ಪ್ರಕಟನೆ
15 ಸ್ವರ್ಗದಲ್ಲಿ ಮಹತ್ತರವೂ ಆಶ್ಚರ್ಯಕರವೂ ಆದ ಮತ್ತೊಂದು ಸೂಚನೆಯನ್ನು ನಾನು ನೋಡಿದೆನು; ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು. ಇವು ಕೊನೆಯವುಗಳಾಗಿವೆ, ಏಕೆಂದರೆ ಇವುಗಳ ಮೂಲಕ ದೇವರ ಕೋಪವು ಮುಕ್ತಾಯಕ್ಕೆ ತರಲ್ಪಡುತ್ತದೆ.
2 ಇದಲ್ಲದೆ ಅಗ್ನಿಮಿಶ್ರಿತ ಗಾಜಿನ ಸಮುದ್ರದ ಹಾಗಿದ್ದುದನ್ನು ಮತ್ತು ಆ ಗಾಜಿನ ಸಮುದ್ರದ ಪಕ್ಕದಲ್ಲಿ ಕಾಡುಮೃಗವನ್ನೂ ಅದರ ವಿಗ್ರಹವನ್ನೂ ಅದರ ಹೆಸರಿನ ಸಂಖ್ಯೆಯನ್ನೂ ಜಯಿಸಿ ಬಂದವರು ದೇವರ ಕಿನ್ನರಿಗಳನ್ನು ಹಿಡಿದುಕೊಂಡು ನಿಂತಿರುವುದನ್ನು ನಾನು ನೋಡಿದೆನು. 3 ಅವರು ದೇವರ ದಾಸನಾದ ಮೋಶೆಯ ಹಾಡನ್ನೂ ಕುರಿಮರಿಯ ಹಾಡನ್ನೂ ಹಾಡುತ್ತಾ,
“ಸರ್ವಶಕ್ತನಾದ ಯೆಹೋವ ದೇವರೇ, ನಿನ್ನ ಕಾರ್ಯಗಳು ಮಹತ್ತರವಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ. ನಿತ್ಯತೆಯ ರಾಜನೇ, ನಿನ್ನ ಮಾರ್ಗಗಳು ನೀತಿಯುತವೂ ಸತ್ಯವೂ ಆಗಿವೆ. 4 ಯೆಹೋವನೇ, ನೀನೊಬ್ಬನೇ ನಿಷ್ಠಾವಂತನಾಗಿರುವುದರಿಂದ ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿದ್ದಾರೆ? ನಿನ್ನ ನೀತಿಯ ಕಟ್ಟಳೆಗಳು ಪ್ರಕಟಪಡಿಸಲ್ಪಟ್ಟಿರುವುದರಿಂದ ಎಲ್ಲ ಜನಾಂಗಗಳು ಬಂದು ನಿನ್ನ ಮುಂದೆ ಆರಾಧಿಸುವವು” ಎಂದು ಹೇಳಿದರು.
5 ಇವುಗಳಾದ ಮೇಲೆ ನಾನು ನೋಡಿದಾಗ, ಸ್ವರ್ಗದಲ್ಲಿ ಸಾಕ್ಷಿಗುಡಾರದ ಪವಿತ್ರಸ್ಥಳವು ತೆರೆಯಲ್ಪಟ್ಟಿತು. 6 ಪವಿತ್ರಸ್ಥಳದಿಂದ ಏಳು ಉಪದ್ರವಗಳನ್ನು ಹಿಡಿದುಕೊಂಡಿದ್ದ ಏಳು ಮಂದಿ ದೇವದೂತರು ಹೊರಬಂದರು; ಅವರು ಶುಭ್ರವಾದ ಮತ್ತು ಪ್ರಕಾಶಮಾನವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು ಹಾಗೂ ತಮ್ಮ ಎದೆಗಳಿಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. 7 ಇದಲ್ಲದೆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಆ ಏಳು ಮಂದಿ ದೇವದೂತರಿಗೆ ಸದಾಸರ್ವದಾ ಜೀವಿಸುವಾತನಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು. 8 ಆಗ ದೇವರ ಮಹಿಮೆಯಿಂದಾಗಿಯೂ ಆತನ ಶಕ್ತಿಯಿಂದಾಗಿಯೂ ಪವಿತ್ರಸ್ಥಳವು ಹೊಗೆಯಿಂದ ತುಂಬಿಕೊಂಡಿತು ಮತ್ತು ಆ ಏಳು ಮಂದಿ ದೇವದೂತರ ಏಳು ಉಪದ್ರವಗಳು ತೀರುವ ತನಕ ಆ ಪವಿತ್ರಸ್ಥಳದೊಳಗೆ ಯಾವನೂ ಪ್ರವೇಶಿಸಲು ಶಕ್ತನಾಗಿರಲಿಲ್ಲ.