಾರೆ; ದಯೆತೋರಿಸುವವನೇ ಇಲ್ಲ, ಒಬ್ಬನಾದರೂ ಇಲ್ಲ.” 13 “ಅವರ ಗಂಟಲು ತೆರೆದಿರುವ ಗೋರಿಯಾಗಿದೆ; ಅವರು ತಮ್ಮ ನಾಲಗೆಗಳಿಂದ ವಂಚನೆಯನ್ನು ಮಾಡಿದ್ದಾರೆ.” “ಅವರ ತುಟಿಗಳ ಹಿಂದೆ ವಿಷಸರ್ಪಗಳ ವಿಷವಿದೆ.” 14 “ಅವರ ಬಾಯಿ ಶಾಪದಿಂದಲೂ ಕಹಿಮಾತಿನಿಂದಲೂ ತುಂಬಿದೆ.” 15 “ಅವರ ಪಾದಗಳು ರಕ್ತವನ್ನು ಸುರಿಸಲು ತ್ವರೆಪಡುತ್ತವೆ.” 16 “ಅವರ ಮಾರ್ಗಗಳಲ್ಲಿ ಧ್ವಂಸವೂ ದುರವಸ್ಥೆಯೂ ಇದೆ 17 ಮತ್ತು ಅವರು ಶಾಂತಿಯ ಮಾರ್ಗವನ್ನು ಅರಿತಿಲ್ಲ.” 18 “ಅವರ ಕಣ್ಮುಂದೆ ದೇವರ ಭಯವೇ ಇಲ್ಲ.”
19 ಧರ್ಮಶಾಸ್ತ್ರದಲ್ಲಿ ಹೇಳಿರುವುದೆಲ್ಲವೂ ಧರ್ಮಶಾಸ್ತ್ರದ ಕೆಳಗಿರುವವರಿಗೆ ಸೂಚಿಸಲ್ಪಟ್ಟಿದೆ ಎಂಬುದನ್ನು ನಾವು ಬಲ್ಲೆವು; ಇದರಿಂದ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಇಡೀ ಲೋಕವು ದೇವರ ಶಿಕ್ಷೆಗೆ ಒಳಗಾಗಬಹುದು. 20 ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಕಾರ್ಯಗಳ ಮೂಲಕ ಯಾರೊಬ್ಬನೂ ಆತನ ಮುಂದೆ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ; ಏಕೆಂದರೆ ಧರ್ಮಶಾಸ್ತ್ರದಿಂದಲೇ ಪಾಪದ ನಿಷ್ಕೃಷ್ಟ ಜ್ಞಾನವು ಉಂಟಾಗುತ್ತದೆ.
21 ಆದರೆ ಈಗ ಧರ್ಮಶಾಸ್ತ್ರದ ಸಹಾಯವಿಲ್ಲದೆ ದೇವರ ನೀತಿಯು ಪ್ರಕಟವಾಗಿದೆ; ಇದಕ್ಕೆ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳಿಂದಲೂ ಸಾಕ್ಷಿ ನುಡಿಯಲ್ಪಟ್ಟಿದೆ; 22 ಹೌದು, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವವರಿಗೆ ದೇವರ ನೀತಿಯು ಪ್ರಾಪ್ತವಾಗುವುದು; ಇದು ನಂಬಿಕೆಯಿರುವ ಎಲ್ಲರಿಗೂ ದೊರಕುತ್ತದೆ. ಇದರಲ್ಲಿ ಯಾವುದೇ ತಾರತಮ್ಯವಿಲ್ಲ. 23 ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ. 24 ಇದಲ್ಲದೆ ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಹೊಂದುವ ಮೂಲಕ ಅವರು ದೇವರ ಅಪಾತ್ರ ದಯೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡುವುದು ಆತನ ಉಚಿತ ವರವಾಗಿದೆ. 25 ದೇವರು ಪಾಪನಿವಾರಣ ಯಜ್ಞವಾಗಿ ಇವನನ್ನು ಇಟ್ಟನು; ಪಾಪನಿವಾರಣೆಯು ಅವನ ರಕ್ತದಲ್ಲಿ ನಂಬಿಕೆಯಿಡುವ ಮೂಲಕ ದೊರಕುವುದು. ದೇವರು ತನ್ನ ಸ್ವಂತ ನೀತಿಯನ್ನು ತೋರ್ಪಡಿಸುವುದಕ್ಕಾಗಿಯೇ ಇದನ್ನು ಮಾಡಿದನು, ಏಕೆಂದರೆ ದೇವರು ಸಹನಶೀಲತೆಯನ್ನು ತೋರಿಸುತ್ತಿದ್ದಾಗ ಪೂರ್ವದಲ್ಲಿ ಸಂಭವಿಸಿದ ಪಾಪಗಳನ್ನು ಕ್ಷಮಿಸುತ್ತಿದ್ದನು; 26 ಆದುದರಿಂದ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಮನುಷ್ಯನನ್ನು ನೀತಿವಂತನೆಂದು ನಿರ್ಣಯಿಸುವಾಗಲೂ ದೇವರು ತನ್ನನ್ನು ನೀತಿವಂತನಾಗಿ ತೋರಿಸಿಕೊಳ್ಳಲು ತನ್ನ ಸ್ವಂತ ನೀತಿಯನ್ನು ಈ ವರ್ತಮಾನಕಾಲದಲ್ಲಿ ತೋರ್ಪಡಿಸಿದ್ದಾನೆ.
27 ಹಾಗಾದರೆ ಹೊಗಳಿಕೊಳ್ಳಲು ಕಾರಣವೆಲ್ಲಿದೆ? ಇಲ್ಲವೇ ಇಲ್ಲ. ಯಾವ ನಿಯಮದ ಮೂಲಕ ಹೊಗಳಿಕೊಳ್ಳಲು ಕಾರಣ ಇಲ್ಲದೆ ಹೋಯಿತು? ಕ್ರಿಯೆಗಳ ನಿಯಮದ ಮೂಲಕವೊ? ನಿಶ್ಚಯವಾಗಿಯೂ ಇಲ್ಲ; ನಂಬಿಕೆಯ ನಿಯಮದ ಮೂಲಕವೇ. 28 ಒಬ್ಬ ಮನುಷ್ಯನು ಧರ್ಮಶಾಸ್ತ್ರದ ಕ್ರಿಯೆಗಳಿಂದಲ್ಲ, ನಂಬಿಕೆಯಿಂದಲೇ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಎಂದು ನಾವು ಎಣಿಸುತ್ತೇವೆ. 29 ಆತನು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೊ? ಆತನು ಅನ್ಯಜನಾಂಗಗಳವರಿಗೂ ದೇವರಾಗಿಲ್ಲವೆ? ಹೌದು, ಅನ್ಯಜನಾಂಗಗಳವರಿಗೂ ಆತನು ದೇವರಾಗಿದ್ದಾನೆ. 30 ದೇವರು ನಿಜವಾಗಿಯೂ ಒಬ್ಬನೇ ಆಗಿರುವುದಾದರೆ, ಆತನು ಸುನ್ನತಿಯವರನ್ನು ನಂಬಿಕೆಯ ನಿಮಿತ್ತ ನೀತಿವಂತರೆಂದೂ ಸುನ್ನತಿಯಿಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರೆಂದೂ ನಿರ್ಣಯಿಸುವನು. 31 ಹಾಗಾದರೆ ನಮ್ಮ ನಂಬಿಕೆಯ ಮೂಲಕ ನಾವು ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸುತ್ತೇವೊ? ಹಾಗೆ ಎಂದಿಗೂ ಆಗದಿರಲಿ! ಅದಕ್ಕೆ ಬದಲಾಗಿ ನಾವು ಧರ್ಮಶಾಸ್ತ್ರವನ್ನು ಸ್ಥಿರೀಕರಿಸುತ್ತೇವೆ.