ಎಜ್ರ
7 ಇದಾದ್ಮೇಲೆ ಪರ್ಶಿಯ ರಾಜ ಅರ್ತಷಸ್ತ+ ಆಳ್ತಿದ್ದ ಸಮಯದಲ್ಲಿ ಎಜ್ರ*+ ಅನ್ನೋ ವ್ಯಕ್ತಿ ಇದ್ದ. ಅವನು ಸೆರಾಯನ+ ಮಗ, ಸೆರಾಯ ಅಜರ್ಯನ ಮಗ, ಅಜರ್ಯ ಹಿಲ್ಕೀಯನ+ ಮಗ, 2 ಹಿಲ್ಕೀಯ ಶಲ್ಲೂಮನ ಮಗ, ಶಲ್ಲೂಮ ಚಾದೋಕನ ಮಗ, ಚಾದೋಕ ಅಹೀಟೂಬನ ಮಗ, 3 ಅಹೀಟೂಬ ಅಮರ್ಯನ ಮಗ, ಅಮರ್ಯ ಅಜರ್ಯನ+ ಮಗ, ಅಜರ್ಯ ಮೆರಾಯೋತನ ಮಗ, 4 ಮೆರಾಯೋತ ಜೆರಹ್ಯನ ಮಗ, ಜೆರಹ್ಯ ಉಜ್ಜಿಯ ಮಗ, ಉಜ್ಜಿ ಬುಕ್ಕಿಯ ಮಗ, 5 ಬುಕ್ಕಿ ಅಬೀಷೂವನ ಮಗ, ಅಬೀಷೂವ ಫೀನೆಹಾಸನ+ ಮಗ, ಫೀನೆಹಾಸ ಎಲ್ಲಾಜಾರನ+ ಮಗ, ಎಲ್ಲಾಜಾರ ಮುಖ್ಯ ಪುರೋಹಿತನಾಗಿದ್ದ ಆರೋನನ+ ಮಗ. 6 ಎಜ್ರ ಬಾಬೆಲಿಂದ ಬಂದಿದ್ದ. ಇವ್ನೊಬ್ಬ ನಕಲುಗಾರ.* ಇಸ್ರಾಯೇಲ್ ದೇವರಾದ ಯೆಹೋವ ಮೋಶೆಗೆ ಕೊಟ್ಟಿದ್ದ ನಿಯಮ ಪುಸ್ತಕದಲ್ಲಿ ಇವನು ಪರಿಣಿತ.*+ ದೇವರಾದ ಯೆಹೋವ ಇವನ ಜೊತೆ ಇದ್ದನು.* ಹಾಗಾಗಿ ಇವನ ಎಲ್ಲ ಬೇಡಿಕೆಗಳನ್ನ ರಾಜ ಪೂರೈಸಿದ.
7 ರಾಜ ಅರ್ತಷಸ್ತ ಆಳ್ತಿದ್ದ ಏಳನೇ ವರ್ಷದಲ್ಲಿ ಕೆಲವು ಇಸ್ರಾಯೇಲ್ಯರು, ಪುರೋಹಿತರು, ಲೇವಿಯರು,+ ಗಾಯಕರು,+ ಬಾಗಿಲು ಕಾಯೋರು,+ ದೇವಾಲಯದ ಸೇವಕರು*+ ಯೆರೂಸಲೇಮಿಗೆ ಹೋದ್ರು. 8 ರಾಜ ಆಳ್ತಿದ್ದ ಏಳನೇ ವರ್ಷದ ಐದನೇ ತಿಂಗಳಲ್ಲಿ ಎಜ್ರ ಯೆರೂಸಲೇಮಿಗೆ ಬಂದ. 9 ಅವನು ಮೊದಲ್ನೇ ತಿಂಗಳಿನ ಮೊದಲ್ನೇ ದಿನ ಬಾಬೆಲಿಂದ ಹೊರಟು ಐದನೇ ತಿಂಗಳಿನ ಮೊದಲ್ನೇ ದಿನ ಯೆರೂಸಲೇಮಿಗೆ ಬಂದ. ಈ ಇಡೀ ಪ್ರಯಾಣದಲ್ಲಿ ದೇವರು ಅವನ ಜೊತೆ ಇದ್ದನು.*+ 10 ಯೆಹೋವನ ನಿಯಮ ಪುಸ್ತಕದಲ್ಲಿದ್ದ ವಿಷ್ಯಗಳನ್ನ ಅಧ್ಯಯನ ಮಾಡಬೇಕಂತ, ಅದ್ರ ತರ ನಡಿಬೇಕಂತ,+ ಅದ್ರಲ್ಲಿರೋ ನಿಯಮಗಳನ್ನ ತೀರ್ಪುಗಳನ್ನ ಇಸ್ರಾಯೇಲ್ಯರಿಗೆ ಕಲಿಸಬೇಕಂತ+ ಎಜ್ರ ತನ್ನ ಹೃದಯದಲ್ಲಿ ತೀರ್ಮಾನ ಮಾಡಿದ್ದ.*
11 ಪುರೋಹಿತನಾಗಿದ್ದ, ನಕಲುಗಾರನಾಗಿದ್ದ,* ಯೆಹೋವನ ಆಜ್ಞೆಗಳನ್ನ, ಆತನು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳನ್ನ ಅಧ್ಯಯನ* ಮಾಡೋದ್ರಲ್ಲಿ ಪರಿಣಿತನಾಗಿದ್ದ ಎಜ್ರನಿಗೆ ರಾಜ ಅರ್ತಷಸ್ತ ಒಂದು ಪತ್ರ ಕೊಟ್ಟಿದ್ದ. ಅದ್ರಲ್ಲಿ ಹೀಗಿತ್ತು:
12 * “ಸ್ವರ್ಗದ ದೇವರ ನಿಯಮ ಪುಸ್ತಕದ ನಕಲುಗಾರನಾಗಿರೋ* ಪುರೋಹಿತ ಎಜ್ರನಿಗೆ ರಾಜಾಧಿರಾಜನಾದ ಅರ್ತಷಸ್ತ+ ಬರಿಯೋದು ಏನಂದ್ರೆ: ನಿನಗೆ ಶಾಂತಿಯಿರಲಿ. 13 ಈಗ ನಾನು ಒಂದು ಆಜ್ಞೆ ಕೊಡ್ತಾ ಇದ್ದೀನಿ. ಅದೇನಂದ್ರೆ ನನ್ನ ಸಾಮ್ರಾಜ್ಯದಲ್ಲಿ ಇರೋ ಇಸ್ರಾಯೇಲ್ಯರಲ್ಲಿ, ಅವ್ರ ಪುರೋಹಿತರಲ್ಲಿ, ಲೇವಿಯರಲ್ಲಿ ಯಾರೆಲ್ಲ ನಿನ್ನ ಜೊತೆ ಹೋಗೋಕೆ ಬಯಸ್ತಾರೋ ಅವ್ರೆಲ್ಲ ಯೆರೂಸಲೇಮಿಗೆ ಹೋಗಬಹುದು.+ 14 ಯಾಕಂದ್ರೆ ರಾಜನ, ಅವನ ಏಳು ಸಲಹೆಗಾರರ ಕಡೆಯಿಂದ ನಿನ್ನನ್ನ ಯೆಹೂದಕ್ಕೆ, ಯೆರೂಸಲೇಮಿಗೆ ಕಳಿಸ್ತಾ ಇದ್ದೀನಿ. ಅಲ್ಲಿಗೆ ಹೋಗಿ ನಿನ್ನ ಹತ್ರ ಇರೋ ದೇವರ ನಿಯಮ ಪುಸ್ತಕದ ಪ್ರಕಾರ ಜನ ನಡೀತಾ ಇದ್ದಾರಾ ಇಲ್ವಾ ಅಂತ ತನಿಖೆ ಮಾಡಿನೋಡು. 15 ರಾಜ, ಅವನ ಸಲಹೆಗಾರರು ಮನಸಾರೆ ಇಸ್ರಾಯೇಲ್ ದೇವ್ರಿಗೆ ಕೊಟ್ಟಿರೋ ಬೆಳ್ಳಿಬಂಗಾರವನ್ನ ಆತನ ಜಾಗವಾಗಿರೋ ಯೆರೂಸಲೇಮಿಗೆ ತಗೊಂಡು ಹೋಗು. 16 ಇದ್ರ ಜೊತೆ ಇಡೀ ಬಾಬೆಲಿನ ಪ್ರದೇಶದಿಂದ* ನಿನಗೆ ಸಿಕ್ಕಿರೋ ಎಲ್ಲ ಬೆಳ್ಳಿಬಂಗಾರವನ್ನ, ಯೆರೂಸಲೇಮಲ್ಲಿರೋ ತಮ್ಮ ದೇವರ ಆಲಯಕ್ಕಾಗಿ ಜನರು, ಪುರೋಹಿತರು ಮನಸಾರೆ ಕೊಟ್ಟಿರೋ ಉಡುಗೊರೆಯನ್ನೂ ತಗೊಂಡು ಹೋಗು.+ 17 ನೀನು ಆ ಹಣದಿಂದ ಹೋರಿ+ ಟಗರು+ ಕುರಿಮರಿಗಳನ್ನ+ ಅವುಗಳ ಜೊತೆ ಅರ್ಪಿಸೋ ಧಾನ್ಯ ಅರ್ಪಣೆಗಳನ್ನ,+ ಪಾನ ಅರ್ಪಣೆಗಳನ್ನ+ ತಪ್ಪದೇ ಕೊಂಡ್ಕೊಳ್ಳಬೇಕು. ಯೆರೂಸಲೇಮಲ್ಲಿರೋ ನಿಮ್ಮ ದೇವರ ಆಲಯದ ಯಜ್ಞವೇದಿ ಮೇಲೆ ಅವುಗಳನ್ನ ಅರ್ಪಿಸಬೇಕು.
18 ಉಳಿದ ಬೆಳ್ಳಿಬಂಗಾರವನ್ನ ನಿಮ್ಮ ದೇವರ ಇಷ್ಟದ ತರ ನಿನಗೆ, ನಿನ್ನ ಸಹೋದರರಿಗೆ ಯಾವುದು ಸರಿ ಅನಿಸುತ್ತೋ ಹಾಗೆ ಮಾಡಿ. 19 ನಿನ್ನ ದೇವರ ಆಲಯದ ಸೇವೆಗಾಗಿ ನಿನಗೆ ಕೊಟ್ಟಿರೋ ಪಾತ್ರೆಗಳನ್ನೆಲ್ಲ ನೀನು ಯೆರೂಸಲೇಮಲ್ಲಿರೋ ದೇವರ ಸನ್ನಿಧಿಯಲ್ಲಿ ಇಡಬೇಕು.+ 20 ಇದ್ರ ಜೊತೆ ನಿನ್ನ ದೇವರ ಆಲಯಕ್ಕಾಗಿ ಬೇರೆ ಏನಾದ್ರೂ ಅಗತ್ಯ ಇದ್ರೆ ರಾಜಮನೆತನದ ಖಜಾನೆಯಿಂದ ಹಣ ತಗೊಂಡು ಖರೀದಿಸು.+
21 ರಾಜ ಅರ್ತಷಸ್ತನಾದ ನಾನು, ನದಿಯ ಈಕಡೆ ಪ್ರದೇಶದಲ್ಲಿರೋ* ಖಜಾಂಚಿಗಳಿಗೆ ಕೊಡೋ ಆಜ್ಞೆ ಏನಂದ್ರೆ ಸ್ವರ್ಗದ ದೇವರ ನಿಯಮ ಪುಸ್ತಕದ ನಕಲುಗಾರನಾಗಿರೋ ಪುರೋಹಿತ ಎಜ್ರ+ ನಿಮ್ಮ ಹತ್ರ ಕೇಳೋದನ್ನೆಲ್ಲ ತಕ್ಷಣ ಅವ್ನಿಗೆ ಕೊಡಿ. 22 100 ತಲಾಂತು* ಬೆಳ್ಳಿ 100 ಕೋರ್* ಗೋದಿ 100 ಬತ್* ದ್ರಾಕ್ಷಾಮದ್ಯ+ 100 ಬತ್ ಎಣ್ಣೆ,+ ಎಷ್ಟು ಬೇಕಾದ್ರೂ ಉಪ್ಪನ್ನ+ ಕೊಡಿ. 23 ಸ್ವರ್ಗದ ದೇವರು ಆತನ ಆಲಯದ ವಿಷ್ಯದಲ್ಲಿ ಕೊಟ್ಟಿರೋ ಪ್ರತಿಯೊಂದು ಆಜ್ಞೆಯನ್ನ ಹುರುಪಿಂದ ಮಾಡಿ.+ ಆಗ ರಾಜನ ಸಾಮ್ರಾಜ್ಯದ ಮೇಲೆ, ಅವನ ಗಂಡು ಮಕ್ಕಳ ಮೇಲೆ ಸ್ವರ್ಗದ ದೇವರು ಕೋಪ ಮಾಡ್ಕೊಳ್ಳಲ್ಲ.+ 24 ನಾನು ಕೊಡೋ ಇನ್ನೊಂದು ಆಜ್ಞೆ ಏನಂದ್ರೆ ಪುರೋಹಿತರಿಂದ, ಲೇವಿಯರಿಂದ, ಸಂಗೀತಗಾರರಿಂದ,+ ಬಾಗಿಲು ಕಾಯೋರಿಂದ, ದೇವಾಲಯದ ಸೇವಕರಿಂದ,*+ ದೇವರ ಈ ಆಲಯದ ಕೆಲಸಗಾರರಿಂದ ಯಾವುದೇ ರೀತಿಯ ತೆರಿಗೆ, ಕಪ್ಪ+ ಅಥವಾ ಸುಂಕ ವಸೂಲಿ ಮಾಡ್ಬಾರದು.
25 ಎಜ್ರ, ನಾನು ನಿನಗೆ ಹೇಳೋದು ಏನಂದ್ರೆ ನಿನ್ನ ದೇವ್ರಿಂದ ಪಡ್ಕೊಂಡಿರೋ ವಿವೇಕ ಬಳಸಿ, ಅಧಿಕಾರಿಗಳನ್ನ ನ್ಯಾಯಾಧೀಶರನ್ನ ನೇಮಿಸು. ನಿನ್ನ ದೇವರ ನಿಯಮಗಳನ್ನ ತಿಳಿದಿರೋ ನದಿಯ ಆಕಡೆ ಪ್ರದೇಶದಲ್ಲಿರೋ ಎಲ್ಲ ಜನ್ರಿಗೆ ಅವರು ನ್ಯಾಯ ತೀರಿಸ್ತಾರೆ. ಯಾರಿಗಾದ್ರೂ ಆ ನಿಯಮಗಳು ಗೊತ್ತಿಲ್ಲಾಂದ್ರೆ ಕಲಿಸ್ಕೊಡು.+ 26 ಯಾರಾದ್ರೂ ನಿನ್ನ ದೇವರ ನಿಯಮ ಪುಸ್ತಕದಲ್ಲಿ ಇರೋದನ್ನ, ರಾಜನ ನಿಯಮವನ್ನ ಪಾಲಿಸದೇ ಇದ್ರೆ ತಕ್ಷಣ ಶಿಕ್ಷೆ ಕೊಡು. ಆ ಶಿಕ್ಷೆ ಮರಣದಂಡನೆ, ಗಡೀಪಾರು, ದಂಡ ಅಥವಾ ಜೈಲು ಯಾವುದಾದ್ರೂ ಆಗಿರಬಹುದು.”
27 ಯೆರೂಸಲೇಮಲ್ಲಿರೋ ಯೆಹೋವನ ಆಲಯದ ಸೌಂದರ್ಯವನ್ನ ಹೆಚ್ಚಿಸೋ ಯೋಚನೆಯನ್ನ ರಾಜನ ಹೃದಯಕ್ಕೆ ಹಾಕಿದ ನಮ್ಮ ಪೂರ್ವಜರ ದೇವರಾದ ಯೆಹೋವನಿಗೆ ಹೊಗಳಿಕೆ ಆಗ್ಲಿ!+ 28 ದೇವರು ನನಗೆ ತನ್ನ ಶಾಶ್ವತ ಪ್ರೀತಿ ತೋರಿಸಿ ರಾಜನ, ರಾಜನ ಸಲಹೆಗಾರರ,+ ರಾಜನ ದೊಡ್ಡದೊಡ್ಡ ಅಧಿಕಾರಿಗಳ ಒಪ್ಪಿಗೆ ಸಿಗೋ ತರ ಮಾಡಿದನು.+ ನನ್ನ ದೇವರಾದ ಯೆಹೋವ ನನ್ನ ಜೊತೆ ಇದ್ದಾನೆ.* ಹಾಗಾಗಿ ಧೈರ್ಯವಾಗಿ ಇದ್ದೀನಿ, ಇಸ್ರಾಯೇಲ್ಯರ ಮುಖ್ಯಸ್ಥರು ನನ್ನ ಜೊತೆ ಬರೋಕೆ ಅವ್ರನ್ನ ಸೇರಿಸಿದ್ದೀನಿ.