ಅಪೊಸ್ತಲರ ಕಾರ್ಯ
21 ನಾವು ದುಃಖದಿಂದ ಅವ್ರನ್ನ ಬಿಟ್ಟು ಹಡಗು ಹತ್ತಿ ನೇರವಾಗಿ ಕೋಸ್ ದ್ವೀಪಕ್ಕೆ ಬಂದ್ವಿ. ಮಾರನೇ ದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ತಲಪಿದ್ವಿ. 2 ಅಲ್ಲಿ ನಮ್ಗೆ ಫೊಯಿನಿಕೆಗೆ ಹೋಗ್ತಿದ್ದ ಹಡಗು ಕಾಣಿಸ್ತು. ಅದನ್ನ ಹತ್ತಿ ಪ್ರಯಾಣ ಮುಂದುವರಿಸಿದ್ವಿ. 3 ಹೋಗ್ತಿದ್ದಾಗ ಎಡಗಡೆಯಲ್ಲಿ ಸೈಪ್ರಸ್ ದ್ವೀಪ ನೋಡಿದ್ವಿ. ಅದನ್ನ ದಾಟಿ ಸಿರಿಯದ ಕಡೆ ಪ್ರಯಾಣಮಾಡಿ ತೂರ್ ಪಟ್ಟಣಕ್ಕೆ ಬಂದು ಇಳಿದ್ವಿ. ಯಾಕಂದ್ರೆ ಹಡಗಲ್ಲಿದ್ದ ಸಾಮಾನುಗಳನ್ನ ಅಲ್ಲಿ ಇಳಿಸಬೇಕಾಗಿತ್ತು. 4 ಅಲ್ಲಿ ಶಿಷ್ಯರನ್ನ ಹುಡುಕಿದ್ವಿ. ಅವರು ಸಿಕ್ಕಾಗ ಏಳು ದಿನ ತೂರಿನಲ್ಲೇ ಇದ್ವಿ. ಪವಿತ್ರಶಕ್ತಿ ಶಿಷ್ಯರಿಗೆ ಹೇಳಿದ್ರಿಂದ ಅವರು ಪೌಲನಿಗೆ ಯೆರೂಸಲೇಮಿಗೆ ಹೋಗದ ಹಾಗೆ ಪದೇಪದೇ ಹೇಳಿದ್ರು.+ 5 ನಾವು ಹೋಗಬೇಕಾಗಿದ್ದ ಸಮಯ ಬಂದಾಗ ನಾವು ಅಲ್ಲಿಂದ ಹೊರಟ್ವಿ. ಆಗ ಸಹೋದರರು, ಸ್ತ್ರೀಯರು, ಮಕ್ಕಳು, ಎಲ್ರೂ ನಮ್ಮನ್ನ ಬಿಡೋಕೆ ಹಡಗಿನ ಹತ್ರ ಬಂದ್ರು. ಸಮುದ್ರತೀರದಲ್ಲೇ ನಾವು ಮಂಡಿಯೂರಿ ಪ್ರಾರ್ಥನೆ ಮಾಡಿದ್ವಿ. 6 ಕೊನೇದಾಗಿ ಮಾತಾಡಿ ಹಡಗು ಹತ್ತಿ ಪ್ರಯಾಣ ಮುಂದುವರಿಸಿದ್ವಿ. ಸಹೋದರರು ಅವರವ್ರ ಮನೆಗೆ ಹೋದ್ರು.
7 ನಾವು ತೂರ್ ಪಟ್ಟಣದಿಂದ ಪ್ರಯಾಣ ಮಾಡಿ ತೊಲೆಮಾಯಕ್ಕೆ ಬಂದ್ವಿ. ಅಲ್ಲಿದ್ದ ಸಹೋದರರನ್ನ ಮಾತಾಡಿಸಿ ಅವ್ರ ಜೊತೆ ಒಂದು ದಿನ ಇದ್ವಿ. 8 ಮಾರನೇ ದಿನ ಅಲ್ಲಿಂದ ಹೊರಟು ಕೈಸರೈಯಕ್ಕೆ ಬಂದ್ವಿ. ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪನ ಮನೆಗೆ ಹೋಗಿ ಉಳ್ಕೊಂಡ್ವಿ. ಯೆರೂಸಲೇಮಲ್ಲಿ ಅಪೊಸ್ತಲರು ಆರಿಸ್ಕೊಂಡಿದ್ದ ಆ ಏಳು ಮಂದಿಯಲ್ಲಿ+ ಇವನೂ ಒಬ್ಬನಾಗಿದ್ದ. 9 ಅವನಿಗೆ ಮದುವೆಯಾಗದ ನಾಲ್ಕು ಹೆಣ್ಣುಮಕ್ಕಳಿದ್ರು. ಅವರು ಭವಿಷ್ಯವಾಣಿ ಹೇಳ್ತಿದ್ರು.+ 10 ಅಲ್ಲಿ ನಾವು ತುಂಬ ದಿನ ಇದ್ದ ಮೇಲೆ ಯೂದಾಯದಿಂದ ಅಗಬ+ ಅನ್ನೋ ಒಬ್ಬ ಪ್ರವಾದಿ ಬಂದ. 11 ಅವನು ನಮ್ಮ ಹತ್ರ ಬಂದು ಪೌಲ ಸೊಂಟಕ್ಕೆ ಕಟ್ಟಿಕೊಳ್ತಿದ್ದ ಪಟ್ಟಿ ತಗೊಂಡು ತನ್ನ ಕೈಕಾಲಿಗೆ ಕಟ್ಕೊಂಡು “ದೇವರು ತನ್ನ ಪವಿತ್ರಶಕ್ತಿಯ ಮೂಲಕ ಹೀಗೆ ಹೇಳ್ತಿದ್ದಾನೆ ‘ಈ ಪಟ್ಟಿ ಯಾರದೋ ಅವನನ್ನ ಯೆಹೂದ್ಯರು ಯೆರೂಸಲೇಮಲ್ಲಿ+ ಹೀಗೆ ಕಟ್ಟಿಹಾಕಿ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ’”+ ಅಂದ. 12 ಅದನ್ನ ಕೇಳಿದಾಗ ನಾವು ಮತ್ತು ಅಲ್ಲಿದ್ದವರು ಪೌಲನಿಗೆ ಯೆರೂಸಲೇಮಿಗೆ ಹೋಗಬೇಡ ಅಂತ ಬೇಡ್ಕೊಳ್ಳೋಕೆ ಶುರುಮಾಡಿದ್ವಿ. 13 ಆಗ ಪೌಲ “ನೀವು ಯಾಕೆ ಅತ್ತು ನನ್ನ ಮನಸ್ಸನ್ನ ಬದಲಾಯಿಸಬೇಕು ಅಂತ ಅಂದ್ಕೊಳ್ತಿದ್ದೀರಾ? ನಾನು ಯೇಸು ಪ್ರಭುವಿನ ಹೆಸ್ರಿಗೋಸ್ಕರ ಜೈಲಿಗೆ ಹೋಗೋಕೆ ಅಷ್ಟೇ ಅಲ್ಲ ಯೆರೂಸಲೇಮಲ್ಲಿ ಸಾಯಕ್ಕೂ ಸಿದ್ಧ”+ ಅಂತ ಹೇಳಿದ. 14 ಏನೇ ಹೇಳಿದ್ರೂ ಪೌಲ ಒಪ್ಕೊಳ್ಳಲಿಲ್ಲ. ಹಾಗಾಗಿ “ಯೆಹೋವನ* ಇಷ್ಟ ಏನಿದ್ಯೋ ಅದೇ ಆಗಲಿ” ಅಂತ ಹೇಳಿ ಸುಮ್ಮನಾದ್ವಿ.
15 ಇದಾದ ಮೇಲೆ ನಾವು ಪ್ರಯಾಣಕ್ಕೆ ತಯಾರಾಗಿ ಯೆರೂಸಲೇಮಿಗೆ ಹೋದ್ವಿ. 16 ನಮ್ಮನ್ನ ಸೈಪ್ರಸ್ ದ್ವೀಪದ ಮ್ನಾಸೋನ ಅನ್ನುವವನ ಮನೆಗೆ ಕರ್ಕೊಂಡು ಹೋಗೋಕೆ ಕೈಸರೈಯದ ಶಿಷ್ಯರಲ್ಲಿ ಕೆಲವರು ಬಂದ್ರು. ಈ ಮ್ನಾಸೋನ ಮೊದಮೊದಲು ಶಿಷ್ಯರಾದವ್ರಲ್ಲಿ ಒಬ್ಬನಾಗಿದ್ದ. 17 ನಾವು ಯೆರೂಸಲೇಮಿಗೆ ಬಂದು ತಲುಪಿದಾಗ ಸಹೋದರರು ನಮ್ಮನ್ನ ಸಂತೋಷದಿಂದ ಸ್ವಾಗತಿಸಿದ್ರು. 18 ಮಾರನೇ ದಿನ ಪೌಲ ನಮ್ಮನ್ನ ಕರ್ಕೊಂಡು ಯಾಕೋಬನ ಹತ್ರ ಹೋದ.+ ಎಲ್ಲ ಹಿರಿಯರು ಅಲ್ಲಿದ್ರು. 19 ಅವನು ಅವ್ರನ್ನೆಲ್ಲ ಮಾತಾಡಿಸಿದ. ತನ್ನ ಸೇವೆ ಮೂಲಕ ಯೆಹೂದ್ಯರಲ್ಲದ ಜನ್ರ ಮುಂದೆ ದೇವರು ಮಾಡಿದ ಎಲ್ಲ ವಿಷ್ಯಗಳನ್ನ ಅವ್ರಿಗೆ ವಿವರಿಸೋಕೆ ಶುರುಮಾಡಿದ.
20 ಪೌಲ ಹೇಳಿದ್ದನ್ನ ಕೇಳಿಸ್ಕೊಂಡ ಮೇಲೆ ಅವರು ದೇವ್ರನ್ನ ಹಾಡಿಹೊಗಳೋಕೆ ಶುರುಮಾಡಿದ್ರು. ಆದ್ರೆ ಅವರು ಅವನಿಗೆ “ಸಹೋದರ, ಯೆಹೂದ್ಯರಲ್ಲಿ ಎಷ್ಟೋ ಸಾವಿರ ಮಂದಿ ಕ್ರೈಸ್ತರಾಗಿದ್ದನ್ನ ನೀನು ನೋಡ್ತಾನೇ ಇದ್ದೀಯ. ಅವ್ರೆಲ್ಲ ನಿಯಮ ಪುಸ್ತಕವನ್ನ ತಪ್ಪದೇ ಪಾಲಿಸ್ತಾ ಇದ್ದಾರೆ.+ 21 ಆದ್ರೆ ಅವರು ನಿನ್ನ ಬಗ್ಗೆ ಕೆಲವು ಗಾಳಿಸುದ್ದಿ ಕೇಳಿಸ್ಕೊಂಡಿದ್ದಾರೆ. ಬೇರೆ ದೇಶಗಳಲ್ಲಿ ವಾಸಿಸ್ತಿರೋ ಯೆಹೂದ್ಯರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಕಾಗಿಲ್ಲ ಅಂತ ನೀನು ಹೇಳ್ತಾ ಇದ್ದೀಯಂತೆ. ಆಚಾರ-ವಿಚಾರಗಳನ್ನ ಮಾಡಬೇಡಿ, ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಡಿ ಅಂತ ಕಲಿಸ್ತಾ ಇದ್ದೀಯಂತೆ.+ 22 ಇದ್ರ ಬಗ್ಗೆ ನಾವೇನು ಮಾಡೋಣ? ನೀನು ಇಲ್ಲಿಗೆ ಬಂದಿರೋ ವಿಷ್ಯ ಅವ್ರಿಗೆ ಖಂಡಿತ ಗೊತ್ತಾಗುತ್ತೆ. 23 ಹಾಗಾಗಿ ನಾವು ಹೇಳೋ ತರ ಮಾಡು. ನಮ್ಮಲ್ಲಿ ಹರಕೆ ಮಾಡಿರೋ ನಾಲ್ಕು ಮಂದಿ ಇದ್ದಾರೆ. 24 ಅವ್ರನ್ನ ನಿನ್ನ ಜೊತೆ ಕರ್ಕೊಂಡು ಹೋಗಿ ಆಚಾರದ ಪ್ರಕಾರ ಅವ್ರ ಜೊತೆ ನೀನು ಸಹ ನಿನ್ನನ್ನ ಶುದ್ಧ ಮಾಡ್ಕೊ. ದೇವ್ರಿಗೆ ಅವರು ಮಾಡಿರೋ ಹರಕೆ ತೀರಿಸೋಕೆ ಆಗೋ ಖರ್ಚನ್ನೆಲ್ಲ ನೀನೇ ನೋಡ್ಕೊ. ಆಗ ನಿನ್ನ ಬಗ್ಗೆ ಕೇಳಿದ ಗಾಳಿಸುದ್ದಿಯೆಲ್ಲ ಸುಳ್ಳು ಅಂತ, ನೀನು ನಿಯಮ ಪುಸ್ತಕದ ಪ್ರಕಾರ ನಡ್ಕೊಳ್ತೀಯ ಅಂತ ಎಲ್ರಿಗೂ ಗೊತ್ತಾಗುತ್ತೆ.+ 25 ಯೆಹೂದ್ಯರಲ್ಲದ ಶಿಷ್ಯರ ವಿಷ್ಯಕ್ಕೆ ಬರೋದಾದ್ರೆ, ಅವ್ರಿಗೆ ಈಗಾಗಲೇ ನಾವು ಪತ್ರ ಬರೆದು ಮೂರ್ತಿಗಳಿಗೆ ಬಲಿ ಅರ್ಪಿಸಿದ್ದನ್ನ,+ ಕತ್ತು ಹಿಸುಕಿ ಕೊಂದಿದ್ದನ್ನ+ ತಿನ್ನದೇ ಇರೋಕೆ ಮತ್ತು ರಕ್ತದಿಂದ,+ ಲೈಂಗಿಕ ಅನೈತಿಕತೆಯಿಂದ+ ದೂರ ಇರೋಕೆ ಹೇಳಿದ್ದೀವಿ” ಅಂದ್ರು.
26 ಹಾಗಾಗಿ ಪೌಲ ಮಾರನೇ ದಿನ ಅವ್ರನ್ನ ಕರ್ಕೊಂಡು ಹೋದ. ಪದ್ಧತಿ ಪ್ರಕಾರ ಅವ್ರ ಜೊತೆ ತನ್ನನ್ನ ಶುದ್ಧ ಮಾಡ್ಕೊಂಡ.+ ಆಮೇಲೆ ಪೌಲ ಅವ್ರ ಜೊತೆ ಆಲಯದ ಒಳಗೆ ಹೋಗಿ ಪುರೋಹಿತನಿಗೆ ತಾವು ಶುದ್ಧ ಮಾಡ್ಕೊಂಡು ಏಳು ದಿನ ಯಾವಾಗ ಆಗುತ್ತೆ ಅಂತ ಹೇಳಿದ. ಯಾಕಂದ್ರೆ ಪುರೋಹಿತ ಅವ್ರಲ್ಲಿ ಒಬ್ಬೊಬ್ಬರಿಗೋಸ್ಕರನೂ ಬಲಿ ಅರ್ಪಿಸಬೇಕಿತ್ತು.
27 ಆ ಏಳು ದಿನ ಮುಗಿತಾ ಬಂದಾಗ ಏಷ್ಯಾದಿಂದ ಬಂದಿದ್ದ ಯೆಹೂದ್ಯರು ದೇವಾಲಯದಲ್ಲಿ ಪೌಲನನ್ನ ನೋಡಿದ್ರು. ಅವರು ಜನ್ರನ್ನ ಪೌಲನ ವಿರುದ್ಧ ಎತ್ತಿ ಕಟ್ಟಿ ಅವನನ್ನ ಹಿಡ್ಕೊಂಡ್ರು. 28 ಅವ್ರೆಲ್ಲ ಕೂಗಾಡ್ತಾ “ಇಸ್ರಾಯೇಲ್ ಜನ್ರೇ, ನಮ್ಗೆ ಸಹಾಯ ಮಾಡಿ! ನಮ್ಮ ಜನ್ರ ಬಗ್ಗೆ, ನಿಯಮ ಪುಸ್ತಕದ ಬಗ್ಗೆ ಮತ್ತು ಈ ಆಲಯದ ಬಗ್ಗೆ ಎಲ್ಲಾ ಕಡೆ ಹೋಗಿ ತಪ್ಪುತಪ್ಪಾಗಿ ಕಲಿಸ್ತಾ ಇದ್ದವನು ಇವನೇ. ಇಷ್ಟು ಮಾಡಿದ್ದಲ್ಲದೆ ಇವನು ಗ್ರೀಕರನ್ನ ಆಲಯದ ಒಳಗೆ ಕರ್ಕೊಂಡು ಬಂದು ಈ ಪವಿತ್ರ ಸ್ಥಳವನ್ನ ಅಪವಿತ್ರ ಮಾಡಿದ್ದಾನೆ”+ ಅಂದ್ರು. 29 ಅವರು ಯಾಕೆ ಹಾಗೆ ಹೇಳಿದರಂದ್ರೆ, ಎಫೆಸದವನಾಗಿದ್ದ ತ್ರೊಫಿಮ+ ಪೌಲನ ಜೊತೆ ಪಟ್ಟಣದಲ್ಲಿ ತಿರುಗಾಡೋದನ್ನ ನೋಡಿದ್ರು. ಅವನನ್ನ ಪೌಲ ಆಲಯದ ಒಳಗೆ ಕರ್ಕೊಂಡು ಬಂದಿರಬಹುದು ಅಂತ ಅವರು ಅಂದ್ಕೊಂಡ್ರು. 30 ಆಗ ಇಡೀ ಪಟ್ಟಣದಲ್ಲಿ ಗಲಾಟೆ ಶುರುವಾಯ್ತು. ಜನ ಗುಂಪು ಗುಂಪಾಗಿ ಓಡಿ ಬಂದು ಪೌಲನನ್ನ ಹಿಡ್ಕೊಂಡು ಆಲಯದಿಂದ ಹೊರಗೆ ಎಳ್ಕೊಂಡು ಬಂದ್ರು. ತಕ್ಷಣ ಆಲಯದ ಬಾಗಿಲು ಮುಚ್ಚಿಬಿಟ್ರು. 31 ಅವರು ಅವನನ್ನ ಕೊಲ್ಲಬೇಕು ಅಂತ ಅಂದ್ಕೊಂಡ್ರು. ಯೆರೂಸಲೇಮ್ ಪಟ್ಟಣದಲ್ಲಿ ಗಲಾಟೆ ಆಗ್ತಾ ಇದೆ ಅನ್ನೋ ಸುದ್ದಿ ಸೇನಾಪತಿಗೆ ಮುಟ್ಟಿತು. 32 ಅವನು ತಕ್ಷಣ ಸೇನಾಧಿಕಾರಿಗಳನ್ನ, ಸೈನಿಕರನ್ನ ಕರ್ಕೊಂಡು ಬೇಗಬೇಗ ಅಲ್ಲಿಗೆ ಬಂದ. ಜನ್ರು ಸೇನಾಪತಿ ಮತ್ತು ಸೈನಿಕರನ್ನ ನೋಡಿದಾಗ ಪೌಲನಿಗೆ ಹೊಡೆಯೋದನ್ನ ನಿಲ್ಲಿಸಿದ್ರು.
33 ಸೇನಾಪತಿ ಜನ್ರ ಹತ್ರ ಬಂದು ಪೌಲನನ್ನ ತನ್ನ ವಶಕ್ಕೆ ತಗೊಂಡ. ಆಮೇಲೆ ಅವನಿಗೆ ಎರಡು ಬೇಡಿ ಹಾಕಿ ಅಂತ ಸೈನಿಕರಿಗೆ ಹೇಳಿದ.+ ‘ಇವನು ಯಾರು? ಏನು ಮಾಡಿದ?’ ಅಂತ ಜನ್ರ ಹತ್ರ ವಿಚಾರಿಸಿದ. 34 ಆದ್ರೆ ಕೆಲವರು ಒಂದು ಹೇಳಿದ್ರೆ, ಇನ್ನು ಕೆಲವರು ಇನ್ನೊಂದು ಹೇಳಿ ಕೂಗ್ತಾ ಇದ್ರು. ಆ ಗದ್ದಲ-ಗಲಿಬಿಲಿಯಿಂದ ಸೇನಾಪತಿಗೆ ಏನೂ ಅರ್ಥ ಆಗಲಿಲ್ಲ. ಹಾಗಾಗಿ ಅವನು ಪೌಲನನ್ನ ಸೈನಿಕರು ಉಳ್ಕೊಂಡಿರೋ ಜಾಗಕ್ಕೆ ಕರ್ಕೊಂಡು ಹೋಗೋಕೆ ಅಪ್ಪಣೆ ಕೊಟ್ಟ. 35 ಪೌಲ ಮೆಟ್ಟಿಲ ಹತ್ರ ಬಂದಾಗ ಜನ ಅವನನ್ನ ಹೊಡಿಯೋಕೆ ನೋಡ್ತಾ ಇದ್ದಿದ್ರಿಂದ ಸೈನಿಕರು ಅವನನ್ನ ಎತ್ಕೊಂಡು ಹೋಗಬೇಕಾಗಿ ಬಂತು. 36 ತುಂಬ ಜನ “ಅವನನ್ನ ಮುಗಿಸಿಬಿಡಿ!” ಅಂತ ಕಿರಿಚ್ತಾ ಅವನ ಹಿಂದೇನೇ ಬರ್ತಾ ಇದ್ರು.
37 ಸೈನಿಕರು ಉಳ್ಕೊಂಡಿರೋ ಜಾಗದ ಹತ್ರ ತಲಪಿದಾಗ ಪೌಲ ಸೇನಾಪತಿಗೆ ಗ್ರೀಕಲ್ಲಿ “ನಾನು ನಿಂಗೆ ಒಂದು ವಿಷ್ಯ ಹೇಳಬಹುದಾ?” ಅಂತ ಕೇಳಿದ. ಅದಕ್ಕೆ ಅವನು “ನಿಂಗೆ ಗ್ರೀಕ್ ಭಾಷೆನೂ ಬರುತ್ತಾ? 38 ಸ್ವಲ್ಪ ದಿನದ ಹಿಂದೆ ದಂಗೆ ಎಬ್ಬಿಸಿ 4,000 ಕೊಲೆಗಾರರನ್ನ ಕಾಡಿಗೆ ಕರ್ಕೊಂಡು ಹೋದ ಈಜಿಪ್ಟಿನವನು ನೀನೇ ಅಲ್ವಾ?” ಅಂತ ಕೇಳಿದ. 39 ಆಗ ಪೌಲ “ನಾನೊಬ್ಬ ಯೆಹೂದ್ಯ.+ ಕಿಲಿಕ್ಯದ ತಾರ್ಸ+ ಅನ್ನೋ ಪ್ರಸಿದ್ಧ ಪಟ್ಟಣದ ಪ್ರಜೆ. ಹಾಗಾಗಿ ಈ ಜನ್ರ ಹತ್ರ ಮಾತಾಡೋಕೆ ದಯವಿಟ್ಟು ನಂಗೆ ಅನುಮತಿ ಕೊಡು” ಅಂತ ಬೇಡ್ಕೊಂಡ. 40 ಸೇನಾಪತಿ ಅನುಮತಿ ಕೊಟ್ಟ. ಆಮೇಲೆ ಪೌಲ ಮೆಟ್ಟಿಲು ಮೇಲೆ ನಿಂತು ಜನ್ರಿಗೆ ಸುಮ್ಮನಿರಿ ಅಂತ ಸನ್ನೆ ಮಾಡಿದ. ಜನ್ರೆಲ್ಲ ಸುಮ್ಮನಾದ ಮೇಲೆ ಹೀಬ್ರು ಭಾಷೆಯಲ್ಲಿ+ ಹೀಗಂದ: