1 ಕೊರಿಂಥ
16 ಪವಿತ್ರ ಜನರಿಗೋಸ್ಕರ ಹಣವನ್ನು ಸಂಗ್ರಹಿಸುವ ವಿಷಯದಲ್ಲಿ ನಾನು ಗಲಾತ್ಯದಲ್ಲಿರುವ ಸಭೆಗಳಿಗೆ ಸೂಚನೆಗಳನ್ನು ಕೊಟ್ಟಂತೆಯೇ ನೀವೂ ಮಾಡಿರಿ. 2 ನಾನು ಬಂದಾಗ ಹಣವನ್ನು ಸಂಗ್ರಹಿಸುವ ಅಗತ್ಯ ಬೀಳದಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತಾನು ಏಳಿಗೆಹೊಂದುತ್ತಿರುವ ಮೇರೆಗೆ ಪ್ರತಿ ವಾರದ ಮೊದಲನೆಯ ದಿನದಲ್ಲಿ ಏನನ್ನಾದರೂ ತನ್ನ ಮನೆಯಲ್ಲಿ ತೆಗೆದಿಡಲಿ. 3 ನಾನು ಅಲ್ಲಿಗೆ ಬಂದಾಗ ಪತ್ರಗಳ ಮೂಲಕ ನೀವು ಯಾರನ್ನು ಅನುಮೋದಿಸುತ್ತೀರೋ ಅವರನ್ನು ಯೆರೂಸಲೇಮಿಗೆ ನಿಮ್ಮ ದಯಾಭರಿತ ಕಾಣಿಕೆಯನ್ನು ಕೊಂಡೊಯ್ಯಲು ಕಳುಹಿಸುವೆನು. 4 ನಾನು ಸಹ ಅಲ್ಲಿಗೆ ಹೋಗುವುದು ಯುಕ್ತವಾಗಿರುವಲ್ಲಿ ಅವರು ನನ್ನೊಂದಿಗೆ ಬರುವರು.
5 ಆದರೆ ನಾನು ಮಕೆದೋನ್ಯವನ್ನು ಹಾದುಹೋಗಲಿರುವುದರಿಂದ ಅದನ್ನು ದಾಟಿದ ಬಳಿಕ ನಿಮ್ಮ ಬಳಿಗೆ ಬರುವೆನು; 6 ನಾನು ಪ್ರಾಯಶಃ ನಿಮ್ಮೊಂದಿಗೆ ಸ್ವಲ್ಪಕಾಲ ಉಳಿಯಬಹುದು ಅಥವಾ ಚಳಿಗಾಲವನ್ನೂ ನಿಮ್ಮೊಂದಿಗೆ ಕಳೆಯಬಹುದು. ನೀವು ಸ್ವಲ್ಪ ದೂರದ ವರೆಗೆ ನನ್ನೊಂದಿಗೆ ಬಂದು ನಾನು ಹೋಗುವಲ್ಲಿಗೆ ನನ್ನನ್ನು ಸಾಗಕಳುಹಿಸಬಹುದು. 7 ನಾನು ಇಲ್ಲಿಂದ ಹಾದುಹೋಗುವಾಗ ನಿಮ್ಮನ್ನು ನೋಡಲು ಬಯಸುವುದಿಲ್ಲ, ಏಕೆಂದರೆ ಯೆಹೋವನು ಅನುಮತಿಸುವುದಾದರೆ ನಿಮ್ಮೊಂದಿಗೆ ಸ್ವಲ್ಪಕಾಲ ಉಳಿಯಲು ನಿರೀಕ್ಷಿಸುತ್ತೇನೆ. 8 ಆದರೆ ನಾನು ಪಂಚಾಶತ್ತಮ ಹಬ್ಬದ ವರೆಗೆ ಎಫೆಸದಲ್ಲಿ ಉಳಿಯುವೆನು. 9 ಏಕೆಂದರೆ ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು ನನಗಾಗಿ ತೆರೆದಿದೆ; ಆದರೆ ವಿರೋಧಿಗಳು ಬಹಳ ಮಂದಿ ಇದ್ದಾರೆ.
10 ತಿಮೊಥೆಯನು ಬಂದರೆ ಅವನು ನಿಮ್ಮ ಮಧ್ಯೆ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ಏಕೆಂದರೆ ನನ್ನಂತೆಯೇ ಅವನೂ ಯೆಹೋವನ ಕೆಲಸವನ್ನು ಮಾಡುವವನಾಗಿದ್ದಾನೆ. 11 ಆದುದರಿಂದ ಯಾರೂ ಅವನನ್ನು ಅಸಡ್ಡೆಯಿಂದ ಕಾಣದಿರಲಿ. ಅವನು ನನ್ನ ಬಳಿಗೆ ಬರುವಂತೆ ಅವನನ್ನು ಶಾಂತಿಯಿಂದ ಸ್ವಲ್ಪ ದೂರದ ವರೆಗೆ ಸಾಗಕಳುಹಿಸಿರಿ; ನಾನು ಅವನಿಗಾಗಿ ಸಹೋದರರೊಂದಿಗೆ ಕಾಯುತ್ತಿದ್ದೇನೆ.
12 ನಮ್ಮ ಸಹೋದರನಾದ ಅಪೊಲ್ಲೋಸನ ಸಂಗತಿಯೇನೆಂದರೆ, ಅವನು ಸಹೋದರರೊಂದಿಗೆ ನಿಮ್ಮ ಬಳಿಗೆ ಬರುವಂತೆ ನಾನು ಅವನನ್ನು ಬಹಳವಾಗಿ ಬೇಡಿಕೊಂಡರೂ ಈಗ ಬರಲು ಅವನು ಮನಸ್ಸುಮಾಡುತ್ತಿಲ್ಲ; ಆದರೆ ಅವನಿಗೆ ಅವಕಾಶ ಸಿಗುವಾಗ ಅವನು ಬರುವನು.
13 ಎಚ್ಚರವಾಗಿರಿ, ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ, ಪೌರುಷವುಳ್ಳವರಾಗಿ ಮುನ್ನಡೆಯಿರಿ, ಬಲಿಷ್ಠರಾಗಿ ಬೆಳೆಯಿರಿ. 14 ನಿಮ್ಮ ಎಲ್ಲ ವ್ಯವಹಾರಗಳು ಪ್ರೀತಿಯಿಂದ ನಡೆಯಲಿ.
15 ಸಹೋದರರೇ ಈಗ ನಾನು ನಿಮ್ಮನ್ನು ಪ್ರೋತ್ಸಾಹಿಸುವುದೇನೆಂದರೆ, ಸ್ತೆಫನಸನ ಮನೆಯವರು ಅಖಾಯದಲ್ಲಿ ಪ್ರಥಮಫಲವಾಗಿದ್ದು ಪವಿತ್ರ ಜನರಿಗೆ ಸೇವೆಮಾಡಲು ತಮ್ಮನ್ನು ನೀಡಿಕೊಂಡಿದ್ದಾರೆ ಎಂಬುದು ನಿಮಗೆ ತಿಳಿದಿದೆ. 16 ನೀವು ಸಹ ಇಂಥ ರೀತಿಯ ವ್ಯಕ್ತಿಗಳಿಗೆ ಮತ್ತು ಸಹಕರಿಸುವವರೂ ಪ್ರಯಾಸಪಡುವವರೂ ಆಗಿರುವ ಎಲ್ಲರಿಗೆ ಅಧೀನರಾಗಿರಿ. 17 ಆದರೆ ಸ್ತೆಫನಸನು, ಫೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು; ಏಕೆಂದರೆ ನೀವು ಇಲ್ಲಿ ಇಲ್ಲದ ಕೊರತೆಯನ್ನು ಅವರು ನೀಗಿಸಿದ್ದಾರೆ. 18 ಅವರು ನನ್ನ ಮತ್ತು ನಿಮ್ಮ ಹೃದಯವನ್ನು * ಚೈತನ್ಯಗೊಳಿಸಿದ್ದಾರೆ. ಆದುದರಿಂದ ಆ ರೀತಿಯ ವ್ಯಕ್ತಿಗಳನ್ನು ಮಾನ್ಯಮಾಡಿರಿ.
19 ಏಷ್ಯಾದಲ್ಲಿರುವ ಸಭೆಗಳವರು ನಿಮಗೆ ವಂದನೆ ತಿಳಿಸಿದ್ದಾರೆ. ಅಕ್ವಿಲನೂ ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ನಿಮ್ಮನ್ನು ಕರ್ತನಲ್ಲಿ ಹಾರ್ದಿಕವಾಗಿ ವಂದಿಸುತ್ತಾರೆ. 20 ಎಲ್ಲ ಸಹೋದರರು ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ.
21 ಇದು ಪೌಲನಾದ ನಾನು ನನ್ನ ಸ್ವಂತ ಕೈಯಿಂದ ಬರೆಯುವ ವಂದನೆ.
22 ಯಾವನಿಗಾದರೂ ಕರ್ತನ ಮೇಲೆ ಮಮತೆಯಿಲ್ಲದಿದ್ದರೆ ಅವನು ಶಾಪಗ್ರಸ್ತನಾಗಲಿ. ನಮ್ಮ ಕರ್ತನೇ, ಬಾ! 23 ಕರ್ತನಾದ ಯೇಸುವಿನ ಅಪಾತ್ರ ದಯೆಯು ನಿಮ್ಮೊಂದಿಗಿರಲಿ. 24 ಕ್ರಿಸ್ತ ಯೇಸುವಿನೊಂದಿಗಿನ ಐಕ್ಯದಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗಿರಲಿ.