ಒಂದನೇ ಅರಸು
11 ಆದ್ರೆ ರಾಜ ಸೊಲೊಮೋನ ಫರೋಹನ ಮಗಳನ್ನ+ ಮಾತ್ರ ಅಲ್ಲ ಬೇರೆ ದೇಶದ ಸ್ತ್ರೀಯರನ್ನ+ ಅಂದ್ರೆ ಮೋವಾಬ್ಯರ,+ ಅಮ್ಮೋನಿಯರ,+ ಎದೋಮ್ಯರ, ಸೀದೋನ್ಯರ,+ ಹಿತ್ತಿಯರ+ ಸ್ತ್ರೀಯರನ್ನೂ ಪ್ರೀತಿಸಿದ. 2 ಯೆಹೋವ ಆ ದೇಶಗಳ ಜನ್ರ ಬಗ್ಗೆ ಇಸ್ರಾಯೇಲ್ಯರಿಗೆ “ನೀವು ಅವ್ರ ಜೊತೆ ಸೇರ್ಬಾರ್ದು,* ಅವ್ರೂ ನಿಮ್ಮ ಜೊತೆ ಸೇರ್ಬಾರ್ದು. ಒಂದುವೇಳೆ ಸೇರಿದ್ರೆ ನೀವು ಅವ್ರ ದೇವರುಗಳನ್ನ ಆರಾಧಿಸೋ ತರ ಅವರು ನಿಮ್ಮ ಹೃದಯವನ್ನ ತಿರುಗಿಸಿ ಬಿಡ್ತಾರೆ”+ ಅಂತ ಹೇಳಿದ್ದನು. ಆದ್ರೆ ಸೊಲೊಮೋನ ಆ ದೇಶದ ಸ್ತ್ರೀಯರ ಜೊತೆ ಸೇರ್ತಿದ್ದ, ಅವ್ರನ್ನೇ ಪ್ರೀತಿಸಿದ. 3 ಅವನಿಗೆ 700 ಹೆಂಡತಿಯರಿದ್ರು. ಅವ್ರೆಲ್ಲ ರಾಜಕುಮಾರಿಯರು. ಅವನಿಗೆ 300 ಉಪಪತ್ನಿಯರೂ ಇದ್ರು. ನಿಧಾನವಾಗಿ ಅವನ ಹೆಂಡತಿಯರು ಅವನನ್ನ ದಾರಿ ತಪ್ಪಿಸಿದ್ರು. 4 ಸೊಲೊಮೋನನಿಗೆ ವಯಸ್ಸಾದಾಗ+ ಅವನು ಬೇರೆ ದೇವರುಗಳನ್ನ ಆರಾಧಿಸೋ ತರ ಅವನ ಹೆಂಡತಿರು ಮಾಡಿದ್ರು.+ ಅವನ ಹೃದಯ ಅವನ ಅಪ್ಪ ದಾವೀದನ ತರ ಸಂಪೂರ್ಣವಾಗಿ ಯೆಹೋವ ದೇವರ ಕಡೆ ಇರಲಿಲ್ಲ. 5 ಸೊಲೊಮೋನ ಸೀದೋನ್ಯರ ಅಷ್ಟೋರೆತ್+ ದೇವತೆಯನ್ನ ಮತ್ತು ಅಮ್ಮೋನಿಯರ ಅಸಹ್ಯಕರ ದೇವರಾದ ಮಿಲ್ಕೋಮನನ್ನ+ ಆರಾಧಿಸಿದ. 6 ಸೊಲೊಮೋನ ಯೆಹೋವನಿಗೆ ಇಷ್ಟ ಇಲ್ಲದ ಕೆಟ್ಟ ಕೆಲಸ ಮಾಡಿದ. ಅವನು ತನ್ನ ಅಪ್ಪ ದಾವೀದನ ತರ ಪೂರ್ಣ ಹೃದಯದಿಂದ ಯೆಹೋವ ಹೇಳಿದ ತರ ನಡಿಲಿಲ್ಲ.+
7 ಆ ಸಮಯದಲ್ಲೇ ಸೊಲೊಮೋನ ಮೋವಾಬ್ಯರ ಅಸಹ್ಯ ದೇವರಾದ ಕೆಮೋಷಿಗೆ ಮತ್ತು ಅಮ್ಮೋನಿಯರ+ ಅಸಹ್ಯ ದೇವರಾದ ಮೋಲೆಕಗೆ+ ಯೆರೂಸಲೇಮಿನ ಮುಂದೆ ಇದ್ದ ಬೆಟ್ಟದ ಮೇಲೆ ದೇವಸ್ಥಾನಗಳನ್ನ* ಕಟ್ಟಿಸಿದ.+ 8 ಅವನ ಬೇರೆ ಹೆಂಡತಿಯರು ಅವ್ರವ್ರ ದೇವರುಗಳಿಗೆ ಬಲಿಯ ಹೊಗೆ ಏರಿಸೋಕೆ, ಬಲಿಗಳನ್ನ ಕೊಡೋಕೆ ಅವನು ಹೀಗೆ ಮಾಡಿದ.
9 ಇಸ್ರಾಯೇಲ್ ದೇವರಾದ ಯೆಹೋವನಿಂದ ಸೊಲೊಮೋನ ದೂರ ಆಗಿದ್ರಿಂದ ಯೆಹೋವನಿಗೆ ಅವನ ಮೇಲೆ ತುಂಬ ಕೋಪ ಬಂತು.+ ಆತನು ಸೊಲೊಮೋನನಿಗೆ ಎರಡು ಸಲ ಕಾಣಿಸ್ಕೊಂಡು,+ 10 ಬೇರೆ ದೇವರುಗಳ ಹತ್ರ ಹೋಗಬಾರದು+ ಅಂತ ಎಚ್ಚರಿಕೆ ಕೊಟ್ಟಿದ್ದನು. ಆದ್ರೆ ಸೊಲೊಮೋನ ಯೆಹೋವನ ಆಜ್ಞೆನ ಕಿವಿಗೆ ಹಾಕೊಳ್ಳಲಿಲ್ಲ. 11 ಅದಕ್ಕೆ ಯೆಹೋವ ಸೊಲೊಮೋನಗೆ “ನೀನು ಹೀಗೆ ಮಾಡಿದ್ರಿಂದ ಮತ್ತು ನನ್ನ ಒಪ್ಪಂದದ ಪ್ರಕಾರ, ನಾನು ಕೊಟ್ಟ ನಿಯಮಗಳ ಪ್ರಕಾರ ನಡೀದೆ ಇದ್ದಿದ್ರಿಂದ ನಾನು ನಿನ್ನಿಂದ ಈ ರಾಜ್ಯನ ಕಿತ್ಕೊಳ್ತೀನಿ. ಅದನ್ನ ನಿನ್ನ ಸೇವಕರಲ್ಲಿ ಒಬ್ಬನಿಗೆ ಕೊಡ್ತೀನಿ.+ 12 ಹಾಗಿದ್ರೂ ನಾನು ಈ ಕೆಲಸನ, ನಿನ್ನ ಅಪ್ಪ ದಾವೀದನ ಸಲುವಾಗಿ ನೀನು ಬದುಕಿರುವಾಗ ಮಾಡಲ್ಲ. ಬದಲಿಗೆ ನಾನು ನಿನ್ನ ಮಗನ ಕೈಯಿಂದ ರಾಜ್ಯ ಕಿತ್ಕೊಳ್ತೀನಿ.+ 13 ಆದ್ರೆ ನಾನು ಅವನಿಂದ ಇಡೀ ರಾಜ್ಯ ಕಿತ್ಕೊಳ್ಳದೆ+ ನನ್ನ ಸೇವಕ ದಾವೀದನ ಸಲುವಾಗಿ ಮತ್ತು ನಾನು ಆರಿಸ್ಕೊಂಡಿರೋ+ ಯೆರೂಸಲೇಮಿನ ಸಲುವಾಗಿ ಒಂದು ಕುಲನ ನಿನ್ನ ಮಗನಿಗೆ ಕೊಡ್ತೀನಿ”+ ಅಂದನು.
14 ಆಮೇಲೆ ಯೆಹೋವ ಎದೋಮಿನ ರಾಜಕುಟುಂಬಕ್ಕೆ ಸೇರಿದ+ ಎದೋಮ್ಯನಾದ ಹದದನನ್ನ ಸೊಲೊಮೋನನ ವಿರುದ್ಧ ಬರೋ ಹಾಗೆ ಮಾಡಿದನು.+ 15 ದಾವೀದ ಎದೋಮನ್ನ ಸೋಲಿಸಿದಾಗ+ ಸೇನಾಪತಿಯಾಗಿದ್ದ ಯೋವಾಬ ಸತ್ತವರನ್ನ ಹೂಣಿಡೋಕೆ ಹೋಗಿದ್ದ. ಆಗ ಅವನು ಎದೋಮಿನ ಎಲ್ಲ ಗಂಡಸರನ್ನ ಕೊಲ್ಲೋಕೆ ಪ್ರಯತ್ನಿಸಿದ. 16 (ಯೋವಾಬ ಮತ್ತು ಇಸ್ರಾಯೇಲಿನ ಎಲ್ಲ ಸೈನಿಕರು ಆರು ತಿಂಗಳ ತನಕ ಎದೋಮಿನಲ್ಲೇ ಇದ್ದು ಅಲ್ಲಿನ ಗಂಡಸರನ್ನೆಲ್ಲ ಕೊಂದುಹಾಕಿದ್ದರು.) 17 ಆದ್ರೆ ಹದದ ಎದೋಮ್ಯರಾಗಿದ್ದ ತನ್ನ ಅಪ್ಪನ ಸೇವಕರ ಜೊತೆ ಅಲ್ಲಿಂದ ಈಜಿಪ್ಟಿಗೆ ಓಡಿಹೋದ. ಆಗ ಹದದ ಒಬ್ಬ ಚಿಕ್ಕ ಹುಡುಗ ಆಗಿದ್ದ. 18 ಅವರು ಮಿದ್ಯಾನಿನಿಂದ ಹೊರಟು ಪಾರಾನಿಗೆ ಬಂದ್ರು. ಪಾರಾನಿನಿಂದ+ ಸ್ವಲ್ಪ ಜನ್ರನ್ನ ಕರ್ಕೊಂಡು ಈಜಿಪ್ಟಿಗೆ ಹೋದ್ರು. ಅಲ್ಲಿ ಅವರು ಈಜಿಪ್ಟಿನ ರಾಜ ಫರೋಹನನ್ನ ಭೇಟಿಮಾಡಿದ್ರು. ಫರೋಹ ಅವ್ರಿಗೆ ಇರೋಕೆ ಮನೆ ಕೊಟ್ಟು, ಅವ್ರ ಊಟ-ಉಪಚಾರ ನೋಡ್ಕೊಂಡ. ಅಷ್ಟೇ ಅಲ್ಲ, ಜಮೀನನ್ನೂ ಕೊಟ್ಟ. 19 ಹದದ ಅಂದ್ರೆ ಫರೋಹನಿಗೆ ಎಷ್ಟು ಇಷ್ಟ ಆಯ್ತಂದ್ರೆ ಅವನು ತನ್ನ ಹೆಂಡತಿ ರಾಣಿ ತಖ್ಪೆನೇಸಳ ತಂಗಿನ ಅವನಿಗೆ ಕೊಟ್ಟು ಮದುವೆ ಮಾಡಿದ. 20 ಸ್ವಲ್ಪ ಸಮಯ ಆದ್ಮೇಲೆ ಹದದ ಮತ್ತು ತಖ್ಪೆನೇಸಳ ತಂಗಿಗೆ ಒಂದು ಗಂಡು ಮಗು ಆಯ್ತು. ಅವನ ಹೆಸ್ರು ಗೆನುಬತ್. ತಖ್ಪೆನೇಸ್ ಫರೋಹನ ಅರಮನೆಯಲ್ಲಿ ಗೆನುಬತನನ್ನ ಸಾಕಿ ಸಲಹಿದಳು. ಹೀಗೆ ಗೆನುಬತ್ ಫರೋಹನ ಅರಮನೆಯಲ್ಲಿ ಫರೋಹನ ಮಕ್ಕಳ ಜೊತೆ ಬೆಳೆದು ದೊಡ್ಡವನಾದ.
21 ದಾವೀದ ತೀರಿಹೋಗಿದ್ದಾನೆ+ ಮತ್ತು ಅವನ ಸೇನಾಪತಿ ಯೋವಾಬನೂ ಸತ್ತುಹೋಗಿದ್ದಾನೆ+ ಅನ್ನೋ ಸುದ್ದಿ ಈಜಿಪ್ಟಿನಲ್ಲಿದ್ದ ಹದದನ ಕಿವಿಗೆ ಬಿತ್ತು. ಆಗ ಅವನು ಫರೋಹನಿಗೆ “ನಾನು ನನ್ನ ಸ್ವದೇಶಕ್ಕೆ ವಾಪಸ್ ಹೋಗಬೇಕು. ದಯವಿಟ್ಟು ನನ್ನನ್ನ ಕಳಿಸ್ಕೊಡು” ಅಂತ ಕೇಳಿದ. 22 ಆದ್ರೆ ಫರೋಹ ಅವನಿಗೆ “ಇಲ್ಲಿ ನಾನು ನಿನಗೆ ಏನ್ ಕಮ್ಮಿ ಮಾಡಿದ್ದೀನಿ? ಯಾಕೆ ನೀನು ನಿನ್ನ ಸ್ವದೇಶಕ್ಕೆ ಹೋಗಬೇಕು ಅಂತಿದ್ದೀಯಾ?” ಅಂತ ಕೇಳಿದ. ಅದಕ್ಕೆ ಅವನು “ಇಲ್ಲಿ ನನಗೆ ಏನೂ ಕಮ್ಮಿ ಆಗಿಲ್ಲ, ಆದ್ರೂ ದಯವಿಟ್ಟು ನನ್ನನ್ನ ಕಳಿಸ್ಕೊಡು” ಅಂದ.
23 ದೇವರು ಸೊಲೊಮೋನನ ವಿರುದ್ಧವಾಗಿ ಇನ್ನೊಬ್ಬನನ್ನ ಎಬ್ಬಿಸಿದ.+ ಅವನು ಎಲ್ಯಾದನ ಮಗ ರೆಜೋನ್. ಇವನು ತನ್ನ ಒಡೆಯ, ಚೋಬದ ರಾಜನಾಗಿದ್ದ ಹದದೆಜೆರನಿಂದ+ ಓಡಿಹೋಗಿದ್ದ. 24 ದಾವೀದ ಚೋಬದವರನ್ನ ಸೋಲಿಸಿದಾಗ+ ರೆಜೋನ ಸ್ವಲ್ಪ ಜನರನ್ನ ಸೇರಿಸ್ಕೊಂಡು ಲೂಟಿಗಾರರ ಗುಂಪು ಮಾಡ್ಕೊಂಡ ಮತ್ತು ಅದ್ರ ಮುಖ್ಯಸ್ಥನಾದ. ರೆಜೋನ ಮತ್ತು ಅವನ ಜನರು ದಮಸ್ಕಕ್ಕೆ+ ಹೋಗಿ ಅಲ್ಲಿ ಇದ್ದು ಅದನ್ನ ಆಳೋಕೆ ಶುರುಮಾಡಿದ್ರು. 25 ಸೊಲೊಮೋನ ಬದುಕಿದ್ದಷ್ಟು ಕಾಲ ರೆಜೋನ ಇಸ್ರಾಯೇಲಿಗೆ ಶತ್ರುವಾಗೇ ಇದ್ದ. ಹದದನಿಂದ ಈಗಾಗ್ಲೇ ಇಸ್ರಾಯೇಲ್ಯರು ತುಂಬ ಕಷ್ಟ ಅನುಭವಿಸಿದ್ರು. ಈಗ ರೆಜೋನ ಅವರಿಗೆ ಇನ್ನೂ ಕಷ್ಟ ಕೊಟ್ಟ. ಅರಾಮ್ಯರನ್ನ ಆಳ್ತಿದ್ದಾಗ ಅವನು ಇಸ್ರಾಯೇಲ್ಯರನ್ನ ತುಂಬ ದ್ವೇಷಿಸಿದ.
26 ಸೊಲೊಮೋನನಿಗೆ ಯಾರೊಬ್ಬಾಮ+ ಅನ್ನೋ ಒಬ್ಬ ಸೇವಕನಿದ್ದ.+ ಅವನೂ ರಾಜನ ವಿರುದ್ಧ ದಂಗೆ ಎದ್ದ.+ ಎಫ್ರಾಯೀಮ್ಯನಾಗಿದ್ದ ಅವನು ಚೆರೇದಿನಲ್ಲಿ ವಾಸವಾಗಿದ್ದ. ಅವನ ಅಪ್ಪ ನೆಬಾಟ, ಅಮ್ಮ ಚೆರೂಗ. ಅವಳು ವಿಧವೆ ಆಗಿದ್ದಳು. 27 ಸೊಲೊಮೋನ ಒಂದು ಮಿಲ್ಲೋಕೋಟೆ*+ ಕಟ್ಟಿಸಿ, ದಾವೀದಪಟ್ಟಣದ+ ಗೋಡೆಗಳನ್ನ ಭದ್ರಪಡಿಸಿದ. ಹಾಗಾಗಿ ಯಾರೊಬ್ಬಾಮ ಸೊಲೊಮೋನನ ವಿರುದ್ಧ ಎದ್ದಿದ್ದ. 28 ಯಾರೊಬ್ಬಾಮ ತುಂಬ ಸಾಮರ್ಥ್ಯ ಇದ್ದ ಯುವಕನಾಗಿದ್ದ. ಅವನು ತುಂಬ ಶ್ರಮಪಟ್ಟು ಕೆಲಸಮಾಡೋದನ್ನ ನೋಡಿದ ಸೊಲೊಮೋನ ಅವನನ್ನ ಯೋಸೇಫನ ಕುಲದವರಿಗೆ ಸೇರಿದ ಬಿಟ್ಟಿ ಕೆಲಸಗಾರರ ಮೇಲೆ ಮೇಲ್ವಿಚಾರಕನಾಗಿ ನೇಮಿಸಿದ.+ 29 ಆ ಸಮಯದಲ್ಲಿ ಯಾರೊಬ್ಬಾಮ ಯೆರೂಸಲೇಮಿಂದ ಹೊರಗೆ ಹೋಗಿದ್ದ. ಅವನು ದಾರಿಯಲ್ಲಿ ಹೋಗ್ತಿದ್ದಾಗ ಶೀಲೋನ ಪ್ರವಾದಿ ಅಹೀಯ+ ಅವನನ್ನ ಭೇಟಿ ಮಾಡಿದ. ಆಗ ಆ ಬಯಲಲ್ಲಿ ಅವ್ರನ್ನ ಬಿಟ್ಟು ಬೇರೆ ಯಾರೂ ಇರ್ಲಿಲ್ಲ. ಅಹೀಯ ಹೊಸ ಬಟ್ಟೆ ಹಾಕೊಂಡಿದ್ದ. 30 ಅವನು ಆ ಹೊಸ ಬಟ್ಟೆನ ತಗೊಂಡು ಅದನ್ನ ಹರಿದು 12 ತುಂಡು ಮಾಡಿದ. 31 ಆಮೇಲೆ ಅವನು ಯಾರೊಬ್ಬಾಮನಿಗೆ
“ನೀನು ಈ ಹತ್ತು ತುಂಡುಗಳನ್ನ ತಗೊ. ಯಾಕಂದ್ರೆ, ಇಸ್ರಾಯೇಲ್ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಸೊಲೊಮೋನನ ಕೈಯಿಂದ ರಾಜ್ಯ ಕಿತ್ಕೊಂಡು ಅದರ ಹತ್ತು ಕುಲಗಳನ್ನ ನಿನಗೆ ಕೊಡ್ತೀನಿ.+ 32 ಆದ್ರೆ ನನ್ನ ಸೇವಕ ದಾವೀದನ ಸಲುವಾಗಿ+ ಮತ್ತು ನಾನು ಇಸ್ರಾಯೇಲಿನಲ್ಲಿ ಆರಿಸ್ಕೊಂಡ ಯೆರೂಸಲೇಮ್ ಪಟ್ಟಣದ ಸಲುವಾಗಿ+ ಒಂದು ಕುಲವನ್ನ ಸೊಲೊಮೋನನಿಗೆ ಉಳಿಸ್ತೀನಿ.+ 33 ನಾನು ರಾಜ್ಯವನ್ನ ಯಾಕೆ ಕಿತ್ಕೊಳ್ತಾ ಇದ್ದೀನಿ ಅಂದ್ರೆ, ಇಸ್ರಾಯೇಲ್ಯರು ನನ್ನನ್ನ ಬಿಟ್ಟು+ ಸೀದೋನ್ಯರ ಅಷ್ಟೋರೆತ್ ದೇವತೆಗೆ, ಮೋವಾಬ್ಯರ ದೇವರಾದ ಕೆಮೋಷಿಗೆ ಮತ್ತು ಅಮ್ಮೋನಿಯರ ದೇವರಾದ ಮಿಲ್ಕೋಮಗೆ ಅಡ್ಡಬಿದ್ರು. ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಅವರು ಮಾಡಲಿಲ್ಲ. ಅವರು ನನ್ನ ನಿಯಮಗಳನ್ನ, ತೀರ್ಪುಗಳನ್ನ ಪಾಲಿಸಲಿಲ್ಲ. ನಾನು ಹೇಳಿದ ದಾರೀಲಿ ಸೊಲೊಮೋನನ ಅಪ್ಪ ದಾವೀದ ನಡೆದ ಹಾಗೆ ಅವರು ನಡೀಲಿಲ್ಲ. 34 ಆದ್ರೆ ನಾನು ಅವನ ಕೈಯಿಂದ ಇಡೀ ರಾಜ್ಯ ಕಿತ್ಕೊಳ್ಳಲ್ಲ. ಸೊಲೊಮೋನ ಎಲ್ಲಿ ತನಕ ಬದುಕಿರುತ್ತಾನೋ ಅಲ್ಲಿ ತನಕ ಅವನೇ ರಾಜ ಆಗಿರೋಕೆ ಬಿಡ್ತೀನಿ. ನಾನು ಆರಿಸ್ಕೊಂಡ ನನ್ನ ಸೇವಕ ದಾವೀದನ ಸಲುವಾಗಿ+ ಹೀಗೆ ಮಾಡ್ತೀನಿ. ಯಾಕಂದ್ರೆ ದಾವೀದ ನನ್ನ ಆಜ್ಞೆಗಳನ್ನ, ನಿಯಮಗಳನ್ನ ಪಾಲಿಸ್ತಿದ್ದ. 35 ಆದ್ರೆ ಸೊಲೊಮೋನನ ಮಗನ ಕೈಯಿಂದ ರಾಜ್ಯ ಕಿತ್ಕೊಂಡು ನಿನಗೆ ಹತ್ತು ಕುಲಗಳನ್ನ ಕೊಡ್ತೀನಿ.+ 36 ನನ್ನ ಹೆಸ್ರನ್ನ ಸ್ಥಾಪಿಸೋಕೆ ನಾನು ಆರಿಸ್ಕೊಂಡ ಪಟ್ಟಣ ಯೆರೂಸಲೇಮಲ್ಲಿ ನನ್ನ ಸೇವಕ ದಾವೀದನ ವಂಶದವರು ಯಾವಾಗ್ಲೂ ಆಳೋ ತರ* ಮಾಡ್ತೀನಿ.+ 37 ನಾನು ನಿನ್ನನ್ನ ಆರಿಸ್ಕೊಳ್ತೀನಿ. ನೀನು ಇಸ್ರಾಯೇಲಿನ ರಾಜ ಆಗ್ತೀಯ, ನೀನು ಬಯಸೋ ಎಲ್ಲದ್ರ ಮೇಲೆ ಆಳ್ವಿಕೆ ಮಾಡ್ತೀಯ. 38 ನಾನು ಕೊಟ್ಟ ಆಜ್ಞೆಗಳನ್ನ ಕೇಳಿ ನಾನು ಹೇಳಿದ ದಾರಿಯಲ್ಲಿ ನಡೆದ್ರೆ, ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡ್ತಾ ನನ್ನ ಸೇವಕ ದಾವೀದನ ತರ+ ನನ್ನ ನಿಯಮಗಳನ್ನ ಮತ್ತು ಆಜ್ಞೆಗಳನ್ನ ಪಾಲಿಸಿದ್ರೆ ನಾನು ಅವನ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರ್ತೀನಿ. ದಾವೀದನಿಗೆ ಕಟ್ಟಿದ ಹಾಗೆ+ ನಿನಗೂ ಒಂದು ಶಾಶ್ವತ ರಾಜಮನೆತನವನ್ನ ಕಟ್ತೀನಿ. ಇಸ್ರಾಯೇಲನ್ನ ನಿನಗೆ ಕೊಡ್ತೀನಿ. 39 ದಾವೀದನ ಸಂತತಿ ಹೀಗೆ ಮಾಡಿದ್ದಕ್ಕೆ ನಾನು ಅವ್ರಿಗೆ ಅವಮಾನ ಆಗೋ ತರ ಮಾಡ್ತೀನಿ.+ ಆದ್ರೆ ಯಾವಾಗ್ಲೂ ಅವ್ರಿಗೆ ಅವಮಾನ ಆಗೋಕೆ ನಾನು ಬಿಡಲ್ಲ’”+ ಅಂದನು.
40 ಇದಾದ ಮೇಲೆ ಸೊಲೊಮೋನ ಯಾರೊಬ್ಬಾಮನನ್ನ ಕೊಲ್ಲೋಕೆ ಪ್ರಯತ್ನಿಸಿದ. ಆದ್ರೆ ಯಾರೊಬ್ಬಾಮ ಈಜಿಪ್ಟಿನ ರಾಜ+ ಶೀಶಕನ+ ಹತ್ರ ಓಡಿಹೋದ. ಸೊಲೊಮೋನ ಸಾಯೋ ತನಕ ಅವನು ಈಜಿಪ್ಟಲ್ಲೇ ಇದ್ದ.
41 ಸೊಲೊಮೋನನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಮತ್ತು ಅವನ ವಿವೇಕದ ಬಗ್ಗೆ ಸೊಲೊಮೋನನ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿದೆ.+ 42 ಸೊಲೊಮೋನ ಯೆರೂಸಲೇಮಿನಲ್ಲಿ ಇದ್ದು ಇಡೀ ಇಸ್ರಾಯೇಲನ್ನ 40 ವರ್ಷ ಆಳಿದ. 43 ಆಮೇಲೆ ಸೊಲೊಮೋನ ತೀರಿಹೋದ ಮತ್ತು ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ರೆಹಬ್ಬಾಮ+ ರಾಜ ಆದ.